ಮಂಗಳವಾರ, ಮಾರ್ಚ್ 22, 2011

ಸ್ನೇಹದ ಕಡಲಲ್ಲಿ.. ನೆನಪಿನ ದೋಣಿಯಲ್ಲಿ..

ಬಹು ದಿನಗಳ ಮೇಲೆ! ವರ್ಷಗಳೇ ಕಳೆದವು ಅನಿಸುತ್ತದೆ. ಮತ್ತೇ ಆ ದಿನಗಳ ಪುನರ್ ಮಿಲನದ ಸುಸಮಯ ಮೊನ್ನೆ ಹೊದಗಿತ್ತು. ಕಾಲೇಜು ದಿನಗಳ ಅದೇ ಒಂದು ಹರಟೆ ಹರಟೆ ಕಾಡು ಹರಟೆಯನ್ನು ಪುನಃ ಮಾಡಿದೆವು ಅನಿಸುತ್ತಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದ ಪಯಣದಲ್ಲಿ ತಮ್ಮ ಕಾಲೇಜು ದಿನಗಳನ್ನು ಮುಗಿಸಿಕೊಂಡು ತಮ್ಮ ತಮ್ಮ ದಾರಿಯನ್ನು ಕಂಡುಕೊಂಡ ನಂತರ ಒಟ್ಟಿಗೆ ಸೇರಿರುವ ಸಮಯ ಇದಾಗಿತ್ತು ಅನಿಸುತ್ತಿದೆ!

ಅದು ನಮ್ಮ ಸ್ನೇಹಿತನ ಮದುವೆಯಲ್ಲಿ ಪುನಃ ನಮ್ಮ ಎಲ್ಲಾ ಹಳೆಯ ಗೆಳೆಯರ ಬೇಟಿ.

ಅದು ಎಷ್ಟರ ಮಟ್ಟಿಗೆ ಪರಸ್ಪರ ಅಪರೂಪದವರಾಗಿದ್ದೇವೆ ಅಂದರೇ ನಾವುಗಳೆಲ್ಲ ಇರುವುದು ಬೆಂಗಳೂರಿನಲ್ಲಿಯೇ ಅದರೇ ಒಬ್ಬರೂಬ್ಬರ ಮುಖತಃ ಬೇಟಿಯೇ ಇಲ್ಲ. ಎಲ್ಲರೂ ತಮ್ಮ ತಮ್ಮ ಬದುಕಿನ ಕಾಯಕದಲ್ಲಿ ನಿರತರಾಗಿದ್ದಾರೆ. ಹಾಗೆಯೇ ಒಬ್ಬರಿದ್ದ ಜೀವನ ಜೋಡಿಯಾಗಿದೆ ಮತ್ತು ಹೊಸ ಜೀವದ ಆಗಮನವಾಗಿದೆ. ಸಂಸಾರ ಅಂದರೇ ಹೀಗೆ ಇರಬೇಕು ಸ್ವಾಮಿ ಎಂಬ ರೀತಿಯಲ್ಲಿ "ಯಾವುದಕ್ಕೂ ಸಮಯ ಇಲ್ಲ ಕಣೋ ತಿಪ್ಪಾ!" ಎಂಬ ಉತ್ತರ.

ತಮ್ಮ ಮನೆಯಾಯಿತು ತಾವುಗಳು ಕೆಲಸ ಮಾಡುವ ಕಂಪನಿಯಾಯಿತು.. ಅಲ್ಲಿಯ ಕೆಲಸ ವಾರಾಂತ್ಯದಲ್ಲಿ ಮನೆಯ ಮುಖ್ಯ ಕೆಲಸಗಳನ್ನು ಮುಗಿಸಿದರೇ ಸಾಕಾಪ್ಪ ಎಂಬ ಹಂಬಲ.. ಹೀಗೆ ತಮ್ಮ ತಮ್ಮಲ್ಲಿಯೇ ಬೇರೆ ಯಾವುದಕ್ಕೂ ಜಾಗವೇ ಇಲ್ಲದಂತಹ ಭಾವನೆ.

ಭಾನುವಾರದ ರಜೆಯಾದ್ದರಿಂದ ಅಂದುಕೊಂಡ ಕೆಲವರುಗಳು ಸ್ನೇಹಿತನ ಮದುವೆಗೆ ಬಂದಿದ್ದರು. ಅದರೂ ನಿರೀಕ್ಷೆ ಮಾಡಿದಷ್ಟು ಮಂದಿ ಬಂದಿರಲಿಲ್ಲ. ಯಾಕೆಂದರೇ ಮದುವೆ ಜರುಗಿದ್ದು ಬೆಂಗಳೂರಿನಿಂದ ೨೬೦ ಕಿ.ಮಿ ದೂರದಲ್ಲಿ. ಬೆಂಗಳೂರಿನಿಂದ ಹಲವಾರು ಬಸ್ಸುಗಳನ್ನು ಬದಲಾಯಿಸಿ ಅಷ್ಟೂ ದೂರ ಪ್ರಯಾಣ ಮಾಡಿ ಅದು ತಮ್ಮ ಸಂಸಾರವನ್ನು ಬಿಟ್ಟು ಬರುವಂತಹ ಹಂಬಲವಿರುವುದು ಕಷ್ಟವೇ ಸರಿ! ಸಿಗುವ ಎರಡು ರಜಾ ದಿನಗಳನ್ನು ಈ ಸುಡು ಬಿಸಿಲಿನಲ್ಲಿ ಪ್ರಯಾಣ ಮಾಡುತ್ತಾ ಕೂಲ್ಲುವುದು ಇನ್ನೂ ಕಷ್ಟ!


ಅವರುಗಳಿಗೂ ಎಲ್ಲಾ ಹಳೆಯ ಗೆಳೆಯರನ್ನು ಇಂಥ ಸಮಯದಲ್ಲಿ ಮಾತ್ರ ಬೇಟಿ ಮಾಡಬಹುದು ಎಂಬುದು ಗೊತ್ತು. ಅದರೇ ಏನೂ ಮಾಡಲು ಸಾಧ್ಯವಿಲ್ಲ. ಅವರುಗಳಿಗೆ ಅವರದೇಯಾದ ತೊಂದರೆಗಳು ಮತ್ತು ಸಕಾರಣಗಳು.

ಜೀವನದಲ್ಲಿ ಒಮ್ಮೆ ಮಾತ್ರ ಘಟಿಸುವ ನಮ್ಮ ಸ್ನೇಹಿತರ ಮದುವೆ ಎಂಬ ಒಂದು ಮುಖ್ಯ ಘಟನೆಗೆ ಎಲ್ಲಾ ಸ್ನೇಹಿತರುಗಳು ಹಾಜರಿರಬೇಕು ಎಂಬುದು ನನ್ನ ಆಸೆ. ನಾವುಗಳು ಇಂಥ ನಮ್ಮ ಜೀವನದ ಹಾದಿಯಲ್ಲಿ ಎಲ್ಲರ ಎಲ್ಲಾ ಸಂಭ್ರಮಗಳಲ್ಲೂ ಪಾಲ್ಗೂಳ್ಳಲೂ ಸಾಧ್ಯವಿಲ್ಲ.




ಅದೇ ಕಕ್ಕುಲಾತಿಯ ಕಾಲು ಎಳೆಯುವ, ಅವನ ಬಗ್ಗೆ, ಅವನ ಮಾತು ಶೈಲಿಯ ಬಗ್ಗೆ, ಅವನ ಗುಣಗಳ ಬಗ್ಗೆ, ಅವನು ಮಾಡಿದ ಅವಂತಾರಗಳ ಬಗ್ಗೆ, ಅವನು ಮಾಡಿದ ತಮಾಷೆಯ ಬಗ್ಗೆ, ಅವನು ಪ್ರೀತಿಸಿದ ಹಳೆಯ ಪ್ರೇಯಸಿಯ ಬಗ್ಗೆ, ಅವನು ಕಂಡ ಅವಮಾನದ ಬಗ್ಗೆ, ಅವನು ಅನುಭವಿಸಿದ ಅಂದಿನ ಸಂತೋಷದ ದಿನಗಳ ಬಗ್ಗೆ ಇತ್ಯಾದಿ ಇತ್ಯಾದಿ ಬಹುಮುಖ್ಯ ನೆನಪಿನಲ್ಲಿ ಇನ್ನೂ ಮನೆ ಮಾಡಿಕೊಂಡ ಕೆಲವೇ ಕೆಲವು ಉತ್ತಮ ಚಿತ್ರಣಗಳ ಜಾತ್ರೆಯನ್ನು ಕಣ್ಣ ಮುಂದೆ ತಂದುಕೊಂಡು ಅಂದಿನ ದಿನಗಳನ್ನು ಮೆಲಕು ಹಾಕಿಕೊಂಡೆವು. ರೀಯಲಿ! ಅಂದಿನ ಆ ದಿನಗಳು ಸಿರಿವಂತ ದಿನಗಳೇ ಸರಿ ಎಂಬುದು ಮೊನ್ನೆ ಸೇರಿದ ನನ್ನ ಎಲ್ಲಾ ಗೆಳೆಯರ ಮನಸ್ಸಿನಿಂದ ಬಂದಂತಹ ಹೃದಯತುಂಬಿದ ಮಾತಾಗಿತ್ತು.

ಇಂದು ನಮ್ಮಲ್ಲಿ ಎಲ್ಲಾ ಇದೆ. ನಾವುಗಳು ನಮ್ಮ ಹೆತ್ತವರ ಮುಂದೆ ಅವರುಗಳು ಕೊಡುವ ಪಾಕೇಟ್ ಮನಿಗೆ ಕಾಯುವ ಕಾರಣವಿಲ್ಲ. ಓಡಾಡಲೂ ಬೈಕ್, ಕಾರುಗಳು ಇವೆ, ಸುತ್ತಾಡಲೂ ಸಂಗಾತಿ ಇದ್ದಾಳೆ, ಎಲ್ಲಾದರೂ ಹೋಗುವಷ್ಟು ಖರ್ಚು ಮಾಡುವಷ್ಟು ಹಣ ನಮ್ಮ ಕೈಯಲ್ಲಿಯೇ ಇದೆ. ಅದರೂ ಯಾಕೋ ನಮ್ಮ ಬೆಂಗಳೂರಿನಲ್ಲಿ ನಾವುಗಳು ಒಂಟಿ ಮತ್ತು ಸಂತೋಷ ಹೀನರುಗಳು ಅನಿಸುತ್ತಿದೆ ಎಂಬ ಭಾವನೆ ಎಲ್ಲರದಾಗಿತ್ತು.

ನಾಲ್ಕು ವರ್ಷಗಳಲ್ಲಿ ನಾವುಗಳು ಅನುಭವಿಸಿದ ಕಾಲೇಜು ದಿನಗಳು ಎಂದು ಮತ್ತೇ ಸಿಗದಂತಹವುಗಳು ಎಂಬುದು ಎಲ್ಲರ ಅಭಿಮತ. ಅಲ್ಲಿ ಇದ್ದ ನಮ್ಮ ಕಷ್ಟ ನಷ್ಟಗಳ ಜೋತೆಯಲ್ಲಿಯೇ ನಾವುಗಳು ತುಂಬ ಸಂತೋಷವಾಗಿದ್ದೇವು. ಯಾಕೆ ಇಂದು ಎಲ್ಲಾ ಇದ್ದು ನಾವುಗಳು ಈಗ ಈ ರೀತಿಯಲ್ಲಿ ಮಾತನಾಡುತ್ತಾ ಪರಸ್ಪರ ನೋವು ನಲಿವುಗಳನ್ನು ವಿನಿಮಯ ಮಾಡಿಕೊಳ್ಳಲು, ಚರ್ಚಿಸಲು ಸಮಯವೇ ಸಿಗುತ್ತಿಲ್ಲ.

ನಮ್ಮನ್ನೇ ನಾವುಗಳು ಜೋಕು ಮಾಡಿಕೊಂಡು, ನಮ್ಮ ನಮ್ಮಲ್ಲಿಯೇ ತಮಾಷೆ ಮಾಡಿಕೊಂಡು, ಅವನ ಅವಳ ಬಗ್ಗೆ ಮಾತನ್ನಾಡಿಕೊಂಡು, ಅವರಿರವರನ್ನು ಹೊಗಳಿಕೊಂಡಿರುವ ಮಾತುಗಳನ್ನು ಮನದುಂಬಿ ಮಾತನಾಡಿ ವರ್ಷಗಳೇ ಆಗಿ ಹೋದವಲ್ಲಾ! ಎಷ್ಟು ಬೇಗ ನಾವುಗಳು ಗಂಭೀರ ಸ್ವಭಾವದವರುಗಳು ಆಗಿ ಬಿಟ್ಟಿವೀ! ಕೆಲಸ, ಹಣ, ಮನೆಯ ಜವಾಬ್ದಾರಿ.. ಹೀಗೆ ಈ ವಿಷಯಗಳೇ ಇಂದು ನಮ್ಮ ಬದುಕನ್ನು ಅವರಿಸಿ ಬಿಟ್ಟಿವೆ ಎಂಬ ನಿಟ್ಟುಸಿರು ನಮ್ಮದಾಗಿತ್ತು.

ಇರುವುದನ್ನು ಬಿಟ್ಟು ಇಲ್ಲದೆಡೆಗೆ ಸಾಗುವುದೇ ಜೀವನವಲ್ಲವೇ!

ಅಂದು ಸೇರಿದ ಎಲ್ಲರ ಮಾತಿನ ದಾಟಿಯೇ ಬೇರೆ. ಅಲ್ಲಿ ಪ್ರತಿಯೊಬ್ಬರೂ ಮುಂದೆ ಎಲ್ಲಿ ಯಾವಾಗ ಸೈಟ್ ಕೊಂಡುಕೊಳ್ಳಬೇಕು, ಯಾವಾಗ ಯಾವ ರೀತಿಯಲಿ ಮನೆಯನ್ನು ಕಟ್ಟಿಸಬೇಕು ಇತ್ಯಾದಿ. ಹೊಸ ಬದುಕಿನ ಕಡೆಗೆ ಹೊಸ ನೋಟ ಅವರದಾಗಿತ್ತು.

ಅದೇ ಕೆಲವಾರು ವರ್ಷಗಳ ಕೆಳಗೆ ಒಂದೇ ಒಂದು ಯೋಚನೆಯೆಂದರೇ ಹೇಗೆ ಮಜಾ ಮಾಡಬೇಕು, ಹೇಗೆ ಉತ್ತಮ ಸ್ಕೋರ್ ಮಾಡಬೇಕು, ಹೇಗೆ ಒಳ್ಳೆ ಕಂಪನಿಗೆ ಎಂಟ್ರೀ ಕೊಡಬೇಕು ಎಂಬುದಾಗಿತ್ತು. ಇಂದು ಎಲ್ಲಾರೂ ಹೆಚ್ಚು ಜವಾಬ್ದಾರಿಯ ಮನುಷ್ಯರಾಗಿದ್ದಾರೆ! ಏನಾಶ್ಚರ್ಯವಲ್ಲವಾ!

ಮದುವೆಯಾಗಿರುವರು ಮತ್ತು ಮಕ್ಕಳನ್ನು ಪಡೆದೆವರಂತು ನಮ್ಮ ಜೀವನದ ಒಂದು ಘಟ್ಟವನ್ನು ತಲುಪಿಬಿಟ್ಟಿದ್ದೇವಪ್ಪಾ! ಎಂಬ ರೀತಿಯಲ್ಲಿ ಇನ್ನೂ ಮದುವೆಯನ್ನು ಮಾಡಿಕೊಳ್ಳಲೂ ತವಕಿಸುತ್ತಿರುವ ಗೆಳೆಯರನ್ನು ಕಂಡು "ಎಂದು ನೀ ಊಟ ಹಾಕಿಸುತ್ತಿಯಪ್ಪ?" ಎಂಬ ಪ್ರಶ್ನೆ.

ನನಗೆ ಎನಿಸುತ್ತದೆ. ಸ್ನೇಹ ಲೋಕದಲ್ಲಿ ಇರುವಷ್ಟು ಬಿಂದಾಸ್ ಮಾತುಕತೆಯನ್ನು ಬೇರೆ ಎಲ್ಲೂ ಊಹಿಸಲೂ ಸಾಧ್ಯವಿಲ್ಲ. ಅಲ್ಲಿ ಅವನು ಎಂಥ ಹುದ್ದೆಯಲ್ಲಿಯೇ ಇರಲಿ, ಎಷ್ಟೇ ಸಂಪಾದಿಸುತ್ತಿರಲಿ, ಎಂಥ ಮನೆಯಲ್ಲಿಯೇ ವಾಸ ಮಾಡುತ್ತಿರಲಿ, ಹೇಗೆ ಇರಲಿ ಅವರುಗಳು ಪರಸ್ಪರ ಹಿಂದೆ ಕಾಲೇಜು ದಿನಗಳಲ್ಲಿ ಮೊದಲ ಸಲ ಬೇಟಿಯಾಗಿ ಸ್ನೇಹದ ಅಂಕುರವೆರ್ಪಟ್ಟಾಗ ಇದ್ದ ರೀತಿಯಲ್ಲಿಯೇ ನೋಡುತ್ತಾರೆ. "ಹೋಗಲೇ! ಬಾರಲೇ!" ಹೀಗೆ ಏಕವಚನದಲ್ಲಿ ನನಗೆ ಅನಿಸಿದಂತೆ ಗೆಳೆಯ/ಗೆಳತಿಯರನ್ನು ಯಾವುದೇ ವಯೋಮಾನದಲ್ಲೂ ಸಮಾನವಾಗಿ ನಡೆಸಿಕೊಳ್ಳುವರು ಸ್ನೇಹಿತರುಗಳು ಮಾತ್ರ. ಅಲ್ಲಿ ಅವರಿಗೆ ಅವನೂ ಏನಾಗಿದ್ದರೂ ಇನ್ನೂ ಕಾಲೇಜು ದಿನಗಳ ಗೆಳೆಯ/ಗೆಳತಿಯರಂತೆಯೇ ಕಾಣುತ್ತಾರೆ. ವಯಸ್ಸಿಗೆ, ಅಂತಸ್ತಿಗೆ ಯಾವುದಕ್ಕೂ ಅಲ್ಲಿ ಯಾವ ಸ್ಥಾನವೆಂಬುದು ಇಲ್ಲ.

ಅದಕ್ಕೆ ನಾನು ಹೇಳುತ್ತೇನೆ ಸ್ನೇಹ ಜಿಂದಾಬಾದ್!

ಪ್ರೀತಿ ಶಾಶ್ವತವಾಗಿರುವುದು ಸ್ನೇಹದಲ್ಲಿ ಅಲ್ಲಿ ಯಾರಿಂದಲೂ ಯಾವುದೇ ನಿರೀಕ್ಷೆಯು ಹುಟ್ಟುವುದಿಲ್ಲ. ಕೇವಲ ಅಕ್ಕರೆಯ ಪ್ರೀತಿ, ಅಸರೆ ಮತ್ತು ಅಚ್ಚರಿಯ ನೋಟ ಅಷ್ಟೇ!!

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ ಯಾವಾಗಲೂ ಪಯಣಿಸುವವನೇ ಪುಣ್ಯವಂತಹ!

ಮಂಗಳವಾರ, ಮಾರ್ಚ್ 15, 2011

ಒಂದು ಸುಂದರ ಅನುಬಂಧ





ಮನುಷ್ಯ ತನ್ನ ತನ್ನಲ್ಲಿಯೇ ಒಂದು ವ್ಯವಸ್ಥಿತವಾದ ಅನುಬಂಧಗಳನ್ನು ಸೃಷ್ಟಿ ಮಾಡಿಕೊಂಡು ತಾನು ಗಟ್ಟಿಯಾಗಿ ಬದುಕಲು ತವಕಿಸುತ್ತಾನೆ. ತನ್ನ ಮತ್ತು ತನ್ನ ಜೊತೆಯವರೊಡನೆ ನಲಿ ನಲಿಯುತ ಬಾಳಲು ಇಚ್ಛೆಪಡುತ್ತಾನೆ. ಒಂಟಿ ಸಲಗದ ರೀತಿಯಲ್ಲಿ ಎಂದೂ ಸಹ ಬಾಳಲು ಸಾಧ್ಯವಿಲ್ಲ. ಯಾಕೆಂದರೇ ನಾವುಗಳು ನಮ್ಮ ಚಿಕ್ಕಂದಿನ ದಿನಗಳಲ್ಲಿ ಓದಿ ತಿಳಿದಂತೆ, ಸಮಾಜ ಶಾಸ್ತ್ರದಲ್ಲಿ ಹೇಳಿರುವಂತೆ ಮನುಷ್ಯ ಸಂಘ ಜೀವಿ.

ತಾನು ಈ ಭೂಮಿಯ ಮೇಲೆ ಹುಟ್ಟಿದಂದಿನ ದಿನದಿಂದ ಯಾವ ರೀತಿಯಲ್ಲಾದರೂ ತನ್ನ ಅಸ್ತಿತ್ವವನ್ನು ಇಲ್ಲಿ ಒತ್ತಲು ತವಕಿಸುತ್ತಾನೆ. ತನ್ನ ನಂತರದ ತನ್ನತನವನ್ನು ನಿರಂತರವಾಗಿ ಮುಂದುವರಿಯಬೇಕು ಎಂಬ ಹಂಬಲ ಹೆಚ್ಚು. ಇದು ಕೇವಲ ಮನುಷ್ಯ ಜನಾಂಗಕ್ಕೆ ಮಾತ್ರ ಸೀಮಿತವಾದ ಪ್ರಕ್ರಿಯೆಯಲ್ಲ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯು ಸಹ ತನ್ನ ನಂತರದ ತನ್ನ ನೆಚ್ಚಿನ ವಾರಸ್ದಾರನನ್ನು ಪ್ರತಿಷ್ಠಾಪಿಸಲು ತವಕಿಸುತ್ತದೆ. ಅದೇ ನಿಸರ್ಗ ನಿಯಮವಲ್ಲವೇ.


ಅದಕ್ಕೆ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಅಷ್ಟೊಂದು ಗಟ್ಟಿಯಾದ ನಡವಾಳಿಗಳು, ಪದ್ಧತಿಗಳು ಇವೆ. ಗಂಡು ಹೆಣ್ಣು ಸಂಗಾತಿಯಾಗಿ ತನ್ನ ಮುಂದಿನ ತನ್ನದೇ ತದ್ರೂಪದ, ತಮ್ಮಿಬ್ಬರ ಗುಣಗಳ ಮೇಳವನ್ನು ತನ್ನ ಮಕ್ಕಳಲ್ಲಿ ನೋಡಲು ಕಾತುರರಾಗುತ್ತಾರೆ. ಈ ಪ್ರಪಂಚದಲ್ಲಿ ಯಾವುದು ಶಾಶ್ವತವಾದುದಲ್ಲಾ. ಆದರೆ ಪ್ರತಿಯೊಬ್ಬರೂ ತನ್ನ ನಂತರ ತಾವುಗಳು ಶಾಶ್ವತವಾಗಿಯೇ ಇರುವೆವು ಎಂಬ ರೀತಿಯಲ್ಲಿ ತಮ್ಮ ಮಕ್ಕಳು ಮರಿಯನ್ನು ಕಾಣುತ್ತಾ ಅವರುಗಳನ್ನು ಬೆಳೆಸುತ್ತಾ. ತಮ್ಮಗಳ ಜೀವನದ ಅಂತ್ಯವಿಲ್ಲವೇನೂ ಎಂಬ ರೀತಿಯಲ್ಲಿ ಅವರುಗಳಿಗಾಗಿ ತಮ್ಮ ಜೀವನವನ್ನೇ ಮೂಡಿಪಾಗಿ ಇಟ್ಟು ತಮ್ಮ ಕಿರಿಯರ ಸುಖ, ಸಂತೋಷದಲ್ಲಿ, ಏಳ್ಗೆಯಲ್ಲಿ ತಮ್ಮಗಳ ಆನಂದವನ್ನು ಕಾಣುತ್ತಾರೆ.

ಇದಕ್ಕೆ ಇರಬೇಕು ವಯೋಸಹಜ ನಡವಳಿಗಳು ಮನುಷ್ಯನಲ್ಲಿ ಯಾವ ಯಾವ ಕಾಲಕ್ಕೆ ಏನು ಏನೂ ಆಗಬೇಕೋ, ಅದು ಒಂದು ಚಕ್ರದ ರೀತಿಯಲ್ಲಿ ನಿರಂತರವಾಗಿ ನಡೆಯುತ್ತದೆ. ನಿಸರ್ಗವೂ ಸಹ ತನ್ನ ಚಮತ್ಕಾರವನ್ನು ಅದಕ್ಕೆ ಪೂರಕವಾಗಿ ತೋರಿಸುತ್ತಲೇ ಇರುತ್ತದೆ.

ಸರಿಯಾದ ವಯಸ್ಸಿಗೆ ಶಿಕ್ಷಣ, ಮದುವೆ, ಸಂಸಾರ, ವೃದ್ಧಾಪ್ಯ ಇತ್ಯಾದಿ ವಿವಿಧ ರೀತಿಯ ಜೀವನದ ಹಂತಗಳನ್ನು ಪ್ರತಿಯೊಬ್ಬ ಮನುಷ್ಯನು ದಾಟಲೇ ಬೇಕು. ಆಗಲೇ ನಾವುಗಳು ಆ ವ್ಯಕ್ತಿಯನ್ನು ಪರಿಪೂರ್ಣನೆಂದು ಕರೆಯಬಹುದು. ವಿವಿಧ ಘಟ್ಟಗಳ ಈ ಜೀವನದ ನಿರ್ವಹಣೆ ನಿಜವಾಗಿಯೂ ಅತಿ ಆಶ್ಚರ್ಯಕರ ರೀತಿಯಲ್ಲಿ ತಮ್ಮ ತಮ್ಮಲ್ಲಿಯೇ ಘಟಿಸುತ್ತಿರುತ್ತದೆ. ಅಲ್ಲಿ ಕಷ್ಟವಿದೆ, ಸುಖವಿದೆ, ನೋವಿದೆ, ನಲಿವಿದೆ, ಅವಮಾನಗಳಿವೆ, ಪರಸ್ಪರರ ಪ್ರೀತಿಯ ದಟ್ಟತೆಯಿದೆ.

ಹೀಗೆ ತಾನು ತನ್ನ ಒಂದು ಜೀವಮಾನದ ಈ ಒಂದು ಪರಿಯನ್ನು ತಪ್ಪದೇ ಅನುಭವಿಸಲೇ ಬೇಕು. ತನ್ನ ವಯಸ್ಸು ಬೆಳೆದಂತೆ, ತನ್ನ ಅನುಭವ ಬೆಳೆದಂತೆ ವಿವಿಧ ರೀತಿಯ ಜವಾಬ್ದಾರಿಗಳನ್ನು ತಾನು ಹೊರಲೇ ಬೇಕು. ತಾನು ಬದುಕಬೇಕು ತನ್ನನ್ನು ಅವಲಂಬಿಸಿರುವ ತನ್ನ ಜೊತೆಗಾರರನ್ನು ಸಾಕಲೇಬೇಕು. ಅದೇ ಅವನ/ಳ ಕಾಯಕ. ಎಷ್ಟೊಂದು ರೀತಿಯ ಕಾರ್ಯಗಳು ಪ್ರತಿಯೊಬ್ಬರೂ ಮಾಡುತ್ತಾರೆ ಅದು ಅವರುಗಳ ಗಮನಕ್ಕೆ ಬರದ ರೀತಿಯಲ್ಲಿ. ಅದೇ ನಮ್ಮ ಜೀವನವಲ್ಲವೇ?

ಪ್ರತಿಯೊಂದು ಗಂಡು ಹೆಣ್ಣನ್ನು ಅಸರೆಯಾಗಿ ಪಡೆಯುತ್ತಾನೆ. ಹೆಣ್ಣು ಗಂಡಿನ ಅಸರೆಯನ್ನು ಪಡೆಯುತ್ತಾಳೆ. ಇದು ಎಷ್ಟೊಂದು ಸುಂದರ ಕಲ್ಪನೆಯಲ್ಲವ. ತನ್ನ ಜೀವಿತಾವದಿಯವರೆಗೆ ತನ್ನವಳೆ/ನೆಯಾದ ಒಬ್ಬ ಸಂಗಾತಿಯನ್ನು ಆರಿಸಿಕೊಳ್ಳಲೇ ಬೇಕಾಗುತ್ತದೆ. ಅದರ ಅವಶ್ಯಕತೆ ಏನೇ ಇರಲಿ. ಈ ಒಂದು ವ್ಯವಸ್ಥೆಯಿಂದ ಒಬ್ಬರಿಗೂಬ್ಬರೂ ಸಹಕರಿಸಿ ಬಾಳುವ ಒಂದು ಸಂಬಂಧ ಪ್ರತಿಯೊಂದು ಜೀವಿಯಲ್ಲಿ ಸಾಮಾನ್ಯವಾಗಿ ಘಟಿಸುವ ನಡಾವಳಿ. ತನ್ನ ತನ್ನ ಯೋಚನೆ, ಆಲೋಚನೆಯನ್ನು, ನೋವು, ನಲಿವುಗಳನ್ನು ತಾನೇ ಇಟ್ಟುಕೊಂಡರೇ ಯಾವ ರೀತಿಯ ಪರಿಣಾಮವಾಗುವುದು ಎಂಬುದನ್ನು ಯೋಚಿಸಲೂ ಸಾಧ್ಯವಿಲ್ಲ. ಅದ್ದರಿಂದಲೇ ಯಾರಿಗೇ ಆಗಲಿ ತನಗಾಗಿ ತನ್ನ ಇಷ್ಟ ಕಷ್ಟವನ್ನು ಸಹಿಸುವ ಒಬ್ಬ ಜೊತೆಗಾರ/ತಿ ಬೇಕೆ ಬೇಕು.

ನನಗೆ ಅನಿಸುತ್ತದೆ ಪ್ರತಿಯೂಬ್ಬರಿಗೂ ಜೀವನದಲ್ಲಿ ಅತಿ ಹೆಚ್ಚು ಸಂತೋಷವಾಗುವುದು ಆ ಒಂದು ದಿನ ಮತ್ತು ಆ ಒಂದು ಮೊಹರ್ತ. ತನ್ನನ್ನು ವರಿಸಿ ತನ್ನವಳು/ನಾಗಿ ಜೀವನ ಪರ್ಯಾಂತ ನಾನು ನಿನಗೆ ಅಸರೆ - ನೀನು ನನಗೆ ಆಸರೆ ಎಂದು ಸಪ್ತಪದಿ ತುಳಿಯುವ ಗಳಿಗೆ. ಅಂದು ಆ ಜೋಡಿ ಜೀವಮಾನದ ಅತಿ ಹೆಚ್ಚು ಸಂತೋಷ ಮತ್ತು ಆನಂದವನ್ನು ಅನುಭವಿಸುವ ದಿನವಾಗಿರುತ್ತದೆ ಅಂದು.

ಹಾಗೆಯೇ ತನ್ನ ಹೆತ್ತವರಿಂದ ಸ್ವಲ್ಪ ಸ್ವಲ್ಪ ಅವಲಂಬನೆಯನ್ನು ಬಿಡುತ್ತಾ ಬಿಡುತ್ತಾ ತಾವೆ ತನ್ನ ಜೋಡಿಯೊಂದಿಗೆ ಕಲ್ಪನೆಯ ಬದುಕಿನ ಆರಮನೆಯನ್ನು ಕಟ್ಟಿಕೊಳ್ಳುತ್ತಾ, ತಮ್ಮಿಬ್ಬರ ಬೆಳವಣಿಗೆಯನ್ನು ಕಾಣುತ್ತಾ ತಮ್ಮ ಬಾಳಿನ ಏಳ್ಗೆಯನ್ನು ಕಾಣುವ ಒಂದು ಸುಂದರ ಭಾಂದವ್ಯ ಇದಾಗಿದೆ.

ಹೀಗೆ ಸಾಗುತ್ತಾ ಸಾಗುತ್ತಾ ತಾವುಗಳು ತಮ್ಮ ಸಂತತಿಯನ್ನು ಮುಂದುವರಿಸಲೇ ಎಂಬಂತೆ ತಮಗಾಗಿ ಮಕ್ಕಳನ್ನು ಪಡೆಯಲು ತಯಾರಾಗುವವರು. ಪ್ರತಿಯೊಂದು ಜೀವಿ ಯೋಚಿಸುವ ದಾಟಿಯಲ್ಲಿಯೇ ಮನುಷ್ಯನು ತನ್ನ ನಂತರದ ತನ್ನ ಕುಟುಂಬದ ಮುಂದುವರಿಕೆಗೆ ಎಂಬಂತೆ ತನ್ನಂತಿರುವ ತನಗೆ ಬೇಕಾದ ವ್ಯಕ್ತಿಯೊಬ್ಬನ ಹುಟ್ಟು ಇದಾಗಿದೆ. ಯಾವುದೇ ದಂಪತಿಗಳಿಗೆ ಅತಿ ಹೆಚ್ಚು ಸಂತೋಷ ಕೊಡುವ ಸಮಯ ಎಂದರೇ ತಮಗೆ ಮೊದಲ ಮಗು ಹುಟ್ಟಿದ ಗಳಿಗೆ. ತಮ್ಮದೇ ರೂಪ, ಬಣ್ಣ, ಗುಣ, ಚಹರೆಯನ್ನು ಹೊಂದಿರುವ ಮತ್ತೊಂದು ಜೀವದ ಸೃಷ್ಟಿ ನಿಜವಾಗಿಯೂ ಅಚ್ಚರಿಯನ್ನುಂಟು ಮಾಡುವ ಗಳಿಗೆ ಅಲ್ಲವಾ? ಅಲ್ಲಿಯೇ ಆ ಕ್ಷಣವೇ ತಮ್ಮ ಜೀವನ ಸಾರ್ಥಕವಾಯಿತು ಎಂದು ಬೀಗುವ ಗಳಿಗೆ ಅದಾಗಿದೆ. ಅಲ್ಲಿ ಹುಟ್ಟುವ ಮಮತೆ ಆ ಸಮಯದಲ್ಲಿಯೇ ಜೀವನ ಚಕ್ರದಲ್ಲಿಯ ಒಂದು ಹಂತವನ್ನೇ ಹಿಂತಿರುಗಿಸಿ ಒಮ್ಮೆ ನೋಡುವಂತಾಗುತ್ತದೆ.

ತಾನು ತನ್ನ ಹೆತ್ತವರಿಗೆ ಸಿಕ್ಕಿದ ಕ್ಷಣ ಹೇಗಿತ್ತು ಎಂದು? ತಾನು ಹೀಗೆ ಆಡಿರಬಹುದಾ? ಹೀಗೆ ಮಲಗಿರಬಹುದಾ? ಹೀಗೆ ಅತ್ತಿರಬಹುದಾ?.. ತನ್ನ ಹೆತ್ತವರು ನನ್ನನ್ನು ಕಂಡಾಗ ಹೀಗೆ ಆನಂದಿಸಿರಬಹುದಾ.. ಹೀಗೆ ಹತ್ತು ಹಲವು ನೆನಪುಗಳ ಸರಮಾಲೆಯನ್ನೇ ಅವನು/ಳು ಕಾಣಬಹುದಾಗಿದೆ. ತಮ್ಮ ತಮ್ಮಲ್ಲಿ ಹುಟ್ಟುವ ಆ ಒಂದು ಮಮತೆಯ ದೇವರು ಎಂದಿಗೂ ಮೀಗಿಲೂ. ತನ್ನ ಕೂಸಿಗಾಗಿ ಏನೂ ಮಾಡಲು ಸಿದ್ಧವಾಗುವಂತಹ ದೈರ್ಯ ಆ ಕ್ಷಣಕ್ಕೆ ಪ್ರತಿಯೊಬ್ಬ ಮಾತ ಪಿತೃಗಳಿಗೆ ಬರುತ್ತದೆ.

ಮಗು ಹುಟ್ಟಿದನಂತರ ಅದರ ಜೋತೆಯಲ್ಲಿ ಅವರುಗಳು ಕಳೆಯುವ ಎಲ್ಲ ಕ್ಷಣಗಳು ಒಂದಷ್ಟು ದಿನಗಳವರೆಗೆ ಎಲ್ಲಿಂದಲೂ ಯಾವರೀತಿಯಲ್ಲೂ ಯಾರಿಂದಲೂ ಕೊಡಲಾಗದಂತಹ ಮಹತ್ವದ ಶ್ರೀಮಂತವಾದ ಚಿನ್ನದ ಗಳಿಗೆಗಳು. ಅಲ್ಲಿ ತಂದೆ ತಾಯಿ ಇಬ್ಬರೂ ತಮ್ಮ ಬಾಲ್ಯದ ದಿನಗಳನ್ನು ತನ್ನ ಮುಂದಿರುವ ಕಂದನ ಕಣ್ಣಿನಲ್ಲಿ ಪುನರ್ ಮಿಲನ ಮಾಡಿಕೊಳ್ಳುತ್ತಾರೆ.

ತಾವು ಅನುಭವಿಸಿದ ಯಾವುದೇ ಒಂದು ಚಿಕ್ಕ ಕಷ್ಟ, ನೋವು ತನ್ನ ಮಗು ಅನುಭವಿಸಬಾರದು ಮತ್ತು ಅದಕ್ಕಾಗಿ ಏನಾದರೂ ಮಾಡಲು ತಮ್ಮ ಜೀವನವನ್ನೇ ಪಣವಿಡಲೂ ತಯಾರಿರುತ್ತಾರೆ. ಅದೇ ಅಲ್ಲವಾ ನಿಜವಾದ ನಿಷ್ಕಲ್ಮಶವಾದ ಪ್ರೀತಿ!

ಈ ಒಂದು ಜೀವನದ ನಿರಂತರವಾದ ಪಯಣದಲ್ಲಿ ತನ್ನ ಕುಟುಂಬ ಮತ್ತು ತನ್ನ ಜೊತೆಯಲ್ಲಿರುವವರ ಒಂದು ಕಾಳಜಿಯನ್ನು ಹೇಳಲು ಪದಗಳೇ ಸಾಲದು. ಅಲ್ಲಿ ತಂದೆ ತಾಯಿ, ಅಜ್ಜ -ಅಜ್ಜಿ ಅದು ಎರಡು ಕುಟುಂಬಗಳ ಮಹನ್ ಸಂತಸವನ್ನು ವರ್ಣಿಸಲೂ ಅಸಾಧ್ಯ. ಈ ಒಂದು ಜೀವನ ತಂತುವನ್ನು ಯಾರು ಮಾಡಿದರೋ ಅವನಿಗೆ ನಾವುಗಳು ನಿತ್ಯ ಕೃತಙ್ಞರಾಗಿರಬೇಕು. ಇದೇ ಅಲ್ಲವ ಸಂಬಂಧಗಳ ಬೇರನ್ನು ಗಟ್ಟಿ ಮಾಡುವ ಸಂದರ್ಭಗಳು.

ಹೆತ್ತವರಿಗೆ ತಮ್ಮ ಮಕ್ಕಳು ಎಷ್ಟೇ ದೊಡ್ಡವರಾದರೂ ಅವರುಗಳು ಯಾವಾಗಲೂ ಏನೂ ಅರಿಯದ ಮುದ್ದು ಕಂದಮ್ಮಗಳೇ ಸರಿ. ಈ ಕಲ್ಪನೆಯನ್ನು ಯಾರು ಮಾಡಲೂ ಸಾಧ್ಯ? ಅಲ್ಲಿ ನಾವುಗಳು ಮಾಡುವ ಸಾವಿರ ತಪ್ಪುಗಳಿಗೆ ಕ್ಷಮೆಯಿರುತ್ತದೆ. ಸಾವಿರ ನೋವುಗಳಿಗೆ ಹಿಡಿಯಾದ ಸಾಂತ್ವನವಿರುತ್ತದೆ. ನಮ್ಮ ಒಂದು ಗೆಲುವಿಗೆ ಸಹಸ್ರ ಸಹಸ್ರ ಆನಂದ ಬಾಷ್ಪವಿರುತ್ತದೆ. ಅದರ ಅಳಿವು ಉಳಿವು ನಮ್ಮ ನಮ್ಮಗಳ ಕೈಯಲ್ಲಿ ಮಾತ್ರ ಇರುತ್ತದೆ. ಅದರ ಮುಂದುವರಿಕೆಯ ಸೋಪಾನವನ್ನು ನಾವುಗಳು ನಮ್ಮ ನಮ್ಮಲ್ಲಿಯೇ ಮಾಡಬೇಕು. ಮಾಡುತ್ತಿರೋಣ!!!

ಗುರುವಾರ, ಮಾರ್ಚ್ 10, 2011

ಎಲ್ಲಾದರೂ ಇರೂ ಎಂತಾದರೂ ಇರೂ ಎಂದೆಂದಿಗೂ ನೀ ಕನ್ನಡಿಗನಾಗಿರು.



ವಾತವರಣವು ಪೂರ್ತಿ ಬದಲಾಗಿದೆ. ಸುಳಿ ಚಳಿಯಿಂದ ಎದುಸಿರು ಬಿಡುವಂತ ಮಟ ಮಟ ಮಧ್ಯಾನದ ಕೆಟ್ಟ ಬಿಸಿಲಿನ ಜಳ. ಒಂದು ಸುತ್ತು ಬೆಂಗಳೂರಿನ ಜನಗಳು ನಿಡುಸುಯ್ದಿದ್ದಾರೆ. ಇನ್ನೂ ಈಗ ಮಾರ್ಚ ತಿಂಗಳು ಈಗಲೇ ಇಷ್ಟೊಂದು ಜಳ ಇನ್ನೂ ಏಪ್ರಿಲ್ ತಿಂಗಳಲ್ಲಿ ಹೇಗೋ ಏನೋ ಎಂದು ಪ್ರಲಾಪಿಸಲಾರಂಭಿಸಿದ್ದಾರೆ. ಐಸ್ ಕ್ರೀಮ್, ತಂಪು ಪಾನಿಯಗಳಿಗೆ, ತಾಜಾ ಹಣ್ಣುಗಳಿಗೆ ಕಾಲದ ಮಹಿಮೆ ಎಂಬ ರೀತಿಯಲ್ಲಿ ಇಲ್ಲದ ಬೇಡಿಕೆಗಳು.

ಪ್ರಕೃತಿಯು ಸಹಜವಾಗಿ ತನ್ನ ಹಳೆತನವನ್ನು ಮರೆಯಲು ಪ್ರಾರಂಭಿಸಿದೆಯೇನೋ ಎಂಬಂತೆ ತನ್ನ ಒಣಗಿದ ಹಳೆಯ ಎಲೆಗಳನ್ನೇಲ್ಲಾ ಒಂದು ಸುತ್ತು ಉದುರಿಸಿ ಹೊಸ ಋತು ಆಗಮನಕ್ಕೆ ತನ್ನನ್ನು ತಾನು ಚಿಗುರೆಲೆಗಳನ್ನು ತಾರಲು ತಯಾರಿ ನಡೆಸಿದೆಯೇನೋ ಎಂಬಂತೆ ಚಿಕ್ಕ ಚಿಕ್ಕ ಹಸಿರು ಎಲೆಗಳನ್ನು ಎಲ್ಲಾ ಗಿಡ ಮರಗಳು ತಮ್ಮಲ್ಲಿ ಮೊಡಿಸಿಕೊಳ್ಳುತ್ತಿವೆ.

ಚೈತ್ರ ಮಾಸದ ಆಗಮನಕ್ಕೆ ಯಾವ ರೀತಿಯಲ್ಲಿ ಪ್ರಕೃತಿ ತನ್ನ ನಿತ್ಯ ಕಾಯಕದ ಮೊಲಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೋ ಆ ರೀತಿಯಲ್ಲಿ ತನ್ನ ಚಿತ್ತಾರದಲ್ಲಿ ತಲ್ಲಿನವಾಗಿದೆ.

ಯಾವುದು ನಿಂತರೂ ಕಾಲ ಮಾತ್ರ ನಿಲ್ಲುವುದಿಲ್ಲ ಎಂಬಂತೆ. ಯಾವಾ ಯಾವ ಕಾಲಕ್ಕೆ ಏನೂ ಏನೂ ಆಗಬೇಕೋ ಅದು ನಿತ್ಯ ಘಟಿಸುತ್ತಿರುತ್ತದೆ. ಯಾಕೆಂದರೇ ಕಾಲ ನಮ್ಮ ನಿಮ್ಮಂತೆ ಮೈ ಮರೆಯುವ ಸಾದ ಸೀದಾ ಮನುಷ್ಯ ಅಲ್ಲ ಅಲ್ಲವಾ?

ಹಾಗೆಯೇ ನಮ್ಮ ಕನ್ನಡ ನಾಡಿಗೆ ಡಬಲ್ ದಮಾಕ ಎಂಬ ರೀತಿಯಲ್ಲಿ ಕನ್ನಡ ಮನಸ್ಸುಗಳಿಗೆ ಪುನಃ ಮತ್ತೊಂದು ದೊಡ್ಡ ಕನ್ನಡ ಮನ-ಜನಗಳ ಸಮ್ಮೇಳನದ ಭರಾಟೆ ಮತ್ತು ಸಂಭ್ರಮ. ಗಡಿನಾಡು ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ. ಅಖಿಲ ಭಾರತ ೭೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ದೂರಿಯನ್ನು ಬೆಂಗಳೂರಿನಲ್ಲಿ ಕಂಡ ಕನ್ನಡ ಮಂದಿ ಮತ್ತೊಮ್ಮೆ ಗಡಿ ನಾಡಲ್ಲಿ ಕನ್ನಡ ಸಂಸ್ಕೃತಿಯ ಪ್ರದರ್ಶನಕ್ಕೆ ಭಾರಿ ಭಾರಿ ತಯಾರಿಯನ್ನು ಮಾಡಿಕೊಂಡಿದ್ದಾರೆ.

ಯಾವುದೇ ಒಂದು ವಿಚಾರ, ಸಮ್ಮೇಳನ, ಮಾತು, ಸಂಭ್ರಮಕ್ಕೆ ಪರ ಮತ್ತು ವಿರೋಧಭಾಸಗಳು ಸಾಮಾನ್ಯ. ಅವುಗಳ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಹಲವಾರು ರೀತಿಯಲ್ಲಿ ಹಲವಾರು ಮಂದಿಗಳಿಂದ ಕೇಳಿ ಬರುತ್ತವೆ. ಯಾರು ಸಮ್ಮೆಳನವನ್ನು ಉದ್ಗಾಟಿಸಬೇಕು, ಯಾರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇರಬೇಕು, ಯಾವ ಅತಿಥಿಗಳನ್ನು ಕರೆಯಿಸಬೇಕು ಇತ್ಯಾದಿ, ಇತ್ಯಾದಿ. ಇದು ಎಂದು ನಿಲ್ಲದ ತುಂತುರು ಜಟಿ ಮಳೆಯೇ ಸರಿ.

ಸುಮಾರು ೨೫ ವರ್ಷಗಳಾನಂತರ ಈ ರೀತಿಯ 2ನೇಯ ವಿಶ್ವ ಕನ್ನಡ ಸಮ್ಮೇಳನವನ್ನು ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ. ಪ್ರಪಂಚದ ವಿವಿಧ ಭಾಗದಲ್ಲಿ ಚದುರಿ ಹೋಗಿರುವ ಎಲ್ಲಾ ಸಮಸ್ತ ಕನ್ನಡ ಹೃದಯಗಳ ಸಂಮಿಲನಕ್ಕೆ ಒಂದು ಸೂಕ್ತ ವೇದಿಕೆಯನ್ನು ನಿರ್ಮಿಸಿದ್ದಾರೆ. ವಿಶ್ವ ಕನ್ನಡ ಸಮ್ಮೇಳನ ಎಂಬ ಹೆಸರಿನಲ್ಲಿ ಮೂರು ದಿನಗಳ ಕಾಲ ಸಾವಿರಾರು ಕನ್ನಡ ಪ್ರೇಮಿಗಳನ್ನು ಒಂದು ಕಡೆ ದೊಡ್ಡ ಪ್ರಮಾಣದಲ್ಲಿ ಸೇರಿಸಿಸುತ್ತಿದ್ದಾರೆ.ಶ್ರೀಮಂತವಾಗಿರುವ ಕನ್ನಡದ ಹತ್ತು ಹಲವು ವಿಚಾರಗಳು, ಗೋಷ್ಠಿಗಳು, ಸಂಸ್ಕೃತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೊಲಕ ಕನ್ನಡ ನಾಡು ನುಡಿಯ ಏಳ್ಗೆಯ ಬಗ್ಗೆ ಚಿಂತನೆಯನ್ನು ನಡೆಸುವ ಅವಕಾಶ ಮಾಡಿರುವುದು ತುಂಬ ಉತ್ತಮ ವಿಚಾರ.

ಆದರೇ ಸಮ್ಮೇಳನಗಳು, ಕಾರ್ಯಕ್ರಮಗಳು ಅಲ್ಲಿ ದರ್ಪಣಗೊಳ್ಳುವ ವಿಚಾರಗಳು ಎಷ್ಟರ ಮಟ್ಟಿಗೆ ಸಾಮಾನ್ಯ ಕನ್ನಡ ಹೃದಯಗಳಿಗೆ ಕನ್ನಡದ ಬಗ್ಗೆ ಮಮತೆಯನ್ನು ಸ್ಪುರಿಸಲು ಸಹಕಾರಿಯಾಗುವುದು ಎಂಬುದು ಮೀಲಿಯನ್ ಡಾಲರ್ ಪ್ರಶ್ನೇ. ಕೋಟಿ ಕೋಟಿ ರೂಪಾಯಿಗಳನ್ನು ಈ ರೀತಿಯ ಸಂಭ್ರಮದ ಕಾರ್ಯಕ್ರಮಗಳಿಗೆ ಸರ್ಕಾರ ವೆಚ್ಚ ಮಾಡುತ್ತದೆ. ಅದರ ಸದೋಪಯೋಗ ಯಾವ ರೀತಿಯಲ್ಲಿ ಆಗುತ್ತದೆ ಎಂಬುದು ನಾವುಗಳು ಚಿಂತಿಸುವ ವಿಚಾರ. ಕನ್ನಡ ಎಂದರೇ ಅದು ಕೇವಲ ನಮ್ಮ ಮಕ್ಕಳನ್ನು ಹತ್ತನೇಯ ತರಗತಿಯವರೆಗೂ ಕಡ್ಡಾಯವಾಗಿ ಓದಿಸುವ ಒಂದು ಮಾಧ್ಯಮ ವ್ಯವಸ್ಥೆಯಾಗಬಾರದು. ಅದು ನಮ್ಮ ನರ ನಾಡಿಗಳಲ್ಲಿ ಯಾವಗಲೂ ಹರಿಯುವ ನಿತ್ಯ ತುಂಗೆಯಾಗಬೇಕು. ಕನ್ನಡದ ಬಗ್ಗೆ ನಮ್ಮ ಇಂದಿನ ತರುಣ ಜನಾಂಗದ ಭಾವನೆ ಯಾವ ರೀತಿಯಲ್ಲಿ ಇದೆ ಎಂಬುದನ್ನು ನಾವುಗಳು ಬಲ್ಲೆವು. ಆದ್ದರಿಂದ ಹಿರಿಯರು, ವಿದ್ವಾಂಸರು, ಚಿಂತಕರು, ಉದ್ಯಮಿಗಳು ಗಮನಿಸಿ ಅದರ ಬೆಳವಣಿಗೆಗೆ ಯಾವ ರೀತಿಯಲ್ಲಿ ಯೋಜನೆಯನ್ನು ತಯಾರಿ ಮಾಡಬೇಕು ಎಂಬುದರ ಬಗ್ಗೆ ದೃಷ್ಟಿ ಬೀರಬೇಕು.

ಕೇವಲ ಕನ್ನಡದ ನೆಲದಲ್ಲಿ ಹುಟ್ಟಿದ ಕನ್ನಡದ ಮಕ್ಕಳಿಗೆ ಮಾತ್ರ ಕನ್ನಡ ಎಂಬಂತಾಗಬಾರದು. ಅದು ಪ್ರೀತಿಯ ಭಾಷೆಯಾಗಬೇಕು. ಮತ್ತು ಅದು ಕೇವಲ ಒಂದು ಭಾಷೆಯಾಗದೆ ಸಮಸ್ತ ಕನ್ನಡ ಸಂಸ್ಕೃತಿಯ ಪ್ರತೀಕವಾಗಬೇಕು. ಎಲ್ಲರೂ ಕನ್ನಡ ಕಲಿಯಲೇ ಬೇಕು ಎಂಬ ಜರೂರತು ನಿರ್ಮಾಣವಾಗಬೇಕು. ಅದು ಕೇವಲ ಅಡಿಗೆ ಮನೆಯ ಮಾತಾಗಬಾರದು. ಮುಖ್ಯ ಜಾಗಗಳಲ್ಲಿ ಕನ್ನಡ ಮಾತನಾಡುವುದೇ ಕೀಳು ಎಂತಾಗಬಾರದು. ಎದೆಯುಬ್ಬಿಸಿ ಕನ್ನಡ ಡಿಂಡಿಮವ ಮಳಗಿಸುವಂತಾಗಬೇಕು.

ಕನ್ನಡಿಗರು ಇಂದು ವಿಶ್ವ ಮಟ್ಟದಲ್ಲಿ ತಮ್ಮ ನಿರಂತರ ಸಾಧನೆಯಿಂದ ತಾನು ಹುಟ್ಟಿದ ತಾಯನಾಡ ಕೀರ್ತಿ ಪತಾಕೆಯನ್ನು ಅತಿ ಎತ್ತರದಲ್ಲಿ ವಿವಿಧ ರಂಗದಲ್ಲಿ ಪ್ರಪಂಚದ ಎಲ್ಲಾ ಜಾಗಗಳಲ್ಲಿ ನೆಟ್ಟಿದ್ದಾರೆ. ಅದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಆ ಎಲ್ಲಾ ಕನ್ನಡಿಗರ ಕೊಡುಗೆಗಳನ್ನು ಗುರುತಿಸಲು ನೆರವಾಗುವಲ್ಲಿ ಇಂಥ ಸಮ್ಮೇಳನಗಳು ಮುಖ್ಯವಾಗುತ್ತವೆ. ಇಂದು ಕರ್ನಾಟಕ ಎಂದರೇ ಅದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾದ ರಾಜ್ಯವಲ್ಲ. ವಿಶ್ವದ ಭೂಪಟದಲ್ಲಿ ಅದಕ್ಕೂ ಒಂದು ಮುಖ್ಯವಾದ ಸ್ಥಾನವನ್ನು ಕೊಟ್ಟಿದ್ದಾರೆ ಎಂದರೇ ಇಲ್ಲಿನ ಬಹುಮುಖ್ಯ ಕನ್ನಡ ಮಹನೀಯರುಗಳ ಸಾಧನೆ ಮತ್ತು ಅವರುಗಳ ಉತ್ತಮ ತನದಿಂದಾಗಿ.

ಮರಿದುಂಬಿಯಾಗಿಯಾದರೂ ಪುನಃ ಪುನಃ ಈ ಬನವಾಸಿ ದೇಶದಲ್ಲಿ ಜನಿಸಲೂ ಇಚ್ಛಿಸುತ್ತೇನೆ ಎಂಬಂತೆ ನಮ್ಮ ನಾಡು ಎಂಥವರಿಗಾದರೂ ಸ್ವರ್ಗ ಸೀಮೆಯೇ ಸರಿ. ಒಮ್ಮೆ ಇಲ್ಲಿ ನೀವು ಜೀವಿಸಲು ಬಂದಿರೇಂದರೇ ಪುನಃ ಇಲ್ಲಿಯೇ ಇರಲೂ ಇಷ್ಟಪಡುವಂತ ವಾತವರಣ ಮತ್ತು ಕನ್ನಡ ಜನಗಳ ಸ್ನೇಹ ಹಸ್ತ ಅಗಾಧ. ಅದಕ್ಕೆ ಎಂಥವರಿಗೂ ಕನ್ನಡ, ನೆಲ, ಜಲ, ಗಾಳಿ ಕಂಡರೇ ಒಂದು ರೀತಿಯ ಅಕ್ಕರೆ.

ವಿಶ್ವ ಕಪ್ ಕ್ರಿಕೆಟ್ ಜ್ವರದಲ್ಲಿ ಮುಳುಗುವ ಮನಸುಗಳು ಅತ್ತ ನಮ್ಮ ಕನ್ನಡಮ್ಮ ನ ತೇರು ಎಳೆಯುವ ಜಾತ್ರೆಯಲ್ಲಿ ಪಾಲ್ಗೂಳ್ಳುವ ಮನಸ್ಸು ಮಾಡಲಿ. ಅಲ್ಲಿ ಅಪರೂಪದ ವಿಶ್ವದಾದ್ಯಂತ ಹರಡಿರುವ ನಮ್ಮ ಕನ್ನಡಿಗರನ್ನು ನೋಡಲು ಅವರೊಡನೇ ಬೇರೆಯಲು ಮಾತನಾಡಿಸಲಾದರೂ ಹೋಗೋಣವೇ!

ಎಲ್ಲಾದರೂ ಇರೂ ಎಂತಾದರೂ ಇರೂ ಎಂದೆಂದಿಗೂ ನೀ ಕನ್ನಡಿಗನಾಗಿರು.

ಬುಧವಾರ, ಫೆಬ್ರವರಿ 23, 2011

ಮುಖ್ಯ ಅಮುಖ್ಯ



ನಾವುಗಳು ನಮ್ಮ ನಿತ್ಯ ಜೀವನದ ಜಂಜಾಟದಲ್ಲಿ ಎಲ್ಲಿ ಮುಖ್ಯವಾದದ್ದು, ಯಾವುದು ಪ್ರಾಮುಖ್ಯವಾದದ್ದು, ಯಾರು ಬೇಕಾದವರು ಯಾರು ಬೇಡಾದವರು, ಯಾವುದನ್ನು ಅನುಸರಿಸಬೇಕು, ಯಾವುದನ್ನು ನೀಡಬೇಕು, ಪಡೆಯಬೇಕು. ಹೀಗೆ ಸಾವಿರಾರು ವಿಧದಲ್ಲಿ ಸಾವಿರಾರು ವಿಷಯಗಳನ್ನು ಪ್ರಾಮುಖ್ಯತೆ ಕೊಟ್ಟು ಅನುಭವಿಸುವುದನ್ನು, ಪಡೆಯುವುದನ್ನು, ಪಡೆಯಬೇಕಾದುದನ್ನು, ಗಳಿಸಬೇಕಾದುದನ್ನು ಗಳಿಸಲಾರದ ರೀತಿಯಲ್ಲಿ ನಮ್ಮದಾಗಿ ಮಾಡಿಕೊಳ್ಳಬೇಕಾದದ್ದನ್ನು ಮಾಡಿಕೊಳ್ಳದ ಸಮಯದಲ್ಲಿ, ಅವಶ್ಯಕತೆಯಿರದದ್ದನ್ನು ಅನಾವಶ್ಯಕವಾಗಿ ಮೈ ಮೇಲೆ ಎಳೆದುಕೊಂಡು ಜೀವನದ ಪಾಠ ಇದು ಎಂದು ನಿಟ್ಟುಸಿರನ್ನು ಬಿಟ್ಟಿರುತ್ತೇವೆ.


ನಾವು ಎಷ್ಟೇ ಮುಂದಾಲೋಚನೆ,ಪ್ಲ್ಯಾನ್ ಏನಾದರೂ ಮಾಡಿದರೂ ಆ ಸಮಯಕ್ಕೆ ಆದನ್ನು ಆ ಸಮಯ ಸನ್ನಿವೇಶವೇ ನಮ್ಮನ್ನು ತನ್ನ ಮುಷ್ಠಿಯಲ್ಲಿ ಬಂಧಿಸಿ ನಮಗೆ ಅರಿವಿಲ್ಲದ ರೀತಿಯಲ್ಲಿ ಅದು ತನ್ನ ಜಾದುವನ್ನು ಪ್ರದರ್ಶಿಸಿ ನಮ್ಮ ಕಡೆ ಒಂದು ಅಚ್ಚರಿಯ ನೋಟವನ್ನು ಬೀರಿ ಮರೆಯಾಗಿರುತ್ತದೆ.


ಅಲ್ಲಿ ಉಳಿಯುವುದು ಕೇವಲ ನಮ್ಮ ತಪ್ಪು ಮತ್ತು ಒಪ್ಪುಗಳು ಮಾತ್ರ. ಪಲಿತಾಂಶವನ್ನು ನೋಡಿದರೇ ನಾವೇಷ್ಟು ಜಾಣರು, ಬುದ್ದಿವಂತರುಗಳು ಅನಿಸುತ್ತದೆ. ನಾವುಗಳು ಹೇಗ ಆ ಅವಕಾಶವನ್ನು ಉಪಯೋಗಿಸಿಕೊಂಡಿದ್ದೇವೆ ಎಂಬುದು ತಿಳಿದು, ಮುಂದೆ ಬರುವ ಯಾವುದೇ ಅವಕಾಶ, ಮಾತು, ವ್ಯಕ್ತಿ, ನೋಟ, ಅನುಭವವನ್ನು ಇನ್ನೂ ಉನ್ನತವಾಗಿ ಮೊದಲು ಆದ ಅವಘಡಗಳು, ಅಬಾಸಗಳು ಆಗದಂತೆ ಎಚ್ಚರಿಕೆವಹಿಸೋಣ ಎಂಬ ನಿರ್ಧಾರವನ್ನು ಮನದಲ್ಲಿಯೇ ಕಟ್ಟಿ ಮುಂದಿನ ಹೆಜ್ಜೆ ಇಟ್ಟರು ಅಲ್ಲಿಯು ಸಹ ಪುನ ಕಲ್ಪನೆಗೂ ನಿಲುಕದ ರೀತಿಯಲ್ಲಿ ಮತ್ತೊಂದು ನಿದರ್ಶನ, ಸವಾಲುಗಳು ದುತ್ತನೆ ನಮ್ಮ ಎದುರಿನಲ್ಲಿ ಹಲವು ಬಗೆಗಳಲ್ಲಿ ಆ ಸಮಯಕ್ಕೆ ಬಂದು ನಿಂತಿರುತ್ತದೆ.


ಈ ಬದುಕೇ ಹೀಗೆ ಅಲ್ಲವಾ. ಇಲ್ಲಿ ನಮ್ಮ ಜೀವನದ ಚಕ್ರಕ್ಕೆ ಯಾವುದೇ ಪ್ರೀ ಪ್ಲ್ಯಾನ್ ಎಸ್.ಓ.ಫಿ ಇರುವುದಿಲ್ಲ. ನಾವುಗಳು ಹೀಗೆ ಇರಬೇಕು. ಇದನ್ನು , ಇಲ್ಲಿ, ಹೀಗೆ ಮಾಡಬೇಕು ಎಂದುಕೊಂಡು ಜೀವಿಸಲು ಅಸಾಧ್ಯವಾದದ್ದು.


ಯೋಚಿಸಿ ನಮ್ಮ ಇಂದಿನ ದಿನಮಾನದಲ್ಲಿ ಎಷ್ಟೊಂದು ಕ್ರಾಂತಿಗಳು ಆಗಿವೆ. ಎಷ್ಟೊಂದು ಮಂದಿ ತಮ್ಮ ಅನುಭವಗಳನ್ನು, ನಿದರ್ಶನಗಳನ್ನು ನಮ್ಮ ಮುಂದೆ ಹಲವಾರು ಮಾಧ್ಯಮಗಳ ಮೊಲಕ ನಮಗೆ ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ಎಷ್ಟೊಂದು ದಿ ಬೇಸ್ಟ ಸಲ್ಯೂಶನ್ಸ್ ಗಳು, ಮೆಚ್ಚುಗೆ ಪಡೆದ ಮಾತು, ಮೋವಿಗಳು, ಪುಸ್ತಕಗಳು, ಉಪದೇಶಗಳು ಇಲ್ಲ. ಆದರೂ ಯಾಕೆ ನಾವುಗಳು ಪುನಃ ಪುನಃ ನಮ್ಮ ಬದುಕಿನ ದಾರಿಯಲ್ಲಿ ಸಾಮಾನ್ಯವಾಗಿ ಗೊತ್ತೂ ಗೊತ್ತಿಲ್ಲದಂತೆ ಅಲ್ಲೇ ಅದೇ ಜಾಗದಲ್ಲಿ ಎಡವುತ್ತೇವೆ?


ಈಗ ನಿಮಗೆ ಅನಿಸಬಹುದು! "ಹೌದು ತಮ್ಮ ಲೈಫ್ ಅಂದ್ರೆ ಅನ್ ಪ್ರೀಡಿಕ್ಟ್ ಜಸ್ಟ್ ಆಕ್ಸ್ ಪ್ಟ್ ಇಟ್!" ಅಂಥ.

"ಜೀವನ ಅಂದರೇ ಸಾಗರ ಇದ್ದಾಂಗ" ಎಂದು ನಮ್ಮ ಪೂರ್ವಿಕರು ತಮ್ಮ ಹಿಂದಿನ ಜೀವನ ಕಾಲದಿಂದಲೂ ಹೇಳಿಕೊಂಡು ಬರುತ್ತಿದ್ದಾರೆ. ಈ ಹಿರಿಯರುಗಳು ಇದೇ ಮಾತನ್ನು ಅವರ ಹಳೆ ತಲೆಗಳಿಂದ ಅದೇ ರೀತಿ ಅದೇ ಸಮಯದಲ್ಲಿ ತಮ್ಮ ಕಿವಿಗಳಿಗೆ ಹಾಕಿಕೊಂಡಿದ್ದಾರೆ.


ಅಂದರೇ ಇದು ಯಾವಾಗಲೂ ಇದು ಹೀಗೆ ಅಂಥ ಯಾವನು ಸಹ ಕಡ್ಡಿ ತುಂಡು ಮಾಡಿದ ರೀತಿಯಲ್ಲಿ ನಿರೂಪಿಸಿಲ್ಲ. "ಬದುಕು ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿರಾ ಹುಚ್ಚಪ್ಪಾಗಳ್ಳಿರಾ" ಅಂಥ ಪಂಡಿತರುಗಳು ಸಾಮಾನ್ಯ ಜನಕ್ಕೆ ತಿಳಿ ಹೇಳುವ ಮಟ್ಟಕ್ಕೆ ಅದ್ವಾನವಾಗಿದೆ/ಲ್ಲ ಎಂಬಂತಿಲ್ಲ?


ನಾವು ಚಿಕ್ಕ ಚಿಕ್ಕ ವಿಷಯಗಳನ್ನು ಸಾಮಾನ್ಯವಾಗಿ ಗಮನಿಸದೇ ನಮ್ಮ ಸುತ್ತ ಮುತ್ತ ನಡೆಯುವ ಘಟನೆ, ವ್ಯಕ್ತಿಗಳು, ಸ್ನೇಹಿತರುಗಳು, ಹಿರಿಯರು, ಕಿರಿಯರುಗಳು, ಓದು, ಕೆಲಸ, ದಾರಿ ಇತ್ಯಾದಿಗಳನ್ನು ನೋಡಿದರೂ ನೋಡದ ರೀತಿಯಲ್ಲಿ, ಕೇಳಿದರೂ ಕೇಳದ ರೀತಿ, ಮಾತನಾಡಿಸಿದರೂ ಮಾತನಾಡದ ರೀತಿಯಲ್ಲಿ ದೂಡಿ.. ನಮಗೆ ಉತ್ತಮ ಎಂಬುದು ನಮ್ಮ ಜೊತೆಯಲ್ಲಿ ಇಲ್ಲವೇ ಇಲ್ಲ ಎಂಬ ದೋರಣೆಯಲ್ಲಿ ಬೇರೆಲ್ಲೂ ಇದೆ ಎಂಬ ಕನಸಿನಲ್ಲಿ ಅದಕ್ಕಾಗಿ ಜಾತಕ ಪಕ್ಷಿಯಂತೆ ಜೀವನಮಾನವನ್ನೆಲ್ಲಾ ಕಳೆಯುವ ಗಾವಿದರಾಗಿದ್ದೇವೆ.



ಸೂಕ್ಷ್ಮತೆ ಎಂಬುದು ಎಲ್ಲೂ ಇದೆ ಎಂಬಂತೆ ವರ್ತಿಸುತ್ತಿದ್ದೇವೆ. ಯಾವುದನ್ನು, ಯಾವುದಕ್ಕೆ ಮಹತ್ವ ಕೊಡಬೇಕಾಗಿದೆಯೋ ಅದನ್ನು ಕಾಲು ಕಸ ಮಾಡಿಕೊಂಡು ಮುಂದೆ ಮುಂದೆ ಹೋಗುತ್ತಿದ್ದೇವೆ. ನಾವು ಮಾಡಿಕೊಂಡಿರುವ ನಮ್ಮ ಜೀವನದ ಕಾಲ ಮಾನದ ಹತ್ತು ಹಲವು ಉತ್ತಮೋತ್ತಮ ಉನ್ನತಿಗಳನ್ನು ಇನ್ನೂ ಬಂದಿಲ್ಲ ಎಂದು ಕೂರಗುತ್ತಲೇ ಕೂತಿದ್ದೇವೆ.

"ಹಿತ್ತಲು ಗಿಡ ಮದ್ದಲ್ಲ" ಎಂಬ ಗಾದೆಯ ಮಾತನ್ನು ಸುಳ್ಳು ಮಾಡುವಂತೆ ನಮ್ಮ ನೋಟ ದೃಷ್ಟಿ ಎಲ್ಲೂ ಹೊರಟು ನಿಂತಂತಿರುವುದು ವಿಪರ್ಯಾಸ.



ನಮ್ಮ ಸುತ್ತಲಿನ ನಮ್ಮ ಪರಿಸರ ನಮ್ಮ ಜನಮನಗಳಿಂದ ಸಿಗುವ ಸುಖ, ಪ್ರೀತಿ, ವಾತ್ಸಲ್ಯ, ಆಸರೆ, ಅಕ್ಕರೆ, ಸ್ನೇಹ, ಇತ್ಯಾದಿ ಮಾನವ ಸಂಬಂಧಿ ಸಂಬಂಧಗಳನ್ನು ನಮ್ಮ ಅಭಿವೃದ್ಧಿಗೆ ಸಂಕೊಲೆಗಳು ಎಂದು ಷರಾ ಬರೆದುಬಿಟ್ಟು ಯಾವುದೊ ಬಿಸಿಲು ಕುದುರೆಯನ್ನು ಏರಿ, ಇಲ್ಲಿ ಎಲ್ಲಾ ಮರುಭೂಮಿ ಎಂದು ಪರಿತಪಿಸುವಂತಾಗುತ್ತಿದೆ ಈ ನಮ್ಮ ಬದುಕು.



ಏನೊಂದು ಉತ್ಸಹ ಇಲ್ಲ. ಏನೊಂದು ಹೊಸತನವಿಲ್ಲದ ಅದೇ ಯಾಂತ್ರಿಕ ಕಾಲ ಚಕ್ರಕ್ಕೆ ಸಿಲುಕಿದ ಮಾನವ ಎಂಬ ಮನಸ್ಸೇ ಮಾಯವಾದಂತಾಗಿದೆ ಎಂದು ನಿಮಗೆ ಅನಿಸುತ್ತಿಲ್ಲವಾ ಯೋಚಿಸಿ.



ಯಾವುದು ಜೀವನಕ್ಕೆ ಮಹತ್ವವಾದದ್ದು ಎಂಬುದು ಹುಟ್ಟಿದನಿಂದ ಇಂದಿನವರೆಗೂ ಇಷ್ಟು ತಿಳಿದರೂ ಸಹ ನಮಗೆ ಗೊತ್ತು ಮಾಡಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲಾ ಅಂದರೇ ಈ ಬೌದ್ಧಿಕ ವಿಕಲತೆ ಎಲ್ಲಿ ಪ್ರಾರಂಭವಾಯಿತು ಎಂಬುದನ್ನು ಕಂಡುಕೊಂಡು ಹೊಸ ಕಿರಣದ ಪ್ರಭೆಯನ್ನು ನೋಡುವ ಮನದ ಕಣ್ಣು ತೆರೆಯುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಅದಕ್ಕೆ ಎಲ್ಲರೂ ಎಲ್ಲರಿಗಾಗಿ ಎಲ್ಲರಿಂದ ಇಲ್ಲೇ ಹುಡುಕಾಡುವಂತಾಗಲಿ.

ಸೋಮವಾರ, ಫೆಬ್ರವರಿ 14, 2011

ಕನ್ನಡಮ್ಮನ ಜಾತ್ರೆಯ ರಂಗಿನ ಹೋಕಳಿ

ಕನ್ನಡಮ್ಮ ನ ಜಾತ್ರೆಯ ನೋಟ ಕಣ್ಣಿಗೆ ಹಬ್ಬವೇ ಸರಿ! ಅಲ್ಲಿ ನಡೆದಾಡುವುದೆ ಒಂದು ಆನಂದ. ಪೂರ್ತಿ ಕನ್ನಡಮಯ. ಐ.ಟಿ, ಬಿ.ಟಿ ನಗರ ಇಲ್ಲಿ ಎಲ್ಲಿ ಕನ್ನಡಿಗರು ಎಂಬುದನ್ನು ನೂರಕ್ಕೆ ನೂರು ಸುಳ್ಳು ಮಾಡಿದ ಅಪರೂಪದ ಸಮ್ಮೇಳನ. ಇದು ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ವಿಚಾರ. ಈ ಸಮ್ಮೇಳನದ ಮೊದಲ ದಿನದಂದು ಮುಖ್ಯ ವೇದಿಕೆಯ ಮುಂಬಾಗದ ಒಂದು ನೋಟ ಟಿ.ಪಿ ಕಣ್ಣಲ್ಲಿ ಕಂಡಂತೆ.
ಮುಖ್ಯ ಸಭಾ ವೇದಿಕೆ






ಎಲ್ಲಾ ಕನ್ನಡಮಯ ಮತ್ತು ಕನ್ನಡಿಗರು





ಹಂಪಿ ಎಕ್ಸಪ್ರೆಸ್ ಕತೃ ಮತ್ತು ದೇಶಕಾಲ ಜನಕ








ಇಕ್ರಲಾ ಒದೀರಲಾ ಕವಿ

ನನ್ನ ಪ್ರೀತಿಯ ಹುಡುಗಿಯ ಗುರು

ಪುಸ್ತಕಗಳ ಜೊತೆ ಕನ್ನಡ ಮನಸುಗಳು

ಮಂಗಳವಾರ, ಫೆಬ್ರವರಿ 8, 2011

ಪ್ರೀತಿಯನ್ನು ಪ್ರೀತಿಪಟ್ಟವರಿಗಾಗಿ ಪ್ರೀತಿಸುತ್ತಾ ಕೊಡಿ




ಪ್ರೀತಿ ಈ ಎರಡು ಅಕ್ಷರಕ್ಕೆ ಇರುವ ಜಾದು ಮತ್ತು ಶಕ್ತಿಯನ್ನು ವರ್ಣಿಸಲು ಅಸಾಧ್ಯ. ಜೀವಿ ಈ ಭೂಮಿಯ ಮೇಲೆ ತಾನು ಪಾದಾರ್ಪಣೆಯನ್ನು ಮಾಡಿದ ದಿನದಿಂದಲೂ ತನ್ನ ಜೀವನ ವ್ಯಾಪಾರವನ್ನು ಸಾಗಿಸಲು ಇರುವ ಒಂದೇ ಒಂದು ಇಂಧನವಾಗಿದೆ.




ಪ್ರೀತಿಯ ಭಾವನೆ ಒಂಟಿತನವನ್ನು ದೂರ ಮಾಡಿ ತನಗೆ ಸಿಗುವ ಮತ್ತೊಬ್ಬ ಜೊತೆಗಾರನೇ ಸರಿ. ಪ್ರೀತಿ ಎಂಬ ಅಮೃತಪಾನವನ್ನು ವ್ಯಕ್ತಿ ತನ್ನ ಜನ್ಮದಾತೆಯಿಂದ ಸಾಕಷ್ಟು ಕುಡಿದಿರುತ್ತಾನೆ. ಇದರೊಂದಿಗೆ ಅದರ ಒಂದು ಮಧುರ ಅನುಭೂತಿಯನ್ನು ಪ್ರತಿಯೊಬ್ಬರು ಸವಿದಿರುತ್ತಾರೆ. ಅದಕ್ಕಾಗಿಯೇ ಪ್ರತಿಯೊಂದು ಜೀವಿಯು ತಾನು ಹೇಗಾದರೂ ಒಂದಲ್ಲ ಒಂದರಲ್ಲಿ ಒಬ್ಬರಲ್ಲಾ ಒಬ್ಬರಲ್ಲಿ ತನ್ನ ಪ್ರೀತಿಯನ್ನು ಪ್ರಕಟಿಸಲು ತವಕಿಸುತ್ತಿರುತ್ತಾನೆ/ಳೆ.






ತಾಯಿಯ ಮೊದಲ ಪ್ರೀತಿಗೆ ಸಮಾನಾದ ಪ್ರೀತಿ ಈ ಜಗತ್ತಿನಲ್ಲಿ ಮತ್ತೊಂದು ಇಲ್ಲ. ಅದೇ ಸರ್ವ ಶ್ರೇಷ್ಠವಾದದ್ದು. ಪ್ರೀತಿಯೆಂದರೇ ತಾಯಿ. ತಾಯಿ ನಡೆದಾಡುವ ದೇವರೇ ಸರಿ. ದೇವರಿಗೆ ಸಮಾನವಾದ ಈ ಪ್ರೀತಿಯನ್ನು ಸವಿದಿರುವ ನಮ್ಮ ಬಾಲ್ಯ ಮತ್ತು ನಮ್ಮ ಜೀವನದ ಗೆಲುವಿನ ಮುಡಿಪು ಇದಾಗಿದೆ. ಇದರ ಋಣವನ್ನು ನಾವು ಜನ್ಮರಾಭ್ಯ ಎಂಥ ಸೇವೆಯನ್ನು ಮಾಡಿದರೂ ತಿರಿಸಲೂ ಸಾಧ್ಯವಿಲ್ಲ.




ತಾಯಿಯ ಪ್ರೀತಿ ಯಾವುದೇ ಪ್ರತಿಫಲಾಪಕ್ಷೆಯಿಲ್ಲದೇ ತನ್ನ ಮಕ್ಕಳೆಡೆಗೆ ಇರುವಂತ ಸುಂದರ ಭಾವನೆ. ಅದರ ಮಧುರ ಪಾನವನ್ನು ಮಾಡಿ ಮಾಡಿ ತಾನು ಯಾವ ಮಟ್ಟಕ್ಕೆ ವ್ಯಕ್ತಿ ಬೆಳೆಯುತ್ತಾನೆ ಎಂದರೇ.. ಅದೇ ಅವನಿಗೆ ಒಂದು ದೈರ್ಯವನ್ನು ಏನಾದರೂ ಸಾಧಿಸುವ ಚಲವನ್ನು ಕೊಡುವುದು. ಮುಂದೆ ತನ್ನ ಪ್ರೀತಿಯ ಸಿಂಚನಕ್ಕೆ ಅದೇ ದಾರಿ ಮಾಡಿಕೊಡುವುದು. ವ್ಯಕ್ತಿ ಒಬ್ಬರನ್ನು ಯಾವ ರೀತಿಯಲ್ಲಿ ಪ್ರೀತಿಸಬೇಕು ಎಂಬುದನ್ನು ಅಲ್ಲಿಯೇ ಅದರ ಅ, ಆ,ಇ,ಈ.. ಕಲಿಯುವುದು.



ಜಗತ್ತಿನಲ್ಲಿ ಇರುವ ಸರ್ವಶ್ರೇಷ್ಠವಾದ ಒಂದು ಉತ್ಕೃಷ್ಟವಾದ ಜೀವಿಯ ಭಾವನೆಯಲ್ಲಿ ಪ್ರೀತಿ ಒಂದು. ತನ್ನವರೆಡೆಗೆ ತನ್ನಲ್ಲಿ ಸ್ಫುರಿಸುವ ಒಂದು ಮನದ ಭಾವನೆಯ ಎಳೆಯೇ ಈ ಪ್ರೀತಿ. ತಾನು ಅವರಿಗಾಗಿ ಏನಾದರೂ ಮಾಡಲು ಸರಿ! ಎಂಬ ಮಟ್ಟಕ್ಕೆ ವ್ಯಕ್ತಿಯನ್ನು ತಂದು ನಿಲ್ಲಿಸುವ ಆ ತಂತು ಯಾವುದು? ಅದೇ ಈ ಪ್ರೀತಿ.



ಈ ಪ್ರೀತಿಯೆಂಬ ಒರತೆ ಎಂದು ಖಾಲಿಯಾಗದ ಮತ್ತೇ ಮತ್ತೇ ತುಂಬುವ, ತುಂಬಿ ಹರಿಯುವ ಸ್ಫಟಿಕದಂತ ನೀರು. ಹಳ್ಳದಲ್ಲಿ ಮರಳನ್ನು ಹೆಚ್ಚು ಹೆಚ್ಚು ಆಳ ತೆಗೆದಷ್ಟು ಶುದ್ಧವಾದ ನೀರು ತುಂಬುವುದು. ತಾನು ಕುಡಿದು ತನ್ನ ಸುತ್ತಲಿನವರೆಗೂ ಅದರ ಉಪಯುಕ್ತತೆಯನ್ನು ಮನಸ್ಸಿನ ದಾಹವನ್ನು ತಣಿಸುವ ತಂಪನೆಯ ಪಾನಕವೇ ಇದಾಗಿದೆ.




ಹುಡುಗ/ಹುಡುಗಿಯರು ತಮ್ಮ ತಾರುಣ್ಯಾವಸ್ಥೆಗೆ ಬಂದರೂ ಅಂದರೇ ಸರಿ. ತಮ್ಮಲ್ಲಿ ಇರುವ ತನ್ನ ಪ್ರೀತಿಯನ್ನು, ಅದರ ಸಿಂಚನವನ್ನು ತನಗೆ ಒಪ್ಪಿಗೆಯಾಗುವರೊಂದಿಗೆ ವ್ಯಕ್ತಪಡಿಸಬೇಕು ಎಂದು ತವಕಿಸುತ್ತಿರುತ್ತಾರೆ.




ಆ ವಯಸ್ಸೇ ಹಾಗೇ. ಯೌವನದ ದಿನದಲ್ಲಿ ಏನಾನ್ನದರೂ ಮಾಡುವ ಜೋಶ್. ಅದಕ್ಕೆ ತಮಗೆ ಗೊತ್ತಿಲ್ಲದ ರೀತಿಯಲ್ಲಿ ಲವ್ ಎಂಬ ನಾಲ್ಕು ಅಕ್ಷರಗಳ ಸುಳಿಯಲ್ಲಿ ಸುಖವಾಗಿ ಬೀಳುತ್ತಾರೆ. ತಮ್ಮ ಕಡೆಗೆ ತಮ್ಮ ಭಾವನೆಗೆ ಸ್ಪಂದಿಸುವ ಒಂದು ಹೃದಯಕ್ಕಾಗಿ ಹುಡುಕಾಡುತ್ತಾರೆ. ಅದು ನಾವುಗಳು ಹೇಳುವಂತೆ ಜಸ್ಟ್ ಮೊದಲ ಕ್ರಶ್ ಅಥವಾ ಏನಾದರೂ ಸರಿಯೇ, ಅವರಿಗೆ ಒಂದು ಮಧುರವಾದ ಭಾವನೆಯನ್ನು ವ್ಯಕ್ತಪಡಿಸಲು ಹುಡುಗ -ಹುಡುಗಿಯರಿಗೆ ಜೊತೆಗಾರರು ಒಬ್ಬರು ಬೇಕಾಗಿರುತ್ತಾರೆ.






ಆ ವಯಸ್ಸಿಗೆ ತನ್ನ ತಂದೆ ತಾಯಿಗಳು ಏನೇ ತಮ್ಮ ಮೊದಲ ಪ್ರೀತಿಯ ಸ್ನೇಹಿತರಾದರೂ.. ತಮ್ಮ ಸಮಾನ ವಯಸ್ಸಿನ ಜೊತೆಗಾರರೊಡನೆ ಬೇರೆಯುವಂತೆ ತಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಲೂ ತಮ್ಮಂತೆಯೇ ಯೋಚಿಸುವ ತಮ್ಮ ವಯಸ್ಸಿನ.. ಸಂಗಾತಿಯ ಅಸರೆ ಬೇಕೆನಿಸುತ್ತದೆ. ಮೊದ ಮೊದಲು ಸ್ನೇಹಕ್ಕಾಗಿ ಗೆಳೆಯ-ಗೆಳತಿಯರನ್ನು ಹುಡುಕಿಕೊಂಡು ಹೈಸ್ಕೋಲ್, ಕಾಲೇಜು ವಿದ್ಯಾಭ್ಯಾಸದ ಜೊತೆಯಲ್ಲಿ ತಮ್ಮ ಕನಸುಗಳಿಗೆ ರೆಕ್ಕೆಯನ್ನು ಕೊಡುವ, ಪ್ರೋತ್ಸಾಹಿಸುವ ಮತ್ತು ಉತ್ತೇಜಿಸುವ ಮನಸುಗಳ ಕಡೆಗೆ ತಮ್ಮ ಮನಸ್ಸನ್ನು ಹರಿಯ ಬಿಡುತ್ತೇವೆ.




ಆ ವಯಸ್ಸಿನಲ್ಲಿ ಅದು ಶಾಶ್ವತವಾಗಿ ಈ ಒಂದು ಸಂಬಂಧ ಉಳಿಯಬೇಕು ಎಂಬ ಕರಾರು ಅಥವಾ ಒಂದು ಅನಿಸಿಕೆ ಏನೂ ಇರಲಾರದು. ಅದು ಆ ಸಮಯದಲ್ಲಿ ಜೊತೆಯಲ್ಲಿ ಒಬ್ಬರೊಬ್ಬರಿಗೆ ತಮ್ಮ ಭಾವನೆಯ ವಿನಿಮಯಕ್ಕೆ ದಾರಿಯನ್ನು ಕಂಡು ಕೊಂಡಿರುತ್ತಾರೆ.



ಒಮ್ಮೊಮ್ಮೆ ಹಲವಾರು ಉತ್ತಮ ಸ್ನೇಹಿತರುಗಳನ್ನು - ಪ್ರಾಣ ಸ್ನೇಹಿತರುಗಳನ್ನು ಪಡೆಯಬಹುದು. ಅದು ಎಷ್ಟರ ಮಟ್ಟಿಗೆ ಪರಸ್ಪರ ಒಬ್ಬರನ್ನೊಬ್ಬರು ಹೇಗೆ ಅರ್ಥಮಾಡಿಕೊಂಡಿರುತ್ತಾರೆ ಎಂಬುದರ ಮೇಲೆ ನಿಂತಿರುತ್ತದೆ.



ಹಾಗೆಯೇ ಸಾಗುತ್ತಾ ಸಾಗುತ್ತಾ.. ಅವರುಗಳಲ್ಲಿಯೇ ಯಾರ ಮೇಲೆ ಅತಿಯಾದ ಮತ್ತು ತಮಗೆ ಹಿಡಿಸುವಂತಹರು ಯಾವುದೊ ಒಂದು ರೀತಿಯಲ್ಲಿ ತಮ್ಮ ಮನಸ್ಸಿನ ಭಾವನೆಗಳಿಗೆ ಹೊಂದಿಕೆಯಾಗುವ.. ಅವನ/ಅವಳ ಯಾವುದೋ ಒಂದು ಗುಣ ಅಥವಾ ಹಲವು ಗುಣ ನಡೆ ನುಡಿಗಳು ತುಂಬ ಪರಿಣಾಮ ಬೀರಿದರೆ ನಮ್ಮ ಹುಡುಗ/ಹುಡುಗಿಯರು ಒಳ ಒಳಗೆ ಅವನನ್ನು/ಅವಳನ್ನು ತಮ್ಮ ಹೃದಯದಲ್ಲಿ ಇಟ್ಟು ಆರಾಧಿಸಲು ಪ್ರಾರಂಭಿಸುತ್ತಾರೆ.




ಈ ರೀತಿಯ ಒಂದು ಭಾವನೆ ಹೆಚ್ಚು ಹೆಚ್ಚು ಜೊತೆಯಲ್ಲಿ ನಡೆದಾಡುವ ಹೆಚ್ಚು ಹೆಚ್ಚು ಸ್ನೇಹಮಯವಾಗಿ ಬೆರೆತಾಗ.. ಅವನ/ಅವಳ ಪ್ರತಿಯೊಂದು ಮನಸ್ಸಿನ ವಿಚಾರ/ಭಾವನೆ ವ್ಯಕ್ತಿತ್ವಗಳಿಂದ ಆಕರ್ಷಿತರಾಗಿ ಅವನಿಗೆ/ಅವಳಿಗೆ ಮನ ಸೋತು ಹೋಗಿ ಬಿಟ್ಟಿರುತ್ತಾರೆ. ಅಲ್ಲಿ ಕೇವಲ ಸ್ನೇಹ ಎಂದು ಪ್ರಾರಂಭವಾಗಿದ್ದು. ಪ್ರೇಮ ಎಂಬ ಎರಡಕ್ಷರದ ಭಾವನೆಗೆ ಬಂದು ನಿಲ್ಲುತ್ತದೆ. ಹೌದು! ಉತ್ತಮ ಸ್ನೇಹಿತರುಗಳು ಮಾತ್ರ ಉತ್ತಮ "ಪ್ರೇಮಿ" ಗಳಾಗಲು ಸಾಧ್ಯ!



ಇಲ್ಲಿ ಯಾವುದೇ ಅಂತಸ್ತು, ಜಾತಿ, ಜಾತಕ ಹೀಗೆ ಯಾವುದೆ ಕಟ್ಟಳೆಗಳಿಲ್ಲದೆ ಹುಟ್ಟುವ ಒಂದು ಸ್ನೇಹಮಹಿ ಸಂಬಂಧ ಇದಾಗಿರುತ್ತೆ. ಆ ವಯಸ್ಸಿನಲ್ಲಿ ನಮ್ಮ ಹುಡುಗ/ಹುಡುಗಿಯರಿಗೆ ಮುಂದಿನ ಜೀವನದ ಕಲ್ಪನೆಗಳು ಯಾವ ರೀತಿಯಲ್ಲೂ ಇರುವುದಿಲ್ಲ. ಆ ಸಮಯಕ್ಕೆ ಅವರಿಗೆ ತಮ್ಮ ಮನಸ್ಸಿನ ಕನಸುಗಳಿಗೆ ಬಣ್ಣ ಕಟ್ಟುವ ಜೋಡಿ ಬೇಕು ಅಷ್ಟೇ... ಈ ರೀತಿಯ ಅಪ್ರಾಪ್ತವಾದ ಸಂಬಂಧಗಳು ನಮ್ಮ ಹಿರಿಯರಿಗೆ ಹಿಡಿಸುವುದಿಲ್ಲ. ಯಾಕೆಂದರೇ ಅವರುಗಳು ಜೀವನವನ್ನು ನೋಡುವ ದೃಷ್ಟಿ ಕೋನವೇ ಬೇರೆಯ ರೀತಿಯಲ್ಲಿರುತ್ತದೆ. ಅಲ್ಲಿ ಅವರಿಗೆ ಜವಾಬ್ದಾರಿ ಇರುತ್ತದೆ. ದೂರಾಲೋಚನೆ ಇರುತ್ತದೆ. ಸಮಾಜವನ್ನು ಎದುರಿಸ ಬೇಕು ಎಂಬ ಭಯವಿರುತ್ತದೆ ಮತ್ತು ಯೋಚನೆಯಿರುತ್ತದೆ.



ನಮ್ಮ ಈ ಮಕ್ಕಳಿಗೆ ಆ ವಯಸ್ಸಿಗೆ ಅದ್ಯಾವುದು ನೆನಪಿಗೂ ಸಹ ಬರಲಾರದು. ಯಾಕೆಂದರೇ ಅದು ಸ್ಟೋಡೆಂಟ್ ಲೈಫ್ ಅಂದರೇ ಗೋಲ್ಡನ್ ಲೈಫ್ ಎಂಬ ಲೈಫ್ ಲ್ಲಿ ಜೀವಿಸುತ್ತಿರುತ್ತಾರೆ. ತಮ್ಮ ಪ್ರೀತಿಯ ತೊರೆಯನ್ನು ಇನ್ನೂ ಹೆಚ್ಚು ಹೆಚ್ಚು ತುಂಬಿಸಿಕೊಳ್ಳುವ ತವಕದಲ್ಲಿರುತ್ತಾರೆ.




ಪ್ರಕೃತಿ ಸಹಜವಾದ ಭಾವನೆಗಳ ಲಹರಿಗೆ ಯಾವುದೇ ಅಡ್ಡಿ ಇರಲಾರದು. ಅದನ್ನು ಅವರುಗಳು ಈ ರೀತಿಯ ಒಂದು ಸುಂದರ ಲೋಕದಲ್ಲಿ ನಡೆದಾಡಲೂ ಶುರು ಮಾಡುತ್ತಾರೆ.



ಈ ರೀತಿಯ ಭಾವನೆಯ ಉಗಮಕ್ಕೆ ಪ್ರೇರಣೆಯಾದರೂ ಯಾವುದು ಎನ್ನಬಹುದು. ನಮಗೆಲ್ಲಾ ಗೊತ್ತಿದೆ. ಅದು ಎಲ್ಲಾರಿಗೂ ಬರುವಂತದ್ದೇ. ಒಬ್ಬೊಬ್ಬರೂ ವ್ಯಕ್ತ ಪಡಿಸುತ್ತಾರೆ. ಮತ್ತೇ ಕೆಲವರು ವ್ಯಕ್ತಪಡಿಸಲಾರದೇ ತಮ್ಮಲ್ಲಿಯೇ ಇಟ್ಟುಕೊಂಡು ಅವುಗಳಿಗೆ ಎಳ್ಳು ನೀರು ಬಿಟ್ಟುಕೊಂಡಿರುತ್ತಾರೆ.



ಆದರೋ ಇಂದಿನ ಈ ತಾಂತ್ರಿಕ ಯುಗದಲ್ಲಿ ನಮಗೆ ನಮ್ಮ ಕಣ್ಣೆದುರೇ ಇದನ್ನು ಪ್ರೋತ್ಸಾಹಿಸುವಂತಹ ಘಟನೆಗಳು ಹಲವಾರು ಮಾದ್ಯಮಗಳಲ್ಲಿ ನಮ್ಮ ಮನೆ ಮತ್ತು ಮನದಂಗಳಗಳಿಗೆ ದಾಳಿಯಿಡುತ್ತಿವೆ. ಆದ್ದರಿಂದ ಯುವಕರು ತಾವುಗಳು ತಮ್ಮ ತಮ್ಮಲ್ಲಿಯೇ ಹಾಗೇ ಹೀಗೆ ಆಗಬೇಕು ಎಂಬ ಕನಸುಗಳು.. ಅದಕ್ಕೆ ಹತ್ತು ಹಲವಾರು ದಾರಿಗಳು... ಕಾಣಿಸುತ್ತಿವೆ.. ಪಡೆಯುತ್ತಾರೆ.. ಗೆಲ್ಲುತ್ತಾರೆ ಒಮ್ಮೊಮ್ಮೆ ಸೋಲುತ್ತಾರೆ..




ಆದರೇ ನಾವುಗಳು ಏಕೆ ಒಂದು ಹುಡುಗ ಹುಡುಗಿ ಜೊತೆಯಾಗಿ ಮಾತನಾಡಿದರೆ ಅದು ಇದೆ ಎಂಬ ರೀತಿಯಲ್ಲಿ ನೋಡೂತ್ತೆವೋ ತಿಳಿಯದು. ಈ ರೀತಿಯ ನೋಟವೇ ಅವರುಗಳನ್ನು ಒಮ್ಮೊಮ್ಮೆ ತಾವುಗಳು ನಡೆಯುತ್ತಿರುವ ದಾರಿಯೇ ಹೇಗೋ ಏನೋ ಎಂಬಂತೆ ಗಲಿಬಿಲಿಯಲ್ಲಿ ನಿಲ್ಲುವಂತಾಗುತ್ತದೆ. ಅದಕ್ಕೆ ಹಿರಿಯರಾದವರೊ ಸೊಕ್ತ ರೀತಿಯಲ್ಲಿ ತಮ್ಮ ಮಟ್ಟಿಗೆ ತಕ್ಕ ಸಮಯದಲ್ಲಿ ಮಾರ್ಗದರ್ಶನಗಳನ್ನು ನೀಡಿದರೇ ಇದರಿಂದ ಆಗುವ ಅನಾಹುತಗಳನ್ನು ತಡೆಯಬಹುದು ಏನೋ ಅಲ್ಲವಾ.



ಮತ್ತೇ ಒಂದು ಸಿದ್ಧಾಂತವೇ ನಿರ್ಮಾಣವಾಗಿದೆ. ನೀನು ಯಾರನ್ನಾದರೋ ಪ್ರೀತಿಸಿದೆಯೆಂದರೇ ಅವರನ್ನು ಪಡೆಯಲೂ ನೀನು ಸಾಕಷ್ಟು ಜೀವನದಲ್ಲಿ ಕಷ್ಟಪಡಬೇಕಾಗುತ್ತದೆ... ಲವ್ ಅಂದರೇ ನೋವು. ಹೀಗೆ ಹತ್ತು ಹಲವು ರೀತಿಯ ಪರಿಸ್ಥಿಗಳು ನಮ್ಮ ಎದುರಲ್ಲಿ ಇಂದು ನಿಂತಿವೆ. ಯಾಕೇ? ಒಂದು ಸಾಮಾನ್ಯ ಮಧುರ ಭಾವನೆಗಳನ್ನು ತಾನು ಇಷ್ಟಪಟ್ಟವರಿಗೆ ವ್ಯಕ್ತಪಡಿಸಲೂ ಸಾಧ್ಯವಿಲ್ಲವೆ. ಲವ್ ಅಂದರೇ ನಿಜವಾಗಿಯೂ ಕ್ರೈಮಾ?




ಯೋಚಿಸಿ ಎಷ್ಟೊಂದು ಪ್ರೇಮಿಗಳು ತಮ್ಮ ಪ್ರೀತಿಯನ್ನು ದಕ್ಕಿಸಿಕೊಳ್ಳಲಾರದೇ ಮತ್ತು ಸುತ್ತಲಿನ ತಮ್ಮ ಹಿರಿಯರು, ಸಮಾಜದೊಡನೆ ಹೋರಾಡಲು ಅಸಕ್ತರಾಗಿ ಸ್ವರ್ಗದಲ್ಲಾದರೂ ಒಂದಾಗೋಣ ಎಂದು ತಮ್ಮ ಪ್ರಾಣಗಳನ್ನು ನಿತ್ಯ ಕಳೆದುಕೊಳ್ಳುತ್ತಿದ್ದಾರೆ. ಯಾಕೇ? ಇದಕ್ಕೆ ನಮ್ಮ ಮುಂದೆ ನಮ್ಮ ಹಿಂದಿನ ಪುರಾಣ ಕಾಲದಿಂದ ಪ್ರಾರಂಭಿಸಿ ಇತ್ತೀಚೆಗಿನ ನಮ್ಮ ಸುತ್ತಲಿನ ಹತ್ತಿರದ ಘಟನೆಗಳೆ ಸಾಕ್ಷಿಯಾಗಿವೆ.


ನಾವುಗಳು ನಿತ್ಯ ಓದುವ ಕಾದಂಬರಿ, ನೋಡುವ ಸಿನಿಮಾ, ಕೇಳುವ ಹಾಡುಗಳಲ್ಲಿ ಯಾಕೇ ಈ ಒಂದನ್ನು ಇಷ್ಟೊಂದು ರೀತಿಯಲ್ಲಿ ಚಿತ್ರಿಸುತ್ತಾರೆ. ಇಂದು ಪ್ರೀತಿ -ಪ್ರೇಮ ಇಲ್ಲದ ಯಾವುದೇ ಒಂದು ಕಾರ್ಯಕ್ರಮಗಳೇ ಇಲ್ಲವೆನೋ. ಮುಂದಿನ ನಮ್ಮ ಈ ಜೀವ ಲೋಕದ ಬೆಳವಣಿಗೆಗೆ ಕಾರಣೀಭೂತವಾದ ಇಂಥ ಅಮೊಲ್ಯವಾದ ಒಂದು ಸ್ಪಂದನಕ್ಕೆ ಯಾಕೀಷ್ಟು ಕಟ್ಟಪ್ಪಣೆಗಳು. ಅದು ಎಲ್ಲ ತಿಳಿದಂತಹ ನಿತ್ಯ ಹತ್ತು ಹಲವು ಇದಕ್ಕೆ ಸಂಬಂಧಿಸಿದ ಚಿತ್ರಣಗಳನ್ನು ನೋಡಿದರೂ ಪುನಃ "ಹೇ ನನ್ನ ಮಗಳು/ಮಗ ಮಾತ್ರ ಆ ರೀತಿಯಲ್ಲಿ ಮಾಡಬಾರದು" ಎಂಬ ದೋರಣೆ ಯಾಕೇ? ಅದೇ ಕರುಣಾಜನಕವಾದ ಪ್ರೇಮ ಕಥೆಗಳನ್ನು ಇಷ್ಟಪಟ್ಟು ಬೆಸ್ಟ್ ಸೆಲ್ ರ್, ಬೆಸ್ಟ್ ಮೋವಿ, ಬೆಸ್ಟ್ ಹಾಡು ಎಂದು ಓದುತ್ತಾ, ನೋಡುತ್ತಾ, ಕೇಳುತ್ತಾ ಸಂಭ್ರಮಿಸುತ್ತೇವೆ. ಅದೇ ನಮ್ಮ ಪಕ್ಕದಲ್ಲಿ ನಮ್ಮವರೊಡೊಣೆ ಘಟಿಸಿದರೆ ಹಾವು ಕಂಡಂತೆ ಹುಬ್ಬೇರಿಸುತ್ತೆವೆ ಯಾಕೆ?




ಆದರೋ ಈ ಎಲ್ಲಾ ವಿಚಾರಗಳೊಂದಿಗೆ ವ್ಯಾಲೆಂಟೈನ್ -ಪ್ರೇಮಿಗಳ ದಿನದ ಶುಭಾಶಯಗಳು! ಪ್ರೀತಿಯನ್ನು ಪ್ರೀತಿಪಟ್ಟವರಿಗಾಗಿ ಪ್ರೀತಿಸುತ್ತಾ ಕೊಡಿ.

ಶುಕ್ರವಾರ, ಫೆಬ್ರವರಿ 4, 2011

ಎಲ್ಲಿ ಜಾರಿತೋ ಆ ನಮ್ಮ ಬಾಲ್ಯ..



ಎಲ್ಲಿ ಜಾರಿತೋ ಆ ಬಾಲ್ಯದ ನಮ್ಮ ನಿಮ್ಮೆಲ್ಲಾರ ಕ್ರಿಯೇಟಿವಿಟಿ? ಕ್ಷಣ ಕ್ಷಣವೂ ಹೊಸ ಹೊಸ ಬದುಕಿಗೆ ಹಂಬಲಿಸುತ್ತಿದ್ದ ಮನಸ್ಸು ಮತ್ತು ದೇಹ. ದಿನ ದಿನವೂ ಚಡಪಡಿಸುತ್ತಿದ್ದ ಹೊಸ ಆವಿಷ್ಕಾರಕ್ಕೆ ಸಜ್ಜಾಗುತ್ತಿದ್ದ ಮನೋಲಹರಿ.


ದೇಹ ಬೆಳೆದಂತೆ ನಾವು ತಿಳಿದಂತೆ ನಮ್ಮ ಬುದ್ಧಿಯು ಬೆಳೆಯುತ್ತದೆ. ಇದು ವೈಙ್ಞಾನಿಕವಾಗಿಯೋ ಅನುಭವಜನ್ಯವಾಗಿಯೊ ಸತ್ಯವಾದದ್ದು.


ಹಾಗೆಯೇ ನಾವುಗಳು ನಮ್ಮ ಅರಿವಿನ ಹಿರಿಮೆಯನ್ನು ಹೆಚ್ಚಿಸಿಕೊಳ್ಳುವ ಭರದಲ್ಲಿ ನಮ್ಮ ಅಗಾಧ ಮನೋಸಹಜ ಮುಗ್ಧತೆಯ ಕ್ರಿಯಶೀಲತೆಯನ್ನು ಅಮುಕಲಾರಂಭಿಸುತ್ತೇವೆ.


ಬಾಲ್ಯದ ಆ ಸ್ವಚ್ಛಂದ ಮನಸ್ಸು ಕಲಿಯುವ ಶಾಲಾರಂಭದಿಂದ ತನ್ನ ವಿದ್ಯಾಭ್ಯಾಸ ಮತ್ತು ತನ್ನ ಸುತ್ತಲಿನವರಿಂದ ಇದು ಹೀಗೆ, ನೀನು ಹೀಗೆ ಬೆಳೆಯಬೇಕು. ನೀನು ಹೀಗೆ ಕಲಿಯಬೇಕು. ಮಕ್ಕಳ ಬುದ್ಧಿ ಬಿಟ್ಟು ಬಿಡು. ನೀನು ಬೆಳೆಯುತ್ತಿದ್ದೀಯ, ವಯಸ್ಸು ಹೆಚ್ಚಾಗುತ್ತಿದೆ. ಎಂಬ (ಅ)ಸಾಮಾನ್ಯ ಮಾತುಗಳನ್ನು ತನ್ನ ಹೆತ್ತವರಿಂದ ಹಿಡಿದು ತಾನು ಹೊಂದಿರುವ ಎಲ್ಲಾ ರೀತಿಯ ಸಂಪರ್ಕದ ಜನರಿಂದ ದಿನಂಪ್ರತಿ ಕೇಳಿ ಕೇಳಿ ತಾನು ತನ್ನಂತಯೇ ಯೋಚಿಸುವುದನ್ನೇ ಬಿಟ್ಟು ಎಲ್ಲಾ ಸೀಲಬಸ್ ಪ್ರೇಮ್ ನಲ್ಲಿಯೇ ಬಾಳಲಾರಂಭಿಸುತ್ತೇವೆ.


ತನ್ನ ಒಂದು ವರ್ಷದಲ್ಲಿರುವಂತಹ ಡೇರ್, ಬ್ರೇವ್ ಛಲಗಳನ್ನೆಲ್ಲಾ ತಾನು ಯಾವುದೊ ಒಂದು ಬುದ್ಧಿವಂತ ಬದುಕನ್ನು ಕಲಿಯಲಾರಂಭಿಸಿರುವೆನು ಎಂಬ ಯೋಚನೆಯ ಹೋಮ್ ವರ್ಕನಲ್ಲಿ ಕಳೆದು ಕೊಳ್ಳಲಾರಂಭಿಸುತ್ತೇವೆ.


ಈ ಭೂಮಿಯ ಮೇಲೆ ಹುಟ್ಟಿದ ಯಾವುದೇ ಮಗು ತನ್ನದೇಯಾದ ರೀತಿಯಲ್ಲಿ ವಿಭಿನ್ನವಾಗಿ, ವೈವಿಧ್ಯಮಯವಾಗಿ ಗುಣ ವಿಶಿಷ್ಟಗಳನ್ನು ಕಳೆದುಕೊಳ್ಳುತ್ತದೆ. ತನ್ನ ಹತ್ತಿರದವರ ಸುತ್ತಲಿನವರ ಜೇರಾಕ್ಸ್ ಪ್ರಾಡಕ್ಟ್ ರೀತಿಯಲ್ಲಿ ಅನುಕರಣೆ ಎಂಬ ವ್ಯಾದಿಯಂತೆ ಕಾಯಾ ವಾಚಾ ಪಾಲಿಸಲಾರಂಭಿಸಿ ತಾನು ಏನು? ಎಂಬುದನ್ನು ತಿಳುವಳಿಕೆಯೆಂಬ ಯೋಜನೆಯಲ್ಲಿ ತಾನು ಕ್ರಮಿಸಿದ ಎಷ್ಟೋ ದೂರದ ಮೇಲೆ ಯೋಚಿಸಲಾರಂಭಿಸುತ್ತಾನೆ.


ಅನುಕರಣೆ ಮಾನವ ಸಹಜ ಬುದ್ಧಿವಂತಿಕೆಯ ಮಜಲು. ಒಪ್ಪೋಣ ಆದರೇ ಅದೇ ಅಂಧಾನುಕರಣೆಯಾಗಿ ಆ ನಮ್ಮ ಮಗು ಸಹಜ ಮನಸ್ಸಿನ ದಬ್ಬಾಳಿಕೆಯಾಗಬಾರದು.


ತಾನು ಚಿಂತಿಸುತ್ತಿದ್ದ ಹೊಸ ಹೊಸ ವಿಚಾರಗಳು ಅವುಗಳ ಹಿಡೇರಿಕೆಗಾಗಿ ಪ್ರಯತ್ನಿಸುತ್ತಿದ್ದ ಆ ನಿರ್ಭಯ ಪ್ರಯತ್ನ ಯಾಕೇ ನಾವು ದೊಡ್ಡವರಾದ ಮೇಲೆ ನಮ್ಮ ನಿಮ್ಮಲ್ಲಿ ಇಲ್ಲವಾಗುತ್ತವೆ.


ಯಾವುದೇ ಹೊಸ ವಿಚಾರವನ್ನು ಮಾಡಲು ಅನುವುಮಾಡುವ ಮನಸ್ಸು ನಮ್ಮಲ್ಲಿ ಮೂಡಿದರೂ ದುತ್ತನೆ ಇನ್ನೊಂದು ನಮ್ಮದೆಯಾದ ಮನಸ್ಸು ಬೇಡ ಎಂದು ಕಾಲು ಎಳೆಯುತ್ತದೆ?


ಆದ್ದರಿಂದ ಈಗಾಗಲೇ ನಾವುಗಳು ಗಮನಿಸಿರುವಂತೆ ನಮ್ಮ ಆಸೆ, ಹೊಸತನಗಳಿಗೆ ಕಾಲು ಎಳೆಯುವ ಆ ಮನಸ್ಸು "ತುಂಬಾ ಬುದ್ಧಿವಂತ ಮನಸ್ಸು" ನಿಜ ತಾನೇ?


ನಮ್ಮ ಶಿಕ್ಷಣ ವ್ಯವಸ್ಥೆಯ ಭರದಲ್ಲಿ ನಮ್ಮ ಎಲ್ಲಾ ಮಕ್ಕಳ ವೈಚಾರಿಕ ಮತ್ತು ವಿಭಿನ್ನ ರೀತಿಯ ಹೊಸ ಜೀವಂತಿಕೆಯನ್ನು ಪರೀಕ್ಷೆ - ಅಂಕಗಳು - ಪದವಿಗಳು ಎಂಬ ವಿವಿಧ ಸಮಾಜದ "ಬುದ್ಧಿವಂತಿಕೆಯ" ಪ್ರಯಾಣಗಳ ಮೂಲಕ ಮಗುವಿನಂತ ಮುಗ್ಧ ಆವಿಷ್ಕಾರದ ಸೆಲೆಯನ್ನು ಕಮರಿಸುತ್ತಿದ್ದೇವೆ ಎಂದು ನಿಮಗೆ ಅನಿಸುವುದಿಲ್ಲವೇ?


ಈ ರೀತಿಯ ವಿವಿಧ ರೀತಿಯಲ್ಲಿ ತನ್ನ ೮ ರಿಂದ ೨೫ ವರ್ಷದ ವಯೋಮಾನದಲ್ಲಿ ನಾವುಗಳು ಕೇವಲ ಈ ರೀತಿಯ ದಮನಕಾರಿ ಭಾವನೆಗಳಿಂದ ಮಗು ತಾನು ಏನು? ಎಂದು ಯೋಚಿಸಲೂ ಸಮಯ ನೀಡದೆ ನಮ್ಮದೇ ಆದ ಬುದ್ಧಿವಂತ ಅಚ್ಚುಗಳಲ್ಲಿ ಬೇಯಿಸಿ ನಿಜವಾದ ರೀಯಲ್ ಲೈಫ್ ಗೆ ದೂಡುತ್ತೇವೆ.


ಆಗ ಆ ವ್ಯಕ್ತಿ ತಾನು ಮುಂದೇನು ಮಾಡಬೇಕು ಎಂದು ಗಲಿಬಿಲಿಗೊಳ್ಳುವ ಭರದಲ್ಲಿ ಅದು ತಾನು ಬೆಂದ ಶಿಷ್ಟ ಶಿಕ್ಷಣದ ಥೇಯರಿಗಳನ್ನು ಙ್ಞಾಪಿಸಿಕೊಳ್ಳುತ್ತಾ ಹಳಬರು ಮಾಡುತ್ತಿದ್ದ ಕೆಲಸ, ಯೋಜನೆಗಳನ್ನೇ ಮುಂದುವರಿಕೆ ಮಾಡುವ ಯಂತ್ರಗಳಂತೆ ಆಗುತ್ತೇವೆ. ಯಾವುದೇ ತನ್ನ ಹೊಸ ಯೋಜನೆಗಳನ್ನು ಜಾರಿ ಮಾಡಲು ಕ್ಷಣಕಾಲ ಯೋಚಿಸಲಾರಂಭಿಸುತ್ತದೆ ಮತ್ತು ಆ ರೀತಿಯ ಕಿರಿಕ್ ಐಡಿಯಗಳನ್ನು ಬಿಟ್ಟು ಸೇಫ್ ಜೋನ್ ಕಡೆಗೆ ಮುಖ ಮಾಡುತ್ತದೆ.


ತನ್ನ ಬಾಲ್ಯದಲ್ಲಿ ತನಗೆ ತಿಳಿಯದಂತೆ ಇದ್ದ ಆ ಪ್ರಚಂಡ ಜೀವಂತಿಕೆ ಎಲ್ಲಿ ಹೋಯಿತು? ಎಂದು ತಿಳಿಯುವಷ್ಟರಲ್ಲಿ ಜೀವನದ ನಿಜವಾದ ಸವಾಲುಗಳು ಬಂದು ಎಕ್ಕಾ ಮಕ್ಕಾ ಅಪ್ಪಳಿಸುವಾಗ ತಾನು ತನ್ನ ಮುಂದಿನ ಮಕ್ಕಳಿಗೆ ಇದೇ ರೀತಿ ತಾನು ಅನುಭವಿಸಿದ ತನ್ನದೇಯಾದ ಥೇಯರಿ ಎಂಬ ಕುಲುಮೆಗಳನ್ನು ಆ ಮಕ್ಕಳಿಗೆ ಸಿದ್ಧ ಮಾಡುವಲ್ಲಿ ತನ್ನ ಅರ್ಧ ಜೀವನವನ್ನು ಅಣಿಮಾದಲು ಮುಂದಾಗುತ್ತನೆ.


ಆದರೇ, ಈ ರೀತಿಯ ಜೀವನದಲ್ಲಿ ಯಾವುದೇ ಆಡಚಣೆಗಳು, ಆಶಾಭಂಗಗಳಿದ್ದರೂ ಹಲವು ಮಹನೀಯರು ತಮ್ಮದೇಯಾದ ಹೊಸ ಹೊಸ ಮೌಲ್ಯಯುತವಾದ "ಕೊಡುಗೆ"ಗಳನ್ನು ಜಗತ್ತಿಗೆ ನೀಡಿದ್ದಾರೆ. ಅದೇಯಲ್ಲವೇ "ಜೀವನದ ಮರ್ಮ".