ಭಾನುವಾರ, ಮಾರ್ಚ್ 13, 2022

ಮಮತೆಯ ಮಡಿಲು

ಮಕ್ಕಳು ಹುಟ್ಟಿದಂದಿನಿಂದ ದೊಡ್ಡವನಾಗಿ ಬೇರೆಯೆಡೆಗೆ  ಹೋಗುವವರೆಗೂ ಹೆತ್ತ ಕರಳು ತನ್ನ ಕೂಸನ್ನು ಸೆರಗಲ್ಲಿಯೇ ಕಾಪಾಡುತ್ತಾಳೆ.  ಆ ಮಮತೆ  ಅದು ಹೇಗೆ ತನ್ನಲ್ಲಿ ಮೊಳಕೆಯೊಡೆಯುತ್ತದೆಯೋ ತಿಳಿಯದು. 

ಮಗುವೆಂಬ ಬೀಜ ಹೊಟ್ಟೆಯಲ್ಲಿ ಮೊಳೆತ ತಕ್ಷಣವೇ? 

ಇಲ್ಲ ಅನಿಸುತ್ತೆ. 


ಆ ಪ್ರೀತಿ ಹುಟ್ಟುವುದು ಆ ಮಗು ತನ್ನ ಹೊಟ್ಟೆಯಿಂದ ಈ ಜಗತ್ತಿಗೆ ಪಾದಾರ್ಪಣೆ ಮಾಡಿದ ಬಳಿಕವೇ ಇರಬೇಕು ಅನಿಸುತ್ತದೆ. 


ತನಗೆ ಗೊತ್ತಿಲ್ಲದ ರೀತಿಯಲ್ಲಿ ತನ್ನ ಜೀವಕ್ಕಾಗಿ ಪ್ರತಿ ಕ್ಷಣ ಮರುಗುವ ಕರಗುವ  ಮತ್ತೊಂದು ಜೀವ ಈ ಪ್ರಪಂಚದಲ್ಲಿ ಇರಲಾರದು.  ತನ್ನದೇ ಇನ್ನೊಂದು ಅಂಗದ ರೀತಿಯಲ್ಲಿ ಮೈ ಕೈ ತುಂಬಿಕೊಂಡಿರುವ ಇನ್ನೊಂದು  ಜೀವ ಕೈ ತುಂಬಿ ಅಂಗೈಯಲ್ಲಿ ಕುಳಿತಿರುವಾಗ  ಕಣ್ಣಾಲಿ ತುಂಬಿ ಬರಲಾರದೇ ಇರದು ಅಲ್ಲವಾ? 

ತನ್ನದೇ ರಕ್ತ ಉಸಿರನ್ನು ಹೊಂದಿರುವ​ ಇನ್ನೊಂದು ಭಾಗ ಪಕ್ಕದಲ್ಲಿಯೇ ಇರುವಾಗ ಜೀವ ಜೀವವೇ ಮಿಡಿಯಲಾರದೇ ಇರಲು ಹೇಗೆ ಸಾಧ್ಯ​?.  ಅಂದೇ ಹುಟ್ಟಿದ ಆ ಪ್ರೇಮ ಕ್ಕೆ ಸಾಟಿ ಮತ್ತೊಂದು ಇರುವುದೇ?


ತಾನು ಬಲಿಯುತ್ತಿರುವಾಗ. ತಾನು ಬೆಳೆಯುತ್ತಿರುವಾಗ. ಆ ಜೀವವು ಅಷ್ಟೇ ಉತ್ಕಟ ಪ್ರೀತಿಯ ಜೇನನ್ನು ಹೆತ್ತ ಜೀವಕ್ಕೆ ಕೊಡುವುದು ಸ್ವಾಭಾವಿಕ​.  ತನ್ನನ್ನು  ನವ ಮಾಸವು ಕಾಪಿಟ್ಟು ಭೂಮಿಗೆ ಕರೆದವ್ವನ್ನನ್ನು ಇನ್ನೂ ಹೇಗೆ ಕೃತಙ್ನತೆಯಿಂದ ಕಾಣಬೇಕು? ಆ ಕೂಸಿಗೆ ಗೊತ್ತಿರುವುದು ಪ್ರತಿ ಪ್ರೀತಿಯನ್ನು  ತನ್ನನ್ನು ಹಡೆದ ಉಸಿರಿಗೆ ನೀಡುವುದು. 


ಹೊಸ ಹೊಸದರಲ್ಲಿ ಒಂದು ಕ್ಷಣವು ತನ್ನ ಹೆತ್ತ ಕರಳನ್ನು ಬಿಟ್ಟಿರಲಾರದಷ್ಟು ಹೊಟ್ಟೆ ಕಿಚ್ಚು ಮರಿ ಜೀವಕ್ಕಿರಬೇಕು. ಅದಕ್ಕೆ ಯಾರಾದರೂ ಹೊಸಬರು ತನ್ನ ಮನೆಗೆ ಬಂದರೇ ನನ್ನಮ್ಮನೇ ಇಲ್ಲವೇನೋ ಎನ್ನುವಷ್ಟು ಅಳು ಮುಂಜಿಯಾಗುವುದು.  


ತಾನು ಹೊಟ್ಟೆಯಲ್ಲಿ ಬೆಚ್ಚಗೆ ಮಲಗಿದ ನೆನಪನ್ನು ಏನಂದರೂ ಮರೆಯಲಾರ​ದೇನೋ. ತಾನು  ತಾಯಿಯ ಮಡಿಲಲ್ಲಿದ್ದಷ್ಟು ಸುರಕ್ಷಿತವವಾಗಿ   ಜಗತ್ತಿನಲ್ಲಿ ಎಂದು ಎಲ್ಲಿಯು ಸುರಕ್ಷಿತವಾಗಿರಲಾರೇನು ಎಂಬ ಭಾವನೇ ಪ್ರತಿಯೊಬ್ಬರಿಗೂ ಎಂದಿಗೂ ಅಳಿಯಲಾರದು. 

ಅದು ತನ್ನ ತಾಯಿ, ತನ್ನ ಹುಟ್ಟಿದ ಊರು, ಹುಟ್ಟಿದ ದೇಶ ಇವುಗಳು ಕೊಡುವ ಬೆಚ್ಚನೆಯ ತನ್ನದು ಎಂಬ ಮನಸ್ಸಿನ ಭಾವ​  ಯಾರೊಬ್ಬರೂ, ಯಾವ ಪರ ಊರುಗಳು, ದೇಶಗಳು ಎಂದಿಗೂ ಕೊಡಲಾರವು.


ಎಂದೂ ಮಗುವಿನ ಏಳ್ಗೆಯ ಕನಸನ್ನು ಕಾಣುವವರು ಮತ್ಯಾರು ಅಲ್ಲ​, ಅದು ತಾಯಿ ಮಾತ್ರ​. ತನ್ನ ಕಂದನು ಮಾತ್ರ ಎಂದೆಂದಿಗೂ ಸಂತೃಪ್ತಿಯಾಗಿ ಬದುಕಲಿ ಎಂಬುದೇ ಹಗಲು ಇರುಳಿನ ಕೋರಿಕೆಯಾಗಿರುತ್ತದೆ.


ತಾನು ಊಪವಾಸವಿದ್ದರೂ ತನ್ನ ಕರುಳ ಬಳ್ಳಿ ಯಾವಾಗಲೂ ನಿತ್ಯ ಹಸುರಾಗಿರಲಿ ಎಂದು ಕಾದಿದ್ದು ಹೊಟ್ಟೆಯ ತುಂಬಿಸುವ ಕೈಯನ್ನು ಈ ಜಗತ್ತಿನಲ್ಲಿ ಎಲ್ಲಿಯು ಕಾಣಲು ಸಾಧ್ಯವಿಲ್ಲ​.


ತನ್ನ ಕಂದಮ್ಮನಿಗೆ ಯಾರಾದರೂ ಏನಾದರೂ  ಅಂದರೇ ತುಂಬಾ ನೊಂದುಕೊಂಡು ಕೊರಗುವ ಒಂದೇ ಒಂದು ಮನಸ್ಸು ಎಂದರೇ ಹೆತ್ತಮ್ಮ ಮಾತ್ರ​.


ನೂರು ನೋವಿನ ಮಾತುಗಳನ್ನು ತಾನು ಮಾತ್ರ ಸಹಿಸಳು. ಆದರೇ ಒಂದು ಕೊಂಕು ನುಡಿಯನ್ನು ಯಾರದರೂ ತನ್ನ ಮಗುವಿಗೆ ಅಂದರೇ ಅವರನ್ನು ತಾನು ಎಂದೆಂದು ಕ್ಷಮಿಸಲಾರಳು.


ತಾನು ಹೇಗಾದರೂ ಬದುಕಿ ಬಾಳಲಿ, ಹೇಗೆ ಎಲ್ಲಾದರೂ ಇರಲಿ. ತಾನು ಹೇಗೆ ಬೇಕಾದರೂ ಬಾಳಿದರೂ ತನ್ನ ಮುದ್ದು ಕಂದಮ್ಮನ ಬದುಕು ಬಂಗಾರವಾಗಿರಲಿ ಎಂಬುದೇ ಜೀವದ ಹಿರಿ ಆಸೆಯಾಗಿರುತ್ತದೆ. 


ತಾನು ಪಟ್ಟ ಕಷ್ಟದ ಗುಲಗಂಜಿಯಷ್ಟನ್ನು ತನ್ನ ಉಸಿರಿನ ಉಸಿರಾದ ಮಗುವು ಪಡಬಾರದು. ತಾನು ಅನುಭವಿಸಿದ ಜೀವನ ದಾರಿಯನ್ನು ತನ್ನ ಮಗುವು ಎಂದು ತುಳಿಯಬಾರದು. ತಾನು ಕಂಡೂಂಡ ಯಾವುದೇ ಚಿಕ್ಕ ದೊಡ್ಡ ಕಷ್ಟಗಳ ನೆರಳು ಎಂದೆಂದು ಬಿಳದಿರಲಿ ಎಂಬ ಹಂಬಲ​.  ಮಗುವಿನ ನೆತ್ತಿಯ ಮೇಲೆ ಸದಾ ತನ್ನ ಆಶೀರ್ವಾದವೆಂಬ ಸೆರಗನ್ನು ಇಟ್ಟು ಕಾಯುವವಳು ಯಾರಾದರೂ ಇದ್ದರೇ ಅದು ಹೆತ್ತಮ್ಮನೇ.


ತಾನು ಕಾಣದಿರುವ, ತಾನು ಅನುಭವಿಸದಿರುವ ಈ ಜಗತ್ತಿನ ಅತ್ಯುನ್ನತವಾದ ಏನಾದರೂಂದಿದೆಯೋ ಅದು ನನ್ನ ಕರಳಿಗೆಯೇ ಸಿಗಲಿ. ಈ ರೀತಿಯ ಹತ್ತು ಹರಕೆಗಳನ್ನು ದೇವರ ಮುಂದೆ ನಿತ್ಯ ರಾತ್ರಿ ಹೊತ್ತಿರುವವಳು ಎಂದರೇ ಅದು ಅಮ್ಮ ಎನ್ನುವ ಜೀವ​.


ಕರಳ ಬಳ್ಳಿ ಕಣ್ಣಿನ ಮುಂದೆ ಸ್ವಲ್ಪ ಕಾಣದಾದರೂ ಆ ಕರಳ ಬಳ್ಳಿ ಮರಳಿ ಮನೆಗೆ ಬರುವವರೆಗೂ ಶಬರಿಯಂತೆ ದಾರಿ ಕಾಯುವವಳು ಯಾರಾದರೂ ಇದ್ದರೆ ಅದು ಅಮ್ಮನೇ.


ತಾಯಿಯ ಮಮತೆಯ ಭಾವನೆಯ ಹಚ್ಚ ಹಸಿರು ಮಗುವಿನ ಮುಖ ನೋಡಿದ  ಮೊದಲ ದಿನದಿಂದ ಆ ಮಗುವಿನ  ಹೊಸ ಕುಡಿಯವರೆಗೂ ಶ್ರೇಯೊಭಿವೃದ್ಧಿಯ ಕನಸು ಕಾಣವ  ಕಾಯಕವನ್ನು ತಾಯವ್ವ ಮಾಡಿದಷ್ಟು ಮತ್ಯಾವ​ ಹೃದಯವೂ ಮೀಡಿಯುವುದಿಲ್ಲ.


ಯಾವುದೇ ಪ್ರತಿಫಾಲಕ್ಷೆಯಿಲ್ಲದೇ ನನ್ನ ಮಗು ಊಂಡುಟ್ಟು ಉನ್ನತವಾಗಿ ಬಾಳಿದರೇ ಸಾಕು ಶಿವನೇ ಎನ್ನುವ ಹೃದಯ ಪ್ರೀತಿ ದೇವರೇ ತಾಯಿ.


ಈ ರೀತಿಯ ಬರೀ ತನ್ನ ಕುಡಿಗಾಗಿ ಕೋರಿಕೆಯ ಮಹಾ ಮಹಿಮಳ ಪ್ರೀತಿಯ ಆರೈಕೆಯನ್ನು ಕಾಪಿಟ್ಟು ಉಣ್ಣಿಸುವವಳು. 


ಪ್ರತಿಯಾಗಿ ಯಾವ ಜೀವಿಯು ತನ್ನ ಹೆತ್ತಮ್ಮನಿಗೆ ಪ್ರತಿ ಪ್ರೀತಿಯನ್ನು ಕೊಟ್ಟು ಅವಳ ಪ್ರೀತಿಯ ಲೋಕಕ್ಕೆ ಸಮನಾಗಿ ಪ್ರೀತಿಯ​ ತಕ್ಕಡಿಯನ್ನು ಸಮ ಮಾಡಲು ಸಾಧ್ಯವಿಲ್ಲ​.


ಅದಕ್ಕೆ ಇರಬೇಕು ತಾಯಿಗಿಂತ ದೊಡ್ಡ ದೇವರಿಲ್ಲ ಎಂಬ ಗಾದೆ ಹುಟ್ಟಿ ಜನಜನಿತವಾಗಿರುವುದು.


ಮಗುವಿನ ತಾಯಿಯೇಡೆಗಿನ ಪ್ರೀತಿ ಕೊಂಚ ಕಡಿಮೆಯಾದರೂ ಆದೀತು. ಆದರೇ ತಾಯಿಯ ಪ್ರೀತಿ ತನ್ನ ಮಗುವಿನೆಡೆಗೆ ಎಂದೆಂದಿಗೂ ಎಷ್ಟೇ ಕಾಲವಾದರೂ ಕೊಂಚವು ಕಡಿಮೆ ಅನಿಸುವುದಿಲ್ಲ​. ಅದು ಎಂದು ನಿಲ್ಲದ ನಿತ್ಯ ಹರಿಯುವ ಝರಿ. ಈ ರೀತಿಯ ಪ್ರೀತಿಯ ಒರತೆಯನ್ನು ನೀಡುವ ಆ ಮಹಾ ಮಾತೆಗೆ ಸಮನಾದ ದೇವತೆ ಬೇರೆ ಯಾರು ಇಲ್ಲ.

ಆ ಕಕ್ಕುಲಾತಿಯನ್ನು ಕಂಡು ಮಕ್ಕಳಾದ ನಾವೇ ನಮ್ಮ ನಮ್ಮ ರೀತಿಯಲ್ಲಿ ಹೆತ್ತಮ್ಮನನ್ನು ದೂರಿರುತ್ತೇವೆ. ಆ ಪ್ರೀತಿಯ ಒರತೆಯ ಭರವನ್ನು ಸಹಿಸಲಾರದಷ್ಟು ಬೇಸರಿಸಿಕೊಂಡಿರುತ್ತೇವೆ. ಆದರೂ ಹೆತ್ತಮ್ಮನ ಮಡಿಲು ಯಾವತ್ತಿಗೂ ಯಾವುದೇ ಘಳಿಗೆಯಲ್ಲೂಅದೇ ಹಚ್ಚ ಹಸುರಾಗಿ ನಮ್ಮನ್ನೆಲ್ಲಾ ದಣಿವಾರಿಸುವ ಹೊಂಗೆ ಮ​ರವಾಗಿರುತ್ತದೆ. 


ಮಕ್ಕಳಾದ ನಾವುಗಳು    ಎಲ್ಲಾದರೂ ಸುತ್ತಾಡಿ ದಣಿವಿನಿಂದ ಮನೆಗೆ ಬಂದು   ನಮ್ಮ ನಮ್ಮ  ತಾಯಿಯ ಮುಖವನ್ನೊಮ್ಮೆ ನೋಡಿದ ತಕ್ಷಣ ಮನಸ್ಸಿಗೆ ಆಗುವ ಆನಂದ ಸಮಧಾನ ಜಗತ್ತಿನಲ್ಲಿ ಯಾರೊಬ್ಬರೂ ನೀಡಲು ಸಾಧ್ಯವಿಲ್ಲ​.


ಮನೆಯೆಂದರೇ ನಮ್ಮ ಮನೇ (ಅಮ್ಮನ ಮನೆ) ಊರೆಂದರೇ ನಮ್ಮ ಊರು, ದೇಶವೆಂದರೇ ನಮ್ಮ ದೇಶ​, ಭಾಷೆಯೆಂದರೇ ಮಾತೃ ಭಾಷೆ. ಹೀಗೆ ಪ್ರತಿಯೊಂದು ಮಮತೆಯ ತಾಯಿಯಿಂದ ಹಿರಿದಾಗಿದೆ ಎಂದರೇ ಅತಿಶಯೋಕ್ತಿಯಲ್ಲ​.


ತಾಯಿಯನ್ನು ಖುಷಿಪಡಿಸುವ ಬದುಕು ಎಂದರೇ ತನ್ನ ಹೆತ್ತ ಮಕ್ಕಳು ಸಂತೋಷದಿಂದ ಸುಖವಾಗಿ ಬದುಕಿದ ಕ್ಷಣ ಮಾತ್ರ​. 


ತಾನು ತನ್ನ ಸುಖವೆಂದರೇ ತನ್ನ ಮಕ್ಕಳ ಸುಖವೇ ಎನ್ನುವುದು ಹೆತ್ತ ಕರಳು ಮಾತ್ರ​. 

ಆ ತಾಯಿಯ ಈ ಮಹಾಹೋನ್ನತ ಮನಸ್ಸನ್ನು  ಅರ್ಥೈಸಿಕೊಳ್ಳಲು ನಿರಂತರ ಪ್ರಯತ್ನಿಸುವುದೇ ನಮ್ಮ ಧ್ಯೇಯವಾಗಿರಬೇಕು. ಆಗ ಮಾತ್ರ ಆ ಮನದ ಹಂಬಲ​, ಮಮತೆ, ಕನವರಿಕೆ, ಕನಸು ಸ್ವಲ್ಪವಾದರೂ ನಮಗೆ ಅರ್ಥವಾಗಲು ಸಾಧ್ಯ ಮಾತ್ರ ಅಲ್ಲವಾ?