ಮಂಗಳವಾರ, ಫೆಬ್ರವರಿ 8, 2011

ಪ್ರೀತಿಯನ್ನು ಪ್ರೀತಿಪಟ್ಟವರಿಗಾಗಿ ಪ್ರೀತಿಸುತ್ತಾ ಕೊಡಿ




ಪ್ರೀತಿ ಈ ಎರಡು ಅಕ್ಷರಕ್ಕೆ ಇರುವ ಜಾದು ಮತ್ತು ಶಕ್ತಿಯನ್ನು ವರ್ಣಿಸಲು ಅಸಾಧ್ಯ. ಜೀವಿ ಈ ಭೂಮಿಯ ಮೇಲೆ ತಾನು ಪಾದಾರ್ಪಣೆಯನ್ನು ಮಾಡಿದ ದಿನದಿಂದಲೂ ತನ್ನ ಜೀವನ ವ್ಯಾಪಾರವನ್ನು ಸಾಗಿಸಲು ಇರುವ ಒಂದೇ ಒಂದು ಇಂಧನವಾಗಿದೆ.




ಪ್ರೀತಿಯ ಭಾವನೆ ಒಂಟಿತನವನ್ನು ದೂರ ಮಾಡಿ ತನಗೆ ಸಿಗುವ ಮತ್ತೊಬ್ಬ ಜೊತೆಗಾರನೇ ಸರಿ. ಪ್ರೀತಿ ಎಂಬ ಅಮೃತಪಾನವನ್ನು ವ್ಯಕ್ತಿ ತನ್ನ ಜನ್ಮದಾತೆಯಿಂದ ಸಾಕಷ್ಟು ಕುಡಿದಿರುತ್ತಾನೆ. ಇದರೊಂದಿಗೆ ಅದರ ಒಂದು ಮಧುರ ಅನುಭೂತಿಯನ್ನು ಪ್ರತಿಯೊಬ್ಬರು ಸವಿದಿರುತ್ತಾರೆ. ಅದಕ್ಕಾಗಿಯೇ ಪ್ರತಿಯೊಂದು ಜೀವಿಯು ತಾನು ಹೇಗಾದರೂ ಒಂದಲ್ಲ ಒಂದರಲ್ಲಿ ಒಬ್ಬರಲ್ಲಾ ಒಬ್ಬರಲ್ಲಿ ತನ್ನ ಪ್ರೀತಿಯನ್ನು ಪ್ರಕಟಿಸಲು ತವಕಿಸುತ್ತಿರುತ್ತಾನೆ/ಳೆ.






ತಾಯಿಯ ಮೊದಲ ಪ್ರೀತಿಗೆ ಸಮಾನಾದ ಪ್ರೀತಿ ಈ ಜಗತ್ತಿನಲ್ಲಿ ಮತ್ತೊಂದು ಇಲ್ಲ. ಅದೇ ಸರ್ವ ಶ್ರೇಷ್ಠವಾದದ್ದು. ಪ್ರೀತಿಯೆಂದರೇ ತಾಯಿ. ತಾಯಿ ನಡೆದಾಡುವ ದೇವರೇ ಸರಿ. ದೇವರಿಗೆ ಸಮಾನವಾದ ಈ ಪ್ರೀತಿಯನ್ನು ಸವಿದಿರುವ ನಮ್ಮ ಬಾಲ್ಯ ಮತ್ತು ನಮ್ಮ ಜೀವನದ ಗೆಲುವಿನ ಮುಡಿಪು ಇದಾಗಿದೆ. ಇದರ ಋಣವನ್ನು ನಾವು ಜನ್ಮರಾಭ್ಯ ಎಂಥ ಸೇವೆಯನ್ನು ಮಾಡಿದರೂ ತಿರಿಸಲೂ ಸಾಧ್ಯವಿಲ್ಲ.




ತಾಯಿಯ ಪ್ರೀತಿ ಯಾವುದೇ ಪ್ರತಿಫಲಾಪಕ್ಷೆಯಿಲ್ಲದೇ ತನ್ನ ಮಕ್ಕಳೆಡೆಗೆ ಇರುವಂತ ಸುಂದರ ಭಾವನೆ. ಅದರ ಮಧುರ ಪಾನವನ್ನು ಮಾಡಿ ಮಾಡಿ ತಾನು ಯಾವ ಮಟ್ಟಕ್ಕೆ ವ್ಯಕ್ತಿ ಬೆಳೆಯುತ್ತಾನೆ ಎಂದರೇ.. ಅದೇ ಅವನಿಗೆ ಒಂದು ದೈರ್ಯವನ್ನು ಏನಾದರೂ ಸಾಧಿಸುವ ಚಲವನ್ನು ಕೊಡುವುದು. ಮುಂದೆ ತನ್ನ ಪ್ರೀತಿಯ ಸಿಂಚನಕ್ಕೆ ಅದೇ ದಾರಿ ಮಾಡಿಕೊಡುವುದು. ವ್ಯಕ್ತಿ ಒಬ್ಬರನ್ನು ಯಾವ ರೀತಿಯಲ್ಲಿ ಪ್ರೀತಿಸಬೇಕು ಎಂಬುದನ್ನು ಅಲ್ಲಿಯೇ ಅದರ ಅ, ಆ,ಇ,ಈ.. ಕಲಿಯುವುದು.



ಜಗತ್ತಿನಲ್ಲಿ ಇರುವ ಸರ್ವಶ್ರೇಷ್ಠವಾದ ಒಂದು ಉತ್ಕೃಷ್ಟವಾದ ಜೀವಿಯ ಭಾವನೆಯಲ್ಲಿ ಪ್ರೀತಿ ಒಂದು. ತನ್ನವರೆಡೆಗೆ ತನ್ನಲ್ಲಿ ಸ್ಫುರಿಸುವ ಒಂದು ಮನದ ಭಾವನೆಯ ಎಳೆಯೇ ಈ ಪ್ರೀತಿ. ತಾನು ಅವರಿಗಾಗಿ ಏನಾದರೂ ಮಾಡಲು ಸರಿ! ಎಂಬ ಮಟ್ಟಕ್ಕೆ ವ್ಯಕ್ತಿಯನ್ನು ತಂದು ನಿಲ್ಲಿಸುವ ಆ ತಂತು ಯಾವುದು? ಅದೇ ಈ ಪ್ರೀತಿ.



ಈ ಪ್ರೀತಿಯೆಂಬ ಒರತೆ ಎಂದು ಖಾಲಿಯಾಗದ ಮತ್ತೇ ಮತ್ತೇ ತುಂಬುವ, ತುಂಬಿ ಹರಿಯುವ ಸ್ಫಟಿಕದಂತ ನೀರು. ಹಳ್ಳದಲ್ಲಿ ಮರಳನ್ನು ಹೆಚ್ಚು ಹೆಚ್ಚು ಆಳ ತೆಗೆದಷ್ಟು ಶುದ್ಧವಾದ ನೀರು ತುಂಬುವುದು. ತಾನು ಕುಡಿದು ತನ್ನ ಸುತ್ತಲಿನವರೆಗೂ ಅದರ ಉಪಯುಕ್ತತೆಯನ್ನು ಮನಸ್ಸಿನ ದಾಹವನ್ನು ತಣಿಸುವ ತಂಪನೆಯ ಪಾನಕವೇ ಇದಾಗಿದೆ.




ಹುಡುಗ/ಹುಡುಗಿಯರು ತಮ್ಮ ತಾರುಣ್ಯಾವಸ್ಥೆಗೆ ಬಂದರೂ ಅಂದರೇ ಸರಿ. ತಮ್ಮಲ್ಲಿ ಇರುವ ತನ್ನ ಪ್ರೀತಿಯನ್ನು, ಅದರ ಸಿಂಚನವನ್ನು ತನಗೆ ಒಪ್ಪಿಗೆಯಾಗುವರೊಂದಿಗೆ ವ್ಯಕ್ತಪಡಿಸಬೇಕು ಎಂದು ತವಕಿಸುತ್ತಿರುತ್ತಾರೆ.




ಆ ವಯಸ್ಸೇ ಹಾಗೇ. ಯೌವನದ ದಿನದಲ್ಲಿ ಏನಾನ್ನದರೂ ಮಾಡುವ ಜೋಶ್. ಅದಕ್ಕೆ ತಮಗೆ ಗೊತ್ತಿಲ್ಲದ ರೀತಿಯಲ್ಲಿ ಲವ್ ಎಂಬ ನಾಲ್ಕು ಅಕ್ಷರಗಳ ಸುಳಿಯಲ್ಲಿ ಸುಖವಾಗಿ ಬೀಳುತ್ತಾರೆ. ತಮ್ಮ ಕಡೆಗೆ ತಮ್ಮ ಭಾವನೆಗೆ ಸ್ಪಂದಿಸುವ ಒಂದು ಹೃದಯಕ್ಕಾಗಿ ಹುಡುಕಾಡುತ್ತಾರೆ. ಅದು ನಾವುಗಳು ಹೇಳುವಂತೆ ಜಸ್ಟ್ ಮೊದಲ ಕ್ರಶ್ ಅಥವಾ ಏನಾದರೂ ಸರಿಯೇ, ಅವರಿಗೆ ಒಂದು ಮಧುರವಾದ ಭಾವನೆಯನ್ನು ವ್ಯಕ್ತಪಡಿಸಲು ಹುಡುಗ -ಹುಡುಗಿಯರಿಗೆ ಜೊತೆಗಾರರು ಒಬ್ಬರು ಬೇಕಾಗಿರುತ್ತಾರೆ.






ಆ ವಯಸ್ಸಿಗೆ ತನ್ನ ತಂದೆ ತಾಯಿಗಳು ಏನೇ ತಮ್ಮ ಮೊದಲ ಪ್ರೀತಿಯ ಸ್ನೇಹಿತರಾದರೂ.. ತಮ್ಮ ಸಮಾನ ವಯಸ್ಸಿನ ಜೊತೆಗಾರರೊಡನೆ ಬೇರೆಯುವಂತೆ ತಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಲೂ ತಮ್ಮಂತೆಯೇ ಯೋಚಿಸುವ ತಮ್ಮ ವಯಸ್ಸಿನ.. ಸಂಗಾತಿಯ ಅಸರೆ ಬೇಕೆನಿಸುತ್ತದೆ. ಮೊದ ಮೊದಲು ಸ್ನೇಹಕ್ಕಾಗಿ ಗೆಳೆಯ-ಗೆಳತಿಯರನ್ನು ಹುಡುಕಿಕೊಂಡು ಹೈಸ್ಕೋಲ್, ಕಾಲೇಜು ವಿದ್ಯಾಭ್ಯಾಸದ ಜೊತೆಯಲ್ಲಿ ತಮ್ಮ ಕನಸುಗಳಿಗೆ ರೆಕ್ಕೆಯನ್ನು ಕೊಡುವ, ಪ್ರೋತ್ಸಾಹಿಸುವ ಮತ್ತು ಉತ್ತೇಜಿಸುವ ಮನಸುಗಳ ಕಡೆಗೆ ತಮ್ಮ ಮನಸ್ಸನ್ನು ಹರಿಯ ಬಿಡುತ್ತೇವೆ.




ಆ ವಯಸ್ಸಿನಲ್ಲಿ ಅದು ಶಾಶ್ವತವಾಗಿ ಈ ಒಂದು ಸಂಬಂಧ ಉಳಿಯಬೇಕು ಎಂಬ ಕರಾರು ಅಥವಾ ಒಂದು ಅನಿಸಿಕೆ ಏನೂ ಇರಲಾರದು. ಅದು ಆ ಸಮಯದಲ್ಲಿ ಜೊತೆಯಲ್ಲಿ ಒಬ್ಬರೊಬ್ಬರಿಗೆ ತಮ್ಮ ಭಾವನೆಯ ವಿನಿಮಯಕ್ಕೆ ದಾರಿಯನ್ನು ಕಂಡು ಕೊಂಡಿರುತ್ತಾರೆ.



ಒಮ್ಮೊಮ್ಮೆ ಹಲವಾರು ಉತ್ತಮ ಸ್ನೇಹಿತರುಗಳನ್ನು - ಪ್ರಾಣ ಸ್ನೇಹಿತರುಗಳನ್ನು ಪಡೆಯಬಹುದು. ಅದು ಎಷ್ಟರ ಮಟ್ಟಿಗೆ ಪರಸ್ಪರ ಒಬ್ಬರನ್ನೊಬ್ಬರು ಹೇಗೆ ಅರ್ಥಮಾಡಿಕೊಂಡಿರುತ್ತಾರೆ ಎಂಬುದರ ಮೇಲೆ ನಿಂತಿರುತ್ತದೆ.



ಹಾಗೆಯೇ ಸಾಗುತ್ತಾ ಸಾಗುತ್ತಾ.. ಅವರುಗಳಲ್ಲಿಯೇ ಯಾರ ಮೇಲೆ ಅತಿಯಾದ ಮತ್ತು ತಮಗೆ ಹಿಡಿಸುವಂತಹರು ಯಾವುದೊ ಒಂದು ರೀತಿಯಲ್ಲಿ ತಮ್ಮ ಮನಸ್ಸಿನ ಭಾವನೆಗಳಿಗೆ ಹೊಂದಿಕೆಯಾಗುವ.. ಅವನ/ಅವಳ ಯಾವುದೋ ಒಂದು ಗುಣ ಅಥವಾ ಹಲವು ಗುಣ ನಡೆ ನುಡಿಗಳು ತುಂಬ ಪರಿಣಾಮ ಬೀರಿದರೆ ನಮ್ಮ ಹುಡುಗ/ಹುಡುಗಿಯರು ಒಳ ಒಳಗೆ ಅವನನ್ನು/ಅವಳನ್ನು ತಮ್ಮ ಹೃದಯದಲ್ಲಿ ಇಟ್ಟು ಆರಾಧಿಸಲು ಪ್ರಾರಂಭಿಸುತ್ತಾರೆ.




ಈ ರೀತಿಯ ಒಂದು ಭಾವನೆ ಹೆಚ್ಚು ಹೆಚ್ಚು ಜೊತೆಯಲ್ಲಿ ನಡೆದಾಡುವ ಹೆಚ್ಚು ಹೆಚ್ಚು ಸ್ನೇಹಮಯವಾಗಿ ಬೆರೆತಾಗ.. ಅವನ/ಅವಳ ಪ್ರತಿಯೊಂದು ಮನಸ್ಸಿನ ವಿಚಾರ/ಭಾವನೆ ವ್ಯಕ್ತಿತ್ವಗಳಿಂದ ಆಕರ್ಷಿತರಾಗಿ ಅವನಿಗೆ/ಅವಳಿಗೆ ಮನ ಸೋತು ಹೋಗಿ ಬಿಟ್ಟಿರುತ್ತಾರೆ. ಅಲ್ಲಿ ಕೇವಲ ಸ್ನೇಹ ಎಂದು ಪ್ರಾರಂಭವಾಗಿದ್ದು. ಪ್ರೇಮ ಎಂಬ ಎರಡಕ್ಷರದ ಭಾವನೆಗೆ ಬಂದು ನಿಲ್ಲುತ್ತದೆ. ಹೌದು! ಉತ್ತಮ ಸ್ನೇಹಿತರುಗಳು ಮಾತ್ರ ಉತ್ತಮ "ಪ್ರೇಮಿ" ಗಳಾಗಲು ಸಾಧ್ಯ!



ಇಲ್ಲಿ ಯಾವುದೇ ಅಂತಸ್ತು, ಜಾತಿ, ಜಾತಕ ಹೀಗೆ ಯಾವುದೆ ಕಟ್ಟಳೆಗಳಿಲ್ಲದೆ ಹುಟ್ಟುವ ಒಂದು ಸ್ನೇಹಮಹಿ ಸಂಬಂಧ ಇದಾಗಿರುತ್ತೆ. ಆ ವಯಸ್ಸಿನಲ್ಲಿ ನಮ್ಮ ಹುಡುಗ/ಹುಡುಗಿಯರಿಗೆ ಮುಂದಿನ ಜೀವನದ ಕಲ್ಪನೆಗಳು ಯಾವ ರೀತಿಯಲ್ಲೂ ಇರುವುದಿಲ್ಲ. ಆ ಸಮಯಕ್ಕೆ ಅವರಿಗೆ ತಮ್ಮ ಮನಸ್ಸಿನ ಕನಸುಗಳಿಗೆ ಬಣ್ಣ ಕಟ್ಟುವ ಜೋಡಿ ಬೇಕು ಅಷ್ಟೇ... ಈ ರೀತಿಯ ಅಪ್ರಾಪ್ತವಾದ ಸಂಬಂಧಗಳು ನಮ್ಮ ಹಿರಿಯರಿಗೆ ಹಿಡಿಸುವುದಿಲ್ಲ. ಯಾಕೆಂದರೇ ಅವರುಗಳು ಜೀವನವನ್ನು ನೋಡುವ ದೃಷ್ಟಿ ಕೋನವೇ ಬೇರೆಯ ರೀತಿಯಲ್ಲಿರುತ್ತದೆ. ಅಲ್ಲಿ ಅವರಿಗೆ ಜವಾಬ್ದಾರಿ ಇರುತ್ತದೆ. ದೂರಾಲೋಚನೆ ಇರುತ್ತದೆ. ಸಮಾಜವನ್ನು ಎದುರಿಸ ಬೇಕು ಎಂಬ ಭಯವಿರುತ್ತದೆ ಮತ್ತು ಯೋಚನೆಯಿರುತ್ತದೆ.



ನಮ್ಮ ಈ ಮಕ್ಕಳಿಗೆ ಆ ವಯಸ್ಸಿಗೆ ಅದ್ಯಾವುದು ನೆನಪಿಗೂ ಸಹ ಬರಲಾರದು. ಯಾಕೆಂದರೇ ಅದು ಸ್ಟೋಡೆಂಟ್ ಲೈಫ್ ಅಂದರೇ ಗೋಲ್ಡನ್ ಲೈಫ್ ಎಂಬ ಲೈಫ್ ಲ್ಲಿ ಜೀವಿಸುತ್ತಿರುತ್ತಾರೆ. ತಮ್ಮ ಪ್ರೀತಿಯ ತೊರೆಯನ್ನು ಇನ್ನೂ ಹೆಚ್ಚು ಹೆಚ್ಚು ತುಂಬಿಸಿಕೊಳ್ಳುವ ತವಕದಲ್ಲಿರುತ್ತಾರೆ.




ಪ್ರಕೃತಿ ಸಹಜವಾದ ಭಾವನೆಗಳ ಲಹರಿಗೆ ಯಾವುದೇ ಅಡ್ಡಿ ಇರಲಾರದು. ಅದನ್ನು ಅವರುಗಳು ಈ ರೀತಿಯ ಒಂದು ಸುಂದರ ಲೋಕದಲ್ಲಿ ನಡೆದಾಡಲೂ ಶುರು ಮಾಡುತ್ತಾರೆ.



ಈ ರೀತಿಯ ಭಾವನೆಯ ಉಗಮಕ್ಕೆ ಪ್ರೇರಣೆಯಾದರೂ ಯಾವುದು ಎನ್ನಬಹುದು. ನಮಗೆಲ್ಲಾ ಗೊತ್ತಿದೆ. ಅದು ಎಲ್ಲಾರಿಗೂ ಬರುವಂತದ್ದೇ. ಒಬ್ಬೊಬ್ಬರೂ ವ್ಯಕ್ತ ಪಡಿಸುತ್ತಾರೆ. ಮತ್ತೇ ಕೆಲವರು ವ್ಯಕ್ತಪಡಿಸಲಾರದೇ ತಮ್ಮಲ್ಲಿಯೇ ಇಟ್ಟುಕೊಂಡು ಅವುಗಳಿಗೆ ಎಳ್ಳು ನೀರು ಬಿಟ್ಟುಕೊಂಡಿರುತ್ತಾರೆ.



ಆದರೋ ಇಂದಿನ ಈ ತಾಂತ್ರಿಕ ಯುಗದಲ್ಲಿ ನಮಗೆ ನಮ್ಮ ಕಣ್ಣೆದುರೇ ಇದನ್ನು ಪ್ರೋತ್ಸಾಹಿಸುವಂತಹ ಘಟನೆಗಳು ಹಲವಾರು ಮಾದ್ಯಮಗಳಲ್ಲಿ ನಮ್ಮ ಮನೆ ಮತ್ತು ಮನದಂಗಳಗಳಿಗೆ ದಾಳಿಯಿಡುತ್ತಿವೆ. ಆದ್ದರಿಂದ ಯುವಕರು ತಾವುಗಳು ತಮ್ಮ ತಮ್ಮಲ್ಲಿಯೇ ಹಾಗೇ ಹೀಗೆ ಆಗಬೇಕು ಎಂಬ ಕನಸುಗಳು.. ಅದಕ್ಕೆ ಹತ್ತು ಹಲವಾರು ದಾರಿಗಳು... ಕಾಣಿಸುತ್ತಿವೆ.. ಪಡೆಯುತ್ತಾರೆ.. ಗೆಲ್ಲುತ್ತಾರೆ ಒಮ್ಮೊಮ್ಮೆ ಸೋಲುತ್ತಾರೆ..




ಆದರೇ ನಾವುಗಳು ಏಕೆ ಒಂದು ಹುಡುಗ ಹುಡುಗಿ ಜೊತೆಯಾಗಿ ಮಾತನಾಡಿದರೆ ಅದು ಇದೆ ಎಂಬ ರೀತಿಯಲ್ಲಿ ನೋಡೂತ್ತೆವೋ ತಿಳಿಯದು. ಈ ರೀತಿಯ ನೋಟವೇ ಅವರುಗಳನ್ನು ಒಮ್ಮೊಮ್ಮೆ ತಾವುಗಳು ನಡೆಯುತ್ತಿರುವ ದಾರಿಯೇ ಹೇಗೋ ಏನೋ ಎಂಬಂತೆ ಗಲಿಬಿಲಿಯಲ್ಲಿ ನಿಲ್ಲುವಂತಾಗುತ್ತದೆ. ಅದಕ್ಕೆ ಹಿರಿಯರಾದವರೊ ಸೊಕ್ತ ರೀತಿಯಲ್ಲಿ ತಮ್ಮ ಮಟ್ಟಿಗೆ ತಕ್ಕ ಸಮಯದಲ್ಲಿ ಮಾರ್ಗದರ್ಶನಗಳನ್ನು ನೀಡಿದರೇ ಇದರಿಂದ ಆಗುವ ಅನಾಹುತಗಳನ್ನು ತಡೆಯಬಹುದು ಏನೋ ಅಲ್ಲವಾ.



ಮತ್ತೇ ಒಂದು ಸಿದ್ಧಾಂತವೇ ನಿರ್ಮಾಣವಾಗಿದೆ. ನೀನು ಯಾರನ್ನಾದರೋ ಪ್ರೀತಿಸಿದೆಯೆಂದರೇ ಅವರನ್ನು ಪಡೆಯಲೂ ನೀನು ಸಾಕಷ್ಟು ಜೀವನದಲ್ಲಿ ಕಷ್ಟಪಡಬೇಕಾಗುತ್ತದೆ... ಲವ್ ಅಂದರೇ ನೋವು. ಹೀಗೆ ಹತ್ತು ಹಲವು ರೀತಿಯ ಪರಿಸ್ಥಿಗಳು ನಮ್ಮ ಎದುರಲ್ಲಿ ಇಂದು ನಿಂತಿವೆ. ಯಾಕೇ? ಒಂದು ಸಾಮಾನ್ಯ ಮಧುರ ಭಾವನೆಗಳನ್ನು ತಾನು ಇಷ್ಟಪಟ್ಟವರಿಗೆ ವ್ಯಕ್ತಪಡಿಸಲೂ ಸಾಧ್ಯವಿಲ್ಲವೆ. ಲವ್ ಅಂದರೇ ನಿಜವಾಗಿಯೂ ಕ್ರೈಮಾ?




ಯೋಚಿಸಿ ಎಷ್ಟೊಂದು ಪ್ರೇಮಿಗಳು ತಮ್ಮ ಪ್ರೀತಿಯನ್ನು ದಕ್ಕಿಸಿಕೊಳ್ಳಲಾರದೇ ಮತ್ತು ಸುತ್ತಲಿನ ತಮ್ಮ ಹಿರಿಯರು, ಸಮಾಜದೊಡನೆ ಹೋರಾಡಲು ಅಸಕ್ತರಾಗಿ ಸ್ವರ್ಗದಲ್ಲಾದರೂ ಒಂದಾಗೋಣ ಎಂದು ತಮ್ಮ ಪ್ರಾಣಗಳನ್ನು ನಿತ್ಯ ಕಳೆದುಕೊಳ್ಳುತ್ತಿದ್ದಾರೆ. ಯಾಕೇ? ಇದಕ್ಕೆ ನಮ್ಮ ಮುಂದೆ ನಮ್ಮ ಹಿಂದಿನ ಪುರಾಣ ಕಾಲದಿಂದ ಪ್ರಾರಂಭಿಸಿ ಇತ್ತೀಚೆಗಿನ ನಮ್ಮ ಸುತ್ತಲಿನ ಹತ್ತಿರದ ಘಟನೆಗಳೆ ಸಾಕ್ಷಿಯಾಗಿವೆ.


ನಾವುಗಳು ನಿತ್ಯ ಓದುವ ಕಾದಂಬರಿ, ನೋಡುವ ಸಿನಿಮಾ, ಕೇಳುವ ಹಾಡುಗಳಲ್ಲಿ ಯಾಕೇ ಈ ಒಂದನ್ನು ಇಷ್ಟೊಂದು ರೀತಿಯಲ್ಲಿ ಚಿತ್ರಿಸುತ್ತಾರೆ. ಇಂದು ಪ್ರೀತಿ -ಪ್ರೇಮ ಇಲ್ಲದ ಯಾವುದೇ ಒಂದು ಕಾರ್ಯಕ್ರಮಗಳೇ ಇಲ್ಲವೆನೋ. ಮುಂದಿನ ನಮ್ಮ ಈ ಜೀವ ಲೋಕದ ಬೆಳವಣಿಗೆಗೆ ಕಾರಣೀಭೂತವಾದ ಇಂಥ ಅಮೊಲ್ಯವಾದ ಒಂದು ಸ್ಪಂದನಕ್ಕೆ ಯಾಕೀಷ್ಟು ಕಟ್ಟಪ್ಪಣೆಗಳು. ಅದು ಎಲ್ಲ ತಿಳಿದಂತಹ ನಿತ್ಯ ಹತ್ತು ಹಲವು ಇದಕ್ಕೆ ಸಂಬಂಧಿಸಿದ ಚಿತ್ರಣಗಳನ್ನು ನೋಡಿದರೂ ಪುನಃ "ಹೇ ನನ್ನ ಮಗಳು/ಮಗ ಮಾತ್ರ ಆ ರೀತಿಯಲ್ಲಿ ಮಾಡಬಾರದು" ಎಂಬ ದೋರಣೆ ಯಾಕೇ? ಅದೇ ಕರುಣಾಜನಕವಾದ ಪ್ರೇಮ ಕಥೆಗಳನ್ನು ಇಷ್ಟಪಟ್ಟು ಬೆಸ್ಟ್ ಸೆಲ್ ರ್, ಬೆಸ್ಟ್ ಮೋವಿ, ಬೆಸ್ಟ್ ಹಾಡು ಎಂದು ಓದುತ್ತಾ, ನೋಡುತ್ತಾ, ಕೇಳುತ್ತಾ ಸಂಭ್ರಮಿಸುತ್ತೇವೆ. ಅದೇ ನಮ್ಮ ಪಕ್ಕದಲ್ಲಿ ನಮ್ಮವರೊಡೊಣೆ ಘಟಿಸಿದರೆ ಹಾವು ಕಂಡಂತೆ ಹುಬ್ಬೇರಿಸುತ್ತೆವೆ ಯಾಕೆ?




ಆದರೋ ಈ ಎಲ್ಲಾ ವಿಚಾರಗಳೊಂದಿಗೆ ವ್ಯಾಲೆಂಟೈನ್ -ಪ್ರೇಮಿಗಳ ದಿನದ ಶುಭಾಶಯಗಳು! ಪ್ರೀತಿಯನ್ನು ಪ್ರೀತಿಪಟ್ಟವರಿಗಾಗಿ ಪ್ರೀತಿಸುತ್ತಾ ಕೊಡಿ.

1 ಕಾಮೆಂಟ್‌: