ಗುರುವಾರ, ನವೆಂಬರ್ 30, 2023

ಜೈ ಕನ್ನಡ! ಜೈ ಕರ್ನಾಟಕ!

ಕನ್ನಡ ರಾಜ್ಯೋತ್ಸವ! ಇದು ಕೇವಲ ನಗರಗಳಲ್ಲಿ ಅದೂ ಬೆಂಗಳೂರಲ್ಲಿ ಇರುವವರಿಗೆ ಮಾತ್ರ?

 ಕನ್ನಡ ಎನ್ನುವ  ಒಂದು ಭಾಷೆ ಇದೆ ಎಂಬುದನ್ನು ನೆನಪಿಸುವ ಹಬ್ಬವಾಗಿ ಮಾತ್ರ ಕಾಣುತ್ತಿದೆ ಎಂದೆನಿಸುತ್ತಿದೆ.

ಆದರೆ ಕನ್ನಡ ಭಾಷೆಯನ್ನು ನಿಚ್ಚಳವಾಗಿ ಮತ್ತು ತಮಗೆ ಗೊತ್ತಿಲ್ಲದ ರೀತಿಯಲ್ಲಿ ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಬಳಸುತ್ತಿರುವ ಮುಗ್ಧ ಕನ್ನಡಿಗರು ಎಂದರೇ ಅದು ಹಳ್ಳಿಯಲ್ಲಿರುವವರು, ಚಿಕ್ಕ ಪಟ್ಟಣಗಳಲ್ಲಿರುವವರು ಮಾತ್ರ . 

ಆದರೇ ಈ ರೀತಿಯ ಜರೋರತೆ ಬೆಂಗಳೂರಿನಲ್ಲಿರುವ ಅಥವಾ ನಾವು  ಮುಂದುವರೆದಿರುವ ಮುಂದುವರಿಯುತ್ತಿವೆ ಎಂದು ಗುರುತಿಸಿಕೊಂಡ ಮಹಾ ನಗರದ ಮಂದಿಗೆ ಇಲ್ಲ ಬಿಡಿ. ಇಲ್ಲಿ ಕನ್ನಡ ಭಾಷೆಗೆ ಏನೂ ಬೆಲೆ ಇಲ್ಲ ಎಂಬ ಕಠಿಣ ತಿಳುವಳಿಕೆಯಲ್ಲಿ ಮುಳುಗೇಳುತ್ತಿದ್ದಾರೆ.

ಯಾಕೆಂದರೇ ಇಲ್ಲಿರುವವರು ನವ ತರುಣ ತರುಣಿಯರು. 

ಹಳ್ಳಿಗಳಲ್ಲಿ , ಚಿಕ್ಕ ಪುಟ್ಟ ಪಟ್ಟಣಗಳಲ್ಲಿರುವವರು ಈ ಯುವ ಸಮುದಾಯವನ್ನು ಹೆತ್ತ ಹೆತ್ತವರು. ಹಾಗೆಯೇ ಹೆಚ್ಚು ಹೆಚ್ಚು ಓದಿರದ ಮಂದಿ ಮಾತ್ರ. ಇವರುಗಳು ಹೆಮ್ಮೆಯಿಂದ ಮತ್ತು   ಪ್ರೀತಿಯಿಂದ ಕನ್ನಡವೇ ಉಸಿರಾಗಿಸಿಕೊಂಡು ಬಾಳುತ್ತಿದ್ದಾರೆ. ಅವರುಗಳಿಗೆ ಕನ್ನಡ ಉಳಿಸಿ, ಬಳಸಿ ಮತ್ತು   ಬೆಳಸಿ ಎಂಬ ಘೋಷಣೆಯ ಬಗ್ಗೆ ಯಾವ ಅರಿವು ಬೇಕಾಗಿಲ್ಲ.

ಆದರೇ ನಮ್ಮ ಕರ್ನಾಟಕದ ಸ್ಥಿತಿ ಮಾತ್ರ ಅಂದಿನಿಂದ ಇಂದಿನವರೆಗೂ ಸುಧಾರಿಸಿರುವುದು ನಾ ಕಾಣೆ! 

ನಮ್ಮ ಮುಖ್ಯಮಂತ್ರಿಗಳು ಮೊನ್ನೆಯ ಕನ್ನಡ ರಾಜ್ಯೋತ್ಸವದ ಭಾಷಣದಲ್ಲಿ ಇದೇ ವಿಚಾರವನ್ನು ತಲೆ ಬಿಸಿ ಮಾಡಿಕೊಂಡು ನೆರೆದ ಸಭಿಕರಲ್ಲಿ ಹಂಚಿಕೊಳ್ಳುತ್ತಿದ್ದರು. ಬೆಂಗಳೂರು ಕನ್ನಡಿಗರು ಬೇರೆ ರಾಜ್ಯದಿಂದ ಬಂದವರ   ಭಾಷೆಯಲ್ಲಿಯೇ ಮಾತನಾಡಿದರೇ ಅವರು ತಾನೇ  ಯಾಕೆ ಕನ್ನಡ ಕಲಿಯುವ ಅವಶ್ಯಕತೆಯಾದರೂ  ಬಂದಿತು? ಅದು ಬಿಟ್ಟು  ನಾವು ಹೆಮ್ಮೆಯಿಂದ ಕನ್ನಡದಲ್ಲಿಯೇ ಅವರೊಂದಿಗೆ ಮಾತನಾಡಿದರೆ ಅವರು ಸಹ ಕನ್ನಡ ಕಲಿಯುವಲ್ಲಿ ನಮ್ಮೊಂದಿಗೆ ಕೈ ಜೋಡಿಸುವವರು ಎಂದೇಳುತ್ತಿದ್ದರು.


ಅವರಿಗೂ ಗೊತ್ತಾಗಿರಬೇಕು. ಈಗಂತೂ ವಿದಾಸೌದದಲ್ಲೂ ಸಹ ಕನ್ನಡ ಕೊಂಚ ಕೊಂಚ ಕಾಣೆಯಾಗುತ್ತಿದೆ ಎಂದು . ಹಾಗೆಯೇ ಈ ಸಂದರ್ಭದಲ್ಲಿ ಅವರು ಒಂದು ಆಜ್ಞೆಯನ್ನು   ಹೊರಡಿಸಿದರೂ ’ಸರ್ಕಾರಿ ಪತ್ರ ವ್ಯವಹಾರವೆಲ್ಲಾ ಕನ್ನಡದಲ್ಲಿಯೇ ಇರಲಿ’ ಎಂದು.



ಹೌದು ಹೀಗೆ ಈ ರೀತಿಯ  ಕನ್ನಡದ ಅಳಿವು ಉಳಿವಿನ ಮಾತುಗಳು ಕೇವಲ ಪ್ರತಿ ನವಂಬರ್ ಮಾಸಕ್ಕೆ ಮಾತ್ರ ಸೀಮಿತವಾಗಿ ಡಿಸೆಂಬರ್ ಹೊತ್ತಿಗೆ ತಣ್ಣಗೆ ಮಲಗಿ ಮೊಲೆಗೆ ಸೇರುತ್ತಿರುವುದು ನಮ್ಮ ಕರ್ನಾಟಕದ  ಜನರ ದೌರ್ಭಾಗ್ಯ ! 


ಯಾಕೇ ಈ ರೀತಿಯ ಒಂದೇ ಒಂದು ಕೂಗು ನಮ್ಮ ಅಕ್ಕ ಪಕ್ಕದ ರಾಜ್ಯಗಳಲ್ಲಿ ಇಲ್ಲವೆಂದು ತುಂಬ ಅಚ್ಚರಿಯಾಗುತ್ತದೆ.  ಯಾಕೆಂದರೇ ಕನ್ನಡವು ಮುಂದುವರಿದ ನಮ್ಮ ನಗರಗಳಲ್ಲಿ ಅದಿಕೃತ ಭಾಷೆಯಾಗಿ ಚಾಲ್ತಿಯಲ್ಲಿ ಇಲ್ಲ. ನಮಗ್ಯಾರಿಗೂ ಕನ್ನಡ ಕಲಿಯಲೇ ಬೇಕೆಂಬ ಒತ್ತಡವಿಲ್ಲ.


ಕನ್ನಡ ನೆಲದಲ್ಲಿ ಹುಟ್ಟಿರುವ ನಮ್ಮ ಕನ್ನಡಿಗರಿಗೆ  ಕನ್ನಡ ಮಾತನ್ನಾಡಿದರೇ ದುಡಿಮೆಯ ಹೊಟ್ಟೆ ತುಂಬಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಅತಿ ಚಿಕ್ಕ ಕೆಲಸಕ್ಕೂ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷಾ ಪಾಂಡ್ಯತೆ ಬೇಕಾಗಿದೆ ಎಂದು ಹೇಳುವವರೇ ಹೆಚ್ಚಾಗಿದ್ದರೆ. 


ಇಂದು ಭಾಷೇ  ಮಮತೆಗಿಂತ ಹೊಟ್ಟೆಯ ಪಾಡೇ ದೊಡ್ಡದು ಎಂಬ ಭಯ!


ಇದರ ಬಗ್ಗೆ ನಮ್ಮ ಸರ್ಕಾರಗಲ್ಲಿರುವ ಮಹಾನ್ ಬೃಹಸ್ಪತಿಗಳು ಕಣ್ಣು ತೆರೆದು  ಸಹ ನೋಡುವುದಿಲ್ಲ. ಬರೀ ಕನ್ನಡ ದಿನದಂದೂ ಮಾತ್ರ ಕನ್ನಡ ಉಳಿಸೋಣ ಬಳಸೋಣವೆಂದು ವೀರಾವೇಷದ ಮಾತುಗಳನ್ನು ಆಡಿ ವರ್ಷವಿಡಿ ಮೌನವಹಿಸಿಬಿಡುತ್ತಾರೆ. 


ಹೀಗೆ ಸ್ನೇಹಿತರ ವರ್ಗದಲ್ಲಿ ಯಾರೋ ಹೇಳುತ್ತಿದ್ದರು.. ಅದು ಯಾವುದೋ ಒಂದು ಬೆಂಗಳೂರಿನ ವಸತಿ ಸಮುಚ್ಛಾಯದಲ್ಲಿ ೩೨೮ ಮನೆಗಳಿವೆಯಂತೆ.  ಅಲ್ಲಿ ಇರುವ ಕನ್ನಡದ ಕುಟುಂಬಗಳು ಕೇವಲ ೩೮ ಅಂತೆ. ಇಲ್ಲಿಗೆ ಬಂದು ನಿಂತಿದೆ ನಮ್ಮ  ಕನ್ನಡ ರಾಜಧಾನಿಯ ಸ್ಥಿತಿ. ಯೋಚಿಸಿ ಭಾಷೆ ಎಷ್ಟು ಮುಖ್ಯ ಎಂಬುದು. ಕನ್ನಡಿಗರು ಸಹ ಕನ್ನಡದ ಬಗ್ಗೆ ಮೂಗು ಮುರಿದರೆ ಬೇರೆ ಯಾರು ತಾನೇ ನಮ್ಮ ಭಾಷೆಯನ್ನು ಮಾತನಾಡುವರು?  ಬೆಂಗಳೂರಲ್ಲಿ ಕನ್ನಡ ಕಲಿಯಲೇ ಬೇಕು ಎಂಬ ಜರೂರತೆ ಇಲ್ಲ!


ಯಾಕೇ ಹೀಗೆ ಎಂದು ಯಾರು ಸಹ ಪ್ರಶ್ನಿನಿಸಲಾರರು.  ಯಾಕೆಂದರೇ ಯಾವ ಭಾಷೆ  ಹೆಚ್ಚು ಕೆಲಸಗಳನ್ನು , ಉದ್ಯೋಗಗಳನ್ನು, ಸಂಬಳವನ್ನು ಕೊಡುವುದು ’ಹೊಟ್ಟೆ’ಯನ್ನು ತುಂಬಿಸುವುದೋ ಆ ಭಾಷೆಯೇ ಇರಲಿ ಎಂಬ ಜಾಣ ನಿರ್ಧಾರಕ್ಕೆ ಬಂದಂತಿದೆ. 


ಜೈ ಕನ್ನಡ! ಜೈ ಕರ್ನಾಟಕ!