ಗುರುವಾರ, ಮಾರ್ಚ್ 10, 2011

ಎಲ್ಲಾದರೂ ಇರೂ ಎಂತಾದರೂ ಇರೂ ಎಂದೆಂದಿಗೂ ನೀ ಕನ್ನಡಿಗನಾಗಿರು.



ವಾತವರಣವು ಪೂರ್ತಿ ಬದಲಾಗಿದೆ. ಸುಳಿ ಚಳಿಯಿಂದ ಎದುಸಿರು ಬಿಡುವಂತ ಮಟ ಮಟ ಮಧ್ಯಾನದ ಕೆಟ್ಟ ಬಿಸಿಲಿನ ಜಳ. ಒಂದು ಸುತ್ತು ಬೆಂಗಳೂರಿನ ಜನಗಳು ನಿಡುಸುಯ್ದಿದ್ದಾರೆ. ಇನ್ನೂ ಈಗ ಮಾರ್ಚ ತಿಂಗಳು ಈಗಲೇ ಇಷ್ಟೊಂದು ಜಳ ಇನ್ನೂ ಏಪ್ರಿಲ್ ತಿಂಗಳಲ್ಲಿ ಹೇಗೋ ಏನೋ ಎಂದು ಪ್ರಲಾಪಿಸಲಾರಂಭಿಸಿದ್ದಾರೆ. ಐಸ್ ಕ್ರೀಮ್, ತಂಪು ಪಾನಿಯಗಳಿಗೆ, ತಾಜಾ ಹಣ್ಣುಗಳಿಗೆ ಕಾಲದ ಮಹಿಮೆ ಎಂಬ ರೀತಿಯಲ್ಲಿ ಇಲ್ಲದ ಬೇಡಿಕೆಗಳು.

ಪ್ರಕೃತಿಯು ಸಹಜವಾಗಿ ತನ್ನ ಹಳೆತನವನ್ನು ಮರೆಯಲು ಪ್ರಾರಂಭಿಸಿದೆಯೇನೋ ಎಂಬಂತೆ ತನ್ನ ಒಣಗಿದ ಹಳೆಯ ಎಲೆಗಳನ್ನೇಲ್ಲಾ ಒಂದು ಸುತ್ತು ಉದುರಿಸಿ ಹೊಸ ಋತು ಆಗಮನಕ್ಕೆ ತನ್ನನ್ನು ತಾನು ಚಿಗುರೆಲೆಗಳನ್ನು ತಾರಲು ತಯಾರಿ ನಡೆಸಿದೆಯೇನೋ ಎಂಬಂತೆ ಚಿಕ್ಕ ಚಿಕ್ಕ ಹಸಿರು ಎಲೆಗಳನ್ನು ಎಲ್ಲಾ ಗಿಡ ಮರಗಳು ತಮ್ಮಲ್ಲಿ ಮೊಡಿಸಿಕೊಳ್ಳುತ್ತಿವೆ.

ಚೈತ್ರ ಮಾಸದ ಆಗಮನಕ್ಕೆ ಯಾವ ರೀತಿಯಲ್ಲಿ ಪ್ರಕೃತಿ ತನ್ನ ನಿತ್ಯ ಕಾಯಕದ ಮೊಲಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೋ ಆ ರೀತಿಯಲ್ಲಿ ತನ್ನ ಚಿತ್ತಾರದಲ್ಲಿ ತಲ್ಲಿನವಾಗಿದೆ.

ಯಾವುದು ನಿಂತರೂ ಕಾಲ ಮಾತ್ರ ನಿಲ್ಲುವುದಿಲ್ಲ ಎಂಬಂತೆ. ಯಾವಾ ಯಾವ ಕಾಲಕ್ಕೆ ಏನೂ ಏನೂ ಆಗಬೇಕೋ ಅದು ನಿತ್ಯ ಘಟಿಸುತ್ತಿರುತ್ತದೆ. ಯಾಕೆಂದರೇ ಕಾಲ ನಮ್ಮ ನಿಮ್ಮಂತೆ ಮೈ ಮರೆಯುವ ಸಾದ ಸೀದಾ ಮನುಷ್ಯ ಅಲ್ಲ ಅಲ್ಲವಾ?

ಹಾಗೆಯೇ ನಮ್ಮ ಕನ್ನಡ ನಾಡಿಗೆ ಡಬಲ್ ದಮಾಕ ಎಂಬ ರೀತಿಯಲ್ಲಿ ಕನ್ನಡ ಮನಸ್ಸುಗಳಿಗೆ ಪುನಃ ಮತ್ತೊಂದು ದೊಡ್ಡ ಕನ್ನಡ ಮನ-ಜನಗಳ ಸಮ್ಮೇಳನದ ಭರಾಟೆ ಮತ್ತು ಸಂಭ್ರಮ. ಗಡಿನಾಡು ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ. ಅಖಿಲ ಭಾರತ ೭೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ದೂರಿಯನ್ನು ಬೆಂಗಳೂರಿನಲ್ಲಿ ಕಂಡ ಕನ್ನಡ ಮಂದಿ ಮತ್ತೊಮ್ಮೆ ಗಡಿ ನಾಡಲ್ಲಿ ಕನ್ನಡ ಸಂಸ್ಕೃತಿಯ ಪ್ರದರ್ಶನಕ್ಕೆ ಭಾರಿ ಭಾರಿ ತಯಾರಿಯನ್ನು ಮಾಡಿಕೊಂಡಿದ್ದಾರೆ.

ಯಾವುದೇ ಒಂದು ವಿಚಾರ, ಸಮ್ಮೇಳನ, ಮಾತು, ಸಂಭ್ರಮಕ್ಕೆ ಪರ ಮತ್ತು ವಿರೋಧಭಾಸಗಳು ಸಾಮಾನ್ಯ. ಅವುಗಳ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಹಲವಾರು ರೀತಿಯಲ್ಲಿ ಹಲವಾರು ಮಂದಿಗಳಿಂದ ಕೇಳಿ ಬರುತ್ತವೆ. ಯಾರು ಸಮ್ಮೆಳನವನ್ನು ಉದ್ಗಾಟಿಸಬೇಕು, ಯಾರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇರಬೇಕು, ಯಾವ ಅತಿಥಿಗಳನ್ನು ಕರೆಯಿಸಬೇಕು ಇತ್ಯಾದಿ, ಇತ್ಯಾದಿ. ಇದು ಎಂದು ನಿಲ್ಲದ ತುಂತುರು ಜಟಿ ಮಳೆಯೇ ಸರಿ.

ಸುಮಾರು ೨೫ ವರ್ಷಗಳಾನಂತರ ಈ ರೀತಿಯ 2ನೇಯ ವಿಶ್ವ ಕನ್ನಡ ಸಮ್ಮೇಳನವನ್ನು ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ. ಪ್ರಪಂಚದ ವಿವಿಧ ಭಾಗದಲ್ಲಿ ಚದುರಿ ಹೋಗಿರುವ ಎಲ್ಲಾ ಸಮಸ್ತ ಕನ್ನಡ ಹೃದಯಗಳ ಸಂಮಿಲನಕ್ಕೆ ಒಂದು ಸೂಕ್ತ ವೇದಿಕೆಯನ್ನು ನಿರ್ಮಿಸಿದ್ದಾರೆ. ವಿಶ್ವ ಕನ್ನಡ ಸಮ್ಮೇಳನ ಎಂಬ ಹೆಸರಿನಲ್ಲಿ ಮೂರು ದಿನಗಳ ಕಾಲ ಸಾವಿರಾರು ಕನ್ನಡ ಪ್ರೇಮಿಗಳನ್ನು ಒಂದು ಕಡೆ ದೊಡ್ಡ ಪ್ರಮಾಣದಲ್ಲಿ ಸೇರಿಸಿಸುತ್ತಿದ್ದಾರೆ.ಶ್ರೀಮಂತವಾಗಿರುವ ಕನ್ನಡದ ಹತ್ತು ಹಲವು ವಿಚಾರಗಳು, ಗೋಷ್ಠಿಗಳು, ಸಂಸ್ಕೃತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೊಲಕ ಕನ್ನಡ ನಾಡು ನುಡಿಯ ಏಳ್ಗೆಯ ಬಗ್ಗೆ ಚಿಂತನೆಯನ್ನು ನಡೆಸುವ ಅವಕಾಶ ಮಾಡಿರುವುದು ತುಂಬ ಉತ್ತಮ ವಿಚಾರ.

ಆದರೇ ಸಮ್ಮೇಳನಗಳು, ಕಾರ್ಯಕ್ರಮಗಳು ಅಲ್ಲಿ ದರ್ಪಣಗೊಳ್ಳುವ ವಿಚಾರಗಳು ಎಷ್ಟರ ಮಟ್ಟಿಗೆ ಸಾಮಾನ್ಯ ಕನ್ನಡ ಹೃದಯಗಳಿಗೆ ಕನ್ನಡದ ಬಗ್ಗೆ ಮಮತೆಯನ್ನು ಸ್ಪುರಿಸಲು ಸಹಕಾರಿಯಾಗುವುದು ಎಂಬುದು ಮೀಲಿಯನ್ ಡಾಲರ್ ಪ್ರಶ್ನೇ. ಕೋಟಿ ಕೋಟಿ ರೂಪಾಯಿಗಳನ್ನು ಈ ರೀತಿಯ ಸಂಭ್ರಮದ ಕಾರ್ಯಕ್ರಮಗಳಿಗೆ ಸರ್ಕಾರ ವೆಚ್ಚ ಮಾಡುತ್ತದೆ. ಅದರ ಸದೋಪಯೋಗ ಯಾವ ರೀತಿಯಲ್ಲಿ ಆಗುತ್ತದೆ ಎಂಬುದು ನಾವುಗಳು ಚಿಂತಿಸುವ ವಿಚಾರ. ಕನ್ನಡ ಎಂದರೇ ಅದು ಕೇವಲ ನಮ್ಮ ಮಕ್ಕಳನ್ನು ಹತ್ತನೇಯ ತರಗತಿಯವರೆಗೂ ಕಡ್ಡಾಯವಾಗಿ ಓದಿಸುವ ಒಂದು ಮಾಧ್ಯಮ ವ್ಯವಸ್ಥೆಯಾಗಬಾರದು. ಅದು ನಮ್ಮ ನರ ನಾಡಿಗಳಲ್ಲಿ ಯಾವಗಲೂ ಹರಿಯುವ ನಿತ್ಯ ತುಂಗೆಯಾಗಬೇಕು. ಕನ್ನಡದ ಬಗ್ಗೆ ನಮ್ಮ ಇಂದಿನ ತರುಣ ಜನಾಂಗದ ಭಾವನೆ ಯಾವ ರೀತಿಯಲ್ಲಿ ಇದೆ ಎಂಬುದನ್ನು ನಾವುಗಳು ಬಲ್ಲೆವು. ಆದ್ದರಿಂದ ಹಿರಿಯರು, ವಿದ್ವಾಂಸರು, ಚಿಂತಕರು, ಉದ್ಯಮಿಗಳು ಗಮನಿಸಿ ಅದರ ಬೆಳವಣಿಗೆಗೆ ಯಾವ ರೀತಿಯಲ್ಲಿ ಯೋಜನೆಯನ್ನು ತಯಾರಿ ಮಾಡಬೇಕು ಎಂಬುದರ ಬಗ್ಗೆ ದೃಷ್ಟಿ ಬೀರಬೇಕು.

ಕೇವಲ ಕನ್ನಡದ ನೆಲದಲ್ಲಿ ಹುಟ್ಟಿದ ಕನ್ನಡದ ಮಕ್ಕಳಿಗೆ ಮಾತ್ರ ಕನ್ನಡ ಎಂಬಂತಾಗಬಾರದು. ಅದು ಪ್ರೀತಿಯ ಭಾಷೆಯಾಗಬೇಕು. ಮತ್ತು ಅದು ಕೇವಲ ಒಂದು ಭಾಷೆಯಾಗದೆ ಸಮಸ್ತ ಕನ್ನಡ ಸಂಸ್ಕೃತಿಯ ಪ್ರತೀಕವಾಗಬೇಕು. ಎಲ್ಲರೂ ಕನ್ನಡ ಕಲಿಯಲೇ ಬೇಕು ಎಂಬ ಜರೂರತು ನಿರ್ಮಾಣವಾಗಬೇಕು. ಅದು ಕೇವಲ ಅಡಿಗೆ ಮನೆಯ ಮಾತಾಗಬಾರದು. ಮುಖ್ಯ ಜಾಗಗಳಲ್ಲಿ ಕನ್ನಡ ಮಾತನಾಡುವುದೇ ಕೀಳು ಎಂತಾಗಬಾರದು. ಎದೆಯುಬ್ಬಿಸಿ ಕನ್ನಡ ಡಿಂಡಿಮವ ಮಳಗಿಸುವಂತಾಗಬೇಕು.

ಕನ್ನಡಿಗರು ಇಂದು ವಿಶ್ವ ಮಟ್ಟದಲ್ಲಿ ತಮ್ಮ ನಿರಂತರ ಸಾಧನೆಯಿಂದ ತಾನು ಹುಟ್ಟಿದ ತಾಯನಾಡ ಕೀರ್ತಿ ಪತಾಕೆಯನ್ನು ಅತಿ ಎತ್ತರದಲ್ಲಿ ವಿವಿಧ ರಂಗದಲ್ಲಿ ಪ್ರಪಂಚದ ಎಲ್ಲಾ ಜಾಗಗಳಲ್ಲಿ ನೆಟ್ಟಿದ್ದಾರೆ. ಅದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಆ ಎಲ್ಲಾ ಕನ್ನಡಿಗರ ಕೊಡುಗೆಗಳನ್ನು ಗುರುತಿಸಲು ನೆರವಾಗುವಲ್ಲಿ ಇಂಥ ಸಮ್ಮೇಳನಗಳು ಮುಖ್ಯವಾಗುತ್ತವೆ. ಇಂದು ಕರ್ನಾಟಕ ಎಂದರೇ ಅದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾದ ರಾಜ್ಯವಲ್ಲ. ವಿಶ್ವದ ಭೂಪಟದಲ್ಲಿ ಅದಕ್ಕೂ ಒಂದು ಮುಖ್ಯವಾದ ಸ್ಥಾನವನ್ನು ಕೊಟ್ಟಿದ್ದಾರೆ ಎಂದರೇ ಇಲ್ಲಿನ ಬಹುಮುಖ್ಯ ಕನ್ನಡ ಮಹನೀಯರುಗಳ ಸಾಧನೆ ಮತ್ತು ಅವರುಗಳ ಉತ್ತಮ ತನದಿಂದಾಗಿ.

ಮರಿದುಂಬಿಯಾಗಿಯಾದರೂ ಪುನಃ ಪುನಃ ಈ ಬನವಾಸಿ ದೇಶದಲ್ಲಿ ಜನಿಸಲೂ ಇಚ್ಛಿಸುತ್ತೇನೆ ಎಂಬಂತೆ ನಮ್ಮ ನಾಡು ಎಂಥವರಿಗಾದರೂ ಸ್ವರ್ಗ ಸೀಮೆಯೇ ಸರಿ. ಒಮ್ಮೆ ಇಲ್ಲಿ ನೀವು ಜೀವಿಸಲು ಬಂದಿರೇಂದರೇ ಪುನಃ ಇಲ್ಲಿಯೇ ಇರಲೂ ಇಷ್ಟಪಡುವಂತ ವಾತವರಣ ಮತ್ತು ಕನ್ನಡ ಜನಗಳ ಸ್ನೇಹ ಹಸ್ತ ಅಗಾಧ. ಅದಕ್ಕೆ ಎಂಥವರಿಗೂ ಕನ್ನಡ, ನೆಲ, ಜಲ, ಗಾಳಿ ಕಂಡರೇ ಒಂದು ರೀತಿಯ ಅಕ್ಕರೆ.

ವಿಶ್ವ ಕಪ್ ಕ್ರಿಕೆಟ್ ಜ್ವರದಲ್ಲಿ ಮುಳುಗುವ ಮನಸುಗಳು ಅತ್ತ ನಮ್ಮ ಕನ್ನಡಮ್ಮ ನ ತೇರು ಎಳೆಯುವ ಜಾತ್ರೆಯಲ್ಲಿ ಪಾಲ್ಗೂಳ್ಳುವ ಮನಸ್ಸು ಮಾಡಲಿ. ಅಲ್ಲಿ ಅಪರೂಪದ ವಿಶ್ವದಾದ್ಯಂತ ಹರಡಿರುವ ನಮ್ಮ ಕನ್ನಡಿಗರನ್ನು ನೋಡಲು ಅವರೊಡನೇ ಬೇರೆಯಲು ಮಾತನಾಡಿಸಲಾದರೂ ಹೋಗೋಣವೇ!

ಎಲ್ಲಾದರೂ ಇರೂ ಎಂತಾದರೂ ಇರೂ ಎಂದೆಂದಿಗೂ ನೀ ಕನ್ನಡಿಗನಾಗಿರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ