ಭಾನುವಾರ, ಏಪ್ರಿಲ್ 11, 2021

ಚೈತ್ರ ಮಾಸ

 ಕಾಲ ಎಲ್ಲವನ್ನೂ ಬದಲಾಯಿಸುವುದು ಎನ್ನುವುದಕ್ಕೆ ಈ ವಸಂತ ಋತುವೇ ಸಾಕ್ಷಿ. ವಸಂತ ಕಾಲವೆಂದರೇ ಕೇಳ ಬೇಕೇ?  ನಿಸರ್ಗದ ಪ್ರತಿ ಗಿಡ ಮರಗಳು ತಮ್ಮ ತಮ್ಮ ಹಸಿರು ಹಣ್ಣೆಲೆಗಳನ್ನುದುರಿಸಿಕೊಂಡು ಚಿಗುರು ಎಲೆಗಳನ್ನು ಮೈತುಂಬಿಕೊಳ್ಳುವ ದಿನಗಳು.


ಎಲೆಗಳು ಚಿಗುರುವುದಕ್ಕೂ ಮೊದಲು ಪ್ರತಿ ಗಿಡ ಮರಗಳು ಮೈತುಂಬ ಹೊವಿನ ಮೊಗ್ಗುಗಳನ್ನು ತುಂಬಿಕೊಂಡಿರುವುವು. 


ಇಲ್ಲಿ ಅಮೇರಿಕಾದಲ್ಲಿನ ಪರಿಸರವೇ ವಿಚಿತ್ರ ಮತ್ತು ವಿಸ್ಮಯ! ವಿಂಟರ್ ದಿನಗಳಲ್ಲಿ ಎಲ್ಲಾ ಗಿಡ ಮರಗಳು ಎಲೆಗಳಿಲ್ಲದ ಕೇವಲ ಎಲುಬುಗಳನ್ನು ಮೈವೊತ್ತಂತೆ ತಮ್ಮ ರೆಂಬೆ ಕೊಂಬೆಗಳೊಂದಿಗೆ  ತಣ್ಣನೆಯ ಮಂಜಿಗೆ, ಚಳಿಗಾಳಿಗೆ ಎದೆವೊಡ್ಡಿ ನಿಂತು ಜಯಶಾಲಿಗಳಾದಂತೆ ಸ್ಪ್ರಿಂಗ್ ದಿನಗಳಿಗೆ ಕಾದಿರುವುವು.  


ಇದೀಗ ಇಲ್ಲಿಯು ವಸಂತ ಕಾಲ ಶುರುವಾಗುತ್ತಿದೆ. ಕಳೆದ ಎರಡು ಮೂರು ದಿನಗಳಿಂದ ಪ್ರತಿ ಮರ ಬಳ್ಳಿಗಳು ಬಗೆ ಬಗೆಯ ಮೊಗ್ಗುಗಳನ್ನು ಹೊವು ಮತ್ತು ಚಿಗುರುಗಳನ್ನು ಹೊಮ್ಮಿಸಿಕೊಳ್ಳುತ್ತಾ ನಾವುಗಳು ಸಹ ಹೊಸ ಜೀವನಕ್ಕೆ ತಯಾರಾಗಿದ್ದೇವೆ ಎಂಬಂತೆ ಕಣ್ ಮನಗಳಿಗೆ ಹಬ್ಬವನ್ನೂಣಿಸುತ್ತಿವೆ. 


ಇಲ್ಲಿನ ಪ್ರತಿ ರಸ್ತೆಯ ಬದಿಯ ಮತ್ತು ಚಿಕ್ಕ ಪುಟ್ಟ ಪಾರ್ಕಗಳಲ್ಲಿನ ಪುಟ್ಟ ಮತ್ತು ದೊಡ್ಡ ಮರಗಳು ಮೈದುಂಬಿಕೊಂಡಿರುವ ಬಿಳಿ ಹೊಗಳನ್ನು ಪೂರ್ತಿಯಾಗಿ ನೋಡಿದರೇ.. ಮದುವಣಗಿತ್ತಿಯ ಸ್ವಾಗತಕ್ಕೆ ಹತ್ತು ಹಲವು ಮುತ್ತೈದೆಯರು ಮೈತುಂಬ ಹೊಚ್ಚ ಹೊಸ ಬಿಳಿ ರೇಶ್ಮೆಯ ಸೀರೆಯನ್ನು ಮೈತುಂಬ ಉಟ್ಟುಕೊಂಡು ಸಡಗರದಿಂದ ಕಾಯುತ್ತಿರುವಂತೆ ಭಾಸವಾಗುತ್ತಿದೆ. 


ಹತ್ತು ಹಲವು ಬಗೆಯ ಭಿನ್ನ ಭಿನ್ನ ರೀತಿಯ ಬಣ್ಣಗಳು. ಬಗೆ ಬಗೆಯ ವೈವಿಧ್ಯಮಯವಾದ ಸಸ್ಯ ವರ್ಗಗಳು ತಮ್ಮ ಪ್ರಬೇಧದ ಗುಣಕ್ಕೆ ತಕ್ಕಂತೆ ಬಿಳಿ, ಹರಿಸಿಣ, ಕೆಂಪು, ನೆರಲೆ ಬಣ್ಣಗಳ ಹೊವುಗಳನ್ನು ನಳನಳಿಸಿಕೊಂಡು ಸಿಂಗಾರ ಮಾಡಿಕೊಂಡು ಹೊಳೆಯುತ್ತಿವೆ. 


ಕಳೆದ ಕೆಲವು ದಿನಗಳಿಂದ ಹೊಗಳ ಮೊಳೆತ ಕಂಡರೇ ಸ್ವರ್ಗವೇ ಭುವಿಗೆ ಬಂದಂತಹ ಅನುಭವ.


ಪ್ರತಿ ಸಸ್ಯ ಸಂಕೂಲವು ಆರೋಗ್ಯಕರವಾಗಿ ದಷ್ಟಪುಷ್ಟವಾಗಿ ನಳನಳಿಸುತ್ತಿವೆ. 


ಇಂದೋ ಮುಂಜಾನೆಯಿಂದ ತುಂತುರು ಮಳೆ ಹನಿ.  ಇದು ವಂಸಂತೋತ್ಸವ. ಇಡೀ ಭೂಮಿಯನ್ನೇ ಸಾರಿಸಿ ಹೂರೆಸಿ ನೀರು ಸಿಂಪಡಿಸಿ ಸಂಭ್ರಮದ ದಿನಕ್ಕೆ ಸಜ್ಜು ಮಾಡಿದಂತಹ ಮಣ್ಣಿನ ವಾಸನೆ. 


ಹಾಗೆಯೇ ಬಾನೇ ಭೂಮಿಯ ಶೃಂಗಾರವನ್ನು ಕಂಡು ಕರಗಿ ಕರಗಿ ಜೇನು ಹನಿದಂತೆ ಆಗೊಮ್ಮೆ ಹೀಗೊಮ್ಮೆ ಮಳೆ ಹನಿಯ ಮಂತ್ರ ಸ್ಪರ್ಶ! ಮರ ಗಿಡಗಳು ಬಳ್ಳಿಗಳ ಎಲೆಗಳು, ಹೊವಿನ ಮೇಲಿನ ನೀರಿನ ಹನಿಯನ್ನು ಭಾನೇ ಕೈಯಾರೆ ಜೇನಿನ ಹನಿಯನ್ನು ಹನಿಸಿದಂತಹ ಚಿತ್ರಣ!


ಯಾಕೋ ಏನೋ ಮುಂಜಾನೆಯಿಂದ ಸೂರ್ಯನ ಕಿರಣಗಳು ಧರೆಯ ವೈಭೋಗವನ್ನು ಕಂಡು ನಾಚಿ ನೀರಾದಂತಹ ಅನುಭವ! ಧರೆಯ ಹಸಿರು, ಬಿಳಿ, ಕೆಂಪು, ಹರಿಸಿಣ ಬಣ್ಣಗಳ ರಂಗಿನ ವೈಯಾರಕ್ಕೆ ಬೆಕ್ಕಸ ಬೆರಗಾಗಿ ತಾನು ಹೇಗೆ ತಾನೇ ನಿನ್ನನ್ನು ಕಣ್ಣ ತುಂಬಿಕೊಳ್ಳಲಿ ಎಂದು ಮೊಡದ ಮರೆಯಲ್ಲಿ ಕಣ್ಣ ಮುಚ್ಚಾಲೆಯಲ್ಲಿ  ದಿನಕರನು ಮುಳುಗಿರುವಂತೆ ಅನಿಸುತ್ತಿದೆ. 


ಹಾಗೊಮ್ಮೆ ಹೀಗೊಮ್ಮೆ ಕದ್ದು ಮುಚ್ಚಿ ಕಣ್ಣು ತುಂಬಿಕೊಳ್ಳುತ್ತಿರುವ ನವ ತರುಣನ ರೀತಿಯಲ್ಲಿ ಬೆಳ್ಳಿಯ ಸೂರ್ಯನ ಕಿರಣಗಳ ಬಿಂಬ ಮಳಯ ತುಂತುರು ಜೊತೆಯಲ್ಲಿ ಕಾಣಿಸುತ್ತಿದೆ. 


ಇನ್ನೇನೂ ನಾನು ಈಗ ಹೋಗಲೇ ಬೇಕು ಭೂಮಿಯ ಇನ್ನೊಂದು ಭಾಗಕ್ಕೆ ಎಂದುಕೊಂಡು ಆಗಿದ್ದಾಗಲಿ ಈ ಸುಂದರಮಯವಾದ ನೋಟವನ್ನು ಹೀರಿಕೊಳ್ಳೊಣ ಎನ್ನುವಂತೆ ರವಿಯ ಕಿರಣಗಳ ಚಿತ್ತಾರ  ಈ ಸಿಹಿ ಸಂಜೆಯಲ್ಲಿ.


ಮಳೆ ನಿಂತ ಮೊಡದ ನಡುವಿನ  ಕಿರಣಗಳ ಸಪ್ಪಳ. ಇದೇ ಸವಿ ಸಮಯವೆಂಬಂತೆ ನಬೋಮಂಡಲದಲ್ಲಿ ಸಪ್ತ ವರ್ಣಗಳ ಕಾಮನಬಿಲ್ಲು ಮೂಡಿ ಧರಣಿ ಮಂಡಲದ ವಸಂತಾಗಮನದ ಉತ್ಸವಕ್ಕೆ ಹೊಸ ಚಿತ್ತಾರವನ್ನು ಬಿಡಿಸಿದಂತಹ ಅನುಭವ.


ಮಕ್ಕಳು ಮರಿಗಳು ಮನೆಯಿಂದ ಹೊರಬಂದು ಈ ಸುಂದರ ಸಂಜೆಯ ವರ್ಣಮಯ ದೃಶ್ಯವನ್ನು ಸಿಹಿ ಸಿಹಿಯಾಗಿ ಕಣ್ಣು ತುಂಬಿಕೊಳ್ಳುತ್ತಾ ನಿಂತಿದ್ದೇ ಬಂತು.


ಈ ಹಬ್ಬದೊಕುಳಿಯನ್ನು ಕಂಡು ಪ್ರತಿ ಮನಸ್ಸುಗಳು ಹೊಸ ವರುಷದ ಸ್ವಾಗತಕ್ಕೆ ಸಜ್ಜಾದಂತೆ ಕಂಡುಬಂತು. ಅದಕ್ಕೆ ಇರಬೇಕು ಯುಗಾದಿ ಈ ವಸಂತ ಕಾಲ ಚೈತ್ರ ಮಾಸದಲ್ಲಿಯೇ ಪ್ರತಿ ಭಾರಿ ಬರುವುದು.  ಆಶ್ಚರ್ಯವಲ್ಲವೇ? 


ಇದೇ ನಿಜವಾದ ವರುಷ ಮತ್ತು ಹರುಷ! ಪ್ರಕೃತಿಯೇ ನವ ಜನುಮ ಪಡೆದಂತೆ ಮತ್ತು ನಡೆದಂತೆ.



ಶುಭಾಶಯಗಳು ಹೊಸ ದಿನಗಳಿಗೆ!