ಶನಿವಾರ, ಮೇ 5, 2018

ಮದುವೆ Anniversary

ಇಂದು ಮದುವೆಯ ವರ್ಷಾಚರಣೆ. ಕೇಳಬೇಕೆ ಹೆತ್ತವರು, ಸ್ನೇಹಿತರು, ಬಂದುಗಳು, ಹತ್ತಿರದವರು, ದೂರದವರು ಪ್ರತಿಯೊಬ್ಬರ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ ಈ ನವ ಜೋಡಿಗೆ.

ಮದುವೆಯ ವರ್ಷಾಚರಣೆಯೆಂದರೇ ಸತಿಪತಿಗಳಾದ ಆ ದಿನದಿಂದ ಎರಡು ಜೀವಗಳು ಹೇಗೆಲ್ಲಾ ಬಾಳಿದವೆಂಬುದನ್ನು ಮೆಲುಕು ಹಾಕಿಕೊಳ್ಳುವ ದಿನವೇ ಸರಿ.

ಮದುವೆಯೆಂಬುದು ಗಂಡು ಹೆಣ್ಣು ಒಟ್ಟಿಗೆ ಸೇರಿ ಗೊತ್ತಿದ್ದು ಮಾಡುವ ತಪ್ಪು ನಿರ್ಧಾರ! ಮದುವೆಯೆಂಬ ಎಂದೂ ಮುಗಿಯದ ಜಂಜಾಟಕ್ಕೆ ಗೊತ್ತಿದ್ದೂ ಆ ಬಂಧನಕ್ಕೆ ಯಾಕೆ ಬೀಳುವಿರಾ ಗಾವಿದರಾ ಎನ್ನುವರು. ಹೀಗೆಲ್ಲಾ ಮದುವೆಯಾದವರು ಮತ್ತು  ಇನ್ನೂ ಮದುವೆಯಾಗದ ಪ್ರತಿಯೊಬ್ಬರೂ ಹೇಳುವ ನಿತ್ಯ ಮಾತಾಗಿದೆ.

ನನಗೆ ತಿಳಿದಂತೆ ಮದುವೆ ಎನ್ನುವ ಈ ಒಂದು ಸಂಬಂಧದ ಬಗ್ಗೆ ಇರುವ ಗಾದೆ, ಹಿತನುಡಿಗಳು, ಸಿನಿಮಾಗಳು, ಕತೆಗಳು, ಕವಿತೆಗಳು, ವಕ್ರತೊಂಡೋಕ್ತಿಗಳು, ಕಿಚಾಯಿಸುವ ಮಾತುಗಳು ಬೇರೆ ಯಾವ ಸಂಬಂಧದ ಬಗ್ಗೆ ಈ ಜಗತ್ತಿನಲ್ಲಿ ಇಲ್ಲವೆ ಇಲ್ಲ ಬಿಡಿ.

ಆದರೂ ಮದುವೆಯಾಗಲೇಬೇಕು. ಮದುವೆಯಾಗುವುದು ಒಂದು ಮಾಮೂಲಿ ಜೀವನದ ಘಟನೆ.

ಮದುವೆಯಾಗದೇ ದಿನ ಕಳೆದರೇ ಒಂದು ರೀತಿಯ ನೋವು. ಮದುವೆಯಾಗದವರೆಗೆ ಮದುವೆಯಾಗುವ ತವಕ. ಮದುವೆಯಾದವರ ಸಂಕಟಗಳು ಬೇರೆ. ಖುಷಿಯಾಗಿ ಜೀವನ ಮಾಡುವವರು ಸಾಕಷ್ಟು ಜನ ಇದ್ದಾರೆ. ಆದರೇ ಪುನಃ ಮದುವೆಯ ಬಗ್ಗೆ ಇದೇ ರೀತಿಯ ಕಾಲು ಎಳೆಯುವ ಮಾತೆ ಪ್ರತಿಯೊಬ್ಬರಿಗೆ ಬರುತ್ತದೆ.

ಆದರೂ ಈ ಒಂದು ಅವಿನಭಾವ ಸಂಬಂಧವನ್ನು ಈ ಜಗತ್ತಿನಲ್ಲಿರುವ ಪ್ರತಿ ಹೆಣ್ಣು ಗಂಡು ಸಹ ಅನುಭವಿಸಲೇಬೇಕು. ಸಂಸಾರ ಎಂಬ ಸಾಗರದ ಸಾರವನ್ನು ಉಣ್ಣಲೇಬೇಕು.

ಎರಡು ಜೀವಗಳು ತಮ್ಮ ಮುಂದಿನ ದಿನಗಳನ್ನು ತಾವು ಜೀವವಿಸಿರುವವರೆಗೂ ಒಟ್ಟಿಗೆ ಬಾಳುವ ಉನ್ನತ ಬಂಧವೇ ಮದುವೆ.

ಹೌದು ಇದೊಂದು ಪದಗಳಿಗೂ ಮೀರಿದ ಅನುಬಂಧ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಮತ್ತೇಲ್ಲೋ ಬೇರೊಬ್ಬನ/ಳ ಜೊತೆಯಲ್ಲಿ ತನ್ನ ಅಂತ್ಯದವರೆಗೂ ಜೀವಿಸುವುದು. ಕಲ್ಪನೆಗೂ ನಿಲುಕದ ಉನ್ನತವಾದ ರೀಲೆಶನ್.

ಪ್ರತಿ ಮನುಷ್ಯನ ಪ್ರವರ್ಧಮಾನದ ಘಟ್ಟದಲ್ಲಿ ಸಂಭವಿಸುವ ಈ ಗೃಹಸ್ಥಾಶ್ರಮ ಇಬ್ಬರೂ ವ್ಯಕ್ತಿಗಳ ಸಂಮಿಲನ, ಎರಡು ಹೃದಯಗಳ ಬೆಸೆಯುವಿಕೆ, ಎರಡು ಕುಟುಂಬಗಳ ಸಂಬಂಧವೃದ್ಧಿಯಾಗಿದೆ.

ಪ್ರೀತಿ ಪ್ರೇಮ ಅನುರಾಗವನ್ನು ನಿತ್ಯವು ಸ್ಪುರಿಸುವ ಎರಡು ಜೀವಗಳ ಬಾಳುವಿಕೆಗೆ ಜಗತ್ತು ಗೊತ್ತು ಮಾಡಿರುವ ಅತ್ಯುತ್ತಮವಾದ ಸಂಬಂಧ.

ಇಲ್ಲಿಂದ ಇಬ್ಬರ ಬದುಕು ಬದಲಾಗುವುದು. ಇಲ್ಲಿಂದ ಇಬ್ಬರನ್ನು ಸಮಾಜ ನೋಡುವ ನೋಟ ಬದಲಾಗುವುದು. ಇಲ್ಲಿಂದ ಹೆತ್ತವರು ತನ್ನ ಮಕ್ಕಳನ್ನು ಜವಬ್ಧಾರಿವಂತರಂತೆ ಮತ್ತು  ಸರಿ ಸಮಾನರಂತೆ ಗುರುತಿಸುವುದು. ಇಲ್ಲಿಂದ ಇನ್ನೊಂದು ಕುಟುಂಬ /ಸಂಸಾರ ಸೃಷ್ಟಿಯಾಗುವುದು. ಇಲ್ಲಿಂದ ಹೊಸ ಜೀವನ ಎರಡು ಜೀವಿಗಳಿಗೆ. ಇಲ್ಲಿಂದ ಮುಂದಿನ ಸಂತತಿಯ ಬೆಳವಣಿಗೆ.

ಆರೋಗ್ಯವಂತಹ ಸಮಾಜದ ಉತ್ತಮ ಸಂಬಂಧವಾದ ಮದುವೆ ಎರಡು ವಿಭಿನ್ನ ಮನೋಸ್ಥಿತಿಗಳ ಬೆಸೆಯುವಿಕೆಯ ಮೊಲಕ ಹೆತ್ತವರಿಗೆ ಸಾರ್ಥಕವೆನಿಸುವಂತೆ ಮಾಡುತ್ತದೆ.

ಶಾಶ್ವತ ಸ್ನೇಹಿತರಾಗಿ ಅನುಗಾಲವು ಕಷ್ಟ ಸುಖದ ಕ್ಷಣಗಳನ್ನು ಅನುಭವಿಸುತ್ತಾ ನಿತ್ಯವು ಸಾಮರಸ್ಯದಿಂದ ಬಾಳುವುವಂತೆ ಮಾಡುವ ಜಾದು ಈ ಮದುವೆಯಲ್ಲಿದೆ.

ಹಿರಿಯರು ಇಷ್ಟಪಟ್ಟು ಸೇರ್ಪಡಿಸಿದ ಜೋಡಿಗಳು ಪ್ರೀತಿಯ ಹೊನಲಿನಲ್ಲಿ ಅನುದಿನವು ಒಬ್ಬರನ್ನುಬ್ಬರೂ ಬಿಟ್ಟಿರದಂತೆ ಗಟ್ಟಿಯಾಗಿ ಅಂಟಿಕೊಂಡಿರುವಂತೆ ಮಾಡುವ ನಂಟನ್ನು ಮದುವೆಯೆಂಬ ವ್ಯವಸ್ಥೆ ಈ ಮನುಷ್ಯ ಜೀವಿಗೆ ಕೊಟ್ಟಿರುವ ವರವೇ ಸರಿ.

ಹುಟ್ಟಿದಾಗ ಹೆತ್ತವರು, ಬೆಳೆಯುವಾಗ ಕುಟುಂಬದವರು, ದೊಡ್ಡವರಾಗಿ ತನ್ನ ಕಾಲ ಮೇಲೆ ತಾನು ನಿಲ್ಲುವ ಸಮಯದಲ್ಲಿ ಜೀವದ ಸಂಗಾತಿ, ಪುನಃ ವಯಸ್ಸಾದ ಕಾಲಕ್ಕೆ ತನ್ನ ಮಕ್ಕಳು.

ಈ ರೀತಿಯ ಜೀವನದ ಕಾಲ ಚಕ್ರದಲ್ಲಿ ಮನುಷ್ಯ ವಿವಿಧ ರೀತಿಯ ಪಾತ್ರಾಭಿನಯಗಳನ್ನು ಬದುಕ ನಿಭಾಯಿಸಲು ಮಾಡುತಿರುತ್ತಾನೆ.

ತಾನು ಬೆಳೆಯಬೇಕು ಹಾಗೂ ತನ್ನ ಜೊತೆಯಲ್ಲಿರುವವರನ್ನು ಬೆಳೆಸುತ್ತಾ ಸಾರ್ಥಕತೆಯನ್ನು ಕಾಣುತ್ತಾನೆ.

ಪ್ರತಿಯೊಬ್ಬ ಮನುಷ್ಯ ತನ್ನ ಹೆತ್ತವರನ್ನು ಬಿಟ್ಟರೆ ಜೀವನದಲ್ಲಿ ಅತಿ ಹೆಚ್ಚು ಸಮಯ  ಕಳೆಯುವುದು ತನ್ನ ಸಂಗಾತಿಗಳ ಜೊತೆಯಲ್ಲಿ ಮಾತ್ರ.

ತನ್ನ ಮನದ ಭಾವ ಅಭಿವ್ಯಕ್ತಿಗಳಿಗೆ ಪ್ರತಿಯಾಗಿ ತನ್ನ ಜೀವದ ಗೆಳತಿ/ಗೆಳೆಯನನ್ನು ಹುಡುಕಿಕೊಳ್ಳುತ್ತಾವೆ. ತನ್ನ ಮಾತಿಗೆ ಕಿವಿಯಾಗುವ, ತನ್ನ ನೋವಿಗೆ ಸಾಂತ್ವನ ನೀಡುವ, ತನ್ನ ಗೆಲುವಿಗೆ ನಗುವಾಗುವ ಜೀವಂತ ಜೀವವನನ್ನು ಕಂಡುಕೊಳ್ಳುತ್ತಾನೆ.

ನಿಮಗೆ ಗೊತ್ತು ಮನುಷ್ಯ ಸಂಘ ಜೀವಿ. ಒಂಟಿತನಕ್ಕೆ ಬೇಕು ಒಂದು ಬ್ರೇಕ್. ಅದೇ ಹೆಣ್ಣಿಗೆ ಗಂಡು ಗಂಡಿಗೆ ಹೆಣ್ಣು ಜೋಡಿ.

ಹೊಸ ಜೀವ ಜೀವನದ ಪಾಲನ್ನು ಹೊಂದಿರುವ ಜೀವದ ಸಂಗಾತಿಯನ್ನು ಎಂದು ಮರೆಯಲಾರೆವು. ಒಂದು ಕ್ಷಣವು ಬಿಟ್ಟಿರಲಾರದಂತಹ ಬಂಧದ ಸೃಷ್ಟಿಯಾಗುವುದು ಹೇಗೆ ತಿಳಿಯದು, ಗೊತ್ತಿಲ್ಲ.

ಒಂದು ಕ್ಷಣ ಜಗಳ, ಒಂದು ಕ್ಷಣ ಮುನಿಸು, ಇನ್ನೊಂದು ಕ್ಷಣ ಪ್ರೀತಿ, ಮತ್ತೊಂದು ಕ್ಷಣ ಕಕ್ಕುಲಾತಿ. ತಮ್ಮಗಳ ಸಂತೋಷವನ್ನು ಮಕ್ಕಳ ನಗುವಿನಲ್ಲಿ ಕಾಣುವ ಅದೇಷ್ಟೋ ಗಂಡ ಹೆಂಡತಿಯರನ್ನು ನಾವು ಕಾಣಬಹುದು.

ತಮ್ಮ ಮುಂದಿನ ಪೀಳಿಗೆಯ ಏಳ್ಗೆಗಾಗಿ ತಮ್ಮ ಜೀವನವನ್ನು ಸವೆಸುವ ಅದೇಷ್ಟೋ ಅಪ್ಪ ಅಮ್ಮಂದಿರ ಕನಸನ್ನು ಯಾರು ಕಡೆಗಣಿಸಲಾರರು.

ಇಂದಿನ ಮಕ್ಕಳೇ ಮುಂದಿನ ಜವಬ್ಧಾರಿ ಪ್ರಜೆಗಳು.

ಕುಟುಂಬದ ಗಟ್ಟಿ ವ್ಯವಸ್ಥೆಗೆ ಮದುವೆಯೊಂದು ಸಾಧನವೇ ಸರಿ. ಜೀವನವೆಂಬ ಗಾಡಿಗೆ ಗಂಡು ಹೆಣ್ಣು ಎಂಬ ಎರಡು ಚಕ್ರಗಳು. ಒಂದನ್ನೊಂದು ಎಂದು ಬಿಟ್ಟಿರಲಾರವು.

ಏನೇ ವೈಮನಸ್ಸು ಬಂದರೂ ಕ್ಷಣಾರ್ಧದಲ್ಲಿ ಪರಿಹರಿಸಿಕೊಂಡು ಪುನಃ ತನಗೆ ನೀನು, ನೀನಗೆ ನಾನು ಎಂದುಕೊಂಡು ಜೀವನ ಸಾಗಿಸುವಂತೆ ಮಾಡುವ ಮದುವೆಯ ಜಾದುವನ್ನು ಯಾರು ಗಮನಿಸದೆ ಇರಲಾರರು.

ಮುಂದಿನ ದಿನದ ಕನಸ್ಸಿಗೆ ಕನಸಾಗಿ, ಹೆಗಲಾಗಿ, ಅಸರೆಯಾಗಿ, ಧೈರ್ಯಕೊಡುವ ಗೆಳೆಯನಾಗಿ, ಯಾವಾಗಲೂ ಕಾಳಜಿ ವಯಿಸುವ ಮನೆಯ ಒಡತಿಯಾಗಿ, ಕಾಯುವ ಕಾಲವು ಜೊತೆಯಿರುವ ಸಂಗಾತಿಗೆ ನಮೋ ನಮಃ.

ವರುಷ ವರುಷವು ಉತ್ಸಾಹದ ಚಿಲುಮೆಯಾಗಿ ಪರಸ್ಪರ ಬಾಳುವಂತೆ ನಿರ್ಧಾರ ಮಾಡಿಕೊಳ್ಳುವ ದಿನವೇ ಈ ಮದುವೆಯ ದಿನ.

ಈ ದಿನ ಹೀಗೆ ಹೊಸತನದಿಂದ ಮುಂದೆಂದೂ ವರುಷ ವರುಷವೂ ಬರಿತಿರಲಿ ಈ ಜೋಡಿಗಳಿಗೆ. ನಿತ್ಯ ಯುಗಾದಿಯ ರೀತಿಯಲ್ಲಿ.

ಅನುಭವಿಸಿದ ಅನುಭವಗಳೇ ಮುಂದಿನ ದಿನಗಳಿಗೆ ಸ್ಪೂರ್ತಿ ಮತ್ತು ಮಾರ್ಗದರ್ಶಿಯಾಗಬೇಕು. 

ಈ ಜಗತ್ತು ಇರುವವರೆಗೂ ಈ ಒಂದು ಸಂಬಂಧ ಎಲ್ಲಾ ಸಂಬಂಧಗಳಿಗೆ ಮಾದರಿಯಾಗಿ ಹೊಸ ಬೆಳಕಾಗಿ ಯಾವಾಗಲೂ ಪ್ರಕಾಶಿಸುರುತ್ತದೆ. 

ಹೆಣ್ಣು ಗಂಡುಗಳಿರುವವರೆಗೂ ಉಳಿದಿರುವುದು ಮದುವೆ ಮಾತ್ರ. ಅದೇ ಎಲ್ಲಾ ಸಂಬಂಧಗಳ ಹುಟ್ಟಿಗೆ ಜೀವ.