ಬುಧವಾರ, ಸೆಪ್ಟೆಂಬರ್ 12, 2018

ಹಬ್ಬದ ಶುಭಾಶಯಗಳು

ಹಬ್ಬವೆಂದರೇ ನಮ್ಮ ಜಂಜಾಟದ ಬದುಕಿಗೆ ಒಂದು ಸಣ್ಣ ಬ್ರೇಕ್ ಕೊಟ್ಟು ಮನೆ ಮಂದಿಯೊಂದಿಗೆ ಸಂತೋಷದಿಂದ ಕೂಡಿ ಕಳೆಯುವ ಒಂದು ದಿನ. 

ನಮ್ಮ ದೇಶದ ಸಂಸ್ಕೃತಿ ಹಿರಿಮೆಯೆಂದರೇ ಪ್ರತಿ ಮಾಸದಲ್ಲೂ ಒಂದಲ್ಲ ಒಂದು ಹಬ್ಬವಿರುತ್ತದೆ. ಹಬ್ಬವೆಂದರೇ ಕೇಳಬೇಕೆ.. ? ಸಿಹಿ ತಿಂಡಿ, ಹೊಸ ಬಟ್ಟೆ, ಹೊಸ ಸಂತೋಷ ಮತ್ತು ಹೊಸ ಭರವಸೆಯ ನೋಟ.

ಮನಸ್ಸಿಗೆ ಖುಷಿಯನ್ನು ಕೊಡುವ ಹಬ್ಬಗಳ ಆಚರಣೆಯೇ ಚೆಂದ.  ಒಂದೊಂದು ಹಬ್ಬಕ್ಕೂ ಒಂದೊಂದು ಪುರಾಣ ಕಥೆ ಕಾರಣಗಳುಂಟು.

ನಾನಾ ಬಗೆಯ ಹಬ್ಬಗಳನ್ನು ಆಚರಿಸಲು ಮನೆಮಂದಿಯೆಲ್ಲಾ ಕಾತುರತೆಯಿಂದ ಕಾಯುತ್ತಿರುತ್ತಾರೆ. ಆ ಕೆಲಸ ಈ ಕೆಲಸಗಳೆಂದು ಮನೆಯವರೆಲ್ಲಾ ಎಲ್ಲೇಲ್ಲೊ ಹೋಗಿದ್ದರೇ ಮನೆಯಲ್ಲಿರುವ ಹೆತ್ತವರು ತನ್ನ ಮಗ ಮಗಳು ನಾಳೆಯ ಹಬ್ಬಕ್ಕೆ ಬರುತ್ತಾರೆ, ಬರುವರು ಎಂದು ಕಾಯುತ್ತಾರೆ.

ಅವರಿಗೆ ಅದರಲ್ಲಿಯೇ ಸಂತೋಷ.

ದೂರದ ಜೀವಗಳಿಗೆ ಹಬ್ಬಕ್ಕಾಗಿ ಊರಿಗೆ ಹೋಗುವ ತವಕ . ಒಂದು ರಜೆಯ ಜೊತೆಗೆ ಇನ್ನೊಂದೆರಡು ದಿನಗಳ ರಜೆಯನ್ನು ಗುಜರಾಯಿಸಿ ಹೋದರಾಯ್ತು ಎನ್ನುವ ಸಂಭ್ರಮ.

ಯಾರಿಗೆ ರಜಾ ದಿನಗಳು ಬೇಡಾ ಹೇಳಿ?

ಪ್ರತಿಯೊಂದು ಹಬ್ಬಕ್ಕೂ ಒಂದೊಂದು ವಿಶಿಷ್ಟ ಪದ್ಧತಿ. ಪ್ರತಿಯೊಂದು ಹಬ್ಬವೂ ವಿಭಿನ್ನ. ಈ ಹಬ್ಬಕ್ಕೆ ಈ ಅಡುಗೆಯನ್ನೇ ಮಾಡಬೇಕು. ಒಂದೊಂದು ದೇವರಿಗೂ ಒಂದೊಂದು ಹಬ್ಬವಿದೆ ನಮ್ಮ ಊರುಗಳಲ್ಲಿ. ಒಂದೊಂದು ದೇವರಿಗೂ ಒಂದೊಂದು ಬಗೆಯ ಭಕ್ಷ್ಯ ಬೋಜನಗಳ ನೇವೈದ್ಯವಿಡಬೇಕು.

ಯಾವುದೇ ಹಬ್ಬಕ್ಕೆ ಸಿದ್ಧವಾಗುವುದನ್ನು ನಮ್ಮ ಊರುಗಳಲ್ಲಿ ನೋಡಬೇಕು. ಆ ರೀತಿಯಲ್ಲಿ ಹಬ್ಬಕ್ಕಾಗಿ ಸಜ್ಜಾಗುವ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳಬೇಕು ಅನಿಸುತ್ತದೆ. ಇಡೀ ಊರೇ ಹೊಸತನವನ್ನೊದ್ದು ಕೂತಿರುತ್ತದೆ. ಪ್ರತಿ ಮನೆಯು ಸುಣ್ಣ ಬಣ್ಣ ಬಳಿದುಕೊಂಡು, ಹಸಿರು ತೋರಣಗಳನ್ನು ತೊಟ್ಟುಕೊಂಡು, ಮನೆಯ ಹಜಾರ ಹಸಿ ಸಗಣಿಯಿಂದ ಸಾರಿಸಿ, ರಂಗೋಲಿ ಚಿತ್ತಾರವನ್ನು ಬರೆದುಕೊಂಡು ನವ ವಧುವಿನಂತೆ ಸ್ವಾಗತಿಸುರುತ್ತಿದೆ.

ವಾವ್.. ! ನೆನಸಿಕೊಂಡರೇ ಮೈ ಜುಂ ಎನಿಸುತ್ತದೆ. ಅಯ್ಯೊ ಇಂಥಾ ಹಬ್ಬದಲ್ಲಿ ಯಾವಾಗ ಬಾಗಿಯಾಗೋಣ ಅನಿಸುತ್ತಿದೆ. 

ನಮ್ಮ ಈ ಹಬ್ಬಗಳೆಂದರೇ ಚಿಲಿಪಿಲಿ ಮಕ್ಕಳ ಹಬ್ಬವೇ ಸರಿ. ನಾನಾ ಬಗೆಯ ಹಬ್ಬಗಳಿರುವುದೇ ಮಕ್ಕಳ ಸಂತೋಷಕ್ಕಾಗಿ.  ಚಿಕ್ಕ ಚಿಕ್ಕ ಮಕ್ಕಳುಗಳು ಹಬ್ಬಗಳಿಗಾಗಿ ಕಾಯುವುದನ್ನು ಕಾಣಬಹುದು.

ಯಾವಾಗ ಈ ಹಬ್ಬ ಬರುವುದು? ಈ ಹಬ್ಬಕ್ಕೆ ನನಗೆ ಇದು ಕೊಡಿಸಬೇಕು. ಈ ಹಬ್ಬಕ್ಕೆ ನನಗೆ ಈ ಉಡುಪು ಖರೀದಿಸಬೇಕು. ಅಮ್ಮಾ ಈ ಹಬ್ಬಕ್ಕೆ ಆ ಸಿಹಿ ತಿನಿಸು ಮಾಡು.. ಹೀಗೆ ಮಕ್ಕಳುಗಳು ನಾನಾ ಬೇಡಿಕೆಗಳನ್ನು  ತನ್ನ ಹೆತ್ತವರ ಮುಂದೆ ತಿಂಗಳುಗಳು ಅಥವಾ ವಾರಗಳ ಮುಂಚೆ ಇಡುವುದನ್ನು ಕೇಳುವುದೇ ಚೆಂದ.

ಹಬ್ಬವೆಂದರೇ ಎಲ್ಲಾ ಓಕೆ! ಸಾಲಾ ಮಾಡಿಯಾದರೂ ತುಪ್ಪ ತಿನ್ನಬೇಕು ಎನ್ನುವ ರೀತಿಯಲ್ಲಿ ಮನೆಯ ಮಂದಿಯೆಲ್ಲ ಅವರವರ ಹಿತಿಮಿತಿಗೆ ಅನುಸಾರವಾಗಿ ಸಂಭ್ರಮದೊಂದಿಗೆ ತಯಾರಿಗೊಳ್ಳುತ್ತಾರೆ.

ಹಿಂದಿನ ನಮ್ಮ ಹಿರಿ ತಲೆಗಳು ದಿನಾಂಕ ತಿಂಗಳುಗಳ ಲೆಕ್ಕವನ್ನು ಮಾಡುತ್ತಿರಲಿಲ್ಲ. ಹಬ್ಬಗಳ ನ್ನೇ  ತಮ್ಮ ದಿನ ಮಾನಗಳನ್ನು ಗುರುತಿಸಲು ಬಳಸಿಕೊಳ್ಳುತ್ತಿದ್ದದು ದಿಟ. ಈ ಹಬ್ಬದ ಮುಂದೆ ತಾನೇ ನೀನು ಹುಟ್ಟಿದ್ದು. ಆ ಹಬ್ಬ ಆದ ಮೇಲೆ ತಾನೆ ನೀನಗೆ ಕೆಲಸ ಸಿಕ್ಕಿದ್ದು. ಆ ಹಬ್ಬದ ದಿನ ತಾನೇ ನಾನು ನೀನಗೆ ಸಾಲ ಕೊಟ್ಟಿದ್ದು. ಹೀಗೆ ಎಲ್ಲಾ ಹಬ್ಬದ ರೇಪರೇನ್ಸ್ ಮೇಲೆ ಗೊತ್ತು ಮಾಡಿಕ್ಕೊಳ್ಳುತ್ತಿದ್ದರು. ಇದರಿಂದ ಗೊತ್ತಾಗುತ್ತದೆ ನಮ್ಮ ಹಬ್ಬಗಳ ಮಹತ್ವ ಎಷ್ಟು ಎಂಬುದು.

ಹೀಗೆಲ್ಲಾ ತಯಾರಿಯ ಮಧ್ಯೆ  ಆಚರಿಸುತ್ತಿದ್ದ ಹಬ್ಬಗಳು ಈಗ ಅತಿ ವಿರಳ. ಇಂದು ನಗರದ ಛಾಯೆ ಹಳ್ಳಿಗಳಿಗೂ ಚಾಚಿದೇಯೇನೋ ಗೊತ್ತಿಲ್ಲ. ಈ ಹಿಂದೆ ಇದ್ದ ಸಂಭ್ರಮ ಕಡಿಮೆಯಾಗಿದ್ದರೂ ಪ್ರತಿ ಮನೆಯಲ್ಲೂ ಇನ್ನೂ ಆ ಸಂತೋಷದ ಕ್ಷಣಗಳು ಮರೆಯಾಗಿಲ್ಲ ಮತ್ತು ಅದು ಎಂದಿಗೂ ಮರೆಯಾಗುವುದಿಲ್ಲ. ಎಲ್ಲಾರೂ ಈ ವೇಗದ ಜೀವನದಲ್ಲಿ ಬದುಕುತ್ತಿದ್ದರೂ ಇರುವ ಇಂಥ ಚಿಕ್ಕ ಚಿಕ್ಕ ಸಂತೋಷದ ಕ್ಷಣಗಳು ನಮ್ಮ ಬದುಕಿಗೆ ಟಾನಿಕ್ ಇದ್ದಂತೆ.

ನಗರದ ಬದುಕು ನಮ್ಮ ನಮ್ಮ ನಲಿವಿನ ಕ್ಷಣಗಳನ್ನು ಸ್ವಲ್ಪ ಸ್ವಲ್ಪ ಕಿತ್ತುಕೊಳ್ಳುತ್ತಿದೆಯೇನೋ ಅನಿಸುತ್ತಿದೆ. ಏನೇ ಮಾಡಿದರೂ ಅದು ತನಗೆ ತನ್ನವರಿಗೆ ಮಾತ್ರ ಅನಿಸುವಂತಿದೆ. ಹಳ್ಳಿಯವರ ಬದುಕಿನ ಜೀವಂತಿಕೆಯ ಮುಂದೆ ನಮ್ಮಗಳ ದೌಲತ್ತು ಯಾವ ಉನ್ನತಿಯನ್ನು ಗಳಿಸುತ್ತಿಲ್ಲ ಅಲ್ಲವಾ?

ಹಬ್ಬಗಳನ್ನು ಸಹ ನಮ್ಮ ಬಿಡುವು ಇದ್ದಾಗ ಮಾಡಿಕೊಂಡರಾಯ್ತು ಎನ್ನುವಂತಾಗಿದೆ. ಕೆಲವೊಮ್ಮೆ ಈ ಹಬ್ಬಗಳನ್ನು ವಿಕೇಂಡ್ ಗೆ ಮುಂದೂಡಿಕೊಂಡು ನಮ್ಮ ಪ್ರೀ ಸಮಯಕ್ಕೆ ತಕ್ಕಂತೆ ಕಾದಿದ್ದುಕೊಂಡು  ಅನುಸರಿಸಿಕೊಂಡು ಸಂಭ್ರಮಿಸುವಷ್ಟರ ಮಟ್ಟಿಗೆ ಸಮಯವಿಲ್ಲವರವಾಗಿದ್ದೇವೆ.

ಸಮೊಹದ ಸಂತೋಷ ಗೌಣವಾಗುತ್ತಿದೆ. ಕೇವಲ ತಾನಾಯಿತು ತನ್ನ ಸಂಸಾರವಾಯಿತು ಅನಿಸುವ ಮಟ್ಟಿಗೆ ಸ್ವಾರ್ಥಿಗಳಾಗುತ್ತಿದ್ದೇವೆನೋ ಗೊತ್ತಿಲ್ಲ. ಯಾವುದಕ್ಕೂ ಸಮಯವಿಲ್ಲದವರಂತೆ ಎಲ್ಲಾವನ್ನು ವೇಗದ ಬದುಕಿಗೆ ಹೊಂದುವಂತೆ ಮಾರ್ಪಾಡು ಮಾಡಿಕೊಳ್ಳುತ್ತಿದ್ದೇವೆ.  ಸಂತೋಷವನ್ನು ಅಳೆದು ತೂಗಿ ಸಂಭ್ರಮಿಸುವಂತಹ ದಿನಮಾನಗಳಲ್ಲಿ ನಾವೆಲ್ಲಾ ಬದುಕುತ್ತಿರುವುದು ದಿಗ್ಬ್ರಮೆಯನ್ನುಂಟು ಮಾಡುತ್ತಿದೆ.

ಆದರೂ ಹಬ್ಬಗಳನ್ನು ನಮಗೆ ಬೇಕಾದ ಸಮಯದಲ್ಲಿ ಮಾಡಿಕೊಳ್ಳುವ ಮಟ್ಟಿಗೆ ನಾವುಗಳೆ ನಿರ್ಧರಿಸಿಕೊಳ್ಳುತ್ತಿರುವುದು ವಿಪರ್ಯಾಸ. ಇಡೀ ದೇಶವೆ ಸಂಭ್ರಮಿಸುತ್ತಿರುವಾಗ ನಾವಂದಿಷ್ಟು ಮಂದಿ ಕೆಲಸ, ಅದು ಇದು ಎಂದುಕೊಂಡು ವಿಕೇಂಡ್ ಗೆ ಮುಂದುಡಿಕೊಂಡು ದುಡಿಯುವುದು!

ಇದನ್ನು ಸ್ವಲ್ಪ ಬದಲಾಯಿಸಿಕೊಳ್ಳೊಣ. ನಮ್ಮಗಳ ಈ ಚಿಕ್ಕ ಚಿಕ್ಕ ಸಿಹಿ ಕ್ಷಣಗಳೇ ನಮ್ಮ ನಮ್ಮ ಜೀವ ಜೀವಂತಿಕೆಗೆ ಸಾಕ್ಷಿ. ಮುಂದಿನ ಪೀಳಿಗೆಗೆ ಕೇವಲ ಬದುಕು ಅಂದರೇ ದುಡಿಮೆ ಮಾತ್ರ ಎಂಬುದು ಎಂದು  ಮಾದರಿಯಾಗಬಾರದು. ದುಡಿಮೆಗೂ ಮೀರಿದ್ದು ಬೇರೆ ಇನ್ನೂ ಏನೇನೋ ಇದೆ ಅದನ್ನು ಅನುಭವಿಸಿ ಕೂಡಿ ಅನುಕ್ಷಣವೂ ಅರ್ಥಪೂರ್ಣವಾಗಿ ಪ್ರಕೃತಿಯೊಂದಿಗೆ ಸಹಜವಾಗಿ ಬದುಕುವ ಬದುಕುವಂತೆ ಪ್ರಯತ್ನಿಸೋಣವಾ..

ಹಬ್ಬದ ಶುಭಾಶಯಗಳು!!