ಬುಧವಾರ, ಮಾರ್ಚ್ 14, 2018

ನಿಮ್ಮ ಮತ ದುರ್ಗದ ಭವಿಷ್ಯ

ಮತ್ತೆ ಕರ್ನಾಟಕ ವಿಧಾನಸಭೆಗೆ ಚುನಾವಣೆ ಬರುತ್ತಿದೆ. ಐದು ವರುಷ ಅದು ಹೇಗೆ ಕಳೆದು ಹೋಯ್ತು ಅನ್ನುವಷ್ಟರಲ್ಲಿಯೇ, ಇನ್ನೊಂದು ಎಲೆಕ್ಷನ್ ಮುಂದಿದೆ.

ಪುನಃ ಎಲ್ಲಾ ರಾಜಕೀಯ ಹಳೆ ಹೊಸ ನಾಯಕರುಗಳು ತಮ್ಮ ಹಳೆ ಜುಬ್ಬಗಳನ್ನು ಕೊಡವಿ ಎದ್ದು ಕೂತಿದ್ದಾರೆ.

ಹೌದು. ಈ ಮೂರು ತಿಂಗಳು ತಮ್ಮ ಮುಖಗಳನ್ನು ಮತದಾರರನ ಮುಂದೆ ಇಟ್ಟು ಹೇಗಾದರೂ ಮಾಡಿ ಗೆದ್ದು ಬಿಟ್ಟರೆ..! ಮುಂದೆ ಮತ್ತೈದು ವರುಷ ಹೇಗೋ ಏನೋ ಖುಷಿಯಾಗಿ ಅಧಿಕಾರ ಅನುಭವಿಸಬಿಡಬಹುದು. ಎಂಬುದು ಅವರ ಯೋಜನೆ?

ಈಗಿರುವ ಸಿದ್ಧಣ್ಣ ಸರ್ಕಾರ ತಾನು ಈಗಾಗಲೇ ಗೆದ್ದು ಬಿಟ್ಟಿವಿ ಎಂಬಂತೆ ನಿತ್ಯ ಟಿ.ವಿ ಪೇಪರ್ ಗಳಲ್ಲಿ ಸದಾ ’ಸಿದ್ಧ' ಸರ್ಕಾರ ಎಂದು ಜಾಹೀರಾತುಗಳನ್ನು ನಿತ್ಯ ನೀಡುತ್ತಿದೆ.  ಪುನಃ ನಮ್ಮ ಸರ್ಕಾರವೇ ಈ ಕರ್ನಾಟಕಕ್ಕೆ ಗತಿ ಎಂಬಂತೆ ಮಾತನ್ನಾಡುತ್ತಿದ್ದಾರೆ.

ಬಿ.ಜೆ.ಪಿ ಈ ಭಾರಿ ನಾವೇ . ಮೋದಿ ಮೂರು ಸಲ ಬಂದು ಹೋಗಿದ್ದಾರೆ. ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ. ಇಲ್ಲಿಯು ನಮ್ಮದೇ ಈ ಭಾರಿ ಎಂದು ಮೋದಿ ಹಿಂದೆ ಬಿದ್ದಿದೆ.

ಅಷ್ಟರ ಮಟ್ಟಿಗೆ ಮೋದಿ ಹೆಸರು ಇಲ್ಲಿ ಓಡುತ್ತಿದೆ ಅನ್ನಿಸುತ್ತಿದೆ!

ಜೆ.ಡಿ.ಎಸ್ ಪುನಃ ನಮ್ಮ ಕೈಗೆ ಅಧಿಕಾರ ಕೊಡಿ ನಾವೆನೆಂದು ತೋರಿಸುತ್ತಿವಿ. ಎಂದು ಹಸಿರು ಶಾಲು ಹೆಗಲು ಮೇಲೆ ಹಾಕಿಕೊತ್ತಿದ್ದಾರೆ.

ಹೀಗೆ ಈಗಾಗಲೇ ಅಧಿಕಾರದ ರುಚಿ ನೋಡಿರುವ ಪಕ್ಷಗಳು ಅಧಿಕಾರದ ಗದ್ದುಗೆ ಏರಲು ಪರಿಪಾಟು ಪಡುತ್ತಿದ್ದರೆ. ಹೊಸ ಪಕ್ಷಗಳ ಉಗಮ, ಹೊಸ ನಾಯಕರ ಮೊಳಿಕೆಗಳು ಅಲ್ಲಿ ಇಲ್ಲಿ ಕಾಣಿಸುತ್ತಿವೆ. ನೋಡಬೇಕು ಯಾರು ಏನ್ ಆಗುತ್ತಾರೆಂದು.

ಆದರೇ ಮತದಾರನ ಮರ್ಮ ಚುನಾವಣೆಯಾಗಿ ಪಲಿತಾಂಶ ಬಂದ ಅನಂತರವೇ ತಾನೇ ಗೊತ್ತಾಗುವುದು!

ಆದರೇ.. ನಮ್ಮ ಚಿತ್ರದುರ್ಗ ನಗರ ಮತ್ತು ಕ್ಷೇತ್ರ ಎಷ್ಟೇ ಚುನಾವಣೆಗಳು ಬರಲಿ ಹೋಗಲಿ ತಾನು ಮಾತ್ರ ಕ್ಷಣ ಮಾತ್ರವು ಬದಲಾಗುವುದಿಲ್ಲ ಎಂಬಂತೆ, ದುರ್ಗದ ಮೇಲಿರುವ ದೊಡ್ಡ ಕಲ್ಲಿನೋಪಾದಿಯಲ್ಲಿ ದೂಳು ಮುಚ್ಚಿಕೊಂಡು ಕೂತಿದೆ.

ನನಗೆ ಆಶ್ಚರ್ಯ ಮತ್ತು ಅಚ್ಚರಿಯೆಂದರೇ ಇಲ್ಲಿಯವರೆಗೆ ಅದು ಎಷ್ಟೋ ಎಲೆಕ್ಷನ್ ಗಳು ಮುಗಿದು ಹೋಗಿವೆ. ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್, ಜಿಲ್ಲಾ ಪಂಚಾಯಿತಿ ಇತ್ಯಾದಿ. ಆದರೂ ಸಹ ಈ ನಗರಕ್ಕೆ ಒಂದೇ ಒಂದು ಚೂರು ನವ ನವೀನತೆಯನ್ನು ಒಬ್ಬೇ ಒಬ್ಬ ನಾಯಕನಿಗೂ ಕೊಡಲು ಸಾದ್ಯವಾಗಿಲ್ಲವಲ್ಲವೆಂಬುದು...

ಹಿಂದುಳಿದ ಜಿಲ್ಲೆ ಎಂದು ಹೆಸರುವಾಸಿಯಾಗಿರುವುದೇ ಇದರ ಹಿರಿಮೆ.

ಅದೇ ಒಂದು ಮೈನ್ ರೋಡ್ ಅದಕ್ಕೆ ಟಾರ್ ಹಾಕಿ ಯಾವ ಕಾಲವಾಯಿತೋ (ಬ್ರಿಟಿಷರ) ದೇವರಿಗೆ ಗೊತ್ತು.

ಹಲವು ವರುಷಗಳ ಹಿಂದೆ ನಡೆದ ಸಾಹಿತ್ಯ ಸಮ್ಮೇಳನದ ಆಶೀರ್ವಾದದಿಂದ ರೋಡ್ ಮದ್ಯ ರಸ್ತೆ ವಿಭಾಗ ಮಾಡಿದ್ದು ಬಿಟ್ಟರೆ ಏನೆಂದರೂ ಏನೂ ಬದಲಾಗಿಲ್ಲ ಇಂದಿಗೂ.

ಅದೇ ದೂಳು ದೂಳು ಮತ್ತು ದೂಳು. ಯಾವುದೇ ಹೊಸತನದ ಶುದ್ಧ ಗಾಳಿ ಯಾವ ರೀತಿಯಲ್ಲೂ ಸುಳಿದಿಲ್ಲ. ಯಾವುದೇ ಹೊಸ ಯೋಜನೆಯ ಸುದ್ಧಿಯೇ ಇಲ್ಲ ಬಿಡಿ.

ಮೈನ್ ರೋಡ್ ಬಿಟ್ಟು ಗಲ್ಲಿ, ಬಡಾವಣೆಗಳ ಕಡೆ ಕಣ್ಣರಿಸಿದರೇ ಅಲ್ಲೂ ದೂಳ್ ದೂಳ್ ಮತ್ತು ದೂಳ್. ಆಗೋ ಹೀಗೋ ಇದ್ದ ರಸ್ತೆಗಳನ್ನು ಒಳ ಚರಂಡಿ ವ್ಯವಸ್ಥೆ ಮಾಡುತ್ತಿವೀ ಎಂದು ಚೆನ್ನಾಗಿ ಗುಂಡಿಗಳನ್ನು ಅಗಿದು ಅವನ್ನು ಮುಚ್ಚದೇ, ಆಗಲೇ ಅದ್ವಾನವಾಗಿದ್ದ ಈ ರೋಡ್ ಗಳಿಗೆ ಚಿರಾ ಮುಕ್ತಿ ದಯಾಪಾಲಿಸಿ, ದೂಳ್ ಭಾಗ್ಯ ಕೊಟ್ಟು ಕೂರಿಸಿಬಿಟ್ಟರು.

ಉರಿಯುವ ಬಿಸಿಲಲ್ಲಿ ಒಂದೇ ಒಂದು ಸುತ್ತು ನಗರ ದರ್ಶನ ಮಾಡಿದರೇ ತಲೆ ನೋವು, ಉಸಿರು ಉಬ್ಬಸ ಕಾಯಂ. ಎನ್ನುವುದು ಇಲ್ಲಿಗೆ ಬೇಟಿ ಕೊಡುವ ಅಕ್ಕಪಕ್ಕದ ಹಳ್ಳಿಗರ ಮಾತು.

ಎಲ್ಲಾರಿಗೂ ಯಾವಾಗಲೂ ಮೊಡುವ ಪ್ರಶ್ನೇ ಒಂದೇ. ಅಲ್ಲಾ ಅಕ್ಕ ಪಕ್ಕದ ಎಲ್ಲಾ ನಗರಗಳು ಅಷ್ಟು ವೇಗವಾಗಿ ಹೊಸತನವನ್ನು ಪಡೆದುಕೊಂಡಿದ್ದರೇ ಈ ನಮ್ಮ ನಗರ ಇನ್ನೂ ೧೯೭೯ ತನವನ್ನು ಅದು ಹೇಗೆ ಕಾಪಿಟ್ಟುಕೊಂಡಿದೆಯೆಂಬುದು?

ನನಗಂತೂ ಅರ್ಥವಾಗುತ್ತಿಲ್ಲ. ಇತಿಹಾಸ ಪ್ರಸಿದ್ಧ ನಗರಕ್ಕೆ ಏಕೆ ಈ ರೀತಿಯ ಶಾಪವೊ? ತಿಳಿಯದಾಗಿದೆ.

ರಾಜಕೀಯವಾಗಿ ಅಧಿಕಾರ ಮಾತ್ರ ಪ್ರತಿ ಭಾರಿಯು ಒಬ್ಬೊಬ್ಬರ ಪಾಲಗುತ್ತಿರುತ್ತದೆ. ಆದರೇ ಅವರುಗಳು ತಮ್ಮ ಕ್ಷೇತ್ರದ ಅಭಿವೃದ್ಧಿ ಅಥವಾಉದ್ಧಾರದ ಬಗ್ಗೆ ಯಾಕೆ ಇನ್ನೂ ಯಾಕೆ ತಲೆ ಕೆಡಿಸಿಕೊಂಡಿಲ್ಲವೋ ನನಗಂತೂ ಗೊತ್ತಿಲ್ಲ.

ನಾನು ಪ್ರಸ್ತಾಪಿಸಿದ್ದು ರಸ್ತೆ ಸಮಸ್ಯೆಯನ್ನೊಂದು. ಇನ್ನೂ ನಾನ ಬಗೆಯ ವಿಷಯಗಳು, ಸಮಸ್ಯೆಗಳ ಸರಮಾಲೆ ಈ ಜಿಲ್ಲೆಯನ್ನು ಸುತ್ತಿಕೊಂಡಿದೆ ಎಂದರೇ ತಪ್ಪಿಲ್ಲ.

ಅಲ್ಲ ನಮ್ಮ ನಗರದ ಮತದಾರರಿಗೇನೂ ಯಾರಾದರೂ ಮಂತ್ರ ಗಿಂತ್ರ ಮಾಡಿಸಿದ್ದಾರೆಯೇ? ಅದು ಹೇಗೆ ಪ್ರತಿ ಭಾರಿಯು ಒಂದೇ ಒಂದು ಮಾತನ್ನಾಡದೇ ಬೇಕಾದ ಅಭ್ಯರ್ಥಿಯನ್ನು ಚುನಾಯಿಸಿ ಬೆಂಗಳೂರಿಗೂ, ದೆಹಲಿಗೂ ಪ್ರತಿ ಭಾರಿಯು ಕಳಿಸಿಕೊಡುತ್ತಾರೆ?

ಯಾಕೆ ಒಬ್ಬರೂ ಸಹ ತಮ್ಮ ಬಳಿಗೆ ಓಟು ಕೇಳಿಕೊಂಡು ಬರುವವರಿಗೆ ಯಾವೊಂದು ಬೇಡಿಕೆಗಳನ್ನು ಇಟ್ಟಿಲ್ಲ? ಯಾಕೆ ಇಂದಿಗೂ ಒಂದೇ ಒಂದು ಚುನಾವಣೆಯನ್ನು ಬೇಡ ಅಂದಿಲ್ಲ?  ಅದು ಏಕೆ ರಾಜಕೀಯ ಪುಡಾರಿಗಳ ಬಗ್ಗೆ ಒಂದಿಷ್ಟು ಸಿಟ್ಟಿಲ್ಲ?

ಇದು ನೆನ್ನೆ ಮೊನ್ನೆಯ ಕಥೆಯಲ್ಲ! ಸರಿ ಸುಮಾರು ೨-೩ ದಶಕಗಳಿಂದ ಚಿತ್ರದುರ್ಗ ದುರ್ಗ(ಮ)ವಾಗಿಯೇ ಇದೆ.

ಚಿಕ್ಕ ಮಗುವು ಸಹ ಗುರುತಿಸುತ್ತದೆ. ಬೇರೆ ಜಿಲ್ಲಾ ಕೇಂದ್ರಗಳೆಲ್ಲಾ ಆ ರೀತಿಯಲ್ಲಿ ಬೆಳೆದಿದ್ದರೆ ನಮ್ಮ ಊರು ಯಾಕೆ ಇನ್ನೂ ಹೀಗೆಯೇ ಇದೆ ಎಂದು.

ಅದು ಹೇಗೆ ಇಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಏನೂಂದು ಕೆಲಸವನ್ನು ಮಾಡದೇ ಪುನಃ ಪುನಃ ಸಲೀಸಾಗಿ ಗೆಲ್ಲುತ್ತಿದ್ದಾರೆ?

ನನಗಂತೂ ಪರಮಾಶ್ಚರ್ಯವಾಗುತ್ತದೆ. ಹಾಗೆಯೇ ದುಃಖವುವಾಗುತ್ತದೆ!

ಭದ್ರ ಮೇಲ್ದಾಂಡೆ  ಎನ್ನುವ ಮಾತನ್ನು ಇಲ್ಲಿನ ಜನ ಹಲವು ದಶಕಗಳಿಂದ ಕೇಳುತ್ತಲೇ ಕೇಳುತ್ತಲೇ  ಮುದುಕರಾದರೇನೋ.

ಅದರ ಸುದ್ಧಿ ಸುಳಿವು ಇನ್ನಾದರೂ ಇಲ್ಲ. ಅದು ಯಾವಾಗ ಆ ನೀರನ್ನು ಕುಡಿಯುವ ನೋಡುವ ಭಾಗ್ಯ ಬರುವುದೋ ನೋಡಬೇಕು.

ಮೊಲಭೂತ ಸೌಲಭ್ಯಗಳ ಕೊರತೆಯನ್ನು ಈ ಜಿಲ್ಲೆ ಮತ್ತು ನಗರ ಅನುಭವಿಸಿದಂತೆ ಬೇರೆ ಯಾವ ಕ್ಷೇತ್ರವು ಅನುಭವಿಸಿಲ್ಲ. ಇದು ಬರಸೀಮೆ ಬರಗಾಲ ನಿತ್ಯ ಕುಡಿಯುವ ನೀರಿಗೆ ಹಾಹಕಾರ. ಎಲ್ಲಾ ರಂಗಗಳಲ್ಲೂ ಏನೊಂದು ಅಭಿವೃದ್ಧಿ ಕಾಣದ ನತದೃಷ್ಟ ಜಿಲ್ಲೆ ಮತ್ತು ಜಿಲ್ಲಾ ಕೇಂದ್ರ.

ಆದರೇ ಇಲ್ಲಿ ಗೆದ್ದ ಯಾವೊಬ್ಬ ನಾಯಕನು ಅಭಿವೃದ್ಧಿಯನ್ನು ಮಾಡಲು ಸಾಸಿವೆ ಕಾಳಿನಷ್ಟು ಪ್ರಯತ್ನಪಟ್ಟಿದ್ದನ್ನು ನಾನಂತೂ ಕಂಡಿಲ್ಲ.

ಯಾವ ಅಸಂಬ್ಲಿಯಲ್ಲೂ ಎಂದೂ ನಮ್ಮ ನಗರದ ಸಮಸ್ಯೆಗಳ ಬಗ್ಗೆ , ಹೊಸ ಯೋಜನೆಗಳ ಬಗ್ಗೆ ಯಾವೊಬ್ಬ ನಾಯಕನು ಎಂದೂ  ಉಸಿರು ಬಿಟ್ಟಿರುವುದನ್ನು ನಾನಂತು ಕೇಳಿಲ್ಲ!

ತುಟಿ ಬಿಚ್ಚಿಲ್ಲ!

ನಮ್ಮ ನಗರದ ಮತದಾರರು ಹಸಿವಿನಂತವರು ಬಿಡಿ. ಇಲ್ಲಿಂದ ಆಯ್ಕೆಯಾಗಿರುವ ನಾಯಕರುಗಳು ಹಸಿವಿನ ಮನಸ್ಸಿನವರೇನಾ?

ಓ ಒನಕೆ ಒಬವ್ವ..! ಇನ್ನಾದರೂ.. ಈ ಭಾರಿಯಾದರೂ.. ಒಳ್ಳೆಯ ನಾಯಕನನ್ನು ಆರಿಸುವಂತಹ ಬುದ್ದಿಯನ್ನು ನಿನ್ನ ನಗರದ ಮತದಾರ ಪ್ರಭುವಿಗೆ ದಯವಿಟ್ಟು ದಯಪಾಲಿಸು.

ನಿನ್ನಲ್ಲಿರುವ ಒನಕೆಯ ಪಾಲಿನಷ್ಟನಾದರೂ ಕೆಚ್ಚನ್ನು/ಕಿಚ್ಚನ್ನು ನಿನ್ನೂರಿನ ನಗರದ ಮನ ಮಂದಿಗೆ ಕೊಡು.

ನಾನಂತೂ ಏನಾದರೂ ಹೊಸತನವನ್ನು ಈ ನಗರದಲ್ಲಿ ಈ ಚುನಾವಣೆಯನಂತರ ಕಾಣಲು ಬಯಸುವೆ. ಪ್ಲೀಜ್!

ಯಾವ ಪಕ್ಷದವರಾದರೂ ಪರವಾಗಿಲ್ಲ. ನಮಗೆ ಒಳ್ಳೆಯ ವ್ಯಕ್ತಿ ಬೇಕು! ಚಿತ್ರದುರ್ಗದ ಬಗ್ಗೆ ಪ್ರೀತಿಯಿರುವ ಮನಸ್ಸಿರಬೇಕು! ಏನಾದರೂ ಹೊಸ ಅನುಕೂಲವನ್ನು ಪೂರೈಸುವ ಕಾಳಜಿಯ ಮನುಷ್ಯನಾಗಿರಬೇಕು!

ಈ ಮನುಷ್ಯನ ಕಾಲದಲ್ಲಿ ಈ ಕೆಲಸವಾಯಿತು ಎಂದು ನಿನ್ನ ನಗರದ ಜನ ಮುಂದೆ ನೆನಪಿಸಿಕೊಳ್ಳುವಂತಹ ನಾಯಕ/ಜನಪ್ರತಿನಿಧಿ ನಮಗೆ ಬೇಕು.

ಬನ್ನಿ ಗೆಲ್ಲಿಸೋಣ. ಬದಲಿಸೋಣ. ಚಿತ್ರದುರ್ಗದ ನೋಟವನ್ನು.

ಮುಂದಿನ ಚುನಾವಣೆಯಲ್ಲಿ ದೂಳ್ ದೂಳ್ ಮಾಡಿ. ಕೆಲಸ ಮಾಡದೇ ಓಟು ಕೇಳುವ ಬಾಯ್ ಮಾತ್ ನಾಯಕರನ್ನು, ಗಿಲೀಟು ಕನಸ ಬಿತ್ತುವವರನ್ನಾ.

ನಿಮ್ಮ ಮತ ನಿಮ್ಮ ಕೈಯಲ್ಲಿ. ದುರ್ಗದ ಭವಿಷ್ಯ ನಿಮ್ಮಿಂದ!