ಗುರುವಾರ, ಡಿಸೆಂಬರ್ 30, 2021

ಹೊಸ ವರುಷದ ಹೊಸತನಕ್ಕೆ

ಕಳೆದ 2020 ವರುಷದಂತೆ ಈ ವರ್ಷವು ನಮ್ಮನ್ನೆಲ್ಲ ಕೊರೋನ ರೋಗ ಮತ್ತು ಅದರ ಭಯದಲ್ಲಿಯೇ ಕಳೆಯುವಂತೆ ಮಾಡಿಬಿಟ್ಟಿದೆ. 

ವರುಷದ ಪ್ರಾರಂಭದ ದಿನಗಳಲ್ಲಿ ವ್ಯಾಕ್ಸಿನ್ ಬಂತು ಇನ್ನು ಏನು ಎಲ್ಲಾ ಮಾಮೊಲಿ ಸ್ಥಿಗೆ ಮರಳಿದೆವು ಅಂದರೇ ಡೆಲ್ಟಾ ಅಂಥ ಎಲ್ಲಾ ಜನರನ್ನು ಚಿಂತೆಗಿಡು ಮಾಡಿತು. 

ಏಯ್ ಇನ್ನೂ ಎಲ್ಲಾ ಮುಗಿಯಿತು, ವರುಷದ ಕೊನೆಗೆ ಹೊಸ ವರುಷದಿಂದ ಆರಾಮಾಗಿ ಜೀವಿಸಬಹುದು ಅಂದರೇ ಒಮಿಕ್ರಾನ್ ನಾ ಬಂದೆ ಎಂದಿತು.

ಇದೀಗ​ ಈ ಕೊರೋನಗೆ ಕೊನೆಯಿಲ್ಲರಪ್ಪಾ ಎಂದು ಪುನಃ ಪ್ರತಿಯೊಬ್ಬರೂ ಯೋಚಿಸುವಂತೆ ಮಾಡಿ ಮುಂದಿನ ಹೊಸ ವರುಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೆವೆ.


ವರುಷ ಎಂದರೇ ಮುನ್ನೂರೈವತೈದು ದಿನಗಳು. ಒಂದೊಂದು ದಿನವು ಒಂದೇ ರೀತಿಯಲ್ಲಿರುವುದಿಲ್ಲ​.

ಹೊಸ ದಿನ ಹೊಸತನ​. ಹೊಸ ಭರವಸೆಯ ಬೆಳಕು. ಅದಕ್ಕೆ ನಾಳೆಯೆಂದರೇ ಏನೋ ಖುಷಿ. ಗೊತ್ತಿಲ್ಲದೇ ಬರುವ ಸಮಯದ ನೂತನತೆಗೆ ಮನಸ್ಸು ಮರುಗಿ ಕರಗಿ ನರ್ತಿಸುತ್ತದೆ. 

ಹೊಸ ವರುಷವೆಂದರೇ ಕೇಳಬೇಕೇ ಒಂದಲ್ಲಾ ಎರಡಲ್ಲ ಇಡೀ ದಿನಗಳ ಕಟ್ಟೆ ಕೈಯಲ್ಲಿರುತ್ತದೆ. ಅದಕ್ಕೆ ಪ್ರತಿಯೊಬ್ಬರೂ ಹೊಸ ವರುಷದ ಶುಭಾಶಯಗಳು, ಆಚರಣೆಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ.


ಆದರೂ ಈ 2021 ಪ್ರತಿ ವರುಷದಂತೆ ಸ್ವಲ್ಪ ಹೆಚ್ಚಿಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಖುಷಿ ಮತ್ತು ಕಹಿ ಅನುಭವಗಳನ್ನು ಕೊಟ್ಟಿದೆ. 

ಹಾಗೆಯೇ ಒಂದು ವರುಷದ  ನೆನಪಿನ ಬುತ್ತಿಯನ್ನೇ ಮುಂದಿನ ದಿನಗಳ  ಏಳ್ಗೆ ಮತ್ತು ಸದ್ಬಳಿಕೆಗೆ ಅನುಭವಂತಿಕೆಯನ್ನೇ ನೀಡಿದೆ. 


ಒಡನಾಡಿದ ಗೆಳೆಯರು. ತಿಳಿದ ವಿಷಯ​. ಅರಿತ ವಿದ್ಯೆ. ಕೈ ಕೊಟ್ಟ ಕಹಿ ನೆನಪು. ತಾನು ಬೆರೊಬ್ಬರಿಗೆ ಸಹಾಯ ಹಸ್ತ ನೀಡಿದ ನೆನಪು. ನಲಿದ ಸಮಯ. ಸವಿದ ರುಚಿ ಹೀಗೆ ನಾನ ಮುಖಗಳ ಸುಂದರ ಸ್ವಪ್ನ ಲೋಕವನ್ನು ಎತ್ತಿಕೊಟ್ಟಿದೆ.  ಅದಕ್ಕೆ ಅದು ಕಳೆದ ವರುಷ ಮತ್ತು ಹಳೆ ವರ್ಷ​.


ಕರೋನ ಇಲ್ಲದ ಸಮಯ ಬೇಕೇ ಬೇಕು ಎನ್ನುವ ಹಂಬಲವನ್ನು ಪ್ರತಿಯೊಬ್ಬರ ಮನದಲ್ಲಿ ಬಿತ್ತಿರುವುದಂತೂ ಸತ್ಯ​.  

ನಾವೆಲ್ಲಾ ಈ ಒಂದು ಬ್ರಂಹಾಂಡ ರೋಗದ ಬಗ್ಗೆ ಇಟ್ಟುಕೊಂಡಿರುವ ಕಲ್ಪನೆ, ಜೀವನದಲ್ಲಿ ಯಾವುದು ಅತಿ ಪ್ರಾಮುಖ್ಯ ಎಂಬುದನ್ನು ಪ್ರತಿಯೊಬ್ಬರಿಗೂ ಸುಲಭವಾಗಿ ಗೊತ್ತಾಗಿದೆ. 

ಯಾವುದು ಮುಖ್ಯ ಅಮುಖ್ಯ ಎಂಬುದನ್ನು ಈ ಒಂದುವರೆ ವರುಷದಲ್ಲಿ ಮಕ್ಕಳಿಂದ ವೃದ್ಧರವರಿಗೂ ಗೊತ್ತು ಮಾಡಿಕೊಟ್ಟಿದೆ. 


ನಾವುಗಳು ಏನೇ ಮುಂದುವರೆದರೂ ಮುಂದಿನ ದಿನಗಳಲ್ಲಿ ಸುಲಭವಾಗಿ ಕಳೆದ ಒಂದುವರೇ ವರುಷದ ಹಿಂದೆ ಇದ್ದಂತೆ ಸ್ವಂತಂತ್ರವಾಗಿ ಯಾವುದೇ ಯೋಚನೆಯಿಲ್ಲದೆ ಎಲ್ಲರೋಡನೆ ಬೇರೆಯುವ ಸಮಯ ಹಿಂದಿರುಗುವುದಿಲ್ಲವೇನೋ ಅನಿಸಿಬಿಟ್ಟಿದೆ. 


ಹಾಗೆಯೇ ಮನುಷ್ಯ ಸೋಷಿಯಲ್ ಆನಿಮಲ್ ಎಂಬ ಮಾತಿಗೆ ವಿರುದ್ಧವಾಗಿ ಎಲ್ಲಾರೊಂದಿಗೆ ಬೇರೆತು ಬದುಕುವ​ ಬದುಕಿಗಿ ಅಲ್ಪವಿರಾಮವನ್ನಿಟ್ಟ ಈ ಕೋವಿಡ್ ಎಂಬ ಚಿಕ್ಕ ವೈರಸ್ ಎಂದು ನಿಶಕ್ತವಾಗುವುದೋ ಕಾಲವೇ ಉತ್ತರಿಸಬೇಕು.


ಆದರೂ ಬದುಕು ನಿಂತ ನೀರಲ್ಲಾ. ಕತ್ತಲಿನಿಂದ ಬೆಳಕು ಬರಲೇಬೇಕು. ಹಳೆ ಕ್ಯಾಲೆಂಡರ್ ಹೋಗಿ ಹೊಸ ದಿನದರ್ಶಿಕೆಯನ್ನು ಪ್ರತಿ ಗೋಡೆಯು ಕಾಣಬೇಕು. ಅದೇ ಭರವಸೆ. 

ಮನೆಯಲ್ಲಿಯೇ ಕುಳಿತು ದೊಡ್ಡವರಂತೆ ಓದುತ್ತಿರುವ ಮಕ್ಕಳು ಮುಂದಿನ ವರುಷದಲ್ಲಿಯಾದರೂ ಶಾಲೆಗಳಿಗೆ ಹೋಗಿ ಈ ಹಿಂದೆ ಕಲಿಯುತ್ತಿದ್ದಂತೆ ಕಲಿಯಬೇಕು. 

ಗೆಳೆಯರೊಡಗೂಡಿ ಸ್ವಚ್ಚಂದವಾಗಿ ಕೂಡಿ ಕುಣಿದಾಡುತ ಪಾಠ ಕಲಿಯಬೇಕು. ಅದೇ ನೈಸರ್ಗಿಕ​. 



ಭರವಸೆಯ ಬದುಕು ಪ್ರತಿಯೊಬ್ಬರಿಗೂ ೨೦೨೨ ರಲ್ಲಿ ಮತ್ತೇ ಸಿಗಲಿ ಮತ್ತು ಸಿಗುತ್ತದೆ ಎನ್ನೊಣ​. 

ಮುಂದೆ ಈ ಮ್ಯುಟೆಟ್ ವೈರ ಸ್ ನಿಲ್ಲುವುದು. ಎಲ್ಲಾ ವ್ಯಾಕ್ಸಿನ್ ಚೆನ್ನಾಗಿ ಕೆಲಸ ಮಾಡುವುದು. ವೈದ್ಯರ ಅವಿಷ್ಕಾರಕ್ಕೆ ಮನ್ನಣೆ ಸಿಗುವುದು ಎನ್ನೋಣ​. 


ನಾವು ನಮ್ಮ ನಿಸರ್ಗದಂತೆ ನಾವಾಗಿ ಬದುಕಿ ನಿಸರ್ಗದತ್ತಾ ಚೇತನತೆಯನ್ನು ಸಂಪಾಧಿಸುವ ಕೌಶಲ್ಯತೆ ಎಲ್ಲರಗೂ ಈ ಹೊಸ ವರುಷ ನೀಡಲಿ ​. 


ಹೊಸ ವರುಷದ ಹೊಸತನಕ್ಕೆ ಆದರದ ಶುಭಾಶಯಗಳು!!

ಶುಕ್ರವಾರ, ನವೆಂಬರ್ 12, 2021

ಮಕ್ಕಳ ದಿನಾಚರಣೆ

ಮಕ್ಕಳ ದಿನಾಚರಣೆ. ನವಂಬರ್ ೧೪. ಮಕ್ಕಳ ನೆಚ್ಚಿನ ಚಾ ಚಾ ನೆಹರುವರ ಹುಟ್ಟಿದ ದಿನ​. ಪ್ರತಿ ವರುಷವು ಎಲ್ಲಾ ಶಾಲೆಗಳಲ್ಲೂ ನೆಹರುವರ ಪೋಟೋ ಇಟ್ಟು, ಹೊವಿನ ಹಾರ ಹಾಕಿ ಪೊಜೆ ಮಾಡಿ ಚಾಕಲೆಟ್ ಕೊಡುತ್ತಿದ್ದ ನೆನಪು ಇನ್ನೂ ಹಸಿರಾಗಿದೆ. 


ಹಾಗೆಯೇ ಮಕ್ಕಳಿಗೆ ಶಾಲಾ ಶಿಕ್ಷಕ ವೃಂದ ನೆಹರುವರ ಬಾಲ್ಯ ಮತ್ತು ಮಕ್ಕಳನ್ನು ಕಂಡರೇ ಅವರಿಗೆಷ್ಟು ಇಷ್ಟ​, ಅವರು ಹೇಗೆ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದರು, ಅವರೂ ಮತ್ತು ಇಂದಿರಾಗಾಂಧಿಯೊಂದಿಗಿನ ಜೀವನ  ಕಥೆಇತ್ಯಾದಿ ಇತ್ಯಾದಿ ಮಾತುಗಳು ಈಗ ನೆನಪಿಗೆ ಬರುತ್ತದೆ. 


ಹಾಗೆಯೇ ನೆಹರೂ ಅವರ ಪೋಟೋದಲ್ಲಿ ಅವರ ಕಪ್ಪು ಕೋಟಿನ​ ಜೇಬಿನಲ್ಲಿನ ಕೆಂಪು ಗುಲಾಬಿ. ಕೆಂಪು ಗುಲಾಬಿ ಅಂದರೇ ಮಕ್ಕಳ ನಗುವೇನೋ ಅನಿಸುತ್ತದೆ. ಆ ಹೊವನ್ನು ಯಾವುದೋ ಚಿಕ್ಕ ಮಗು ಅವರ ಜೇಬಿಗೆ ಸಿಗಿಸಿರುವಂತೆ ಬಾಸವಾಗುತ್ತಿತ್ತು.  


ಇಂದು ಹೀಗೆಯೇ ಮಕ್ಕಳ ದಿನಾಚರಣೆಯನ್ನು ಎಲ್ಲಾ ಶಾಲೆಗಳಲ್ಲೂ ಆಚರಿಸುತ್ತಿದ್ದಾರೆ. 


ಮಕ್ಕಳ ದಿನಾಚಾರಣೆ ಮಕ್ಕಳಿಗೆ ಏಕೆ ಖುಷಿ ಕೊಡುವುದಿಲ್ಲ ನೀವೇ ಹೇಳಿ. ನಮಗಾಗಿಯೇ ಈ ರೀತಿಯಲ್ಲಿ ಒಂದು ದಿನವಿದೆ  ಎಂದರೇ.. ಮಕ್ಕಳು ಎಂದರೇ ಅವರೇ ಮುಂದಿನ ಪ್ರಜೆಗಳು, ದೇಶದ ಆಸ್ತಿ. 

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಶಾಲಾಂಗಣದಲ್ಲಿರುವಷ್ಟು ದಿನ ಪ್ರತಿ ಮಗುವು ಪ್ರತಿ ಶಾಲೆಯ ಜವಬ್ದಾರಿಯೇ ಸರಿ. ಅವರ ಎಲ್ಲಾ ಅಭಿವೃದ್ಧಿಯ ಬೀಜಗಳನ್ನು ಬಿತ್ತುವ ಕ್ಷೇತ್ರವೇ ಎಂದರೇ ತಪ್ಪಿಲ್ಲ​. 


ಮಕ್ಕಳ ದಿನಾಚರಣೆ ಕೇವಲ ನೆಹರೂವರ ಪೋಟೋ ಇಟ್ಟು ಅವರ ಬಗ್ಗೆ ಗುಣಗಾಣ ಮಾಡಿ ಮಾರನೇಯ ದಿನ ಮರೆಯುವುದಲ್ಲ​. 

ಮತ್ತೇ ಮುಂದಿನ ವರುಷವೂ ನವಂಬರ್ ತಿಂಗಳ ೧೪ ರಂದು ಮತ್ತೊಂದು ದಿನಾಚರಣೆ ಆಚರಿಸುವುದಕ್ಕೆ ಮಾತ್ರ ಸೀಮಿತಗೊಳಿಸಬಾರದು. 


ನೆಹರೂವರ ಜನ್ಮ​ ದಿನವನ್ನೇ ಯಾಕೆ ಮಕ್ಕಳ ದಿನವೆಂದು ಘೋಷಿಸಿದರೂ ಎಂಬುದನ್ನು ನಾವು ತಿಳಿಯಬೇಕು. ನಿಮಗೂ ಗೊತ್ತೂ ನೆಹರುವರಿಗೆ ಮಕ್ಕಳೆಂದರೇ ಎಷ್ಟು ಪ್ರೀತಿಯೆಂದು. ಹಾಗೆಯೇ ನೆಹರು ಅವರು ಹೇಗೆ ತಮ್ಮ ಮಗಳನ್ನು ಬೆಳೆಸಿದರೂ ಎಂಬುದನ್ನು.  ತಮ್ಮ ಮಗಳನ್ನು ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿ ಸ್ಥಾನಕ್ಕೆ ತರುವವರಿಗಿನ ಅವರ​ ಹೋರಾಟ ಮತ್ತೊಂದು ರೀತಿಯದು. ಅವರು ಅವರ ಮಗಳ ಶಿಕ್ಷಣದ ಬಗ್ಗೆ ಅವರಲ್ಲಿದ್ದ ದೃಷ್ಟಿ ಕೋನಕ್ಕೆ ಸಾಕ್ಷಿಯೆಂದರೇ ಅವರು ಜೈಲಿನಿಂದ  ಬಾಲ್ಯವಸ್ಥೆಯಲ್ಲಿದ್ದ ಪ್ರೀಯ ಇಂದಿರಾಗೆ ಬರೆದ ಸಾಲು ಸಾಲು ಪತ್ರಗಳು. ಆ ಅಷ್ಟೂ ಪತ್ರಗಳು ಈಗ ನಮಗೆ ಪುಸ್ತಕ ರೂಪದಲ್ಲಿ ಸಿಕ್ಕಿರುವುದು ಅದೃಷ್ಟ. 

ಹಾಗೆಯೇ ಈ ಪುಸ್ತಕಗಳು  ಪ್ರತಿಯೊಬ್ಬ​ ತಂದೆಯು ಹೇಗೆ ಮಗುವಿನ ವಿದ್ಯಾಭ್ಯಾಸಕ್ಕೆ ಹೇಗೆಲ್ಲಾ ಒತ್ತೂ ಕೊಡಬೇಕು ಎಂಬುದನ್ನು ಮನನ ಮಾಡುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಮಕ್ಕಳ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಮಾಜ ಮತ್ತು ಸರ್ಕಾರ ಯಾವ ರೀತಿಯಲ್ಲಿ ಕ್ಷ ಕಿರಣವನ್ನು ಹೊಂದಿರಬೇಕೆಂಬುದು.


ಇಂದಿನ ಭಾರತದಲ್ಲಿ ಶಿಕ್ಷಣವೆಂದರೇ ಅದು ಉಳ್ಳವರ ಮತ್ತು ಶಕ್ತಿವಂತರ ಸ್ವತ್ತೇನೋ ಎನ್ನುವ ಮಟ್ಟಿಗೆ ಉಧ್ಯಮವಾಗಿ ಮಾರ್ಪಟ್ಟಿದೆ. ಉನ್ನತ ಶಿಕ್ಷಣವೆಂದರೇ ಹೆಚ್ಚು ಹಣವಿರಬೇಕು. ಅದಕ್ಕಾಗಿ ಮದ್ಯಮ ವರ್ಗದ ತಂದೆ ತಾಯಿಂದರೂಗಳು ಹೆಚ್ಚು ಕಷ್ಟ ಪಟ್ಟು ದುಡಿಯಬೇಕು. ಹಾಗೆಯೇ  ಸಾಕಷ್ಟು ಜನರುಗಳು ಉನ್ನತ ಶಿಕ್ಷಣ ಬೇಕೆಂದು ನಗರಗಳತ್ತಾ ಮುಖ ಮಾಡಿಬಿಟ್ಟಿದ್ದಾರೆ. ಅಂದರೇ ಹಳ್ಳಿಯಲ್ಲಿ ಓದುವ ಮಕ್ಕಳಿಗೆ ಶಿಕ್ಷಣವಿಲ್ಲವೇ ಎಂದು ಗಾಬರಿಯಾಗಬೇಡಿ. 

ಇಂದು ಉನ್ನತ / ಉತ್ತಮ​ ಅಭ್ಯಾಸವೆಂದರೇ ಖಾಸಗಿ ಶಾಲೆಗಳಿಂದಲೇ ಎನ್ನುವ  ವಾತವರಣ ಎಲ್ಲಾ ಕಡೆ ನಿರ್ಮಾಣವಾಗುತ್ತಿರುವುದು ವಿಪರ್ಯಾಸ​. 


ಅದಕ್ಕೆ ಸಾಕ್ಷಿ ಎನ್ನುವಂತೆ ಸರ್ಕಾರಿ ಶಾಲೆಗಳಲ್ಲಿ, ಶಿಕ್ಷಣ ಸಂಸ್ಥೆ, ಕಛೇರಿಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಮಕ್ಕಳುಗಳು ಇದೆ ಖಾಸಗಿ ಕಾನ್ವೆಂಟ್ ಗಳಲ್ಲಿ ಓದಿಸುತ್ತಿರುವುದು. ಸರ್ಕಾರದ ಶಾಲೆಗಳು ಉಪಯೋಗಕ್ಕೆ ಬಾರದವೂ ಎಂಬುದನ್ನು ಅಲ್ಲಿರುವವರು ನಮಗೆ ಗೊತ್ತೂ ಎಂದು ಇಡೀ ಸಮಾಜಕ್ಕೆ ಪರೋಕ್ಷವಾಗಿ ನಿರೂಪಿಸುತ್ತಿರುವುದು.ಇನ್ನೂ ಇಲ್ಲಿನ ಕಾನ್ವೆಂಟ್ ಪ್ರೀಯ​ ಮಂದಿ ಅದು ಯಾವ ರೀತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅನುಮಾನವಾಗುತ್ತದೆ. 


ಮಕ್ಕಳ ದಿನಾಚರಣೆಯ ನೆಪದಲ್ಲಾದರೂ ಸರ್ಕಾರ ಮತ್ತು ಸಮಾಜ ಮಕ್ಕಳ ಬೆಳವಣಿಗೆಗೆ ಅನುಕೂಲವಾದ ಉನ್ನತ ವಾತವರಣ ನಿರ್ಮಾಣಕ್ಕೆ ಕೈ ಹಾಕಬೇಕು. ವರುಷ ವರುಷವು ಒಂದೊಂದು ಚಿಂತನೆಯ ಮೊಲಕ ಚಿಕ್ಕ ಚಿಕ್ಕ ಕೂರತೆಗಳನ್ನು ನೀಗಿಸಬೇಕು. ಆ ಆ ಶಾಲೆಯ ಮಟ್ಟಿಗೆ ಉತ್ತಮ​ ಅವಕಾಶಗಳನ್ನು ಕಲ್ಪಿಸಿಕೊಟ್ಟರೆ ಒಂದೊಂದು ಮಗುವಿನ ಸಾಧನೆಯನ್ನು ನಮ್ಮ ಮೊದಲ ಮಹಿಳಾ ಪ್ರಧಾನ ಮಂತ್ರಿಯ ಸಾಧನಾ ಪಥದದಲ್ಲಿ ತಮ್ಮ​ ತಮ್ಮ​ ಮಕ್ಕಳ ಅಭಿವೃದ್ಧಿಯ ಕನಸನ್ನು ಎಲ್ಲಾ ಮಧ್ಯಮ ವರ್ಗದ ಹೆತ್ತವರು ನನಸು ಮಾಡಿಕೊಳ್ಳಬಹುದು. 


ಈ ಕರೋನಾ ಮಗದೊಮ್ಮೆ  ಹೆತ್ತವರೇ ನಮ್ಮ ಗುರುಗಳು ಎಂಬುದನ್ನು ನಿರೂಪಿಸಿದೆ. ಮನೆಯೇ ಮೊದಲ ಶಾಲೆ, ತಾಯಿಯೇ ಮೊದಲ ಗುರು ಎಂಬುದನ್ನು ಕೇವಲ​ ಗಾದೆ ಮಾತಾಲ್ಲ ಎನ್ನುವುದು ಕಳೆದ ಒಂದುವರೆ ವರುಷದಲ್ಲಿ ಪುನಃ ಸಾಭಿತು ಮಾಡಿದ್ದಾರೆ. 


ಮಕ್ಕಳು ತಮ್ಮ ಹಿರಿಯರಿಗಿಂತ ತಾವೇನೂ ಕಮ್ಮಿಯಿಲ್ಲ ಎಂಬುದನ್ನು ತಮ್ಮ ಓದು, ತಿಳುವಳಿಕೆಯ ಮೊಲಕ ತಮ್ಮ ಹೆತ್ತವರಿಗೆ ತೋರಿಸಿಕೊಟ್ಟಿದ್ದಾರೆ. ಅವರ ಈ ಆನ್ ಲೈನ್ ಭರಾಟೆ ಕಂಡು ಎಂಥವರೂ ಮಂತ್ರ ಮುಗ್ಧರಾಗಿರುವುದು ಸುಳ್ಳಲ್ಲ​. 

ಇಂಥ ಒಂದು ದಿನ ಬರುತ್ತದೆ ಎಂಬುದನ್ನು ಯಾರೊಬ್ಬರೂ ನೆನಸಿರಲಿಲ್ಲ​.  


ಇಂಟರ್ ನೇಟ್, ಮೊಬೈಲ್ ಯಾವುದು ಶಾಲಾಂಗಣದಲ್ಲಿ ನಿಷೇಧವೆಂದು ಕಪ್ಪು ಪಟ್ಟಿ ಕಟ್ಟಿದ್ದರೋ ಈಗ ಅದೇ ಅತಿ ಸುಲಭ ಮಾರ್ಗ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಎನಿಸುವ ಮಟ್ಟಿಗೆ ಜಗತ್ತಿಗೆಲ್ಲಾ ಚಿರಾಪರಿಚಿತವಾಗಿದೆ. 


ಮಕ್ಕಳ ದಿನಾಚರಣೆಯೆಂದರೇ ಮಕ್ಕಳ ಆಶೋತ್ತರ, ಮಗುವಿನ​ ಮನಸ್ಸಿನ ಕನಸಿಗೆ ಬಣ್ಣ ಬಳಿಯುವ ಹಿರಿ ಕೈಗಳಾಗಲಿ ಹಿರಿಯರು. 


ಓದೆ ಮಕ್ಕಳ ಬೆಳವಣಿಗೆಗೆ ಮಾರ್ಗ. ಅವರ ವ್ಯಕ್ತಿತ್ವದ ಬೆಳವಣಿಗೆಗೆ ಆಟೋ ಪಾಠಗಳ ಸಮ್ಮಿಶ್ರಣ ನಿರಂತರವಿರಲಿ ಮುಂದೆಂದು ನಾವು ಆಶಿಸೋಣವೇ.

ಸೋಮವಾರ, ಅಕ್ಟೋಬರ್ 25, 2021

ಒಂದು ಚಿತ್ರ vs ಸಾವಿರ ಸಾಲುಗಳು

 ಸಾವಿರ ಸಾಲುಗಳು ಹೇಳುವುದನ್ನು ಒಂದು ಚಿತ್ರ ಮಾತ್ರ ಹೇಳುವುದು.


ಪ್ರತಿಯೊಂದನ್ನು ಯಾರಾದರೂ ಕಲಿಸಿದರೇ ಕಲಿಯುವುದು ಮಕ್ಕಳ ಪ್ರಾಥಮಿಕ​ ಅಭ್ಯಾಸ​. ಆದರೇ ಈ ಮಗು ಯಾರು ಕಲಿಸದೇ ಇಷ್ಟೊಂದು ಚೆಂದವಾಗಿ ಚಿತ್ರಗಳನ್ನು ರಚಿಸುವುದನ್ನು ಕಂಡು ಅಚ್ಚರಿಯಾಗುತ್ತದೆ. 


ಏನನ್ನಾದರೂ ನೋಡಿದರೇ ಅದನ್ನು ಹಾಗೆಯೇ ಯಾವುದೇ ಚಿತ್ತು ಕಾಟು ಇಲ್ಲದೇ ಬರೆಯುವುದು. ಗೆರೆಗಳನ್ನು ತನ್ನ ಇಚ್ಚೆಯ ರೀತಿಯಲ್ಲಿ ಪುಟ ಪೂರ್ಣ ಚಿತ್ರಿಸುವುದು ನೈಸರ್ಗಿಕವಾಗಿ ಬಂದ ಕಲೆ, ಪ್ರತಿಭೆಯೇ ಅನಿಸುತ್ತದೆ.


ಚಿಕ್ಕ ಮಕ್ಕಳು ಯಾವಾಗಲೂ ಚಿತ್ರ ಬರೆಯುವುದರಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ. ಅವರಿಗೆ ಅದು ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುವ ಒಂದು ವಿಧಾನವಾಗಿರುತ್ತದೆ. 


ಆದರೇ ಅದೇ ದೊಡ್ಡವರಾಗುತ್ತಾ ಚಿತ್ರ ಬರೆಯುವ ಕಲೆಯನ್ನು ಮೂಲೆಗುಂಪು ಮಾಡಿಬಿಡುತ್ತಾರೆ. 


ಅದಕ್ಕೆ ಕಾರಣ ಪುನಃ ಅವರ ಶಿಕ್ಷಣವೇ.ತಮ್ಮ ಓದುವ ಬರೆಯುವ ಬ್ಯಸಿ ಲೈಪ್. ಕಲೆಗಾಗಿ ಮೀಸಲಾದ ಯಾವ ಸಮಯವು ಇಲ್ಲದ ಕಾರಣ ತಮ್ಮಲ್ಲಿರುವ ಕಲೆಯನ್ನು ಪೂರ್ಣವಾಗಿ ಮರೆತು ಬಿಡುತ್ತಾರೆ. 


ಚಿಕ್ಕ ವಯಸ್ಸಿನಲ್ಲಿಯೇ ಗುರುತಿಸಿ ಅದಕ್ಕೆ ತಕ್ಕನಾದ ಶಿಕ್ಷಣವನ್ನು ಕೊಡಿಸಿದರೇ ಅವರು ಇನ್ನೂ ಉತ್ತಮವಾಗಿ ತನ್ನ​ ಮೊದಲ  ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ. 


ಆದರೇ ಈ ನಮ್ಮ ಮಗುವಿಗೆ ನಾವು ಯಾರೂ  ಚಿತ್ರ ಬರೆಯುವುದನ್ನು ಎಂದು ಹೇಳಿ ಕೊಟ್ಟಿಲ್ಲ​. 


ಆದರೇ ಅವನು ಮೊದ ಮೊದಲು ಟಿ. ವಿ ಯಲಿ ನೋಡಿದ ಪ್ರಾಣಿಗಳಾದ ಹುಲಿ, ಸಿಂಹ, ಹಸು ಇತ್ಯಾದಿ ಚಿತ್ರಗಳನ್ನು ಬರೆಯುವುದರಲ್ಲಿ ಖುಷಿಯಿಂದ ನಿತ್ಯ ತೊಡಗುತ್ತಿದ್ದ​.  

ದಿನದಲ್ಲಿ ಒಂದೇರಡು ಭಾರಿಯಾದರೂ ಅದೇ ಹೀಗಾಗಲೇ ಚಿತ್ರಿಸಿದ​ ಪ್ರಾಣಿಗಳ ಚಿತ್ರವನ್ನು ವಿವಿಧ ಭಂಗಿಗಳಲ್ಲಿ ಬರೆಯುವುದನ್ನು ಕಾಣಬಹುದು.


ಅವನಿಗೆ ಡೈನೊಸಾರ್ ಗಳನ್ನು ವಿವಿಧ ರೀತಿಯಲ್ಲಿ ಚಿತ್ರಿಸಿ ಬಣ್ಣ ಹಾಕುವುದರಲ್ಲಿ ಏನೋ ಮಹಾ ಸಂತೋಷ​. ತಾನು ಯಾವುದೇ ಚಿತ್ರ​ ಬರೆಯುವಾಗಲೂ ಯಾವೊಂದು ಗೆರೆಯನ್ನು ಹಳಿಸುವುದಾಗಲಿ, ಪುನರ್ ರಚಿಸುವುದಾಗಲಿ ಇಲ್ಲ​. ಎಲ್ಲಾ ಚಿತ್ರಗಳನ್ನು ಅತ್ಯಂಥ ನಾಜೂಕಾಗಿ ಬರೆದು ಬಣ್ಣ ತುಂಬಿಸಿಬಿಡುತ್ತಾನೆ. ತನ್ನ ಮನಕ್ಕೆ ಬಂದ ಯಾವುದೇ ಚಿತ್ರವನ್ನು ಎಲ್ಲಾ ಸೂಕ್ಷ್ಮತೆಗಳೊಂದಿಗೆ ಯಾವುದೇ ಒಂದು ಹಾಳೆಯಲ್ಲಿ  ಪೂರ್ಣವಾಗಿ  ವರ್ಣಮಯವಾಗಿಸುವುದನ್ನು  ನೋಡುವುದೇ ಸೌಂದರ್ಯ​! 

ಇದೀಷ್ಟನ್ನು ಕೆಲವೇ ನಿಮಿಷಗಳಲ್ಲಿ ಮುಗಿಸುವುದನ್ನು ನೋಡಿದರೇ ನಮಗೆ (ಹಬ್ಬ​) ಅಬ್ಬಾವೆನಿಸುತ್ತದೆ. 



ಪುಸ್ತಕದಲ್ಲಿ ನೋಡಿದ ಯಾವುದೇ ಚಿಕ್ಕ ಚಿತ್ರವನ್ನು ದೊಡ್ಡ ಕ್ಯಾನ್ ವಾಸ್ ನಲ್ಲಿ ದೊಡ್ಡದಾಗಿ ಬರೆದು ಬಣ್ಣ ತುಂಬಿಸುವ ಈ ತಿಕ್ಷ್ಣ ಕಲೆ ಕಂಡರೇ ಇದೊಂದು  ವರದಾನವೇ ಸರಿ.


ನಮಗೇನಾದರೂ ಬರೆಯಬೇಕೆಂದರೇ ಎಷ್ಟೊ ಭಾರಿ ಬರೆದು ಹಳಿಸಿ ಬರೆದು ಮತ್ತೆ ಹಳಿಸಿ ಬರೆಯುತ್ತೇವೆ. ಆದರೇ ಈ ಮಗುವಿಗೆ ಅದು ನೀರು ಕುಡಿದಷ್ಟು ಸುಲಭ​. ಅವನಿಗೆ ಇಷ್ಟವಾದರೆ ಮಾತ್ರ ಸಾಕು. ಅದು ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಈ ಮಂತ್ರ ದೊಡ್ಡವರಾದ ನಮಗೆ ಗೊತ್ತಿಲ್ಲ​. ನಾವು ಬೇರೆಯವರ​ನ್ನು ಮಾತ್ರ​ ಮೆಚ್ಚಿಸಲು ಹೆಚ್ಚುಶ್ರಮಿಸುತ್ತೇವೆ. ಅದಕ್ಕೆ ನಮಗೆ ಅತಿ ದೊಡ್ಡ ಶ್ರಮ ಅನಿಸುತ್ತದೆ. 


ನಮಗೆ ಚಿತ್ರ ಅಂದರೇ ಅದು ಇದು. ಚಿತ್ರ ಈ ಬಗೆಯದ್ದು ಆ ಬಗೆಯದ್ದು ಎಂಬ ವರ್ಗಿಕರಣದಲ್ಲಿ ಕೂರುತ್ತೇವೆ. ಆದರೇ ಈ ಮಗುವಿಗೆ ತನ್ನ ಖುಷಿಯ ತನ್ನಿಚ್ಚೆಯ ಚಿತ್ರ ಮಾತ್ರ ಅಷ್ಟೆ. ತನಗೆ ಪ್ರೀಯವಾದದ್ದನ್ನು  ಹಾಳೆಯ ತುಂಬ ಬರೆದು ನಲಿಯಬೇಕು ಎನ್ನುವುದು ಮಾತ್ರ ಗೊತ್ತು. 


ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋದರೇ. ಇನ್ನೂ ಹೆಚ್ಚಿನ ರೀತಿಯಲ್ಲಿ ಅಭ್ಯಾಸವನ್ನು ಮಾಡಿದರೇ ಇನ್ನೂ ತುಂಬ ಚೆನ್ನಾಗಿರುತ್ತದೆ. 


ಆದರೇ ಈ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ.. ಅದು ಈ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಇದನ್ನು ಮುಂದುವರಿಸಿಕೊಂಡು ಪೋಷಿಸುವ ವ್ಯವಸ್ಥೆ ನಮ್ಮಂತಹ ಹೆತ್ತವರಿಗೆಲ್ಲಾ ಅದು ಹೇಗೆ ಸುಲಭವಾಗಿ ಸಿಗುತ್ತೋ ಗೊತ್ತಿಲ್ಲ​. 


ಹೀಗೆ ಹಲವು ಬಗೆಯ​ ಬೈ ಬರ್ತ್ ಪ್ರತಿಭೆಗಳನ್ನು ಮಕ್ಕಳಲ್ಲೂ ಚಿಕ್ಕವರಿದ್ದಾಗಲೇ ಗುರುತಿಸಿ ನೀರೆರೆದಾಗ ಮಾತ್ರ ಪರಿಪೂರ್ಣವಾಗಿ ಮಕ್ಕಳು ಆದರಲ್ಲಿಯೇ ದಿ ಬೆಸ್ಟ್ ಅನಿಕೊಳ್ಳುತ್ತಾರೆ. 


ಆದರೇ ನಾವುಗಳು ಅದೇ ಹಳೆಯ​ ಮಾಡೆಲ್ ರೀತಿಯಲ್ಲಿ ಶಿಕ್ಷಣ, ಅಂಕ, ಸಿಲಬಸ್ ಎಂದುಕೊಂಡು ಪುಸ್ತಕ ಪಾಂಡಿತ್ಯಗಾರರನ್ನಾಗಿ ಮಾತ್ರ​ ಮಾಡಿ ನೆಮ್ಮದಿಯನ್ನು ನಮ್ಮ ಮಕ್ಕಳಿಂದ​ ಕಾಣುತ್ತೇವೆ. 


ಈ ರೀತಿಯ ಮನುಷ್ಯ ರೂಡಿತ​ ಕಲೆಗಳನ್ನು ನಾವು ಕಂಡು ಕಾಣದವರ ರೀತಿಯಲ್ಲಿ ಕಡೆಗಣಿಸುವುದರಲ್ಲಿ ಮುಂದಾಗುತ್ತಿರುವುದು ವಿಪರ್ಯಾಸವೇ ಸರಿ​!

ಗುರುವಾರ, ಸೆಪ್ಟೆಂಬರ್ 16, 2021

ಮೂಗು ಮುರಿಯುವ ವಿಚಾರವಲ್ಲ

ಮನಸ್ಸಿನಲ್ಲಿ ಏನೋ ಅಂದುಕೊಂಡಾಗಲೇ ಯಾರೋ ಒಂದು ಸೀನು ಸೀನಿದಾಗ ಹಾಗೆಯೇ ಅವರ ಕಡೆ ಎದುರಿರುವವರು ನೋಡುವುದನ್ನು ನಾವು ನೋಡಬಹುದು. 

ಸೀನು ಬಂದಾಗ ಶಬ್ಧವು ಜೋರಾಗಿಯೇ ಇರುತ್ತದೆ.  ಅದಕ್ಕೆ ಎಲ್ಲಾರ ಗಮನ ಸೀನುವವರ ಕಡೆಗೆ ಹೋಗುವುದು. 

ಅವರು ಸಾವರಿಸಿ ಸಾರಿ! ಎನ್ನುವುದು ಸರ್ವೆ ಸಾಧಾರಣ​. 

ಮೂಗು ಇರುವವರೆಗೂ ನೆಗಡಿಗೆ ಕೊನೆ ಇಲ್ಲ​. ಒಬ್ಬೊಬ್ಬರಂತೂ ಒಂದು ಸೀನಿಗೆ ಕೊನೆಯಿಲ್ಲ​. ಒಂದೇ ಭಾರಿ ಸರಿ ಸುಮಾರು ಹತ್ತರವರೆಗೂ ಸೀನಿ ಸೀನಿ ಸುಸ್ತಾಗುವುದನ್ನು ನೋಡಿದರೇ ಕನಿಕರವೇ ಬರುತ್ತದೆ. 

ಉಪ್ ಅದನ್ನು ಸಾವರಿಸಿಕೊಂಡು, ಮುಗು ಬಾಯಿ ವರೆಸಿಕೊಂಡಾಗ ಅವರ ಕಷ್ಟ ಅವರೇ ಅನುಭವಿಸಬೇಕು.


ಮೂಗು ನಮ್ಮ ದೇಹದಲ್ಲಿಯೇ ಅತಿ ಸೂಕ್ಷ್ಮವಾದ ವಾಸನೆಯನ್ನು ಗ್ರಹಿಸುವ ಪಂಚೇದ್ರಿಯದಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ. 

ಮೂಗು ಮುಖಕ್ಕೆ ಒಂದು ಸೌಂದರ್ಯವನ್ನು ಕೊಡುವುದರಲ್ಲೂ ಅಗ್ರ ಸ್ಥಾನವನ್ನು ಪಡೆದಿದೆ.

 ಹಾಗೆಯೇ ಮೂಗಿನ ಉಪದ್ರವವನ್ನು ಸಹಿಸಿಕೊಳ್ಳಲೇಬೇಕು. ಎಷ್ಟು ಉಪಯೋಗಕಾರಿಯೋ ಅಷ್ಟೇ ಕಸಿವಿಸಿಯನ್ನುಂಟು ಮುಖದಲ್ಲಿಯೇ ಮಾಡಿ ಎಲ್ಲರೂ ನಮ್ಮ ಕಡೆ ನೋಡುವಂತೆ ಮಾಡುವುದರಲ್ಲಿಯು ಮೂಗು ಮುಂದು. 


ನೆಗಡಿ ಬಂದರಂತೂ ಮುಗಿಯಿತು. ಎಷ್ಟು ಭಾರಿ ಹಿಂಡಬೇಕು. ಎಷ್ಟೋ ಭಾರಿ ಸೀನಬೇಕು. ಮೂಗು ಕಟ್ಟಿದರಂತೂ ಬೇಡಪ್ಪಾ ಬೇಡಾ! 

ಹೇ ಇದು ಏನೂ ಚಿಕ್ಕ ನೆಗಡಿ ಎಂದರೂ.. ಒಂದು ವಾರಕ್ಕೂ ಅಧಿಕ ದಿನಗಳು  ವ್ಯಕ್ತಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತದೆ. 

ಮುಖದಲ್ಲಿಯ ಮುಖ್ಯ ಅಂಗವಲ್ಲವೇ. ಕೆಂಪು ಮೂಗು ಎಲ್ಲರನ್ನು ಪುನಃ ಗಮನ ಸೆಳೆಯುವಂತೆ ಮಾಡುತ್ತದೆ.

ಸೀನಿದರೂ, ಸುಮ್ಮನಿದ್ದರೂ ಮೂಗಿನ ಕಸಿವಿಸಿ ಬೇಡಪ್ಪಾ ಬೇಡಾ. ಅದರೂ, ನೆಗಡಿ ಎಂದು ಮೂಗು ಕೊಯ್ಯಲೂ ಸಾಧ್ಯವಿಲ್ಲವಲ್ಲವಾ! 


ಸೂರ್ ಸೂರ್ ಅಂದರೂ ಅಕ್ಕಪಕ್ಕದವರೂ ಭಯದಿಂದ ನೋಡುವಂತೆ ಮಾಡಿದ್ದು ಈಗಿನ ಈ ಕರೋನಾ. ಸೀನಿದರಂತೂ ಮುಗಿಯಿತು.. ೧೪ ದಿನ ಕ್ವಾರಂಟೈನ್ ಗ್ಯಾರಂಟಿ. ಯಾರೊಬ್ಬರೂ ನಿನ್ನ ತಂಟೆಗೆ ಬರದೇ ಏನೋ ದೊಡ್ಡ ಕ್ರೈಮ್ ಮಾಡಿದ ರೀತಿಯಲ್ಲಿ ಅನುಮಾನದಿಂದ ಆ ಮೊಗನ್ನೇ ನೋಡುವ ದಿನ ಮಾನದಲ್ಲಿ ನಾವುಗಳು ಇಂದು ಇದ್ದೇವೆ. 


ಆದರೂ ಮೂಗಿನ ಸೌಂದರ್ಯ ವರ್ಣಿಸಿದ ಕವಿಗಳೇ ಇಲ್ಲವನಿಸುತ್ತದೆ. ಮೂಗು ಹೆಣ್ಣಿಗೆ ಸೌಂದರ್ಯವನ್ನು ಇನ್ನೂ ಹೆಚ್ಚು ಕೊಡುತ್ತದೆ. ಹಾಗೆಯೇ ಮೂಗಿನ ಸೌಂದರ್ಯವನ್ನು ಹೆಚ್ಚಿಸುವ ಪ್ಲಾಸ್ಟಿಕ್ ಸರ್ಜರಿಯ ಲೀಸ್ಟ್ ಗಳು ವೈದ್ಯಕೀಯ ರಂಗದಲ್ಲಿ ಅದು ಎಷ್ಟು ಇದ್ದಾವೆಯೋ.  

ಅಷ್ಟರ ಮಟ್ಟಿಗೆ ಏನೇ ಸೀನು, ಸಿಂಬಳ​, ನೆಗಡಿ ಹತ್ತು ಹಲವಾರು ಆರೋಗ್ಯ ಸಮಸ್ಯೆಗಳನ್ನು ಮೈತುಂಬಿಕೊಂಡಿದ್ದರೂ ಅದರ ಒಲಮೆ ಮತ್ತು ನಲುಮೆಯನ್ನು ಕಡೆಗಣಿಸುವಂತಿಲ್ಲ ಅಂದರೇ ನೀವು ಮೂಗು ಮುರಿಯಬೇಡಿ. 


ಮುಗುತಿ ಮೂಗಿಗೆ ಅಂಧವೇ ಅಂಧವೆಂದೂ ಜಗಜ್ಜಾಯಿರಾಗಿದ್ದು ನಮ್ಮ ಭಾರತದಲ್ಲಿಯೇ.. ಅದು ವಿಶ್ವ ಪ್ರಸಿದ್ಧಿ ಮಾಡಿದ್ದು ನಮ್ಮ ಟೆನಿಸ್ ಆಟಗಾರ್ತಿಯೆಂದರೇ.. ತಿಳಿಯಿರಿ ನಮ್ಮ ಭಾರತದಲ್ಲಿಯೇ ಅತಿ ಹೆಚ್ಚು ರೀತಿಯ ಮುಗುತಿಗಳು ಈಗಲೂ ಮೂಗಿನ ಅಲಂಕಾರಕ್ಕಾಗಿ ಮಾರ್ಕೆಟ್ ನಲ್ಲಿ ನಿತ್ಯ ಹೊಸ ಹೊಸ ಡಿಸೈನ್ ನಲ್ಲಿ ಮಾರಾಟಾವಾಗುತ್ತಿವೆ. 


ಆದರೇ ನಾನು ಹೇಳಲು ಹೋರಟ್ಟಿದ್ದು ಮೂಗಿನ ಬಗ್ಗೆ ಅಲ್ಲಾ. ಆದರೂ ಮೂಗೇ ಸೀನಿಗೆ ಮೂಲ​. ಆದ್ದರಿಂದ ಮೂಗಿನ ಬಗ್ಗೆ ಹೇಳಲೇಬೇಕು. 

ಆದರೂ ಸೀನಿದರೇ ಏನೂ ಸಮಸ್ಯೆ ಅನ್ನಬಹುದು. ಹೌದು ಸೀನಿಗೂ ಮೌಲ್ಯವಿದೆ ಅನ್ನುವುದು. 


ಒಂಟಿ ಸೀನು ಒಳ್ಳೆಯದಲ್ಲ​. ಜೋಡಿ ಸೀನು ಬಂದರೇ ಪಕ್ಕಾ ಅದೃಷ್ಟ. ಹೀಗೆ ನಂಬುವವರನ್ನು ನಾನು ನೋಡಿದ್ದೇನೆ.


ನಮ್ಮ ಊರಿನಲ್ಲಿ ನಮ್ಮ ಅಜ್ಜಿ ಸಣ್ಣವಳಾಗಿದ್ದಾಗಿನ ಕಥೆ ಇದು. ಆ ಒಂದು ವರುಷ ಅತಿ ಹೆಚ್ಚು ಮಳೆಯಾಗಿ ಚೆನ್ನಾಗಿ ಬೆಳೆ ಬೆಳೆದಿದ್ದರಂತೆ. ಹಾಗೆಯೇ ಮೆಣಸಿಕಾಯಿಗಳನ್ನು ಅತಿ ಹೆಚ್ಚಾಗಿ ಊರಿನಲ್ಲಿ ಮತ್ತು ಅಜ್ಜಿಯವರ ಸಂಬಂಧಿಕರ​ ಮನೆಗಳ​ಲೆಲ್ಲಾ ಬೆಳೆದಿದ್ದರಂತೆ. ಆ ವರ್ಷವೇ ಇಷ್ಟೊಂದೂ ಮೊಟೆ ಮೊಟೆ ಕೆಂಪು ಮೆಣಸಿನ ಕಾಯಿಗಳು ಚೀಲ ತುಂಬಿದ್ದಾರಂತೆ. ಆದರೇ ಮಾರ್ಕೆಟ್ ನಲ್ಲಿ ಯಾರು ಕೇಳುವವರೇ ಇಲ್ಲಾ. ಬೆಲೆಯಂತೂ ಪಾತಾಳಕ್ಕೆ ಇಳಿದಿದೆ. ಏನೂ ಮಾಡಲೂ ಆಗದೇ ಎಲ್ಲಾರೂ ತಲೆ ಮೇಲೆ ಕೈ ಹೊತ್ತು ಕೊತುಕೊಂಡ ಸಮಯ​. ನಮ್ಮ ಅಜ್ಜಿಯ ವಯಸ್ಸು ೮-೯ ಅನಿಸುತ್ತದೆ. ಹಾಗೆಯೇ ಆಟವಾಡುತ್ತಾ ಅಲ್ಲಿ ಇಲ್ಲಿ ಮನೆಯಲ್ಲಿದ್ದಾಗ ಎಲ್ಲಾರ ಸಮ್ಮುಖದಲ್ಲಿ ಒಂದೇ ಒಂದು ಸೀನಿದರಂತೆ. ಕೇಳಬೇಕೆ ಮಾರನೇಯ ದಿನವೇ ಮೆಣಸಿನ ಕಾಯಿಯ ಬೆಲೆ ಯಾರು ಊಹಿಸದ ರೀತಿಯಲ್ಲಿ ಒಳ್ಳೆಯ ರೇಟ್ ಗೆ ಮಾರಾಟವಾಗುವಂತಾಯಿತಂತೆ.  ಊರಿನ ಎಲ್ಲಾ ಮನೆಯವರೂ ಮಾರಿ ಸುಮಾರಾಗಿ ಹಣ ಸಂಪಾಧಿಸಿದರಂತೆ. ಅವರ ದೊಡ್ಡಪ್ಪ​ ನಮ್ಮಜ್ಜಿಗೆ ಹೊಸ ಲಂಗ ಜಾಕೇಟ್ ತಂದು ಕೊಟ್ಟಿದ್ದರೂ ಎಂದು ನಮ್ಮಾಜ್ಜಿಯೇ ನಮಗೆ ಹೇಳಿದ್ದರೂ. 


ಅಂದಿನಿಂದಲೂ ಯಾರಾದರೂ ಏನಾದರೂ ಮುಖ್ಯವಾದ ಶುಭಾ ವಿಚಾರಗಳನ್ನು ಮಾತನ್ನಾಡುವಾಗ ನಮ್ಮ ಅಜ್ಜಿ ಒಂದು ಸೀನಿದರೇ ಮುಗಿಯಿತು. ದೇವರೇ ಅಸ್ತು ಅಂದಂತೆ. ಅಂದುಕೊಂಡ ಕೆಲಸ ಸುಸುತ್ರವಾಗಿ ನೆರವೆರುವುದು ಅನ್ನುವ ಮಟ್ಟಿಗೆ.  

ನಾನು ನೋಡಿದಂತೆ ಒಂದು ಸೀನು ಸೀನಿಯೂ ಒಳ್ಳೆಯದಾಗವುದು ಎಂದು ಗೊತ್ತಾಗಿದ್ದು ಅಂದೇ.  


ಆದರೇ ಒಬ್ಬೂಬ್ಬರ ಒಂಟಿ ಸೀನು ಭಯಂಕರ ಅನಾಹುತ ಮಾಡಿರುವುದನ್ನು ಕಂಡೂಂಡವರ ಅನುಭವ ಭೀಕರವಾಗಿರುವುದರಿಂದಲೋ ಏನೋ. ಯಾರದರೂ ಒಂಟಿ ಸೀನಿದ ಕ್ಷಣ ಎಲ್ಲಾರೂ ಒಂದು ರೀತಿಯಲ್ಲಿ ನೋಡುವುದನ್ನು ಈಗಲೂ ನಮ್ಮ ಹಳ್ಳಿಗಳ ಕಡೆ ನೋಡಬಹುದು. 


ಆದರೂ ಸೀನೂ ಏನೂ ನೋಡುಕಂಡು ಬರುತ್ತಾ. ಅದು ಯಾವಾಗ ಬರುತ್ತೋ ಯಾರಿಗೆ ಗೊತ್ತೂ?


ಇದು ಕಾಕತಾಳಿಯವೋ ಅಥವಾ ನಿಜವೋ ಗೊತ್ತಿಲ್ಲ​. ಎರಡು ಸೀನುಗಳು ಪಾಸಿಟಿವ್ ವೈಭಂತೂ ಮನೆಗಳಲ್ಲಿ ಮನಗಳಲ್ಲಿ ಕೊಟ್ಟಿರುತ್ತದೆ. ಆ ನಂಬಿಕೆಯಲ್ಲಿಯೇ ಮಾಡುವ ಕೆಲಸಗಳು ಸಕ್ಸ್ ಸ್ ಆಗಿದ್ದರೂ ಆಗಿರಬಹುದು. 


ಬಹುತೇಕರೂ ಇದನ್ನೂ ಇನ್ನೂ ಇಂದಿಗೂ ಅವರವರ ಮಟ್ಟಿಗೆ ನಂಬುತ್ತಾರೆ. ಒಬ್ಬಬ್ಬೊರ ಸೀನಿಗೆ ಕಿಮ್ಮತ್ತು ಇರುವುದಿಲ್ಲ​. ಬಿಡದೇ ಎರಡಕ್ಕಿಂತ ಹೆಚ್ಚು ಸೀನಿದರೇ ಯಾರೂ ಕೇಳುತ್ತಾರೆ. ಆದರೂ ಒಂಟಿ ಸೀನು ಭಾರಿ ಡೆಂಜರ್ ಅನ್ನುವ ಮಟ್ಟಿಗೆ ಭಯದಿಂದ ಮಾಡುವ ಕೆಲಸಗಳನ್ನು ಮಿಸ್ಟೆಕ್ ಮಾಡಿ ವಿಫಲ ಮಾಡಿಕೊಂಡು ಸೀನಿದವರನ್ನು ಕೆಟ್ಟದಾಗಿ ನೋಡಬಾರದು. ಅದು ಏನೂ ಅವರೂ ಹೇಳಿ ಕೇಳಿಕೊಂಡು ಸೀನಿರುತ್ತಾರಾ ನೀವೇ ಹೇಳಿ.


ಈ ನಂಬಿಕೆ ಸರಿಯೋ ತಪ್ಪೊ.. ನಮ್ಮಜ್ಜಿ ಇರುವವರೆಗೂ ನಮ್ಮ ಮನೆಯಲ್ಲಿ ಒಂಟಿ ಸೀನಿದರೂ ತುಂಬ ಖುಷಿಯಿಂದ ಸ್ವಾಗತಿಸುತ್ತಾ ಪಾಸಿಟಿವ್ ಮೈಂಡ್ ಸೆಟ್ ನಿಂದ ಮುನ್ನುಗ್ಗುತ್ತಿದ್ದೇವು.  ನನಗೂ ಅನಿಸುತ್ತೇ. ಇದು ಕೇವಲ ಮನದ ನಂಬಿಕೆ. ಯಾವ ಕೆಲಸವೇ ಆಗಲಿ ಮನಸ್ಸಿನಿಂದ ಪ್ರೀತಿ ಪಟ್ಟು ಮಾಡಿದರೇ ಒಂಟಿ ಸೀನೇ ಆಗಲಿ ಜೋಡಿ ಸೀನೇ ಆಗಲಿ ಏನೂ ಮಾಡಲಾರವು.


ಆದರೂ ಸೀನಿದ ತಕ್ಷಣ ಮುಖ ನೋಡುವವರನ್ನು ನಿಲ್ಲಿಸಲೂ ಸಾಧ್ಯವಿಲ್ಲ​. ಅಮೆರಿಕಾದಲ್ಲಿಯೇ ಪರವಾಗಿಲ್ಲ ಸೀನಿದ ತಕ್ಷಣ ಜೊತೆಯಲ್ಲಿರುವವರು ಗಾಡ್ ಬ್ಲೇಸ್ ಯು ಅನ್ನುತ್ತಾರೆ. 

ಇದು ಅದು ಎಲ್ಲಾ ನಂಬಿಕೆ ಅನ್ನಿಸುವುದಿಲ್ಲವಾ?


ಶುಕ್ರವಾರ, ಆಗಸ್ಟ್ 27, 2021

ತೌಡು ವಿಚಾರಗಳು online ನಲ್ಲಿ

ಇಂದಿನ ಪೀಳಿಗೆಗೆ ತಮ್ಮ ಅಭಿಪ್ರಾಯಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಈಗ​ ಹತ್ತು ಹಲವು ದಾರಿಗಳು ದಾರಾಳವಾಗಿ ಸಿಗುತ್ತಿವೆ. 


ಕೆಲವೇ ಸೆಕೆಂಡಗಳಲ್ಲಿ ಯಾವುದೋ ಮೊಲೆಯಿಂದ ಪ್ರಪಂಚದ ಪ್ರತಿಯೊಂದು ಜಾಗದಲ್ಲೂ ಮನೆ ಮಾತಾಗಿ ಪ್ರಸಿದ್ಧರಾಗಿಬಿಡುವ ಪರಿಸ್ಥಿತಿಯಿದೆ. 


ಇದಕ್ಕೆಲ್ಲಾ ಪ್ರತಿಯೊಬ್ಬರೂ ಈ ಇಂಟರ್ ನೇಟ್ -ಅಂತರ ಜಾಲಕ್ಕೆ ಥ್ಯಾಂಕ್ಸ್ ಹೇಳಬೇಕು.  


ಕಳೆದ ಕೆಲವು ವರುಷಗಳಲ್ಲಿ ಅಂತರ ಜಾಲ ವಹಿವಾಟು ಯಾರೂ ಉಹಿಸಲು ಸಾದ್ಯವಿಲ್ಲದಷ್ಟು ವೇಗವಾಗಿ  ಪ್ರತಿಯೊಬ್ಬರನ್ನೂ ಮೋಡಿ ಮಾಡಿ ಸೆಳೆದಿದೆ. 


ಮಕ್ಕಳಿಂದ ಇಡೀದು ಎಲ್ಲಾ ವಯೋಮಾನದವರನ್ನು ಸೂಜಿಗಲ್ಲಿನಂತೆ ತನ್ನ ತೆಕ್ಕೆಗೆ ಸೆಳೆದಿದೆ ಅಂದರೇ ತಪ್ಪಿಲ್ಲ​. 


ಹಿಂದೆಯೆಲ್ಲಾ ತಮ್ಮ ಮಾತು, ಅನಿಸಿಕೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು ಅಂದರೇ ಒಂದು ನೀನೆ ಹೋಗಿ ಪ್ರತಿಯೊಬ್ಬರಿಗೂ ತಿಳಿಸಬೇಕಾಗಿತ್ತು. ಹಾಗೆಯೇ ಯಾವುದಾದರೂ ಪತ್ರಿಕೆ, ರೇಡಿಯೋ, ಟಿ.ವಿ ಗೆ ನಡೆದು ನಿನ್ನ ಅಭಿಪ್ರಾಯಗಳನ್ನು ಹೆಚ್ಚಿನ ಮಂದಿಗೆ ತಿಳಿಸಲು ಅಲ್ಲಿರುವವರ ಸಹಾಯ ಕೇಳಬೇಕಾಗಿತ್ತು. 


ಅದು ಸಹ ಅಷ್ಟು ಸುಲಭವಿರಲಿಲ್ಲ ಬಿಡಿ. ನೀನು ಹೇಳುವ ವಿಷಯ ಎಷ್ಟು ಪರಿಣಾಮಕಾರಿ ಮತ್ತು ಅದು ಸಾರ್ವಜನಿಕರಿಗೆ ಉಪಯೋಗವಿದಿಯೋ ಇಲ್ಲವೊ ಎಂಬುದನ್ನು ಅಲ್ಲಿರುವ ಸಂಸ್ಥೆಯವರು ನಿರ್ಧರಿಸಿ ಅವರ ಮಾಧ್ಯಮದಲ್ಲಿ ಪ್ರಕಟಿಸುತ್ತಿದ್ದರು. 


ಹೀಗೆಲ್ಲಾ ಪ್ರತಿಯೊಬ್ಬ ವ್ಯಕ್ತಿಯ ಪ್ರತಿಯೊಂದು ಅಭಿವ್ಯಕ್ತಿಗಳು ಸಾಣೆ ಹಿಡಿದು ಸಾರ್ವಜನಿಕರನ್ನು ತಲುಪುತ್ತಿದ್ದವು. 


ಹಾಗೆಯೇ ಪ್ರತಿಯೊಬ್ಬನೂ ತಾನೇ ದೊಡ್ಡವನು ಎಂದು ತನ್ನದೇ ಕೊನೆಯೆಂದು ಏನನ್ನೂ ಪ್ರಲಾಪಿಸಲು ಸಾಧ್ಯವಿರಲಿಲ್ಲ​.  ಅಷ್ಟೊಂದು ಸುಲಭವಾಗಿ ಇಡಿ ಸಮೋಹವನ್ನು ತಲುಪಲು  ಸಾಕಾಗುತ್ತಿರಲಿಲ್ಲ​.


ದೊಡ್ಡ ದೊಡ್ಡ ವಿಧ್ವಾಂಸರು, ಸಾಹಿತಿಗಳು, ಲೇಖಕರು ಯಾರೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಹಿಂದೆ ಸುಲಭವಾಗಿ ಜನರನ್ನು ತಲುಪಲು ಮೇಲೆ ಹೇಳಿದ ಆ ಮಾಧ್ಯಮಗಳೆ ಮೊಲವಾಗಿತ್ತು. 


ಆ ಮಾಧ್ಯಮಗಳು ಸಹ ಕೇವಲ ಯಾರೆಂದರೇ ಯಾರೆಲ್ಲಾ ಮಾತನಾಡುವವರನ್ನು, ನೆನ್ನೆ ಮೊನ್ನೆ ಬಂದ ಯಾರನ್ನೊ, ನಿನ್ನೆ/ಇಂದು ಹುಟ್ಟಿದ ಪ್ರತಿಭೆಗಳನ್ನು  ಅವನ ಮಹಿಮೆಯನ್ನು ಅಷ್ಟೊಂದು ಸುಲಭವಾಗಿ ಪ್ರಚಾರವಾಗಲು ಬಿಡುತ್ತಿರಲಿಲ್ಲ​.  ಪ್ರತಿಯೊಂದನ್ನು ಪರೀಕ್ಷಿಸಿ ವಿಮರ್ಶಿಸಿ ಸಮಾಜ ಮುಖಿ ಸಮಾಜ ಸ್ನೇಹಿ ವಿಚಾರಗಳನ್ನು, ಬರಹಗಳನ್ನು, ಭಾಷಣಗಳನ್ನು ಮಾತ್ರ​ ಪ್ರಸರಿಸುತ್ತಿದ್ದರು.


ಹೀಗೆ ಇದ್ದ ಬಿಗಿ ಪರಿಸ್ಥಿತಿ  ಕ್ರಮೇಣ ಆನ್ ಲೈನ್ ಇಂಟರ್ ನೇಟ್ ಯುಗದಲ್ಲಿ ಯಾಕೇ ಅನಿಸಿಬಿಟ್ಟಿತು. ಕಟ್ಟು ನಿಟ್ಟಿನ ಸಾಂಪ್ರದಾಹಿಕ ಸಮೋಹ ಮಾಧ್ಯಮಗಳ​ ದೋರಣೆಯನ್ನೇ ಜೋಕ್ ಮಾಡುವಂತೆ ಯಾರು ಬೇಕಾದರೂ ಯಾವಾಗ ಬೇಕಾದರೂ ಏನೂ ಬೇಕಾದರೂ ಎಲ್ಲಿಯಾದರೂ ಕೊಗಿ ನಿನ್ನ​ಮನೆಯಿಂದಲೇ, ಮೂಲೆಯಿಂದಲೇ ಇಡೀ ಪ್ರಪಂಚದ ಕಟ್ಟ ಕಡೆಯ ಪ್ರದೇಶದಲ್ಲಿರುವ ಕಟ್ಟಕಡೆಯ ಪ್ರಜೆಯನ್ನು ತಲುಪಬಹುದು.


ಉಫ್! ಯಾರು ಬೇಕಾದರೂ ಏನೂ ಬೇಕಾದರೂ ಬರೆಯಬಹುದು ಆನ್ ಲೈನ್ ಲ್ಲಿ ಪಬ್ಲಿಷ್ ಮಾಡಬಹುದು. ಯಾವ ವಿಮರ್ಶಕನೂ ಇಲ್ಲ, ಯಾರು ಇಲ್ಲ​. ನಿನಗೆ ನೀನೆ ಸಂಪಾದಕ & ಪ್ರಕಾಶಕ​. ಇದಕ್ಕೆ ಬ್ಲಾಗ್, ವಿಕಿ ಪೀಡಿಯಗಳಂತಹ ವೇಬ್ ಪೇಜ್ ಗಳ ಕೊಡುಗೆ ಅಪಾರ​.


ಇನ್ನೂ ವಿಡಿಯೋ,ಪೋಟೋ. ನೀನು  ಟಿ. ವಿ ಯಲ್ಲಿ ಬರಬೇಕೆಂದರೇ ಈ ಹಿಂದೆ ನೀನೊಬ್ಬ ಪ್ರಸಿದ್ಧವಾಗುವಂತಹ ದೊಡ್ಡ ಕೆಲಸ ಮಾಡಿ ಸಮಾಜದಲ್ಲಿ ಒಳ್ಳೆಯವನು ಅನಿಸಿಕೊಂಡಿರಬೇಕಾಗಿತ್ತು. ಅಥವಾ ಅತಿ ದೊಡ್ಡ ಕೆಟ್ಟ ಕೆಲಸ ಮಾಡಿ ಸಮಾಜದಲ್ಲಿ ಕುಖ್ಯಾತಿ ಹೊಂದಿರಬೇಕಾಗಿತ್ತು. 

ಆದರೇ ಇಂದು ಯು ಟ್ಯೂಬ್, ಪೇಸ್ ಬುಕ್, ಟಿಕ್  ಟಾಕ್ ನಂತಹ ಮಾಧ್ಯಮಗಳಿಂದ    ಈ ಎಲ್ಲಾ ಕಟ್ಟಳೆಗಳೇ ಬೇಕಿಲ್ಲ.  ಯಾರಾದರೂ ಒಂದೇ ಕ್ಲಿಕ್ ನಲ್ಲಿ ಲೈವ್ ಬರಬಹುದು. ನೀನೇ ನಿನ್ನದ್ದೇ ಸ್ವಂತಹ ಚಾನಲ್ ಮಾಡಿಕೊಂಡು ಬೇಕಾದಂತೆ ವಿಡಿಯೋ ಮಾಡಿ ಜಗತ್ತಿನ ಎಲ್ಲಾ ಜನರನ್ನು ಸೆಳೆಯಬಹುದು. 


ರೇಡಿಯೋ ಡಿಬೇಟ್ ಕೇಳಿದ್ದಿರಿ ಈ ಹಿಂದೆ. ಅದನ್ನು ಮೀರಿಸುವಂತಹ ಹೊಸ ಆಪ್ ಕಳೆದ ವರುಷ ಆನ್ ಲೈನ್ ಮಾರ್ಕೆಟ್ ಬಂದಿದೆ. ಕ್ಲಬ್ ಔಸ್ ಪ್ರತಿಯೊಬ್ಬರೂ ತಮ್ಮದೇ ಒಂದೊಂದು ರೇಡಿಯೋ ಕೇಳುವ ಸ್ಟೇಷನ್ ಮಾಡಿಕೊಂಡು ಮಾತನಾಡಬಹುದು. ಇದೇ ಈಗ ಹೊಸ​ ಟ್ರೇಂಡ್. 


ಆನ್ ಲೈನ್ ಯುಗದಿಂದ ಹೊಸ ಹೊಸ ಹೊಳವುಗಳು ಈ ಸಮಾಜಕ್ಕೆ ಸಿಕ್ಕಿದೆ. ಆದರೇ ಇವುಗಳ ಸದುಪಯೋಗಕ್ಕಿಂತ  ಸಾಕಾಷ್ಟು ಅನಾಹುತಗಳೇ ಸಮಾಜಕ್ಕೆ ಮತ್ತು ಜನರಿಗೆ ಸಿಗುತ್ತಿರುವುದು. 

ಜಳ್ಳು ಜಳ್ಳು ಮನಸ್ಸಿನವರಿಂದ ಸಮಾಜದ ಸ್ವಾಸ್ಥ್ಯವನ್ನೆ ಕೆಡಿಸುವಂತಹ ಪ್ರಚೋದಕಾರಿ ವಿಷಯಗಳ ಪ್ರಸರಣೆ ಪೇಸ್ ಬುಕ್, ಯು ಟ್ಯೂಬ್ , ವಾಟ್ಸ್ ಪ್, ಕ್ಲಬ್ ಹೌಸ್ ಗಳಿಂದಾಗುತ್ತಿದೆ.  ಯಾಕೆಂದರೇ ಈ ಎಲ್ಲಾ ಮಾಧ್ಯಮಗಳನ್ನು ಯಾರು ಬೇಕಾದರೂ ಹೇಗೆ ಬೇಕಾದರೂ  ಇಡಿ ಸಮೋಹವನ್ನು ಸೇರಲು ಬಳಸಬಹುದು.  

ಮುಗ್ಧ ಜನಗಳು ಇಲ್ಲಿ ಹೇಳುತ್ತಿರುವುದೇ ಸತ್ಯವೇನೋ ಎನ್ನುವ ಮಟ್ಟಿಗೆ ಗಂಟಲು ಕಿರುಚಿಕೊಳ್ಳುವ ಪಳ್ಳು ವಿಧ್ವಾಂಸರುಗಳಿಂದ ಸಮಾಜಕ್ಕೆ ಹೆಚ್ಚು ಅಪಾಯಕಾರಿಯೇ ಸರಿ. 

ಅದು ಎಷ್ಟೊಂದು ವಿಚಾರಗಳು  (ತೌಡು) ಬೇಡವೆಂದರೂ ಪ್ರತಿಯೊಂದು ಮನಸ್ಸುಗಳನ್ನು ವೇಗವಾಗಿ ತಲುಪುತ್ತಿದ್ದಾವೆಂದರೇ... ಈ ಯುಗ ವಿಷಯಗಳ ಇನ್ಪರಮೇಶನ್ ಯುಗವೆಂದರೇ ತಪ್ಪಿಲ್ಲ​.  

ಸುಳ್ಳನ್ನೇ ಸುದ್ಧಿ ಮಾಡಿ, ಅದರಿಂದ​ ಅನಾಹುತಗಳಾಗಿ, ಮುಗ್ಧ​ಜೀವಗಳು ಕೂನೆಯಾದಾಗ, ಇಲ್ಲ ಅದು ಕಣ್ಣು ತಪ್ಪಿನಿಂದಾದ​ ತಪ್ಪು ಎಂದು ಸಾವರಿಸಿಕೊಳ್ಳುವಲ್ಲಿ ಇದಕ್ಕೆ ಮೂಗುದಾರ ಹಾಕುವುವರು ಯಾರು ಅನಿಸುತ್ತೇ.
 
ಇಷ್ಟು ಸುಲಭದಲ್ಲಿ ಸಿಗುತ್ತಿರುವ ಈ ಅನುಕೂಲ ಅಷ್ಟೇ ಅನಾಹುತಕಾರಿ ಮತ್ತು ನಶ್ವರ ಅನಿಸುತ್ತಿದೆ.

ಹಾಗೆಯೇ ಪ್ರತಿಯೊಬ್ಬರೂ ತಮಗೆ ತಾವೇ ಪ್ರಶ್ನಿಸಿ ಪರಮರ್ಶಿಸಿಕೊಂಡು ಈ ಆನ್ ಲೈನ್ ಸೊಶಿಯಲ್ ಮೀಡಿಯ ಬಳಸುವುದು ಹಿತ ಮಿತ ಅನಿಸುತ್ತದೆ. 

ನಿಮ್ಮ ಬುದ್ಧಿ ನಿಮ್ಮ ನಿಮ್ಮ ಮೊಬೈಲ್ ಸ್ಕ್ರಿನ್ ನಲ್ಲಿ ಅನಿಸುವಂತೆ. ಒಂದೇ ಒಂದು ಕ್ಲಿಕ್ ಮಾಡುವ ಮುನ್ನಾ ನೂರು ಬಾರಿ ಯೋಚಿಸಿ ಚಿಂತಿಸಿ ಸಮಾಜಕ್ಕೆ ನೂರರಷ್ಟು ಉಪಯೋಗವಾಗುವ ವಿಡಿಯೋ, ಬರಹ​, ಮಾತನ್ನಾಡಿ ಎನ್ನೊಣವೇ?


ಬುಧವಾರ, ಜೂನ್ 30, 2021

ಲೈಬ್ರರಿ, ಮಕ್ಕಳು ಮತ್ತು ನಾಯಿ

ಇಲ್ಲಿಯ ಗ್ರಂಥಾಲಯಗಳೆಂದರೇ ಕೇವಲ ಪುಸ್ತಕಗಳು ಮಾತ್ರ ಇರುವ ಸ್ಥಳವಲ್ಲ. ಸಕಲ ವಿಧ ವಿಧವಾದ ಅನುಕೂಲಗಳನ್ನು ಸುತ್ತಲಿನ ಜನಗಳಿಗೆ ಒದಗಿಸುವ ಬಹು ಮುಖ್ಯ ಜಾಗ ಅಂದರೇ ತಪ್ಪಿಲ್ಲ.  

ನನಗೆ ತಿಳಿದ ಮಟ್ಟಿಗೆ ನಮ್ಮ ದೇಶದಲ್ಲಿ ಗ್ರಂಥಾಲಯಗಳಿಗೆ ಒಂದಷ್ಟು ಜನರು ತಮ್ಮ ಜೀವಮಾನದಲ್ಲಿ ಎಂದು ತಮ್ಮ ಕಾಲನ್ನು ಸಹ ಇಟ್ಟಿರುವುದಿಲ್ಲ. ಅಲ್ಲಿಗೆ ಹೋಗಿ ಏನು ಓದಬಹುದು ಎಂಬುದನ್ನೇ ತಿಳಿದಿರುವುದಿಲ್ಲ. 

ಅಲ್ಲಿ ಕೇವಲ ಪುಸ್ತಕಗಳು ಮಾತ್ರ ಇರುತ್ತವೆ.  ಅಲ್ಲಿ ಹೋಗಿ ಕೂತು ಓದುವಷ್ಟು ಸಮಯವೆಲ್ಲಿ? ಹಾಗಾಗಿಯೇ ನಮ್ಮ ಕೆಲ ಹಿರಿಯರಂತೂ ತಲೆಯನ್ನು ಸಹ ಹಾಕಿರುವುದಿಲ್ಲ.  

ಇನ್ನೂ ತರುಣ ಜನಾಂಗವನ್ನು ಕೇಳುವುದೇ ಬೇಡಬಿಡಿ!

ನಮ್ಮ ದೇಶದಲ್ಲಿ ಲೈಬ್ರರಿ ಎಂದರೇ ಓದುವ ಮಕ್ಕಳು ತಮಗೆ ಖರೀದಿ ಮಾಡಲು ಸಾಧ್ಯವಿಲ್ಲದಂತಹ ಪುಸ್ತಕಗಳನ್ನು ಶಾಲೆಯಲ್ಲಿನ ಲೈಬ್ರರಿಯಲ್ಲಿ , ಕಾಲೇಜು ಲೈಬ್ರರಿಯಲ್ಲಿ ಎರವಾಲು ಪಡೆದು ಓದಿ ವಾಪಸ್ಸ್ ಕೊಡುವ ಸ್ಥಳ ಮಾತ್ರ ಎಂದುಕೊಂಡಿರುತ್ತಾರೆ. 

ಹೆಚ್ಚು ಎಂದರೇ ವಿದ್ವಾಂಸರು, ಪಿ. ಎಚ್.ಡಿ ಸಂಶೋಧ ವಿದ್ಯಾರ್ಥಿಗಳು ತಮ್ಮ ಪುಸ್ತಕಕ್ಕಾಗಿ ಅಲ್ಲಿ ಇಲ್ಲಿನ ಹಳೆಯ ಪುಸ್ತಕಗಳನ್ನು ಹುಡುಕುವ ಮಂದಿರವೆಂದರೇ ತಪ್ಫಿಲ್ಲ.

ಸರ್ಕಾರಿ ಗ್ರಂಥಾಲಯಗಳು ನಾಡಿನ ಬಹುತೇಕ ಸ್ಥಳಗಳಲ್ಲಿ ಕೆಲಸವಿಲ್ಲದವರು ಹಾಯಾಗಿ ಕುಳಿತು ದಿನಪತ್ರಿಕೆಯನ್ನು ಓದುವ ಜಾಗ. ಹಿರಿಯರು ಮಧ್ಯಮ ವಯಸ್ಸಿನವರು ತಾವು ಒಂಟಿಯಾಗಿದ್ದರೇ ಸಮಯ ದೂಡಲು  ಯಾವುದೋ ಒಂದು ಪುಸ್ತಕ,ಪತ್ರಿಕೆ ಹಿಡಿದುಕೊಂಡು ಕೂರುವ ತಣ್ಣನೆಯ ಜಾಗ.  

ಅಲ್ಲಿರುವ ಪುಸ್ತಕಗಳೆಂದರೇ ಎಲ್ಲಿಯು ಮಾರಾಟವಾಗದೇ ಉಳಿದ  ಉಪಯೋಗಕ್ಕೆ ಬಾರದ ಪುಸ್ತಕಗಳನ್ನು ಸರ್ಕಾರ ಹೆರಳವಾಗಿ ತುಂಬಿರುವ ಜಾಗ ಮಾತ್ರ. 

ಆ ಪುಸ್ತಕಗಳನ್ನು ನೋಡಿದರೇ ಗೊತ್ತಾಗುತ್ತದೆ. ಎಂದೂ ಯಾರೊಬ್ಬರೂ ಓದದೇ ಹಾಗೆಯೇ  ದೊಡ್ಡ ದೊಡ್ಡ ಕಪಾಟುಗಳಲ್ಲಿದ್ದು ದೂಳು ಹಿಡಿದ ಪುಟಗಳು, ಮುಟ್ಟಲು ಭಯವಾಗುತ್ತದೆ !

ಸರ್ಕಾರಿ ಗ್ರಂಥಾಲಯಗಳಲ್ಲಿ ಯುವಕ ಯುವತಿಯರನ್ನು ಕಾಣುವುದು ದುಸ್ಸಾಧ್ಯದ ಮಾತು. 

ಈ ರೀತಿಯ ನನ್ನ ಗ್ರಂಥಾಲಯ ಕಲ್ಪನೆಯನ್ನು ಸುಳ್ಳು ಮಾಡುವಂತೆ ಕಂಡದ್ದು ಇಲ್ಲಿಯ ಲೈಬ್ರರಿಗಳನ್ನು ಕಣ್ಣಾರೆ ನೋಡಿದಾಗ. 

ನಾನು ಇಲ್ಲಿಯ ಗ್ರಂಥಾಯಲಗಳೂಳಗಿನ ಜನಜಂಗುಳಿಯನ್ನು ನೋಡಿ ದಂಗಾಗಿ ಹೋಗಿದ್ದೇ. ಇಷ್ಟೊಂದು ಸಂಖ್ಯೆಯಲ್ಲಿ ಇಲ್ಲಿನ ಜನಗಳು ಲೈಬ್ರರಿಯ ಕಡೆ ನಿತ್ಯ ಬರುವುದು ಸೂಜಿಗವನ್ನುಂಟು ಮಾಡಿತ್ತು.  

ನಮ್ಮೂರಿನ ಲೈಬ್ರರಿಯನ್ನು ನೋಡಬೇಕು. ಹೆಚ್ಚು ಎಂದರೇ ೧೦ ಜನಗಳನ್ನು ಕಾಣುವುದು ದಿನಪತ್ರಿಕೆ, ಮ್ಯಾಗಜಿನ್ ವಿಭಾಗದಲ್ಲಿ ಮಾತ್ರ. ಮೈನ್ ಗ್ರಂಥಾಲಯದ ಒಳಾಂಗಣ ಬೀಕೋ ಎನ್ನುತ್ತಿರುತ್ತದೆ. ಒಬ್ಬರೆ ಕುಳಿತುಕೊಳ್ಳಲು ಭಯವಾಗುವ ರೀತಿಯಲ್ಲಿ ಗೂಚರಿಸುತ್ತದೆ. ಮಕ್ಕಳನ್ನಂತೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಬಿಡಿ.  ಹೀಗೆ ಇರುವ ಚಿತ್ರಣಕ್ಕೆ ವಿರುದ್ಧವಾಗಿ ಕಂಡಿದ್ದು ಇಲ್ಲಿನ ಗ್ರಂಥಾಲಯಗಳು. 

ಅತ್ಯಂಥ ಬ್ಯುಸಿ ಸ್ಥಳವೆಂದರೇ ತಪ್ಪಿಲ್ಲ. ಪ್ರತಿ ಕುಟುಂಬವು ಈ ಲೈಬ್ರರಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಬೇಟಿ ಮಾಡಿ ಗ್ರಂಥಾಲಯದ ಸದೂಪಯೋಗವನ್ನು ಪಡೆದುಕೊಂಡಿರುತ್ತಾರೆ.  ಓದುವ ಮಕ್ಕಳಂತೂ ರಾಶಿ ರಾಶಿ ಪುಸ್ತಕಗಳನ್ನು ತಮ್ಮ ಚೀಲದ ತುಂಬ ತುಂಬಿಕೊಂಡು ಹೋಗುವುದನ್ನು ನೋಡಿದರೇ ಈ ಲೈಬ್ರರಿಗಳು  ನಮ್ಮ ದೇಶದ ಗ್ರಂಥಾಲಯಗಳಿಗಿಂತ ಎಷ್ಟು ಮುಂದುವರಿದ್ದಿದ್ದವೇ ಅನಿಸುತ್ತದೆ. ಹಾಗೆಯೇ ನಮ್ಮ ಲೈಬ್ರರಿಗಳನ್ನು ಹೋಲಿಸಿ ನೋಡಿದಾಗ ಬೇಸರವು ಆಗುತ್ತದೆ. 

ಯಾವುದೇ ಪ್ರಸಿದ್ಧ,ಮುಖ್ಯ, ಹೊಚ್ಚ ಹೊಸ ಪುಸ್ತಕಗಳು ಇಲ್ಲಿ ಲಭ್ಯವಿರುವುದು್. ವಿಶಾಲವಾದ ಜಾಗದಲ್ಲಿ ಅನುಕೂಲವಾದ ರೀತಿಯಲ್ಲಿ ಮಕ್ಕಳಿಗೆ, ಹಿರಿಯರಿಗೆ, ಓದುವ ವಿದ್ಯಾರ್ಥಿಗಳಿಗೆ, ಹಿರಿಯರಿಗೆ ಹೀಗೆ ನಾನ ವಿಭಾಗಗಳನ್ನು ಮಾಡಿರುವುದು. ಯಾವುದೇ ಪುಸ್ತಕಗಳು ಸಿಗದಿದ್ದಾಗ ಅಲ್ಲಿಯ ಸಿಬ್ಬಂದಿಯೇ ಹುಡುಕಿಕೊಡುವುದು. ಅನ್ ಲೈನ್ ನಲ್ಲಿ ಕಾದಿರಿಸಿದರೇ ಅವರೇ ಹುಡುಕಿ ಇಟ್ಟು ಈ ದಿನ ಬಂದು  ನೀವು ತೆಗೆದುಕೊಂಡು ಹೋಗಿ ಎನ್ನುವುದು. ಪುಸ್ತಕಗಳಲ್ಲದೇ ಚಲನಚಿತ್ರ, ಸೀರಿಯಲ್ ಡಿವಿಡಿ, ಸಿಡಿ ಗಳನ್ನು ತೆಗೆದುಕೊಂಡು ಹೋಗಬಹುದು.    

ಹಾಗೆಯೇ ವರ್ಷವಿಡೀ ಮಕ್ಕಳಿಗಾಗಿ, ಹಿರಿಯರಿಗಾಗಿ  ನಾನಾ  ಕಲಿಕಾ ಕಾರ್ಯಕ್ರಮಗಳು. ಓದುವುದು ಒಂದೇ ಅಲ್ಲದೇ ವಿಧ ವಿಧವಾದ ವಿಷಯಗಳನ್ನು ಕೌಶಲವನ್ನು ಕಲಿಯಬೇಕು ಎನ್ನುವ ಪ್ರತಿ ಮನಸ್ಸುಗಳಿಗೂ ನಾನಾ ಅವಕಾಶವನ್ನು ಒದಗಿಸುವ ಯೋಜನೆ ಮತ್ತು ಯೋಚನೆ ನನ್ನಂತೂ ಚಿಂತನಗೀಡು ಮಾಡಿತು.  

ಅಲ್ಲಾ ಕೇವಲ ಗ್ರಂಥಾಲಯವೊಂದು ಇಷ್ಟರ ಮಟ್ಟಿಗೆ ಜನರೊಡನೇ ನಿರಂತರವಾಗಿ ಸಂಪರ್ಕವನ್ನಿಂಟುಕೊಂಡಿರುವುದನ್ನು ನೋಡಿ ಖುಷಿಯಾಗುತ್ತದೆ. ಇಲ್ಲಿನ ಜನಗಳಿಗೆ ತಮ್ಮ ಜೀವನದಲ್ಲಿ ಅತಿ ಹತ್ತಿರವಾದ ಸ್ಥಳವೆಂದರೇ ಲೈಬ್ರರಿಯೆಂದರೇ ತಪ್ಪಿಲ್ಲ. ಹಾಗೆಯೇ ಮನಸ್ಸಿಗೆ ಹೊಸ ಹೊಸ ಯೋಚನೆಯನ್ನು ಪ್ರಚೋದಿಸುವ ಸ್ಥಳವೆಂದರೇ ತಪ್ಪಿಲ್ಲ. 

ಓದಿಗೆ ಹೊಂದಿಂಕೊಂಡಂತೆ ವಿವಿಧ ರೀತಿಯ ಕಲಿಕಾ ಕಾರ್ಯಕ್ರಮಗಳನ್ನು ವ್ಯಕ್ತಿಯ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳ ಆಚೆ ನಡೆಸುತ್ತಿರು ಇಲ್ಲಿಯ ಸರ್ಕಾರಿ ಲೈಬ್ರರಿಗಳು ನನಗಂತೂ ಸರಸ್ವತಿಯ ದೇವಾಲಯದಂತೆ ಭಾಸವಗುತ್ತದೆ. 

ಅಲ್ಲಿಯ ವಾತವರಣ  ಪ್ರತಿಯೊಬ್ಬರಿಗೂ ಆಹ್ಲಾದಕರವಾದ  ಪಾಸಿಟಿವ್ ವೈಬ್ರೇಷನ್  ಕೊಡುತ್ತದೆ. 

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ, ಚಿಕ್ಕ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಗ್ರಂಥಾಲಯಗಳ ಕಡೆಗೆ ಆಕರ್ಷಣೆಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿವೆ ಎನ್ನುವುದಕ್ಕೆ ಸಾಕ್ಷಿ: ಇಲ್ಲಿಯ ಮಕ್ಕಳ ಒಂದೇ ಮೊರೆತ- ಯಾವಾಗ ಮತ್ತೇ ಲೈಬ್ರರಿಗೆ ಹೋಗುಣ ಎನ್ನುವ ಅಪೇಕ್ಷೆ.


ಟೈಲ್ ವ್ಯಾಗಿಂಗ್ ಟ್ಯೂಟರ್:


ಒಂದು ವಾರದಿಂದ ಮಗ ಮತ್ತು ಹೆಂಡಿತಿ ಮುಂದಿನ ವಾರ ನಮ್ಮನು ಸರಿಯಾದ ಸಮಯಕ್ಕೆ ಲೈಬ್ರರಿಗೆ  ಕರೆದುಕೊಂಡು ಹೋಗಿ ಅಂದರು. 

ನಾನು ಏನು ವಿಶೇಷ ಅಂದರೇ... ಮಗ ನಾನು ಪುಸ್ತಕವನ್ನು ನಾಯಿಗೆ ಓದಿ ಹೇಳಬೇಕು ಎನ್ನಬೇಕೆ. 

ನನಗೆ ಅಚ್ಚರಿಯಾಯಿತು. 

ನಾಯಿ ಏನು ಕೇಳುತ್ತೇ ನೀನು ಓದುವುದು? 

ಅಲ್ಲಾ ನಿಜವಾದ ನಾಯಿಯನ್ನು ಅದು ಹೇಗೆ ಕರೆದುಕೊಂಡು ಬರುತ್ತಾರೆ? ಹಾಗೆಯೇ ನಾಯಿಗೆ ಹೇಗೆ ನಮ್ಮ ಭಾಷೆ ಗೊತ್ತು. ನನಗಂತೂ ಕನಪ್ಯೂಸನ್ ಆಗಿಬಿಟ್ಟಿತು.  

ಇದಂತೂ ಹೊಸ ವಿಷಯವೇ ಸರಿ!

 ನಮ್ಮ ನಮ್ಮ ಬುದ್ಧಿಯಂತೇ ಅದು ನಿಜವಾದ ನಾಯಿ ಇರಲ್ಲ ಅನಿಸುತ್ತದೆ. ಅದು ಕಂಪ್ಯೂಟರ್ ನಾಯಿಯಿರಬೇಕು. ಆದ್ದರಿಂದಲೇ ನೀನು ಓದುವುದು ಸರಿನೋ ತಪ್ಪು ಎಂಬುದನ್ನು ನಾಯಿ ಕಂಡುಯಿಡಿಯುತ್ತದೆ. ನೀನು ಪದಗಳನ್ನು ತಪ್ಪು ಉಚ್ಚರಿಸಿದರೇ ಬಾಲ ಅಲ್ಲಾಡುವಂತೆ ಪ್ರೋಗ್ರಾಮ್ ಮಾಡಿರುತ್ತಾರೆ. ಹೀಗೆ ಏನೇನೋ ಗೊತ್ತಿರುವ ರೀತಿಯ ನನ್ನ ಕಲ್ಪನೆಯ ಲಹರಿಯನ್ನು ಹರಿಬಿಟ್ಟೆ. 

ಅವನ ಅಮ್ಮ ಇಲ್ಲಾರೀ ಅದು ನಿಜವಾದ ನಾಯಿನೇ ಇರುತ್ತೆ. ಅವುಗಳಿಗೆ ಟ್ರೈನಿಂಗ್ ಕೊಟ್ಟಿರುತ್ತಾರೆ ಅಂಥ ತನ್ನ ಅನಲಿಸಿಸ್ ಉತ್ತರ ಕೊಟ್ಟಳು.

ನಾನು ಆಯ್ತು ನೋಡೆ ಬೀಡೋಣಾ. ಇದು ಸಹ ಹೊಸ ಅನುಭವ. ಹೋಗೋಣ ಅಂದೇ.  

ಒಂದು ದಿನ ಮುಂಚೆ ಲೈಬ್ರರಿಯನ್ ಕಾಲ್ ಮಾಡಿ ಬರುತ್ತಿರೋ ಇಲ್ಲವೋ ಎಂದು ನಿಗಧಿ ಮಾಡಿಕೊಂಡರು. 

ಅಂದು ನನ್ನ ಮಗನಿಗೆ ಪುಲ್ ಟೇನ್ ಶನ್ ಹೇಗೆ ಓದಬೇಕು? ಯಾವ ಪುಸ್ತಕ ಓದಬೇಕು? ಅವರು ಹೇಳಿದಂತೆ ೧೫ ನಿಮಿಷ ಓದಬೇಕಂತೆ. ಮೂರು ಪುಸ್ತಕಗಳಂತೂ ಬೇಕು. ನಾನು ಜೋರಾಗಿ ಓದಬೇಕು. ನಾಯಿಗೆ ಸರಿಯಾಗಿ ಕೇಳಬೇಕು. 

ನಾನು ಅದು ಬೇರೆ ನೀನು ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುತ್ತಿಯ. ನಾಯಿಗಂತೂ ಮಾಸ್ಕ್ ಇರಲ್ಲ! ಎಂದು ಇನ್ನೂ ಒತ್ತಡವನ್ನುಂಟು ಮಾಡಿದೆ.

ಅಂತೂ ಆ ದಿನ ಬಂದೇ ಬಿಟ್ಟಿತು. ನಾವೆಲ್ಲಾ ಸಿದ್ಧವಾಗಿ ಹೋಗಿ ನೋಡಿದರೇ. ಈಗಾಗಲೇ ಅಲ್ಲಿ ನಾಲ್ಕಾರು ಮಕ್ಕಳು ಕುಳಿತುಕೊಂಡು ಪುಟಾಣಿ ನಾಯಿ ಮರಿಗಳನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಕಥೆ ಓದುತ್ತಿದ್ದಾರೆ.  ನನ್ನ ಮಗನಿಗೆ ದೊಡ್ಡ ನಾಯಿಯನ್ನು ಕೊಟ್ಟಿದ್ದರೂ ಅದು ಮಲಗಿಕೊಂಡು ಇವನ ಕಡೆ ಒಮ್ಮೆ ನೋಡಿತು. ಇವನು ಅದರ ಹತ್ತಿರ ಒಬ್ಬನೇ ಹೋಗಿ ಕೂತುಕೊಂಡ. 

ನಾವುಗಳು ಹೊರಗಿಂದ ಚಿಕ್ಕ ಗ್ಲಾಸ್ ಮೊಲಕ ನೋಡಿ ಅಚ್ಚರಿಯಾಯಿತು. ಹೋಗುವ ಮೊದಲು ಅದು ಹೇಗೋ ಏನೋ  ಎಂದು ಅವನು ಚಿಕ್ಕ ನರ್ವಸ್ ಆಗಿದ್ದ. ಅದರೇ ಅವರು ಕರೆದ ತಕ್ಷಣ ಖುಷಿಯಾಗಿ ಹೋಗಿದ್ದು ಕಂಡು ಊಫ್ ಅಂದೇವು.

೧೫ ನಿಮಿಷ ಕಥೆಯನ್ನು ಓದಿ ಬಂದವನ ಅನುಭವ ಕಂಡು ಅಚ್ಚರಿಯಾಯಿತು. ನಾಯಿ ಅವನು ಓದುವ ಪುಸ್ತಕವನ್ನು ಮುಟ್ಟಲು ತವಕಿಸುತ್ತಿತ್ತಂತೆ. ಅವನು ಓದುವಾಗ ಒಮ್ಮೆಯು ಬಾಲವನ್ನು ಅಲ್ಲಾಡಿಸಲಿಲ್ಲವಂತೆ. ಅಂದರೇ ನಾನು ಓದಿದ್ದು ಏನೂ ತಪ್ಪಿಲ್ಲ ಎಂದು ಜಂಬಾಪಟ್ಟುಕೊಂಡಿದ್ದ. ಇನ್ನೊಮ್ಮೆ ನಾನು ಬರಬೇಕು, ಪ್ಲೀಜ್ ರಿಜಿಸ್ಟರ್ ಮಾಡಿಸು ಎಂದು ಅಮ್ಮನಿಗೆ ದಂಬಾಲು ಬಿದ್ದ ದಾರಿಯುದ್ದಕ್ಕೂ. 

ಈ ಇವೇಂಟ್ ಗೆ ಟ್ರೈನ್ ಮಾಡಿದ ನಾಯಿಗಳನ್ನು ಮಕ್ಕಳಿಗಾಗಿ ಕರೆದುಕೊಂಡು ಬಂದಿರುತ್ತಾರೆ. ಮಕ್ಕಳಿಗೆ ತಾವುಗಳು ಸ್ವತಂತ್ರವಾಗಿ ಬೇರೆಯವರಿಗೆ ಓದಿ ಅರ್ಥವಾಗುವಂತೆ ಹೇಳುವ ಕೌಶಲವನ್ನು ಅಳವಡಿಸಿಕೊಳ್ಳುವ ಅವಕಾಶ ಕಲ್ಪಿಸಿಕೊಡುತ್ತಾರೆ.  ಇದರಿಂದ ಮಕ್ಕಳ ಆತ್ಮ ವಿಶ್ವಾಸವು ಹೆಚ್ಚುತ್ತದೆ. ಹಾಗೆಯೇ ಯಾವ ಮಕ್ಕಳಿಗೆ ತಾನೇ ಡಾಗಿ ಡಾಗಿ ಡಾಲ್ ಇಷ್ಟ ಆಗಲ್ಲ ನೀವೇ ಹೇಳಿ?  


ಈ ರೀತಿಯಲ್ಲಿ ನಾನಾ ಕಾರ್ಯಕ್ರಮಗಳು ಮಕ್ಕಳನ್ನು ಗ್ರಂಥಾಲಯಗಳ ಕಡೆಗೆ ಕರೆದೊಯ್ಯುವಂತೆ ಮಾಡಿವೆ. ಲೈಬ್ರರಿಯೆಂದರೇ ಹೊಸ ಹೊಸ ಅನುಭವಗಳ ಹೊಂಗಿರಣವನ್ನು ಸೂಸುವ ಮಂದಿರ ಎನ್ನುವಂತಿದೆ ಅಮೇರಿಕಾದ ಎಲ್ಲಾ ಸ್ಥಳಗಳ ಗ್ರಂಥಾಲಯಗಳು. 

ನಮ್ಮ ದೇಶದ ಗ್ರಂಥಾಲಯಗಳು ಹೀಗೆಯೇ ಸರ್ಕಾರದ ಕೃಪಾಕಟಾಕ್ಷದಿಂದ ಮಕ್ಕಳು ಮರಿಗಳನ್ನು ಆಕರ್ಷಿಸುವಂತಾಗಲಿ ಎಂಬುದು ನಮ್ಮೆಯ ಕೋರಿಕೆ.


ಭಾನುವಾರ, ಮೇ 16, 2021

ಮತ್ತೇ ಮತ್ತೇ ಅದೇ ಸುದ್ಧಿ

ಅದೇ ಒಂದೇ ಮಾತು. ಕೇಳಿ ಕೇಳಿ ಬೇಜರಾಗಿದೆ ಮನಸ್ಸು. ಚಿಕ್ಕವರಿಂದ ಹಿಡಿದು ಹಣ್ಣು ಹಣ್ಣು ಮುದುಕರವರಿಗೆ. ಆ ಮೊಲೆಯಿಂದ ಹಿಡಿದು ಈ ಮೊಲೆಯವರಿಗೆ. ಪ್ರಪಂಚದ ಯಾವುದೇ ಜಾಗವನ್ನು ಬಿಡದೇ ಆವರಿಸಿರುವ ಸರ್ವಂತ್ಯಾರ್ಮಿ ಕರೋನಾ.  


ಒಂದು ವರುಷದಿಂದ ಈ ಒಂದು ಶಬ್ಧವನ್ನು ಪ್ರತಿಯೊಬ್ಬರೂ ಕೇಳಿ ಕೇಳಿ ಅದರಲ್ಲಿಯೇ ಡಾಕ್ಟರೇಟ್ ಪಡೆದರವರಂತೆ ಅಧ್ಯಯನವನ್ನು ಈ ರೋಗದಲ್ಲಿ ಮಾಡಿಬಿಟ್ಟಿದ್ದೇವೆನೋ. 


ಈ ಒಂದು ರೋಗವೇ ಬೇರೆ ಎಲ್ಲಾ ರೋಗಗಳನ್ನು ಅಳಿಸಿ ಹಾಕಿ ಬಿಟ್ಟಿದೆ. ಬೇರೆ ಎಲ್ಲಾ ರೋಗಗಳಿಗೆ ರಾಜನಂತೆ ಮೆರೆಯುತ್ತಿದೆ. 


ಈ ಒಂದು ರೋಗದ ಅನಾಹುತದ ಮುಂದೆ ಬೇರೆ ಎಲ್ಲಾ ಸಾವುಗಳು ನಗಣ್ಯವಾಗಿದೆ. ಭೂಮಿಯ ಮೇಲೆ ಯಾವ ಜಾಗವನ್ನು ಬಿಡದೇ ಬಿಂಬಿಡದ ಭೂತದಂತೆ ಕಾಡುತ್ತಿದೆ. 


ತನ್ನ ವಿಶ್ವ ರೂಪವನ್ನು ಹೊಸ ಹೊಸ ಅವತಾರದಲ್ಲಿ ನಿರೂಪಿಸುತ್ತ ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ತಲೆನೋವು ತಂದಿಟ್ಟಿದೆ. 


ಅದು ಎಷ್ಟು ಕಾರ್ಯಕ್ರಮಗಳು, ಅದು ಎಷ್ಟು ಸಾಹಿತ್ಯ, ಕವನ, ಲೇಖನಗಳು ಕಳೆದ ಒಂದು ವರುಷದಿಂದ ಈ ಒಂದು ವೈರಸ್ ಮೇಲೆ ಮಾಡಿದ್ದಾರೋ.. ಈ ಒಂದು ಶಬ್ಧವಿಲ್ಲದ ಮಾತೇ ದುರ್ಬರ.  ಮಾತೇ ವೇಸ್ಟ್ ಅನಿಸುವ ಮಟ್ಟಿಗೆ ಮೊದಲ ಮಾತೇ ಕೊರೋನಾ. ಏನಾದರೂ ಮಾಡೋಣ, ಚಿಂತಿಸೋಣ ಅಂದರೇ ಅದೇ ನೆನಪಿಗೆ ಬರುತ್ತಿದೆ


ಕಳೆದ ವರುಷ ಈ ರೋಗದ ಆರ್ಭಟಕ್ಕೆ ಪ್ರತಿಯೊಂದು ಬಂದ್. ಇಡೀ ವಿಶ್ವವೇ ಬಂದ್ ಅಂದರೇ ಅತಿಶಯೋಕ್ತಿಯಲ್ಲ.  ಯಾರೊಬ್ಬರೂ ಕನಸು ಮನಸ್ಸಿನಲ್ಲೂ ಹೀಗೆ ಆಗುತ್ತೇ ಎನ್ನುವುದನ್ನು ಯಾರೊಬ್ಬ ಬುದ್ಧಿವಂತನು, ಸಾಮಾನ್ಯನು ಯೋಸಿರಲಿಲ್ಲವೇನೋ. 


ತಾನೇ ಬುದ್ಧಿವಂತ, ಮನುಷ್ಯನಿಗೆ ನಿಲುಕದ ವಿಷಯ ಯಾವುದು ಇಲ್ಲವೇನೊ ಎನ್ನು ಮಟ್ಟಿಗೆ ಪ್ರತಿಯೊಂದೂ ರಂಗದಲ್ಲೂ ತಾನೇ ಬೇಸ್ಟ್ ಎನ್ನು ಮಟ್ಟಿಗೆ ಮೆಲುಗೈ ಸಾಧಿಸಿದವನು. 


ಆದರೇ ಕೊರೋನಾ ಕೊಟ್ಟ ಒಂದೇ ಒಂದು ಹೊಡೆತ ನಿಜವಾಗಿಯೂ ಇಡೀ ಮನುಕುಲದ ಯೋಚನೆಯ ದಿಕ್ಕನ್ನೇ ಬದಲಿಸಿದಂತೆ ಕಾಣುತ್ತಿದೆ. 


ಹಿಂದೆಯೆಲ್ಲಾ ಐ.ಟಿ ಬಿ.ಟಿ ಕೆಲಸಗಳನ್ನು ವ್ಯವಸ್ಥಿತ ಆಪೀಸ್ ಎ.ಸಿ ರೋಮು, ಜಗಮಗಿಸುವ ವಾತವರಣದಲ್ಲಿಯೇ ಮಾಡಬೇಕು. ಇದು ತುಂಬ ಸೆಕ್ಯುರಿಟಿ, ವೈಲೆನ್ಸ್, ಅದು ಇದು ಎಂದುಕೊಂಡು ಕ್ಯಾಂಪಸ್ ಒಳಗೆ ಬಿಡುವ ಮೊದಲು ಎಷ್ಟೊಂದು ಚೆಕ್ ಮಾಡಿ ಪ್ರತಿಯೊಬ್ಬರನ್ನೂ ಅನುಮಾನದ ರೀತಿಯಲ್ಲಿ ಕಾಣುತ್ತಾ ಸಾಪ್ಟವೇರ್ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಇಂದು ಅದೇ ಕೆಲಸ ಭಾರತದ ಅದು ಯಾವುದೋ ಗೊತ್ತಿಲ್ಲದ ಹಳ್ಳಿಯ ಗುಡಿಸಲಿನಲ್ಲಿದ್ದುಕೊಂಡು ಅಮೇರಿಕಾದ ಯಾವುದೋ ದೊಡ್ಡ ಕ್ಲೈಂಟ್ ಜೊತೆಯಲ್ಲಿ ಪ್ರಾಜೇಕ್ಟ ಸ್ಲೈಡ್ ರೀವಿವ್ ಮಾಡುತ್ತಿದ್ದಾರೇ. ಎಂದರೇ ಯೋಚಿಸಿ.  ಈ ವೈರಸ್ ಅದು ಹೇಗೆ ಅಂಥ ಸೇಕ್ಯುರಿಟಿ ಅದು ಇದು ದೊಡ್ಡ ದೊಡ್ಡ ಕಂಪನಿಗಳ ಕಾಂಪೌಂಡ್ ಬಿಟ್ಟು ಬಿಟ್ಟು ಕೊಡದ ಗುಟ್ಟುಗಳು ಆರಾಮಾಗಿ ಅಡುಗೆ ಮನೆಯಲ್ಲಿನ ಸೌಟು, ಪಾತ್ರೇ ತೊಳೆಯುವ ಶಬ್ಧದ ಬ್ಯಾಕ್ ಗ್ರೌಂಡ್ ಶಬ್ಧದಲ್ಲಿ ಚರ್ಚಿಸಲ್ಪಡುತ್ತಿವೆ. ಇದು ಇಷ್ಟರ ಮಟ್ಟಿಗೆ ಬದಲಾಗುತ್ತಿತ್ತು ಅನ್ನುವುದು ಯಾರಾದರೂ ಯೋಚಿಸಿದ್ದಾರಾ?


ವಿಶ್ವದ ಅದು ಎಷ್ಟೋ ಕಂಪನಿಗಳು ಇನ್ನೂ ಮುಂದೆ ಈ ಅಫೀಸ್ , ಕ್ಯೂಬಿಕಲ್ ಗಳ ಸಹವಾಸವೇ ಬೇಡ. ನೋ ಆಪೀಸ್. ಎಲ್ಲಾ ವರ್ಕ್ ಪ್ರಮ್ ಹೋಮ್ ಎಂದು ಶಾಶ್ವತವಾಗಿ ಬಾಗಿಲನ್ನು ಮುಚ್ಚಿ ಅವುಗಳಿಗೆ ಕೊಡುತ್ತಿದ್ದ ಮೈನ್ ಟನೇಸ್ ಹಣವನ್ನು ಉಳಿಸುತ್ತಿವೆ. 


ಒಂದು ದಿನ ಬಂದ್ ಎಂದರೇ ಬಾಯಿ ಬಾಯಿ ಬಡುಕೊಳ್ಳುತ್ತಿದ್ದ ಸರ್ಕಾರಗಳು ಇಂದು ದಿಕ್ಕು ತೋಚದೆ ಯಾವಾಗ ಬೇಕಾದರೂ ಬಂದನ್ನು ತಿಂಗಳುಗಟ್ಟಲೇ ಮಾಡುತ್ತಿವೆ. 


ಯಾವುದೇ ರಂಗವನ್ನು ತೆಗೆದುಕೊಂಡರೂ ಕರೋನ ಹೊಸ ಹೊಸ ದಿಕ್ಕುಗಳಲ್ಲಿ ಯೋಚಿಸುವಂತೆ ಮಾಡುತ್ತಿದೆ. ತಾನು ಬದುಕ ಬೇಕೆಂದರೇ ಹೇಗೆ ಏನಾದರೂ ಹೊಸ ಮಾರ್ಗದಲ್ಲಿ ಅನುಸರಿಸಬೇಕು ಎನ್ನುವಂತೆ ಸವಾಲು ಮಾಡುತ್ತಿದೆ. 


ಶಿಕ್ಷಣ ಕ್ಷೇತ್ರವನ್ನು ನೋಡಿದರೇ ಅಷ್ಟೊಂದು ದುಡ್ಡನ್ನು ಲೂಟಿ ಮಾಡುತ್ತಿದ್ದನ್ನು ಈಗ ಹೆತ್ತವರು ರಿಯಲೈಜ್ ಮಾಡಿಕೊಂಡಿದ್ದಾರೆ. ಮನೆಯಲ್ಲಿಯೇ ಆನ್ ಲೈನ್ ಪಾಠ ಅಂದು ಕೊಂಡು ಹೆತ್ತವರೇ ಉತ್ತಮವಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.  ಅಲ್ಲಾ ಜೀವನಕ್ಕೆ ಯಾವುದು ಮುಖ್ಯ ಅನ್ನುವುದನ್ನು ಕರೋನಾವೇನಾದರೂ ಹೇಳಿಕೊಡುತ್ತಿದೆಯೇ? ಗೊತ್ತಿಲ್ಲಾ!


ಅದು ಮಾಡುತ್ತಿರುವ ಅನಾಹುತಕ್ಕೆ ಬಹುತೇಕ ಮಂದಿ ತಮ್ಮ ತನು ಮನ ಧನ ಜೀವನವನ್ನೇ ಪರಿಪಾಡುಪಟ್ಟುಕೊಂಡಿದ್ದಾರೆ. 


ಯಾರಾದರೂ ಎಂದಾದರೂ ಯೋಚಿಸಿದ್ದಾರಾ ಹೀಗೆ ಜಗತ್ತಿನ ಎಲ್ಲಾ ವಿಮಾನಗಳನ್ನು ಒಮ್ಮೆಲೇ ಬಂದ್ ಮಾಡಿ ಒಂದು ಮೊಲೆಯಲ್ಲಿ ನಿಲ್ಲಿಸುತ್ತಿದ್ದರು ಎಂದು?


ಹೊಸ ಹೊಸ ಸವಾಲುಗಳನ್ನು ಮನುಷ್ಯ ಹಿಂದಿನಿಂದಲೂ ಎದರಿಸುತ್ತಲೇ ಬಂದಿದ್ದಾನೆ ಮತ್ತು ಜಯಶಾಲಿಯುಗುತ್ತಿದ್ದಾನೇ. 


ಅದಕ್ಕೆ ಸಾಕ್ಷಿ ಒಂದೇ ವರುಷದಲ್ಲಿ ಕರೋನಾ ಲಸಿಕೆ ಕಂಡುಹಿಡಿದಿರುವುದು. 


ಕಳೆದ ಎರಡು ತಿಂಗಳಿನಿಂದ ಯಾರನ್ನಾದರೂ ಮಾತನಾಡಿಸಿದರೇ ಮೊದಲ ಮಾತು ನೀವು ತೆಗೆದುಕೊಂಡಿದ್ದೀರಾ? ಅಂದರೇ ಲಸಿಕೆ! ಅಷ್ಟರ ಮಟ್ಟಿಗೆ ಇದರ ಮಾತೇ ಎಲ್ಲ ಕಡೆ! 


ನೋವು ನೋವು ಪ್ರತಿಯೊಬ್ಬರೂ ತಮ್ಮ ತಮ್ಮಲ್ಲಿ ಅನುಭವಿಸುವಂತಾಗಿದೆ. ಸ್ವಚ್ಚಂದವಾಗಿ ತನ್ನವರೊಡಗೂಡಿ ಅಲ್ಲಿ ಇಲ್ಲಿ ಸಂಚರಿಸುತ್ತಿದ್ದ ಪಕ್ಷಿಗಳ ರೆಕ್ಕೆಯನ್ನು ಕೂರೋನ ಎನ್ನುವ ವೈರಸ್ ಕತ್ತರಿಸಿದಂತಾಗಿದೆ. 


ಪ್ರಕೃತಿಯಲ್ಲಿ ಈಗ ಮನುಷ್ಯ ಎನ್ನುವ ಪ್ರಾಣಿ ತಾನೇ ಮುಖವನ್ನು ಮುಚ್ಚಿಕೊಳ್ಳುವಂತಾಗಿದೆ. ಇದನ್ನು ಕಂಡು ಎಲ್ಲಾ ಪ್ರಾಣಿಗಳು ಮುಸು ಮುಸು ನಗುತ್ತಿರುವಂತೆ ಬಾಸವಾಗುತ್ತಿದೆ. 


ಕಳೆದ ಎರಡು ವಾರಗಳಿಂದ ಭಾರತದಲ್ಲಿ ಆಗುತ್ತಿರುವ ಕರೋನ ಅನಾಹುತಗಳು ಮತ್ತು ಮನುಷ್ಯತ್ವವಿಲ್ಲದ ಮನಸ್ಸುಗಳ ಆರ್ಭಟಗಳನ್ನು ನೋಡಿದರೇ ಮನುಷ್ಯನು ಎಂದು ಒಳ್ಳೆಯದು ಕೆಟ್ಟದು ಇದರ ವ್ಯತ್ಯಾಸವನ್ನು ಕಲಿಯಲಾರೇನೋ ಅನಿಸುತ್ತಿದೆ. 


ಯಾವುದು ಮುಖ್ಯ ಅಮುಖ್ಯವೆಂಬುದನ್ನು ಎಂಥ ಸಮಯದಲ್ಲೂ ಕೆಲವರೂ ಕಲಿಯಲಾರನೇನೋ ಅನಿಸುತ್ತದೆ. 


ಹಾಗೆಯೇ ಸಾವಿರಾರು ಜನರ ಸಾವು ಯಾರ ತಪ್ಪಿಗಾಗಿ ಯಾರ ಸಾವು ನೋವು ಅನಿಸುತ್ತದೆ.  ಆದರೂ ಮನುಷ್ಯ ಎಲ್ಲಾವನ್ನು ತನ್ನ ಮನಸ್ಸಿನಿಂದ ತೆಗೆದು ಹಾಕಿ ಮುನ್ನುಗ್ಗುವನು. ಆದರೇ ಯಾವುದನ್ನು ತೆಗೆದು ಹಾಕಿ ಮುನ್ನುಗ್ಗಬೇಕು ಎಂಬುದನ್ನು ಕಂಡುಕೊಂಡರೆ ಒಳ್ಳೆಯದು.

ಭಾನುವಾರ, ಮೇ 2, 2021

ಮದುವೆ ಲವ್ ಚಡಪಡಿಕೆ

 ಕೇವಲ ಪುಸ್ತಕ, ಸಿನಿಮಾ, ಕವಿತೆಗಳಲ್ಲಿ ಓದಿ ಆನಂದಿಸಿದ್ದೆ ಬಂದಿದ್ದು ಪ್ರೀತಿ ಪ್ರೇಮದ ಜಾದುವಿನ ಪರಿಯನ್ನು. ಅನುಭವದ ಮೊಸೆಯಲ್ಲಿಯು ನೋಡಬಹುದು ಎಂಬುದಕ್ಕೆ ಮೆಟ್ಟಿಲಾಗಿದ್ದು ಈ ಮದುವೆಯೆಂಬ ಮೊರಕ್ಷರದ ಸ್ಪರ್ಶ.


ಅಲ್ಲಿ ಇಲ್ಲಿ ಓದಿ ತಿಳಿದಿದು ಮದುವೆಯೆಂಬ ಖೆಡ್ಡಕ್ಕೆ ಬಿದ್ದರೇ ಮುಗಿಯಿತು. ಬುದ್ಧಿಯಿಲ್ಲದವರು ಮಾತ್ರ ಮದುವೆಯಾಗುವುದು. ಮದುವೆ ಪ್ರೀತಿಗೆ ಪುಲ್ ಸ್ಟಾಪ್! ಮದುವೆಯೆಂಬುದು ಕೇವಲ ಜವಾಬ್ದಾರಿಯ ಜೀವನ. ಮದುವೆಯೆಂಬುದು ಅದು ಇದು, ಹಾಗೆ ಹೀಗೆ ಎಂಬ ಪ್ರಲಾಪದ ಪರಿಯನ್ನು ಮದುವೆಯಾದವರು, ಮದುವೆಯಾಗದವರು ಮಾಡುತ್ತಿದ್ದುದೆ. ಸಿನಿಮಾ ಕಾದಂಬರಿಗಳಲ್ಲಿ ಚಿತ್ರಿಸಿದ್ದು ಚಿತ್ರಿಸಿದ್ದೇ. ಇದನ್ನು ನೋಡಿದರೇ ಮದುವೆಯಾಗದವರು  ಹೆದರಿಕೆಯಿಂದ ಖುಷಿಯಾದರೇ! ಮದುವೆಯಾದವರು ಮದುವೆಯಾಗಿದ್ದಕ್ಕೆ ಪಶ್ಚಾತಾಪವನ್ನುಪಡುವಂತಾಗಿರುತ್ತಿತ್ತು. ಯಾಕೆಂದರೇ ಅವರುಗಳ ಪ್ರತಿಕ್ರಿಯೆ ಆ ರೀತಿಯಲ್ಲಿರುತ್ತಿತ್ತು.


ಆದರೇ ಅದು ಯಾವ ಘಳಿಗೆಯಲ್ಲಿ ಮದುವೆಯೆಂಬುದು ಪಕ್ಕಾ ಆಗಿ ನಾನು , ನೀನು ಎಂದು ಆ ಬ್ರಹ್ಮ ನಿರ್ಧರಿಸಿದನೋ. ಮುಗಿಯಿತು ನೀನೇ ನನ್ನ ಕನಸಿನ ರಾಣಿಯಾದೇ ನನ್ನ ನಿನ್ನ ಪ್ರೇಮಕ್ಕೆ ಮದುವೆಯೇ ಮುನ್ನುಡಿಯಾಯಿತು.


ಅಲ್ಲಾ ಗೆಳತಿ ನಾವುಗಳು ಅದು ಯಾವ ಜನುಮದ ಜೋಡಿಯೆಂಬ ರೀತಿಯಲ್ಲಿ ಮನದ, ಹೃದಯದ ಮಾತುಗಳನ್ನು ಪರಸ್ಪರ ತಟ್ಟುವಂತಾಯಿತು? ಅದು ಯಾವ ಮಾಯೆಯಲ್ಲಿ ನೀ ನನ್ನಲ್ಲಿ ಬೆರೆತು ಹೋದೇ? ಪ್ರೀತಿಯೆಂದರೇ ಹೀಗೇನಾ ಎನ್ನುವಂತಾದ್ದಾದರೂ ಆದವಾ ಘಳಿಗೆಯಲ್ಲಿ? ನಾನು ನೀನು ಅರಿತು ನಡೆಯಬೇಕೆಂಬ ತವಕ ಮೂಡಿದ್ದು ಎಲ್ಲಿಂದ? ಅದು ಎಲ್ಲಿಂದ ಪ್ರಾರಂಭವಾಯಿತು ನೀನಾಗೇನಾದರೂ ತಿಳಿದಿದೀಯಾ?


ಈ ಮುಂಚೆ ಒಬ್ಬರೊನ್ನೊಬ್ಬರೂ ಎಂದು ನೋಡಿಲ್ಲ. ಒಬ್ಬರೊನ್ನೊಬ್ಬರು ಎಂದು ಮಾತನಾಡಿಸಿಲ್ಲ. ಆದರೇ ಮದುವೆ ಎಂಬ ಶುಭ ಕಲ್ಯಾಣ ಬಂಧ ನಮ್ಮಿಬ್ಬರನ್ನು ಇಷ್ಟೊಂದು ಹತ್ತಿರ ತರುವಂತೆ ಮಾಡುವುದಕ್ಕೆ ಆದಾವ ದೇವರ ಆಶೀರ್ವಾದವಿರಬಹುದು? ಇದೂ ಸಹ ಇಷ್ಟೊಂದು ಪ್ರೀತಿಯ ಹೊರತೆಯಲ್ಲಿ ಮೀಯಿಸುವ ಮಟ್ಟಿಗೆ?


ಈ ನಮ್ಮಿಬ್ಬರ ಪ್ರೀತಿಯ ಸದೃಶ್ಯತೆ, ಮದುವೆ ಪ್ರೀತಿ, ಪ್ರೇಮಕ್ಕೆ ಕೊನೆ ಎಂದು ಹಾಡಿ ಹೊಗಳಿದವರ  ಬಾಯಿಯನ್ನು ಮುಚ್ಚಿಸುವಂತಿಲ್ಲವಾ ನೀನೇ ಹೇಳು ಗೆಳತಿ.


ಅದ್ಯಾವಾ ಸ್ಪರ್ಶ ನನ್ನ ನಿನ್ನ ಈ ಬಿಡಿಸಲಾರದ ಸೆಳೆತಕ್ಕೆ ಸಾಕ್ಷಿಯಾಯಿತು? ಪ್ರೀತಿಯನ್ನು ಹೇಗಲ್ಲಾ ಭಿನ್ನವಿಸಬಹುದು ಎಂಬುದಕ್ಕೆ ಸ್ಪರ್ಶಕ್ಕಿಂತ ಬೇರೆ ಭಾಷೆಯಿಲ್ಲವಾ ಎನ್ನುವಮಟ್ಟಿಗೆ ನಾವಿಬ್ಬರು ಮುದ್ದಾಡುವುದು. ನೀ ನನ್ನನ್ನು ಮುದ್ದಿಸುವುದೇ ನಿದರ್ಶನವಲ್ಲಾ? ಅಲ್ಲಿ ಮೌನವೇ ಕಾವ್ಯವಾಗಿರುತ್ತದೆ. 


ಗೆಳತಿ, ನಾ ನೀನಗೆ ಮೊದಲೇ ಹೇಳಿದೆ, ಮದುವೆ ಕೇವಲ ಹೆಂಡತಿಯನ್ನು ಕೊಡುವುದಿಲ್ಲ. ಅದು ಜೀವದ ಗೆಳತಿಯನ್ನು, ಜೀವನದ ಪ್ರೇಯಸಿಯನ್ನು, ಜೀವನದ ಜೀವವನ್ನು ಕೂಡುತ್ತದೆ.  ಪ್ರೀತಿಸುವುವರು ಕೇವಲ ಪ್ರೇಯಸಿಯನ್ನು ಮಾತ್ರ ಅವರ ಹುಡುಗಿಯಲ್ಲಿ ಕಾಣಬಹುದು. ನಾನು ನಿನ್ನಲ್ಲಿ ನಾನಾ ರೀತಿಯ ಜೀವನ್ಮಳೆಯನ್ನು ಕಾಣುವೆನು. 


ಇದೇ ಕಾರಣವಿರಬಹುದು. ನನ್ನ ಈ ಅಗಾಧ ಪ್ರೀತಿಯ ಝರಿಯ ಮೊರೆತ ಇಷ್ಟೊಂದು ಜಾಸ್ತಿಯಾಗಿರಲು. ನೀನೇ ಹೇಳು ಇದು ಸರಿ ತಾನೇ? ಯಾಕೆಂದರೇ ನೀ ಈ ರೀತಿ ಇಷ್ಟೊಂದು ಪ್ರೀತಿಸುವೇ ಎಂದು ಕನಸು ಮನಸಲ್ಲಿಯು ಯೋಚಿಸಿರಲಿಲ್ಲ!


ಮದುವೆ ಎರಡು ಕುಟುಂಬಗಳನ್ನು ಬೆಸೆಯುತ್ತದಂತೆ, ಆದರೇ ಹುಡುಗ ಹುಡುಗಿ ಪ್ರೀತಿ ಮಾಡುತ್ತಿದ್ದರೇ ಎರಡು ಕುಟುಂಬಗಳು ಯಾವ ರೀತಿಯ ಕೋಪ ದ್ವೇಷದಲ್ಲಿ ಬೇಯುತ್ತಾರೆ ಯಾಕೇ? ಪ್ರೀತಿ ಮಾಡುವವರಿಗೆ ಕೊನೆಯ ಗುರಿ ’ಮದುವೆ’ ಮಾತ್ರ ಅನಿಸುತ್ತದೆ.  ಅದಕ್ಕೆ ಇರಬೇಕು ಮದುವೆಯಾದ ಅನಂತರ ಪ್ರೀತಿ ಅದೂ ಆ ಮಟ್ಟಿಗೆ ಸಾಯಬಹುದು..


ಆದರೆ ನಮ್ಮಿಬ್ಬರ ಈ ಬಂಧನ  ಯಾರು ಅಳಿಸಲಾರದ ಬ್ರಹ್ಮಗಂಟು ಅನಿಸುತ್ತದೆ. ಆ ನಿನ್ನ ಮೊದಲ ದಿನದ ನಾಚಿಕೆ, ಅಂಜಿಕೆ, ಮೌನವೇ ನಿನ್ನ ಮುತ್ತಿನ ಆಭರಣಗಳಾಗಿದ್ದವು. ಪ್ರತಿಯೊಂದು ಹೊಸತು, ಪ್ರತಿ ನೋಟವು ಹೊಸತನ. 


ನೀನೇ ಹೇಳಿದ್ದೆ ’ಹಾಗೆಯೇ ನನ್ನನ್ನು ನೋಡಬೇಕಂತ’ ಆದರೇ ನೀನೇ ಪುನಃ ’ನಿಮ್ಮನ್ನು ಹಾಗೆಯೇ ನೋಡುತ್ತಾ ಇರಬೇಕೆಂದು ಅನಿಸುತ್ತಿದೆ’. ಇದೇ ಅಲ್ಲವಾ ಅಗಾಧ ಪ್ರೀತಿಯ ಚಿಲುಮೆಯ ಸಿರಿ.  ಯಾಕೇ ಹೀಗೆ ಪ್ರೀಯೇ ಪ್ರೀತಿಯೆಂದರೇ ಈ ಎಲ್ಲಾ ರೀತಿಯ ಭಾವನೆಯ ಸ್ಪುರಣೆಯಾಗಿದೆ?


ಮದುವೆಗೆ ಮುಂಚೆ ಕೇವಲ ಹೆತ್ತವರ ಮತ್ತು ಓಡನಾಡಿಗಳ ಪ್ರೀತಿಯನ್ನು ಕಂಡೂಂಡವರು ನಾವಿಬ್ಬರು.  ಅದರ ಹೊರತು ಸಿನಿಮಾ ಕಥೆಯ ಪ್ರೀತಿಯನ್ನು ಕಂಡಿದ್ದೆವು. ಹುಡುಗ ಹುಡುಗಿ ಪ್ರಿತಿಯೆಂದರೇ ತುಂಬಾ ತಮಾಶೆಯೆನಿಸುತ್ತಿತ್ತು.  ಅಲ್ಲವಾ ಎಲ್ಲೋ ಹುಟ್ಟಿದ ಎರಡು ಜೀವಗಳು ಅದು ಹೇಗೆ ಪರಸ್ಪರ ಇಷ್ಟೊಂದು  ಬಿಡಿಸಿಲಾರದ ಭಾಂದವ್ಯಕ್ಕೆ ನಿಲ್ಲುತ್ತಾರೆ? ಲವ್ ಎಂಬ ನಾಲ್ಕು ಅಕ್ಷರಗಳಿಗೆ ಇಷ್ಟೊಂದೂ ಮಾಂತ್ರಿಕ ಶಕ್ತಿಯೇ ಅನಿಸುತ್ತಿತ್ತು. 


ಮೊನ್ನೆ ನೀನೇ ಹೇಳುತ್ತಿದ್ದೆ ಅದು ಯಾರೋ ನಿನ್ನ ಗೆಳತಿ ಅವಳ ಪ್ರಿಯಕರನನ್ನು ಬಿಟ್ಟಿಲಾರದಷ್ಟು ಅಶಕ್ತಳಾಗಿದ್ದಳೇ! ಅಂದರೇ ಅದೇ ನಿಜವಾದ ಪ್ರೀತಿ! ಯಾಕೆಂದರೇ ನನಗದು ಹಾಗೆಯೇ ಅನಿಸುತ್ತದೆ ಎಂದು. 


ಹೌದು ಈ ಪ್ರೀತಿಗೆ ಅಷ್ಟೊಂದು ಶಕ್ತಿಯೆದೆ. ಯಾರನ್ನಾದರೂ ನಿಷ್ಕಾರಣವಾಗಿ ಪ್ರೀತಿಸಿ  ಸುಲಭವಾಗಿ ಗೆಲ್ಲಬಹುದಾಗಿದೆ. ಪ್ರೀತಿ ಹರಿದಷ್ಟು ಬೆಳೆಯುತ್ತದೆ. ಪ್ರೀತಿ ಕೊಟ್ಟಷ್ಟು ಅಕ್ಷಯವಾಗುತ್ತದೆ.  ಖಾಲಿಯೆಂಬುದೇ ಇಲ್ಲ ಅನಿಸುತ್ತದೆ.  ಪ್ರೀತಿ ಮಾಡುವ ಮನಸ್ಸುಗಳು ಅತಿ ಶ್ರೀಮಂತವಾಗಿರುವುವು ಪ್ರೀತಿಯಿಂದಲೇ. ತಾವು ಮಿಂದು ಬೇರೆಯವರಿಗೂ ಸಮನಾಗಿ ಹಂಚುವ ಏಕೈಕ ವಸ್ತು ಈ ಪ್ರೀತಿ!!!


ಇಷ್ಟೊಂದು ಚಡಪಡಿಕೆಯಲ್ಲಿ ನಾವಿಬ್ಬರೂ ಬೆಂದರೂ, ಅಲ್ಲಾ ಪುನಃ ನನ್ನನ್ನೇ ಕೇಳುವುದು ’ ಹೌ ಟು ಎಕ್ಸ್ ಪ್ರೇಸ್ ಲವ್’. ಅಲ್ಲಾ  ಈ ನಿನ್ನ ಚಡಪಡಿಕೆಯೇ ಪ್ರೀತಿ! ನನ್ನ ಬಗ್ಗೆ ನೀನಗೆ ಇರುವ ಈ ಕಾಳಜಿಯೇ ಪ್ರೀತಿ. ನೀ ನನ್ನ ಮುದ್ದಾಡುವುದೇ ಪ್ರಿತಿ. ನಿನ್ನ ನನ್ನ ಉಸಿರು ಒಂದಾಗಿರುವುದೇ ಪ್ರೀತಿ. ನೀ  ನನ್ನ ಇಷ್ಟ ಕಷ್ಟಗಳನ್ನು ಸಹಿಸಿಕೊಳ್ಳುವುದು ಪ್ರೀತಿ. ಅಲ್ಲಾ ಪ್ರೀತಿ ಮಾಡುತ್ತೆವೆಂದರೇ ನನ್ನನ್ನು ನನ್ನ ಹಾಗೆಯೇ ಸ್ವೀಕರಿಸುವುದು ಅದೇ ಅಲ್ಲವಾ ಪ್ರೀತಿ. ಹಾಗೆಯೇ ಹೆಣ್ಣು ನೀ ನನ್ನನ್ನು ಅದೆಷ್ಟು ಪ್ರೀತಿಸುತ್ತಿಯಾ ಎಂಬುದಕ್ಕೆ ಹೆಣ್ಣು ತನ್ನನ್ನು ಪರಿಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾಳೆ ಎಂದರೇ ಅದು ತಾನು ಇಷ್ಟಪಟ್ಟು, ಪ್ರೀತಿಪಟ್ಟ ಜೀವದ ಪ್ರಾಣ ಗೆಳೆಯನ ಜೊತೆಯಲ್ಲಿ ಮಾತ್ರ! ಇದೇ ಅಲ್ಲವಾ ಪ್ರೀತಿ!


ಆದರೂ ಹೆಣ್ಣಾಗಿ ನೀನಗೆ ನೂರಾರು ಅನುಮಾನಗಳು. ಹೆಣ್ಣು ಹುಟ್ಟಿದಾಗಲೇ ಅನುಮಾನಗಳು ಜನನವಾಯಿತಾಲ್ಲವಾ? ಇದಕ್ಕೇ ನೀನೇ ಉದಾಹರಣೆ; ಪ್ರತಿ ನಿತ್ಯ  ಹತ್ತು ಹಲವು ಪ್ರಶ್ನೆಗಳು ಅದು ನಿನ್ನ ನನ್ನ ಪ್ರೀತಿಯ ಮೇಲೆಯೇ.  ಈ ಪ್ರೀತಿಯನ್ನು ನಾನು ಇನ್ನೂ ಗಟ್ಟಿ ಮಾಡಿಕೊಂಡಿದ್ದು ಈ ನಿನ್ನ - ನೀ  ನನ್ನ ಎಷ್ಟು ಪ್ರೀತಿಸುವೆ?  ಎಲ್ಲಿಯವರೆಗೇ ಪ್ರೀತಿಸುವೇ? ಈಗ ನಿನ್ನ ಪ್ರೀತಿ ಕಡಿಮೆಯಾಗಿದೆ ಅಲ್ಲವಾ?


ಹೀಗೆ ತರಾವೇರಿ ಪ್ರಶ್ನೆಗಳು. ಸಂಶಯದ ಹುತ್ತ ನಿನ್ನಲಿದೆಯಾ? ಒಮ್ಮೆ ನಾನು ನೀನು ಸೇರಿದ್ದೆವೆ ಅಂದರೇ ಅದು ಎಂದಾದರೂ ಕಡಿಮೆಯಾಗುವ ಸಂಶಯವೇ? ಈ ಪ್ರೀತಿ ಹೀಗೆಯೇ ನಿನ್ನ ನನ್ನ ನಡುವೆ ನಿರಂತರ ಹರಿಯುವ ತೂರೆಯಾಗಿರುವುದು ಎಂದೆಂದಿಗೂ.

ಭಾನುವಾರ, ಏಪ್ರಿಲ್ 11, 2021

ಚೈತ್ರ ಮಾಸ

 ಕಾಲ ಎಲ್ಲವನ್ನೂ ಬದಲಾಯಿಸುವುದು ಎನ್ನುವುದಕ್ಕೆ ಈ ವಸಂತ ಋತುವೇ ಸಾಕ್ಷಿ. ವಸಂತ ಕಾಲವೆಂದರೇ ಕೇಳ ಬೇಕೇ?  ನಿಸರ್ಗದ ಪ್ರತಿ ಗಿಡ ಮರಗಳು ತಮ್ಮ ತಮ್ಮ ಹಸಿರು ಹಣ್ಣೆಲೆಗಳನ್ನುದುರಿಸಿಕೊಂಡು ಚಿಗುರು ಎಲೆಗಳನ್ನು ಮೈತುಂಬಿಕೊಳ್ಳುವ ದಿನಗಳು.


ಎಲೆಗಳು ಚಿಗುರುವುದಕ್ಕೂ ಮೊದಲು ಪ್ರತಿ ಗಿಡ ಮರಗಳು ಮೈತುಂಬ ಹೊವಿನ ಮೊಗ್ಗುಗಳನ್ನು ತುಂಬಿಕೊಂಡಿರುವುವು. 


ಇಲ್ಲಿ ಅಮೇರಿಕಾದಲ್ಲಿನ ಪರಿಸರವೇ ವಿಚಿತ್ರ ಮತ್ತು ವಿಸ್ಮಯ! ವಿಂಟರ್ ದಿನಗಳಲ್ಲಿ ಎಲ್ಲಾ ಗಿಡ ಮರಗಳು ಎಲೆಗಳಿಲ್ಲದ ಕೇವಲ ಎಲುಬುಗಳನ್ನು ಮೈವೊತ್ತಂತೆ ತಮ್ಮ ರೆಂಬೆ ಕೊಂಬೆಗಳೊಂದಿಗೆ  ತಣ್ಣನೆಯ ಮಂಜಿಗೆ, ಚಳಿಗಾಳಿಗೆ ಎದೆವೊಡ್ಡಿ ನಿಂತು ಜಯಶಾಲಿಗಳಾದಂತೆ ಸ್ಪ್ರಿಂಗ್ ದಿನಗಳಿಗೆ ಕಾದಿರುವುವು.  


ಇದೀಗ ಇಲ್ಲಿಯು ವಸಂತ ಕಾಲ ಶುರುವಾಗುತ್ತಿದೆ. ಕಳೆದ ಎರಡು ಮೂರು ದಿನಗಳಿಂದ ಪ್ರತಿ ಮರ ಬಳ್ಳಿಗಳು ಬಗೆ ಬಗೆಯ ಮೊಗ್ಗುಗಳನ್ನು ಹೊವು ಮತ್ತು ಚಿಗುರುಗಳನ್ನು ಹೊಮ್ಮಿಸಿಕೊಳ್ಳುತ್ತಾ ನಾವುಗಳು ಸಹ ಹೊಸ ಜೀವನಕ್ಕೆ ತಯಾರಾಗಿದ್ದೇವೆ ಎಂಬಂತೆ ಕಣ್ ಮನಗಳಿಗೆ ಹಬ್ಬವನ್ನೂಣಿಸುತ್ತಿವೆ. 


ಇಲ್ಲಿನ ಪ್ರತಿ ರಸ್ತೆಯ ಬದಿಯ ಮತ್ತು ಚಿಕ್ಕ ಪುಟ್ಟ ಪಾರ್ಕಗಳಲ್ಲಿನ ಪುಟ್ಟ ಮತ್ತು ದೊಡ್ಡ ಮರಗಳು ಮೈದುಂಬಿಕೊಂಡಿರುವ ಬಿಳಿ ಹೊಗಳನ್ನು ಪೂರ್ತಿಯಾಗಿ ನೋಡಿದರೇ.. ಮದುವಣಗಿತ್ತಿಯ ಸ್ವಾಗತಕ್ಕೆ ಹತ್ತು ಹಲವು ಮುತ್ತೈದೆಯರು ಮೈತುಂಬ ಹೊಚ್ಚ ಹೊಸ ಬಿಳಿ ರೇಶ್ಮೆಯ ಸೀರೆಯನ್ನು ಮೈತುಂಬ ಉಟ್ಟುಕೊಂಡು ಸಡಗರದಿಂದ ಕಾಯುತ್ತಿರುವಂತೆ ಭಾಸವಾಗುತ್ತಿದೆ. 


ಹತ್ತು ಹಲವು ಬಗೆಯ ಭಿನ್ನ ಭಿನ್ನ ರೀತಿಯ ಬಣ್ಣಗಳು. ಬಗೆ ಬಗೆಯ ವೈವಿಧ್ಯಮಯವಾದ ಸಸ್ಯ ವರ್ಗಗಳು ತಮ್ಮ ಪ್ರಬೇಧದ ಗುಣಕ್ಕೆ ತಕ್ಕಂತೆ ಬಿಳಿ, ಹರಿಸಿಣ, ಕೆಂಪು, ನೆರಲೆ ಬಣ್ಣಗಳ ಹೊವುಗಳನ್ನು ನಳನಳಿಸಿಕೊಂಡು ಸಿಂಗಾರ ಮಾಡಿಕೊಂಡು ಹೊಳೆಯುತ್ತಿವೆ. 


ಕಳೆದ ಕೆಲವು ದಿನಗಳಿಂದ ಹೊಗಳ ಮೊಳೆತ ಕಂಡರೇ ಸ್ವರ್ಗವೇ ಭುವಿಗೆ ಬಂದಂತಹ ಅನುಭವ.


ಪ್ರತಿ ಸಸ್ಯ ಸಂಕೂಲವು ಆರೋಗ್ಯಕರವಾಗಿ ದಷ್ಟಪುಷ್ಟವಾಗಿ ನಳನಳಿಸುತ್ತಿವೆ. 


ಇಂದೋ ಮುಂಜಾನೆಯಿಂದ ತುಂತುರು ಮಳೆ ಹನಿ.  ಇದು ವಂಸಂತೋತ್ಸವ. ಇಡೀ ಭೂಮಿಯನ್ನೇ ಸಾರಿಸಿ ಹೂರೆಸಿ ನೀರು ಸಿಂಪಡಿಸಿ ಸಂಭ್ರಮದ ದಿನಕ್ಕೆ ಸಜ್ಜು ಮಾಡಿದಂತಹ ಮಣ್ಣಿನ ವಾಸನೆ. 


ಹಾಗೆಯೇ ಬಾನೇ ಭೂಮಿಯ ಶೃಂಗಾರವನ್ನು ಕಂಡು ಕರಗಿ ಕರಗಿ ಜೇನು ಹನಿದಂತೆ ಆಗೊಮ್ಮೆ ಹೀಗೊಮ್ಮೆ ಮಳೆ ಹನಿಯ ಮಂತ್ರ ಸ್ಪರ್ಶ! ಮರ ಗಿಡಗಳು ಬಳ್ಳಿಗಳ ಎಲೆಗಳು, ಹೊವಿನ ಮೇಲಿನ ನೀರಿನ ಹನಿಯನ್ನು ಭಾನೇ ಕೈಯಾರೆ ಜೇನಿನ ಹನಿಯನ್ನು ಹನಿಸಿದಂತಹ ಚಿತ್ರಣ!


ಯಾಕೋ ಏನೋ ಮುಂಜಾನೆಯಿಂದ ಸೂರ್ಯನ ಕಿರಣಗಳು ಧರೆಯ ವೈಭೋಗವನ್ನು ಕಂಡು ನಾಚಿ ನೀರಾದಂತಹ ಅನುಭವ! ಧರೆಯ ಹಸಿರು, ಬಿಳಿ, ಕೆಂಪು, ಹರಿಸಿಣ ಬಣ್ಣಗಳ ರಂಗಿನ ವೈಯಾರಕ್ಕೆ ಬೆಕ್ಕಸ ಬೆರಗಾಗಿ ತಾನು ಹೇಗೆ ತಾನೇ ನಿನ್ನನ್ನು ಕಣ್ಣ ತುಂಬಿಕೊಳ್ಳಲಿ ಎಂದು ಮೊಡದ ಮರೆಯಲ್ಲಿ ಕಣ್ಣ ಮುಚ್ಚಾಲೆಯಲ್ಲಿ  ದಿನಕರನು ಮುಳುಗಿರುವಂತೆ ಅನಿಸುತ್ತಿದೆ. 


ಹಾಗೊಮ್ಮೆ ಹೀಗೊಮ್ಮೆ ಕದ್ದು ಮುಚ್ಚಿ ಕಣ್ಣು ತುಂಬಿಕೊಳ್ಳುತ್ತಿರುವ ನವ ತರುಣನ ರೀತಿಯಲ್ಲಿ ಬೆಳ್ಳಿಯ ಸೂರ್ಯನ ಕಿರಣಗಳ ಬಿಂಬ ಮಳಯ ತುಂತುರು ಜೊತೆಯಲ್ಲಿ ಕಾಣಿಸುತ್ತಿದೆ. 


ಇನ್ನೇನೂ ನಾನು ಈಗ ಹೋಗಲೇ ಬೇಕು ಭೂಮಿಯ ಇನ್ನೊಂದು ಭಾಗಕ್ಕೆ ಎಂದುಕೊಂಡು ಆಗಿದ್ದಾಗಲಿ ಈ ಸುಂದರಮಯವಾದ ನೋಟವನ್ನು ಹೀರಿಕೊಳ್ಳೊಣ ಎನ್ನುವಂತೆ ರವಿಯ ಕಿರಣಗಳ ಚಿತ್ತಾರ  ಈ ಸಿಹಿ ಸಂಜೆಯಲ್ಲಿ.


ಮಳೆ ನಿಂತ ಮೊಡದ ನಡುವಿನ  ಕಿರಣಗಳ ಸಪ್ಪಳ. ಇದೇ ಸವಿ ಸಮಯವೆಂಬಂತೆ ನಬೋಮಂಡಲದಲ್ಲಿ ಸಪ್ತ ವರ್ಣಗಳ ಕಾಮನಬಿಲ್ಲು ಮೂಡಿ ಧರಣಿ ಮಂಡಲದ ವಸಂತಾಗಮನದ ಉತ್ಸವಕ್ಕೆ ಹೊಸ ಚಿತ್ತಾರವನ್ನು ಬಿಡಿಸಿದಂತಹ ಅನುಭವ.


ಮಕ್ಕಳು ಮರಿಗಳು ಮನೆಯಿಂದ ಹೊರಬಂದು ಈ ಸುಂದರ ಸಂಜೆಯ ವರ್ಣಮಯ ದೃಶ್ಯವನ್ನು ಸಿಹಿ ಸಿಹಿಯಾಗಿ ಕಣ್ಣು ತುಂಬಿಕೊಳ್ಳುತ್ತಾ ನಿಂತಿದ್ದೇ ಬಂತು.


ಈ ಹಬ್ಬದೊಕುಳಿಯನ್ನು ಕಂಡು ಪ್ರತಿ ಮನಸ್ಸುಗಳು ಹೊಸ ವರುಷದ ಸ್ವಾಗತಕ್ಕೆ ಸಜ್ಜಾದಂತೆ ಕಂಡುಬಂತು. ಅದಕ್ಕೆ ಇರಬೇಕು ಯುಗಾದಿ ಈ ವಸಂತ ಕಾಲ ಚೈತ್ರ ಮಾಸದಲ್ಲಿಯೇ ಪ್ರತಿ ಭಾರಿ ಬರುವುದು.  ಆಶ್ಚರ್ಯವಲ್ಲವೇ? 


ಇದೇ ನಿಜವಾದ ವರುಷ ಮತ್ತು ಹರುಷ! ಪ್ರಕೃತಿಯೇ ನವ ಜನುಮ ಪಡೆದಂತೆ ಮತ್ತು ನಡೆದಂತೆ.



ಶುಭಾಶಯಗಳು ಹೊಸ ದಿನಗಳಿಗೆ!