ಮಂಗಳವಾರ, ಮಾರ್ಚ್ 22, 2011

ಸ್ನೇಹದ ಕಡಲಲ್ಲಿ.. ನೆನಪಿನ ದೋಣಿಯಲ್ಲಿ..

ಬಹು ದಿನಗಳ ಮೇಲೆ! ವರ್ಷಗಳೇ ಕಳೆದವು ಅನಿಸುತ್ತದೆ. ಮತ್ತೇ ಆ ದಿನಗಳ ಪುನರ್ ಮಿಲನದ ಸುಸಮಯ ಮೊನ್ನೆ ಹೊದಗಿತ್ತು. ಕಾಲೇಜು ದಿನಗಳ ಅದೇ ಒಂದು ಹರಟೆ ಹರಟೆ ಕಾಡು ಹರಟೆಯನ್ನು ಪುನಃ ಮಾಡಿದೆವು ಅನಿಸುತ್ತಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದ ಪಯಣದಲ್ಲಿ ತಮ್ಮ ಕಾಲೇಜು ದಿನಗಳನ್ನು ಮುಗಿಸಿಕೊಂಡು ತಮ್ಮ ತಮ್ಮ ದಾರಿಯನ್ನು ಕಂಡುಕೊಂಡ ನಂತರ ಒಟ್ಟಿಗೆ ಸೇರಿರುವ ಸಮಯ ಇದಾಗಿತ್ತು ಅನಿಸುತ್ತಿದೆ!

ಅದು ನಮ್ಮ ಸ್ನೇಹಿತನ ಮದುವೆಯಲ್ಲಿ ಪುನಃ ನಮ್ಮ ಎಲ್ಲಾ ಹಳೆಯ ಗೆಳೆಯರ ಬೇಟಿ.

ಅದು ಎಷ್ಟರ ಮಟ್ಟಿಗೆ ಪರಸ್ಪರ ಅಪರೂಪದವರಾಗಿದ್ದೇವೆ ಅಂದರೇ ನಾವುಗಳೆಲ್ಲ ಇರುವುದು ಬೆಂಗಳೂರಿನಲ್ಲಿಯೇ ಅದರೇ ಒಬ್ಬರೂಬ್ಬರ ಮುಖತಃ ಬೇಟಿಯೇ ಇಲ್ಲ. ಎಲ್ಲರೂ ತಮ್ಮ ತಮ್ಮ ಬದುಕಿನ ಕಾಯಕದಲ್ಲಿ ನಿರತರಾಗಿದ್ದಾರೆ. ಹಾಗೆಯೇ ಒಬ್ಬರಿದ್ದ ಜೀವನ ಜೋಡಿಯಾಗಿದೆ ಮತ್ತು ಹೊಸ ಜೀವದ ಆಗಮನವಾಗಿದೆ. ಸಂಸಾರ ಅಂದರೇ ಹೀಗೆ ಇರಬೇಕು ಸ್ವಾಮಿ ಎಂಬ ರೀತಿಯಲ್ಲಿ "ಯಾವುದಕ್ಕೂ ಸಮಯ ಇಲ್ಲ ಕಣೋ ತಿಪ್ಪಾ!" ಎಂಬ ಉತ್ತರ.

ತಮ್ಮ ಮನೆಯಾಯಿತು ತಾವುಗಳು ಕೆಲಸ ಮಾಡುವ ಕಂಪನಿಯಾಯಿತು.. ಅಲ್ಲಿಯ ಕೆಲಸ ವಾರಾಂತ್ಯದಲ್ಲಿ ಮನೆಯ ಮುಖ್ಯ ಕೆಲಸಗಳನ್ನು ಮುಗಿಸಿದರೇ ಸಾಕಾಪ್ಪ ಎಂಬ ಹಂಬಲ.. ಹೀಗೆ ತಮ್ಮ ತಮ್ಮಲ್ಲಿಯೇ ಬೇರೆ ಯಾವುದಕ್ಕೂ ಜಾಗವೇ ಇಲ್ಲದಂತಹ ಭಾವನೆ.

ಭಾನುವಾರದ ರಜೆಯಾದ್ದರಿಂದ ಅಂದುಕೊಂಡ ಕೆಲವರುಗಳು ಸ್ನೇಹಿತನ ಮದುವೆಗೆ ಬಂದಿದ್ದರು. ಅದರೂ ನಿರೀಕ್ಷೆ ಮಾಡಿದಷ್ಟು ಮಂದಿ ಬಂದಿರಲಿಲ್ಲ. ಯಾಕೆಂದರೇ ಮದುವೆ ಜರುಗಿದ್ದು ಬೆಂಗಳೂರಿನಿಂದ ೨೬೦ ಕಿ.ಮಿ ದೂರದಲ್ಲಿ. ಬೆಂಗಳೂರಿನಿಂದ ಹಲವಾರು ಬಸ್ಸುಗಳನ್ನು ಬದಲಾಯಿಸಿ ಅಷ್ಟೂ ದೂರ ಪ್ರಯಾಣ ಮಾಡಿ ಅದು ತಮ್ಮ ಸಂಸಾರವನ್ನು ಬಿಟ್ಟು ಬರುವಂತಹ ಹಂಬಲವಿರುವುದು ಕಷ್ಟವೇ ಸರಿ! ಸಿಗುವ ಎರಡು ರಜಾ ದಿನಗಳನ್ನು ಈ ಸುಡು ಬಿಸಿಲಿನಲ್ಲಿ ಪ್ರಯಾಣ ಮಾಡುತ್ತಾ ಕೂಲ್ಲುವುದು ಇನ್ನೂ ಕಷ್ಟ!


ಅವರುಗಳಿಗೂ ಎಲ್ಲಾ ಹಳೆಯ ಗೆಳೆಯರನ್ನು ಇಂಥ ಸಮಯದಲ್ಲಿ ಮಾತ್ರ ಬೇಟಿ ಮಾಡಬಹುದು ಎಂಬುದು ಗೊತ್ತು. ಅದರೇ ಏನೂ ಮಾಡಲು ಸಾಧ್ಯವಿಲ್ಲ. ಅವರುಗಳಿಗೆ ಅವರದೇಯಾದ ತೊಂದರೆಗಳು ಮತ್ತು ಸಕಾರಣಗಳು.

ಜೀವನದಲ್ಲಿ ಒಮ್ಮೆ ಮಾತ್ರ ಘಟಿಸುವ ನಮ್ಮ ಸ್ನೇಹಿತರ ಮದುವೆ ಎಂಬ ಒಂದು ಮುಖ್ಯ ಘಟನೆಗೆ ಎಲ್ಲಾ ಸ್ನೇಹಿತರುಗಳು ಹಾಜರಿರಬೇಕು ಎಂಬುದು ನನ್ನ ಆಸೆ. ನಾವುಗಳು ಇಂಥ ನಮ್ಮ ಜೀವನದ ಹಾದಿಯಲ್ಲಿ ಎಲ್ಲರ ಎಲ್ಲಾ ಸಂಭ್ರಮಗಳಲ್ಲೂ ಪಾಲ್ಗೂಳ್ಳಲೂ ಸಾಧ್ಯವಿಲ್ಲ.




ಅದೇ ಕಕ್ಕುಲಾತಿಯ ಕಾಲು ಎಳೆಯುವ, ಅವನ ಬಗ್ಗೆ, ಅವನ ಮಾತು ಶೈಲಿಯ ಬಗ್ಗೆ, ಅವನ ಗುಣಗಳ ಬಗ್ಗೆ, ಅವನು ಮಾಡಿದ ಅವಂತಾರಗಳ ಬಗ್ಗೆ, ಅವನು ಮಾಡಿದ ತಮಾಷೆಯ ಬಗ್ಗೆ, ಅವನು ಪ್ರೀತಿಸಿದ ಹಳೆಯ ಪ್ರೇಯಸಿಯ ಬಗ್ಗೆ, ಅವನು ಕಂಡ ಅವಮಾನದ ಬಗ್ಗೆ, ಅವನು ಅನುಭವಿಸಿದ ಅಂದಿನ ಸಂತೋಷದ ದಿನಗಳ ಬಗ್ಗೆ ಇತ್ಯಾದಿ ಇತ್ಯಾದಿ ಬಹುಮುಖ್ಯ ನೆನಪಿನಲ್ಲಿ ಇನ್ನೂ ಮನೆ ಮಾಡಿಕೊಂಡ ಕೆಲವೇ ಕೆಲವು ಉತ್ತಮ ಚಿತ್ರಣಗಳ ಜಾತ್ರೆಯನ್ನು ಕಣ್ಣ ಮುಂದೆ ತಂದುಕೊಂಡು ಅಂದಿನ ದಿನಗಳನ್ನು ಮೆಲಕು ಹಾಕಿಕೊಂಡೆವು. ರೀಯಲಿ! ಅಂದಿನ ಆ ದಿನಗಳು ಸಿರಿವಂತ ದಿನಗಳೇ ಸರಿ ಎಂಬುದು ಮೊನ್ನೆ ಸೇರಿದ ನನ್ನ ಎಲ್ಲಾ ಗೆಳೆಯರ ಮನಸ್ಸಿನಿಂದ ಬಂದಂತಹ ಹೃದಯತುಂಬಿದ ಮಾತಾಗಿತ್ತು.

ಇಂದು ನಮ್ಮಲ್ಲಿ ಎಲ್ಲಾ ಇದೆ. ನಾವುಗಳು ನಮ್ಮ ಹೆತ್ತವರ ಮುಂದೆ ಅವರುಗಳು ಕೊಡುವ ಪಾಕೇಟ್ ಮನಿಗೆ ಕಾಯುವ ಕಾರಣವಿಲ್ಲ. ಓಡಾಡಲೂ ಬೈಕ್, ಕಾರುಗಳು ಇವೆ, ಸುತ್ತಾಡಲೂ ಸಂಗಾತಿ ಇದ್ದಾಳೆ, ಎಲ್ಲಾದರೂ ಹೋಗುವಷ್ಟು ಖರ್ಚು ಮಾಡುವಷ್ಟು ಹಣ ನಮ್ಮ ಕೈಯಲ್ಲಿಯೇ ಇದೆ. ಅದರೂ ಯಾಕೋ ನಮ್ಮ ಬೆಂಗಳೂರಿನಲ್ಲಿ ನಾವುಗಳು ಒಂಟಿ ಮತ್ತು ಸಂತೋಷ ಹೀನರುಗಳು ಅನಿಸುತ್ತಿದೆ ಎಂಬ ಭಾವನೆ ಎಲ್ಲರದಾಗಿತ್ತು.

ನಾಲ್ಕು ವರ್ಷಗಳಲ್ಲಿ ನಾವುಗಳು ಅನುಭವಿಸಿದ ಕಾಲೇಜು ದಿನಗಳು ಎಂದು ಮತ್ತೇ ಸಿಗದಂತಹವುಗಳು ಎಂಬುದು ಎಲ್ಲರ ಅಭಿಮತ. ಅಲ್ಲಿ ಇದ್ದ ನಮ್ಮ ಕಷ್ಟ ನಷ್ಟಗಳ ಜೋತೆಯಲ್ಲಿಯೇ ನಾವುಗಳು ತುಂಬ ಸಂತೋಷವಾಗಿದ್ದೇವು. ಯಾಕೆ ಇಂದು ಎಲ್ಲಾ ಇದ್ದು ನಾವುಗಳು ಈಗ ಈ ರೀತಿಯಲ್ಲಿ ಮಾತನಾಡುತ್ತಾ ಪರಸ್ಪರ ನೋವು ನಲಿವುಗಳನ್ನು ವಿನಿಮಯ ಮಾಡಿಕೊಳ್ಳಲು, ಚರ್ಚಿಸಲು ಸಮಯವೇ ಸಿಗುತ್ತಿಲ್ಲ.

ನಮ್ಮನ್ನೇ ನಾವುಗಳು ಜೋಕು ಮಾಡಿಕೊಂಡು, ನಮ್ಮ ನಮ್ಮಲ್ಲಿಯೇ ತಮಾಷೆ ಮಾಡಿಕೊಂಡು, ಅವನ ಅವಳ ಬಗ್ಗೆ ಮಾತನ್ನಾಡಿಕೊಂಡು, ಅವರಿರವರನ್ನು ಹೊಗಳಿಕೊಂಡಿರುವ ಮಾತುಗಳನ್ನು ಮನದುಂಬಿ ಮಾತನಾಡಿ ವರ್ಷಗಳೇ ಆಗಿ ಹೋದವಲ್ಲಾ! ಎಷ್ಟು ಬೇಗ ನಾವುಗಳು ಗಂಭೀರ ಸ್ವಭಾವದವರುಗಳು ಆಗಿ ಬಿಟ್ಟಿವೀ! ಕೆಲಸ, ಹಣ, ಮನೆಯ ಜವಾಬ್ದಾರಿ.. ಹೀಗೆ ಈ ವಿಷಯಗಳೇ ಇಂದು ನಮ್ಮ ಬದುಕನ್ನು ಅವರಿಸಿ ಬಿಟ್ಟಿವೆ ಎಂಬ ನಿಟ್ಟುಸಿರು ನಮ್ಮದಾಗಿತ್ತು.

ಇರುವುದನ್ನು ಬಿಟ್ಟು ಇಲ್ಲದೆಡೆಗೆ ಸಾಗುವುದೇ ಜೀವನವಲ್ಲವೇ!

ಅಂದು ಸೇರಿದ ಎಲ್ಲರ ಮಾತಿನ ದಾಟಿಯೇ ಬೇರೆ. ಅಲ್ಲಿ ಪ್ರತಿಯೊಬ್ಬರೂ ಮುಂದೆ ಎಲ್ಲಿ ಯಾವಾಗ ಸೈಟ್ ಕೊಂಡುಕೊಳ್ಳಬೇಕು, ಯಾವಾಗ ಯಾವ ರೀತಿಯಲಿ ಮನೆಯನ್ನು ಕಟ್ಟಿಸಬೇಕು ಇತ್ಯಾದಿ. ಹೊಸ ಬದುಕಿನ ಕಡೆಗೆ ಹೊಸ ನೋಟ ಅವರದಾಗಿತ್ತು.

ಅದೇ ಕೆಲವಾರು ವರ್ಷಗಳ ಕೆಳಗೆ ಒಂದೇ ಒಂದು ಯೋಚನೆಯೆಂದರೇ ಹೇಗೆ ಮಜಾ ಮಾಡಬೇಕು, ಹೇಗೆ ಉತ್ತಮ ಸ್ಕೋರ್ ಮಾಡಬೇಕು, ಹೇಗೆ ಒಳ್ಳೆ ಕಂಪನಿಗೆ ಎಂಟ್ರೀ ಕೊಡಬೇಕು ಎಂಬುದಾಗಿತ್ತು. ಇಂದು ಎಲ್ಲಾರೂ ಹೆಚ್ಚು ಜವಾಬ್ದಾರಿಯ ಮನುಷ್ಯರಾಗಿದ್ದಾರೆ! ಏನಾಶ್ಚರ್ಯವಲ್ಲವಾ!

ಮದುವೆಯಾಗಿರುವರು ಮತ್ತು ಮಕ್ಕಳನ್ನು ಪಡೆದೆವರಂತು ನಮ್ಮ ಜೀವನದ ಒಂದು ಘಟ್ಟವನ್ನು ತಲುಪಿಬಿಟ್ಟಿದ್ದೇವಪ್ಪಾ! ಎಂಬ ರೀತಿಯಲ್ಲಿ ಇನ್ನೂ ಮದುವೆಯನ್ನು ಮಾಡಿಕೊಳ್ಳಲೂ ತವಕಿಸುತ್ತಿರುವ ಗೆಳೆಯರನ್ನು ಕಂಡು "ಎಂದು ನೀ ಊಟ ಹಾಕಿಸುತ್ತಿಯಪ್ಪ?" ಎಂಬ ಪ್ರಶ್ನೆ.

ನನಗೆ ಎನಿಸುತ್ತದೆ. ಸ್ನೇಹ ಲೋಕದಲ್ಲಿ ಇರುವಷ್ಟು ಬಿಂದಾಸ್ ಮಾತುಕತೆಯನ್ನು ಬೇರೆ ಎಲ್ಲೂ ಊಹಿಸಲೂ ಸಾಧ್ಯವಿಲ್ಲ. ಅಲ್ಲಿ ಅವನು ಎಂಥ ಹುದ್ದೆಯಲ್ಲಿಯೇ ಇರಲಿ, ಎಷ್ಟೇ ಸಂಪಾದಿಸುತ್ತಿರಲಿ, ಎಂಥ ಮನೆಯಲ್ಲಿಯೇ ವಾಸ ಮಾಡುತ್ತಿರಲಿ, ಹೇಗೆ ಇರಲಿ ಅವರುಗಳು ಪರಸ್ಪರ ಹಿಂದೆ ಕಾಲೇಜು ದಿನಗಳಲ್ಲಿ ಮೊದಲ ಸಲ ಬೇಟಿಯಾಗಿ ಸ್ನೇಹದ ಅಂಕುರವೆರ್ಪಟ್ಟಾಗ ಇದ್ದ ರೀತಿಯಲ್ಲಿಯೇ ನೋಡುತ್ತಾರೆ. "ಹೋಗಲೇ! ಬಾರಲೇ!" ಹೀಗೆ ಏಕವಚನದಲ್ಲಿ ನನಗೆ ಅನಿಸಿದಂತೆ ಗೆಳೆಯ/ಗೆಳತಿಯರನ್ನು ಯಾವುದೇ ವಯೋಮಾನದಲ್ಲೂ ಸಮಾನವಾಗಿ ನಡೆಸಿಕೊಳ್ಳುವರು ಸ್ನೇಹಿತರುಗಳು ಮಾತ್ರ. ಅಲ್ಲಿ ಅವರಿಗೆ ಅವನೂ ಏನಾಗಿದ್ದರೂ ಇನ್ನೂ ಕಾಲೇಜು ದಿನಗಳ ಗೆಳೆಯ/ಗೆಳತಿಯರಂತೆಯೇ ಕಾಣುತ್ತಾರೆ. ವಯಸ್ಸಿಗೆ, ಅಂತಸ್ತಿಗೆ ಯಾವುದಕ್ಕೂ ಅಲ್ಲಿ ಯಾವ ಸ್ಥಾನವೆಂಬುದು ಇಲ್ಲ.

ಅದಕ್ಕೆ ನಾನು ಹೇಳುತ್ತೇನೆ ಸ್ನೇಹ ಜಿಂದಾಬಾದ್!

ಪ್ರೀತಿ ಶಾಶ್ವತವಾಗಿರುವುದು ಸ್ನೇಹದಲ್ಲಿ ಅಲ್ಲಿ ಯಾರಿಂದಲೂ ಯಾವುದೇ ನಿರೀಕ್ಷೆಯು ಹುಟ್ಟುವುದಿಲ್ಲ. ಕೇವಲ ಅಕ್ಕರೆಯ ಪ್ರೀತಿ, ಅಸರೆ ಮತ್ತು ಅಚ್ಚರಿಯ ನೋಟ ಅಷ್ಟೇ!!

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ ಯಾವಾಗಲೂ ಪಯಣಿಸುವವನೇ ಪುಣ್ಯವಂತಹ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ