ಮಂಗಳವಾರ, ಮಾರ್ಚ್ 15, 2011

ಒಂದು ಸುಂದರ ಅನುಬಂಧ





ಮನುಷ್ಯ ತನ್ನ ತನ್ನಲ್ಲಿಯೇ ಒಂದು ವ್ಯವಸ್ಥಿತವಾದ ಅನುಬಂಧಗಳನ್ನು ಸೃಷ್ಟಿ ಮಾಡಿಕೊಂಡು ತಾನು ಗಟ್ಟಿಯಾಗಿ ಬದುಕಲು ತವಕಿಸುತ್ತಾನೆ. ತನ್ನ ಮತ್ತು ತನ್ನ ಜೊತೆಯವರೊಡನೆ ನಲಿ ನಲಿಯುತ ಬಾಳಲು ಇಚ್ಛೆಪಡುತ್ತಾನೆ. ಒಂಟಿ ಸಲಗದ ರೀತಿಯಲ್ಲಿ ಎಂದೂ ಸಹ ಬಾಳಲು ಸಾಧ್ಯವಿಲ್ಲ. ಯಾಕೆಂದರೇ ನಾವುಗಳು ನಮ್ಮ ಚಿಕ್ಕಂದಿನ ದಿನಗಳಲ್ಲಿ ಓದಿ ತಿಳಿದಂತೆ, ಸಮಾಜ ಶಾಸ್ತ್ರದಲ್ಲಿ ಹೇಳಿರುವಂತೆ ಮನುಷ್ಯ ಸಂಘ ಜೀವಿ.

ತಾನು ಈ ಭೂಮಿಯ ಮೇಲೆ ಹುಟ್ಟಿದಂದಿನ ದಿನದಿಂದ ಯಾವ ರೀತಿಯಲ್ಲಾದರೂ ತನ್ನ ಅಸ್ತಿತ್ವವನ್ನು ಇಲ್ಲಿ ಒತ್ತಲು ತವಕಿಸುತ್ತಾನೆ. ತನ್ನ ನಂತರದ ತನ್ನತನವನ್ನು ನಿರಂತರವಾಗಿ ಮುಂದುವರಿಯಬೇಕು ಎಂಬ ಹಂಬಲ ಹೆಚ್ಚು. ಇದು ಕೇವಲ ಮನುಷ್ಯ ಜನಾಂಗಕ್ಕೆ ಮಾತ್ರ ಸೀಮಿತವಾದ ಪ್ರಕ್ರಿಯೆಯಲ್ಲ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯು ಸಹ ತನ್ನ ನಂತರದ ತನ್ನ ನೆಚ್ಚಿನ ವಾರಸ್ದಾರನನ್ನು ಪ್ರತಿಷ್ಠಾಪಿಸಲು ತವಕಿಸುತ್ತದೆ. ಅದೇ ನಿಸರ್ಗ ನಿಯಮವಲ್ಲವೇ.


ಅದಕ್ಕೆ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಅಷ್ಟೊಂದು ಗಟ್ಟಿಯಾದ ನಡವಾಳಿಗಳು, ಪದ್ಧತಿಗಳು ಇವೆ. ಗಂಡು ಹೆಣ್ಣು ಸಂಗಾತಿಯಾಗಿ ತನ್ನ ಮುಂದಿನ ತನ್ನದೇ ತದ್ರೂಪದ, ತಮ್ಮಿಬ್ಬರ ಗುಣಗಳ ಮೇಳವನ್ನು ತನ್ನ ಮಕ್ಕಳಲ್ಲಿ ನೋಡಲು ಕಾತುರರಾಗುತ್ತಾರೆ. ಈ ಪ್ರಪಂಚದಲ್ಲಿ ಯಾವುದು ಶಾಶ್ವತವಾದುದಲ್ಲಾ. ಆದರೆ ಪ್ರತಿಯೊಬ್ಬರೂ ತನ್ನ ನಂತರ ತಾವುಗಳು ಶಾಶ್ವತವಾಗಿಯೇ ಇರುವೆವು ಎಂಬ ರೀತಿಯಲ್ಲಿ ತಮ್ಮ ಮಕ್ಕಳು ಮರಿಯನ್ನು ಕಾಣುತ್ತಾ ಅವರುಗಳನ್ನು ಬೆಳೆಸುತ್ತಾ. ತಮ್ಮಗಳ ಜೀವನದ ಅಂತ್ಯವಿಲ್ಲವೇನೂ ಎಂಬ ರೀತಿಯಲ್ಲಿ ಅವರುಗಳಿಗಾಗಿ ತಮ್ಮ ಜೀವನವನ್ನೇ ಮೂಡಿಪಾಗಿ ಇಟ್ಟು ತಮ್ಮ ಕಿರಿಯರ ಸುಖ, ಸಂತೋಷದಲ್ಲಿ, ಏಳ್ಗೆಯಲ್ಲಿ ತಮ್ಮಗಳ ಆನಂದವನ್ನು ಕಾಣುತ್ತಾರೆ.

ಇದಕ್ಕೆ ಇರಬೇಕು ವಯೋಸಹಜ ನಡವಳಿಗಳು ಮನುಷ್ಯನಲ್ಲಿ ಯಾವ ಯಾವ ಕಾಲಕ್ಕೆ ಏನು ಏನೂ ಆಗಬೇಕೋ, ಅದು ಒಂದು ಚಕ್ರದ ರೀತಿಯಲ್ಲಿ ನಿರಂತರವಾಗಿ ನಡೆಯುತ್ತದೆ. ನಿಸರ್ಗವೂ ಸಹ ತನ್ನ ಚಮತ್ಕಾರವನ್ನು ಅದಕ್ಕೆ ಪೂರಕವಾಗಿ ತೋರಿಸುತ್ತಲೇ ಇರುತ್ತದೆ.

ಸರಿಯಾದ ವಯಸ್ಸಿಗೆ ಶಿಕ್ಷಣ, ಮದುವೆ, ಸಂಸಾರ, ವೃದ್ಧಾಪ್ಯ ಇತ್ಯಾದಿ ವಿವಿಧ ರೀತಿಯ ಜೀವನದ ಹಂತಗಳನ್ನು ಪ್ರತಿಯೊಬ್ಬ ಮನುಷ್ಯನು ದಾಟಲೇ ಬೇಕು. ಆಗಲೇ ನಾವುಗಳು ಆ ವ್ಯಕ್ತಿಯನ್ನು ಪರಿಪೂರ್ಣನೆಂದು ಕರೆಯಬಹುದು. ವಿವಿಧ ಘಟ್ಟಗಳ ಈ ಜೀವನದ ನಿರ್ವಹಣೆ ನಿಜವಾಗಿಯೂ ಅತಿ ಆಶ್ಚರ್ಯಕರ ರೀತಿಯಲ್ಲಿ ತಮ್ಮ ತಮ್ಮಲ್ಲಿಯೇ ಘಟಿಸುತ್ತಿರುತ್ತದೆ. ಅಲ್ಲಿ ಕಷ್ಟವಿದೆ, ಸುಖವಿದೆ, ನೋವಿದೆ, ನಲಿವಿದೆ, ಅವಮಾನಗಳಿವೆ, ಪರಸ್ಪರರ ಪ್ರೀತಿಯ ದಟ್ಟತೆಯಿದೆ.

ಹೀಗೆ ತಾನು ತನ್ನ ಒಂದು ಜೀವಮಾನದ ಈ ಒಂದು ಪರಿಯನ್ನು ತಪ್ಪದೇ ಅನುಭವಿಸಲೇ ಬೇಕು. ತನ್ನ ವಯಸ್ಸು ಬೆಳೆದಂತೆ, ತನ್ನ ಅನುಭವ ಬೆಳೆದಂತೆ ವಿವಿಧ ರೀತಿಯ ಜವಾಬ್ದಾರಿಗಳನ್ನು ತಾನು ಹೊರಲೇ ಬೇಕು. ತಾನು ಬದುಕಬೇಕು ತನ್ನನ್ನು ಅವಲಂಬಿಸಿರುವ ತನ್ನ ಜೊತೆಗಾರರನ್ನು ಸಾಕಲೇಬೇಕು. ಅದೇ ಅವನ/ಳ ಕಾಯಕ. ಎಷ್ಟೊಂದು ರೀತಿಯ ಕಾರ್ಯಗಳು ಪ್ರತಿಯೊಬ್ಬರೂ ಮಾಡುತ್ತಾರೆ ಅದು ಅವರುಗಳ ಗಮನಕ್ಕೆ ಬರದ ರೀತಿಯಲ್ಲಿ. ಅದೇ ನಮ್ಮ ಜೀವನವಲ್ಲವೇ?

ಪ್ರತಿಯೊಂದು ಗಂಡು ಹೆಣ್ಣನ್ನು ಅಸರೆಯಾಗಿ ಪಡೆಯುತ್ತಾನೆ. ಹೆಣ್ಣು ಗಂಡಿನ ಅಸರೆಯನ್ನು ಪಡೆಯುತ್ತಾಳೆ. ಇದು ಎಷ್ಟೊಂದು ಸುಂದರ ಕಲ್ಪನೆಯಲ್ಲವ. ತನ್ನ ಜೀವಿತಾವದಿಯವರೆಗೆ ತನ್ನವಳೆ/ನೆಯಾದ ಒಬ್ಬ ಸಂಗಾತಿಯನ್ನು ಆರಿಸಿಕೊಳ್ಳಲೇ ಬೇಕಾಗುತ್ತದೆ. ಅದರ ಅವಶ್ಯಕತೆ ಏನೇ ಇರಲಿ. ಈ ಒಂದು ವ್ಯವಸ್ಥೆಯಿಂದ ಒಬ್ಬರಿಗೂಬ್ಬರೂ ಸಹಕರಿಸಿ ಬಾಳುವ ಒಂದು ಸಂಬಂಧ ಪ್ರತಿಯೊಂದು ಜೀವಿಯಲ್ಲಿ ಸಾಮಾನ್ಯವಾಗಿ ಘಟಿಸುವ ನಡಾವಳಿ. ತನ್ನ ತನ್ನ ಯೋಚನೆ, ಆಲೋಚನೆಯನ್ನು, ನೋವು, ನಲಿವುಗಳನ್ನು ತಾನೇ ಇಟ್ಟುಕೊಂಡರೇ ಯಾವ ರೀತಿಯ ಪರಿಣಾಮವಾಗುವುದು ಎಂಬುದನ್ನು ಯೋಚಿಸಲೂ ಸಾಧ್ಯವಿಲ್ಲ. ಅದ್ದರಿಂದಲೇ ಯಾರಿಗೇ ಆಗಲಿ ತನಗಾಗಿ ತನ್ನ ಇಷ್ಟ ಕಷ್ಟವನ್ನು ಸಹಿಸುವ ಒಬ್ಬ ಜೊತೆಗಾರ/ತಿ ಬೇಕೆ ಬೇಕು.

ನನಗೆ ಅನಿಸುತ್ತದೆ ಪ್ರತಿಯೂಬ್ಬರಿಗೂ ಜೀವನದಲ್ಲಿ ಅತಿ ಹೆಚ್ಚು ಸಂತೋಷವಾಗುವುದು ಆ ಒಂದು ದಿನ ಮತ್ತು ಆ ಒಂದು ಮೊಹರ್ತ. ತನ್ನನ್ನು ವರಿಸಿ ತನ್ನವಳು/ನಾಗಿ ಜೀವನ ಪರ್ಯಾಂತ ನಾನು ನಿನಗೆ ಅಸರೆ - ನೀನು ನನಗೆ ಆಸರೆ ಎಂದು ಸಪ್ತಪದಿ ತುಳಿಯುವ ಗಳಿಗೆ. ಅಂದು ಆ ಜೋಡಿ ಜೀವಮಾನದ ಅತಿ ಹೆಚ್ಚು ಸಂತೋಷ ಮತ್ತು ಆನಂದವನ್ನು ಅನುಭವಿಸುವ ದಿನವಾಗಿರುತ್ತದೆ ಅಂದು.

ಹಾಗೆಯೇ ತನ್ನ ಹೆತ್ತವರಿಂದ ಸ್ವಲ್ಪ ಸ್ವಲ್ಪ ಅವಲಂಬನೆಯನ್ನು ಬಿಡುತ್ತಾ ಬಿಡುತ್ತಾ ತಾವೆ ತನ್ನ ಜೋಡಿಯೊಂದಿಗೆ ಕಲ್ಪನೆಯ ಬದುಕಿನ ಆರಮನೆಯನ್ನು ಕಟ್ಟಿಕೊಳ್ಳುತ್ತಾ, ತಮ್ಮಿಬ್ಬರ ಬೆಳವಣಿಗೆಯನ್ನು ಕಾಣುತ್ತಾ ತಮ್ಮ ಬಾಳಿನ ಏಳ್ಗೆಯನ್ನು ಕಾಣುವ ಒಂದು ಸುಂದರ ಭಾಂದವ್ಯ ಇದಾಗಿದೆ.

ಹೀಗೆ ಸಾಗುತ್ತಾ ಸಾಗುತ್ತಾ ತಾವುಗಳು ತಮ್ಮ ಸಂತತಿಯನ್ನು ಮುಂದುವರಿಸಲೇ ಎಂಬಂತೆ ತಮಗಾಗಿ ಮಕ್ಕಳನ್ನು ಪಡೆಯಲು ತಯಾರಾಗುವವರು. ಪ್ರತಿಯೊಂದು ಜೀವಿ ಯೋಚಿಸುವ ದಾಟಿಯಲ್ಲಿಯೇ ಮನುಷ್ಯನು ತನ್ನ ನಂತರದ ತನ್ನ ಕುಟುಂಬದ ಮುಂದುವರಿಕೆಗೆ ಎಂಬಂತೆ ತನ್ನಂತಿರುವ ತನಗೆ ಬೇಕಾದ ವ್ಯಕ್ತಿಯೊಬ್ಬನ ಹುಟ್ಟು ಇದಾಗಿದೆ. ಯಾವುದೇ ದಂಪತಿಗಳಿಗೆ ಅತಿ ಹೆಚ್ಚು ಸಂತೋಷ ಕೊಡುವ ಸಮಯ ಎಂದರೇ ತಮಗೆ ಮೊದಲ ಮಗು ಹುಟ್ಟಿದ ಗಳಿಗೆ. ತಮ್ಮದೇ ರೂಪ, ಬಣ್ಣ, ಗುಣ, ಚಹರೆಯನ್ನು ಹೊಂದಿರುವ ಮತ್ತೊಂದು ಜೀವದ ಸೃಷ್ಟಿ ನಿಜವಾಗಿಯೂ ಅಚ್ಚರಿಯನ್ನುಂಟು ಮಾಡುವ ಗಳಿಗೆ ಅಲ್ಲವಾ? ಅಲ್ಲಿಯೇ ಆ ಕ್ಷಣವೇ ತಮ್ಮ ಜೀವನ ಸಾರ್ಥಕವಾಯಿತು ಎಂದು ಬೀಗುವ ಗಳಿಗೆ ಅದಾಗಿದೆ. ಅಲ್ಲಿ ಹುಟ್ಟುವ ಮಮತೆ ಆ ಸಮಯದಲ್ಲಿಯೇ ಜೀವನ ಚಕ್ರದಲ್ಲಿಯ ಒಂದು ಹಂತವನ್ನೇ ಹಿಂತಿರುಗಿಸಿ ಒಮ್ಮೆ ನೋಡುವಂತಾಗುತ್ತದೆ.

ತಾನು ತನ್ನ ಹೆತ್ತವರಿಗೆ ಸಿಕ್ಕಿದ ಕ್ಷಣ ಹೇಗಿತ್ತು ಎಂದು? ತಾನು ಹೀಗೆ ಆಡಿರಬಹುದಾ? ಹೀಗೆ ಮಲಗಿರಬಹುದಾ? ಹೀಗೆ ಅತ್ತಿರಬಹುದಾ?.. ತನ್ನ ಹೆತ್ತವರು ನನ್ನನ್ನು ಕಂಡಾಗ ಹೀಗೆ ಆನಂದಿಸಿರಬಹುದಾ.. ಹೀಗೆ ಹತ್ತು ಹಲವು ನೆನಪುಗಳ ಸರಮಾಲೆಯನ್ನೇ ಅವನು/ಳು ಕಾಣಬಹುದಾಗಿದೆ. ತಮ್ಮ ತಮ್ಮಲ್ಲಿ ಹುಟ್ಟುವ ಆ ಒಂದು ಮಮತೆಯ ದೇವರು ಎಂದಿಗೂ ಮೀಗಿಲೂ. ತನ್ನ ಕೂಸಿಗಾಗಿ ಏನೂ ಮಾಡಲು ಸಿದ್ಧವಾಗುವಂತಹ ದೈರ್ಯ ಆ ಕ್ಷಣಕ್ಕೆ ಪ್ರತಿಯೊಬ್ಬ ಮಾತ ಪಿತೃಗಳಿಗೆ ಬರುತ್ತದೆ.

ಮಗು ಹುಟ್ಟಿದನಂತರ ಅದರ ಜೋತೆಯಲ್ಲಿ ಅವರುಗಳು ಕಳೆಯುವ ಎಲ್ಲ ಕ್ಷಣಗಳು ಒಂದಷ್ಟು ದಿನಗಳವರೆಗೆ ಎಲ್ಲಿಂದಲೂ ಯಾವರೀತಿಯಲ್ಲೂ ಯಾರಿಂದಲೂ ಕೊಡಲಾಗದಂತಹ ಮಹತ್ವದ ಶ್ರೀಮಂತವಾದ ಚಿನ್ನದ ಗಳಿಗೆಗಳು. ಅಲ್ಲಿ ತಂದೆ ತಾಯಿ ಇಬ್ಬರೂ ತಮ್ಮ ಬಾಲ್ಯದ ದಿನಗಳನ್ನು ತನ್ನ ಮುಂದಿರುವ ಕಂದನ ಕಣ್ಣಿನಲ್ಲಿ ಪುನರ್ ಮಿಲನ ಮಾಡಿಕೊಳ್ಳುತ್ತಾರೆ.

ತಾವು ಅನುಭವಿಸಿದ ಯಾವುದೇ ಒಂದು ಚಿಕ್ಕ ಕಷ್ಟ, ನೋವು ತನ್ನ ಮಗು ಅನುಭವಿಸಬಾರದು ಮತ್ತು ಅದಕ್ಕಾಗಿ ಏನಾದರೂ ಮಾಡಲು ತಮ್ಮ ಜೀವನವನ್ನೇ ಪಣವಿಡಲೂ ತಯಾರಿರುತ್ತಾರೆ. ಅದೇ ಅಲ್ಲವಾ ನಿಜವಾದ ನಿಷ್ಕಲ್ಮಶವಾದ ಪ್ರೀತಿ!

ಈ ಒಂದು ಜೀವನದ ನಿರಂತರವಾದ ಪಯಣದಲ್ಲಿ ತನ್ನ ಕುಟುಂಬ ಮತ್ತು ತನ್ನ ಜೊತೆಯಲ್ಲಿರುವವರ ಒಂದು ಕಾಳಜಿಯನ್ನು ಹೇಳಲು ಪದಗಳೇ ಸಾಲದು. ಅಲ್ಲಿ ತಂದೆ ತಾಯಿ, ಅಜ್ಜ -ಅಜ್ಜಿ ಅದು ಎರಡು ಕುಟುಂಬಗಳ ಮಹನ್ ಸಂತಸವನ್ನು ವರ್ಣಿಸಲೂ ಅಸಾಧ್ಯ. ಈ ಒಂದು ಜೀವನ ತಂತುವನ್ನು ಯಾರು ಮಾಡಿದರೋ ಅವನಿಗೆ ನಾವುಗಳು ನಿತ್ಯ ಕೃತಙ್ಞರಾಗಿರಬೇಕು. ಇದೇ ಅಲ್ಲವ ಸಂಬಂಧಗಳ ಬೇರನ್ನು ಗಟ್ಟಿ ಮಾಡುವ ಸಂದರ್ಭಗಳು.

ಹೆತ್ತವರಿಗೆ ತಮ್ಮ ಮಕ್ಕಳು ಎಷ್ಟೇ ದೊಡ್ಡವರಾದರೂ ಅವರುಗಳು ಯಾವಾಗಲೂ ಏನೂ ಅರಿಯದ ಮುದ್ದು ಕಂದಮ್ಮಗಳೇ ಸರಿ. ಈ ಕಲ್ಪನೆಯನ್ನು ಯಾರು ಮಾಡಲೂ ಸಾಧ್ಯ? ಅಲ್ಲಿ ನಾವುಗಳು ಮಾಡುವ ಸಾವಿರ ತಪ್ಪುಗಳಿಗೆ ಕ್ಷಮೆಯಿರುತ್ತದೆ. ಸಾವಿರ ನೋವುಗಳಿಗೆ ಹಿಡಿಯಾದ ಸಾಂತ್ವನವಿರುತ್ತದೆ. ನಮ್ಮ ಒಂದು ಗೆಲುವಿಗೆ ಸಹಸ್ರ ಸಹಸ್ರ ಆನಂದ ಬಾಷ್ಪವಿರುತ್ತದೆ. ಅದರ ಅಳಿವು ಉಳಿವು ನಮ್ಮ ನಮ್ಮಗಳ ಕೈಯಲ್ಲಿ ಮಾತ್ರ ಇರುತ್ತದೆ. ಅದರ ಮುಂದುವರಿಕೆಯ ಸೋಪಾನವನ್ನು ನಾವುಗಳು ನಮ್ಮ ನಮ್ಮಲ್ಲಿಯೇ ಮಾಡಬೇಕು. ಮಾಡುತ್ತಿರೋಣ!!!

1 ಕಾಮೆಂಟ್‌: