ಶನಿವಾರ, ಜುಲೈ 7, 2018

ಕಳೆದ ದಿನ ನಿತ್ಯ ತರುಣ

ಜೀವನ ಈಗಾಗಲೇ ಅರ್ಧ ಮೈಲಿಗೆ ಹತ್ತು ವರುಷ ಮಾತ್ರ ಬಾಕಿಯಾಗಿ ನಿಂತಂತಿದೆ.  ಹುಟ್ಟಿದಂದಿನಿಂದ ಈ ವಯೋಮಾನಕ್ಕೆ ಬಂದಿರುವ ಬದುಕಿನ ಕಳೆದ ದಿನಗಳನ್ನು ನೆನಪಿಸಿಕೊಂಡರೇ ಮೈ ಜುಂ ಅನಿಸುತ್ತದೆ.

ನಮಗೆ ನಾವುಗಳು ಎಂದಿಗೂ ನಿತ್ಯ ತರುಣರೇ. ಆದರೇ ನಮಗೆ ಗೊತ್ತೆ ಆಗದ ರೀತಿಯಲ್ಲಿ ಮದ್ಯ ವಯಸ್ಕರಾಗಿದ್ದೇವೆ. ಇಂದು ಬಾಲ್ಯದ ನೆನಪೇ ಮರೆತಂತೆ ಅನಿಸುತ್ತಿದೆ. ಈಗ ನಮಗೆ ಬಾಲ್ಯವೆಂದರೇ ನಮ್ಮ ಮುಂದಿರುವ ನಮ್ಮ ಮುದ್ದು ಮಕ್ಕಳ ಆಟವಾಗಿದೆ.

ಓದು ಅಭ್ಯಾಸ, ಕಾಲೇಜು, ಕೆಲಸವೆಂದುಕೊಂಡು ಬ್ಯುಸಿ ಲೈಫ್ ನಲ್ಲಿ ನಡೆದು ಬಂದ ದಾರಿಯ ಗುರುತನ್ನು ಗುರುತಿಸಲು ಸಮಯವಿಲ್ಲದಂತಾಗಿದೆ.

ಒಬ್ಬ ಮನುಷ್ಯನ ಜೀವನವೆಂದರೇನು ಎಂದರೇ ಅದು ನಮ್ಮ ಕೈಗೆ ನಿಲುಕದ ಅತ್ಯದ್ಬುತ ಸಿನಿಮಾವೇ ಸರಿ. ಸಿನಿಮಾ ಎಂದರೇ ಎರಡು ಮುಕ್ಕಾಲು ಗಂಟೆಯಲ್ಲಿ ಎಲ್ಲಾವನ್ನು ತೋರಿಸಿ ದಿ ಎಂಡ್ ಇರುತ್ತದೆ. ಅದರೇ ನಿಜ ಜೀವನಕ್ಕೆ ಹಾಗೆ ಕೊನೆಯನ್ನು  ಎಂದು ಕೊಡಲು ಸಾಧ್ಯವಾಗದು.

ನೋವು ನಲಿವು, ಸಂತೋಷ ದುಃಖ, ಸ್ನೇಹ ಸಂಬಂಧ, ಸಿರಿತನ ಬಡತನ ಇತ್ಯಾದಿಯ ಕಲಸುಮೆಲೋಗರದ ರಂಗು ರಂಗಿನ ಕೋಲಾಜ್ ಈ ಬದುಕು.

ಚಿಕ್ಕಂದಿನಿಂದಲ್ಲಿ ಅಂದುಕೊಂಡದ್ದನ್ನು ಸಾಧಿಸುವ ಉಮೇದು. ತಾರುಣ್ಯದಲ್ಲಿ ಆಕಾಶಕ್ಕೆ ಮೆಟ್ಟಿಲು ಹಾಕುವ ಉಮ್ಮಸ್ಸು.

ಬದುಕು ಬದುಕಲೇಬೇಕೆಂಬ ಪಾಠವನ್ನು ಯಾವ ಕಾಲೇಜಿನ ಬೋಧನೆಯು ತಿಳಿಸಿಕೊಟ್ಟಿರುವುದಿಲ್ಲ.

ಸಮಯ, ಅವಕಾಶ, ಸಂದರ್ಭಗಳು ನಮ್ಮನ್ನು ಆ ಹಳಿಯ ಮೇಲೆ ತಿಳಿದೋ ತಿಳಿಯದೇಯೋ ಆಯಾ ಸಮಯಕ್ಕೆ ತಕ್ಕನಾಗಿ ಅನುಸರಿಸಿಕೊಂಡು ಹೋಗುವಂತೆ ಮಾಡಿಬಿಟ್ಟಿರುತ್ತದೆ.

ಆ ಸಮಯಕ್ಕೆ ಸರಿಯಾಗಿ ನಾವು ಕಂಡ ಕನಸು, ನನಸು.. ಬಣ್ಣ ಬಣ್ಣದ ನೆನಪುಗಳು.. ವಿಧವಿಧವಾದ ನಿರ್ಧಾರಗಳು ಎಲ್ಲಾ ಗಣ್ಯ ಅನಿಸಿಬಿಟ್ಟು ಜೀವನಕ್ಕೆ ಮುಖ್ಯವಾದದ್ದನ್ನು ಆರಿಸಿಕೊಂಡು ಮುಂದುವರಿಯುತ್ತೇವೆ.

ಅದು ಯಾವುದೇ ಸರಿ. ಸಮಯಕ್ಕೆ ಸರಿಯಾಗಿ ನಾವುಗಳು ನಮ್ಮ ಬದುಕಿಗೆ ಬೇಕಾದ ಅತಿ ಅವಶ್ಯಕವೆನಿಸುವ ನಿರ್ಧಾರಗಳನ್ನು ಪ್ರತಿ ಕಾಲಘಟ್ಟದಲ್ಲು ಅನುಸರಿಸಿಕೊಂಡು ಹೋಗಿರುತ್ತೇವೆ.

ಅದೇ ಜೀವನ!

ಈ ಮದ್ಯ ವಯಸ್ಸಿನ ಈ ಸಮಯದಲ್ಲಿ ಹಿಂತಿರುಗಿ ನೋಡಿದರೇ.. ಅಭ್ಭಾ ಅನಿಸುತ್ತದೆ! ಇದು ನಾನೇನಾ ಎಂದು ಅಚ್ಚರಿಯಾಗುತ್ತದೆ. ಹಾಗೆಯೇ ತುಸು ನಗುವು ಬರುತ್ತದೆ. ಏನೇಲ್ಲಾ ಮನಸ್ಸಿನ ಕುಲುಮೆಯಲ್ಲಿ ತರಾವೇರಿ ಗೊತ್ತೂ ಗುರಿ ಮಾಡಿಕೊಂಡಿದ್ದು. ತಲೆ ತುಂಬ ನೂರು ಕನಸುಗಳ ಜಾತ್ರೆ ಮಾಡಿಕೊಂಡಿದ್ದು. ಹೃದಯದ ಗೂಡಿನಲ್ಲಿ ಹತ್ತು ಪ್ರೀತಿಯ ಕಹಾನಿಗಳನ್ನು ಕ್ರೂಡಿಕರಿಸಿಕೊಂಡಿದ್ದು.

ಅಭ್ಭಾ ಇಂದು ಎಲ್ಲಾ ಪೂರ್ತಿ ಪೂರಾ ಶಾಂತ. ವ್ಯಕ್ತಿ ಅಷ್ಟರ ಮಟ್ಟಿಗೆ ಮಾಗಿದ್ದಾನೇಯೇ?

ಜೀವನದ ಹಾದಿಯಲ್ಲಿ ಸಂಕಲನ ವ್ಯವಕಲನ ಸರಿಯಾಗಿಯೇ ನಡೆದಿರುತ್ತದೆ. ಹಾಗಂತ ಬದುಕು ಕೇವಲ ಗಣಿತವಲ್ಲ ಅಥವಾ ಜೀವನ ಲೆಕ್ಕಚಾರವಲ್ಲ! ನಮ್ಮ ನಿಲುಕಿಗೆ ನಿಲುಕಿದ ದಕ್ಕಿಸಿಕೊಂಡ ಬದುಕು ಮಾತ್ರ ನಮ್ಮದಾಗಿರುತ್ತದೆ.

ಅಷ್ಟರ ಮಟ್ಟಿಗೆ ಪ್ರತಿಯೊಬ್ಬರೂ ಹಣ್ಣಾಗಿದ್ದಾರೇ ಅನಿಸುತ್ತದೆ. ಅದು ನಮ್ಮ ನಮ್ಮಲ್ಲಿ ಇಂದು ಕಣ್ಣಿಗೆ ಗೊಚರಿಸುತ್ತಿದೆ. ಈಗ ನಾನು ನನಗೆ ಅನಿಸುವ ಮಾತೇ ಇಲ್ಲ. ಯಾಕೆಂದರೇ ನಾನು ನಾವಾಗಿದ್ದೇವೆ. ನಾನೊಬ್ಬನೇ ಅಲ್ಲ. ನಾನು ನನ್ನ ಸಂಸಾರ, ನನ್ನ ಮಗು, ನನ್ನ ಸಂಗಾತಿ ಹೀಗೆ ಬಹುತನದಲ್ಲಿ ನಮ್ಮ ಬದುಕು ಬಂದು ನಿಂತಿದೆ.

ನಾನು ಅನುಭವಿಸಿದ ಹಳೆಯ ದಿನಗಳು ನನ್ನ ಮುದ್ದಿನ ಮಗನ / ಮಗಳ ನಗುವಿನಲ್ಲಿ ಪುನಃ ಇನ್ನೊಮ್ಮೆ ಬಾಲ್ಯದ, ತಾರುಣ್ಯದ ದಿನಗಳಿಗೆ ಜಾರುವ ಮನಸ್ಸು ಮಾಡಿಕೊಂಡಿದೆ.

ನಾವು ಮಾಡಿದ ತಪ್ಪು ಒಪ್ಪುಗಳನ್ನ ನನ್ನದೇ ಕುಡಿಯು ಮಾಡುವುದನ್ನು ನೋಡುತ್ತಾ ಮನಸ್ಸು ಮುದವಾಗುತ್ತಿದೆ. ಇದೆ ಬದುಕಿನ ಜಟಕಾ ಬಂಡಿ ಅನಿಸುತ್ತದೆ. ಅದು ಎಂದೂ ಮತ್ತು ಎಲ್ಲಿಯು ನಿಲ್ಲುವುದಿಲ್ಲ.  ನಿತ್ಯ ಸಾಗುತ್ತಲೇ ಇರಬೇಕು, ಹಾಗೆಯೇ ಬದಲಾಗುತ್ತಿರಬೇಕು. ಅದೇ ಜಗದ ನಿಯಮ.

ವ್ಯಕ್ತಿ ತಾನು ಬೆಳೆಯುತ್ತಾ ತನ್ನ ಸುತ್ತಲಿನ ಸಮಾಜದಲ್ಲಿ ಪ್ರತಿಯೊಂದು ಬದುಕಿನ ಕಾಲಗಟ್ಟದಲ್ಲಿ ತನ್ನನ್ನು ಸಮಾಜದೊಂದಿಗೆ ಗುರುತಿಸಿಕೊಂಡು ಮುಂದುವರೆಯುತ್ತಿರುತ್ತಾನೆ.  ತನ್ನ ಜೀವನದ ಮೇಲೆ ಸುತ್ತಲಿನ ಸಮಾಜ, ರಾಜಕೀಯ, ಆರ್ಥಿಕ ಹೀಗೆ ಪ್ರತಿಯೊಂದು ಪ್ರಭಾವ ಬೀರುತ್ತಿರುತ್ತವೆ. ನಾನು ನಾವು ನಮಗೆ ಮಾತ್ರ ಸ್ವಂತ ಅನಿಸುವುದಿಲ್ಲ.  ನಾವು ನಮ್ಮ ಜೊತೆಯಲ್ಲಿರುವವರೊಂದಿಗೆ ಅದು ನಮಗೆ ಗೊತ್ತಿರುವವರು, ನಮ್ಮ ಸಂಬಂಧಿಕರು, ಬಂದು ಬಾಂದವರು ಹೀಗೆ ಸುತ್ತಲಿನವರೊಂದಿಗೆ ಎಷ್ಟು ಸಂತೋಷದಿಂದ ಕಳೆದಿದ್ದೇವೆ ಅನ್ನುವುದರ ಮೇಲೆ ನಮ್ಮ ಬದುಕಿನ ಆಕರ್ಷಕತೆ ನಿಂತಿದೆ.

ಬದುಕು ಎಂದು ನಿಂತ ನೀರಲ್ಲಾ! ಅದು ಸ್ವಚ್ಛಂದವಾಗಿ ಸುಲಭವಾಗಿ ಹರಿಯುವ ತೊರೆಯಾಗಿರಬೇಕು. ಹಾಗೆ ಬದುಕುವ ಅವಕಾಶ, ಆಸೆಗಳು ಪ್ರತಿಯೊಬ್ಬರಿಗೂ ಇರುತ್ತದೆ.

ಅವರವರ ಇತಿಮಿತಿಯಲ್ಲಿ ಅವರವರ ಶಕ್ತಿಯನುಸಾರ ಜೀವನದಲ್ಲಿ ಪ್ರತಿಯೊಬ್ಬರೂ ಅಂದುಕೊಂಡ ಗುರಿಗಳನ್ನು ಹಿಡೇರಿಸಿಕೊಂಡಿರುತ್ತಾರೆ.

ಬದುಕು ಎಂದು ನಿಲ್ಲದ ಕನಸಿನ ಆಗರವೇ ಸರಿ. ಎಂದು ಕನಸು ನಿಲ್ಲುವುದೋ ಅಂದೇ ಬದುಕಿಗೆ ಪುಲ್ ಸ್ಟಾಪ್! ನಾವುಗಳೆಲ್ಲಾ ಕನಸಿನ ಬೆನ್ನು ಹತ್ತಿ ಓಡುತ್ತಿರುವ ಕುದುರೆಗಳೇ ಸರಿ.

ಬದುಕಿನ ನಾನಾ ವಯಸ್ಸಿನಲ್ಲಿ ನಾನಾ ರೀತಿಯ ಗುರಿ ಸಾಧನೆಗಳು ನಮ್ಮ ಕಣ್ಣ ಮುಂದಿರುತ್ತವೆ. ಅವುಗಳನ್ನು ಹೇಗೆಲ್ಲಾ ಸಾಧಿಸಬೇಕೆಂಬುದು ನಮ್ಮ ನಮ್ಮ ಬುದ್ಧಿ ಮತ್ತು ಜಾಣ್ಮೆಗೆ ಕಾಣಿಸುತ್ತಿರುತ್ತದೆ.  ಹಾಗೆಯೇ ಅಂದುಕೊಂಡಿದ್ದನ್ನೇಲ್ಲಾ ಸಾಧಿಸುವೆವು ಕೊಡ. ಸಾಧನೆಯ ಮಾಪನ ನಮ್ಮ ನಮ್ಮಲ್ಲಿಯೇ ಇರುತ್ತದೆ. ಆದರಂತೆ ನಮ್ಮ ಖುಷಿ ಮತ್ತು ದುಃಖದ ಮರ್ಮ ನಿರ್ಧಾರವಾಗುತ್ತದೆ.  ಆದರೇ ಸಾಧಿಸಿದ ಪಲಿತಾಂಶದ ಪರಾಮರ್ಶೆಯ ಮಾಪಕ ನಾವುಗಳಾಗಿದ್ದರೇ ಮಾತ್ರ ಸಾಕು.

ನಾವು ನಮಗೆ ಮಾತ್ರ ಬದುಕಿದರೇ ಚೆಂದ! ಯಾಕೆಂದರೇ ನಮ್ಮ ಬದುಕು ನಮ್ಮ ಕೈಯಲ್ಲಿದೆ. ಯಾರು ಯಾರ ಬದುಕನ್ನು ಎಂದಿಗೂ ಕಟ್ಟಲಾರರು ಅಥವಾ ಕೆಡವಲಾರರು.

ನಮ್ಮ ಸೋಲೇ ನಮಗೆ ಪಾಠ. ಅದು ನಮ್ಮ ಗಟ್ಟಿ ಅನುಭವದ ಬುತ್ತಿಯೇ ಸರಿ. ಅದು ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗುದರಲ್ಲಿ ಯಾವ ಸಂಶಯವಿಲ್ಲ.

ಬದುಕಿನ ಅರ್ಧ ಮೈಲು ಸಾಗಿಸಿದ ಸಂತಸ ಒಂದು ಕಡೆಯಾದರೇ.. ದಿನ ದಿನ ಮುದುಕರಾಗುತ್ತಿದ್ದೇವೆ ಎಂಬ ಭಯವು ಇರಬೇಕಾ ಎಂಬ ಪ್ರಶ್ನೇ ಮತ್ತೊಂದು ಕಡೆ. ಆದರೇ ಕಳೆದ ಜೀವನವನ್ನು ಮತ್ತೊಮ್ಮೆ ಬೇಕು ಎಂದು ಕೇಳಲಾಗುವುದಿಲ್ಲ. ಕೇಳಿದರೇ ಸಿಗಬೇಕಲ್ಲಾ? ಕಾಲದ ಚಕ್ರದಲ್ಲಿ ಹಿಮ್ಮುಕ ಚಲನೆಯಿಲ್ಲ.

ಗೊತ್ತಿಲ್ಲದ ಮುಂದಿನ ಭವಿಷ್ಯತ್ ಕಾಣುವ ನೋಟವೇ ಚೆನ್ನಾ.. ಮುಂದಿನ ದಿನಗಳ ಗುರಿಗಳು ಇದ್ದೇ ಇರುತ್ತದೆ.. ನಡೆಯುವ ಚೈತನ್ಯ ಮೈಗೂಡಿಸಿಕೊಂಡರೇ ಸಾಕಲ್ಲವಾ? ವಯಸ್ಸಿಗೆ ಗೋಲಿ ಮಾರೋ, ಬದುಕಿನ ಹರುಷಕ್ಕೆ ಜೈ ಅನ್ನೋಣವೆ?