ಶುಕ್ರವಾರ, ಫೆಬ್ರವರಿ 17, 2023

ಲಹರಿ

 ನಾವು ಓದಿದೆವೆಂದರೇ ಕೆಲಸ ಮಾಡಲೇಬೇಕಾ? ಅಯ್ಯೋ ಅಷ್ಟೊಂದು ಓದಿ ಕೊನೆಗೂ ಮದುವೆ,ಮಕ್ಕಳು,ಅತ್ತೆ, ಮೂಸರೇ ತೊಳೆಯುತ್ತಾ ಕೂತೂ ಬಿಟ್ಟೆ. 

ಅದು ಏನೂ ನಿನ್ನ ಅಪ್ಪ ನನ್ನ ಮಗಳಂತೇ ಯಾರೂ ಓದಿಲ್ಲವೆಂದು ಕೊಚ್ಚಿಕೊಂಡಿದ್ದು! ಹೀಗೆ ನೂರಾರು ಸುತ್ತಲಿನ ಬಾಯಿ ಮಾತು ಕೇಳಿ ಕೇಳಿ ರೋಸಿ ಹೋಗಿತ್ತು. 

ನಾನೂ ಅಷ್ಟು ಸ್ವಾಭಿಮಾನಿ. ನಾನು ಎಂದೂ ಹೆಣ್ಣು ಎಂದುಕೊಂಡು ಬೆಳೆದ ಮಗಳೇ ಅಲ್ಲ! ಅಪ್ಪ ಅನ್ನುವಂತೆ ನಾನೇ ನಮ್ಮ ಮನೆಗೆ ಗಂಡು ಮಗುವೆನ್ನುವಂತೆ ಬೆಳೆದವಳು. 

ಓದನ್ನು ಮಾತ್ರ ಅಚ್ಚುಕಟ್ಟಾಗಿ ಓದಿ ಬಿಡಬೇಕು ಎಂಬಂತೆ ಎಷ್ಟೇ ದೊಡ್ಡ ಓದು ಆದರೂ ಸಲೀಸಾಗಿ ಪಾಸು ಮಾಡುತ್ತಿದ್ದೆ. ಶಾಲೆಯಲ್ಲೂ ಅಷ್ಟೇ ಪ್ರತಿಯೊಬ್ಬ ಶಿಕ್ಷಕರುಗಳಿಗೂ ನಾನೇ ಬೇಕಾಗಿತ್ತು. ಓದು ಅಲ್ಲದೇ ಶಾಲೆಯಲ್ಲಿ ಕಾಲೇಜಿನಲ್ಲಿ ಯಾವುದೇ ಪಠ್ಯೇತರ ಚಟುವಟಿಕೆಗಳಿಗೆ ಅವಳೇ ಸರಿ ಎನ್ನುವ ಮಟ್ಟಿಗೆ ನಾನೇ ಪ್ರೀತಿ ಪಾತ್ರಳಾಗಿದ್ದೆ. 

ಹಾಗೇಯೇ ಬೇರೆ ಹುಡುಗ ಹುಡುಗಿಯರಿಗೆ ನನ್ನ ಏಳ್ಗೆಯನ್ನು ನೋಡಿ ಹೊಟ್ಟೆ ಉರಿ ಬಂದಿತ್ತೋ ಅಥವಾ ಅವರ ಹೆತ್ತವರು ನನ್ನನೇ ಉದಾಹರಣೆಯಾಗಿ ಕೊಟ್ಟು ಕೊಟ್ಟು ಅವರ ಹೊಟ್ಟೆ ಉರಿಸಿ ಮುನಿಸಿಕೊಳ್ಳುವಂತೆ ಮಾಡಿರಲೇಬೇಕು. 

ಇದೊಂದು ರೋಗವೇ ಸರಿ! ನಮ್ಮ ಹೆತ್ತವರೇ ಅಲ್ಲಾ ಪ್ರತಿಯೊಂದು ಮನೆಯಲ್ಲೂ ಬೇರೆಯವರೊಂದಿಗೆ ತಮ್ಮ ಮಕ್ಕಳನ್ನು ಹೋಲಿಸಿ ನೋಡುವುದು. ನೋಡು ಅವರ ಮಗ ಹೇಗೆ ದುಡಿಯುತ್ತಿದ್ದಾನೇ. ನೋಡು ಅವರ ಸೊಸೆ ಎಷ್ಟೊಂದು ಕೆಲಸ ಮಾಡುತ್ತಿದ್ದಾಳೆ. ಹೀಗೆ ಹಾಗೇ ಬರೀ ಬೇರೆಯವರನ್ನು ನೋಡಿ ನಮ್ಮ ನಮ್ಮ ಶಕ್ತಿಯನ್ನು ಪರೀಕ್ಷೆ ಮಾಡಿಕೊಳ್ಳುವುದೇ ಆಯಿತು ಅನಿಸುತ್ತದೆ. 

ನನಗೂ ಈ ರೀತಿಯ ಹೆತ್ತವರ ಕಾಟ ಮುಗಿಯಿತು ಅನ್ನುವ ಹೊತ್ತಿಗೆ ಮದುವೆ ಮಾಡಿ ಕೈ ತೊಳೆದು ಕೊಂಡು ಬಿಟ್ಟರು ಅನಿಸುತ್ತದೆ. ಅದು ಯಾರು ಅಲಿಖಿತ ಶಾಸನ ಮಾಡಿದ್ದರೋ ಗೊತ್ತಿಲ್ಲ. ಓದುವುದು ಮುಗಿಯಿತು ಅಂದರೇ ಹುಡುಗಿಯರಿಗೆ ಬೇಗ ಮೂಗುದಾರ ಹಾಕಿ ಅನ್ನುತ್ತಾರೆ. 

ನಮ್ಮ ಮಗಳು ಇದೀಗ ತಾನೇ ಇಷ್ಟೊಂದು ಓದಿದ್ದಾಳೆ, ಸ್ವಲ್ಪ ಸಮಯ ಆರಾಮಾಗಿ ಅಲ್ಲಿ ಇಲ್ಲಿ ಕೆಲಸ ಹುಡುಕಿ ದುಡಿಯಲಿ ಎನ್ನುವ ಮಾತೇ ಇಲ್ಲ. ಏಯ್ ನೀನು ಏನು ದುಡಿದು ನಮ್ಮನ್ನು ಉದ್ಧಾರ ಮಾಡಬೇಕಾಗಿಲ್ಲ. ನಾವು ಗಟ್ಟಿಯಾಗಿ ಇರುವಾಗಲೇ ನೀನೊಂದು ಮನೆಗೆ ಮಹಾಲಕ್ಷ್ಮಿಯಾಗಿ ಹೋಗಿ ಬಿಟ್ಟರೇ ಅಷ್ಟು ಸಾಕು ಎನ್ನುವ ಚಿಂತೆ ಹೆಣ್ಣು ಹೆತ್ತ ಎಲ್ಲಾ ತಂದೆ ತಾಯಿಯಂದಿರದು. 

ನಾವೆಷ್ಟೇ ಓದಿ, ಎಷ್ಟೇ ದೊಡ್ಡ ಹುದ್ದೆಯನ್ನು ಅಲಂಕರಿಸಿದರೂ ನಮ್ಮನ್ನು ಇದೇ ಸಮಾಜ ಕೇವಲ ಒಂದು ಹೆಣ್ಣು ಎನ್ನುವ ರೀತಿಯಲ್ಲಿಯೇ ನಮ್ಮ ನಮ್ಮ ಹೆತ್ತವರುಗಳು ಸಹ ಕಾಣುತ್ತಾರೆ. ಅದು ಏನೂ ಆ ಭಯ  ನನಗೆ ಇನ್ನೂ ಗೊತ್ತಾಗಿಲ್ಲ. 

ಇತಿಹಾಸ ಪುರಾಣಗಳಿಂದಲೂ ಮಹಿಳೆಯರ ಪರಾಕ್ರಮ ಸಾಧನೆಗಳು  ಕಣ್ಣ ಮುಂದೆ ಇದ್ದರೂ ಅವುಗಳನ್ನೆಲ್ಲಾ ಕೇವಲ ಕಥೆಯಾಗಿ ಮಾತ್ರ ನೋಡುತ್ತಾರೆ. ಪುನಃ ಪುನಃ ತನ್ನ ಕರಳು ಬಳ್ಳಿಯನ್ನು ಇನ್ನೂ ಹೆಚ್ಚು ನಾಜೂಕಾಗಿ ಕಾಪಾಡುತ್ತೇವೆ ಎನ್ನುವ ರೀತಿಯಲ್ಲಿ ಮದುವೆ ಎಂಬ ಖೆಡ್ಡಾಕ್ಕೆ ದೂಡುತ್ತಾರೆ. 


ಹೆಣ್ಣು ಎಂದರೇ ಅವಳು ಬೇರೆಯವರ ಮನೆಯ ಸೊತ್ತು ಎಂದೇ ನೋಡುತ್ತಾರೆ. ಅವಳ ಜವಬ್ದಾರಿಯನ್ನು ಇನ್ನೂ ಏನಿದ್ದರೂ ಅವಳ ಗಂಡ ಅತ್ತೆ ಮಾವ ನೋಡಿಕೊಳ್ಳಲಿ ಎಂಬ ಭಾವನೇ ಏಕೋ ಗೊತ್ತಿಲ್ಲ! 

ಗೊತ್ತಾ ನಮ್ಮ ಜವಾಬ್ದಾರಿ ಬೇರೆಯವರು ಹೊರುವುದಕ್ಕಿಂತ ನಾವೇ ಬೇರೆಯವರ ಜವಾಬ್ದಾರಿಯನ್ನು ಹೊತ್ತುಕೊಂಡು ಇಡೀ ಮನೆಯನ್ನೇ ತೂಗಿಸಿಕೊಂಡು ಸಾಗಬೇಕಾಗಿರುತ್ತದೆ. ಆದರೂ ನಮ್ಮ ಅಪ್ಪ ಅಮ್ಮನಿಗೆ ಅಮ್ಮ ಹೇಗೆ ತಮ್ಮ ಮನೆಯನ್ನು ನಿಭಾಯಿಸುವವಳು ಎಂಬುದನ್ನು ತಮ್ಮ ತಮ್ಮ ಹೆಣ್ಣು ಮಕ್ಕಳ  ಮದುವೆ ಮಾಡುವ ವೇಳೆ ಪೂರ್ತಿ ಮರೆತು ಬಿಟ್ಟಿರುತ್ತಾರೆ. ಇದೇಯೇ  ಸಮಜಾಯಿಷಿ? ಏನು ಹೇಳುವುದು ಹೆತ್ತ ಕರುಳುಗಳಿಗೆ!!