ಶನಿವಾರ, ಫೆಬ್ರವರಿ 26, 2022

ಯುದ್ಧ ಮತ್ತು ಶಾಂತಿ

ಅಂತು ಇಂತು ಕೊರೋನ  ಮುಗಿಯುತ್ತಿದೆ ಎನ್ನುವ ಹೊತ್ತಿಗೆ ನಮ್ಮ ರಾಜ್ಯದಲ್ಲಿ ಹಿಜಾಬ್ ಸಂಘರ್ಷದ ಕಿಡಿ ಹೊತ್ತಿಕೊಂಡಿದೆ. 

ವಿದ್ವಂಸಕ​ ಪುಡಾರಿಗಳಿಗೆ ನಮ್ಮ ಜನರನ್ನು, ವಿದ್ಯಾರ್ಥಿಗಳನ್ನು ನೆಮ್ಮದಿಯಾಗಿ ಎಂದು ಇರಲು ಬೀಡಲೇ ಬಾರದು ಎನ್ನುವ ಮನಸ್ಸಿರಬೇಕು. 

ಅದು ಯಾರು ಈ ಮತೀಯಾ, ಧರ್ಮಕ್ಕೆ ಸೇರಿದ ಪರ ವಿರೋಧದ ದ್ವೇಷವನ್ನು ಮುದ್ದು ಮುದ್ದು ಮನಸ್ಸುಗಳೊಳಗೆ ತುಂಬಿದರೋ ಕೇಸ್ ಹೈಕೋರ್ಟ ಅಂಗಳಕ್ಕೆ ಹೋಗಿದೆ.  

ಎಲ್ಲೆಲ್ಲೂ ನಮ್ಮ​ ಶಾಲಾ ಕಾಲೇಜುಗಳು ಅಕ್ಷರಶ​: ರಣರಂಗವೇ ಆಗಿಬಿಟ್ಟು, ಸರ್ಕಾರ ಶಾಲೆಗಳನ್ನು ಬಂದ್ ಮಾಡಿ ರಜೆ ಘೋಷಣೆ ಮಾಡುವ ಮಟ್ಟಿಗೆ. ಈ ಧರ್ಮ ವಸ್ತ್ರ ವಿಷಯವನ್ನು ಇಷ್ಟು ದೊಡ್ಡದು ಮಾಡಿ ತಮಾಷೆ ನೋಡುತ್ತಿರುವ ಈ ಕಳ್ಳ ಮನಸ್ಸುಗಳೇ ಉತ್ತರಿಸಬೇಕು.


ಇಷ್ಟು ದಿನ ಅದು ಹೇಗೆ ಇತ್ತೋ ಗೊತ್ತಿಲ್ಲ ಇನ್ನು ಮುಂದಿನದೂ ಬೇರೆ ಲೆಕ್ಕ! ಎನ್ನುವ ಮಟ್ಟಿಗೆ ಹಿಂದೂ ಮುಸ್ಲಿಮ್ ವಿದ್ಯಾರ್ಥಿಗಳು, ಮುಖಂಡರಗಳು, ಧರ್ಮ ಗುರುಗಳು, ಮಕ್ಕಳ ಹೆತ್ತವರು ಹೀಗೆ ಪ್ರತಿಯೊಬ್ಬರೂ  ಪರ ವಿರೋಧದ ಗುಂಪುಗಳಾಗಿಬಿಟ್ಟಿವೆ. 


ಕೋರ್ಟ ಯಥಾ ಸ್ಥಿತಿ ಪಾಲಿಸಿಕೊಂಡು ಇರೀ ನಾವು ತೀರ್ಪು ಹೇಳುವವರಿಗೂ ಅಂದರೇ.. ನೋ ಎಂದು ಯಾರೊಬ್ಬರೂ  ಕೋರ್ಟ್ ಆದೇಶಕ್ಕೂ ಕವಡೇ ಕಾಸಿನ ಕಿಮ್ಮತ್ತು ಕೊಡದೇ ಮತ್ತೆ ಅದೇ ರೀತಿಯ ದೊಂಬಿಯನ್ನು ಶಾಲಾ ಕಾಲೇಜುಗಳಲ್ಲಿ ನಡೆಸುತ್ತಿದ್ದಾರೆ.  


ನಾವೆಲ್ಲಾರೂ ಒಂದೇ ನಮ್ಮ ದೇಶ ಒಂದೇ ಭಾರತವೇ ಧರ್ಮ ಎಂದು ಪಾಠ ಹೇಳುವ ಮಂದಿರಗಳು ಹೊಡೆದಾಡುವ ಜಾಗಗಳಾಗಿರುವುದು ವಿಪರ್ಯಾಸ​.​


ಶಾಲಾ ಪಾಠ   ಮತ್ತು ಪರೀಕ್ಷೆಗಿಂತ ಹಿಜಾಬೇ ಮುಖ್ಯ ಎಂದು ಮುಷ್ಕರ ಮಾಡುತ್ತಿರುವ​ ವಿದ್ಯಾರ್ಥಿನಿಯರು. ಅವರು ಹಿಜಾಬ್ ಹಾಕಿಕೊಂಡು ಬಂದರೇ ನಾವು ಕೇಸರಿ ಶಾಲೇ ಧರಿಸಿ ತರಗತಿಗಳಿಗೆ ಬರುತ್ತೇವೆ ಎನ್ನುವ​ ಹಿಂದು ಮನಸ್ಸುಗಳು. 


ನೀವು ಸರಸ್ವತಿ ಪೂಜೆ, ಕುಂಕುಮ, ತಲೆಗೆ ಹೂವು ಎಲ್ಲಾ ಇಟ್ಟುಕೊಂಡು ಬರುತ್ತಿರಲ್ಲಾ ನಾವೇನಾದರೂ ಕೇಳಿದ್ದಿವಾ ಎನ್ನುವ ಮುಸ್ಲಿಂ ಮನಸ್ಸುಗಳು. 


ನಾವಾ ನೀವಾ ಎನ್ನುತ್ತಾ ಇಡೀ ಕರ್ನಾಟಕವನ್ನು ಧರ್ಮ ಯುದ್ಧಕ್ಕೆ ಅಣಿ ಮಾಡಲು ಸಿದ್ಧವಾಗಿರುವಂತೆ ಪ್ರೇರಪಿಸುತ್ತಿರುವ ಅರೇ ಬೆಂದ ಈ ಮನಸ್ಸುಗಳನ್ನು ನೆನಸಿಕೊಂಡರೇ ಅಸಹ್ಯ ಹುಟ್ಟುತ್ತದೆ. 


ಹತ್ತಿರವಿದ್ದರೂ ದೂರ ದೂರ ನಿಲ್ಲುತ್ತಿರುವ ಚಿಕ್ಕ-ದೊಡ್ಡ ಮನಸ್ಸಿನ ಈ ನಾಗರಿಕ​ ಮನುಷ್ಯರನ್ನು ಕಂಡು ಭಾರತಾಂಬೆಯೇ ಕಣ್ಣೀರಿಟ್ಟಿರಬೇಕು. 


ಹೀಗೆ ಇನ್ನೂ ನಿತ್ಯ ಸಂಘರ್ಷ ಜಗಳಗಳ ನಡುವೆಯೇ ಶಿವಮೊಗ್ಗದಲ್ಲಿ ನಡೆದ ಹಿಂದು ಹುಡುಗನ ಕೊಲೆ ಇಡೀ ನಗರವನ್ನೆ ಎರಡು ದಿನಗಳ ಕಾಲ ಹತ್ತಿ ಉರಿಯುವಂತೆ ಮಾಡಿರುವುದು.. ಈ ಧರ್ಮ ಯುದ್ಧ ಎಲ್ಲಿಗೆ ಹೋಗಿ ನಿಲ್ಲುವುದೋ ಎಂದು ಇಡೀ ರಾಜ್ಯದ ಜನರನ್ನು ಚಿಂತೆಗೀಡು ಮಾಡಿದೆ. 


ಅಲ್ಲಾ ಪುಟ್ಟ ಪುಟ್ಟ ಮನಸ್ಸುಗಳು ಈ ಮಟ್ಟಿಗೆ ಮಲಿನಗೊಳ್ಳುವಂತೆ ಮಾಡಿದ ಆ ಪ್ರಭುತಿಗಳು ಯಾರೂ ಅನಿಸುತ್ತದೆ. ರಾಜಕೀಯ ಬೇಳೇ ಬೆಯಿಸಿಕೊಳ್ಳಲು ಸಾಮಾರಸ್ಯದಿಂದ ಬದುಕುವಂತೆ ಬಿಡಲು ಯಾಕೇ ಇನ್ನೂ ನಮ್ಮ ನೇತಾರಾರಿಗೆ  ಧರ್ಮ ಸೇವಕರಿಗೆ ಕೊಂಚ​ ಬುದ್ಧಿ ಬಂದಿಲ್ಲ​.


ಇದೇಯೇನು ನಾವುಗಳು ನಮ್ಮ ಇತಿಹಾಸದಿಂದ ಇಷ್ಟು ದಿನ​ ಕಲಿತದ್ದೂ ಅನಿಸುತ್ತದೆ. ಇನ್ನೂ ಅದೇಷ್ಟು ಜನರನ್ನೂ ಕೊಂದು, ವಿರೋಧಿಸುತ್ತಾ ನಿತ್ಯ ಕಲಹದೊಂದಿಗೆ ನಾವು ಬಾಳಬೇಕು? 


ದೇಶ ಮೊದಲು ಎನ್ನುವ ಮಂತ್ರವನ್ನು ನಾವೆಲ್ಲಾ ಯಾಕೇ ಪುನಃ ಪುನಃ ಮರೆಯುತ್ತೇವೆ?


ಹೀಗೆ ನಮ್ಮ ರಾಜ್ಯ ಮತ್ತು ದೇಶದಲ್ಲಿ ಅಶಾಂತಿಯ ಕಾರ್ಮೋಡ ಕವಿತುಕೊಂಡು ಮುಂದೇನೋ ಎಂಬ ಬೀತಿಯಲ್ಲಿರುವ​ ಹೊತ್ತಿಗೆ.. 


ಮೂರನೇ ಮಹಾಯುದ್ಧವಂತೇ..


ಹೌದು. ವಿಶ್ವದಲ್ಲಿಯು ಕೊರೋನದ ಪ್ರಾಬಲ್ಯ ಇನ್ನೇನೂ ಕಡಿಮೆಯಾಯಿತು. ನಾವುಗಳು ಪುನಃ ಮಾಮೊಲಿ ಶೈಲಿಗೆ ಮರಳಬಹುದು ಎನ್ನುವಷ್ಟರಲ್ಲಿ ರಷ್ಯಾ ಉಕ್ರೇನ್ ತಮ್ಮ ತಮ್ಮ​ ಯುದ್ಧ ಉನ್ಮಾನದಲ್ಲಿ ಮೂರನೇ ವಿಶ್ವ ಯುದ್ಧದಲ್ಲಿ ತೊಡಗಿರುವ ದೃಶ್ಯ​ ಎಂಥವರ ಎದೆ ಹೊಡೆದು ಹೋಗುವಷ್ಟು ಬೀಕರವಾಗಿದೆ. 


ಟಿವಿ ಪರದೆಯ ಮೇಲೆ ಮೂಡಿ ಬರುತ್ತಿರುವ ರಣರಂಗದ ಯುದ್ಧ ಚಿತ್ರಗಳು ಮೊದಲನೇ ಮತ್ತು  ಎರಡನೇ ವಿಶ್ವ ಯುದ್ಧವನ್ನು ಇತಿಹಾಸದ ಪಾಠದಲ್ಲಿ ಓದಿದ ಮನಗಳಿಗೆ ತಣ್ಣನೆ ಭಯವನ್ನು ಮೂಡಿಸಿದೆ. 


ಭವಿಷ್ಯದ ಬಗ್ಗೆ ಭರವಸೆಯೇ ಇಲ್ಲ ಅನಿಸುವಂತೆ ಮಾಡಿದೆ. 


ಮಕ್ಕಳಿಂದ ವಯೋವೃದ್ಧರವರಿಗೇ ಉಕ್ರೇನ್ ನಲ್ಲಿ ಬೀಳುತ್ತಿರುವ ಆ ಬಾಂಬ್, ಬೆಂಕಿ, ಸಾವು, ನೋವುಗಳು ಇಲ್ಲಿಯೇ ನಮ್ಮ ಪಕ್ಕದಲ್ಲಿಯೇ ಜರುಗುತ್ತಿದೆಯೇನೋ ಎಂಬ ಆತಂಕವನ್ನುಂಟು ಮಾಡುತ್ತಿದೆ. 

ಅದನ್ನು ನೋಡಿದ​ ಮುದ್ದು ಮಕ್ಕಳ ಪುಟ್ಟ ಪುಟ್ಟ ಪ್ರಶ್ನೆಗಳಿಗೆ ದೊಡ್ಡವರು ಏನೂ ಉತ್ತರ ಕೊಡಬೇಕೋ ಏನೂ ತಿಳಿಯದೇ ಸುಮ್ಮನೇ ಟಿ.ವಿ ನೋಡುತ್ತಾ ಕೂತು ನಾವು ಎಂಥ ಪ್ರಪಂಚದಲ್ಲಿದ್ದೇವೆ ಎಂದು ಜಿಗುಪ್ಸೆಪಡುವಂತಾಗಿದೆ. 


ಪುನಃ  ಈ ಮನುಷ್ಯ ವಿಶ್ವ ಚರಿತ್ರೆಯಿಂದ ಏನನ್ನೂ ಕಲಿಯಲೇ ಇಲ್ಲವೇನೋ ಅನಿಸುತ್ತದೆ. 


ಹೌದು! ಉಕ್ರೇನ್ ನಲ್ಲಿರುವವರ ಪರಿಸ್ಥಿತಿ, ಯುದ್ಧದಿಂದ ಆಗುತ್ತಿರುವ ಹಿಂಸೆ, ನೋವು, ನಷ್ಟ​ ಇಡೀ ವಿಶ್ವಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತಿದೆ. 


ಮನುಷ್ಯನಿಗೆ ನಿಲುಕದ ಸಮಸ್ಯೆ ಯಾವುದೂ ಇಲ್ಲ. ತನ್ನ ಬುದ್ಧಿ ಮತ್ತು ಚಾಕಚಕ್ಯತೆಯಿಂದ ಏನಾನ್ನದರೂ ಬಗೆಹರಿಸಬಲ್ಲ. ಆದರೇ ಈ ಯುದ್ಧ ಮನ ಸ್ಥಿತಿಯನ್ನು ಕಳೆದುಕೊಳ್ಳುವ ಅಥವಾ ಯುದ್ಧವನ್ನು ತಡೆಯುವಂತೆ ಮಾಡುವ ಯಾರೊಬ್ಬರೂ ಈ ಪ್ರಪಂಪಚದಲ್ಲಿ ಹಿಂದೆಯು ಇರಲಿಲ್ಲ, ಇಂದೂ ಇಲ್ಲ ಮತ್ತು ಮುಂದೆನೂ ಇರುವುದಿಲ್ಲ ಎಂಬುದು ಜಗತ್ತಿನ ಎಲ್ಲಾ  ಮನುಷ್ಯರಿಗೆ ಈ ಎರಡು ದಿನಗಳಲ್ಲಿ ಗೊತ್ತಾಗಿಬಿಟ್ಟಿದೆ. 


ವಿಶ್ವ ಸಂಸ್ಥೆ, ಶಾಂತಿ ಒಕ್ಕೋಟ, ಈ ದೊಡ್ಡಣ್ಣ​, ಚಿಕ್ಕಣ್ಣ​, ಆ ನೆರೆಯ, ಸ್ನೇಹಿ ದೇಶ ಹೀಗೆ ಯಾರೊಬ್ಬರೂ ಯಾರನ್ನೂ ರಕ್ಷಿಸಲಾರರರು.  ತಮ್ಮನ್ನು ತಾವೇ ಎಂದಿಗೂ ರಕ್ಷಿಸಿಕೊಳ್ಳಬೇಕು. ನಮ್ಮ ಮನೆ ಉರಿದರೇ ನಮಗೆ ನಷ್ಟ​. ಬೇರೆಯವರು ಕೇವಲ ಪ್ರೇಕ್ಷಕರೇ ಎಂದೆಂದಿಗೂ. ಅದು ದೇಶವಾಗಲಿ, ರಾಜ್ಯವಾಗಲಿ, ನಮ್ಮ ನಮ್ಮ ಮನೆಯಾಗಲಿ. 

ಅದೇ ಉಕ್ರೇನ್ ಸ್ಥಿ ತಿ ಇಂದು!!


ಮಾತಿನಲ್ಲಿ ಬಗೆಹರಿಸುವಂತ ಪ್ರತಿಯೊಂದು ವಿಷಯವನ್ನು ಕೇವಲ ಸಾವು ನೋವುಗಳಿಂದ ಬಗೆಹರಿಸುತ್ತೇವೆ ಎಂದು ಹೋಗುತ್ತಿರುವ ಈಗಿನ ಈ ಹೀನಾ ಮನಸ್ಸುಗಳಿಗೆ  ಯಾರು ಬುದ್ಧಿ ಹೇಳುವವರೋ  ತಿಳಿಯದಾಗಿದೆ. 


ಪ್ರತಿಯೊಬ್ಬರೂ ಎಲ್ಲಾ ಗೊತ್ತಿರುವವರಂತೆ ಮತ್ತು ಅಫೀಮು ತಿಂದವರಂತೆ ತಮ್ಮದೇ ನೀತಿಯಲ್ಲಿ ಶಾಂತಿಯೆಂಬುದು ಈ ಪ್ರಪಂಚದ್ದ​ಲ್ಲಾ ಎಂಬಂತೆ ಎಲ್ಲರನ್ನೂ ಯಾವಾಗಲೂ ಬೀತಿಯಲ್ಲಿಟ್ಟಿರಬೇಕು ಎಂಬಂತೆ ವರ್ತಿಸುವ ಪ್ರತಿ ಮನಸ್ಸುಗಳ ಮನಸ್ಥಿತಿಯನ್ನು ಬದಲಾಯಿಸಲೂ ಮತ್ತೊಮ್ಮೆ ಆ ಶ್ರೀ ಕೃಷ್ಣ ಪರಮಾತ್ಮ ಅದು ಯಾವ ಗೀತೆ ಬೋಧಿಸಬೇಕೋ ಗೊತ್ತಿಲ್ಲ​!

ಮಂಗಳವಾರ, ಫೆಬ್ರವರಿ 1, 2022

‘ವಸಂತನ’ ಆಗಮನಕ್ಕೆ ನಿಸರ್ಗದ ಸ್ವಾಗತ!

 'ಕಂಗೊಳಿಸುವ ಕೆಂಪು ಮುಂದೆ, 

ಕಂಗೆಡಿಸುವ ಮಂಜು ಹಿಂದೆ, 

ಅತ್ತಣಿಂದ ಬೇಟೆಗಾರ ಬಹನು ನಾನು ಬಲ್ಲೆ.'

 - ಅಂಬಿಕಾತನಯದತ್ತ

ಎಲ್ಲೆಲ್ಲೂ ಹಚ್ಚ ಹಸಿರು ಚಿಗುರಿನ ಸಿಂಗಾರ, ಚುಮು ಚುಮು ಬಿಸಿಲು, ಆಗೊಮ್ಮೆ ಈಗೊಮ್ಮೆ ಕೇಳಿ ಬರುವ ಕೋಗಿಲೆಯ ಸುಮಧುರ ಕೂಗು, ಈ ರೀತಿಯ ಹೊಸತನದ ರಂಗಿನ ಸ್ವಾಗತವನ್ನು ಯುಗಾದಿ ಪಡೆಯುತ್ತದೆ. ಋತುಗಳ ರಾಜನಾದ 'ವಸಂತನ' ಆಗಮನಕ್ಕೆ ನಿಸರ್ಗವೇ ತನ್ನ ಹಲವು ರೀತಿಯ ಹಳತನ್ನೆಲ್ಲಾ ಕಳಚಿಕೊಂಡು ಹೊಚ್ಚ ಹೊಸತನದೂಂದಿಗೆ ಬರಮಾಡಿಕೊಳ್ಳುತ್ತದೆ.

ಇನ್ನು ಯುಗಾದಿ ಸಾಮಾನ್ಯವಾದ ಹಬ್ಬವೇನಲ್ಲ. ಹಿಂದೂಗಳ ಎಲ್ಲಾ ಹಬ್ಬಗಳಿಗೆ 'ರಾಜ ಹಬ್ಬ' ವೇ ಸರಿ. ಇದು ಯುಗದ ಆದಿ. ಯುಗದ ಹಾದಿಗೆ ಈ ಹಬ್ಬದ ಮೂಲಕ ಶ್ರೀಕಾರ ಆಗುತ್ತದೆ. ನಮ್ಮ ಜನಕ್ಕೆ ಇದೇ ಹೊಸ ವರ್ಷಾರಂಭ ಮತ್ತು ಯುಗಾದಿಯ ದಿನವೇ ರಾಮ ರಾವಣವನ್ನು ಸೋಲಿಸಿ ಅಯೋಧ್ಯೆಗೆ ಹಿಂತಿರುಗಿ ತನ್ನ ಸಿಂಹಾಸನವನ್ನು ಅಲಂಕರಿಸಿ ಜನರ ಪ್ರೀತಿಗೆ ಭಾಜನನಾಗಿದ್ದು.

ನಮ್ಮ ಕನ್ನಡ ನಾಡಿನ ಯುಗಾದಿ ಆಚರಿಣೆ ಸಂಭ್ರಮವನ್ನು ನಾವು ಬೇರೆ ಯಾವ ಹಬ್ಬಗಳಲ್ಲೂ ಕಾಣಲಾರೆವು. ನಿಸರ್ಗವು ಯಾವ ರೀತಿಯಲ್ಲಿ ಯುಗವನ್ನು ಬರಮಾಡಿಕೊಳ್ಳುತ್ತದೆಯೋ ಅದೇ ಬಗೆಯಲ್ಲಿ ನಮ್ಮ ಜನರೂ ಸಂತಸದಿಂದ ಆಚರಿಸಲು ಸಿದ್ಧತೆಯನ್ನು ಮಾಡಿ ಕೊಳ್ಳುತ್ತಾರೆ. 

ಹಬ್ಬ ಇನ್ನೂ ತಿಂಗಳಷ್ಟು ದೂರ ಇರುವಾಗಲೇ ನಗರಗಳ ಅಂಗಡಿಗಳಲ್ಲೆಲ್ಲ, ಎಲ್ಲ ಜನಯೋಪಯೋಗಿ ವಸ್ತುಗಳ ಮೇಲೆ ರಿಯಾಯ್ತಿ ಘೋಷಣೆ. ಮೆಗಾ ಡಿಸ್ಕೌಂಟ್‌ ಸೇಲ್‌ ಫಲಕ ನೋಡಿದ ಮೇಲೆ ಜನ ಆಕರ್ಷಿತರಾಗದೇ ಇರುತ್ತಾರೆಯೇ? ಹಬ್ಬಕ್ಕೆ ಬೇಕಾದ ಎಲ್ಲ ಸರಕು-ಸರಂಜಾಮುಗಳನ್ನು ಕೊಳ್ಳುತ್ತಾರೆ. ಎಲ್ಲರೂ ತಮ್ಮ ಶಕ್ತಿ ಮೀರಿ ಈ ಹಬ್ಬವನ್ನು ಅತ್ಯುತ್ತಮವಾಗಿ ಆಚರಿಸಲು ಕಂಕಣ ಬದ್ಧರಾಗುತ್ತಾರೆ. ಈ ಭಾವನೆ ನಗರ ಮತ್ತು ನಮ್ಮ ಹಳ್ಳಿಗಳೆಂಬ ತಾರತಮ್ಯ ಇಲ್ಲದೆ ಎಲ್ಲೆಡೆಯೂ ಕಂಡುಬರುತ್ತದೆ. 

ನಮ್ಮ ಭಾರತೀಯ ಹಬ್ಬದ ಸೊಬಗನ್ನು ಕಾಣಬೇಕೆಂದರೆ ನಮ್ಮ ಹಳ್ಳಿಗಳಿಗೆ ಹೋಗಿ ನೋಡಬೇಕು. ವರ್ಷದ ಬೇಸಾಯದ ಬಿಡುವಿನ ಸಮಯದಲ್ಲಿ ಬರುವ ಯುಗಾದಿ, ರೈತನ ಮನೆ ತುಂಬ ದವಸ, ಧಾನ್ಯಗಳ ಭಂಡಾರ ತುಂಬುತ್ತದೆ. ಇದರಿಂದ ಉತ್ತೇಜಿತನಾಗುವ ರೈತ ತನು ಮನ ಧನಗಳನ್ನು ಅರ್ಪಿಸಿಕೊಂಡು, ಮನೆ ಮಂದಿಯಾಂದಿಗೆ ನಲಿಯುತ್ತಾ ಹಬ್ಬ ಆಚರಿಸುತ್ತಾನೆ.

ಹಳ್ಳಿಗಳಲ್ಲಿ ಗೃಹಿಣಿಯರು ತಮ್ಮ ಅಕ್ಕ ಪಕ್ಕದ ಮನೆಯ ಸಹಗೃಹಿಣಿಯರ ಸಹಾಯದಿಂದ, ಪ್ರತಿನಿತ್ಯ ತಮ್ಮ ತಮ್ಮ ಮನೆಗಳಲ್ಲಿ ವಿವಿಧ ರೀತಿಯ ತಿನಿಸುಗಳನ್ನು ಮಾಡಿ ಬಿಸಿಲಿನಲ್ಲಿ ಒಣಗಿಸಿ ಹಬ್ಬಕ್ಕಾಗಿ ಸಿದ್ಧಪಡಿಸಿಕೊಳ್ಳುತ್ತಾರೆ. ಹಬ್ಬದ ನೆಪದಲ್ಲಿ ಮಾಡಿದ ಈ ಪದಾರ್ಥಗಳು ಮುಂದಿನ ವರ್ಷವಿಡೀ ಉಪಯೋಗಕ್ಕೆ ಬರುತ್ತವೆ. ಯಾಕೆಂದರೆ ಇಂಥ ಬಿಡುವಿನ ಸಮಯ ಪುನಃ ಸಿಗಬೇಕೆಂದರೆ ಮುಂದಿನ ಯುಗಾದಿಯೇ ಬರಬೇಕು. 

ತಿಂಡಿ-ತೀರ್ಥಗಳ ರುಚಿ ಹಬ್ಬದಲ್ಲಿ ಮತ್ತಷ್ಟು ಹೆಚ್ಚಾಗುತ್ತದೆ. ಯಾಕೆಂದರೆ ಅಲ್ಲಿ ಪ್ರೀತಿಯ ಕೈ ಎಲ್ಲ ವಸ್ತುಗಳನ್ನೂ ಸ್ಪರ್ಶಿಸಿರುತ್ತದೆ. ಆದರೆ ನಮ್ಮ ನಗರದವರಿಗೆ ಈ ರೀತಿಯ ರುಚಿ ಕೇವಲ ಪ್ಯಾಕೆಟ್‌ ಪದಾರ್ಥಗಳಿಗೆ ಸೀಮಿತವಾಗಿ ಒಂದು ರೀತಿಯ ಕೃತಕ ಮಾಧುರ್ಯವೇ ಅನಿವಾರ್ಯವಾಗಿಬಿಟ್ಟಿದೆ .

 ಮನೆಯ ಒಳ-ಹೊರಗೆಲ್ಲ ಸುಣ್ಣ ಬಣ್ಣಗಳಿಂದ ಕಂಗೊಳಿಸುವುದು ಮನಮೋಹಕ. ಮನೆಯ ಎಲ್ಲಾ ಬಾಗಿಲುಗಳಿಗೆ ಹಸಿರುತೋರಣ, ಮನೆಯ ಮುಂದೆ ರಂಗೋಲಿ. ಮಕ್ಕಳಿಗೆ ಈ ಹಬ್ಬ ಹೆಚ್ಚು ಇಷ್ಟ , ಯಾಕೆಂದರೆ ಹೊಸ ಉಡುಪುಗಳ ಜಾತ್ರೆಯೇ ಆಗುತ್ತದೆ! ಹಿರಿ-ಕಿರಿಯರೆಲ್ಲ ಒಂದಾಗಿ ಖುಷಿಪಡುತ್ತಾರೆ. ಮನೆಯಲ್ಲಿ ದೊಡ್ಡವರಿಂದ ಹಿಡಿದು ಚಿಕ್ಕವರವರೆಗೆ ಎಲ್ಲರೂ ಅಭ್ಯಂಜನ ಮಾಡಿ, ಹೊಸ ಉಡುಪನ್ನು ಧರಿಸಿ, ಪೂಜೆಗೆ ಸಿದ್ಧವಾಗುತ್ತಾರೆ.

ಆ ವೇಳೆಗೆ ಮನೆಯ ಮಹಿಳೆಯರೆಲ್ಲ ರುಚಿಯಾದ ತಿನಿಸು, ಅಡಿಗೆಗಳು ಹಾಗೂ ಬೇವು-ಬೆಲ್ಲ ಎಲ್ಲವನ್ನೂ ಸಿದ್ಧಗೊಳಿಸಿರುತ್ತಾರೆ. ಹಿರಿಯರಿಂದ ಹೊಸ ಪಂಚಾಗದ ಪಠಣ ಮತ್ತು ಅದನ್ನು ಮನೆ ಮಂದಿಯೆಲ್ಲಾ ಕೇಳುತ್ತಾರೆ. ಆ ವರ್ಷದ ಫಲಾಫಲಗಳು, ಭವಿಷ್ಯ, ಮಳೆಯ ಯೋಗ ಇತ್ಯಾದಿ ವಿವರಣೆಗಳನ್ನು ಕೇಳಿ ಧನ್ಯರಾಗುತ್ತಾರೆ. 

ಬೇಸಾಯದ ಕೇಂದ್ರ ಬಿಂದು ಎತ್ತುಗಳು. ಅವುಗಳ ಪೂಜೆಯೂ ನೆರವೇರುತ್ತದೆ. ಜೊತೆಜೊತೆಗೆ ಅಂದೇ ಹೊಲದಲ್ಲಿ ಮಣ್ಣಿನ ಪೂಜೆ ಹಾಗೂ ನೇಗಿಲು ಪೂಜೆ ಮಾಡಿ, ಸ್ವಲ್ಪ ದೂರ ಉಳುಮೆಯನ್ನೂ ಮಾಡಲಾಗುತ್ತದೆ. ಇದಕ್ಕೆ ಗ್ರಾಮೀಣ ಭಾಷೆಯಲ್ಲಿ 'ಹೊನ್ನಾರ' ಎಂದು ಕರೆಯಲಾಗುತ್ತದೆ. 

ಬೇವು-ಬೆಲ್ಲಗಳ ವಿತರಣೆಯಾಯಿತು ಎಂದರೆ ಮುಗಿಯಿತು. ಎಲ್ಲರೂ ಅಂದಿನ ಮುಖ್ಯ ಭೋಜನದ ಸವಿದು, ಊರಿನ ಮುಖ್ಯ ದೇವಸ್ಥಾನಗಳ ಜಾಗಕ್ಕೋ ಅಥವಾ ತಂಪಾದ ಮರದ ನೆರಳಿನ ಜಾಗಕ್ಕೋ ಬರುತ್ತಾರೆ. ಪರಸ್ಪರ ಕುಶಲ ವಿನಿಮಯ ಮಾಡಿಕೊಳ್ಳುತ್ತಾರೆ. ಮಕ್ಕಳು ಜೊಕಾಲಿಯಾಟ ಆಡುವ ತವಕದಲ್ಲಿ ವಿವಿಧ ಮರಗಳ ಕೊಂಬೆಗಳನ್ನು ಅರಸುತ್ತಾ ಅಕ್ಕ ಪಕ್ಕದ ಹೊಲಗಳ ಕಡೆ ಮುಖ ಮಾಡುತ್ತಾರೆ. 

ಕೆಲ ಮಧ್ಯ ವಯಸ್ಕ ತರುಣರು ತಮ್ಮ ಅದೃಷ್ಟ ಪರೀಕ್ಷೆ ಮಾಡೋಣವೇ ಎಂದು ಜೂಜಾಟಕ್ಕೆ ತೊಡಗುತ್ತಾರೆ. ಹೀಗೆ ಯುಗಾದಿಯಲ್ಲಿ ಪ್ರಾರಂಭವಾದ ಜೂಜಾಟ ಕೆಲವೊಮ್ಮೆ ತಿಂಗಳವರೆಗೆ ಮುಂದುವರಿಯುವುದು ಸಾಮಾನ್ಯ. ಕೆಲವರು ತಮ್ಮ ಹಣವನ್ನು ಕಳೆದುಕೊಂಡು ಎಚ್ಚರವಾಗುವರು ಮತ್ತು ಕೆಲವರು ಹಣ ಗಳಿಸಿ ಮುಂದಿನ ಯುಗಾದಿಯಲ್ಲಿ ಪುನಃ ಆಟ ಆಡಬೇಕೆಂದುಕೊಳ್ಳುವರು. 

ನಮ್ಮ ಹಳ್ಳಿಗಳಲ್ಲಿ ಯುಗಾದಿಯೆಂದರೆ ಎರಡು ದಿನದ ಹಬ್ಬ ಇದಿಷ್ಟು ಮೊದಲನೇ ದಿನದ ಆಚರಣೆ. ಎರಡನೇಯ ದಿನದಲ್ಲಿ ಸಾಮಾನ್ಯವಾಗಿ ಪೂಜೆ ಮತ್ತು ಸಿಹಿಯಾದ ಊಟವನ್ನು ಮಧ್ಯಾಹ್ನದಿಂದ ಸಂಜೆಯವರೆಗೆ ಮಾಡುತ್ತಾರೆ. ಎರಡನೆಯ ದಿನ ನಮ್ಮ ಊರುಗಳಲ್ಲಿ ಸಂಜೆ ಚಂದ್ರನ ದರ್ಶನವನ್ನು ಮಾಡುವುದರ ಮೂಲಕ ಅಂದಿನ ಮುಖ್ಯ ಆಚರಣೆ ಮುಗಿಯುತ್ತದೆ. ಅಂದು ಚಂದ್ರ ದರ್ಶನವಾದ ಬಳಿಕ ಹಿರಿಯರಿಗೆಲ್ಲಾ ಚಿಕ್ಕವರಿಂದ ಕಾಲಿಗೆ ನಮಸ್ಕಾರ ಮತ್ತು ಅವರಿಂದ ಆಶೀರ್ವಾದಗಳನ್ನು ಪಡೆಯುತ್ತಾರೆ. 

ಯುಗಾದಿಯ ಮೂರನೇಯ ದಿನದ ಹಬ್ಬ ಒಂದು ರೀತಿಯಲ್ಲಿ ಕಿರಿಯರಿಗೆ ಮತ್ತು ತರುಣ ತರುಣಿಯರಿಗೆ. ಅಂದು ನೀರು ಎರಾಚಡುವುದು ನಡೆಯುತ್ತದೆ. ಇದು ಒಂದು ರೀತಿಯಲ್ಲಿ ಹೋಳಿಯ ಆಚರಣೆ.

Read more at: https://kannada.oneindia.com/festivals/ugadi/2006/290306thipperudra.html

ಪ್ರೀತ್ಸೋದ್‌ ತಪ್ಪಾ?

 ಪ್ರೇಮ ಕುರುಡು ಅದಕ್ಕೆ ಕಣ್ಣಿಲ್ಲ ಎಂದು ಕೆಲವರು ಹೇಳುತ್ತಾರೆ. ಆಕರ್ಷಣೆಯೇ ಮುಖ್ಯವಲ್ಲ ಅಲ್ಲಿ ನೋಟಾತೀತವಾದ ಬೇರೆಯೇನೋ ಇದ್ದಿರಲೇಬೇಕು. ಯಾಕೆಂದರೆ, ಹಲವಾರು ಗಟ್ಟಿ ಪ್ರೇಮ ಪ್ರಕರಣಗಳು ಸುಂದರವಲ್ಲದ ಯುವಕ-ಯುವತಿಯರ ನಡುವೆಯೂ ಸಹ ನಿರಂತರವಾಗಿ ಸಾಗುತ್ತ ವೆ... ಪ್ರೇಮಕ್ಕೆ ಕಣ್ಣುಂಟು ಎಂದು ತಿಳಿಯಲು ಇಷ್ಟು ಸಾಕಲ್ಲವೇ...?


‘ನಿಜಕ್ಕೂ ನಾವು ಇತರ ಮನುಷ್ಯರಲ್ಲಿನ ಮುಗ್ಧತೆಯನ್ನು ಪ್ರೇಮಿಸಿದಷ್ಟು ಬೇರೇನನ್ನೂ ಪ್ರೀತಿಸುವುದಿಲ್ಲ. ಯಾವಾಗ ಆ ಮನುಷ್ಯ ನಮ್ಮ ಬಗ್ಗೆ ತನಗಿರುವ ಇಷ್ಟವನ್ನು ತನ್ನ ಮುಗ್ಧತೆಯ ಮೂಲಕ ಪ್ರದರ್ಶಿಸುವುದನ್ನು ಆರಂಭಿಸುವನೋ ಆತ ನಮಗೆ ಅತ್ಯಂತ ಆಪ್ತನಾಗುತ್ತಾನೆ. ಮುಗ್ಧತೆ ಎಂದರೆ ಸ್ವಚ್ಛತೆ. ಅದರಲ್ಲಿ ಸ್ವಾರ್ಥವಿಲ್ಲ ’(ಪುಟ-438 ವಿಜಯಕ್ಕೆ ಐದು ಮೆಟ್ಟಿಲು ಪುಸ್ತಕ ನೋಡಿ).


ಪ್ರೀತಿ(ಲವ್‌) ಈ ಎರಡಕ್ಷರದ ಆಳ ವಿಸ್ತಾರ ಮತ್ತು ವ್ಯಾಪ್ತಿಯ ಅರಿವು ನಿಮಗೀಗಾಗಲೆ ಗೊತ್ತಾಗಿರುವ ವಿಷಯ. ಪ್ರಪಂಚದ ಬಹುತೇಕ ವಿಷಯಗಳು, ಮಾನವ ಸಂಬಂಧಗಳು ಈ ಎರಡೇ ಎರಡಕ್ಷರದೊಂದಿಗೆ ತಳಕು ಹಾಕಿಕೊಂಡಿವೆ ಎಂದರೆ ತಪ್ಪಾಗಲಾರದು.

ಇದಕ್ಕೆ ಸಾಕ್ಷಿಯೆಂಬಂತೆ ಸಮಾಜದ ಕನ್ನಡಿಯಂತೆ ವಿಶ್ವದ ಎಲ್ಲಾ ಭಾಷೆಯ ಚಲನಚಿತ್ರಗಳು ತಮ್ಮ ಬಹುಪಾಲು ಚಿತ್ರಕಥೆಯನ್ನು ಪ್ರೀತಿ, ಪ್ರೇಮವನ್ನಲ್ಲದೇ ಬೇರೆ ವಿಷಯಗಳನ್ನಾಧರಿಸಿ ಗೆದ್ದಿರಲಾರವು.

 ನಮ್ಮ ಭಾರತೀಯ ಚಲನಚಿತ್ರ ಮಾಧ್ಯಮವಂತೂ ಪ್ರೀತಿ, ಪ್ರೇಮದಲ್ಲಿಯೇ ಹಾಗೆ ಹೀಗೆ ಮಾಡಿ, ಹಿಂದೆ ಮುಂದೆ ಮಾಡಿ ಏಕಕೋನ, ದ್ವಿಕೋನ, ತ್ರಿಕೋನ ಮತ್ತು ಚತುಷ್ಕೋನ ಪ್ರೀತಿಯ ಕಥೆಗಳನ್ನು ಹೂತ್ತು ತಂದು ತಮ್ಮ ಚಿತ್ರದ ನಾಯಕ ಮತ್ತು ನಾಯಕಿ ಮಣಿಗಳಿಂದ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. 

ನಮ್ಮ ನಡುವೆ ಪ್ರೇಮದ ಚಿತ್ತಾರ : ಪ್ರೇಮದ ಎಳೆಯಿಲ್ಲದ ಸಿನಿಮಾಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಲ್ಲದೆ ಅದರ ಬಗ್ಗೆ ನಿಮಗೆ ಏನೂ ಹೇಳುವ ಅಗತ್ಯವೂ ಸಹ ಇಲ್ಲ ಎನಿಸುತ್ತದೆ.ಯಾಕೆಂದರೆ ಅದು ದಿನನಿತ್ಯ ನಮ್ಮ ಕಣ್ಣಿಗೆ ಕಾಣುವ ಸರ್ವೇಸಾಮಾನ್ಯ ಸಂಗತಿ.

ನಮ್ಮ ನಡುವೆ ಪ್ರೇಮದ ಚಿತ್ತಾರ : ಪ್ರೇಮದ ಎಳೆಯಿಲ್ಲದ ಸಿನಿಮಾಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಲ್ಲದೆ ಅದರ ಬಗ್ಗೆ ನಿಮಗೆ ಏನೂ ಹೇಳುವ ಅಗತ್ಯವೂ ಸಹ ಇಲ್ಲ ಎನಿಸುತ್ತದೆ.ಯಾಕೆಂದರೆ ಅದು ದಿನನಿತ್ಯ ನಮ್ಮ ಕಣ್ಣಿಗೆ ಕಾಣುವ ಸರ್ವೇಸಾಮಾನ್ಯ ಸಂಗತಿ.

ಈ ಹಿಂದೆ ನಾನು ಎಲ್ಲೋ ಓದಿದ ನೆನಪು. ಒಬ್ಬ ಮನಶಾಸ್ತ್ರಜ್ಞ ಈ ರೀತಿ ಹೇಳಿದ್ದರು ‘ಯಾಕೆ ನಮ್ಮ ಜನ ಇಂಥ ಪ್ರೇಮ ಚಿತ್ರಗಳನ್ನು ಅಸಕ್ತಿ ಮತ್ತು ಮುಗಿ ಬಿದ್ದು ನೋಡುತ್ತಾರೆಂದರೆ- ಮನುಷ್ಯ ನಿರಂತರವಾಗಿ ಪ್ರೀತಿಸುವುದನ್ನು ಹೇಗೆ ಉತ್ತಮಗೊಳಿಸಿಕೊಳ್ಳಬೇಕು ಎಂಬುದನ್ನು ಕಲಿಯಲು’. 

ಇನ್ನು ನಮ್ಮ ಸಾಹಿತ್ಯ ಪ್ರಕಾರಗಳಾದ ಕಾವ್ಯ, ಕಾದಂಬರಿ, ಕವಿತೆ, ಕಥೆಗಳೂ ಸಹ ಈ ಶಬ್ದದ ಹೊರತಾಗಿಲ್ಲ . ಇದಕ್ಕೆ ಉದಾಹರಣೆಯಾಗಿ ನಮ್ಮಲ್ಲಿ ಹಿಂದಿನಿಂದಲೂ ಪ್ರಚಲಿತವಿರುವ ಜನ ಮನ ಸೂರೆಗೊಂಡಿರುವ ‘ದುಷ್ಯಂತ-ಶಕುಂತಲೆ’, ‘ ಸಲೀಂ ಮತ್ತು ಅನಾರ್ಕಲಿ’,‘ ರೋಮಿಯೋ-ಜ್ಯೂಲಿಯಟ್‌’ ಅಮರ ಪ್ರೇಮ ಕಾವ್ಯಗಳು, ಇಂದೂ ಸಹ ನಮ್ಮ ಸುತ್ತ ಮುತ್ತ ನಿರಂತರವಾಗಿ ನಿತ್ಯನೂತನವಾಗಿ ಚಲಿಸುತ್ತಿವೆ. 

ಪ್ರೀತಿ ಏಕೆ ಭೂಮಿ ಮೇಲಿದೆ? : ಸರಿ, ‘ಪ್ರೀತಿ’ ಎಂದರೇನು? ಎಂದು ಕೇಳಬಹುದು. ನಮಗೆ ಪ್ರೀತಿಯೆಂದರೆ ತಕ್ಷಣ ನೆನಪಾಗುವುದು ಒಂದು ಹುಡುಗ-ಹುಡುಗಿಯ ನಡುವೆ ಘಟಿಸುವ ಸಂಬಂಧವೇ. ಇಷ್ಟಕ್ಕೇ ಪ್ರೀತಿ ಎಂದು ಕರೆದರೆ ಆ ಪದಕ್ಕೆ ಇರುವ ವ್ಯಾಪ್ತಿಯನ್ನು ಕಡಿಮೆ ಮಾಡಿದಂತಾಗುತ್ತದೆ.

ಯಾವುದೇ ವ್ಯಕ್ತಿ ಭೂಮಿಯ ಮೇಲೆ ಮೊಟ್ಟ ಮೊದಲು ಅವತರಿಸಿದ ತಕ್ಷಣ ಅಮ್ಮನ ಪ್ರೀತಿಯ ಮೊದಲ ತುತ್ತುನ್ನು ಸೇವಿಸುತ್ತಾನೆ.ಆ ಪ್ರೀತಿಯೇ ವ್ಯಕ್ತಿಯ ಎಲ್ಲಾ ಮುಂದಿನ ಸಂಬಂಧಗಳಿಗೆ ಅ, ಆ, ಇ, ಈ ... ಅಂದರೆ ಅಡಿಪಾಯ.

ತಾಯಿಯ ಪ್ರೀತಿ ಈ ಪ್ರಪಂಚದಲ್ಲಿಯೇ ಎಲ್ಲ ಪ್ರೀತಿಗಳಿಗಿಂತ ಮಿಗಿಲಾದದ್ದು. ಅದು ಎಂದೂ ಸಹ ಬತ್ತಲಾರಾದ- ತನ್ನ ಸಮಸ್ತ ಮಕ್ಕಳ ಕಡೆಗೆ ಹರಿಯುವ ‘ ಜೀವವಾಹಿನಿ’. ‘ ತಾಯಿಯ ಬಗ್ಗೆ ಪ್ರೀತಿಯಿಲ್ಲದೆ ಇರುವ ಮಗನಿರಬಹುದು, ಮಕ್ಕಳೆಡೆಗೆ ಪ್ರೀತಿ ಇರಲಾರದ ಯಾವ ತಾಯಿಯೂ ಇರಲಾರಳು’. ತಾಯಿಯ ಪ್ರೀತಿಯಲ್ಲಿ ನಿಸ್ವಾರ್ಥವಾದ ಒಂದು ಕಳಕಳಿ ಮತ್ತು ಏನನ್ನೂ ಅಪೇಕ್ಷಿಸದೆ, ತನ್ನ ಮಕ್ಕಳನ್ನು ಕಾಪಾಡುವ, ಗಮನಿಸುವ ಉತ್ಕೃಷ್ಟ ಕಾಳಜಿ ಇರುತ್ತದೆ. ಈ ಪ್ರೀತಿಯ ಅಮೃತಪಾನದಿಂದ ಯಾರೂ ಸಹ ಪಾರಾಗಿರಲಾರರು. 

ಹಾಗಾದರೆ, ಯಾಕೆ ನಮ್ಮ ಯುವಕರು-ಯುವತಿಯರು ತಮ್ಮ ತಾರುಣ್ಯಾವಸ್ಥೆಯಲ್ಲಿ ಪ್ರೀತಿ-ಪ್ರೇಮ ಎಂಬ ಸುಳಿಯಲ್ಲಿ ಮುಳುಗಿ ತಮ್ಮ ಬಹುಪಾಲು ಸಮಯವನ್ನು ಕಳೆಯುತ್ತಾರೆ? ತಾಯಿಯ ಪ್ರೀತಿ ಸಾಕಾಗುವುದಿಲ್ಲವೇ? ಎಂದು ನೀವು ಕೇಳಬಹುದು. 

ಅದು ಸರಿ, ಮನುಷ್ಯ ಜೀವಿ ತಾನು ಎಂದೂ ನಿಂತ ನೀರಾಗಲು ಬಯಸುವುದಿಲ್ಲ. ಪ್ರತಿ ನಿಮಿಷ ಬೌದ್ಧಿಕವಾಗಿ, ಭೌತಿಕವಾಗಿ ಅಭಿವೃದ್ಧಿಯಾಗುತ್ತ ಪರಿಸರ ಮತ್ತು ಸಮಾಜದ ಮೂಲಕ ಬೆಳೆಯುತ್ತ ಹೋಗುತ್ತಾನೆ. ಚಿಕ್ಕಂದಿನಲ್ಲಿ ತನ್ನ ಮನೆಯಲ್ಲಿ ತಂದೆ-ತಾಯಿ, ಬಂಧು-ಬಳಗದೊಂದಿಗೆ ತನ್ನ ಪ್ರೀತಿ, ಪ್ರೇಮ ಸಾಮ್ರಾಜ್ಯವನ್ನು ಕಟ್ಟಿಕೊಂಡಿರುತ್ತಾನೆ. ಅಲ್ಲಿ ಅದು ಅವನಿಗೆ ಯಾರೂ ಪ್ರಶ್ನೆ ಮಾಡದ ಒಂದು ಕಂಫರ್ಟ್‌ ಸಿಕ್ಕಿರುತ್ತದೆ.

ಅದು ಅವನಿಗೆ ತನ್ನ ಕುಟುಂಬಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಅಂತಹ ಕಂಫರ್ಟನ್ನು ಅಲ್ಲಿರುವ ಎಲ್ಲರೂ ಅವನಂತೆಯೇ ಅನುಭವಿಸುತ್ತಿರುತ್ತಾರೆ. ಆದರೆ ಸಹಜವಾಗಿ ಮನುಷ್ಯ ಯಾವಾಗಲೂ ತಾನೂ ಸಹ ಇನ್ನೊಬ್ಬರಂತೆ ಇರಲು ಪ್ರಯತ್ನಿಸುವುದಿಲ್ಲ. ತನಗೆ ಸಿಗುವಂತಹ ಯಾವುದೇ ವಸ್ತು ಮತ್ತು ಸಂಬಂಧಗಳನ್ನು ಹಂಚಿಕೊಂಡು ಅನುಭವಿಸಲು ಮತ್ತು ಜೀವಿಸಲು ಎಂದೂ ಮನಸ್ಸು ಮಾಡುವುದಿಲ್ಲ. ಆಗ ತನ್ನದೇ ಆದ, ತನಗೆ ಮಾತ್ರ ಸೀಮಿತವಾದ, ಮುಡಿಪಾದ ಈ ಪ್ರೀತಿಯನ್ನು ತನ್ನ ಸುತ್ತಲಿನ ಹತ್ತಿರದ ಮನೆಯಿಂದ, ತಾನು ನಿತ್ಯ ಬಹುಪಾಲು ಸಮಯವನ್ನು ಕಳೆಯುವ ಸ್ಥಳಗಳಾದ ಶಾಲೆ, ಕಾಲೇಜು, ಕಚೇರಿ ಮೊದಲಾದಕಡೆ ಹುಡುಕುತ್ತಾನೆ. 

ನೀವು ಇಲ್ಲಿ ಗಮನಿಸಬೇಕು ನಾನು ಹೇಳುತ್ತಿರುವುದು ಪಕ್ಕಾ ಪ್ರೀತಿಗೆ ಸಂಬಂಧಿಸಿದ್ದು. ಆದರೆ ಪ್ರೀತಿಗೆ ಅಡಿಪಾಯ ಸ್ನೇಹವೆನ್ನುತ್ತೀರಾ? ಅದು ನಿಜ. ಮೊದಲ ಮೆಟ್ಟಿಲು ಸ್ನೇಹ. ಆದರೆ, ಮೊದಲ ನೋಟದಲ್ಲೇ ಪ್ರೀತಿ ಬೆಳೆಯುತ್ತದೆ (Love at frist sight) ಎಂಬ ಮಾತನ್ನೂ ನಾವೆಲ್ಲರೂ ಕೇಳಿದ್ದೇವೆ.

ಹೌದು, ನೀವು ಗಮನಿಸಿರಬೇಕು ಹಲವು ಯುವಕ-ಯುವತಿಯರು ಈ ರೀತಿಯ ಬಾಹ್ಯಾಕರ್ಷಣೆಗೆ ಒಳಗಾಗಿ ಪ್ರೀತಿಸಲು ಪ್ರಾರಂಭಿಸುತ್ತಾರೆ. ಇಂತಹ ಪ್ರೀತಿ ಕಾಲಕ್ರಮಿಸಿದಂತೆ ಪಕ್ವವಾಗಲೂಬಹುದು ಅಥವಾ ಪಾರ್ಕ್‌ ಮತ್ತು ಕಾಲೇಜು ಕ್ಯಾಂಪಸ್‌ಗಳಲ್ಲಿ ಪಕ್ಕಕ್ಕೆ ಸರಿಯಲೂಬಹುದು.

Read more at: https://kannada.oneindia.com/literature/articles/2006/140206triputapriya1.html

ಸಹನೆ ಪರೀಕ್ಷಿಸ ಬೇಡಿ!

 "I am growing patience in my garden of life. I cant wait to see what fruit it bears." 

ನನ್ನ ಸ್ನೇಹಿತ ಹೇಳ್ತಿದ್ದಾ ‘ತಿಪ್ಪಾ ಯಾಕೊ ಏನೊ ಇತ್ತೀಚೆಗೆ ಪೇಷನ್ಸೆ ಇಲ್ಲಾ ಕಣೊ’. ಅಂದರೆ ಪೇಷನ್ಸ್‌ ಇಲ್ಲ, ಇರಬೇಕಾಗಿತ್ತು ಎಂಬುದೆರಡು ಅವನಿಗೆ ಗೊತ್ತಿದೆ ಎಂದಾಯ್ತು.


ಪೇಷನ್ಸ್‌ಗೆ ಸಮಾನ ಅರ್ಥಗಳು ಕನ್ನಡದಲ್ಲಿ ಸಹನೆ, ತಾಳ್ಮೆ, ಸೈರಣೆ. ಸಹನೆ ಇಲ್ಲದೇ ಇರುವುದು ಎಂದರೆ ಏನು ಎಂಬುದು ಮುಖ್ಯ. ನಾವೆಲ್ಲಾ ಕಂಡಿರುವ ಹಾಗೇ ಪೇಷನ್ಸ್‌ ಇಲ್ಲದವರ ನಡವಳಿಕೆಯೆಂದರೆ ಗಾಬರಿ, ವಿನಾಕಾರಣ ಉದ್ವೇಗ , ಆತುರ, ಸುಮ್‌ ಸುಮ್ಮನೆ ಆತಂಕಪಡುವುದು ಇತ್ಯಾದಿ.

ಸಹನಾಶೀಲಳು ಎಂಬ ಅನ್ವರ್ಥ ಹೊಂದಿರುವ ಸ್ತ್ರೀಯರಲ್ಲೂ ಸಹನೆಯ ಕೊರತೆ ಕಂಡುಬರುತ್ತದೆ. ಇದು ಸರ್ವಸಮ್ಮತವಾಗಿ ಎಲ್ಲಾ ವಿಭಾಗದಲ್ಲೂ ವಯಸ್ಸಿನ ವ್ಯತ್ಯಾಸವಿಲ್ಲದೇ ಕಾಡುವ ಸಮಸ್ಯೆ ಎಂದರೆ ತಪ್ಪಾಗಲಾರದು. 

ಹಾಗಾದರೆ ಪೇಷನ್ಸ್‌ ಇರಲೇಬೇಕಾ ಎಂದು ನೀವು ಕೇಳಬಹುದು. ಇದಕ್ಕೆ ಉತ್ತರವನ್ನು ನನ್ನಲ್ಲಿ ಪೇಷನ್ಸ್‌ ಇಲ್ಲ ಎನ್ನುವವರೇ, ಪೇಷನ್ಸ್‌ ಇರಬೇಕು ಸಾರ್‌ ಎಂದು ಘಂಟಾಘೋಷವಾಗಿ ಹೇಳುತ್ತಾರೆ.

ಇರಲಿ, ಪೇಷನ್ಸ್‌ ಇಲ್ಲದಿರುವುದು ಕಾಯಿಲೆನಾ? ನಿಜವಾಗಿಯೂ ಕಾಯಿಲೆ ಅಲ್ಲ. ವಂಶಪಾರಂಪಾರ್ಯವಾಗಿ ಬರುವ ರೋಗವು ಅಲ್ಲ, ಮತ್ತೆ ಯಾಕೆ ಪೇಷನ್ಸ್‌ ಇಲ್ಲಾ ಎಂಬ ಕೊರಗು? ಆದರೆ ಸಹನೆ ಇಲ್ಲದ ನಮ್ಮ ವರ್ತನೆಯಿಂದ ನಡೆಯುವ ಅವಘಡಗಳು ಮನಸ್ಸಿಗೆ ನೋವು ತರುತ್ತವೆ. ಎದುರಿನವ ಸಂಕಷ್ಟಕ್ಕೆ ಸಿಲುಕುತ್ತಾನೆ.

ಹೌದು, ಅತಿ ಚಿಕ್ಕಚಿಕ್ಕ ವಿಷಯಗಳಿಗೋಸ್ಕರ ಪೇಷನ್ಸ್‌ ಕಳೆದುಕೊಂಡು ಅನಂತರ ಪಶ್ಚಾತ್ತಾಪ ಪಟ್ಟಿರುವವರನ್ನು ನಾವು ನೋಡಿದ್ದೇವೆ. ಆತುರಗಾರನಿಗೆ ಬುದ್ದಿ ಮಟ್ಟ ಎಂಬ ರೀತಿಯಲ್ಲಿ ವರ್ತಿಸಿ, ಸುತ್ತಲಿನವರ ಬಾಯಿಂದ ಈ ಗಾದೆಯನ್ನು ಶೇ.100ರಷ್ಟು ಜನ ಕೇಳಿಸಿಕೊಂಡಿದ್ದಾರೆ. ಪೇಷನ್ಸ್‌ ಇಲ್ಲದೆ ಬಿಪಿ ರೈಸ್‌ ಮಾಡಿಕೊಂಡು ಎಗರಾಡಿ ಒದ್ದಾಡಿಕೊಂಡಿರುವವರನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ.


ಹಾಗೆಯೇ, ಇದರ ಅನುಭವವನ್ನು ನಾವು ದಿನನಿತ್ಯ, ಮುಖ್ಯವಾಗಿ ನಗರ ಸಾರಿಗೆಯಲ್ಲಿ ಪ್ರಯಾಣಿಸುವಾಗ ಕಾಣುತ್ತೇವೆ. ಹಿಂದಿನವರು ಸ್ವಲ್ಪ ಕಾಲು ತುಳಿದರೆ ಅಥವಾ ಮೈ ಮೇಲೆ ಬಿದ್ದರೆ, ನಮ್ಮೆಲ್ಲರ ಪ್ರತಿಕ್ರಿಯೆಗೆ ಆ ವ್ಯಕ್ತಿ ನಿಜವಾಗಿಯೂ ಕಸಿವಿಸಿಗೊಳ್ಳುತ್ತಾನೆ. ಸ್ವಲ್ಪನೂ ವ್ಯವಧಾನವಾಗಿ ಯೋಚಿಸಲು ಹೋಗುವುದಿಲ್ಲ, ಆ ರೀತಿ ಬೇರೆಯವರ ಮೇಲೆ ಮುಗಿ ಬೀಳುತ್ತೇವೆ. ಇಲ್ಲೂ ಸಹ ಸಹನೆಯ ಕಟ್ಟೆ ಚೂರಾಗುತ್ತದೆ.

ಹಿಂದೆ ನಮ್ಮ ಪುರಾಣ ಪುಣ್ಯ ಕತೆಗಳಲ್ಲಿ ಬರುವ ಋಷಿ ಮುನಿಗಳು, ಪಾಮರರ ಮತ್ತು ರಾಜರುಗಳ ತಪ್ಪಿಗೆ ಸಹನೆಯನ್ನು ಮೀರಿ ಶಾಪವನ್ನು ಕೊಟ್ಟು ಬಿಡುತ್ತಿದ್ದರು. ಅನಂತರ ಋಷಿಗಳಿಗೆ ಅವರ ಶಾಪದ ಬಗ್ಗೆ ವಿಷಾದವಾಗಿ, ಶಾಪ ವಿಮೋಚನೆಯನ್ನು ಸಹನೆಯಿಂದ ನೀಡುತ್ತಿದ್ದರು.

ಆದ್ದರಿಂದ, ಇದು ಸರ್ವಸಂಗ ಪರಿತ್ಯಾಗಿಗಳನ್ನೇ ಬಿಟ್ಟಿಲ್ಲವೆಂದರೆ ನಮ್ಮ ನಿಮ್ಮಲ್ಲಿ ಇದನ್ನು ಕಾಣುವುದು ಏನು ಅತಿಶಯವಲ್ಲ. ಆದ್ದರಿಂದ ಇದಕ್ಕೆ ಪರಿಹಾರ ಯೋಚಿಸಿ ವರ್ತಿಸುವುದು.


ಕಾಯಿಲೆಯಲ್ಲದಿದ್ದರೂ, ಸಹನೆಯ ಕೊರತೆಯಿಂದ ಅನೇಕ ಅಪಾಯಗಳು ಸಂಭವಿಸುತ್ತವೆ. ನಮ್ಮ ಸುತ್ತಮುತ್ತಲಿನ ಒಬ್ಬರಿಗೆ ಪೇಷನ್ಸ್‌ ಇಲ್ಲವಾದರೆ, ಜಗಳ ತಪ್ಪಿದ್ದಲ್ಲ. ಅನಗತ್ಯ ಕಿರಿಕಿರಿಯೂ ಉಂಟಾಗುತ್ತದೆ. 

ಕೆಲವು ಸಲ ಪೇಷನ್ಸ್‌ ಕಳೆದು ಹೋಗಲು, ಎದುರಿನ ವ್ಯಕ್ತಿಯೂ ಕಾರಣವಾಗುತ್ತಾನೆ. ವ್ಯಕ್ತಿ ಗಾಬರಿಯಿಂದ ಅಥವಾ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಸಹನೆ ಕಳೆದುಕೊಳ್ಳುತ್ತಾನೆ. ಒಂದೇ ಒಂದು ನಿಮಿಷ ಸಮಾಧಾನದಿಂದ ಯೋಚಿಸಿದರೆ ಶಾಂತ ಸನ್ನಿವೇಶವನ್ನು ಸುಲಭವಾಗಿ ನಿರ್ಮಿಸಬಹುದು. ಆದರೆ ಹಾಗೆ ಮಾಡುವಷ್ಟ ಸಹನೆ ನಮ್ಮ ಕೈಯಲ್ಲಿರುತ್ತೇನು ಅನ್ನಬಹುದು ನೀವು. ಆದರೆ ನಾವೇ ನಮ್ಮ ಬುದ್ದಿಯ ಕೈಹಿಡಿಯಬೇಕು. ಸ್ವಲ್ಪ ಸಮಾಧಾನದಿಂದ ಸನ್ನಿವೇಶದ ನಾನಾ ಕೋನಗಳನ್ನು ಗಮನಿಸಿ ಮುಂದುವರೆದರೆ, ಪೇಷನ್ಸ್‌ ಇಲ್ಲ ಎಂಬ ಮಾತೇ ಇರುವುದಿಲ್ಲ.

ನನಗೆ ಪೇಷನ್ಸ್‌ ಹೊಯ್ತೇಂದರೆ ನಾನೇನ್‌ ಮಾಡ್ತೀನೋ ನನಗೆ ಗೊತ್ತಿಲ್ಲ ಎಂಬ ಮಾತು ನೀವು ಕೇಳಿರಬಹುದು. ಆತನಿಗೆ ತನ್ನ ಬಗ್ಗೆ ಹೇಳಿಕೊಂಡು, ವ್ಯಕ್ತಿತ್ವಕ್ಕೆ ಮೆರಗು ನೀಡುವ ಆಸೆ. ಅವನಿಗೆ ಸ್ವಲ್ಪನೂ ತಾಳ್ಮೆನೇ ಇಲ್ಲ ಕಣ್ರಿ ಎಂಬ ಪಕ್ಕದ ಮನೆಯ ತಾಯಿಯ ಮಾತು ನಿಮ್ಮ ಕಿವಿಗೆ ಬಿದ್ದಿರಬಹುದು. ಆ ತಾಯಿಗೆ ತನ್ನ ಮಗನ ಗುಣದ ಬಗ್ಗೆ ಚಿಂತೆ, ಆತಂಕ.

ತಾಳಿದವನು ಬಾಳಿಯಾನು ಎಂಬಂತೆ ತಾಳ್ಮೆಯಿಂದ ಯಾವುದೇ ಕೆಲಸವನ್ನಾಗಲಿ, ಸನ್ನಿವೇಶವನ್ನಾಗಲಿ ಹೆಚ್ಚು ಅರ್ಥಪೂರ್ಣವಾಗಿ ಮಾಡಬಹುದು. ಸಹನೆಯ ಮೂರ್ತಿಯಾಗದಿದ್ದರೂ ಪರವಾಗಿಲ್ಲ , ಸರಿಯಾಗಿ ಅರಿತು ನಡೆದರೆ ನಮಗೂ, ನಮ್ಮ ಸುತ್ತ ಇರುವವರಿಗೂ ಸಹ ಕ್ಷೇಮ. 

ಇದನ್ನೆಲ್ಲಾ ಸಹನೆಯಿಂದ ಓದಿದ್ದಿರೆಂದು ಭಾವಿಸಲಾ?

Read more at: https://kannada.oneindia.com/literature/articles/2006/250106patience.html


ಕನ್ನಡ ಪತ್ರಿಕೋದ್ಯಮದಲ್ಲಿ ಅಂಕಣ ಸಾಹಿತ್ಯ

  ನಿತ್ಯ ಓದುಗರು ಹೆಚ್ಚು ಇಷ್ಟಪಡುವುದು ಪತ್ರಿಕೆ, ವಾರಪತ್ರಿಕೆ ಮತ್ತು ಮಾಸಿಕಗಳಲ್ಲಿನ ‘ಅಂಕಣಗಳನ್ನು’. ಪ್ರತಿದಿನ, ಪ್ರತಿವಾರ ಕಾತುರತೆಯಿಂದ ಓದುಗರನ್ನು ನಿರೀಕ್ಷೆಯಲ್ಲಿಯೇ ಇರಿಸುವಂತೆ ಮಾಡುವ ಚಮತ್ಕಾರ ಅಂಕಣಗಳಿಗೆ ಇದೆ. ಹಾಟ್‌ ಸುದ್ಧಿ, ಮುಖಪುಟ ಲೇಖನಗಳನ್ನು ಓದುಗ ನಿರೀಕ್ಷೆ ಮಾಡುವುದು ಕಷ್ಟ. ಆದರೆ ತಾನು ಮೆಚ್ಚಿದ ಅಂಕಣಕಾರನ ಅಂಕಣವನ್ನು ಕಾದಿದ್ದು ಮತ್ತು ತಾನು ಗೆಸ್‌ ಮಾಡಿದ ವಿಷಯದ ಮೇಲೆ ಬೆಳಕು ಚೆಲ್ಲಿದ್ದರೆ ಹೆಚ್ಚು ಖುಷಿಪಟ್ಟು ಓದುತ್ತಾನೆ.


ಈ ರೀತಿಯ ಆಕರ್ಷಕ ಅಂಕಣಗಳನ್ನು ಓದುಗರಿಗೆ ಕೊಡುವುದರ ಮೂಲಕ ತನ್ನ ಪ್ರಸಾರ ಸಂಖ್ಯೆಯನ್ನು ಬಹುಬೇಗ ಹೆಚ್ಚಿಸಿಕೊಂಡ ಕನ್ನಡ ಪತ್ರಿಕೆಗಳ ಉದಾಹರಣೆ ಸಾಕಷ್ಟಿವೆ. ದಿನಪತ್ರಿಕೆಗಳಲ್ಲಿ ಇತ್ತೀಚಿನ ಕನ್ನಡದ ನಂಬರ್‌ ಒನ್‌ ಪತ್ರಿಕೆಯಾದ ವಿಜಯಕರ್ನಾಟಕ, ಪ್ರತಿದಿನವೂ ತನ್ನ ಸಂಪಾದಕೀಯ ಪುಟದಲ್ಲಿ ಒಬ್ಬ ಲೇಖಕನ ಅಂಕಣವನ್ನು ಬರೆಸುತ್ತಿದೆ. ನನಗೆ ತಿಳಿದಂತೆ ಈ ಪತ್ರಿಕೆಯ ಹೆಚ್ಚಿನ ಅಭಿಮಾನಿಗಳ ಆಕರ್ಷಣೆ ಈ ಅಂಕಣಗಳೆ ಸರಿ.


ಹಾಗಾದರೆ, ಏನಿದು ಅಂಕಣಬರಹ? ನಮ್ಮ ದಿನ ನಿತ್ಯದ ಯಾವುದೇ ವಿಷಯಕ್ಕೆ ಸಂಬಂಧಿಸಿದ ಸಂಗತಿಯನ್ನು ಪ್ರಸ್ತುತ ಸಮಯಕ್ಕೆ ಹೊಂದುವಂತೆ ಪತ್ರಿಕೆಯ ಅಂಕಣದಲ್ಲಿ ಸಮರ್ಪಕವಾಗಿ ವಿಶ್ಲೇಷಿಸುವುದು ಅಥವಾ ವಿವೇಚಿಸುವುದು. ಇಲ್ಲಿ ವಿಷಯಗಳ ವೈವಿಧ್ಯತೆಯಲ್ಲಿ ಲೇಖಕನ ಅಗಾಧ ಜ್ಞಾನ ಪ್ರತಿಭೆ ವ್ಯಕ್ತವಾಗುತ್ತದೆ. ಅಂಕಣದಲ್ಲಿನ ವಿಷಯದ ಇತರೆ ಆಯಾಮಗಳು, ಸಾಮಾನ್ಯ ಓದುಗನಿಗೆ ಸುಲಭ ಭಾಷೆಯಲ್ಲಿ ಅರ್ಥವಾಗುತ್ತವೆ. ಅವನನ್ನು ಚಿಂತನೆಗೀಡು ಮಾಡುವಲ್ಲಿ ಅಂಕಣಗಳು ಫಲಕಾರಿ.


-ನಮ್ಮ ಕರ್ನಾಟಕದಲ್ಲಿ ಯಾವಾಗ ಈ ರೀತಿಯ ಸಾಹಿತ್ಯ ಪ್ರಕಾರ ಪ್ರಾರಂಭವಾಯಿತು ಎಂದರೆ, ಕನ್ನಡದ ಪ್ರಥಮ ಪತ್ರಿಕೆಯಾದ ‘ಮಂಗಳೂರು ಸಮಾಚಾರ’ದಲ್ಲಿ 1 ಜುಲೈ 1843ರಂದು. ಇದರ ಸಂಪಾದಕರು ರೆವಡೆಂಟ್‌ ಹರ್ಮಾನ್‌ ಮೊಗ್ಲಿಂಗ್‌.


ಇವರು ‘ನೈತಿಕ ವಿಚಾರಗಳು’ ಎಂಬ ಅಂಕಣವನ್ನು ಧಾರ್ಮಿಕ ವಿಷಯಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸುತ್ತಿದ್ದರು. ಅದರೆ, ಇದು ಕಾಲಾಂತರದಲ್ಲಿ ನಿಂತಿತು.


ಆನಂತರ ನಾವು ಪ್ರಮುಖ ಅಂಕಣ ಬರಹ ಎಂದು ಗುರುತಿಸುವುಂತಾಗಿದ್ದು ಸಿದ್ದವನಹಳ್ಳಿ ಕೃಷ್ಣಶರ್ಮರ ಅಂಕಣಗಳಾದ ಮಾತಿನ ಮಂಟಪ, ಚಿಂತನ-ಮಂಥನ ಇವುಗಳನ್ನು. ಇವು ಅಂದಿನ ಪ್ರಸ್ತುತ ವಿಷಯಕ್ಕೆ ಸಂಬಂಧಪಟ್ಟಿದ್ದರೂ ಸಾಹಿತ್ಯಕ ಮೌಲ್ಯಗಳನ್ನು ಹೆಚ್ಚು ಹೊಂದಿ ಜನಮಾನಸದಲ್ಲಿ ಉಳಿದಿದ್ದು ಇಂದಿಗೂ ಮೆಲುಕು ಹಾಕುವಂತ ಬರಹಗಳಾಗಿವೆ.


ಪತ್ರಿಕೆಗಳ ಸುದ್ದಿಗಳು ಸಾಹಿತ್ಯ ಪ್ರಕಾರವಾಗಲು ಸಾಧ್ಯವಿಲ್ಲ. ಆದರೆ ಅಂಕಣ ಬರಹಗಳು ಸಾಹಿತ್ಯ ಪ್ರಕಾರಗಳಲ್ಲೊಂದು ಎಂದು ಗುರುತಿಸಲು ಕಾರಣವಾಗಿದ್ದು ಅವುಗಳಲ್ಲಿರುವ ಸರ್ವಕಾಲಿಕ ಸಾಹಿತ್ಯ ಮಂಡಣೆ ಮತ್ತು ಆಯ್ಕೆ ಮಾಡಿಕೊಂಡ ವಿಷಯಗಳನ್ನು ಓದುಗರಿಗೆ ಮುಟ್ಟಿಸುವ ಪರಿಯಿಂದ ಮತ್ತು ಅಂಕಣ ಬರಹಗಾರನ ಸಾಹಿತ್ಯ ಅನುಭವ ಸಾಮರ್ಥ್ಯದಿಂದ. 


ಓದುಗರು ಕೇವಲ ಸುದ್ದಿಗಳನ್ನು ಓದುವುದರಿಂದ, ಪ್ರಯೋಜನವಿಲ್ಲ. ಸುದ್ದಿ ಬಗೆಗೆ ತನ್ನ ವಿಚಾರ ಚಿಂತನ ಮಾಡುವುದು ಸಾಧ್ಯವಾಗದಿರಬಹುದು. ಆದರೆ, ಅಂದಿನ ಸಮಯದಲ್ಲಿ ಸವಿಸ್ತಾರವಾಗಿ ಅಂಕಣಗಳಲ್ಲಿ ಮಂಡಿಸುವ ಅಂಕಣಗಾರನ ಸಾಲುಗಳು, ಲೇಖಕನ ಜೊತೆ ಜೊತೆ ತನ್ನ ಚಿಂತನೆಯ ಯಂತ್ರವನ್ನು ಚಾಲು ಮಾಡಲು ಸಹಾಯವಾಗುತ್ತದೆ.


ನಮ್ಮ ಕನ್ನಡ ಭಾಷೆಯಲ್ಲಿ ಈ ಪರಿಯ ಒಂದು ಸಾಹಿತ್ಯದ ಪ್ರಕಾರ ವಿಫುಲವಾಗಿ ಬೆಳೆದಿದೆ ಎಂಬುದಕ್ಕೆ ಸಾಕ್ಷಿಯಾಗಿ ಹಲವಾರು ಸಾಹಿತ್ಯ ದಿಗ್ಗಜರುಗಳು ಪತ್ರಿಕೆಗಳಲ್ಲಿ ನಿಯಮಿತವಾಗಿ ತಮ್ಮ ಲೇಖನಗಳನ್ನು ಬರೆಯಲು ಪ್ರಾರಂಭಿಸಿದ್ದಾರೆ. ಈ ಪ್ರಕಾರಕ್ಕೆ ಕಿರೀಟ ಪ್ರಾಯಾವಾದ ಸೇವೆ ಸಲ್ಲಿಸಿದವರಲ್ಲಿ- ತರಾಸು (ತೋಚಿದ್ದು -ಗೀಚಿದ್ದು, ವಾಹಿನಿ ವಾರಪತ್ರಿಕೆ), ನಿರಂಜನ (ಬೇವು-ಬೆಲ್ಲ, ರಾಜಧಾನಿಯಿಂದ, ಐದುನಿಮಿಷ), ಟಿ.ಎಸ್‌. ರಾಮಚಂದ್ರರಾವ್‌(ಛೂಬಾಣ- ಪ್ರಜಾವಾಣಿ), ರಾವ್‌ ಬಹದ್ದೂರ್‌(ದೇಭನ ಉವಾಚ), ಲಾಂಗೋಚಾರ್ಯರು(ಓದುಗರೊಡನೆ ಹರಟೆ), ಹರಿದಾಸ ಭಟ್ಟರು(ಲೋಕಭಿರಾಮ-ಉದಯವಾಣಿ), ಶ್ರೀರಂಗರು(ವಿಶ್ವ ಕುತೂಹಲ ಕಣ್ಣುಗಳು), ಜಿ.ಪಿ. ರಾಜರತ್ನಂ ಮುಂತಾದ ಹಿರಿಯ ಸಾಹಿತಿಗಳು ತಾವು ಪತ್ರಕರ್ತರಲ್ಲದಿದ್ದರೂ ಪತ್ರಿಕೆಯೊಡನೆ ನಿಕಟ ಸಂಪರ್ಕವನ್ನಿಟ್ಟುಕೊಂಡು, ನಿಯಮಿತವಾಗಿ ಓದುಗರೊಂದಿಗೆ ತಮ್ಮ ಅನುಭವಗಳನ್ನು ಮತ್ತು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಹೀಗಾಗಿ ಕನ್ನಡದಲ್ಲಿ ಅಂಕಣ ಬರಹ ಸ್ವಾತಂತ್ರ್ಯೋತ್ತರದ್ದು.


ಹಾಗೆಯೇ, ಇತ್ತೀಚಿನ ದಶಕಗಳಲ್ಲಿ ಹಾ. ಮಾ.ನಾಯಕ, ಎಚ್ಚೆಸ್ಕೆ, ಎಲ್‌.ಎಸ್‌.ಶೇಷಗಿರಿರಾವ್‌, ಕೆ.ಟಿ.ಪಾಂಡುರಂಗಿ, ಪೂರ್ಣಚಂದ್ರ ತೇಜಸ್ವಿ, ಕೀರ್ತಿನಾಥ ಕುರ್ತುಕೋಟಿಯವರುಗಳು ಅಂಕಣಗಳು ಸಹ ಪ್ರಭಾವಿ ಮಾಧ್ಯಮ ಎಂಬುದನ್ನು ನಿರೂಪಿಸಿದರು. 

ಇದಕ್ಕೆ ಸಾಕ್ಷಿ ಹಾಮಾನಾ ಅವರ ಪ್ರಜಾವಾಣಿಯಲ್ಲಿ ಬರೆದ ಅಂಕಣ -ಸಂಪ್ರತಿ. ಈ ‘ಸಂಪ್ರತಿ’ ಅಂಕಣ ಬರಹಗಳು ಪುಸ್ತಕ ರೂಪ ತಾಳಿದ್ದು ನಂತರದ ಸಮಾಚಾರ. ಈ ಪುಸ್ತಕ 1989-90ಸಾಲಿನಲ್ಲಿ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದು, ಈ ಪ್ರಶಸ್ತಿ ಭಾರತೀಯ ಭಾಷೆಯಲ್ಲಿಯೇ ಪ್ರಥಮವಾಗಿ ಈ ಹೊಸ ಪ್ರಕಾರಕ್ಕೆ ಬಂದು ಇದರ ಪ್ರಸ್ತುತೆಯ ಜವಾಬ್ದಾರಿಯನ್ನು ಹೆಚ್ಚಿಸಿತು. 


ಸಂಪ್ರತಿ ಅಂದಿನ ಸಮಯದಲ್ಲಿ ಒಂದು ಗೊತ್ತಿಲ್ಲದ ಮಿಡಿತವನ್ನು ಹಾಮಾನಾ ಮತ್ತು ಓದುಗರ ನಡುವೆ ಸೃಷ್ಟಿ ಮಾಡಿತ್ತು. ಇದು ಈ ಅಂಕಣದ ಜನಪ್ರಿಯತೆಗೆ ಕನ್ನಡಿ. ನನಗೆ ತಿಳಿದಂತೆ ನಾನೇ ಓದಿರುವ ಹಾಮಾನಾ ಅವರ ‘ಸ್ವಗತ’ ಅಂಕಣ(ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು)ದ ವಿಷಯ ಆಯ್ಕೆ ಸಂಕ್ಷಿಪ್ತತೆ ಮತ್ತು ವಿಶ್ಲೇಷಣೆಯಿಂದ ಅತಿ ಹೆಚ್ಚು ಓದುಗರನ್ನು ತಲುಪಿತ್ತು. ಹಾಗೆಯೇ ಇವರ ಇನ್ನೊಂದು ಅಂಕಣ ‘ಸಾಹಿತ್ಯ ಸಲ್ಲಾಪ’ -ಕನ್ನಡ ಪ್ರಭದಲ್ಲಿ ಸಾಹಿತ್ಯದ ದೃಷ್ಟಿಯಿಂದ ಮಹತ್ವವನ್ನು ಪಡೆದಿತ್ತು.

ಅಂಕಣ ಬರಹಕ್ಕೆ ಸಂಬಂಧಿಸಿದಂತೆ ಕೆಲವು ಅಪರೂಪ ಪ್ರಥಮಗಳು ಸಹ ಇವೆ. ಸುದೀರ್ಘವಾಗಿ ಪ್ರತಿದಿನ ಅಂಕಣ ಬರೆದಿದ್ದು ಒಂದು ದಾಖಲೆ. ಏಪ್ರಿಲ್‌ 11,1977ರಿಂದ ಟಿ.ಎಸ್‌.ಆರ್‌ ರವರ ನಿಧನದೊಂದಿಗೆ ಅವರ ಛೂಬಾಣ ನಿರಂತರವಾಗಿ ಸಾಗಿತ್ತು. ಅದರ ಆಳ, ಹರಿತವೂ ಅವರ ಹಿಂದೆಯೇ ಹೋಯಿತು. ಕ್ರೀಡಾರಂಗದ ಮೇಲೆ ಬೆಳಕು ಚೆಲ್ಲುವ ಮೊದಲ ಅಂಕಣ ಬರೆದದ್ದು ಸೂರಿ. ಅವರ ಕ್ರೀಡಾಂತರಂಗ ಅಂಕಣ ಕ್ರೀಡಾಪ್ರೇಮಿಗಳಿಗೆ ಇಷ್ಟವಾಗಿತ್ತು. ಆ ಕಾಲದಲ್ಲಿ ಪ್ರಜಾಮತವನ್ನು ಹಾಮಾನಾ ಅವರ ಅಂಕಣಕ್ಕಾಗಿಯೇ ನೋಡುತ್ತಿದ್ದರು. 


ಇಂದು ಸಹ ಹಲವರು ಲೇಖಕರು ಪತ್ರಿಕೆಗಳಲ್ಲಿ ನಿಯಮಿತವಾಗಿ ಆಕರ್ಷಕ ಅಂಕಣ ಬರಹಗಳನ್ನು ಬರೆಯತ್ತಿದ್ದಾರೆ ಅವುಗಳಲ್ಲಿ ವಿಶ್ವೇಶ್ವರ ಭಟ್ಟರ -ನೂರೆಂಟು ಮಾತು, ರವಿಬೆಳೆಗೆರೆಯ -ಬಾಟಂ ಐಟಂ, ಜಾನಕಿಯವರ -ತೆರೆದ ಬಾಗಿಲು, ಕುಲದೀಪ ಅಯ್ಯರ್‌ರ -ಅಂತರಂಗ, ಪ್ರತಾಪ ಸಿಂಹರ -ಬೆತ್ತಲೆ ಜಗತ್ತು, ನಾಗತಿಹಳ್ಳಿ ಚಂದ್ರಶೇಖರ, ಚಂದ್ರಶೇಖರ ಆಲೂರು ಮತ್ತು ಇನ್ನೂ ಮುಂತಾದವರ ಬರಹಗಳು ಪ್ರಸ್ತುತ ಸಮಯದಲ್ಲಿ ಮನೆ ಮಾತಾಗಿವೆ.


ಅಂಕಣ ಸಾಹಿತ್ಯಕ್ಕೆ ಹೊಸ ಸೇರ್ಪಡೆ : ಕನ್ನಡ ಸಾಹಿತ್ಯಕ್ಕೆ ಇತ್ತೀಚೆಗೆ ಅಪರೂಪದ ಹೊಸ ಅಂಕಣ ಬರಹಗಳು ಪುಸ್ತಕ ರೂಪದಲ್ಲಿ ಸೇರ್ಪಡೆಯಾಯಿತು. ಅದು ಯಾವುದೆಂದರೆ -ವಿಚಿತ್ರಾನ್ನ. ವಿಶ್ವಕನ್ನಡಿಗರ ಮನೆಮಾತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಟ್ಸ್‌ ಕನ್ನಡ ಡಾಟ್‌ ಕಾಂ ನಲ್ಲಿ ಸತತ ಮೂರು ವರ್ಷಗಳಿಂದ ನಿರಂತರವಾಗಿ ಪ್ರತಿ ಮಂಗಳವಾರ ಶ್ರೀವತ್ಸ ಜೋಷಿಯವರ ವಿಚಿತ್ರಾನ್ನ ಪ್ರಕಟವಾಗುತ್ತದೆ. ಇದು ಒಂದು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಮೈಲುಗಲ್ಲೇ ಸರಿ. ಇದು ಇಂಟರ್‌ನೆಟ್‌ನಲ್ಲಿ ಮೂಡಿಬಂದ ಮೊದಲ ಕನ್ನಡ ಅಂಕಣ ಬರಹಗಳ ಪುಸ್ತಕ. ಇದರ ಮಹತ್ವ ಮತ್ತು ವಿಷಯ ವೈವಿಧ್ಯತೆಯ ಪರಿಯನ್ನು ಓದಿಯೇ ಸವಿಯಬೇಕು. 

ಪ್ರತಿ ಲೇಖನವು ನವಿರಾದ ಹಾಸ್ಯದ ಮೂಲಕ ಅತಿ ಸಾಮಾನ್ಯ ಸಂಗತಿಗಳನ್ನು ತಮ್ಮ ವಿಷಯ ವಿಶ್ಲೇಷಣೆಯ ಸಾಮರ್ಥ್ಯದಿಂದ, ಪ್ರತಿ ಲೇಖನಕ್ಕೂ ಅವರು ಕೊಡುವ ತಲೆ ಬರಹ ಮತ್ತು ಅವರು ಮಾಡುವ ಪದಗಳ ಪಂಚ್‌ ಓದುಗರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡುತ್ತವೆ. ಇದರ ಮೂಲಕವೇ ಹಲವಾರು ವಿಷಯಗಳು ನಮ್ಮೆಲ್ಲರ ಅರಿವಿಗೆ ಬಂದಿರುವುದು ಅವರ ವಿಷಯ ಆಯ್ಕೆಯ ನೈಪುಣ್ಯಕ್ಕೆ ಸಾಕ್ಷಿ. ಅಂಕಣಕಾರರು ತಾವೇ ಹೇಳಿಕೊಂಡಂತೆ ವಿಚಿತ್ರಾನ್ನ ಅಂಕಣ ಚಿತ್ರಾನ್ನ ಇರುವವರೆಗೂ ಇರುತ್ತದೆ, ಇದು ನೂರಕ್ಕೆ ನೂರು ಸತ್ಯ. 

ಇಂದಿನ ಇಂಟರ್‌ನೆಟ್‌ ಲೋಕದಲ್ಲಿ ಕನ್ನಡತನವೇನು ಕಡಿಮೆಯಿಲ್ಲ ಎಂಬುದನ್ನು ನಿತ್ಯ ಹಲವಾರು ಸುದ್ಧಿಗಳೊಂದಿಗೆ, ವಿಶಿಷ್ಟ ಅಂಕಣಗಳೊಂದಿಗೆ ದಟ್ಸ್‌ ಕನ್ನಡ ಸಾಬೀತುಪಡಿಸಿದೆ. ಆರಕ್ಕೂ ಹೆಚ್ಚು ಅಂಕಣಕಾರರಿಂದ ಅತ್ಯುತ್ತಮ ಲೇಖನಗಳನ್ನು ವಿಶ್ವ ಕನ್ನಡ ಓದುಗರಿಗೆ ಅದು ಉಣಬಡಿಸುತ್ತಿದ್ದಾರೆ. ಪ್ರಮುಖ ಇ-ಅಂಕಣಕಾರರೆಂದರೆ ಜಾಲತರಂಗದ ಡಾ. ಎಂ.ಎಸ್‌. ನಟರಾಜ್‌, ತುಳಸಿವನದ ಕೆ. ತ್ರಿವೇಣಿ ಶ್ರೀನಿವಾಸರಾವ್‌ ಮತ್ತಿತರರು. ಉತ್ಕೃಷ್ಟ ಲೇಖಕರ ಅನುಭವ ಬುತ್ತಿಯ ಸವಿಯನ್ನು ನಿಯಮಿತವಾಗಿ ಓದುಗರು ಸವಿಯುತ್ತಿದ್ದಾರೆ.


ನಮ್ಮ ಕನ್ನಡ ನಾಡಿನ ಸಾಹಿತ್ಯದ ಬೆಳವಣಿಗೆಯಲ್ಲಿ ಅಂಕಣಬರಹಗಳು ಓದುಗರ ಜೊತೆಗೆ, ಓದುಗರ ಸಲಹೆಗಳೊಡನೆ ಮತ್ತು ಓದುಗರ ಅಭಿರುಚಿಯನ್ನು ಗ್ರಹಿಸಿ ಅಂದಿನ ಸಮಾಜ ಮತ್ತು ಸಂದರ್ಭಕ್ಕನುಸಾರವಾಗಿ ಜಾಗೃತಿ ಮತ್ತು ಕಾಳಜಿಯನ್ನು ಂಟು ಮಾಡುತ್ತಿವೆ. ಇದು ಎಂದೂ ನಿಲ್ಲದ ಹೊಸತನ, ಸಾಹಿತ್ಯದ ಸೃಜನಶೀಲ ಆವಿಷ್ಕಾರ!

Read more at: https://kannada.oneindia.com/literature/articles/2006/120106trudra.html


ಕನ್ನಡಿಗರ ಸಮಸ್ಯೆಗಳು ಹಾಗೂ ತುರ್ತು ಆತ್ಮವಿಮರ್ಶೆ

ಸಂಪಿಗೆಯವರ ‘ವಲಸೆ’ ಲೇಖನದ ಬಗ್ಗೆ ಕನ್ನಡದ ಹಲವು ಓದುಗರಿಂದ ವಿವಿಧ ರೀತಿಯ ವಾದ ಸರಣಿಗಳು ದಟ್ಸ್‌ ಕನ್ನಡ ಡಾಟ್‌ ಕಾಂನಲ್ಲಿ ಮೂಡಿ ಬರುತ್ತಿವೆ. ಸಂಪಿಗೆಯವರು ತಮ್ಮ ಲೇಖನದಲ್ಲಿ ಇಂದಿನ ಕನ್ನಡ ನಾಡಿನ ಸ್ಥಿತಿಯನ್ನು ಉತ್ತಮ ಅಂಕಿ ಅಂಶಗಳೂಂದಿಗೆ ವಿಶ್ಲೇಷಿಸಿ ನಾವೆಲ್ಲ ಇದರ ಬಗ್ಗೆ ಯೋಚಿಸುವಂತೆ ಮಾಡಿರುವುದಕ್ಕೆ ಅವರಿಗೆ ಸಮಗ್ರ ಕರುನಾಡ ಜನತೆಯ ಪರವಾಗಿ ಧನ್ಯವಾದಗಳು.

ಆದರೆ ಅವರ ಲೇಖನದಲ್ಲಿ ಕೊಟ್ಟಿರುವ ಸಲಹೆಯಂತೆ ಕನ್ನಡ ನಾಡಿನ ಜನತೆ ತಾವು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡುವ ಮೂಲಕ ಇದಕ್ಕೆ ಕಡಿವಾಣ ಹಾಕಬಹುದು ಎಂದಿದ್ದಾರೆ. ಆದರೆ, ಈ ಸಲಹೆ ಅಷ್ಟು ಉತ್ತಮವಾದ ಪರಿಹಾರವಲ್ಲ ಎಂದು ಎಲ್ಲರಿಗೂ ತಿಳಿದಿರುವ ವಿಷಯ. ನಮಗೆ ಜನಸಂಖ್ಯೆಯ ಹೆಚ್ಚಳದಿಂದ ಆಗುವ ಅನಾನುಕೂಲ ಈಗಾಗಲೇ ಪ್ರತಿ ಕುಟುಂಬಗಳಿಗೆ ತಿಳಿದಿರುವ ವಿಚಾರ. ಈ ದುಬಾರಿ ಜೀವನದಲ್ಲಿ ಒಂದು ಮಗುವಿಗೆ ಒಳ್ಳೆಯ ಶಿಕ್ಷಣ ಮತ್ತು ಜೀವನವನ್ನು ರೂಪಿಸುವುದು ಎಷ್ಟು ಕಷ್ಟ ಎಂದು ತಿಳಿದಿರುವುದರಿಂದ ಎಲ್ಲಾ ಸಂಸಾರಗಳು ಆರತಿಗೊಂದು ಕೀರ್ತಿಗೊಂದು ಎಂಬ ನಾಣ್ಣುಡಿಯನ್ನು ಆದಷ್ಟೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿವೆ. ಇದು ಒಳ್ಳೆಯದು ಸಹ ಅಲ್ಲವಾ?

ಈ ವಲಸೆ ಸಮಸ್ಯೆ, ಬಾಟಾ ಅಂಗಡಿಗಳಲ್ಲಿ ಪೂಂಗಲ್‌ ಶುಭಾಶಯ, ಪಿಜಾ ಹಟ್‌ನಲ್ಲಿ ಕನ್ನಡ ಔಟ್‌, ಬೆಳಗಾವಿಯಲ್ಲಿನ ಚುನಾವಣೆಯಲ್ಲಿ ಎಂ.ಇ.ಎಸ್‌ ಬಹುಸಂಖ್ಯೆಯ ಸ್ಥಾನಗಳನ್ನು ಪಡೆದಿರುವುದು, ಇವೆಲ್ಲ ಕನ್ನಡದ ಸದ್ಯದ ಸ್ಥಿತಿಯನ್ನು ಬಿಂಬಿಸಿವೆ. ಕನ್ನಡಿಗರಿಗೆ ಬೆಂಗಳೂರಿನಲ್ಲಿ ಕೀಳರಿಮೆ ಮತ್ತು ಅನಾಥ ಪ್ರಜ್ಞೆ ಕಾಡುತ್ತಿದೆ. ಇದಕ್ಕೆ ಕಾರಣ ಎಲ್ಲರಿಗೂ ಗೊತ್ತಿರುವಂತೆ ಕನ್ನಡಿಗರ ತುಂಬು ಔದಾರ್ಯ, ಎಲ್ಲದಕ್ಕೂ ಹೊಂದಿಕೊಂಡು, ಸಹಿಸಿಕೊಂಡು ಹೋಗುವ ಪ್ರವೃತ್ತಿ. ಇದು ನಮ್ಮ ನಾಡಿನ ಮಣ್ಣಿನ ಗುಣ. ಆದರೆ ಈ ರೀತಿಯ ಗುಣವನ್ನೇ ತಮ್ಮ ಲಾಭವಾಗಿ ಮಾಡಿಕೊಂಡು ನಮ್ಮ ಮೇಲೆ ದಬ್ಬಾಳಿಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿಯೆಂಬುವುದನ್ನ ಅವರು ಯೋಚಿಸುವಂತೆ ಮಾಡುವ ಸಮಯ ಇಂದು ಬಂದಿದೆ.

ಕನ್ನಡ ನುಡಿ, ಸಂಸ್ಕೃತಿಯ ಬಗ್ಗೆ ಎದ್ದಿರುವ ಕೂಗು ಕೇವಲ, ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗುತ್ತಿದೆ. ಆದರೆ ನಮ್ಮ ನಾಡಿನ ಬಹುಪಾಲು ಜಿಲ್ಲೆ, ತಾಲ್ಲೂಕು ಮತ್ತು ಹಳ್ಳಿಗಳಿಗೆ ಇದರ ಬಗ್ಗೆ ಏನೂ ಗೊತ್ತಿಲ್ಲ. ಗೊತ್ತಿರಲು ಸಾಧ್ಯವಿಲ್ಲ ಬಿಡಿ. ಯಾಕೆಂದರೆ ಅಲ್ಲಿ ಕನ್ನಡವೇ ಜೀವಾಳ ಮತ್ತು ಜೀವನ ಎಂಬ ರೀತಿಯಲ್ಲಿ ಜೀವಿಸುತ್ತಿದ್ದಾರೆ. ಅಲ್ಲಿ ಈ ರೀತಿಯ ಸಮಸ್ಯೆಗಳಿಗಿಂತ ಭಿನ್ನವಾದ ಹಾಗೂ ಇದಕ್ಕಿಂತ ಹೆಚ್ಚು ಬೃಹತ್‌ ಆದ ಸಮಸ್ಯೆಗಳಿವೆ.

ಆದ್ದರಿಂದ ಸಂವಿಧಾನದಲ್ಲಿ ವಲಸೆ ವಿರೋಧಿ ಶಾಸನ ತರುವುದು ಕೇವಲ ಬೆಂಗಳೂರಿಗೆ ಮಾತ್ರ ಸಾಧ್ಯವಿಲ್ಲದ ಮಾತು. ಬೆಂಗಳೂರಿಗೆ ಯಾಕೆ ಈ ಪರಿಯ ಆಪತ್ತು ಎಂದರೆ, ನಮ್ಮ ಸರ್ಕಾರ ಮತ್ತು ನಮ್ಮ ನಾಯಕರ ದೂರ ದೃಷ್ಟಿಯಿಂದ ಎಲ್ಲಾ ದೊಡ್ಡ ದೊಡ್ಡ ಯೋಜನೆಗಳು, ಕಂಪನಿಗಳು ಬೆಂಗಳೂರು ಬಿಟ್ಟು ಬೇರೆ ಪ್ರದೇಶಗಳಿಗೆ ಹೋಗದಿರುವುದು. ಇದರಿಂದ ನಮ್ಮ ಬೆಂಗಳೂರು ಅತಿ ಹೆಚ್ಚು ಒತ್ತಡವನ್ನು ಮತ್ತು ಹೆಚ್ಚು ಅವಮಾನಗಳನ್ನು ತಾನು ಅನುಭವಿಸಿ ತನ್ಮೂಲಕ ಕನ್ನಡಮ್ಮನಿಗೂ ನೀಡುತ್ತಿದೆ.


ಯಾಕೆಂದರೆ, ಕರ್ನಾಟಕದ ಪ್ರತಿ ಜಿಲ್ಲೆಯ ಜನರು ಉದ್ಯೋಗವನ್ನು ಹುಡುಕಿಕೊಂಡು ಬೆಂಗಳೂರಿನ ಕಡೆಗೆ ಮುಖ ಮಾಡಬೇಕು. ಈ ನಗರವನ್ನು ಬಿಟ್ಟು ಬೇರೆ ನಗರಗಳ ಕಡೆಗಲ್ಲ. ಹಾಗೆಯೆ ಬೇರೆ ರಾಜ್ಯದವರು ಸಹ ಐಟಿ, ಬಿಟಿ ಮತ್ತು ಬಿಪಿಒ ಎಂದುಕೊಂಡು ಬೆಂಗಳೂರಿಗೆ ಲಗ್ಗೆ ಹಾಕುತ್ತಿದ್ದಾರೆ. ಮತ್ತು ನಮ್ಮವರೊಡನೆ ಸ್ಪರ್ಧೆಯನ್ನು ಒಡ್ಡುತ್ತಿದ್ದಾರೆ. ಹೀಗಾಗಿ ಬಹುಸಂಸ್ಕೃತಿಯ ಮಾಲಿನ್ಯದಿಂದ, ನಿಜವಾದ ಕನ್ನಡಿಗರ ಮನ-ಭಾವನೆ ಮತ್ತು ಬೆಳವಣಿಗೆಯನ್ನು ಗಮನಿಸುವರಾರು? ಇದಕ್ಕೆ ಪರಿಹಾರ -ಯೋಜನೆಗಳು ವಿಕೇಂದ್ರೀಕರಣಗೊಳ್ಳಬೇಕು.



ಹಾಗೆಯೇ ಕನ್ನಡ, ಕನ್ನಡಿಗರ ಕಾಳಜಿಯ ಪಕ್ಷ ಬಂದರೂ ಆದರ ಬಗ್ಗೆ ಎಲ್ಲಾ ಜನರಿಗೂ ಎಷ್ಟರ ಮಟ್ಟಿಗೆ ಎಷ್ಟೊತ್ತಿಗೆ ಅರಿವು ಮೂಡಲು ಮತ್ತು ಮೂಡಿಸಲು ಸಾಧ್ಯ? ಇಂದು ಎಲ್ಲಾ ಸಾಮಾನ್ಯ ಪ್ರಜೆಗೆ ಭಾಷೆ, ಸಂಸ್ಕೃತಿಗಿಂತ ತನ್ನ ಮೂಲಭೂತ ಸಮಸ್ಯೆಗಳು ಮತ್ತು ತನ್ನ ಅಭಿವೃದ್ಧಿಯೇ ಮುಖ್ಯವಾಗುತ್ತಿವೆ. ಇದರಿಂದ ಎಲ್ಲರೂ ಒಂದೇ ಮನಸ್ಸಿನಿಂದ ಇಂಥ ವಿಷಯಗಳ ಬಗ್ಗೆ ಚಿಂತಿಸುವಂತೆ ಆಗುತ್ತಿಲ್ಲ. ಆದ್ದರಿಂದ ಇದರ ಬಗ್ಗೆ ಇಂದಿನ ಎಲ್ಲಾ ಪಕ್ಷಗಳು ಪಕ್ಷ ಬೇದ ಮರೆತು ಜನಸಾಮನ್ಯರ ಸಮಸ್ಯೆಗಳನ್ನು ಬಗೆಹರಿಸಲು ಅನುವಾಗಬೇಕು. ಜೊತೆಗೆ ನಮ್ಮ ನಾಡಿನ ಮತ್ತು ಬೆಂಗಳೂರಿನ ಸಮಸ್ಯೆಗಳನ್ನು ಸಮಂಜಸವಾಗಿ ತಿಳಿಸಬೇಕು. ಆಗ ಪ್ರತಿ ಕನ್ನಡಿಗನಿಗೂ ತನ್ನ ನಾಡಿನ, ದೇಶದ ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಯೋಚಿಸಲು ಸಾಧ್ಯವಾಗುತ್ತದೆ.


ಇದೆಲ್ಲಕ್ಕೂ ಮಿಗಿಲಾಗಿ ಬೇಕಾಗಿರುವುದು ‘ಸರ್ವಶಿಕ್ಷಣ’ ಹಳ್ಳಿಯ ಪ್ರತಿಯೊಂದು ಮಗುವು ತನ್ನ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸದೆ ಪೂರ್ಣ ಮಾಡಲು ಸರ್ಕಾರ ಮತ್ತು ಎಲ್ಲಾ ಸಂಘ ಸಂಸ್ಥೆಗಳು ಸಹಾಯ ಮಾಡಬೇಕು. ಶಿಕ್ಷಣದಿಂದ ನಾವೆಲ್ಲಾ ಈ ರೀತಿ ಮಾತಾನಾಡುವ ಸೂಕ್ಷ್ಮ ವಿಷಯಗಳನ್ನು ಪ್ರತಿಯೊಬ್ಬರಿಗೂ ಮನ ಮುಟ್ಟುವಂತೆ ತಿಳಿಸಿ ಜಾಗೃತಿಯನ್ನುಂಟು ಮಾಡಲು ಸಾಧ್ಯ. ಹಾಗೆಯೇ, ನಮ್ಮ ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಎಳೆಗಳನ್ನು ಮಕ್ಕಳ ಚಿಕ್ಕ ವಯಸ್ಸಿನ ಮನಸ್ಸಲ್ಲಿ ನೆಡಲು ಸಾಧ್ಯ. ಆಗ ಆ ಮಗುವೆ ಇಡಿ ಸಮಾಜದ ಆಗು ಹೋಗುಗಳ ಬಗ್ಗೆ ಕಾಳಜಿಯನ್ನು ಗೊತ್ತಿಲ್ಲದೆ ವಹಿಸಿಕೊಂಡು ತನ್ನವರ ಜೊತೆ ಹೊರಡುತ್ತದೆ.

ಹಿಂದೆ ನಮ್ಮ ನಾಡಿಗೆ ಬಂದ ಪರರಾಜ್ಯದ ಪರ ದೇಶದ ಬಹು ಸಂಖ್ಯೆಯ ಗಣ್ಯರು ತಮ್ಮ ಮಾತೃ ಭಾಷೆ ಬೇರೆಯಾಗಿದ್ದರೂ ಕನ್ನಡಮ್ಮನ ಮಡಿಲನ್ನು ತಮ್ಮ ಹಲವು ಕನ್ನಡ ಪರ ಕಾರ್ಯಗಳಿಂದ ಶ್ರೀಮಂತಗೂಳಿಸಿ, ಅಮರರಾಗಿ ಕನ್ನಡ ನಾಡು ನುಡಿ ಇರುವವರೆಗೂ ಅವರನ್ನು ನಾವು ಸ್ಮರಿಸುವಂತೆ ಮಾಡಿದ್ದಾರೆ. ಆ ರೀತಿಯ ಅಭಿಮಾನ ನಮ್ಮ ಕನ್ನಡ ಜನರಿಂದ ಅವರಿಗೆ ಬರಬೇಕು. ಆಗಲೇ ಅವರು ನಮ್ಮ ಸಂಸ್ಕೃತಿಯ ಬಗ್ಗೆ ಗೌರವವನ್ನು ಮತ್ತು ಮೃದು ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ನಮ್ಮವರೇ ತಮಗೆ ಅರಿವಿಲ್ಲದಂತೆ ನಮ್ಮ ಕನ್ನಡದ ಬಗ್ಗೆ ತಾತ್ಸಾರವನ್ನು ಹೊಂದಿ‘ಬ್ಯಾಂಗಲೂರಿಯನ್‌’ ಗಳಂತೆ ಮಾತಾಡಿದರೆ ಹೇಗೆ ಸಾಧ್ಯ. 

ಇದಕ್ಕೆ ಪುಷ್ಟಿಯಂತೆ ಈ ಜೋಕ್‌ ನೆನಪಿಗೆ ಬರುತ್ತದೆ. ‘ಇಬ್ಬರೂ ಇರುವಲ್ಲಿ ತಮಿಳು ಕೇಳಿಸುತ್ತಿದೆಯೆಂದರೆ ಅಲ್ಲಿ ಇಬ್ಬರೂ ತಮಿಳರು ಇರುತ್ತಾರೆ. ಹಿಂದಿ ಕೇಳಿಸುತ್ತಿದೆಯೆಂದರೆ ಅಲ್ಲಿ ಒಬ್ಬ ಕನ್ನಡಿಗ ಮತ್ತು ಇನ್ನೊಬ್ಬ ತಮಿಳಿಗ. ಅಲ್ಲಿ ಇಂಗ್ಲಿಷ್‌ ಕೇಳಿಸುತ್ತಿದೆಯೆಂದರೆ ಅವರಿಬ್ಬರೂ ಕನ್ನಡಿಗರಾಗಿರುತ್ತಾರೆ’ 

ಇತ್ತೀಚೆಗೆ ಆರಮನೆ ಮೈದಾನದಲ್ಲಿ ನಡೆದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಉತ್ಸವದಲ್ಲಿ ನಾನೂ ಸಹ ಭಾಗವಹಿಸಿದ್ದೆ. ಅಲ್ಲಿನ ಒಂದು ಕನ್ನಡ ಪುಸ್ತಕ ಮಾರಾಟ ಮಾಡುವ ಮಳಿಗೆಯನ್ನು ಪ್ರವೇಶಿಸಿ ಕನ್ನಡ ಪುಸ್ತಕಗಳ ಮಾರಾಟ ಹೇಗೆ ಎಂದು ಕೇಳಿದಾಗ ಆತ-‘ಏನು ಹೇಳಲಿ ಸಾರ್‌, ಈ ಉತ್ಸವದ ಬಗ್ಗೆ ಸಂಘಟಕರು ಸರಿಯಾದ ಪ್ರಚಾರ ಮಾಡಿಲ್ಲ. ಅಲ್ಲದೆ ನಮ್ಮ ಕನ್ನಡ ಪುಸ್ತಕ ಮಾರಾಟ ಮಳಿಗೆಗಳಿಗೆ ಭೇಟಿ ಕೊಡುವವರೂ ಕಮ್ಮಿ, ಕೊಟ್ಟರೂ ಕನ್ನಡ ಪುಸ್ತಕ ಕೊಳ್ಳುವರು ಯಾರೂ ಇಲ್ಲ. ಅಲ್ಲಿ ನೋಡಿ ಆ ಇಂಗ್ಲಿಷ್‌ ಪುಸ್ತಕಗಳ ವ್ಯಾಪಾರ. ನಾವು ಈ ಮಳಿಗೆಗೆ ಕೊಡುವ ಬಾಡಿಗೆ ಸಹ ಗಿಟ್ಟುವುದಿಲ್ಲ. ಇನ್ನು ನಿಮ್ಮಂಥವರು ರಿಯಾಯಿತಿಯನ್ನು ಕೇಳುವಿರಿ. ಹೇಗೆ ಸಾರ್‌ ಡಿಸ್ಕೌಂಟ್‌ ಕೊಡಲು ಮನಸ್ಸು ಬರುತ್ತದೆ. ಆದಕ್ಕೆ ಮುಂದಿನ ಬಾರಿ ಈ ಉತ್ಸವದಲ್ಲಿ ಭಾಗವಹಿಸಬಾರದೆಂದು ನಿರ್ಧರಿಸಿದ್ದೇನೆ’ ಇದು ನಿಜವೇ ಸರಿ.

ನಮ್ಮ ಜನರು ಇಂಗ್ಲಿಷ್‌ ಪುಸ್ತಕಗಳನ್ನು ಮನೆಯ ಕಪಾಟುಗಳಲ್ಲಿ ಹೊಂದಿರುವುದೇ ಪುಣ್ಯದ ಕೆಲಸ ಮತ್ತು ಅದು ನಮ್ಮ ಯುವ ಪೀಳಿಗೆಗೆ ಉತ್ತಮ ಭವಿಷ್ಯವನ್ನು ಕೊಡುತ್ತದೆ ಎಂದು ತಿಳಿದಿರುವರು. ಇನ್ನು ಯಾವುದೇ ಇಂಗ್ಲಿಷ್‌ ಪುಸ್ತಕಗಳು ಬಿಡುಗಡೆಯಾದರೆ, ಭಾರೀ ಪ್ರಚಾರ ಮತ್ತು ಭಾರೀ ರಿಯಾಯಿತಿಯ ನಡುವೆ ಅಂಗಡಿಗಳು ವಿಶೇಷವಾಗಿ ರಾತ್ರಿಯಿಡೀ ತೆರೆದಿದ್ದು ಎಲ್ಲಾ ಆಂಗ್ಲ ಪ್ರಿಯರಿಗೆ ಸಕಾಲಕ್ಕೆ ತಲುಪುತ್ತವೆ. ಅದೇ ನಮ್ಮ ಕನ್ನಡ ನಾಡಿನ ಮುಖ್ಯ ಸಾಹಿತಿಯ ಹೆಸರನ್ನು ಮತ್ತು ಆತನ ಪುಸ್ತಕಗಳ ಬಿಡುಗಡೆ ಈ ರೀತಿಯ ಭಾರೀ ಪ್ರಚಾರದಂತೆ ನವ ಓದುಗರಿಗೆ ತಿಳಿಯಲು ಸಾಧ್ಯವಿಲ್ಲ. ಇನ್ನೆಲ್ಲಿ ಕನ್ನಡ ಪ್ರಿಯರು ಬೆಳೆಯಲು ಸಾಧ್ಯ? ಇಲ್ಲಿ ಕೇವಲ ವ್ಯಾಪಾರವೇ ಬಂಡವಾಳ, ಸಂಸ್ಕೃತಿಯಲ್ಲ. ಇದು ತಲೆ ತಗ್ಗಿಸುವ ವಿಚಾರ.

ಇನ್ನು ನಮ್ಮ ಚಲನಚಿತ್ರ ಕ್ಷೇತ್ರಕ್ಕೆ ಬಂದರೆ ನಾವೇನೂ ಕಡಿಮೆಯಿಲ್ಲ . ಮೂದಲು ಕೇವಲ ನಿರ್ದೇಶಕರು ಮತ್ತು ನಾಯಕಿಯರ ಅಮದು ಆಗುತ್ತಿತ್ತು. ಈ ಪ್ರವೃತ್ತಿ ಸಾವಕಾಶವಾಗಿ ವಿಸ್ತರಿಸಿಕೊಂಡು ಕತೆ, ಗಾಯಕರು, ಸಂಗೀತ ನಿರ್ದೇಶಕರು ಮತ್ತು ಟೆಕ್ನಿಷಿಯನ್‌ಗಳನ್ನು ಕರೆಸಿಕೊಂಡು, ಕನ್ನಡ ಸಿನಿಮಾವನ್ನು ಕನ್ನಡ ನೆಲದಲ್ಲಿ ಬಿಡುಗಡೆ ಮಾಡಿ ಪುಣ್ಯವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಯಾಕೆಂದರೆ ನಮ್ಮಲ್ಲಿನ ಯುವ ಕಲಾ ಪ್ರತಿಭೆಗಳು ಇವರಿಗೆ ಭಾರೀ ದುಡ್ಡು ತರುವಂಥ ಸರಕುಗಳಲ್ಲ. ನಮ್ಮ ಕನ್ನಡ ನಾಡಿನ ಹಿಂದೆ ಬಂದಂಥ ಅತ್ಯುತ್ತಮ ಚಲನಚಿತ್ರಗಳಿಗೆ ನಮ್ಮ ಕನ್ನಡ ಕಾದಂಬರಿಗಾರರು, ಸಂಗೀತಕಾರರು, ನಟರು ಮತ್ತು ಜನತೆ ಕಾರಣ ಎಂಬುವುದನ್ನೇ ಮರೆತು ಕೀಳಾಗಿ ಕಾಣುತ್ತಿದ್ದಾರೆ. ಯಾರು ಕೇಳಬೇಕು ಇವರನ್ನು?


ಹೀಗೆ ಎಲ್ಲಾ ರಂಗಗಳನ್ನು ಹೀಗೆ ಮಾಡಿ, ಇದನ್ನು ಅಳವಡಿಸಿಕೊಳ್ಳಿ ಎಂದು ಬೆಟ್ಟು ಮಾಡಿ ತೋರಿಸಿ ಸರಿಪಡಿಸುವುದು ಎಷ್ಟರ ಮಟ್ಟಿಗೆ ಸರಿ. ನಮ್ಮ ನಾಡಿನ ಎಲ್ಲರೂ ಸಹ ಅವಕಾಶವನ್ನು ಕೊಟ್ಟರೆ ಬೇರೆಯವರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದು ಮಾಡಿ ತೋರಿಸುತ್ತಾರೆ. ಅದಕ್ಕೆ ಸ್ವಲ್ಪ ಅಸಕ್ತಿ ಮತ್ತು ಪ್ರೀತಿ ಮುಖ್ಯ.

ಹೀಗಾಗಬಾರದು ನಾವು ನಮ್ಮ ಭಾಷೆಯನ್ನು ಎದೆಯುಬ್ಬಿಸಿ ಮಾತನಾಡಬೇಕು. ನಮ್ಮ ನಡುವೆ ಬದುಕುತ್ತಿರುವ ಬೇರೆ ಭಾಷೆಯ ಎಲ್ಲ ಜನರು ತಮ್ಮ ನಡುವೆ ತಮ್ಮ ಮಾತೃ ಭಾಷೆಯಲ್ಲಿಯೆ ರಾಜಾರೋಷವಾಗಿ ಮಾತಾನಾಡಿದರೆ ನಾವೇಕೆ ಮಾತಾನಾಡಲು ಸಾಧ್ಯವಿಲ್ಲ ಹೇಳಿ? ನಾವೇ ನಮ್ಮ ಭಾಷೆಯ ಬಗ್ಗೆ ನಮ್ಮಲ್ಲಿ ಹೆಮ್ಮೆಯನ್ನು ಪಡದಿದ್ದರೆ ಅವರಾದರೂ ಹೇಗೆ ತಾನೆ ಗೌರವವನ್ನು ಕೊಡಲು ಮತ್ತು ಭಾಷೆ ಕಲಿಯಲು ಅಸಕ್ತಿ ತೋರಲು ಸಾಧ್ಯ?

ಪರರ ಆಕ್ರಮಣ ಪುರಾತನ ಕಾಲದಿಂದಲೂ ನಡೆದಿರುವುದು ಸರ್ವೇಸಾಮಾನ್ಯ. ಇಂದೂ ಈ ರೀತಿಯ ಆಕ್ರಮಣಗಳು ಇವೆ. ಆದಕ್ಕೆ ಎಲ್ಲರೂ ಒಗ್ಗಟ್ಟಿನಿಂದ ತಮ್ಮ ತಮ್ಮಲ್ಲಿಯೇ ಸಂಕಲ್ಪ ಮಾಡಿಕೊಂಡು ಶಾಂತ ರೀತಿಯ ಕ್ರಾಂತಿಯನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ, ಇಂಥ ಹತ್ತು ಅವಮಾನಗಳಿಗೆ ಸರಿಯಾದ ಉತ್ತರವನ್ನು ನಮ್ಮ ಜನ ಸರಿಯಾದ ರೀತಿಯಲ್ಲಿ ಕೊಡುವುದರಲ್ಲಿ ಸಂಶಯವಿಲ್ಲ.

Read more at: https://kannada.oneindia.com/literature/articles/2006/180106triputa.html