ಸೋಮವಾರ, ಫೆಬ್ರವರಿ 12, 2024

ನಿಮ್ಮ ಬಗ್ಗೆ ಹೇಳಿ

ಯಾರಾದಾರು ನಿಮ್ಮ ಬಗ್ಗೆ ಹೇಳಿ ಅಂದರೆ, ಏನು ಹೇಳುವುದು ಎಂದು ಚಿಂತೆ ಮಾಡಬೇಕಾಗುತ್ತೆ.

 ಅವರಿಗೆ ನಾವು ಹೇಳುವುದು ಸರಿ ಅನಿಸುತ್ತಾ ಅಥವಾ ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ನಗು ಬರುತ್ತಾ! 

ಆದರೆ ಸಂದರ್ಶನದ ಸಮಯದಲ್ಲಿ ಹೇಳುವದು ಅನಿವಾರ್ಯ ಮತ್ತು ಕೇಳುವುದು ಕೇಳಿದರವರಿಗೂ ಅನಿವಾರ್ಯ! 

ಹಾಗೆಯೇ ಅವರ ಬಗ್ಗೆ ನಮಗೆ ಗೊತ್ತಾಗುವುದು. 

ನಾನು ಇಲ್ಲಿ ಹುಟ್ಟಿ, ಇಲ್ಲಿ ಓದಿ,  ಇಲ್ಲಿ ಈಗ  ಈ ಕೆಲಸ ಮಾಡುತ್ತಿದ್ದೇನೆ. 

ಕೇಳಿದವರಿಗೆ ಒಹ್ ಹೀಗೆಲ್ಲಾ  ಜೀವನದಲ್ಲಿ ಈ ಹುಡುಗ ಬಸವಾಳಿದಿದ್ದಾನೆ ಇಲ್ಲಿವರಿಗೆ ಎಂದು ಕೇಳಿಸಿಕೊಂಡವರು ಒಂದಿಷ್ಟು ಕನಿಕರ ಪಡಬಡಹುದು. 

ಹಾಗೆಯೇ ಒಹ್ ನನಗಿಂತ ಹೀಗೆ ಹೀಗೆ ಏನೇನೋ ಮಾಡಿದ್ದಾನೇ ಎಂದು ಅಚ್ಚರಿ ಪಡಬಹುದು.

 ಆದರೂ ಒಮ್ಮೊಮ್ಮೆ ನಮ್ಮ ಬಗ್ಗೆ ನಾವೇ ಏನ್ ಕೊಚ್ಚಿಕೊಳ್ಳುವುದು ಅನಿಸುತ್ತದೆ. 

 ಅದರೂ ಇಂದಿನ ದಿನಮಾನದಲ್ಲಿ ನಮ್ಮ ಮಾರ್ಕೆಟಿಂಗ್ ನಾವೇ ಮಾಡಬೇಕು. ಅದಕ್ಕೆ ಹೆಚ್ಚು ಬೆಲೆ.

 ಎಲೆ ಮರೆಯ ಕಾಯಿಯಂತೆ ಇದ್ದರೆ ಯಾರೊಬ್ಬರೂ ಮೂಸಿ ಸಹ ನೋಡುವುದಿಲ್ಲ. 

ಎಲ್ಲಾ ಪ್ರಚಾರ ದಿನದಲ್ಲಿ ಬದುಕುವ ಬವಣೆ. 

ಎಲ್ಲಿಯಾದರೂ ಕೆಲಸ ಬೇಕೆಂದರೆ ನಿನ್ನ ರೆಸ್ಯೋಮ್ ಚೆನ್ನಾಗಿರಬೇಕು. ಇಲ್ಲ ಅಂದರೆ ನಿಮಗೆ ಒಂದು ಕಾಲು ಸಹ ಬರುವುದಿಲ್ಲ. ಕಾಲ್ ಇಲ್ಲ ಅಂದ್ರೆ ಇಂಟರ್ವ್ಯೂ ಇಲ್ಲ. ಅದು ಇಲ್ಲ ಅಂದರೆ ಕೆಲಸನು ಇಲ್ಲ.

ಇಂದು A I  ಜಮಾನಾ! ಆರ್ಟಿಪಿಸಿಯಲ್ ಇಂಟಲಿಜೆನ್ಸ್ ಮೊಲಕ ಮನುಷ್ಯರು ರಚಿಸಿದ ಕೃತಿಗಳನ್ನು ಪರೀಕ್ಷಿಸುತ್ತಾರೆ. ಅದಕ್ಕೇನು ಗೊತ್ತು  ನಮ್ಮ ಕಷ್ಟ ಸುಖ ? ಆದರೆ ಮನುಷ್ಯರನ್ನ ನಂಬುವುದಕ್ಕಿಂತ ಮಿಷಿನ್ ನಂಬುವ ದಿನಗಳಲ್ಲಿ ನಾವು ಇದ್ದೇವೆ.  ಮನುಷ್ಯನೇ ಕಂಡು ಹಿಡಿದ ಯಂತ್ರ ಮನುಷ್ಯನ್ನನ್ನೇ ಪರೀಕ್ಷಿಸುತ್ತದೆ. ಇಲ್ಲಿಗೆ ಬಂದು ನಿಂತಿದ್ದೇವೆ. 

ಇಲ್ಲಿಗೆ ಬಂದಿದೆ ನಮ್ಮ ಜೀವನ. ಬರಿ ಓದಿದರೆ ಏನು ಸಾಲದು. 

ಓದು ಮುಗಿದ ಮೇಲೆಯೇ ಜೀವನ ಅಂದರೆ ಏನು ಎಂದು ತಿಳಿವಿಯುವುದು. 

ಇನ್ನು ಹೆಚ್ಚು ಬದುಕು ಅಂದರೆ ಏನು ಎಂದು ತಿಳಿಯಲು ಬೆಂಗಳೂರಿಗೆ ಬಂದು ನಾಲ್ಕು ಕಡೆ ತಿರುಗಾಡಿ ಕೆಲಸ ಹುಡುಕಿದಾಗ ನಮ್ಮ ತಿಳುವಳಿಕೆ, ನಾವು ಏನು ಓದಿದೀವಿ ಎನ್ನುವುದು ಗೊತ್ತಾಗುತ್ತೆ. 

ಬರಿ ಓದಿನ ಅಂಕಗಳು ಏನು ಉಪಯೋಗವಿಲ್ಲ ಎನ್ನುವುದು ಒಂದೇ ದಿನದಲ್ಲಿ ತಿಳಿಯುತ್ತದೆ. 

ಮತ್ತೆ ನಮ್ಮನ್ನು ನಾವು ಹೇಗೆ ಪ್ರೇಸಂಟ ಮಾಡಿಕೊಳ್ಳಬೇಕು ಎನ್ನುವುದನ್ನ ಕಲಿಯಲು ಪುನಃ ಯಾವುದಾರೂ ಕ್ರ್ಯಾಶ್ ಕೋರ್ಸಗೆ ಸೇರಬೇಕು. ಅಲ್ಲಿ ಅದು ಇದು ಬೇರೆ ಭಾಷೆಯಲ್ಲಿ ಪುನಃ ನುರಿಯಬೇಕು.

ನಂಗೆ ರವಿಬೆಳೆಗೆರೆ ಕೊಡುತ್ತಿದ್ದ ವರುಷದ ಅಫಿಡವಿಟ್ ಅಥವಾ ಅವರು ಅವರ ಪುಸ್ತಕಗಳಲ್ಲಿ ತಮ್ಮ ಬಗ್ಗೆ ಹೇಳಿಕೊಳ್ಳುತ್ತಿದ್ದ  ಒಂದು ಪುಟದ ಸಾಲುಗಳು ತುಂಬಾ ಚೆನ್ನಾಗೇ ಕಾಣಿಸುತ್ತಿತ್ತು. ಹುಟ್ಟಿನಿಂದ ಪ್ರಾರಂಬಿಸಿ ಹೆಂಡತಿ,  ಮಕ್ಕಳು, ಮನೆ, ದುಡಿಮೆ, ಕಾರು, ಬಟ್ಟೆ ,ಪುಸ್ತಕಗಳಿಂದ ಹಿಡಿದು ಇತ್ತೀಚೆಗೆ ಕೊಂಡ ಕೆಜಿ ಬಂಗಾರ ಬೆಳ್ಳಿಯವರಿಗೆ  ಏನೆಲ್ಲಾ ಹೆಚ್ಚಾಗಿದೆ ಮತ್ತು ಕಡಿಮೆಯಾಗಿದೆ ಎಂಬುದನ್ನು  ಹೇಳಿಕೊಳ್ಳುತ್ತಿದ್ದರು. 

ಬದುಕಿದರೇ ಹೀಗ್ ದಿಲ್ ದಾರ್ ಮನುಷ್ಯನಾಗಿ ಬಾಳಬೇಕು ಎಂಬಂತೆ ಸಾಮಾನ್ಯ ಮನುಷ್ಯನಿಗೂ  ಉತ್ತೇಜನ ಕೊಡುವ  ರೀತಿಯ ಬರಹವಾಗಿತ್ತು ಅದು ಅವರ ಬಗ್ಗೆ ಅವರು ಹೇಳಿದ್ದ ಅಫಿಡವಿಟ್! 

 ನನಗೆ ಒಮ್ಮೊಮ್ಮೆ ಅನಿಸುತ್ತದೆ. ಅದು ಯಾಕೆ ಕಾಲೇಜು, ಶಾಲೆಗಳಲ್ಲಿ ಪಾಠಗಳ ಜೊತೆಯಲ್ಲಿ ಈ ಪಾಠಗಳನ್ನು ಯಾರೊಬ್ಬ ಗುರುವು  ನಮಗೆ ಹೇಳಿಕೊಡವುದಿಲ್ಲ. 

ಹಾಗೆಯೇ ಹಳ್ಳಿ ಮೊಲೆಯಲ್ಲಿ ಓದುವ ಬದಲು ಬೆಂಗಳೂರಲ್ಲಿ ಓದಿದವರ ಲಕ್ಕು ಚೆನ್ನ ಅನಿಸುತ್ತದೆ. 

ಬೆಂಗಳೂರಲ್ಲಿ ಇದ್ದಾರೆ ಅರ್ಧ ಲೈಫ್ ಪಾಠಗಳನ್ನು ಬೆಂಗಳೂರು ಗಾಳಿ ನಮಗೆ ತಿಳಿಸಿಕೊಟ್ಟುಬಿಡುತ್ತದೆ.

ಹೇಗೆ ಬದುಕಬೇಕು. ಯಾರನ್ನು ಹೇಗೆ ನಂಬಬೇಕು, ಹೀಗೆ ಜೀವನದ ಸತ್ಯಗಳನ್ನು ಯಾವ ವಿಶ್ವವಿದ್ಯಾನಿಲಯಗಳು ಹೇಳಿಕೊಡದದ್ದನ್ನು ಬೆಂಗಳೂರು ಒಂದು ದಿನದಲ್ಲಿ ಸುಲಭವಾಗಿ ಕಲಿಸಿಬಿಡುತ್ತದೆ. 

ಹಣಕ್ಕೆ ಇರುವ ಬೆಲೇ ಏನು ಎನ್ನುವುದನ್ನು ಕಾಲಿ ಜೇಬಿನಿಂದ್ ಒಂದು ಗಂಟೆ  ಈ ಮಹಾನಗರದ ದಾರಿಯಲ್ಲಿ ಸಾಗಿದರೆ ತಿಳಿಯುತ್ತದೆ. 

ಹೀಗೆ ಬದುಕು ನಾವು ನಮ್ಮ ಪಾಡಿಗೆ ಇದ್ದಾರೆ ನಾವು ಎಲ್ಲಿ ಇರುತ್ತೇವೊ ಅಲ್ಲಿಯೇ ಇರಬೇಕಾಗುತ್ತದೆ.

ಯಾರು ತನ್ನನ್ನ ತಾನು ಪ್ರೀತಿಸಿ ನಂಬಿ ತನ್ನ(ನ್ನು ತಾನು) ಚೆನ್ನಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವವನು ಅವನು ಈ ಪ್ರಪಂಚದಲ್ಲಿ ಗೆಲ್ಲುವನು.  

ಇನ್ನು ಯಾಕೆ ತಡ ನಿಮ್ಮ ಬಗ್ಗೆ ನೀವೇ ಹೇಳಿ!