ಬುಧವಾರ, ಏಪ್ರಿಲ್ 29, 2020

ಮುದ್ದು ಮುದ್ದು ಮನಸ್ಸು

ಮಕ್ಕಳ ಮನಸ್ಸು ಮುದ್ದು ಮುದ್ದು ಮೃದು. ಅವುಗಳ ಕುತೂಹಲವನ್ನು ಯಾರು ವಯಸ್ಸಾದರೂ ಇಟ್ಟುಕೊಂಡಿರುತ್ತಾರೊ ಅವರುಗಳೆ ಪ್ರತಿ ಕ್ಷಣವನ್ನು ಸುಖವಾಗಿ ಕಳೆಯಬಲ್ಲವರಾಗಿರುತ್ತಾರೆ.

ಗಮನಿಸಿ ಮಕ್ಕಳಿಗಿರುವ ಈ ಗುಣ ಎಂಥವರನ್ನು ಅಚ್ಚರಿಯನ್ನುಂಟು ಮಾಡುತ್ತಾದೆ.

ಇಷ್ಟೊಂದು ಪರೀಕ್ಷಿಸುವ ಪರಿಯನ್ನು ಗಮನಿಸಿದರೇ ಇವನು ನಿಜವಾಗಿಯು ಮುಂದೆ ದೊಡ್ಡ ವಿದ್ವಾಂಸನಾಗುತ್ತಾನೆ ಎಂದು ಹೆತ್ತವರು ಮನಸ್ಸಿನಲ್ಲಿಯೇ ಗುಣಕಾರವನ್ನು ಮಾಡಿಕೊಂಡಿರುತ್ತಾರೆ.

ಹೌದು ಎಲ್ಲಾ ಮಕ್ಕಳು ಚಿಕ್ಕವರಾಗಿರುವಾಗ ತುಂಬ ಚುರುಕೇ. ಆ ಚುರುಕು ಪ್ರಕೃತಿದತ್ತವಾಗಿಯೇ ಅವರಿಗೆ ಬಂದಿರುತ್ತದೆ. ಅದನ್ನು ಅವರುಗಳು ಅವರಲ್ಲಿ ಕಾಪಾಡಿಕೊಂಡು ಹೆಚ್ಚು ಹೆಚ್ಚು ಬೆಳೆಯುವಂತೆ ಹೆತ್ತವರು ಮತ್ತು ಸುತ್ತಲಿನ ಪರಿಸರ ಪೋಷಿಸಬೇಕು.

ನೋಡಿ ನೀವು ಏನಾದರೂ ವಸ್ತುವನ್ನು ಕೈಯಲ್ಲಿ ಇಟ್ಟುಕೊಂಡಿದ್ದರೆ, ತಕ್ಷಣ ನಿಮ್ಮ ಚಿಕ್ಕ ಮಗ ಅಥವಾ ಮಗಳು ಬಂದು ತನ್ನ ಕೈಗೆ ತಗೆದುಕೊಳ್ಳುತ್ತದೆ. ನೀವುಗಳು ಏನಾದರೂ ಪುಸ್ತಕನ್ನು ತೆಗೆದು ಓದಲು ಶುರು ಮಾಡಿದರೇ ಅದೇ ಮಗು ತಕ್ಷಣ ಬಂದು ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ತನ್ನ ಕೈಗೆ ತೆಗೆದುಕೊಳ್ಳಲು ಶುರು ಮಾಡುತ್ತದೆ.

ನೀವು ಏನಾದರೂ ಮಾಡಿ ಚಿಕ್ಕ ಮಕ್ಕಳಿಗೆ ತಾನು ಅದನ್ನೇ ಮಾಡಬೇಕು ಎಂಬ ಕುತೂಹಲ. ಅದೇ ಮಕ್ಕಳು  ತಾವುಗಳು ಏನೂ ಅನ್ನುವುದನ್ನು ನಾವು ತಿಳಿಯುವಂತೆ ಮಾಡುತ್ತವೆ.

ಚಿನ್ನಾರಿಗಳಿಗೆ ದಣಿವೇ ಇಲ್ಲದ ಹೊಸತನವನ್ನು ಕಾಣುವ, ತಾವುಗಳು ಏನಾದರೂ ಹೊಸತನದ ಆಟ ಪಾಠವನ್ನು ಕಾಣುವ ಕನಸು.


ಅದೇ ಮಕ್ಕಳ ಬದುಕು. ನಿತ್ಯ ಏನಾದರೊಂದನ್ನು ಕಲಿಯುವುದೇ ಆಗಿರುತ್ತದೆ. ಹಾಗೆಯೇ ಪ್ರತಿ ಮಗುವು ಎಲ್ಲಾವನ್ನು ಕಲಿತು ತಾನೇ ಕಲಿಯಾಗುವುದು.


ನಾವುಗಳು   ಏನನ್ನು ಹೇಳಿ ಕೊಡುವ ಅಗತ್ಯವಿಲ್ಲ! ಮಕ್ಕಳೇ ನಮಗೆ ಜೀವನದಲ್ಲಿ ಹೇಗೆಲ್ಲಾ ನಿತ್ಯ ನಿರಂತರ ಕಲಿಯಬೇಕು ಎಂಬುದನ್ನು  ತಮ್ಮ ಮೊಲಕ ಹೇಳಿ ಕೊಡುತ್ತಾರೆ.

ನೋಡಿ ಮಕ್ಕಳು ತಮ್ಮ ಒಂದನೇಯ ವಯಸ್ಸಿನಿಂದ ಹೇಗೆಲ್ಲಾ ಕಲಿಯುತ್ತಾ ಕಲಿಸುತ್ತಾ ಹೆತ್ತವರನ್ನು ಸಂತೋಷದಲ್ಲಿ ಮುಳುಗೇಳಿಸಿರುತ್ತಾರೆ.

ಹೊಸ ಹೊಸ ಆಟಿಕೆಗಳನ್ನು ಆರಿಸುವುದು, ಅದರ ಜೊತೆಯಲ್ಲಿ ಆಟವಾಡುವುದು. ಇನ್ನೊಂದು ದಿನ ಏನಾದರೂ ಹೊಸ ಗೊಂಬೆಯನ್ನು ತಂದರೇ ಹಳೆಯದನ್ನು ಆ ಸಮಯಕ್ಕೆ ಒಗೆದು ಹೊಸದರ ಜೊತೆಯಲ್ಲಿಯೇ ಹಗಲು ರಾತ್ರಿ ಕಳೆಯುವುದು.

ಇದು ವಯಸ್ಸು ಬೇಳೆದಂತೆ ಕುತೂಹಲದ ಮನಸ್ಸನ್ನು ಹೆಚ್ಚು ಮಾಡಿಕೊಂಡು ವೇಗವಾಗಿಯೇ ಮಾತು, ಓದುವುದು ಹೀಗೆ ಪ್ರತಿಯೊಂದನ್ನು ಕಲಿಯುತ್ತಾರೆ.

ಮಾತು ಕಲಿಯುವುದೇ ಒಂದು ವಿಸ್ಮಯ!  ದಾ, ಡಾ ಎಂದು ಒಂದಕ್ಷರ ಮಾತನಾಡುವ  ಮಗ /ಮಗಳು ಇವನೇ/ಳೇ ಎನಿಸುತ್ತದೆ. ಚಿಕ್ಕ ಚಿಕ್ಕ ಕಥೆ ಪುಸ್ತಕವನ್ನು ಓದುವುದನ್ನು ನೊಡಿದಾಗ ನಿಜವಾಗಿಯೂ ಅಚ್ಚರಿಯಾಗುತ್ತದೆ.

ಓದುವುದನ್ನು ನೋಡುವುದೇ ಇನ್ನೊಂದು ಸುಂದರ ಸುಖ.

ಒಂದು ಸಾಲು ಓದುವುದು ಅದಕ್ಕೆ ಹೊಂದುವ, ಗೊತ್ತಿರುವ, ನೆನಪಿರುವ  ವಿಷಯ ಹೇಳುವುದು ಅಥವಾ ಪ್ರಶ್ನೇ ಮಾಡುವುದು.

ಒಮ್ಮೊಮ್ಮೆ ಹೆತ್ತವರಿಗೆ ಸಾಕು ಸಾಕಾಗುತ್ತದೆ. ಎಷ್ಟು ಅಂಥಾ ಹೇಳಿದ್ದೇ ಹೇಳಿದ ಉತ್ತರಗಳನ್ನು ಕೊನೆಯಿರದ ಪ್ರಶ್ನೆಗಳಿಗೆ ಉತ್ತರಿಸುವುದು.  ಅವುಗಳೋ ಪುನಃ ಪುನಃ ಅದೇ ಪ್ರಶ್ನೆಗಳನ್ನು ಕೇಳುವುದು.

ಮಕ್ಕಳಿಗೆ ಎಲ್ಲಾ ಸಂಗತಿಗಳು ಸಂತೋಷದ ಆಟ.

ಅದಕ್ಕೆ ಇರಬೇಕು ಪ್ರತಿ ಮಗುವು ಎಂದಿಗೂ ದಣಿವಾಗಿದೆ ಎಂದು ಬಾಯಿ ಮಾತಿಗೂ ಹೇಳುವುದಿಲ್ಲ.

ಆ ಕ್ಷಣದಲ್ಲಿ ಬದುಕುವ ಜೀವಿ ಎಂದರೇ ಮಗು. ಇರುವ ಕ್ಷಣವನ್ನು ಸುಂದರವಾಗಿ ಪರಿಪೂರ್ಣವಾಗಿ ಅನುಭವಿಸುತ್ತದೆ.

ಪ್ರತಿಯೊಂದನ್ನು ಮನನ ಮಾಡಿಕೊಂಡು ಅರ್ಥೈಸಿಕೊಂಡು ಮನದಲ್ಲಿಯೇ ಇಟ್ಟುಕೊಳ್ಳುತ್ತದೆ.

ಏನಂದರೂ ಏನನ್ನೂ ಮರೆಯುವುದಿಲ್ಲ.

ಅದಕ್ಕೇ ಇರಬೇಕು ಒಂದೊಂದು ಮಕ್ಕಳು ಮನೆಯ ಮಾತು, ಹೊರ ಪ್ರಪಂಚದ ಭಾಷೆ, ಶಾಲಾ ಭಾಷೆ ಹೀಗೆ ಎರಡು ಮೂರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತವೆ.

ಮಕ್ಕಳ ಆಟ ಪಾಠ ರಾತ್ರಿಯಾದರೂ, ಮಲಗಿದರೂ ಮುಗಿಯುವುದಿಲ್ಲ.

ಕನಸಿನಲ್ಲೂ ಆಗಾಗ್ಗೆ ನಗುವುದು, ಅಳುವುದು, ಮುನಿಸುವುದು ಜಾರಿಯಲ್ಲಿರುತ್ತದೆ.


ಇದನ್ನು ಗಮನಿಸಿದರೇ ನಿತ್ಯ ೨೪ ಗಂಟೆ ದಣಿವಿರದ ತಣಿವ ಗುಣವೇ ಅವುಗಳ ಮುಗ್ಧ ಕಣ್ಣುಗಳ ಹೊಳಪಿನ ಸುಂದರ ಮುಖವೇ ಪ್ರಪುಲ ಸೂರ್ಯನ ಬೆಳಕು ಪ್ರತಿಯೊಂದೂ ಮನೆ ಮನಕ್ಕೂ.

ಹಾಗೆಯೇ ಅವುಗಳ ಕಲಿಯುವ ಕಲಿತು ಮರೆಯುವ ಗುಣವನ್ನು ಪ್ರತಿಯೊಬ್ಬರೂ ಎಷ್ಟೇ ದೊಡ್ಡವರಾದರೂ ಮರೆಯಬಾರದು.

ಅದೇ ಅಲ್ಲವಾ ಜೀವನ.

ಪ್ರತಿ ಕ್ಷಣದಲ್ಲೂ ಏನಾದರೂ ಕಂಡುಕೊಂಡು ಸಂತೋಷಿಸುವುದೇ ಜೀವನ.

ಅದೇ ಮಕ್ಕಳು ನಮಗೆ ಯಾವಾಗಲೂ ಹೇಳಿಕೊಡುವ ಜೀವನ ಪಾಠ.