ಮಂಗಳವಾರ, ಮೇ 25, 2010

ಜುಗಾರಿ ಕ್ರಾಸ್

ಜೂಜಾಟ ಎಂದರೆ ನಮ್ಮ ಮನಸ್ಸಿಗೆ ಪ್ರಪ್ರಥಮವಾಗಿ ಬರುವ ನೆನಪೆಂದರೇ ಪಾಂಡವರ ಕವಡೆಯಾಟ ಮತ್ತು ಅವರು ಅದರಿಂದ ೧೨ ವರ್ಷ ವನವಾಸವನ್ನು ಅನುಭವಿಸಿದ್ದು. ಈ ಮಾತು ಎಷ್ಟು ಜನ ಜನಿತವಾಗಿದೆಯೆಂದರೆ ಇಂದು ಯಾರಾದರೂ ಜೂಜಿನಲ್ಲಿ ತೊಡಗಿದ್ದರೇ ಅವರಿಗೆ ಹೇಳುವ ಮೊದಲ ಮಾತು "ನಿನಗೂ ಪಾಂಡವರ ಪಾಡು ಬರುತ್ತದೇ ಕಣೋ, ಬಿಟ್ಟು ಬಿಡು ಈ ಕೆಟ್ಟ ಆಟವನ್ನು".


ಈ ಜೂಜಾಟಗಳಲ್ಲಿ ಹಲವು ವಿಧಗಳು ನಮ್ಮ ನಾಡಿನಲ್ಲಿ ಪರಿಚಿತವಾಗಿರುವ ಹಿಂದಿನಿಂದಲೂ ಪ್ರಚಲಿತವಾಗಿರುವ ಆಟಗಳೆಂದರೆ, ಪಗಡೆಯಾಟ, ಚದುರಂಗ, ಇಸ್ಫಿಟಾಟ, ಕುದುರೆ ಓಟ, ಲಾಟರಿ, ಮಟ್ಕಾ ಇತ್ಯಾದಿ. ಈ ಆಟಗಳು ಎಲ್ಲಾ ದೇಶಗಳಲ್ಲೂ ವಿವಿಧ ರೂಪದಲ್ಲಿ ಪ್ರಸ್ತುತವಾಗಿದೆ. ಜನಗಳು ಇದ್ದಾರೆ ಎಂದರೆ ಅಲ್ಲಿ ಈ ಒಂದು ಕೆಟ್ಟ ಅಥವಾ ಅದೃಷ್ಟವಾದ ಆಟವನ್ನು ಜನಗಳು ಆಡುತ್ತಾ ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳೂತ್ತಿರುತ್ತಾರೆ.


ಇದು ನಮ್ಮ ನಾಗರೀಕತೆಗಳ ಉಗಮದಿಂದ ಪ್ರಾರಂಭಗೊಂಡು ನೆನ್ನೇ ಮೊನ್ನೆಯವರೆಗೂ ಹಲವು ಪ್ರಕಾರಗಳಲ್ಲಿ ತಾನು ಬದಲಾವಣೆಗೊಂಡು ನಾನಾ ದೇಶಗಳಲ್ಲಿ ಜನಿಸಿ, ನಾನಾ ದೇಶಗಳಿಗೆ ಹೋಗಿ ತನ್ನ ನೆಲೆಯನ್ನು ಕಂಡು ಕೊಂಡಿದೆ.


ವಿದೇಶಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಜೂಜಾಟಗಳೆಂದರೆ ಕ್ಯಾಸಿನೂ, ಲಟ್ಟೋ, ಲಾಟರಿ, ಹಾರ್ಸ್ ರೇಸಿಂಗ ಇತ್ಯಾದಿ. ಪ್ರಾರಂಭದ ದಿನಗಳಲ್ಲಿ ನಮ್ಮ ನಾಗರೀಕತೆಯ ಹಾದಿಯಲ್ಲಿ ಈ ಎಲ್ಲಾ ಆಟಗಳು ಮನರಂಜನೆಗೆಂದು ಪ್ರಾರಂಭಗೊಂಡು ತಮ್ಮ ತಮ್ಮಲ್ಲಿಯೇ ಸ್ಪರ್ಧೆಗೆಂದು ಶುರುವಾಗಿ ಹೆಚ್ಚು ಮಜಾವನ್ನು ಮತ್ತು ಅದರಿಂದ ಸುಲಭವಾಗಿ ಅದೃಷ್ಟದಿಂದ ತಾವು ಹೆಚ್ಚು ಹೆಚ್ಚು ಸಂಪತ್ತನ್ನು ಗಳಿಸುವ ಆಟಗಳಾಗಿ ನಿಂತುಬಿಟ್ಟಿವೆ.


ಕೇವಲ ಮನರಂಜನೆ ಮತ್ತು ಸಮಯವನ್ನು ಕಳೆಯುವ ಆಟವಾಗಿದ್ದರೆ ನಾವುಗಳು ಇದರ ಬಗ್ಗೆ ಹೆಚ್ಚು ಗಮನ ಕೊಡುವ ಜರೂರತು ಇರಲಿಲ್ಲ. ಇದು ಇಂದು ಯಾವ ಮಟ್ಟಿಗ ಬೃಹದಾಕಾರವಾಗಿ ಬೆಳೆದಿದೆ ಎಂದರೆ ಈ ಒಂದು ರಂಗವೇ ಪ್ರತ್ಯೇಕವಾಗಿ ಸಮಾಜದಲ್ಲಿ, ಜನಗಳ ಮೇಲೆ ಮತ್ತು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಮಟ್ಟಿಗೆ ತಲೆ ನೋವಾಗಿ ಎಲ್ಲಾ ಬುದ್ಧಿ ಜೀವಿಗಳು, ಆಡಳಿತಗಾರರು ಇದನ್ನು ತಡೆಯಲು ಮತ್ತು ಕಡಿಮೆ ಮಾಡಲು ನಿರಂತರ ಪರಿಶ್ರಮಿಸುತ್ತಿದ್ದಾರೆ.


ಹಾಗೆಯೇ ಮನುಷ್ಯನ ಒಂದು ಶ್ರೇಷ್ಟ ಗುಣವೆಂದರೇ ಯಾವುದನ್ನು ನಾವು ತಡೆಯುತ್ತೇವೊ ಮತ್ತು ಯಾವುದರ ವಿರುದ್ಧ ಕಾನೂನು ಕಟ್ಟಳೆಗಳು ಇರುತ್ತವೊ ಅವುಗಳನ್ನು ಯಾವಾಗಲೂ ಮುರಿಯಲು ಅಥವಾ ಅತಿಕ್ರಮಿಸಲು ನಿರಂತರ ಉತ್ಸಾಹಿಯಾಗಿರುತ್ತಾನೆ.


ನಾವು ಯೋಚಿಸಬಹುದು ಯಾಕೆ ನಮ್ಮ ಸುತ್ತಲಿನ ನಮ್ಮವರೆಯಾದ ನಮ್ಮ ಜನಗಳಲ್ಲಿ ಕೆಲವರು ಮಹಾನ್ ಜೂಜುಕೊರರಾಗಿ ಬೆಳೆದಿದ್ದಾರೆ ಎಂದು. ಅದಕ್ಕೆ ಮುಖ್ಯವಾದ ಕಾರಣ ಯಾವುದು? ಯಾರು ಅವರನ್ನು ಈ ಒಂದು ಆಟಕ್ಕೆ ಪರಿಚಯಿಸುವರು? ಇದರಿಂದ ಅವರೂಗಳಿಗೆ ಯಾವ ರೀತಿಯ ಸಂತೋಷ ಮತ್ತು ಸಂಪತ್ತು ದೂರೆಯುತ್ತದೆ? ಯಾಕೆ ಅವರುಗಳು ಇದನ್ನೇ ತಮ್ಮ ಜೀವನದ ಒಂದು ಪ್ರಮುಖವಾದ ಭಾಗ ದುಡಿಮೆಯ ಬದುಕು ಎಂದು ಅದರಲ್ಲಿಯೇ ತೊಳಲಾಡುತ್ತಾರೆ?


ಹೀಗೆ ನಾನಾ ರೀತಿಯ ಪ್ರಶ್ನಾವಳಿಯ ಸರಮಾಲೆ ನಮ್ಮ ಮನದಲ್ಲಿ ಮೂಡದೇ ಇರಲಾರದು. ಇದರ ಬಗ್ಗೆ ನಮ್ಮ ಚಿಂತಕರು ಸಮಾಜ ಪರಿಣತರೂ, ಬುದ್ಧಿ ಜೀವಿಗಳು ನಾನ ರೀತಿಯ ತಮ್ಮ ಅಧ್ಯಯನದಿಂದ ಕಂಡುಕೊಂಡ ವಿಚಾರಗಳನ್ನು ನಮ್ಮ ಮುಂದೆ ಇಟ್ಟಿರುವವರು. ಇದನ್ನು ಯಾವ ರೀತಿಯಲ್ಲಿ ಅತ್ತಿಕ್ಕಬಹುದು ಎಂಬುದನ್ನು ತಿಳಿಸಿರುವರು. ಆದರೂ ಇದಂತೂ ಕಡಿಮೆಯಾಗುತ್ತಿಲ್ಲ.


ಈ ಆಟಗಳ ಪರಿಚಯ ನಮ್ಮ ಸುತ್ತಲಿನವರಿಂದ ನಮ್ಮ ನಡುವೆ ಜೀವಿಸುವವರಿಂದ ನಮ್ಮ ಕುಟುಂಬಗಳಲ್ಲಿಯೇ ಚಿಕ್ಕದಾಗಿ ನಮ್ಮ ತರುಣರಿಗೆ ಮೊದ ಮೊದಲೂ ಕೇವಲ ​ಮನರಂಜನೆಗೆ ಎಂದು ಕಲಿಯುತ್ತಾ, ತಾವು ಬೆಳೆದಂತೆ ತಾವು ಕಲಿತಿರುವ ಈ ಆಟಗಳಲ್ಲಿ ಚಿಕ್ಕ ಚಿಕ್ಕ ಮೊತ್ತದ ಹಣವನ್ನು ತೊಡಗಿಸುತ್ತಾ ಅದರಿಂದ ಗಳಿಸುತ್ತಾ ಹೆಚ್ಚು ಹೆಚ್ಚು ಗಳಿಸಬೇಕು ಎಂತಲೂ, ಚಿಕ್ಕ ಚಿಕ್ಕ ಮೊತ್ತವನ್ನು ಕಳೆದುಕೊಂಡು ಆ ಹಣವನ್ನು ಹಿಂಪಡೆಯಬೇಕೆಂತಲೂ ಪುನಃ ಪುನಃ ತಮ್ಮ ಚಿಕ್ಕ ಚಿಕ್ಕ ಮೊತ್ತವನ್ನು ಅದರಲ್ಲಿ ತೊಡಗಿಸುತ್ತಾ ಆ ಆಟದಲ್ಲಿ ತಮ್ಮನ್ನೇ ತಾವು ಮರೆಯುತ್ತಾ ತಮ್ಮ ಸುತ್ತ ಇರುವ ಜಗತ್ತನ್ನೇ ಮರೆತು ತಮ್ಮದೆಯಾದ ಜೂಜಾಟದ ಲೋಕವನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ.


ಇದು ಒಂದು ರೀತಿಯ ಕೆಟ್ಟ ಚಟದಂತೆ ಒಮ್ಮೆ ಕೇವಲ ರುಚಿಗೆ ಇಷ್ಟು ಅಂತ ಪ್ರಾರಂಭಿಸಿ ಅದನ್ನು ಬಿಟ್ಟಿಲಿರಾದಷ್ಟು ಅದಕ್ಕೆ ಗುಲಾಮರಾಗುತ್ತಾರೆ. ಅದರೆ ಇದು ಯಾವುದೇ ರೀತಿಯ ನಿಮ್ಮ ದುಡಿಮೆಯ ಅಥವಾ ನಿಮ್ಮ ಬುದ್ಧಿ ಪರೀಕ್ಷಿಸುವ ಕೆಲಸವಲ್ಲಾ. ಗೆಲ್ಲುವರೂ ಗೆಲ್ಲುತ್ತಿರುತ್ತಾರೆ ಸೋಲುವವರು ಸೋಲುತ್ತಿರುತ್ತಾರೆ. ಒಬ್ಬ ಗೆಲ್ಲುವ ಸಲುವಾಗಿ ಸಾವಿರಾರು ಮಂದಿ ತಮ್ಮ ಇಡೀ ಜೀವನವನ್ನು ಪಣವಾಗಿಟ್ಟು ಹೇಗೆ ಪಾಂಡವರು ತಮ್ಮದೆಲ್ಲವನ್ನು ಕಳೆದು ಕೊಂಡು ನಿಲ್ಲುತ್ತಾರೂ ಹಾಗೆ ಅವನನ್ನು ಅವಲಂಬಿಸಿರುವ ಇಡೀ ಸಂಸಾರ ದುಃಖದ ದಿನಗಳನ್ನು ಕಳೆಯಬೇಕಾಗುತ್ತದೆ.


ಯಾರೂ ಕೇವಲ ಜೂಜಾಟದಿಂದ ಗಳಿಸಿ ಉದ್ಧಾರವಾಗಿರುವ ಒಂದೇ ಒಂದು ಉದಾಹರಣೆ ನಮ್ಮ ಮುಂದೆ ಎಲ್ಲೂ ಸಿಗುವುದಿಲ್ಲ. ಬರೀ ಕಳೆದುಕೊಂಡವರ ದೂಡ್ಡ ಪಟ್ಟಿಯೇ ಸಿಗುತ್ತದೆ ಅಷ್ಟೇ.


ಅದಕ್ಕಾಗಿಯೇ ನಮ್ಮ ದೇಶದಲ್ಲಿ ಈ ರೀತಿಯ ಕೆಟ್ಟ ಪರಿಣಾಮ ಬೀರುವ ಎಲ್ಲಾ ಆಟಗಳು ಕಾನೂನು ಚೌಕಟ್ಟಿಗೆ ಒಳಪಡಿಸಿದ್ದಾರೆ. ಹಿಂದಿನ ದಿನಗಳಲ್ಲಿ ನಮ್ಮ ಜನಗಳು ಲಾಟರಿಯಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ನಾನ ರೀತಿಯ ಅನಾಹುತಗಳನ್ನು ಅನುಭವಿಸಿದ್ದರಿಂದ ನಮ್ಮ ಸರ್ಕಾರ ಅವುಗಳನ್ನು ನಿಷೇಧಿಸಿದೆ ಅಷ್ಟರ ಮಟ್ಟಿಗೆ ನಾವುಗಳು ನಿಟ್ಟುಸಿರು ಬಿಡಬಹುದು.


ಇಂದು ನಮ್ಮದು ಕಂಪ್ಯೂಟರ್ ಯುಗ. ಈ ಜೂಜಾಟಗಳು ಇಂಟರ್ ನೇಟ್ ಗೆ ದಾಳಿ ಇಟ್ಟು ಆನ್ ಲೈನ್ ಗ್ಯಾಂಬಲ್, ಗೇಮ್ ಗಳನ್ನು ನಾವು ಸಾಕಷ್ಟು ಕಾಣಬಹುದು. ಇಂದು ನಮ್ಮ ನಗರದ ಯುವಕರು ಈ ವಿಡಿಯೋ ಗೇಮ್ ಗಳನ್ನು ತುಂಬ ಖುಷಿಪಟ್ಟು ಅವುಗಳಿಲ್ಲದೇ ಬದುಕಲಾರರೇನೋ ಎಂಬರ ಮಟ್ಟಿಗೆ ಅವುಗಳಿಗೆ ಒಗ್ಗಿಬಿಟ್ಟಿದ್ದಾರೆ. ಅದರೆ ಯಾವುದೇ ರೀತಿಯ ಈ ರೀತಿಯ ಕೆಟ್ಟ ಜೂಜು ಆಟಗಳನ್ನು ಪ್ರದರ್ಶಿಸುವುದು ಕಾನೂನು ರೀತಿಯ ಆಪರಾಧ.


ನಮ್ಮ ಹತ್ತಿರದಲ್ಲಿರುವ ಸಾಕಷ್ಟು ಮಂದಿ ಇಂದಿಗೂ ಧಿಡೀರನೇ ಶ್ರೀಮಂತನಾಗುವ ಕನಸು ಕಂಡು ಕುದುರೆಯ ಬಾಲಕ್ಕೆ ತಮ್ಮದನ್ನೆಲ್ಲಾ ಸುರಿದು ತಾನು ಮತ್ತು ತನ್ನ ಇಡೀ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಅದರೂ ಈ ಕ್ರೀಡೆ ಇನ್ನೂ ಕಾನೂನು ಮತ್ತು ನಮ್ಮ ಜನಗಳ ಮುಂದೆ ನಿರಂತರವಾಗಿ ಸಾಗುತ್ತಲೇ ಇದೆ. ಶ್ರೀಮಂತರಿಗೆ ಇದೊಂದು ಖುಷಿಯ ಆಟವಾದರೆ ಬಡವರಿಗೆ ತಾನು ಸ್ವಲ್ಪವಾದರೂ ಬದುಕಲು ಬೇಕಾಗುವ ಸಂಪತ್ತಿನ ಆಸೆಯ ಕಿರಣ (ಕಂಟಕ)!


ಆದರೇ ನಮ್ಮ ಜನಗಳು ತಿಳಿದುಕೊಳ್ಳಬೇಕು ಕೆಲವು ಸಮಯದಲ್ಲಿ ನಾವುಗಳು ಕಷ್ಟ ಪಟ್ಟು ದುಡಿದ ನಮ್ಮ ಹಣವೇ ನಮಗೆ ದೂರೆಯಲಾರದು. ಇನ್ನು ಕೇವಲ ಅದೃಷ್ಟವೇ ದುಡಿಮೆಯ ಬೇವರಾಗಿ ಬಂದ ಸಂಪತ್ತು ಎಷ್ಟರ ಮಟ್ಟಿಗೆ ಗಟ್ಟಿಯಾಗಿ ನಿಲ್ಲುವುದು ಎಂಬುದು.


ಎಷ್ಟೇ ಬಿಗಿಯಾದ ಕಾನೂನು ಕಟ್ಟಳೆಗಳು ಇದ್ದರೂ ನಮ್ಮ ಜನ ತಮ್ಮ ಬುದ್ಧಿಯಿಂದ ಚಿಂತಿಸಿ ಯಾವುದೂ ಸರಿ ಯಾವುದು ತಪ್ಪು ಎಂದು ನಿರ್ಧರಿಸಿ ಕ್ಷಣಿಕ ಸುಖಕ್ಕಾಗಿ ಈ ರೀತಿಯ ಕೆಟ್ಟ ಚಾಳಿಗಳಿಗೆ ಬಲಿಯಾಗುವುದು ನಿಲ್ಲಬೇಕು. ನಿಜವಾಗಿಯೂ ಅವರುಗಳು ಯಾಕೆ ಇವುಗಳ ಹಿಂದೆ ಹೋಗುತ್ತಾರೆ ಎಂಬುದನ್ನು ತಿಳಿದವರೂ ತಿಳಿಸಬೇಕು ಅದರ ಬಗ್ಗೆ ಇನ್ನೂ ಹೆಚ್ಚು ಅಧ್ಯಯನದ ಅವಶ್ಯಕತೆ ಇದೆ.


ಮಂಗಳವಾರ, ಮೇ 18, 2010

ಖಾಸ್ ಬಾತ್



ನಾವುಗಳು ಬೇರೆಯವರ ಬಗ್ಗೆ ಯೋಚಿಸುವುದು ಹೆಚ್ಚು ಅಲ್ಲವಾ? ನಮ್ಮ ಬಗೆಗಿನ ವಿಷಯಕ್ಕಿಂತ ನಮ್ಮ ಜೊತೆಯವರಗಿನ ಬಗೆಗೆ ಹಲವಾರು ರೀತಿಯಲ್ಲಿ ಚಿಂತಿಸುತ್ತಿರುತ್ತೇವೆ. ಹಾಗೆಯೇ ಬೇರೆಯವರ ತಪ್ಪುಗಳನ್ನು ತಕ್ಷಣ ಕಂಡುಹಿಡಿದು ಬಿಟ್ಟು ಏನೋ ಸಾಧಿಸಿದವರಂತೆ ಪೋಸ್ ಕೊಡುತ್ತಿರುತ್ತೇವೆ.


ಅದರೆ ಸ್ವಲ್ಪ ನಮ್ಮನ್ನು ನಾವು ನೋಡಿಕೊಂಡರೆ ನಮ್ಮ ಅಂಗಳದಲ್ಲಿಯೇ ಕೋಟಿ ಕೊರತೆಗಳು ಕಾಣಿಸುತ್ತಿರುತ್ತವೆ. ಆದರೆ ಅದನ್ನು ನಾವುಗಳು ಎಂದೂ ಒಪ್ಪುವುದಿಲ್ಲ. ನಾನು ಮಾಡುವುದು ಎಲ್ಲಾ ಸರಿ ಎಂಬ ಮನೋಭಾವ ನಮ್ಮಲ್ಲಿ ಮನೆ ಮಾಡಿ ಕೊಂಡಿರುತ್ತದೆ.

ಇದು ಅವರ ಅವರ ಮನೋಧರ್ಮದಂತೆ ಎಲ್ಲಾರೂ ಎಲ್ಲರ ಬಗ್ಗೆ ಟೀಕೆ, ಸರಿ, ತಪ್ಪು, ಒಪ್ಪುಗಳನ್ನು ಮಾಡುತ್ತಾರೆ. ಅದಕ್ಕೆ ಇರಬೇಕು ನಾವುಗಳು ನಮ್ಮ ಬಗೆಗಿನ ನಮ್ಮ ಟೀಕೆ ಟಿಪ್ಪಣಿಗಳ ಉಸಾಬರಿಯನ್ನು ನಮ್ಮ ಜೊತೆ ಇರುವವರಿಗೆ ಕೊಟ್ಟು ನಾವುಗಳು ಬೇರೆಯವರನ್ನು ಟೀಕಿಸಲು ನಿರತರಾಗಿರುತ್ತೇವೆ.


ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ನಮಗೆ ಬೇರೆಯವರಿಂದ ನಮಗೆ ಆದ ಕಸಿವಿಸಿ ಸಂಧರ್ಭದಿಂದ ಮನದಟ್ಟಾಗುತ್ತದೆ. ಆ ವ್ಯಕ್ತಿಯ ಎದುರು ಮಾತನ್ನಾಡದೇ ಅವರ ಹಿಂದೆ ಮುಂದೆ ಅವನು/ಅವಳು ಹೀಗೆ ಹೀಗೆ ಎಂದು ಕಥೆ ಕಟ್ಟಿ ನಮ್ಮ ಸಮಯವನ್ನು ಹಾಳು ಮಾಡಿಕೊಂಡು ಖುಷಿಪಡುವ ಸುಖ ನಿಜವಾದ ಸುಖವೇ?


ಈ ರೀತಿಯ ಸಮಯ ಹರಣ ಕಾಡು ಹರಟೆಯನ್ನು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಮಾಡುವ ಕಾತುರತೆಯನ್ನು ನಾವುಗಳು ಸುಲಭವಾಗಿ ಗಳಿಸಿರುತ್ತೇವೆ.


ನಿಜವಾದ ಸ್ನೇಹಿತರು ನಾವುಗಳು ಎಂದು ಮಾತನ್ನಾಡಿಕೊಳ್ಳುತ್ತಿರುವ ಸಮಯದಲ್ಲೂ ನಮ್ಮ ಹತ್ತಿರದವರ ಬಗ್ಗೆ ಗೊತ್ತಿಲ್ಲದೆ ಕೇವಲವಾಗಿ ಮಾತನ್ನಾಡಿಕೊಂಡು ಅವರ ಮನಸ್ಸಿಗೆ ದಕ್ಕೆಯನ್ನು ತಂದಿರುತ್ತೇವೆ.


ಈ ಪ್ರಪಂಚದಲ್ಲಿ ಯಾರೂ ಸಹ ನೂರಕ್ಕೆ ನೂರು ಸತ್ಯವಂತರಲ್ಲ ಮತ್ತು ಆದರ್ಶ ಪುರುಷರೇನಲ್ಲ ಅಥವಾ ಕೂರತೆ ಇರದವರೇನೂ ಅಲ್ಲ. ಮತ್ತು ಎಲ್ಲರಲ್ಲೂ ಒಂದಲ್ಲ ಒಂದು ವೀಕ್ ನೆಸ್ ಇದ್ದೇ ಇರುತ್ತವೆ ಅವುಗಳನ್ನೇ ನಾವುಗಳು ದೂಡ್ಡದು ಮಾಡಿ ಹಾಡಬಾರದು.


ಗುಂಡಿಗೆ ಬಿದ್ದವನಿಗೆ ಹತ್ತು ಕಲ್ಲುಗಳು ಎಂಬಂತೆ ಕಷ್ಟ ನಷ್ಟದ ಸಮಯಕ್ಕೆ ಸಿಲುಕಿದವನ ಬದುಕು ಕಂಡು ಖುಷಿ ಪಡಬಾರದು. ಅಂಥವರ ಬಗ್ಗೆ ಕನಿಕರಗೂಂಡು ಕೈಲಾದ ಸಹಾಯ ಮಾಡುವ ಮನೋ ಅಭಿಲಾಷೆಯನ್ನು ನಾವುಗಳು ಹೊಂದಿರಬೇಕು.


ಈ ರೀತಿಯ ನಡವಳಿಕೆಯನ್ನು ನಾವುಗಳು ನಮ್ಮ ಹತ್ತಿರದವರ ಬಗ್ಗೆ ಹೆರಳವಾಗಿ ಕಟ್ಟಿ ಹಾಡುತ್ತಿರುತ್ತೇವೆ. ನಾವು ಕೆಲಸ ಮಾಡುವ ಜಾಗವಿರಬಹುದು, ನಾವು ವಾಸಿಸುವ ಮನೆಯ ಹತ್ತಿರವಿರಬಹುದು, ನಾವು ಓಡಾಡುವ ಹೊಣಿ ಇರಬಹುದು. ಇದಕ್ಕೆಲ್ಲಾ ಇತಿಶ್ರೀ ಇರಬೇಕು. ಅವರು/ಅವನು/ಅವಳು ಮಾಡಿದ ಯಾವುದೇ ಕಾರ್ಯ ಸಾಧನೆಗಳನ್ನು ಗಮನಿಸಿ ನಾವು ಅವರಂತೆ ಸಾಧಿಸುವ ಛಲವನ್ನು ತೊಡಬೇಕು. ಅವರೂ ಮಾಡುವ ತಪ್ಪುಗಳ ಎಣಿಕೆಯನ್ನು ಮಾಡುವುದೇ ನಿಮ್ಮ ಗುರಿಯಾಗಿರಬಾರದು.


ಬಹು ಮುಖ್ಯವಾದ ವಿಚಾರವೆಂದರೇ ನಮ್ಮ ಜೊತೆಯಲ್ಲಿ ಒಡನಾಡಿಗಳಾಗಿರುವ ಸ್ತ್ರೀಯರ/ಹಿರಿಯರ ಬಗ್ಗೆ ಯಾವಾಗಲೂ ಗೌರವದಿಂದ ಮಾತನ್ನಾಡಬೇಕು. ತಪ್ಪು ಮಾಡುತ್ತಿದ್ದಾರೆ ಎಂದು ಆ ಕಿವಿಯಿಂದ ಕೇಳಿ ಅದನ್ನೆ ಟಾಮ್ ಟಾಮ್ ಮಾಡಿ ಪ್ರಚಾರ ಮಾಡುವ ಪ್ರತಿನಿಧಿಗಳು ನಾವಾಗುವುದು ಬೇಡ.


ತುಂಬ ಹತ್ತಿರದ ಸ್ನೇಹಿತನಾಗಿದ್ದ ಪಕ್ಷದಲ್ಲಿ ನಮಗೆ ಅವರುಗಳು ಮಾಡುತ್ತಿರುವ, ಹೋಗುತ್ತಿರುವ ದಾರಿ ತಪ್ಪು ಎಂದು ತಿಳಿದರೇ ಅವರಿಗೆ ಮಾತ್ರ ನಿಮ್ಮ ಅಭಿಪ್ರಾಯವನ್ನು ತಿಳಿಯಪಡಿಸುವುದು ಉತ್ತಮ. ಅದು ಬಿಟ್ಟು ನಿಮ್ಮ ಅಭಿಪ್ರಾಯಗಳನ್ನು ಎಲ್ಲಾರ ಮುಂದೆ ಇಡುವುದು ಸರಿಯಾದ ದಾರಿಯಲ್ಲ.


ಉತ್ತಮ ಗೆಳೆತನದ ಕುರುಹು ಎಂದರೆ ಉತ್ತಮ ಸಂಬಂಧವನ್ನು ಪ್ರತಿಯೊಬ್ಬರ ಜೊತೆ ಹೊಂದಿರುವುದು. ಒಂದು ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಈ ರೀತಿಯ ಚಿಕ್ಕ ಚಿಕ್ಕ ಸಂಬಂಧಗಳ ಪಾತ್ರ ಬಹು ಮುಖ್ಯವಾಗಿರುತ್ತದೆ. ಸಂಬಂಧಗಳನ್ನು ಅಭಿವೃದ್ಧಿ ಪಡಿಸುವುದು ಉತ್ತಮ ಉತ್ತಮ ವಿಚಾರಗಳ ಪರಸ್ಪರ ವಿನಿಮಯದಿಂದ. ಯಾರು ಸಹ ಯಾರ ಬಗ್ಗೆಯೂ ಸಹ ಕೆವಲವಾಗಿ ಯೋಚಿಸುವುದರ ಮೂಲಕವಲ್ಲಾ.


ನಂಬಿಕೆ ಪ್ರತಿಯೊಬ್ಬ ಮನುಷ್ಯನಲ್ಲೂ ಇರಬೇಕು, ಅದಷ್ಟು ಹೆಚ್ಚು ನಮ್ಮ ಹತ್ತಿರ ಇರುವವರ ಬಗ್ಗೆ ಇರಲಿ.


-ತಿಪುಟಪ್ರಿಯ

ಮಂಗಳವಾರ, ಮೇ 11, 2010

ಅಮ್ಮ ನಿನ್ನ ತೋಳಿನಲ್ಲಿ






ಇಂದು ವಿಶ್ವ ಪುಟ್ಟ ಊರಾಗಿದೆ. ಯಾವುದೇ ಒಂದು ಭಾಗದಲ್ಲಿ ಜರುಗುವ ಯಾವುದೇ ಒಂದು ಸಂಭ್ರಮ, ಸಂಸ್ಕೃತಿಯ ಆಚರಣೆಗಳನ್ನು ಎಲ್ಲಾ ಭಾಗದ ಜನರು ತಮ್ಮದೇಯಾದ ಆಚರಣೆಯೇನೋ ಎನ್ನುವ ರೀತಿ ಆಚರಿಸುತ್ತಾರೆ. ಇದರಿಂದ ಎಲ್ಲಾ ಗಡಿಗಳನ್ನು ನಮ್ಮ ನಮ್ಮ ಮನಗಳಲ್ಲಿ ಅಳಿಸಲಾರಂಬಿಸಲಾಗಿದೆ. ಇದು ಒಂದು ಉತ್ತಮ ಬೆಳವಣಿಗೆ "ವಿಶ್ವ ಬ್ರಾತೃತ್ವಕ್ಕೆ".

ಹೀಗೆ ನಾವುಗಳು ಆಚರಿಸುವ ನಮ್ಮ ಹಬ್ಬಗಳನ್ನು ನ್ಯೊಯಾರ್ಕನಲ್ಲಿರುವ ಅಮೇರಿಕನ್ ಜನಗಳು ಪಟಾಕಿಗಳನ್ನು ಸಿಡಿಸುತ್ತಾ ನಮ್ಮ ದೀಪಾವಳಿಯನ್ನು ಸಂತೋಷದಿಂದ ಆಚರಿಸಿ ವಿಶ್ವ ಕುಟುಂಬಂ ಎನ್ನುತ್ತಾರೆ. ಹಾಗೆಯೇ ನಮ್ಮ ಜನಗಳು ಅವರುಗಳು ಆಚರಿಸುವ ಯಾವುದೇ ಹಬ್ಬಗಳಾದ ವ್ಯಾಲೆಂಟೆನ್ಸ್ ಡೇ, ಪಾದರ್ ಡೇ, ಮದರ್ ಡೇ, ಪ್ರೆಂಡ್ಸ್ ಡೇ ಹೀಗೆ ಸಾಲು ಸಾಲು ಹಬ್ಬಗಳನ್ನು ನಮ್ಮದೇ ಹಬ್ಬಗಳೇನೋ ಎಂಬ ರೀತಿ ಬೆಂಗಳೂರಿನ ಮಂದಿ ಆಚರಿಸಿ ಸಂಭ್ರಮಿಸುತ್ತಾರೆ.

ಆದರೆ ಈ ರೀತಿಯ ಪಾದರ್ ಡೇ, ಮದರ್ ಡೇ ಹಬ್ಬಗಳನ್ನು ನಮ್ಮ ಹಿರಿಯರ ಮುಂದಿಟ್ಟರೇ ಅಶ್ಚರ್ಯಪಡಬಹುದು. ಇದೇನೂ ತಂದೆ ತಾಯಿಯರಿಗೂ ಒಂದು ದಿನ ಮತ್ತು ಒಂದು ಹಬ್ಬ. ಹೌದು, ಇದು ಸ್ವಲ್ಪ ವಿಚಿತ್ರವಾಗಿ ಕಾಣಿಸಬಹುದು. ಅದರೆ ಇದು ಅಲ್ಲಿನ ಅವರ ಸಂಸ್ಕೃತಿಗೆ ತುಂಬ ಸೂಕ್ತವಾದ ಮತ್ತು ಸಂಭ್ರಮದ ತಂದೆ- ತಾಯಿಯರನ್ನು ನೆನಪಿಸಿಕೊಳ್ಳುವ ದಿನ. ಇದು ಅವರಿಗೆ ಅಗತ್ಯವಾಗಿ ಬೇಕಾದ ದಿನ ಮತ್ತು ಆಚರಣೆ.

ಅಲ್ಲಿ ತಮ್ಮ ಚಿಕ್ಕ ವಯಸ್ಸಿನಿಂದಲೇ ಮಕ್ಕಳು ತಮ್ಮ ತಾಯಿಂದಿರಿಂದ ಬೇರೆಯಾಗಿ ಸ್ವತಂತ್ರವಾಗಿ ಜೀವಿಸಬೇಕಾಗುತ್ತದೆ. ಅದ್ದರಿಂದ ಅವರು ದಿನಂಪ್ರತಿ ಹೇಗೆ ಇಲ್ಲಿ ನಮ್ಮ ಜೀವನದಲ್ಲಿ ನಮ್ಮ ತಂದೆ ತಾಯಿಗಳ ಜೊತೆ ಒಂದೇ ಸೂರಿನಡಿಯಲ್ಲಿ ಬದುಕುತ್ತೇವೂ ಆ ರೀತಿಯ ಜೀವನ ಅಲ್ಲಿಯ ಜನರಿಗೆ ಕಲ್ಪನೆಗೂ ನಿಲುಕದು.

ಅದ್ದರಿಂದ ನಮ್ಮ ಕೆಲ ಜನಗಳಿಗೆ ವಿಚಿತ್ರವಾದ ಹಬ್ಬವಾಗಿ ಕಾಣಬಹುದು. ಅದರೂ ಇಲ್ಲಿ ನಮ್ಮ ಮಂದಿ ಇತ್ತೀಚೆಗೆ ಈ ಹಬ್ಬಗಳನ್ನು ಆಚರಿಸುವುದು. ಹಾಗೆಯೇ ನಮ್ಮ ಮಾದ್ಯಮಗಳಲ್ಲಿ ಇವುಗಳಿಗೆ ಹೊಸ ಹೊಸ ರೀತಿಯ ಪ್ರಚಾರ ಕೊಡುತ್ತಿರುವುದು ಮಾಮೊಲಾಗಿದೆ.

ಅದರೇ ನಮ್ಮ ಔದ್ಯೋಗಿಕರಣ ಮತ್ತು ನಮ್ಮ ಈ ಯಾಂತ್ರಿಕ ಜೀವನದ ದಿನ ಮಾನಗಳಲ್ಲಿ ನಾವುಗಳು ಸಹ ನಮ್ಮ ಹೆತ್ತವರನ್ನು ಕಡೆಗಣಿಸುತ್ತಿರುವುದು ಸರ್ವ ಸಾಮಾನ್ಯವಾಗಿದೆ. ಪಾಶ್ಚಾತ್ಯ ಜನರು ಆಟ್ ಲೀಸ್ಟ್ ಒಂದು ದಿನವಾದರೂ ತಮ್ಮ ಹೆತ್ತವರನ್ನು ಪ್ರೀತಿಯಿಂದ ಒಡಗೂಡಿ ತಮ್ಮ ಪ್ರೀತಿಯ ಕಾಣಿಕೆ ಮತ್ತು ಅವರನ್ನು ಖುಷಿಪಡಿಸುವುದು ಮೆಚ್ಚುವಂತಹ ಆಚರಣೆ. ಆದರೆ ಇಲ್ಲಿ ನಮ್ಮ ಹೆತ್ತವರನ್ನು ನಾವುಗಳು ಅವರ ಜೊತೆಯಲ್ಲಿಯೆ ಇದ್ದು ಅವರನ್ನು ಕೆವಲವಾಗಿ ಕೆಲಸಕ್ಕೆ ಬಾರದವರಂತೆ ದಿನ ನಿತ್ಯ ನಡೆಸಿಕೊಳ್ಳುವುದು ತಲೆ ತಗ್ಗಿಸಬೇಕಾದ ವಿಚಾರ.

ಎಲ್ಲಾರೂ ಒಂದಲ್ಲ ಒಂದು ದಿನ ಆ ರೀತಿಯ ಪಾತ್ರವನ್ನು ತಮ್ಮ ಜೀವನದಲ್ಲಿ ನಿರ್ವಹಿಸುವುದು ಕಟು ಸತ್ಯ. ಅದರೂ ತಮ್ಮ ಆಸೆಯ ದೂರ ಪಯಣದಲ್ಲಿ, ತಮಗಾಗಿ ತಮ್ಮ ಮಕ್ಕಳ ಏಳ್ಗೆಗಾಗಿ ಕನಸನ್ನು ಕಟ್ಟಿ ಕೊಂಡು ಕಡೆಗಾಲದಲ್ಲಿ ತಮ್ಮ ಕೈ ಅಸರೆಯಾಗುತ್ತಾರೆ ಎಂಬ ಬಹು ರಂಗಿನ ಆಸೆಯ ಕನಸುಗಳನ್ನು ನಾವುಗಳು ಕಾಲು ಕಸವಾಗಿ ಮಾಡುತ್ತೇವೆ. ಪಾಪ!

ನಮ್ಮದು ಮಾತೃ ಸಂಸ್ಕೃತಿ ಹೆತ್ತವರಿಗೆ ತುಂಬ ಮಿಗಿಲಾದ ಸ್ಥಾನವನ್ನು ನಾವುಗಳು ನೀಡಿದ್ದೇವೆ. ಅವರೂಟ್ಟಿಗೆ ಇದ್ದು ಅವರನ್ನು ಸಾಕುತ್ತಾ ನಮ್ಮ ಬದುಕನ್ನು ಕಟ್ಟಿಕೊಳ್ಳುವುದು, ಮತ್ತು ಅವರ ಅನುಭವದ ನೀತಿ ಪಾಠಗಳು ನಮ್ಮ ಕಿರಿಯರಿಗೆ ದಾರಿ ದೀಪ ಮಾಡಿಕೊಡುವಲ್ಲಿ ನಮ್ಮ ಹಿರಿಯರ ಕೊಡುಗೆ ದೂಡ್ಡದು.

ಆದ್ದರಿಂದ ಈ ಹಬ್ಬಗಳು ಕೇವಲ ಒಂದೇ ಒಂದು ದಿನ ಅವರನ್ನು ನೆನೆಯುವುದಲ್ಲಾ. ದಿನ ನಿತ್ಯ ಅವರನ್ನು ನಾವುಗಳು ಪ್ರತ್ಯಕ್ಷ ದೇವರೆ ಸರಿ ಎನ್ನುವಂತೆ ಗೌರವದಿಂದ ಕಾಣಬೇಕಾದಾದ್ದೂ ನಮ್ಮ ಜವಬ್ದಾರಿಯೇ ಸರಿ. ಅವರ ಬೇಕು ಬೇಡಗಳನು ಕೇಳುವುದು ಮತ್ತು ನಮ್ಮ ಅಮೊಲ್ಯವಾದ ಸಮಯಗಳನ್ನು ಅವರ ಜೋಡಿ ಕಳೆಯುವುದು ಅಗತ್ಯ. ತಮ್ಮ ಮುಪ್ಪಿನ ಕಾಲದಲ್ಲಿ ನಾವುಗಳು ಒಬ್ಬಂಟಿ ಎಂಬ ಭಾವನೆ ಅವರಲ್ಲಿ ಬರಬಾರದು ಮತ್ತು ತಮ್ಮ ಕಡೆಗಾಲದ ಜೀವನದ ಕನಸು ವೃದ್ಧಾಶ್ರಮದಲ್ಲಿ ಕಾಣುವಂತಾಗಬಾರದು.

ಆದರೆ ನಮ್ಮ ಈ ಪಟ್ಟಣ ಸಂಸ್ಕೃತಿ ನಮ್ಮ ಜೀವನದ ಶೈಲಿಯನ್ನೇ ಬದಲಿಸಿ ಕೇವಲ ತಾನಾಯಿತು ತನ್ನ ಮಕ್ಕಳಾಯಿತು ಎನ್ನುವಂತಾಗಿದೆ. ಅವರನ್ನು ಬಿಟ್ಟು ಬೇರೆಯವರೂ ಒಬ್ಬರೂ ಸಹ ಹೆಚ್ಚದರೂ ತಳಮಳ ಮತ್ತು ಏನೋ ಒಂದು ರೀತಿಯ ಕಸಿವಿಸಿಯನ್ನು ಅನುಭವಿಸಿ ಮನೆ ಮಂದಿಯೆಲ್ಲಾ ಚಿಂತಿಸುವುದು. ಮುದುಕರು-ಅಶಕ್ತರೂ ನಮ್ಮ ಅಭಿವೃದ್ಧಿಗೆ ಆಡಚಣೆ ಎಂಬ ದೋರಣೆ ನಿಜವಾಗಿಯೂ ಸ್ವಲ್ಪ ನಮ್ಮನ್ನು ನಾವುಗಳು ನಮ್ಮ ಯೋಚನೆಯ ದಾಟಿಯನ್ನು ಪರಮರ್ಶಿಸುವ ಸುಸಮಯ ಇದಾಗಿದೆ.

ಕೌಟಂಬಿಕ ಸಂಬಂಧಗಳ ಪುನರ್ ನವೀಕರಣ ಮಾಡುವ ಸುಸಮಯ ಇದಾಗಿದೆ. ನಮ್ಮ ಶ್ರೀಮಂತ ಭಾರತೀಯ ಸಂಸ್ಕೃತಿಗೆ ಕೊಡಲಿ ಪೆಟ್ಟು ಇದಾಗುವುದು ಬೇಡ. ಮತ್ತು ಇಂದಿನ ಈ ವಿಭಕ್ತ ಕುಟುಂಬಗಳ ಮಧ್ಯೆ ಅದು ಕಳೆದು ಹೋಗದಿರಲಿ ಎಂದು ಆಶಿಸೋಣ.








ಮಾತೃ ದೇವೋಭವ!

ಮಂಗಳವಾರ, ಮೇ 4, 2010

ದುಶ್ಚಟ


ನನ್ನ ಸ್ನೇಹಿತ ಹೇಳುತ್ತಿದ್ದ "ಈ ಚಟವನ್ನು ನಾನು ಬಿಡಬೇಕು ಗುರು, ನನಗೋ ಗೊತ್ತಿದೆ ಇದರಿಂದ ನನಗೆ ಹೇಗೆ ಎಷ್ಟು ರೀತಿಯಲ್ಲಿ ನಷ್ಟ ಮತ್ತು ನನ್ನ ಆರೋಗ್ಯ ಸಮಸ್ಯೆ ಮತ್ತು ಸುತ್ತ ಮುತ್ತಲಿನವರಿಂದ ಆಕ್ಷೇಪಣೆ ಕೇಳುತ್ತಿದ್ದೇನೆ."

ಹೌದು ಈ ರೀತಿಯ ಮಾತುಗಳನ್ನು ನಾವು ಹಲವಾರು ಬಾರಿ ಹಲವರಿಂದ ಸಾಧಾರಣವಾಗಿ ಕೇಳುತ್ತಿರುತ್ತೇವೆ. ಹಾಗೆಯೇ ಈ ದುಶ್ಚಟಗಳನ್ನು ತಿಳಿದೊ ತಿಳಿಯದೇ ತಮ್ಮ ಜೀವನದ ಒಂದು ಅಂಗವಾಗಿ ಇಟ್ಟು ಕೊಂಡಿರುವವರು ನಮ್ಮ ನಿಮ್ಮಲ್ಲಿ ಹೇರಳವಾಗಿ
ಸಿಗುತ್ತಾರೆ.

ನಮ್ಮ ಹರೆಯದ ದಿನಗಳು ಎಂದರೆ ಕಾಲೇಜು ರಂಗದ ಸಮಯ. ಹೈಸ್ಕೂಲ್ ನ ಬಿಗಿಯಾದ ಕಟ್ಟು ನಿಟ್ಟಿನ ಕಣ್ಣುಗಾವಲುಗಳಾದ ಗುರುಗಳು - ಮಾತಾ ಪಿತೃಗಳಿಂದ ಸ್ವಲ್ಪ ದೂರವಾಗಿ ಕಾಲೇಜು ಮೆಟ್ಟಿಲು ಹತ್ತುವ ಸಮಯದಲ್ಲಿ, ಮೈಯಲ್ಲಿನ ಹೊಸ ರಕ್ತದಿಂದ ತುಂಬಿ ತುಳುಕುವ ಹೊಸತನವನ್ನು ಅನುಭವಿಸುವ ಭರದಲ್ಲಿ, ಒಂದೇ ಒಂದು ಬಾರಿ ಈ ರೀತಿಯ ನಾನಾ ದುಶ್ಚಟಗಳಿಗೆ ಮಾರು ಹೋಗುತ್ತಾರೆ.

ಸುಮ್ಮನೆ ಟೆಸ್ಟ್, ಒಂದು ರುಚಿ ನೋಡುವಾ ಹೇಗಿರುತ್ತದೆ! ಎಂಬ ನಾನಾ ಕಾರಣಗಳಿಗೆ ಒಮ್ಮೆ ಅದರ ಮಡಿಲೂಳಗೆ ಬಿದ್ದ ಮೇಲೆ ಮುಗಿಯಿತು ಅದು ಅವರನ್ನು ಕಡೆಯವರಿಗೂ ತನ್ನ ಮುಷ್ಠಿಯಲ್ಲಿ ಜಾರದಂತೆ ಆಧರಿಸಿ ತನ್ನ ವಶ ಮಾಡಿಕೊಳ್ಳುವುದು.

ಹೌದು! ಆ ಹರೆಯದಲ್ಲಿ ಕಲಿತ ಯಾವುದೇ ಒಂದು ಅಭ್ಯಾಸ ನಮ್ಮ ಮುಂದಿನ ಜೀವನದ ಗತಿಯನ್ನೇ ಬದಲಿಸಬಲ್ಲದು. ಆ ಅಭ್ಯಾಸ ಒಳ್ಳೆಯದಾಗಿರಲಿ- ಕೆಟ್ಟದಾಗಿರಲಿ.

ನಮ್ಮ ಮನಸ್ಸು ಹಾಗೆಯೇ ಯಾವುದನ್ನು ನಾವು ಮೂದಲ ಬಾರಿ ಅನುಭವಿಸುವೆವು ಅದನ್ನೇ ಪುನಃ ಪುನಃ ಅನುಭವಿಸಬೇಕು ಎಂಬ ಚಪಲಾ! ಅದರಲ್ಲೂ ಕದ್ದು ಅನುಭವಿಸಿದ ಅನುಭವಗಳನ್ನು ಸಾಕಷ್ಟು ಬೇಗ ವಿವಿಧ ರೀತಿಯಲ್ಲಿ ಪಡೆಯಲು ಪ್ರಯತ್ನಿಸುತ್ತಿರುತ್ತದೆ.

ಮನೆಯ ಹಿರಿಯರು ಸಹ ಆ ಸಮಯದಲ್ಲಿ ತಮ್ಮ ಮಕ್ಕಳ ಮೇಲೆ ಹೆಚ್ಚು ಕಣ್ಣು ಹರಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೇ ಅವರು ನಮ್ಮ ಮಕ್ಕಳು ಕಾಲೇಜು ಮೆಟ್ಟಿಲು ತುಳಿದಿದ್ದಾರೆ ಜೀವನದ ಪ್ರಮುಖ ಘಟ್ಟವನ್ನು ತಲುಪಿದ್ದಾರೆ ಇನ್ನೇನು ಅವರ ಜವಾಬ್ದಾರಿಯನ್ನು ಅವರು ಅರಿತು ನಡೆಯುತ್ತಾರೆ ಎಂದು ಕೊಳ್ಳುತ್ತಾರೆ. ಆದರೆ ಅ ಕನಸನ್ನು ಹುಸಿ ಮಾಡುವಲ್ಲಿ ನಮ್ಮ ಯುವ ಪೀಳಿಗೆ ಸಫಲವಾಗುತ್ತದೆ.

ನಾನು, ಮೇಲೆ ಹೇಳಿದ ಎಲ್ಲಾ ವಿವರ ಎಲ್ಲರಲ್ಲೂ ಘಟಿಸುವುದಿಲ್ಲ. ಅದು ಅವರ ನೆರೆ ಹೂರೆ, ತನ್ನ ಜೊತೆಗಾರರಿಂದ ದೂರಕುತ್ತದೆ.

ಪ್ರಪ್ರಥಮವಾಗಿ ಅದರ ರುಚಿಯನ್ನು ದಯಪಾಲಿಸಿದ ಗೆಳೆಯ ಮುಂದೆಂದೂ ಅವರ ಜೊತೆಯಲ್ಲಿರುವುದಿಲ್ಲ. ಆದರೆ ಈ ಕೆಟ್ಟ ಅಭ್ಯಾಸಗಳಿಗೆ ಬಲಿಯಾದ ಯಾವುದೇ ವ್ಯಕ್ತಿ ತನ್ನ ಜೀವನ ಪರ್ಯಂತ ಯಾರು ಯಾವಾಗ ಈ ಚಟದ ದೀಕ್ಷೆಯನ್ನು ನೀಡಿರುತ್ತಾರೆ ಎಂಬುದನ್ನು ಪುನಃ ಪುನಃ ಮೆಲುಕು ಹಾಕುತ್ತಿರುತ್ತಾರೆ.

ಈ ಚಟವನ್ನು ಬೃಹದಾಕಾರವಾಗಿ ಮಾಡಿಕೊಂಡು ಅದರ ಬಗ್ಗೆ ಪಶ್ಚತಾಪ ಪಡುವ ಬದಲು ಸ್ಪಲ್ಪ ಯೋಚನೆಯನ್ನು "ಮೂದಲ ಬಾರಿಗೆ ದಂತ ಭಗ್ನವಾಗುವ" ಸಮಯದಲ್ಲಿ ವಿವೇಚಿಸಿದರೇ ಹೆಚ್ಚು ಅರ್ಥ ಪೂರ್ಣ.

ಕ್ಷಣಿಕ ಸುಖ, ಮೋಜಿಗಾಗಿ ಪ್ರಾರಂಭಿಸಿ ತಮ್ಮ ಆರೋಗ್ಯ ಮತ್ತು ತನ್ನನ್ನು ನಂಬಿರುವ ತನ್ನವರ ಜೀವನವನ್ನು ಕಣ್ಣೀರಿನಲ್ಲಿ ಕೈ ತೋಳೆಯುವುದನ್ನು ನೋಡಬೇಕಾಗುತ್ತದೆ. ಈ ಸಮಸ್ಯೆಯ ಸರಪಳಿಯ ಅಂತ್ಯಕ್ಕೆ, ಕ್ಷಣಿಕ ಮರೆವೆಗಾಗಿ ಹೆಚ್ಚು ಹೆಚ್ಚು ಸಿಗರೇಟು, ಕುಡಿಯುವುದು, ಡ್ರಗ್ಸ್ ಸೇವಿಸುವುದು ಎಂದು ಮುಗಿಯದ ಕತೆಯಾಗುತ್ತದೆ.

ಮುಂದೆ ವ್ಯಕ್ತಿ ಇದೇ ಚಟಗಳಿರುವ ವ್ಯಕ್ತಿಗಳ ಸಂಗವನ್ನು ಮಾಡಬೇಕಾಗುತ್ತದೆ. ಮತ್ತು ಅವರಿಂದ ಅವರ ನೇಗೆಟಿವ್ ಐಡಿಯ್ಸಾ ಮತ್ತು ಸಲಹೆ, ಉತ್ತೇಜಕ ಮಾತುಗಳಿಂದ ತಾನು ಮಾಡುತ್ತಿರುವುದು ನೂರಕ್ಕೆ ನೂರು ಸರಿಯೆಂಬ ನಿರ್ಧಾರಕ್ಕೆ ಬಂದು ತನ್ನ ಮನೋಶಕ್ತಿಯಿಂದ ಇನ್ನೂ ಹೆಚ್ಚು ಹೆಚ್ಚು ಅದರಲ್ಲಿ ಮುಳುಗುವ ಸಮಯ ಬರುತ್ತದೆ.

ಜೀವನದ ಅತಿ ಅಮೂಲ್ಯ ಕ್ಷಣಗಳನ್ನು ತನ್ನ ಕುಟುಂಬ ಮತ್ತು ತನ್ನ ಬಂಧು ಬಾಂಧವರ ಜೊತೆ ಕಳೆಯುವ ಗಳಿಗೆಗಳನ್ನು ಈ ರೀತಿಯ ಕೀಳು ಚಟಗಳ ಹೀಡೆರಿಕೆಗೆ ವಿನಿಯೋಗಿಸಬೇಕಾಗುತ್ತದೆ. ಇದರಿಂದ ವ್ಯಕ್ತಿ ವ್ಯಕ್ತಿಗಳ ಸಂಬಂಧಗಳು ಸಡಿಲವಾಗಿ ಅಶಾಂತಿಯ ಮೂಡ ಕವಿಯಲಾರಂಬಿಸಿ ಮನಸ್ಸಿನ ಉತ್ಸಹದ ಚಿಲುಮೆ ಮರೆಯಾಗಿ ನಿರಂತರ ಮನೋ ದೌರ್ಬಲ್ಯವುಂಟಾಗಿ ಹಲವು ಕಾಯಿಲೆಗಳಿಗೆ ಧಾರಿ ಮಾಡಿ ಕೊಟ್ಟಂತಾಗುತ್ತದೆ.

ಇಂದಿನ ತಾಂತ್ರಿಕ ಯುಗದಲ್ಲಿ ಕೇವಲ ದೂಮಪಾನ, ಮಧ್ಯಪಾನ, ಡ್ರಗ್ಸ್ ಚಟಗಳೇ ಅಲ್ಲದೇ, ಹಲವಾರು ರೀತಿಯ ವಿವಿಧ ಸಮಯ, ಆರೋಗ್ಯ ಹಾಳು ಮಾಡುವ ಚಟಗಳನ್ನು ಕಂಡು ಕೊಳ್ಳುತ್ತಿರುವ ನಮ್ಮ ಯುವ ಪೀಳಿಗೆ ಸ್ವಾಸ್ಥ್ಯ ಸಮಾಜದ ಬೀಕರ ಬಿರುಕು. ಇದು ಸ್ವಲ್ಪವಾದರೂ ತಗ್ಗಬೇಕು ಅಗಲೇ ಸುಖಿ ಸಮಾಜವಾಗಿ ಉಳಿಯಲು ಸಾಧ್ಯ.

-ತಿಪುಟಪ್ರಿಯ

ಸೋಮವಾರ, ಏಪ್ರಿಲ್ 26, 2010

ಇದು ಸಹಜ



ಜೀವನದಲ್ಲಿ ಯಾವುದು ನಾವು ಅಂದುಕೊಂಡಂತೆ ಆಗುವುದಿಲ್ಲ. ಎಲ್ಲಾ ನಮಗೆ ತಿಳಿಯದ ರೀತಿಯಲ್ಲಿ ಚಿಕ್ಕ ಕ್ಷಣದಲ್ಲಿ ಕಿರು ಅಚ್ಚರಿಯ ನಡುವೆ ನಡೆದು ಹೋಗುತ್ತವೆ. ನಾವುಗಳು ನಮಗೆ ಎಲ್ಲಾ ಗೊತ್ತಿದೆ ಎಂಬ ದೊರಣೆಯಿಂದ ಖುಷಿಯಲ್ಲಿ ವಿರಮಿಸುವೆವು. ಆದರೆ ಅದು ಯಾವುದೊ ದಿಕ್ಕಿನಲ್ಲಿ ಯಾವುದೊ ಆಸೆಯಿಂದ ಬೇರೊಂದು ದಡವನ್ನು ಸೇರುತ್ತದೆ. ಅದೆಯಲ್ಲವೇ ಕಥೆಯಲ್ಲ ಜೀವನ!


ನಮಗೆ ಅತ್ಮೀಯವರಾದವರೂ ಸಹ ನಮಗೆ ಅವರು ಗೊತ್ತು ಬಿಡು, ಅವರು ನಮಗೆ ತಿಳಿಯದಂತೆ ಏನೊಂದು ಕಾರ್ಯವನ್ನು ಮಾಡುವುದಿಲ್ಲ. ಹಾಗೇ ಮಾಡಬೇಕಾದರೂ ಅವರು ನಮಗೆ ತಿಳಿಸಿಯೇ ಮಾಡುವವರು ಎಂದು ನಮ್ಮಲ್ಲಿಯೇ ಆಶಾ ಸೌಧವನ್ನು ಕಟ್ಟಿಕೊಂಡು ಬಿಟ್ಟಿರುತ್ತೇವೆ.


ನಮ್ಮ ನಮ್ಮ ಮನಸ್ಸಿನಲ್ಲಿ ನಾವುಗಳು ಈ ರೀತಿ ನಮ್ಮ ಹತ್ತಿರದವರ ಬಗ್ಗೆ ಹಲವಾರು ರೀತಿಯಲ್ಲಿ ಸುಳ್ಳಿನ ಭ್ರಮೆಯನ್ನು ಕಟ್ಟಿಕೊಂಡು ಅವರು ನಮ್ಮ ಕಣ್ಣಳತೆಯಲ್ಲಿ ಇದ್ದಾರೆ ಎಂದು ಮೈಮರೆತು ಸುಖಪಡುತ್ತೇವೆ. ಅದರೆ ನಮಗೆ ತಿಳಿಯದ ರೀತಿಯಲ್ಲಿ ಅವರು ಅವರ ಯೋಚನೆಯಲ್ಲಿ ಒಂದು ಶಾಕ್ ಕೊಟ್ಟಾಗ, ಅವರು ಎಷ್ಟರ ಮಟ್ಟಿಗೆ ನಮ್ಮ ಕಣ್ಣಳತೆಯಲ್ಲಿ ಇದ್ದಾರೆ ಎಂಬುದು ತಿಳಿಯುವುದು.


ಇದು ನಮ್ಮ ನಮ್ಮ ಕುಟುಂಬದಲ್ಲಿ ನಮ್ಮವರೆಯಾದ ನಮ್ಮ ಮಕ್ಕಳು, ಅಕ್ಕ - ತಂಗಿಯರು, ಅಣ್ಣ - ತಮ್ಮಂದಿರೂ, ತಂದೆ-ತಾಯಿಯಂದಿರೂ, ಹತ್ತಿರದವರಿಂದೊಡಗೊಡಿ ನಮ್ಮ ಸ್ನೇಹಿತರವರಿಗೆ ನಾವುಗಳು ನಮ್ಮ ನಮ್ಮಲ್ಲಿಯೇ ಕಲ್ಪಿಸಿಕೊಂಡು ಸಂಭ್ರಮಿಸಿಕೊಂಡು, ನೋಡು ಎಲ್ಲಾರೂ ಹೇಗೆ ಎಷ್ಟೋಂದು ನಮಗೆ ಅತ್ಮೀಯರಾಗಿದ್ದರೆ ಎಂದು ಸಡಗರಪಡುತ್ತೇವೆ.


ಆದರೆ ಹೇಗೆ ನಮ್ಮ ಐದು ಬೆರಳುಗಳು ಒಂದೇಯಾಗಿರುವುದಿಲ್ಲವೂ ಹಾಗೆಯೇ ನಮಗೆ ಗೊತ್ತಿರುವ ಎಲ್ಲಾ ಹತ್ತಿರದವರ ಭಾವನೆ, ಚಿಂತನೆ, ಆಸೆ, ನಿರಾಸೆಗಳು ಒಂದೇಯಾಗಿರುವುದಿಲ್ಲ. ಅವುಗಳು ವಿಭಿನ್ನ ರೀತಿಯಲ್ಲಿ ಅವುಗಳದೇಯಾದ ದಾರಿಯಲ್ಲಿ ತಮ್ಮ ತಮ್ಮ ಕನಸುಗಳನ್ನು ಭರವಸೆಗಳನ್ನು ಆಕಾಂಕ್ಷೆಗಳನ್ನು ಹಿಡೇರಿಸಲು ತವಕಿಸುತ್ತಲೇ ಇರುತ್ತವೆ.


ಸಮಯ ಸಿಕ್ಕಾಗ ಯಾರ ಅಪ್ಪಣೆಗೂ ಕಾಯದೆ ಒಂದು ಡಿಚ್ಚಿ ಹೊಡೆದು ಅಚ್ಚರಿಯ ಶಾಕ್ ನ್ನು ತನ್ನ ನಂಬಿದವರಿಗೆ ಕೊಡುತ್ತಾರೆ. ಆಗ ತತ್ ಕ್ಷಣ ನಮ್ಮಗಳ ಪ್ರತಿಕ್ರಿಯೆಯನ್ನು ನಾವು ವರ್ಣಿಸಲೂ ಸಾಧ್ಯವಾಗುವುದಿಲ್ಲ. ಇಲ್ಲ ಕಣೊ ಮೊನ್ನೆ ದಿನದವರೆಗೆ ಅವನು ನನ್ನೊಡನೆ ಮಾತಾನಾಡಿದ, ಆ ರೀತಿ ನಡೆಯಲು ಸಾಧ್ಯವಿಲ್ಲ. ಅವನು/ಅವಳು ಈ ರೀತಿ ಮಾಡಿದ್ದಾನೆ ಎಂದರೇ ನಂಬಲು ತಿಳಿಯುತ್ತಿಲ್ಲಾ. ನನಗೆ ಅನಿಸುತ್ತೇ ಅದು ಹೇಗೋ ಹಾಗಿದೆ ಅಂದು ಮುಲ ಮುಲ ಪುನಃ ಅವನ/ಅವಳ ಮತ್ತು ನಮ್ಮ ಹತ್ತಿರದವರ ಸಂಗಡ ಅದೇ ವಿಷಯವನ್ನು ಪುನಃ ಪುನಃ ಮಾತನ್ನಾಡುತ್ತೇವೆ.


ಇದಕ್ಕೆ ಕಾರಣ ನಾವುಗಳು ನಮ್ಮ ನಮ್ಮ ಮಿತಿಯಲ್ಲಿ ನಮ್ಮವರ ಬಗ್ಗೆ ಆ ರೀತಿಯ ಕುರುಡು ನಂಬಿಕೆಗಳನ್ನು ಇಟ್ಟುಕೊಂಡಿರುತ್ತೇವೆ. ಆ ರೀತಿಯ ಭಾವನೆಗಳಿಗೆ ನೋವು ಆಗುವ ರೀತಿಯಲ್ಲಿ ನಮ್ಮ ಸ್ನೇಹಿತರಿಂದ ಏನಾದರೂ ಸಂಭವಿಸಿದರೆ ನಾವು ನಮ್ಮ ಪ್ರೀತಿ ಮತ್ತು ಅವರ ಬಗ್ಗೆ ಇಟ್ಟು ಕೊಂಡ ಕಾಳಜಿಗಳನ್ನೇ ಸುಳ್ಳು ಮಾಡಿದಾಗ ತುಂಬ ಬೇಜಾರಾಗುತ್ತದೆ.
ಅದೇ ಸಮಯದಲ್ಲಿ ಸುತ್ತಲಿನ ಸಂಬಂಧಗಳ ಬಗ್ಗೆ ಜಿಗುಪ್ಸೆ ಪಡುವಂತಾಗುತ್ತದೆ. ಮತ್ತು ನಾವುಗಳು ಏಕೆ ಆ ವಿಚಾರಗಳನ್ನು ತಿಳಿಯಲು ಶಕ್ತರಾಗಿಲ್ಲ ಎಂದು ಮರುಗುತ್ತೇವೆ. ಅದರೆ ಅಸಲಿ ವಿಚಾರಗಳೇ ಬೇರೆ, ಅವರಿಗೂ ಸಹ ನಿಮ್ಮ ಬಗ್ಗೆ ಕಾಳಜಿ ಮತ್ತು ಗೌರವವಿರುತ್ತದೆ, ಅದನ್ನು ಕಾಪಾಡುವ ಸಲುವಾಗಿಯೇ ಅವರು ನಿಮ್ಮನ್ನು ಅವಾಯ್ಡ್ ಮಾಡಿರುತ್ತಾರೆ ಮತ್ತು ನಿಮ್ಮ ಕಿವಿಗೆ ಕಣ್ಣಿಗೆ ಹಾಕಿರುವುದಿಲ್ಲ.


ಸಂಬಂಧಗಳ ವಿಚಾರವೇ ಅಷ್ಟು ಯಾರೊಬ್ಬರೂ ಯಾರಿಗೂ ಯಾವ ಸಮಯದಲ್ಲಾಗಲಿ ಖುಷಿ ಮತ್ತು ಉತ್ತಮ ವಿಚಾರಗಳನ್ನು ಷೇರ್ ಮಾಡಿಕೊಳ್ಳಲು ತವಕಿಸುತ್ತಾರೆ. ಯಾವಾಗ ಯಾವೊಂದು ವಿಚಾರ ಇದು ಸರಿಯಲ್ಲ ಅಂಥ ತಮ್ಮ ಮನಸ್ಸಿಗೆ ತಿಳಿದಾಗ ನಾವು ತಿಳಿಸುವುದಕ್ಕೆ ಮುಂಚೆ ಹೇಗೋ ಎಲ್ಲಿಂದಲೂ ತಿಳಿದರೆತ ತಮ್ಮವರಿಗೆ ಕ್ಷೇಮ ಎನ್ನು ಭಯ ಅಥವಾ ಆ ರೀತಿಯ ಸ್ವತಂತ್ರವನ್ನು ಅವರೂ ನಿಮ್ಮೊಡನೇ ಅನುಭವಿಸಿರುವುದಿಲ್ಲ.


ಅದ್ದರಿಂದ ಯಾರೊಬ್ಬರ ಬಗ್ಗೆಯಾಗಲಿ ನಾವುಗಳು ನಮ್ಮ ನಮ್ಮಲ್ಲಿಯೇ ಆಶಾ ಸೌಧವನ್ನು ಕಟ್ಟಿಕೊಂಡರೂ ಅದು ನಮ್ಮ ಅಣತಿಯಂತೆ ಅವರು ಜೀವಿಸಬೇಕು ಮತ್ತು ನಡೆಯಬೇಕು ಎಂದು ಕೊಳ್ಳುವುದು ಅಸಹಜ. ಅವರ ಬಗ್ಗೆ ನಮ್ಮ ಕಾಳಜಿಯ ಪ್ರೀತಿಯಿರಬೇಕು ಹಾಗಂತ ಅದೇ ಅವರಿಗೆ ಸಂಕೊಲೆಯಾಗಬಾರದು. ಹಾಗೆಯೇ ನಮ್ಮ ಹತ್ತಿರ ಇರುವವರು ನಮಗೆ ಯಾವಾಗಲೂ ಅದು ಮಾಡ ಬೇಡ ಇದು ಮಾಡ ಬೇಡ ಎಂದು ಬೋಧಿಸುವ ಬುದ್ದಿ ಮಣಿಗಳೇ ಆಗಿರುವುದಿಲ್ಲ. ಅವರುಗಳು ತಾವು ಕಂಡ ಸಮಾಜದಲ್ಲಿ ಜೀವನದ ನೌಕೆಯಲ್ಲಿ ನನ್ನವರು ಎನ್ನುವವರೂ ಸಹ ಸಂತೋಷದಿಂದ ಬಾಳಲಿ ಎಂಬ ಆಸೆ ಮತ್ತು ಆರೈಕೆಯನ್ನು ಹೊಂದಿರುತ್ತಾರೆ.


-ತ್ರಿಪುಟಪ್ರಿಯ

ಭಾನುವಾರ, ಏಪ್ರಿಲ್ 18, 2010

ಯಾರಿಗಾಗಿ ಯಾಕೆ ವಿಕೃತಿಯ ಅಟ್ಟಹಾಸ?



"ಭಯೋತ್ಪಾದನೆ" ಟೆರರಿಸ್ಟ್ ಆಟ್ಯಕ್ ಅಯ್ತಂತೆ! ಅಲ್ಲಿ ಒಂದು ಬಾಂಬು ಬ್ಲಾಸ್ಟ್ ಅಯ್ತಂತೆ. ಇನ್ನೋಂದು ಅಲ್ಲಿಯಂತೇ.. ಹೀಗೆ ಸುದ್ಧಿ ವೇಗವಾಗಿ ನಮ್ಮ ನಮ್ಮ ನಡುವೆ ತಲುಪಿ ನಮ್ಮವರಿಗಾಗಿ ಅವರ ಯೋಗ ಕ್ಷೇಮಕ್ಕಾಗಿ ನಮ್ಮ ಸೆಲ್ ಪೋನ್ ಗಳನ್ನು ಉಪಯೋಗಿಸಲು ಮುಂದಾದಗ ಯಾವುದೇ ರೀತಿಯ ಪ್ರಯೋಜನವಾಗದೇ ನಾವು ತಲುಪಬೇಕಾದ ವ್ಯಕ್ತಿಗಳನ್ನು ತಲುಪದೆ ಇದ್ದಾಗ ನಿರಾಶರಾಗಿ ಕೇವಲ ಭಯ ಮತ್ತು ಮುಂದೇನಾಗವುದು ಎಂಬ ಆತಂಕದಿಂದ ಕಂಪ್ಯೂಟರ್ ಪರದೆಯ ಮೇಲೆ ವಿವಿಧ ಸುದ್ಧಿಗಳ ವೆಬ್ ಸೈಟ್ ಗಳನ್ನು ನೋಡುತ್ತಾ ಸುತ್ತ ಮುತ್ತಲಿನ ಸಹ ಉದ್ಯೋಗಿಗಳ ಮಾತುಗಳನ್ನು, ಅವರು ಪಡೆದ ತಾಜಾ ಸುದ್ಧಿಗಳಿಗಾಗಿ ಕಿವಿಗಳನ್ನು ತೆರೆದುಕೊಂಡು ಏನೂ ಮಾಡಲಾಗದ ಸ್ಥಿತಿಯಲ್ಲಿ ನಾವು ನೀವುಗಳು ಕಾಯುತ್ತಿರುತ್ತೇವೆ.


ಹೀಗೆಯೇ ನಮ್ಮ ಕುಟುಂಬದ ಸದಸ್ಯರು, ಬಂಧು ಬಳಗ, ಸೂಪರ್ ಪಾಸ್ಟ್ ವೇಗದ ಸುದ್ಧಿ, ದೃಶ್ಯ ಪ್ರಸರಣದ ಸುದ್ಧಿ ಚಾನಲ್ ಗಳಲ್ಲಿ ಈ ವಿಷಯದ, ಘಟನೆಯ ಹಸಿ ಹಸಿ ದೃಶ್ಯಗಳನ್ನು ನೋಡಿ ಭಯವಿಹ್ವಲರಾಗಿ ಮನೆಯಿಂದ ಹೊರಗೆ ಹೋಗಿರುವವರ ಕ್ಷೇಮದ ಒಂದು ಮಾತಿಗಾಗಿ ಇವರು ಸಹ ಅವರ ಪೋನ್ ಗೆ ಪ್ರಯತ್ನಿಸುವುದು.


ಗಲ್ಲಿ, ಗಲ್ಲಿಯಲ್ಲಿ ವಿವಿಧ ರೀತಿಯ ಪುಂಕಾನು ಪುಂಕಾವಾಗಿ ಗಾಳಿ ಸುದ್ಧಿಯ ಈ ವಿರಾಟ ಘಟನೆಯ ವಿಶ್ಲೇಷಣೆ ಸಾಗುವುದು. ಭೀತಿಯ ಕಣ್ಣುಗಳಿಂದ ಎಲ್ಲಾರ ಮುಖಗಳನ್ನು ನೋಡುವುದು ಮತ್ತು ತಮ್ಮವರ ಕ್ಷೇಮಕ್ಕಾಗಿ ಮನಸ್ಸಿನಲ್ಲಿಯೇ ಸಣ್ಣದಾಗಿ "ದೇವರಲ್ಲಿ" ಪ್ರಾರ್ಥಿಸುವುದು. ಈ ರೀತಿಯ ಗೊತ್ತಾದ ವೇಳೆಯಲ್ಲಿ ಪ್ರತಿಯೊಬ್ಬರೂ ನಗರ- ಭೀತಿಯನ್ನು ಅನುಭವಿಸುವ ಆ ಘಳಿಗೆಯ ಆ ಸಂದರ್ಭದ ಆ ವಿಷ ಕ್ಷಣವನ್ನು ಕೇವಲ ಪದಗಳ ಸಾಲಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ಅನುಭವಿಸಿದವನಿಗೆ ಗೊತ್ತು ಅದರ ನೋವು, ಅದು ಪುನಃ ಪುನಃ ಪುನರಪಿಯಾಗುವುದು ಬೇಡ ಎಂದು ಕೇಳಿಕೊಳ್ಳೋಣ.


ಈ ಎಲ್ಲಾ ಮೇಲಿನ ಘಟನಾವಳಿ ಆ ರೀತಿಯ ಘಟನೆ ನಮ್ಮ ನಗರದಲ್ಲಿ ಘಟಿಸಿದೆ ಎಂಬ ಒಂದು ಸುದ್ಧಿಯ ಹಿಂದೆ ಘಟಿಸುತ್ತದೆ. ಇನ್ನೂ ಪ್ರತ್ಯಕ್ಷ ಆ ಜಾಗದಲ್ಲಿ ಇರುವವರ ಮನಸ್ಥಿತಿ, ದೇಹ ಸ್ಥಿತಿ ಜನರ ನದವಳಿಕೆ ಕಲ್ಪನೆಗೂ ನಿಲಕಲಾರದು.


ಜಸ್ಟ್ ಕಣ್ಣು ಮಿಟಿಕಿಸುವ ಸೆಕೆಂಡುಗಳಲ್ಲಿ ಸುಂದರವಾದ ಸ್ನೇಹಿ ಪರಿಸರವನ್ನು ತನ್ನ ಕರಾಳ ಕದಂಬ ಬಾಹುಗಳಿಂದ ಅಪ್ಪಳಿಸಿ ತನ್ನೊಡಲಿಗೆ ಮಕ್ಕಳು, ಮರಿಗಳು, ಮಹಿಳೆಯರು,ಮುದುಕರು, ಯುವಕರು, ಸುಂದರ ಕಟ್ಟಡಗಳು, ವಾಹನಗಳನ್ನೊಳಗೂಡಿ ಸಮಸ್ತವನ್ನು ಆಕ್ರಮಿಸಿಕೊಂಡು ಒಂದು ವಿಲಕ್ಷಣವಾದ ಕರಿ ಛಾಯೆಯೊಂದಿಗೆ ಅಳಿದು ಉಳಿದವರ ಆಕ್ರಂದನಗಳೊಂದಿಗೆ ತನ್ನ ಅಟ್ಟಹಾಸವನ್ನು ಮೆರೆಯುವ ಈ ರೀತಿಯ ವಿಕೃತಿ ಘಟನೆ ಯಾರಿಗೂ ಯಾವ ಕಾಲಕ್ಕೂ ಬೇಡ!


ಕನಸು ಮನಸ್ಸಿನಲ್ಲೂ ಕಲ್ಪಿಸಲಾರದ ಘಟನೆ ಸಾವಿರಾರು ಜನರನ್ನು ಅನಾಥರನ್ನಾಗಿ, ನಿರ್ಗತಿಕರನ್ನಾಗಿ, ಶಾಶ್ವಾತ ಅಂಗವಿಕಲರನ್ನಾಗಿ ಒಂದೇ ಸೆಕೆಂಡನಲ್ಲಿ ನಿಸ್ಸಾಹಾಯಕ ಸ್ಥಿತಿಗೆ ತಂದು, ರಕ್ತದೋಕಳಿಯನ್ನು ಸಿಂಪಡಿಸಿ ಯಾವುದೇ ಕರುಣೆಯ ಕವಡೆಯನ್ನು ಯಾರಿಗೂ ನೀಡದೇ ತನ್ನ ಸಂತೃಪ್ತಿಯ ನಗೆಯನ್ನು ಒಳ ಒಳಗೆ ನಗುತ್ತದೆ. ಈ ದ್ವಂಸಕಾರಿ ಯೋಜನೆಯ ರೂವಾರಿಗಳಿಗೆ ಸುತ್ತಲಿನವರಿಂದ ಹಿಡಿ ಶಾಪವನ್ನು ಹಾಕಿಸುವುದು ಅದರ ಮತ್ತೋಂದು ಕಾಣಿಕೆ ಮಾತ್ರ ಅದು ತಾನು ರೂಪಿಸಿದ ತನ್ನ ಭಯಂಕರ ಚಿತ್ರಣದ ಮುಂದೆ ಇದು ಮಾತ್ರ ನಗಾಣ್ಯ.


ನಗರ ಜೀವನ ಇಂದಿನ ಈ ರೀತಿಯ ಅನಾಹುತಕಾರಿ ಘಟನೆಗಳು ನಗರವಾಸಿಗಳ ಮನಸ್ಸಿನಲ್ಲಿ ಯಾವ ರೀತಿಯ ಭಯದ ಛಾಯೆಯನ್ನು ಮೊಡಿಸಬಹುದು ಎಂಬುದನ್ನು ಯಾರು ಸಹ ತಿಳಿಯಲಾರರು.


ಆ ಘಟನೆಯ ಕಪ್ಪು ಚುಕ್ಕೆ ಸಾವಿರಾರು ದಿನಗಳವರೆಗೆ ಮುಂದಿನ ನವ ಯುವ ಜನಾಂಗಕ್ಕೆ ಮನಸ್ಸಿನ ಕೊರೆಯುವ ನೋವಿನ ಘಟನೆಯಾಗಿ ನೆಮ್ಮದಿಯಿಂದ ಜೀವಿಸುವುದನ್ನು ಕಾಣದಂತೆ ಮಾಡುತ್ತದೆ.


ಯಾರಿಗಾಗಿ? ಯಾಕೆ? ಈ ರೀತಿಯ ವಿಕೃತಿಯ ಅಟ್ಟಹಾಸ?


ಹಿಂದೆ ಯಾರೊಡನೆ ಹೋರಾಡಿದರೂ ಒಂದು ವ್ಯವಸ್ಥಿತಿತ ರೀತಿಯಿಂದ ಹೋರಾಡಿ ತಮ್ಮ ಬಲ ಪ್ರದರ್ಶಿಸುತ್ತಿದ್ದರು. ಮತ್ತು ಆ ರೀತಿಯ ಹೋರಾಟ ಅಸಕ್ತ ಮಕ್ಕಳು, ಮಹಿಳೆಯರು ಮತ್ತು ಸಾಮಾನ್ಯ ಮನುಷ್ಯರಿಂದ ಬೇರೆಯಾಗಿ ನಡೆಯುತ್ತಿತ್ತು. ಅದು ದೇಹಿ ಅನ್ನು ವವರಿಗೆ ಕ್ಷಮೆಯಾಗಿರುತ್ತಿತ್ತು.


ಇಂದು ಗೊತ್ತಿರದ ಯಾವುದೋ ಒಂದು ಉದ್ದೇಶಕ್ಕಾಗಿ ಗೊತ್ತಿರದ ಜಾಗದಲ್ಲಿ ಜನ ಸಾಮಾನ್ಯರ ಮಾರಣ ಹೋಮವೇ ತಮ್ಮ ವಿಜಯ ಎಂದು ಬೀಗುವ ಈ ವಿಕೃತ ವ್ಯವಸ್ಥೆ ಮತ್ತು ಮನಸ್ಸುಗಳಿಗೆ ಯಾವ ರೀತಿಯ ಕರುಣೆಯ ಭೋಧನೆಯನ್ನು ಮಾಡಿ ಸರಿ ದಾರಿಗೆ ತರಲಿ?


ಕೊನೆಯಿರದ ಈ ರೀತಿಯ ಘಟನೆಗಳಿಗೆ ಮುಕ್ತಿಯ ರೂವಾರಿ ಯಾರಾಗಬೇಕು? ವ್ಯಕ್ತಿಯೇ! ಸಮಾಜವೇ! ಧರ್ಮವೇ! ಯಾರು? ನಾವು ಬದುಕುತ್ತಿರುವ ಬದುಕೆ ಭದ್ರವಾಗಿರದಾದಗ ಜೀವಿಸುವುದಾದರೂ ಎಲ್ಲಿ? ಯಾರನ್ನು ನಂಬಲಿ? ಯಾರನ್ನು ಕೇಳಲಿ....

ಗುರುವಾರ, ಏಪ್ರಿಲ್ 8, 2010

ಸೆಕ್ಸ್ ಮತ್ತು ವೋಟಿಂಗ್

ಈ ಕಳೆದ ವಾರಗಳಲ್ಲಿ ಎರಡು ಮುಖ್ಯ ವಿಚಾರಗಳು ಬಹಳಷ್ಟು ಚರ್ಚೆಗೆ ಒಳಪಟ್ಟಿರುವುವು. ಒಂದು ವಿವಾಹ ಪೂರ್ವ ಲೈಂಗಿಕತೆ ಮತ್ತು ಬೆಂಗಳೂರಿನ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಡಿಮೆ ಮತದಾನ.

ಮೊನ್ನೆ ಸರ್ವೋಚ್ಚ ನ್ಯಾಯಾಲಯ ವಿವಾಹ ಪೂರ್ವ ಲೈಂಗಿಕತೆ ಸಾಧು ಎಂದು ಮಹತ್ವದ ತೀರ್ಪು ನೀಡಿದೆ. ಇದರ ಬಗ್ಗೆ ಧನಾತ್ಮಕ ಮತ್ತು ಋಣಾತ್ಮಕ ಪ್ರತಿಕ್ರಿಯೆಗಳು ವಿಚಾರವಂತರೂಡಗೂಡಿ ಸಾಮಾನ್ಯ ಜನರವರೆಗೆ ಮಾಧ್ಯಮಗಳ ಮೂಲಕ ಪ್ರತಿಬಿಂಬಿತಗೊಂಡಿವೆ. ಇದರ ಬಗ್ಗೆ ನನಗೆ ಏನೂ ಹೇಳಲು ತಿಳಿಯದು. ಇಷ್ಟನ್ನು ಮಾತ್ರ ಹೇಳಬಹುದು. ಈ ತೀರ್ಪನ್ನು ನಾವುಗಳು ಯಾವ ರೀತಿ ತೆಗೆದುಕೊಳ್ಳುವೆವು ಮತ್ತು ಹೇಗೆ ಜೀರ್ಣಿಸಿಕೊಳ್ಳೂವೆವು ಅಂಥ?

ಯಾರು ಯಾವ ರೀತಿಯಲ್ಲಿ ಬೇಕಾದರೂ ಅದರ ಬಗ್ಗೆ ವ್ಯಾಖ್ಯಾನ ಮಾಡಿದರೂ, ಅದು ತನಗೆ ಮಾತ್ರ ಮತ್ತು ಹೆಚ್ಚು ವೈಕ್ತಿಕವಾದಾಗ ಮಾತ್ರ ಯಾವೂಬ್ಬ ವ್ಯಕ್ತಿಯು ಅದು ಸರಿ, ಎಂದು ಹೇಳಲಾರ. ಅದಕ್ಕೆ ಇರಬೇಕು ನಮ್ಮತನವನ್ನು ನಮ್ಮ ಆಚಾರ ವಿಚಾರ, ಸಂಸ್ಕೃತಿಗಳನ್ನು ತಾನು ಎಷ್ಟೇ ಮುಂದುವರಿದಿದ್ದರೂ, ಎಷ್ಟೇ ತಿಳುವಳಿಕೆಯುಳ್ಳವನಾದರೂ, ಆ "ಒಂದು ವಿಷಯಕ್ಕೆ" ಬಂದಾಗ ತಾನು ಯೋಚಿಸುವ ದಾಟಿಯೇ ಬೇರೆಯದಾಗುತ್ತದೆ ಮತ್ತು ತನ್ನ ಸಂಗಾತಿಯಾಗುವವರ ಬಗ್ಗೆ ವ್ಯಕ್ತಿ ತುಂಬ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾನೆ. ಅದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಆ ಪವಿತ್ರವಾದ ತನವನ್ನು ತನ್ನ ಮುಂದಿನ ಬಾಳಿನ ಸಂತೋಷದ ದಿನಗಳಿಗೆ ಅಡಿಪಾಯ ಎಂಬ ರೀತಿಯಲ್ಲಿ ಯೋಚಿಸಿತ್ತೀರುತ್ತಾರೆ. ಅದೊಂತೋ ಈ ನಮ್ಮ ಭಾರತೀಯ ಮಣ್ಣಿನ ಗುಣದಲ್ಲಿ ಕಲ್ಪಿಸಲೂ ಸಾಧ್ಯವಿಲ್ಲ.

ಅದು ಅಷ್ಟೋಂದು ಸುಲಭವಾಗಿ ವಿಚಾರ ವೇದಿಕೆಗಳಲ್ಲಿ ಮತ್ತು ತೀರ್ಪುಗಳಲ್ಲಿ ಅನುಮೊಧಿಸಿದಂತೆ ಅಲ್ಲಾ ಎಂದು ಮಾತ್ರ ಹೇಳಬಹುದು. ನಿಮಗೆ ಏನು ಅನಿಸುತ್ತೇ? ಸ್ವಲ್ಪ ಕಲ್ಪಿಸಿಕೊಳ್ಳಿ.

ಇನ್ನೋ ಎರಡನೇಯ ಬಹು ಚರ್ಚಿತ ವಿಷಯವಾದ ಅತಿ ಕಡಿಮೆ ಮತದಾನ. ಬೆಂಗಳೂರಿನ ನಾಗರೀಕರಲ್ಲಿ ಚುನಾವಣೆಯ ಬಗ್ಗೆ ಇರುವ ನಿರುತ್ಸಾಹ ಇದರ ಬಗ್ಗೆ ಆಡಳಿತ ಪಕ್ಷದಿಂದ ಇಡಿದು ಜನಸಾಮಾನ್ಯರವರೆಗೂ ಬಹು ವಿಧದ ಸಲಹೆ ಮಾತುಗಳು ಅದಕ್ಕೆ ಪರಿಹಾರಗಳು ಯೋಜನೆಗಳು ಕೇಳಿ ಬರುತ್ತಿವೆ.

ಮತದಾನ ಮಾಡದವರೂ ಯಾವುದೇ ಕುಂದುಕೊರತೆಗಳ ಬಗ್ಗೆ ಚಕಾರ ಎತ್ತುವ ಅಧಿಕಾರವನ್ನು ಕಳೆದುಕೊಂಡಿದ್ದಾರೆ ಮತ್ತು ಅವರಿಗೆ ಪ್ರಶ್ನಿಸುವ ಹಕ್ಕು ಇಲ್ಲ. ಮತದಾನ ಮಾಡುವುದನ್ನು ಕಡ್ಡಾಯ ಮಾಡಬೇಕು. ಗುಜರಾತ್ ಮಾದರಿಯಂತೆ ಇಲ್ಲೂ ಒಂದು ಶಾಸನವನ್ನು ಜಾರಿಮಾಡಬೇಕು. ಹೀಗೆ ನಾನ ರೀತಿಯ ಸಲಹೆಯ ಕೂಗುಗಳು ದ್ವನಿಸುತ್ತೀವೆ.

ಅದೊಂದು ಸತ್ಯ ಇಂದಿನ ನಮ್ಮ ರಾಜಕಾರಣಿಗಳ ಬಗ್ಗೆ ನಮ್ಮ ಜನರಿಗೆ ಯಾವುದೇ ರೀತಿಯ ಆಶಾವಾದ ಮತ್ತು ಪಾಸೀಟಿವ್ ಹೊಪ್ಸ್ ಇಲ್ಲವಾಗಿದೆ. ಯಾವೊಬ್ಬ ಸಾಮಾನ್ಯ ಮನುಷ್ಯನಿಗೂ ಪ್ರತಿಯೊಬ್ಬ ರಾಜಕಾರಣಿ ಗೆದ್ದ ಮೇಲೆ ಏನೆಲ್ಲಾ ಮಾಡಬಹುದು ಎಂಬುದು ಅಕ್ಷರಾಶಃ ತಿಳಿದಿರುವ ವಿಚಾರ. ಇದರಿಂದ ಮುಂದೇನಾಗಬಹುದು ಈಗ ಏನು ಮಾಡಬಹುದು, ಈ ರೀತಿಯ ಪ್ರತಿಯೊಂದು ನಡೆಯನ್ನು ತಮ್ಮ ತಮ್ಮಲ್ಲಿಯೇ ಮತದಾರರು ಹಾಸ್ಯಸ್ಪದವಾಗಿ ನಮ್ಮ ಪ್ರತಿನಿಧಿಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.

ನಮ್ಮ ಜನಪ್ರತಿನಿಧಿಗಳು ಸಹ ತಮ್ಮ ಗಾಂಭಿರ್ಯ ಮತ್ತು ತಮ್ಮ ಶಿಸ್ತುಗಳನ್ನೇಲ್ಲಾ ಗಾಳಿಗೆ ತೂರಿ ನಿಜವಾದ ಮನುಷ್ಯತ್ವವನ್ನೇ ಮರೆತು ಗೆದ್ದಿರುವುದು ಸಂಪಾದಿಸಲಿಕ್ಕೆ ಮಾತ್ರ ಎಂಬ ರೀತಿಯಲ್ಲಿ "ಹೇಗಿದ್ದವನು ಹೇಗಾದ ನೋಡ್ರಾಣ್ಣಾ" ಎಂಬಂತಿದ್ದಾರೆ.

ಚುನಾವಣಾ ಪ್ರಕ್ರಿಯೇ ಪ್ರಾರಂಭವಾದ ದಿನದಿಂದ ಶುರು ಮಾಡಿ ಅದು ಮುಕ್ತಾಯವಾಗುವವರೆಗೂ ಇವರುಗಳು ಮಾಡುವ "ಸಾಮಾಜಿಕ ಕಾಳಜಿ ಎಂಬ" ಡೋಂಗಿ ಆಶ್ವಾಸನೆ, ಪ್ರಚಾರ ಅದಕ್ಕೆ ಅವರುಗಳು ವೆಚ್ಚ ಮಾಡುವ ಕೋಟ್ಯಾನು ಕೋಟಿ ಹಣ, ವಿವಿಧ ಆಸೆ ಆಮೀಷ ಇವುಗಳನ್ನು ಗಮನಿಸಿದರೇ, ಮತದಾರನೆ ಕಸಿವಿಸಿಗೊಂಡು ಚುನಾವಣೆಯೇಂದರೆ ಏನು ಎಂದು ಅದರ ಅರ್ಥವನ್ನು ಪುಸ್ತಕಗಳಲ್ಲಿ ಹುಡುಕುವ ಸ್ಥಿತಿಯಾಗಿದೆ.

ಚುನಾವಣೆಯಲ್ಲಿ ಸ್ವರ್ದಿಸುತ್ತಿರುವ ವ್ಯಕ್ತಿಗಳು ಮತ್ತು ಅವರ ಹಿನ್ನಲೆಯ ಚರಿತ್ರೆಯನ್ನು ಗಮನಿಸಿದರೆ ನಮ್ಮ ಭವ್ಯ ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ತಂಭಗಳು ಹೇಗಿವೇ ಎಂದು ಆಶ್ಚರ್ಯ ಮತ್ತು ಭಯವಾಗುತ್ತದೆ. ಈ ಎಲ್ಲಾದರ ಮಧ್ಯೆ ಉತ್ತಮ ವ್ಯಕ್ತಿಯ ಆಯ್ಕೆ ಎಷ್ಟರ ಮಟ್ಟಿಗೆ ಸಾಧ್ಯ ಎಂಬುದು ತಿಳಿಯಲಾರದ ಸಮಸ್ಯೆಯಾಗಿದೆ.

ಹೀಗೆ ಈ ಎಲ್ಲಾ ಸಂಕೋಲೆಗಳ ಮಧ್ಯೆ ನಾವು ಮೆಚ್ಚಿ ಚುನಾಯಿಸಿದ ನಮ್ಮ ಪ್ರತಿನಿಧಿಗಳು ತಮ್ಮ ಅವಧಿಯಲ್ಲಿ ಯಾವ ರೀತಿಯಲ್ಲಿ ಸೇವಾ ಸೌಕರ್ಯಗಳನ್ನು ತಮ್ಮ ಪ್ರದೇಶಗಳಿಗೆ ನೀಡುತ್ತಾರೆ ಎಂದರೇ ಮತ್ತೊಂದು ಚುನಾವಣೆಯೇ ಬರಬೇಕು. ಅದಕ್ಕಾಗಿ ಮತದಾರ ಪ್ರಭು ಜಾತಾಕ ಪಕ್ಷಿಯಂತೆ ಕಾಯುತ್ತಿರಬೇಕು.

ನಮ್ಮ ನಾಯಕರುಗಳಿಗೆ ನಿರ್ಧಿಷ್ಟ ಗುರಿಯೆಂಬುದೇ ಇಲ್ಲದೇ ತಾವುಗಳು ಯಾವ ರೀತಿ ನಮ್ಮ ಜನರಿಗೆ ಸಹಕಾರವನ್ನು ನೀಡಬೇಕು ಎಂಬ ಕನಸುಗಳಿಲ್ಲದೆ, ಕೇವಲ ಅಧಿಕಾರಕ್ಕಾಗಿ ಎಂಥದೇ ರೀತಿಯ ಕಾರ್ಯಗಳನ್ನು ಮಾಡಲು ತಯಾರಾಗಿರುವಂತ ದಾರ್ಷ್ಟತೆಯೇ ಎದ್ದು ಕಾಣುತ್ತದೆ.

ಇಂಥದರೆಲ್ಲಾದರ ಮಧ್ಯೆಯು ಕೆಲವೇ ಕೆಲವು ಬೆರಳೆಣಿಕೆಯ ಸಾಧಕ ರಾಜಕೀಯ ಮುತ್ಸದ್ಧಿಗಳು ಇರುವುದು ಭಾರತಾಂಭೇಯ ಪುಣ್ಯ. ಆದರೂ ಅವರುಗಳ ಗುಂಪಿನಲ್ಲಿ ಇವರುಗಳು ಗೋವಿಂದ ಎಂಬಂತೆ ಮರೆಯಾಗದಿರಲಿ ಎಂದು ಆಶಿಸೋಣ. ಚುನಾವಣೆ ಮತ್ತು ಮತದಾನ ಇದರ ಹಿರಿಮೆ ಮತ್ತು ಮಹತ್ವವನ್ನು ಹೆಚ್ಚಿಸುವ ಕೆಲಸವನ್ನು ಸ್ವರ್ದೆಗೆ ನಿಲ್ಲುವ ಪಕ್ಷಗಳು ಮತ್ತು ಪ್ರತಿನಿಧಿಗಳು ಮಾಡಿ, ಜನರಲ್ಲಿ ಕೊಂಚ ಪ್ರಜಾಪ್ರಭುತ್ವದಲ್ಲಿ ಭರವಸೆಯನ್ನು ಮೊಡಿಸಲಿ.
-ತಿಪುಟಪ್ರಿಯ