ಬುಧವಾರ, ಜನವರಿ 27, 2010

ಓ ಮನಸೇ!!




"ಮನಸ್ಸು ಇಲ್ಲದೆ, ಅನುಭವ ಇಲ್ಲ. ಪರಿಶುದ್ಧವಾದ ಮನಸ್ಸಿಗೆ ಮಾತ್ರ ಅತ್ಯಂತ ಸೂಕ್ಷ್ಮವಾದ ಆತ್ಮಾನಂದದ ಅನುಭವ ಸಾಧ್ಯ." - ರಮಣ ಮಹರ್ಷಿಗಳು

"ಮನಸ್ಸು ಮರ್ಕಟ" ಎಂದು ಹಿರಿಯರು ಹೇಳಿದರು. ಅವರಿಗೆ ಗೊತ್ತಾಗಿದೆ ನಮ್ಮ ಮನಸ್ಸಿನ ಚಿತ್ರ-ವಿಚಿತ್ರವಾದ ಗುಣಗಳು. ಮನಸ್ಸು ಎಂದ ತಕ್ಷಣ ನೆನಪಿಗೆ ಬರುವುದು ಯೋಚನೆ, ಯೋಚನೆ ಎಂದ ತಕ್ಷಣ ನೆನಪಿಗೆ ಬರುವುದು ಕೆಟ್ಟ ಯೋಚನೆಗಳು - ಒಳ್ಳೆಯ ಯೋಚನೆಗಳು.

ಮನಸ್ಸು ಇದ್ದುದಕ್ಕೆ ಬೆಲೆ ಬರುವುದು ಯೋಚಿಸುವುದರಿಂದ ಮನಸ್ಸು ಎಂಬುದಕ್ಕೆ ನಿರ್ದಿಷ್ಟವಾದ ಇದು ಹೀಗೆ ಎಂದು ಯಾರೂ ಬೌತಿಕವಾಗಿ ಗುರುತಿಸುವುದಕ್ಕೆ ಆಗುವುದಿಲ್ಲ.

ನಮ್ಮ ಬಾಲ್ಯದಲ್ಲಂತೂ ಗೊತ್ತಿಲ್ಲದೆ ವಿವಿಧ ರೀತಿಯ ಕಲ್ಪನೆಯ ರಂಗಾವಳಿಯನ್ನು ಮನದಲ್ಲಿ ಮೊಡಿಸುತ್ತಿರುತ್ತೇವೆ ಅದು ಆಗ ನಮ್ಮ ಜೊತೆಗಾರನಾಗಿ ನಮ್ಮ ಮನಸೊ ಇಚ್ಛೆ ಖುಷಿಯ ವಿಷಯಗಳನ್ನು ಗುಣಕಾರ - ಭಾಗಕಾರ ಮಾಡುತ್ತಿರುತ್ತೇವೆ.

"ಮನುಷ್ಯ - ಮನಸ್ಸು" ಈ ಎರಡನ್ನು ಬೇರೆ ಬೇರೆಯಾಗಿ ನೋಡುವುದು ಸಾಧ್ಯವಿಲ್ಲ. ವ್ಯಕ್ತಿ ಇದ್ದನೆಂದರೆ ಒಂದು ಮನಸ್ಸು ಇರಲೇಬೇಕು ಆಗಲೇ ಆ ವ್ಯಕ್ತಿಗೆ ಬೆಲೆ.

ಮನಸ್ಸಿಲ್ಲದವನಿಗೆ ಬೆಲೆಯಿಲ್ಲ ಎಂಬುದು ಈ ಮಾತು. ನಮ್ಮ ಹಿರಿಯವರಿಂದ ಬಾಲ್ಯದ ದಿನಗಳಿಂದ ಕೇಳಿಸಿಕೊಳ್ಳುತ್ತಿರುವ ಮಾತುಗಳೆಂದರೆ ಅದು ಮನಸ್ಸಿಗೆ ಮಾತ್ರವಾಗಿ "ಮನಸ್ಸು ಕೊಟ್ಟು ಕಲಿ, ಮನಸ್ಸು ಕೊಟ್ಟು ಕೇಳು, ಮನಸ್ಸು ಕೊಟ್ಟು ಕೆಲಸ ಮಾಡು" ಇತ್ಯಾದಿ.

ಈ ಎಲ್ಲಾ ಮಾತುಗಳು ಮನಸ್ಸಿನ ಮಹತ್ವವನ್ನು ಪ್ರತಿಯೊಬ್ಬರಿಗೂ ಗೊತ್ತಿಲ್ಲದ ರೀತಿಯಲ್ಲಿ ತಿಳಿಸುತ್ತಿದೆ.

ಹಾಗೆಯೇ, ಮನಸ್ಸು ಮಾಡಿದರೇ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಈ ನಾಣ್ಣುಡಿ ಜಗಜ್ಜಾಹಿರು ಮಾಡಿದೆ - "ಮನಸ್ಸಿದ್ದರೆ ಮಾರ್ಗ"

ಈ ಗಾದೆ ಮನಸ್ಸಿನ ಪವರ್ ಎಷ್ಟು ಎಂಬುದನ್ನು ಸರಳವಾಗಿ ನಿರೂಪಿಸಿದೆ.

ಈ ಪ್ರಪಂಚದ ಯಾವ ವಿಚಾರ, ತಂತ್ರಜ್ಞಾನ, ಚಲನೆ, ರಾಗ, ದ್ವೇಷ, ಬಾಳ್ವೆ, ಬದುಕು ಪ್ರತಿಯೊಂದು ನಿರ್ದಿಷ್ಟವಾಗಿ ಚರ್ಚಿತವಾಗಿರುವುದು "ಮನಸ್ಸು" ಎಂಬ ಮೂಸೆಯಲ್ಲಿಯೇ.ಅದನ್ನು ಹೇಗೆ ಉಪಯೋಗಿಸಬೇಕು ಎಂಬುದರ ಮೇಲೆ ಅವಲಂಬಿತವಾಗಿದೆ. ಉಪಯೋಗಿಸಿಕೊಂಡವನೇ ಸಾಧಕ!

ಈ ಮನಸ್ಸು ವಯಸ್ಸಿಗೆ ಸಂಬಂಧಿಸಿದಂತೆ ಪ್ರತಿಯೊಂದು ಅನುಭವಗಳ ಗಣಿಯಲ್ಲಿ ಗಟ್ಟಿಯಾಗುತ್ತಾ ತನ್ನ ಅಂತಃ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳುತ್ತದೆ.

ಅದಕ್ಕೆ ಇರಬೇಕು ನಮ್ಮ ಕವಿವರ್ಯರೊಬ್ಬರು ವಯಸ್ಸು ಮತ್ತು ಮನಸ್ಸನ್ನು ಹೀಗೆ ಕಟ್ಟಿ ಹಾಡಿದ್ದಾರೆ. "ಹದಿನಾರಾರ ವಯಸ್ಸು ಹುಚ್ಚು ಕೋಡಿ ಮನಸ್ಸು. . . "

ಯೌವನಭರಿತವಾದ, ಮದ್ಯ ವಯಸ್ಕ, ವೃದ್ಧಾಪ್ಯ ವಯಸ್ಸು ಹೀಗೆ ವಿವಿಧ ರೀತಿಯ ಕಾಲ ಘಟ್ಟಗಳ ವ್ಯಕ್ತಿಯ ಮನಸ್ಸು ಒಂದೇ ಆಗಿರಲೂ ಸಾಧ್ಯವಿಲ್ಲ.

ಮನಸ್ಸನ್ನು ನಮ್ಮ ದೇಹಕ್ಕೆ ಸರಳಿಕರಿಸಬಹುದೇನೋ, ಯಾಕೆಂದರೆ ಮನಸ್ಸು ಎಂದು ಅದು ಸೆಂಟ್ರಲ್ ಪ್ರೋಸಸ್ ಇದ್ದಂತೆ. ಅದರ ನಡಾವಳಿಯ ಆಜ್ಞಪಾಲಕ ನಮ್ಮ ಈ ದೇಹವೆ ಸರಿ!

ಆದರೂ ಯಾಕೆ ಈ ಮನಸ್ಸನ್ನಾ, ಕೆಡುಕ ಮನಸ್ಸು, ಒಳ್ಳೆಯ ಮನಸ್ಸು ಎಂದು ಗುರುತಿಸುತ್ತಾರೆ?

ಯಾವ ಮನಸ್ಸು ಮತ್ತೊಬ್ಬರಿಗೆ ತೊಂದರೆಯನ್ನು ಕೊಡುವುದರ ಬಗ್ಗೆ ಯೋಚಿಸಿ, ಇನ್ನೊಬ್ಬರ ಶಾಂತಿಯನ್ನು ಮನಸ್ಸನ್ನು ಹಾಳು ಮಾಡುತ್ತದೋ ಅದು ಕೆಟ್ಟ ಮನಸ್ಸು ಮತ್ತು ಆ ಮನಸ್ಸು ಸಹ ಕೆಟ್ಟು ಹೋಗಿರುತ್ತದೆ ಅದ್ದರಿಂದ ಅದನ್ನು ಕೆಟ್ಟ ಮನಸ್ಸೆಂದು ಗುರುತಿಸಬಹುದು. ಹಾಗೆಯೇ ಅಂಥ ವ್ಯಕ್ತಿ ಸುತ್ತಲಿನವರಿಗೆ ಮತ್ತು ಸಮಾಜಕ್ಕೆ ಅಪಾಯಕಾರಿ.

ಯೋಚನೆಗಳು ಕಲ್ಪನೆಗಳು ಇಲ್ಲದ ಮನಸ್ಸು ಮನಸ್ಸಲ್ಲಾ. ಕೆಟ್ಟ , ಒಳ್ಳೆಯ ಯೋಚನೆಗಳು ಮನಸ್ಸಿನಲ್ಲಿ ಬರುವುದು ಸಹಜ ಯಾಕೆಂದರೆ ನಾವುಗಳು ಉಪ್ಪು - ಹುಳಿ ತಿಂದು ಬೆಳೆಸಿದ ಪ್ರೀತಿಯ ದೇಹವನ್ನು ಹೊಂದಿದ್ದೇವೆ ಅಲ್ಲವಾ? ಹಾಗೆಯೇ ನಾವು ಬದುಕುತ್ತಿರುವ ಸುತ್ತಲಿನ ಪರಿಸರದ ಪರಿಣಾಮವಾಗಿ ವಿವಿಧ ರೀತಿಯ ಯೋಚನೆ, ಆಸೆಗಳು ಮನಸ್ಸಿನಲ್ಲಿ ಮೊಡುವುದು ಸಹಜ. ಹಾಗೆಯೇ ಅದಕ್ಕಾಗಿ ನಾವುಗಳು ವೈರಾಗ್ಯವನ್ನು ಧರಿಸಿದ ಸಾಧುಗಳಾಗಲು ಸಾಧ್ಯವಿಲ್ಲ.

ಯಾವ ವಿಚಾರಾಗಳು ನಮಗೆ ನಮ್ಮ ಅರಿವಿಗೆ ಅಸಹನೀಯವಾದದ್ದು - ಕೆಟ್ಟದ್ದು ಅನಿಸುತ್ತದೋ ಅವುಗಳನ್ನು ಆಗಲೇ ಕೊಲ್ಲುವುದು ಬುದ್ಧಿವಂತಿಕೆಯ ಲಕ್ಷಣ. ಆ ರೀತಿಯ ಅರಿವು ಯಾವುದೇ ರೀತಿಯ ಸಾಮಾನ್ಯ ಸಜ್ಜನನಿಗೂ ತಿಳಿಯುವ ಅರಿವಿನ ಪಾಠ, ಸಮಯಕ್ಕೆ ಸರಿಯಾಗಿ ಊಪಯೋಗಿಸಿ ಮನಸ್ಸಿನ ಪವರ್ ನ್ನು ಸರಿಯಾದ ರೀತಿಯಲ್ಲಿ ಬಳಸಿ ಅಸಾಧ್ಯವಾದುದನ್ನು ಸಾಧಿಸಲು ಮನಸ್ಸು ಮಾಡಬೇಕು.

ಆದಕ್ಕೆ, ಇರಬೇಕು ನಮ್ಮ ಈ ಸನಾತನ ಪರಂಪಯಿಂದ ಇಂದಿನವರೆಗೂ ನಮ್ಮ ವಿವಿಧ ಸಾದು ಸಜ್ಜನರು ಇನ್ನೂ ಈ "ಮನಸ್ಸಿ"ನ ವ್ಯಾಪಾರವನ್ನು ಅರಿಯಲು ತಮ್ಮ ಜೀವನವನ್ನೇ ಪೂರ್ಣವಾಗಿ ಮೂಡಿಪಾಗಿಟ್ಟು ಅದರ ಬಗ್ಗೆ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಾ ತಮ್ಮ ವಿಚಾರಧಾರೆಯ ಮೂಲಕ ಸಾಮಾನ್ಯ ಜನರಿಗೆ ಅದರ ಸಾರವನ್ನು ದಯಾಪಲಿಸುತ್ತಿರುವುದು. ಮತ್ತು ಇದರ ಬಗ್ಗೆ ನಾವುಗಳು ನಮ್ಮ ಹಿರಿಯರಿಂದ ದಿನಂಪ್ರತಿ ತಿಳಿಯಲು ಮತ್ತು ಮನನ ಮಾಡಲು ಅವಕಾಶವಿರುವ ನಾವುಗಳು ಧನ್ಯರಲ್ಲವೇ?

-ತ್ರಿಪುಟಪ್ರಿಯ

ಮಂಗಳವಾರ, ಜನವರಿ 12, 2010

ಮಕ್ಕಳಿಗೆ ಸಂಗಾತಿ ಬೇಕಾಗಿದೆ!

ನಮ್ಮ ಮಾತಾ ಪಿತೃಗಳು ತಮ್ಮ ಮಕ್ಕಳನ್ನು ಕಡೆಯವರಿಗೂ ಏನೂ ತಿಳಿಯದ ಮಕ್ಕಳು ಇನ್ನೂ ಅವರು ತಾವು ಹೇಳಿದಂತೆ ಕೇಳಬೇಕು, ಏನಾದರೂ ತಪ್ಪು ಮಾಡಬಹುದು, ಇನ್ನೂ ಬುದ್ಧಿ ಬರಬೇಕು ಎಂಬಂತೆ ತಮ್ಮ ಮಕ್ಕಳು ೬೦-೭೦ ವರ್ಷ ವಯಸ್ಸಾದರೂ ಈ ರೀತಿಯಲ್ಲಿ ಯೋಚಿಸದೇ ಇರಲಾರರು. ಈ ರೀತಿಯ ಭಾವನೆ ತಮ್ಮ ಮಕ್ಕಳು ಹುಟ್ಟಿದ ಸಂದರ್ಭದಲ್ಲಿ ಸ್ಥಾಪಿತವಾಗಿ ಅದು ಅಳಿಸಲಾರದ ಒಂದು ಜವಾಬ್ದಾರಿಯೇನೋ ಎಂಬಂತೆ ಯಾವಾಗಲೂ ತಮ್ಮ ಮಕ್ಕಳ ಬಗ್ಗೆ ಎಲ್ಲಾ ಸಮಯದಲ್ಲಿ ಕೇರಿಂಗ್ ಮಾಡುತ್ತಾ ವರ್ತಿಸುತ್ತಾರೆ.

ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಯು ತಾನು ಚಿಕ್ಕದಾಗಿದ್ದಾಗ ತನ್ನ ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ತನ್ನ ಜೀವಿತದ ಪ್ರಾರಂಭದ ದಿನಗಳನ್ನು ತನ್ನ ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಂಡು ತಾನು ಸಹ ಸ್ವಂತವಾಗಿ ಯೋಚಿಸುವಂತಾಗಿದ್ದೇನೆ ಮತ್ತು ತನ್ನ ಕಾಲ ಮೇಲೆ ತಾನು ನಿಲ್ಲಬಹುದಾಗಿದೆ ಎಂಬುದನ್ನು ನಿರೂಪಿಸಲು ಕಾತುರನಾಗಿರುತ್ತದೆ.

ಹಾಗೆಯೇ ಯೌವನಕ್ಕೆ ಕಾಲು ಇಟ್ಟ ಸಮಯದಲ್ಲಿ ಎಲ್ಲಾ ಜೀವಿಗಳಲ್ಲೂ ಆಗುವ ಜೈವಿಕ ಮಾರ್ಪಾಡು ಮತ್ತು ಬೆಳವಣಿಗೆಯೋಪಾದಿಯಲ್ಲಿ ಮನುಷ್ಯನು ಸಹ ತನ್ನ ಸಂಗಾತಿಗಳೆಡೆಗೆ ಆಕರ್ಷಿತನಾಗಿ ತನ್ನ ಜೀವನಕ್ಕೆ ಅಸರೆಯಾಗಿ ಮತ್ತು ತನ್ನ ಮುಂದಿನ ಭವ್ಯ ಬದುಕನ್ನು ಹೇಗೆ ಲೀಡ್ ಮಾಡಬೇಕು ಎಂಬುದನ್ನು ನಿರ್ಧರಿಸಲೂ ಎಂಬಂತೆ ಪ್ರತಿ ಹೆಣ್ಣು - ಗಂಡು ಪರಸ್ಪರ ತಮ್ಮ ಜೀವನ ಸಂಗಾತಿಗಳನ್ನು ಪ್ರೀತಿಯೆಂಬ ಮಾಯೆಯಲ್ಲಿ ಮತ್ತು ಸೆಳೆತದಲ್ಲಿ ತಮಗೆ ಯೋಗ್ಯರಾದ ಮತ್ತು ತಮ್ಮ ಮನಸ್ಸೊಪ್ಪುವ ಗೆಳೆಯ - ಗೆಳತಿಯರನ್ನು ಅತಿ ಮುಖ್ಯ ಮತ್ತು ಅವನು/ಅವಳಿಲ್ಲದೇ ಬದುಕುಲಾರೇನು ಎಂಬಂತಾದ ರೀತಿಯಲ್ಲಿ ತಮ್ಮ ಪ್ರೇಮವನ್ನು ಪರಸ್ಪರ ಪ್ರಕಟಿಸಿ ಮುಂದೆ ಅದಷ್ಟು ದಿನಗಳನ್ನು ಒಟ್ಟಿಗೆ ಕಳೆಯುತ್ತಾ ತಮ್ಮ ಜನಾಂಗದ ಮುಂದುವರಿಕೆಯೇನೋ ಎಂಬಂತೆ ಗಟ್ಟಿ ಜೀವನಕ್ಕೆ ಅಡಿಪಾಯ ಇಡಲು ಉತ್ಸುಕರಾಗಿರುತ್ತಾರೆ.

ಮಾನವನನ್ನು ಬಿಟ್ಟು ಬೇರೆ ಎಲ್ಲಾ ಜೀವ ಸಂಕುಲದಲ್ಲಿ ಜೋತೆಗಾರಿಕೆಯ ಅದ್ಯತೆ ಕೇವಲ ಸಂತಾನಭಿವೃದ್ಧಿ ಮತ್ತು ಪರಸ್ಪರ ರಕ್ಷಣೆ ಮತ್ತು ಅಸರೆಯೇ ಮುಖ್ಯವಾಗಿರುತ್ತದೆ.

ಹಾಗೆಯೇ ಈ ಜೋತೆಗಾರಿಕೆ ಅಥವಾ ಪರಸ್ಪರ ಒಂದಾಗಿ ಬಾಳುವ ಪಡಿಪಾಟು ತಮ್ಮ ಸ್ವಂತ ಆಯ್ಕೇಯಾಗಿರುತ್ತದೆ ಮತ್ತು ಇದಕ್ಕಾಗಿ ಅವುಗಳು ತಮ್ಮ ಹಿರಿಯರ ಸಂಬಂಧಿಕರ, ಅಪ್ತರ ಒಪ್ಪಿಗೆ ಪಡೆಯುವ ಜರೂರು ಇರುವುದಿಲ್ಲ ಅದು ಪ್ರಾಣಿಗಳ ಲೋಕ ಅಲ್ಲವಾ?

ಆದರೆ ಮಾನವ ಪ್ರೇಮ - ಮದುವೆ, ಕೇವಲ ಸಂತಾನಭಿವೃದ್ಧಿಯೊಂದೇ ಮುಖ್ಯವಾಗಿರುವುದಿಲ್ಲ. ಇಲ್ಲಿ ಹತ್ತು ಹಲವಾರು ಹತ್ತು ಮತ್ತಷ್ಟು ನೀರಿಕ್ಷೆಗಳು ಪ್ರತಿ ಹೆಣ್ಣು - ಗಂಡುಗಳ ಮಧ್ಯೆ ಉದ್ಬವಾಗುತ್ತವೆ. ಮತ್ತು ಆ ಎಲ್ಲಾ ನಿರೀಕ್ಷೆಗಳು ಪೂರ್ಣವಾಗುವ ಮಟ್ಟದವಾಗಿದ್ದರೆ ಮಾತ್ರ ಅಲ್ಲಿ ಪ್ರೇಮ ವಿವಾಹ, ತಮ್ಮ ಮಕ್ಕಳು ಒಪ್ಪಿದ ಆರಿಸಿದ ಲವ್ ಕಮ್ ಆರೇಂಜ್ಡ್ ಮದುವೆಯೆಂಬ ಬಂಧನದಲ್ಲಿ ಗಟ್ಟಿ ಸಂಬಂಧಗಳಾಗುತ್ತವೆ.

ಇಲ್ಲವಾದರೆ! ಪ್ರತಿಯೋಬ್ಬ ತಂದೆ - ತಾಯಂದಿರಿಂದ ತಮ್ಮ ಕುಟುಂಬದವರಿಂದ ವಿರೋಧವೆರ್ಪಟ್ಟು ಲವರ್ಸ್ ಗಳು ಕಣ್ಣೀರಿನಲ್ಲಿ ತಾವು ಕಟ್ಟಿದ ಪ್ರೇಮ ಸೌಧವನ್ನು ನಿಷ್ಕಾರುಣವಾಗಿ ಕೆಡವಿ ತೋಳೆಯಬೇಕಾಗುತ್ತದೆ.

ತಮ್ಮ ಹೆತ್ತವರು ಈ ಒಂದು ವಿಚಾರದಲ್ಲಿ ತಮ್ಮ ಮಕ್ಕಳನ್ನು ಎಂದು ನಂಬುವುದಿಲ್ಲ. ಮತ್ತು ತಮ್ಮ ಮಕ್ಕಳು ಪ್ರೀತಿಗೆ ಎಲ್ಲೊ ಕೆಲವರು ಒಪ್ಪಿಗೆ ಕೊಟ್ಟು ತಾವು ಖುಷಿಪಡುತ್ತಾರೆ.

ಮುಖ್ಯವಾಗಿ ಬರುವ ಒಂದು ದೊಡ್ಡ ಅಡಚಣೆಯೆಂದರೇ ಜಾತಿ ಸಮಸ್ಯೆ ಇದನ್ನು ತಾವುಗಳು ಎಂದು ಬಿಲ್ ಕುಲ್ ಆಧಾರಿಸುವುದಿಲ್ಲ. ಆದರೆ ಪ್ರೀತಿಯೆಂಬುದು ಕುರುಡು ಅಲ್ಲವಾ ಗಂಡು - ಹೆಣ್ಣು ತಾವುಗಳು ಏನೋ ಎಂತದೋ ಸಮಯದಲ್ಲಿ ಪರಸ್ಪರ ಇಷ್ಟಪಟ್ಟು ತಮ್ಮ ಸಂಗಾತಿ ನೀನೇ ನೀನು ಎಂದು ಮುಂದುವರಿದು ಮದುವೆಯ ಸಮಯದಲ್ಲಿ ಕಲ್ಪಿಸಲಾರದ ರೀತಿಯಲ್ಲಿ ತಮ್ಮ ಪ್ರೇಮ ತಾಜ್ ಮಹಲ್ ನಲ್ಲಿ ಬಿರುಕು ಕಾಣಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ನಮ್ಮ ಭಾರತದಲ್ಲಿ ಯಾರೊಬ್ಬರೂ ಸಿದ್ಧ ಮನಸ್ಸಿನಿಂದ ಮನಸ್ಸಪೂರ್ವಾಕವಾಗಿ ಅಂತರ ಜಾತಿ ವಿವಾಹಕ್ಕೆ ಒಪ್ಪಲಾರರು.

ಅಂತಸ್ತು, ಆಸ್ತಿ, ವಿದ್ಯೆ, ಹಣ, ಸಂಬಂಧ, ಉದ್ಯೋಗ ಹೀಗೆ ನೂರಾರು ಮಜಲುಗಳ ಪಾಸೀಟಿವ್ ಅಂಶಗಳನ್ನು ಪ್ರತಿಯೊಬ್ಬರೂ ತಮ್ಮ ಲೇವಲ್ ಗಳಲ್ಲಿ ನಿರ್ಧರಿಸುತ್ತಾರೆ.

ಹಾಗೆಯೇ ಮೇಲೆ ಹೇಳಿದಂತೆ ಈ ಒಂದು ವಿಚಾರದಲ್ಲಿ ತಮ್ಮ ಹೆತ್ತವರು ಅರಿಯದ - ತಿಳಿಯದ ವಯಸ್ಸಿನ ಆಕರ್ಷಣೆ ಈ ಲವ್ ಎಂದು ಷಾರಾ ಎಳೆದು ಲವ್ ಮಾಡುವುದೇ ದೊಡ್ಡ ತಪ್ಪು ಎಂದು ನೋಡುತ್ತಾರೆ. ಇದರಲ್ಲೂ ಗಮನಿಸಬೇಕಾದಂತ ಒಂದಷ್ಟು ಗಟ್ಟಿ ಸಂಬಂಧಗಳು ಉನ್ನತ ಮೌಲ್ಯಗಳನ್ನು ಹೊಂದಿದ ಗಟ್ಟಿ ಜೋಡಿಗಳು ಇರುತ್ತಾವೆ ಎಂಬುದನ್ನು ಪ್ರತಿಯೊಬ್ಬರು ತಿಳಿಯಬೇಕು.

ಇದಕ್ಕಾಗಿ ತಮ್ಮ ವಿಧದ ಮತ್ತು ತಾವು ಯೋಚಿಸಿದ ಒಪ್ಪಿದ ಗಂಡು - ಹೆಣ್ಣುಗಳನ್ನು ಜೋತೆ ಮಾಡಿ ತಾವುಗಳು ಏನೋ ಒಂದು ಗಟ್ಟಿಯಾದ ಸಂಬಂಧವನ್ನು ಕೊಡಿಸಿದೆವು ಎಂದು ಅರೇಂಜ್ಡ್ ಮದುವೆ ಮಾಡಿ ಖುಷಿಪಡುವ ಹೆತ್ತವರು ಅವುಗಳು ಸಹ ಮಧ್ಯದಲ್ಲಿ ಪೇಲ್ ಆಗುತ್ತಿರುವಾಗ ಏನು ಹೇಳುವರು?

ಮದುವೆ ಎಂಬುದು ತಮ್ಮ ಮನಸ್ಸು ಇಷ್ಟಪಟ್ಟು ಪರಸ್ಪರ ಹೊಂದಾಣಿಕೆ, ಪರಸ್ಪರ ಗೌರವದಿಂದ ಎರಡು ಜೀವಗಳು ಅಕ್ಕರೆಯಿಂದ ಸಂತೋಷದಿಂದ ಜೀವಿಸುವ ಬದುಕು ಅಂಥ ಅನಿಸುವುದಿಲ್ಲವೇ?

-ತ್ರಿಪುಟಪ್ರಿಯ

ಶನಿವಾರ, ಜನವರಿ 2, 2010

ಸಿಹಿಗಾಳಿ ಸಿಹಿಗಾಳಿ ಸಹಿ ಮಾಡಲಿ

ಮತ್ತೆ ನಮ್ಮ ಭರವಸೆಗಳಿಗೆ ದಿನದ ಉತ್ತಮ ಗಳಿಗೆಗಳಿಗೆ ಆಶಾಕಿರಣದ ನೋಟಕ್ಕಾಗಿ ಪುನಃ ಹೊಸ ವರ್ಷದ ಹೂಸ್ತೀನಲ್ಲಿ ನಿಂತಿದ್ದೇವೆ. ಕಳೆದ ದಿನಗಳ ಸುಖ - ಸಂತೋಷ, ಸೋಲು - ಗೆಲುವು, ನೋವು - ನಲಿವುಗಳ ಮಿಶ್ರ ಭಾವದ ಬದುಕಿನ ಇತಿಹಾಸಕ್ಕೆ ಇತಿಶ್ರೀ ಇಟ್ಟು ಮುಂದಿನ ಭವಿಷ್ಯತ್ ದಿನಗಳ ಕಡೆಗೆ ಆಸೆಯಗಣ್ಣು ಬೀರುವ ತವಕದಲ್ಲಿ ಎಲ್ಲಾ ಮನಗಳು ತುಡಿತದಲ್ಲಿವೆ.

ದಿನಗಳು ಯಾರಿಗೂ ಕಾಯುವುದಿಲ್ಲ ಮತ್ತು ಯಾರನ್ನು ಕೇಳಿ ಹಗಲು ರಾತ್ರಿಯ ಪಯಣವನ್ನು ಮಾಡುವುದಿಲ್ಲ. ಎಲ್ಲಾರಿಗೂ ಸಮಾನವಾಗಿ ದಿನದ ಇಪ್ಪತ್ತನಾಲ್ಕು ಗಂಟೆಗಳನ್ನು ಮುನ್ನೂರ ಅರವತೈದು ದಿನಗಳನ್ನು ಬೇದ ಭಾವವಿಲ್ಲದೆ ದಯಪಾಲಿಸುತ್ತ ತನ್ನ ದಾರಿಯನ್ನು ತಾನು ಹಿಡಿದಿರುತ್ತದೆ. ಅದರಲ್ಲಿ ನಾವುಗಳು ಎಷ್ಟರ ಮಟ್ಟಿಗೆ ನಮ್ಮ ಗಟ್ಟಿ ದಿನಗಳನ್ನಾಗಿ ಮಾಡಿಕೊಂಡು ಪ್ರತಿ ಗಂಟೆಯನ್ನು ನಮ್ಮ ಮರೆಯಲಾರದ ದಿನಗಳನ್ನಾಗಿ ಮಾಡಿಕೊಂಡು ಇತಿಹಾಸದ ಕೊಂಡಿಗೆ ನಮ್ಮದು ಒಂದು ಇರಲಿ ಎಂಬಂತೆ ಮುಖ್ಯ ಗಟ್ಟಿ ಕೊಂಡಿ ಜೊಡಿಸುವ ಕೌಶಲ್ಯ ತಮ್ಮ ತಮಗೆ ಬಿಟ್ಟಿದ್ದು ಅದಕ್ಕೆ ವರ್ಷ ದಿನ ಕಾಲಮಾನ ಹೊಣೆಯಲ್ಲ.

ಹೊಸ ವರ್ಷದ ಪಾದಕ್ಕೆ ಅಡಿ ಇಡುವ ಸಮಯದಲ್ಲಿ ಕಳೆದ ದಿನಗಳ ಪುನರ್ ವಿಮರ್ಶೆ ಅಗತ್ಯ ಅದು ಮುಂದಿನ ಬರುವ ದಿನಗಳನ್ನು ಯಾವ ರೀತಿ ಕಳೆಯಬೇಕು, ಯಾವುದರಲ್ಲಿ, ಎಲ್ಲಿ ನಾವೂ ಎಡೆವಿದೆವು, ಎಲ್ಲಿ ಜಯ ಬೇರಿ ಬಾರಿಸಿದೆವು ಮತ್ತು ಯಾವುದರಲ್ಲಿ ಎಲ್ಲಾರನ್ನು ಕೊಡಿ ಹಿತವಾದ ದಿನಗಳನ್ನು ಸಮಯವನ್ನು ಸಂತೋಷವಾಗಿ ಕಳೆದೆವು ಕೊಡಿದೆವು ಎಂಬ ಕಿರು ನೋಟ ಚಿಕ್ಕ ಚಿಕ್ಕ ತಪ್ಪು ಒಪ್ಪುಗಳ ಸರಿಪಡಿಸುವಿಕೆಗೆ ದಾರಿ ದೀಪವಾಗುವುದು.

ಹೊಸ ದಿನಗಳು ಬರುವಂತೆ ನಮ್ಮ ನಮ್ಮ ವಯಸ್ಸನ್ನು ಹೆಚ್ಚು ಹೆಚ್ಚು ಮಾಡಿ ನಾವು ಹೆಚ್ಚು ಹೆಚ್ಚು ದೊಡ್ಡವರನ್ನಾಗಿ ಮಾಡುತ್ತದೆ. ದೊಡ್ಡವರಾಗುವುದು ನಮ್ಮ ವಯಸ್ಸಿನಲ್ಲಾಗದೇ ನಮ್ಮ ತಿಳುವಳಿಕೆ ನಮ್ಮ ಬುದ್ಧಿ ಬೆಳವಣಿಗೆಯಲ್ಲೂ ಕಾಣಬೇಕು, ಅದರ ಹೊಳಪು ಮತ್ತು ಝಲಕ್ ನ ಬೆಳಕು ನಮ್ಮ ಸುತ್ತಲಿನವರಿಗೂ ಉಪಯೋಗವಾಗಬೇಕು.

ಒಂದು ಸಂವತ್ಸರ ಯಾವುದೇ ವ್ಯಕ್ತಿಯ ಮಹಾತ್ವವಾದ ಕಾಲ ಘಟ್ಟ. ಅದು ಎಂದು ಮರೆಯಲಾರದ ಮೆಲುಕು ಹಾಕುವ ಕಾಲಮಾನ. ಪ್ರತಿಯೊಬ್ಬ ವ್ಯಕ್ತಿಯ ತನ್ನ ಕ್ಷೇತ್ರದಲ್ಲಿ ತಾನು ಎಷ್ಟರ ಮಟ್ಟಿಗೆ ಸಾಧಿಸಿದೇ ಎಂಬುದನ್ನು ಒಂದು ವರ್ಷದ ಬೆಳವಣಿಗೆಯಿಂದ ಅಳೆಯಲಾಗುವುದು.

ನಮ್ಮ ಇಂದಿನ ದಿನ ಮಾನಗಳಲ್ಲಿ ನಮ್ಮ ದೈನಂದಿನ ಬದುಕು ಕೇವಲ ನಮ್ಮ ಸಂಸಾರ ನಮ್ಮ ಮನೆಯನ್ನು ಮಾತ್ರ ಅವಲಂಬಿತವಾಗದೇ ಅದು ಸಮಸ್ತ ಪರಿಸರ , ಊರು, ಜನ, ಸಮಾಜ, ರಾಜಕೀಯ, ಆರ್ಥಿಕತೆ, ದೇಶ ಮತ್ತು ಸಂಸ್ಕೃತಿಯನ್ನು ಅವಲಂಬಿಸಿ ಏಕನ್ಮೊಖ ಅಭಿವೃದ್ಧಿಯನ್ನು ತೋರಿಸುತ್ತದೆ. ನಮ್ಮ ದಿನಮಾನದಲ್ಲಿ ನಡೆಯುವ ಮತ್ತು ಘಟಿಸುವ ಯಾವುದೇ ರಾಜಕೀಯ ಮತ್ತು ಸಾಮಾಜಿಕ ಸಂಘರ್ಷ ಮತ್ತು ಅದರ ಸಂವೇದನೆ ನೇರವಾಗಿ ವ್ಯಕ್ತಿ ಮತ್ತು ಅವನ ಕುಟುಂಬದಲ್ಲಿನ ಸಂವೇದನೆಯನ್ನು ಪ್ರಚೋದಿಸುವ ಗುಣವನ್ನು ಹೊಂದಿದೆ. ಇದಕ್ಕೆ ಕಾರಣ ಇಂದು ನಮ್ಮ ಜೀವನದಲ್ಲಿ ಬದಲಾವಣೆಯ ಹರಿಕಾರನಂತೆ ಬಂದು ನಿಂತು ಅಗಾಧವಾಗಿ ಬೆಳೆದಿರುವ ಉನ್ನತ ತಂತ್ರಙ್ಞಾನ, ಮಾಹಿತಿ, ಮಾದ್ಯಮಗಳ ಬೆಳವಣಿಗೆ ಪ್ರತಿಯೊಂದು ಜಾಗದ ಸುದ್ಧಿ ಮತ್ತು ಘಟನೆಗಳು ಕೇವಲ ಕೇಲವೇ ಸೆಕೆಂಡುಗಳಲ್ಲಿ ನಮ್ಮ ಮನೆಯ ಹಾಲಿಗೆ ಪ್ರತ್ಯಕ್ಷವಾಗುವಂತ ವೇಗದ ಸಂವಹನೆ. ಇದಕ್ಕೆ ತಕ್ಕಂತೆ ನಮ್ಮ ಇಂದಿನ ಜೀವನದಲ್ಲಿ ವೈಕ್ತಿಕವೆಂಬ ಮತ್ತು ನಮ್ಮದಲ್ಲಾದ ವಿಚಾರಗಳು ಯಾವುದು ಇಲ್ಲಾ ಎಂಬಂತೆ ಇಡೀ ಜಗತ್ತೆ ಒಂದು ಚಿಕ್ಕ ಊರಾಗಿದೆ.

ಇಲ್ಲಿಯೇ ಕುಳಿತುಕೊಂಡು ನೋಯಾರ್ಕನಲ್ಲಿ ನಡೆಯುವ ಒಬಾಮನ ಅಧ್ಯಕ್ಷ ಪೀಠದ ಅಲಂಕಾರದ ವರದಿಯನ್ನು ನೇರವಾಗಿ ಸವಿದು ಒಬಾಮಾ ನಮ್ಮವನೆನೋ ಎಂಬಂತೆ ನಾವುಗಳು ಅದರ ಬಗ್ಗೆ ಮತ್ತು ಅವನ ಬಗ್ಗೆ ಚರ್ಚಿಸಲೂ ಸಾಧ್ಯವಾಗಿದೆ.
ಮತ್ತು ನಮ್ಮನಾಳುವ ನಮ್ಮ ಯಾವ ಜನ ಪ್ರತಿನಿದಿಗಳನ್ನು ಅವರ ಆಟೋಪಾಠಗಳನ್ನು ದಿನ ನಿತ್ಯ ರಾಜಕೀಯ ವರದಿಯ ರೊಪದಲ್ಲಿ ನೋಡಿ ಮನಸನ್ನು ಸಣ್ಣದು ಮಾಡಿಕೊಂಡು ನಾವು ಆರಿಸಿರುವ ನಮ್ಮ ಓಟಿನ ಜಾದು ಕಂಡು ನಾವೇ ಪಶ್ಚಾತ್ತಾಪಡುತ್ತೇವೆ. ಇದು ನಮ್ಮ ರಾಜ್ಯದ ೨೦೦೯ ನಲ್ಲಿ ನಡೆದ ತಾಜಾ ರಾಜಕೀಯ ತಾರಚಿತ್ರದ ಬಗ್ಗೆ ಎಂದು ಬೇರೆ ಹೇಳಬೇಕಿಲ್ಲ ಅಲ್ಲವಾ?

ಹಾಗೆಯೇ ನಮ್ಮ ಎಲ್ಲಾ ಸಂಸ್ಕೃತಿ, ಸಾಹಿತ್ಯ, ಕ್ರೀಡೆ ಹೀಗೆ ಯಾವುದರಲ್ಲೂ ನಮ್ಮ ನಮ್ಮ ಸುತ್ತಲಿನವರೂ ಜಗತ್ತಿನ ಯಾವುದ್ಯಾವುದೋ ಊರುಗಳಲ್ಲಿ ಪಾಲ್ಗೂಂಡು ತಮ್ಮತನವನ್ನು ಮೇರೆದಿರುವುದನ್ನು ನಮ್ಮ ಟಿ.ವಿ ಗಳಲ್ಲಿ ವರ್ಣಮಯವಾಗಿ ನೋಡಿ ನಮ್ಮ ಮನಸ್ಸು ರಂಗಾಗಿರುತ್ತಿರುವುದು ನಮ್ಮವರು ಯಾವ ರೀತಿಯಲ್ಲಿ ವೇಗವಾಗಿ ಜಾಗತೀಕರಣದ ವೇಗಕ್ಕೆ ಹೆಜ್ಜೆಯನ್ನು ದಾಪುಗಲಿನಲ್ಲಿ ಹಾಕುತ್ತಿದ್ದೇವೆ ಎಂಬುದು ತಿಳಿಯುತ್ತೇವೆ.

ಹೀಗೆ ಪ್ರತಿ ದಿನವೂ ನಮಗೆ ಹತ್ತು ಹಲವು ನಮ್ಮ ಮತ್ತು ಪರರ ವಿಚಾರಗಳ ಮನನ ಮತ್ತು ನಮ್ಮತನದ ಏನಾದರೊಂದು ಕೊಡುಗೆಯನ್ನು ನಾವುಗಳು ಅದಕ್ಕೆ ನೀಡಬೇಕು ಎಂಬ ಹಂಬಲವನ್ನು ನೀಡುವಲ್ಲಿ ಮಹತ್ತರವಾದ ಪ್ರೇರಣೆಯನ್ನು ನಮ್ಮ ಮಾದ್ಯಮಗಳು ಮತ್ತು ನಮ್ಮ ನೇತಾರಾರು, ನಟರು, ಕಲಾವಿದರು, ವಿಙ್ಞಾನಿಗಳು ಮಾಡುತ್ತಲೇ ಬಂದಿದ್ದಾರೆ.

ಈ ರೀತಿ ಎಲ್ಲಾ ಸಾಮಾನ್ಯರಿಗೆ ಅಸಮಾನ್ಯವಾಗಿ ಪ್ರತಿ ಸಂವತ್ಸರ ಹೊಸ ವರುಷ ಹೊಸ ಇತಿಹಾಸ ಬರೆಯಲು ಹೊಸ ದಾರಿಯನ್ನು ಮಾಡಿ ಕೊಡುತ್ತಲೇ ಇರುತ್ತಾದೆ. ೨೦೦೯ ಸಂಮಿಶ್ರವಾದ ನೋವು ನಲಿವು ಮತ್ತು ಕೇಲವು ಸಂತೋಷದ ಕೊಡುಗೆಗಳನ್ನು ರಾಜ್ಯ ಮತ್ತು ಅಂತರಾಜ್ಯ ಮಟ್ಟದಲ್ಲಿ ಕೊಟ್ಟಿದೆ. ಬರುವ ದಿನಗಳು ಹೆಚ್ಚು ಹೆಚ್ಚು ಸಮೃದ್ಧಿ ಮತ್ತು ಸಂತೋಷದ ಗಳಿಗೆಗಳನ್ನು ತರಲಿ ಎಂದು ಬೇಡುವವ.

-ತ್ರಿಪುಟಪ್ರಿಯ

ಮಂಗಳವಾರ, ಡಿಸೆಂಬರ್ 15, 2009

ಅಲ್ಲಿದೆ ನಮ್ಮನೆ ಇಲ್ಲಿ ಬಂದೇ ಸುಮ್ಮನೆ ಬೇಡ!

ಇಂದಿನ ನಮ್ಮ ಕಾರ್ಪೊರೆಟ್ ರಂಗದಲ್ಲಿ ವಿವಿಧ ಭಾಷೆಯನ್ನು ಮಾತಾನ್ನಾಡುವ, ವಿವಿಧ ಸಂಸ್ಕೃತಿಯ, ವಿವಿಧ ರಾಜ್ಯದ ಕೆಲಸಗಾರರು ನಮ್ಮ ಕನ್ನಡದ ರಾಜಾಧಾನಿಯಾದ ಬೆಂಗಳೂರಿನಲ್ಲಿ ಹಲವಾರು ಕಡೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಇಲ್ಲಿ ಒಂದು ಮಿನಿ ಭಾರತವನ್ನೇ ಕಾಣಬಹುದಾಗಿದೆ.

ಎಲ್ಲ ಕಂಪನಿಗಳಲ್ಲಿ ಅವರದೇಯಾದ ಸಮಯದಲ್ಲಿ ಎಲ್ಲ ಉದ್ಯೋಗಿಗಳಿಗೂ ಖುಷಿ ಮತ್ತು ಸಂಭ್ರಮವನ್ನುಂಟು ಮಾಡಲು ತಿಂಗಳ ಅಥಾವ ವಾರದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಲ್ಲಿನ ಉದ್ಯೋಗಿಗಳಿಗೆ ಏರ್ಪಡಿಸುವ ಪದ್ಧತಿಯನ್ನು ಎಲ್ಲ ಕಡೆ ಕಾಣಬಹುದಾಗಿದೆ.

ಆ ಸಮಯದಲ್ಲಿ ಎಲ್ಲ ಕೆಲಸಗಾರರಿಗೂ ತಮ್ಮ ತಮ್ಮ ಸಂಸ್ಕೃತಿಯ ಮತ್ತು ತಮ್ಮ ಕ್ರೀಯಾಶೀಲವಾದ ಸೃಜನಾತ್ಮಕ ಕಲೆಗಳನ್ನು ತಮ್ಮ ಸ್ನೇಹಿತರ ಮುಂದೆ ಪ್ರದರ್ಶನವನ್ನು ಕೊಡಲು ತುಂಬ ಸಹಕಾರಿಯಾಗಿರುತ್ತದೆ ಮತ್ತು ಬಿಡುವಿಲ್ಲದ ಜಂಜಾಟದ ಬದುಕಿಗೆ ಉತ್ತೇಜನಕ ರೀತಿಯಲ್ಲಿ ಉತ್ಸಾಹವನ್ನುಂಟು ಮಾಡುತ್ತದೆ. ಇಂಥ ಕಾರ್ಯಕ್ರಮಗಳು ಇಂದಿನ ಯಾಂತ್ರಿಕ ಯುಗದ ಮೆಟ್ರೋ ಮಂದಿಗೆ ಬೇಕೆ ಬೇಕು ಬಿಡಿ.

ಆದರೆ, ಇಂಥ ಕಾರ್ಯಕ್ರಮಗಳಲ್ಲಿ ತುಂಬ ಅಭಾಸವಾದ ರೀತಿಯಲ್ಲಿ ಕೆಲವೊಮ್ಮೆ ಕೆಲವು ಕಹಿ ಘಟನೆಗಳು ನಡೆದು ಹೋಗಿ ಬಿಟ್ಟು ಹತ್ತಿರದವರೆಗೆ ತುಂಬ ನೋವಾಗುತ್ತದೆ. ಆ ಸಮಯದಲ್ಲಿ ಆ ರೀತಿ ಯಾರು ಯೋಚಿಸುವುದಿಲ್ಲ. ಆದರೆ ಅದರ ಬಗ್ಗೆ ಸ್ವಲ್ಪ ವಿಚಾರ ಮಾಡಿದರೆ ಹೌದು! ಅದು ಸತ್ಯ ಏನಿಸದೇ ಇರಲಾರದು.

ಯಾವುದೇ ಹಾಡು, ಸಂಗೀತ, ನೃತ್ಯ, ನಟನೆಯ ಕಾರ್ಯಕ್ರಮಗಳನ್ನು ಎಲ್ಲರೂ ಯಾವುದೇ ಭಾಷೆ ಮತ್ತು ಜನಗಳ ಬೇದವಿಲ್ಲದೇ ಎಲ್ಲರೂ ತಮಗೆ ತಿಳಿದಿರುವ ಕಲೆಯ ಅಭಿವ್ಯಕ್ತಿಯನ್ನು ತೋರಿಸಲು ಸುಸಮಯವಾಗಿರುತ್ತದೆ.

ಪ್ರೇಕ್ಷಕರೇನಿಸಿದ ನೋಡುಗರು ತಮಗೆ ಅರ್ಥವಾಗದ ಭಾಷೆಯಲ್ಲಿನ ಅಥಾವ ತಿಳಿಯದ ಕಲೆಯನ್ನು ಕಂಡಾಗ ಇರಿಸು ಮುರಿಸಾಗುವುದು ಸಾಮಾನ್ಯ. ಆದರೆ ಅದಕ್ಕಾಗಿ ತಮ್ಮತನವನ್ನು ಕಳೆದುಕೊಂಡು ಅತ್ಯಂತ ಅನಾಗರಿಕತೆಯನ್ನು ತೋರಿಸಿ ವೇದಿಕೆಯ ಮೇಲೆ ತಮ್ಮ ಕಲೆಯನ್ನು ಪ್ರದರ್ಶಿಸುವವರಿಗೆ ಅವಮಾನ ಮಾಡುವುದು ಎಷ್ಟು ಸರಿ!

ಇಂದಿನ ಕಾರ್ಪೊರೆಟ್ ದಿನಮಾನಗಳಲ್ಲಿ ಎಲ್ಲ ಕಡೆ ನಮ್ಮ ಭಾಷೆ ಮತ್ತು ನಮ್ಮ ಸಂಸ್ಕೃತಿಯನ್ನು ಆಚರಿಸುವವರು ಸಿಗುವುದು ಕಷ್ಟ. ಅದ್ದರಿಂದ ನಾವ್ಯಾಕೇ ಬೇರೆಯವರ, ಬೇರೆ ರಾಜ್ಯದ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳನ್ನು ಗೌರವದಿಂದ ನೋಡಿ ಆನಂದಿಸಲಾರೆವು ಹೀಗೆ ಮಾಡುವುದರಿಂದ ಅಷ್ಟೋಂದು ಕಷ್ಟಪಟ್ಟು ನಮಗಾಗಿ ಅಪರೂಪದ ಕಲೆಯ ವೈಭವವನ್ನು ನಮ್ಮ ಮುಂದೆ ಇಡುವವರಿಗೆ ಪ್ರೋತ್ಸಹವವನ್ನು ಉತ್ತೇಜನವನ್ನು ಕೊಟ್ಟಂತಾಗಿ ನಾವುಗಳು ಅವರ ಬಗ್ಗೆ ಮತ್ತು ಅವರ ಮಣ್ಣಿನ ಬಗ್ಗೆ ತಿಳಿಯಲು ಕುತೊಹಲದಿಂದ ಇದ್ದೇವೆ ಎಂದರೆ ಅವರಿಗೇಷ್ಟು ಆನಂದ ಮತ್ತು ಮಮತೆ ಉಂಟಾಗುವುದಿಲ್ಲ. ಇದು ಎಷ್ಟೊಂದು ಹೆಮ್ಮೆಯ ವಿಚಾರವಾಗುವುದಿಲ್ಲವೇ.

ಎಲ್ಲರಿಗೂ ತಿಳಿದಿರುವಂತೆ ನಮ್ಮ ದೇಶ ಭಾರತ ಅಂದರೆ ಬಹು ಸಂಸ್ಕೃತಿಯ ರಾಯಾಬಾರಿ. ಇಲ್ಲಿ ಒಂದು - ಒಂದೇ ಎನ್ನುವುದು ಸಮಗ್ರವಾಗಿ ನಾವೆಲ್ಲಾ ಒಂದು ಎನ್ನುವಾಗ. ನಮ್ಮ ಮಾತು, ಸಂಸ್ಕೃತಿ, ವಿಚಾರ - ಆಚರಗಳಿಗಲ್ಲಾ ಅಲ್ಲವಾ!

ಈ ಮಹನ್ ಸತ್ಯ ಗೊತ್ತಿರುವಾಗ ನಾವೇಕೆ ಪುನಃ ಕೀಳಾಗಿ ವರ್ತಿಸುವುದು. ಕಲೆಗೆ ಯಾವುದೇ ಗಡಿ ಪ್ರಾಂತ್ಯವಿಲ್ಲ ಮತ್ತು ಯಾವುದೇ ಭಾಷೆಯಿಲ್ಲ ಕಲೆಗೆ ಕಲೆಯೇ ಭಾಷೆ ಮತ್ತು ಮಾದ್ಯಮ. ಅದೇ ಗೊತ್ತು ಗುರಿಯಿಲ್ಲದ ನಮ್ಮ ಸಂಸ್ಕೃತಿಯಲ್ಲದ ರಾಕ್ ಪಾಪ್ ಸಂಗೀತ, ಡ್ಯಾನ್ಸ್ ಗಳನ್ನು ಕಣ್ಣು ಕಣ್ಣು ಬಿಟ್ಟು, ಬಾಯಿ ಬಾಯಿ ತೆರೆದು ಅಹ್ಲಾದಿಸುವುದು ನಮ್ಮ ಭಾರತೀಯರ ಅಭಿರುಚಿ ಎತ್ತ ಕಡೆ ದಾಪುಗಾಲು ಹಾಕುತ್ತಿದೆ ಎಂದು ಯೋಚಿಸುವಂತೆ ಮಾಡಿದೆ.

ನಮ್ಮ ನಮ್ಮ ಮನೆಯ ಮಾತು ಮತ್ತು ನಮ್ಮ ಮನೆಯಲ್ಲಿನ ಕಲೆಗಳನ್ನು ಪ್ರದರ್ಶಿಸುವುದೇ ಅಥಾವ ಹಾಡುವುದೇ ಅಸಹ್ಯವೇನೊ ಎಂಬ ರೀತಿಯಲ್ಲಿ ನಾವುಗಳು ಕಾಣುವುದು ಯಾವುದರ ಸಂಕೇತ?

ನಮಗೆ ತಿಳಿಯದೇ ಇದ್ದರೂ ಅದನ್ನು ವ್ಯಕ್ತಪಡಿಸುವ ಕಲೆಗಾರರಿಗೆ ಅವಕಾಶ ಮಾಡಿ ಅವರನ್ನು ಗೌರವಿಸಬೇಕು ಅದು ಬಿಟ್ಟು ತಮಗೆ ಆ ರೀತಿಯಲ್ಲಿ ಒಂದು ನಿಮಿಷ ವೇದಿಕೆಯ ಮೇಲೆ ನಿಲ್ಲಲು ಆಗದು ಅಂಥ ಸಮಯದಲ್ಲಿ ಸುಮ್ಮನೆ ವೇದಿಕೆಯ ಹಿಂದೆ ಮುಂದೆ ಕುಳಿತುಕೊಂಡೋ ನಿಂತುಕೊಂಡೋ ತಮ್ಮ ಗೆಳೆಯರು ಹಾಡುವ ಸಮಯದಲ್ಲಿ ಅಥಾವ ನೃತ್ಯ ಮಾಡುವ ಸಮಯದಲ್ಲಿ ಅಥಾವ ಮಾತನಾಡುವ ಸಮಯದ ಮದ್ಯದಲ್ಲಿಯೇ ಚಪ್ಪಾಳೆಯನ್ನು ತಟ್ಟುವುದು, ಕೊಗು ಹಾಕುವುದು ಎಲ್ಲಿನ ಸಂಸ್ಕೃತಿ?

ನಾವುಗಳು ತುಂಬ ಇಷ್ಟಪಟ್ಟು ಆಚರಿಸಲು ಮನಸ್ಸು ಮಾಡುವ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ನಾವೇಲ್ಲಾ ತಪ್ಪದೇ ಪಾಲಿಸಬೇಕಾದ ಆಚರಣೆಯಿದೆ ಅದೇ ಬೇರೆಯವರು ಏನಾದರೂ ಮಾತನಾಡುವಾಗ ಮದ್ಯದಲ್ಲಿ ಅಸಭ್ಯವಾಗಿ ವರ್ತಿಸದೇ ಅವರು ಪೂರ್ಣವಾಗಿ ಮುಗಿಸವವರೆಗೆ ಕಾದು ಅನಂತರ ತಾವು ಮಾತನ್ನಾಡುವುದು. ಈ ರೀತಿಯ ಅಮೊಲ್ಯವಾದ ಆಚರಣೆಗಳನ್ನು ಗಾಳಿಗೆ ತೊರಿ ತಮ್ಮ ತನವನ್ನು ಮೇರೆಯಬಾರದು ಅಲ್ಲವಾ!

ಯಾವುದೇ ಒಳ್ಳೆಯದನ್ನು ಎಲ್ಲರಿಂದ ಎಲ್ಲಾ ಕಡೆಯಿಂದ ತೆಗೆದುಕೊಳ್ಳಬೇಕು ಆಗಲೇ ನಾವು ಜೀವಿಸುತ್ತಿರುವ ಸುತ್ತಲಿನ ಸಮಾಜ ಜನಾಂಗ ಶಾಂತಿ ಮತ್ತು ಸಹ ಬಾಳ್ವೆಯ ಜೀವನ ನೆಡಸಲು ಸಾಧ್ಯ. ಇಲ್ಲವಾದರೆ ತಮ್ಮ ತಮ್ಮಲ್ಲಿಯೇ ಭಿನ್ನಮತ ಮತ್ತು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

ಇದು ನಾವುಗಳು ದಿನದ, ತಿಂಗಳಿನ, ವರ್ಷದ ಮತ್ತು ನಮ್ಮ ಜೀವಿತದ ಹೆಚ್ಚು ಸಮಯವನ್ನು ಕಳೆಯುವ ನಾವು ಕೆಲಸ ಮಾಡುವ ನಮ್ಮ ನಮ್ಮ ಕಂಪನಿಗಳಿಂದ ಪ್ರಾರಂಭವಾಗಲಿ ಎಂಬುದೇ ಈ ಭಾರತೀ (ಯನ) ಮನದ ಹಂಬಲ.

-ತ್ರಿಪುಟಪ್ರಿಯ

ಶನಿವಾರ, ಡಿಸೆಂಬರ್ 5, 2009

ಬಾಲ್ಕನಿಯಿಂದ ಸಹಜ ನೋಟ

ಹಿಂದಿನ ದಿನಗಳ ವಿಜಯ ಕರ್ನಾಟಕದ ಸಾಪ್ತಾಹಿಕ ಪುರವಣಿಯಲ್ಲಿ ಗಮನ ಸೆಳೆದ ನಮ್ಮೆಲ್ಲರನ್ನು ಆಶ್ಚರ್ಯವಾಗುವಂತೆ ಮಾಡಿದ ಪುಟ್ಟ ಅಂಕಣ ಬರಹಗಳಾದ "ಬಾಲ್ಕಾನಿಯಿಂದ" ಸಹಜ ಎಂಬುವ ಅರ್ದ ಮುಖವನ್ನು ಮಾತ್ರ ತನ್ನ ಛಾಯ ಚಿತ್ರದ ಮೂಲಕ ತೋರಿಸುತ್ತಾ ಎಲ್ಲಾ ಓದುಗರನ್ನು ವಿಸ್ಮಯಗೊಳಿಸಿದ ಅಪರೂಪದ ಅಂಕಣ.

ಯುವತಿಯ - ಯುವಕರ ಸಾಮಾನ್ಯ ವಯೋಸಹಜ ತಲ್ಲಣಗಳನ್ನು ತನ್ನ ಬರಹಗಳ ಮೂಲಕ ಜಗಜ್ಜಾಹೀರು ಮಾಡಿದ ಈ ಲೇಖನಗಳನ್ನು ಕಂಡಾಗ ಕೆಲವರಿಗೆ ಶಾಕ್! ಮತ್ತು ಕೆಲವರಿಗೆ ಏನ್ ಗುರು ಈ ಹುಡುಗಿ ಹೀಗೆ ಬರೆಯುವುದಾ ಎನ್ನುತ್ತಿದ್ದರು. ಆ ಎಲ್ಲಾ ಲೇಖನಗಳ ವಸ್ತು ಆಶ್ಚರ್ಯಕರ ರೀತಿಯಲ್ಲಿರುತ್ತಿದ್ದವು. ಮತ್ತು ಯಾರೊಬ್ಬರು ಬರಹಗಳಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದ ರೀತಿಯಲ್ಲಿ ಬರಹಗಳಲ್ಲಿ ಮೊಡಿ ತಮ್ಮ ತುಂಟತನದ ಎಲ್ಲೇಯನ್ನು ಮೀರಿದವು ಎಂದು ಭಾಸವಾಗುವಂತಿರುವಂತೆಯೇ ತನ್ನ ಸತ್ಯದ ಮರ್ಮವನ್ನು ತೋರಿ ಎಲ್ಲಾರೂ ಒಮ್ಮೆ ಚಿಂತನೆಯನ್ನು ಮಾಡುವಂತಾಗುತ್ತಿತ್ತು.

ಹುಡುಗರು ಸಹ ಪ್ರಸ್ತಾಪಿಸಲೂ ಹಿಂಜರಿಯುವಂತ ಟಾಪಿಕ್ ಗಳನ್ನು ಸಹಜರವರು ತುಂಬ ಸರಳವಾಗಿ ಸಹಜವಾಗಿ ಯುವಕರು - ಯುವತಿಯರು ಎನ್ ಜಾಯ್ ಮಾಡುತ್ತಾ ತಮ್ಮ ನಲಿವಿನ ತಮಾಷೆಯ ದಿನಗಳನ್ನು ಈ ಲೇಖನಗಳನ್ನು ಓದುವ ಮೂಲಕ ಸಂತಸಪಡುವಂತೆ ಬರೆಯುತ್ತಿದ್ದರು.

ಆ ಸಮಯದಲ್ಲಿ ಕೆಲವೂಮ್ಮೆ ಈ ಬರಹಗಳನ್ನು ಮಿಸ್ ಮಾಡಿಕೊಂಡಿದ್ದುಂಟು. ಎಲ್ಲಾ ಬರಹಗಳನ್ನು ಒಟ್ಟಿಗೆ ಓದಬೇಕು ಅನಿಸಿದ್ದುಂಟು. ಈ ಎಲ್ಲಾ ಆಸೆಗಳಿಗೆ ಪೂರಕವಾಗಿ "ಸಾಹಿತ್ಯ ಭಂಡಾರ" ಪ್ರಕಾಶನದಿಂದ "ಬಾಲ್ಕಾನಿಯಿಂದ ಬಾಗ -೧ ಮತ್ತು ಬಾಗ - ೨" ಸುಂದರ ತುಂಟತನದ ಮುಖ ಪುಟದೊಂದಿಗೆ ಸಂಗ್ರಹ್ಯವಾದ ಎರಡು ಪುಟ್ಟ ಪುಸ್ತಕಗಳನ್ನು ಹೊರತಂದಿರುವುದು ನಮ್ಮಂತ ತರುಣ ಹೃದಯಗಳಿಗೆ ಕಿಚ್ಚು ಹಚ್ಚಿದಂತಾಗಿದೆ.

ಒಂದೇ ಸಿಟ್ಟಿಂಗ್ ನಲ್ಲಿ ಎರಡು ಪುಸ್ತಕಗಳು ಸಂತೋಷದಿಂದ ಓದಿಸಿಕೊಂಡುಬಿಡುತ್ತವೆ.

ಎಲ್ಲಾ ಲೇಖನಗಳು ಪ್ರತಿಯೊಬ್ಬ ೧೮ -೨೪ ತರುಣಿಯ ಯೋಚನಾ ದಾಟಿಯನ್ನು ಉಲ್ಲೇಖಿಸಿರುವಂತಿದೆ. ಆದರೆ ಯಾರೂ ಆ ರೀತಿ ಹೇಳಿಕೊಳ್ಳುವುದಿಲ್ಲ ಆದರೆ ತಮ್ಮ ಮನದ ಯಾವುದೂ ಜಾಗದಲ್ಲಿ ಒಮ್ಮೆಯಾದರೂ ಯೋಚಿಸಿರುತ್ತಾರೆ ಅದಂತು ೧೦೦% ನಿಜಾ!

ಆದರೆ ಸಹಜರವರು ತಮ್ಮ ಸ್ಕೋಟಿಯ ವೇಗದ ರೀತಿಯಲ್ಲಿ ವಿಚಾರಗಳನ್ನು ಲವ್ - ತರುಣಿಯ ಹಸಿ ಆಸೆ, ಹುಡುಗುತನ, ನಿರಾಶೆ, ಪಸ್ಟ್ ಕ್ರಶ್, ಹದಿ ಹರೆಯದ ಕಾತುರತೆ ಮತ್ತು ತನ್ನ ವಯಸ್ಸಿ ಹುಡುಗನೆಡೆಗೆ ಇರುವ ಸೆಳೆತ ಇತ್ಯಾದಿ ಇತ್ಯಾದಿ ವಿಚಾರಗಳನ್ನು ತಮ್ಮ ಪುಟ್ಟ ಪುಟ್ಟ ಬರಹಗಳಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.

ಹಾಗೆಯೇ ಲೇಖಕಿ ಸಹಜ ತಮ್ಮ ಗಂಭೀರವಾದ ಸಾಹಿತ್ಯ ಅಧ್ಯಯನದ ಛಾಪನ್ನು ತಮ್ಮ ಲೇಖನಗಳಲ್ಲಿ ಮೊಡಿಸಿದ್ದಾರೆ. ಅವರು ಕನ್ನಡದ ಎಲ್ಲಾ ಪ್ರಸಿದ್ಧ ಬರಹಗಾರರ ಸಾಹಿತ್ಯವನ್ನು ಓದಿದ್ದಾರೆ. ಬೈರಪ್ಪ, ಲಂಕೇಶ, ಅನಂತ ಮೊರ್ತಿ, ತೇಜಸ್ವಿ, ಬೆಳಗೆರೆಯವರಿಂದ ಪ್ರಾರಂಭಿಸಿ ಒಶೋ ರಜನಿಶರವರೆಗೆ ಸಾಹಿತ್ಯವನ್ನು ಅರಗಿಸಿಕೊಂಡಿದ್ದಾರೆ. ಅದ್ದರಿಂದಲೇ ಯಾವೂಂದು ಬರಹಗಳು ಕೇವಲ ವಯೋ ಸಹಜ ಚಿತ್ರಣಗಳಾಗದೇ ಗಟ್ಟಿ ಅನುಭವಗಳ ಮೈಲಿಗಲ್ಲುಗಳಾಗಿ ನಿಲ್ಲುತ್ತವೆ.

ಹಾಗೆಯೇ ಯಾವೊಂದು ವಿಷಯವನ್ನು ಯಾವ ಅಂಜಿಕೆಯಿಲ್ಲದೆ ಪ್ರಸ್ತಾಪಿಸಿ ಅದಕ್ಕೆ ನ್ಯಾಯ ಒದಗಿಸಿ ಅದರ ವಿಸ್ತಾರತೆಯನ್ನು ಕಟ್ಟಿ ಕೊಟ್ಟಿದ್ದಾರೆ. ರಜನೀಶರ "ಸಂಬೋಗದಿಂದ ಸಮಾಧಿಯ ಕಡೆಗೆ" ಪುಸ್ತಕದ ಬಗ್ಗೆ ಬರೆಯುತ್ತಾ, ಆ ಪುಸ್ತಕವನ್ನು ಓದಲು ಪ್ರಾರಂಭಿಸಿದಾಗ ತನ್ನ ಸುತ್ತಲಿನ ಗೆಳತಿಯರ ಪ್ರತಿಕ್ರೀಯೆ ಸಾಮಾನ್ಯವಾಗಿ ನಮ್ಮ - ನಿಮ್ಮ ವರ ಮಡಿವಂತಿಕೆಯ ರೀತಿಯಲ್ಲಿ ಸೆಕ್ಸ್ ಗುರುವಿನ ಗ್ರಂಥಾಧ್ಯನವೇ!! ಎಂದು ಅಶ್ಚರ್ಯಚಕಿತರಾಗಿದ್ದದು. ಹಾಗೆಯೇ ಲೇಖಕಿ ಆ ಪುಸ್ತಕವನ್ನು ಮತ್ತು ರಜನೀಶರ ವಿಚಾರಧಾರೆ ಯಾವ ಮಟ್ಟದ್ದು ಮತ್ತು ಅದು ಹೇಗೆ ನಮ್ಮ ಜೀವನಕ್ಕೆ ಧಾರಿ ದೀಪವಾಗಿರುವಲ್ಲಿ ಸಫಲವಾಗಿದೆ ಎಂದು ಚಿತ್ರಿಸಿರುವುದು ಅವರ ಗಟ್ಟಿ ವ್ಯಕ್ತಿತ್ವಕ್ಕೆ ಸಾಕ್ಷಿ.

ಹೀಗೆಯೇ ಲೇಖಕಿಯ ಈ ತುಂಟ ಬರಹಗಳಿಂದ ಯುವಕರಿಂದ ಯಾವ ರೀತಿಯ ಪತ್ರಗಳು - ಕರೆಗಳು ಲೇಖಕಿಯನ್ನೇ ಲೈನ್ ಹೊಡೆಯಲು ಪ್ರಾರಂಭಿಸಿರುವುದನ್ನು ಅದಕ್ಕೆಲ್ಲಾ ಯಾವ ರೀತಿಯಲ್ಲಿ ಸಹಜರವರು ಸಹಜ ರೀತಿಯಲ್ಲಿ ತಮ್ಮ ವ್ಯಕ್ತಿತ್ವದ ಮೂಲಕ ಅವರ ಆಸೆಗಳಿಗೆ ಯಾವ ರೀತಿಯಲ್ಲಿ ತಣ್ಣೀರು ಎರೆಚಿ ಬುದ್ಧಿ ಹೇಳಿರುವುದು ಮತ್ತು ಗೆಳೆತನ ಅಂದರೆ ಏನು, ಪರಿಚಯ ಅಂದರೇನು ಎಂದು ವಿಸ್ತಾರವಾಗಿ ಪ್ರಸ್ತಾಪಿಸಿದ್ದಾರೆ.

ಸಹಜ ಮತ್ತು ತನ್ನ ಹಾಸ್ಟೇಲ್ ಗೆಳತಿ "ಚವತಿ" ಯರ ಸ್ವಗತ ಸಲ್ಲಾಪ, ಸಾಹಸದ ಹಾದಿಗಳು ಪ್ರತಿಯೊಬ್ಬ ಯುವತಿಯ ಯೋಚನಾ ಲಹರಿಗೆ ಉದಾಹರಣೆಯಾಗಿದೆ.

ಎಲ್ಲಾ ಯುವಕ ಯುವತಿಯರಿಗೆ ಈ ರೀತಿಯ ಬರಹಗಳಿಂದ ತಾವುಗಳು ವಿಭಿನ್ನವಾಗಿ ಯೋಚಿಸಬಹುದು ಎಂಬುದನ್ನು ಕಲಿಯುವುಂತಾಗುತ್ತಾದೆ. ಮತ್ತು ಹೇಗೆ ತಮ್ಮ ಯೌವನದ ದಿನಗಳನ್ನು ಯಾವ ರೀತಿಯಲ್ಲಿ ಕ್ರೀಯಶೀಲವಾಗಿ ಅಧ್ಯಯನದ ಜೋತೆ ಜೋತೆಯಲ್ಲಿ ಹಲವಾರು ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಬಹುದು ಎಂಬುದಕ್ಕೆ ಸಹಜ ಮತ್ತು ಚವತಿಯವರು ಮಾಡುವ ಹೊಸ ಹೊಸ ಪ್ರಯೋಗಗಳಾದ ಪ್ರವಾಸ, ಓದು, ಗೊಗಲ್ ನಲ್ಲಿ ವಿವಿಧ ರೀತಿಯ ವಿಷಯಗಳನ್ನು ತಿಳಿಯುವ ಆಟ ಇತ್ಯಾದಿ ಉತ್ತಮವಾದ ನಿದರ್ಶನಗಳನ್ನು ನೀಡಿದ್ದಾರೆ.

ಎರಡು ಪುಸ್ತಕಗಳನ್ನು ಒಂದೇ ಗುಕ್ಕಿಗೆ ಓದಿ ಹರ್ಷಿತನಾಗಿ ಪುನಃ ಈ ಲೇಖಕಿಯ ಬರಹಗಳು ಮತ್ತೋಮ್ಮೆ ಮೊಡಿ ರೋಮಾಂಚನವನ್ನುಂಟು ಮಾಡಿಸಬಾರದೇ ಎನ್ನುವಂತಾಯಿತು.

ನನ್ನ ಹರ್ಷದ ಕ್ಷಣಗಳನ್ನು ಸಹಜರಿಗೆ ತಿಳಿಯಪಡಿಸಲೇ ಎಂದು ಅದೇ ಅವರ ಹಳೆಯ ಮೈಲ್ ಐಡಿ "ಲವ್ ಸಹಜ ಅಟ್ ಜಿ ಮೈಲ್ ಡಾಟ್ ಕಾಂ" ಗೇ ಪತ್ರಿಸಿದ್ದೇನೆ. ಆದರೆ ಯಾವುದೇ ಪ್ರತಿಕ್ರೀಯೆ ಇದುವರೆಗೂ ಬಂದಿಲ್ಲ. ಅವರ ಪ್ರತಿಕ್ರೀಯೆಗಾಗಿ ಕಾಯುತ್ತಿರುವೆ. ಯಾರಿಗೆ ಗೊತ್ತು ಸಾಹಸಿ ಲೇಖಕಿ ಸಹಜ ಹೊಸ ವಿಚಾರಾನುಭವಗಳೊಂದಿಗೆ ತಮ್ಮ ಹೊಸ ಲೇಖನಗಳ ಮೂಲಕ ಹೊಸ ರೀತಿಯಲ್ಲಿ ಪ್ರತ್ಯಕ್ಷವಾದರೂ ಸರಿಯೇ! ಹಾಗೆಯೇ ಆಗಲಿ ಎಂದು ಆಶಿಸುವೆ.

-ತ್ರಿಪುಟಪ್ರಿಯ

ಸೋಮವಾರ, ನವೆಂಬರ್ 30, 2009

ಬೆಂದಕಾಳೂರಿನ ಬೆವರ ಸೆಲೆ

ಇತ್ತೀಚೆಗೆ ಆ ಫೀಲ್ ಆಗುತ್ತಿದೆ ನಾನೇಷ್ಟು ದೈಹಿಕ ಶ್ರಮವನ್ನು ಪಡುತ್ತಿದ್ದೇನೆ ಎಂದು. ಪೂರಾ ಯಾಂತ್ರಿಕ ಜೀವನದ ಚಕ್ರಕ್ಕೆ ಸಿಕ್ಕು ಕೇವಲ ಕಡಿಮೆ ದೈಹಿಕ ಶ್ರಮದ ಕೆಲಸಗಳನ್ನು ಮಾಡುತ್ತಿರುವುದರಿಂದ ಸುಸ್ತಾದ ಕೆಲಸಗಳನ್ನು ಮಾಡಿ ಮೈ ಬೆವರು ಕೀಳುವಂತೆ ಯಾವುದೇ ಚಟುವಟಿಕೆ ಅಥಾವ ಸರಿಸುಮಾರು ದೂರದ ನಡೆಯುವಿಕೆಯನ್ನೇ ಮರೆತಂತಾಗಿದೆ. ಇನ್ನೂ ಯಾವುದೇ ರೀತಿಯ ದೈಹಿಕವಾಗಿ ರಿಸ್ಕ್ ಇರುವಂತ ಮೈ ನೋವು ಮಾಡುವಂತ ಕೆಲಸಗಳನ್ನು ಅಟ್ ಲೀಸ್ಟ್ ಆಟಗಳನ್ನು ಆಡಿ ಜಮಾನವೇ ಕಳೆದಂತಾಗಿದೆಯೇನೋ. ಒಂದು ರೀತಿಯ ಮೈ ಆಲಸ್ಯವನ್ನು ನನ್ನ ದೇಹ ಪ್ರತಿಪಲಿಸುತ್ತಿರುವಂತೆ ಕಾಣುತ್ತೀದೆ.

ಕೇವಲ ಕೇವಲ ಮನಸ್ಸಿಗೆ ಸಂಬಂಧಿಸಿದ ಕಠಿಣ ಕಸರತ್ತುಗಳನ್ನು ಮಾಡುವಲ್ಲಿ ಸಮಯವನ್ನು ಕಳೆಯುತ್ತಿದ್ದೇನೆ ಅನಿಸುತ್ತಿದೆ. ಆದರೆ ಬರೀ ಮನಸ್ಸಿಗೆ ಹೆಚ್ಚು ಕೆಲಸ ಕೊಟ್ಟಾಗ ಅದು ಸಹ ಮೊಂಡಾತ ಮಾಡಿ ವಿವಿಧ ರೀತಿಯ ದೇಹ ವೈಪರಿತ್ಯಗಲನ್ನು ಅದು ತನ್ನ ಮುನಿಸಿನೋಪಾದಿಯಲ್ಲಿ ಮೈ ಮೇಲೆ ತೋರುತ್ತದೆ. ಅದಕ್ಕೆ ಸ್ವಲ್ಪ ದಪ್ಪನಾದೇನೋ ಅನಿಸುವುದು, ಕತ್ತು, ಬೆನ್ನು, ಕಾಲು ನೋವು, ಕಣ್ಣು ಸ್ಟ್ರೈನ್ ಆಗಿದೆಯೇನೋ ಎಂಬ ಫೀಲ್ ಆಗುವುದು. ಈ ರೀತಿಯ ನಾನಾ ಕಾಟಗಳನ್ನು ಮನಸ್ಸು ಮುನಿಸಿಕೊಂಡು ಅನುಭವಿಸು ಎಂದು ಅಣಿಕಿಸುತ್ತೀದೆ.

ಇದಕ್ಕೆಲ್ಲಾ ವಿರಾಮ ಕಾಣಿಸಬೇಕು ದೇಹ - ಮನಸ್ಸು ಎರಡನ್ನು ಸಮತೋಲನದಲ್ಲಿ ಕಾಣುತ್ತಿನಪ್ಪಾ ಎಂದು ಇತ್ತೀಚೆಗೆ ಮುಂಜಾನೆಯೇ ಮನಸ್ಸಿಲ್ಲದ ಮನಸ್ಸಿನಿಂದ ಎದ್ದು ಹತ್ತಿರದ ಪಾರ್ಕಿನಲ್ಲಿ ನಮ್ಮ ನಗರದ ಖಾಯಂ ಜಾಗಿಂಗ್ ಮಂದಿಯ ಜೋತೆ ನಾನು ಬಿರುಸಿನ ಹೆಜ್ಜೆ ಹಾಕುತ್ತಿದ್ದೇನೆ.

ಮಕ್ಕಳಿಂದ - ವೃದ್ಧರವರಿಗೆ ವಿವಿಧ ರೀತಿಯ ವಯೋಮಾನದ ಎಲ್ಲಾ ಆಪರ್ಟಮೆಂಟ್ ಜೀವಗಳು ಮುಂಜಾನೆಯೇ ಚುಮು ಚುಮು ಬಿಸಿಲಿನ ನಡುವೆ ಯಾವುದು ಒಂದು ಯುದ್ಧಕ್ಕೆ ತಯಾರಿ ನಡೆಸಲು ಮಾಸ್ಟ್ ಪಾರ್ಟ್ ಮಾಡುತ್ತಿದ್ದಾರೇನೋ ಅನಿಸುವಂತೆ ಹಲವಾರು ಸುತ್ತುಗಳನ್ನು ಸುಸ್ತಾಗಿ ಸುತ್ತುತ್ತಾ ಇರುತ್ತಾರೆ.

ಹೌದು! ಅತಿ ಅನುಕೂಲಕರವಾದ ನಮ್ಮ ನಗರ ಜೀವನ ಎಷ್ಟರ ಮಟ್ಟಿಗೆ ಮಂದಿಯನ್ನು ಸೋಮಾರಿಗಳನ್ನಾಗಿ ಮಾಡಿದೆಯೆಂಬುದನ್ನು, ಬೆವರಿನ ಬೆಲೆ ಏನು ಎಂಬುದನ್ನು ಕಲ್ಪಿಸಲೂ ಸಾಧ್ಯವಾಗುವುದಿಲ್ಲ. ಅದಕ್ಕೆ ಸಾಕ್ಷಿ ನಮ್ಮ ಎಲ್ಲಾ ಕೃತಕ ನಗರ ಉದ್ಯಾನ ವನಗಳಲ್ಲಿನ ನಮ್ಮ ಮುಂಜಾನೆಯ ಜನ ಜಾತ್ರೆ.

ಅದು ಅಗತ್ಯವಾಗಿ ಬೇಕೆ ಬೇಕು ದಿನಕ್ಕೆ ೨ ಕಿ.ಮೀ ನಡೆಯಬೇಕು ಆಗ ಮಾತ್ರ ನೀವು ಆರೋಗ್ಯವಾಗಿರುತ್ತೀರಿ ಎಂದು ವೈದ್ಯ ಶಾಸ್ತ್ರ ಹೇಳುತ್ತದೆ. ಈ ಯಾವುದೇ ವಿಚಾರ ನಮ್ಮ ಹಳ್ಳಿಯ ಜನಕ್ಕೆ ಗೊತ್ತಿಲ್ಲ ಬಿಡಿ. ವಾಕಿಂಗ್ ಅಂದರೆ ಏನೋ ಎಂದು ಎಕಾ ಮಕಾ ನೋಡುತ್ತಾರೆ. ಸುಮ್ಮ ಸುಮ್ಮನೆ ಸುತ್ತಲು, ನಡೆದಾಡಲು ನಮಗೇನು ಹುಚ್ಚ ಅನ್ನುತ್ತಾರೆ. ಅದು ಹಳ್ಳಿ ಜಗತ್ತು!

ಹೌದು ಅಲ್ಲಿ ಮೈ ಮುರಿಯುವಷ್ಟು ಕೆಲಸ ಮತ್ತು ಹೊಟ್ಟೆ ತುಂಬುವಷ್ಟು ಪೌಷ್ಟಿಕ ಹಿಟ್ಟು ಸಿಗುತ್ತದೆ. ಕಣ್ಣು ತುಂಬ ನಿದ್ದೆ ಬರುತ್ತದೆ. ಇದನ್ನು ಸುಖ ಎನ್ನೂಣವಾ ಅಂದರೆ ಅಲ್ಲಿಯ ಜನ ಏನು ಸುಖನೋ ಏನೋ ಮಹಾರಾಯ ನಮ್ಮ ಗೋಳು ನಮಗೆ ದಿನ ಇದ್ದುದ್ದೇ ಎಂದು ನಮ್ಮ ನಗರ ಮಂದಿಯ ಅದೃಷ್ಟವನ್ನು ಕೊಂಡಾಡುತ್ತಾರೆ. ಆದರೆ ಈ ನಗರ ಸುಖದ ನಗರ ಮಂದಿಯ ಪಡಿಪಾಟಲು ಮುಂಜಾನೆಯ ಸಮಯದಲ್ಲಿ ನಗರದ ಎಲ್ಲಾ ಉದ್ಯಾನವನಗಳನ್ನು ಕಂಡಾಗ ಹಳ್ಳಿಯವನ ಪ್ರತಿಕ್ರೀಯೇ ಏನು ಎಂಬುದೇ ನನಗೆ ನಿತ್ಯ ದೂಡ್ಡ ಪ್ರಶ್ನಾರ್ಥಾಕ ಚಿಹ್ನೆ!

ದಿನದ ಮುಕ್ಕಾಲು ಪಾಲು ಸಮಯವನ್ನು ಕೇವಲ ನಾಲ್ಕು ಗೋಡೆಗಳಲ್ಲಿ - ಮನೆ - ಆಫೀಸ್ ನಲ್ಲಿ ಕಳೆಯುವ ಮಂದಿಯ ದೇಹ ಸ್ಥಿತಿ ಎಷ್ಟರ ಮಟ್ಟಿಗೆ ಜಡವಾಗಿರುತ್ತದೆ ಅಂದರೆ ಅವರ ದೇಹದ ವಾಲ್ಯುಮ್ ನೋಡಿದರೆ ನಿರ್ದರಿಸಬಹುದು. ಇದೇನೂ ಸುಖವಾಪ್ಪಾ ಎನ್ನುವಂತಾಗುತ್ತದೆ.

ಪರಸ್ಪರರ ನಡುವಿನ ಸ್ನೇಹ ಸಂಬಂಧ, ಬಂದುತ್ವಗಳು ನಗಣ್ಯವಾಗಿ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ದುಡಿಯುವ ಯಂತ್ರಗಳಾಗಿರುತ್ತಾರೆ. ಇದಕ್ಕೆ ಯಾವುದೇ ಬೇದ ಭಾವವಿಲ್ಲವೇನೋ ಎಂಬಂತೆ ಎಲ್ಲಾ ವಯಸ್ಸಿನವರು, ಮನಸ್ಸಿನವರು ತಮ್ಮ ತಮ್ಮ ಚಟುವಟಿಕೆಗಳಲ್ಲಿ ಲೀನವಾಗಿ ತಮ್ಮ ಮುಂದುವರಿಕೆಯೇ ಅಭಿವೃದ್ಧಿಯನ್ನು ಹೊಂದುವ ಪಾಥ್ ಟ್ರ್ಯಾಕ್ ಅಕ್ಟೀವಿಟಿ ಬಿಟ್ಟು ಬೇರೊಂದನ್ನು ಯೋಚಿಸಲಾರರು.

ಅದಕ್ಕೆ ಇರಬೇಕರ್ರಿ ಕೆಲಸ ಅಥವಾ ಯಾವುದೇ ಬದುಕು ನಿಂತ ನೀರಾಗಬಾರದು ಅದು ನಿರಂತರವಾಗಿ ಹರಿಯುವ ಝರಿಯಾಗಿರಬೇಕು ಆಗಲೇ ಅದಕ್ಕೆ ಒಳಪು ಮತ್ತು ಬಿಳುಪಿನ ಬಿಂಬವನ್ನು ಅದರಲ್ಲಿ ಕಾಣಬಹುದು.

ನಮ್ಮ ಹಳ್ಳಿಗಾಡಿನ ಜನಗಳ ಬದುಕಿನಲ್ಲಿ ಎಲ್ಲಾ ಇದೆ. ತಮ್ಮ ನೋವು, ನಲಿವು, ಸಂತಸ, ಕಾತರ, ಬಡತನ ಇತ್ಯಾದಿ ಎಲ್ಲವನ್ನು ತಾವೇ ಹಾಡುಗಳನ್ನು ಕಟ್ಟಿ ಹಾಡಿದರು. ಅದು ಒಬ್ಬರಿಂದ ಮತ್ತೋಬ್ಬರಿಗೆ ಸಂಹವನದ ಮೊಲಕ ಪ್ರಸರವಾಯಿತು ಮತ್ತು ಇಂದಿಗೂ ಅದು "ಜನಪದ"ವಾಗಿ ಜೀವಂತವಾಗಿದೆ. ಗಾದೆಗಳಾಗಿ ವೇದ ಸುಳ್ಳದರೂ ಗಾದೆ ಸುಳ್ಳಾಗದು ಎಂದು ಪ್ರತಿಬಿಂಬಿಸುತ್ತಿದೆ. ಹಲವು ಹಬ್ಬ ಆಚರಣೆಗಳಾಗಿ ನಮ್ಮ ದಿನಚರಿಯಲ್ಲಿ ಸ್ಥಾಪಿತವಾಗಿ ಇಂದಿಗೂ ಆಚರಿಸಲ್ಪಡುತ್ತವೆ. ಇಂಥ ಯಾವುದೇ ಒಂದು ಕ್ರೀಯಶೀಲವಾದ ಕೆಲಸವಲ್ಲದ ಘಳೀಗೆ ನಗರ ಬದುಕಿನಲ್ಲಿ ಬೋರ್ ಎನಿಸದಿರಲಾರದೇ? ಹೆಳಲಾರರು!

-ತಿಪುಟಪ್ರಿಯ

ಶನಿವಾರ, ನವೆಂಬರ್ 14, 2009

ಕನ್ನಡದ ರತ್ನನ ವಿಚಾರತರಂಗ

ಈ ಹಿಂಗಾರು ಮಳೆಯೇನೋ ಅಲ್ಲವೋ ಬಲ್ಲವರಿಲ್ಲ! ಚೆನೈನಲ್ಲಿ ಮಳೆಯ ಆರ್ಭಟ ಹೆಚ್ಚಾಗಿ ಬಹುಪಾಲು ಜನರ ಜೀವನ ಅಸ್ತವ್ಯಸ್ತವಾಗಿರುವಲ್ಲಿ, ಇಲ್ಲಿ ನಮ್ಮ ಊರುಗಳಲ್ಲಿ ಮೋಡ ಕವಿದ ವಾತಾವರಣವಿದ್ದು ಆಗಾಗ್ಗೆ ತುಂತುರು ಜಟಿ ಮಳೆಯ ಕಮ್ಮನೆ ಚಳಿಯ ಅನುಭವ. ಹೊರಗಡೆ ಹೋಗದಂತೆ ಮನೆಯಲ್ಲಿ ನಿಲ್ಲಿಸುವಂತೆ ಕಟ್ಟಿದಂತಾದ ವಾರಾಂತ್ಯ.
ಇಂಥ ಸಮಯದಲ್ಲಿ ಜೊತೆಗೆ ಕುಡಿಯಲು ಬಿಸಿ ಬಿಸಿಯಾದ ಕಾಫಿ ಮತ್ತು ಓದಲು ಒಂದು ಸುಂದರವಾದ ಕನ್ನಡ ಪುಸ್ತಕವೊಂದಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಾಗುತ್ತದೆ.

ನನ್ನ ಪುಟ್ಟ ಲೈಬ್ರರಿಯಲ್ಲಿ ನೋಡಿದರೆ ಯಾವುದನ್ನು ಓದಲಿ ಯಾವುದನ್ನು ಬಿಡಲಿ ಎನ್ನುವಂತಾಯಿತು. ಎಲ್ಲಾ ಪುಸ್ತಕಗಳು ಅಕ್ಕರೆಯ ಮತ್ತು ನಾನು ಪ್ರೀತಿಪಟ್ಟು ಸಂಗ್ರಹಿಸಿರುವಂತವು. ಮತ್ತೇ ಮತ್ತೇ ಓದಬೇಕೆನಿಸುವ ಸಂಗ್ರಹ.
ಇವುಗಳೆಲ್ಲಾದರ ಮಧ್ಯದಿಂದ ನನಗೆ ಮೆಚ್ಚಿಗೆ ಸೂಸಿ ನನ್ನ ಓದು ಎನಿಸಿದಂತಾಗಿ ಕಣ್ಣಸೆಳೆದ "ವಿಚಾರಾತರಂಗ" ಜೆ.ಪಿ ರಾಜಾರತ್ನಂರವರ ಪುಸ್ತಕವನ್ನು ಎತ್ತಿಕೊಂಡೆ. ಸುಂದರವಾದ ರಾಜರತ್ನಂರವ ಮುಖಪುಟವನ್ನು ಹೊಂದಿ ಚಿಕ್ಕ ಚಿಕ್ಕ ಗದ್ಯ ಲೇಖನಗಳನ್ನೂಳಗೊಂಡ ೨೫೦ ಪುಟಗಳ ಪುಸ್ತಕ ಮನಸೊರೆಗೊಂಡಿತು.

ಸುಮಾರು ೭೦-೮೦ರ ದಶಕಗಳಲ್ಲಿ ಅಂಕಣ ಬರಹಗಳಾಗಿ ಅಂದಿನ ದಿನ ಪತ್ರಿಕೆಯಾದ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದ್ದ ಈ ಲೇಖನಗಳು ನಮ್ಮ ಕನ್ನಡ - ಕರ್ನಾಟಕ - ಕನ್ನಡದ ವ್ಯಕ್ತಿಗಳು - ಕನ್ನಡ ವಿಚಾರಗಳಿಗೆ ಕನ್ನಡಿಯನ್ನು ಹಿಡಿದಂತಾಗಿದೆ.
ರಾಜರತ್ನಂ ಅಂದರೆ "ರತ್ನನ ಪದಗಳ" ಜನಕ, ಕವಿ ಎಂಬುದು ಇಂದಿನ ನಮ್ಮಂತ ಪೀಳಿಗೆಗೆ ನೆನಪಿಗೆ ಬರುವುದು. ಅವರು ಈ ರೀತಿಯ ಸುಸಲಿತವಾದ ಗದ್ಯ ಲೇಖನಗಳನ್ನು ತುಂಬ ಸರಳವಾಗಿ ಮಾಸ್ತರ್ ಶೈಲಿಯಲ್ಲಿ ಪುಟ್ಟ ಮಕ್ಕಳಿಗೋ ಅರ್ಥವಾಗುವಂತೆ ನಿರೂಪಿಸಿರುವುದು ಮೆಚ್ಚ ಬೇಕಾದ ವಿಷಯ.

ವಿಷಯಗಳ ಆಯ್ಕೆಯ ಸಮಯ ತುಂಬ ಹಳೆಯ ದಿನಗಳಾದರೊ ಇಂದಿಗೊ ಪ್ರಸ್ತುತವಾಗಿರುವಂತೆ ಬಾಸವಾಗುತ್ತದೆ. ಎಲ್ಲಾ ಲೇಖನಗಳು ಲಲಿತ ಪ್ರಬಂಧಂತೆ ಸರಳ ಪದಗಳ ಜೊಡಣೆಯೊಂದಿಗೆ ರಚಿತವಾಗಿದೆ. ಹೆಚ್ಚು ಲಂಬಿತವಾಗದೆ ,ದೊಡ್ದದು ಅಂದರೆ ಮೊರು ಪುಟ ಮಾತ್ರವಾಗಿದೆ.

ಇಲ್ಲಿ ಮೊಡಿರುವ ಲೇಖನಗಳ ವಿಷಯ ವೈವಿಧ್ಯ ನಮ್ಮ ಪುರಾಣ ಇತಿಹಾಸದಿಂದ ಪ್ರಸ್ತುತ ನಮ್ಮ ಹಿರಿಯ ಕಿರಿಯ ವ್ಯಕ್ತಿಗಳವರೆಗೆ, ಕನ್ನಡ ಕಟ್ಟಾಳುಗಳ ಬಗ್ಗೆ, ಕನ್ನಡದ ಬಗ್ಗೆ ತಮ್ಮ ಉಸಿರನ್ನು ಮುಡುಪಿಟ್ಟವರ ಬಗ್ಗೆ ಅವರ ಅಭಿಮಾನದ ಬಗ್ಗೆ ತುಂಬ ನಲ್ಮೆಯಿಂದ ಬರದಿದ್ದಾರೆ.

ಕನ್ನಡದ ಆಶ್ವಿನಿ ದೇವತೆಗಳಾದ ಟಿ.ಎಸ್. ವೆಂಕಣ್ಣಯ್ಯ, ಬಿ.ಎಂ.ಶ್ರೀ ಮತ್ತು ಅ. ನಾ. ಕೃಷ್ಣರಾಯರ ಬಗ್ಗೆ ಅವರು ಬರೆದಿರುವ ಬರಹಗಳಲ್ಲಿರುವ ಕನ್ನಡ ಪ್ರೇಮವನ್ನು ಕಂಡರೆ ಇಂಥವರು ಅಂದು ಇದ್ದಿದ್ದರಾ! ಎಂದು ನಾವುಗಳು ಆಶ್ಚರ್ಯ ಪಡುವಂತಾಗುತ್ತದೆ.
ಅಂದಿನ ಬೆಂಗಳೂರು - ಮೈಸೂರು ಮಧ್ಯದಲ್ಲಿ ಜರುಗಿದ ಕನ್ನಡದ ಕೆಲಸಗಳು, ಕಾರ್ಯಕ್ರಮಗಳನ್ನು ತಮ್ಮ ಲೇಖನಿಯಿಂದ ಕಣ್ಣಿಗೆ ಕಟ್ಟುವಂತೆ ಸೆರೆ ಹಿಡಿದಿದ್ದರೆ. ರಾಜರತ್ನಂ ಸ್ವತಃ ಕನ್ನಡವನ್ನು ತಮ್ಮ ದೈನಂದಿನ ಉಸಿರಾಗಿ ಹಾಡಿ ಬೆಳಸಿದಂತ ಜೀವ. ಅವರಲ್ಲಿ ಕನ್ನಡ ಬಗ್ಗೆ ಇರುವಂತ ಕಾಳಜಿ ಮತ್ತು ಅದನ್ನು ಯಾವ ರೀತಿಯಲ್ಲಿ ಜನಸಾಮಾನ್ಯರಿಗೆ ತಲುಪಿಸಬೇಕು ಮತ್ತು ಅಂದಿನ ದಶಕಗಳಲ್ಲಿ ಹೇಗೆ ತಮ್ಮ ಕಾರ್ಯ ಕ್ಷೇತ್ರವಾದ ಶಿಕ್ಷಣ ಸಂಸ್ಥೆಗಳನ್ನು ಅನುಷ್ಠಾನದ ಕೇಂದ್ರಗಳಾಗಿ ಮಾಡಿಕೊಂಡು ಕನ್ನಡ ಎಂದರೆ ಮೂಗು ಮುರಿಯುವವರಿಗೆ ವಿಭಿನ್ನವಾದ ರೀತಿಯಲ್ಲಿ ಕನ್ನಡದಲ್ಲೂ ಎಲ್ಲವೂ ಸಾಧ್ಯ ಮತ್ತು ಕನ್ನಡಕ್ಕೆ ಬೇಕಾಗಿರುವುದು ಅದನ್ನು ಬಳಸಿ ಉಳಿಸುವ ಜನಾಂಗ ಎನ್ನುವಂತೆ ಕನ್ನಡದ ತ್ರಿ ಮೂರ್ತಿಗಳ ಆಸೆ, ಆಶಯಗಳಿಗೆ ಅನುಗುಣವಾಗಿ ರಾಜರತ್ನಂರವರು ಕಿರಿಯರಿಗೆ ಉತ್ತೇಜಕವಾದ ಸಹಾಯ ಮತ್ತು ಪ್ರೋತ್ಸಹ ನೀಡಿರುವುದು ಈ ಗ್ರಂಥದ ಮೂಲಕ ತಿಳಿಯಲ್ಪಡುತ್ತದೆ.

ಯಾವುದೇ ಲೇಖನಗಳು ತೀರ ತೆಳು ಎನಿಸದೇ ಸುಮ್ಮನೇ ಬರಹಗಳಾಗದೆ ವಿಷಯದ ಗಾಂಭಿರ್ಯದಿಂದ ಮೈಲಿಗಲ್ಲುಗಳಾಗಿ ನಿಲ್ಲುತ್ತವೆ. ಮತ್ತು ಅವುಗಳ ವ್ಯಾಪ್ತಿ ಸರ್ವಕಾಲೀಕವಾಗಿದೆ.

ಈ ಪುಸ್ತಕದ ಮೂಲಕ ಹತ್ತು ಹಲವು ಹೊಸ ವಿಷಯಗಳನ್ನು ಕನ್ನಡ, ನಮ್ಮ ಭಾರತೀಯ ಸಂಸ್ಕೃತಿ ಮತ್ತು ನಮ್ಮ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಯುವುದರ ಮೂಲಕ ನಮ್ಮನ್ನು ನಾವೇ ಹೆಮ್ಮೆಪಟ್ಟುಕೊಳ್ಳುವಂತಾಗುತ್ತದೆ.

ಈ ರೀತಿಯ ಕನ್ನಡ ಮಾಸ್ತರ್ ನ್ನು ರತ್ನನ ಪದಗ ರೂವಾರಿಯನ್ನು, ಮಕ್ಕಳಿಗೆ ಪ್ರಿಯವಾದ ನಾಯಿ ಮರಿ ಪದ್ಯವನ್ನು ಕೊಟ್ಟ ಗಾರುಡಿಯನ್ನು ಕಂಡ ಅಂದಿನ ದಿನಮಾನದ ಸುತ್ತಲಿನವರೇ ಧನ್ಯರು. ಆದರೋ ಅಂಥವರು ಮಾಡಿದ ಸೃಷ್ಟಿಸಿದ ಇಂಥ ವಿಚಾರತರಂಗಗಳ ಸಂಪರ್ಕ ನಮ್ಮಂತವರಿಗೆ ಇಂದು ದೊರೆಯುತ್ತಿರುವುದು ಮತ್ತು ಇಂಥ ಕನ್ನಡ ನೆಲದಲ್ಲಿ ಹುಟ್ಟಿರುವ ನಮ್ಮಗಳ ಪುಣ್ಯವೇ ಸರಿ!

ಈ ರೀತಿಯ ಪುಸ್ತಕಗಳ ಅಗತ್ಯತೆ ಇಂದು ಹೆಚ್ಚು ಅವಶ್ಯಕವಾಗಿದೆ. ಕನ್ನಡದ ಸಂಸ್ಕೃತಿ, ಇತಿಹಾಸವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ಇಂಥ ಮಹನೀಯರ ಮಾತುಗಳು, ಕೃತಿಗಳು ಪುನಃ ಪುನಃ ನಮ್ಮಗಳ ಕಿವಿಗಳ ಮೇಲೆ ಬೀಳುವಂತಾಗಬೇಕು. ಆಗಲಾದರೂ ಕನ್ನಡವನ್ನು ಯಾವ ರೀತಿ ಬಲಿಷ್ಠಗೊಳಿಸಬಹುದು ಎಂಬ ನಮ್ಮ ಹಿರಿ ಕಿರಿ ಚಿಂತನೆಗಳಿಗೆ ಇಂದಿನ ಈ ಕನ್ನಡ ರಾಜ್ಯೋತ್ಸವ ಮಾಸದಲ್ಲಿ ದಾರಿ ದೀಪವಾಗಲಿದೆ.

!!ಸಿರಿಗನ್ನಡಂ ಗೆಲ್ಗೆ!!

-ತ್ರಿಪುಟಪ್ರಿಯ