ಬುಧವಾರ, ಜನವರಿ 27, 2010

ಓ ಮನಸೇ!!




"ಮನಸ್ಸು ಇಲ್ಲದೆ, ಅನುಭವ ಇಲ್ಲ. ಪರಿಶುದ್ಧವಾದ ಮನಸ್ಸಿಗೆ ಮಾತ್ರ ಅತ್ಯಂತ ಸೂಕ್ಷ್ಮವಾದ ಆತ್ಮಾನಂದದ ಅನುಭವ ಸಾಧ್ಯ." - ರಮಣ ಮಹರ್ಷಿಗಳು

"ಮನಸ್ಸು ಮರ್ಕಟ" ಎಂದು ಹಿರಿಯರು ಹೇಳಿದರು. ಅವರಿಗೆ ಗೊತ್ತಾಗಿದೆ ನಮ್ಮ ಮನಸ್ಸಿನ ಚಿತ್ರ-ವಿಚಿತ್ರವಾದ ಗುಣಗಳು. ಮನಸ್ಸು ಎಂದ ತಕ್ಷಣ ನೆನಪಿಗೆ ಬರುವುದು ಯೋಚನೆ, ಯೋಚನೆ ಎಂದ ತಕ್ಷಣ ನೆನಪಿಗೆ ಬರುವುದು ಕೆಟ್ಟ ಯೋಚನೆಗಳು - ಒಳ್ಳೆಯ ಯೋಚನೆಗಳು.

ಮನಸ್ಸು ಇದ್ದುದಕ್ಕೆ ಬೆಲೆ ಬರುವುದು ಯೋಚಿಸುವುದರಿಂದ ಮನಸ್ಸು ಎಂಬುದಕ್ಕೆ ನಿರ್ದಿಷ್ಟವಾದ ಇದು ಹೀಗೆ ಎಂದು ಯಾರೂ ಬೌತಿಕವಾಗಿ ಗುರುತಿಸುವುದಕ್ಕೆ ಆಗುವುದಿಲ್ಲ.

ನಮ್ಮ ಬಾಲ್ಯದಲ್ಲಂತೂ ಗೊತ್ತಿಲ್ಲದೆ ವಿವಿಧ ರೀತಿಯ ಕಲ್ಪನೆಯ ರಂಗಾವಳಿಯನ್ನು ಮನದಲ್ಲಿ ಮೊಡಿಸುತ್ತಿರುತ್ತೇವೆ ಅದು ಆಗ ನಮ್ಮ ಜೊತೆಗಾರನಾಗಿ ನಮ್ಮ ಮನಸೊ ಇಚ್ಛೆ ಖುಷಿಯ ವಿಷಯಗಳನ್ನು ಗುಣಕಾರ - ಭಾಗಕಾರ ಮಾಡುತ್ತಿರುತ್ತೇವೆ.

"ಮನುಷ್ಯ - ಮನಸ್ಸು" ಈ ಎರಡನ್ನು ಬೇರೆ ಬೇರೆಯಾಗಿ ನೋಡುವುದು ಸಾಧ್ಯವಿಲ್ಲ. ವ್ಯಕ್ತಿ ಇದ್ದನೆಂದರೆ ಒಂದು ಮನಸ್ಸು ಇರಲೇಬೇಕು ಆಗಲೇ ಆ ವ್ಯಕ್ತಿಗೆ ಬೆಲೆ.

ಮನಸ್ಸಿಲ್ಲದವನಿಗೆ ಬೆಲೆಯಿಲ್ಲ ಎಂಬುದು ಈ ಮಾತು. ನಮ್ಮ ಹಿರಿಯವರಿಂದ ಬಾಲ್ಯದ ದಿನಗಳಿಂದ ಕೇಳಿಸಿಕೊಳ್ಳುತ್ತಿರುವ ಮಾತುಗಳೆಂದರೆ ಅದು ಮನಸ್ಸಿಗೆ ಮಾತ್ರವಾಗಿ "ಮನಸ್ಸು ಕೊಟ್ಟು ಕಲಿ, ಮನಸ್ಸು ಕೊಟ್ಟು ಕೇಳು, ಮನಸ್ಸು ಕೊಟ್ಟು ಕೆಲಸ ಮಾಡು" ಇತ್ಯಾದಿ.

ಈ ಎಲ್ಲಾ ಮಾತುಗಳು ಮನಸ್ಸಿನ ಮಹತ್ವವನ್ನು ಪ್ರತಿಯೊಬ್ಬರಿಗೂ ಗೊತ್ತಿಲ್ಲದ ರೀತಿಯಲ್ಲಿ ತಿಳಿಸುತ್ತಿದೆ.

ಹಾಗೆಯೇ, ಮನಸ್ಸು ಮಾಡಿದರೇ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಈ ನಾಣ್ಣುಡಿ ಜಗಜ್ಜಾಹಿರು ಮಾಡಿದೆ - "ಮನಸ್ಸಿದ್ದರೆ ಮಾರ್ಗ"

ಈ ಗಾದೆ ಮನಸ್ಸಿನ ಪವರ್ ಎಷ್ಟು ಎಂಬುದನ್ನು ಸರಳವಾಗಿ ನಿರೂಪಿಸಿದೆ.

ಈ ಪ್ರಪಂಚದ ಯಾವ ವಿಚಾರ, ತಂತ್ರಜ್ಞಾನ, ಚಲನೆ, ರಾಗ, ದ್ವೇಷ, ಬಾಳ್ವೆ, ಬದುಕು ಪ್ರತಿಯೊಂದು ನಿರ್ದಿಷ್ಟವಾಗಿ ಚರ್ಚಿತವಾಗಿರುವುದು "ಮನಸ್ಸು" ಎಂಬ ಮೂಸೆಯಲ್ಲಿಯೇ.ಅದನ್ನು ಹೇಗೆ ಉಪಯೋಗಿಸಬೇಕು ಎಂಬುದರ ಮೇಲೆ ಅವಲಂಬಿತವಾಗಿದೆ. ಉಪಯೋಗಿಸಿಕೊಂಡವನೇ ಸಾಧಕ!

ಈ ಮನಸ್ಸು ವಯಸ್ಸಿಗೆ ಸಂಬಂಧಿಸಿದಂತೆ ಪ್ರತಿಯೊಂದು ಅನುಭವಗಳ ಗಣಿಯಲ್ಲಿ ಗಟ್ಟಿಯಾಗುತ್ತಾ ತನ್ನ ಅಂತಃ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳುತ್ತದೆ.

ಅದಕ್ಕೆ ಇರಬೇಕು ನಮ್ಮ ಕವಿವರ್ಯರೊಬ್ಬರು ವಯಸ್ಸು ಮತ್ತು ಮನಸ್ಸನ್ನು ಹೀಗೆ ಕಟ್ಟಿ ಹಾಡಿದ್ದಾರೆ. "ಹದಿನಾರಾರ ವಯಸ್ಸು ಹುಚ್ಚು ಕೋಡಿ ಮನಸ್ಸು. . . "

ಯೌವನಭರಿತವಾದ, ಮದ್ಯ ವಯಸ್ಕ, ವೃದ್ಧಾಪ್ಯ ವಯಸ್ಸು ಹೀಗೆ ವಿವಿಧ ರೀತಿಯ ಕಾಲ ಘಟ್ಟಗಳ ವ್ಯಕ್ತಿಯ ಮನಸ್ಸು ಒಂದೇ ಆಗಿರಲೂ ಸಾಧ್ಯವಿಲ್ಲ.

ಮನಸ್ಸನ್ನು ನಮ್ಮ ದೇಹಕ್ಕೆ ಸರಳಿಕರಿಸಬಹುದೇನೋ, ಯಾಕೆಂದರೆ ಮನಸ್ಸು ಎಂದು ಅದು ಸೆಂಟ್ರಲ್ ಪ್ರೋಸಸ್ ಇದ್ದಂತೆ. ಅದರ ನಡಾವಳಿಯ ಆಜ್ಞಪಾಲಕ ನಮ್ಮ ಈ ದೇಹವೆ ಸರಿ!

ಆದರೂ ಯಾಕೆ ಈ ಮನಸ್ಸನ್ನಾ, ಕೆಡುಕ ಮನಸ್ಸು, ಒಳ್ಳೆಯ ಮನಸ್ಸು ಎಂದು ಗುರುತಿಸುತ್ತಾರೆ?

ಯಾವ ಮನಸ್ಸು ಮತ್ತೊಬ್ಬರಿಗೆ ತೊಂದರೆಯನ್ನು ಕೊಡುವುದರ ಬಗ್ಗೆ ಯೋಚಿಸಿ, ಇನ್ನೊಬ್ಬರ ಶಾಂತಿಯನ್ನು ಮನಸ್ಸನ್ನು ಹಾಳು ಮಾಡುತ್ತದೋ ಅದು ಕೆಟ್ಟ ಮನಸ್ಸು ಮತ್ತು ಆ ಮನಸ್ಸು ಸಹ ಕೆಟ್ಟು ಹೋಗಿರುತ್ತದೆ ಅದ್ದರಿಂದ ಅದನ್ನು ಕೆಟ್ಟ ಮನಸ್ಸೆಂದು ಗುರುತಿಸಬಹುದು. ಹಾಗೆಯೇ ಅಂಥ ವ್ಯಕ್ತಿ ಸುತ್ತಲಿನವರಿಗೆ ಮತ್ತು ಸಮಾಜಕ್ಕೆ ಅಪಾಯಕಾರಿ.

ಯೋಚನೆಗಳು ಕಲ್ಪನೆಗಳು ಇಲ್ಲದ ಮನಸ್ಸು ಮನಸ್ಸಲ್ಲಾ. ಕೆಟ್ಟ , ಒಳ್ಳೆಯ ಯೋಚನೆಗಳು ಮನಸ್ಸಿನಲ್ಲಿ ಬರುವುದು ಸಹಜ ಯಾಕೆಂದರೆ ನಾವುಗಳು ಉಪ್ಪು - ಹುಳಿ ತಿಂದು ಬೆಳೆಸಿದ ಪ್ರೀತಿಯ ದೇಹವನ್ನು ಹೊಂದಿದ್ದೇವೆ ಅಲ್ಲವಾ? ಹಾಗೆಯೇ ನಾವು ಬದುಕುತ್ತಿರುವ ಸುತ್ತಲಿನ ಪರಿಸರದ ಪರಿಣಾಮವಾಗಿ ವಿವಿಧ ರೀತಿಯ ಯೋಚನೆ, ಆಸೆಗಳು ಮನಸ್ಸಿನಲ್ಲಿ ಮೊಡುವುದು ಸಹಜ. ಹಾಗೆಯೇ ಅದಕ್ಕಾಗಿ ನಾವುಗಳು ವೈರಾಗ್ಯವನ್ನು ಧರಿಸಿದ ಸಾಧುಗಳಾಗಲು ಸಾಧ್ಯವಿಲ್ಲ.

ಯಾವ ವಿಚಾರಾಗಳು ನಮಗೆ ನಮ್ಮ ಅರಿವಿಗೆ ಅಸಹನೀಯವಾದದ್ದು - ಕೆಟ್ಟದ್ದು ಅನಿಸುತ್ತದೋ ಅವುಗಳನ್ನು ಆಗಲೇ ಕೊಲ್ಲುವುದು ಬುದ್ಧಿವಂತಿಕೆಯ ಲಕ್ಷಣ. ಆ ರೀತಿಯ ಅರಿವು ಯಾವುದೇ ರೀತಿಯ ಸಾಮಾನ್ಯ ಸಜ್ಜನನಿಗೂ ತಿಳಿಯುವ ಅರಿವಿನ ಪಾಠ, ಸಮಯಕ್ಕೆ ಸರಿಯಾಗಿ ಊಪಯೋಗಿಸಿ ಮನಸ್ಸಿನ ಪವರ್ ನ್ನು ಸರಿಯಾದ ರೀತಿಯಲ್ಲಿ ಬಳಸಿ ಅಸಾಧ್ಯವಾದುದನ್ನು ಸಾಧಿಸಲು ಮನಸ್ಸು ಮಾಡಬೇಕು.

ಆದಕ್ಕೆ, ಇರಬೇಕು ನಮ್ಮ ಈ ಸನಾತನ ಪರಂಪಯಿಂದ ಇಂದಿನವರೆಗೂ ನಮ್ಮ ವಿವಿಧ ಸಾದು ಸಜ್ಜನರು ಇನ್ನೂ ಈ "ಮನಸ್ಸಿ"ನ ವ್ಯಾಪಾರವನ್ನು ಅರಿಯಲು ತಮ್ಮ ಜೀವನವನ್ನೇ ಪೂರ್ಣವಾಗಿ ಮೂಡಿಪಾಗಿಟ್ಟು ಅದರ ಬಗ್ಗೆ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಾ ತಮ್ಮ ವಿಚಾರಧಾರೆಯ ಮೂಲಕ ಸಾಮಾನ್ಯ ಜನರಿಗೆ ಅದರ ಸಾರವನ್ನು ದಯಾಪಲಿಸುತ್ತಿರುವುದು. ಮತ್ತು ಇದರ ಬಗ್ಗೆ ನಾವುಗಳು ನಮ್ಮ ಹಿರಿಯರಿಂದ ದಿನಂಪ್ರತಿ ತಿಳಿಯಲು ಮತ್ತು ಮನನ ಮಾಡಲು ಅವಕಾಶವಿರುವ ನಾವುಗಳು ಧನ್ಯರಲ್ಲವೇ?

-ತ್ರಿಪುಟಪ್ರಿಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ