ಶನಿವಾರ, ನವೆಂಬರ್ 14, 2009

ಕನ್ನಡದ ರತ್ನನ ವಿಚಾರತರಂಗ

ಈ ಹಿಂಗಾರು ಮಳೆಯೇನೋ ಅಲ್ಲವೋ ಬಲ್ಲವರಿಲ್ಲ! ಚೆನೈನಲ್ಲಿ ಮಳೆಯ ಆರ್ಭಟ ಹೆಚ್ಚಾಗಿ ಬಹುಪಾಲು ಜನರ ಜೀವನ ಅಸ್ತವ್ಯಸ್ತವಾಗಿರುವಲ್ಲಿ, ಇಲ್ಲಿ ನಮ್ಮ ಊರುಗಳಲ್ಲಿ ಮೋಡ ಕವಿದ ವಾತಾವರಣವಿದ್ದು ಆಗಾಗ್ಗೆ ತುಂತುರು ಜಟಿ ಮಳೆಯ ಕಮ್ಮನೆ ಚಳಿಯ ಅನುಭವ. ಹೊರಗಡೆ ಹೋಗದಂತೆ ಮನೆಯಲ್ಲಿ ನಿಲ್ಲಿಸುವಂತೆ ಕಟ್ಟಿದಂತಾದ ವಾರಾಂತ್ಯ.
ಇಂಥ ಸಮಯದಲ್ಲಿ ಜೊತೆಗೆ ಕುಡಿಯಲು ಬಿಸಿ ಬಿಸಿಯಾದ ಕಾಫಿ ಮತ್ತು ಓದಲು ಒಂದು ಸುಂದರವಾದ ಕನ್ನಡ ಪುಸ್ತಕವೊಂದಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಾಗುತ್ತದೆ.

ನನ್ನ ಪುಟ್ಟ ಲೈಬ್ರರಿಯಲ್ಲಿ ನೋಡಿದರೆ ಯಾವುದನ್ನು ಓದಲಿ ಯಾವುದನ್ನು ಬಿಡಲಿ ಎನ್ನುವಂತಾಯಿತು. ಎಲ್ಲಾ ಪುಸ್ತಕಗಳು ಅಕ್ಕರೆಯ ಮತ್ತು ನಾನು ಪ್ರೀತಿಪಟ್ಟು ಸಂಗ್ರಹಿಸಿರುವಂತವು. ಮತ್ತೇ ಮತ್ತೇ ಓದಬೇಕೆನಿಸುವ ಸಂಗ್ರಹ.
ಇವುಗಳೆಲ್ಲಾದರ ಮಧ್ಯದಿಂದ ನನಗೆ ಮೆಚ್ಚಿಗೆ ಸೂಸಿ ನನ್ನ ಓದು ಎನಿಸಿದಂತಾಗಿ ಕಣ್ಣಸೆಳೆದ "ವಿಚಾರಾತರಂಗ" ಜೆ.ಪಿ ರಾಜಾರತ್ನಂರವರ ಪುಸ್ತಕವನ್ನು ಎತ್ತಿಕೊಂಡೆ. ಸುಂದರವಾದ ರಾಜರತ್ನಂರವ ಮುಖಪುಟವನ್ನು ಹೊಂದಿ ಚಿಕ್ಕ ಚಿಕ್ಕ ಗದ್ಯ ಲೇಖನಗಳನ್ನೂಳಗೊಂಡ ೨೫೦ ಪುಟಗಳ ಪುಸ್ತಕ ಮನಸೊರೆಗೊಂಡಿತು.

ಸುಮಾರು ೭೦-೮೦ರ ದಶಕಗಳಲ್ಲಿ ಅಂಕಣ ಬರಹಗಳಾಗಿ ಅಂದಿನ ದಿನ ಪತ್ರಿಕೆಯಾದ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದ್ದ ಈ ಲೇಖನಗಳು ನಮ್ಮ ಕನ್ನಡ - ಕರ್ನಾಟಕ - ಕನ್ನಡದ ವ್ಯಕ್ತಿಗಳು - ಕನ್ನಡ ವಿಚಾರಗಳಿಗೆ ಕನ್ನಡಿಯನ್ನು ಹಿಡಿದಂತಾಗಿದೆ.
ರಾಜರತ್ನಂ ಅಂದರೆ "ರತ್ನನ ಪದಗಳ" ಜನಕ, ಕವಿ ಎಂಬುದು ಇಂದಿನ ನಮ್ಮಂತ ಪೀಳಿಗೆಗೆ ನೆನಪಿಗೆ ಬರುವುದು. ಅವರು ಈ ರೀತಿಯ ಸುಸಲಿತವಾದ ಗದ್ಯ ಲೇಖನಗಳನ್ನು ತುಂಬ ಸರಳವಾಗಿ ಮಾಸ್ತರ್ ಶೈಲಿಯಲ್ಲಿ ಪುಟ್ಟ ಮಕ್ಕಳಿಗೋ ಅರ್ಥವಾಗುವಂತೆ ನಿರೂಪಿಸಿರುವುದು ಮೆಚ್ಚ ಬೇಕಾದ ವಿಷಯ.

ವಿಷಯಗಳ ಆಯ್ಕೆಯ ಸಮಯ ತುಂಬ ಹಳೆಯ ದಿನಗಳಾದರೊ ಇಂದಿಗೊ ಪ್ರಸ್ತುತವಾಗಿರುವಂತೆ ಬಾಸವಾಗುತ್ತದೆ. ಎಲ್ಲಾ ಲೇಖನಗಳು ಲಲಿತ ಪ್ರಬಂಧಂತೆ ಸರಳ ಪದಗಳ ಜೊಡಣೆಯೊಂದಿಗೆ ರಚಿತವಾಗಿದೆ. ಹೆಚ್ಚು ಲಂಬಿತವಾಗದೆ ,ದೊಡ್ದದು ಅಂದರೆ ಮೊರು ಪುಟ ಮಾತ್ರವಾಗಿದೆ.

ಇಲ್ಲಿ ಮೊಡಿರುವ ಲೇಖನಗಳ ವಿಷಯ ವೈವಿಧ್ಯ ನಮ್ಮ ಪುರಾಣ ಇತಿಹಾಸದಿಂದ ಪ್ರಸ್ತುತ ನಮ್ಮ ಹಿರಿಯ ಕಿರಿಯ ವ್ಯಕ್ತಿಗಳವರೆಗೆ, ಕನ್ನಡ ಕಟ್ಟಾಳುಗಳ ಬಗ್ಗೆ, ಕನ್ನಡದ ಬಗ್ಗೆ ತಮ್ಮ ಉಸಿರನ್ನು ಮುಡುಪಿಟ್ಟವರ ಬಗ್ಗೆ ಅವರ ಅಭಿಮಾನದ ಬಗ್ಗೆ ತುಂಬ ನಲ್ಮೆಯಿಂದ ಬರದಿದ್ದಾರೆ.

ಕನ್ನಡದ ಆಶ್ವಿನಿ ದೇವತೆಗಳಾದ ಟಿ.ಎಸ್. ವೆಂಕಣ್ಣಯ್ಯ, ಬಿ.ಎಂ.ಶ್ರೀ ಮತ್ತು ಅ. ನಾ. ಕೃಷ್ಣರಾಯರ ಬಗ್ಗೆ ಅವರು ಬರೆದಿರುವ ಬರಹಗಳಲ್ಲಿರುವ ಕನ್ನಡ ಪ್ರೇಮವನ್ನು ಕಂಡರೆ ಇಂಥವರು ಅಂದು ಇದ್ದಿದ್ದರಾ! ಎಂದು ನಾವುಗಳು ಆಶ್ಚರ್ಯ ಪಡುವಂತಾಗುತ್ತದೆ.
ಅಂದಿನ ಬೆಂಗಳೂರು - ಮೈಸೂರು ಮಧ್ಯದಲ್ಲಿ ಜರುಗಿದ ಕನ್ನಡದ ಕೆಲಸಗಳು, ಕಾರ್ಯಕ್ರಮಗಳನ್ನು ತಮ್ಮ ಲೇಖನಿಯಿಂದ ಕಣ್ಣಿಗೆ ಕಟ್ಟುವಂತೆ ಸೆರೆ ಹಿಡಿದಿದ್ದರೆ. ರಾಜರತ್ನಂ ಸ್ವತಃ ಕನ್ನಡವನ್ನು ತಮ್ಮ ದೈನಂದಿನ ಉಸಿರಾಗಿ ಹಾಡಿ ಬೆಳಸಿದಂತ ಜೀವ. ಅವರಲ್ಲಿ ಕನ್ನಡ ಬಗ್ಗೆ ಇರುವಂತ ಕಾಳಜಿ ಮತ್ತು ಅದನ್ನು ಯಾವ ರೀತಿಯಲ್ಲಿ ಜನಸಾಮಾನ್ಯರಿಗೆ ತಲುಪಿಸಬೇಕು ಮತ್ತು ಅಂದಿನ ದಶಕಗಳಲ್ಲಿ ಹೇಗೆ ತಮ್ಮ ಕಾರ್ಯ ಕ್ಷೇತ್ರವಾದ ಶಿಕ್ಷಣ ಸಂಸ್ಥೆಗಳನ್ನು ಅನುಷ್ಠಾನದ ಕೇಂದ್ರಗಳಾಗಿ ಮಾಡಿಕೊಂಡು ಕನ್ನಡ ಎಂದರೆ ಮೂಗು ಮುರಿಯುವವರಿಗೆ ವಿಭಿನ್ನವಾದ ರೀತಿಯಲ್ಲಿ ಕನ್ನಡದಲ್ಲೂ ಎಲ್ಲವೂ ಸಾಧ್ಯ ಮತ್ತು ಕನ್ನಡಕ್ಕೆ ಬೇಕಾಗಿರುವುದು ಅದನ್ನು ಬಳಸಿ ಉಳಿಸುವ ಜನಾಂಗ ಎನ್ನುವಂತೆ ಕನ್ನಡದ ತ್ರಿ ಮೂರ್ತಿಗಳ ಆಸೆ, ಆಶಯಗಳಿಗೆ ಅನುಗುಣವಾಗಿ ರಾಜರತ್ನಂರವರು ಕಿರಿಯರಿಗೆ ಉತ್ತೇಜಕವಾದ ಸಹಾಯ ಮತ್ತು ಪ್ರೋತ್ಸಹ ನೀಡಿರುವುದು ಈ ಗ್ರಂಥದ ಮೂಲಕ ತಿಳಿಯಲ್ಪಡುತ್ತದೆ.

ಯಾವುದೇ ಲೇಖನಗಳು ತೀರ ತೆಳು ಎನಿಸದೇ ಸುಮ್ಮನೇ ಬರಹಗಳಾಗದೆ ವಿಷಯದ ಗಾಂಭಿರ್ಯದಿಂದ ಮೈಲಿಗಲ್ಲುಗಳಾಗಿ ನಿಲ್ಲುತ್ತವೆ. ಮತ್ತು ಅವುಗಳ ವ್ಯಾಪ್ತಿ ಸರ್ವಕಾಲೀಕವಾಗಿದೆ.

ಈ ಪುಸ್ತಕದ ಮೂಲಕ ಹತ್ತು ಹಲವು ಹೊಸ ವಿಷಯಗಳನ್ನು ಕನ್ನಡ, ನಮ್ಮ ಭಾರತೀಯ ಸಂಸ್ಕೃತಿ ಮತ್ತು ನಮ್ಮ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಯುವುದರ ಮೂಲಕ ನಮ್ಮನ್ನು ನಾವೇ ಹೆಮ್ಮೆಪಟ್ಟುಕೊಳ್ಳುವಂತಾಗುತ್ತದೆ.

ಈ ರೀತಿಯ ಕನ್ನಡ ಮಾಸ್ತರ್ ನ್ನು ರತ್ನನ ಪದಗ ರೂವಾರಿಯನ್ನು, ಮಕ್ಕಳಿಗೆ ಪ್ರಿಯವಾದ ನಾಯಿ ಮರಿ ಪದ್ಯವನ್ನು ಕೊಟ್ಟ ಗಾರುಡಿಯನ್ನು ಕಂಡ ಅಂದಿನ ದಿನಮಾನದ ಸುತ್ತಲಿನವರೇ ಧನ್ಯರು. ಆದರೋ ಅಂಥವರು ಮಾಡಿದ ಸೃಷ್ಟಿಸಿದ ಇಂಥ ವಿಚಾರತರಂಗಗಳ ಸಂಪರ್ಕ ನಮ್ಮಂತವರಿಗೆ ಇಂದು ದೊರೆಯುತ್ತಿರುವುದು ಮತ್ತು ಇಂಥ ಕನ್ನಡ ನೆಲದಲ್ಲಿ ಹುಟ್ಟಿರುವ ನಮ್ಮಗಳ ಪುಣ್ಯವೇ ಸರಿ!

ಈ ರೀತಿಯ ಪುಸ್ತಕಗಳ ಅಗತ್ಯತೆ ಇಂದು ಹೆಚ್ಚು ಅವಶ್ಯಕವಾಗಿದೆ. ಕನ್ನಡದ ಸಂಸ್ಕೃತಿ, ಇತಿಹಾಸವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ಇಂಥ ಮಹನೀಯರ ಮಾತುಗಳು, ಕೃತಿಗಳು ಪುನಃ ಪುನಃ ನಮ್ಮಗಳ ಕಿವಿಗಳ ಮೇಲೆ ಬೀಳುವಂತಾಗಬೇಕು. ಆಗಲಾದರೂ ಕನ್ನಡವನ್ನು ಯಾವ ರೀತಿ ಬಲಿಷ್ಠಗೊಳಿಸಬಹುದು ಎಂಬ ನಮ್ಮ ಹಿರಿ ಕಿರಿ ಚಿಂತನೆಗಳಿಗೆ ಇಂದಿನ ಈ ಕನ್ನಡ ರಾಜ್ಯೋತ್ಸವ ಮಾಸದಲ್ಲಿ ದಾರಿ ದೀಪವಾಗಲಿದೆ.

!!ಸಿರಿಗನ್ನಡಂ ಗೆಲ್ಗೆ!!

-ತ್ರಿಪುಟಪ್ರಿಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ