ಮಂಗಳವಾರ, ಡಿಸೆಂಬರ್ 15, 2009

ಅಲ್ಲಿದೆ ನಮ್ಮನೆ ಇಲ್ಲಿ ಬಂದೇ ಸುಮ್ಮನೆ ಬೇಡ!

ಇಂದಿನ ನಮ್ಮ ಕಾರ್ಪೊರೆಟ್ ರಂಗದಲ್ಲಿ ವಿವಿಧ ಭಾಷೆಯನ್ನು ಮಾತಾನ್ನಾಡುವ, ವಿವಿಧ ಸಂಸ್ಕೃತಿಯ, ವಿವಿಧ ರಾಜ್ಯದ ಕೆಲಸಗಾರರು ನಮ್ಮ ಕನ್ನಡದ ರಾಜಾಧಾನಿಯಾದ ಬೆಂಗಳೂರಿನಲ್ಲಿ ಹಲವಾರು ಕಡೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಇಲ್ಲಿ ಒಂದು ಮಿನಿ ಭಾರತವನ್ನೇ ಕಾಣಬಹುದಾಗಿದೆ.

ಎಲ್ಲ ಕಂಪನಿಗಳಲ್ಲಿ ಅವರದೇಯಾದ ಸಮಯದಲ್ಲಿ ಎಲ್ಲ ಉದ್ಯೋಗಿಗಳಿಗೂ ಖುಷಿ ಮತ್ತು ಸಂಭ್ರಮವನ್ನುಂಟು ಮಾಡಲು ತಿಂಗಳ ಅಥಾವ ವಾರದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಲ್ಲಿನ ಉದ್ಯೋಗಿಗಳಿಗೆ ಏರ್ಪಡಿಸುವ ಪದ್ಧತಿಯನ್ನು ಎಲ್ಲ ಕಡೆ ಕಾಣಬಹುದಾಗಿದೆ.

ಆ ಸಮಯದಲ್ಲಿ ಎಲ್ಲ ಕೆಲಸಗಾರರಿಗೂ ತಮ್ಮ ತಮ್ಮ ಸಂಸ್ಕೃತಿಯ ಮತ್ತು ತಮ್ಮ ಕ್ರೀಯಾಶೀಲವಾದ ಸೃಜನಾತ್ಮಕ ಕಲೆಗಳನ್ನು ತಮ್ಮ ಸ್ನೇಹಿತರ ಮುಂದೆ ಪ್ರದರ್ಶನವನ್ನು ಕೊಡಲು ತುಂಬ ಸಹಕಾರಿಯಾಗಿರುತ್ತದೆ ಮತ್ತು ಬಿಡುವಿಲ್ಲದ ಜಂಜಾಟದ ಬದುಕಿಗೆ ಉತ್ತೇಜನಕ ರೀತಿಯಲ್ಲಿ ಉತ್ಸಾಹವನ್ನುಂಟು ಮಾಡುತ್ತದೆ. ಇಂಥ ಕಾರ್ಯಕ್ರಮಗಳು ಇಂದಿನ ಯಾಂತ್ರಿಕ ಯುಗದ ಮೆಟ್ರೋ ಮಂದಿಗೆ ಬೇಕೆ ಬೇಕು ಬಿಡಿ.

ಆದರೆ, ಇಂಥ ಕಾರ್ಯಕ್ರಮಗಳಲ್ಲಿ ತುಂಬ ಅಭಾಸವಾದ ರೀತಿಯಲ್ಲಿ ಕೆಲವೊಮ್ಮೆ ಕೆಲವು ಕಹಿ ಘಟನೆಗಳು ನಡೆದು ಹೋಗಿ ಬಿಟ್ಟು ಹತ್ತಿರದವರೆಗೆ ತುಂಬ ನೋವಾಗುತ್ತದೆ. ಆ ಸಮಯದಲ್ಲಿ ಆ ರೀತಿ ಯಾರು ಯೋಚಿಸುವುದಿಲ್ಲ. ಆದರೆ ಅದರ ಬಗ್ಗೆ ಸ್ವಲ್ಪ ವಿಚಾರ ಮಾಡಿದರೆ ಹೌದು! ಅದು ಸತ್ಯ ಏನಿಸದೇ ಇರಲಾರದು.

ಯಾವುದೇ ಹಾಡು, ಸಂಗೀತ, ನೃತ್ಯ, ನಟನೆಯ ಕಾರ್ಯಕ್ರಮಗಳನ್ನು ಎಲ್ಲರೂ ಯಾವುದೇ ಭಾಷೆ ಮತ್ತು ಜನಗಳ ಬೇದವಿಲ್ಲದೇ ಎಲ್ಲರೂ ತಮಗೆ ತಿಳಿದಿರುವ ಕಲೆಯ ಅಭಿವ್ಯಕ್ತಿಯನ್ನು ತೋರಿಸಲು ಸುಸಮಯವಾಗಿರುತ್ತದೆ.

ಪ್ರೇಕ್ಷಕರೇನಿಸಿದ ನೋಡುಗರು ತಮಗೆ ಅರ್ಥವಾಗದ ಭಾಷೆಯಲ್ಲಿನ ಅಥಾವ ತಿಳಿಯದ ಕಲೆಯನ್ನು ಕಂಡಾಗ ಇರಿಸು ಮುರಿಸಾಗುವುದು ಸಾಮಾನ್ಯ. ಆದರೆ ಅದಕ್ಕಾಗಿ ತಮ್ಮತನವನ್ನು ಕಳೆದುಕೊಂಡು ಅತ್ಯಂತ ಅನಾಗರಿಕತೆಯನ್ನು ತೋರಿಸಿ ವೇದಿಕೆಯ ಮೇಲೆ ತಮ್ಮ ಕಲೆಯನ್ನು ಪ್ರದರ್ಶಿಸುವವರಿಗೆ ಅವಮಾನ ಮಾಡುವುದು ಎಷ್ಟು ಸರಿ!

ಇಂದಿನ ಕಾರ್ಪೊರೆಟ್ ದಿನಮಾನಗಳಲ್ಲಿ ಎಲ್ಲ ಕಡೆ ನಮ್ಮ ಭಾಷೆ ಮತ್ತು ನಮ್ಮ ಸಂಸ್ಕೃತಿಯನ್ನು ಆಚರಿಸುವವರು ಸಿಗುವುದು ಕಷ್ಟ. ಅದ್ದರಿಂದ ನಾವ್ಯಾಕೇ ಬೇರೆಯವರ, ಬೇರೆ ರಾಜ್ಯದ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳನ್ನು ಗೌರವದಿಂದ ನೋಡಿ ಆನಂದಿಸಲಾರೆವು ಹೀಗೆ ಮಾಡುವುದರಿಂದ ಅಷ್ಟೋಂದು ಕಷ್ಟಪಟ್ಟು ನಮಗಾಗಿ ಅಪರೂಪದ ಕಲೆಯ ವೈಭವವನ್ನು ನಮ್ಮ ಮುಂದೆ ಇಡುವವರಿಗೆ ಪ್ರೋತ್ಸಹವವನ್ನು ಉತ್ತೇಜನವನ್ನು ಕೊಟ್ಟಂತಾಗಿ ನಾವುಗಳು ಅವರ ಬಗ್ಗೆ ಮತ್ತು ಅವರ ಮಣ್ಣಿನ ಬಗ್ಗೆ ತಿಳಿಯಲು ಕುತೊಹಲದಿಂದ ಇದ್ದೇವೆ ಎಂದರೆ ಅವರಿಗೇಷ್ಟು ಆನಂದ ಮತ್ತು ಮಮತೆ ಉಂಟಾಗುವುದಿಲ್ಲ. ಇದು ಎಷ್ಟೊಂದು ಹೆಮ್ಮೆಯ ವಿಚಾರವಾಗುವುದಿಲ್ಲವೇ.

ಎಲ್ಲರಿಗೂ ತಿಳಿದಿರುವಂತೆ ನಮ್ಮ ದೇಶ ಭಾರತ ಅಂದರೆ ಬಹು ಸಂಸ್ಕೃತಿಯ ರಾಯಾಬಾರಿ. ಇಲ್ಲಿ ಒಂದು - ಒಂದೇ ಎನ್ನುವುದು ಸಮಗ್ರವಾಗಿ ನಾವೆಲ್ಲಾ ಒಂದು ಎನ್ನುವಾಗ. ನಮ್ಮ ಮಾತು, ಸಂಸ್ಕೃತಿ, ವಿಚಾರ - ಆಚರಗಳಿಗಲ್ಲಾ ಅಲ್ಲವಾ!

ಈ ಮಹನ್ ಸತ್ಯ ಗೊತ್ತಿರುವಾಗ ನಾವೇಕೆ ಪುನಃ ಕೀಳಾಗಿ ವರ್ತಿಸುವುದು. ಕಲೆಗೆ ಯಾವುದೇ ಗಡಿ ಪ್ರಾಂತ್ಯವಿಲ್ಲ ಮತ್ತು ಯಾವುದೇ ಭಾಷೆಯಿಲ್ಲ ಕಲೆಗೆ ಕಲೆಯೇ ಭಾಷೆ ಮತ್ತು ಮಾದ್ಯಮ. ಅದೇ ಗೊತ್ತು ಗುರಿಯಿಲ್ಲದ ನಮ್ಮ ಸಂಸ್ಕೃತಿಯಲ್ಲದ ರಾಕ್ ಪಾಪ್ ಸಂಗೀತ, ಡ್ಯಾನ್ಸ್ ಗಳನ್ನು ಕಣ್ಣು ಕಣ್ಣು ಬಿಟ್ಟು, ಬಾಯಿ ಬಾಯಿ ತೆರೆದು ಅಹ್ಲಾದಿಸುವುದು ನಮ್ಮ ಭಾರತೀಯರ ಅಭಿರುಚಿ ಎತ್ತ ಕಡೆ ದಾಪುಗಾಲು ಹಾಕುತ್ತಿದೆ ಎಂದು ಯೋಚಿಸುವಂತೆ ಮಾಡಿದೆ.

ನಮ್ಮ ನಮ್ಮ ಮನೆಯ ಮಾತು ಮತ್ತು ನಮ್ಮ ಮನೆಯಲ್ಲಿನ ಕಲೆಗಳನ್ನು ಪ್ರದರ್ಶಿಸುವುದೇ ಅಥಾವ ಹಾಡುವುದೇ ಅಸಹ್ಯವೇನೊ ಎಂಬ ರೀತಿಯಲ್ಲಿ ನಾವುಗಳು ಕಾಣುವುದು ಯಾವುದರ ಸಂಕೇತ?

ನಮಗೆ ತಿಳಿಯದೇ ಇದ್ದರೂ ಅದನ್ನು ವ್ಯಕ್ತಪಡಿಸುವ ಕಲೆಗಾರರಿಗೆ ಅವಕಾಶ ಮಾಡಿ ಅವರನ್ನು ಗೌರವಿಸಬೇಕು ಅದು ಬಿಟ್ಟು ತಮಗೆ ಆ ರೀತಿಯಲ್ಲಿ ಒಂದು ನಿಮಿಷ ವೇದಿಕೆಯ ಮೇಲೆ ನಿಲ್ಲಲು ಆಗದು ಅಂಥ ಸಮಯದಲ್ಲಿ ಸುಮ್ಮನೆ ವೇದಿಕೆಯ ಹಿಂದೆ ಮುಂದೆ ಕುಳಿತುಕೊಂಡೋ ನಿಂತುಕೊಂಡೋ ತಮ್ಮ ಗೆಳೆಯರು ಹಾಡುವ ಸಮಯದಲ್ಲಿ ಅಥಾವ ನೃತ್ಯ ಮಾಡುವ ಸಮಯದಲ್ಲಿ ಅಥಾವ ಮಾತನಾಡುವ ಸಮಯದ ಮದ್ಯದಲ್ಲಿಯೇ ಚಪ್ಪಾಳೆಯನ್ನು ತಟ್ಟುವುದು, ಕೊಗು ಹಾಕುವುದು ಎಲ್ಲಿನ ಸಂಸ್ಕೃತಿ?

ನಾವುಗಳು ತುಂಬ ಇಷ್ಟಪಟ್ಟು ಆಚರಿಸಲು ಮನಸ್ಸು ಮಾಡುವ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ನಾವೇಲ್ಲಾ ತಪ್ಪದೇ ಪಾಲಿಸಬೇಕಾದ ಆಚರಣೆಯಿದೆ ಅದೇ ಬೇರೆಯವರು ಏನಾದರೂ ಮಾತನಾಡುವಾಗ ಮದ್ಯದಲ್ಲಿ ಅಸಭ್ಯವಾಗಿ ವರ್ತಿಸದೇ ಅವರು ಪೂರ್ಣವಾಗಿ ಮುಗಿಸವವರೆಗೆ ಕಾದು ಅನಂತರ ತಾವು ಮಾತನ್ನಾಡುವುದು. ಈ ರೀತಿಯ ಅಮೊಲ್ಯವಾದ ಆಚರಣೆಗಳನ್ನು ಗಾಳಿಗೆ ತೊರಿ ತಮ್ಮ ತನವನ್ನು ಮೇರೆಯಬಾರದು ಅಲ್ಲವಾ!

ಯಾವುದೇ ಒಳ್ಳೆಯದನ್ನು ಎಲ್ಲರಿಂದ ಎಲ್ಲಾ ಕಡೆಯಿಂದ ತೆಗೆದುಕೊಳ್ಳಬೇಕು ಆಗಲೇ ನಾವು ಜೀವಿಸುತ್ತಿರುವ ಸುತ್ತಲಿನ ಸಮಾಜ ಜನಾಂಗ ಶಾಂತಿ ಮತ್ತು ಸಹ ಬಾಳ್ವೆಯ ಜೀವನ ನೆಡಸಲು ಸಾಧ್ಯ. ಇಲ್ಲವಾದರೆ ತಮ್ಮ ತಮ್ಮಲ್ಲಿಯೇ ಭಿನ್ನಮತ ಮತ್ತು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

ಇದು ನಾವುಗಳು ದಿನದ, ತಿಂಗಳಿನ, ವರ್ಷದ ಮತ್ತು ನಮ್ಮ ಜೀವಿತದ ಹೆಚ್ಚು ಸಮಯವನ್ನು ಕಳೆಯುವ ನಾವು ಕೆಲಸ ಮಾಡುವ ನಮ್ಮ ನಮ್ಮ ಕಂಪನಿಗಳಿಂದ ಪ್ರಾರಂಭವಾಗಲಿ ಎಂಬುದೇ ಈ ಭಾರತೀ (ಯನ) ಮನದ ಹಂಬಲ.

-ತ್ರಿಪುಟಪ್ರಿಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ