ಗುರುವಾರ, ನವೆಂಬರ್ 18, 2010

ಕಾಮ-ವಾಮ-ರಾಜ ಮಾರ್ಗ


ಕಳೆದ ಭಾನುವಾರದ ಸಂಜೆ ರವೀಂದ್ರ ಕಲಾ ಕ್ಷೇತ್ರ. ಮುಖ್ಯ ದ್ವಾರದ ಇಕ್ಕೆಲೆಗಳಲ್ಲಿ ಇಟ್ಟ ನಮ್ಮ ಮಂತ್ರಿ ರೇಣುಕಾಚಾರ್ಯರ ಬೆತ್ತಲೆಯ ನರ್ಸ್ ಜೊತೆಗಿನ ವಿವಿಧ ಭಂಗಿಯ ರಂಗು ರಂಗಿನ ಅಳೆತ್ತರದ ಚಿತ್ರಗಳು. ಒಂದು ಕ್ಷಣ ನಿಮ್ಮನ್ನು ತಬ್ಬಿಬ್ಬು ಮಾಡಿದಂತೆ ಅನಿಸುತ್ತದೆ. ಆದರೇ ಆ ಕ್ಷಣ ನೀವು ಯಾರ ಕಾರ್ಯಕ್ರಮಕ್ಕೆ ಬಂದಿದ್ದೇವೆ ಎಂಬುದನ್ನು ನೆನಪಿಸಿಕೊಂಡರೆ ಸಾಕು.ಅದು ರವಿಯವರ ವಿಭಿನ್ನವಾದ ಶೈಲಿ. ಸಮಾಜಕ್ಕೆ ತೀರ ಹಸಿ ಹಸಿ ಸತ್ಯವನ್ನು ತಮ್ಮ ಪತ್ರಿಕೆಯ ಮೂಲಕ ತಿಳಿಸಿದ ಧೈರ್ಯವಂತರಲ್ಲವೇ. ಅದಕ್ಕೆ ಸಾವಿರಾರು ಓದುಗರ ಒಡೆಯ.

ಒಳಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪ್ರಙ್ಞವಂತ ಹಾಯ್ ಬೆಂಗಳೂರು ಓದುಗ ಸಮೊಹ. ಎದುರಿಗೆ ಜಗಮಗಿಸುತ್ತಿರುವ "ಎಂಥಾ ಪಕ್ಷವಯ್ಯಾ...." ವರ್ಣಮಯ ವೇದಿಕೆ. ಅಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಬಿ. ಆರ್. ಛಾಯರವರ ಬ್ಯಾಂಡ್ ನಿಂದ ಇಂಪಾದ ಸಂಗೀತ ರಸ ಸಂಜೇ. ಕನ್ನಡದ ಪ್ರಮುಖ ಕವಿಗಳ ಭಾವ ಗೀತೆಗಳ ತರಂಗ. ಪ್ರಸಿದ್ಧ ಗಾಯಕ ವಿಷ್ಣುರವರಿಂದ ಕನ್ನಡದ ಚಿತ್ರಗೀತೆಗಳ ರಸದೌತಣ. ವೀಕೆಂಡಗೆ ಮಸ್ತಿಯಾಗಿತ್ತು.

ಈ ಸಮಾರಂಭ ಕನ್ನಡ ಪುಸ್ತಕವೊಂದರ ಬಿಡುಗಡೆಯ ಸಮಾರಂಭವೆಂದರೇ ಯಾರು ನಂಬುವುದಕ್ಕಾಗುವುದಿಲ್ಲ. ಅಲ್ಲವಾ? ಹೌದು! ಅದು ಬೆಂಗಳೂರಿನಲ್ಲಿ ಕನ್ನಡ ಪುಸ್ತಕಗಳ ಬಿಡುಗಡೆಯೆಂದರೇ ಕೇವಲ ಬೆರಳೆಣಿಕೆಯ ಸಹೃದಯರನ್ನು ಕಾಣಬಹುದು. ಅದರೇ ಇಲ್ಲಿ ತದ್ವಿರುದ್ಧ. ಅದಕ್ಕೆ ಕಾರಣ ರವಿ ಬೆಳೆಗೆರೆ ಮತ್ತು ರವಿ ಬೆಳೆಗೆರೆ ಅಷ್ಟೇ.

ಈಗಾಗಲೇ ತಮ್ಮ ಬರವಣಿಗೆಯ ಮೋಡಿಯಿಂದ ಕರ್ನಾಟಕದ ಒಂದು ಸಮೊಹವನ್ನೇ ತಮ್ಮ ಕಡೆಗೆ ಒಲಿಸಿಕೊಂಡಿದ್ದಾರೆ. ಪ್ರತಿ ಓದುಗನೂ ಅವರ ಯಾವುದೇ ಹೊಸ ಪುಸ್ತಕಗಳಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾನೆ.

ಅಂದು ಬಿಡುಗಡೆಗೆ ಸಿದ್ಧವಾಗಿದ್ದ ಎರಡು ಪುಸ್ತಕಗಳೇಂದರೆ "ಕಾಮರಾಜ ಮಾರ್ಗ" ಮತ್ತು "ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು". ಇಂದಿನ ನಮ್ಮ ಕರ್ನಾಟಕದ ರಾಜಕೀಯ ಸ್ಥಿತ್ಯಂತರದ ಸಂದರ್ಭದಲ್ಲಿ ತುಂಬ ಸೇನ್ಸ್ ಸೇಶನ್ ಊಂಟು ಮಾಡಿರುವ "ಕಾಮರಾಜ ಮಾರ್ಗ" ಕೃತಿ ದೇಶದಲ್ಲಿಯೇ ತಲ್ಲಣವುಂಟು ಮಾಡಿದರೂ ಆಶ್ಚರ್ಯವಿಲ್ಲ.

ಯಾಕೆಂದರೇ ಅಲ್ಲಿ ಇರುವುದು ಕಲ್ಪನೆಯಾದರೂ ಕಾದಂಬರಿಯ ತುಂಬ ನಮ್ಮ ಕಣ್ಣ ಮುಂದೆ ಇಂದು ನಾಟಕವಾಡುತ್ತಿರುವ ಎಲ್ಲಾ ನಮ್ಮ ರಾಜಕಾರಣಿಗಳ ನೃತ್ಯಗಳು, ತೆವಲುಗಳು, ನೀಚತನಗಳು, ಕರ್ಮಗಳು, ಅನ್ಯಾಯಗಳು,ಕತ್ತೆ ವ್ಯಾಪಾರಗಳು,ವಾಮತನಗಳು ಮತ್ತು ಅವುಗಳ ಬೆತ್ತಲೆಗಳು ೪೦೦ ಪುಟಗಳ ತುಂಬ ಸವಿಸ್ತಾರವಾಗಿ ನಿರೂಪಿತವಗಿಯೇನೋ ಎನಿಸಿ ದಿಗ್ಬ್ರಮೆ ಗೊಳಿಸಿದರು ಅಚ್ಚರಿಯಿಲ್ಲ.

ಅಂದು ಈ ಮುಖ್ಯ ಸಮಾರಂಭಕ್ಕೆ ವೇದಿಕೆಯ ಮೇಲೆ ಆಸೀನಾರಾದವರೆಂದರೇ ಮಾಜಿ ಮುಖ್ಯ ಮಂತ್ರಿ ಎಂ.ಪಿ ಪ್ರಕಾಶ್, ರಮೇಶ್ ಕುಮಾರ್, ವಿಶ್ವೇಶ್ವರಭಟ್, ರವಿಬೆಳೆಗೆರೆ ಮತ್ತು ಚೇತನ ಬೆಳೆಗೆರೆ.

ತುಂಬ ಸರಳವಾದ ಸಮಾರಂಭದಲ್ಲಿ ಮುಖ್ಯ ಆಕರ್ಶಣೆಯೆಂದರೆ ಈ ಪುಸ್ತಕದ ಕತೃ ರವಿ ಮತ್ತು ರವಿ. ಓದುಗರ ಕಿವಿಗಳು ಅವರು ಈ ನಮ್ಮ ಪ್ರಸ್ತುತ ರಾಜಕೀಯದ ಹೊಲಸಿನ ಬಗ್ಗೆ ಹೇಗೆ ಮಾತನ್ನಾಡುತ್ತಾರೆ ಎಂಬುದರ ಕಡೆಗೆ ಕಿವಿಗೊಟ್ಟಿದ್ದರು ಅಷ್ಟೇ.

ಎಂ.ಪಿ.ಪ್ರಕಾಶ್ ರವರಿಂದ "ಕಾಮರಾಜ ಮಾರ್ಗ" ವಿಶ್ವೇಶ್ವರ ಭಟ್ ರವರಿಂದ "ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು" ಮತ್ತು ಚೇತನರವರ ಹೊಸ ಇಂಗ್ಲೀಷ್ ನಿಯತಕಾಲಿಕೆಯಾದ "ಸಿಟಿ ಬಜ್" ಲೋಕಾರ್ಪಣೆಗೊಂಡವು.

ಎಂ. ಪಿ. ಪ್ರಕಾಶ್ ತಮ್ಮ ಕಾಯಿಲೆಯಿಂದ ಬಹುಮುಖ ಸೋರಗಿದಂತೆ ಕಂಡರು ತಮ್ಮ ಒಳ್ಳೆಯತನ ಮತ್ತು ವಿಭಿನ್ನವಾದ ತಮ್ಮ ರಾಜಕೀಯತನದಿಂದ ಕೇಲವೇ ಮುಖ್ಯ ಕ್ಲೀನ್ ನಾಯಕರಾಗಿ ಸಭೆಯಲ್ಲಿ ಪ್ರಕಾಶಿಸುತ್ತಾ ಪುಸ್ತಕ ಬಿಡುಗಡೆಯ ಪ್ರಸ್ತಾವಿಕ ನುಡಿಗಳನ್ನು ರವಿಯವರನ್ನು ಹೊಗಳಲು ಮೀಸಲಿಟ್ಟರು.

ವಿಶ್ವೇಶ್ವರ ಭಟ್ ಪುಸ್ತಕದ ಮುನ್ನುಡಿಯನ್ನು ಬರೆದಿರುವ ಕಾರಣ ಪುಸ್ತಕದ ಒಟ್ಟು ತಂತುವನ್ನು ಚೊಕ್ಕವಾಗಿ ಪ್ರೇಕ್ಷಕರಿಗೆ ಕಟ್ಟಿ ಕೊಟ್ಟರು. ಏನೇ ಆಗಲಿ ಅವರು ಬರಹಗಾರರಲ್ಲವೇ. ಅವರು ಹೇಳಿದ ಅಂದಿನ ನುಡಿಗಳಲ್ಲಿ ಮನ ಕೊರದಿದ್ದೇಂದರೆ. "ಇಲ್ಲಿ ಈ ಸಮಾರಂಭಕ್ಕೆ ಕೇವಲ ಮಾಜಿ ರಾಜಕೀಯ ಪಟುಗಳನ್ನು ರವಿ ಆಹ್ವಾನಿಸಿದ್ದಾರೆ. ಹಾಲಿಗಳು ರಾಜಕಾರಣಿಗಳು ಬಂದಿದ್ದರೆ ತುಂಬ ಅರ್ಥವಂತಿಕೆಯಿರುತ್ತಿತ್ತು. ಆದರೆ ಹಾಲಿಯಲ್ಲಿ ಯಾರಾದರೂ ಒಬ್ಬರೂ ಎಸ್. ಸುರೇಶ್ ಕುಮಾರ್ ನ್ನು ಬಿಟ್ಟು ಉತ್ತಮ ಎನ್ನುವ ಮಂತ್ರಿ, ಶಾಶಕರು ಕರ್ನಾಟದಲ್ಲಿ ಇದ್ದಾರೆಯೇ?" ಹೌದು! ನಾವುಗಳು ದುರ್ಬಿನ್ ಹಾಕಿಕೊಂಡು ಹುಡುಕಿದರೂ ಒಬ್ಬೇಒಬ್ಬ ಸಚ್ಚಾರಿತ್ರವಂತ ರಾಜಕೀಯ ನಾಯಕ ನಮ್ಮ ಕಣ್ಣಿಗೆ ಸಿಗುವುದಿಲ್ಲ.

ಹಾಗಾದರೇ ನಮ್ಮ ಕರ್ನಾಟಕದಲ್ಲಿ ಎಂಥವರು ಸರ್ಕಾರದ ಆಡಳಿತ ನಡೆಸುತ್ತಿದ್ದಾರೆ ಎಂದು ನಾವುಗಳು ಕಳೆದ ತಿಂಗಳು ಪೂರಾ ಲೈವ್ ನಲ್ಲಿ ನೋಡಿದ್ದೇವೆ. ಒಂದಿಷ್ಟು ಭರವಸೆಯನ್ನು ಕೊಡಲಾರದ ಸ್ಥಿತಿಗೆ ರಾಜ್ಯ ರಾಜಕಾರಣವನ್ನು ತಂದು ನಿಲ್ಲಿಸಿದ್ದಾರೆ.

ಪುಸ್ತಕದ ಬಗ್ಗೆ ಹೇಳುತ್ತಾ "ರವಿ ಈ ಪುಸ್ತದಲ್ಲಿ ಸೇಕ್ಸ್ ನ್ನು ಇಷ್ಟೊಂದು ವೈಭವಿಕರಿಸುವ ಅವಶ್ಯಕತೆ ಇತ್ತಾ?" ಎಂಬುದು. ಆದರೆ ನಾವುಗಳು ಯಾವುದನ್ನು ಮಾತನ್ನಾಡಲೂ ತೀರ ಹಿಂಜರಿಯುತ್ತೇವೋ ಅದನ್ನೇ ನಮ್ಮ ಆದರ್ಶ ಜನ ನಾಯಕರು ಹಾದಿ ಬೀದಿಗಳಲ್ಲಿ ಮಾಡಿಕೊಂಡು. ಯಾವುದು ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಾಗಿತ್ತೋ ಅದು ತಮ್ಮ ವೀಪರಿತವಾದ ಭಂಗಿಗಳ ವರ್ಣಮಯ ಚಿತ್ರಗಳು ಮೀಡಿಯಾಗಳಲ್ಲಿ ತೋರಿಸುತ್ತಾರೆ. ಆಮೇಲೆ ಯಾವ ಮುಖವಿಟ್ಟುಕೊಂಡು ಜನರ ಮತವನ್ನು ಕೇಳಿ ಆರಿಸಿಕೊಂಡು ಸಹ ಬಂದು ಬಿಡುತ್ತಾರೆ.. ಮತ್ತೇ ನಾನು ಮುಖ್ಯಮಂತ್ರಿ, ಮಂತ್ರಿ ಸ್ಥಾನಕ್ಕೆ ಸ್ಪರ್ಧಿ ಎಂದು ಚಿಂದಿ ಚಿಂದಿ ಹೇಳಿಕೆಗಳನ್ನು ಪತ್ರಿಕೆ, ಟಿ. ವಿ ಮುಂದೆ ಕೊಡುತ್ತಾರೆ. ಇವರಿಗೇನಾದರೂ ಕಿಂಚಿತ್ತು ಮಾನ-ಮರ್ಯಾದೆ, ಅತ್ಮ ಸಾಕ್ಷಿ ಈ ಪದಗಳ ಮಹತ್ವ ತಿಳಿದಿದೇಯಾ ಎಂದರೇ? ಇಲ್ಲಾ ಎನ್ನಲೇಬೇಕು. ಯಾಕೆಂದರೇ ಅವುಗಳ ಮೀತಿಗೆ ಇವರುಗಳೂ ಎಂದೂ ಸಹ ಬರುವುದಿಲ್ಲ.

ಈ ನಿಟ್ಟಿನಲ್ಲಿ ಭಟ್ಟರ ನುಡಿಗಳು ನಮ್ಮ ವಿದ್ಯಾವಂತ ಪ್ರೇಕ್ಷಕರ ಕಣ್ಣು ತೆರೆಯಿಸಲು ಸಫಲವಾಯಿತು.

ರಮೇಶ್ ಕುಮಾರರು ಹೆಚ್ಚು ಭಾವುಕಾರಾಗಿದ್ದರೂ ಅಂದು ಅನಿಸುತ್ತದೆ. ಇಂದಿನ ರಾಜಕೀಯದ ವೈಚಿತ್ರ್ಯವನ್ನು ನೆನಪು ಮಾಡಿಕೊಂಡು ತುಂಬ ವ್ಯಥೆಪಟ್ಟರು. ಅವರ ಮಾತಿನಲ್ಲಿ ಉನ್ನತವಾದ ಸಮಾಜ ನಿರ್ಮಾಣದ ಕನಸು ಕಂಡು ಬರುತ್ತಿತ್ತು. ಬಡವರ ಬಗ್ಗೆ ಅವರ ಕಾಳಜಿ. ಇಂದಿನ ನಮ್ಮ ರಾಜಕೀಯ ಪಕ್ಷಗಳ ಬಗ್ಗೆ. ಎಲ್ಲಾ ಪಕ್ಷಗಳು ತಮ್ಮ ಪಕ್ಷ ಬೇದವನ್ನು ಮರೆತು ಎಲ್ಲಾರು ಒಂದು ಕಡೆಯಿಂದ ಇಡಿ ಕರ್ನಾಟಕವನ್ನು ಲೋಟಿ ಮಾಡಲು ಕಂಕಣ ಬದ್ಧರಾಗಿರುವುದನ್ನು ನೋಡಿ ಮಮ್ಮಲು ಮರಗಿದರು.

ಬಡವನ ಬಗ್ಗೆ ಯಾರು ಕೇಳುವವರೆ ಇಲ್ಲ. ಮತ್ತು ರೈತನೇ ನಮ್ಮ ಇಂದಿನ ಈ ಪ್ರಜಾಪ್ರಭುತ್ವದ ಬೆನ್ನೆಲುಬು ಯಾಕೆಂದರೇ ಅವನೊಬ್ಬನೇ ಸರಿಯಾಗಿ ಮತವನ್ನು ಚಲಾಯಿಸುವುದು. ನಾವುಗಳು ನಗರ ಜೀವಿಗಳು ಅದರ ಸಹವಾಸವೇ ಬೇಡವೇನೋ ಎಂಬಂತೆ ಅಂದು ನಮ್ಮ ಮಸ್ತಿ ಮತ್ತು ಮಜಾದಲ್ಲಿ ಲೀನವಾಗಿ ಸರಿಯಾದ ಸರ್ಕಾರ, ಶಾಶಕರು, ನೇತಾರರು ಆರಿಸಿ ಬರದಿದ್ದಾಗ ಸುಖ ಸುಮ್ಮನೇ ನಮ್ಮಲ್ಲಿ ನಾವುಗಳು ಮಾತನ್ನಾಡಿ ಕೈ ಕೈ ಹಿಸಿಕೊಳ್ಳುತ್ತಾ.. ಅಲ್ಲಿ ಹೀಗೆ ಚೆನ್ನಾಗಿದೆ. ಇಲ್ಲೇನೊ ಕರ್ಮ ಎಲ್ಲಾ ಲೋಟಿ ಮಾಡುವವರೆ ಎಂದು ಪಶ್ಚತಾಪಪಡುತ್ತೇವೆ. ನಮ್ಮ ಕೈಯಲ್ಲಿ ಇರುವ ನಮ್ಮ ಬಹು ಮುಖ್ಯವಾದ ಮತದಾನ ಎಂಬ ಅಸ್ತ್ರವನ್ನು ಸರಿಯಾಗಿ ಬಳಸಿಕೊಂಡು ಯೋಗ್ಯ ವ್ಯಕ್ತಿಯನ್ನು ಆರಿಸುವ ಜವಬ್ದಾರಿ ನಮ್ಮ ನಿಮ್ಮೇಲ್ಲಾರ ಹೊಣೆಯೆಂಬುದನ್ನು ಹಲವಾರು ಅವರ ನೈಜ ಜೀವನ ಘಟನೆಗಳ ಮೊಲಕ ಮನದಟ್ಟು ಮಾಡಿಕೊಟ್ಟರು.

ನಗರಗಳಲ್ಲಿ ಸೊಳ್ಳೆಗಳೋಪಾದಿಯಲ್ಲಿ ಸ್ಥಾಪಿತವಾಗುತ್ತಿರುವ ಹೈಟೆಕ್ ಕ್ಲೀನಿಕ್ ಗಳು, ಜಿಮ್ ಗಳು, ಮಹಾ ಮಹಲ್ ಗಳು ಇತ್ಯಾದಿ ಯಾರಿಗಾಗಿ. ಬಡವರಿಗಂತು ಅವುಗಳ ನೆರಳಲ್ಲಿ ನಿಲ್ಲಲು ಸಹ ಅವಕಾಶಗಳಿಲ್ಲ.
ಬಡವ ಅಸರೆಗೆ ಇರುವ ತಾಣಗಳೆಂದರೆ ಅವೇ ಸರ್ಕಾರಿ ಆಸ್ಪತ್ರೆಗಳು, ನ್ಯಾಯಬೆಲೆ ಅಂಗಡಿಗಳು ಇತ್ಯಾದಿ. ಅದರೇ ಅಲ್ಲಿ ಅವರೂಗಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಸೇವೆ ಉಚಿತವಾಗಿ ಸಿಗುತ್ತಿದೆಯಾ.
ಹಣವಂತರಿಗೆ ಮಾತ್ರ ಆರೋಗ್ಯ ಅವರುಗಳು ಮಾತ್ರ ಈ ಭೂಮಿಯ ಮೇಲೆ ಜೀವಿಸಲೂ ಅರ್ಹರೇ? ಯಾರು ಕೇಳಬೇಕು.

ಈ ಎಲ್ಲಾ ಪ್ರಶ್ನೇಗಳಿಗೆ ಉತ್ತರ. ಸರಿಯಾದ ನಾಯಕರ ಉಗಮ. ನೀತಿವಂತ ನೇತಾರನ ಜನನ. ಬಡವರ ಪರ ಮನಸ್ಸಿರುವವನ ಆಯ್ಕೇ ನಮ್ಮಿಂದ ಆಗಬೇಕು. ಕೇವಲ ಒಂದು ದಿನದ ಸುಖಕ್ಕಾಗಿ. ಅವರು ಕೊಡುವ ಹೆಂಡ, ಹಣ, ಚಿನ್ನ, ಸೀರೆ ಮುಂತಾದ ಚೀಪಾದ ವಸ್ತುಗಳಿಗೆ ತಮ್ಮ ಅಮೋಲ್ಯವಾದ ಮತವನ್ನು ಮಾಡಿಕೊಳ್ಳುವುದನ್ನು ಬಿಡಬೇಕು. ನಾವುಗಳು ನಮ್ಮ ಮತವನ್ನು ಮಾರಿಕೊಂಡು ಅವರುಗಳನ್ನು ಆರಿಸಿಕೊಂಡರೆ. ಅವರುಗಳು ನಮ್ಮ ನಾಡನ್ನೇ ಹೊರದೇಶದವರಿಗೆ ಆಡ ಇಡುವವರು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.

ರವಿ ಬೆಳೆಗೆರೆಯವರ ಮಾತುಗಳನ್ನು ಕೇಳಲು ಕಾದು ಕುಳಿತಿದ್ದ ಅವರ ಓದುಗ ದೇವರುಗಳಿಗೆ ಅವರಿಂದ ನಿರಾಸೆಯೇನು ಆಗಲಿಲ್ಲ. ಅವರ ಒಂದೇ ಮಾತಿನಲ್ಲಿ ಹೇಳುವುದಾದರೇ ಇಂದಿನ ನಮ್ಮ ರಾಜಕಾರಣದ ಬಗ್ಗೆ ನಾನು ಏನು ಹೇಳಬೇಕು ಅದನ್ನೇಲ್ಲಾ ನನ್ನ "ಕಾಮರಾಜ ಮಾರ್ಗ" ಹೇಳುತ್ತದೆ. ಮತ್ತು ಇಂದು ನಡೆಯುತ್ತಿರುವ ಮೈನಿಂಗ ಮಾಫಿಯದ ಬಗ್ಗೆ ನಾವು ತಿಳಿದುಕೊಂಡಿರುವುದು ಅರೆಪಾವಷ್ಟೇ ಅದರ ಹಿಂದಿರುವ ಕಾಣದ ಕೈ ಮತ್ತು ಅದರ ಬೃಹತ್ ಜಾಲದ ಸವಿವರಗಳನ್ನು ನನ್ನ "ಅನಿಲ್ ಲಾಡ್.." ಪುಸ್ತಕ ಹೇಳುತ್ತದೆ ಎಂದರು.

ಹಾಗೆಯೇ! ಎಂ. ಎನ್. ಸಿ ಮತ್ತು ಸಾಪ್ಟವೇರ್ ಜಗತ್ತಿನ ಬಗ್ಗೆ ನಾವುಗಳು ಎಚ್ಚರದಿಂದ ಕಾಲು ಇಡಬೇಕಾದ ಸಂದರ್ಭ ಇದಾಗಿದೆ. ಮತ್ತು ಅಲ್ಲಿ ನಡೆಯುತ್ತಿರುವ ವ್ಯವಹಾರ ನಮ್ಮ ಮದ್ಯಮ ನಾಗರೀಕರಿಗೆ ದುಃಸಪ್ನವಾಗಿದೆ. ಮತ್ತು ನಾನು ಏನಾದರೂ ಮುಂದಿನ ಕಾದಂಬರಿ ಬರೆದರೆ ಅದು "ಸಾಪ್ಟವೇರ್" ಜಗತ್ತಿನ ಬಗ್ಗೆ ಇರುತ್ತದೆ. ಅದಕ್ಕಾಗಿ ದೇಶ ವಿದೇಶಗಳ ಬೇಟಿ ಮಾಡಬೇಕಾಗಿದೆ ಎಂದು ಹೇಳುತ್ತಾ ತಮ್ಮ ಮುಂದಿನ ನಿರೀಕ್ಷಿತ ಕಾದಂಬರಿಯ ಸುಳಿವನ್ನು ಬಿಟ್ಟು ಕೊಟ್ಟರು.

ಈ ರೀತಿಯ ವಿವಿಧ ಬಗೆಯಲ್ಲಿ ನಾವುಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಅನ್ಯಾಯ ಮತ್ತು ಹಲವಾರು ವಾಮ ಮಾರ್ಗಗಳನ್ನು ಕಂಡು ನಮ್ಮ ಸಮಾಜದಲ್ಲಿ ಬದಲಾವಣೆಯ ಗಾಳಿಯನ್ನು ಬಿಸುವಂತೆ ಮಾಡುವವರು ಯಾರು ಎಂದು ಬೇರೊಬ್ಬ ಬರಲಿ ಎಂದು ಕಾಯುವ ಬದಲು ನಾವುಗಳೇ ನಮ್ಮ ನಮ್ಮಲ್ಲಿ ಬದಲಾವಣೆಯ ಹರಿಕಾರ ಹಾಕುವುದು ಇಂದು ಸುಸಂದರ್ಭ.

ಕೇವಲ ನಮ್ಮ ನಮ್ಮ ಸುಖವನ್ನು ಏಣಿಸದೇ ಮುಂದಿನ ಜನಾಂಗ, ನಮ್ಮ ನಾಡು, ಪ್ರಕೃತಿ, ಸಂಸ್ಕೃತಿ, ಸನ್ನಡತೆಯ ಪುನಾರುತ್ಥಾನವನ್ನು ಮಾಡುವ ಯುವ ಸಮೊಹ ರೂಪಿತವಾಗುವುದು ಬೇಕಾಗಿದೆ. ಅದು ಬರಲಿ ಎಂದು ಹಾರೈಸುವ.

ಶನಿವಾರ, ನವೆಂಬರ್ 13, 2010

ಮರೆಯುವ ಮುನ್ನಾ

ಜಡಿ ಜಡಿ ಜಿಗುಟು ಮಳೆಯಾದರೆ ನಮ್ಮ ಮನದ ತುಂಬ ಜಿಗುಟು ಭಾವನೆ. ಎಲ್ಲಿಯೊ ಹೊರಗಡೆ ಹೋಗದಂತೆ. ಆ ಕೆಸರು ಆ ತುಂತುರು. ಮೋಡವೇ ತೂತು ಆದಂತೆ ಹನಿ ಹನಿಯುತ್ತಿದ್ದಾಗ ನಮ್ಮ ಮನ ಬೆಚ್ಚನೆಯ ಒಂದು ಮೂಲೆಯಲ್ಲಿ ಸೇರಿಕೊಂಡು ಅಮ್ಮ ಮಾಡಿ ಕೊಟ್ಟ ಊಟವನ್ನು ಮಾಡಿಕೊಂಡು, ಆಗೀಷ್ಟು ಈಗೀಷ್ಟು ಬಿಸಿ ಬಿಸಿ ಕಾಫಿಯನ್ನು ಗುಟುಕರಿಸುತ್ತಾ ಮನಸ್ಸಿಗೆ ಹಿತ ನೀಡುವ ಯಾವುದಾದರೂ ಹಾಡುಗಳನ್ನು ಕೇಳಿಕೊಂಡೋ. ಮನಸ್ಸೇಲ್ಲಾ ಆ ಮಳೆಯೋಪಾದಿಯಲ್ಲಿ ಯಾವುದರಲ್ಲೂ ಬಲು ನಿಧಾನವೇ ಜೀವನವೆಂಬಂತೆ ಬೆಚ್ಚನೆಯ ಅನುಭವವಕ್ಕೆ ಜರುಗುವ ಸಮಯದಲ್ಲಿ ಯಾವುದಾದರೂ ನೆಚ್ಚಿನ ಪುಸ್ತಕದ ಮರೆಗೆ ಹೋದರೇ ಹೊರಗಡೆ ಏನೇ ಪ್ರಳಯವಾದರೂ ಅದರ ಬಗ್ಗೆ ಒಂದೀಷ್ಟು ಗಮನ ಕೊಡದೆ ತನ್ನ ಕೋಣೆಯಲ್ಲಿ ತನ್ನ ಪುಸ್ತಕದ ಗೆಳೆಯನೊಡನೆ ನಾವುಗಳು ತಲ್ಲಿನರಾಗಬಹುದು.


ಈ ರೀತಿಯ ಅನುಭವ ಮನ್ನೆಯಾ "ಜಲ್" ಚಂಡಮಾರುತದಿಂದ ಒಂದುವರೇ ದಿನ ಬರಿ ಮನೆಯಲ್ಲಿಯೇ ಕಳೆಯುವಂತಾಯಿತು. ಆಗ ಮನದ ನಲಿವಿಗೆ ಅಸರೆಯಾಗಿದ್ದು ಓಶೋ ರಜನೀಶ್, ಎಚ್ಚಸ್ವೀ ಮತ್ತು ಎಂ.ವೈ. ಘೋರ್ಪಡೆಯವರ ಪುಸ್ತಕಗಳು.

ಓಶೋ ಪುಸ್ತಕವೆಂದರೇ ಬಹಳಷ್ಟು ಜನರಿಗೆ ಎಂಥದೋ ಎದರಿಕೆ. ನಾನೇದರೂ ಏ ನಾನು ರಜನೀಶ್ ಪುಸ್ತಕ ಕೊಂಡುಕೊಂಡೇ ಅಂದರೇ "ಏ ಯಾಕೋ ಏನೋ ಸಮಾಚಾರ ಅನ್ನುತ್ತಾರೆ" ನನ್ನ ಗೆಳೆಯರು.


ಸಮಾಜ ನಮ್ಮ ನಮ್ಮಲ್ಲಿಯೇ ಈ ರೀತಿ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಒಂದೊಂದು ರೀತಿಯ ದೋರಣೆಯನ್ನು ನಮ್ಮ ಸುತ್ತ ಮುತ್ತಲಿನಲ್ಲಿ ಪ್ರತಿಷ್ಠಾಪಿಸಿರುತ್ತಾರೆ. ಮತ್ತು ಅವರುಗಳ ಬಗ್ಗೆ ನಾವುಗಳು ನಮ್ಮ ಹಿರಿ ಕಿರಿಯರಿಗೆ ಒಂದು ರೀತಿಯ ಮೈಲಿಗೆಯೇನೋ ಎಂಬಂತೆ ಅವರ ಬಗ್ಗೆ ತಿಳಿದು ಕೊಳ್ಳುವುದೇ ಅಪರಾಧವೇನೋ ಎಂಬಂತೆ ಮಾಡಿಬಿಟ್ಟಿರುತ್ತಾರೆ.


ರೀತಿಯಲ್ಲಿ ಏನೂ ಗೊತ್ತಿರದ ಜನಗಳು ಒಬ್ಬರಿಂದ ಒಬ್ಬರಿಗೆ ಸುಖ ಸುಮ್ಮನೇ ಒಂದೊಂದು ಕಾಮೇಂಟ್ ಪಾಸ್ ಮಾಡಿ ಅವರ ಬಗ್ಗೆ ಅರಿಯುವ ಕುತೋಹಲವನ್ನೇ ಮತ್ತು ಅವರುಗಳು ತಿಳಿಸಿರುವ ಅಪಾರ ವಿದ್ವತ್ ನಿಂದ ಒಂದು ಇಡೀ ಸಮೊಹವನ್ನೇ ವಂಚಿತರನ್ನಾಗಿ ಮಾಡಿ ಬಿಟ್ಟಿರುತ್ತಾರೆ.


ಒಶೋ ಬಗ್ಗೆ ಈ ರೀತಿಯ ಮಂಡೋಕತನದ ಪರದೆಯನ್ನು ಸರಿಸಿದ ಕೀರ್ತಿ ರವಿ ಬೆಳೆಗೆರೆ ಮತ್ತು ವಿಶ್ವೇಶ್ವರ ಭಟ್ ರಿಗೆ ಸೇರಿದ್ದು. ಈ ಲೇಖಕರುಗಳು ಅವರ ಅನುಭವದ ನುಡಿಗಳನ್ನು, ವಿಚಾರಗಳನ್ನು ಮತ್ತು ಅವರ ಬಗ್ಗೆ ಇರುವ ಹಲವಾರು ಕಥೆಗಳನ್ನು ತಮ್ಮ ಪತ್ರಿಕೆಗಳಲ್ಲಿ ಬರೆಯುವ ಮೊಲಕ ನಮ್ಮೆಲ್ಲಾರಿಗೂ ಸ್ವಲ್ಪವಾದರೂ ಅವರುಗಳು ಏನೂ ಹೇಳಿದ್ದಾರೆ ಎಂಬುದನ್ನು ತಿಳಿಯುವಂತೆ ಮಾಡಿದ್ದಾರೆ. ಇದರಿಂದ ಅವರ ಅಪಾರ ಸಮೃದ್ಧ ಸಂತ ಙ್ಞಾನವನ್ನು ಕೆಲವರ ಬಳಿಗಾದರೂ ಬರುವಂತೆ ಮಾಡಿದ್ದಾರೆ.

ಅವರು ತಮ್ಮ ಪ್ರವಚನದಲ್ಲಿ ತಾವು ಅಧ್ಯನ ಮಾಡಿರುವ ವಿಷಯಗಳ ವಿವಿಧ ರೀತಿಯಲ್ಲಿ ಜನರ ಮುಂದಿಟ್ಟಿದ್ದಾರೆ ಮತ್ತು ಆ ಎಲ್ಲಾ ನುಡಿಗಳು ಸಾವಿರಾರು ಗ್ರಂಥಗಳಾಗಿವೆ. ಹಲವಾರು ವಿಷಯಗಳ ಬಗ್ಗೆ ಧೀರ ಗಾಂಭಿರ್ಯದಿಂದ ಮಾತನ್ನಾಡುವವರಲ್ಲಿ ಅವರುಗಳು ಒಬ್ಬರಾಗಿದ್ದಾರೆ. ಭಾರತದ ಬಗ್ಗೆ ಇಲ್ಲಿರುವ ನಮ್ಮ ಸನಾತನ ಹಿಂದು ಧರ್ಮದ ಬಗ್ಗೆ, ವೇದ ಉಪನೀಷತ್, ಭಾರತದ ಯಾತ್ರಾ ಸ್ಥಳಗಳ ಬಗ್ಗೆ, ಭಾರತದ ಪುಣ್ಯ ಪುರುಷರ ಬಗ್ಗೆ, ಕೃಷ್ಣ ನ ಬಗ್ಗೆ, ಯುವಕರು, ಯುವತಿಯರ ಬಗ್ಗೆ, ಜನರ ಜಾಗೃತಿಯ ಬಗ್ಗೆ, ಪತ್ರಿಕೆಗಳ ಬಗ್ಗೆ, ವಿಙ್ಞಾನದ ಬಗ್ಗೆ ಇತ್ಯಾದಿ ಇತ್ಯಾದಿ ಆಡು ಮುಟ್ಟದ ಸೊಪ್ಪು ಇಲ್ಲ ಎಂಬ ರೀತಿಯಲ್ಲಿ ವಿಫುಲವಾದ ಸಾಹಿತ್ಯವನ್ನು ನಮ್ಮ ಪ್ರಪಂಚಕ್ಕೆ ನೀಡಿದ್ದಾರೆ.

ಹಾಗೇ ಈ ವಾರ ಅವರ ಸಂ. ಸಮಾಧಿ ಕಡೆಗೆ ಪುಸ್ತಕವನ್ನು ಓದಿದಾಗ ಅನಿಸಿದ್ದು. ಪ್ರೀತಿ, ಪ್ರೇಮ ಇಡೀ ಪ್ರಪಂಚದ ಜೀವನ ಜೀವಂತ ನಾಡಿ ಮೀಡಿತವಾಗಿದೆ. ಅದೊಂದು ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾವುದನ್ನು ಟ್ರೂ ಲವ್ ಎಂಬುತ್ತಾರೋ ಅದರ ಬಗ್ಗೆ ಅವರುಗಳು ಎಷ್ಟೊಂದು ವಿಷದವಾಗಿ ಮಾತನ್ನಾಡಿದ್ದಾರೇ ಎಂದರೆ. ಲವ್ ಎಂದರೇ ಬರೀ ಸೇಕ್ಸ್ ಅಲ್ಲ ಎಂಬುದನ್ನು ಹಲವಾರು ದುಷ್ಟಾಂತ ಸತ್ಯ ಕಥೆಗಳ ಮೊಲಕ ಎಲ್ಲೂ ಸಹ ಅಸಹ್ಯ ಎಂಬ ಭಾವನೆ ನಮ್ಮ ಮನೋಭಾವದಲ್ಲಿ ಬರದ ರೀತಿ. ಪ್ರೇಮ ಒಂದು ಗಂಡು - ಹೆಣ್ಣು ಮಧ್ಯ ಮಾಮೋಲಿಯಾಗಿ ಘಟಿಸುವ ಪ್ರಕೃತಿ ಸಹಜ ಒಂದು ಕ್ರೀಯೆ ಎಂದು ಹೇಳಿ, ಆ ಒಂದು ಮೋಹರ್ತ ಸಮಯದಲ್ಲಿ ಸ್ಪುರಿಸುವ ಭಾವನೆಯಲ್ಲಿಯೇ ಶಿವನನನ್ನು ಕಾಣಬಹುದು ಎಂಬುದನ್ನು ತೋರಿಸಿದ್ದಾರೆ.

ಆದರೇ ನಾವುಗಳು ಯಾವ ರೀತಿಯಲ್ಲಿ ಇಂದು ನಮ್ಮ ಭಾರತದಲ್ಲಿ ಸೇಕ್ಸ್ ಎಂದರೇ ಒಂದು ರೀತಿಯಲ್ಲಿ ನೋಡುವಾಂತಾಗಿದೆ. ಆದರ ಬಗ್ಗೆ ಮಾತನ್ನಾಡುವುದೇ ಅಸಭ್ಯ ವರ್ತನೆಯಾಗಿ, ಕೀಳಾಗಿ ಕಾಣುವಂತೆ ಅದರ ಪ್ರಾಮುಖ್ಯತೆಯ ಬಗ್ಗೆ ಕಿರಿಯಗೆ ತಿಳಿಸದೇ ಗೌಪ್ಯವಾಗಿ ಇಟ್ಟಿದ್ದರೂ ಅದು ಇನ್ನೂ ಹೆಚ್ಚು ಆಕರ್ಷಕವಾಗಿ ಹಲವು ರೀತಿಗಳಲ್ಲಿ ನಮ್ಮ ಮಂದಿಗಳಿಗೆ ಅದೇ ಬದುಕಾಗಿ ಹಲವಾರು ಅನಾಹುತಗಳಿಗೆ ಕಾರಣವಾಗಿದೆ ಎಂದು ಎಲ್ಲರಲ್ಲೂ ಮನೆ ಮಾಡಿರುವ ಪರಮಾತ್ಮನಿಗೆ ಪ್ರೀಯವಾಗುವ ರೀತಿಯಲಿ ತಿಳಿಸಿದ್ದಾರೆ. ಒಟ್ಟಾರೆ ಮಾನವ ಜೀವನವನ್ನು ಒಂದು ವೈಙ್ಞಾನಿಕವಾಗಿ ಚಿತ್ರಿಸಿದ್ದಾರೆ. ಒಂದು ಜೀವನವನ್ನು ಸಮಗ್ರವಾಗಿ ನೋಡುವಂತೆ ಮಾಡಿದ್ದಾರೆ. ಇದು ಇಂದು ಅಗತ್ಯವಾಗಿದೆ. ಆಗಲೇ ಇಡೀ ಪ್ರಪಂಚದಲ್ಲಿ ಶಾಂತಿಯನ್ನು ಕಾಣಬಹುದಾಗಿದೆ.



ಹಾಗೆಯೇ ನಮ್ಮ ಪ್ರಸಿದ್ಧ ರಾಜಕಾರಣಿಯಾಗಿರುವ ಎಂ.ವೈ ಘೋರ್ಪಡೆಯವರ "ರೆಕ್ಕೆಯ ಮಿತ್ರರು" ಸಂಡೂರಿನ ಸುತ್ತ ಮುತ್ತಲಿನಲ್ಲಿರುವ ನಮ್ಮ ಪಕ್ಷಿ ಮಿತ್ರರುಗಳನ್ನು ಉತ್ತಮವಾಗಿ ಮನ ಮುಟ್ಟುವಂತೆ ಅಪರೂಪದ ವರ್ಣ ಚಿತ್ರಗಳೊಂದಿಗೆ ಆ ಪಕ್ಷಿಯ ಬಗ್ಗೆ ಇರುವ ಕಥೆಗಳಾದ ಜನಸಾಮಾನ್ಯರ ಮಾತುಗಳು, ಪುರಾಣ ಕಥೆಗಳು, ದುಷ್ಟಾಂತಗಳು ಮತ್ತು ವೈಙ್ಞಾನಿಕವಾಗಿ ಅವುಗಳ ಜೀವನ ಶೈಲಿಯನ್ನು ಚಿಕ್ಕ ಮಕ್ಕಳಿಗೂ ಅರ್ಥವಾಗುವ ರೀತಿ ಚಿತ್ರಿಸಿರುವುದು ಓದಲು ಖುಷಿಯನ್ನು ಕೊಡುತ್ತದೆ. ಈ ಪ್ರಯತ್ನ ನಮ್ಮ ಮಕ್ಕಳಿಗೆ ಪರಿಸರದ ಬಗ್ಗೆ ನಾವುಗಳು ಕಡಿಮೆ ಖರ್ಚಿನಲ್ಲಿ ನಮ್ಮ ಸುತ್ತ ಮುತ್ತಲಿನಲ್ಲಿ ಕಾಣುವ ನಿಸರ್ಗ ಸೌಂದರ್ಯವನ್ನು ನೋಡುವ ಮನಸ್ಸಿನ ಮೂಲಕ ನಾವು ಆನಂದ ಪಟ್ಟು ನಮ್ಮ ಜೊತೆಯಲಿ ನಮ್ಮ ಮುಂದಿನ ಜನಾಂಗಕ್ಕೆ ಈ ಅಪರೂಪದ ಜೀವಿಗಳನ್ನು ಉಳಿಸುವ ಕಾರ್ಯವನ್ನು ಮಾಡಲು ಪ್ರೇರಪಿಸುವಂತಾಗಿದೆ.


ಕವಿಗಳ ಜೀವನ ಮರ್ಮವನ್ನು ಅರಿಯಲು ಎಲ್ಲಾರಿಗೂ ಕುತೂಹಲ. ಯಾವ ಸಮಯದಲ್ಲಿ ಅಂಥ ಮುತ್ತಿನಂಥಹ ಪದಗಳ ಜಾದು ಘಟಿಸುತ್ತದೆ. ಅವರ ಆ ಕವನದ ಸಾಲುಗಳು ಯಾವ ಜಾಗದಲ್ಲಿ ಜನಿಸುತ್ತದೆ. ಆ ಸಾಲುಗಳ ಜನನಕ್ಕೆ ಕಾರಣರಾರು? ಹೀಗೆ ನಮ್ಮ ಹಿರಿಯ ಕನ್ನಡ ಕವಿಗಳ ಬಗ್ಗೆ ಅವರ ಜೀವನ ಚರಿತ್ರೆಯ ಬಗ್ಗೆ ಎಂಥ ಸಹೃದಯಿಗೂ ಒಂದು ಅಚ್ಚರಿ ಇರುತ್ತದೆ. ಈ ಮಾತಿಗೆ ಪೂರಕವಾಗಿ ಅದನ್ನು ಸ್ವಲ್ಪ ಮಟ್ಟಿಗೆ ಹಿಡೇರಿಸಲೂ ಸಹಾಯ ಮಾಡಿದ್ದಾರೆ ಎಂಬಂತೆಲೋ ನಮ್ಮ ಎಚ್. ಎಸ್. ವೇಂಕಟೇಶ್ ಮೂರ್ತಿಯವರ "ಅನಾತ್ಮ ಕಥನ" ಒಂದು ನವಿರಾಗಿ ಓದಿಸಿಕೊಳ್ಳುವ ಕವಿಯ ಜೀವನ ಕಥೆ ನಮ್ಮ ನಮ್ಮ ಬಾಲ್ಯ, ಯೌವನ, ಉದ್ಯೋಗದ ದಿನಗಳಿಗೆ ಕರೆದುಕೊಂಡು ಹೋಗುತ್ತದೆ.


ಅವರ ಅಂದಿನ ಬಾಲ್ಯ ಮತ್ತು ಯೌವನದ ದಿನಗಳ ಸಹಜ ತುಂಟತನ ಮತ್ತು ಅವರ ಜೊತೆಯಲ್ಲಿ ಇದ್ದ ಅಪರೂಪದ ಗೆಳೆಯರು, ಬಂಧುಗಳ, ಹಳ್ಳಿಯ ವ್ಯಕ್ತಿ ಚಿತ್ರಗಳು ಉತ್ಕೃಷ್ಟವಾಗಿವೆ. ಅಲ್ಲಿ ಮೊಡಿರುವ ಪ್ರತಿ ಸಾಲುಗಳು ಒಂದು ಧೀರ್ಘ ಕವನದಂತೆ ಒಂದೇ ಸಿಟ್ಟಿಂಗ್ ನಲ್ಲಿ ಓದುವಂತೆ ಮಾಡುತ್ತದೆ.

ಈ ಪುಸ್ತಕಗಳ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ಹೀಗಾಗಲೇ ವಿವಿಧ ರೀತಿಯಲ್ಲಿ ಪ್ರಶಂಸೆಗಳು ಬಂದಿವೆ. ಮತ್ತೇನು ಅನ್ನುತ್ತಿರಾ? ಇಂಥ ಪುಸ್ತಕಗಳನ್ನು ಓದಿದರೇ ಅಲ್ಲಿ ಸಿಗುವ ಸಂತೋಷದ ಬುಗ್ಗೆಯನ್ನು ಜೀವಂತ ಸವಿಯಬಹುದು ಅಲ್ಲವಾ.

ಕತೃಗಳೇ ಥ್ಯಾಂಕ್ಯೂ!

ಗುರುವಾರ, ಅಕ್ಟೋಬರ್ 28, 2010

ಕನ್ನಡ ಜನಮನಗಳ ಉತ್ಸವ


ನವಂಬರ್ ಒಂದು ನಮ್ಮ ಕರ್ನಾಟಕ ಏಕೀಕರಣಗೊಂಡ ದಿನಾಚರಣೆ. ಕರ್ನಾಟಕ ಒಟ್ಟಿಗೊಡಿ ೫೪ (೧೯೫೬) ವರ್ಷಗಳಾಗಿವೆ.

ಇದಕ್ಕೆ ನಾವುಗಳು ಹೆಮ್ಮೆಪಡಬೇಕು. ಕನ್ನಡ ಮಾತನಾಡುವ ಎಲ್ಲಾ ಪ್ರಾಂತ್ಯಗಳನ್ನು ಒಂದು ಕಡೆ ಸೇರಿಸಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಪುನರ್ ನಾಮಕರಣ ಮಾಡಿದ ದಿನ. ಆ ದಿನವನ್ನು ಎಲ್ಲಾ ಕನ್ನಡಿಗರು ಮತ್ತು ಕನ್ನಡ ಮಣ್ಣಿನ ಮಕ್ಕಳು ಉತ್ಸಾಹದಿಂದ ರಾಜ್ಯೋತ್ಸವವನ್ನು ಆಚರಿಸುತ್ತಾ ನಮ್ಮ ರಾಜ್ಯಕ್ಕಾಗಿ ಹೋರಾಡಿದ ನಮ್ಮ ಹಲವು ಹಿರಿಯರು, ಸ್ವಾತಂತ್ರ್ಯ ಹೋರಾಟಗಾರರು, ಸಾಧಕರು ಮತ್ತು ಕನ್ನಡದ ಕಟ್ಟಾಳುಗಳನ್ನು ನೆನೆಯುವ ದಿನವಾಗಿದೆ.


ನಾವು ಎಂಥ ಕಾಲ ಘಟ್ಟದಲ್ಲಿದ್ದೇವೆ ಎಂದರೇ ಅರ್ಧ ಶತಮಾನಗಳನ್ನು ಕಳೆದಿದ್ದೇವೆ. ಹಲವಾರು ರೀತಿಯ ಬದಲಾವಣೆಗಳನ್ನು ಕರ್ನಾಟಕದ ಭೂಪಟದಲ್ಲಿ ಮಾತ್ರ ಕಾಣದೆ ನಮ್ಮ ನಿಮ್ಮ ಸುತ್ತಲಿನ ಪರಿಸರ, ಮನಸ್ಸಿನಲ್ಲಿ, ನಡೆಯತ್ತಿರುವ ಜೀವನದಲ್ಲಿ ಉಯಿಸಲು ಸಾಧ್ಯವಾಗದ ರೀತಿಯಲ್ಲಿ ನಮ್ಮ ರಾಜ್ಯ- ಕನ್ನಡ- ಕರ್ನಾಟಕ ವಿಶ್ವ ಪ್ರಸಿದ್ಧಿಯಾಗಿದೆ. ಊರು ಊರುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚಿತವಾಗುತ್ತಿವೆ. ಅದಕ್ಕೆ ಹಲವು ಕಾರಣಗಳಿರಬಹುದು. ಅದಕ್ಕೆ ನಮಗೆಲ್ಲಾ ಗರ್ವವೇ ಸರಿ.


ಪ್ರತಿ ಭಾರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಎಲ್ಲಾ ಕನ್ನಡಾಭಿಮಾನಿಗಳ ಒಂದೇ ಕೂಗು ಕನ್ನಡವನ್ನು ಇನ್ನಾದರೂ ಉಳಿಸಿ. ಈ ರೀತಿಯ ಗಟ್ಟಿ ಕೂಗು ನನಗೆ ತಿಳಿದ ರೀತಿಯಲ್ಲಿ ಭಾರತದ ಯಾವುದೇ ಭಾಷೆಗೂ/ರಾಜ್ಯದಲ್ಲೂ ಬಂದಿಲ್ಲ. ಯಾಕೇ? ನಾವುಗಳು ನಮ್ಮ ಮಾತೃ ಭಾಷೆಯನ್ನು ಅಷ್ಟೊಂದು ವೇಗವಾಗಿ ಕಡೆಗಣಿಸುತ್ತಿದ್ದೇವೆ? ಉತ್ತರವನ್ನು ಎಲ್ಲಾ ಕನ್ನಡಿಗರು ಕೊಡಬೇಕು.
ಇಂದು ಐ.ಟಿ, ಬಿ.ಟಿ ಭರಾಟೆಯಲ್ಲಿ ನಾವುಗಳು ಯಾವುದೇ ಒಂದು ರಾಜ್ಯವನ್ನು, ಮೆಟ್ರೂ ನಗರವನ್ನು ಕೇವಲ ಆ ರಾಜ್ಯದವರೇ ವಾಸಿಸುವ ಸ್ಥಳವೆಂದು ಹೇಳುವುದು ಕಷ್ಟ. ಇಂದು ಯಾವುದೇ ರಾಜ್ಯಗಳಿಗೂ, ದೇಶಗಳಿಗೂ ಗಡಿಗಳೇ ಇಲ್ಲ. ಆ ರೀತಿಯಲ್ಲಿ ನಮ್ಮ ಸುಂದರ ಬೆಂಗಳೂರಿನಲ್ಲಿಯೇ ಮಿನಿ ವಿಶ್ವ-ಭಾರತವನ್ನು ಕಾಣಬಹುದು. ಕನ್ನಡವನ್ನು ಬಿಟ್ಟು ಎಲ್ಲಾ ಭಾಷೆಗಳನ್ನು ಮಾತನಾಡುವ ಜನರುಗಳನ್ನು ಎಲ್ಲಾ ಪ್ರಾಂತ್ಯದಲ್ಲೂ ಕಾಣಬಹುದು. ಇದು ಒಂದು ವಿವಿಧತೆಯಲ್ಲಿ ಏಕತೆ ಎನ್ನೋಣವೇ! ?


ಆದರೂ ನಮ್ಮ ಕನ್ನಡಕ್ಕಾಗಿ ಯಾವಗಲೂ ಹೋರಾಡುವ ಹುಟ್ಟು ಕನ್ನಡ ಮನಸ್ಸುಗಳು ಈ ರೀತಿಯ ವಾತವರಣವನ್ನು ಕಂಡು ಕೂರಗುತ್ತಿರುವುದು ನವ ತರುಣ ಜನಾಂಗಕ್ಕೆ ಮುಂದೆ ಎಚ್ಚರದಿಂದ ಹೆಜ್ಜೆ ಇಡಬೇಕಾದ ದಿನಗಳಿಗೆ ಎಚ್ಚರಿಕೆಯಾಗಿದೆ.

ಕರ್ನಾಟಕ ಎಂದರೇ ಕೇವಲ ಕನ್ನಡ ಮಾತನ್ನಾಡುವ ಭಾಷೆಯಲ್ಲ. ಅದಕ್ಕೆ ಸುಧಿರ್ಘ ಇತಿಹಾಸವಿದೆ, ಅಗಾಧ ಸಂಸ್ಕೃತಿಯಿದೆ. ಉನ್ನತ ಸಂಸ್ಕಾರವಿದೆ ಮತ್ತು ಹಲವು ಮಹನೀಯರ ಪರಿಶ್ರಮದ ಶ್ರೀಮಂತ ಸಂಪತ್ತು ಇದೆ. ಅದನ್ನು ನಾವುಗಳು ನಮ್ಮ ನಿತ್ಯ ಜೀವನದಲ್ಲಿ ಉಸಿರಾಗಿ ಉಳಿಸುವುದು ನಮ್ಮಗಳ ಕರ್ತವ್ಯವಾಗಿದೆ. ಯಾಕೆಂದರೇ ನಮ್ಮ ಕನ್ನಡತನವನ್ನು ಕನ್ನಡಿಗರಲ್ಲದೇ ಬೇರೆಯವರೂ ಬಳಸುವುದು/ಊಳಿಸಲಾರರು.


ಅದ್ದರಿಂದ ಹೀಗಾಗಲೇ ನಮ್ಮ ಕರ್ನಾಟಕದ ಹೃದಯ ಭಾಗವಾದ ನೆಚ್ಚಿನ ಐ.ಟಿ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಶೇ. ೩೦ ಕ್ಕೆ ಇಳಿದಿರುವ ಸಂದರ್ಭದಲ್ಲಿ ನಾವುಗಳು ಹೇಗೆ ನಮ್ಮ ಆಡು ಭಾಷೆಯನ್ನು, ನಮ್ಮ ಸಂಸ್ಕೃತಿಯನ್ನು ನಮ್ಮ ಜೊತೆಯಲ್ಲಿ ನಮ್ಮ ಮನೆ ಮನಗಳಿಂದ ಪ್ರಾರಂಭಿಸಿ ನಮ್ಮ ಮಕ್ಕಳಿಗೆ ಬಳುವಳಿಯಾಗಿ ಕೊಡುವೇವು? ಮತ್ತು ಇದನ್ನು ನೋಡಿ ಹೊರ ರಾಜ್ಯದಿಂದ ಬಂದಿರುವ ನಮ್ಮ ಎಲ್ಲಾ ಬಂಧುಗಳು ಸಹ ನಮ್ಮ ನಾಡು ನುಡಿಯ ಏಳ್ಗೆಗೆ ಯಾವ ರೀತಿಯಲ್ಲಿ ಕೈ ಜೋಡಿಸುವ ಕೆಲಸಕ್ಕೆ ಪ್ರೇರಪಿಸುವೆವು ಎಂಬುದು ಮಿಲಿಯನ್ ಡಾಲರ್ ಪ್ರಶ್ನೇ.


ನಮ್ಮ ರಾಷ್ಟ್ರ ಹಳ್ಳಿಗಳ ದೇಶ. ಹಳ್ಳಿಗಳಲ್ಲಿ ಈ ರೀತಿಯ ಮೇಲಿನ ಕೂಗುಗಳು ವಿರಳವೇ ಎನ್ನಬಹುದು. ಅದರೇ ಇಂದು ನಮ್ಮ ಹಳ್ಳಿಗಳಲ್ಲಿ ಎಷ್ಟುಮಂದಿ ಇದ್ದಾರೆ ಎಂದರೇ ಹಲವು ಹಳ್ಳಿಗಳು ವಿದ್ಯಾವಂತ ತರುಣರುಗಳಿಲ್ಲದೆ ಬೀಕೋ ಎನ್ನುತ್ತಿವೆ. ಯಾಕೇ ಹೀಗೆ? "ಹೊಟ್ಟೆ ಪಾಡು ಸ್ವಾಮಿ" ಎನ್ನುವ ಉತ್ತರ. ಹೌದು! ಯಾರೊಬ್ಬರೂ ಅದೇ ಹೊಲ, ಉಳಿಮೆ ಎಂದು ತಮ್ಮನ್ನು ತಾವುಗಳು ತೊಡಗಿಸಿಕೊಳ್ಳುವುದಿಲ್ಲ. ಸ್ವಲ್ಪ ಓದಿದರೇ ಸಾಕು ಅವರುಗಳ ಅಪ್ಪ ಅಮ್ಮ ತಮ್ಮ ಮಕ್ಕಳುಗಳನ್ನು ದೊಡ್ಡ ದೊಡ್ಡ ಪಟ್ಟಣಗಳಿಗೆ ಸಾಗು ಹಾಕುತ್ತಾರೆ. ಹೆಚ್ಚು ಹೆಚ್ಚು ಸಂಬಳ ಸಿಗುವ ಉದ್ಯೋಗಗಳನ್ನು ಹರಸಿಕೊಂಡು ಬೆಂಗಳೂರಿನಂತ ಬೃಹತ ನಗರಗಳ ಕಡೆ ಮುಖ ಮಾಡುತ್ತಾರೆ.


ಇಲ್ಲಿ ಬಂದಾಗ ಅವರಿಗೆ ತಿಳಿಯುತ್ತದೆ. ನಾವು ನಿಜವಾಗಿಯೋ ನಾವುಗಳಾ ಎಂದು. ಯಾಕೆಂದರೇ ಉತ್ತಮ ಉದ್ಯೋಗಗಳು ಬೇಕೆಂದರೆ ವಿವಿಧ ರೀತಿಯ ಕೌಶಲ್ಯವಿರಬೇಕು. ತಾನು ತನ್ನ ಕನ್ನಡ ಶಾಲೆ, ಕಾಲೇಜು, ವಿಶ್ವ ವಿದ್ಯಾನಿಲಯದಲ್ಲಿ ಅದೇ ಕನ್ನಡದಲ್ಲಿ ಕಲಿತ ವಿದ್ಯೆ ಮತ್ತು ಮಾತುಗಳು ಲೆಕ್ಕಕ್ಕೆ ಬರುವುದಿಲ್ಲ. ಅಟ್ ಲಿಸ್ಟ್ ಅವನು ವಿಶ್ವ ಭಾಷೆಯಾದ ಇಂಗ್ಲಿಷ್ ಕಮ್ಯುನಿಕೇಶನ್ ನಲ್ಲಿ ಸುಲಲಿತನಾಗಿ ಮಾತನಾಡುವ/ಯೋಚಿಸುವ ಯೋಗ್ಯತೆಯನ್ನು ಹೊಂದಿರಬೇಕು. ಆಗ ಮಾತ್ರ ಇಲ್ಲಿರುವ ಯಾವುದಾದರೂ ಒಂದು ಸಂಸ್ಥೆಯಲ್ಲಿ ಕೆಲಸ ಗ್ಯಾರಂಟಿ ಇಲ್ಲವಾದರೇ ನಾಲ್ಕನೇ ದರ್ಜೆಯ ಕೆಲಸಕ್ಕೆ ಶರಣು ಎನ್ನಬೇಕು.


ಈ ಮೇಲಿನ ಎಲ್ಲಾ ಅನುಭವಗಳಿಂದ ಪ್ರೇರಪಿತನಾಗಿ ಅದೇ ಹಳ್ಳಿಯ ಪಕ್ಕ ಕನ್ನಡದ ಮಣ್ಣಿನ ಮಗ ತಾನು ಮದುವೆಯಾಗಿ, ಮಕ್ಕಳು ಮಾಡಿಕೊಂಡ ಮೇಲೆ ಯೋಚಿಸುತ್ತಾನೆ. ಮುಂದೆ ನನ್ನ ಮಕ್ಕಳು ನನ್ನ ಹಾಗೇ ನರಳುವುದು ಬೇಡ. ನನ್ನ ಮಕ್ಕಳಾದರೂ ಉನ್ನತ ಶಿಕ್ಷಣ ಪಡೆಯಲಿ ಎಂದು ನಿರ್ಧರಿಸಿ, ಅದಕ್ಕೆ ಪ್ರಾರಂಭವೆನ್ನುವಂತೆ ಢಾಳಾಗಿ ಕಾಣಿಸುವ ಇಂಗ್ಲಿಷ್ ಕಾನ್ವೇಂಟ್ ಗಳಿಗೆ ಅಷ್ಟು ಇಷ್ಟು ಉಳಿಸಿ ಸೇರಿಸಿ ಸರಿಕರ ಮುಂದೆ ನನ್ನ ಮಕ್ಕಳು ಮಮ್ಮಿ, ಡ್ಯಾಡಿ, ಅಂಟಿ ಎನ್ನುವ ತುಂಟ ಮಾತುಗಳು ಕಿವಿಯ ಮೇಲೆ ಬಿಳಿಸಿಕೊಂಡು ಸುಖಿಸುತ್ತಾನೆ. ಇಲ್ಲಿ ಮುಖ್ಯವಾಗುವುದು ತಾನು ಮತ್ತು ತನ್ನ ಸಂಸಾರದ ಹೊಟ್ಟೆ ಪಾಡು ಅಲ್ಲಿ. ಅಷ್ಟೋತ್ತಿಗೆ ತನ್ನ ನಾಡು ನುಡಿ ಕಡೆಗಣಿಸಲ್ಪಟ್ಟಿರುತ್ತದೆ. ಯಾಕೆಂದರೇ ಜೀವನ ದೊಡ್ಡದಲ್ಲವಾ.


ಈ ರೀತಿಯ ಪರಿಸ್ಥಿತಿಯನ್ನು ತಂದಿರುವವರು ಯಾರು? ಇದಕ್ಕೆ ಪರಿಹಾರವಿಲ್ಲವೇ. ಮಾತು ಎತ್ತಿದರೇ ಎಲ್ಲಾರೂ ಯಾವುದೋ ಲೋಕದಿಂದ ಬಂದಿರುವ ಇಂಗ್ಲಿಷ್ ಪ್ರಾಡಕ್ಟ್ ರೀತಿಯಲ್ಲಿ ಟಸ್ಸ್ ಪೂಸ್ ಎಂದು ಮಾತನಾಡುವುದೇ ದೊಡ್ದಸ್ತಿಕೇ ಎನ್ನುವಂತಾಗಿರುವುದಾದರೂ ಯಾಕೇ?


ಇದರ ಬಗ್ಗೆ ಪ್ರತಿಯೊಬ್ಬರೂ ಒಂದು ಕ್ಷಣ ಚಿಂತಿಸುವುದು ಇಂದಿನ ಸಮಯಕ್ಕೆ ಅತ್ಯಗತ್ಯ.


ಪ್ರಸಿದ್ಧ ವಿಶ್ವ ವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣವನ್ನು ಅಧ್ಯಯನ ಮಾಡುವ ಕನ್ನಡ ಮಾಧ್ಯಮದ ಹುಡುಗರ ಪಾಡು ಹೇಳಬಾರದು. ಯಾಕೆಂದರೆ ಯಾವುದೇ ಪೂರಕ ಪುಸ್ತಕಗಳು ಬೇಕೆಂದರೇ ಪುನಃ ಇಂಗ್ಲಿಷ್ ಲೇಖಕರ ಕಡೆ ಮುಖ ಮಾಡಿಕೊಂಡು ಅವುಗಳನ್ನು ಅರ್ಥ ಮಾಡಿಕೊಂಡು ಪುನಃ ಕನ್ನಡದಲ್ಲಿ ತಮ್ಮ ಪರೀಕ್ಷೆಗಳಲ್ಲಿ ಉತ್ತರಿಸಬೇಕು. ಆ ಸಮಯದಲ್ಲಿಯೇ ಅವನಿಗೆ ತಿಳಿಯುತ್ತದೆ ನಾನು ಎಲ್ಲಿ ಎಡೆವಿದ್ದೇನೆ ಎಂದು.


ಈ ರೀತಿಯ ಪರಕೀಯ ವಾತವರಣವನ್ನು ಕನ್ನಡ ಕನ್ನಡ ಎಂದು ಕೂಗುವ ನಮ್ಮಗಳ ಜನ, ಸರ್ಕಾರ, ಸಂಸ್ಥೆಗಳು ಎಲ್ಲಾ ರಂಗದಲ್ಲೂ ಹೋಗಲಾಡಿಸಬೇಕು. ಪ್ರೀತಿ ಪಟ್ಟು ಮಾತೃ ಭಾಷೆ, ಸಂಸ್ಕೃತಿಯನ್ನು ತನ್ನಲ್ಲಿ ಇಟ್ಟುಕೊಳ್ಳಲು ತವಕಿಸುವ ಕನ್ನಡ ಜನ ಮನಗಳಿಗೆ ಉತ್ಸಹ ಕೊಡುವಂತ ಕೆಲಸಗಳು ಆಗಲಿ ಎಂದು ಕನ್ನಡಾಂಭೆಯಲ್ಲಿ ಬೇಡುವ ಕನ್ನಡಿಗ!

ಆದರೂ ಈ ರೀತಿಯ ಸಂಧಿಗ್ಧ ಪರಿಸ್ಥಿಯಲ್ಲೂ ಸಹ ಕೆಲವೇ ಕೆಲವರಾದರೂ ತಾವು ಕೆಲಸ ಮಾಡುವ ಜಾಗಗಳಲ್ಲಿ ಕನ್ನಡದಲ್ಲಿ ಉಸಿರು ಬಿಡದಂತಹ ವಾತವರಣ ಇದ್ದರೂ. ತಮ್ಮ ಮನೆಯಲ್ಲಿ ಮಾತೃ ಭಾಷೆ ಬೇರೆಯಾಗಿದ್ದರೂ, ತಾವು ಬೆಳೆದ ಬೆಂಗಳೂರು ಕನ್ನಡ ಮಣ್ಣು ಎಂಬ ಒಂದೇ ಪ್ರೀತಿಯಿಂದ ಕನ್ನಡ ಸ್ನೇಹಿತರ ಜೊತೆಯಲ್ಲಿ ಕನ್ನಡಕ್ಕೆ ಸಂಬಂಧಿಸಿದ ವಿವಿಧ ಸಾಂಸ್ಕೃತಿಕ ವಿಷಯಗಳಾದ ಸಾಹಿತ್ಯ, ಸಂಗೀತ, ಸಿನಿಮಾ, ಹಾಡು, ಭಾವಗೀತೆಗಳನ್ನು ನಿತ್ಯ ತಮ್ಮ ಮನದಲ್ಲಿ ಸಹೃದಯದಿಂದ ಆರಾಧಿಸುವ ಅಪರೂಪದ ಜಾಣ ಜಾಣೆಯರನ್ನು ಈ ಬೆಂಗಳೂರು ನಗರದಲ್ಲಿ ಕಂಡು ನನ್ನ ಮನ ಸುಖಿಸಿದೆ. ಅದಕ್ಕೆ ಯಾರಿಗೇ ಧನ್ಯವಾದಗಳನ್ನು ಅರ್ಪಿಸಬೇಕೂ ತಿಳಿಯದು. ನನಗೆ ಅನ್ನಿಸುತ್ತದೆ. ಈ ರೀತಿಯ ನೆಚ್ಚಿನತನವನ್ನು ಕನ್ನಡದಲ್ಲಿ ಕೊಟ್ಟ ನಮ್ಮ ಕನ್ನಡದ ಎಲ್ಲಾ ರಂಗದ ಸಾಧಕರಿಗೆ ಹೇಳಬೇಕು ಅಲ್ಲವಾ?

ಶನಿವಾರ, ಅಕ್ಟೋಬರ್ 23, 2010

ವೇದಾವತಿಯಲ್ಲಿ ಹೊಸ ನೀರು...

ನಾವು ಹುಡುಗಿಯರು ಎಷ್ಟು ಸೂಕ್ಷ್ಮ ಎಂಬುದು ನಿನಗೆ ಗೊತ್ತಿಲ್ಲದೇ ಎಷ್ಟೊಂದು ಒರಟು ಒರಟಾಗಿ ವರ್ತಿಸುತ್ತಿದ್ದೆಯಲ್ಲಾ ನನ್ನ ಗೆಳೆಯ. ನಾನು ನಿನ್ನ ಜೊತೆ ನಿನ್ನ ಸ್ನೇಹಕ್ಕಾಗಿ ಕಾತರಿಸಿದ್ದು ಆಗ ನಿನಗೆ ನಾನು ಹೇಳಲಿಲ್ಲ. ಅದು ನನಗೆ ಮತ್ತು ನನ್ನ ಗೆಳತಿ ಸೇವಂತಿಗೆ ಮಾತ್ರ ಗೊತ್ತು. ನಿನ್ನ ಕಂಡ ಆ ದಿನ ಯಾಕೋ ನನ್ನ ಮನ ಹೇಳಿತು "ತಿಳಿಯೇ ಇವನೇ ನಿನ್ನವನು" ಎಂದು. ಯಾಕೋ ಗೊತ್ತಿಲ್ಲ.



ನೀನು ಹೇಗಿದ್ದರೂ ನಿನ್ನ ನಾನು ಒಪ್ಪಿಕೊಳ್ಳುತ್ತೇನೆ. ನೀನು ಯಾರಾಗಿದ್ದರೂ ಎಲ್ಲಾ ಕಟ್ಟಳೆಗಳನ್ನು ನೂಕಿ ನಿನ್ನ ಸೇರಬೇಕು ಮತ್ತು ಸೇರಬಲ್ಲೇ ಎಂಬ ಛಲ ನನ್ನ ಮನದಲ್ಲಿ ಅದು ಹೇಗೆ ಸ್ಥಾಪಿತವಾಯಿತು ದೇವರೆ ಬಲ್ಲ.

ಆ ಮೊದಲ ದಿನ ನೀನು ಎಷ್ಟೊಂದು ಮುಗ್ಧನಾಗಿ ನಿನ್ನ ಆ ಪೋಲಿ ಸ್ನೇಹಿತರ ಜೊತೆ ಹಾಗೆ ಹೀಗೆ ಆವಭಾವ ಮಾಡಿಕೊಂಡು ನಡೆಯುತ್ತಿದ್ದರೆ ನನ್ನ ಎದೆಯಲ್ಲಿ ಢವಢವ ಹೆಜ್ಜೆ ಇಟ್ಟುಕೊಂಡು ನನ್ನ ಹೃದಯದ ಕಡೆ ನೀ ನಡೆದ ಅನುಭವ.

ನೀನು ನನ್ನ ಕಡೆ ಗಮನ ಹರಿಸಲಿಲ್ಲ. ಹೌದು! ಯಾವಾಗಲೂ ಹುಡುಗರ ಕಣ್ಣು ಸುಂದರವಾಗಿ ಕಾಣುವ ಹುಡುಗಿಯರ ಕಡೆಗಲ್ಲವಾ? ನೀನು ಅಂದು ನನ್ನ ಕಂಡಿದ್ದರೆ ಗೊತ್ತಾಗುತ್ತಿತ್ತು. ನಿನ್ನ ನನ್ನ ಅಂತರಾಳದ ಕೂಗು ಒಂದೇ ಎಂದು. ಕಣ್ಣು ಅರಿಯದಿದ್ದರೂ ಹೃದಯ ಅರಿಯಲೇಬೇಕು ಅಲ್ಲವಾ? ಆ ಹೃದಯದ ಪಿಸುಮಾತು ಹರಿಯದಷ್ಟು ಕಲ್ಲು ಹೃದಯದವರು ಹುಡುಗರು.

ನನಗೊ ಗೊತ್ತಿಲ್ಲ, ಹಾಗೆಯೇ ನಿನ್ನನ್ನು ನಾನು ದ್ಯಾನಿಸಲು ಪ್ರಾರಂಭಿಸಿದ ಮೇಲೆ, ಎಂದು ನಾವಿಬ್ಬರು ಹತ್ತಿರಕ್ಕೆ ಬರಲು ಪ್ರಾರಂಭಿಸಿದೇವು ಎಂದು. ಮೊದ ಮೊದಲು ನೀನು ಎಷ್ಟಂದು ಗುಮ್ಮನಾಗಿರುತ್ತಿದ್ದೇ ಅಲ್ಲವಾ? ಅದೇ ಇರಬೇಕು ನನಗೆ ಇಷ್ಟವಾಗಿದ್ದು. ನೀನಾಯಿತು ನಿನ್ನ ಕೆಲಸವಾಯಿತು. ಹತ್ತು ಮಾತಿಗೆ ಒಂದು ಮಾತು. ನನ್ನ ಗೆಳೆತಿಯರು ಹೇಳುತ್ತಿದ್ದರೂ "ಏ ಏನೇ ನಿನಗೆ ಯಾರು ಸಿಗಲಿಲ್ಲವಾ ಇಂಥವನನ್ನು ಇಷ್ಟಪಡುತ್ತಿಯಲ್ಲಾ". ಅದಕ್ಕೆ ನನ್ನ ಉತ್ತರ ಕೇವಲ ಮುಗಳ್ನಗೆ.

ಸ್ವಲ್ಪ ಸ್ವಲ್ಪ ನೀನು ನನಗೆ ಹತ್ತಿರವಾಗುತ್ತಾ ಆಗುತ್ತಾ ನೀನು ಆ ಯಾವ ಭಾವನೆಯೇ ಇಲ್ಲದವನಂತೆ ಸುಮ್ಮನೆ ಗೊತ್ತಿರುವವರು ಎಂಬಂತೆ ಬೇರೆಯವರ ಜೊತೆ ಮಾತನ್ನಾಡಿದಷ್ಟೇ ನನ್ನ ಜೊತೆ ಮಾತನ್ನಾಡುತ್ತಿದ್ದುದು. ನಾನು ನೋಡಿದಾಗೇ ಹುಡುಗರು ಸ್ವಲ್ಪ ಸಲಿಗೆ ಕೊಟ್ಟರೆ ಸಾಕು ಅವರ ನಡವಳಿಯೇ ಏನೋ ಒಂಥಾರವಾಗುತ್ತದೆ. ಇದಕ್ಕೆ ನೀನು ತದ್ವಿರುದ್ಧವಾಗಿದ್ದೇ ನನಗೆ ನಿನ್ನ ಮೆಚ್ಚಲು ಎರಡನೇಯ ಕಾರಣ.

ಆ ನಿನ್ನ ಸರಳತೆ ಮತ್ತು ಬೇರೆಯವರ ಬಗ್ಗೆ ನಿನಗಿರುವ ಕಾಳಜಿ, ನಿನ್ನ ಅಮ್ಮನ ಬಗ್ಗೆ ನಿನಗಿರುವ ಅಕ್ಕರೆ .. ಸ್ನೇಹಿತರ ಬಗ್ಗೆ ಕೊಡುವ ಪ್ರಾಮುಖ್ಯತೆ ಹೀಗೆ ಈ ನಿನ್ನ ಒಂದೊಂದು ನಿನ್ನ ತನವು ನನ್ನನ್ನು ಅತಿ ವೇಗವಾಗಿ ನಿನ್ನ ಬಳಿಗೆ ಸೆಳೆಯಲು ಕಾರಣವಾದವು.

ಯಾವಾಗಲೂ ನಿನ್ನದೇ ದ್ಯಾನವಾಗಿತ್ತು. ಮನದ ಛಾಯ ಮಂಟಪದಲ್ಲಿ ನಿನ್ನ ಚಿತ್ರವನ್ನು ಇಟ್ಟು ನಿನ್ನ ಬಗ್ಗೆ ಗೊತ್ತಿರುವ ಎಲ್ಲ ಪ್ರೀತಿಯ ಗೀತೆಗಳನ್ನು ಗುನುಗುತ್ತಿದ್ದೆ.

ಒಂದು ದಿನ ನಿದ್ದೆಯಲ್ಲಿ ಏನು ಏನೋ ಕನವರಿಸುತ್ತಿದ್ದೆನಂತೆ. ಬೆಳಿಗ್ಗೆ ಅಮ್ಮ ಹೇಳಿದಾಗ ನಿಜವಾಗಿಯೂ ನಾಚಿಕೆಯಾಯಿತು. ಅಂದೇ ಇರಬೇಕು ನಾನು ನಿರ್ಧರಿಸಿದ್ದು. ನನ್ನ ಮನದಾಳದ ಪ್ರೀತಿಯ ಒರತೆಯನ್ನು ನಿನ್ನಲ್ಲಿ ಸುರಿದು ನಾನು ಹಗುರಾಗಬೇಕು ಎಂದು.

ನನಗೆ ನಿನ್ನ ಕಂಡರೆ ಅಂದಿನಿಂದಲೂ ಏನೊ ಭರವಸೆ ನನ್ನನ್ನು ನೀನು ಅಚ್ಚು ಮೆಚ್ಚಾಗಿ ನೋಡಿಕೊಳ್ಳುವೇ ಮತ್ತು ನಾನು ನಿನ್ನ ಹೃದಯದಲ್ಲಿ ಮನದನ್ನೆಯಾಗಿ ಇರಬಹುದು. ಮುಂದಿನ ನನ್ನ ಜೀವನ ನಿನ್ನ ಆ ಪುಟ್ಟ ಸಂಸಾರವಾದ ನಿನ್ನ ಅಮ್ಮ ,ನೀನು ಮತ್ತು ನಾನು ಎಂದು ಅಷ್ಟೊಂದು ಬೆಚ್ಚನೆಯ ಚಂದದ ಕನಸನ್ನು ನಿರ್ಮಿಸಿಕೊಂಡು ಅಲ್ಲಿಯೇ ಮನೆಯತುಂಬ ಹಾಗೇ ಹೀಗೆ ಅಲ್ಲಿ ಇಲ್ಲಿ ಅಚ್ಚುಕಟ್ಟದ ಶುಭ್ರತೆಯನ್ನು ತಂದು ಬಿಟ್ಟಿದ್ದೇ.

ನಾನು ನಿನ್ನಲ್ಲಿ ನನ್ನ ಆಸೆಯನ್ನು ಹೇಳಿಕೊಳ್ಳಬೇಕು ಎಂದು ಅಂದು ಅಲ್ಲಿ ನೀನು ಬರುವ ದಾರಿಯಲ್ಲಿ ಚುಮುಚುಮು ಮುಂಜಾನೆಯ ಆ ಸವಿ ಚಳಿಯಲ್ಲಿ ಎಷ್ಟೊಂದು ಹೊತ್ತು ಕಾದಿದ್ದೇ ಎಂದು ನೀನು ಬಂದ ಮೇಲೆಯೇ ಗೊತ್ತಾಗಿದ್ದು.

ನಾನು ನನ್ನ ಆ ಒಂದು ಮಾತು ಹೇಳಲು ನಿನ್ನ ಮುಂದೆ ಅಪರಿಚಿತಳೇನೋ ಎಂಬಂತೆ ನಿಂತಿರುವಾಗ ನೀನು ಮುದ್ದು ಒರಟನಾಗಿ ಏನೊಂದು ಮಾತನಾಡದೇ, "ಏನು ಹೇಳಮ್ಮಾ" ಎನ್ನಬೇಕೇ? ಆಗೊಂತು ನಿನಗೆ ಸರಿಯಾಗಿ ಬಾರಿಸಬೇಕೆಂಬ ಕೋಪ ಬಂದಿತ್ತು. ಅದೇನೋ ಗೊತ್ತಿಲ್ಲ. ನಿಮ್ಮಂತ ಒಳ್ಳೆ ಹುಡುಗರು ಪ್ರೀತಿಯನ್ನು ಕೊಡುವ ಹುಡುಗಿಯರಿಗೆ ಅದೇಕೇ ಅಷ್ಟೊಂದು ಗೊಳು ಹೊಯ್ದು ಕೊಳ್ಳಿತ್ತಿರಾಪ್ಪ. ನಾನು ಅದೇಗೋ ಮನಸ್ಸನ್ನು ಗಟ್ಟಿ ಮಾಡಿಕೊಂಡು ಹೇಳಿದಾಗ, ನೀನು ನನಗೆ ಎಲ್ಲ ಗೊತ್ತು ಎಂಬಂತೆ ನಗುವುದೇ. ನಿನಗೂ ನನ್ನ ಕಂಡರೆ ಪ್ರೀತಿ ಇದ್ದರೂ ನಾನೇ ಹೇಳಲಿ ಎಂದು ಇಷ್ಟಂದು ಸತಾಯಿಸುವುದೇ ಮುದ್ದು ಗಮಾರ!

ಅಂದೇ ಇರಬೇಕು ಮೂಕ್ಕಾಲುಪಾಲು ದಂ-ಪತಿ ಗಳಂತಾದೆವು. ಅಂದೇ ಸಂಜೆ ನೀನು ನಿನ್ನ ಅಮ್ಮನಿಗೆ ನನ್ನ ತೋರಿಸಿದಾಗಲಂತೋ ನನಗೆ ನನ್ನ ಅಮ್ಮನನ್ನೇ ಕಂಡಷ್ಟು ಸಂತೋಷವಾಯಿತು. ಅವರಂತೂ ನಿನ್ನಂತೆ ಅಲ್ಲ ಬಿಡು ಎಷ್ಟು ಸಲಿಸಾಗಿ ಹೇಗೆ ನನ್ನ ಬಗ್ಗೆ ವಿಚಾರಿಸಿದರು. ಆಗ ನಿನ್ನ ಅಮ್ಮನಿಗೆ ಹೇಳಬೇಕೆನಿಸಿತ್ತು. ಸ್ವಲ್ಪ ನಿಮ್ಮ ಮಗನಿಗೆ ಬುದ್ಧಿ ಹೇಳಿ ಎಂದು. ಮೊದಲ ದಿನವೇ ಯಾಕೆ ಮಾತನ್ನಾಡುವುದು ಎಂದು ಸುಮ್ಮನಿರಬೇಕಾಯಿತು.

ಎಷ್ಟೊಂದು ವಸಂತಗಳು ಕಳೆದು ಹೋಗಿದ್ದಾವೆ. ವೇದಾವತಿಯಲ್ಲಿ ಹೊಸ ನೀರು ಹಲವು ಭಾರಿ ಹರಿದಿವೆ. ಈಗಲೂ ನೀನು ನನಗೆ ಆ ಮುದ್ದು ಗಮಾರನೇ.. ಲೈಫು ಅಂದ್ರೇ ಇಷ್ಟೇ ಅಲ್ಲ ಅಲ್ವಾ!

ಬುಧವಾರ, ಅಕ್ಟೋಬರ್ 20, 2010

ನಮ್ಮ ಊರಿನ ದಸರ ಮಸ್ತ್ ಮಸ್ತ್

ನಾಡ ಹಬ್ಬ ಎಂದರೆ ಅದು ದಸರಾ ಹಬ್ಬ ಒಂಬತ್ತು ದಿನಗಳ ನವರಾತ್ರಿ ದಿನಗಳನ್ನು ಪ್ರತಿ ದಿನ ವಿವಿಧ ರೀತಿಯ ಪೂಜೆ ಪುರಸ್ಕಾರಗಳನ್ನು ತಮ್ಮ ಇಷ್ಟ ದೇವತೆಗೆ ಮಾಡಿ ಅದರಲ್ಲಿ ತಮ್ಮ ಮನವನ್ನು ತಲ್ಲಿನಗೊಳಿಸಿ ಪಾವನರಾಗಬೇಕೆಂಬ ಹಂಬಲ. ಹೀಗೆ ಒಂದು ಘಟ್ಟಕ್ಕೆ ಬಂದು ಕೂನೆ ದಿನವಾದ ವಿಜಯದಶಮಿಯಂದು ಸಡಗರದಿಂದ ವಿವಿಧ ರೀತಿಯಲ್ಲಿ ವಿವಿಧ ಕಡೆಗಳಲ್ಲಿ ತಮ್ಮ ಹಬ್ಬದ ಸಂಭ್ರಮವವನ್ನು ತೋರಿಸುತ್ತಾ ಆಚರಿಸುತ್ತಾರೆ.


ಆದರೆ ನಮ್ಮ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ನಡೆಯುವ ದಸರಾ ಸಂಭ್ರಮ ವಿಶ್ವ ಪ್ರಸಿದ್ಧಿ. ಅಲ್ಲಿ ನಡೆಯು ಕೂನೆಯ ದಿನದ ಆನೆ ಅಂಭಾರಿಯ ಉತ್ಸವ ಬಲು ಅಪರೂಪದ್ದು. ಸತತವಾಗಿ ೪೦೦ ವರ್ಷಗಳಿಂದ ನಿರಂತರವಾಗಿ ಹೆಚ್ಚು ಹೆಚ್ಚು ಆಕರ್ಷಣೆಯಿಂದ ಜರುಗುತ್ತಾ ಲಕ್ಷ ಲಕ್ಷ ಜನಗಳನ್ನು ಬರುವಂತೆ ಮಾಡಿ ತನ್ನ ಮೋಡಿಯನ್ನು ಮಾಡಿದೆ ಎಂದರೆ ಅತಿಶಯೋಕ್ತಿಯಲ್ಲ.


ನಮ್ಮ ಮೈಸೂರು ದಸರದ ರೀತಿ ನಮ್ಮ ರಾಜ್ಯದ ವಿವಿಧ ಭಾಗಗಳಲ್ಲೂ ಅದರಷ್ಟೂ ದೂಡ್ಡ ರೀತಿಯಲ್ಲಿ ನಡೆಯದಿದ್ದರೂ ಅದ್ದೂರಿಗೇನೂ ಕಡಿಮೆಯಿಲ್ಲ ಎಂಬಂತೆ ಸರಳವಾಗಿ ಅಲ್ಲಿನ ಸುತ್ತ ಮುತ್ತಲಿನ ಜನಗಳಿಗೆ ದಸರಾದ ಸಡಗರವನ್ನು ಕೂಡುವಂತೆ ನಮ್ಮ ಚಿತ್ರದುರ್ಗದಲ್ಲಿನ ಶರಣ ಸಂಸ್ಕೃತಿ ಉತ್ಸವ, ಕೂಡುಗಿನ ದಸರ, ಮಂಗಳೂರಿನಲ್ಲಿನ ದಸರಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿವೆ.


ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವ ಒಂದು ವಾರದವರಿಗೆ ವಿವಿಧ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳು ದಿನವಿಡಿ ನಡೆಯುತ್ತವೆ. ಇಲ್ಲಿನ ಈ ಕಾರ್ಯಕ್ರಮಗಳಿಗೆ ಉತ್ತರ ಕರ್ನಾಟಕ ಮತ್ತು ಮದ್ಯ ಕರ್ನಾಟಕದ ಊರು ಊರುಗಳಿಂದ ಜನರು ತಮ್ಮವರೂಡಗೂಡಿ ಬಂದು ಮಿನಿ ಮೈಸೂರು ದಸರಾವನ್ನು ಕಂಡಷ್ಟು ಸಂತೋಷಗೊಂಡು ವಿವಿಧ ವಿಚಾರಗಳನ್ನು ಆಲಿಸಿ ತಮ್ಮತನವನ್ನು ಉತ್ತಮಗೊಳಿಸಿಕೊಂಡು ನಲಿಯುತ್ತಾರೆ. ಇದಕ್ಕೆ ಕಾರಣೀಭೂತರಾದ ಶ್ರೀ ಶ್ರೀ ಶಿವಮೂರ್ತಿ ಶಿವ ಶರಣರಿಗೆ ಶರಣು ಶರಣಾರ್ಥಿ.


ವಿಜಯ ದಶಮಿ ದಿನದಂದು ಇಲ್ಲೂ ಮೈಸೂರಿನ ರೀತಿಯಲ್ಲಿ ಮುಂಜಾನೆಯೇ ಶ್ರೀ ಮುರುಘ ಮಠದಿಂದ ಮೆರವಣಿಗೆ ಶಿವಶರಣರ ಸಾರಥ್ಯದಲ್ಲಿ ಸಾಗುತ್ತಾ ಅದು ಕೋಟೆಯನ್ನು ತಲುಪಿ ಕೊನೆಯಾಗುತ್ತದೆ. ಇದರಲ್ಲಿ ನಾಡಿನ ವಿವಿಧ ಭಾಗಗಳಿಂದ ಬಂದ ಜನರ ಜನಪದ ಕಲೆಗಳ ಪರಿಚಯವನ್ನು ಕಾಣಬಹುದು. ನಮ್ಮ ಸಂಸ್ಕೃತಿಯ ಪಳಿಯುಳಿಕೆಗಳೇನೋ ಎಂಬಂತೆ ಇಂಥ ಸಮಯದಲ್ಲಿ ಮಾತ್ರ ಈ ಕಲೆಗಳು ಹೊರಗಡೆ ಬಂದು ಜನರನ್ನು ರಂಜಿಸುತ್ತಾ ತಮ್ಮ ಹೆಮ್ಮೆಯನ್ನು ಮೆರೆಯುತ್ತವೆ.


ಈ ಬಾರಿಯ ಶರಣ ಸಂಸ್ಕೃತಿ ಉತ್ಸವದಲ್ಲಿ ಬಾಗಿಯಾಗುವ ಸೌಭಾಗ್ಯ ವಿಜಯದಶಮಿ ದಿನದಂದು ದೂರೆಯಿತು. ಅಂದಿನ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳ ಕಾರ್ಯಕ್ರಮವಾಗಿತ್ತು. ನಾಡಿನ ವಿವಿಧ ಭಾಗಗಳಿಂದ ಪ್ರಸಿದ್ಧಿ ಪಡೆದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧ ಸಾಧನೆಯನ್ನು ಮಾಡಿದ ಎಳೆಯರನ್ನು ಆಹ್ವಾನಿಸಿ ವೇದಿಕೆಯ ಮೇಲೆ ಶಿವ ಶರಣರ ಜೊತೆ ಕೂಡಿಸಿದ್ದರು.


ಅವರುಗಳನ್ನು ನೋಡಿದಾಗ ಎಂಥವರಿಗೂ ಒಂದು ಸ್ಫೂರ್ತಿಯಾಗುತ್ತಿತ್ತು. ಅತಿ ಚಿಕ್ಕ ವಯಸ್ಸಿನಲ್ಲಿ ಅಂಥ ದೂಡ್ಡ ವೇದಿಕೆಯ ಮೇಲೆ ಕೂಡಲು ಅವರುಗಳು ಎಷ್ಟೊಂದು ಅದೃಷ್ಟ ಮತ್ತು ಪರಿಶ್ರಮವನ್ನು ತಮ್ಮ ಜೀವನದಲ್ಲಿ ಪಟ್ಟಿರಬೇಕು ಅಲ್ಲವಾ! ಈ ರೀತಿಯ ವಿವಿಧ ರಂಗದ ಕಾರ್ಯಕ್ರಮಗಳು ಪ್ರತಿದಿನ ಒಂದು ವಾರ ಆ ಜಿಲ್ಲೆಯ ಜನರಿಗೆ ಅಪರೂಪದ ಸಾಧನೆಯ ಶಿಖರಗಳನ್ನು ತಮ್ಮ ಕಣ್ಣ ಮುಂದೆ ಕಾಣುವುದು.



ಇದು ಸರಿ! ಆದರೆ ಅಲ್ಲಿ ಅಂದು ನಡೆದ ಒಂದು ಎರಡು ಕಾರ್ಯಕ್ರಮಗಳು ಸ್ವಲ್ಪ ತಮ್ಮ ಮಿತಿಯನ್ನು ಮೀರಿದವು ಎಂದು ಅನಿಸಿತು. ಈಗಾಗಲೇ ನಮಗೆಲ್ಲಾ ಗೊತ್ತಿರುವಂತೆ ನಮ್ಮ ಟಿ. ವಿ. ಚಾನೆಲ್ ಗಳು ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ರಿಯಾಲಿಟಿ ಶೋಗಳನ್ನು ದಿನಂಪ್ರತಿ ಮಕ್ಕಳಿಗಾಗಿ, ಹದಿಹರೆಯದವರಿಗಾಗಿ, ವಯಸ್ಸಾದವರಿಗಾಗಿ ವಿವಿಧ ರೀತಿಯಲ್ಲಿ ಜನರನ್ನು ಮೋಡಿ ಮಾಡಲು ತಾನು ಮುಂದು ನೀನು ಮುಂದು ಎಂದು ನಿಂತಿರುವಾಗ, ಅದೇ ರೀತಿಯ ಅದಕ್ಕೆ ಸಮೀಪವಾದಂತ ನೃತ್ಯಗಳನ್ನು ಸಿನಿಮಾ ಹಾಡುಗಳಿಗೆ ಮಾಡಿಸಿದ್ದು ಮನಸ್ಸಿಗೆ ತುಂಬ ಕಸಿವಿಸಿಯನ್ನುಂಟು ಮಾಡಿತು. ಮತ್ತು ಇದಕ್ಕೇ ಪ್ರೋತ್ಸಾಹವೇನೂ ಎಂಬ ರೀತಿಯಲ್ಲಿ ಸಭಿಕರ ಚಪ್ಪಾಳೆಗಳು ಮುಗಿಲು ಮುಟ್ಟಿದ್ದು ಮಾತ್ರ ನಮ್ಮ ಸಂಸ್ಕೃತಿ ಎತ್ತ ಸಾಗುತ್ತಿದೆ ಎಂಬುದನ್ನು ಕ್ಷಣ ಕಾಲ ಯೋಚಿಸುವಂತೆ ಮಾಡಿತು.


ಏನು ಅರಿಯದ ಈ ಚಿಕ್ಕ ವಯಸ್ಸಿನಲ್ಲಿ ಈ ಕಂದಮ್ಮಗಳಿಗೆ ಈ ರೀತಿಯ ಹಾಡಿನ ನೃತ್ಯಗಳನ್ನು ಕಲಿಸಿದ, ಅವರಿಗೆ ತೋಡಿಸಿದ ವೇಷ, ವಸ್ತ್ರ ಆ ದೇವರಿಗೆ ಪ್ರೀತಿ. ಶಿವಶರಣ ಸಮ್ಮುಖದಲ್ಲಿ ಇಂಥ ಅಪರೂಪವಾದ ಉತ್ಕೃಷ್ಟವಾದ ಸಂಭ್ರಮದಲ್ಲಿ ಈ ರೀತಿಯ ಯಾವುದೇ ಚಿಕ್ಕ ಚಿಕ್ಕ ಕಾರ್ಯಕ್ರಮಗಳು ಜರುಗುವುದನ್ನು ಆಯೋಜಕರು ತಪ್ಪಿಸಬೇಕು. ಹೆಸರೇ ಸೂಚಿಸುವಂತೆ ಸಂಸ್ಕೃತಿಯ ಉತ್ಸವ ನಮ್ಮ ಇಂದಿನ ಜನಕ್ಕೆ ಸಿನಿಮಾ ಹಾಡುಗಳ ನೃತ್ಯವೇ ಕನ್ನಡ ಸಂಸ್ಕೃತಿ ಎಂಬಂತೆ ಆಸ್ವಾದಿಸುತ್ತಾರೆ ಮತ್ತು ಈ ರೀತಿಯ ಕಾರ್ಯಕ್ರಮಗಳು ಹೇರಳವಾಗಿ ದಿನ ನಿತ್ಯ ಅಲ್ಲಿ ಇಲ್ಲಿ ನೋಡುತ್ತಲೇ ಇದ್ದೇವೆ. ಅವುಗಳನ್ನು ಪುನಃ ಇಂಥ ಮುಖ್ಯ ಕಾರ್ಯಕ್ರಮಗಳಲ್ಲಿ ತರುವುದು ನಿಲ್ಲಬೇಕು.


ಮಕ್ಕಳಿಗೂ ಸಹ ನಮ್ಮ ಸೂಗಡಿನ ಸಂಸ್ಕೃತಿಯ ಕಲೆಗಳನ್ನು ಕಲಿಸ ಬೇಕು ಮತ್ತು ಅವುಗಳನ್ನು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಈ ಪಾಶ್ಚಾತ್ಯ ವೇಷ, ಭೂಷಣ, ಸಂಗೀತ, ಹಾಡು, ನೃತ್ಯ ನಮ್ಮಗಳ ಕಲೆಯ ಮುಂದೆ ಏನು ಅಲ್ಲ ಎಂಬುದನ್ನು ಅರಿಯುವಂತೆ ಮಾಡುವುದು ದೂಡ್ಡವರಾದ ಎಲ್ಲ ಗುರು ಹಿರಿಯರ ಕರ್ತವ್ಯ.


ಮಕ್ಕಳ ಸ್ಕೂಲ್ ಶಾಲೆಯಲ್ಲಿ ಅಲ್ವಾ! ಎಂಬಂತೆ ಇಂದಿನ ಈ ನಗರ ಜೀವನದಲ್ಲಿ ಪ್ರತಿ ಶಾಲೆಗಳಲ್ಲೂ ಅಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳ ಕೈಯಿಂದ ಮಾಡಿಸುವ ನೃತ್ಯ ಕಣ್ಣಿಂದ ನೋಡಬಾರದು ಯಾವ ಮೂರನೇ ದರ್ಜೆಯ ಸಿನಿಮಾ ಕ್ಯಾಬರೆ ನೃತ್ಯಕ್ಕೆ ಕಡಿಮೆ ಇರುವುದಿಲ್ಲ. ಏನೂ ಅರಿಯದ ಆ ವಯಸ್ಸಿನ ಮಕ್ಕಳಿಗೆ ಕಲಿಸುವ ಹಾಡು ನೃತ್ಯ ಬರುತ್ತಾ ಬರುತ್ತಾ "ತೋ ಚಿಜ್ ಬಡಿ ಮಸ್ತ ಮಸ್ತ..." ತಮ್ಮ ನೆಚ್ಚಿನ ಗೀತೆಯಾಗುತ್ತದೆ. ಮತ್ತು ಇದೇ ಮುಂದೆ ಇಂಥ ಕಾರ್ಯಕ್ರಮಗಳಲ್ಲಿ ಪ್ರತಿಬಿಂಬಿಸುತ್ತದೆ. ಇದು ನಿಲ್ಲಬೇಕು ನಮ್ಮ ಜನಪದ, ಹಿಂದುಸ್ತಾನಿ, ಭರತನಾಟ್ಯ, ಕೋಲಾಟ, ವಚನಗಳು, ಭಾವ ಗೀತೆಗಳು ಹೀಗೆ ಮೂಲೆಗೆ ಸೇರುತ್ತಿರುವ ಕಲೆಗಳ ಪುನರಪಿ ಜನನಂ ಎಲ್ಲರ ಮನದಲ್ಲಾಗಲಿ ಎಂದು ಆಶಿಸೋಣ.

ಭಾನುವಾರ, ಅಕ್ಟೋಬರ್ 10, 2010

ಅಧಿಕಾರವೊಂದೇ ಎನಗೆ ಹಿರಿದು!


ಸಮಕಾಲಿನ ನಮ್ಮ ರಾಜ್ಯದ ರಾಜಕೀಯ ಸ್ಥಿತ್ಯಾಂತರಗಳನ್ನು ಗಮನಿಸಿದರೆ ಯಾರೊಬ್ಬರಿಗೂ ಯಾವ ಭರವಸೆಯ ಕಿರಣಗಳು ಕಾಣದಂತಾಗಿದೆ. ನಾವುಗಳೇ ನಮ್ಮ ಕೈಯಾರೆ ಆರಿಸಿದ ನಮ್ಮನಾಳುವ ನಮ್ಮ ಪ್ರತಿನಿಧಿಗಳು ಇವರುಗಳೇ ಎಂದು ನಾವುಗಳು ಯಾರನ್ನು ಕೇಳಬೇಕು ಎನ್ನುವಂತಾಗಿದೆ.


ಯಾವ ಸರ್ಕಾರವೂ ಹೀಗೆ ಎಂದೆಂದಿಗೂ ನಡೆಯಬಾರದು ಎನ್ನುವಷ್ಟರ ಮಟ್ಟಿಗೆ ನಮ್ಮ ಮುಖ್ಯಮಂತ್ರಿಗಳು ಎಲ್ಲಾ ರೀತಿಯಲ್ಲೂ ವಿಫಲರಾಗಿ ನಿಶಕ್ತರಾಗಿ ನಿಂತಿದ್ದಾರೇನೋ ಎಂಬುವಂತಾಗಿದೆ. ಈ ಸ್ಥಿತಿಗೆ ಅವರುಗಳು ಅಂದು ತಮ್ಮ ಜಾಗವನ್ನು ಭದ್ರ ಮಾಡಿಕೊಳ್ಳಲು ಅತಿ ಹೊಸದಾದ ತಂತ್ರವಾದ ಅಪರೇಷನ್ ಕಮಲವನ್ನು ಮಾಡಿದ್ದು. ಹೀಗಾಗಲೇ ಬೇರೆ ಪಕ್ಷದಿಂದ ಗೆದ್ದು ಬಂದಿರುವ ಪ್ರತಿಪಕ್ಷದವರನ್ನು ತಮ್ಮ ಪಕ್ಷದ ಕಡೆಗೆ ಸೆಳೆದು ಕೊಂಡು ತಾನು ಬಲಿಷ್ಟನಾಗುತ್ತಿದ್ದೇನೆ ಎಂಬ ಹುಸಿ ಕನಸಿನಲ್ಲಿ ಬಂದ ಹೊಸಬರಿಗೆ ವಿವಿಧ ರೀತಿಯ ಹುದ್ದೆಗಳು, ಜಾಗಗಳನ್ನು ಬಿಟ್ಟು ಕೊಟ್ಟು ತನ್ನ ಮನೆಯಲ್ಲಿ ತನ್ನ ಪಕ್ಷಕ್ಕಾಗಿ ದುಡಿದ ಸಾಮಾನ್ಯರನ್ನು ಕಡೆಗಣಿಸಿದ ಪಾಪವನ್ನು ಈಗ ನೋಡುವಂತಾಗಿದೆ.


ಒಬ್ಬ ವ್ಯಕ್ತಿಯ ನಿಜ ರೂಪವನ್ನು ನಾವು ನೋಡಬೇಕಾದರೆ ಅವನಿಗೆ ಅಧಿಕಾರ ಕೊಟ್ಟು ಪರೀಕ್ಷಿಸಿ ನೋಡು ಎನ್ನುವಂತೆ. ಕೆಲವೇ ವರುಷಗಳಲ್ಲಿ ಪ್ರತಿ ತಿಂಗಳು ದಿನಂಪ್ರತಿ ವಿವಿಧ ಹಗರ‍ಣಗಳ ಸರಮಾಲೆಯಲ್ಲಿ, ದುರಾಸೆಯ ಬಲದಿಂದ ವಿವಿಧ ರೀತಿಯಲ್ಲಿ ಪ್ರತಿಯೊಬ್ಬರೂ ಸಿಕ್ಕಷ್ಟು ದಿನದಲ್ಲಿ ತಮ್ಮ ಅಧಿಕಾರವನ್ನು ತಾವು ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲು ನಿರತಾರದರೇನೆ ವಿನಾಃ ತಮ್ಮ ಪಕ್ಷ ಮತ್ತು ತಮ್ಮ ನ್ನು ಆರಿಸಿದ ಜನಸಾಮಾನ್ಯರ ಕೂಗಿಗೆ, ಆಶಯಕ್ಕೆ ಬೆಲೆ ಇಲ್ಲವೇನೋ ಎಂಬ ರೀತಿಯಲ್ಲಿ ಎಲ್ಲಾ ಕಡೆಗಳಿಂದಲೂ ಅಸಮಾಧಾನದ ಹೂಗೆ ಏಳಲು ಆರಂಭವಾಗಿ ತಮ್ಮ ಸಿಸ್ತಿನ ಪಕ್ಷದಲ್ಲೂ ಸಹ ಏನೂ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಇಂದಿನ ಈ ಸಂಧಿಗ್ಧ ಸ್ಥಿತಿಗೆ ಬಂದು ದಿನಗಳನ್ನು ಏಣಿಸುವಂತಾಗಿದೆ.


ತಮ್ಮದೇ ಪಕ್ಷ ಪಕ್ಕದ ರಾಜ್ಯವಾದ ಗುಜರಾತಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅಭಿವೃದ್ಧಿಯೊಂದೇ ಮಂತ್ರ ಎಂಬ ರೀತಿಯಲ್ಲಿ ಮೋದಿ ಮನಿಯಾ ಇಡೀ ಭಾರತದಲ್ಲಿ ಪ್ರಸಿದ್ಧವಾಗಿದ್ದರೂ ಅಲ್ಲಿನ ಆ ಸುಧಾರಣೆ ದಕ್ಷಿಣ ಭಾರತದಲ್ಲಿ ಯಾವ ಜಾದು ನಡೆಯಲಾರದೇ ಸರ್ಕಾರವೆಂದರೆ ಇದೇನಾ! ಎನ್ನುವಂತಾಗಿದ್ದು ವಿಪರ್ಯಾಸ.


ಜನರಿಂದ ಜನರಿಗಾಗಿ ರೂಪಿತವಾದ ಜನರ ಸರ್ಕಾರ ಎಂದು ಪ್ರಜಾಪ್ರಭುತ್ವದಲ್ಲಿ ಬಿಂಬಿತವಾದ ನಮ್ಮ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆವಲ ತಮ್ಮ ತಮ್ಮ ಕ್ಷೇಮಗಳನ್ನು ನೋಡಿಕೊಂಡರೇ ಮತ್ತು ಯಾವುದೇ ಉತ್ತಮ ಕೆಲಸಗಳನ್ನು ಮಾಡದಿದ್ದರೆ ಯಾವ ಸರ್ಕಾರಗಳು ಉಳಿಯಲಾರವು. ಜನರ ಹಿತ ಮತ್ತು ಅವರ ಸುಧಾರಣೆಯ ರೂವಾರಿಗಳಾಗ ಬೇಕಾದ ನಮ್ಮ ಪ್ರತಿನಿಧಿಗಳು, ತಮ್ಮ ಹಿತಾಸಕ್ತಿ ಮತ್ತು ಅಧಿಕಾರಕ್ಕಾಗಿ ಯಾವುದೇ ರೀತಿಯ ಕೆಲಸ ಮಾಡಲೂ ಸೈ ಎನ್ನುವುದನ್ನು ಕಳೆದೆರಡು ವಾರಗಳಲ್ಲಿ ಇಲ್ಲಿನ ಕೆಲವು ಜನಪ್ರತಿನಿಧಿಗಳು ಮಾತನ್ನಾಡುವ ರೀತಿ, ವರ್ತಿಸುತ್ತಿರುವ ಬಗೆಗಳನ್ನು ನೋಡಿದರೇ ಎಂಥವರಿಗಾದರೂ ವಾಕರಿಕೆ ಬರದೇ ಇರದು.


ಯಾವ ಕನಸುಗಳನ್ನು ಇಟ್ಟುಕೊಂಡು ತಮ್ಮನ್ನು ಆರಿಸಿರುವ ಮತದಾರನ ಮುಗ್ಧತೆಯ ಪರೀಕ್ಷೆಯನ್ನು ಕೆವಲ ಅವರು ಅವರುಗಳೇ ಕೋಟಿ ಕೋಟಿ ಡೀಲ್ ಕುದುರೆ ವ್ಯಾಪಾರದಲ್ಲಿ ಮತ್ತು ಹತ್ತು ಹಲವಾರು ಆಸ್ತಿಗಳನ್ನು ಸಂಪಾದಿಸುವಲ್ಲಿ ಮಗ್ನರಾಗಿರುವುದನ್ನು ಪತ್ರಿಕೆಗಳಲ್ಲಿ ಪುಟಗಟ್ಟಲೆ ಓದುತ್ತಿದ್ದರೆ, ಈ ವ್ಯವಸ್ಥೆಗೆ ಇನ್ನಾದರೂ ಒಂದು ಭವಿಷ್ಯ ಇದೆ ಅಂಥ ಅನ್ನಿಸುತ್ತದಾ?


ನಮ್ಮ ಒಳ್ಳೆತನವನ್ನು ಅಸಹಾಯಕತೆಯನ್ನು ಕೇವಲ ಅವರು ಸಂಪಾದಿಸುವ ದುಡ್ಡು, ಅವರ ಆಸೆ, ಅಧಿಕಾರಗಳು ನಿರ್ಧರಿಸುವಂತಾಗಬಾರದು.


ಒಂದು ಸಮಾಜ ಸರಿಯಾದ ಸಮಯದಲ್ಲಿ ದಿಕ್ಕೆಟ್ಟು ಏಚ್ಚೆತ್ತುಕೊಂಡರೆ ಉತ್ತಮ ಸಮಾಜದ ನಿರ್ಮಾಣದ ಕ್ರಾಂತಿ ಅಸಾಧ್ಯವೆನಲ್ಲಾ. ಅದು ಬರುವ ಸಮಯವೇನೂ ದೂರವಿಲ್ಲ..

ಶನಿವಾರ, ಅಕ್ಟೋಬರ್ 2, 2010

ಮತ್ತೇ ಬಾ ಬಾಪೂ!

ಗಾಂಧಿ ಜಯಂತಿ ಅಕ್ಟೋಬರ್ ೨ ಅಂದ ತಕ್ಷಣ ನನ್ನ ಮನ ಬಾಲ್ಯದ ದಿನಗಳ ದಸರ ರಜೆಗೂ ಮೊದಲು ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಆಚರಣೆಯನ್ನು ಮಾಡಿ ಒಂದು ತಿಂಗಳು ರಜೆಯನ್ನು ಘೋಷಿಸುತ್ತಿದ್ದ ದಿನಗಳಿಗೆ ಜಾರುತ್ತದೆ.




ಅಂದು ಶಾಲೆಗೆ ಹೋಗಿ ಗಾಂಧಿ ಜನ್ಮ ದಿನಾಚರಣೆಯನ್ನು ಮಾಡುವ ಮುನ್ನ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಂದ ಚಿಕ್ಕವಾದ ಯಾವುದಾದರೂ ಕೆಲಸಗಳನ್ನು ಮಾಡಿಸುವುದು. ಶಾಲೆಯ ಮುಂದಿನ ಜಾಗವನ್ನು ಚೊಕ್ಕಟ ಮಾಡುವುದು.


 ಆಗಿನ ಆ ಹುರುಪು ತುಂಬ ಖುಷಿಯನ್ನು ಕೊಡುವ ಕ್ಷಣಗಳು. ಯಾಕೆಂದರೆ ನಾಳಿನಿಂದ ಒಂದು ತಿಂಗಳು ರಜಾ ಮಜಾವನ್ನು ನೆನಸಿ ನೆನಸಿಕೊಂಡು ಸಂಭ್ರಮಪಡುತ್ತಿದ್ದೇವು. ನಾನು ರಜೆಯಲ್ಲಿ ಹೀಗೆ -ಹಾಗೆ ಮಾಡುವೇನು. ಅಲ್ಲಿಗೆ ಅವರ ಜೋತೆ ಹೋಗುವೇನು ಎಂದು ಬಡಾಯಿ ಕೊಚ್ಚಿಕೊಳ್ಳುವುದೇನೂ.


ಬಿಡಿ ಆ ದಿನಗಳು ಮತ್ತೇ ಮರಳಲಾರವು.






ಗಾಂಧಿಯೇಂದರೇ ಏನೋ ಪ್ರೀತಿ. ಅವರ ಬಾಲ್ಯದಲ್ಲಿ ಅವರು ಮಾಡಿದ ಕಳ್ಳತನ. ದಾರಿ ತಪ್ಪಿ ಕೆಟ್ಟ ಹುಡುಗನಾಗಿ ತಂದೆಯ ಮುಂದೆ ಕ್ಷಮಾಪಣೆ ಕೇಳಿದ್ದು. ತಾಯಿಯ ಜೋತೆ ೨೧ ದಿನಗಳವರೆಗೂ ಉಪವಾಸ ಮಾಡಿದ್ದು. ಹೀಗೆ ಅವರ ಜೀವನವನ್ನು ನಮ್ಮ ಜೋತೆ ಸಮಕರಿಸಿಕೊಂಡು. ಮರಿ ಗಾಂಧಿಯನ್ನಾಗಿ ಮಾಡಿಕೊಂಡು. ನಮ್ಮವರೇ ಅವರು ಎಂಬ ಉತ್ಸಾಹದಿಂದ ಶಾಲೆಯಲ್ಲಿ ಸಿಹಿಯನ್ನು ತಿನ್ನುವ ಮೊಲಕ ಸಂತೋಷಪಡುತ್ತಿದ್ದೆವು. ಅವರ ಕಥೆಯನ್ನು ಪುಸ್ತಕದಲ್ಲಿ ಓದಿದ್ದರೂ, ಪುನಃ ನಮ್ಮ ಗುರುಗಳ ಬಾಯಿಯಲ್ಲಿ ಅವರ ಸಾಧನೆ ಮತ್ತು ಆದರ್ಶದ ನುಡಿಗಳನ್ನು ನಮ್ಮ ಕಿವಿಗೆ ತುಂಬಿಕೊಳ್ಳುತ್ತಿದ್ದೇವುಮುಂದೆ ಒಂದು ದಿನ ಅವರ ಮಟ್ಟಿಗೆ ಬೆಳೆಯಬೇಕು. ಅವರ ರೀತಿ ನಾವು ನಾಯಕರಾಗಬೇಕು. ಬಡವರ ಬಗ್ಗೆ ನಮ್ಮ ಕೈಯಿಂದ ಆಗುವ ಸಹಾಯವನ್ನು ಮಾಡಬೇಕು. ಇತ್ಯಾದಿ ಇತ್ಯಾದಿ ವಿಚಾರಗಳ ಸರಮಾಲೆಯನ್ನು ಆ ಕ್ಷಣದಲ್ಲಿ ಮನಸ್ಸಿನ ತುಂಬ ತುಂಬಿಕೊಂಡು ಬೀಗುತ್ತಿದ್ದೇವು.


ಈಗ ಅದು ಎಲ್ಲಾ ಸುಮಧುರ ನೆನಪು ಮಾತ್ರ!




ಶಾಲೆಯ ದಿನಗಳಿಂದ ಹೊರಗೆ ಬಂದ ನಂತರ ಈ ದಿನಗಳು ಕೇವಲ ರಜಾದಿನಗಳಾಗಿ ಬಿಟ್ಟಿವೆ. ರಾಷ್ಟ್ರಕ್ಕಾಗಿ ಹೋರಾಡಿ ತಮ್ಮನ್ನೇ ತಾವು ಅರ್ಪಿಸಿಕೊಂಡು ನಮ್ಮ ಇಂದಿನ ಈ ಸುಖಿ ದಿನಗಳಿಗೆ ಕಾರಣಕರ್ತರಾದ ಗಾಂಧಿ, ಲಾಲ ಬಹದ್ದೂರ್ ಶಾಸ್ತ್ರಿ ಮುಂತಾದ ಸ್ವಾತಂತ್ರ್ಯ ನಾಯಕರ ನೆನಪು ಇಂದು ಯಾವ ರೀತಿಯಲ್ಲೂ ಬೇರೆ ದಿನಗಳಲ್ಲಿ ಬರಲಾರದು ಅಲ್ಲವಾ?



ಗಾಂಧಿಜೀಯವರ ಆದರ್ಶ, ನೀತಿ, ಮೌಲ್ಯಗಳು ಮತ್ತು ಕನಸುಗಳು ಇಂದಿನ ಈ ದಿನಮಾನಗಳಲ್ಲಿ ಅವರ ಜಯಂತಿ ದಿನಕ್ಕೆ ಮಾತ್ರ ಸೀಮಿತ. ಆ ಒಂದು ದಿನ ಮಾತ್ರ ಎಲ್ಲೇ ಎಲ್ಲೂ ಅವರ ಗುಣಗಾನ ಮಾಡಿ ನಂತರ ಮುಂದಿನ ಜಯಂತಿ ಬರುವವರೆಗೂ ಗೊತ್ತು ಗೊತ್ತಿಲ್ಲದ ಗಾವಿದರ ರೀತಿ ಮಲಗಿ ಬಿಟ್ಟಿರುತ್ತೇವೆ.



ಗಾಂಧಿಯೇಂದರೆ ಇಂದಿನ ನಮ್ಮ ಹೈಟೆಕ್ ಯುವಕ ಯುವತಿಯರಿಗೆ ಹಾಡಿಕೊಳ್ಳುವ ವಸ್ತುವಾಗಿದೆ. ಅವರ ಹೆಸರು ಕೇವಲ ಎಲ್ಲ ಮುಖ್ಯ ನಗರಗಳಲ್ಲಿ ಒಂದು ಮುಖ್ಯ ರಸ್ತೆಗೆ, ಮುಖ್ಯ ಸರ್ಕಲ್ ಗೆ ಮಾತ್ರ ಇಟ್ಟು ಕೊಂಡಾಡುವವರ ರೀತಿ ನಮ್ಮ ಹಿರಿಮೆಯನ್ನು ಮೆರೆಯುತ್ತಿದ್ದೇವೆ.



ಯಾರಾದರೂ ಸ್ವಲ್ಪ ಸಾಧುವಾಗಿ ಮತ್ತು ಸಭ್ಯನಾಗಿ ಅಥಾವ ಹಳೆಕಾಲದವನ ರೀತಿಯಲ್ಲಿ ನೆಡೆದುಕೊಂಡರೆ ಮುಗಿಯಿತು ಪ್ರತಿಯೊಬ್ಬರೂ ಅವನನ್ನು "ನೋಡಾಪ್ಪ ಗಾಂಧಿ ಬಂದ" ಅನ್ನುವರು.



ಸಿನಿಮಾ ಥೇಟರ್ ನಲ್ಲಿ ಗಾಂಧಿ ಕ್ಲಾಸ್ ಎಂದು  ಮುಂದಿನ ಅಸನಗಳಿಗೆ ಇಟ್ಟಿರುವವರು. ಅಲ್ಲಿಗೆ ಹೋಗುವ ಮಂದಿಗಳು ಸ್ವಲ್ಪ ಯೋಚಿಸುವಂತೆ ಮಾಡಿರುವವರು ಯಾರು?



ಅಂದು ಇಡೀ ಭಾರತ ಅವರ ಒಂದು ಮಾತಿಗೆ ಅವರ ಹಿಂದೆ ಬರುವಂತೆ ಮಾಡಿದ್ದ ಪವಾಡವಾದರೂ ಏನೂ? ಕಲ್ಪಿಸಲೂ ಸಾಧ್ಯವಿಲ್ಲ. ಯಾವುದೇ ದುಡ್ಡು, ಪ್ರಲೋಭನೆ ಯಾವೊಂದು ಇಲ್ಲದೇ ತಮ್ಮ ಸರಳತೆ, ಸತ್ಯ ಶೋಧನೆಯ ಮಾರ್ಗದಲ್ಲಿ, ಅಹಿಂಸೆಯ ಸತ್ಯಾಗ್ರಹವೆಂಬ ಅಸ್ತ್ರವನ್ನು ಮಾತ್ರ ಇಟ್ಟುಕೊಂಡು. ಪ್ರತಿಯೊಬ್ಬರಿಗೂ ಮುಂದೆ ದೂರಕುವ ಭವ್ಯ ಭರವಸೆಯ ಸ್ವಾತಂತ್ರ್ಯದ ಫಲಕ್ಕಾಗಿ ಎಲ್ಲಾರೂ ಕಟಿ ಬದ್ಧರಾಗಿರುವಂತೆ ಮಾಡಿದ ಮೋಡಿಗಾರ ಮತ್ತೇ ಈ ನೆಲದಲ್ಲಿ ಹುಟ್ಟಿ ಬರಲಾರೇನೋ.




ಅಂದು ಸಮಾಜದಲ್ಲಿ ವಿದ್ಯಾವಂತರ ಕೊರತೆ ಇದ್ದಿರಬಹುದು, ಬಡತನವಿದ್ದಿರಬಹುದು ಮತ್ತು ಮೌಢ್ಯದಲ್ಲಿಯೇ ಬದುಕಿದ್ದಿರಬಹುದು. ಆದರೂ ಎಲ್ಲರೂ ಒಂದಾಗಿ ಗಾಂಧಿ ಹಾಕಿ ಕೊಟ್ಟ ಹಾದಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಅವರಿಗೆ ಬೆಂಬಲ ಕೊಟ್ಟಿರುವುದು ಆ ಜನರ ಹೆಮ್ಮೆಗೆ  ಮತ್ತು ದೊಡ್ಡತನಕ್ಕೇ ಹಿಡಿದ ಕನ್ನಡಿ.



ಸ್ವಾತಂತ್ರ್ಯ ಬಂದು ಅರ್ಧ ಶತಮಾನ ಕಳೆದರೂ ನಮ್ಮ ಈ ರಾಜಕೀಯ ವ್ಯವಸ್ಥೆಯಲ್ಲಿರುವ ನಾಯಕರುಗಳ ಕನಸುಗಳು, ಅಧಿಕಾರ ದಾಹ, ಭ್ರಷ್ಟತೆ, ಯಾರನ್ನಾದರೂ ಏನಾದರೂ ಮಾಡುವಂತಿರುವ ಇವರುಗಳೆ ರಾಷ್ಟ್ರಪೀತ ಹುಟ್ಟಿದ ಭಾರತಾಂಬೆಯ ಮಕ್ಕಳೇ ಎಂಬ ಸಂಶಯ ಬರದೇ ಇರಲಾರದು.



ಇದ್ದಕ್ಕೆ ಇರಬೇಕು ಇಂದು ಕೆಲವರು ಹೇಳುತ್ತಿರುತ್ತಾರೆ ಇಂದು ನಡೆಯುತ್ತಿರು ಈ ಭ್ರಷ್ಟ ವ್ಯವಸ್ಥೆಯಲ್ಲಿ ಏನಾದರೂ ಗಾಂಧಿಜೀಯವರು ಬಂದು ಯಾವುದಾದರೂ ಕ್ಷೇತ್ರಕ್ಕೆ ಸ್ಪರ್ಧಿಸಿದರೇ ಅವರನ್ನು ನಮ್ಮ ಜನ ಅತಿ ಹೆಚ್ಚು ಮತಗಳ ಅಂತರದಿಂದ ಸೋಲಿಸುತ್ತಾರೆ!!?



ನಮ್ಮ ಇಂದಿನ ಮಕ್ಕಳಿಗೆ ಗಾಂಧಿಯ ನುಡಿ, ಕನಸು, ಜೀವನ ಕೇವಲ ಪುಸ್ತಕದಲ್ಲಿ ಇದ್ದು ಅಂಕ ಪಡೆಯುವ ವಸ್ತುವಾಗಿದೆ.




ತಾನು ಬೆಳೆದ ಮೇಲೆ ಅದನ್ನು ಗಾಳಿಗೆ ತೋರಿ ತಾನು ಮಾತ್ರ ಚೆನ್ನಾಗಿರಬೇಕು ಮತ್ತು ತನ್ನವರು ಮಾತ್ರ ಚೆನ್ನಾಗಿರಬೇಕು. ಎಂಬ ಸ್ವಾರ್ಥ ಸಮಾಜದ ನಿರ್ಮಾಣ ಕಾರ್ಯದಲ್ಲಿ ನಿರತವಾಗಿರುತ್ತಿದ್ದಾರೆ.



ಇಂದು ರಾಮ ರಾಜ್ಯದ ಕನಸು ಇನ್ನು ಕನಸಾಗಿಯೇ ಉಳಿಯುವಂತಾಗಿದೆ. ಅವರ ಅತಿ ಸರಳ ನಡೆ ನುಡಿ ನೇರವಂತಿಕೆ ಇಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂದು ಅವರನ್ನು ಕಂಡು ಅವರ ಆದರ್ಶವನ್ನು ಪಾಲಿಸಿಕೊಂಡು ನಮ್ಮ ನಡುವೆ ಇಂದು ಬದುಕುತ್ತಿರುವ ಕೆಲವೇ ಕೆಲವು ಹಿರಿಯರುಗಳು ಮರೆಯಾದರೇ.. ಅವರ ಬಗ್ಗೆ ಹೇಳುವವರೆ ಸಿಗುವುದಿಲ್ಲವೇನೋ.



ಅದಕ್ಕೆ ಹಿಂದೆ ಗಾಂಧಿಯವರ ಸಮಯದಲ್ಲಿದ್ದ ಪ್ರಸಿದ್ಧ ಭೌತ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೀನ್ ರವರು "ಈ ವ್ಯಕ್ತಿ ಹಿಂದೆ ನಮ್ಮ ಭೂಮಿಯ ಮೇಲೆ ಇದ್ದು ನಡೆದಾಡಿದ್ದಾರೆ ಎಂದರೆ ಮುಂದಿನ ಜನಾಂಗ ನಂಬುವುದಿಲ್ಲ" ಎಂದು ಹೇಳಿರುವುದು.





ನಮ್ಮ ದೇಶದಲ್ಲಿಯೇ ಹುಟ್ಟಿ ತನ್ನ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಉಸಿರನ್ನೇ ಮುಡಿಪಿಟ್ಟ ಮಹಾನ್ ವ್ಯಕ್ತಿಯನ್ನು ದಿನಂಪ್ರತಿ ನೆನೆಯುತ್ತ. ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಐನ್ ಸ್ಟೀನ್ ರವರ ಮಾತನ್ನು ಸುಳ್ಳು ಮಾಡೋಣವೇ!