ಬುಧವಾರ, ಅಕ್ಟೋಬರ್ 20, 2010

ನಮ್ಮ ಊರಿನ ದಸರ ಮಸ್ತ್ ಮಸ್ತ್

ನಾಡ ಹಬ್ಬ ಎಂದರೆ ಅದು ದಸರಾ ಹಬ್ಬ ಒಂಬತ್ತು ದಿನಗಳ ನವರಾತ್ರಿ ದಿನಗಳನ್ನು ಪ್ರತಿ ದಿನ ವಿವಿಧ ರೀತಿಯ ಪೂಜೆ ಪುರಸ್ಕಾರಗಳನ್ನು ತಮ್ಮ ಇಷ್ಟ ದೇವತೆಗೆ ಮಾಡಿ ಅದರಲ್ಲಿ ತಮ್ಮ ಮನವನ್ನು ತಲ್ಲಿನಗೊಳಿಸಿ ಪಾವನರಾಗಬೇಕೆಂಬ ಹಂಬಲ. ಹೀಗೆ ಒಂದು ಘಟ್ಟಕ್ಕೆ ಬಂದು ಕೂನೆ ದಿನವಾದ ವಿಜಯದಶಮಿಯಂದು ಸಡಗರದಿಂದ ವಿವಿಧ ರೀತಿಯಲ್ಲಿ ವಿವಿಧ ಕಡೆಗಳಲ್ಲಿ ತಮ್ಮ ಹಬ್ಬದ ಸಂಭ್ರಮವವನ್ನು ತೋರಿಸುತ್ತಾ ಆಚರಿಸುತ್ತಾರೆ.


ಆದರೆ ನಮ್ಮ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ನಡೆಯುವ ದಸರಾ ಸಂಭ್ರಮ ವಿಶ್ವ ಪ್ರಸಿದ್ಧಿ. ಅಲ್ಲಿ ನಡೆಯು ಕೂನೆಯ ದಿನದ ಆನೆ ಅಂಭಾರಿಯ ಉತ್ಸವ ಬಲು ಅಪರೂಪದ್ದು. ಸತತವಾಗಿ ೪೦೦ ವರ್ಷಗಳಿಂದ ನಿರಂತರವಾಗಿ ಹೆಚ್ಚು ಹೆಚ್ಚು ಆಕರ್ಷಣೆಯಿಂದ ಜರುಗುತ್ತಾ ಲಕ್ಷ ಲಕ್ಷ ಜನಗಳನ್ನು ಬರುವಂತೆ ಮಾಡಿ ತನ್ನ ಮೋಡಿಯನ್ನು ಮಾಡಿದೆ ಎಂದರೆ ಅತಿಶಯೋಕ್ತಿಯಲ್ಲ.


ನಮ್ಮ ಮೈಸೂರು ದಸರದ ರೀತಿ ನಮ್ಮ ರಾಜ್ಯದ ವಿವಿಧ ಭಾಗಗಳಲ್ಲೂ ಅದರಷ್ಟೂ ದೂಡ್ಡ ರೀತಿಯಲ್ಲಿ ನಡೆಯದಿದ್ದರೂ ಅದ್ದೂರಿಗೇನೂ ಕಡಿಮೆಯಿಲ್ಲ ಎಂಬಂತೆ ಸರಳವಾಗಿ ಅಲ್ಲಿನ ಸುತ್ತ ಮುತ್ತಲಿನ ಜನಗಳಿಗೆ ದಸರಾದ ಸಡಗರವನ್ನು ಕೂಡುವಂತೆ ನಮ್ಮ ಚಿತ್ರದುರ್ಗದಲ್ಲಿನ ಶರಣ ಸಂಸ್ಕೃತಿ ಉತ್ಸವ, ಕೂಡುಗಿನ ದಸರ, ಮಂಗಳೂರಿನಲ್ಲಿನ ದಸರಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿವೆ.


ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವ ಒಂದು ವಾರದವರಿಗೆ ವಿವಿಧ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳು ದಿನವಿಡಿ ನಡೆಯುತ್ತವೆ. ಇಲ್ಲಿನ ಈ ಕಾರ್ಯಕ್ರಮಗಳಿಗೆ ಉತ್ತರ ಕರ್ನಾಟಕ ಮತ್ತು ಮದ್ಯ ಕರ್ನಾಟಕದ ಊರು ಊರುಗಳಿಂದ ಜನರು ತಮ್ಮವರೂಡಗೂಡಿ ಬಂದು ಮಿನಿ ಮೈಸೂರು ದಸರಾವನ್ನು ಕಂಡಷ್ಟು ಸಂತೋಷಗೊಂಡು ವಿವಿಧ ವಿಚಾರಗಳನ್ನು ಆಲಿಸಿ ತಮ್ಮತನವನ್ನು ಉತ್ತಮಗೊಳಿಸಿಕೊಂಡು ನಲಿಯುತ್ತಾರೆ. ಇದಕ್ಕೆ ಕಾರಣೀಭೂತರಾದ ಶ್ರೀ ಶ್ರೀ ಶಿವಮೂರ್ತಿ ಶಿವ ಶರಣರಿಗೆ ಶರಣು ಶರಣಾರ್ಥಿ.


ವಿಜಯ ದಶಮಿ ದಿನದಂದು ಇಲ್ಲೂ ಮೈಸೂರಿನ ರೀತಿಯಲ್ಲಿ ಮುಂಜಾನೆಯೇ ಶ್ರೀ ಮುರುಘ ಮಠದಿಂದ ಮೆರವಣಿಗೆ ಶಿವಶರಣರ ಸಾರಥ್ಯದಲ್ಲಿ ಸಾಗುತ್ತಾ ಅದು ಕೋಟೆಯನ್ನು ತಲುಪಿ ಕೊನೆಯಾಗುತ್ತದೆ. ಇದರಲ್ಲಿ ನಾಡಿನ ವಿವಿಧ ಭಾಗಗಳಿಂದ ಬಂದ ಜನರ ಜನಪದ ಕಲೆಗಳ ಪರಿಚಯವನ್ನು ಕಾಣಬಹುದು. ನಮ್ಮ ಸಂಸ್ಕೃತಿಯ ಪಳಿಯುಳಿಕೆಗಳೇನೋ ಎಂಬಂತೆ ಇಂಥ ಸಮಯದಲ್ಲಿ ಮಾತ್ರ ಈ ಕಲೆಗಳು ಹೊರಗಡೆ ಬಂದು ಜನರನ್ನು ರಂಜಿಸುತ್ತಾ ತಮ್ಮ ಹೆಮ್ಮೆಯನ್ನು ಮೆರೆಯುತ್ತವೆ.


ಈ ಬಾರಿಯ ಶರಣ ಸಂಸ್ಕೃತಿ ಉತ್ಸವದಲ್ಲಿ ಬಾಗಿಯಾಗುವ ಸೌಭಾಗ್ಯ ವಿಜಯದಶಮಿ ದಿನದಂದು ದೂರೆಯಿತು. ಅಂದಿನ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳ ಕಾರ್ಯಕ್ರಮವಾಗಿತ್ತು. ನಾಡಿನ ವಿವಿಧ ಭಾಗಗಳಿಂದ ಪ್ರಸಿದ್ಧಿ ಪಡೆದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧ ಸಾಧನೆಯನ್ನು ಮಾಡಿದ ಎಳೆಯರನ್ನು ಆಹ್ವಾನಿಸಿ ವೇದಿಕೆಯ ಮೇಲೆ ಶಿವ ಶರಣರ ಜೊತೆ ಕೂಡಿಸಿದ್ದರು.


ಅವರುಗಳನ್ನು ನೋಡಿದಾಗ ಎಂಥವರಿಗೂ ಒಂದು ಸ್ಫೂರ್ತಿಯಾಗುತ್ತಿತ್ತು. ಅತಿ ಚಿಕ್ಕ ವಯಸ್ಸಿನಲ್ಲಿ ಅಂಥ ದೂಡ್ಡ ವೇದಿಕೆಯ ಮೇಲೆ ಕೂಡಲು ಅವರುಗಳು ಎಷ್ಟೊಂದು ಅದೃಷ್ಟ ಮತ್ತು ಪರಿಶ್ರಮವನ್ನು ತಮ್ಮ ಜೀವನದಲ್ಲಿ ಪಟ್ಟಿರಬೇಕು ಅಲ್ಲವಾ! ಈ ರೀತಿಯ ವಿವಿಧ ರಂಗದ ಕಾರ್ಯಕ್ರಮಗಳು ಪ್ರತಿದಿನ ಒಂದು ವಾರ ಆ ಜಿಲ್ಲೆಯ ಜನರಿಗೆ ಅಪರೂಪದ ಸಾಧನೆಯ ಶಿಖರಗಳನ್ನು ತಮ್ಮ ಕಣ್ಣ ಮುಂದೆ ಕಾಣುವುದು.



ಇದು ಸರಿ! ಆದರೆ ಅಲ್ಲಿ ಅಂದು ನಡೆದ ಒಂದು ಎರಡು ಕಾರ್ಯಕ್ರಮಗಳು ಸ್ವಲ್ಪ ತಮ್ಮ ಮಿತಿಯನ್ನು ಮೀರಿದವು ಎಂದು ಅನಿಸಿತು. ಈಗಾಗಲೇ ನಮಗೆಲ್ಲಾ ಗೊತ್ತಿರುವಂತೆ ನಮ್ಮ ಟಿ. ವಿ. ಚಾನೆಲ್ ಗಳು ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ರಿಯಾಲಿಟಿ ಶೋಗಳನ್ನು ದಿನಂಪ್ರತಿ ಮಕ್ಕಳಿಗಾಗಿ, ಹದಿಹರೆಯದವರಿಗಾಗಿ, ವಯಸ್ಸಾದವರಿಗಾಗಿ ವಿವಿಧ ರೀತಿಯಲ್ಲಿ ಜನರನ್ನು ಮೋಡಿ ಮಾಡಲು ತಾನು ಮುಂದು ನೀನು ಮುಂದು ಎಂದು ನಿಂತಿರುವಾಗ, ಅದೇ ರೀತಿಯ ಅದಕ್ಕೆ ಸಮೀಪವಾದಂತ ನೃತ್ಯಗಳನ್ನು ಸಿನಿಮಾ ಹಾಡುಗಳಿಗೆ ಮಾಡಿಸಿದ್ದು ಮನಸ್ಸಿಗೆ ತುಂಬ ಕಸಿವಿಸಿಯನ್ನುಂಟು ಮಾಡಿತು. ಮತ್ತು ಇದಕ್ಕೇ ಪ್ರೋತ್ಸಾಹವೇನೂ ಎಂಬ ರೀತಿಯಲ್ಲಿ ಸಭಿಕರ ಚಪ್ಪಾಳೆಗಳು ಮುಗಿಲು ಮುಟ್ಟಿದ್ದು ಮಾತ್ರ ನಮ್ಮ ಸಂಸ್ಕೃತಿ ಎತ್ತ ಸಾಗುತ್ತಿದೆ ಎಂಬುದನ್ನು ಕ್ಷಣ ಕಾಲ ಯೋಚಿಸುವಂತೆ ಮಾಡಿತು.


ಏನು ಅರಿಯದ ಈ ಚಿಕ್ಕ ವಯಸ್ಸಿನಲ್ಲಿ ಈ ಕಂದಮ್ಮಗಳಿಗೆ ಈ ರೀತಿಯ ಹಾಡಿನ ನೃತ್ಯಗಳನ್ನು ಕಲಿಸಿದ, ಅವರಿಗೆ ತೋಡಿಸಿದ ವೇಷ, ವಸ್ತ್ರ ಆ ದೇವರಿಗೆ ಪ್ರೀತಿ. ಶಿವಶರಣ ಸಮ್ಮುಖದಲ್ಲಿ ಇಂಥ ಅಪರೂಪವಾದ ಉತ್ಕೃಷ್ಟವಾದ ಸಂಭ್ರಮದಲ್ಲಿ ಈ ರೀತಿಯ ಯಾವುದೇ ಚಿಕ್ಕ ಚಿಕ್ಕ ಕಾರ್ಯಕ್ರಮಗಳು ಜರುಗುವುದನ್ನು ಆಯೋಜಕರು ತಪ್ಪಿಸಬೇಕು. ಹೆಸರೇ ಸೂಚಿಸುವಂತೆ ಸಂಸ್ಕೃತಿಯ ಉತ್ಸವ ನಮ್ಮ ಇಂದಿನ ಜನಕ್ಕೆ ಸಿನಿಮಾ ಹಾಡುಗಳ ನೃತ್ಯವೇ ಕನ್ನಡ ಸಂಸ್ಕೃತಿ ಎಂಬಂತೆ ಆಸ್ವಾದಿಸುತ್ತಾರೆ ಮತ್ತು ಈ ರೀತಿಯ ಕಾರ್ಯಕ್ರಮಗಳು ಹೇರಳವಾಗಿ ದಿನ ನಿತ್ಯ ಅಲ್ಲಿ ಇಲ್ಲಿ ನೋಡುತ್ತಲೇ ಇದ್ದೇವೆ. ಅವುಗಳನ್ನು ಪುನಃ ಇಂಥ ಮುಖ್ಯ ಕಾರ್ಯಕ್ರಮಗಳಲ್ಲಿ ತರುವುದು ನಿಲ್ಲಬೇಕು.


ಮಕ್ಕಳಿಗೂ ಸಹ ನಮ್ಮ ಸೂಗಡಿನ ಸಂಸ್ಕೃತಿಯ ಕಲೆಗಳನ್ನು ಕಲಿಸ ಬೇಕು ಮತ್ತು ಅವುಗಳನ್ನು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಈ ಪಾಶ್ಚಾತ್ಯ ವೇಷ, ಭೂಷಣ, ಸಂಗೀತ, ಹಾಡು, ನೃತ್ಯ ನಮ್ಮಗಳ ಕಲೆಯ ಮುಂದೆ ಏನು ಅಲ್ಲ ಎಂಬುದನ್ನು ಅರಿಯುವಂತೆ ಮಾಡುವುದು ದೂಡ್ಡವರಾದ ಎಲ್ಲ ಗುರು ಹಿರಿಯರ ಕರ್ತವ್ಯ.


ಮಕ್ಕಳ ಸ್ಕೂಲ್ ಶಾಲೆಯಲ್ಲಿ ಅಲ್ವಾ! ಎಂಬಂತೆ ಇಂದಿನ ಈ ನಗರ ಜೀವನದಲ್ಲಿ ಪ್ರತಿ ಶಾಲೆಗಳಲ್ಲೂ ಅಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳ ಕೈಯಿಂದ ಮಾಡಿಸುವ ನೃತ್ಯ ಕಣ್ಣಿಂದ ನೋಡಬಾರದು ಯಾವ ಮೂರನೇ ದರ್ಜೆಯ ಸಿನಿಮಾ ಕ್ಯಾಬರೆ ನೃತ್ಯಕ್ಕೆ ಕಡಿಮೆ ಇರುವುದಿಲ್ಲ. ಏನೂ ಅರಿಯದ ಆ ವಯಸ್ಸಿನ ಮಕ್ಕಳಿಗೆ ಕಲಿಸುವ ಹಾಡು ನೃತ್ಯ ಬರುತ್ತಾ ಬರುತ್ತಾ "ತೋ ಚಿಜ್ ಬಡಿ ಮಸ್ತ ಮಸ್ತ..." ತಮ್ಮ ನೆಚ್ಚಿನ ಗೀತೆಯಾಗುತ್ತದೆ. ಮತ್ತು ಇದೇ ಮುಂದೆ ಇಂಥ ಕಾರ್ಯಕ್ರಮಗಳಲ್ಲಿ ಪ್ರತಿಬಿಂಬಿಸುತ್ತದೆ. ಇದು ನಿಲ್ಲಬೇಕು ನಮ್ಮ ಜನಪದ, ಹಿಂದುಸ್ತಾನಿ, ಭರತನಾಟ್ಯ, ಕೋಲಾಟ, ವಚನಗಳು, ಭಾವ ಗೀತೆಗಳು ಹೀಗೆ ಮೂಲೆಗೆ ಸೇರುತ್ತಿರುವ ಕಲೆಗಳ ಪುನರಪಿ ಜನನಂ ಎಲ್ಲರ ಮನದಲ್ಲಾಗಲಿ ಎಂದು ಆಶಿಸೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ