ಶನಿವಾರ, ಅಕ್ಟೋಬರ್ 2, 2010

ಮತ್ತೇ ಬಾ ಬಾಪೂ!

ಗಾಂಧಿ ಜಯಂತಿ ಅಕ್ಟೋಬರ್ ೨ ಅಂದ ತಕ್ಷಣ ನನ್ನ ಮನ ಬಾಲ್ಯದ ದಿನಗಳ ದಸರ ರಜೆಗೂ ಮೊದಲು ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಆಚರಣೆಯನ್ನು ಮಾಡಿ ಒಂದು ತಿಂಗಳು ರಜೆಯನ್ನು ಘೋಷಿಸುತ್ತಿದ್ದ ದಿನಗಳಿಗೆ ಜಾರುತ್ತದೆ.




ಅಂದು ಶಾಲೆಗೆ ಹೋಗಿ ಗಾಂಧಿ ಜನ್ಮ ದಿನಾಚರಣೆಯನ್ನು ಮಾಡುವ ಮುನ್ನ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಂದ ಚಿಕ್ಕವಾದ ಯಾವುದಾದರೂ ಕೆಲಸಗಳನ್ನು ಮಾಡಿಸುವುದು. ಶಾಲೆಯ ಮುಂದಿನ ಜಾಗವನ್ನು ಚೊಕ್ಕಟ ಮಾಡುವುದು.


 ಆಗಿನ ಆ ಹುರುಪು ತುಂಬ ಖುಷಿಯನ್ನು ಕೊಡುವ ಕ್ಷಣಗಳು. ಯಾಕೆಂದರೆ ನಾಳಿನಿಂದ ಒಂದು ತಿಂಗಳು ರಜಾ ಮಜಾವನ್ನು ನೆನಸಿ ನೆನಸಿಕೊಂಡು ಸಂಭ್ರಮಪಡುತ್ತಿದ್ದೇವು. ನಾನು ರಜೆಯಲ್ಲಿ ಹೀಗೆ -ಹಾಗೆ ಮಾಡುವೇನು. ಅಲ್ಲಿಗೆ ಅವರ ಜೋತೆ ಹೋಗುವೇನು ಎಂದು ಬಡಾಯಿ ಕೊಚ್ಚಿಕೊಳ್ಳುವುದೇನೂ.


ಬಿಡಿ ಆ ದಿನಗಳು ಮತ್ತೇ ಮರಳಲಾರವು.






ಗಾಂಧಿಯೇಂದರೇ ಏನೋ ಪ್ರೀತಿ. ಅವರ ಬಾಲ್ಯದಲ್ಲಿ ಅವರು ಮಾಡಿದ ಕಳ್ಳತನ. ದಾರಿ ತಪ್ಪಿ ಕೆಟ್ಟ ಹುಡುಗನಾಗಿ ತಂದೆಯ ಮುಂದೆ ಕ್ಷಮಾಪಣೆ ಕೇಳಿದ್ದು. ತಾಯಿಯ ಜೋತೆ ೨೧ ದಿನಗಳವರೆಗೂ ಉಪವಾಸ ಮಾಡಿದ್ದು. ಹೀಗೆ ಅವರ ಜೀವನವನ್ನು ನಮ್ಮ ಜೋತೆ ಸಮಕರಿಸಿಕೊಂಡು. ಮರಿ ಗಾಂಧಿಯನ್ನಾಗಿ ಮಾಡಿಕೊಂಡು. ನಮ್ಮವರೇ ಅವರು ಎಂಬ ಉತ್ಸಾಹದಿಂದ ಶಾಲೆಯಲ್ಲಿ ಸಿಹಿಯನ್ನು ತಿನ್ನುವ ಮೊಲಕ ಸಂತೋಷಪಡುತ್ತಿದ್ದೆವು. ಅವರ ಕಥೆಯನ್ನು ಪುಸ್ತಕದಲ್ಲಿ ಓದಿದ್ದರೂ, ಪುನಃ ನಮ್ಮ ಗುರುಗಳ ಬಾಯಿಯಲ್ಲಿ ಅವರ ಸಾಧನೆ ಮತ್ತು ಆದರ್ಶದ ನುಡಿಗಳನ್ನು ನಮ್ಮ ಕಿವಿಗೆ ತುಂಬಿಕೊಳ್ಳುತ್ತಿದ್ದೇವುಮುಂದೆ ಒಂದು ದಿನ ಅವರ ಮಟ್ಟಿಗೆ ಬೆಳೆಯಬೇಕು. ಅವರ ರೀತಿ ನಾವು ನಾಯಕರಾಗಬೇಕು. ಬಡವರ ಬಗ್ಗೆ ನಮ್ಮ ಕೈಯಿಂದ ಆಗುವ ಸಹಾಯವನ್ನು ಮಾಡಬೇಕು. ಇತ್ಯಾದಿ ಇತ್ಯಾದಿ ವಿಚಾರಗಳ ಸರಮಾಲೆಯನ್ನು ಆ ಕ್ಷಣದಲ್ಲಿ ಮನಸ್ಸಿನ ತುಂಬ ತುಂಬಿಕೊಂಡು ಬೀಗುತ್ತಿದ್ದೇವು.


ಈಗ ಅದು ಎಲ್ಲಾ ಸುಮಧುರ ನೆನಪು ಮಾತ್ರ!




ಶಾಲೆಯ ದಿನಗಳಿಂದ ಹೊರಗೆ ಬಂದ ನಂತರ ಈ ದಿನಗಳು ಕೇವಲ ರಜಾದಿನಗಳಾಗಿ ಬಿಟ್ಟಿವೆ. ರಾಷ್ಟ್ರಕ್ಕಾಗಿ ಹೋರಾಡಿ ತಮ್ಮನ್ನೇ ತಾವು ಅರ್ಪಿಸಿಕೊಂಡು ನಮ್ಮ ಇಂದಿನ ಈ ಸುಖಿ ದಿನಗಳಿಗೆ ಕಾರಣಕರ್ತರಾದ ಗಾಂಧಿ, ಲಾಲ ಬಹದ್ದೂರ್ ಶಾಸ್ತ್ರಿ ಮುಂತಾದ ಸ್ವಾತಂತ್ರ್ಯ ನಾಯಕರ ನೆನಪು ಇಂದು ಯಾವ ರೀತಿಯಲ್ಲೂ ಬೇರೆ ದಿನಗಳಲ್ಲಿ ಬರಲಾರದು ಅಲ್ಲವಾ?



ಗಾಂಧಿಜೀಯವರ ಆದರ್ಶ, ನೀತಿ, ಮೌಲ್ಯಗಳು ಮತ್ತು ಕನಸುಗಳು ಇಂದಿನ ಈ ದಿನಮಾನಗಳಲ್ಲಿ ಅವರ ಜಯಂತಿ ದಿನಕ್ಕೆ ಮಾತ್ರ ಸೀಮಿತ. ಆ ಒಂದು ದಿನ ಮಾತ್ರ ಎಲ್ಲೇ ಎಲ್ಲೂ ಅವರ ಗುಣಗಾನ ಮಾಡಿ ನಂತರ ಮುಂದಿನ ಜಯಂತಿ ಬರುವವರೆಗೂ ಗೊತ್ತು ಗೊತ್ತಿಲ್ಲದ ಗಾವಿದರ ರೀತಿ ಮಲಗಿ ಬಿಟ್ಟಿರುತ್ತೇವೆ.



ಗಾಂಧಿಯೇಂದರೆ ಇಂದಿನ ನಮ್ಮ ಹೈಟೆಕ್ ಯುವಕ ಯುವತಿಯರಿಗೆ ಹಾಡಿಕೊಳ್ಳುವ ವಸ್ತುವಾಗಿದೆ. ಅವರ ಹೆಸರು ಕೇವಲ ಎಲ್ಲ ಮುಖ್ಯ ನಗರಗಳಲ್ಲಿ ಒಂದು ಮುಖ್ಯ ರಸ್ತೆಗೆ, ಮುಖ್ಯ ಸರ್ಕಲ್ ಗೆ ಮಾತ್ರ ಇಟ್ಟು ಕೊಂಡಾಡುವವರ ರೀತಿ ನಮ್ಮ ಹಿರಿಮೆಯನ್ನು ಮೆರೆಯುತ್ತಿದ್ದೇವೆ.



ಯಾರಾದರೂ ಸ್ವಲ್ಪ ಸಾಧುವಾಗಿ ಮತ್ತು ಸಭ್ಯನಾಗಿ ಅಥಾವ ಹಳೆಕಾಲದವನ ರೀತಿಯಲ್ಲಿ ನೆಡೆದುಕೊಂಡರೆ ಮುಗಿಯಿತು ಪ್ರತಿಯೊಬ್ಬರೂ ಅವನನ್ನು "ನೋಡಾಪ್ಪ ಗಾಂಧಿ ಬಂದ" ಅನ್ನುವರು.



ಸಿನಿಮಾ ಥೇಟರ್ ನಲ್ಲಿ ಗಾಂಧಿ ಕ್ಲಾಸ್ ಎಂದು  ಮುಂದಿನ ಅಸನಗಳಿಗೆ ಇಟ್ಟಿರುವವರು. ಅಲ್ಲಿಗೆ ಹೋಗುವ ಮಂದಿಗಳು ಸ್ವಲ್ಪ ಯೋಚಿಸುವಂತೆ ಮಾಡಿರುವವರು ಯಾರು?



ಅಂದು ಇಡೀ ಭಾರತ ಅವರ ಒಂದು ಮಾತಿಗೆ ಅವರ ಹಿಂದೆ ಬರುವಂತೆ ಮಾಡಿದ್ದ ಪವಾಡವಾದರೂ ಏನೂ? ಕಲ್ಪಿಸಲೂ ಸಾಧ್ಯವಿಲ್ಲ. ಯಾವುದೇ ದುಡ್ಡು, ಪ್ರಲೋಭನೆ ಯಾವೊಂದು ಇಲ್ಲದೇ ತಮ್ಮ ಸರಳತೆ, ಸತ್ಯ ಶೋಧನೆಯ ಮಾರ್ಗದಲ್ಲಿ, ಅಹಿಂಸೆಯ ಸತ್ಯಾಗ್ರಹವೆಂಬ ಅಸ್ತ್ರವನ್ನು ಮಾತ್ರ ಇಟ್ಟುಕೊಂಡು. ಪ್ರತಿಯೊಬ್ಬರಿಗೂ ಮುಂದೆ ದೂರಕುವ ಭವ್ಯ ಭರವಸೆಯ ಸ್ವಾತಂತ್ರ್ಯದ ಫಲಕ್ಕಾಗಿ ಎಲ್ಲಾರೂ ಕಟಿ ಬದ್ಧರಾಗಿರುವಂತೆ ಮಾಡಿದ ಮೋಡಿಗಾರ ಮತ್ತೇ ಈ ನೆಲದಲ್ಲಿ ಹುಟ್ಟಿ ಬರಲಾರೇನೋ.




ಅಂದು ಸಮಾಜದಲ್ಲಿ ವಿದ್ಯಾವಂತರ ಕೊರತೆ ಇದ್ದಿರಬಹುದು, ಬಡತನವಿದ್ದಿರಬಹುದು ಮತ್ತು ಮೌಢ್ಯದಲ್ಲಿಯೇ ಬದುಕಿದ್ದಿರಬಹುದು. ಆದರೂ ಎಲ್ಲರೂ ಒಂದಾಗಿ ಗಾಂಧಿ ಹಾಕಿ ಕೊಟ್ಟ ಹಾದಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಅವರಿಗೆ ಬೆಂಬಲ ಕೊಟ್ಟಿರುವುದು ಆ ಜನರ ಹೆಮ್ಮೆಗೆ  ಮತ್ತು ದೊಡ್ಡತನಕ್ಕೇ ಹಿಡಿದ ಕನ್ನಡಿ.



ಸ್ವಾತಂತ್ರ್ಯ ಬಂದು ಅರ್ಧ ಶತಮಾನ ಕಳೆದರೂ ನಮ್ಮ ಈ ರಾಜಕೀಯ ವ್ಯವಸ್ಥೆಯಲ್ಲಿರುವ ನಾಯಕರುಗಳ ಕನಸುಗಳು, ಅಧಿಕಾರ ದಾಹ, ಭ್ರಷ್ಟತೆ, ಯಾರನ್ನಾದರೂ ಏನಾದರೂ ಮಾಡುವಂತಿರುವ ಇವರುಗಳೆ ರಾಷ್ಟ್ರಪೀತ ಹುಟ್ಟಿದ ಭಾರತಾಂಬೆಯ ಮಕ್ಕಳೇ ಎಂಬ ಸಂಶಯ ಬರದೇ ಇರಲಾರದು.



ಇದ್ದಕ್ಕೆ ಇರಬೇಕು ಇಂದು ಕೆಲವರು ಹೇಳುತ್ತಿರುತ್ತಾರೆ ಇಂದು ನಡೆಯುತ್ತಿರು ಈ ಭ್ರಷ್ಟ ವ್ಯವಸ್ಥೆಯಲ್ಲಿ ಏನಾದರೂ ಗಾಂಧಿಜೀಯವರು ಬಂದು ಯಾವುದಾದರೂ ಕ್ಷೇತ್ರಕ್ಕೆ ಸ್ಪರ್ಧಿಸಿದರೇ ಅವರನ್ನು ನಮ್ಮ ಜನ ಅತಿ ಹೆಚ್ಚು ಮತಗಳ ಅಂತರದಿಂದ ಸೋಲಿಸುತ್ತಾರೆ!!?



ನಮ್ಮ ಇಂದಿನ ಮಕ್ಕಳಿಗೆ ಗಾಂಧಿಯ ನುಡಿ, ಕನಸು, ಜೀವನ ಕೇವಲ ಪುಸ್ತಕದಲ್ಲಿ ಇದ್ದು ಅಂಕ ಪಡೆಯುವ ವಸ್ತುವಾಗಿದೆ.




ತಾನು ಬೆಳೆದ ಮೇಲೆ ಅದನ್ನು ಗಾಳಿಗೆ ತೋರಿ ತಾನು ಮಾತ್ರ ಚೆನ್ನಾಗಿರಬೇಕು ಮತ್ತು ತನ್ನವರು ಮಾತ್ರ ಚೆನ್ನಾಗಿರಬೇಕು. ಎಂಬ ಸ್ವಾರ್ಥ ಸಮಾಜದ ನಿರ್ಮಾಣ ಕಾರ್ಯದಲ್ಲಿ ನಿರತವಾಗಿರುತ್ತಿದ್ದಾರೆ.



ಇಂದು ರಾಮ ರಾಜ್ಯದ ಕನಸು ಇನ್ನು ಕನಸಾಗಿಯೇ ಉಳಿಯುವಂತಾಗಿದೆ. ಅವರ ಅತಿ ಸರಳ ನಡೆ ನುಡಿ ನೇರವಂತಿಕೆ ಇಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂದು ಅವರನ್ನು ಕಂಡು ಅವರ ಆದರ್ಶವನ್ನು ಪಾಲಿಸಿಕೊಂಡು ನಮ್ಮ ನಡುವೆ ಇಂದು ಬದುಕುತ್ತಿರುವ ಕೆಲವೇ ಕೆಲವು ಹಿರಿಯರುಗಳು ಮರೆಯಾದರೇ.. ಅವರ ಬಗ್ಗೆ ಹೇಳುವವರೆ ಸಿಗುವುದಿಲ್ಲವೇನೋ.



ಅದಕ್ಕೆ ಹಿಂದೆ ಗಾಂಧಿಯವರ ಸಮಯದಲ್ಲಿದ್ದ ಪ್ರಸಿದ್ಧ ಭೌತ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೀನ್ ರವರು "ಈ ವ್ಯಕ್ತಿ ಹಿಂದೆ ನಮ್ಮ ಭೂಮಿಯ ಮೇಲೆ ಇದ್ದು ನಡೆದಾಡಿದ್ದಾರೆ ಎಂದರೆ ಮುಂದಿನ ಜನಾಂಗ ನಂಬುವುದಿಲ್ಲ" ಎಂದು ಹೇಳಿರುವುದು.





ನಮ್ಮ ದೇಶದಲ್ಲಿಯೇ ಹುಟ್ಟಿ ತನ್ನ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಉಸಿರನ್ನೇ ಮುಡಿಪಿಟ್ಟ ಮಹಾನ್ ವ್ಯಕ್ತಿಯನ್ನು ದಿನಂಪ್ರತಿ ನೆನೆಯುತ್ತ. ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಐನ್ ಸ್ಟೀನ್ ರವರ ಮಾತನ್ನು ಸುಳ್ಳು ಮಾಡೋಣವೇ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ