ಗುರುವಾರ, ಅಕ್ಟೋಬರ್ 28, 2010

ಕನ್ನಡ ಜನಮನಗಳ ಉತ್ಸವ


ನವಂಬರ್ ಒಂದು ನಮ್ಮ ಕರ್ನಾಟಕ ಏಕೀಕರಣಗೊಂಡ ದಿನಾಚರಣೆ. ಕರ್ನಾಟಕ ಒಟ್ಟಿಗೊಡಿ ೫೪ (೧೯೫೬) ವರ್ಷಗಳಾಗಿವೆ.

ಇದಕ್ಕೆ ನಾವುಗಳು ಹೆಮ್ಮೆಪಡಬೇಕು. ಕನ್ನಡ ಮಾತನಾಡುವ ಎಲ್ಲಾ ಪ್ರಾಂತ್ಯಗಳನ್ನು ಒಂದು ಕಡೆ ಸೇರಿಸಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಪುನರ್ ನಾಮಕರಣ ಮಾಡಿದ ದಿನ. ಆ ದಿನವನ್ನು ಎಲ್ಲಾ ಕನ್ನಡಿಗರು ಮತ್ತು ಕನ್ನಡ ಮಣ್ಣಿನ ಮಕ್ಕಳು ಉತ್ಸಾಹದಿಂದ ರಾಜ್ಯೋತ್ಸವವನ್ನು ಆಚರಿಸುತ್ತಾ ನಮ್ಮ ರಾಜ್ಯಕ್ಕಾಗಿ ಹೋರಾಡಿದ ನಮ್ಮ ಹಲವು ಹಿರಿಯರು, ಸ್ವಾತಂತ್ರ್ಯ ಹೋರಾಟಗಾರರು, ಸಾಧಕರು ಮತ್ತು ಕನ್ನಡದ ಕಟ್ಟಾಳುಗಳನ್ನು ನೆನೆಯುವ ದಿನವಾಗಿದೆ.


ನಾವು ಎಂಥ ಕಾಲ ಘಟ್ಟದಲ್ಲಿದ್ದೇವೆ ಎಂದರೇ ಅರ್ಧ ಶತಮಾನಗಳನ್ನು ಕಳೆದಿದ್ದೇವೆ. ಹಲವಾರು ರೀತಿಯ ಬದಲಾವಣೆಗಳನ್ನು ಕರ್ನಾಟಕದ ಭೂಪಟದಲ್ಲಿ ಮಾತ್ರ ಕಾಣದೆ ನಮ್ಮ ನಿಮ್ಮ ಸುತ್ತಲಿನ ಪರಿಸರ, ಮನಸ್ಸಿನಲ್ಲಿ, ನಡೆಯತ್ತಿರುವ ಜೀವನದಲ್ಲಿ ಉಯಿಸಲು ಸಾಧ್ಯವಾಗದ ರೀತಿಯಲ್ಲಿ ನಮ್ಮ ರಾಜ್ಯ- ಕನ್ನಡ- ಕರ್ನಾಟಕ ವಿಶ್ವ ಪ್ರಸಿದ್ಧಿಯಾಗಿದೆ. ಊರು ಊರುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚಿತವಾಗುತ್ತಿವೆ. ಅದಕ್ಕೆ ಹಲವು ಕಾರಣಗಳಿರಬಹುದು. ಅದಕ್ಕೆ ನಮಗೆಲ್ಲಾ ಗರ್ವವೇ ಸರಿ.


ಪ್ರತಿ ಭಾರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಎಲ್ಲಾ ಕನ್ನಡಾಭಿಮಾನಿಗಳ ಒಂದೇ ಕೂಗು ಕನ್ನಡವನ್ನು ಇನ್ನಾದರೂ ಉಳಿಸಿ. ಈ ರೀತಿಯ ಗಟ್ಟಿ ಕೂಗು ನನಗೆ ತಿಳಿದ ರೀತಿಯಲ್ಲಿ ಭಾರತದ ಯಾವುದೇ ಭಾಷೆಗೂ/ರಾಜ್ಯದಲ್ಲೂ ಬಂದಿಲ್ಲ. ಯಾಕೇ? ನಾವುಗಳು ನಮ್ಮ ಮಾತೃ ಭಾಷೆಯನ್ನು ಅಷ್ಟೊಂದು ವೇಗವಾಗಿ ಕಡೆಗಣಿಸುತ್ತಿದ್ದೇವೆ? ಉತ್ತರವನ್ನು ಎಲ್ಲಾ ಕನ್ನಡಿಗರು ಕೊಡಬೇಕು.
ಇಂದು ಐ.ಟಿ, ಬಿ.ಟಿ ಭರಾಟೆಯಲ್ಲಿ ನಾವುಗಳು ಯಾವುದೇ ಒಂದು ರಾಜ್ಯವನ್ನು, ಮೆಟ್ರೂ ನಗರವನ್ನು ಕೇವಲ ಆ ರಾಜ್ಯದವರೇ ವಾಸಿಸುವ ಸ್ಥಳವೆಂದು ಹೇಳುವುದು ಕಷ್ಟ. ಇಂದು ಯಾವುದೇ ರಾಜ್ಯಗಳಿಗೂ, ದೇಶಗಳಿಗೂ ಗಡಿಗಳೇ ಇಲ್ಲ. ಆ ರೀತಿಯಲ್ಲಿ ನಮ್ಮ ಸುಂದರ ಬೆಂಗಳೂರಿನಲ್ಲಿಯೇ ಮಿನಿ ವಿಶ್ವ-ಭಾರತವನ್ನು ಕಾಣಬಹುದು. ಕನ್ನಡವನ್ನು ಬಿಟ್ಟು ಎಲ್ಲಾ ಭಾಷೆಗಳನ್ನು ಮಾತನಾಡುವ ಜನರುಗಳನ್ನು ಎಲ್ಲಾ ಪ್ರಾಂತ್ಯದಲ್ಲೂ ಕಾಣಬಹುದು. ಇದು ಒಂದು ವಿವಿಧತೆಯಲ್ಲಿ ಏಕತೆ ಎನ್ನೋಣವೇ! ?


ಆದರೂ ನಮ್ಮ ಕನ್ನಡಕ್ಕಾಗಿ ಯಾವಗಲೂ ಹೋರಾಡುವ ಹುಟ್ಟು ಕನ್ನಡ ಮನಸ್ಸುಗಳು ಈ ರೀತಿಯ ವಾತವರಣವನ್ನು ಕಂಡು ಕೂರಗುತ್ತಿರುವುದು ನವ ತರುಣ ಜನಾಂಗಕ್ಕೆ ಮುಂದೆ ಎಚ್ಚರದಿಂದ ಹೆಜ್ಜೆ ಇಡಬೇಕಾದ ದಿನಗಳಿಗೆ ಎಚ್ಚರಿಕೆಯಾಗಿದೆ.

ಕರ್ನಾಟಕ ಎಂದರೇ ಕೇವಲ ಕನ್ನಡ ಮಾತನ್ನಾಡುವ ಭಾಷೆಯಲ್ಲ. ಅದಕ್ಕೆ ಸುಧಿರ್ಘ ಇತಿಹಾಸವಿದೆ, ಅಗಾಧ ಸಂಸ್ಕೃತಿಯಿದೆ. ಉನ್ನತ ಸಂಸ್ಕಾರವಿದೆ ಮತ್ತು ಹಲವು ಮಹನೀಯರ ಪರಿಶ್ರಮದ ಶ್ರೀಮಂತ ಸಂಪತ್ತು ಇದೆ. ಅದನ್ನು ನಾವುಗಳು ನಮ್ಮ ನಿತ್ಯ ಜೀವನದಲ್ಲಿ ಉಸಿರಾಗಿ ಉಳಿಸುವುದು ನಮ್ಮಗಳ ಕರ್ತವ್ಯವಾಗಿದೆ. ಯಾಕೆಂದರೇ ನಮ್ಮ ಕನ್ನಡತನವನ್ನು ಕನ್ನಡಿಗರಲ್ಲದೇ ಬೇರೆಯವರೂ ಬಳಸುವುದು/ಊಳಿಸಲಾರರು.


ಅದ್ದರಿಂದ ಹೀಗಾಗಲೇ ನಮ್ಮ ಕರ್ನಾಟಕದ ಹೃದಯ ಭಾಗವಾದ ನೆಚ್ಚಿನ ಐ.ಟಿ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಶೇ. ೩೦ ಕ್ಕೆ ಇಳಿದಿರುವ ಸಂದರ್ಭದಲ್ಲಿ ನಾವುಗಳು ಹೇಗೆ ನಮ್ಮ ಆಡು ಭಾಷೆಯನ್ನು, ನಮ್ಮ ಸಂಸ್ಕೃತಿಯನ್ನು ನಮ್ಮ ಜೊತೆಯಲ್ಲಿ ನಮ್ಮ ಮನೆ ಮನಗಳಿಂದ ಪ್ರಾರಂಭಿಸಿ ನಮ್ಮ ಮಕ್ಕಳಿಗೆ ಬಳುವಳಿಯಾಗಿ ಕೊಡುವೇವು? ಮತ್ತು ಇದನ್ನು ನೋಡಿ ಹೊರ ರಾಜ್ಯದಿಂದ ಬಂದಿರುವ ನಮ್ಮ ಎಲ್ಲಾ ಬಂಧುಗಳು ಸಹ ನಮ್ಮ ನಾಡು ನುಡಿಯ ಏಳ್ಗೆಗೆ ಯಾವ ರೀತಿಯಲ್ಲಿ ಕೈ ಜೋಡಿಸುವ ಕೆಲಸಕ್ಕೆ ಪ್ರೇರಪಿಸುವೆವು ಎಂಬುದು ಮಿಲಿಯನ್ ಡಾಲರ್ ಪ್ರಶ್ನೇ.


ನಮ್ಮ ರಾಷ್ಟ್ರ ಹಳ್ಳಿಗಳ ದೇಶ. ಹಳ್ಳಿಗಳಲ್ಲಿ ಈ ರೀತಿಯ ಮೇಲಿನ ಕೂಗುಗಳು ವಿರಳವೇ ಎನ್ನಬಹುದು. ಅದರೇ ಇಂದು ನಮ್ಮ ಹಳ್ಳಿಗಳಲ್ಲಿ ಎಷ್ಟುಮಂದಿ ಇದ್ದಾರೆ ಎಂದರೇ ಹಲವು ಹಳ್ಳಿಗಳು ವಿದ್ಯಾವಂತ ತರುಣರುಗಳಿಲ್ಲದೆ ಬೀಕೋ ಎನ್ನುತ್ತಿವೆ. ಯಾಕೇ ಹೀಗೆ? "ಹೊಟ್ಟೆ ಪಾಡು ಸ್ವಾಮಿ" ಎನ್ನುವ ಉತ್ತರ. ಹೌದು! ಯಾರೊಬ್ಬರೂ ಅದೇ ಹೊಲ, ಉಳಿಮೆ ಎಂದು ತಮ್ಮನ್ನು ತಾವುಗಳು ತೊಡಗಿಸಿಕೊಳ್ಳುವುದಿಲ್ಲ. ಸ್ವಲ್ಪ ಓದಿದರೇ ಸಾಕು ಅವರುಗಳ ಅಪ್ಪ ಅಮ್ಮ ತಮ್ಮ ಮಕ್ಕಳುಗಳನ್ನು ದೊಡ್ಡ ದೊಡ್ಡ ಪಟ್ಟಣಗಳಿಗೆ ಸಾಗು ಹಾಕುತ್ತಾರೆ. ಹೆಚ್ಚು ಹೆಚ್ಚು ಸಂಬಳ ಸಿಗುವ ಉದ್ಯೋಗಗಳನ್ನು ಹರಸಿಕೊಂಡು ಬೆಂಗಳೂರಿನಂತ ಬೃಹತ ನಗರಗಳ ಕಡೆ ಮುಖ ಮಾಡುತ್ತಾರೆ.


ಇಲ್ಲಿ ಬಂದಾಗ ಅವರಿಗೆ ತಿಳಿಯುತ್ತದೆ. ನಾವು ನಿಜವಾಗಿಯೋ ನಾವುಗಳಾ ಎಂದು. ಯಾಕೆಂದರೇ ಉತ್ತಮ ಉದ್ಯೋಗಗಳು ಬೇಕೆಂದರೆ ವಿವಿಧ ರೀತಿಯ ಕೌಶಲ್ಯವಿರಬೇಕು. ತಾನು ತನ್ನ ಕನ್ನಡ ಶಾಲೆ, ಕಾಲೇಜು, ವಿಶ್ವ ವಿದ್ಯಾನಿಲಯದಲ್ಲಿ ಅದೇ ಕನ್ನಡದಲ್ಲಿ ಕಲಿತ ವಿದ್ಯೆ ಮತ್ತು ಮಾತುಗಳು ಲೆಕ್ಕಕ್ಕೆ ಬರುವುದಿಲ್ಲ. ಅಟ್ ಲಿಸ್ಟ್ ಅವನು ವಿಶ್ವ ಭಾಷೆಯಾದ ಇಂಗ್ಲಿಷ್ ಕಮ್ಯುನಿಕೇಶನ್ ನಲ್ಲಿ ಸುಲಲಿತನಾಗಿ ಮಾತನಾಡುವ/ಯೋಚಿಸುವ ಯೋಗ್ಯತೆಯನ್ನು ಹೊಂದಿರಬೇಕು. ಆಗ ಮಾತ್ರ ಇಲ್ಲಿರುವ ಯಾವುದಾದರೂ ಒಂದು ಸಂಸ್ಥೆಯಲ್ಲಿ ಕೆಲಸ ಗ್ಯಾರಂಟಿ ಇಲ್ಲವಾದರೇ ನಾಲ್ಕನೇ ದರ್ಜೆಯ ಕೆಲಸಕ್ಕೆ ಶರಣು ಎನ್ನಬೇಕು.


ಈ ಮೇಲಿನ ಎಲ್ಲಾ ಅನುಭವಗಳಿಂದ ಪ್ರೇರಪಿತನಾಗಿ ಅದೇ ಹಳ್ಳಿಯ ಪಕ್ಕ ಕನ್ನಡದ ಮಣ್ಣಿನ ಮಗ ತಾನು ಮದುವೆಯಾಗಿ, ಮಕ್ಕಳು ಮಾಡಿಕೊಂಡ ಮೇಲೆ ಯೋಚಿಸುತ್ತಾನೆ. ಮುಂದೆ ನನ್ನ ಮಕ್ಕಳು ನನ್ನ ಹಾಗೇ ನರಳುವುದು ಬೇಡ. ನನ್ನ ಮಕ್ಕಳಾದರೂ ಉನ್ನತ ಶಿಕ್ಷಣ ಪಡೆಯಲಿ ಎಂದು ನಿರ್ಧರಿಸಿ, ಅದಕ್ಕೆ ಪ್ರಾರಂಭವೆನ್ನುವಂತೆ ಢಾಳಾಗಿ ಕಾಣಿಸುವ ಇಂಗ್ಲಿಷ್ ಕಾನ್ವೇಂಟ್ ಗಳಿಗೆ ಅಷ್ಟು ಇಷ್ಟು ಉಳಿಸಿ ಸೇರಿಸಿ ಸರಿಕರ ಮುಂದೆ ನನ್ನ ಮಕ್ಕಳು ಮಮ್ಮಿ, ಡ್ಯಾಡಿ, ಅಂಟಿ ಎನ್ನುವ ತುಂಟ ಮಾತುಗಳು ಕಿವಿಯ ಮೇಲೆ ಬಿಳಿಸಿಕೊಂಡು ಸುಖಿಸುತ್ತಾನೆ. ಇಲ್ಲಿ ಮುಖ್ಯವಾಗುವುದು ತಾನು ಮತ್ತು ತನ್ನ ಸಂಸಾರದ ಹೊಟ್ಟೆ ಪಾಡು ಅಲ್ಲಿ. ಅಷ್ಟೋತ್ತಿಗೆ ತನ್ನ ನಾಡು ನುಡಿ ಕಡೆಗಣಿಸಲ್ಪಟ್ಟಿರುತ್ತದೆ. ಯಾಕೆಂದರೇ ಜೀವನ ದೊಡ್ಡದಲ್ಲವಾ.


ಈ ರೀತಿಯ ಪರಿಸ್ಥಿತಿಯನ್ನು ತಂದಿರುವವರು ಯಾರು? ಇದಕ್ಕೆ ಪರಿಹಾರವಿಲ್ಲವೇ. ಮಾತು ಎತ್ತಿದರೇ ಎಲ್ಲಾರೂ ಯಾವುದೋ ಲೋಕದಿಂದ ಬಂದಿರುವ ಇಂಗ್ಲಿಷ್ ಪ್ರಾಡಕ್ಟ್ ರೀತಿಯಲ್ಲಿ ಟಸ್ಸ್ ಪೂಸ್ ಎಂದು ಮಾತನಾಡುವುದೇ ದೊಡ್ದಸ್ತಿಕೇ ಎನ್ನುವಂತಾಗಿರುವುದಾದರೂ ಯಾಕೇ?


ಇದರ ಬಗ್ಗೆ ಪ್ರತಿಯೊಬ್ಬರೂ ಒಂದು ಕ್ಷಣ ಚಿಂತಿಸುವುದು ಇಂದಿನ ಸಮಯಕ್ಕೆ ಅತ್ಯಗತ್ಯ.


ಪ್ರಸಿದ್ಧ ವಿಶ್ವ ವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣವನ್ನು ಅಧ್ಯಯನ ಮಾಡುವ ಕನ್ನಡ ಮಾಧ್ಯಮದ ಹುಡುಗರ ಪಾಡು ಹೇಳಬಾರದು. ಯಾಕೆಂದರೆ ಯಾವುದೇ ಪೂರಕ ಪುಸ್ತಕಗಳು ಬೇಕೆಂದರೇ ಪುನಃ ಇಂಗ್ಲಿಷ್ ಲೇಖಕರ ಕಡೆ ಮುಖ ಮಾಡಿಕೊಂಡು ಅವುಗಳನ್ನು ಅರ್ಥ ಮಾಡಿಕೊಂಡು ಪುನಃ ಕನ್ನಡದಲ್ಲಿ ತಮ್ಮ ಪರೀಕ್ಷೆಗಳಲ್ಲಿ ಉತ್ತರಿಸಬೇಕು. ಆ ಸಮಯದಲ್ಲಿಯೇ ಅವನಿಗೆ ತಿಳಿಯುತ್ತದೆ ನಾನು ಎಲ್ಲಿ ಎಡೆವಿದ್ದೇನೆ ಎಂದು.


ಈ ರೀತಿಯ ಪರಕೀಯ ವಾತವರಣವನ್ನು ಕನ್ನಡ ಕನ್ನಡ ಎಂದು ಕೂಗುವ ನಮ್ಮಗಳ ಜನ, ಸರ್ಕಾರ, ಸಂಸ್ಥೆಗಳು ಎಲ್ಲಾ ರಂಗದಲ್ಲೂ ಹೋಗಲಾಡಿಸಬೇಕು. ಪ್ರೀತಿ ಪಟ್ಟು ಮಾತೃ ಭಾಷೆ, ಸಂಸ್ಕೃತಿಯನ್ನು ತನ್ನಲ್ಲಿ ಇಟ್ಟುಕೊಳ್ಳಲು ತವಕಿಸುವ ಕನ್ನಡ ಜನ ಮನಗಳಿಗೆ ಉತ್ಸಹ ಕೊಡುವಂತ ಕೆಲಸಗಳು ಆಗಲಿ ಎಂದು ಕನ್ನಡಾಂಭೆಯಲ್ಲಿ ಬೇಡುವ ಕನ್ನಡಿಗ!

ಆದರೂ ಈ ರೀತಿಯ ಸಂಧಿಗ್ಧ ಪರಿಸ್ಥಿಯಲ್ಲೂ ಸಹ ಕೆಲವೇ ಕೆಲವರಾದರೂ ತಾವು ಕೆಲಸ ಮಾಡುವ ಜಾಗಗಳಲ್ಲಿ ಕನ್ನಡದಲ್ಲಿ ಉಸಿರು ಬಿಡದಂತಹ ವಾತವರಣ ಇದ್ದರೂ. ತಮ್ಮ ಮನೆಯಲ್ಲಿ ಮಾತೃ ಭಾಷೆ ಬೇರೆಯಾಗಿದ್ದರೂ, ತಾವು ಬೆಳೆದ ಬೆಂಗಳೂರು ಕನ್ನಡ ಮಣ್ಣು ಎಂಬ ಒಂದೇ ಪ್ರೀತಿಯಿಂದ ಕನ್ನಡ ಸ್ನೇಹಿತರ ಜೊತೆಯಲ್ಲಿ ಕನ್ನಡಕ್ಕೆ ಸಂಬಂಧಿಸಿದ ವಿವಿಧ ಸಾಂಸ್ಕೃತಿಕ ವಿಷಯಗಳಾದ ಸಾಹಿತ್ಯ, ಸಂಗೀತ, ಸಿನಿಮಾ, ಹಾಡು, ಭಾವಗೀತೆಗಳನ್ನು ನಿತ್ಯ ತಮ್ಮ ಮನದಲ್ಲಿ ಸಹೃದಯದಿಂದ ಆರಾಧಿಸುವ ಅಪರೂಪದ ಜಾಣ ಜಾಣೆಯರನ್ನು ಈ ಬೆಂಗಳೂರು ನಗರದಲ್ಲಿ ಕಂಡು ನನ್ನ ಮನ ಸುಖಿಸಿದೆ. ಅದಕ್ಕೆ ಯಾರಿಗೇ ಧನ್ಯವಾದಗಳನ್ನು ಅರ್ಪಿಸಬೇಕೂ ತಿಳಿಯದು. ನನಗೆ ಅನ್ನಿಸುತ್ತದೆ. ಈ ರೀತಿಯ ನೆಚ್ಚಿನತನವನ್ನು ಕನ್ನಡದಲ್ಲಿ ಕೊಟ್ಟ ನಮ್ಮ ಕನ್ನಡದ ಎಲ್ಲಾ ರಂಗದ ಸಾಧಕರಿಗೆ ಹೇಳಬೇಕು ಅಲ್ಲವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ