ಶನಿವಾರ, ಅಕ್ಟೋಬರ್ 23, 2010

ವೇದಾವತಿಯಲ್ಲಿ ಹೊಸ ನೀರು...

ನಾವು ಹುಡುಗಿಯರು ಎಷ್ಟು ಸೂಕ್ಷ್ಮ ಎಂಬುದು ನಿನಗೆ ಗೊತ್ತಿಲ್ಲದೇ ಎಷ್ಟೊಂದು ಒರಟು ಒರಟಾಗಿ ವರ್ತಿಸುತ್ತಿದ್ದೆಯಲ್ಲಾ ನನ್ನ ಗೆಳೆಯ. ನಾನು ನಿನ್ನ ಜೊತೆ ನಿನ್ನ ಸ್ನೇಹಕ್ಕಾಗಿ ಕಾತರಿಸಿದ್ದು ಆಗ ನಿನಗೆ ನಾನು ಹೇಳಲಿಲ್ಲ. ಅದು ನನಗೆ ಮತ್ತು ನನ್ನ ಗೆಳತಿ ಸೇವಂತಿಗೆ ಮಾತ್ರ ಗೊತ್ತು. ನಿನ್ನ ಕಂಡ ಆ ದಿನ ಯಾಕೋ ನನ್ನ ಮನ ಹೇಳಿತು "ತಿಳಿಯೇ ಇವನೇ ನಿನ್ನವನು" ಎಂದು. ಯಾಕೋ ಗೊತ್ತಿಲ್ಲ.



ನೀನು ಹೇಗಿದ್ದರೂ ನಿನ್ನ ನಾನು ಒಪ್ಪಿಕೊಳ್ಳುತ್ತೇನೆ. ನೀನು ಯಾರಾಗಿದ್ದರೂ ಎಲ್ಲಾ ಕಟ್ಟಳೆಗಳನ್ನು ನೂಕಿ ನಿನ್ನ ಸೇರಬೇಕು ಮತ್ತು ಸೇರಬಲ್ಲೇ ಎಂಬ ಛಲ ನನ್ನ ಮನದಲ್ಲಿ ಅದು ಹೇಗೆ ಸ್ಥಾಪಿತವಾಯಿತು ದೇವರೆ ಬಲ್ಲ.

ಆ ಮೊದಲ ದಿನ ನೀನು ಎಷ್ಟೊಂದು ಮುಗ್ಧನಾಗಿ ನಿನ್ನ ಆ ಪೋಲಿ ಸ್ನೇಹಿತರ ಜೊತೆ ಹಾಗೆ ಹೀಗೆ ಆವಭಾವ ಮಾಡಿಕೊಂಡು ನಡೆಯುತ್ತಿದ್ದರೆ ನನ್ನ ಎದೆಯಲ್ಲಿ ಢವಢವ ಹೆಜ್ಜೆ ಇಟ್ಟುಕೊಂಡು ನನ್ನ ಹೃದಯದ ಕಡೆ ನೀ ನಡೆದ ಅನುಭವ.

ನೀನು ನನ್ನ ಕಡೆ ಗಮನ ಹರಿಸಲಿಲ್ಲ. ಹೌದು! ಯಾವಾಗಲೂ ಹುಡುಗರ ಕಣ್ಣು ಸುಂದರವಾಗಿ ಕಾಣುವ ಹುಡುಗಿಯರ ಕಡೆಗಲ್ಲವಾ? ನೀನು ಅಂದು ನನ್ನ ಕಂಡಿದ್ದರೆ ಗೊತ್ತಾಗುತ್ತಿತ್ತು. ನಿನ್ನ ನನ್ನ ಅಂತರಾಳದ ಕೂಗು ಒಂದೇ ಎಂದು. ಕಣ್ಣು ಅರಿಯದಿದ್ದರೂ ಹೃದಯ ಅರಿಯಲೇಬೇಕು ಅಲ್ಲವಾ? ಆ ಹೃದಯದ ಪಿಸುಮಾತು ಹರಿಯದಷ್ಟು ಕಲ್ಲು ಹೃದಯದವರು ಹುಡುಗರು.

ನನಗೊ ಗೊತ್ತಿಲ್ಲ, ಹಾಗೆಯೇ ನಿನ್ನನ್ನು ನಾನು ದ್ಯಾನಿಸಲು ಪ್ರಾರಂಭಿಸಿದ ಮೇಲೆ, ಎಂದು ನಾವಿಬ್ಬರು ಹತ್ತಿರಕ್ಕೆ ಬರಲು ಪ್ರಾರಂಭಿಸಿದೇವು ಎಂದು. ಮೊದ ಮೊದಲು ನೀನು ಎಷ್ಟಂದು ಗುಮ್ಮನಾಗಿರುತ್ತಿದ್ದೇ ಅಲ್ಲವಾ? ಅದೇ ಇರಬೇಕು ನನಗೆ ಇಷ್ಟವಾಗಿದ್ದು. ನೀನಾಯಿತು ನಿನ್ನ ಕೆಲಸವಾಯಿತು. ಹತ್ತು ಮಾತಿಗೆ ಒಂದು ಮಾತು. ನನ್ನ ಗೆಳೆತಿಯರು ಹೇಳುತ್ತಿದ್ದರೂ "ಏ ಏನೇ ನಿನಗೆ ಯಾರು ಸಿಗಲಿಲ್ಲವಾ ಇಂಥವನನ್ನು ಇಷ್ಟಪಡುತ್ತಿಯಲ್ಲಾ". ಅದಕ್ಕೆ ನನ್ನ ಉತ್ತರ ಕೇವಲ ಮುಗಳ್ನಗೆ.

ಸ್ವಲ್ಪ ಸ್ವಲ್ಪ ನೀನು ನನಗೆ ಹತ್ತಿರವಾಗುತ್ತಾ ಆಗುತ್ತಾ ನೀನು ಆ ಯಾವ ಭಾವನೆಯೇ ಇಲ್ಲದವನಂತೆ ಸುಮ್ಮನೆ ಗೊತ್ತಿರುವವರು ಎಂಬಂತೆ ಬೇರೆಯವರ ಜೊತೆ ಮಾತನ್ನಾಡಿದಷ್ಟೇ ನನ್ನ ಜೊತೆ ಮಾತನ್ನಾಡುತ್ತಿದ್ದುದು. ನಾನು ನೋಡಿದಾಗೇ ಹುಡುಗರು ಸ್ವಲ್ಪ ಸಲಿಗೆ ಕೊಟ್ಟರೆ ಸಾಕು ಅವರ ನಡವಳಿಯೇ ಏನೋ ಒಂಥಾರವಾಗುತ್ತದೆ. ಇದಕ್ಕೆ ನೀನು ತದ್ವಿರುದ್ಧವಾಗಿದ್ದೇ ನನಗೆ ನಿನ್ನ ಮೆಚ್ಚಲು ಎರಡನೇಯ ಕಾರಣ.

ಆ ನಿನ್ನ ಸರಳತೆ ಮತ್ತು ಬೇರೆಯವರ ಬಗ್ಗೆ ನಿನಗಿರುವ ಕಾಳಜಿ, ನಿನ್ನ ಅಮ್ಮನ ಬಗ್ಗೆ ನಿನಗಿರುವ ಅಕ್ಕರೆ .. ಸ್ನೇಹಿತರ ಬಗ್ಗೆ ಕೊಡುವ ಪ್ರಾಮುಖ್ಯತೆ ಹೀಗೆ ಈ ನಿನ್ನ ಒಂದೊಂದು ನಿನ್ನ ತನವು ನನ್ನನ್ನು ಅತಿ ವೇಗವಾಗಿ ನಿನ್ನ ಬಳಿಗೆ ಸೆಳೆಯಲು ಕಾರಣವಾದವು.

ಯಾವಾಗಲೂ ನಿನ್ನದೇ ದ್ಯಾನವಾಗಿತ್ತು. ಮನದ ಛಾಯ ಮಂಟಪದಲ್ಲಿ ನಿನ್ನ ಚಿತ್ರವನ್ನು ಇಟ್ಟು ನಿನ್ನ ಬಗ್ಗೆ ಗೊತ್ತಿರುವ ಎಲ್ಲ ಪ್ರೀತಿಯ ಗೀತೆಗಳನ್ನು ಗುನುಗುತ್ತಿದ್ದೆ.

ಒಂದು ದಿನ ನಿದ್ದೆಯಲ್ಲಿ ಏನು ಏನೋ ಕನವರಿಸುತ್ತಿದ್ದೆನಂತೆ. ಬೆಳಿಗ್ಗೆ ಅಮ್ಮ ಹೇಳಿದಾಗ ನಿಜವಾಗಿಯೂ ನಾಚಿಕೆಯಾಯಿತು. ಅಂದೇ ಇರಬೇಕು ನಾನು ನಿರ್ಧರಿಸಿದ್ದು. ನನ್ನ ಮನದಾಳದ ಪ್ರೀತಿಯ ಒರತೆಯನ್ನು ನಿನ್ನಲ್ಲಿ ಸುರಿದು ನಾನು ಹಗುರಾಗಬೇಕು ಎಂದು.

ನನಗೆ ನಿನ್ನ ಕಂಡರೆ ಅಂದಿನಿಂದಲೂ ಏನೊ ಭರವಸೆ ನನ್ನನ್ನು ನೀನು ಅಚ್ಚು ಮೆಚ್ಚಾಗಿ ನೋಡಿಕೊಳ್ಳುವೇ ಮತ್ತು ನಾನು ನಿನ್ನ ಹೃದಯದಲ್ಲಿ ಮನದನ್ನೆಯಾಗಿ ಇರಬಹುದು. ಮುಂದಿನ ನನ್ನ ಜೀವನ ನಿನ್ನ ಆ ಪುಟ್ಟ ಸಂಸಾರವಾದ ನಿನ್ನ ಅಮ್ಮ ,ನೀನು ಮತ್ತು ನಾನು ಎಂದು ಅಷ್ಟೊಂದು ಬೆಚ್ಚನೆಯ ಚಂದದ ಕನಸನ್ನು ನಿರ್ಮಿಸಿಕೊಂಡು ಅಲ್ಲಿಯೇ ಮನೆಯತುಂಬ ಹಾಗೇ ಹೀಗೆ ಅಲ್ಲಿ ಇಲ್ಲಿ ಅಚ್ಚುಕಟ್ಟದ ಶುಭ್ರತೆಯನ್ನು ತಂದು ಬಿಟ್ಟಿದ್ದೇ.

ನಾನು ನಿನ್ನಲ್ಲಿ ನನ್ನ ಆಸೆಯನ್ನು ಹೇಳಿಕೊಳ್ಳಬೇಕು ಎಂದು ಅಂದು ಅಲ್ಲಿ ನೀನು ಬರುವ ದಾರಿಯಲ್ಲಿ ಚುಮುಚುಮು ಮುಂಜಾನೆಯ ಆ ಸವಿ ಚಳಿಯಲ್ಲಿ ಎಷ್ಟೊಂದು ಹೊತ್ತು ಕಾದಿದ್ದೇ ಎಂದು ನೀನು ಬಂದ ಮೇಲೆಯೇ ಗೊತ್ತಾಗಿದ್ದು.

ನಾನು ನನ್ನ ಆ ಒಂದು ಮಾತು ಹೇಳಲು ನಿನ್ನ ಮುಂದೆ ಅಪರಿಚಿತಳೇನೋ ಎಂಬಂತೆ ನಿಂತಿರುವಾಗ ನೀನು ಮುದ್ದು ಒರಟನಾಗಿ ಏನೊಂದು ಮಾತನಾಡದೇ, "ಏನು ಹೇಳಮ್ಮಾ" ಎನ್ನಬೇಕೇ? ಆಗೊಂತು ನಿನಗೆ ಸರಿಯಾಗಿ ಬಾರಿಸಬೇಕೆಂಬ ಕೋಪ ಬಂದಿತ್ತು. ಅದೇನೋ ಗೊತ್ತಿಲ್ಲ. ನಿಮ್ಮಂತ ಒಳ್ಳೆ ಹುಡುಗರು ಪ್ರೀತಿಯನ್ನು ಕೊಡುವ ಹುಡುಗಿಯರಿಗೆ ಅದೇಕೇ ಅಷ್ಟೊಂದು ಗೊಳು ಹೊಯ್ದು ಕೊಳ್ಳಿತ್ತಿರಾಪ್ಪ. ನಾನು ಅದೇಗೋ ಮನಸ್ಸನ್ನು ಗಟ್ಟಿ ಮಾಡಿಕೊಂಡು ಹೇಳಿದಾಗ, ನೀನು ನನಗೆ ಎಲ್ಲ ಗೊತ್ತು ಎಂಬಂತೆ ನಗುವುದೇ. ನಿನಗೂ ನನ್ನ ಕಂಡರೆ ಪ್ರೀತಿ ಇದ್ದರೂ ನಾನೇ ಹೇಳಲಿ ಎಂದು ಇಷ್ಟಂದು ಸತಾಯಿಸುವುದೇ ಮುದ್ದು ಗಮಾರ!

ಅಂದೇ ಇರಬೇಕು ಮೂಕ್ಕಾಲುಪಾಲು ದಂ-ಪತಿ ಗಳಂತಾದೆವು. ಅಂದೇ ಸಂಜೆ ನೀನು ನಿನ್ನ ಅಮ್ಮನಿಗೆ ನನ್ನ ತೋರಿಸಿದಾಗಲಂತೋ ನನಗೆ ನನ್ನ ಅಮ್ಮನನ್ನೇ ಕಂಡಷ್ಟು ಸಂತೋಷವಾಯಿತು. ಅವರಂತೂ ನಿನ್ನಂತೆ ಅಲ್ಲ ಬಿಡು ಎಷ್ಟು ಸಲಿಸಾಗಿ ಹೇಗೆ ನನ್ನ ಬಗ್ಗೆ ವಿಚಾರಿಸಿದರು. ಆಗ ನಿನ್ನ ಅಮ್ಮನಿಗೆ ಹೇಳಬೇಕೆನಿಸಿತ್ತು. ಸ್ವಲ್ಪ ನಿಮ್ಮ ಮಗನಿಗೆ ಬುದ್ಧಿ ಹೇಳಿ ಎಂದು. ಮೊದಲ ದಿನವೇ ಯಾಕೆ ಮಾತನ್ನಾಡುವುದು ಎಂದು ಸುಮ್ಮನಿರಬೇಕಾಯಿತು.

ಎಷ್ಟೊಂದು ವಸಂತಗಳು ಕಳೆದು ಹೋಗಿದ್ದಾವೆ. ವೇದಾವತಿಯಲ್ಲಿ ಹೊಸ ನೀರು ಹಲವು ಭಾರಿ ಹರಿದಿವೆ. ಈಗಲೂ ನೀನು ನನಗೆ ಆ ಮುದ್ದು ಗಮಾರನೇ.. ಲೈಫು ಅಂದ್ರೇ ಇಷ್ಟೇ ಅಲ್ಲ ಅಲ್ವಾ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ