ಮಂಗಳವಾರ, ಜುಲೈ 26, 2011

ದಟ್ಟ ಕಾನನಗಳಲ್ಲಿ ಹೆಜ್ಜೆ.....

"ದೇಶ ಸುತ್ತ ಬೇಕು ಕೋಶ ಓದಬೇಕು"

ಹೌದು! ನಾವು ನಮ್ಮದೇಯಾದ ವಿವಿಧ ಬಿಡುವಿಲ್ಲದ, ಬಿಡುವಿನ ಸಮಯಗಳನ್ನು ಹತ್ತು ಹಲವು ರೀತಿಗಳಲ್ಲಿ ನಮ್ಮ ಸುತ್ತ ಮುತ್ತಲಿನಲ್ಲಿ ಕಳೆದು ಬಿಡುತ್ತೇವೆ.

ನಮ್ಮ ಹಿರಿಯರು, ನಮ್ಮ ತಂದೆ ತಾಯಂದಿರುಗಳು ಕೆಲವೊಮ್ಮೆ ಅವರ ಸಂಬಂಧಿಕರ ಊರು ಅಥವಾ ಅವರ ಜೆಲ್ಲೆಯ ಹತ್ತಿರದ ಪ್ರದೇಶಗಳನ್ನು ಬಿಟ್ಟು ಬೇರೆ ಯಾವುದೇ ಸ್ಥಳಗಳನ್ನು ಅವರ ಜೀವಮಾನದಲ್ಲಿಯೇ ನೋಡದೇ ತಮ್ಮ ಆಯಸ್ಸುಗಳನ್ನು ಪೊರೈಸಿರುತ್ತಾರೆ.

ಆ ರೀತಿಯ ಪರ್ಯಾಟನೆಯ ಪ್ರವೃತ್ತಿಯನ್ನು ಕನಸು ಮನಸಿನಲ್ಲೂ ಯೋಚಿಸಿರುವುದಿಲ್ಲ. ಕೇವಲ ಯಾವುದೇ ಕೆಲಸ ಕಾರ್ಯ ನಿಮಿತ್ತಾ ವಿವಿಧ ಹತ್ತಿರದ ಊರುಗಳನ್ನು, ಸ್ಥಳಗಳನ್ನು ಮಾತ್ರ ತಮ್ಮ ಜೀವ ಮಾನದಲ್ಲಿ ಕಂಡಿರುವಂತಹ ನೂರಾರು ಮಂದಿಗಳನ್ನು ನಮ್ಮ ನಿಮ್ಮ ನಡುವೆ ಕಾಣಬಹುದು.

ಅದಕ್ಕೆ ಇರಬೇಕು ಮೇಲೆ ಉಲ್ಲೇಖಿಸಿರುವ ಒಗಟು ಹುಟ್ಟಿಕೊಂಡಿರುವುದು ಅಲ್ಲವಾ?

ಆದರೂ ಎಷ್ಟು ಮಂದಿ ತಮ್ಮ ಜೀವಿತಾವದಿಯಲ್ಲಿ ಎಲ್ಲಾ ಪುಸ್ತಕಗಳನ್ನು ಓದುತ್ತಾರೆ ಮತ್ತು ಓದಲು ಅವರಿಗೆ ಸಮಯಾವಕಾಶ ಎಲ್ಲಿ ಸಿಕ್ಕಿರುತ್ತದೆ? (ವಿದ್ಯಾವಂತರಾಗಿದ್ದರೆ)

ನಮಗೆಲ್ಲಾ "ಪ್ರವಾಸ" ಎಂಬ ಪದ ಕಿವಿಗೆ ಬಿದ್ದಿದ್ದು ಅಂದರೇ ನಮ್ಮ ವಿದ್ಯಾರ್ಥಿ ದೆಸೆಯಲ್ಲಿಯೇ. ಶಾಲೆಗಳಲ್ಲಿ ಶಿಕ್ಷಕರು ಪ್ರವಾಸವನ್ನು ಹಮ್ಮಿಕೊಂಡಾಗ ನಮ್ಮ ತಂದೆ ತಾಯಿಯರಿಂದ ಒತ್ತಾಯಾಪೂರ್ವಕವಾಗಿ ಅನುಮತಿಯನ್ನು ಕಾಡಿಬೇಡಿ ಗಿಟ್ಟಿಸಿಕೊಂಡು ಹೋಗಲು ತಯಾರಿ ನಡೆಸಿರುತ್ತೇವೆ. ಅಲ್ಲಿಯು ಸಹ ನಮ್ಮ ಕುಟುಂಬದವರುಗಳು ಒಲ್ಲದ ಮನಸ್ಸಿನಿಂದ ಓ.ಕೆ ಅಂದಿರುತ್ತಾರೆ. ಯಾವುದೇ ಪೋಷಕರು ಮನಸ್ಸಪೂರ್ವಕವಾಗಿ ನಮ್ಮನ್ನು ಪ್ರವಾಸಕ್ಕೆ ಹೋಗಲು ಬಿಟ್ಟಿರುವುದಿಲ್ಲ. ಅವರುಗಳಿಗೆ ಏನೋ ಭಯ!! ಅಥವಾ ಅವರುಗಳಿಗೆ ಅವರ ಪೋಷಕರುಗಳು ಹೀಗೆ ಮಾಡಿರುವುದರ ನೆನಪೇನೋ?

ಹೀಗಾಗಿ ನಮ್ಮ ಸಂಸ್ಕೃತಿಯಲ್ಲಿ ಈ ಉನ್ನತವಾದ ವಿಷಯ ಕೆಲಸಕ್ಕೆ ಬಾರದಾಗಿರುತ್ತದೆ. ಇದು ಅಷ್ಟೇನೂ ಪ್ರಮುಖ್ಯವಾದ ವಿಷಯ ಮತ್ತು ಅಭ್ಯಾಸ ಅನಿಸಿರುವುದಿಲ್ಲ. ಇದಕ್ಕೆ ಹತ್ತು ಹಲವಾರು ಕಾರಣಗಳು ನಮ್ಮ ನಮ್ಮಲ್ಲಿಯೇ ಇವೆ.

ಆದರೂ ಸಹ ಹಳ್ಳಿಯ ಜೀವನಕ್ಕೆ ಹೋಲಿಸಿದರೇ ನಗರದ ವಿವಿಧ ಸಂಘ ಸಂಸ್ಥೆಗಳು, ಶಾಲೆಗಳು, ಕಾಲೇಜುಗಳು ಮತ್ತು ಕಛೇರಿಯ ಉದ್ಯೋಗಿಗಳು ಅದರ ಪ್ರಾಮುಖ್ಯತೆಯನ್ನು ಅರಿತು ತಮ್ಮ ದೈನಂದಿನ ಮಾಮೊಲಿ ಜೀವನದಿಂದ ಕೆಲವು ಸಮಯ ವಾರಾಂತ್ಯಾದಲ್ಲಿ ತುಂಬ ವೈವಿಧ್ಯಮಯವಾಗಿ ಕಳೆಯಲು ಒಂದು -ಎರಡು ದಿನ ಅಥವಾ ಒಂದು ವಾರದ ದೀರ್ಘ ಪ್ರವಾಸಗಳನ್ನು ಹಮ್ಮಿಕೊಳ್ಳುತ್ತಾರೆ.

ನಾವುಗಳು ನಮ್ಮ ಪ್ರಪಂಚದ ಪೂರ್ಣ ಬಾಗದ ಕೇವಲ ಒಂದು ಚುಕ್ಕೆಯಷ್ಟನ್ನು ಮಾತ್ರ ತಮ್ಮ ಜೀವನದಲ್ಲಿ ಅರಿಯುವ ಮೊಲಕ ತಮ್ಮ ಮನೋಸಂತೋಷವನ್ನು ಮತ್ತು ಮನೋವಿಕಾಸವನ್ನು ಮಾಡಿಕೊಳ್ಳಲು ಸಾಧ್ಯ.

ಈ ಪ್ರವಾಸದಲ್ಲಿ ನಾವು ವಿವಿಧ ಜನ, ಪರಿಸರ, ಪದ್ಧತಿ, ಜನರು, ಉಡುಗೆ, ತೊಡುಗೆ, ಆಚಾರ, ವಿಚಾರ, ನಿಸರ್ಗ ವೈವಿಧ್ಯತೆ, ಜೀವ ಸಂಕುಲ.. ಹೀಗೆ ನೂರಾರು ಗೊತ್ತಿರದ ಹೊಸ ವಿಷಯಗಳನ್ನು ಅರಿಯುವ ಮೂಲಕ ನಮ್ಮಲ್ಲಿನ "ಕೂಪ ಮೊಂಡುಕತನವನ್ನು" ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು. ಹಾಗೆಯೇ ನಮ್ಮನ್ನೇ ನಾವು ಈ ಪ್ರಪಂಚದಲ್ಲಿ ಗುರುತಿಸಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ.

ಹಾಗೆಯೇ ವಿವಿಧ ರೀತಿಯಲ್ಲಿ ಪ್ರವಾಸದಲ್ಲಿ ಸ್ವಲ್ಪ ಸಾಹಾಸಮಯವಾಗಿ ನಿಸರ್ಗದ ವೈವಿಧ್ಯತೆಯೊಂದಿಗೆ ಕೆಲವು ಗಳಿಗೆ ಕಳೆಯಬೇಕು ಅಂದರೇ (ಟ್ರೆಕ್ಕಿಂಗ್) ಚಾರಣಾ ಅತ್ಯುತ್ತಮವಾದದ್ದು.

ಈ ಚಾರಣಕ್ಕೆ ಹೇಳಿ ಮಾಡಿಸಿದ ಸುಂದರ ಭವ್ಯವಾದ ನಿಸರ್ಗ ತಾಣಗಳು ನಮ್ಮ ಕರ್ನಾಟಕ ರಾಜ್ಯದಲ್ಲಿರುವುದು ನಮ್ಮೆಲ್ಲಾರ ಅದೃಷ್ಟವೇ ಸರಿ!

ಈ ಚಾರಣಕ್ಕೆ ಬೇಕಾಗಿರುವುದು ಸೂಕ್ಷ್ಮ ಪ್ರಕೃತಿ ಸ್ನೇಹಿ ಮನಸ್ಸು. ಯಾವುದೇ ಸಂದರ್ಭವನ್ನು ಖುಷಿಯಾಗಿ ಅನುಭವಿಸುವ ಭಾವನೆಯನ್ನು ಹೊಂದಿರುವ ಕೆಲವೇ ಮಂದಿಯ ಒಂದು ಟೀಂ ಇದ್ದರೆ ಅದು ತುಂಬ ಮನರಂಜನೆಯಾಗಿ ನಮ್ಮಲ್ಲಿಯೇ ನಾವುಗಳು ಈ ದಟ್ಟ ಅರಣ್ಯ, ಉನ್ನತ ಶಿಖರ, ಹಕ್ಕಿಗಳ ಕಲರವ, ಜುಳುಜುಳು ಹರಿಯುವ ಜಲಧಾರೆಗಳು, ಕಲ್ಲು ಮಣ್ಣುಗಳ ದಾರಿಯಲ್ಲಿ ಕಳೆದು ಸಾಗುತ್ತಾ ಹೋಗುವ ರೋಮಾಂಚನವನ್ನು ಅನುಭವಿಸಬಹುದು.



ಅಲ್ಲಿ ನಾವು ಕಾಲಿಟ್ಟ ತಕ್ಷಣ ನಮಗೆ ತಿಳಿಯದ ರೀತಿಯಲ್ಲಿ ಪ್ರಕೃತಿಯ ಮಹಾನ್ ಮುಖ್ಯ ವಿಸ್ಮಯಗಳ ನಡುವೆ ಕೇವಲ ಪ್ರೇಕ್ಷಕರಾಗಿ ಪ್ರತಿ ನಿಮಿಷಗಳನ್ನು ಅದರಲ್ಲಿ ಕರಗಿ, ಈ ನಮ್ಮ ಜಂಜಾಡದ ವ್ಯವಸ್ಥೆಯ ನೆನಪು ಸಹ ಬಾರದ ರೀತಿಯಲ್ಲಿ ಮೈಮರೆಯಬಹುದು. ನಾವುಗಳು ಪ್ರಕೃತಿಯ ಆ ವಿಸ್ಮಯವನ್ನು ನಮ್ಮ ಮನದಲ್ಲಿಯೇ ಗುಣಕಾರ ಭಾಗಕಾರ ಮಾಡಿಕೊಳ್ಳಬಹುದು ಮತ್ತು ಒಂದು ಥ್ಯಾಂಕ್ಸ್ ನ್ನು ಆ ಪ್ರಕೃತಿ ಮಾತೆಗೆ ಹೇಳದೆ ಇರಲಾರಿರಿ.

ಹೌದು! ಅದಕ್ಕೆ ಇರಬೇಕು ನಮ್ಮ ಪುರಾಣ, ಪುಣ್ಯ ಕಥೆಗಳ ಎಲ್ಲಾ ಮಹಾನ್ ಸಾಧಕರ ತಾಣಗಳು ಬಹು ದೂರದಲ್ಲಿವೆ. ನಾಗರೀಕತೆಯ ಯಾವ ಸೋಂಕು ಇಲ್ಲದ ಪೂರ್ಣ ಪೂರ್ಣ ಪ್ರಕೃತಿ ಮಾತೆಯ ಕೊಡುಗೆಯಾದ ದಟ್ಟ ಅರಣ್ಯ, ಉನ್ನತ ಮಹಾನ್ ಶಿಖರದಲ್ಲಿವೆ. ಎಲ್ಲಾ ಕೃತಕವೆನಿಸುವ ವ್ಯವಸ್ಥೆಯಿಂದ ಕಳಚಿಕೊಂಡು ಅದರದೇಯಾದ ಶ್ರೀಮಂತವಾದ ವರ್ಣನೆಗೆ ನಿಲುಕಲಾರದ ಸನ್ನಿವೇಶದ ಸಜ್ಜನಿಕೆಯಲ್ಲಿವೆ.

ಈ ರೀತಿಯ ಪರಿಸರದ ವರ್ಣನೆಯನ್ನು ನಾವು ನಮ್ಮ ಪ್ರಸಿದ್ಧ ಲೇಖಕರ ಕಾದಂಬರಿ, ಕತೆ, ಕವಿತೆಗಳಲ್ಲಿ ಕೇಳಿದ್ದೇವೆ. ಹಾಗೆಯೇ ಇತ್ತೀಚಿನ ಹಲವು ಸಿನಿಮಾಗಳಲ್ಲಿ ನೋಡಿದ್ದೇವೆ.

ಆದರೇ, ಆ ರೀತಿಯ ವರ್ಣನೆಯನ್ನು ನಾವುಗಳು ಯಾವ ರೀತಿಯಲ್ಲಿ ಕಲ್ಪಿಸಿಕೊಂಡಿರುತ್ತೇವೆ ಎಂಬುದು ಈ ರೀತಿಯ ದಟ್ಟ ಕಾನನಗಳಲ್ಲಿ ಹೆಜ್ಜೆ ಇಟ್ಟಾಗಲೇ ಅದರ ಪರಿಣಾಮದ ಮಹಿಮೆ ನಮಗೆ ಗೊತ್ತಾಗುವುದು.

ನನಗೆ ಅನಿಸುತ್ತದೆ ಕುವೆಂಪು,ಕಾರಂತ ಮತ್ತು ತೇಜಸ್ವಿಯವರು ಯಾಕೆ ಹಾಗೇ ತಮ್ಮ ಕೃತಿಗಳಲ್ಲಿ ಪ್ರಕೃತಿಯ ಮಹಾನ್ ವರ್ಣನೆಯನ್ನು ಹಾಗೆ ಮಾಡಿರುವವರು ಎಂದರೇ ಅವರು ಜೀವಿಸುತ್ತಿದ್ದ ಪರಿಸರವೇ ಅವರಿಗೆ ಪ್ರೇರಕವಾಗಿತ್ತು. ಅದೇ ಅವರ ಮೊಲಕ ಹಾಗೆ ಬರೆಯಿಸಿತು ಅನಿಸುತ್ತದೆ.

ಒಂದೇ ಭೂಮಂಡಲವಾಗಿ ಪ್ರತಿಯೊಂದರಲ್ಲೂ ವಿಭಿನ್ನವಾಗಿರುವ ಈ ದಿವ್ಯ ಪರಿಸರದ ಮಾಂತ್ರಿಕತೆಯ ಜಾದು ನಮ್ಮನ್ನು ಅಲ್ಪರನ್ನಾಗಿ ಮಾಡುತ್ತದೆ. ನಾವುಗಳು ನಮ್ಮ ಮಿತಿಯನ್ನು ಅರಿಯುವಂತೆ ಮಾಡುತ್ತದೆ.

ಅಲ್ಲಿರುವ ವಿವಿಧ ರೀತಿಯ ಸಸ್ಯ ಜೀವ ಸಂಕುಲ, ಮರ, ಗಿಡ, ಬಳ್ಳಿಗಳು, ವಿವಿಧ ಜಾತಿಯ ಪಕ್ಷಿಗಳ ಕಲರವ, ವಿವಿಧ ಶಬ್ಧಗಳು. ಮುಂಜಾನೆಯೊಂದು ರೀತಿ, ಮಧ್ಯಾಹ್ನ ಒಂದು ರೀತಿಯಲ್ಲಿ ಮತ್ತು ಸಂಜೆ - ರಾತ್ರಿ ಒಂದು ರೀತಿಯಲ್ಲಿ ಪ್ರಕೃತಿಯು ನವಚೈತನ್ಯವನ್ನು ಗಳಿಗೆ ಗಳಿಗೂ ಬದಲಾಗುವ ಆ ರಂಗಿನ ರಂಗ ಮಂಟಪಕ್ಕೆ ಸೂತ್ರಧಾರ ಅವನೇ ಅವನು ಎಂಬುದು "ಚಾರಣ"ಕ್ಕೆ ಬಂದ ಪ್ರತಿಯೊಬ್ಬರೂ ಅನುಭವಿಸುವುದರಲ್ಲಿ ಸಂಶವಿಲ್ಲ.

ಅತಿ ಎತ್ತರದ ಶಿಖರವನ್ನು ಏರಿ, ಅಲ್ಲಿಂದ ಮುಂದೆ ಭವ್ಯ ಆಕಾಶವೇ ಕೊನೆ ಎಂಬುದು ಗೊತ್ತಾದಾಗ, ಅಲ್ಲಿಂದ ಎತ್ತ ನೋಡಿದರೂ ದಟ್ಟ ಹಸಿರು ಕಾಡು, ಪ್ರತಿ ಮರವೂ ತಾನು ಆ ಶಿಖರವನ್ನು ಮುಟ್ಟಬೇಕು ಎಂಬಂತೆ ನವ ಚೈತನ್ಯದಿಂದ ಮುಗಿಲು ನೋಡುತ್ತಿರುವುದನ್ನು ಗಮನಿಸಿದಾಗ, ನಾವೇ ಧನ್ಯ. ಈ ಶಿಖರಗಳಿಗೆ ಮುತ್ತಿಕ್ಕುತ್ತಿದ್ದೇವೇ ಎಂಬಂತೆ ತೇಲುತ್ತಿರುವ ಬಿಳಿ ಮೋಡಗಳನ್ನು ನೋಡುವಾಗ ನಾವುಗಳು ಧನ್ಯ ಮಾತ್ರ. ಈ ಉನ್ನತವಾದ ಪ್ರದೇಶದಲ್ಲಿ ನನ್ನ ಸಂಚಾರವಿದೆ ಎಂದು ಬೀಗುವ ತಂಗಾಳಿಯನ್ನು ನಮ್ಮ ದೇಹ ಸ್ಪರ್ಷಿಸಿದಾಗ ಮಾತೇ ಮೌನಕ್ಕೆ ಶರಣು ಶರಣು ಅನ್ನುತ್ತದೆ.



ಈ ಪ್ರದೇಶದಲ್ಲಿ ನನಗೆ ಇನ್ನೂ ಏನೂ ಕೆಲಸವಿಲ್ಲ ಎಂಬಂತೆ ಮೌನವಾದ ಆ "ನಿಶಬ್ಧ" ವನ್ನು ಕಂಡಾಗ ನಿಜವಾಗಿಯೂ ನಮಗೆಲ್ಲಾ ಮೂಕಪ್ರೇಕ್ಷಕನಾಗಿರುವುದೇ ಕಾಯಕ.

ಪ್ರಕೃತಿಯ ಈ ಎಲ್ಲಾ ಮಹಾನ್ ಪ್ರತಿನಿಧಿಗಳೇ ದಿವ್ಯ ಧ್ಯಾನದಲ್ಲಿ ಕುಳಿತಿರುವಾಗ ನಾವುಗಳು ಸಹ ಏನೊಂದು ಮಾತು ಬಾಯಿಗೆ ಬಾರದೇ ತನ್ನಿಂದ ತಾನೇ "ಧ್ಯಾನಸ್ಥ" ವಾಗುವುದು, ಈ ಪ್ರಕೃತಿಯ ಮಹಿಮೆಯನ್ನು ಸೂಚಿಸುತ್ತದೆ.

(ಈ ಮೇಲಿನ ಭಾವನೆಯನ್ನು ನನಗೆ ಉಂಟು ಮಾಡಿದ್ದು, ನಾವುಗಳು ಕೂಡಚಾದ್ರಿಯ ಅತಿ ಎತ್ತರದ ಬೆಟ್ಟವನ್ನು ಏರಿ ಸೂರ್ಯಾಸ್ತವನ್ನು ನೋಡಿದಾಗ. ನನ್ನ ಎಲ್ಲಾ ಸಂಗಡಿಗರು ಮೌನಕ್ಕೆ ಶರಣಾಗಿದ್ದು ನಿಜವಾಗಿಯೂ ಈಗಲೂ ನನಗೆ ವಿಸ್ಮಯ ಮತ್ತು ಆಶ್ಚರ್ಯವನ್ನುಂಟು ಮಾಡುತ್ತದೆ! ಅಂದಿನ ಆ ಕ್ಷಣ)

ಈ ರೀತಿಯ ಪ್ರಕೃತಿಯ ನಿತ್ಯ ದಿನಚರಿ ಯಾವುದೇ ವೇಳೆ, ಯಾವುದೇ ದಿನ ನಿಲ್ಲದೇ ನಿರಂತರವಾಗಿ ಚಾಲನೆಯಲ್ಲಿರುವುದು ನಮ್ಮ ಬದುಕಿಗೆ ಒಂದು ಪಾಠವೇ ಸರಿ!

ನಮ್ಮ ಶಿಕ್ಷಣದಲ್ಲಿ ಈ ರೀತಿಯ ವಿವಿಧ ಚಟುವಟಿಕೆಗಳನ್ನು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಿ ಪ್ರಕೃತಿಯಲ್ಲಿ ಒಡನಾಡುವಂತೆ ಮಾಡವಂತಾಗಬೇಕು. ಪ್ರಕೃತಿಯಲ್ಲಿ ಮಕ್ಕಳೂ ಬೇರೆಯುವಂತೆ ಅನುವು ಮಾಡಿ ಕೊಡಬೇಕು.



ಹಾಗೆಯೇ ಈ ರೀತಿಯ ತಾಣಗಳನ್ನು ಹೊಂದಿರುವ ನಮ್ಮ ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಜವಾಬ್ದಾರಿ ಯಾರೇಲ್ಲಾ ಈ ರೀತಿಯ ಪ್ರವಾಸ ಕೈಗೊಳ್ಳುತ್ತಾರೋ ಅವರ ಮೇಲಿದೆ. ನಾವುಗಳು ಅವುಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಲು ಯಾವುದೇ ಅಧಿಕಾರವಿಲ್ಲ. ಕೇವಲ ಅವನ್ನು ನೋಡಿ ಆನಂದಿಸಿ ಬರಬೇಕು ಅಷ್ಟೇ ವಿನಾಃ ನಮ್ಮ ನಾಗರೀಕತೆಯ ವಿವಿಧ ವ್ಯವಸ್ಥೆಯ ಕುರುವುಗಳನ್ನು ಅಲ್ಲಿ ಪ್ರತಿಷ್ಠಾಪಿಸುವುದಲ್ಲಾ. ಹಾಗೆಯೇ ಅದರ ಬಗ್ಗೆ ಅರಿವನ್ನು ಎಲ್ಲರಿಗೂ ಮಾಡಿಕೊಡಬೇಕಾಗಿರುವುದು ಇಂದಿನ ಸಂದರ್ಭದಲ್ಲಿ ಅತ್ಯವಶ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ