ಬುಧವಾರ, ಆಗಸ್ಟ್ 3, 2011

ಸ್ನೇಹಲೋಕ

ನೀ ಇವನ/ಇವಳ ಜೊತೆ ಆಟ ಆಡು. ನಾಳೆಯಿಂದ ನೀನು ಇವನ ಜೊತೆಯಲ್ಲಿ ಶಾಲೆಗೆ ಹೋಗು. ಇವನ/ಇವಳ ಜೊತೆಗೆ ಶಾಲೆಯಲ್ಲಿ ಕುಳಿತುಕೋ. ಹೀಗೆ ನಮಗೆ ನಮ್ಮ ಹೆತ್ತವರು ಪರರ ಜೊತೆಯಲ್ಲಿ ನಾವುಗಳು ಹೇಗೆ ನಮ್ಮ ಪರಿಚಯವನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟಿರುತ್ತಾರೆ.

ಅವರಿಗೆ ಏನೋ ಒಂದು ರೀತಿಯಲ್ಲಿ ನಮ್ಮ ಮಗ/ಮಗಳು ಮನೆಯಿಂದ ಹೊರಗಡೆಯಲ್ಲಿ ಇದ್ದಾಗ ಯಾರಾದರೂ ಪರಿಚಯದವರು ಜೊತೆಯಲ್ಲಿ ಇರಲಿ ಎಂಬ ಆಸೆ. ಮನೆಯಲ್ಲಿ ಅವರ ಕಣ್ಣಳತೆಯಲ್ಲಿ ಇರುತ್ತೇವೆ ಎಂಬ ಏನೋ ನೆಮ್ಮದಿ. ಆದರೆ ಮನೆಯಿಂದ ಹೊರಗಡೆ ಇದ್ದಾಗಲೂ ಇದೆ ರೀತಿಯಲ್ಲಿ ತಾವುಗಳು ನಮ್ಮ ಜೊತೆಯಲ್ಲಿ ಇರದೇ ಇದ್ದಾಗ ಯಾರದರೂ ಮತ್ತೊಬ್ಬರು ಪರಸ್ಪರ ಕಾಳಜಿಯನ್ನು ತೋರುವವರನ್ನು ಮಕ್ಕಳು ತಮ್ಮ ಜೊತೆಯಲ್ಲಿ ಇಟ್ಟುಕೊಳ್ಳಲಿ ಎಂಬ ಹಂಬಲ.

ಇದೇ ಬೆಳೆಯುತ್ತಾ ಬೆಳೆಯುತ್ತಾ ನಮಗೆ ಬುದ್ಧಿ ಬರುವ ವೇಳೆಗೆ ಎಷ್ಟೊಂದು ಅಗಾಧವಾಗಿ ನಾವುಗಳು ಪ್ರತಿ ಕ್ಷಣ, ಪ್ರತಿ ಸ್ಥಳದಲ್ಲೂ ನಾವುಗಳು ನಮ್ಮನ್ನು ಗುರುತಿಸುವವರನ್ನು, ನಮ್ಮ ಬಗ್ಗೆ ಕಾಳಜಿಯನ್ನುಂಟು ಮಾಡುವವರನ್ನು, ನಮ್ಮ ಬಗ್ಗೆ ಒಂದು ರೀತಿಯ ಪ್ರೀತಿಯನ್ನು ವ್ಯಕ್ತಪಡಿಸುವವರನ್ನು ಅಥಾವ ಒಂದೇ ಒಂದು ಹಲೋ ಎಂದು ಹೇಳುವವರನ್ನು ಪರಿಚಯಿಸಿಕೊಂಡಿರುತ್ತೇವೆ.

ಯಾವುದೇ ಒಂದು ಗೊತ್ತು ಪರಿಚಯವಿಲ್ಲದ ಜಾಗದಲ್ಲಿ ಪ್ರತಿಯಾಗಿ ಯಾರಾದರೂ ಒಬ್ಬರ ಒಂದೇ ಒಂದು ಮುಗಳ್ನಗು ನಮ್ಮ ಎಷ್ಟೋ ಮನದಲ್ಲಿನ ಗೊಂದಲ, ಭಯ, ಸಂಶಯಗಳನ್ನು ದೂರ ಮಾಡಿರುತ್ತದೆ.

ಇದು ಇಲ್ಲವೆಂದರೇ ಮನುಷ್ಯನಾಗಿದ್ದೇ ದಂಡ ಎನ್ನುವಂತಾಗುತ್ತದೆ. ಮನುಷ್ಯ ಸಂಘ ಜೀವಿ ಎಂಬುದು ನಾವುಗಳು ಬುದ್ಧಿ ಬಂದ ಮೇಲೆ ತಿಳಿದಿರುವ ಸಾಮಾನ್ಯ ವಿಷಯ. ಒಂಟಿಯಾಗಿ ಏನನ್ನು ಮಾಡಲು ಸಾಧ್ಯವಿಲ್ಲ. ಮಾಡಬಹುದು ಆದರೇ ಪರಸ್ಪರರ ಜೊತೆಯಲ್ಲಿ ತೊಡಗುವ ಕೆಲಸ ಕಾರ್ಯಗಳ, ಚಿಂತನೆಯ ವಿನಿಮಯದ ಸ್ವಾರಸ್ಯ ಒಂಟಿ ಸುಂಟರಗಾಳಿಯಲ್ಲಿ ಕಾಣುವುದಕ್ಕೆ ಆಗುವುದಿಲ್ಲ.

ನಮಗೆ ಯಾವುದೇ ದುಡಿತವಿಲ್ಲದೇ ಬರುವ ಮತ್ತು ನಮ್ಮನ್ನು ಸುತ್ತುವರಿಯುವ ಸಂಬಂಧವೆಂದರೇ ನಮ್ಮ ರಕ್ತ ಸಂಬಂಧ/ಸಂಬಂಧಿಗಳು. ಅದು ನಾವುಗಳು ಇಷ್ಟಪಟ್ಟರು, ಪಡದೇ ಇದ್ದರೂ ನಮ್ಮ ಜೊತೆಯಲ್ಲಿ ನಮ್ಮ ಕುಟುಂಬದಿಂದ ಬರುತ್ತದೆ. ಅದಕ್ಕೆ ನಾವುಗಳು ನಮ್ಮ ಮನಸ್ಸಿದ್ದರೂ ಮನಸ್ಸಿಲ್ಲದಿದ್ದರೂ ಅವರ ಜೊತೆಯಲ್ಲಿ ಸಾಗಬೇಕು.



ಅದಕ್ಕೆ ಇರಬೇಕು. ನೀವೆ ಯೋಚಿಸಿ ನಾವುಗಳು ನಮ್ಮ ಮನಸ್ಸನ್ನು ಬಿಚ್ಚಿ ನಮ್ಮ ಸ್ನೇಹಿತರರ ಜೊತೆಯಲ್ಲಿ ಮಾತನ್ನಾಡಿದಷ್ಟು ನಮ್ಮ ಸಂಬಂಧಿಕರ ಜೊತೆಯಲ್ಲಿ ವ್ಯಕ್ತಪಡಿಸಲು ಆಗುವುದಿಲ್ಲ. ಅಲ್ಲಿ ನಾವುಗಳು ತೋರಿಸುವುದು ನಮ್ಮ ಸಾಮರ್ಥ್ಯ ಮತ್ತು ನಮ್ಮ ಹಿರಿಮೆಯನ್ನು.

ಅದೇ ನಮ್ಮ ಗೆಳೆಯರ ಹತ್ತಿರ ನಮ್ಮ ಹೆಮ್ಮೆ, ಪಾಸೀಟಿವ್ ಅಂಶಗಳಿಗಿಂತ ನಮ್ಮ ದೌರ್ಬಲ್ಯಗಳನ್ನು, ನಮ್ಮ ವೈಪಲ್ಯಗಳನ್ನು, ಕಷ್ಟಗಳನ್ನು ಯಾವುದೇ ಹೆಗ್ಗಿಲ್ಲದೇ ತೋಡಿಕೊಳ್ಳುತ್ತೇವೆ. ಅದಕ್ಕೆ ರ್ರೀ ಸ್ನೇಹಿತರ ಜೊತೆಯಲ್ಲಿ ಇದ್ದ ಕ್ಷಣಗಳೇ ನಮ್ಮ ಜೀವನದ ಅತ್ಯಂತಹ ಸಂತೋಷದ ಮತ್ತು ನಿರಾಳವಾದ ಸುಂದರ ಸ್ವಪ್ನಗಳು. ಅಲ್ಲಿ ನಮ್ಮನ್ನು ನಾವುಗಳು ತೆರೆದ ಮನದಿಂದ ಬಿಚ್ಚಿಕೊಳ್ಳುತ್ತೇವೆ. ನಮ್ಮ ದುಃಖಗಳಿಗೆ ನಮ್ಮ ಗೆಳೆಯರ ಅಸರೆಯಿರುತ್ತದೆ. ನಮ್ಮ ಕಷ್ಟಗಳಿಗೆ ಒಂದೇರಡು ಸಾಂತ್ವನದ ನುಡಿಗಳಿರುತ್ತವೆ. ನಮ್ಮ ಗೆಲುವಿನ ವಿಚಾರಕ್ಕೆ ಒಂದು ಪ್ರೋತ್ಸಾಹದ ಉತ್ತೇಜನವಿರುತ್ತದೆ. ನಮ್ಮ ಅಭಿರುಚಿಗೆ ಅವರುಗಳ ತಾಳ ಮೇಳಗಳಿರುತ್ತೇವೆ. ಯಾವುದನ್ನು ಇದು ಸರಿಯಿಲ್ಲ ಎಂದು, ಏನೋ ನೀನು ಹೀಗೆ ಹೇಳಿದೇ ಎಂದು ಕೊಂಕಾಗಿ ನೋಡುವುದಿಲ್ಲ. ಅದೇ ಅಲ್ಲವಾ ಸ್ನೇಹಲೋಕ! ಒಂದು ವೇಳೆ ಏನಾದರೂ ಆ ರೀತಿಯ ಟೀಕೆ ಟಿಪ್ಪಣಿಗಳು ಬಂದರೂ ಅದು ನಮ್ಮನ್ನು ತಿದ್ದುವ ರೀತಿಯಾಗಿರುತ್ತೇವೆ ವಿನಾಃ ನಮ್ಮನ್ನು ಹಂಗಿಸುವುದಂತೆ ಅಲ್ಲ.




ನನಗೆ ಅನಿಸುತ್ತದೆ. ನಮ್ಮ ಜೀವನದಲ್ಲಿ ಒಂದೇ ಒಂದು ಸಂಬಂಧ ಯಾವಾಗಲೂ ನಿತ್ಯ ನೂತನವಾಗಿರುವುದು ಅಂದರೇ ಅದು ಗೆಳೆತನ. ಇಲ್ಲಿ ಯಾವುದೇ ವಯೋಮಾನವಿಲ್ಲ, ಲಿಂಗ ಬೇದವಿಲ್ಲ, ಅಂತಸ್ತು ಇಲ್ಲ.. ಯಾವೊಂದು ಅಪೇಕ್ಷೆ ಇಲ್ಲದೇ ಸುಲಭವಾಗಿ ಘಟಿಸುವ ಒಂದು ತಣ್ಣನೆಯ ನಿಷ್ಕಲ್ಮಶವಾದ ಝರಿ.

ಅದು ಎಲ್ಲಿಯಾದರೂ ಎಷ್ಟೊತ್ತಾದರೂ ಆಗಿರಬಹುದು. ಅ ಕ್ಷಣಕ್ಕೆ ಅವರುಗಳೇ ನಮ್ಮ ಆತ್ಮೀಯರು. ನಾವುಗಳೂ ಓಡಾಡುವ ನಿತ್ಯ ಓಣಿಯಿಂದ ನಾವುಗಳು ಪ್ರವಾಸ ಮಾಡಿದ ಯಾವುದೇ ಹೊಸ ಹೊಸ ಜಾಗ, ಊರು, ಸ್ಥಳ, ದೇಶ ಏನಾದರೂ ಆಗಿರಲಿ ಅಲ್ಲಿಯೇ ಖಂಡಿತವಾಗಿ ನಾವುಗಳು ನಮ್ಮ ಅಗತ್ಯತಗೆ ತಕ್ಕಂತೆ ಕನಿಷ್ಟ ಒಬ್ಬರೂ ಇಬ್ಬರನ್ನಾದರೂ ಅತ್ಯಂತ ಪರಿಚಯದವರು ಎಂಬುವಷ್ಟರ ಮಟ್ಟಿಗೆ ನಮ್ಮ ಹೃದಯದಲ್ಲಿ ಇಟ್ಟುಕೊಂಡಿರುತ್ತೇವೆ. ಒಮ್ಮೆ ಹೀಗೆ ಪ್ರತಿಷ್ಠಾಪಿಸಿಕೊಂಡ ವ್ಯಕ್ತಿಗಳು ಎಂದು ಮರೆಯದವರಾಗಿರುತ್ತಾರೆ.

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ಕೆಲಸ ಮಾಡಲು ಹೊಟ್ಟೆ ಪಾಡಿಗೆ ಎಂದು ಬಂದಂತಹ ಜಾಗಗಳಲ್ಲಿ ನಮ್ಮ ಅಸರೆಗೆ ಬರುವವರು ಎಂದರೇ ಸ್ನೇಹಿತರುಗಳು ಮಾತ್ರ. ಯಾರು ಗೊತ್ತಿರದ ಜಾಗದಲ್ಲಿ ಅಲ್ಲಿರುವವರೇ ನಮ್ಮ ಸ್ನೇಹಿತರುಗಳು! ಇದೇ ಒಂದು ನಿಜವಾದ ಮಾತು.

ನಮ್ಮ ಇಂದಿನ ಈ ವೇಗದ ಜೀವನದಲ್ಲಿ ಅಸಂಖ್ಯಾತ ಸ್ನೇಹಿತರನ್ನು ನಾವುಗಳು ಪಡೆಯಬಹುದು.

ಹಾಗೆಯೇ ನಾವುಗಳು ಅವರ ಜೊತೆಯಲ್ಲಿ ಎಷ್ಟರ ಮಟ್ಟಿಗೆ ಪರಸ್ಪರರನ್ನು ಬೇಟಿ ಮಾಡಿರುತ್ತೇವೆ? ಮಾತನ್ನಾಡುವುದು, ಕುಶಲವನ್ನು ವಿಚಾರಿಸಿಕೊಳ್ಳುತ್ತೇವೆ?

ಅಂದು ಅವರ ಜೊತೆಯಲ್ಲಿ ಹಾಗೆ ಇದ್ದೇವು. ಅದರೆ ಇಂದಿನ ಪರಿಸ್ಥಿತಿಯೇ ಬೇರೆ ಇಂದು ಮತ್ಯಾರೋ ನಮಗೆ ತೀರ ಹತ್ತಿರದವರಾಗಿರುತ್ತಾರೆ. ಇವರುಗಳು ಹೊಸ ಗೆಳೆಯರು ಮತ್ತು ಗೊತ್ತಿರುವವರು. ಹಾಗೆಯೇ ಇವರ ಜೊತೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುವಂತಾಗಿರುತ್ತದೆ. ಹಾಗಂತಹ ಅವರನ್ನು ನಾವುಗಳು ಏನೂ ಹಳೆಯ ಸ್ನೇಹಿತರನ್ನು ಪೂರ್ಣವಾಗಿ ಮರೆತಿರುವುದಿಲ್ಲ. ಅದೇ ಸಮಯ, ಸ್ಥಳ, ಅವಕಾಶದ ಅಭಾವದಿಂದ ಸ್ವಲ್ಪಮಟ್ಟಿಗೆ ಸ್ನೇಹ ಹಳತಾಗಿರುತ್ತದೆ ಅಷ್ಟೇ.

ಯೋಚಿಸಿ ಈ ರೀತಿಯ ವಿಪರ್ಯಾಸ ಗೊತ್ತೋ ಗೊತ್ತಿಲ್ಲದೇ ಎಲ್ಲರ ಜೀವನದಲ್ಲೂ ಸಾಮಾನ್ಯವಾಗಿ ಚಲನೆಯಲ್ಲಿರುತ್ತದೆ. ನಾವುಗಳು ಏನೂ ಮಾಡಲು ಸಾಧ್ಯವಿಲ್ಲ. ಅದಕ್ಕೆ ಕಾರಣಗಳು ನೂರಾರು. ಹಾಗಂತಹ ನಾವುಗಳು ನಮ್ಮ ಹಳೆಯ ಸ್ನೇಹಿತರುಗಳನ್ನು ಪೂರ್ಣವಾಗಿ ಕಡೆಗಣಿಸಿರುತ್ತೇವೆ ಎಂದೇನಲ್ಲಾ. ಸಮಯ ಸಿಗಬೇಕು ಮತ್ತು ಜರೂರತು ಬರಬೇಕು.

ಇದಕ್ಕೆ ಸಾಕ್ಷಿ ನಮ್ಮ ಇಂದಿನ ತಂತ್ರಙ್ಞಾನದ ಕೊಡುಗೆಗಳಾದ ಸೇಲ್ ಪೋನ್, ಪೇಸ್ ಬುಕ್, ಆರ್ಕುಟ್ ನೋಡಿ ಎಷ್ಟೊಂದು ಸ್ನೇಹಿತರ ಕಾಂಟ್ಯಕ್ಟ್ಸ್ ಇವೆ ನಮ್ಮಲ್ಲಿ. ನಾವುಗಳು ವರ್ಷದಲ್ಲಿ ಎಷ್ಟು ಮಂದಿಯನ್ನು ನಿರಂತರವಾಗಿ ಟಚ್ ನಲ್ಲಿ ಇಟ್ಟುಕೊಂಡಿದ್ದೇವೆ. ಎಣಿಸಿದರೇ ನಮಗೆ ನಾವೇ ಆಶ್ಚರ್ಯಪಡುವಂತಾಗುತ್ತದೆ. ಯಾಕೆ ಹೀಗೆ?

ನಾವುಗಳು ನಮ್ಮ ಸ್ನೇಹದ ಹೊಸ ಹೊಸ ದಿಕ್ಕಿನಲ್ಲಿ ಹೊಸ ಹೊಸ ಗೆಳೆಯರನ್ನು/ಗೆಳತಿಯರನ್ನು ಅಂದಿನ ದಿನ ಮಾನಗಳಿಗೆ ಅನುಗುಣವಾಗಿ ಬೆಳೆಸುತ್ತಾ ಸಾಗುತ್ತೇವೆ. ಇಂದಿನ ಕ್ಷಣಕ್ಕೆ ಇವರ ಜೊತೆಯಲ್ಲಿಯೇ ಹೆಚ್ಚು ಹೆಚ್ಚು ವಿಚಾರ ವಿನಿಮಯ, ಪರಸ್ಪರ ಮಾತುಕತೆ, ಬೌದ್ಧಿಕ ಬೆಳವಣಿಗೆ... ಇದೇ ನಿಜವಾದ ಸತ್ಯ.

ನಾವುಗಳು ಬಾಲ್ಯದಲ್ಲಿ ನನ್ನ ಬೇಸ್ಟ್ ಪ್ರೇಂಡ್ ಎಂದು ಹೇಳಿಕೊಂಡಿದ್ದವನು/ಳು ಎಲ್ಲೂ ಇದ್ದಾರೆ. ಅವರುಗಳ ಅಡ್ರಸ್ಸೇ ಇಲ್ಲದವರಾಗಿರುವೆವು. ಏನೂ ಮಾಡಲೂ ಆಗುವುದಿಲ್ಲ. ಯುಗ ಯುಗಗಳು ಸಾಗುತ್ತಿವೆ.

ಅದರೂ ಈ ಒಂದು ಸುಂದರವಾದ ಸಂಬಂಧದ ಬಗ್ಗೆ ಇರುವಷ್ಟು ಮಾತುಗಳು, ಅಭಿಪ್ರಾಯಗಳು ಹಿಂದಿನ ಪುರಾಣ ಪುಣ್ಯಕತೆಗಳಿಂದ ಇತ್ತೀಚಿಗಿನ ಸಿನಿಮಾ ಕತೆಗಳವರೆಗೂ, ಎಷ್ಟೊಂದೂ ವಿಚಾರಗಳು ಬೆಳೆದು ಬಂದಿವೆ ಅಂದರೇ ಅದರ ಮಹತ್ವವನ್ನು ನಾವುಗಳು ಅರಿಯಬೇಕು.

ಅದಕ್ಕೆ ಹಿರಿಯರು ಹೇಳುತ್ತಾರೆ.. ಬೆಳೆದ ಮಕ್ಕಳನ್ನು ಸ್ನೇಹಿತರ ರೀತಿಯಲ್ಲಿ ನೋಡು. ನಿನ್ನ ಸಂಗಾತಿಯನ್ನು ಸ್ನೇಹಿತರ ಹಾಗೆಯೇ ನೋಡಿ ಆಗ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಈ ಎಲ್ಲಾ ಮಾತುಗಳು ಮತ್ತೊಮ್ಮೆ ಸ್ನೇಹವೆಂದರೇ ಏನೂ ಮತ್ತು ಯಾಕೆ ನಾವುಗಳು ಜಗತ್ತಿನ ಅತಿ ಶ್ರೇಷ್ಠವಾದ ಸಂಬಂಧವೆಂದು ಪರಿಗಣಿಸಿದ್ದಾರೆ ಎಂಬುದು ತಿಳಿಯುತ್ತದೆ.

ಇಂದಿನ ದಿನಗಳಲ್ಲಿ ನಮ್ಮ ಮೋಬೈಲ್ ಗಳಿಗೆ ನಮ್ಮ ಗೆಳೆಯರಿಂದ ಬರುವ ಎಸ್. ಎಂ. ಎಸ್ ಗಳು ಸಹ ಹತ್ತು ಹಲವು ರೀತಿಯಲ್ಲಿ ಸ್ನೇಹದ ಬಗ್ಗೆ ವ್ಯಾಖ್ಯಾನಿಸುತ್ತಿರುತ್ತವೆ ಮತ್ತು ನಾವುಗಳೇ ನಮ್ಮಲ್ಲಿ ರೋಮಾಂಚನವನ್ನುಗೊಳ್ಳುವಂತೆ ಮಾಡುತ್ತವೆ. ರೀಯಲಿ ಪ್ರೇಂಡ್ಸ್ ಶಿಪ್ ಇಸ್ ಗ್ರೇಟ್!

ಹಾಗೆ ನಾವುಗಳು ಹೊಸ ಹೊಸ ಗೆಳೆಯರನ್ನು ಮಾಡಿಕೊಳ್ಳುತ್ತೇವೆ. ಅವರ ಯಾವುದೋ ಒಂದು ಗುಣ, ಅಭಿರುಚಿ, ಮಾತು ನಮಗೆ ತೀರ ನಮ್ಮವರನ್ನಾಗಿ ಮಾಡಿರುತ್ತದೆ. ಆ ಕ್ಷಣಕ್ಕೆ ಯಾಕೋ ಇವರು ನಂಬಿಕೆಯ ವ್ಯಕ್ತಿ ಎಂಬ ಭಾವನೆ ಮನದಲ್ಲಿ ಮೂಡಿರುತ್ತದೆ. ಅವರುಗಳಿಗೂ ಅದೇ ರೀತಿಯಲ್ಲಿ ಒಂದು ಸ್ನೇಹದ ಮೈತ್ರಿ ಉಂಟಾದಾಗ ಸ್ನೇಹ ಗಾಢವಾಗುತ್ತದೆ. ಇಲ್ಲಿ ಯಾವುದೇ ಒಂದು ಉದ್ದೇಶ, ಅವಶ್ಯಕತೆಯಿಂದ ಗೆಳೆತನ ಗಟ್ಟಿಯಾಗಿರುವುದಿಲ್ಲ. ಕೇವಲ ಒಂದು ಅಂತಃಕರಣದಿಂದ ಇಬ್ಬರೂ ಯಾವುದೇ ಒಂದು ಕಂಡಿಷನ್ ಇಲ್ಲದೇ ಪರಸ್ಪರ ಸ್ನೇಹ ಹಸ್ತವನ್ನು ಚಾಚಿರುತ್ತಾರೆ.

ಅವರ ಜೊತೆಯಲ್ಲಿ ಇದ್ದ ಕ್ಷಣಗಳು ಏನೋ ನನಗೆ ತುಂಬ ಖುಷಿಯನ್ನು ಕೊಡುತ್ತದೆ. ಅವರ ಜೊತೆಯಲ್ಲಿ ಮಾತನ್ನಾಡಿದರೇ ಏನೋ ನನಗೆ ಮನಸ್ಸಿಗೆ ಹಗುರವಾದಂತೆ ಅನಿಸುತ್ತದೆ. ಅವರ ಅನುಭವಗಳು ನನ್ನ ವೃತ್ತಿಗೆ ಅನುಕೂಲವಾಗುತ್ತವೆ. ಅವರ ಬುದ್ಧಿವಂತಿಕೆ, ಜಾಣತನ ನಾನು ಕಲಿಯಬಹುದು. ನಾನು ಎಡವಿದರೆ ಅವರು ಎಚ್ಚರಿಸುತ್ತಾರೆ. ನನ್ನ ಗೊಂದಲಗಳಿಗೆ ಅವರುಗಳ ಮಾತುಗಳು ಸಾಂತ್ವನ ನೀಡುತ್ತವೆ. ಇತ್ಯಾದಿ ಇತ್ಯಾದಿ ಒಂದು ಯಾವುದೇ ನಿರ್ಧಿಷ್ಟವಿಲ್ಲದ ಒಂದು ಸಾಮಾನ್ಯ ಸಂಗತಿ ತೀರ ಹತ್ತಿರದವರನ್ನಾಗಿ ಮಾಡಿಬಿಟ್ಟಿರುತ್ತದೆ.




ನಿಮಗೆ ಗೊತ್ತೇ ನಮಗೆ ನಾವು ತಿಳಿಯದೇ ಒಂದೊಂದು ವಿಷಯಗಳನ್ನು ಯಾರೂಬ್ಬರ ಮುಂದೆ ಬಾಯಿ ಬಿಟ್ಟಿಲ್ಲದ್ದು, ನಮ್ಮ ಗೆಳೆಯರ ಮುಂದೆ ಅದೇ ಮೊದಲನೆಯದಾಗಿ ಹೇಳಿಕೊಂಡುಬಿಟ್ಟಿರುತ್ತೇವೆ. ಯಾಕೆಂದರೇ ಆ ಒಂದು ಕಂಪ್ಯಾನಿಯನ್ ಹಾಗೆ ಮಾಡಿಬಿಟ್ಟಿರುತ್ತದೆ. ಅಷ್ಟೊಂದು ನಂಬಿಕೆಯನ್ನು ನಾವು ನಮ್ಮವರು/ನಮ್ಮವಳು ಎಂದು ಅಂದುಕೊಂಡ ವ್ಯಕ್ತಿ ಮಾಡಿಬಿಟ್ಟಿರುತ್ತಾರೆ. ಅದಕ್ಕೆ ಹಿರಿಯರು ಹೇಳಿರುವವರು ಸಜ್ಜನರ ಸಂಗ ಹೆಜ್ಜೇನು ಸವಿದಂತೆ. ಸವಿ ಸವಿಯಾದ ಅನುಭವಗಳ ಖಜಾನೆಯನ್ನು ಹಂಚುವಂತ ಅಪರೂಪದ ಸ್ನೇಹಿತರುಗಳನ್ನು ಪಡೆಯುವ ಸೌಭಾಗ್ಯ ಕೆಲವರದಾಗಿರುತ್ತದೆ.

ನಾವುಗಳು ಎಷೊಂದು ವಿಷಯಗಳನ್ನು ನಮ್ಮ ಸ್ನೇಹಿತರುಗಳಿಂದ ಕಲಿತುಕೊಂಡಿರುತ್ತೇವೆ. ಅವರುಗಳೇ ಒಮ್ಮೊಮ್ಮೆ ನಮ್ಮನ್ನು ತಿದ್ದುವ ಒಳ್ಳೆಯ ಮೇಸ್ಟರ್ ಗಳಾಗಿರುತ್ತಾರೆ. ಸ್ನೇಹದಲ್ಲಿ ಕೆಲವೊಮ್ಮೆ ಸಿಟ್ಟು ಸೇಡವುಗಳು ಬರುವುದು ಸಾಮಾನ್ಯ. ಕೆಲವೊಂದು ದಿನಗಳ ಮಟ್ಟಿಗೆ ಒಬ್ಬರೊನ್ನೊಬ್ಬರು ಮಾತನ್ನಾಡಿಸದ ಮಟ್ಟಿಗೆ ಟೂ ಬಿಟ್ಟಿರುತ್ತಾರೆ. ಇದು ಕೆವಲ ಯಾವುದೇ ಒಂದು ಪರ್ಪಸ್ ಗಾಗಿ ಅಲ್ಲ. ಕೆಲವೊಂದು ವಿಚಾರಗಳ ವೈರುಧ್ಯಗಳಿಂದ ಮಾತ್ರ. ಅತಿ ಹೆಚ್ಚು ಇಷ್ಟಪಟ್ಟ ಸ್ನೇಹಿತರಾಗಿರುವುದರಿಂದಲೇ ಆ ಮಟ್ಟಿಗೆ ಸಿಟ್ಟಾಗುವುದು. ಇಲ್ಲ ಅಂದರೇ ಅದು ಸ್ನೇಹವೇ ಅಲ್ಲ. ಯಾಕೆಂದರೇ ನಿನ್ನ ಬಗ್ಗೆ ಕಾಳಜಿಯಿಲ್ಲದ ವ್ಯಕ್ತಿ ಯಾಕೇ ನಿನ್ನ ಜೊತೆಯಲ್ಲಿ ಕಾದಾಡುವನು? ಅವನ ಪಾಡಿಗೆ ಅವನಿರುವನು ಅಲ್ಲವಾ? ಇದನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕು.

ನಿಜವಾದ ಸ್ನೇಹಿತ ಒಮ್ಮೊಮ್ಮೆ ತಂದೆಯ ರೀತಿಯಾಗಿ ದಂಡಿಸುವನಾಗಿರುತ್ತಾನೆ, ತಾಯಿಯ ರೀತಿಯಲ್ಲಿ ಪ್ರೀತಿಯನ್ನು ಹರಿಸುವವನಾಗಿರುತ್ತಾನೆ, ತಂಗಿಯ/ತಮ್ಮನ ರೀತಿಯಲ್ಲಿ ಮಮತೆಯನ್ನು, ತುಂಟತನವನ್ನುಂಟು ಮಾಡುವವನಾಗಿರುತ್ತಾನೆ.

ನಮ್ಮ ಜೊತೆಯಲ್ಲಿ ಇರುವವರ ಜೊತೆಯಲ್ಲಿ ನಾವುಗಳು ನಮ್ಮ ಸಂತೋಷವನ್ನು, ದುಃಖವನ್ನು, ನೋವನ್ನು, ಅನುಭವವಗಳನ್ನು ಪರಸ್ಪರರು ಹಂಚಿಕೊಳ್ಳುತ್ತಾ, ನಮ್ಮ ನಮ್ಮ ಉನ್ನತಿಯನ್ನು ಕಾಣವುದು ನಿತ್ಯ ಜಾರಿಯಲ್ಲಿರಬೇಕು. ಆಗಲೇ ಸ್ನೇಹತ್ವಕ್ಕೆ ಮಹತ್ವ ಬರುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ