ಇಲ್ಲವಾದರೇ ಬದುಕು ಎಂದೋ ನಿಂತ ನೀರಾಗಿರುತ್ತಿತ್ತು ಮತ್ತು ನೀರಾಸವಾಗಿಬಿಡುತ್ತಿತ್ತು. ಈ ಒಂದು ಪದ್ಧತಿ ಅಥವಾ ಗುಣ ನಮ್ಮ ಚಿಕ್ಕ ಮಕ್ಕಳ ದಿನಗಳಿಂದಲೇ ನಮಗೆ ಸಾಮಾನ್ಯವಾಗಿ ಬಳುವಳಿಯಾಗಿ ಬಂದುಬಿಟ್ಟಿದೆ. ಚಿಕ್ಕವರಾಗಿದ್ದಾಗ ಒಂದೊಂದೆ ಹೆಜ್ಜೆಯನ್ನು ಇಡುತ್ತಾ ಇಡುತ್ತಾ ಏಳುತ್ತಾ ಬಿಳುತ್ತಾ ಪುನಃ ಪುನಃ ನಾನು ನಡೆದಾಡಲೇಬೇಕು ಎಂಬ ಮನೋಭಾವದ ಕಿಚ್ಚನ್ನು ಹಚ್ಚ ಹಸಿರಾಗಿಟ್ಟುಕೊಂಡು ನಮ್ಮ ಕಾಲ ಮೇಲೆ ನಾವುಗಳು ನಡೆದಾಡಿದಾಗ ಸಿಗುವ ಆನಂದವನ್ನು ನೋಡಬೇಕು.
ಮನಗೆ ಹೊಸಬರು ಯಾರೂ ಬಂದರೂ ಹಾಗೆ ಸುಮ್ಮನೆ ನಾಲ್ಕಾರು ಹೆಜ್ಜೆಗಳನ್ನು ಹಾಕಿ ಅವರ ಮುಂದೆ ಪ್ರದರ್ಶಿಸುವ ಉಮ್ಮೇದು. ಅವರ ಪ್ರಶಂಸೆಯ ಮಾತಿಗೆ ಬಾಯ್ ತುಂಬ ನಗೆಯೋ ನಗೆ. ಅಲ್ಲಿಂದಲೇ ಶುರುವಾಗಿರಬೇಕು. ಇದು!
ಪ್ರತಿಯೊಂದು ಸಾಧನೆಗೋ ಹತ್ತು ಹಲವಾರು ಅಡಚಣೆಗಳ ಮಹಾಪೂರವೇ ನಮ್ಮ ಮುಂದೆ ಇರುತ್ತದೆ. ಸಾಧನೆಯ ಹಾದಿಯಲ್ಲಿ ಸಾಗುವಾಗ ಹಲವಾರು ಬಾರಿ ಮುಗ್ಗರಿಸುವುದು ಸಾಮಾನ್ಯ. ಸಾಧನೆಯನ್ನು ಸಾಧಿಸಿದಾಗ ನಮ್ಮ ಸುತ್ತಲಿನವರಿಂದ ಸಿಗುವ ಪ್ರಶಂಸೆಗೆ ನಮ್ಮ ಮನ ನಲಿದಾಡುವುದು ಮತ್ತು ಒಂದು ಎರಡು ಅಡಿ ಮೆಲಕ್ಕೆ ಹೋಗಿರುತ್ತೇವೆ!
ಮೊದಲು ಮಾತನಾಡಲು ಶುರುಮಾಡಿದಾಗ ತೊದಲು ನುಡಿಯಿಂದ ಹೆತ್ತವರನ್ನು ಕರೆದಾಗ ಅವರ ಆನಂದ ನಮ್ಮನ್ನು ಪುನಃ ಪುನಃ ಅದನ್ನೇ ಮಾಡುವಂತೆ ಮಾಡಿರುತ್ತದೆ. ಮೊದಲ ಅಕ್ಷರವನ್ನು ಕಲಿತಾಗ ನಾವು ಮುಂದೆ ಇನ್ನೂ ಏನೇನೋ ಆಗಿಬಿಡುವೆವು ಎಂಬ ದೊರದ ನೋಟವನ್ನೇ ಕಂಡಿರುತ್ತೇವೆ. ಹೀಗೆ ಬದುಕಿನ ದಾರಿಯಲ್ಲಿ ಚಿಕ್ಕ ಚಿಕ್ಕ ಆಸೆಗಳನ್ನು ದಕ್ಕಿಸಿಕೊಂಡಾಗ ಮನಸ್ಸಿನಲ್ಲಿನ ಮನೋಸ್ಥೈರ್ಯ ಇನ್ನೂ ಇನ್ನೂ ಹೆಚ್ಚು ಬಲಿಷ್ಠವಾಗುತ್ತಾ ಹೋಗುತ್ತದೆ.
ಇದನ್ನೇ ಜೀವನದ ಅನುಭವ ಎಂದು ಕರೆಯುತ್ತೇವೇನೋ ಅಲ್ಲವಾ? ಚಿಕ್ಕ ಚಿಕ್ಕ ಅಡಚಣೆಗಳ ಜೊತೆ ಹೋರಾಡಿದ ಮನಸ್ಸು ದೊಡ್ಡ ಚಾಲೆಂಜ್ ಗಳಿಗೆ ಮುಖ ಮಾಡಿ ನಿಲ್ಲುತ್ತದೆ. ವ್ಯಕ್ತಿ ಬೆಳೆದಂತೆ ಅವನ ಸಾಧನೆಯ ಮೀತಿಗಳು ಬೆಳೆದಿರುತ್ತವೆ. ಅವುಗಳಿಗೆ ತಕ್ಕ ಹಾಗೆಯೇ ಅಲ್ಲಿ ಸಿಗುವ ನೋವು ನಲಿವು, ಅಪಮಾನ, ಕಷ್ಟ, ನಿರಾಶೆ ಇತ್ಯಾದಿ ಸಹಜವಾಗಿಯೇ ದುತ್ತನೇ ನಮ್ಮ ಮುಂದೆ ನಿಂತಿರುತ್ತವೆ.

ಸೋಲೆ ಗೆಲುವಿನ ಸೋಪಾನ ಎನ್ನುವ ಮಾಮೋಲಿ ಮಾತು ಒಮ್ಮೊಮ್ಮೆ ನಾವು ಸೋತಾಗ ನೆಮ್ಮದಿಯ ಸಂತೈಸುವಿಕೆಯ ಒಂದು ಎಳೆಯನ್ನು ಮನದ ಮೂಲೆಯಲ್ಲಿ ಕೊಡುತ್ತದೆ. ಮುಂದಿನ ದಿನಗಳಲ್ಲಿ ಸರಿಯಾದ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸಲು ಒಂದು ಟಾನಿಕ್ ಆಗುತ್ತದೆ.
ವ್ಯಕ್ತಿ ತನ್ನ ಸುತ್ತಲು ಇರುವವರ ಜೊತೆಯಲ್ಲಿ ಸಾಗುತ್ತ ಸಾಗುತ್ತ ಅವರ ಅನುಭವಗಳು ಅವರ ಸಾಧನೆ, ಕೆಲಸಗಳು, ಅವರ ನಿದರ್ಶನಗಳು ಹೀಗೆ ಎಲ್ಲವನ್ನು ತಾನು ಹಿಡಿದಿರುವ ಗುರಿಯನ್ನು ಸಾಧಿಸಲು ನೆರವು ಮಾಡಿಕೊಳ್ಳಲು ಅವಣಿಸುತ್ತಾನೆ. ಅದು ಅವನ ಬುದ್ಧಿವಂತಿಕೆಗೆ ದ್ಯೋತಕ.
ಎಲ್ಲವನ್ನು ಅನುಭವಿಸಿಯೇ ನಾವುಗಳು ತಿಳಿಯಬೇಕಿಲ್ಲ. ಪರರಿಂದಲೂ, ಓದುವುದರಿಂದಲೂ, ನೋಡುವುದದರಿಂದಲೂ, ಕೇಳುವುದರಿಂದಲೂ ತನ್ನವನ್ನಾಗಿ ಮಾಡಿಕೊಂಡು ಇನ್ನೂ ಸಮರ್ಥವಾಗಿ ಹೋರಾಡಬಹುದು.
ಆದರೋ ಇಂದಿನ ಈ ದಿನ ಮಾನದಲ್ಲಿ ವ್ಯಕ್ತಿಯ ನಡೆ ಯಾವ ಕಡೆ ಸಾಗುತ್ತಿದೆ ಎಂದರೇ ಏನಾದರೋ ಆಗಲಿ ಮಗಾ! ನಾನು ಹೀಗೆ ಆಗಬೇಕು ಮತ್ತು ಅದು ಅತಿ ಕಡಿಮೆ ಸಮಯದಲ್ಲಿ.. ಅತಿ ಕಡಿಮೆ ಪರಿಶ್ರಮದಲ್ಲಿ..
ಹೀಗೆ ತನಗೆ ಬೇಕು ಅನಿಸಿದ್ದನ್ನು ತಲೆ ಮೇಲೆ ಕೆಳಗಾದರೂ ಜಯಿಸಬೇಕು ಎಂಬ ಮೋಂಡುತನಕ್ಕೆ ದಾರಿ ಮಾಡಿಕೊಡುತ್ತಿದೆ. ಇದಕ್ಕೆ ಕಾರಣ ಇಂದಿನ ನಮ್ಮ ಸ್ಪರ್ಧಾ ಪ್ರಪಂಚ.. ಇಲ್ಲಿ ಸಮಯವೇ ಫಲ ಎನ್ನುವಂತಾಗಿದೆ. ಸಮಯವೇ ಹಣ ಎಂದು ಎಂದೋ ನಿರೂಪಿತವಾಗಿದೆ. ಯಾರು ಯಾರನ್ನು ಕಾಯಲಾರೇವು ಎನ್ನುವಂತಾಗಿದೆ.
ಮನುಷ್ಯನ ಒಳ್ಳೆತನ, ಮಾನವೀಯತೆಗೆ ಕಡೆವೆ ಕಾಸಿನ ಕಿಮ್ಮತ್ತು ಈ ನಮ್ಮ ಯಾಂತ್ರಿಕ ಲೋಕದಲ್ಲಿ ಸಿಗಲಾರದಂತಾಗಿದೆ ಎನ್ನುವುದು ಪ್ರತಿಯೊಬ್ಬರೂ ಗುರುತಿಸುತ್ತಿದ್ದಾರೆ. ಇಷ್ಟಪಟ್ಟಿದ್ದು ಏನಾದರೂ ನನಗೆ ಮಾತ್ರ ದಕ್ಕ ಬೇಕು ಅದು ಬೇರೊಬ್ಬರಿಗೆ ಸಿಗಲೇ ಬಾರದು ಎನ್ನುವಂತಾಗಿದೆ.
ಇದಕ್ಕೆ ಇರಬೇಕು ಇಂದು ಮಗು ತಾನು ಚಿಕ್ಕಂದಿನಲ್ಲಿರುವಾಗಲೇ ಅದು ತನ್ನ ಸುತ್ತಲಿನವರೆ ಜೊತೆ ಪ್ರೀತಿ, ಪ್ರೇಮದಿಂದ, ಸ್ನೇಹ ಸಹ ಬಾಳ್ವೆಯನ್ನು ಕಲಿಯುವುದಕ್ಕಿಂತ ಹೆಚ್ಚು ನಾನು ನನ್ನ ಜೊತೆಗಾರನಿಗಿಂತಹ ಹೇಗೆ ಹೆಚ್ಚು ಹೆಚ್ಚು ಅಂಕಗಳನ್ನು ಗಳಿಸಬೇಕು.. ಅವನಿಗಿಂತಹ ಮುಂದೆ ಹೇಗೆ ಹೋಗಬೇಕು ಎಂಬ ನೀತಿಯನ್ನು ಕಡ್ಡಾಯವಾಗಿ ಕಲಿಯಲೇಬೇಕಾದಂತಹ ವಾತಾವರಣವನ್ನು ನಾವುಗಳು ನಿರ್ಮಿಸಿ ಅದೇ ಅದರ ಉಸಿರಾಗುವಂತೆ ಮಾಡುತ್ತಿದ್ದೇವೆ ಎನಿಸುತ್ತದೆ.
ಅದಕ್ಕೆ ಇಂದಿನ ಜನಗಳು ಬೆಳೆದಂತೆ ಬೆಳೆದಂತೆ ತಮ್ಮ ತಾಳ್ಮೆಯನ್ನೇ ಕಳೆದುಕೊಂಡುಬಿಟ್ಟಿದ್ದಾರೇನೋ ಎಂಬ ರೀತಿಯಲ್ಲಿ ಜನ ಸಮೋಹ ಇರುವಲ್ಲಿ ಅವರುಗಳ ವರ್ತನೆಯನ್ನು ಗಮನಿಸಿದರೇ ತಿಳಿಯುವುದು. ಈ ಪೈಪೊಟಿ ಯುಗದಲ್ಲಿ ಸತ್ಯಸಂದರಾಗಿದ್ದರೇ ನೆಲೆಯೇ ಇಲ್ಲಾ ಗುರು ಎಂಬ ಮಾತುಗಳೇ ನಾಣ್ಣುಡಿಗಳಾಗುವ ದಿನಗಳು ದೂರವಿಲ್ಲ.
ಯಾರಾದರೂ ಅಪರೂಪಕ್ಕೆ ಸ್ವಲ್ಪ ಆದರ್ಶದ ನುಡಿಗಳನ್ನು ಹೇಳಿಬಿಟ್ಟರೇ ಸಾಕು.. ಓ ಬಂದಾ ನೋಡಿ ಮರಿ ಗಾಂಧಿ! ಎಂಬ ಮಾತುಗಳು...
ನೀ ಈ ಯುಗದಲ್ಲಿ ಇರಬಾರದಗಿತ್ತು.. ಈ ಯುಗಕ್ಕೆ ನೀ ಸೂಟ್ ಆಗಲ್ಲ ಬಿಡು.. ಯಾವ ಓಭಿರಾಯನ ಕಾಲದಲ್ಲಿ ಇದ್ದೀಯಾ ಮಗಾ ಬದಲಾಗು.. ಹೀಗೆ ಆದರೇ ಏನೂ ಸಾಧಿಸಲಾಗುವುದಿಲ್ಲಾ.. ಈ ರೀತಿಯ ನುಡಿಗಳು ಸಾಮಾನ್ಯವಾಗಿ ನಮ್ಮ ನೆರೆಹೊರೆಯವರಿಂದ ನಿತ್ಯ ಸುಪ್ರಭಾತ.
ಅದರೋ ಅಷ್ಟೊಂದು ನಿರಾಶರಾಗುವ ಮಟ್ಟಿಗೆ ನಮ್ಮ ಬದುಕು, ಈ ಪ್ರಪಂಚ ಕೆಟ್ಟಿಲ್ಲ. ಅಂತಾ ಅನಿಸುವುದಿಲ್ಲವಾ?
ಆದರೇ ಎಲ್ಲರೂ ಈ ದೆಸೆಯಲ್ಲಿ ಯೋಚಿಸುವಂತಾಗಬೇಕು. ಆಹ್ಲಾದಕಾರವಾದ ಸ್ಪರ್ಧೆ, ಹೋರಾಟ, ಸ್ನೇಹ ಪರ ಚಿಂತನೆಯನ್ನು ಎಲ್ಲಾರಲ್ಲೂ ಒಡಮೂಡುವಂತಾಗುವಂತೆ ಮಾಡುವುದು ಇಂದಿನ ಸಮಾಜದ ಗುರುತರ ಹೊಣೆ.
ಮನೆಯೇ ಮೊದಲ ಪಾಠಶಾಲೆ ಎಂಬಂತೆ ಪ್ರತಿ ಮನೆಗಳಿಂದ ಇದು ಪ್ರಾರಂಭವಾಗಲಿ ಎಂದು ಆಶಿಸೋಣವೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ