ಬುಧವಾರ, ಜುಲೈ 20, 2011

ಪ್ರೀಮಿಯರ್ ಶೋ::ಲೀಕಾಯುಕ್ತ ವರದಿ

ಇಂದು ಮುಂಜಾನೆಯ ಪತ್ರಿಕೆಗಳನ್ನು ನೋಡಿದಾಗ ಅಚ್ಚರಿಯಾಗದೇ ಇರುವಂತಹ ಶಾಕ್ ಸುದ್ಧಿಯನ್ನು ಕಾಣು ಭಾಗ್ಯ ಎಲ್ಲಾ ಕನ್ನಡ ನಾಡಿನ ಜನತೆಗೆ ಲಬಿಸಿತ್ತು ಎಂದರೇ ಅತಿಶಯೋಕ್ತಿಯಲ್ಲ.

ಅದು ಕಳೆದ ಮೂರು ವರ್ಷಗಳಿಂದ ದಿನ ನಿತ್ಯ ದಾರವಾಹಿಯಾಗಿ ವರದಿಯಾಗುತ್ತಲೆ ಇದ್ದಂತಹ ಸಂಚಿಕೆಗಳು. ಆದರೆ ಇಂದು ಅದರ ಪೂರ್ಣ ಮೋವಿಯ ಪ್ರೀಮಿಯರ್ ಶೋ ಯಾವುದೋ ಮಾಯದಲ್ಲಿ "ಲೀಕಾಯುಕ್ತ ವರದಿ"ಯಾಗಿ ಕಾಣಿಸಿಕೊಂಡಿತ್ತು.

ಅಲ್ಲಿ ಇರುವ ವರದಿಯ ಮುಖ್ಯ ಅಂಶಗಳು ಮಾಧ್ಯಮಗಳಿಗೆ ಗೊತ್ತಾಗಿದೆ. ಬಿಡುಗಡೆಯನ್ನು ಸರ್ಕಾರಕ್ಕೆ ಅರ್ಪಿಸುವ ಮೊದಲೆ ಪತ್ರಿಕೆಗಳ ಕೈಗೆ ಸಿಕ್ಕಿಬಿಟ್ಟಿದೆ. ಇದು ನಮ್ಮ ದೇಶದ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಕಾಳಜಿಗೆ ಉದಾಹರಣೆ ಅಲ್ಲೂ ಭ್ರಷ್ಟತೆ. ಹೀಗೆ ಮಾಡಲು ಅವರದೇಯಾದ ಕಾರಣಗಳು ಉಂಟು. ಅವುಗಳ ಸದುಪಯೋಗವನ್ನು ಪಾಲುದಾರರು ಪಡೆಯುತ್ತಾರೆ ಅಷ್ಟೇ!

ಆದರೆ ತಮಾಷೆಯ ವಿಚಾರವೆಂದರೆ ಸಾವಿರಾರು ಕೋಟಿಯ ಆಕ್ರಮ ಗಣಿಗಾರಿಕೆಯ ವೈವಾಟನ್ನು ಎಲ್ಲಾ ಮುಖ್ಯ ಕೂಳಗಳು ನಡೆಸಿದ್ದಾರೆ. ಎಲ್ಲಾರ ಪಾಲದ ನೈಸರ್ಗಿಕ ಸಂಪತ್ತನ್ನು ವಿದೇಶಕ್ಕೆ ಕಳ್ಳತನದಲ್ಲಿ ಸಾಗಿಸಿದ್ದಾರೆ. ಆದರೂ ಅಧಿಕೃತ ವರದಿ ಸರ್ಕಾರಕ್ಕೆ ಸಿಗುವ ಮುನ್ನ ಸಿಕ್ಕಿರುವ ವರದಿಯಲ್ಲಿರುವ ವ್ಯಕ್ತಿಗಳು ಹೇಳುವ ಮಾತುಗಳನ್ನು ನೋಡಿದರೇ ನಾವುಗಳೇ ಪಕಾ ಪಕಾ ನಕ್ಕು ಮನಸ್ಸಿನಲ್ಲಿ ಮೂಡುವ ಆಕ್ರೋಶವನ್ನು ಯಾರ ಮುಂದೆ ಹೇಳಿಕೊಳ್ಳಬೇಕೋ ತಿಳಿಯದಾಗಿದೆ.

ಯಾರೊಬ್ಬರು ಹೌದು! ನಾವು ತಪ್ಪು ಮಾಡಿದ್ದೇವೆ ಎಂಬುದನ್ನು ಒಪ್ಪಿಕೊಳ್ಳುತ್ತಿಲ್ಲ. ಒಬ್ಬರೂ ಹೇಳುತ್ತಾರೆ "ಇದು ಅಧಿಕೃತ ವರದಿಯಲ್ಲ, ಆದ್ದರಿಂದ ಈಗಲೇ ನಾವುಗಳು ಏನೂ ಹೇಳಲಾಗುವುದಿಲ್ಲ." ಇನ್ನೊಬ್ಬರು ಹೇಳುತ್ತಾರೆ "ನಾವುಗಳು ಮಾಡಿರುವ ವ್ಯವಹಾರ ಎಲ್ಲ ಅಧಿಕೃತ ಮತ್ತು ಪಾರದರ್ಶಕ ನಮ್ಮ ಹೆಸರು ಇದೇ ಎಂದರೇ ಯಾರೋ ತಿಳಿಯದೇ ನಮ್ಮ ಹೆಸರನ್ನು ಬೇಕಂತಹ ಹೇಳಿಬಿಟ್ಟಿರಬಹುದು" ಹೀಗೆ ಒಬ್ಬೊಬ್ಬರೂ ಒಂದೊಂದು ಸಮರ್ಥನೆಯ ಸರಮಾಲೆಯನ್ನೇ ಪೋಣಿಸಿದ್ದಾರೆ.

ಅಂದರೇ ಸಾವಿರಾರು ಕೋಟಿರೂಪಾಯಿಯ ಅದಿರು, ಮಣ್ಣು ಎಲ್ಲಾ ಕಣ್ಣಿಗೆ ಕಾಣದ ರೀತಿಯಲ್ಲಿ ಮಂಗಮಾಯವಾಯಿತೇ ಪಾಪ ನಮ್ಮ ಈ ಗಣಿ ಮಾಲಿಕರುಗಳು, ಅಧಿಕಾರಿಗಳು ಮತ್ತು ಸರ್ಕಾರ ಏನೇನೂ ಮಾಡಲಿಲ್ಲವೇ? ಪಾಪ ಅವರುಗಳ ಪಾತ್ರ ಏನೋ ಇಲ್ಲವೇನೋ?



ಇವರ ಇಂದಿನ ಈ ಶ್ರೀಮಂತಿಕೆ ಯಾವುದರ ಮೊಲದಿಂದ ಬಂದಿತು ಸ್ವಾಮಿ!

ಇದರ ಬಗ್ಗೆ ಮಾತನ್ನಾಡುವುದೇ ಜಿಗುಪ್ಸೆಯಾಗುತ್ತದೆ. ಸಾಮಾನ್ಯ ಪ್ರಜೆಯ ನೋವು, ನಲಿವು, ಅವನಿಗೆ ಸಿಗಬೇಕಾದ ಸಾಮಾಜಿಕ ನ್ಯಾಯ, ನೈಸರ್ಗಿಕ ಸಂಪತ್ತಿನ ಸಮಪಾಲು, ಇದ್ಯಾವುದು ಈ ಮಹನೀಯರುಗಳಿಗೆ ಬೇಕಾಗಿಲ್ಲ.

ತಪ್ಪು ಮಾಡದವರು ಯಾರ್ವಾರ್ರೇ ಎಂಬ ಡೈಲಾಗ್ ನ್ನು ಪ್ರತಿಯೊಬ್ಬರು ನೀಡುತ್ತಾರೆ.

ಅಲ್ಲಾ ಸ್ವಾಮಿ ಇವರುಗಳಿಗೆ ನೈತಿಕತೆ ಎಂದರೇ ಏನೂ ಎಂಬುದನ್ನು ಯಾವ ರೀತಿಯಲ್ಲಿ ತಿಳಿಯಪಡಿಸಬೇಕು.

ಅಧಿಕಾರದ ಪ್ರಮಾಣ ವಚನ ಓದುವಾಗ ಇವರುಗಳು ಮಾಡುವುದಾದರೂ ಏನೂ. ಅಧಿಕಾರದಲ್ಲಿ ಮೈ ಮರೆಯುವಾಗ ಅಧಿಕಾರವನ್ನು ಉಪಯೋಗಿಸುವುದು ಏನಕ್ಕೆ?

ಬಿಡಿ ಅಧಿಕಾರಿಗಳು, ರಾಜಕಾರಣಿಗಳು ಎಂದರೇ ಜನರು ಏನನ್ನು ಹೇಳುವ ಮಟ್ಟಿಗೆ ಇವರುಗಳು ಇಲ್ಲವೇ ಇಲ್ಲವೇನೋ.

ಅದರೂ ಪುನಃ ಈ ಮಹನೀಯರುಗಳೇ ಅದು ಹೇಗೆ ಪುನರಾಯ್ಕೇಯಾಗಿ ಬರುತ್ತಾರೆ? ವಿದಾನಸೌಧವೇನು ಇವರುಗಳು ವಾಸಮಾಡುವ ಆರಮನೆಯೆಂದುಕೊಂಡು ಮತದಾರರು ಇವರಿಂದ ಆಳಿಸಿಕೊಳ್ಳುವ ದೌರ್ಭಾಗ್ಯ ಜನತೆಯೇ?

ನಾವುಗಳು ಭವ್ಯ ಭಾರತ, ಭವ್ಯ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಶಾಲೆಯ ದಿನಗಳಲ್ಲಿ ಸಮಾಜ ಶಾಸ್ತ್ರದಲ್ಲಿ ಓದುವುದಕ್ಕೂ ಇಲ್ಲಿ ನಡೆಯುತ್ತಿರುವುದಕ್ಕೂ ಏನೊಂದು ಸಂಬಂಧವಿಲ್ಲವಲ್ಲ ದೇವ್ರೂ?

ಇವರುಗಳು ಕೊಡಿ ಇಡುವ ಹಿಡಿಗಂಟು ತಾವು ತಿಂದು ತಮ್ಮ ಮಕ್ಕಳು ಮರಿಗಳವರೆಗೂ, ಇಡಿ ತಮ್ಮ ಖಾಂದನ್ ನೂರು ತಲೆಮಾರುಗಳು ತಿಂದು ತೇಗಿದರೂ ಕಳೆಯದಾರದಷ್ಟು ಮಣ್ಣು, ಹೊನ್ನೂ ಪ್ರತಿಯೊಂದು ತಮಗೆ ಮಾತ್ರ ಎಂಬಂತೆ ಎಲ್ಲಿ ಸಿಗುತ್ತದೋ ಅಲ್ಲಲ್ಲಿ ನಿತ್ಯ ಭೋಜನ ಮಾಡುವವರಲ್ಲ? ಇವರುಗಳಿಗೆ ಕಿಂಚಿತ್ ಆದರೂ ಮರ್ಯಾದೇ ಇದ್ಯಾ? ತಿಳಿಯದಾಗಿದೆ.

ಹಿಂದೆ ಇದ್ದಂತಹ ರಾಜಕಾರಣಿಗಳಿಗೂ ಇವರಿಗೂ ಹೋಲಿಕೆಯನ್ನು ಮಾಡುವುದಕ್ಕೂ ಭಯವಾಗುವ ರೇಂಜಿಗೆ ಇವರುಗಳು ದೊಡ್ಡ ಮಟ್ಟದಲ್ಲಿ ಬೆಳೆದು ಬಿಟ್ಟಿರುವವರೋ ಅಥವಾ ನಾವುಗಳು ಆಯ್ಕೆ ಮಾಡುವುದರಲ್ಲಿಯೇ ಮತದಾರ ಎಡೆವಿಬಿಟ್ಟಿರುವನೇ ತಿಳಿಯದಾಗಿದೆ.

ಉಜ್ವಲ ಭವಿಷ್ಯವನ್ನು ಭಾರತಕ್ಕೆ ಎಲ್ಲಿಂದ ಕೊಡಲಿ ಎನ್ನುವಂತಾಗಿದೆ. ಯಾರಾದರೂ ಅಣ್ಣ ಹಜಾರೆಯವಂತಹ ದೇಶ ಭಕ್ತರು ದ್ವನಿ ಎತ್ತಿದರೇ ಅವರ ಕೂಗನ್ನೂ ಎಷ್ಟರ ಮಟ್ಟಿಗೆ ಹಳ್ಳ ಇಡಿಸಬೇಕೋ ಅಷ್ಟರ ಮಟ್ಟಿಗೆ ಅದರ ಶಕ್ತಿಯನ್ನೇ ತಗ್ಗಿಸುವಂತಹ ನಾಯಕ ಮಣಿಗಳು ನಮ್ಮ ರಾಜಕಾರಣದಲ್ಲಿ ಇದ್ದಾರೆ.




ನೀನು ಒಳ್ಳೆಯವನಲ್ಲ ಎಂದರೇ ಸಾಕು, ನೀನೇಷ್ಟು ಒಳ್ಳೆಯವನು ಮೊದಲು ನೀ ನೋಡಿಕೋ ಎಂದು ಒಣ ಪ್ರತಿಷ್ಠೆಯನ್ನು ಪ್ರದರ್ಶಿಸುತ್ತಾರೆ.

ನನಗೆ ಅನಿಸುತ್ತದೆ ನಮ್ಮ ಕನಸು, ನಮ್ಮ ಉತ್ಸಹ, ನಮ್ಮ ಸಮಾಜ, ನಮ್ಮ ಬೆಳವಣಿಗೆಯನ್ನ ಯಾವುದೋ ಒಂದು ವ್ಯವಸ್ಥೆಯ ಸುಳಿ ದುರ್ಬಲಗೊಳಿಸುತ್ತಿದೆ. ಇದರ ಬದಲಾವಣೆಯ ಸಿಹಿ ಗಾಳಿ ಯಾವಾಗ ಎಲ್ಲಿಂದ ಬಿಸುವುದು?

ಏನೇ ಮಾಡಿದರೂ, ಎಷ್ಟೇ ಭ್ರಷ್ಟರಾದರೂ ಅಧಿಕಾರದಲ್ಲಿಯೇ ಮಜಾ ಅನುಭವಿಸಬೇಕು ಎಂಬ ಭಂಡತನ ನಮ್ಮ ಅಧಿಕಾರಸ್ಥರಲ್ಲಿ ಸ್ಥಾಯಿಯಾಗಿ ಕೂಂತು ಬಿಟ್ಟಿದೆ. ಸ್ವಲ್ಪವಾದರೂ ಕಳಂಕ ಮೆತ್ತಿದರೇ ನಾಚಿಕೆಯೇ ಆಗುತ್ತಿಲ್ಲ. ಹೇ ಇದೇನೂ ಮಹಾ ಬಿಡಿ! ಯಾರೂ ಮಾಡಿಲ್ಲದಂತಹದೇನೂ ನಾನು ಮಾಡಿಲ್ಲ! ಎಂಬಂತಾಗಿದೆ.

ನಾವುಗಳು ನಮ್ಮ ಶಾಲಾ ದಿನಗಳಲ್ಲಿ ಓದಿದ ನೈತಿಕ ಪಾಠಗಳು ಇವರುಗಳು ಯಾರು ಓದಿಯೇ ಇಲ್ಲವೇ ಎಂಬ ಅನುಮಾನ ಕಾಣುತ್ತಿದೆ.

ಸಾರ್ವಜನಿಕ ವ್ಯಕ್ತಿ ಯಾಕೇ ಸಾರ್ವಜನಿಕ ಸೇವೆಗಳಿಗೆ ಸೇರುತ್ತಾನೆ. ಅವನ ಧ್ಯೇಯವಾದರೂ ಏನೂ ಎಂಬುವಂತಾಗಿದೆ.

ಹಿಂದೆ ಸಾರ್ವಜನಿಕ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಡುವವರುಗಳ ಜನರ ಜೀವನ ಶೈಲಿಗೂ, ಇಂದು ಅಡಿ ಇಡುತ್ತಿರುವವರ ಶೈಲಿಗೂ ಹೋಲಿಕೆಯನ್ನು ಮಾಡುವವನೇ ಪಾಪಿಯಂತಾಗಿದೆ.

ಹಿಂದೆ ಸಾಮಾಜಿಕ ಸೇವೆ ಮಾಡುವವನು ಎಂದರೇ ಮನೆಯಲ್ಲಿ ಮೂಗು ಮುರಿಯುತ್ತಿದ್ದರು. ಯಾಕೆಂದರೇ ಅಲ್ಲಿ ಆರ್ಥಿಕವಾಗಿ ಗಳಿಸುವುದಕ್ಕಿಂತಹ ಮನೆಯಲ್ಲಿನ ಸಂಪತ್ತನ್ನೇ ಜನರ ಸೇವೆಗಾಗಿ ಕೊಡಬೇಕಾಗಿತ್ತು. ಮತ್ತು ಅಲ್ಲಿಂದ ಏನೊಂದು ಉಪಯೋಗವಿಲ್ಲ. ಮನೆಗೆ ಮಾರಿ ಪರರಿಗೆ ಉಪಕಾರಿ ಎಂಬಂತಾಗುತ್ತಿತ್ತು. ಕೇವಲ ಹೆಸರು ಮಾತ್ರ ಸಿಗುತ್ತಿತ್ತು.

ಆದರೇ ಇಂದು ಈ ರೀತಿಯಲ್ಲಿದೆಯೇ ನಮ್ಮ ಸಾರ್ವಜನಿಕ ವ್ಯಕ್ತಿಗಳ ಪರಿಸ್ಥಿತಿ?

ಇದೊಂದು ಪ್ಯಾಶನ್ ಆಗಿಬಿಟ್ಟಿದೆ. ಇಂದು ಯಾರು ಹೆಸರಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ದುಡ್ಡು ಒಂದು ಇದ್ದಾರೆ ತಾವುಗಳು ಹೇಗೆ ತಮ್ಮ ಹೆಸರನ್ನು ಜನರ ಮಾನಸದಲ್ಲಿ ಹಸಿರಾಗಿ ಇಟ್ಟುಕೊಂಡು ಇರಬಹುದು ಎಂಬ ಐಡ್ಯಾ ಗೊತ್ತಾಗಿಬಿಟ್ಟಿದೆ. ಅದಕ್ಕೆ ಏನಾನ್ನಾದರೂ ಮಾಡಲೂ ಇವರುಗಳು ತಯಾರು. ಹಾಗೆಯೇ ಅಧಿಕಾರ ಯಾವಗಲ ಇವರ ಅಂಗೈಯಲ್ಲಿಯೇ ಇರಬೇಕು. ಯಾಕೆಂದರೇ ತಾವು ಮಾಡುವ ಆಕ್ರಮ ಸಂಪತ್ತು, ಆಸ್ತಿ ಇವುಗಳಿಗೆಲ್ಲಾ ಅದೇ ರಕ್ಷ ಕವಚ. ಅದಕ್ಕಾಗಿ ಶತ ಪ್ರಯತ್ನವನ್ನು ಮಾಡುತ್ತಲೇ ಮಾಡುತ್ತಲೇ ಆಧಿಕಾರವನ್ನು ಗಳಿಸಿಕೊಂಡು ಸಾಮಾನ್ಯ ಜನರನ್ನು ಬೆಪ್ಪು ಮಾಡುತ್ತಾರೆ.

ಮತ್ತು ಯಾರೂ ಹೆಚ್ಚು ಹಣವನ್ನು ಹೊಂದಿರುವವರೋ ಅವರೇ ಜನನಾಯಕರಾಗುತ್ತಾರೆ.ಅವರುಗಳೇ ಚುನಾವಣೆಯಲ್ಲಿ ಆರಿಸಿಬರುತ್ತಾರೆ. ಹಣವಿಲ್ಲದವರೂ ಎಂದಿಗೂ ಅಧಿಕಾರವನ್ನು ಗಳಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಬಡವ ಬಡವನಾಗಿಯೇ ಇರುತ್ತಾನೆ. ಹಣವಿರುವವ ದೊಡ್ಡ ದೊಡ್ದ ಮಟ್ಟದಲ್ಲಿ ಬೆಳೆಯುತ್ತಾ ಹೋಗುತ್ತಾನೆ. ಅವನಿಗೆ ಮಾತ್ರ ರಾಜಕೀಯ, ಚುನಾವಣೆ, ಸಮಾಜ ಸೇವೆ ಎಂಬ ಪೋಜು.

ಈ ರೀತಿಯಲ್ಲಿರುವ ನಮ್ಮ ವ್ಯವಸ್ಥೆಯ ಈ ದಿನಗಳಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಹೊಸ ಆಶಾ ಕಿರಣವನ್ನು ಮೂಡಿಸುವ ವ್ಯಕ್ತಿಯ, ವ್ಯವಸ್ಥೆಯ ಆಗಮವನ್ನು ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಯಾವ ರೀತಿಯಲ್ಲಿ ನೋಡಬೇಕೋ ತಿಳಿಯದಾಗಿದೇ!!

ಜೈ ಭಾರತ್!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ