ಗುರುವಾರ, ಜನವರಿ 6, 2011

ವಿಮರ್ಶೆ ಮತ್ತು ಸಂಸ್ಕೃತಿ

ನಮ್ಮ ನೆಚ್ಚಿನ ವಿಮರ್ಶಕರಾದ ರಹಮತ್ ತರೀಕೆರೆಯವರ "ಕತ್ತಿಯಂಚಿನ ದಾರಿ" ವಿಮರ್ಶೆ ಮತ್ತು ಸಂಸ್ಕೃತಿ ಚಿಂತನೆಯ ಪುಸ್ತಕಕ್ಕೆ ಈ ಭಾರಿಯ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಬಂದಿದೆ. ಅದು ನಿಜವಾಗಿಯೂ ಕನ್ನಡ ಸಾಹಿತ್ಯ ಲೋಕ ಸಂತೋಷಪಡುವ ವಿಚಾರ. ಸಾಮಾನ್ಯ ಓದುಗರಿಗೆ ವಿಮರ್ಶೆಯ ಚಿಂತನೆಯ ಬರಹಗಳು ಅಷ್ಟಾಗಿ ಇಷ್ಟವಾಗದೇ ಇರಬಹುದು. ಯಾಕೆಂದರೇ ಅಲ್ಲಿ ವಿವಿಧ ವಿಚಾರಗಳ ಬಾರವಿರುವುದು. ಅವುಗಳ ವಿಚಾರದ ಮಂಥನವನ್ನು ಜೀರ್ಣಿಸಿಕೊಳ್ಳುವ ಮಟ್ಟಿಗೆ ನಾವುಗಳು ಬೆಳೆದು ಬಂದಿಲ್ಲ ಬಿಡಿ ಎಂಬ ಭಯವಿರಬಹುದು.


ಇಂಥ ಬರಹಗಳು ಪತ್ರಿಕೆಗಳಲ್ಲಿ ಬಿಡಿ ಬಿಡಿ ಲೇಖನಗಳಲ್ಲಿ ಬಂದಾಗ ಓದುವ ಮನಸ್ಸನ್ನು ಸಾಮಾನ್ಯ ಓದುಗ ಮಾಡುವನು. ಆದರೂ ಮನ್ನೆ ನಾನು ಬೆಂಗಳೂರಿನ ಪ್ರತಿಷ್ಠೀತ ಪುಸ್ತಕ ಮಳಿಗೆಯಲ್ಲಿ ರಹಮತ್ ತರೀಕೆರೆಯವರ ಬಹುಮಾನವನ್ನು ಪಡೆದ ಪುಸ್ತಕವನ್ನು ಪ್ರತಿಯೊಬ್ಬರು ಕೇಳುತ್ತಿದ್ದುದು ಮತ್ತು ತಮಗಾಗಿ ಖರೀದಿಸುತ್ತಿದ್ದುದು ಸಂತಸದ ನೋಟವಾಗಿತ್ತು.


ಅವರ ಇನ್ನೊಂದು ಪುಸ್ತಕ "ಹೊಸ ತಲೆಮಾರಿನ ತಲ್ಲಣಗಳು". ಕನ್ನಡದ ಹೊಸ ತಲೆಮಾರಿನ ಪ್ರತಿಯೊಬ್ಬ ಬರಹಗಾರರಿಂದ ಒಂದೊಂದು ಲೇಖನಗಳನ್ನು ಪಡೆದು ಅವುಗಳನ್ನು ಅವರ ಪರಿಚಯದೊಂದಿಗೆ ಸಂಗ್ರಹಿಸಿಕೊಟ್ಟಿದ್ದನ್ನು ನಾನು ಬಹಳ ಇಷ್ಟಪಟ್ಟಿದ್ದೇ. ತರೀಕೆರೆಯವರ ಕನ್ನಡಾಭಿಮಾನ ಮತ್ತು ನಮ್ಮ ಮಣ್ಣಿನ ಸಂಸ್ಕೃತಿಯ ಬಗ್ಗೆ ಅವರಿಗಿರುವ ಕಾಳಜಿಯನ್ನು ಕಂಡು ತುಂಬ ಖುಷಿಯಾಯಿತು. ಎಲ್ಲಾ ಲೇಖಕರುಗಳು ಆ ಪುಸ್ತಕದಲ್ಲಿ ತಾವುಗಳು ಯಾಕೆ ಕನ್ನಡದಲ್ಲಿ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದ್ದೇವೆ ಮತ್ತು ಕನ್ನಡ ಸಾಹಿತ್ಯದ ಕಡೆ ಒಲವು ಮೊಡಲು ತಮ್ಮ ನೆರೆಹೊರೆಯವರು ಮತ್ತು ಸುತ್ತಲಿನ ಪರಿಸರ ಯಾವ ರೀತಿ ಸಹಕರಿಸಿತು ಮತ್ತು ಮುಂದೆ ತಾವು ಇಡುತ್ತಿರುವ ಹೆಜ್ಜೆಗಳು ಯಾವ ಕಡೆ ಇದೆ ಎಂಬುದನ್ನು ಚಿಕ್ಕದಾದ ತಮ್ಮ ತಮ್ಮ ಲೇಖನಗಳಲ್ಲಿ ಅಸಕ್ತಿಕರವಾಗಿ ನಿರೂಪಿಸಿದ್ದಾರೆ.

ಈ ರೀತಿಯ ಲೇಖನಗಳು ಕನ್ನಡ ಸಾಹಿತ್ಯದಲ್ಲಿ ಅಸಕ್ತಿಯನ್ನು ಕೆರಳಿಸಲು ಮತ್ತು ನಮ್ಮಂತಹ ಸಾಮಾನ್ಯ ಓದುಗ ತನ್ನ ನೆಚ್ಚಿನ ಮತ್ತು ಹತ್ತಿರದ ಲೇಖಕನ ಬಗ್ಗೆ ಹೆಚ್ಚಿನ ರೀತಿಯಲ್ಲಿ ತಿಳಿಯಲು ಸಹಕಾರಿಯಾಗಿದೆ. ಅದಕ್ಕೆ ತರೀಕೆರೆಯವರಿಗೆ ಅಭಿನಂದನೆಗಳು.

ಕತ್ತಿಯಂಚಿನ ದಾರಿಯಲ್ಲಿನ ಬರಹಗಳು ತುಂಬ ಗಂಭಿರವಾದ ಒಂದು ಚಿಂತನೆಯನ್ನು ನಮ್ಮ ಸಮಕಾಲೀನ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ಬೀರುತ್ತವೆ. ಅಲ್ಲಿರುವ ಕೆಲವೊಂದು ಬರಹಗಳಾದ ತೇಜಸ್ವಿಯವರ ಮಾಯಾಲೋಕದ ಬಗ್ಗೆ ಚಿಂತಿಸಿರುವ ಮತ್ತು ತಾಳಿರುವ ಅಭಿಪ್ರಾಯಗಳು ನಮ್ಮ ತೇಜಸ್ವಿಯವರನ್ನು ಮತ್ತು ಅವರ ಬದುಕು ಬರಹಗಳನ್ನು ಇನ್ನೂ ಹತ್ತಿರವರನ್ನಾಗಿ ಮಾಡಿ ಹೆಮ್ಮೆಯನ್ನು ಮೊಡಿಸಿ ಪುನಃ ಅವರ ಕರ್ವಾಲೂ, ಜುಗಾರಿಕ್ರಾಸ್, ಮಾಯಾಲೋಕವನ್ನು ಓದುವಂತೆ ಪ್ರೇರಪಿಸುತ್ತದೆ.


ಹಾಗೆಯೇ ಲಂಕೇಶ್ ರವರ ಕೂನೆಯ ದಿನಗಳ ಮೆಲುಕು ಸಹ ಅವರ ಅಗಾಧ ಕನ್ನಡಪರ ಚಿಂತನೆ ಮತ್ತು ದೈತ್ಯ ಪ್ರತಿಭೆಯ ದರ್ಶನವನ್ನು ನಮ್ಮ ಮೇಷ್ಟ್ರರ ಬಗ್ಗೆ ಒದಗಿಸುತ್ತದೆ.

ಕೃತಿಯಲ್ಲಿನ ಕಟ್ಟ ಕಡೆಯ ಲೇಖನವಾದ "ಕತ್ತಿಯಂಚಿನ ದಾರಿ" ಬರಹ ಒಟ್ಟಾಗಿ ನಮ್ಮ ಕನ್ನಡ ಸಾಹಿತ್ಯದ ನೀಲುವುಗಳು ಮತ್ತು ಅದು ಸಾಗುತ್ತಿರುವ ಸಾಹಿತ್ಯದ ಪರಿಯನ್ನು ವಿವಿಧ ರೀತಿಯಲ್ಲಿ ಆತ್ಮೀಯವಾಗಿ ಚಿಂತಿಸುವಂತೆ ಮಾಡುತ್ತದೆ.

ಕುವೆಂಪು, ಶಾಂತಿನಾಥ ದೇಸಾಯಿಯವರ ಬಗ್ಗೆ, ಸೂಫಿ ಸಾಹಿತ್ಯ, ಮುಸ್ಲಿಂ ತತ್ವಪದಕಾರರ ಸಾಹಿತ್ಯ ಬೆಳವಣಿಗೆ, ವಚನಕಾರರು ಮತ್ತು ವಚನ ಸಾಹಿತ್ಯ, ಶೂನ್ಯ ಸಂಪಾದನೆ ಮುಂತಾದ ಬರಹಗಳ ಅಗಾಧವಾದ ವಿಷಯ ವಿಚಾರ ದರ್ಪಣೆ ರಹಮತ್ ತರೀಕೆರೆಯವರ ಪಾಂಡಿತ್ಯ ಮತ್ತು ಅವರುಗಳ ಒಳಗಣ್ಣಿನ ಬಗ್ಗೆ ಹೆಮ್ಮೆಪಡುವಂತಾಗುತ್ತದೆ.

ಆದರೂ ನನಗೆ ಅವರುಗಳು ತಿಳಿಸಿರುವಂತ ವಿಚಾರಗಳನ್ನು ಜೀರ್ಣಿಸಿಕೊಳ್ಳುವಷ್ಟು ನಾನು ಶಕ್ತನಲ್ಲಾ ಅನ್ನಿಸುವಂತೆ ಮಾಡಿಸಿತು. ಆದರೆ ಸಾಹಿತ್ಯ ವಿದ್ಯಾರ್ಥಿಗಳಿಗೆ ಈ ವಿಚಾರಗಳು ಮುತ್ತಿನಂಥ ಮಣಿಗಳೇ ಸರಿ. ಅಲ್ಲಿ ತಿಳಿಸಿರುವ ವಿಚಾರಗಳ ಸಂಗ್ರಹಕ್ಕೆ ಎಷ್ಟೊಂದು ಅಧ್ಯಯನ ಮಾಡಬೇಕು ಮತ್ತು ಎಷ್ಟೊಂದು ಚಿಂತಿಸಬೇಕು ಎಂಬುದನ್ನು ಉಹಿಸಲು ಸಾಧ್ಯವಿಲ್ಲ. ಅದಕ್ಕೆ ತರೀಕೆಯವರು ಯಾವತ್ತಿಗೂ ಗ್ರೇಟ್!

ಉತ್ತಮ ಗುರುವಾಗಿ ಇಂದಿಗೂ ಎಲ್ಲಾ ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಅವರ ಏಳ್ಗೆಗೆ ಶ್ರಮಿಸುತ್ತಿರುವ ನವ್ಯ ತಲೆಮಾರಿನ ಕನ್ನಡ ತಾರೆಗೆ ನಮೋ ನಮಃ!

ಯಾವುದೇ ಒಂದು ಪುಸ್ತಕವನ್ನು ನಾವುಗಳು ಸಾಮಾನ್ಯವಾಗಿ ಓದುವುದು. ಒಂದು ಆ ಲೇಖಕನ ಬಗ್ಗೆ ನಮ್ಮ ಸುತ್ತಲಿನವರುಗಳು ಮಾತನಾಡುವ ಮಾತಿನ ಮೇಲೆ ಮತ್ತು ಆ ಒಂದು ನಂಬಿಕೆಯ ಮೇಲೆ. ಅಲ್ಲೇ ಒಂದು ಸಣ್ಣ ವಿಮರ್ಶೆ ಹುಟ್ಟುತ್ತದೆ. ನಮ್ಮ ಹತ್ತಿರದವರು ನಮಗೆ ಹೇಳುತ್ತಾರೆ. ಅವರ ಬರಹ ಓದು. ಅದು ಚೆನ್ನಾಗಿರುತ್ತದೆ. ನೀನು ಖುಷಿಪಡುತ್ತೀಯ. ಹೀಗೆ ಹೀಗೆ.. ಅವರ ಸಲಹೆ ಸಾಗುತ್ತದೆ. ಅದರ ಆಧಾರದ ಮೇಲೆ ನಾವುಗಳು ಓದಲು ಪ್ರಾರಂಭಿಸಿ..ಲೇಖಕ ಹೇಳುವ ಕಥೆ, ಕವಿತೆ, ಕಾದಂಬರಿಯ ಮಾದರಿ ಇಷ್ಟವಾದರೇ ಪುನಃ ಆ ವ್ಯಕ್ತಿ ಬರೆದಿರುವ ಎಲ್ಲಾ ಹಳೆಯ ಮತ್ತು ಹೊಸದಾಗಿ ಯಾವುದೇ ರೀತಿಯ ಬರಹ ಬಂದರು ಗುಡ್ಡೆಯಾಕಿಕೊಂಡು ಓದುತ್ತಾ ಓದುತ್ತಾ ಒಂದು ರೀತಿಯ ಪಕ್ಕ ಅವರ ಪ್ಯಾನ್ ಆಗಿ ಬಿಡುತ್ತೇವೆ.

ಅಲ್ಲಿ ನಮಗೆ ಯಾವುದೇ ಪಂಥ, ಅವರು ಹೇಳುವ ವಿಚಾರ, ನೀಲುವು ಯಾವೊಂದರ ಬಗ್ಗೆ ಯೋಚಿಸಲು ಹೋಗುವುದಿಲ್ಲ. ಅವರು ಹೇಳುವ ಏನೊ ಒಂದು ಮಾತು ಅಥಾವ ದಾಟಿ ಮನಸ್ಸಿಗೆ ಹಿಡಿಸಿ ಬಿಟ್ಟರೆ ಸಾಕು ನಮಗೆ ಓದುವ ಕುತೂಹಲವಾಗಿ ಬಿಡುತ್ತದೆ. ಅಲ್ಲಿ ಬರುವ ಕಥೆ ನಮ್ಮ ನಮ್ಮ ಸಾಮಾನ್ಯ ಜೀವನದ ಪ್ರತಿಬಿಂಬವನ್ನು ಬೇರೆಯ ರೀತಿಯಲ್ಲಿ ತೋರಿಸಿ ಅದು ನಮ್ಮ ನಮ್ಮ ಬದುಕಿಗೆ ಹತ್ತಿರವಾಗಿ ಬಿಟ್ಟಿದ್ದರಂತೂ ಮುಗಿಯಿತು. ಅಲ್ಲಿಯೇ ಕರಗಿ ಬಿಟ್ಟಿರುತ್ತೇವೆ.

ಈ ರೀತಿಯ ಹುಂಬಿನಲ್ಲಿ ನಮ್ಮ ಓದನ್ನು ನಮ್ಮ ಹವ್ಯಾಸವನ್ನಾಗಿ ಮಾಡಿ ನಾವುಗಳು ಸ್ವಲ್ಪ ಸ್ವಲ್ಪ ಬೆಳೆದು. ಸ್ಪಲ್ಪ ಸ್ವಲ್ಪ ಯೋಚಿಸುವಂತಾದರೇ ನಾವುಗಳೇ ಬೇರೆ ಬೇರೆ ಲೇಖಕರ ಕಡೆ ಮುಖ ಮಾಡಿ ನಮ್ಮ ಹುಮ್ಮಸ್ಸಿನ ಕುತೂಹಲದ ದಾವಗ್ನಿಯನ್ನು ಪೂರೈಸುವ ಹಲವಾರು ಉತ್ತಮ ಸಾಹಿತಿಗಳ ಕಡೆಗೆ ಸಾಗುತ್ತೇವೆ. ಇದು ಎಂದು ನಿಲ್ಲದ ಪಯಣ.

ಈ ರೀತಿಯ ತಿಳುವಳಿಕೆಗೆ ಪತ್ರಿಕೆಗಳಲ್ಲಿ ಬರುವ ಪುಸ್ತಕ ವಿಮರ್ಶೆಗಳು ತುಂಬ ಸಹಕಾರಿಯಾಗುತ್ತವೆ. ನನಗೆ ಅನಿಸುತ್ತದೆ. ಪುಸ್ತಕ ವಿಮರ್ಶೆಯನ್ನು ಓದದೇ ಪುಸ್ತಕವನ್ನು ಓದುವ ಮಜಾ ವಿಮರ್ಶೆಯನ್ನು ಓದಿದಾಗ ಬರುವುದಿಲ್ಲವೇನೊ ತಿಳಿಯದು. ವಿಮರ್ಶಕ ತನ್ನ ತಿಳುವಳಿಕೆಯೆಂಬ ಮೂಸೆಯಲ್ಲಿ ವಿವಿಧ ಪರೀಕ್ಷೆಗಳನ್ನು ಆ ಕೃತಿಯ ಮೇಲೆ ಮಾಡಿ ತನ್ನ ಅಭಿಪ್ರಾಯಗಳನ್ನು ಸಾರ್ವತ್ರಿಕವಾಗಿ ಸಾಹಿತ್ಯದ ಮೊಲಕ ಕೃತಿಯನ್ನು ಒಂದು ವರ್ಗಕ್ಕೆ ಸೇರಿಸುತ್ತಾನೆ. ಆದರೇ ಸಾಮಾನ್ಯ ಓದುಗನಿಗೆ ಆ ರೀತಿಯ ಯಾವ ಉನ್ನತ ತಿಳುವಳಿಕೆ ಇರುವುದಿಲ್ಲ. ಅಲ್ಲಿ ಅವನ ತಂತುವಿಗೆ ಅದು ಚೆನ್ನಾಗಿ ಸ್ಪಂದಿಸಿ ಖುಷಿ ಕೊಡುತ್ತಾ ಓದಿಸಿಕೊಂಡು ಹೊಸ ಹೊಸ ವಿಷಯಗಳನ್ನು ತಿಳಿಸುತ್ತಾ ಹೋದರೆ ಅಷ್ಟೇ ಸಾಕು.

ಆದರೇ ವಿಮರ್ಶೆ ಮತ್ತು ವಿಮರ್ಶೆಯ ಬರಹಗಳು ನಮ್ಮ ಸಾಹಿತ್ಯ ರಂಗಕ್ಕೆ ಅವಶ್ಯ. ಯಾವುದೇ ಒಂದು ಕಲಾ ಕೃತಿಯನ್ನು ವಿಭಿನ್ನ ರೀತಿಯಲ್ಲಿ ಚಿಂತಿಸಿ ಅದನ್ನು ಪರಾಮರ್ಶಿಸುವುದು ಲೇಖಕನಿಗೆ ಅರಿವನ್ನು ಮತ್ತು ಅವನ ಮುಂದಿನ ಕೃತಿಯ ಬಗ್ಗೆ ಹೇಗೆ ಯೋಚಿಸಬೇಕು ಎಂಬುದರ ಬಗ್ಗೆ ಎಚ್ಚರಿಕೆಯ ಕಿವಿ ಮಾತನ್ನು ಕೊಟ್ಟಂತಾಗುತ್ತದೆ.

ಮತ್ತು ವಿಮರ್ಶಕ ತಾನು ಸುಖ ಸುಮ್ಮನೇ ಯಾವುದೇ ನೀಲುವುಗಳನ್ನು ಯಾವುದೇ ಕೃತಿಯ ಬಗ್ಗೆ ತಾಳುವುದಿಲ್ಲ. ಅವನು ಹುಟ್ಟಿ ಹಾಕುವ ಸಂವಾದದ ಬೇರುಗಳು ಹತ್ತು ಹಲವು ರೀತಿಯ ಕೃತಿಗಳ ಜೊತೆಯಲ್ಲಿ ಹೋಲಿಸಿ ಮತ್ತು ಇದರ ಉನ್ನತಿಯನ್ನು ತಿಳಿಸುವಂತದಾಗಿರುತ್ತದೆ. ಅದಕ್ಕಾಗಿ ಅವನ ದುಡಿತ ತುಡಿತ ದೊಡ್ಡದಿರುತ್ತದೆ. ಅದಕ್ಕಾಗಿ ಕನ್ನಡ ಭಾಷೆಯನ್ನು ಒಂದೇ ಅಲ್ಲದೇ ಜಗತ್ತಿನ ಅತಿ ಉನ್ನತವಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಅವನ ತಿಳುವಳಿಕೆಯ ಪರಿಶ್ರಮವಿರುತ್ತದೆ. ಆಗ ಮಾತ್ರ ಅವನು ಹೇಳುವ ತಾಳುವ ನೀಲುವುಗಳು ಸಮರ್ಪಕವಾಗಿರುತ್ತವೆ. ಅವನು ಬರಹಗಾರನಿಗಿಂತ ಹೆಚ್ಚು ಹೆಚ್ಚು ವಿವಿಧ ಪ್ರಕಾರಗಳನ್ನು ಓದಿ ಇದು ಹೀಗೆ ಹೀಗೆ ಎಂದು ನಿರ್ಧರಿಸುವ ಛಾತಿಯನ್ನು ಗಳಿಸಿರುತ್ತಾನೆ.

ನಮ್ಮ ಕನ್ನಡ ಸಾಹಿತ್ಯ ರಂಗದಲ್ಲಿ ಹೀಗೆ ಇರುವ ಕೆಲವೇ ಕೆಲವು ಉತ್ತಮ ವಿಮರ್ಶಕರ ಚಿಕ್ಕ ಸಮೋಹವಿದೆ. ಅದು ಇನ್ನು ಬೆಳೆಯಬೇಕು. ಮತ್ತು ಸಾಮಾನ್ಯ ಓದುಗ ವಿಮರ್ಶ ಗ್ರಂಥಗಳನ್ನು ಕೊಂಡು ಓದುವಂತಾಗಬೇಕು. ಆಗ ಹೊಸದಾಗಿ ರಚಿತವಾಗುವ ಕೃತಿಗಳಿಗೆ ಒಂದು ಅಪರಂಜಿಯ ಕಳೆ ಬರುವುದು. ಆಗ ಅದೇ ಗಟ್ಟಿ ಸಾಹಿತ್ಯವಾಗಿ ನಿಲ್ಲುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ