ಶುಕ್ರವಾರ, ಡಿಸೆಂಬರ್ 31, 2010

ಹೊಸ ವರ್ಷಕ್ಕೆ ಹೊಸ ಕನಸಿಗೆ ಚಿಯರ್ಸ್!

ಹೊಸ ವರ್ಷಕ್ಕೆ ಕಾಲು ಇಟ್ಟಾಯಿತು. ಹೊಸ ಹೊಸ ಭಾವನೆಗಳು. ಹೊಸ ಹೊಸ ಆಸೆಯ ಚಿಗುರು ಕನಸು. ಕಳೆದ ದಿನಗಳ ನೋವು ನಲಿವುಗಳ ಪುನರ್ ಮೆಲುಕು ಹಾಕುತ್ತಾ... ಹೊಸ ದಿನಗಳಲ್ಲಿ ಕೂಂಚ ಕೂಂಚ ಹೊಸ ತನದ ಸುಖದ ಕ್ಷಣಗಳ ಬಗ್ಗೆ ಕನಸು ಕಾಣುತ್ತಾ.. ಹಿಡೇರದ ಕನಸುಗಳ ನನಸು ಮಾಡುವ ದಾರಿ ಹುಡುಕುತ್ತಾ.. ಹೊಸ ಹೊಸ ಅವಕಾಶಗಳಿಗಾಗಿ ಕಾಯುತ್ತಾ.. ಹೊಸ ಹೊಸ ಯೋಚನೆಗಳತ್ತಾ.. ಹೊಸ ಹೊಸ ಚಿಂತನೆಗಳನ್ನು ಮೂಡಿಸುತ್ತಾ.. ಹೊಸ ಆಶ ಕಿರಣವನ್ನು ನಿರೀಕ್ಷಿಸುತ್ತಾ ಪುನಃ ನಮ್ಮ ನಿತ್ಯ ಪಯಣವನ್ನು ಮಾಡುತ್ತಾ.. ಜೀವನ ಬಂಡಿಯನ್ನು ಸಾಗಿಸುತ್ತಾ.. ಹೀಗೆ ಸಾಗುವುದು ನಮ್ಮ ನಿಮ್ಮಗಳ ನಾನಾ ರೀತಿಯ ರಂಗಿನ ಚಿಂತನೆಯ ಚಿಗುರುಗಳು.. ಅದಕ್ಕೆ ಅಂತ್ಯವಿಲ್ಲ. ಅದಕ್ಕೆ ಬೆಸರವಿಲ್ಲ. ಅದೇ ಅಲ್ಲವಾ ಹಳೆ ಬೇರು ಹೊಸ ಚಿಗುರು.


ನಮ್ಮ ಐ.ಟಿ ಮತ್ತು ಬೆಂಗಳೂರಿನ ಜನ ವರ್ಷದ ಅಂತ್ಯ ಡಿಸೆಂಬರ್ ತಿಂಗಳು ಬಂತು ಅಂದರೇ ಸಾಕು. ಮೂದಲ ದಿನದಿಂದಲೇ ತಮ್ಮ ಹೊಸ ವರ್ಷದ ಸ್ವಾಗತವನ್ನು ಮಾಡಲು ತರಾವೇರಿ ಯೋಜನೆಯನ್ನು ರಚಿಸುತ್ತಾರೆ. ಅಲ್ಲಿ ಇಲ್ಲಿ ಹೊಸ ವರ್ಷದ ಆಚರಣೆಯನ್ನು ಮಾಡಿದರೇ.. ಅವರುಗಳನ್ನು ಇವರುಗಳನ್ನು ಕರೆಯೋಣ.. ಅಲ್ಲಿ ಹೀಗೆ ಹೀಗೆ ಖುಷಿಪಡೋಣ... ಅಲ್ಲಿ ಇಷ್ಟು ತಿಂಡಿ... ಅಲ್ಲಿ ಇಷ್ಟು ವೈರೇಟಿಯ ಡ್ರಿಂಕ್ಸ್.. ಹೀಗೆ ದೊಡ್ಡದೊಂದು ಪಟ್ಟಿಯನ್ನೇ ತಯಾರಿಸಿ ಅದರ ನೆರವೇರಿಕೆಗೆ ಶತ ಪ್ರಯತ್ನ ಮಾಡುತ್ತಾರೆ. ಹೀಗೆ ಸಾಗುತ್ತದೆ ನಮ್ಮ ಮೆಟ್ರೋ ಜನರ ಹೊಸ ವರ್ಷದ ಭರ್ಜರಿ ಸ್ವಾಗತಾಚರಣೆ.



ಪ್ರತಿಯೊಬ್ಬರಿಗೂ ಏನೋ ಒಂದು ತಲ್ಲಣ.. ಡಿಸೆಂಬರ್ ೩೧ ರ ಮಧ್ಯ ರಾತ್ರಿ .. ಗಡಿಯಾರದ ಮುಳ್ಳು ೧೨ಕ್ಕೆ ಬಂದಾಗ.. ಅಲ್ಲಿ ಏದ್ದೇಳುವ ಉದ್ಗಾರಗಳು.. ಮುಖದಲ್ಲಿ ಮೂಡುವ ಖುಷಿ, ಸಂತೋಷಭರಿತ ಭಾವನೆಗಳನ್ನು ನಾನಾ ರೀತಿಯಲ್ಲಿ ತನ್ನ ಜೊತೆಗಾರರೊಡನೆ ಜೋರಾಗಿ ಕೂಗುವ ಮೊಲಕ.. ಕುಡಿಯುವ ಮೊಲಕ.. ಕಿಕ್ ಬರುವಂತೆ ನ್ಯೂ ಹಿಯರ್ ನ್ನು ಬರಮಾಡಿಕೊಂಡು ಮುಂಜಾನೆಯವರೆಗೂ.. ಮಸ್ತಿ.. ಮಜಾದಲ್ಲಿ ತಲ್ಲಿನನಾಗುತ್ತಾನೆ..ಬೆಂಗಳೂರಿನ ಸಾಮಾನ್ಯ ಪ್ರಜೆ.... ಇರಲೇಬೇಕು ಈ ರೀತಿಯ ಒಂದು ಸಂವತ್ಸರಕ್ಕೆ.. ಮುನ್ನೂರು ಅರವೈತೈದು ದಿನಗಳ ಬಳುವಳಿಗೆ!!



ತಮ್ಮ ಎಲ್ಲೆಯನ್ನು ಮೀರಿ ತಮ್ಮ ನಿಜತನವನ್ನು ಬೆಂಗಳೂರಿನ ಪ್ರತಿ ರಸ್ತೆಯಲ್ಲಿಯು ತೋರಿಸುವರು. ಎಂ.ಜಿ ರೋಡ, ಬ್ರಿಗೇಡ್ ರಸ್ತೆಗಳನ್ನು ಕೇಳುವುದೇ ಬೇಡ. ಕಾಲು ಇಡಲು ಜಾಗವಿರದಂತೆ ಜಮಾಯಿಸಿ ರಸ್ತೆಯಲ್ಲಿ ತಮ್ಮ ನರ್ತನವನ್ನು ತೋರಿಸುತ್ತಿರುತ್ತಾರೆ. ಇವರುಗಳ ಎಲ್ಲೇಯನ್ನು ಇತಿ ಮೀತಿಯಲ್ಲಿ ಇಡಲು ಸಾವಿರಾರು ಸಂಖ್ಯೆಯ ಪೋಲಿಸ್ ಪೊರ್ಸ್. ಈ ಮಂದಿಯ ಪ್ರವಾರವನ್ನು ತಡೆಯಲಾಗದೇ ಎಂ.ಜಿ ರಸ್ತೆಯಲ್ಲಿರುವ ಮುಖ್ಯ ಹೋಟೆಲ್ ಗಳನ್ನು ಜನವರಿ ೧ ರವರೆಗೆ ಮುಚ್ಚಿರುತ್ತೇವೆ ಎಂಬ ಪ್ರಕಟಣೆಗಳು ಪತ್ರಿಕೆಗಳಲ್ಲಿ. ಪೋಲಿಸ್ ಕಮೀಷನರ್ ರವರು ತಮ್ಮ ಹೊಸ ವರ್ಷದ ಆಚರಣೆಯ ಬಗ್ಗೆ ಹೇಳಿದ ಮಾತು ಕೇಳಿ.. "ಇಂದಿನ ರಾತ್ರಿ ಯಾವ ರೀತಿಯ ಅವಘಡಗಳು ನಡೆಯದಿದ್ದರೆ ಅದೇ ನನಗೆ ಮುಖ್ಯವಾದ ಹೊಸ ವರ್ಷಾಚರಣೆ". ಮಹಿಳೆಯರನ್ನು ಮಾತ್ರ ಎಂ.ಜಿ ರಸ್ತೆಗೆ ಕರೆದುಕೊಂಡು ಹೋಗಬೇಡಿ ಎಂಬ ಪ್ರಕಟಣೆ... ಯಾಕೆ ಹೀಗೆ ಎಂಬುದನ್ನು ಪ್ರತಿಯೊಬ್ಬರೂ ಚಿಂತಿಸಬೇಕು. ಈ ರೀತಿಯ ಆಚರಣೆಯನ್ನು ನಿಜವಾಗಿಯೋ ಹೊಸ ವರ್ಷಾಚರಣೆ ನಿರೀಕ್ಷಿಸುತ್ತಾ?



ಡಿಸೆಂಬರ್ ೩೧ ರ ರಾತ್ರಿ ರಸ್ತೆಯ ಮೇಲೆ ನಡೆದಾಡುವುದು ಸಹ ಕಷ್ಟ... ನೀವುಗಳು ಸರಿಯಾಗಿ ಹೋದರೂ ಎದುರಿಗೆ ಬರುವ ಮಂದಿಗಳು ಯಾವ ರೀತಿಯಲ್ಲಿ ಬರುವವರು ಎಂಬ ಗ್ಯಾರಂಟಿಯನ್ನು ಕೊಡಲಂತು ಸಾಧ್ಯವಿಲ್ಲ. ಅದಕ್ಕಾಗಿಯೇ ಎಂಬಂತೆ.. ಅದನ್ನು ನೆನಪು ಮಾಡಲೇ ಎಂಬಂತೆ.. ಬಿಟ್ರ್ಯಾಕ್ ರವರ ಡಿಜಿಟಲ್ ಬೋರ್ಡನಲ್ಲಿ " ಮುಂದೆ ಮದ್ಯಪಾನ ತಪಸಾಣೆಯನ್ನು ಮಾಡಲಾಗುವುದು" ಎಂಬುದನ್ನು ರಕ್ತಗೆಂಪು ಅಕ್ಷರದಲ್ಲಿ ತೋರಿಸುತ್ತಾರೆ.



ಇದು ನಮ್ಮ ಬೆಂಗಳೂರು ಮಂದಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸುವ ಪರಿ. ಈ ವರ್ಷ ನೀವೇನಾದರೂ ಮಿಸ್ ಮಾಡಿಕೊಂಡಿದ್ದರೇ ಮುಂದಿನ ವರ್ಷದಲ್ಲಿ ಮನೆಯಿಂದ ಹೊರ ಬಂದು ನೋಡಿ ಆನಂದಿಸಿ ನೀವು ಪಾಲ್ಗೂಳ್ಳಿ!



ಒಂದು ವರ್ಷವನ್ನು ಕಳೆಯುವುದು ಎಂಬುದು ಒಬ್ಬ ವ್ಯಕ್ತಿಗೆ ಬಹು ದೊಡ್ಡದಾದ ಸಂಗತಿ. ಕಾಲವನ್ನು ತಡೆಯುವವರು ಯಾರು ಇಲ್ಲ. ಅದು ಏನೊಂದು ಬೇದವನ್ನು ಮಾಡದೇ ಈ ಭೂಮಿಯ ಮೇಲೆ ಇರುವ ಪ್ರತಿಯೊಬ್ಬ ಜೀವಿಗೂ ಸಮಾನವಾಗಿ ಸಮಯವನ್ನು ಕೊಡುತ್ತದೆ. ಅದನ್ನು ತನ್ನ ಜಾಣ್ಮೆಯಿಂದ ಬಳಸಿಕೊಂಡವನು ಕಾಲದ ಗೆಳೆಯನಾಗುತ್ತಾನೆ ಮತ್ತು ಅವನೇ ತನ್ನ ಬದುಕು ಎಂಬ ಬಂಡಿಯನ್ನು ಉನ್ನತವಾಗಿ ಮುನ್ನಡಿಸಿ ಸಾಧಕ ಎಂಬ ಪ್ರಭಾವಳಿಯನ್ನು ಧರಿಸುತ್ತಾನೆ ಅಷ್ಟೇ.



ಸಮಯದ ಮಹತ್ವವನ್ನು ಅವಕಾಶಗಳನ್ನು ಕಳೆದುಕೊಂಡಾಗ ಅನುಭವಿಸುತ್ತಾನೆ. ತನ್ನ ಜೊತೆಯವರು ಉಪಯೋಗಿಸಿಕೊಂಡು ತನ್ನ ಪಕ್ಕದಲ್ಲಿಯೇ ವಿಭಿನ್ನವಾಗಿ ಮಾಡಿ ತೋರಿಸಿದಾಗ ಮಾತ್ರ ಅವನ ಅರಿವಿಗೆ ಬರುತ್ತದೆ. ಅಷ್ಟೋತ್ತಿಗಾಗಲೇ ಆ ಸಮಯ ಚರಿತ್ರೆಯಾಗಿರುತ್ತದೆ. ಏನಾನ್ನದರೂ ವಾಪಸ್ಸು ತರಬಹುದು ಕಳೆದ ದಿನಗಳನ್ನು, ಗಳಿಗೆಗಳನ್ನು ಏನು ಮಾಡಿದರೂ ತರಲಾಗುವುದಿಲ್ಲ. ಅದೇ ವಿಪರ್ಯಾಸ! ಕಾಲದ ಜೊತೆ ನಾವುಗಳು ಅರಿತು ಹೆಜ್ಜೆಯನ್ನು ಹಾಕಬೇಕು.



೨೦೧೦ ವರ್ಷ ಹತ್ತು ಹಲವು ವಿಭಿನ್ನ ವಿಷಯಗಳಿಂದ ನೆನಪಿನಲ್ಲಿ ಇಡುವಂತ ಸಂವತ್ಸರವಾಗಿತ್ತು. ಸಾರ್ವಜನಿಕವಾಗಿ ನಮ್ಮ ರಾಜ್ಯ ಮತ್ತು ನಮ್ಮ ದೇಶದಲ್ಲಿ ಹಲವಾರು ರೀತಿಯ ಸಂಘರ್ಷಗಳನ್ನು ರಾಜಕೀಯವಾಗಿ, ಅರ್ಥಿಕವಾಗಿ, ಸಾಮಾಜಿಕವಾಗಿ ಎಲ್ಲಾ ರಂಗಗಳಲ್ಲೂ ಜನತೆ ಕಂಡಿದೆ. ಹೆಮ್ಮೆ ಪಡುವಂತ ವಿಷಯಗಳು ಮತ್ತು ವಿಚಾರಗಳನ್ನು ನಾಯಕರುಗಳು ಸಾಧಕರು ರಾಷ್ಟ್ರಕ್ಕೆ ಕೊಟ್ಟು ನಮ್ಮ ರಾಷ್ಟ್ರ ಪತಾಕೆಯನ್ನು ಜಗತ್ತಿನಲ್ಲಿಯೇ ಎತ್ತಿ ಹಿಡಿಯುವಂತೆ ಮಾಡಿದ್ದಾರೆ. ಹಾಗೆಯೇ ನಮ್ಮ ಭಾರತದ ಮಾನವನ್ನು ಮೂರು ಕಾಸಿಗೆ ಹರಾಜು ಹಾಕಿದ ಮಹನ್ ನಾಯಕರುಗಳು ಇದ್ದಾರೆ. ಅವರ ಬಗ್ಗೆ ನಾವುಗಳು ಕೇವಲ ಅಸಹ್ಯವನ್ನು ಪಡಬಹುದು ಅಷ್ಟೇ. ಒಳ್ಳೆಯದು ಮತ್ತು ಕೆಟ್ಟದು ಒಂದೇ ನಾಣ್ಯದ ಎರಡು ಮುಖವಲ್ಲವಾ!



ಸಾಂಸ್ಕೃತಿಕ ಲೋಕವಾದ ಸಾಹಿತ್ಯ.. ಮುಖ್ಯವಾಗಿ ನನಗೆ ಇಷ್ಟವಾದ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹೊಸ ಗಾಳಿಯ ಸಿಂಚನವಾಗಿದೇ ಎಂದರೇ ತಪ್ಪಲ್ಲಾ. ಈ ಇಂದಿನ ಇಂಟರ್ ನೇಟ್ ಪ್ರಪಂಚದಲ್ಲಿದ್ದರೂ ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿ ಚೆನ್ನಾಗಿಯೇ ಇದೆ ಎಂಬುದನ್ನು ನಿರೂಪಿಸಲೆಂಬಂತೆ ಹಲವಾರು ಮುಖ್ಯ ಹೊಸ ಹೊಸ ಕಥೆ, ಕಾದಂಬರಿ, ಕವನ, ಪ್ರಬಂಧಗಳ ಪುಸ್ತಕಗಳು ಬಿಡುಗಡೆಯಾಗಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದ್ದಾವೆ.



ಕನ್ನಡದ ಲೇಖಕರುಗಳು ತಮ್ಮ ಪ್ರತಿಭೆಯಿಂದ ಹತ್ತು ಹಲವಾರು ಪುರಸ್ಕಾರಗಳನ್ನು ಗಳಿಸಿರುವುದು ಅವರ ಕೃತಿಯ ಶ್ರೇಷ್ಠತೆಗೆ ಸಾಕ್ಷಿ. ಇಂಥವರನ್ನು ಹೊಂದಿರುವ ಕನ್ನಡಾಂಭೆ ಎಂದಿಗೂ ಬಂಜೆಯಲ್ಲ. ಇಂಥವರ ಸಂತತಿ ಸಾವಿರವಾಗಲಿ. ನಾಡಿನ ಶ್ರೀಮಂತಿಕೆಯನ್ನು ಸಾಂಸ್ಕೃತಿಕ ರಂಗದ ಕಲಾವಿದರ ಸಂಖ್ಯೆಯಿಂದ ಹಿಂದೆ ಅಳೆಯುತ್ತಿದ್ದರಂತೆ. ಅದು ನಿಜ ಅವರುಗಳಿಂದಲೇ ಒಂದೀಷ್ಟು ಒಳ್ಳೆಯತನದ ಸಿಹಿ ಗಾಳಿಯ ಸಿಂಚನವಾಗುತ್ತಿದೆ ಎಂದರೇ ತಪ್ಪಲ್ಲಾ



ವೈಕ್ತಿಕವಾಗಿ ಕಳೆದ ವರ್ಷ ನನಗೆ ಒಂದೀಷ್ಟು ಸಫಲತೆಯನ್ನು ವಿಫಲತೆಯನ್ನು ಕೊಟ್ಟಿದ್ದರೂ... ಸ್ನೇಹ ಲೋಕಕ್ಕೆ ಹೊಸ ಸಂಗಾತಿಗಳನ್ನು ಕೊಟ್ಟು ಅವರ ವಿಭಿನ್ನತೆಯಿಂದ ನನ್ನ ಅರಿವನ್ನು ಮತ್ತು ಖುಷಿ ಕ್ಷಣಗಳನ್ನು ಉತ್ತಮಗೊಳಿಸಿದೇ ಎಂದರೇ ಅತಿಶಯೋಕ್ತಿಯಲ್ಲ. ಒಂದು ಪುಸ್ತಕವನ್ನು ಓದುವುದಕ್ಕಿಂತ ವಿಭಿನ್ನ ಜನರೊಡನೆ ಬೇರೆಯುವುದು ಅವರ ವಿಚಾರವನ್ನು ಅರಿಯುವುದು ಮೇಲು ಎಂಬಂತೆ. ಕಳೆದ ವರ್ಷದಲ್ಲಿ ಹೊಸ ಮುಖಗಳ ಪರಿಚಯ ತೀರ ಆತ್ಮೀಯರನ್ನಾಗಿ ಮಾಡಿತು. ಜೀವನ ಅಂದರೇ ನಿತ್ಯ ನಮ್ಮ ಬದುಕಿನಲ್ಲಿ ಹಲವರನ್ನು ಬೇಟಿ ಮಾಡುತ್ತೇವೆ ಅದರೆ ಅವರಲ್ಲಿ ಕೆಲವು ಗಟ್ಟಿ ಕಾಳುಗಳು ಮಾತ್ರ ನಮ್ಮಲ್ಲಿ ಬೇರು ಬಿಡುತ್ತವೆ. ಅವುಗಳ ಬೆಳವಣಿಗೆಗೆ ಒಂದೀಷ್ಟು ಆತ್ಮೀಯತೆ ಮತ್ತು ಪರಸ್ಪರ ನಂಬಿಕೆಯ ಬೆಳಕು ಬಿದ್ದರೆ ಹೆಮ್ಮರವಾಗಿ ಬೆಳೆದು ನಮಗೂ ಮತ್ತು ಬೇರೆಯವರಿಗೂ ನೆರಳಾಗುತ್ತೆ. ಅದು ವ್ಯಕ್ತಿ, ವಿಚಾರ, ನಂಬಿಕೆ, ಭಾವನೆ, ಆಕಾಂಕ್ಷೆ ಇತ್ಯಾದಿ ಯಾವುದಾದರೂ ಆಗಿರಬಹುದು.



ಹೊಸ ವರ್ಷಕ್ಕೆ ಹೊಸ ಬೆಳಕು ಇರಲಿ.. ಹೊಸ ರೀತಿಯಲ್ಲಿ ಹಳೆ-ಹೊಸ ಆಸೆಗಳು ನನಸಾಗಲಿ... ಹೊಸ ಕನಸು ಹೊಳೆಯಲಿ ಬೆಳೆಯಲಿ.



ಚಿಯರ್ಸ್!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ