ಬುಧವಾರ, ಮಾರ್ಚ್ 24, 2010

ಎಂದೂ ಮರೆಯಲಾರದ ಹಾಡು-ಪಾಡು



ಜೀವನ ಪೂರ್ತಿ ಮನಸ್ಸನ್ನು ಕರಗಿಸುವಂತೆ, ಯಾವುದೇ ಸಮಯದಲ್ಲಾದರೂ ಅದನ್ನು ನೆನಪು ಮಾಡಿಕೊಳ್ಳಲು ಸಂತೋಷಪಡುವಂತೆ ಮಾಡುವ ಘಟನೆ, ನೋಡಿದ ಚಿತ್ರ, ಓದಿದ ಪುಸ್ತಕಗಳು, ಕೇಳಿದ ಹಾಡುಗಳು "ಎಂದೂ ಮರೆಯಲಾರದ" ವಸ್ತುಗಳಾಗಿ ಸುಂದರ ನೆನಪುಗಳಾಗುತ್ತವೆ. ಯಾಕೆ?

ಯಾವುದೇ ಪುಸ್ತಕ, ವಿಚಾರ, ಹಾಡು ನಮ್ಮಲ್ಲಿನ ನಂಬಿಕೆ ಅಥವಾ ನಾವು ಅನುಭವಿಸಿರುವ ನಮ್ಮ ಯಾವುದೇ ಒಂದು ಗತ ನೆನಪಿಗೆ ಹತ್ತಿರವಾಗಿರುವಂತೆ ಇದ್ದಾಗ, ಆ ರಸಾನುಭವವನ್ನು ಪುನರಪಿಯಾಗಿ ನಮ್ಮ ಕಣ್ಣಿನ ಮುಂದೆ ತಂದಾಗ ನಮ್ಮ ಮನಸ್ಸು, ಆ ಸಮಯಕ್ಕೆ ಸಂತೋಷಿಸಿ ಆ ದಿನಗಳ ಮೆಲುಕು ಹಾಕಿ ಹಿಡಿಯಲಾರದಷ್ಟು ಖುಷಿಪಡುತ್ತದೆ.

ಹಾಗೆಯೇ ಯಾವುದೇ ನಾವು ಅನುಭವಿಸಿದ ಅವಮಾನ, ಕಷ್ಟ, ನಷ್ಟಗಳನ್ನು ನಿಜವಲ್ಲದ ಕಥೆಗಳಲ್ಲಿ, ಕಾದಂಬರಿಯಲ್ಲಿ ಅಥಾವ ಸಿನೆಮಾದಲ್ಲಿ ಬರುವ ಪಾತ್ರಗಳು ಅನುಭವಿಸುವುದನ್ನು ನೋಡಿದಾಗ ನಾವುಗಳು ಅದರ ಜೋತೆ ನಮ್ಮ ಅನುಭವಗಳನ್ನು ಜೋತೆ ಮಾಡಿಕೊಂಡು ಆನಂದಭರಿತರಾಗುತ್ತೇವೆ. ಆ ಕಥೆ, ಕಾದಂಬರಿ, ಹಾಡು ಪಾಡುಗಳು ಸಕತ್ ಆಗಿದೆ, ತುಂಬ ಚೆನ್ನಾಗಿದೆ ಎಂಬಂತೆ ನಮ್ಮ ನಮ್ಮ ನಡುವೆ ಮಾತಾನ್ನಾಡುತ್ತಾ ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ತವಕಿಸುತ್ತೇವೆ.

ನಮಗೆ ಇಷ್ಟವಾದಂತಹ ಯಾವುದೇ ಲೇಖಕನ ಕೃತಿ, ನಿರ್ದೇಶಕನ ಸಿನಿಮಾ, ಕವಿಯ ಕಾವ್ಯ ಪ್ರತಿಯೊಬ್ಬರಿಗೂ ಯುನಿಕ್ ಆಗಿ ಇಷ್ಟವಾಗಲೇ ಬೇಕೆಂಬ ಸಿದ್ಧಾಂತವೇನು ಇಲ್ಲಾ. ಮತ್ತು ಅದು ನಿಜವಾಗಿಯೂ ಇಷ್ಟವಾಗಬಹುದು ಅಥಾವ ಇಷ್ಟವಾಗದೇ ಇರಬಹುದು.

ಆದ್ದರಿಂದ ಆ ಒಂದು ವಸ್ತು ಇಷ್ಟು ಜನಪ್ರಿಯವಾಗಿದೆ, ಚೆನ್ನಾಗಿದೆ ಎಂದು ಅಷ್ಟೂ ಮಂದಿಯ ಸರಾಸರಿಯಿಂದ ನಿರ್ಧರಿಸಲಾರಂಬಿಸುವಾಂತಾಗುತ್ತದೆ ಅಲ್ಲವಾ?

ನಮಗೆ ನಾವು ದಿನ ನಿತ್ಯ ಅನುಭವಿಸುವ ಯಾವುದೇ ಘಟನೆ, ನಡಾವಳಿ, ವಿಚಾರ, ಕಷ್ಟ, ಅವಮಾನ - ಸನ್ಮಾನಗಳು ಆ ಸಮಯಕ್ಕೆ ತುಂಬ ಮಹತ್ವವಾದದ್ದು ಎಂದು ತಿಳಿಯಲಾರದಾಗಿರುತ್ತೇವೆ.

ಅದೇ ವಿಚಾರಗಳನ್ನು ನಮ್ಮ ನೆಚ್ಚಿನ ಯಾವ ಬರಹಗಾರ, ಚಿತ್ರ ನಿರ್ದೇಶಕ ತನ್ನ ಕೃತಿಗಳಲ್ಲಿ ನಿರೂಪಿಸಿದಾಗ ತುಂಬ ಹೆಮ್ಮೆಯಿಂದ - "ನೋಡಾಮ್ಮ ಸೇಮ್ ಟೂ ಸೇಮ್ ಘಟನೆಯನ್ನು ನಾನು ಈ ಹಿಂದೆ ಕಂಡಂತೆ, ನಾನು ಅನುಭವಿಸಿದ ಭಾವನೆಗಳನ್ನು ಹೇಗೆ ಕೊಟ್ಟಿದ್ದಾನೆ" ಎಂದು ಎದೆಯುಬ್ಬಿಸಿ ಹೇಳಿಕೊಂಡು ಒಡಾಡುತ್ತಿರುತ್ತೇವೆ. ಹಾಗೆಯೇ ಆ ವಿಚಾರಗಳನ್ನು ಸಮಷ್ಠಿಗೆ ತೋರಿಸಿದ ವ್ಯಕ್ತಿಯನ್ನು ನಾವು ತುಂಬ ಗೌರವಿಸುತ್ತೇವೆ. ಅದು ಕಲೆಯಲ್ಲವೇ ಅದಕ್ಕೆ.

ಯಾವ ಒಂದು ಘಟನೆ ನಮಗೆ ಕೇವಲವಾಗಿ ಕಾಣುವಂತೆ ಇರುತ್ತವೂ ಅಂಥ ವಿಚಾರಗಳೇ ನಮ್ಮ ನೆಚ್ಚಿನ ಲೇಖಕರ ಸೃಜನಾತ್ಮಕ ಕ್ರೀಯಾಶೀಲತೆಯ ಮೂಸೆಯಲ್ಲಿ ಜನ ಮೆಚ್ಚುವಂತಹ ಉತ್ತಮ ಸಾಂಸ್ಕೃತಿಕ ಕಲಾಕೃತಿಗಳಾಗಿ ಮೈಲಿಗಲ್ಲುಗಳಾಗಿ ಯಾವಾಗಲೂ ಪುನಃ ಪುನಃ ರಸಸ್ವಾದದಿಂದ ಅನುಭವಿಸಿ ನಮ್ಮ ನೀರಸ ಜೀವನವನ್ನು ಬಣ್ಣದ ರಂಗಾಗಿ ನೋಡುವಂತೆ ಮಾಡುತ್ತವೆ.

ಅದ್ದರಿಂದ ಈ ಜೀವನದ ನಮ್ಮ ನಿಮ್ಮೆಲ್ಲಾರ ಸುತ್ತಲಿನ ನಮ್ಮ ಸೂಗಡಿನ ಚಿತ್ರಣವನ್ನು ಬೇರೊಂದು ದೃಷ್ಟಿಯಲ್ಲಿ ನೋಡಲು ನಮ್ಮ ಮಾನವ ಸಹಜವಾದ ಮನಸ್ಸು ದಿನಂಪ್ರತಿ ತವಕಿಸುತ್ತಿರುತ್ತದೆ.

ಯಾಕೆಂದರೆ, ನಮಗೆ ನಾವು ಎಷ್ಟೇ ಪರ್ಪೆಕ್ಟ್ ಆಗಿದ್ದರೂ ಬೇರೆಯವರು ಇದು ಹೀಗೆ ಎಂದು ತೋರಿಸಿಕೊಟ್ಟಾಗ ಜೀವನವನ್ನು ಬೇರೊಂದು ರೀತಿಯಲ್ಲಿ ನೋಡುವ ಮನಸ್ಸು ನಮ್ಮಲ್ಲಿ ಉದಯವಾಗುತ್ತದೆ.

ಅದಕ್ಕೆ ಇರಬೇಕು ನಮಗೆ ನಮ್ಮ ನಾಡಿನ ಲೇಖಕನ ಕೃತಿಗಳನ್ನು ನಮ್ಮದೇಯಾದ ಮಾತೃ ಭಾಷೆಯಲ್ಲಿ ಓದಿದಾಗ ಸಿಗುವ ಆನಂದ ಬೇರೆಯ ನಾಡಿನ ಅವರ ಸಂಸ್ಕೃತಿಯ ಬೇರೆ ಭಾಷೆಯಲ್ಲಿ ಓದಿದಾಗ ಸಿಗುವುದಿಲ್ಲ. ಕೇವಲ ಓದಿದೇ ಎಂಬಂತೆ ಹೇಳಬಹುದೇ ವಿನಾಃ ಅನುಭವಿಸಿ ಖುಷಿಪಟ್ಟೆ ಎಂದು ಯಾರು ಹೇಳಲಾರರು.

ಈ ಸಾಂಸ್ಕೃತಿಕ ಲೋಕ ಯಾವುದೇ ಕಲಾಕೃತಿಗಳು ಸುತ್ತಲಿನ ಆ ಭಾಗದ ಸೊಗಡನ್ನು ವಿಭಿನ್ನ ಶೈಲಿಯಲ್ಲಿ ಸುಂದರವಾಗಿ ಹೀಗೆ ಹೀಗೆ ಎಂದು ನಿರೂಪಿಸಿದಾಗ ಸುತ್ತಲಿನ ಜನ ಅದರಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಸುಖಪಡಲು ತವಕಿಸುತ್ತಾರೆ.

ಯಾವುದೇ ಕಾದಂಬರಿಯ, ಕಥೆಯ, ಕಾವ್ಯದ, ಚಿತ್ರದ, ಲಾವಣಿಯ, ಗಾದೆಯ ಮುಖ್ಯ ಆದರ್ಶ ಪಾತ್ರಗಳು ತಾವಾಗಲೂ ತವಕಿಸುತ್ತಾರೆ. ಅದಕ್ಕೆ ಇರಬೇಕು "ಜಗವೇ ಒಂದು ನಾಟಕ ರಂಗ" ಎಂದು ಹಿರಿಯರು ಹೇಳಿರುವುದು.

ನಾವುಗಳು ದಿನ ನಿತ್ಯ ಕಷ್ಟ - ಸುಖ, ಸತ್ಯ - ಸುಳ್ಳುಗಳ ಸರಮಾಲೆಯ ಪಯಣದಲ್ಲಿ ವಿವಿಧ ರೂಪಿನ ವಿವಿಧ ರೀತಿಯ ನಟನಾ ಚಾತುರ್ಯ ತೋರಿಸಲು ಕಾತುರರಾಗಿರುತ್ತೇವೆ. ಇದೇ ಅಲ್ಲವಾ ಜೀವನ ಜೀವಂತಿಕೆಯ ನಿಜವಾದ ಸೆಲೆ ಮತ್ತು ಬೆಲೆ!

ಬುಧವಾರ, ಮಾರ್ಚ್ 10, 2010

ಆನಂದ ಪ್ರೇಮ


ಪ್ರತಿಯೊಂದು ಜೀವಿಯಲ್ಲಿ ಉತ್ಸಹ ಮತ್ತು ನವ ಚೈತನ್ಯವನ್ನು ಹಿಡಿದಿಡುವಂತೆ ಮಾಡುವ ಏಕೈಕ ಸೆಲೆಯೆಂದರೇ "ಪ್ರೀತಿ" ಎಂಬ ಎರಡಕ್ಷರದ ಭಾವನೆ.

ಈ ಎರಡಕ್ಷರದ ಮಹಾತ್ಮೆಯನ್ನು ಎಷ್ಟು ಬಾರಿ, ಎಷ್ಟು ರೀತಿ ತಿಳಿದರೂ, ನೋಡಿದರೂ, ಓದಿದರೂ, ಕೇಳಿದರೂ ಬೇಸರ ಎನ್ನುವುದೇ ಇಲ್ಲ ಬಿಡಿ.

ಈ ನಮ್ಮ ಪ್ರಪಂಚದ ಎಲ್ಲಾ ಭಾಗದಲ್ಲೂ ಯಾವುದೇ ಬೇದ ಭಾವವೆನ್ನದೇ ಎಲ್ಲಾರಲ್ಲೂ ಸಮಾನವಾಗಿ ಪ್ರಸರಿಸಿರುವ ಜೀವನ್ಮುಕಿ ಜಲಧಾರೆಯಾಗಿ ಹರಿಯುತ್ತಿರುವ ಈ ಜೀವ ಜಲಕ್ಕೆ ಕ್ಷಾಮವೇ ಇಲ್ಲ.

ಮನುಷ್ಯನು ತಾನು ಎಷ್ಟೇ ಸಂಪಾದಿಸಲಿ, ಎಷ್ಟೇ ಮುಂದುವರಿದಿದ್ದರೂ ತನ್ನ ಆ ಸಮಯಕ್ಕೆ ಸಮಾಧಾನ ಮತ್ತು ಸಂತೋಷದ ಗಳಿಗಗಳನ್ನು ವ್ಯಕ್ತಪಡಿಸಲು ಪರಿತಪಿಸುವುದು ತನ್ನ ಸುತ್ತಲಿನ ಆತ್ಮೀಯ ಮತ್ತು ನಮ್ಮವರು ಎಂಬ ಕಣ್ಣುಗಳನ್ನು. ಏನೇ ಸಾಧಿಸಿದರೂ ಅದು ಈ "ಪ್ರೀತಿ - ಪ್ರೇಮ" ಮಯ ಸಂಬಂಧಕ್ಕೆ ಪೂರಕವಾಗಿದ್ದಾಗ ಮಾತ್ರ ಯಾವುದೇ ಸಾಧನೆಯ ಸವಿ ರುಚಿಸುವುದು.

ಇದಕ್ಕೆ ಇರಬೇಕು ನಮ್ಮ ಪುರಾಣ ಪುಣ್ಯ ಕಥೆಗಳಿಂದ ಪ್ರಾರಂಭಿಸಿ ಇಂದಿನ ಕಥೆ - ಕಾದಂಬರಿ - ಕವಿತೆ ಮತ್ತು ಮಹಾ ಕಾವ್ಯಗಳ ಮೂಲಕ ನಮ್ಮ ಇತ್ತೀಚಿನ ಎಲ್ಲಾ ಸಿನಿಮಾ, ದಾರವಾಹಿಗಳಲ್ಲಿ ಅತಿ ಹೆಚ್ಚು ಜನಪ್ರಿಯವಾದ ಮಾದ್ಯಮ ಸರಕುಗಳಾಗಿ ನಿತ್ಯ ಚಾಲ್ತಿಯಲ್ಲಿರುವ ಸಬ್ಜೇಕ್ಟ್ ಅಂದರೆ ಈ ಮಾನವ ಸಂಬಂಧಗಳು ಮತ್ತು ತರುಣ ತರುಣಿಯರ ಪ್ರೇಮ ಕಥೆಗಳು.

ಈ ರೀತಿಯ ಕಥೆಗಳಿಗೆ ಬರಗಾಲವಿಲ್ಲ ಬಿಡಿ. ಅದೊಂದು ದಿನ ನಿತ್ಯ ಕಾಣುವ ಸೊರ್ಯೋದಯ. ಈ ನಮ್ಮ ಮಾನವ ಕುಲ ಭೊಮಿಯ ಮೇಲೆ ಇರುವವರಿಗೂ ಈ ರೀತಿಯ ವಿವಿಧ ನಿಜವಾದ ಮತ್ತು ಕಲ್ಪನೆಯ ಮೂಸೆಯಲ್ಲಿ ಹುಟ್ಟುವ ಆಕರ್ಷಕವಾದ ಮತ್ತು ನಮ್ಮ ಮನಸ್ಸನ್ನು ಖುಷಿಪಡಿಸುವ ಕಥೆಗಳು ನಮ್ಮ ಪ್ರತಿಭಾವಂತ ಕಲಾಕಾರರಿಂದ ಜನ್ಮ ತಾಳಿ ಬರತ್ತಲೇ ಇರುತ್ತವೆ. ಅವುಗಳನ್ನು ನಾವುಗಳು ಸಹೃದಯತೆಯಿಂದ ಆಸೆಪಟ್ಟು ಸ್ವೀಕರಿಸಿ ಎನ್ ಜಾಯ್ ಮಾಡುತ್ತಿರುತ್ತೇವೆ.

ಇದಕ್ಕೆ ಸಾಕ್ಷಿಯೆಂಬಂತೆ ನಾನು ಓದಿದ ಹಳೆಯ ಪ್ರಸಿದ್ಧ ಯಂಡುಮೋರಿ ವಿರೇಂದ್ರನಾಥ ರ "ಆನಂದೊ ಬ್ರಹ್ಮ" ಕೃತಿಯೇ ಸಾಕ್ಷಿ ಮತ್ತು ಈ ಮೇಲಿನ ನನ್ನ ಅನಿಸಿಕೆಗೆ ಸ್ಫೋರ್ತಿ.

ಕೃತಿಯಲ್ಲಿ ಲೇಖಕರು ನಿರೂಪಿಸಿರುವಂತೆ ನಾವುಗಳು ಈ ನಮ್ಮ ಮುಂದುವರಿದ ಕಂಪ್ಯೂಟರ್ ಜಗತ್ತಿನಲ್ಲಿದ್ದರೂ ನಮ್ಮ ಮಾನವ ಮನಸ್ಸುಗಳು ತಂತ್ರಙ್ಞಾನವನ್ನು ಇಷ್ಟಪಡದೇ ಹುಡುಕುವುದು "ಜೀವಂತ - ಜೀವ ಸೆಲೆಯೆನ್ನುವ ಹಸಿ ಸಂಬಂಧಗಳನ್ನು ಮತ್ತು ಸ್ನೇಹವನ್ನು". ಅದ್ದರಿಂದಲೇ ಇಂಥ ಕಥೆಗಳನ್ನು ಮುಗಿಬಿದ್ದು ಇಷ್ಟಪಟ್ಟು ಓದುತ್ತಾರೆ ಎಂಬುದನ್ನು ಪ್ರಖ್ಯಾತ ಲೇಕನಾದ "ಭರದ್ವಜ" ನ ಮೂಲಕ ಮತ್ತು ಅವನ ಕಥೆಯ ಪಾತ್ರಗಳಾದ ಸೋಮಯಾಜಿ - ಮಂದಾಕಿನಿಯರ ಉನ್ನತವಾದ ಆದರ್ಶಮಯವಾದ ಪ್ರೇಮ-ಜೀವನ-ಸಾಧನೆಯನ್ನು ಎಷ್ಟೋಂದು ಆತ್ಮೀಯವಾಗಿ ಚಿತ್ರಿಸಿದ್ದಾರೆಂದರೇ ಈ ಕೃತಿ ಸರ್ವಕಾಲಿಕವಾಗಿ ಕ್ಲಾಸಿಕ್ ಆಗಿ ನಿಲ್ಲುತ್ತದೆ.

ಈ ರೀತಿಯ ಕೃತಿಗಳಿಗೆ ಸಾವು ಎಂಬುದಿಲ್ಲ. ಎಷ್ಟೇ ರೀತಿಯ ಬದಲಾವಣೆಗಳು ನಮ್ಮ ಈ ಬದುಕಿನಲ್ಲಿ ಸಂಭವಿಸಿದರೂ ನಮ್ಮ ಮನದಾಳದ ಯಾವುದೂ ಮೂಲೆಯಲ್ಲಿ ಅದೇ ಬೊಗಸೆಯಷ್ಟು ಪ್ರೀತಿಯಲ್ಲಿ ನಾವುಗಳು ಗೆಳತಿ, ತಾಯಿ, ತಂದೆ, ಪತಿ, ಪತ್ನಿ, ಮಗ, ಮಗಳು.. ಹೀಗೆ ಹಲವರನ್ನು ಕಾಣಲು ತವಕಿಸುತ್ತಿರುತ್ತೇವೆ. ಯಾಕೆಂದರೆ ಈ ಮಾನವ ಸಂಬಂಧಗಳು ಆ ರೀತಿ ಯಾವುದೇ ಅಡೆ ತಡೆಯಿಲ್ಲದೆ ನಮ್ಮ ನಮ್ಮಲ್ಲಿ ಅದೃಶ್ಯ ರೀತಿಯಲ್ಲಿ ಒಂದಕ್ಕೂಂದು ಕೊಂಡಿಯೋಪಾದಿಯಲ್ಲಿ ಬೆಸೆದುಕೊಂಡಿರುತ್ತವೆ.

ಹೀಗೆಯೇ ಆದರ್ಶ ಪ್ರೇಮದ ಕುರುಹಾಗಿ "ರವಿ ಬೆಳೆಗೆರೆ" ಕೃತಿ "ಹೇಳಿ ಹೋಗು ಕಾರಣ" ಅನಾಮಧೆಯ ಓದುಗನಾದ "ಮಿಠಾಯಿ ಮಾರುವವನಿಗೆ" ಅರ್ಪಿತವಾಗಿ ಪ್ರಾರಂಭವಾಗುವ ಪ್ರೇಮ ಗ್ರಂಥ ತರುಣ - ತರುಣಿಯರಿಗೆ ನಾವು ಈ ರೀತಿಯ ಪ್ರೇಮ ಸುಳಿಯಲ್ಲಿ ಸಿಲುಕಬೇಕು ಎನ್ನುವಂತೆ ಮಾಡುತ್ತದೆ. ಅಲ್ಲಿನ ಕಥಾ ನಾಯಕನಾದ "ಹಿಮವಂತ" ನ ರೀತಿ ಪ್ರಾರ್ಥನೆಗಾಗಿ ಕಾಯಬೇಕು ಎಂಬ ನವ ಹುಮ್ಮಸ್ಸನ್ನು ಎಷ್ಟು ಬಾರಿ ಓದಿದರೂ ವಯಸ್ಸಿನ ಯಾವುದೇ ತಾರತಮ್ಯವಿಲ್ಲದೇ ಪ್ರಚಂಡವಾಗಿ ಎಲ್ಲರ ಮನವನ್ನು ಗೆಲ್ಲುತ್ತದೆ.

ಎವರ್ ಗ್ರೀನ್ ಲವ್ ಸ್ಟೋರಿ ಎಂದು ಹೇಳಬಹುದಾದ ಈ ರೀತಿಯ ಕೃತಿಗಳು ಸಹೃದಯರನ್ನು ಆ ಕ್ಷಣಕ್ಕೆ ಮಂತ್ರ ಮುಗ್ಧರನ್ನಾಗಿಸುತ್ತದೆ. ಮತ್ತು ನಮ್ಮನ್ನು ನಾವು ಮರೆತು ಆ ಪ್ರೇಮ ಪ್ರಪಂಚದಲ್ಲಿ ವಿಹಾರಿಸುವಂತೆ ಮಾಡಿ ಆ ನಾಯಕ - ನಾಯಕಿ ಪಾತ್ರಗಳು ನಾವಾಗುವಂತೆ ಮಾಡುತ್ತವಲ್ಲಾ ಇಟ್ಸ್ ಗ್ರೇಟ್!

ಈ ನಿರಂತರ ಪ್ರೇಮದ ತಣ್ಣನೆಯ ಝರಿ ನಮ್ಮೆಲ್ಲಾರಲ್ಲಿ ಸದಾ ಯಾವ ತಡೆಯೂ ಇಲ್ಲದೇ ಉತ್ಸಾಹದ ಚಿಲುಮೆಯಾಗಿ ಹರಿದು "ಚೆಲುವಿನ ಚಿತ್ತಾರವನ್ನು" ಮೂಡಿಸಲಿ ಎನ್ನುವ ಸಾಮಾನ್ಯ ..ಪ್ರೇಮಿ!

-ತಿಪುಟಪ್ರಿಯ

ಬುಧವಾರ, ಫೆಬ್ರವರಿ 17, 2010

ಪ್ರೀತಿಯ ನಿವೇದನೆ...




ನಿನ್ನ ನೋಡಿದಾಗಲೆಲ್ಲಾ ಅಂದು ಕೊಳ್ಳುತ್ತೇನೆ ನನ್ನ ಮನಸ್ಸಿನ ನೂರಾರು - ಸಾವಿರಾರು ಸೆಳೆತದ, ಮೊರೆತದ ಈ ಮನದ ಅಣೆಕಟ್ಟುನ್ನು ಹೊಡೆದು ನಿನ್ನ ಮುಂದೆ ಹರಿಯಬಿಡಬೇಕು. ಆ ವೀಪರಿತ ಹುಚ್ಚಿನ ನನ್ನ ಆಸೆ, ಆಕಾಂಕ್ಷೆಗಳ ನೊರೆ ನೀರಿನಲ್ಲಿ ನೀನು ಕೊಚ್ಚಿ ಹೋಗಿ ಪುನಃ ನನ್ನ ಅಸರೆಯೆನ್ನುವ ಅತಿಯಾದ ಪ್ರೀತಿಯ ದಡವನ್ನು ಸೇರಬೇಕು ಎಂದು.

ಆದರೆ ಯಾಕೋ ಏನೋ, ನಿನ್ನ ಕಂಡು ಕಳೆದ ಕೆಲ ನಿಮಿಷಗಳಲ್ಲಿ ನನ್ನ ಸಾವಿರ ಸಾವಿರ ಯೋಚನೆಗಳು ನಿನ್ನ ಆ ಮುಗುಳು ನಗೆಯಲ್ಲಿ ಮೌನವಾಗಿ ಕರಗಿ ಹೋಗುತ್ತದೆ.

ನಾ! ಎಷ್ಟು ಬಾರಿ ಯೋಚಿಸಿದರೂ ತಿಳಿಯದಾಗಿದೆ! ನಾ ಓದಿದ, ನೋಡಿದ ಸಿನಿಮಾ, ನಾ ಕೇಳಿದ ವಿವಿಧ ಮಹನ್ ಪ್ರೇಮಿಗಳ ಕಥೆಗಳಲ್ಲಿ ಈ ಮಹನ್ ಕಾಲ ಘಟ್ಟ ಎಂದು ಯಾವುದನ್ನು ಕರೆಯುತ್ತಾರೋ ಅದು ಅಷ್ಟು ಸುಲಭವಾಗಿ ಹೇಗೆ ನಿವೇದಿಸುತ್ತಾರೆ. ನನಗೆ ಯಾಕೆ ಅದು ಆಗುತ್ತಿಲ್ಲ.

ನಿನ್ನ ಕಂಡ ದಿನದಿಂದ ನಾನು ಅಂದುಕೊಂಡಿದ್ದ ನನ್ನ ಮೆಚ್ಚಿನ ಸಂಗಾತಿ ಹೀಗೆಯೇ ಇರಬೇಕು ಎಂಬ ನನ್ನ ಮಹನ್ ಮಹತ್ವದ ಕಲ್ಪನೆಯ ಕನಕಾಂಗಿ ನಿನಾಗಿ ಸಿಕ್ಕಿದ ಮೇಲೂ ನನಗೆ ನನ್ನ ಭಾವನೆಯನ್ನು ತಿಳಿಸಲೂ ಇನ್ನೂ ಸಾಧ್ಯವಾಗದಿರುವುದಕ್ಕೆ ಕಾರಣ ನಿನೇ ಅಂದು ಕೊಳ್ಳುತ್ತೇನೆ.

ಲವ್ ಅಟ್ ಪಸ್ಟ್ ಸೈಟ್ ಎಂಬಂತೆ ಮೂದಲ ದಿನದ ಪ್ರಥಮ ನಿಮಿಷದಲ್ಲಿಯೇ ಇವಳೇ ಇರಬೇಕು ನನಗಾಗಿ ಕಾದ "ಒಲವಿನ ಹುಡುಗಿ" ಎಂದು ಅನಿಸಿತು.

ನೀ ನನ್ನ ಕಂಡು ನಕ್ಕಾಗ ಅದೇ ನಿನ್ನ ನನ್ನ ಕಣ್ಣು ಹಲವು ಬಾರಿ ಸಂಧಿಸಿ, ನಿಲ್ಲಲಾರದೆ ಸೋತು ಬೇರೆ ಕಡೆ ತಿರುಗಿದಾಗ, ಪುನಃ ಅದೇ ಆಸೆಯಿಂದ ನಿನ್ನ ಕಡೆಗೆ ಕಿರುಗಣ್ಣಿನಿಂದ ನೋಡಲು ಪ್ರಯತ್ನಿಸಿದಾಗ ನೀನು ಸಹ ಹಾಗೆಯೇ ನನ್ನ ಕಡೆ ಹರ ಸಾಹಸ ಮಾಡುತ್ತಾ ನೋಡುತ್ತಿರಲು ಆ ನಿನ್ನ ನಿಸ್ಸಾಹಯಕತೆಯ ಆಕರ್ಷಣೆ ನನ್ನನ್ನು ಅಧೀರನನ್ನಾಗಿ ಮಾಡುತ್ತಲೇ ಇದೆ ಅಂದಿನಿಂದ.

ಇಂದಿಗೂ ಆ ನಿನ್ನ ನಿಷ್ಕಲ್ಮಶವಾದ ಆಪೀಯರೆನ್ಸ್ ನನ್ನನ್ನು ಮೊಖನನ್ನಾಗಿ ಮಾಡುತ್ತದೆ.

ನನ್ನ ಗೆಳೆಯರು ಹೇಳುತ್ತಾರೆ, ಹೇ ನಿಮ್ಮ ಇಬ್ಬರ ಮದ್ಯೆ ಏನೂ ಇದೇ ಮುಂದುವರಿ ಗುರು ಎಂದು, ಹೇಗೆ ಎಂದು ನನಗೂ ತಿಳಿಯದಾಗಿದೆ.

ಇಲ್ಲಿ ಯಾರು ಯಾವದು ಕೊನೆ ಯಾರು ಮೊದಲು ಎಂಬ ಲೆಕ್ಕಚಾರವೆ ತಪ್ಪಿ ಹೋಗಿದೆ. ಮನದ ಈ ಲವಲವಿಕೆಯ ವ್ಯಾಪಾರ ನಿವೇದನೆಯನ್ನು ಹೇಗೆ ನಿನಗೆ ತಿಳಿಯಪಡಿಸುವುದು.

ನನಗೂ ಗೊತ್ತು ನೀನು ಸಹ ಮೊದಲು ನಾನೇ ಹೇಳಲಿ ಎಂದು ಇಷ್ಟು ಸತಾಯಿಸುತ್ತಿದ್ದೀಯ. ಹೇಳೆ ಹೇಳುತ್ತೇನೆ ಎಂದು ನಾನು ಅಂದುಕೊಂಡಿದ್ದೇನೆ. ನೋಡೊಣ ಆ ಮೊಹರ್ತ ಯಾವಗ ಬರುವುದು ಕಾಲಯ ತಸ್ಮಯ ನಮಃ.

ಈ ರೀತಿಯ ಹೊಸ, ಹಳೆಯ ಹೆಣ್ಣು - ಗಂಡುಗಳ ಆಕರ್ಷಣೆಯ ಪ್ರೀತಿಯ ಸಮಯವನ್ನು ಸಾಕಾರ ಮಾಡಿಕೊಳ್ಳುವ ಘಳಿಗೆಯಂತು ನಮಗೆಲ್ಲಾ ಪ್ರತಿ ವರುಷ ಪೆಬ್ರವರಿ ೧೪ ರಂದು "ಪ್ರೇಮಿಗಳ ದಿನ" ವಾಗಿ ಆಚರಿಸಲ್ಪಡುತ್ತಿದೆ.

ಈ ಪ್ರಪಂಚದಲ್ಲಿ ಮನುಷ್ಯ ತಾನು ಭೂಮಿಯ ಮೇಲೆ ಪಾದಾರ್ಪಣೆ ಮಾಡಿದ ದಿನದಿಂದಲೂ ತನ್ನ ಬಾಲ್ಯವನ್ನು ಕಳೆದು ಯೌವನಾವಸ್ಥೆಗೆ ಪಾದಾರ್ಪಣೆ ಮಾಡಿದ ಅಂದರೆ "ಏನೋ ಒಂಥಾರ" ಎಂಬ ರೀತಿಯಲ್ಲಿ ತನಗೆ ತಾನು ತಿಳಿಯದ ರೀತಿಯಲ್ಲಿ ತನ್ನ ಮನೋವ್ಯಾಪಾರದಲ್ಲಿ ತನ್ನ ಸುತ್ತ ಮುತ್ತಲಿನ ಯಾವುದಾದರೂ ಹುಡುಗಿಯ/ಹುಡುಗನ ಆ ಪ್ರೀತಿಗಾಗಿ ಕಾತರಿಸುವುದು ನಿಸರ್ಗ ನಿಯಮವೇ ಸರಿ.

ಪ್ರತಿಯೊಬ್ಬರಿಗೂ ವಿವಿಧ ರೀತಿಯಲ್ಲಿ ತನ್ನ ಜೀವನದ ದಿನಮಾನದಲ್ಲಿ ಆ ರೀತಿಯ ಸೆಳೆತದ ಅನುಭವ ಆಗಿರುತ್ತದೆ.

ಈ ನಮ್ಮ ಯುಗದಲ್ಲಿಯು ಸಹ ಈ ಒಂದು ವಿಷಯದಲ್ಲಿ ಅದಂತಹ ಬೆಳೆವಣಿಗೆ ಕ್ರಾಂತಿ ನಮ್ಮ ಎಲ್ಲಾ ರಂಗದಲ್ಲೂ "ಪ್ರೀತಿ"ಯೇ ಮೇಲುಗೈಯಾಗಿದೆ.

ನನಗೆ ಅನಿಸುತ್ತದೆ, ಪ್ರತಿಯೊಬ್ಬರೂ ತಾನು ಇನ್ನೂ ಹೆಚ್ಚು ರೀತಿಯಲ್ಲಿ ಪ್ರೀತಿಸುವುದನ್ನು ಕಲಿಯಬೇಕು ಎಂಬುದನ್ನು ತಾನು ಜೀವನ ಪೂರ್ತಿ ಕಲಿಯುವುದರಲ್ಲಿಯೇ ಕಲಿಯುವ ಅವಕಾಶಕ್ಕಾಗಿ ತವಕಿಸುತ್ತಿರುತ್ತಾನೆ.

ಈ ರೀತಿಯ ಮಹಾನ್ ಮಾನವ ಸಂಬಂಧವೇ ಈ ಜಗತ್ತು ಹೀಗೆ ಮುನ್ನುಗ್ಗುತ್ತಿರುವುದಕ್ಕೆ ಪ್ರೇರಕ ಶಕ್ತಿಯಾಗಿದೆ. ಹಾಗೆಯೇ ವಿವಿಧ ರೀತಿಯ ಅನಾಹುತಗಳಿಗೆ ಮಾರಕವಾಗಿದೆ. ಇದು ಪುರಾಣ ಕಾಲದಿಂದಲೂ ಜಾರಿಯಲ್ಲಿರುವ ನಡಾವಳಿಯಾಗಿದೆ. ಆದರೇ "ನಿಷ್ಕಲ್ಮಶ ಪ್ರೀತಿ" ಎಷ್ಟರಮಟ್ಟಿಗೆ ಜಾರಿಯಲ್ಲಿದೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೇ?!

-ತ್ರಿಪುಟಪ್ರಿಯ

ಬುಧವಾರ, ಜನವರಿ 27, 2010

ಓ ಮನಸೇ!!




"ಮನಸ್ಸು ಇಲ್ಲದೆ, ಅನುಭವ ಇಲ್ಲ. ಪರಿಶುದ್ಧವಾದ ಮನಸ್ಸಿಗೆ ಮಾತ್ರ ಅತ್ಯಂತ ಸೂಕ್ಷ್ಮವಾದ ಆತ್ಮಾನಂದದ ಅನುಭವ ಸಾಧ್ಯ." - ರಮಣ ಮಹರ್ಷಿಗಳು

"ಮನಸ್ಸು ಮರ್ಕಟ" ಎಂದು ಹಿರಿಯರು ಹೇಳಿದರು. ಅವರಿಗೆ ಗೊತ್ತಾಗಿದೆ ನಮ್ಮ ಮನಸ್ಸಿನ ಚಿತ್ರ-ವಿಚಿತ್ರವಾದ ಗುಣಗಳು. ಮನಸ್ಸು ಎಂದ ತಕ್ಷಣ ನೆನಪಿಗೆ ಬರುವುದು ಯೋಚನೆ, ಯೋಚನೆ ಎಂದ ತಕ್ಷಣ ನೆನಪಿಗೆ ಬರುವುದು ಕೆಟ್ಟ ಯೋಚನೆಗಳು - ಒಳ್ಳೆಯ ಯೋಚನೆಗಳು.

ಮನಸ್ಸು ಇದ್ದುದಕ್ಕೆ ಬೆಲೆ ಬರುವುದು ಯೋಚಿಸುವುದರಿಂದ ಮನಸ್ಸು ಎಂಬುದಕ್ಕೆ ನಿರ್ದಿಷ್ಟವಾದ ಇದು ಹೀಗೆ ಎಂದು ಯಾರೂ ಬೌತಿಕವಾಗಿ ಗುರುತಿಸುವುದಕ್ಕೆ ಆಗುವುದಿಲ್ಲ.

ನಮ್ಮ ಬಾಲ್ಯದಲ್ಲಂತೂ ಗೊತ್ತಿಲ್ಲದೆ ವಿವಿಧ ರೀತಿಯ ಕಲ್ಪನೆಯ ರಂಗಾವಳಿಯನ್ನು ಮನದಲ್ಲಿ ಮೊಡಿಸುತ್ತಿರುತ್ತೇವೆ ಅದು ಆಗ ನಮ್ಮ ಜೊತೆಗಾರನಾಗಿ ನಮ್ಮ ಮನಸೊ ಇಚ್ಛೆ ಖುಷಿಯ ವಿಷಯಗಳನ್ನು ಗುಣಕಾರ - ಭಾಗಕಾರ ಮಾಡುತ್ತಿರುತ್ತೇವೆ.

"ಮನುಷ್ಯ - ಮನಸ್ಸು" ಈ ಎರಡನ್ನು ಬೇರೆ ಬೇರೆಯಾಗಿ ನೋಡುವುದು ಸಾಧ್ಯವಿಲ್ಲ. ವ್ಯಕ್ತಿ ಇದ್ದನೆಂದರೆ ಒಂದು ಮನಸ್ಸು ಇರಲೇಬೇಕು ಆಗಲೇ ಆ ವ್ಯಕ್ತಿಗೆ ಬೆಲೆ.

ಮನಸ್ಸಿಲ್ಲದವನಿಗೆ ಬೆಲೆಯಿಲ್ಲ ಎಂಬುದು ಈ ಮಾತು. ನಮ್ಮ ಹಿರಿಯವರಿಂದ ಬಾಲ್ಯದ ದಿನಗಳಿಂದ ಕೇಳಿಸಿಕೊಳ್ಳುತ್ತಿರುವ ಮಾತುಗಳೆಂದರೆ ಅದು ಮನಸ್ಸಿಗೆ ಮಾತ್ರವಾಗಿ "ಮನಸ್ಸು ಕೊಟ್ಟು ಕಲಿ, ಮನಸ್ಸು ಕೊಟ್ಟು ಕೇಳು, ಮನಸ್ಸು ಕೊಟ್ಟು ಕೆಲಸ ಮಾಡು" ಇತ್ಯಾದಿ.

ಈ ಎಲ್ಲಾ ಮಾತುಗಳು ಮನಸ್ಸಿನ ಮಹತ್ವವನ್ನು ಪ್ರತಿಯೊಬ್ಬರಿಗೂ ಗೊತ್ತಿಲ್ಲದ ರೀತಿಯಲ್ಲಿ ತಿಳಿಸುತ್ತಿದೆ.

ಹಾಗೆಯೇ, ಮನಸ್ಸು ಮಾಡಿದರೇ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಈ ನಾಣ್ಣುಡಿ ಜಗಜ್ಜಾಹಿರು ಮಾಡಿದೆ - "ಮನಸ್ಸಿದ್ದರೆ ಮಾರ್ಗ"

ಈ ಗಾದೆ ಮನಸ್ಸಿನ ಪವರ್ ಎಷ್ಟು ಎಂಬುದನ್ನು ಸರಳವಾಗಿ ನಿರೂಪಿಸಿದೆ.

ಈ ಪ್ರಪಂಚದ ಯಾವ ವಿಚಾರ, ತಂತ್ರಜ್ಞಾನ, ಚಲನೆ, ರಾಗ, ದ್ವೇಷ, ಬಾಳ್ವೆ, ಬದುಕು ಪ್ರತಿಯೊಂದು ನಿರ್ದಿಷ್ಟವಾಗಿ ಚರ್ಚಿತವಾಗಿರುವುದು "ಮನಸ್ಸು" ಎಂಬ ಮೂಸೆಯಲ್ಲಿಯೇ.ಅದನ್ನು ಹೇಗೆ ಉಪಯೋಗಿಸಬೇಕು ಎಂಬುದರ ಮೇಲೆ ಅವಲಂಬಿತವಾಗಿದೆ. ಉಪಯೋಗಿಸಿಕೊಂಡವನೇ ಸಾಧಕ!

ಈ ಮನಸ್ಸು ವಯಸ್ಸಿಗೆ ಸಂಬಂಧಿಸಿದಂತೆ ಪ್ರತಿಯೊಂದು ಅನುಭವಗಳ ಗಣಿಯಲ್ಲಿ ಗಟ್ಟಿಯಾಗುತ್ತಾ ತನ್ನ ಅಂತಃ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳುತ್ತದೆ.

ಅದಕ್ಕೆ ಇರಬೇಕು ನಮ್ಮ ಕವಿವರ್ಯರೊಬ್ಬರು ವಯಸ್ಸು ಮತ್ತು ಮನಸ್ಸನ್ನು ಹೀಗೆ ಕಟ್ಟಿ ಹಾಡಿದ್ದಾರೆ. "ಹದಿನಾರಾರ ವಯಸ್ಸು ಹುಚ್ಚು ಕೋಡಿ ಮನಸ್ಸು. . . "

ಯೌವನಭರಿತವಾದ, ಮದ್ಯ ವಯಸ್ಕ, ವೃದ್ಧಾಪ್ಯ ವಯಸ್ಸು ಹೀಗೆ ವಿವಿಧ ರೀತಿಯ ಕಾಲ ಘಟ್ಟಗಳ ವ್ಯಕ್ತಿಯ ಮನಸ್ಸು ಒಂದೇ ಆಗಿರಲೂ ಸಾಧ್ಯವಿಲ್ಲ.

ಮನಸ್ಸನ್ನು ನಮ್ಮ ದೇಹಕ್ಕೆ ಸರಳಿಕರಿಸಬಹುದೇನೋ, ಯಾಕೆಂದರೆ ಮನಸ್ಸು ಎಂದು ಅದು ಸೆಂಟ್ರಲ್ ಪ್ರೋಸಸ್ ಇದ್ದಂತೆ. ಅದರ ನಡಾವಳಿಯ ಆಜ್ಞಪಾಲಕ ನಮ್ಮ ಈ ದೇಹವೆ ಸರಿ!

ಆದರೂ ಯಾಕೆ ಈ ಮನಸ್ಸನ್ನಾ, ಕೆಡುಕ ಮನಸ್ಸು, ಒಳ್ಳೆಯ ಮನಸ್ಸು ಎಂದು ಗುರುತಿಸುತ್ತಾರೆ?

ಯಾವ ಮನಸ್ಸು ಮತ್ತೊಬ್ಬರಿಗೆ ತೊಂದರೆಯನ್ನು ಕೊಡುವುದರ ಬಗ್ಗೆ ಯೋಚಿಸಿ, ಇನ್ನೊಬ್ಬರ ಶಾಂತಿಯನ್ನು ಮನಸ್ಸನ್ನು ಹಾಳು ಮಾಡುತ್ತದೋ ಅದು ಕೆಟ್ಟ ಮನಸ್ಸು ಮತ್ತು ಆ ಮನಸ್ಸು ಸಹ ಕೆಟ್ಟು ಹೋಗಿರುತ್ತದೆ ಅದ್ದರಿಂದ ಅದನ್ನು ಕೆಟ್ಟ ಮನಸ್ಸೆಂದು ಗುರುತಿಸಬಹುದು. ಹಾಗೆಯೇ ಅಂಥ ವ್ಯಕ್ತಿ ಸುತ್ತಲಿನವರಿಗೆ ಮತ್ತು ಸಮಾಜಕ್ಕೆ ಅಪಾಯಕಾರಿ.

ಯೋಚನೆಗಳು ಕಲ್ಪನೆಗಳು ಇಲ್ಲದ ಮನಸ್ಸು ಮನಸ್ಸಲ್ಲಾ. ಕೆಟ್ಟ , ಒಳ್ಳೆಯ ಯೋಚನೆಗಳು ಮನಸ್ಸಿನಲ್ಲಿ ಬರುವುದು ಸಹಜ ಯಾಕೆಂದರೆ ನಾವುಗಳು ಉಪ್ಪು - ಹುಳಿ ತಿಂದು ಬೆಳೆಸಿದ ಪ್ರೀತಿಯ ದೇಹವನ್ನು ಹೊಂದಿದ್ದೇವೆ ಅಲ್ಲವಾ? ಹಾಗೆಯೇ ನಾವು ಬದುಕುತ್ತಿರುವ ಸುತ್ತಲಿನ ಪರಿಸರದ ಪರಿಣಾಮವಾಗಿ ವಿವಿಧ ರೀತಿಯ ಯೋಚನೆ, ಆಸೆಗಳು ಮನಸ್ಸಿನಲ್ಲಿ ಮೊಡುವುದು ಸಹಜ. ಹಾಗೆಯೇ ಅದಕ್ಕಾಗಿ ನಾವುಗಳು ವೈರಾಗ್ಯವನ್ನು ಧರಿಸಿದ ಸಾಧುಗಳಾಗಲು ಸಾಧ್ಯವಿಲ್ಲ.

ಯಾವ ವಿಚಾರಾಗಳು ನಮಗೆ ನಮ್ಮ ಅರಿವಿಗೆ ಅಸಹನೀಯವಾದದ್ದು - ಕೆಟ್ಟದ್ದು ಅನಿಸುತ್ತದೋ ಅವುಗಳನ್ನು ಆಗಲೇ ಕೊಲ್ಲುವುದು ಬುದ್ಧಿವಂತಿಕೆಯ ಲಕ್ಷಣ. ಆ ರೀತಿಯ ಅರಿವು ಯಾವುದೇ ರೀತಿಯ ಸಾಮಾನ್ಯ ಸಜ್ಜನನಿಗೂ ತಿಳಿಯುವ ಅರಿವಿನ ಪಾಠ, ಸಮಯಕ್ಕೆ ಸರಿಯಾಗಿ ಊಪಯೋಗಿಸಿ ಮನಸ್ಸಿನ ಪವರ್ ನ್ನು ಸರಿಯಾದ ರೀತಿಯಲ್ಲಿ ಬಳಸಿ ಅಸಾಧ್ಯವಾದುದನ್ನು ಸಾಧಿಸಲು ಮನಸ್ಸು ಮಾಡಬೇಕು.

ಆದಕ್ಕೆ, ಇರಬೇಕು ನಮ್ಮ ಈ ಸನಾತನ ಪರಂಪಯಿಂದ ಇಂದಿನವರೆಗೂ ನಮ್ಮ ವಿವಿಧ ಸಾದು ಸಜ್ಜನರು ಇನ್ನೂ ಈ "ಮನಸ್ಸಿ"ನ ವ್ಯಾಪಾರವನ್ನು ಅರಿಯಲು ತಮ್ಮ ಜೀವನವನ್ನೇ ಪೂರ್ಣವಾಗಿ ಮೂಡಿಪಾಗಿಟ್ಟು ಅದರ ಬಗ್ಗೆ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಾ ತಮ್ಮ ವಿಚಾರಧಾರೆಯ ಮೂಲಕ ಸಾಮಾನ್ಯ ಜನರಿಗೆ ಅದರ ಸಾರವನ್ನು ದಯಾಪಲಿಸುತ್ತಿರುವುದು. ಮತ್ತು ಇದರ ಬಗ್ಗೆ ನಾವುಗಳು ನಮ್ಮ ಹಿರಿಯರಿಂದ ದಿನಂಪ್ರತಿ ತಿಳಿಯಲು ಮತ್ತು ಮನನ ಮಾಡಲು ಅವಕಾಶವಿರುವ ನಾವುಗಳು ಧನ್ಯರಲ್ಲವೇ?

-ತ್ರಿಪುಟಪ್ರಿಯ

ಮಂಗಳವಾರ, ಜನವರಿ 12, 2010

ಮಕ್ಕಳಿಗೆ ಸಂಗಾತಿ ಬೇಕಾಗಿದೆ!

ನಮ್ಮ ಮಾತಾ ಪಿತೃಗಳು ತಮ್ಮ ಮಕ್ಕಳನ್ನು ಕಡೆಯವರಿಗೂ ಏನೂ ತಿಳಿಯದ ಮಕ್ಕಳು ಇನ್ನೂ ಅವರು ತಾವು ಹೇಳಿದಂತೆ ಕೇಳಬೇಕು, ಏನಾದರೂ ತಪ್ಪು ಮಾಡಬಹುದು, ಇನ್ನೂ ಬುದ್ಧಿ ಬರಬೇಕು ಎಂಬಂತೆ ತಮ್ಮ ಮಕ್ಕಳು ೬೦-೭೦ ವರ್ಷ ವಯಸ್ಸಾದರೂ ಈ ರೀತಿಯಲ್ಲಿ ಯೋಚಿಸದೇ ಇರಲಾರರು. ಈ ರೀತಿಯ ಭಾವನೆ ತಮ್ಮ ಮಕ್ಕಳು ಹುಟ್ಟಿದ ಸಂದರ್ಭದಲ್ಲಿ ಸ್ಥಾಪಿತವಾಗಿ ಅದು ಅಳಿಸಲಾರದ ಒಂದು ಜವಾಬ್ದಾರಿಯೇನೋ ಎಂಬಂತೆ ಯಾವಾಗಲೂ ತಮ್ಮ ಮಕ್ಕಳ ಬಗ್ಗೆ ಎಲ್ಲಾ ಸಮಯದಲ್ಲಿ ಕೇರಿಂಗ್ ಮಾಡುತ್ತಾ ವರ್ತಿಸುತ್ತಾರೆ.

ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಯು ತಾನು ಚಿಕ್ಕದಾಗಿದ್ದಾಗ ತನ್ನ ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ತನ್ನ ಜೀವಿತದ ಪ್ರಾರಂಭದ ದಿನಗಳನ್ನು ತನ್ನ ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಂಡು ತಾನು ಸಹ ಸ್ವಂತವಾಗಿ ಯೋಚಿಸುವಂತಾಗಿದ್ದೇನೆ ಮತ್ತು ತನ್ನ ಕಾಲ ಮೇಲೆ ತಾನು ನಿಲ್ಲಬಹುದಾಗಿದೆ ಎಂಬುದನ್ನು ನಿರೂಪಿಸಲು ಕಾತುರನಾಗಿರುತ್ತದೆ.

ಹಾಗೆಯೇ ಯೌವನಕ್ಕೆ ಕಾಲು ಇಟ್ಟ ಸಮಯದಲ್ಲಿ ಎಲ್ಲಾ ಜೀವಿಗಳಲ್ಲೂ ಆಗುವ ಜೈವಿಕ ಮಾರ್ಪಾಡು ಮತ್ತು ಬೆಳವಣಿಗೆಯೋಪಾದಿಯಲ್ಲಿ ಮನುಷ್ಯನು ಸಹ ತನ್ನ ಸಂಗಾತಿಗಳೆಡೆಗೆ ಆಕರ್ಷಿತನಾಗಿ ತನ್ನ ಜೀವನಕ್ಕೆ ಅಸರೆಯಾಗಿ ಮತ್ತು ತನ್ನ ಮುಂದಿನ ಭವ್ಯ ಬದುಕನ್ನು ಹೇಗೆ ಲೀಡ್ ಮಾಡಬೇಕು ಎಂಬುದನ್ನು ನಿರ್ಧರಿಸಲೂ ಎಂಬಂತೆ ಪ್ರತಿ ಹೆಣ್ಣು - ಗಂಡು ಪರಸ್ಪರ ತಮ್ಮ ಜೀವನ ಸಂಗಾತಿಗಳನ್ನು ಪ್ರೀತಿಯೆಂಬ ಮಾಯೆಯಲ್ಲಿ ಮತ್ತು ಸೆಳೆತದಲ್ಲಿ ತಮಗೆ ಯೋಗ್ಯರಾದ ಮತ್ತು ತಮ್ಮ ಮನಸ್ಸೊಪ್ಪುವ ಗೆಳೆಯ - ಗೆಳತಿಯರನ್ನು ಅತಿ ಮುಖ್ಯ ಮತ್ತು ಅವನು/ಅವಳಿಲ್ಲದೇ ಬದುಕುಲಾರೇನು ಎಂಬಂತಾದ ರೀತಿಯಲ್ಲಿ ತಮ್ಮ ಪ್ರೇಮವನ್ನು ಪರಸ್ಪರ ಪ್ರಕಟಿಸಿ ಮುಂದೆ ಅದಷ್ಟು ದಿನಗಳನ್ನು ಒಟ್ಟಿಗೆ ಕಳೆಯುತ್ತಾ ತಮ್ಮ ಜನಾಂಗದ ಮುಂದುವರಿಕೆಯೇನೋ ಎಂಬಂತೆ ಗಟ್ಟಿ ಜೀವನಕ್ಕೆ ಅಡಿಪಾಯ ಇಡಲು ಉತ್ಸುಕರಾಗಿರುತ್ತಾರೆ.

ಮಾನವನನ್ನು ಬಿಟ್ಟು ಬೇರೆ ಎಲ್ಲಾ ಜೀವ ಸಂಕುಲದಲ್ಲಿ ಜೋತೆಗಾರಿಕೆಯ ಅದ್ಯತೆ ಕೇವಲ ಸಂತಾನಭಿವೃದ್ಧಿ ಮತ್ತು ಪರಸ್ಪರ ರಕ್ಷಣೆ ಮತ್ತು ಅಸರೆಯೇ ಮುಖ್ಯವಾಗಿರುತ್ತದೆ.

ಹಾಗೆಯೇ ಈ ಜೋತೆಗಾರಿಕೆ ಅಥವಾ ಪರಸ್ಪರ ಒಂದಾಗಿ ಬಾಳುವ ಪಡಿಪಾಟು ತಮ್ಮ ಸ್ವಂತ ಆಯ್ಕೇಯಾಗಿರುತ್ತದೆ ಮತ್ತು ಇದಕ್ಕಾಗಿ ಅವುಗಳು ತಮ್ಮ ಹಿರಿಯರ ಸಂಬಂಧಿಕರ, ಅಪ್ತರ ಒಪ್ಪಿಗೆ ಪಡೆಯುವ ಜರೂರು ಇರುವುದಿಲ್ಲ ಅದು ಪ್ರಾಣಿಗಳ ಲೋಕ ಅಲ್ಲವಾ?

ಆದರೆ ಮಾನವ ಪ್ರೇಮ - ಮದುವೆ, ಕೇವಲ ಸಂತಾನಭಿವೃದ್ಧಿಯೊಂದೇ ಮುಖ್ಯವಾಗಿರುವುದಿಲ್ಲ. ಇಲ್ಲಿ ಹತ್ತು ಹಲವಾರು ಹತ್ತು ಮತ್ತಷ್ಟು ನೀರಿಕ್ಷೆಗಳು ಪ್ರತಿ ಹೆಣ್ಣು - ಗಂಡುಗಳ ಮಧ್ಯೆ ಉದ್ಬವಾಗುತ್ತವೆ. ಮತ್ತು ಆ ಎಲ್ಲಾ ನಿರೀಕ್ಷೆಗಳು ಪೂರ್ಣವಾಗುವ ಮಟ್ಟದವಾಗಿದ್ದರೆ ಮಾತ್ರ ಅಲ್ಲಿ ಪ್ರೇಮ ವಿವಾಹ, ತಮ್ಮ ಮಕ್ಕಳು ಒಪ್ಪಿದ ಆರಿಸಿದ ಲವ್ ಕಮ್ ಆರೇಂಜ್ಡ್ ಮದುವೆಯೆಂಬ ಬಂಧನದಲ್ಲಿ ಗಟ್ಟಿ ಸಂಬಂಧಗಳಾಗುತ್ತವೆ.

ಇಲ್ಲವಾದರೆ! ಪ್ರತಿಯೋಬ್ಬ ತಂದೆ - ತಾಯಂದಿರಿಂದ ತಮ್ಮ ಕುಟುಂಬದವರಿಂದ ವಿರೋಧವೆರ್ಪಟ್ಟು ಲವರ್ಸ್ ಗಳು ಕಣ್ಣೀರಿನಲ್ಲಿ ತಾವು ಕಟ್ಟಿದ ಪ್ರೇಮ ಸೌಧವನ್ನು ನಿಷ್ಕಾರುಣವಾಗಿ ಕೆಡವಿ ತೋಳೆಯಬೇಕಾಗುತ್ತದೆ.

ತಮ್ಮ ಹೆತ್ತವರು ಈ ಒಂದು ವಿಚಾರದಲ್ಲಿ ತಮ್ಮ ಮಕ್ಕಳನ್ನು ಎಂದು ನಂಬುವುದಿಲ್ಲ. ಮತ್ತು ತಮ್ಮ ಮಕ್ಕಳು ಪ್ರೀತಿಗೆ ಎಲ್ಲೊ ಕೆಲವರು ಒಪ್ಪಿಗೆ ಕೊಟ್ಟು ತಾವು ಖುಷಿಪಡುತ್ತಾರೆ.

ಮುಖ್ಯವಾಗಿ ಬರುವ ಒಂದು ದೊಡ್ಡ ಅಡಚಣೆಯೆಂದರೇ ಜಾತಿ ಸಮಸ್ಯೆ ಇದನ್ನು ತಾವುಗಳು ಎಂದು ಬಿಲ್ ಕುಲ್ ಆಧಾರಿಸುವುದಿಲ್ಲ. ಆದರೆ ಪ್ರೀತಿಯೆಂಬುದು ಕುರುಡು ಅಲ್ಲವಾ ಗಂಡು - ಹೆಣ್ಣು ತಾವುಗಳು ಏನೋ ಎಂತದೋ ಸಮಯದಲ್ಲಿ ಪರಸ್ಪರ ಇಷ್ಟಪಟ್ಟು ತಮ್ಮ ಸಂಗಾತಿ ನೀನೇ ನೀನು ಎಂದು ಮುಂದುವರಿದು ಮದುವೆಯ ಸಮಯದಲ್ಲಿ ಕಲ್ಪಿಸಲಾರದ ರೀತಿಯಲ್ಲಿ ತಮ್ಮ ಪ್ರೇಮ ತಾಜ್ ಮಹಲ್ ನಲ್ಲಿ ಬಿರುಕು ಕಾಣಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ನಮ್ಮ ಭಾರತದಲ್ಲಿ ಯಾರೊಬ್ಬರೂ ಸಿದ್ಧ ಮನಸ್ಸಿನಿಂದ ಮನಸ್ಸಪೂರ್ವಾಕವಾಗಿ ಅಂತರ ಜಾತಿ ವಿವಾಹಕ್ಕೆ ಒಪ್ಪಲಾರರು.

ಅಂತಸ್ತು, ಆಸ್ತಿ, ವಿದ್ಯೆ, ಹಣ, ಸಂಬಂಧ, ಉದ್ಯೋಗ ಹೀಗೆ ನೂರಾರು ಮಜಲುಗಳ ಪಾಸೀಟಿವ್ ಅಂಶಗಳನ್ನು ಪ್ರತಿಯೊಬ್ಬರೂ ತಮ್ಮ ಲೇವಲ್ ಗಳಲ್ಲಿ ನಿರ್ಧರಿಸುತ್ತಾರೆ.

ಹಾಗೆಯೇ ಮೇಲೆ ಹೇಳಿದಂತೆ ಈ ಒಂದು ವಿಚಾರದಲ್ಲಿ ತಮ್ಮ ಹೆತ್ತವರು ಅರಿಯದ - ತಿಳಿಯದ ವಯಸ್ಸಿನ ಆಕರ್ಷಣೆ ಈ ಲವ್ ಎಂದು ಷಾರಾ ಎಳೆದು ಲವ್ ಮಾಡುವುದೇ ದೊಡ್ಡ ತಪ್ಪು ಎಂದು ನೋಡುತ್ತಾರೆ. ಇದರಲ್ಲೂ ಗಮನಿಸಬೇಕಾದಂತ ಒಂದಷ್ಟು ಗಟ್ಟಿ ಸಂಬಂಧಗಳು ಉನ್ನತ ಮೌಲ್ಯಗಳನ್ನು ಹೊಂದಿದ ಗಟ್ಟಿ ಜೋಡಿಗಳು ಇರುತ್ತಾವೆ ಎಂಬುದನ್ನು ಪ್ರತಿಯೊಬ್ಬರು ತಿಳಿಯಬೇಕು.

ಇದಕ್ಕಾಗಿ ತಮ್ಮ ವಿಧದ ಮತ್ತು ತಾವು ಯೋಚಿಸಿದ ಒಪ್ಪಿದ ಗಂಡು - ಹೆಣ್ಣುಗಳನ್ನು ಜೋತೆ ಮಾಡಿ ತಾವುಗಳು ಏನೋ ಒಂದು ಗಟ್ಟಿಯಾದ ಸಂಬಂಧವನ್ನು ಕೊಡಿಸಿದೆವು ಎಂದು ಅರೇಂಜ್ಡ್ ಮದುವೆ ಮಾಡಿ ಖುಷಿಪಡುವ ಹೆತ್ತವರು ಅವುಗಳು ಸಹ ಮಧ್ಯದಲ್ಲಿ ಪೇಲ್ ಆಗುತ್ತಿರುವಾಗ ಏನು ಹೇಳುವರು?

ಮದುವೆ ಎಂಬುದು ತಮ್ಮ ಮನಸ್ಸು ಇಷ್ಟಪಟ್ಟು ಪರಸ್ಪರ ಹೊಂದಾಣಿಕೆ, ಪರಸ್ಪರ ಗೌರವದಿಂದ ಎರಡು ಜೀವಗಳು ಅಕ್ಕರೆಯಿಂದ ಸಂತೋಷದಿಂದ ಜೀವಿಸುವ ಬದುಕು ಅಂಥ ಅನಿಸುವುದಿಲ್ಲವೇ?

-ತ್ರಿಪುಟಪ್ರಿಯ

ಶನಿವಾರ, ಜನವರಿ 2, 2010

ಸಿಹಿಗಾಳಿ ಸಿಹಿಗಾಳಿ ಸಹಿ ಮಾಡಲಿ

ಮತ್ತೆ ನಮ್ಮ ಭರವಸೆಗಳಿಗೆ ದಿನದ ಉತ್ತಮ ಗಳಿಗೆಗಳಿಗೆ ಆಶಾಕಿರಣದ ನೋಟಕ್ಕಾಗಿ ಪುನಃ ಹೊಸ ವರ್ಷದ ಹೂಸ್ತೀನಲ್ಲಿ ನಿಂತಿದ್ದೇವೆ. ಕಳೆದ ದಿನಗಳ ಸುಖ - ಸಂತೋಷ, ಸೋಲು - ಗೆಲುವು, ನೋವು - ನಲಿವುಗಳ ಮಿಶ್ರ ಭಾವದ ಬದುಕಿನ ಇತಿಹಾಸಕ್ಕೆ ಇತಿಶ್ರೀ ಇಟ್ಟು ಮುಂದಿನ ಭವಿಷ್ಯತ್ ದಿನಗಳ ಕಡೆಗೆ ಆಸೆಯಗಣ್ಣು ಬೀರುವ ತವಕದಲ್ಲಿ ಎಲ್ಲಾ ಮನಗಳು ತುಡಿತದಲ್ಲಿವೆ.

ದಿನಗಳು ಯಾರಿಗೂ ಕಾಯುವುದಿಲ್ಲ ಮತ್ತು ಯಾರನ್ನು ಕೇಳಿ ಹಗಲು ರಾತ್ರಿಯ ಪಯಣವನ್ನು ಮಾಡುವುದಿಲ್ಲ. ಎಲ್ಲಾರಿಗೂ ಸಮಾನವಾಗಿ ದಿನದ ಇಪ್ಪತ್ತನಾಲ್ಕು ಗಂಟೆಗಳನ್ನು ಮುನ್ನೂರ ಅರವತೈದು ದಿನಗಳನ್ನು ಬೇದ ಭಾವವಿಲ್ಲದೆ ದಯಪಾಲಿಸುತ್ತ ತನ್ನ ದಾರಿಯನ್ನು ತಾನು ಹಿಡಿದಿರುತ್ತದೆ. ಅದರಲ್ಲಿ ನಾವುಗಳು ಎಷ್ಟರ ಮಟ್ಟಿಗೆ ನಮ್ಮ ಗಟ್ಟಿ ದಿನಗಳನ್ನಾಗಿ ಮಾಡಿಕೊಂಡು ಪ್ರತಿ ಗಂಟೆಯನ್ನು ನಮ್ಮ ಮರೆಯಲಾರದ ದಿನಗಳನ್ನಾಗಿ ಮಾಡಿಕೊಂಡು ಇತಿಹಾಸದ ಕೊಂಡಿಗೆ ನಮ್ಮದು ಒಂದು ಇರಲಿ ಎಂಬಂತೆ ಮುಖ್ಯ ಗಟ್ಟಿ ಕೊಂಡಿ ಜೊಡಿಸುವ ಕೌಶಲ್ಯ ತಮ್ಮ ತಮಗೆ ಬಿಟ್ಟಿದ್ದು ಅದಕ್ಕೆ ವರ್ಷ ದಿನ ಕಾಲಮಾನ ಹೊಣೆಯಲ್ಲ.

ಹೊಸ ವರ್ಷದ ಪಾದಕ್ಕೆ ಅಡಿ ಇಡುವ ಸಮಯದಲ್ಲಿ ಕಳೆದ ದಿನಗಳ ಪುನರ್ ವಿಮರ್ಶೆ ಅಗತ್ಯ ಅದು ಮುಂದಿನ ಬರುವ ದಿನಗಳನ್ನು ಯಾವ ರೀತಿ ಕಳೆಯಬೇಕು, ಯಾವುದರಲ್ಲಿ, ಎಲ್ಲಿ ನಾವೂ ಎಡೆವಿದೆವು, ಎಲ್ಲಿ ಜಯ ಬೇರಿ ಬಾರಿಸಿದೆವು ಮತ್ತು ಯಾವುದರಲ್ಲಿ ಎಲ್ಲಾರನ್ನು ಕೊಡಿ ಹಿತವಾದ ದಿನಗಳನ್ನು ಸಮಯವನ್ನು ಸಂತೋಷವಾಗಿ ಕಳೆದೆವು ಕೊಡಿದೆವು ಎಂಬ ಕಿರು ನೋಟ ಚಿಕ್ಕ ಚಿಕ್ಕ ತಪ್ಪು ಒಪ್ಪುಗಳ ಸರಿಪಡಿಸುವಿಕೆಗೆ ದಾರಿ ದೀಪವಾಗುವುದು.

ಹೊಸ ದಿನಗಳು ಬರುವಂತೆ ನಮ್ಮ ನಮ್ಮ ವಯಸ್ಸನ್ನು ಹೆಚ್ಚು ಹೆಚ್ಚು ಮಾಡಿ ನಾವು ಹೆಚ್ಚು ಹೆಚ್ಚು ದೊಡ್ಡವರನ್ನಾಗಿ ಮಾಡುತ್ತದೆ. ದೊಡ್ಡವರಾಗುವುದು ನಮ್ಮ ವಯಸ್ಸಿನಲ್ಲಾಗದೇ ನಮ್ಮ ತಿಳುವಳಿಕೆ ನಮ್ಮ ಬುದ್ಧಿ ಬೆಳವಣಿಗೆಯಲ್ಲೂ ಕಾಣಬೇಕು, ಅದರ ಹೊಳಪು ಮತ್ತು ಝಲಕ್ ನ ಬೆಳಕು ನಮ್ಮ ಸುತ್ತಲಿನವರಿಗೂ ಉಪಯೋಗವಾಗಬೇಕು.

ಒಂದು ಸಂವತ್ಸರ ಯಾವುದೇ ವ್ಯಕ್ತಿಯ ಮಹಾತ್ವವಾದ ಕಾಲ ಘಟ್ಟ. ಅದು ಎಂದು ಮರೆಯಲಾರದ ಮೆಲುಕು ಹಾಕುವ ಕಾಲಮಾನ. ಪ್ರತಿಯೊಬ್ಬ ವ್ಯಕ್ತಿಯ ತನ್ನ ಕ್ಷೇತ್ರದಲ್ಲಿ ತಾನು ಎಷ್ಟರ ಮಟ್ಟಿಗೆ ಸಾಧಿಸಿದೇ ಎಂಬುದನ್ನು ಒಂದು ವರ್ಷದ ಬೆಳವಣಿಗೆಯಿಂದ ಅಳೆಯಲಾಗುವುದು.

ನಮ್ಮ ಇಂದಿನ ದಿನ ಮಾನಗಳಲ್ಲಿ ನಮ್ಮ ದೈನಂದಿನ ಬದುಕು ಕೇವಲ ನಮ್ಮ ಸಂಸಾರ ನಮ್ಮ ಮನೆಯನ್ನು ಮಾತ್ರ ಅವಲಂಬಿತವಾಗದೇ ಅದು ಸಮಸ್ತ ಪರಿಸರ , ಊರು, ಜನ, ಸಮಾಜ, ರಾಜಕೀಯ, ಆರ್ಥಿಕತೆ, ದೇಶ ಮತ್ತು ಸಂಸ್ಕೃತಿಯನ್ನು ಅವಲಂಬಿಸಿ ಏಕನ್ಮೊಖ ಅಭಿವೃದ್ಧಿಯನ್ನು ತೋರಿಸುತ್ತದೆ. ನಮ್ಮ ದಿನಮಾನದಲ್ಲಿ ನಡೆಯುವ ಮತ್ತು ಘಟಿಸುವ ಯಾವುದೇ ರಾಜಕೀಯ ಮತ್ತು ಸಾಮಾಜಿಕ ಸಂಘರ್ಷ ಮತ್ತು ಅದರ ಸಂವೇದನೆ ನೇರವಾಗಿ ವ್ಯಕ್ತಿ ಮತ್ತು ಅವನ ಕುಟುಂಬದಲ್ಲಿನ ಸಂವೇದನೆಯನ್ನು ಪ್ರಚೋದಿಸುವ ಗುಣವನ್ನು ಹೊಂದಿದೆ. ಇದಕ್ಕೆ ಕಾರಣ ಇಂದು ನಮ್ಮ ಜೀವನದಲ್ಲಿ ಬದಲಾವಣೆಯ ಹರಿಕಾರನಂತೆ ಬಂದು ನಿಂತು ಅಗಾಧವಾಗಿ ಬೆಳೆದಿರುವ ಉನ್ನತ ತಂತ್ರಙ್ಞಾನ, ಮಾಹಿತಿ, ಮಾದ್ಯಮಗಳ ಬೆಳವಣಿಗೆ ಪ್ರತಿಯೊಂದು ಜಾಗದ ಸುದ್ಧಿ ಮತ್ತು ಘಟನೆಗಳು ಕೇವಲ ಕೇಲವೇ ಸೆಕೆಂಡುಗಳಲ್ಲಿ ನಮ್ಮ ಮನೆಯ ಹಾಲಿಗೆ ಪ್ರತ್ಯಕ್ಷವಾಗುವಂತ ವೇಗದ ಸಂವಹನೆ. ಇದಕ್ಕೆ ತಕ್ಕಂತೆ ನಮ್ಮ ಇಂದಿನ ಜೀವನದಲ್ಲಿ ವೈಕ್ತಿಕವೆಂಬ ಮತ್ತು ನಮ್ಮದಲ್ಲಾದ ವಿಚಾರಗಳು ಯಾವುದು ಇಲ್ಲಾ ಎಂಬಂತೆ ಇಡೀ ಜಗತ್ತೆ ಒಂದು ಚಿಕ್ಕ ಊರಾಗಿದೆ.

ಇಲ್ಲಿಯೇ ಕುಳಿತುಕೊಂಡು ನೋಯಾರ್ಕನಲ್ಲಿ ನಡೆಯುವ ಒಬಾಮನ ಅಧ್ಯಕ್ಷ ಪೀಠದ ಅಲಂಕಾರದ ವರದಿಯನ್ನು ನೇರವಾಗಿ ಸವಿದು ಒಬಾಮಾ ನಮ್ಮವನೆನೋ ಎಂಬಂತೆ ನಾವುಗಳು ಅದರ ಬಗ್ಗೆ ಮತ್ತು ಅವನ ಬಗ್ಗೆ ಚರ್ಚಿಸಲೂ ಸಾಧ್ಯವಾಗಿದೆ.
ಮತ್ತು ನಮ್ಮನಾಳುವ ನಮ್ಮ ಯಾವ ಜನ ಪ್ರತಿನಿದಿಗಳನ್ನು ಅವರ ಆಟೋಪಾಠಗಳನ್ನು ದಿನ ನಿತ್ಯ ರಾಜಕೀಯ ವರದಿಯ ರೊಪದಲ್ಲಿ ನೋಡಿ ಮನಸನ್ನು ಸಣ್ಣದು ಮಾಡಿಕೊಂಡು ನಾವು ಆರಿಸಿರುವ ನಮ್ಮ ಓಟಿನ ಜಾದು ಕಂಡು ನಾವೇ ಪಶ್ಚಾತ್ತಾಪಡುತ್ತೇವೆ. ಇದು ನಮ್ಮ ರಾಜ್ಯದ ೨೦೦೯ ನಲ್ಲಿ ನಡೆದ ತಾಜಾ ರಾಜಕೀಯ ತಾರಚಿತ್ರದ ಬಗ್ಗೆ ಎಂದು ಬೇರೆ ಹೇಳಬೇಕಿಲ್ಲ ಅಲ್ಲವಾ?

ಹಾಗೆಯೇ ನಮ್ಮ ಎಲ್ಲಾ ಸಂಸ್ಕೃತಿ, ಸಾಹಿತ್ಯ, ಕ್ರೀಡೆ ಹೀಗೆ ಯಾವುದರಲ್ಲೂ ನಮ್ಮ ನಮ್ಮ ಸುತ್ತಲಿನವರೂ ಜಗತ್ತಿನ ಯಾವುದ್ಯಾವುದೋ ಊರುಗಳಲ್ಲಿ ಪಾಲ್ಗೂಂಡು ತಮ್ಮತನವನ್ನು ಮೇರೆದಿರುವುದನ್ನು ನಮ್ಮ ಟಿ.ವಿ ಗಳಲ್ಲಿ ವರ್ಣಮಯವಾಗಿ ನೋಡಿ ನಮ್ಮ ಮನಸ್ಸು ರಂಗಾಗಿರುತ್ತಿರುವುದು ನಮ್ಮವರು ಯಾವ ರೀತಿಯಲ್ಲಿ ವೇಗವಾಗಿ ಜಾಗತೀಕರಣದ ವೇಗಕ್ಕೆ ಹೆಜ್ಜೆಯನ್ನು ದಾಪುಗಲಿನಲ್ಲಿ ಹಾಕುತ್ತಿದ್ದೇವೆ ಎಂಬುದು ತಿಳಿಯುತ್ತೇವೆ.

ಹೀಗೆ ಪ್ರತಿ ದಿನವೂ ನಮಗೆ ಹತ್ತು ಹಲವು ನಮ್ಮ ಮತ್ತು ಪರರ ವಿಚಾರಗಳ ಮನನ ಮತ್ತು ನಮ್ಮತನದ ಏನಾದರೊಂದು ಕೊಡುಗೆಯನ್ನು ನಾವುಗಳು ಅದಕ್ಕೆ ನೀಡಬೇಕು ಎಂಬ ಹಂಬಲವನ್ನು ನೀಡುವಲ್ಲಿ ಮಹತ್ತರವಾದ ಪ್ರೇರಣೆಯನ್ನು ನಮ್ಮ ಮಾದ್ಯಮಗಳು ಮತ್ತು ನಮ್ಮ ನೇತಾರಾರು, ನಟರು, ಕಲಾವಿದರು, ವಿಙ್ಞಾನಿಗಳು ಮಾಡುತ್ತಲೇ ಬಂದಿದ್ದಾರೆ.

ಈ ರೀತಿ ಎಲ್ಲಾ ಸಾಮಾನ್ಯರಿಗೆ ಅಸಮಾನ್ಯವಾಗಿ ಪ್ರತಿ ಸಂವತ್ಸರ ಹೊಸ ವರುಷ ಹೊಸ ಇತಿಹಾಸ ಬರೆಯಲು ಹೊಸ ದಾರಿಯನ್ನು ಮಾಡಿ ಕೊಡುತ್ತಲೇ ಇರುತ್ತಾದೆ. ೨೦೦೯ ಸಂಮಿಶ್ರವಾದ ನೋವು ನಲಿವು ಮತ್ತು ಕೇಲವು ಸಂತೋಷದ ಕೊಡುಗೆಗಳನ್ನು ರಾಜ್ಯ ಮತ್ತು ಅಂತರಾಜ್ಯ ಮಟ್ಟದಲ್ಲಿ ಕೊಟ್ಟಿದೆ. ಬರುವ ದಿನಗಳು ಹೆಚ್ಚು ಹೆಚ್ಚು ಸಮೃದ್ಧಿ ಮತ್ತು ಸಂತೋಷದ ಗಳಿಗೆಗಳನ್ನು ತರಲಿ ಎಂದು ಬೇಡುವವ.

-ತ್ರಿಪುಟಪ್ರಿಯ

ಮಂಗಳವಾರ, ಡಿಸೆಂಬರ್ 15, 2009

ಅಲ್ಲಿದೆ ನಮ್ಮನೆ ಇಲ್ಲಿ ಬಂದೇ ಸುಮ್ಮನೆ ಬೇಡ!

ಇಂದಿನ ನಮ್ಮ ಕಾರ್ಪೊರೆಟ್ ರಂಗದಲ್ಲಿ ವಿವಿಧ ಭಾಷೆಯನ್ನು ಮಾತಾನ್ನಾಡುವ, ವಿವಿಧ ಸಂಸ್ಕೃತಿಯ, ವಿವಿಧ ರಾಜ್ಯದ ಕೆಲಸಗಾರರು ನಮ್ಮ ಕನ್ನಡದ ರಾಜಾಧಾನಿಯಾದ ಬೆಂಗಳೂರಿನಲ್ಲಿ ಹಲವಾರು ಕಡೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಇಲ್ಲಿ ಒಂದು ಮಿನಿ ಭಾರತವನ್ನೇ ಕಾಣಬಹುದಾಗಿದೆ.

ಎಲ್ಲ ಕಂಪನಿಗಳಲ್ಲಿ ಅವರದೇಯಾದ ಸಮಯದಲ್ಲಿ ಎಲ್ಲ ಉದ್ಯೋಗಿಗಳಿಗೂ ಖುಷಿ ಮತ್ತು ಸಂಭ್ರಮವನ್ನುಂಟು ಮಾಡಲು ತಿಂಗಳ ಅಥಾವ ವಾರದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಲ್ಲಿನ ಉದ್ಯೋಗಿಗಳಿಗೆ ಏರ್ಪಡಿಸುವ ಪದ್ಧತಿಯನ್ನು ಎಲ್ಲ ಕಡೆ ಕಾಣಬಹುದಾಗಿದೆ.

ಆ ಸಮಯದಲ್ಲಿ ಎಲ್ಲ ಕೆಲಸಗಾರರಿಗೂ ತಮ್ಮ ತಮ್ಮ ಸಂಸ್ಕೃತಿಯ ಮತ್ತು ತಮ್ಮ ಕ್ರೀಯಾಶೀಲವಾದ ಸೃಜನಾತ್ಮಕ ಕಲೆಗಳನ್ನು ತಮ್ಮ ಸ್ನೇಹಿತರ ಮುಂದೆ ಪ್ರದರ್ಶನವನ್ನು ಕೊಡಲು ತುಂಬ ಸಹಕಾರಿಯಾಗಿರುತ್ತದೆ ಮತ್ತು ಬಿಡುವಿಲ್ಲದ ಜಂಜಾಟದ ಬದುಕಿಗೆ ಉತ್ತೇಜನಕ ರೀತಿಯಲ್ಲಿ ಉತ್ಸಾಹವನ್ನುಂಟು ಮಾಡುತ್ತದೆ. ಇಂಥ ಕಾರ್ಯಕ್ರಮಗಳು ಇಂದಿನ ಯಾಂತ್ರಿಕ ಯುಗದ ಮೆಟ್ರೋ ಮಂದಿಗೆ ಬೇಕೆ ಬೇಕು ಬಿಡಿ.

ಆದರೆ, ಇಂಥ ಕಾರ್ಯಕ್ರಮಗಳಲ್ಲಿ ತುಂಬ ಅಭಾಸವಾದ ರೀತಿಯಲ್ಲಿ ಕೆಲವೊಮ್ಮೆ ಕೆಲವು ಕಹಿ ಘಟನೆಗಳು ನಡೆದು ಹೋಗಿ ಬಿಟ್ಟು ಹತ್ತಿರದವರೆಗೆ ತುಂಬ ನೋವಾಗುತ್ತದೆ. ಆ ಸಮಯದಲ್ಲಿ ಆ ರೀತಿ ಯಾರು ಯೋಚಿಸುವುದಿಲ್ಲ. ಆದರೆ ಅದರ ಬಗ್ಗೆ ಸ್ವಲ್ಪ ವಿಚಾರ ಮಾಡಿದರೆ ಹೌದು! ಅದು ಸತ್ಯ ಏನಿಸದೇ ಇರಲಾರದು.

ಯಾವುದೇ ಹಾಡು, ಸಂಗೀತ, ನೃತ್ಯ, ನಟನೆಯ ಕಾರ್ಯಕ್ರಮಗಳನ್ನು ಎಲ್ಲರೂ ಯಾವುದೇ ಭಾಷೆ ಮತ್ತು ಜನಗಳ ಬೇದವಿಲ್ಲದೇ ಎಲ್ಲರೂ ತಮಗೆ ತಿಳಿದಿರುವ ಕಲೆಯ ಅಭಿವ್ಯಕ್ತಿಯನ್ನು ತೋರಿಸಲು ಸುಸಮಯವಾಗಿರುತ್ತದೆ.

ಪ್ರೇಕ್ಷಕರೇನಿಸಿದ ನೋಡುಗರು ತಮಗೆ ಅರ್ಥವಾಗದ ಭಾಷೆಯಲ್ಲಿನ ಅಥಾವ ತಿಳಿಯದ ಕಲೆಯನ್ನು ಕಂಡಾಗ ಇರಿಸು ಮುರಿಸಾಗುವುದು ಸಾಮಾನ್ಯ. ಆದರೆ ಅದಕ್ಕಾಗಿ ತಮ್ಮತನವನ್ನು ಕಳೆದುಕೊಂಡು ಅತ್ಯಂತ ಅನಾಗರಿಕತೆಯನ್ನು ತೋರಿಸಿ ವೇದಿಕೆಯ ಮೇಲೆ ತಮ್ಮ ಕಲೆಯನ್ನು ಪ್ರದರ್ಶಿಸುವವರಿಗೆ ಅವಮಾನ ಮಾಡುವುದು ಎಷ್ಟು ಸರಿ!

ಇಂದಿನ ಕಾರ್ಪೊರೆಟ್ ದಿನಮಾನಗಳಲ್ಲಿ ಎಲ್ಲ ಕಡೆ ನಮ್ಮ ಭಾಷೆ ಮತ್ತು ನಮ್ಮ ಸಂಸ್ಕೃತಿಯನ್ನು ಆಚರಿಸುವವರು ಸಿಗುವುದು ಕಷ್ಟ. ಅದ್ದರಿಂದ ನಾವ್ಯಾಕೇ ಬೇರೆಯವರ, ಬೇರೆ ರಾಜ್ಯದ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳನ್ನು ಗೌರವದಿಂದ ನೋಡಿ ಆನಂದಿಸಲಾರೆವು ಹೀಗೆ ಮಾಡುವುದರಿಂದ ಅಷ್ಟೋಂದು ಕಷ್ಟಪಟ್ಟು ನಮಗಾಗಿ ಅಪರೂಪದ ಕಲೆಯ ವೈಭವವನ್ನು ನಮ್ಮ ಮುಂದೆ ಇಡುವವರಿಗೆ ಪ್ರೋತ್ಸಹವವನ್ನು ಉತ್ತೇಜನವನ್ನು ಕೊಟ್ಟಂತಾಗಿ ನಾವುಗಳು ಅವರ ಬಗ್ಗೆ ಮತ್ತು ಅವರ ಮಣ್ಣಿನ ಬಗ್ಗೆ ತಿಳಿಯಲು ಕುತೊಹಲದಿಂದ ಇದ್ದೇವೆ ಎಂದರೆ ಅವರಿಗೇಷ್ಟು ಆನಂದ ಮತ್ತು ಮಮತೆ ಉಂಟಾಗುವುದಿಲ್ಲ. ಇದು ಎಷ್ಟೊಂದು ಹೆಮ್ಮೆಯ ವಿಚಾರವಾಗುವುದಿಲ್ಲವೇ.

ಎಲ್ಲರಿಗೂ ತಿಳಿದಿರುವಂತೆ ನಮ್ಮ ದೇಶ ಭಾರತ ಅಂದರೆ ಬಹು ಸಂಸ್ಕೃತಿಯ ರಾಯಾಬಾರಿ. ಇಲ್ಲಿ ಒಂದು - ಒಂದೇ ಎನ್ನುವುದು ಸಮಗ್ರವಾಗಿ ನಾವೆಲ್ಲಾ ಒಂದು ಎನ್ನುವಾಗ. ನಮ್ಮ ಮಾತು, ಸಂಸ್ಕೃತಿ, ವಿಚಾರ - ಆಚರಗಳಿಗಲ್ಲಾ ಅಲ್ಲವಾ!

ಈ ಮಹನ್ ಸತ್ಯ ಗೊತ್ತಿರುವಾಗ ನಾವೇಕೆ ಪುನಃ ಕೀಳಾಗಿ ವರ್ತಿಸುವುದು. ಕಲೆಗೆ ಯಾವುದೇ ಗಡಿ ಪ್ರಾಂತ್ಯವಿಲ್ಲ ಮತ್ತು ಯಾವುದೇ ಭಾಷೆಯಿಲ್ಲ ಕಲೆಗೆ ಕಲೆಯೇ ಭಾಷೆ ಮತ್ತು ಮಾದ್ಯಮ. ಅದೇ ಗೊತ್ತು ಗುರಿಯಿಲ್ಲದ ನಮ್ಮ ಸಂಸ್ಕೃತಿಯಲ್ಲದ ರಾಕ್ ಪಾಪ್ ಸಂಗೀತ, ಡ್ಯಾನ್ಸ್ ಗಳನ್ನು ಕಣ್ಣು ಕಣ್ಣು ಬಿಟ್ಟು, ಬಾಯಿ ಬಾಯಿ ತೆರೆದು ಅಹ್ಲಾದಿಸುವುದು ನಮ್ಮ ಭಾರತೀಯರ ಅಭಿರುಚಿ ಎತ್ತ ಕಡೆ ದಾಪುಗಾಲು ಹಾಕುತ್ತಿದೆ ಎಂದು ಯೋಚಿಸುವಂತೆ ಮಾಡಿದೆ.

ನಮ್ಮ ನಮ್ಮ ಮನೆಯ ಮಾತು ಮತ್ತು ನಮ್ಮ ಮನೆಯಲ್ಲಿನ ಕಲೆಗಳನ್ನು ಪ್ರದರ್ಶಿಸುವುದೇ ಅಥಾವ ಹಾಡುವುದೇ ಅಸಹ್ಯವೇನೊ ಎಂಬ ರೀತಿಯಲ್ಲಿ ನಾವುಗಳು ಕಾಣುವುದು ಯಾವುದರ ಸಂಕೇತ?

ನಮಗೆ ತಿಳಿಯದೇ ಇದ್ದರೂ ಅದನ್ನು ವ್ಯಕ್ತಪಡಿಸುವ ಕಲೆಗಾರರಿಗೆ ಅವಕಾಶ ಮಾಡಿ ಅವರನ್ನು ಗೌರವಿಸಬೇಕು ಅದು ಬಿಟ್ಟು ತಮಗೆ ಆ ರೀತಿಯಲ್ಲಿ ಒಂದು ನಿಮಿಷ ವೇದಿಕೆಯ ಮೇಲೆ ನಿಲ್ಲಲು ಆಗದು ಅಂಥ ಸಮಯದಲ್ಲಿ ಸುಮ್ಮನೆ ವೇದಿಕೆಯ ಹಿಂದೆ ಮುಂದೆ ಕುಳಿತುಕೊಂಡೋ ನಿಂತುಕೊಂಡೋ ತಮ್ಮ ಗೆಳೆಯರು ಹಾಡುವ ಸಮಯದಲ್ಲಿ ಅಥಾವ ನೃತ್ಯ ಮಾಡುವ ಸಮಯದಲ್ಲಿ ಅಥಾವ ಮಾತನಾಡುವ ಸಮಯದ ಮದ್ಯದಲ್ಲಿಯೇ ಚಪ್ಪಾಳೆಯನ್ನು ತಟ್ಟುವುದು, ಕೊಗು ಹಾಕುವುದು ಎಲ್ಲಿನ ಸಂಸ್ಕೃತಿ?

ನಾವುಗಳು ತುಂಬ ಇಷ್ಟಪಟ್ಟು ಆಚರಿಸಲು ಮನಸ್ಸು ಮಾಡುವ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ನಾವೇಲ್ಲಾ ತಪ್ಪದೇ ಪಾಲಿಸಬೇಕಾದ ಆಚರಣೆಯಿದೆ ಅದೇ ಬೇರೆಯವರು ಏನಾದರೂ ಮಾತನಾಡುವಾಗ ಮದ್ಯದಲ್ಲಿ ಅಸಭ್ಯವಾಗಿ ವರ್ತಿಸದೇ ಅವರು ಪೂರ್ಣವಾಗಿ ಮುಗಿಸವವರೆಗೆ ಕಾದು ಅನಂತರ ತಾವು ಮಾತನ್ನಾಡುವುದು. ಈ ರೀತಿಯ ಅಮೊಲ್ಯವಾದ ಆಚರಣೆಗಳನ್ನು ಗಾಳಿಗೆ ತೊರಿ ತಮ್ಮ ತನವನ್ನು ಮೇರೆಯಬಾರದು ಅಲ್ಲವಾ!

ಯಾವುದೇ ಒಳ್ಳೆಯದನ್ನು ಎಲ್ಲರಿಂದ ಎಲ್ಲಾ ಕಡೆಯಿಂದ ತೆಗೆದುಕೊಳ್ಳಬೇಕು ಆಗಲೇ ನಾವು ಜೀವಿಸುತ್ತಿರುವ ಸುತ್ತಲಿನ ಸಮಾಜ ಜನಾಂಗ ಶಾಂತಿ ಮತ್ತು ಸಹ ಬಾಳ್ವೆಯ ಜೀವನ ನೆಡಸಲು ಸಾಧ್ಯ. ಇಲ್ಲವಾದರೆ ತಮ್ಮ ತಮ್ಮಲ್ಲಿಯೇ ಭಿನ್ನಮತ ಮತ್ತು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

ಇದು ನಾವುಗಳು ದಿನದ, ತಿಂಗಳಿನ, ವರ್ಷದ ಮತ್ತು ನಮ್ಮ ಜೀವಿತದ ಹೆಚ್ಚು ಸಮಯವನ್ನು ಕಳೆಯುವ ನಾವು ಕೆಲಸ ಮಾಡುವ ನಮ್ಮ ನಮ್ಮ ಕಂಪನಿಗಳಿಂದ ಪ್ರಾರಂಭವಾಗಲಿ ಎಂಬುದೇ ಈ ಭಾರತೀ (ಯನ) ಮನದ ಹಂಬಲ.

-ತ್ರಿಪುಟಪ್ರಿಯ