ಶನಿವಾರ, ಏಪ್ರಿಲ್ 29, 2017

ವಾರಂತ್ಯ ವಿರಾಮ

ಶನಿವಾರ ಭಾನುವಾರವೆಂದರೇ ರಜೆಯ ದಿನಗಳು. ಎರಡು ದಿನ ರಜೆ ಐ.ಟಿ , ಬಿ.ಟಿ ಯಲ್ಲಿ ಕೆಲಸ ಮಾಡುವವರಿಗೆ ಸಿಗುವ ವಿರಾಮ ದಿನಗಳು. ಸರ್ಕಾರಿ ಮತ್ತು ಬೇರೆ ನೌಕರರಿಗೆ ಶನಿವಾರದ ರಜೆ ತಿಂಗಳಲ್ಲಿ ಒಂದು ಭಾರಿ ಮಾತ್ರ ಸಿಗುವುದು.

ಸ್ನೇಹಿತರುಗಳು ನಮ್ಮಲ್ಲಿಯೇ ಒಮ್ಮೊಮ್ಮೆ ಮಾತನಾಡಿಕೊಳ್ಳುತ್ತಿರುತ್ತೇವೆ. ವಾರದಲ್ಲಿ ಎರಡು ದಿನಗಳು ರಜೆ ಇರದಿದ್ದರೇ ಐ.ಟಿ ಯಲ್ಲಿ ಕೆಲಸ ಮಾಡುವ ಸಾಕಷ್ಟು ಮಂದಿ ಇಷ್ಟೊತ್ತಿಗೆ ಹರೆ ಹುಚ್ಚರಾಗಿಬಿಡುತ್ತಿದ್ದವೆಂದು.

ಹೌದು ಇಲ್ಲಿಯ ಕೆಲಸ ದೂರದಿಂದ ನೋಡುವವರಿಗೆ ಸಕತ್ ಮಜವಾಗಿ ಸಾಫ್ಟ್ ಆಗಿ ಕಾಣುತ್ತಿರುತ್ತದೆ. ನೋಡಿದರೇ ಸಾಫ್ಟ್ ವೇರ್ ಇಂಜಿನಿಯರ್ ಆಗಬೇಕು ಅನಿಸುತ್ತದೆ. ಅದು ನೋಡುವ ಡ್ರಸ್ ನಿಂದ, ದೊಡ್ಡ  ಮಹಡಿಯ ಹೊಳೆಯುವ ಗ್ಲಾಸ್ ಆಫೀಸನಿಂದ ಮಾತ್ರ.

ಒಳಗೆ ಹೆಜ್ಜೆ ಇಟ್ಟು ಕೆಲಸದ ಜಾಗದಲ್ಲಿ ನೋಡಿದಾಗ ತಿಳಿಯುತ್ತದೆ ನಿಜವಾದ ಸಾಪ್ಟವೇರ್ ಇಂಜಿನಿಯರ್ ನ ಹಾರ್ಡ್ ಕೆಲಸ.

ಹೌದು ಅಲ್ಲಿಯ ಕೆಲಸವನ್ನು ಸಾಮಾನ್ಯರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಯ್ ಬಿಡು ಮಾರಾಯ ಅದು ಏನೂ ನೀವು ಯಾವಾಗಲೂ ಕಂಪ್ಯೂಟರ್ ಪರದೆ ನೋಡುತ್ತಾ ಕಾಲ ಕಳೆಯುತ್ತಿರುತ್ತಿರಾ  ಎಂದು ಹಗುರವಾಗಿ ಮಾತನಾಡಬಾರದು.

ಅವರ ಆ ಕೆಲಸ ದೇವರಿಗೆ ಪ್ರೀತಿ.

ನಿತ್ಯ ಕರಕ್ಟ್ ಟೈಂ ಗೆ ಆಫೀಸ್ ಗೆ ಬರುವುದು ಮಾತ್ರ ಗೊತ್ತು. ಅದೆ ಸಂಜೆ ಕರಕ್ಟ್ ಟೈಂ ಗೆ ಮನೆಗೆ ಹೋರಡುವವರೇ ಲಕ್ಕಿ ಪೇಲೋಗಳೂ. ಆ ಕೆಲಸದ ಕರಾಮತ್ತೇ ಹಾಗೆ. ಅದರ ವಿಚಾರವನ್ನು ಯಾರ ಬಳಿಯು ಸಹ ಹೇಳಿಕೊಳ್ಳುವ ಆಗಿಲ್ಲ.

ಅದಕ್ಕೆ ಇಂದಿಗೂ ಸರ್ಕಾರಿ ಕೆಲಸಗಳೆಂದರೇ ತುಂಬ ತೂಕವನ್ನು ಉಳಿಸಿಕೊಂಡಿರುವುದು. ಒಮ್ಮೆ ಸರ್ಕಾರಿ ಕೆಲಸ ಸಿಕ್ಕಿದರೇ ಮುಗಿಯಿತು. ೫೮-೬೦ ವರುಷದವರಿಗೂ ಯಾವನೂ ಕೆಮ್ಮಂಗಿಲ್ಲ!

ಅದೇ ಈ ಖಾಸಗಿ ಐ.ಟಿ ಬಿ.ಟಿ ನೌಕರರನ್ನು ಮಾತನಾಡಿಸಿ ನಿತ್ಯ ತಮ್ಮ ಕೆಲಸದ ಬಗ್ಗೆಯೇ ಯೋಚನೆ! ಹೇಗೆ  ತನ್ನ ಕೆಲಸ ಉಳಿಸಿಕೊಳ್ಳುವುದು, ವೇತನವನ್ನು ಹೆಚ್ಚಿಸಿಕೊಳ್ಳುವುದು, ಕ್ವಾರ್ಟ್ ರ್, ಮದ್ಯ ವಾರ್ಷಿಕ, ವಾರ್ಷಿಕ ಅಪ್ರೈಸಲ್  ನಲ್ಲಿ ರೇಟಿಂಗ ಜಾಸ್ತಿ ಪಡೆಯುವುದು.  ಹೀಗೆ ಕೆಲಸದ ಜೊತೆಯಲ್ಲಿ ಈ ಎಲ್ಲವುಗಳ ತಲೆನೋವು.

ಮೇಲಿನ ನೋಟಕ್ಕೆ ಆಹಾ! ಒಳಗಿನ ತನ್ನ ವ್ಯಥೆಯನ್ನು ಮತ್ತೊಬ್ಬ ಐ.ಟಿ ಉದ್ಯೋಗಿ ಮಾತ್ರ ಅರ್ಥ ಮಾಡಿಕೊಳ್ಳಬಲ್ಲನು.

ಈ ರಂಗದ ಉದ್ಯೋಗಿಯ ಕಷ್ಟವನ್ನು Even ತನ್ನ ಹೆಂಡತಿ, ಹೆತ್ತವರು, ಮತ್ತು ಹತ್ತಿರದವರು ಸಹ ತಿಳಿಯಲಾರರು.

ಆದ್ದರಿಂದ ವಾರದ ರಜೆಗೆ ಇಲ್ಲಿ ಬಲು ಮಹತ್ವ. ಅದಕ್ಕಾಗಿ ಜಾತಕ ಪಕ್ಷಿಗಳಂತೆ ಕಾದಿದ್ದೇ ಬಂತು. ವಾರ ಪೂರ್ತಿ ಗಡಿ ಬಿಡಿಯಲ್ಲಿ ಕೇವಲ ಅಫೀಸ್ ಕೆಲಸದಲ್ಲಿಯೇ ಮುಳುಗೇಳುವ ಮಂದಿಗೆ ಶನಿವಾರ, ಭಾನುವಾರ ಸ್ವಲ್ಪ ಪ್ರೀ!

ತನ್ನ ವೈಕ್ತಿಕ ಕೆಲಸಗಳನ್ನು ಮಾಡಿಕೊಳ್ಳಲು ಸಿಗುವ ಚಾನ್ಸ್. ಮನೆಯವರೊಂದಿಗೆ ಮನಬಿಚ್ಚಿ ಮಾತನಾಡಲು ಸಿಗುವ ಅಮೊಲ್ಯ ಕ್ಷಣಗಳೇ ಸರಿ.

ಆ ಎರಡು ದಿನವಾದರೂ ಆರಾಮಾಗಿ ಬೇಗ ಮಲಗಿ ಲೇಟಾಗಿ ಏಳುವ ಕನಸು. ಎರಡು ದಿನವಾದರೂ ಖುಷಿಯಾಗಿ ಎಲ್ಲರೊಂದಿಗೆ ಬೇರೆತು ಊಟ ಮಾಡುವ ಸಂತೋಷ. ಮನೆಯವರೊಂದಿಗೆ ತಾನು ಇರುವ ಜಾಗ ಬಿಟ್ಟು ಹೊರ ಸಂಚಾರ ಹೋಗುವ ಹಿತ. ಯಾವುದೋ ಪ್ರೀತಿಯ ಕಾದಂಬರಿಯ ಅರ್ಧ ಓದನ್ನು ಎರಡು ದಿನದಲ್ಲಿ ಮುಗಿಸುವ ಧಾವಂತ. ಹೀಗೆ ವಾರಂತ್ಯ ರಜೆ ನಿಜವಾಗಿಯೋ ಖುಷಿಯ ಮೊತ್ತವನ್ನೇ ಕಟ್ಟಿಕೊಂಡಿರುತ್ತದೆ.

ಇಂಥ ವಾರವಾದ ಈ ಶನಿವಾರ ಅದು ತಾನೊಬ್ಬನೆ ಮನೆಯಲ್ಲಿ ಸಂಭ್ರಮಿಸುವಾ ಎಂದು ಎದ್ದಿದ್ದೇ ಮುಂಜಾನೆ ೯. ಇಂದು ಯಾವುದೇ ಕಾಲು ಇಲ್ಲದೇ ಇದ್ದುದ್ದಕ್ಕೆ ಸ್ವಲ್ಪ ಖುಷಿ! ಇಲ್ಲದಿದ್ದರೇ, ಅದೇ ಲ್ಯಾಪ್ ಟಾಪ್ ತೆಗೆದು ಇಶ್ಯೂ ಚೆಕ್ ಮಾಡಬೇಕಾಗಿತ್ತು.

ಅಂತು ಅಪ್ಲಿಕೇಶನ್ ಸರಿಯಾಗಿ ಕೆಲಸ ಮಾಡುತ್ತಿದೆ. ಕಣ್ಣು ಬಿಟ್ಟರೆ ಇನ್ನೂ ಕತ್ತಲು , ಹೊರಗಡೆ ಆರ್ಭಟದ ಮಳೆ. ಗುಡುಗು ಸಿಡಿಲು ಮನೆಯ ಗೊಡೆಗೆ ಹೊಡೆಯುತ್ತಿದೇಯೇನೋ ಎನಿಸುತ್ತಿದೆ. ಸ್ವಲ್ಪ ಜರಿದು ಮೊಬೈಲ್ ನಲ್ಲಿ ಟೈಂ ನೋಡಿದರೇ, ಟೈಂ ಆಗಲೇ ೯. ಕಾರ್ಮೋಡ ಕತ್ತಲು. ಈ ಮಳೆ ರಾತ್ರಿಯಿಂದಲೂ ಹೀಗೆ ಬರುತ್ತಲೇ ಇದೆ.

ಹಾಸಿಗೆಯಲ್ಲಿಯೇ ಮೊಬೈಲ್ ತೆಗೆದು ವೇದರ್ ಆಫ್ ಚೆಕ್ ಮಾಡಿದೆ. ಮಳೆ ಮದ್ಯಾಹನದವರೆಗೂ ಇದೆ. ಇಲ್ಲಿಯ ವೇದರ್ ರಿಪೊರ್ಟ್ ಪಕ್ಕ ಪರಪೇಕ್ಟ್. ಗಂಟೆ ಗಂಟೆಗೂ ಕರಾರುವಾಕ್ಕದ ಮಾಹಿತಿ.

ಇನ್ನೂ ಏನು ಮಾಡುವುದು ಎಂದುಕೊಂಡು ಹಾಗೆಯೇ ನಿತ್ಯದ ಅಭ್ಯಾಸದಂತೆ ಆಫೀಸ್ ಮೈಲ್ ಬಾಕ್ಸ್ ಬ್ರೌಸ್ ಮಾಡಿದೆ. ಏನೂ ತೊಂದರೆಯಿಲ್ಲ ಎಂದುಕೊಂಡು ಪೇಸ್ ಬುಕ್ ಆಪ್ ಬ್ರೌಸ್ ಮಾಡಲು ಮನಸ್ಸು ಹೋಯಿತು. ಇಂದು ನ್ಯೂಸ್ ಪೇಪರಗಿಂತ ಪೇಸ್ ಬುಕ್ ಪಕ್ಕ ಅಪಟುಡೇಟು. ಯಾರ್ಯಾರೋ ತಮ್ಮ ವಾಲ್ ಗಳಿಗೆ ಬಸವ ಜಯಂತಿಯ ಶುಭಾಶಯಗಳ ಪೊಟೋ ಹಾಕಿದ್ದರು.

ಇಂದು ಬಸವಣ್ಣನವರ ಜಯಂತಿ. ಊರಲ್ಲಿದ್ದರೇ ಹಬ್ಬದ ಊಟ ಮತ್ತು ಸಂಭ್ರಮ. ಇಲ್ಲಿ ಒಂಟಿ ಜೀವ ಯಾರು ಕೇಳಬೇಕು?

ವಾಟ್ಸ್ ಪ್ ಮೇಸೆಜೆ ೩ ಬಂದಿದ್ದವು. ವಾಟ್ಸ್ ಗ್ರೂಫ್ ಮಜಾ ಎಂದರೇ.. ಶುರುವಾದ ಹೊಸತರಲ್ಲಿ ಏನ್ ಜೋರು ಮಳೆ!ಆಮೇಲೆ ಬರು ಬರುತ್ತಾ ಬರಸೀಮೆಯಾಗಿ ಬಿಡುತ್ತದೆ. ಮೋಡಕ್ಕಾಗಿ ಕಾಯಬೇಕಾಗುತ್ತದೆ. ಹಾಗೆಯೇ ಒಂದು ವಾರದಿಂದಲೂ ಏನೊಂದು ಮೇಸೆಜ್ ಇಲ್ಲದ ಗ್ರೂಪ್ ನಲ್ಲಿ ಮೇಸೆಜೊಂದು ಇತ್ತು. ಅದು ಬಸವ ಜಯಂತಿಯ ಶುಭಾಶಯದ್ದೂ. ಮತ್ತೊಂದು ಆಫೀಸ್ ಸ್ನೇಹಿತರ ಗ್ರೂಫ್ ನಲ್ಲಿ ವಿಡಿಯೋ ಮೆಸೇಜ್. ಪುನಃ ಐ.ಟಿ ಗಂಡ ತಾನು ಯಾಕೆ ಕುಡಿಯಬೇಕು ಎಂಬುದಕ್ಕೆ ಸಂಬಂಧಿಸಿದ್ದು.

ಇನ್ನೂ ಸಾಕು ಎಂದು ಪೋನ್ ಪಕ್ಕಕ್ಕಿಟ್ಟು. ಹೊದಿಕೆ ಮಡಿಸಿ ಸೀದಾ ಸ್ನಾನಕ್ಕೆ ಹೊರಟೆ. ಹೊರಗಡೇ ಏನ್ ಅಟ0ಬಾಂಬ ಸಿಡಿಸುತ್ತಿದ್ದಾರೋ ಎಂಬಂತೆ ಸಿಡಿಲು ಗುಡುಗು. ಇಲ್ಲಿಯ ಮಳೆಯ ಜಾದು ನೋಡಿಯೇ ಅನುಭವಿಸಬೇಕು. ನಮ್ಮೊರಿನಲ್ಲಿನಂತೆ ಮಳೆಯಲ್ಲ. ಜೋ ಎನ್ನುವಂತೆ ಮೋಡವೇ ಮನೆ ಮೇಲೆ ಕೂತಿರುವಂತೆ ಸುರಿಯುತ್ತದೆ. ಈ ರೀತಿಯ ಮಳೆ ಬೆಂಗಳೂರಿನಲ್ಲಿ ಒಂದು ಗಂಟೆ ಬಂದರೇ ಮುಗಿಯಿತು. ಬೆಂಗಳೂರಲ್ಲಿ ದೋಣಿ ಸೇವೆ ಆರಂಭಿಸಬೇಕಾಗುತ್ತದೆ. ಆದರೇ ಇಲ್ಲಿ ಅದು ಹೇಗೆ ಮ್ಯಾನೇಜ್ ಮಾಡುತ್ತಾರೋ ತಿಳಿಯದು. ಮಳೆ ನಿಂತ ಮರುಕ್ಷಣವೇ ಎಲ್ಲಿ ಯಾವಾಗ ಮಳೆ ಬಂತು ಎಂಬುವ ಕುರುಹು ಸಹ ಸಿಗುವುದಿಲ್ಲ. ಮೇಲಿನಿಂದ ಬಿದ್ದ ನೀರು ಅದು ಎಲ್ಲಿಗೆ ಸೇರಬೇಕು ಆ ಜಾಗಕ್ಕೆ ಸೇರಿ ಪಾವನವಾಗುತ್ತದೆ.

ಸ್ನಾನದ ನಂತರ ದೇವರಿಗೆ ನಮಸ್ಕಾರ ಮಾಡಿ ಅಡಿಗೆ ಮನೆಗೆ ಹೋಗಿ ಒಂದು ಲೋಟ ನೀರು ಕುಡಿದೆ. ಹಾಲಿಗೆ ಬಂದು ಟಿ.ವಿ೯ ನೋಡೋಣ ಎಂದು ಟಿ.ವಿ ಹಾನ್ ಮಾಡಿದರೇ ಬಸವಣ್ಣನವರ ಬಗ್ಗೆ ಚರ್ಚೆ ಬರುತ್ತಿತ್ತು. ಚರ್ಚೆ ವಿಷಯ ರಾಜಕೀಯ ಪಕ್ಷಗಳು ಬಸವಣ್ಣನವರನ್ನು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಯಾಕೆ ನೆನಪು ಮಾಡಿಕೊಳ್ಳುತ್ತಾರೆ ಎಂದು. ಬೇರೆ ಬೇರೆ ಪಕ್ಷಗಳದವರನ್ನು ಕುರಿಸಿಕೊಂಡು ಚರ್ಚಿಸುತ್ತಿದ್ದರು.

ಹಾಗೆಯೇ ಪುನಃ ಅಡಿಗೆ ಮನೆಗೆ ಬಂದು ನಿನ್ನೆ ಎದುರು ಮನೆಯವರು ಕೊಟ್ಟ ಅಡಿಗೆಯನ್ನು ಬಿಸಿ  ಮಾಡಿ ಬ್ರೇಕ್ ಪಾಸ್ಟ್ ಮುಗಿಸಿದೆ. ಅನಂತರ ಕಾಫಿ ಮಾಡಿಕೊಂಡು ಕುಡಿಯುತ್ತಾ ಹೆಂಡತಿಗೆ ಕಾಲ್ ಮಾಡಿ ಅದು ಇದು ವಿಚಾರಿಸಿ ನಿತ್ಯದ ಮಾತು ಮುಗಿಸಿದೆ.

ಅಷ್ಟೊತ್ತಿಗೆ ಸೂರ್ಯ ಭಗವಾನ್ ಮೋಡದ ಮರೆಯಲ್ಲಿಯೇ ಸ್ವಲ್ಪ ಸ್ವಲ್ಪ ಇಣುಕಲು ಪ್ರಾರಂಭಿಸಿದ. ಮಳೆರಾಯ ನನಗೇನೂ ಜಾಗ ಎಂದು ಹೋರಡಲು ಅನುವಾದ.

ಮದ್ಯಾಹನದ ಊಟಕ್ಕೆ ಹೇಗು ನೆನ್ನೆ ಮಾಡಿದ ಬೀಟ್ ರೋಟ್ ಪಲ್ಯ ಇದೆ. ೧೨.೩೦ ರ ಹೊತ್ತಿಗೆ ಚಪಾತಿ ಮಾಡಿದರೇ ಆಯಿತು ಎಂದುಕೊಂಡು ಟಿ.ವಿ ಮುಂದೆ ಕೂತುಕೊಂಡೇ.

ಪುನಃ ಬಾಹುಬಲಿ ೨ ರ ನಾಯಕನ ಬಗ್ಗೆ ಕಾರ್ಯಕ್ರಮ ಬಂತು. ಅನಂತರ ೯ರ ನ್ಯೂಸ್ ಯಡ್ಡಿ ಈಶ್ ಡಿಶುಮ್ ಡಿಶುಮ್ ರಾಜಕೀಯದ ಸುದ್ಧಿಗಳು. ಸಾಕು ಯಾವುದಾದರೊಂದು ಸಿನಿಮಾ ನೋಡೋಣ ಎಂದುಕೊಂಡು ಬಾಹುಬಲಿ ಸಿನಿಮಾ ನೋಡಲು ಶುರುಮಾಡಿದೆ.

ಹೊರಗಡೆ  ವಾತವರಣ ಸುಂದರವಾಗಿ ಕಾಣುತ್ತಿತ್ತು. ಇದೀಗ ತಾನೇ ಸ್ನಾನ ಮಾಡಿದ ಪ್ರಕೃತಿ ಮಾತೆಯಂತೆ ಹಚ್ಚಹಸಿರಾಗಿ ಕಂಗೊಳಿಸುತ್ತಿತ್ತು.

ಊಟ ಮಾಡಿ ಹೀಗೆ ವಾಕ್ ಹೋಗಿ ಬರೋಣವೆಂದುಕೊಂಡೆ. ಟೇಂಪರೆಚರ್ ೨೩ ತೋರಿಸುತ್ತಿತ್ತು. ಹಾಗೆಯೇ ಮನೆಯ ಕಸದ ಪೊಟ್ಟಣವನ್ನು ಕಸದ ಡಬ್ಬಿಗೆ ಹಾಕಲು ತೆಗೆದುಕೊಂಡು ಬಾಗಿಲಿಗಿ ಬೀಗ ಹಾಕುವ ಸಮಯದಲ್ಲಿ ನಮ್ಮ ಮನೆಯ ಮೇಲಿರುವ ಜನನಿ ಮತ್ತವರ ಮನೆಯವರು ಹೊರಗಿನಿಂದ ಬಂದರು. ಹಾಯ್ ಜನನಿ ಯಾವಾಗ ಇಂಡಿಯಾದಿಂದ ಬಂದಿದ್ದು? ಎಂದು ಮಾತನಾಡಿಸಿ ಹೊರ ಹೆಜ್ಜೆ ಇಟ್ಟೆ. ಹೊರಗಡೆ ಸ್ವಲ್ಪ ಬಿಸಿಲು ಅನಿಸಿತು. ಮಳೆ ಬಂದು ಇಳೆ ತಂಪಾಗಿತ್ತು. ಹಾಗೆಯೇ ಹೆಜ್ಜೆ ಹಾಕುತ್ತಾ ಹಾಕುತ್ತಿದ್ದಂತೆ ಬಿಸಿಲ ಜಳ ಜಾಸ್ತಿ ಅನಿಸಿತು. ಇಲ್ಲಿ ಪ್ರತಿಯೊಂದು ಎಕ್ಸ್ ಟ್ರಿಮ್. ೨೩ ಡಿಗ್ರಿ ಇದ್ದರೂ ಕಣ್ಣು ಬಿಡದಂತೆ ರವಿ ಕಿರಣಗಳು. ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬರಬೇಕಾಗಿತ್ತೆಂದು ಅನಿಸಿತು.

ವಾಕಿಂಗ ಲೇನ್ ನಲ್ಲಿ ಯಾರೊಬ್ಬರೂ ಇಲ್ಲ. ಅದು ದೂರದಲ್ಲಿ ಅಮೇರಿಕಾದ ಲೇಡಿ ರನ್ನಿಂಗ ಮಾಡಿಕೊಂಡು ಬರುತ್ತಿದ್ದಳು. ಹತ್ತಿರಕ್ಕೆ ಬಂದಾಗ ಹಾಯ್ ಎಂದು ಹಾಗೆಯೇ ಓಡುತ್ತಾ ಮರೆಯಾದಳು. ನಿತ್ಯ ಹೋಗುತ್ತಿದ್ದಷ್ಟು ದೂರ ಹೋಗಲು ಸಾಧ್ಯವಿಲ್ಲವೆಂದು ನಡೆಯುತ್ತಾ ಸಾಗಿದೆ. ವಿಪರೀತವಾದ ಸೂರ್ಯ ಕಿರಣಗಳು ಯಾಕೋ ಈಗ ವಾಕ್ ಬಂದು ತಪ್ಪು ಮಾಡಿದೆ  ಅನಿಸಿತು.

ಮನೆಗೆ ಬಂದಾಗ ಆಗಲೇ ಮೂರು ಮುಕ್ಕಾಲು. ಪುನಃ ಮೊಬೈಲ್  ಚೆಕ್ ಮಾಡಿ. ಲ್ಯಾಪ್ ಟಾಪ್ ನಲ್ಲಿ ಲಾಗಿನ್ ಆದೆ. ಆಪೀಸ್ ಗೆಳೆಯ ಪಿಂಗ್ ಮಾಡಿದ್ದಾ ಏಯ್ ರಾತ್ರಿ ಆಪ್ಲಿಕೇಷನ್ ಮೈಂಟನೇಸ್ ಆಕ್ಟಿವಿಟಿಗೆ ಆಪೀಸ್ ಗೆ ಬರುತ್ತಿಯಾ ಎಂದಿದ್ದಾ. ಅವನಿಗೆ ರಿಫ್ಲೇ ಮಾಡಿದೆ. ಹಾಗೆಯೇ ಸ್ವಲ್ಪ ಕೊಂಚ ಮಲಗೋಣವೆಂದುಕೊಂಡು ಲ್ಯಾಪ್ ಟಾಪ್ ಮುಚ್ಚಿ ಹೋದೆ.

ಹೊರಗಡೆ ಮಕ್ಕಳ ಆಟವಾಡುವ ಶಬ್ಧ ಕೇಳುತ್ತಿತ್ತು. ನೋಡಿದರೇ ಎಲ್ಲ ಹೊಸಬರು. ಕೇಳಗಡೆ ಮನೆಯಲ್ಲಿರುವವರು ಕಳೆದ ವಾರ ಬಂದಿರುವವರು. ಅವರು ಅವರಿಗೆ ಗೊತ್ತಿರುವ ಕುಟುಂಬದವರೆಲ್ಲ ಸೇರಿ ವಾರಂತ್ಯದ ಪಾರ್ಟಿ ಮಾಡುತ್ತಿರಬೇಕು. ಹೆತ್ತವರ ಜೊತೆ ಈ ಮಕ್ಕಳು ಬಂದಿದ್ದಾವೆ ಎನಿಸಿತು. ಅವರುಗಳ ಕಲರವ ಮತ್ತು ಕೇಕೆ ಮನಕ್ಕೆ ಖುಷಿ ಕೊಟ್ಟಿತು.

ಮಕ್ಕಳ ಮನಸ್ಸೇ ಸರಿ!

ರಾತ್ರಿಗೆ ಏನು ಅಡುಗೆ ಮಾಡುವುದು? ಹೊಟ್ಟೆ ನೆನಪು ಮಾತ್ರ ಇರಲೇಬೇಕು. ಒಬ್ಬರೂ ಇದ್ದರೂ ಅಡುಗೆ ಇಬ್ಬರೂ ಇದ್ದರೂ ಅಡುಗೆ ಮಾಡಲೇಬೇಕು. ಅವಲಕ್ಕಿ ಮಾಡಿದರೇ ಬೇಷ್ ಅನಿಸಿತು. ಅದನ್ನು ಸುಲಭವಾಗಿ ಮಾಡಿದರಾಯ್ತು ಎಂದುಕೊಂಡೆ.

ಪುನಃ ಲ್ಯಾಪ್ ಟಾಪ್ ಆನ್ ಮಾಡಿದೆ. ಹಾಗೆಯೇ ಪೇಸ್ ಬುಕ್ ಲಾಗಿನ್ ಆದ್ರೇ. ನನ್ನ ಪ್ರೇಂಡ್ ಲಿಸ್ಟ್ ನಲ್ಲಿರುವ ಗೆಳೆಯ ಅವನ ಪ್ರೇಂಡ್ ಗೆ ಕಾಮೆಂಟ್ ಹಾಕಿದ್ದಾ. ಏನ್ ಇರಬಹುದು ಎಂದು ಡಿಟೈಲ್ ನೋಡಿದರೆ. ಆ ಹುಡುಗಿ ಬಾಹುಬಲಿ -೨ ನೋಡುತ್ತಿದ್ದೇನೆ ಎಂದು ವಾಲ್ ಗೆ ಮೇಸೆಜ್ ಹಾಕಿದ್ದಳೆ. ಅದಕ್ಕೆ ಯಾರೋ ಒಬ್ಬ ಕನ್ನಡಾಭಿಮಾನಿ (?) ಏಯ್ ಕನ್ನಡ ಹೀಗೆನಾ ನೀನು ಉದ್ಧಾರ ಮಾಡದು? ಎಂದು ಕೇಳಿದ್ದಾನೆ. ಅದಕ್ಕೆ ಆ ಹುಡುಗಿ ನೀ ಯಾರ್ ಕೇಳದು ನಾನು ಯಾವ ಭಾಷೇ ಸಿನಿಮಾನಾದರೂ ನೋಡುತ್ತಿನಿ ಎಂದಿದ್ದಾಳೆ. ಅವನು ಬಿಡದೆ ಕಾಮೆಂಟ್ ಹಾಕಿ ವಾಮಗೋಚರವಾಗಿ ಬೈದಿದ್ದಾನೆ. ಅದಕ್ಕೆ ಇಯಮ್ಮಾ  ಉದ್ದನೇಯ ಪೋಸ್ಟ್ ನ್ನು ಬೈದು ಹಾಕಿದ್ದಾಳೆ.

ಉಫ್!

ಅವಲಕ್ಕಿ ರೇಡಿಯಾಯಿತು.

ಹಾಗೆಯೇ ನನ್ನ ಬ್ಲಾಗ್ ಕೊಂಡಿಯನ್ನು ಒಪನ್ ಮಾಡಿದೆ. ಅಲ್ಲಿರುವ ಮುಂದಿನ ಬ್ಲಾಗ್ ಕೊಂಡಿಯನ್ನು ಕ್ಲಿಕ್ಕಿಸಿದೆ. ಇನ್ನೊಂದು ಕನ್ನಡ ಬ್ಲಾಗ್ ಬಂತು. ಕವನಗಳ ಬ್ಲಾಗ್. ಉತ್ತಮ ಕವನಗಳಿದ್ದವು. ಹಾಗೆಯೇ ಮುಂದಿನ ಬ್ಲಾಗ್ ಲಿಂಕ್ ಒತ್ತಿದಾಗ ಮತ್ತೇ ಇನ್ನೊಂದು ಬ್ಲಾಗ್ ಹೀಗೆ ಹಲವಾರು ಕನ್ನಡ ಬ್ಲಾಗ್ ಗಳನ್ನು ಬ್ರೌಸ್ ಮಾಡುತ್ತಾ ಮಾಡುತ್ತಾ ಹೋದಾಗ ದಾರವಾಡ ಪೋಲಿಸ್ ಆಪೀಸ್ ಪೇಜ್ ಬಂತೂ. ನೋಡಿದರೆ ಅಲ್ಲಿ ನಿತ್ಯ ಕೇಸ್ ಗಳನ್ನು ಅನ್ ಲೈನ್ ನಲ್ಲಿ ಟ್ರ್ಯಾಕ್ ಮಾಡುತ್ತಿದ್ದಾರೆ. ಇದು ಉತ್ತಮ ಕೆಲಸ ಅನಿಸಿತು. ಆ ವ್ಯಾಪ್ತಿಯ ಘಟನೆಗಳು ಎಪ್.ಐ.ಆರ್ ವಿವರಗಳು ಆನಲೈನ್ ನಲ್ಲಿ. ಹೀಗೆಲ್ಲಾ ಬ್ಲಾಗ್ ಉಪಯೋಗವಾಗುವುದನ್ನು ಕಂಡು ಖುಷಿಯಾಯಿತು. ಇನ್ನೊಮ್ಮೆ ಇದನ್ನು ವಿವರವಾಗಿ ನೋಡೋಣವೆಂದುಕೊಂಡು. ಪುನಃ ಮುಂದಿನ ಬ್ಲಾಗ್ ಲಿಂಕ್ ಮೇಲೆ ಕ್ಲಿಕ್ಕಿಸಿದೆ. ಅದು ಸಾಹಿತ್ಯಕ್ಕೆ ಸಂಬಂಧಿಸಿದ ಬ್ಲಾಗ್. ಸೂರ್ಯಕಾಂತ ಪಂಡಿತ್ ಎಂಬುವವರು ಉತ್ತಮ ಪುಸ್ತಕ ವಿಮರ್ಶೆಗಳನ್ನು ಮಾಡಿದ್ದರು. ಬೈರಪ್ಪನವರ ಉತ್ತರಕಾಂಡ ಕಾದಂಬರಿಯ ಬಗ್ಗೆ ಬರೆದಿರುವುದನ್ನು ಪೂರ್ತಿ ಓದಿದೆ. ಮುಂದೆ ಇನ್ನೊಂದು ಲಿಂಕ್ ಕ್ಲಿಕ್ಕಿಸಿದಾಗ ಕೀರ್ತಿರಾಜ್ ಎಂಬುವವರ ಬ್ಲಾಗ್. ಅದು ಚೆನ್ನಾಗಿತ್ತು. ಅವರು ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಅವುಗಳನ್ನೇ ಬ್ಲಾಗ್ ನಲ್ಲಿ ಮುದ್ರಿಸಿದ್ದಾರೆ.

ಬ್ಲಾಗ್ ಲೋಕ ನಿಜವಾಗಿಯೂ ಮಸ್ತ್ ಲೋಕ. ತನ್ನದೇ ಭಾವನೆಗಳನ್ನು ಅಕ್ಷರದೊಳಕ್ಕೆ ಇಳಿಸಿಟ್ಟು ಕಾಪಾಡಿಕೊಳ್ಳುವುದು. ಯಾರು ಬೇಕಾದರೂ ಆನ್ ಲೈನ ನಲ್ಲಿ ಬರೆದುಕೊಳ್ಳಬಹುದು. ಹೀಗೆ ಬರೆಯುವವರ ವೈವಿಧ್ಯಮಯವಾದ ಬರಹಗಳು. ಎಲ್ಲಾ ಬಗೆಯಲ್ಲಿನ ಲೇಖನಗಳು  ದೊರೆಯುತ್ತವೆ. ಓದುವುದಕ್ಕೆ ಸಮಯವಿದ್ದಾರೆ ಅವರೆಲ್ಲಾರ ಅನುಭವಗಳನ್ನು ನಮ್ಮದಾಗಿಸಿಕೊಳ್ಳಬಹುದು. ವಾರಾಂತ್ಯಕ್ಕೆ ಇದಕ್ಕಿಂತ ಉತ್ತಮವಾದ ಸಂಗತಿ ಇನ್ನು ಏನು ಇದೆ?

ಶನಿವಾರದ ರಜೆ ಹೀಗೆ ಮುಗಿಯಿತು. ನಾಳೆ ಭಾನುವಾರ. ೧೨ ಕ್ಕೆ ಪಾಟ್ ಲಕ್ ಇದೆ. ನಮ್ಮದೇ ಆಪೀಸ್ ಗೆಳೆಯರೆಲ್ಲ ತಿಂಗಳಿಗೊಮ್ಮೆ ಒಟ್ಟಿಗೆ ಸೇರಿ ಕೆಲವು ಸಮಯಗಳನ್ನು ಖುಷಿಯಾಗಿ ಕಳೆಯುವುದು. ನಾವೆ ನಾವುಗಳು ಮಾಡಿಕೊಂಡು ಬಂದಂತಹ ವಿವಿಧ ಬಗೆಯ ತಿನಿಸು, ಭಕ್ಷ್ಯಗಳನ್ನು ಹಂಚಿಕೊಂಡು ಒಟ್ಟಿಗೆ ತಿನ್ನುವುದು. ಈ ಭಾರಿಯ ನನ್ನ ಪಾಲಿನ ತಿನಿಸು ವೇನಿಲಾ ಐಸ್ ಕ್ರೀಮ್.

ನನ್ನ ಅವಲಕ್ಕಿ ನನಗಾಗಿ ಕಾಯುತ್ತಿದೆ. ತಿಂದ ಬಳಿಕ ಸ್ವಲ್ಪ ರೇಸ್ಟ್ ತೆಗೆದುಕೊಂಡು ಆಪೀಸ್ ಗೆ ಹೋಗಬೇಕು...

ಇದೆ ಲೈಪ್ ಅಲ್ಲವಾ?

ಗುರುವಾರ, ಏಪ್ರಿಲ್ 27, 2017

ಓದು ಪುಸ್ತಕ. ಸುತ್ತು ದೇಶ!

ದೇಶ ಸುತ್ತು ಅಥವಾ ಕೋಶ ಓದು ಎಂದು ಹಿರಿಯರು ಹೇಳಿದ್ದು ಸತ್ಯ.

ಪ್ರಪಂಚವನ್ನು ಪೂರ್ತಿ ಸುತ್ತಲು ಈ ಒಂದು ಜನುಮ ಸಾಕಾಗುವುದಿಲ್ಲ. ಹಾಗೆಯೇ ಒಂದು ಜೀವಮಾನದಲ್ಲಿ ಜಗತ್ತಿನಲ್ಲಿರುವ ಎಲ್ಲ ಪುಸ್ತಕಗಳನ್ನು ಓದಲು ಸಹ ಆಗುವುದಿಲ್ಲ.

ಎರಡು ಸಹ ಈ ಹುಲು ಮಾನವನಿಗೆ ಪೂರ್ಣವಾಗಿ ದಕ್ಕಲಾರದ ಸಂಗತಿಗಳು.

ಆದರೇ ಈ ಎರಡನ್ನು ಪಡೆಯಲು ತನ್ನ ಜೀವನ ಪೂರ್ತಿ ಪ್ರಯತ್ನಿಸುತ್ತ ಇರಬಹುದು.

ಈ ಜಗತ್ತು. ಈ ಭೂಮಿಯ ನಾಲ್ಕನೇ ಒಂದು ಬಾಗವೇ ವಾಸಿಸಲು ಯೋಗ್ಯವಾಗಿದ್ದು. ಮಿಕ್ಕಿದ್ದೇಲ್ಲಾ ನೀರಿನಿಂದ ವ್ಯಾಪಿಸಿದೆ. ಆ ಒಂದು ಭಾಗವನ್ನು ಸಹ ತಾನು ಪೂರ್ಣವಾಗಿ ಅನುಭವಿಸಲು ಸಾಧ್ಯವಿಲ್ಲ.  ಅದು ಕಷ್ಟವಾದ ಕೆಲಸ.

ಇಡೀ ಗೋಲವೇ ವೈವಿಧ್ಯಮಯವಾದ ಜೀವಜಲ ಸಂಪತ್ತಿನ ಆಗರವಾಗಿದೆ. ಸಾವಿರಾರು ವಿಧ ವಿಧ ಸಂಸ್ಕೃತಿ ಸಂಪತ್ತಿನ ತೊಟ್ಟಿಲಾಗಿದೆ. ಇಲ್ಲಿರುವ ವಿಷಯ ವಿಶೇಷಗಳನ್ನು ತಿಳಿದುಕೊಳ್ಳುವುದು ಸುಲಭದ ವಿಷಯವಲ್ಲ. ಓದು ಒಂದು ಮಾದ್ಯಮವಷ್ಟೇ. ಕೆಲವೊಂದು ವಿಷಯಗಳನ್ನು ಅನುಭವದ ಮೊಲಕ ನೋಡಿ ತಿಳಿಯಪಡಿಸಿಕೊಳ್ಳಬಹುದು. ಇನ್ನೂ ಕೆಲವನ್ನು ಆ ಜಾಗ, ವ್ಯಕ್ತಿ, ಜೀವ, ಜಲ, ಸಂಸ್ಕೃತಿ ಸಂಪತ್ತಿನೋಡನೆ ಬೆರೆತು ತನ್ನದಾಗಿಸಿಕೊಳ್ಳಬಹುದು.

ಮನುಷ್ಯನ ಆಯಸ್ಸು ಅತಿ ಕಡಿಮೆ. ಅಯಸ್ಸಿನ ಅಂದಾಜಿನಲ್ಲಿ ಪ್ರತಿಯೊಂದನ್ನು ಕಲಿತು, ತಿಳಿದು ತನ್ನದಾಗಿಸಿಕೊಳ್ಳುವುದು ತನ್ನ ನಿಲುವಿಗೆ ನಿಲುಕುವಂತದಲ್ಲ.

ಎಲ್ಲವನ್ನು ಗೊತ್ತು ಎಂದು ಹೇಳುವುದಕ್ಕೆ ಎಂದಿಗೂ ಆಗುವುದಿಲ್ಲ. ಹಾಗೆ ಹೇಳಿದ ಮರುಕ್ಷಣವೇ ಗೊತ್ತಿಲ್ಲದ ಅನುಭವಿಸಿರದ ಅಕೋಟಿ ಸಂಗತಿಗಳು ರೊಪ್ಪನೇ ತನ್ನ ಬುದ್ಧಿಗೆ ಕಾಣದಂತಾಗುತ್ತದೆ.

ಓದಿನ ಮಜಾ ಅನುಭವಿಸಿದವನೆಗೆ ಗೊತ್ತು. ಇದೊಂದು ಯಾರು ಹೇಗೆ ದೋಚದಂತ ವಿಧ್ಯೆ. ಕಡಿಮೆ ಖರ್ಚಿನಲ್ಲಿ ತನಗೆ ಬೇಕೆನಿಸಿದ್ದನ್ನು ಓದುತ್ತಾ ಬೇರೆಯವರ ಅನುಭವಗಳನ್ನು, ಭಾವನೆಗಳನ್ನು, ಬೇರೆಯ ಜನರ ಜಾಗದ ವಾಸನೆಯನ್ನು ಆಹ್ಲಾದಿಸಬಹುದು.

ಇದೊಂದು ತುಂಬ ಸುಲಭವಾದ ಪಯಣ ಅನಿಸುತ್ತದೆ. ಕುಳಿತಲ್ಲಿಯೇ ಪ್ರಪಂಚದ ಯಾವುದೋ ಗೊತ್ತಿರದ ದೂರದ ಪ್ರದೇಶಕ್ಕೆ ಹೋಗಿಬರಬಹುದು. ಕುಳಿತಲ್ಲಿಯೇ ಕಾಲದ ಯಾವ ಹಂಗಿಲ್ಲದ ಭೂತ ಭವಿಷ್ಯತ್ ನಲ್ಲಿ ಒಮ್ಮಲೇ ಸಂಚರಿಸಬಹುದು.

ಬರಹಗಾರನ ಅನುಭವವನ್ನು ತಾನು ರುಚಿಸಬಹುದು. ಬರಹಗಾರ ಕಂಡುಂಡ ಅನುಭವ ಭಾವನೆಗಳನ್ನು ತಾನು ಸ್ವತಃ ಅನುಭವಿಸಬಹುದು.

ತಾನೇ ನಿಬ್ಬೇರಗಾಗಿ ಯಾವುದೋ ಊರಿನ ಯಾವುದೋ ಮನೆಯ ಯಾರದೋ ವ್ಯಕ್ತಿಯ ಕಷ್ಟ, ನೋವು, ನಲಿವಿಗೆ ಸಾಕ್ಷಿಯಾಗಬಹುದು.

ಲೇಖಕನ ಅಭಿವ್ಯಕ್ತಿಗೆ ತಾನು ದ್ವನಿಯಾಗಬಹುದು. ಇದೇ ಓದಿನ ಜಾದು.

ತನ್ನ ಮನದ ತುಡಿತ-ಮೀಡಿತಕ್ಕೆ ಆ ಬರಹಗರನ ಪುಸ್ತಕ ಸಾಲುಗಳು ದ್ವನಿಯೇನೋ ಅನಿಸುತ್ತದೆ. ತನ್ನ ಮನದ ಚಿಂತನೆಯ ಭಾವನೆಯ ಆಸೆಗೆ ಕಾವ್ಯಗಾರನ ಚಿತ್ರಿತ ಪಾತ್ರ ಅಸರೆಯಾಗುತ್ತದೆ. ಓದುತ್ತಾ ಓದುತ್ತಾ ತಾನು ಯಾವುದೋ ಕಾಲದ ಕಲ್ಫಿತ ಘಟನೆಯಲ್ಲಿ ಒಂದಾಗಿ ಪಾತ್ರಗಳ ಒಳ ನೋಟಗಳಿಗೆ ಬೆಳಕಾಗಿ ಸಂತೃಪ್ತಿಯ ನಿಟ್ಟುಸಿರಾಗಿ ಕರಗಿ ಹೋಗಿಬಿಡಬಹುದು.

ಕಾಡುವ ಪುಸ್ತಕಗಳು ಪ್ರತಿಯೊಬ್ಬ ಓದುಗನನ್ನು ಜೀವನ ಪರಿ ಕಾಯುತ್ತವೆ.

ಎಂದು ಮರೆಯಲಾರದ ಪುಸ್ತಕಗಳು ಎಂದೆಂದಿಗೂ ಒಳ್ಳೆಯ ಸ್ನೇಹಿತರೇ ಸರಿ. ಒಂದೊಳ್ಳೆಯ ಪುಸ್ತಕ ಒಳ್ಳೆಯ ವ್ಯಕ್ತಿಯೇ ಸರಿ.

ಪುಸ್ತಕಗಳಿಲ್ಲದ ಮನೆ ಸ್ಮಶಾನಕ್ಕೆ ಸಮ ಎಂಬ ಗಾದೆಯ ಮಾತಿದೆ.

ಓದುವ ಅಭ್ಯಾಸ ಮನುಷ್ಯನಿಗೆ ದೇವರು ಕೊಟ್ಟ ಮಹಾನ್ ವರವೇ ಸರಿ.

ಇಂದು ಸಂತೋಷಕ್ಕಾಗಿ ಓದುವ ಮಂದಿ ತುಂಬ ಕಮ್ಮಿಯೇ. ವಿದ್ಯಾಭ್ಯಾಸಕ್ಕಾಗಿ ಮಾತ್ರ ಓದು. ವಿದ್ಯೇ ಕೆಲಸಕ್ಕಾಗಿ  ಮಾತ್ರ ಎಂಬ ಕಾಲದಲ್ಲಿ ನಾವೆಲ್ಲಾ ಜೀವಿಸುತ್ತಿದ್ದೇವೆ.

ಸಿಲಬಸ್ ಬಿಟ್ಟು ಮತ್ತೇನೂ ಓದಬೇಡ ನನ್ನ ಕಂದಾ ಎಂದು ಮುದ್ದಿನ ಅಮ್ಮಂದಿರು ಉಪದೇಶ ಮಾಡುವ ಕಾಲಘಟ್ಟದಲ್ಲಿರುವ ಸಂದರ್ಭದಲ್ಲಿ ಓದಿನ ಗಮ್ಮತ್ತನ್ನು ಹೇಗೆ ಹೇಳುವುದು.

ಓದುವುದು ಟೈಂ ವೇಷ್ಟ್ ಎನ್ನುವವರಿದ್ದಾರೆ.

ಅಂಗೈಯಲ್ಲಿಯೇ ಜಗತ್ತನ್ನು ಬ್ರೌಸ್ ಮಾಡುತ್ತಿರುವಾಗ ಕಥೆ ಕಾದಂಬರಿ ಕಾವ್ಯಗಳ ಜರೋರತು ಏಕೆ ಮಗಾ? ಎನ್ನುತ್ತಿದೆ ನಮ್ಮ ಹೈಟೆಕ್ ಹುಡುಗರು.

ಬೇಂದ್ರೆ - ಕುವೆಂಪು ಸಿಲಬಸ್ ಗೆ ಮಾತ್ರ ಸೀಮಿತವಾಗಿದ್ದಾರೆ.

ಬರಹಗಾರರೆಂದರೇ ಸಿಲಬಸ್ ಪುಸ್ತಕಗಳಿಗೆ ಬರೆಯುವವರು ಮಾತ್ರ ಎಂದು ಭಾವಿಸಿರುವ ಕಾನ್ವೇಂಟ್ ಜಮಾನದ ಈ ಸಮಯದಲ್ಲಿ ಕನ್ನಡದ ಪುಸ್ತಕ ಲೋಕದಲ್ಲಿ ಸಂಚರಿಸುವವರು ಯಾರು ಎಂದು ಕೇಳುವಂತಾಗಿದೆ.

ಕೇವಲ ಸಂತೋಷಕ್ಕಾಗಿ ಓದುವ ಯುವಕರನ್ನು ಬೆರಳೆಣಿಕೆಯಲ್ಲಿ ಎಣಿಸುವಂತಾಗಿದೆ.

ಆದರೂ ಪುನಃ ಹಿಂದಿನಂತೆ ಕೈಯಲ್ಲಿ ಪುಸ್ತಕ ಹಿಡಿದು ಓದುವ ಪದ್ಧತಿ ಪುನಃ ಪುನವರ್ತಿತವಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಯುವ ಬರಹಗಾರರ ಪುಸ್ತಕಗಳ ಮಾರಾಟ ಜೋರಾಗುತ್ತಿರುವುದು ಖುಶಿಯ ಸಂಗತಿ.

ಒಲ್ಡ್ ಇಸ್ ಗೋಲ್ಡ್. ಏನೇ ಇದ್ದರೂ ಕೈಯಲ್ಲಿ ಪುಸ್ತಕ ಹಿಡಿದು ಹಾಳೆಯನ್ನು ತಿರುವುತ್ತಾ ಮೈಮರೆತು ಪುಸ್ತಕದ ಹುಳುವಾಗುವಲ್ಲಿನ ಸಂತೋಷ ಮತ್ತೊಂದಿಲ್ಲ!

ಓದುತ್ತಾ ಓದುತ್ತಾ ಜಗತ್ತನ್ನೇ ಒಂದು ಸುತ್ತು ಹಾಕಿಬರೋಣ ಎನ್ನುತ್ತಿದೆ ಹೃದಯ. ಏಯ್ ಅದು ಬೇಡ ಬಾ ಜಗತ್ತನ್ನೆ ಹಾರುತ್ತಾ , ನಡೆಯುತ್ತಾ ಒಂದು ಸುತ್ತಿ ಹಾಕಿ ಬರೋಣ ಎನ್ನುತ್ತಿದೆ ಮನ.

ಎರಡೋ ಸಹ ನಮ್ಮ ನಮ್ಮ ಶಕ್ತಿ, ಸಮಯಕ್ಕೆ ಸಂಬಂಧಿಸಿದ್ದು! ಆಸೆ ಆಕಾಶದಷ್ಟಿದ್ದರೂ ಕೇಳುವವರು ಯಾರು?

ಸಮಯ ಸಿಕ್ಕಾಗೆಲ್ಲಾ ಅಷ್ಟು ಇಷ್ಟು ಈಡೇರಿಸಿಕೊಳ್ಳಬೇಕು.

ಓದು ಪುಸ್ತಕ. ಸುತ್ತು ದೇಶ!

ಶನಿವಾರ, ಏಪ್ರಿಲ್ 15, 2017

ಕಾಯಕವೇ ಕೈಲಾಸವಲ್ಲವೇ?

ಇಂದು ಪ್ರತಿಯೊಂದಕ್ಕೂ ವಿವಾದದ ಮುಖವಾಡವನ್ನು ಹಾಕುತ್ತಿದ್ದಾರೆ. ಕೇವಲ ವಿವಾದ ಮಾಡುವುದಕ್ಕೆ ವಿವಾದ ಮಾಡಬಾರದು.

 

ಯಾವುದೇ ವಿಷಯಗಳು ಪುನಃ ಪುನಃ ಸಮಾಜದಲ್ಲಿ ಪ್ರಸ್ತಾಪವಾಗಿ ಆದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗುತ್ತಿವೆ. ಹಿಂದಿನ ದಿನಮಾನಗಳಿಗಿಂತ ಇಂದು ಯಾವುದೇ ಒಂದು ವಿಚಾರಗಳು/ವಿವಾದ ಅತಿ ವೇಗವಾಗಿ ಪ್ರತಿಯೊಬ್ಬರನ್ನು ತಲುಪುತ್ತವೆ.

 

ಮುಚ್ಚು ಮರೆಯಿಂದ ಬಚ್ಚಿಡಲು ಎಂದಿಗೂ ಸಾಧ್ಯವಿಲ್ಲ. ಈಗ ಪ್ರತಿಯೊಬ್ಬನೂ ಗಾಜಿನ ಮನೆಯಲ್ಲಿ ಜೀವಿಸುವ ಯುಗದಲ್ಲಿದ್ದೇವೆ.

 

ಇಂಟರ್ ನೆಟ್ ಕ್ರಾಂತಿಯಂತೂ ಇಡೀ ಜಗತ್ತನ್ನು ತನ್ನ ಅಂಗೈಯಲ್ಲಿಡಿದಿಡುವಂತೆ ಮಾಡಿದೆ. ತನ್ನೂರು ತನ್ನ ರಾಜ್ಯ ದೇಶವಲ್ಲದೇ ಬೇರೆ ದೇಶದ ಯಾವುದೋ ಒಂದು ಭಾಗದ ಘಟನೆಯನ್ನು ಕ್ಷಣ ಮಾತ್ರದಲ್ಲಿ ಕಾಣುವಂತಾಗಿದ್ದಾನೆ.

 

ಇಂದಿನ ಮನುಷ್ಯ ತನ್ನ ಚಿಂತನೆಯಿಂದ ತಾನು ಓದುವ ಶಿಕ್ಷಣಕ್ಕಿಂತ ಹೆಚ್ಚಿನ ಮಟ್ಟಿಗೆ ಯೋಚಿಸುವಂತಾಗಿದ್ದಾನೆ. ಏನನ್ನು ಸುಖ ಸುಮ್ಮನೆ ನಂಬದಂತಾಗಿದ್ದಾನೆ.

 

ಇದು ಈಗಾಗಲೇ ರಾಜಕೀಯ, ಸಾಮಾಜಿಕ, ಅರ್ಥಿಕ ರಂಗದಲ್ಲಿರುವವರಿಗೆ ಮನವರಿಕೆಯಾಗಿದೆ.

 

ತನಗೆ ಏನು ಬೇಕು ಎಂಬುದನ್ನು ತನಗೆ ತಾನೇ ಆರಿಸಿಕೊಳ್ಳುವ ಮಟ್ಟಿಗೆ ಸರ್ಕಾರ ಕೊಟ್ಟಿರುವ ಮೊಲಭೂತ ಹಕ್ಕುಗಳನ್ನು ಸರ್ವ ಸ್ವತಂತ್ರವಾಗಿ ಹೆಚ್ಚು ಹೆಚ್ಚು ಬಳಕೆ ಮಾಡಿಕೊಳ್ಳುವಲ್ಲಿ ತಾನು ಸಾಕಷ್ಟು ಮುಂದಿದ್ದಾನೆ.

 

ಇಂದಿನ ರಾಜಕೀಯ ನೇತಾರರನ್ನು ಕಂಡರೇ ನನಗೆ ಅಯ್ಯೋ ಅನಿಸುತ್ತದೆ!

 

ಮೊದಲಂತೆ ಕೇವಲ ಬಾಯ್ ಭಾಷಣ, ಒಣ ಮಾತುಗಳಿಗೆ ಕುಗ್ರಾಮದ ಜನರುಗಳು ಸಹ ಮರುಳಾಗದ ಸ್ಥಿತಿಗೆ ಬಂದಿದ್ದಾರೆ. ಅದಕ್ಕೆ ಉದಾಹರಣೆಯೆಂಬಂತೆ ಇತ್ತೀಚಿನ ಚುನಾವಣೆಗಳ ಪಲಿತಾಂಶಗಳೇ ಸಾಕ್ಷಿ. ಒಮ್ಮೆ ಮತದಾರ ಕೊಟ್ಟ ಅವಕಾಶವನ್ನು ತಾನು ಏನಾದರೂ ಸರಿಯಾಗಿ ಬಳಸಿಕೊಂಡು ಆ ಕ್ಷೇತ್ರಕ್ಕೆ ಕೆಲಸ ಮಾಡಲಿಲ್ಲವೆಂದರೇ ಮುಂದಿನ ಚುನಾವಣೆಗಳಲ್ಲಿ ತಾನು ಏನಂದರೂ ಗೆಲ್ಲಲಾಗುವುದಿಲ್ಲ.

 

ಇದು ಗಟ್ಟಿ ಆಶದಾಯಕ ಬೆಳವಣಿಗೆ. ಇದರಿಂದಲೇ ಪ್ರಜಾಪ್ರಭುತ್ವ ಬಲಿಷ್ಟವಾಗುವುದು. ಕೇವಲ ಜಾತಿ, ಹಣ, ಸುಳ್ಳು ಭರವಸೆಗಳಿಂದ ಗೆಲ್ಲುವ ಕಾಲ ದೂರವಾಗುವ ದಿನಗಳು ಬರುತ್ತಿವೆ.

 

ಜಗತ್ತು ಅತಿ ಚಿಕ್ಕದಾಗುತ್ತಿರುವ ಪಲಿತಾಂಶವೇ ಇದು.

 

ಹೌದು, ಪ್ರತಿಯೊಬ್ಬರೂ ತಮ್ಮನ್ನು ತಾವು ಹೊರ ಜಗತ್ತಿಗೆ ತೆರೆದುಕೊಳ್ಳುತ್ತಿದ್ದಾರೆ. ಯುವಕರಂತೂ ಅತಿ ವೇಗವಾಗಿ ಹಲವು ವರ್ಷಗಳಿಗಿಂತ ಮುಂದಿದ್ದಾರೆ. ಯುವಕರು ಜಾತಿ ಮತಗಳನ್ನು ಮೀರಿ ಬೆಳೆಯುತ್ತಿದ್ದಾರೆ. ಹಳ್ಳಿ, ರಾಜ್ಯ, ದೇಶಗಳ ಉದ್ಧಾರದ ದೃಷ್ಟಿಯನ್ನು ತಾವುಗಳೇ ಕಂಡುಕೊಂಡಿದ್ದಾರೆ. ಕೇವಲ ಚುನಾವಣ ಮಾತುಗಳಿಂದ ನಮ್ಮಗಳ ಏಳ್ಗೆಯಾಗುವುದಿಲ್ಲ, ಸರ್ಕಾರದ ನಾಯಕ ಸರಿಯಾಗಿದ್ದಾರೆ ಹೇಗೆಲ್ಲಾ ನಮ್ಮ ಜನರ ಜೀವನ ಸುಧಾರಿಸಬಹುದು ಎಂಬುದನ್ನು ಅಕ್ಕ ಪಕ್ಕದ ಊರು, ರಾಜ್ಯ, ದೇಶ ಗಳನ್ನು ನೋಡಿ ತಿಳಿದುಕೊಳ್ಳುತ್ತಿದ್ದಾನೆ.

 

ಸರ್ಕಾರವೆಂಬುದು ನಮ್ಮನ್ನು ನಾವುಗಳು ಕಾಪಾಡಿಕೊಳ್ಳಲು ನಾವೇ ರಚಿಸಿಕೊಂಡಿರುವ ವ್ಯವಸ್ಥೆ.

 

ಜನಗಳೇ ಇಚ್ಛೆಪಟ್ಟು ಆರಿಸಿಕೊಳ್ಳು ತಮ್ಮ ಪ್ರತಿನಿಧಿಗಳ ಸೇವೆ ಹೇಗೆಲ್ಲಾ ಇರಬೇಕು ಎಂಬ ಕನಸು ಪ್ರತಿ ಮತದಾರನದಾಗಿದೆ. ಆದ್ದರಿಂದ ಹಿಂದೆ ಇದ್ದಂತಹ ಚುನಾವಣೆಯ ಜೋರೂ ಇಂದಿಲ್ಲ. ಮತದಾರ ತನ್ನ ಕ್ಷೇತ್ರದ ಪ್ರತಿನಿಧಿಯ ಕೆಲಸಗಳನ್ನು ಅವನ ಬಾಯಿಯಿಂದ ಚುನಾವಣ ಪ್ರಚಾರದ ಭಾಷಣ ಮಾತ್ರದಿಂದ ಕೇಳಿ ತಿಳಿಯಬೇಕಿಲ್ಲ. ಪ್ರತಿಯೊಬ್ಬರಿಗೂ ಆ ವ್ಯಕ್ತಿ ನಾಯಕರ ಬಗ್ಗೆ ಹಲವು ಮೊಲಗಳಿಂದ ಮೊದಲೇ ನಿಜವಾದ ಬಂಡವಾಳ ತಿಳಿದಿರುತ್ತದೆ. ಪಕ್ಷ ಗಳಿಗಿಂತ ವ್ಯಕ್ತಿ ಮುಖ್ಯ ಎಂಬುವ ಕಾಲ ಇದಾಗಿದೆ. ಈ ಪಕ್ಷದಿಂದ ಕತ್ತೆ ನಿಲ್ಲಿಸಿದರೂ (ಪಕ್ಷದ ಮುಖದಿಂದ) ಗೆಲ್ಲುವನು ಎಂಬುವ ಮಾತು ಒಭೀರಾಯನದಾಗಿದೆ.

 

ಇದೇ ಪ್ರಜಾಪ್ರಭುತ್ವದ ಮಹಾನ್ ಸೌಂದರ್ಯ. ದೇಶದ ಪ್ರಗತಿ ಮತ್ತು ಭವಿಷ್ಯತ್ ಉಜ್ವಲವಾಗಿರುತ್ತದೆ ಎನ್ನಲು ಇದಕ್ಕಿಂತ ಇನ್ನು ಏನು ಬೇಕು?

 

ಈಗಂತೂ ಪೊಳ್ಳು ಮಾತಿನ ಮಲ್ಲರು ದಿನಬೆಳಗಾದರೆ ಬೆತ್ತಲಾಗುತ್ತಿದ್ದಾರೆ. ಹಿಂದಿನ ಕಾಲದಂತೆ ಗೆದ್ದರೇ ಮುಗಿಯಿತು ಐದು ವರುಷ ಯಾರು ನನ್ನನ್ನು ಕೇಳುವಂತಿಲ್ಲ ಎನ್ನುವಂತಿಲ್ಲ.

 

ಸಾರ್ವಾಜನಿಕ ಜೀವನದಲ್ಲಿರುವ ಅಸಲಿಯತ್ತು ನಿತ್ಯ ದರ್ಶನವಾಗುತ್ತಿರುತ್ತದೆ. ಯಾರು ಬೂಟಾಟಿಕೆ ಮಾಡುತ್ತಿದ್ದಾರೆ. ಯಾರು ನಿಜವಾದ ಸಮಾಜ ಸೇವೆಯ ಕಳಕಳಿ ಒಂದಿದ್ದಾರೆ ಎಂಬ ವಿಚಾರ ಪ್ರತಿಯೊಬ್ಬ ಪ್ರಜೆಗೂ ತಿಳಿಯುತ್ತಿದೆ.

 

ಹೌದು ಸರ್ಕಾರದ ಯಜಮಾನ ಯೋಗ್ಯವಾಗಿದ್ದರೆ ಅಲ್ಲಿರುವ ಪ್ರತಿಯೊಂದು ಕಾರ್ಯವು ಸುಗಮವಾಗಿ ನಡೆಯುತ್ತದೆ. ಅಭಿವೃದ್ಧಿಯ ಮಾತು ಜನರ ಸಮಸ್ಯೆಯನ್ನು ಪರಿಹರಿಸುವ ನಮ್ಮ ಸಾಮಾನ್ಯ ನಾಯಕನ ಜರೂರತು ಇಂದು ಪಂಚಾಯಿತಿ ಪ್ರತಿನಿಧಿಯಿಂದ ಪ್ರಧಾನ ಮಂತ್ರಿಯವರೆಗೂ ಬೇಕಾಗಿದೆ.

 

ಇಷ್ಟು ದಿನ ನಮ್ಮನ್ನು ಆಳುವ ಪ್ರಭುಗಳ ಅಸಲಿತನ ತಿಳಿದದ್ದಾಗಿದೆ. ಕೇವಲ ಲೂಟಿಕೋರತನವನ್ನೆ ಬಂಡವಾಳ ಮಾಡಿಕೊಂಡು, ರಾಜಕೀಯ ಕ್ಷೇತ್ರವೆಂದರೇ ಹೆಚ್ಚು ಹಣ ಮಾಡುವ ರಂಗವೆಂಬಂತೆ ಮಾಡಿದ್ದಾರೆ.

 

ನಮ್ಮನ್ನು ನಾವೇ ಕೇಳಿಕೊಳ್ಳಬೇಕು. ನಮಗೆ ನಮ್ಮ ನಗರಕ್ಕೆ ಏನು ಬೇಕು? ಹಿಂದೆ ಅಧಿಕಾರದಲ್ಲಿದ್ದ ನಾಯಕನು ಇಲ್ಲಿಯವರೆಗೆ ಯಾವ ರೀತಿಯಲ್ಲಿ ನಮ್ಮ ಊರನ್ನು ಅಭಿವೃದ್ಧಿ ಮಾಡಿದ್ದಾನೆ?

 

ಮತ್ತೆ ಮುಂದಿನ ಚುನಾವಣೆಯಲ್ಲಿ ಅದೇ ಭರವಸೆಯ ಆಸೆಯ ಸುಳ್ಳು ಮಾತನ್ನಾಡುತ್ತಾ ಬಂದರೇ ಸುಮ್ಮನೇ ಎಂದಿಗೂ ಕೂರಬಾರದು.

 

ಬೇರೆಯವರು ತಮ್ಮ ಕ್ಷೇತ್ರವನ್ನು ಆಗೆಲ್ಲಾ ಸುಧಾರಿಸಲು ಸಾಧ್ಯವಾಗಿದ್ದರೇ ಈ ಮಹಾಶಯನ ಕೈಯಲ್ಲಿ ಯಾಕಾಗಿಲ್ಲ? ಈ ಪ್ರಶ್ನೇ ಪ್ರತಿಯೊಬ್ಬರಲ್ಲೂ ಉದ್ಬವಿಸಿದರೇ ಬದಲಾವಣೆಯ ಹೊಸ ಗಾಳಿ ಬೀಸಿದಂತೆ.

 

ಈಗಲೂ ಇನ್ನೂ ನಮ್ಮ ಹಳೇ ಬುದ್ಧಿಯ ನಾಯಕ ಶಿಖಾಮಣಿಗಳು ಹಣವೊಂದಿದ್ದರೇ ಯಾವುದೇ ಚುನಾವಣೆ, ಅಧಿಕಾರವನ್ನು ತಮ್ಮದನ್ನಾಗಿಸಿಕೊಳ್ಳಬಹುದು ಎಂಬ ಸುಳ್ಳು ಭ್ರಮೆಯಲ್ಲಿ ಕಾಯುವಂತಿದ್ದರೇ.. ಅವರಂತಹ ಶತಃ ಮೂರ್ಖರೂ ಮತ್ತೊಬ್ಬರಿಲ್ಲ!

 

ಸೇವೆಗಾಗಿ ಬರುವ ನಾಯಕರಿಗೆ ಮಾತ್ರ ಇಂದಿನ ಪ್ರಜಪ್ರಭುತ್ವದಲ್ಲಿ ಜಾಗ. ಕೇವಲ ಪ್ರಸಿದ್ಧಿ ಪಡೆದಿರುವ ಪಕ್ಷ, ಪ್ರಸಿದ್ಧಿ ಪಡೆದ ಹಳೆ ಮನೆತನದ ಸಾಥ್ ಇದೆ. ಈಗಲೂ ನಾನೇ ಗೆಲ್ಲುವುದು ಎಂಬ ಗೀಳಿದ್ದರೇ, ಹೇಗೆ ಚುನಾವಣೆಯಲ್ಲಿ ಮತದಾರ ಮಕಾಡೆ ಮಲಗಿಸುವನು ಎಂಬುದನ್ನು ಅಲ್ಲಿ ಇಲ್ಲಿ ಈಗಾಗಲೇ ತೋರಿಸಿದ್ದಾನೆ.

 

ಇದು ಕೇವಲ ರಾಜಕೀಯ ರಂಗದ ಮಾತಲ್ಲ. ಪ್ರತಿಯೊಂದು ಕ್ಷೇತ್ರದ ಸಾರ್ವಜನಿಕ ರಂಗದಲ್ಲಿರುವವರ ವ್ಯಕ್ತಿಗತಃ ಎಚ್ಚರಿಕೆ.

 

ಜನ ಸಾಮಾನ್ಯರಿಗೆ ಏನೂ ತಿಳಿಯುವುದಿಲ್ಲ ಎಂದು ಕಣ್ಣು ಮುಚ್ಚಿ ಹಾಲು ಕುಡಿದರೇ ಬದುಕುವುದು ಈಗಂತೂ ಸಾಧ್ಯವಿಲ್ಲ.

 

ಇದರಿಂದಲೇ ಹಿಂದಿಗಿಂತ ಇಂದು ಸಾರ್ವಜನಿಕವಾಗಿ ಪ್ರಸಿದ್ಧರಾಗುವುದು ಮತ್ತು ಆ ಸ್ಥಾನವನ್ನು ಕೊನೆಯವರೆಗೂ ಕಾಪಾಡಿಕೊಳ್ಳುವುದು ಸುಲಭವಲ್ಲ. ಒಮ್ಮೆ ಸಿಕ್ಕಿದ ಉನ್ನತ ಸ್ಥಾನ ಮಾನವನ್ನು ಜೀವ ಇರುವವರೆಗೂ ಉಳಿಸಿಕೊಳ್ಳಲು ನಿತ್ಯವು ಅಷ್ಟೆ ಪರಿಶ್ರಮಪಡಬೇಕಾಗುತ್ತದೆ.

 

ಇದಕ್ಕೆ ಈಗಾಗಲೇ ನಮ್ಮ ಸುತ್ತ ಮುತ್ತ ಹತ್ತು ಹಲವಾರು ಉದಾಹರಣೆಗಳಿವೆ.

 

ಆದ್ದರಿಂದ ಯಾರೊಬ್ಬರೂ ಮೈಮರೆತು ಏನನ್ನು ಮಾಡುವಂತಿಲ್ಲ. ಪ್ರತಿಯೊಂದು ಚಲನೆಗೂ ಬೆಲೆ ಕಟ್ಟಲೇಬೇಕು.

 

ಸುಖ ಸುಮ್ಮನೇ ಹೆಸರು ಮಾಡಲು ಇಂದು ಸಾಧ್ಯವಿಲ್ಲ. ಯಾಕೆಂದರೇ ಪ್ರತಿಯೊಂದನ್ನು ಸಾಮಾನ್ಯ ಪ್ರಜೆ ಹಾಗೆಯೇ ಒಪ್ಪಿಕೊಳ್ಳುವುದಿಲ್ಲ. ಪ್ರಶ್ನೇ ಮಾಡುವ ಮಹಾತ್ತರ ಜವಾಬ್ದಾರಿನ್ನು ತನ್ನದಾಗಿಸಿಕೊಂಡಿದ್ದಾನೆ.

 

ಇದು ಹೀಗೆ ಮುಂದುವರಿಯುವುದು.. ಯಾಕೆಂದರೇ ನಾವಿರುವುದು ಮಾಹಿತಿ ಯುಗದಲ್ಲಿ... ಇದು ಹೀಗೆ ನಡೆದರೇ ಎಲ್ಲಿ ಹೋಗಿ ನಿಲ್ಲುವುದೋ.. ಬದಲಾವಣೆಯಂತೂ ಜಾರಿಯಲ್ಲಿದೆ. ಯಾರು ಯಾರು ಹೇಗೆಲ್ಲಾ ತಮ್ಮ ಸ್ಥಾನ ಕಾಪಾಡಿಕೊಳ್ಳುವರೋ ಬಲ್ಲವರಿಲ್ಲ.

 

ತಮ್ಮ ತಮ್ಮ ಜಾಗದಲ್ಲಿರುವವರು ತಮ್ಮ ತಮ್ಮ ಕಾಯಕವನ್ನು ತಪ್ಪದೇ ಸರಿಯಾಗಿ ಮಾಡಿದರೇ ಪರಶಿವನೇ ಮೆಚ್ಚುವನು. ಇನ್ನೂ ಸಾಮಾನ್ಯ ಜನಗಳ ಮಾತೇನು?

 

ಕಾಯಕವೇ ಕೈಲಾಸವಲ್ಲವೇ?

 

ಭಾನುವಾರ, ಜನವರಿ 1, 2017

ಹೊಸದಾಗಿ ಲವ್ ಪ್ರಪೋಸ್ ಮಾಡಬೇಕು

ಉಫ್ ಎಷ್ಟು ಬೇಗ ಒಂದು ವರುಷ ಕಳೆದು ಹೋಯಿತು.

ನೆನ್ನೆ ಮೊನ್ನೆಯೆಂಬಂತೆ ನಿನ್ನನ್ನು ದೂರದ ಬೆಂಗಳೂರಿಗೆ ಬಿಟ್ಟು ಬಂದ ನೆನಪು.

ನಿನ್ನ ಅವತ್ತಿನ ಮುಗುಳ್ನಗೆ ಇನ್ನು ಹಾಗೇ ನನ್ನ ಕಣ್ಣ ಪರದೆಯ ಮೇಲೆ ಶಾಶ್ವತವಾಗಿ ನಿಂತಿದೆ.

ಅಂದು ಜನವರಿ ೩೦ ಸಂಜೆ ಗೋದೂಳಿ ಬೆಳಕು. ದೂರದಲ್ಲಿ ಕೊನೆಯ ಬಸ್ ಸೌಂಡ್ ಮಾಡಿಕೊಂಡು ಬರುತ್ತಿದೆ. ನಿನ್ನ ಕೊನೆ ಭಾರಿ ನೋಡು ಭಾಗ್ಯ ಮುಂದಿನ ನಿಮಿಷದಿಂದ ಇಲ್ಲವಾಗುತ್ತಾಲ್ಲಪ್ಪಾ. ಎಂದು ಬೇಸರವಾಗಿತ್ತು.

ಅಂದು ಭಾರವಾದ ಮನಸ್ಸಿನಿಂದ ಬಿಳ್ಕೊಟ್ಟು ಮನೆ ಹಾದಿ ಹಿಡಿದಿದ್ದೆ. ರಾತ್ರಿಯೆಲ್ಲ ನಿದ್ದೆಯಿಲ್ಲ. ನಿನ್ನಿಂದ ಮುಂಜಾನೆ ಮೇಸೆಜ್ ಬಂದಾಗಲೇ ಗಡದ್ದಾಗಿ ನಿದ್ದೆ ಮಾಡಿದ್ದು.

ಒಂದು ವರುಷದಿಂದ ಅದು ಹೇಗೆ ನೀನು ಓದು ಓದುತ್ತಿರುವಿಯೋ ದೇವರೇ ಬಲ್ಲ. ವರುಷದಲ್ಲಿ ಒಮ್ಮೆಯಾದರೂ ಹಳ್ಳಿಗೆ ಬಾ ಎಂದರೇ.. ನಿನ್ನದು ಅದೇ ವ್ರತ ಇಲ್ಲ ಈ ಕೋರ್ಸ್ ಮುಗಿಯುವುದು ಸರಿಯಾಗಿ ಮುಂದಿನ ಜನವರಿ ಒಂದು ವರುಷಕ್ಕೆ. ಅದು ಮುಗಿದ ತಕ್ಷಣ ಶಾಶ್ವತವಾಗಿ ಹಳ್ಳಿಗೆ ಬರುವೆನಲ್ಲ. ಅದು ಯಾಕೆ ಮಧ್ಯದಲ್ಲಿ ಹೋಗಿ ಬರುವ ಮಾತು ಎನ್ನುತ್ತಿಯ.

ಇರಬಹುದು ದೊಡ್ಡ ಓದಿನ ಹುಡುಗಿಗೆ ಸಮಯವಿಲ್ಲಿ ಸಿಗಬೇಕು?

ಆದರೂ ನೀನು ಬೇರೆಯವರ ರೀತಿಯಲ್ಲ. ಅದೇ ನಿನ್ನನ್ನು ಇನ್ನೂ ಹೆಚ್ಚು ಹೆಚ್ಚು ಹಚ್ಚಿಕೊಳ್ಳುವಂತೆ ಮಾಡುತ್ತಿರುವುದು.

ಇಂದು ಜಗತ್ತೆ ಒಂದು ಹಳ್ಳಿಯಾಗಿದೆ. ಬೆಂಗಳೂರು ಏನೂ ಅಲ್ಲ. ದೂರದ ನ್ಯೂಯಾರ್ಕ್ ಪಕ್ಕದ ಹಳ್ಳಿಯಂತಾಗಿದೆ. ನಿತ್ಯ ಪೊನ್, ವಿಡಿಯೋ ಕಾಲ್, ಎಫ್.ಬಿ, ವಾಟ್ಸಾಪ್ ಎಂದು ಪ್ರತಿಯೊಬ್ಬರೂ ದೂರವಿರುವವರನ್ನು ಹತ್ತಿರ ಮಾಡಿಕೊಂಡಿದ್ದಾರೆ. ಇಂಥ ಸಮಯದಲ್ಲಿ ನೀ ಈ ಎಲ್ಲವುದರಿಂದಲೂ ಬಹು ದೂರ ಇದ್ದಿಯಲ್ಲ?

ನೀನು ಅದು ಏಕೆ ಈ ಸಂಹವನ ಸಂಪರ್ಕ ಸಾಧನಗಳನ್ನು ಬಳಕೆ ಮಾಡುತ್ತಿಲ್ಲ ಎಂದು ಹಲವು ಭಾರಿ ಬೇಜಾರು ಮಾಡಿಕೊಂಡಿದ್ದೇನೆ. ಹಾಗೆಯೇ ನೀನು ಅತಿ ಹೆಚ್ಚು ಅಂತರವನ್ನು ಇವುಗಳಿಂದ ಉಳಿಸಿಕೊಂಡಿರುವುದನ್ನು ಕಂಡು ಖುಷಿಯನ್ನು ಪಟ್ಟಿದ್ದೇನೆ. ಹೌದು ನಾವುಗಳು ನಮ್ಮತನವನ್ನು ಇವುಗಳಿಗೆ ಕೊಡಬಾರದು. ಆದರೇ ಉಪಯೋಕ್ತವಾಗಿ ಬಳಸಿಕೊಂಡರೇ ಏನು ತಪ್ಪಿಲ್ಲ.

ಅದಕ್ಕೆ ನನಗೆ ಈ ಒಂದು ವರುಷ ಎನ್ನುವುದು ಎಷ್ಟು ಕಷ್ಟದ ಕಾಲವೆನಿಸಿದೆ. ನಿನ್ನ ಕರಾರುವಾಕ್ಕದ ವಾರದ ಒಂದು ಪೋನು ಕರೆ ಸ್ವಲ್ಪವಾದರೂ ಈ ನನ್ನ ಚೈತನ್ಯವನ್ನು ಉಳಿಸಿದೆ.

ಹುಡುಗಿಯರಿಗೆ ಹುಡುಗರನ್ನು ಗೋಳು ಹೊಯ್ದುಕೊಳ್ಳುವುದರಲ್ಲಿರುವ ಸುಖ ಇನ್ನು ಯಾವುದರಲ್ಲಿಯು ಇಲ್ಲ ಎನಿಸುತ್ತದೆ. ಅದಕ್ಕೆ ಹೀಗೆ ನೀ ನನ್ನ ಸತಾಯಿಸುತ್ತಿದ್ದೀಯಾ.

ನನ್ನ ಅಕ್ಕ ಪಕ್ಕ ಇರುವ ಮಂದಿಯೆಲ್ಲ ಸೋಷಿಯಲ್ ಮೀಡಿಯಾದಲ್ಲಿಯೇ ತಮ್ಮನ್ನು ತಾವು ಪೂರ್ಣವಾಗಿ ತೊಡಗಿಸಿಕೊಂಡು ದೂರವಿರುವರೆಲ್ಲನ್ನು ಹತ್ತಿರವಿರುವೆಂಬಂತೆ ಕಂಡು ಸಂಭ್ರಮಿಸುತ್ತಿದ್ದಾರೆ. ಅದನ್ನು ಕಂಡು ನಿನ್ನ ಮೇಲೆ ತುಂಬಾನೆ ಸಿಟ್ಟು ಬರುತ್ತದೆ. ಅಲ್ಲ ಲೇಟೆಸ್ಟ್ ಪೋಟು ಷೇರ್ ಮಾಡಿಕೊಳ್ಳುವ ಮಟ್ಟಿಗಾದರೂ ನೀ ಒಂದು ಪೇಸ್ ಬುಕ್  ಅಥವಾ  ವಾಟ್ಸಾಪ್ ಅಕೌಂಟ್ ಒಪನ್ ಮಾಡಿದ್ದರೇ ಏನು ಪ್ರಾಬ್ಲಮ್?

ಆದರೇ ನೀನು ಕೇಳಬೇಕಲ್ಲ. ನೋ ಅದೆಲ್ಲಾ ನನಗೆ ಸರಿ ಬರುವುದಿಲ್ಲ. ಅದು ಯಾಕೋ ನನಗೆ ಅವುಗಳನ್ನು ಉಪಯೋಗಿಸುತ್ತಾ ಉಪಯೋಗಿಸುತ್ತಾ ಕೂರುವುದು ಆಗುವುದಿಲ್ಲ.

ನನಗೆ ಅದೇ ಹಳೆ ಕಾಲದ ಪೋನು ಮಾತೇ ಇಷ್ಟ. ಶಾರ್ಟ್ ಅಂಡ್ ಸ್ವೀಟ್ ಆಗಿ. ನೋಡುವಂತಾದರೇ ಕುದ್ದು ಬೇಟಿ ಮಾಡಬೇಕು. ಅದೇ ಮನುಷ್ಯತ್ವ ಅನ್ನುತ್ತಿಯ. ಆದರೇ ಕುದ್ದು ಬೇಟಿ ಮಾಡಲು ಒಮ್ಮೆಯಾದರೂ ಮನಸ್ಸು ಮಾಡಿದ್ದೀಯಾ?

ನಿನಗೆ ನನ್ನ ಕಂಡರೇ ಪ್ರೀತಿಯೇ ಇಲ್ಲ ಅನಿಸುತ್ತದೆ!

ನಾನು ಬರುತ್ತೀನಿ ಬೆಂಗಳೂರಿಗೆ ಅಂದರೇ.. ಬೇಡವೇ ಬೇಡ ಅನ್ನುತ್ತಿಯಾ? ಅಲ್ಲ ನಿನ್ನ ಮನಸ್ಸಿನಲ್ಲಿರುವುದಾದರೂ ಏನು ಹೇಳ್ತಿಯಾ?

ಜನವರಿ ೨೦೧೭ ನನಗಂತೂ ತುಂಬ ಖುಷಿಯ ತಿಂಗಳು ಯಾಕೆಂದರೇ ನಿನ್ನ ಆ ಕೋರ್ಸ್ ಗೆ ದಿ ಎಂಡ್!

ಕೊನೆಗೂ ನೀ ನಿನ್ನ ತವರಿಗೆ ವಾಪಸ್ಸ್ ಬರುತ್ತಿಯಲ್ಲ. ಅಮೇಲೆ ಏನಿದ್ದರೂ ನಾನು ಹೇಳಿದ ರೀತಿ ನೀ ಕೇಳಬೇಕು.

ಪೆಬ್ರವರಿ ೧೫ ಕ್ಕೆ ನಾನು ನೀನಗೆ ಹೊಸದಾಗಿ ನನ್ನ ಲವ್ ಪ್ರಪೋಸ್ ಮಾಡಬೇಕು ಅನ್ನಿಸುತ್ತಿದೆ. ಹೌದು ಈ ೨೦೧೬ ನನಗೆ ತುಂಬ ಕಷ್ಟದ ವರುಷ. ಕಳೆದ ವರುಷದ ನೆನಪು ಮಾಸ ಬೇಕೆಂದರೇ ನನ್ನ ಪ್ರೀತಿಯನ್ನು ನವೀಕರಣ ಮಾಡಿಸಲೇ ಬೇಕು.

ಇನ್ನು ಏನು ಏನೋ ಕನಸುಗಳನ್ನು ಕಂಡಿದ್ದೀನಿ. ನಿನಗೆ ಗೊತ್ತಾ ನಮ್ಮ ಆ ಹೊಸ ತೋಟದಲ್ಲಿರುವ ಆ ಚಿಗುರು ಮಾವಿನ ಮರಗಳು ಈಗಾಗಲೇ ಫಲ ಕೊಡಲು ಪ್ರಾರಂಭಿಸಿವೆ. ಬರಗಾಲದಲ್ಲೂ ತೋಟ ಜಗಮಗ ಹಸಿರು ಹೊತ್ತು ನಿಂತಿವೆ. ಅಲ್ಲಿರುವ ಪ್ರತಿಯೊಂದು ಗಿಡ ಮರಗಳಿಗೂ ನಿನ್ನ ಕಾಣಲು ಕಾತುರವೆಂಬಂತೆ ಹೊ ಬಿಟ್ಟು ಸಂಭ್ರಮಿಸುತ್ತಿವೆ.  ನೀ ಬರಬೇಕು ಅದನ್ನು ನಿನ್ನ ಕಣ್ಣಾರೆ ನೋಡಬೇಕು.

ಆ ಕೋರ್ಸ್ ನಲ್ಲಿ ಕಲಿತ ವಿಷಯಗಳನ್ನು ಇಲ್ಲಿರುವ ತೋಟದಲ್ಲಿ ಪರಮರ್ಶಿಸಬೇಕು. ಓದಿಗಿಂತ ಕ್ರೀಯೆ ಮುಖ್ಯ!

ಗೊತ್ತಾ ನೀನು ನಾನು ಅಮೆರಿಕಾ ಅಮೆರಿಕಾ ಸಿನಿಮಾದಲ್ಲಿನ ಆ ಒಂದು ಸೀನ್ ಗಾಗಿ ಎಷ್ಟು ಭಾರಿ ಸಿನಿಮಾ ನೋಡಿದ್ದು? ಹೌದು ನೂರು ಜನ್ಮಕ್ಕೂ ನೀ ನನ್ನವಳು ಎಂಬ ಭಾವ ನೊರೆಯಂತೆ ಅಚ್ಚೊತ್ತಿದ್ದು. ಎಂದು ಮರೆಯಲಾಗದ ದಿನಗಳು.

ಸುತ್ತಲಿನ ಪ್ರತಿಯೊಬ್ಬರಿಗೂ ಹೇಳಿ ಬಿಟ್ಟಿದ್ದೀನಿ. ನೀನೆ ಇಲ್ಲಿನ ಎಲ್ಲ ರೈತರ ಡಾಕ್ಟರ್. ಇಲ್ಲಿನ ಬೆಳೆಗಾರರ ವಿವಿಧ ಸಮಸ್ಯೆಗಳಿಗೆ ನಿನ್ನಿಂದ ಉಪಯೋಗವಾಗಲಿ. ನೀ ಕಲಿತ ವಿಧ್ಯೆ ಇಲ್ಲಿಯವರಿಗೆ ಆ ರೀತಿಯಲ್ಲಿ ಬಳಕೆಯಾಗಲಿ.

ಇಡೀ ದೇಶವೇ ಮೇಕಿಂಗ್ ಇಂಡಿಯಾದ ಕಡೆ ದಾಪುಗಾಲು ಹಾಕುವ ಈ ಸಮಯದಲ್ಲಿ ನೀನು ಮರಳಿ ಮಣ್ಣಿನ ಕಡೆಗೆ ಬರುತ್ತಿರುವುದು ಹೊಸ ವರುಷದ ಈ ಸಮಯದಲ್ಲಿ ಈ ನನ್ನ ಹಳ್ಳಿಗೆ ಹೊಸ ಭರವಸೆಯನ್ನು ಮೊಡಿಸುತ್ತಿದೆ.

ನಾನು ಕೇಳುವ ಚಿಕ್ಕ ಕೋರಿಕೆ ಪ್ಲೀಜ್ ನೀನು ಡಿಜಿಟಲ್ ಕ್ರಾಂತಿಯ ಬಳಕೆಯನ್ನು ಹೆಚ್ಚು ಕಂಡುಕೊಳ್ಳು. ಜಗತ್ತಿನಲ್ಲಿ ನಡೆಯುತ್ತಿರುವ ವಿವಿಧ ಕ್ಷೇತ್ರಗಳ ಬೆಳವಣಿಗಗಳನ್ನು ಅಂಗೈಯಲ್ಲಿ ತಿಳಿದುಕೊಳ್ಳಬಹುದು. ಇದು ನಿನಗೆ ತುಂಬ ಸಹಕಾರಿಯಾಗುತ್ತದೆ.

ಡಿಜಿಟಲ್ ಎಂದರೇ ಕೇವಲ ಸಮಯ ಹಾಳು ಮಾಡುವ ಎಫ್.ಬಿ ಅಥವಾ ವಾಟ್ಸಾಪ್ ಮಾತ್ರ ಅಲ್ಲ!

ನಾವಿಬ್ಬರೂ ಯೋಚಿಸಿದ ಯೋಜಿಸಿದ ಕಾರ್ಯಕ್ರಮಗಳ ಅನುಷ್ಟಾನದ ದಿನಗಳು ಬಂದಿವೆ. ಇನ್ನೂ ನಮ್ಮ ಕಾರ್ಯ ಕ್ಷೇತ್ರ ಇದೆ ನಮ್ಮಳ್ಳಿಯ ಭೂಮಿ. ಇದಕ್ಕೆ ಇರಬೇಕು ನೀನು ನನಗೆ ಮೊದಲ ಭಾರಿ ಬೇಟಿ ಮಾಡಿದಾಗ ಇಷ್ಟವಾಗಿದ್ದು. ಇಂದಿನ ಈ ಅಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ನಗರದ ಕಡೆ ಮುಖ ಮಾಡುವಾಗ ಏನಪ್ಪಾ ಈ ಹುಡುಗಿಯ ಥಿಂಕಿಂಗ್ ಹೀಗೆ ಅನಿಸಿದ್ದು.. ಇದೇ ನಿನ್ನನ್ನು ನನ್ನ ಪ್ರೀತಿಯನ್ನಾಗಿ ಮಾಡಿದ್ದು.

ಉಫ್ ಈ ಪತ್ರದಲ್ಲಿ ಎಲ್ಲಾ ಬರೆಯಾಲಾಗುವುದಿಲ್ಲ. ಬಾ ಬಂದ ಮೇಲೆ ಮುಗಿಯದ ಮಾತುಗಳನ್ನು ಅದೇ ದೂರದ ನಮ್ಮ ಪೇವರಿಟ್ ಜಾಗವಾದ ಒಂಟಿ ಮರವಿರುವ ಚಿಕ್ಕ ಹಳ್ಳದ ಸಾಲಿನ ಬೊಮ್ಮ ಗುಡ್ಡದ ಮೇಲೆ ಮತ್ತೆ ಮುಂದುವರಿಸೋಣ.

ಆ ಜಾಗಕ್ಕೆ ನೀ ಇಲ್ಲದ ಒಮ್ಮೆ ಹೋಗಿದ್ದೇ. ಯಾಕೋ ಅಲ್ಲಿ ಒಂದು ಕ್ಷಣವು ನಿಲ್ಲಲಾಗಲಿಲ್ಲ. ಅಲ್ಲಿರುವಷ್ಟು ಸಮಯವು ನಿನ್ನದೇ ನೆನಪು. ಅದಕ್ಕಾಗಿ ಕಳೆದ ವರುಷದಲ್ಲಿ ಒಮ್ಮೆಯು ಅತ್ತ ಕಡೆ ತಲೆ ಹಾಕಿಲ್ಲ ಗೊತ್ತಾ?

ನೀ ಯಾವಾಗ ಬೆಂಗಳೂರು ಬಿಡಿವಿಯೋ. ಇಲ್ಲಿಗೆ ಯಾವ ಬಸ್ ಗೆ ಬರುವಿಯೋ ತಿಳಿಸು.  ಈ ನಿನ್ನ ಯುವ ಪ್ರೇಮಿ ಕುದ್ದು ನಿನ್ನ ಕರೆದೊಯ್ಯಲು ಬಸ್ ಸ್ಟಾಪ್ ಗೆ ಬರುವನು..! ನನಗೆನೂ ದಾರಿ ಗೊತ್ತಿಲ್ಲವಾ ಹೋಗು. ಎಂದು ಮೂಗು ಮುರಿಯ ಬೇಡ..!

ಅಂತೂ ಮುಖತಾಃ ಬೇಟಿ ಮಾಡುವ ಕ್ಷಣಗಳು ಮುಂದಿವೆ. ಇದೇ ಸಂತೋಷದ ವಿಷಯ!

ಸಿಗುವ. ಬೇಗ ನಾಲ್ಕು ದಿನಗಳು ಪಾಸ್ಟಾಗಿ ಹೋಗ್ಲ್ ಪ್ಪಾ!

ಬಾಯ್!

ಶನಿವಾರ, ಡಿಸೆಂಬರ್ 10, 2016

ಪ್ರಬುದ್ಧ ನ್ಯೂಸ್ ಪತ್ರಿಕೆಗೆ ಒಂದು ವರುಷ ತುಂಬುತ್ತಿದೆ....

ಪತ್ರಿಕೆಯ ಬಳಗಕ್ಕೆ ಹೊಸ ವರುಷದ ಮತ್ತು ಪತ್ರಿಕೆಯ ಹುಟ್ಟುಹಬ್ಬದ ಶುಭಾಶಯಗಳು!

ಪ್ರಬುದ್ಧ ನ್ಯೂಸ್ ಮಾಸ ಪತ್ರಿಕೆಗೆ ಇಂದಿಗೆ ಒಂದು ವರುಷ ತುಂಬುತ್ತಿದೆ.

ಚಿತ್ರದುರ್ಗದಿಂದ ಪ್ರತಿ ತಿಂಗಳು ಐದನೇ ತಾರೀಕು ವೈವಿಧ್ಯಮಯವಾದ ವಸ್ತು ವಿಷಯ ಬರಹಗಳೊಂದಿಗೆ ಓದುಗರ ಕೈಗೆ ಸಿಗುತ್ತಾ.. ಒಂದೇ ಗುಕ್ಕಿಗೆ ಎಲ್ಲಾ ಲೇಖನಗಳನ್ನು ಓದಿಸುವಂತೆ ಮಾಡುತ್ತದೆ.

ಹೊಸ ಪತ್ರಿಕೆಗಳನ್ನು ಶುರು ಮಾಡುವುದು ಮತ್ತು ಅದನ್ನು ಉತ್ತಮವಾಗಿ ಸತತವಾಗಿ ನಡೆಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ!

ಇಂದು ಎಲ್ಲಾದರಲ್ಲೂ ಸ್ಪರ್ಧೆ. ಸ್ಪರ್ಧೆಯಲ್ಲಿ ನಿರಂತರವಾಗಿ ಹೆಚ್ಚು ಶಕ್ತವಾಗಿ ಓಡಬೇಕು. ಇಲ್ಲವೆಂದರೇ ತನ್ನಷ್ಟಕ್ಕೆ ತಾನೇ ಸೋಲನ್ನು ಒಪ್ಪಿಕೊಂಡಂತೆ.

ಯಾವುದೇ ರಂಗದಲ್ಲೂ  ನಾವು ಜಯ ಶಾಲಿಯಾಗಬೇಕೆಂದರೇ, ತಾನು ಸ್ವಲ್ಪ ವಿಭಿನ್ನವಾಗಿರಬೇಕು. ಬೇರೆಯವರಿಗಿಂತ ಮುಂದಿದ್ದರೇ ಮಾತ್ರ ಗೆಲವು.  ಈ ರೀತಿಯ ಹೊಸ ಚಿಂತನೆಯೊಂದಿಗೆ ಸಮಾನ ಮನಸ್ಕ ಗೆಳೆಯರೊಂದಿಗೆ  ಜನವರಿ ೨೦೧೬ ರಿಂದ ಪ್ರಾರಂಭವಾದ ಪ್ರಬುದ್ಧ ನ್ಯೂಸ್ ಪತ್ರಿಕೆಯಿದು.

ಪ್ರಬುದ್ಧ ನ್ಯೂಸ್ ಈಗ ಮನೆ ಮಾತಾಗಿದೆ ಎಂದರೇ ಪತ್ರಿಕೆಯನ್ನು ನಡೆಸುತ್ತಿರುವವರ ಮನಸ್ಸು ನಿತ್ಯ ಹೊಚ್ಚ ಹೊಸತನದಿಂದ ಕೊಡಿದೆ ಎಂದರ್ಥ!

ಮೊದಲ ಸಂಚಿಕೆಯಿಂದ ಈ ವರುಷದ ಕೊನೆಯ ಸಂಚಿಕೆಯವರೆಗೂ ಸುದ್ಧಿ, ಲೇಖನಗಳು, ಅಂಕಣಗಳು, ಪತ್ರಿಕೆಯ ಕ್ವಾಲಿಟಿ, ಮುಖಪುಟ ವಿನ್ಯಾಸ ಹೀಗೆ ಪ್ರತಿಯೊಂದರಲ್ಲೂ ಪ್ರಬುದ್ಧತೆಯನ್ನು ಮೆರೆದಿದೆ.  ಹೆಸರಿಗೆ ತಕ್ಕಂತೆ ಪತ್ರಿಕೆ ಯಾವಾಗಲೂ ತನ್ನ ಪ್ರಬುದ್ಧಮಾನತೆಯನ್ನು ಪಸರಿಸಿದೆ.

ಇದು ಹೊಸ ಪತ್ರಿಕೆಯೆಂಬುದನ್ನೇ ನಂಬಂತಾಗಿದೆ. ಇಂದು ಹಾಗೆ ಹೇಳುವ ಆಗಿಲ್ಲ! ಈಗ ಮೊದಲನೇ ವರುಷದ ಹುಟ್ಟು ಹಬ್ಬ.

ಹೌದು! ಪ್ರೀತಿಪಟ್ಟು ರೂಪಿಸಿದ ಪತ್ರಿಕೆಯಾದ್ದರಿಂದ ಓದುಗನಿಗೆ ಎಂದಿಗೂ ಇದು ಹೊಸ ಪತ್ರಿಕೆಯೆಂದು ಎನಿಸಿಲ್ಲ.

ಪತ್ರಿಕೆಯಲ್ಲಿ ಬರುತ್ತಿರುವ ಲೇಖನಗಳು, ವಿಷಯಗಳ ಆಯ್ಕೆಯಿಂದ ಓದುಗ ದೊರೆಗೆ ಓದಿನ ಮೃಷ್ಟಾನ್ನವನ್ನೆ ನೀಡಿದೆ. ವಾರ ವಾರ ಕೈಗೆ ಸಿಗುವಂತ್ತಾಗಿದ್ದರೇ ಎಷ್ಟು ಚೆನ್ನಾ ..! ಎಂಬ ಭಾವನೆಯನ್ನು ಹುಟ್ಟುಹಾಕಿದೆ.

ಪತ್ರಿಕೆಯ ಪ್ರತಿ ಬರಹಗಳಲ್ಲೂ ಪ್ರಾರಂಭದಿಂದ ಇಂದಿನವರೆಗೂ ಅದೇ ಬಿಗಿ ಹಿಡಿತವಿದೆ.

ವೈವಿಧ್ಯಮಯ ಬರಹಗಳಿಂದ ಕಾದು ಓದುವಂತೆ ಮಾಡಿರುವ ಪುಟಗಳೆಂದರೇ: ಸಂಪಾದಕೀಯ ಪುಟ, ಮುಖಪುಟ ಲೇಖನ, ವ್ಯಕ್ತಿತ್ವ ವಿಕಸನ , ಕಾಲನಿರ್ಣಯ, ಮನದಾಳದ ಮಾತು ಅಂಕಣ.. ಇತ್ಯಾದಿ.

ಸಂಪಾದಕೀಯ ಪುಟ - ಖುದ್ದು ಪ್ರಧಾನ ಸಂಪಾದಕರೇ ಬರೆಯುವ ಸಂಪಾದಕೀಯ ಪುಟ ನಿಜವಾಗಿಯೂ ಸಂಗ್ರಾಹಯೋಗ್ಯವಾದದ್ದು. ತಿಪ್ಪೇಸ್ವಾಮಿಯವರ ಭಾಷ ಪ್ರೌಡಿಮೆ ಮತ್ತು ವಿಷಯ ಸಂಗ್ರಾಹಣೆಯ ಪರಿಶ್ರಮವನ್ನು ಇದರಲ್ಲಿ ಗುರುತಿಸಬಹುದು. ದೇಶ-ರಾಜ್ಯದಲ್ಲಿ ಆ ಮಾಸದಲ್ಲಿ ಮಾಸದಂತೆ ಉಳಿದ ಸುದ್ಧಿಯ-ಘಟನೆಯ ಸುತ್ತಾ ತಮ್ಮದೇಯಾದ ಶೈಲಿಯಲ್ಲಿ ವಿಷಯ ವಿಸ್ತಾರವನ್ನು ವಿಶ್ಲೇಷಕ ಚಿಂತನೆಯಲ್ಲಿ ಚಿತ್ರಿಸುವುದು. ಘಟನೆಯ ನೈಜತೆಯನ್ನು ಮನನ ಮಾಡುತ್ತ ಆದರ ಆಗುಹೋಗುಗಳನ್ನು ಬೇರೆ ರೀತಿಯಲ್ಲಿ ಓದುಗರಿಗೆ ತಿಳಿಸುತ್ತಾರೆ. ಸಂಪಾದಕೀಯ ಪುಟ ಇಡೀ ಪತ್ರಿಕೆಗೆ ಮುಕುಟಪ್ರಾಯವಾದದ್ದು ಎಂದರೇ ತಪ್ಪಲ್ಲ!

ನಾನು ಇಷ್ಟಪಟ್ಟು ಮೊದಲು ಓದುವ ಪುಟವೆಂದರೇ ಪತ್ರಿಕೆಯ ಈ ಮೊರನೇಯ ಪುಟ.  ತಿಪ್ಪೇಸ್ವಾಮಿಯವರ ಬರಹದ ದುಡಿಮೆ ಹೀಗೆ ಸಾಗಲಿ ಎನ್ನುವುದೇ ನಮ್ಮಗಳ ಆಶಯ.

ಕಾಲನಿರ್ಣಯ..? - ಜಿತೇಂದ್ರರ ರಾಜಕೀಯ ಕಾಲಂ. ಕರ್ನಾಟಕದಲ್ಲಿ ಜರುಗುವ ರಾಜಕೀಯ ಹೆಜ್ಜೆಗಳನ್ನು ತಮ್ಮದೇಯಾದ ರಾಜಕೀಯ ವಿಶ್ಲೇಷಣೆಯೊಂದಿಗೆ ಅತ್ಯಂತ ಚೂಕ್ಕವಾಗಿ ಚಿತ್ರಿಸುವ ಲೇಖನ. ಇದುವರೆಗೆ ಬಂದಿರುವ ಅವರ ಎಲ್ಲಾ ಲೇಖನಗಳು ತುಂಬ ಸೂಗಸಾಗಿವೆ. ರಾಜಕೀಯವೆಂದರೇ ಮೂಗು ಮುರಿಯುವರು ಸಹ ಕುತೂಹಲದಿಂದ ಓದುವಂತೆ ಮಾಡುತ್ತದೆ. ಯಾಕೋ ಕಳೆದ ಮೂರು ತಿಂಗಳಿಂದ ಈ ಕಾಲಂ ನಿಂತುಹೋಗಿರುವುದು ಬೇಸರದ ಸಂಗತಿ. ಈ ಕಾಲಂ ಪುನಃ  ಪ್ರಾರಂಭವಾಗಲಿ ಎಂಬುದು ಈ ಓದುಗನ ಆಸೆ.

ವ್ಯಕ್ತಿವಿಕಸನ ಕಾಲಂ 'ಸಾವಿರ ಸೋಲುಗಳನ್ನು ಮೆಟ್ಟಿ ನಿಲ್ಲು'  -ಸಿದ್ದಲಿಂಗಪ್ಪನವರ ಕಾಲಂ. ಇದು ಪ್ರತಿಯೊಬ್ಬರಿಗೂ ಮಾರ್ಗದರ್ಶಿ ಬರಹಗಳ ಗೊಂಚಲು. ಸೋತ ಮನಸ್ಸುಗಳಿಗೆ ಸಂಜೀವಿನಿ! ಚಿಕ್ಕ ಚಿಕ್ಕ ಕಥೆಗಳ ಮೊಲಕ ಜೀವನವನ್ನು ಹೇಗೆ ಎದುರಿಸಬಹುದು ಎಂಬುದನ್ನು ತಿಳಿಸುತ್ತದೆ. ಕಾದಿದ್ದು ಮುಂದಿನ ತಿಂಗಳ ಬರಹವನ್ನು ಓದುವಂತೆ ಮಾಡುತ್ತಿರುತ್ತದೆ. ಮುಂದಿನ ಕಂತಿಗಾಗಿ ಒಂದು ತಿಂಗಳವರೆಗೂ ಕಾಯಬೇಕಲ್ಲಪ್ಪಾ. ಎಂದು ಬೇಜಾರಾಗುತ್ತದೆ.

ನನ್ನನ್ನು ಹೆಚ್ಚು ಇಷ್ಟಪಟ್ಟು ಓದುವಂತೆ ಮಾಡುತ್ತಿರುವ ಪ್ರಬುದ್ಧ ನ್ಯೂಸ್ ಅಂಕಣವೆಂದರೇ ’ಮನದಾಳದ ಮಾತು’ - ಇದು ಪ್ರತಿ ತಿಂಗಳು ಒಬ್ಬೊಬ್ಬ ಓದುಗರ ಭಾವನೆಗಳ/ಘಟನೆಗಳ/ಜೀವನ ಸಂಘರ್ಷದ ಸಂಗಮ ಮಾಲೆ. ತಮ್ಮ ಜೀವನದಲ್ಲಿ ಘಟಿಸಿದ ಘಟನೆಗಳ ಮೇಲೆ ಬೆಳಕು ಚೆಲ್ಲುವ ಅಂಕಣ. ಈ ಅಂಕಣಕ್ಕೆ ಓದುಗರು ನೇರ ಭಾಗವಹಿಸಿಕೆಯನ್ನು ಪತ್ರಿಕೆ ನೀಡಿರುವುದು ಪತ್ರಿಕೆ ಓದುಗರ ಬಗ್ಗೆ ಇಟ್ಟುಕೊಂಡಿರುವ ಕಾಳಜಿಯನ್ನು ನಿರೂಪಿಸುತ್ತದೆ.

ಸಂಶೋಧನ ವಿದ್ಯಾರ್ಥಿಗಳ ಸಂಶೋಧನ ಬರಹಗಳನ್ನು ಪ್ರಕಟಿಸುತ್ತಿರುವುದು. ಪತ್ರಿಕೆ ನವ ತರುಣ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಚಿಂತನೆಗಳಿಗೆ ತಾನು ನೀಡುತ್ತಿರುವ ಪ್ರೋತ್ಸಾಹವನ್ನು ತೋರಿಸುತ್ತದೆ.

ಇದಷ್ಟೇ ಅಲ್ಲದೇ ಕಾನೂನಿಗೆ ಸಂಬಂಧಿಸಿದ ಹಲವು ಲೇಖನಗಳು ಸಾಮಾನ್ಯ ಜನರಿಗೆ ಭಾರತದಲ್ಲಿರುವ ಗೊತ್ತಿಲ್ಲದ ಕಾನೂನು ಮತ್ತು ಅದರ ಉಪಯೋಕ್ತತೆಯನ್ನು ಪಡೆಯಲು ಸಾಮಾನ್ಯ ಜನರಿಗೆ ಅನುಕೂಲವಾಗಿದೆ ಎಂದರೇ ತಪ್ಪಿಲ್ಲ.

ಮುಖಪುಟದಲ್ಲಿ ನೀಡುವ ಹೆಡ್ ಲೈನ್ಸ್ - ಹೆಚ್ಚು ಕಾಡುವಂತೆ ಮತ್ತು ಕನ್ನಡ ಪದಗಳನ್ನು ಹೀಗೂ ಉಪಯೋಗಿಸಬಹುದು ಎಂಬುದನ್ನು ಪ್ರಬುದ್ಧ ನ್ಯೂಸ್ ಪ್ರತಿ ತಿಂಗಳು ಜಗಜ್ಜಾಹೀರು ಮಾಡಿದೆ. ’ವಿಚಾರಗಳ ಮೇಲುಡಿಗೆಯೇ ಭಾಷೆ’

ಹೊಸ ಪತ್ರಿಕೆಗಳೆಂದರೇ ಪ್ರಸಿದ್ಧರಾದ ಲೇಖಕರಿಗೆ ಮಣೆ ಹಾಕುವುದು. ಈಗಾಗಲೇ ಪೇಮಸ್ಸಾದ ಲೇಖಕರಿಂದ/ಸಾಹಿತಿಗಳಿಂದ ಅಂಕಣಗಳನ್ನು ಬರೆಸಿಕೊಂಡು ತಮ್ಮ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿಕೊಳ್ಳಲು ತವಕಿಸುವ ಇಂಥ ಸಂದರ್ಭದಲ್ಲಿ ಕೇವಲ ಹೊಸ ಲೇಖಕರಿಂದ ಅತ್ಯುತ್ತಮವಾದ ಲೇಖನಗಳನ್ನು ಬರೆಯಿಸುತ್ತಿರುವುದು. ಹೊಸಬರಿಗೆ ಅವಕಾಶವನ್ನು ಕೊಟ್ಟು ಅವರಲ್ಲಿ ಹುದುಗಿರುವ ಹೊಸ ಚಿಂತನೆಯನ್ನು ಕನ್ನಡ ಓದುಗರಿಗೆ ಪರಿಚಯಿಸುತ್ತಿರುವುದು ಪ್ರಬುದ್ಧ ನ್ಯೂಸ್ ಪತ್ರಿಕೆಯ ಹೆಮ್ಮೆ . ಇದು ಎಲ್ಲಾ ಪತ್ರಿಕೆಗಳಿಗೂ ಮಾದರಿ.

ಪತ್ರಿಕೆ ತನ್ನ ಮೊದಲ ವರುಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಾಮಾನ್ಯ ಓದುಗನಾಗಿ ಈ ಪತ್ರಿಕೆ ಇನ್ನು ಹೆಚ್ಚು ಹೆಚ್ಚು ಎತ್ತರಕ್ಕೇರಲಿ!  ಹಾಗೆಯೇ ಆದಷ್ಟು ಬೇಗ ವಾರಪತ್ರಿಕೆಯಾಗಿ ಬಹುಬೇಗ ನಮ್ಮೆಲ್ಲಾರ ಕೈಸೇರಲಿ ಎಂದು ಆಶಿಸುವೆನು.


ಬುಧವಾರ, ನವೆಂಬರ್ 23, 2016

ಇದು ಎಂದು ನಿಲ್ಲುವುದೋ

ನವಂಬರ್ ೮ ಇಡೀ ವಿಶ್ವ ಅಮೆರಿಕಾದ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ. ಮೋದಿ ಶಾಕಿಂಗ್ ನ್ಯೂಸ್ ನ್ನು ಭಾರತೀಯರಿಗೆ ನೋಟ್ ಬ್ಯಾನ್ ಮಾಡುವ ಮೂಲಕ ಕೊಟ್ಟರು.

ವಿಶ್ವವೇ ಒಂದು ಕ್ಷಣ ಮೋದಿಯ ಮತ್ತು ಭಾರತ ಸರ್ಕಾರದ ನಿರ್ಧಾರದಿಂದ ನಿಬ್ಬೇರಗಾಗಿತು.

೧೦೦೦ , ೫೦೦ ರ ನೋಟಗಳು ಸರಿ ರಾತ್ರಿಯಿಂದ ಪೂರಾ ಬಂದ್. ನಾಳೆ ಬದಲಿಸಿಕೊಂಡರೇ ಮಾತ್ರ ಅವುಗಳಿಗೆ ಬೆಲೆ.

ಕೆಲವರಿಗೆ ಈ ರೂಲ್ ನುಂಗಲಾರದ ತುತ್ತಾಗಿದ್ದಂತೂ ನಿಜ.

ಮಾರನೇಯ ದಿನದಿಂದ ಸಾಲು ಸಾಲು ಮಂದಿ ಬ್ಯಾಂಕ್ ಗಳ ಮುಂದೆ ನೋಟ್ ಬದಲಿಸಿಕೊಳ್ಳಲು ನಿಂತಿದ್ದೇ ಬಂತು.

ಸಾಕಷ್ಟು ಜನ ಸಾಮಾನ್ಯರು ಈ ನಿರ್ಧಾರವನ್ನು ಮೆಚ್ಚಿದರು. ಹಾಗೆಯೇ ಕೆಲವರು ಮೋದಿಯನ್ನು ಶಪಿಸಿದರು.

ರಾಜಕೀಯ ನಾಯಕರುಗಳು ತಮ್ಮದೇಯಾದ ದಾಟಿಯಲ್ಲಿ ಈ ನಿರ್ಧಾರವನ್ನು ಖಂಡತುಂಡವಾಗಿ ಖಂಡಿಸಿದರು.

ಮೋದಿ ಕೇವಲ ಬ್ಯುಸಿನೇಸ್ ಮ್ಯಾನ್ ಮತ್ತು ಶ್ರೀಮಂತರ ಪರ. ಇವರುಗಳನ್ನು ಓಲೈಸುವ ಸಲುವಾಗಿ ಈ ಕಾನೂನು ತಂದಿದ್ದಾರೆ. ಬಡ ಜನರು, ರೈತರು, ಸಣ್ಣ ವ್ಯಾಪರಿಗಳು ಎಲ್ಲಿಗೆ ಹೋಗಲಿ? ಅದು ಹೇಗೆ ಪ್ರತಿಯೂಬ್ಬರೂ ಬ್ಯಾಂಕ್ ಆಕೌಂಟ್ ಇಟ್ಟುಕೊಳ್ಳಲು ಸಾಧ್ಯ. ಜನರ ಬಗ್ಗೆ ಮೋದಿಗೆ ಕರುಣೆಯೇ ಇಲ್ಲ. ಇದು ಒಂದು ದೊಡ್ಡ ನೋಟ್ ಹಗರಣ. ಬಡ ಜನರ ಸಾವುಗಳು ಬ್ಯಾಂಕ್ ಕ್ಯೂ ನಲ್ಲಿ ನಡೆಯುತ್ತಿದೆ. ಹೀಗೆ ವಿರೋಧದ ಮಾತು ಮಾತು ಚರ್ಚೆಗಳು ಇನ್ನೂ ನಡೆಯುತ್ತಿವೆ.

ಇದು ಕಾಳಧನ ಸಂಗ್ರಹಕಾರರಿಗೆ ದುಃಸಪ್ನ. ಭ್ರಷ್ಟ ಜನರಿಗೆ ಸರಿಯಾದ ಶಾಸ್ತಿಯಾಯಿತು. ಇನ್ನಾದರೂ ಬ್ಲಾಕ್ ಮನಿ ಹೇಳ ಹೆಸರಿಲ್ಲದ ರೀತಿಯಲ್ಲಿ ನಾಶವಾಗುತ್ತದೆ. ಮೋದಿಯೆಂದರೇ ತಾತ್ಸಾರ ಮಾಡಿದವರಿಗೆ ಮೋದಿ ಸರ್ಕಾರ ಸರಿಯಾಗಿ ತೋರಿಸಿತು. ಬಡವರಿಗೂ ಸಹ ಸರ್ಕಾರದಲ್ಲಿ ನಂಬಿಕೆ ಬರುವ ನಿರ್ಧಾರ ಇದು. ಭಾರತ ಇಂದಿಗೆ ಬೆಳಕನ್ನು ಕಂಡಿತು. ಶ್ರೀಮಂತರ ದರ್ಬಾರಿಗೆ ಕಡಿವಾಣ ಮೋದಿ ಹಾಕಿದರು. ಇಂಥ ಪ್ರಧಾನಿಯನ್ನು ಕಂಡ ಭಾರತ ಧ್ಯನ್ಯ! ಹೀಗೆ ಪರವಾದ ಮಾತುಗಳು ಪ್ರತಿ ಮೀಡಿಯಾಗಳಲ್ಲಿ ಪಸರಿಸಿತು.

ಯಾವುದೇ ಒಂದು ಕೆಲಸ, ಘಟನೆ, ವಿಚಾರ ನಡೆದರೂ ಪರ ಮತ್ತು ವಿರೋಧದ ಮಾತು ಕೇಳುವುದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ.
ಯಾಕೆಂದರೇ ಪ್ರತಿಯೊಬ್ಬರಿಗೂ ತಮ್ಮ ಅಭಿವ್ಯಕ್ತಿಯನ್ನು ತಮ್ಮನುಸಾರ ವ್ಯಕ್ತಪಡಿಸಲು ಸರ್ವ ಸ್ವತಂತ್ರರು.

ಆದರೇ ನೋಟ್ ಬ್ಯಾನ್ ನಿಂದ ಎಷ್ಟು ಅನುಕೂಲವಾಗಬಹುದೋ ಅಷ್ಟೇ ಅನಾನುಕೂಲಗಳು ಸ್ವಲ್ಪ ದಿನಗಳು ಜನಸಾಮನ್ಯರು ಅನುಭವಿಸುವುದು ನಿಜ.

ಸರ್ಕಾರ ಯಾವುದೇ ರೀತಿಯ ಮುಂದಾಲೋಚನೆಯಿಲ್ಲದೆ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿಲ್ಲ. ಆದರೂ ಇಂದು ನೋಟ್ ಬದಲಾವಣೆಯ ಭರಾಟೆಯಲ್ಲಿ ಸಾಮನ್ಯ ಜನರ ಸಾವುಗಳು ಮಾತ್ರ ಅಕ್ಷಮ್ಯ. ಇದಕ್ಕೆ ಯಾರು ಹೊಣೆಯಾಗುವರೊ ಗೊತ್ತಿಲ್ಲ!

ಯಾಕೆಂದರೇ ಯಾವುದೇ ಸುಧಾರಣೆ ಒಂದು ಜೀವಕ್ಕಿಂತ ಅಮೊಲ್ಯವಲ್ಲ.

ಇದನ್ನೇ ಕೆಲವರು ಕೇವಲವಾಗಿ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಇಂದಿನ ಕಷ್ಟಗಳು ಅವಶ್ಯಕ ಎನ್ನುವ ಉದ್ಧಟತನ ತೋರಿಸುತ್ತಿದ್ದಾರೆ. ಈ ರೀತಿಯ ಮನೋಭಾವನೆ ಯಾರೂ ಒಪ್ಪವಂತದ್ದಲ್ಲ.

ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿಗಳು ಸಾಮಾನ್ಯ ಜನಗಳು, ಹಾಗೆಯೇ ಯಾವುದೇ ಕಾಯದೆ ಕಾನೂನುಗಳಿಂದ ಕಷ್ಟ ಅನುಭವಿಸುವುದು ಈ ಸಾಮಾನ್ಯ ಜನಗಳೇ.

ಉಳ್ಳವರಿಗೆ ಯಾವುದೇ ತೊಂದರೆ ಎಂದಿಗೂ ಆಗುವುದಿಲ್ಲ. ಅದಕ್ಕೆ ಇರಬೇಕು ಪ್ರತಿಯೊಬ್ಬರೂ ಉನ್ನತವಾದದ್ದನ್ನು ಪಡೆದುಕೊಳ್ಳಲು ತವಕಪಡುವುದು.

ಸರ್ಕಾರದ ಜಾಗದಲ್ಲಿರುವ ನಾಯಕರುಗಳು ಹಿಂದಿನಿಂದಲೂ ಬಡವರನ್ನೆ ತಮ್ಮ ಟ್ರಂಪ್ ಕಾರ್ಡ ಮಾಡಿಕೊಂಡಿದ್ದಾರೆ. ಬಡವರ ಉದ್ಧಾರದ ಹೆಸರಲ್ಲಿ ಅವರನ್ನು ಇನ್ನೂ ಅದೇ ಸ್ಥಿತಿಯಲ್ಲಿ ಇಡುವುದು ಅವರಿಗೆ ಲಾಭ. ಅದಕ್ಕೆ ಈ ಅಧಿಕಾರದ ಮಧದಲ್ಲಿರುವವರ ಮಾತುಗಳು ಯಾವುದು ನಿಜ ಯಾವುದು ಸುಳ್ಳೆಂದು ಅರಿಯುವುದು ಅಷ್ಟು ಸುಲಭವಲ್ಲ.

ಇಂದು ಪ್ರತಿಯೊಂದನ್ನು ಸಂಶಯದ ಮನಸ್ಸಿನಲ್ಲಿ ನೋಡುವಂತಾಗಿದೆ.

ಮೋದಿ ಏನೇ ಒಳ್ಳೆಯದನ್ನು ದೇಶಕ್ಕಾಗಿ ಮಾಡಲು ನಿರ್ಧರಿಸಿದರೂ ಪ್ರತಿಯೊಬ್ಬರೂ ಸಂಶಯದಲ್ಲಿ ಕಾಣುವುಂತಾಗಿದೆ.

ಇದು ಯಾಕೇ?

ದೇಶಕ್ಕಾಗಿ ಒಳ್ಳೆಯದನ್ನು ಮಾಡುವ ಮನುಷ್ಯನೇ ಹುಟ್ಟಿಲ್ಲ ಎನ್ನುತ್ತಿದ್ದಾರೆ.

ಅದು ಹೇಗೆ ನಮ್ಮ ಜನ ಗಾಂಧಿಯನ್ನು ನಂಬಿದರು? ಅದು ಯಾವ ಗುಣ ಗಾಂಧಿಯ ಮಾತನ್ನು ಇಡೀ ದೇಶ ಪಾಲಿಸುವಂತೆ ಮಾಡಿತು?

ಪ್ರಜಾಪ್ರಭುತ್ವವಿರುವ ಸರ್ಕಾರದಲ್ಲಿ ಪ್ರಜೆಯೇ ಪ್ರಭು ಎಂಬುದು ಕೇವಲ ಬಾಯಿ ಮಾತಾಗಿದೆ. ಯಾಕೆಂದರೇ ಸ್ವಾತಂತ್ರ್ಯ ಬಂದ ೭೦ ವರುಷದಲ್ಲಿ ನಮ್ಮನಾಳಿದ ನಾಯಕರುಗಳ ಜೊಳ್ಳು ಧೋರಣೆಯ ಮಾತುಗಳು. ಅವರುಗಳು ತಿಂದು ತೇಗಿದ ರೀತಿ. ಬಡವರ ಬಗ್ಗೆ ಅವರು ಮಾತನಾಡುವುದಕ್ಕೂ, ಅವರನ್ನು ಕಾಣುವುದಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ.

ದೇಶ ಉನ್ನತಿಯಾಗಬೇಕಾದರೇ ದೇಶದ ನಾಯಕರುಗಳು ಒಳ್ಳೆಯವರಾಗಿರಬೇಕು. ಒಳ್ಳೆಯ ನಾಯಕ ಸಿಗಬೇಕಾದರೇ ದೇಶದ ಜನರು ಅಂಥ ನಾಯಕರನ್ನು ಆರಿಸಬೇಕು.

ಆದರೇ ಎಲ್ಲೋ ಏನೋ ವ್ಯತ್ಯಾಸ ಕಾಣುತ್ತಿದೆ. ಅಧಿಕಾರ ಸಿಕ್ಕಿದರೇ ಸಾಕು ತಾನು ತನ್ನ ಕುಟುಂಬ ಮಾತ್ರ ಚೆನ್ನಾಗಿರಬೇಕು ಎನ್ನುವ ಮಟ್ಟಿಗೆ ಕೊಳ್ಳೆ ಹೊಡೆಯುವವರನ್ನೇ ಕಂಡ ನಮಗೆ ಮೋದಿಯ ನಡೆ ಸ್ವಲ್ಪ ವಿಭಿನ್ನ ಅನಿಸುತ್ತಿದೆ. ಇದಕ್ಕೆ ಇರಬೇಕು ನಮ್ಮ ಜನ ಈ ಬದಲಾವಣೆಯನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.


ಯಾವುದೇ ಬದಲಾವಣೆ ಸುಧಾರಣೆ ಬೇಡ ಗುರು! ನಾನು ಚೆನ್ನಾಗಿದ್ದರೇ ಸಾಕು. ಯಾವನ್ ಕ್ಯೂ ನಲ್ಲಿ ನಿಲ್ಲಬೇಕು? ನನ್ನ ದುಡ್ಡು ನನ್ನದಾಗಿದ್ದರೇ ಸಾಕು. ಯಾರು ಎಷ್ಟು ಬೇಕಾದರೂ ಇಟ್ಟುಕೊಂಡಿರಲಿ. ಈ ರೀತಿಯ ನಮ್ಮ ಮನೋಭಾವನೆಯನ್ನೇ ಎನ್ ಕ್ಯಾಷ್ ಮಾಡಿಕೊಂಡಿರುವ ನಮ್ಮ ಸೋ ಕಾಲ್ಡ್ ರಾಜಕೀಯ ನಾಯಕರುಗಳು ನಮ್ಮ ಬದುಕನ್ನು ಇನ್ನೂ ಮೂರ ಬಟ್ಟೆ ಮಾಡಲು ಸಿದ್ಧರಾಗಿದ್ದಾರೆ. ಇದು ನಿಜ!

ಸಂಸತ್ತನಲ್ಲಿ ಎಲ್ಲ ಪ್ರತಿಪಕ್ಷಗಳು ಈ ನೋಟ್ ಬ್ಯಾನ್ ಮಾಡಿರುವ ವಿರುದ್ಧ ತೊಡೆತಟ್ಟಿಕೊಂಡು ವಿರೋಧಿಸುತ್ತಿರುವುದನ್ನು ನೋಡಿದರೇ ನಮಗೆ ನಾವೇ ನಾಚಿಕೆಪಟ್ಟುಕೊಳ್ಳಬೇಕೇನೋ..?

ಏನೂ ಮಾಡುವ ಆಗಿಲ್ಲ. ನಾವೇ ಆರಿಸಿಕಳಿಸಿರುವ ಪ್ರತಿನಿಧಿಗಳು. ಅವರುಗಳು ನಮ್ಮಗಳ ಬಗ್ಗೆ ಬಾಯಿ ತುಂಬ ಹರಿಸುತ್ತಿರುವ ನುಡಿಗಳು ಕೇಳಬೇಕು. ಅವರಿಗೆ ನಮ್ಮ ಜನಗಳು ಇನ್ನೂ ಅದೇ ಸ್ಥಿತಿಯಲ್ಲಿದ್ದಷ್ಟು ಲಾಭ.

ಸತತ ೭೦ ವರುಷ ನಮ್ಮವರ ಏಳ್ಗೆಯನ್ನಾಗಲಿ, ನಮ್ಮ ಜನರನ್ನು ಹೆಚ್ಚು ಅಕ್ಷರಸ್ಥರನ್ನಾಗಿ ಮಾಡೋಣ, ಹೆಚ್ಚು ತಿಳುವಳಿಕೆಯುಳ್ಳವರನ್ನಾಗಿ ಮಾಡೋಣ ಎನ್ನುವುದರ ಬಗ್ಗೆ ಈ ರೀತಿಯ ಒಗ್ಗಟ್ಟನ್ನು ಪ್ರದರ್ಶಿದ್ದರೇ ನಮ್ಮ ಭಾರತ ಇಂದು ಅದು ಎಲ್ಲೋ ಇರುತ್ತಿತ್ತು.

ಆದರೇ ನಮ್ಮ ಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ಜನರ ಭಾವನೆಗಳನ್ನು ಬಳಸಿಕೊಳ್ಳುತ್ತಿರುವುದು ವಿಪರ್ಯಾಸ. ಅದಕ್ಕಾಗಿ ಇವರುಗಳು ಮಾಡುತ್ತಿರುವ ನಾಟಕಗಳನ್ನು ನೋಡಿದರೇ ಇವರಿಗೆ ಮೋದಿ ನಡೆ ಮಾತ್ರ ತಪ್ಪಾಗಿ ಕಾಣುತ್ತಿದೆ. ಅದಕ್ಕಾಗಿ ಸಾಮಾನ್ಯ ಜನರ ಮನಸ್ಸನ್ನು ಬಡಿದೆಬ್ಬಿಸಿ ಸರ್ಕಾರದ ವಿರುದ್ಧ ದಂಗೆಯೇಳಿಸಬೇಕು. ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಆರಿಸಲಿ ಎಂಬ ದೂರಾಲೋಚನೆಯಂತಿದೆ.

ಇದು ಎಂದು ನಿಲ್ಲುವುದೋ ಕಾದು ನೋಡಬೇಕು.

ಗುರುವಾರ, ನವೆಂಬರ್ 10, 2016

ಸುದ್ಧಿಗಳು ಮತ್ತು ಸಮಾಜ



ಸಂವಹನ ಮಾಧ್ಯಮಗಳ ಜವಬ್ದಾರಿಯ ಬಗ್ಗೆ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಿವೆ. ಟಿ.ವಿ  ನ್ಯೂಸ್ ಚಾನಲ್ ಗಳು ಬಂದ ಮೇಲೊಂತೂ ಪರಿ ಪರಿಯಾಗಿ ಅವುಗಳ ಸಮಾಜಿಕ ಕಳ ಕಳಿಯ ಬಗ್ಗೆ ಸಾಮಾನ್ಯ ಜನರುಗಳು ಪ್ರಶ್ನೇ ಮಾಡುತ್ತಿದ್ದಾರೆ.

ಸುದ್ಧಿ ಮಾಡುವುದೇ ಸುದ್ಧಿ ಮಾಧ್ಯಮಗಳ ಕರ್ತವ್ಯವಾ? ಅವುಗಳು ಏನೂ ಸಮಾಜಕ್ಕೆ ನೀಡಬಹುದು. ಅವು ಹೇಗೆ ಜನಗಳ ಸಮಸ್ಯೆಗಳನ್ನು ಪರಿಹರಿಸಬಹುದು. ಹೀಗೆ ಹತ್ತಾರು ಕೋನಗಳಲ್ಲಿ ಇವರನ್ನು ಕೇಳುತ್ತಿರುತ್ತಾರೆ.

ಪ್ರಬಲ ಮಾಧ್ಯಮ ಎಂದರೇ ಟಿ.ವಿ ಮಾಧ್ಯಮ. ಪತ್ರಿಕೆ, ರೇಡಿಯೊ ಗಳಿಗಿಂತ ಅತಿ ವೇಗವಾಗಿ ಜನರನ್ನು ತಲುಪುವ ಮಾರ್ಗ ಎಂದರೇ ಟಿ.ವಿ ಚಾನಲ್ ಗಳು ಮಾತ್ರ.

ಎಲ್ಲಾ ಭಾಷೆಗಳಲ್ಲು ಸಾಕಷ್ಟು ನ್ಯೂಸ್ ಚಾನಲ್ ಗಳು ಹುಟ್ಟಿಕೊಂಡಿವೆ. ಯಾವುದೇ ಘಟನೆಗಳು ನಡೆದರೂ ಕ್ಷಣ ಮಾತ್ರದಲ್ಲಿ  ಅದರ ವರದಿ ಬ್ರೇಕಿಂಗ್ ನ್ಯೂಸ್ ರೂಪದಲ್ಲಿ ಟಿ.ವಿ ಪರದೆಯಲ್ಲಿ ಪ್ರತ್ಯಕ್ಷವಾಗುತ್ತದೆ.

ಅದು ಜನರಿಗೆ ಎಷ್ಟು ಉಪಯೋಗವಾಗುತ್ತದೂ ಬಿಡುತ್ತದೂ ಗೊತ್ತಿಲ್ಲ. ಪ್ರಸಾರವನ್ನು ಮಾತ್ರ ಮಾಡುತ್ತಾರೆ. ಯಾವುದೇ ಘಟನೆಯನ್ನು ಯಥಾವತ್ ಪ್ರಸಾರ ಮಾಡುವುದೇ ಅವರ ಹೆಗ್ಗಳಿಕೆಯಾಗಿದೆ! ಎನ್ನುವ ಮಟ್ಟಿಗೆ.

ಆದರೇ ಕೆಲವೊಂದು ಸಮಯದಲ್ಲಿ ಸುದ್ಧಿ ಪ್ರಸಾರ ಮಾಡುವುದಷ್ಟೇ, ಮಾಡುವುದು ತಪ್ಪು ಅನಿಸುತ್ತದೆ. ಯಾವುದೋ ಒಂದು ಅಪಘಾತ, ಯಾವುದೋ ಒಂದು ಅವಘಡಗಳು ಸಂಭವಿಸಿದಾಗ, ಸಂಭವಿಸುವ ಸೂಚನೆ ಗೊತ್ತಿದ್ದಾಗ, ಈ ಮಾಧ್ಯಮಗಳು ಕೇವಲ ಕ್ಯಾಮರ ಮೈಕ್ ಗಳಿಗೆ ಕೆಲಸಗಳನ್ನು ಕೊಡುವುದನ್ನು ಬಿಟ್ಟು ಮನಸಾಕ್ಷಿಗೆ ಕೆಲಸಕೊಟ್ಟರೆ ಕ್ಷೇಮ.ಆ ಮೊಲಕ ಕೆಲವೊಂದು ಜೀವಗಳನ್ನು ಉಳಿಸಬಹುದಾಗಿತ್ತು ಎನಿಸುತ್ತದೆ.

ಹೀಗೆ ಅನಿಸುವುದು ಅವರೇ ಸುದ್ಧಿಯನ್ನು ಬೀತರಿಸುವಾಗ ನುಡಿಯುವ ಪುಂಕಾನು ಪುಂಕು ಮಾತುಗಳು ಮತ್ತು ಬೇರೆಯವರನ್ನು ಬೆಟ್ಟು ಮಾಡಿ ತೋರಿಸುವುದರಿಂದ.

ಯಾಕೆಂದರೆ ಇತ್ತೀಚೆಗೆ ನಡೆದ ಇಬ್ಬರು ನಟರುಗಳ ಸಾವು. ಕಾವೇರಿ ಗಲಾಟೆಯಲ್ಲಿ ಆದ ಅನಾಹುತ. ಹಿಂದೆ ರಸ್ತೆ ಅಪಘಾತದಲ್ಲಿ ಅಸುನೀಗಿದ ಯುವಕನ ಘಟನೆ. ಹಿರಿಯ ಪೊಲೀಸ್ ಅಧಿಕಾರಿಯ ಆತ್ಮಹತ್ಯೆ. ಹೀಗೆ ಈ ಕೆಲವೊಂದು ಸುದ್ಧಿ ಪ್ರಸಾರಣೆಗಳು, ಮಾಧ್ಯಮಗಳು ಕೇವಲ ಕ್ಯಾಮರ ಕಣ್ಣಿನಿಂದ ನೋಡುವುದನ್ನು ಬಿಟ್ಟು ಹೃದಯದಿಂದ ನೋಡಬೇಕಾಗಿತ್ತು ಎಂದು ಪ್ರತಿಯೊಬ್ಬ ವೀಕ್ಷಕನನ್ನು ಕಲಕಿದ್ದಿದೆ.

ಘಟನೆ ಸಂಭವಿಸಿದ ಮೇಲೆ ಹೇಳುವ ನೂರು ಕಾರಣಗಳು. ಮತ್ಯಾರನ್ನೋ ಹೊಣೆಗಾರರನ್ನಾಗಿ ಮಾಡುವುದು ಉಪಯೋಗವಿಲ್ಲ. ಯಾಕೆಂದರೇ ತಾವೇ ಕಿವಿಯಾರೇ ಸತ್ಯವನ್ನು ಕೇಳಿ, ನೋಡಿದ ಮೇಲೆ ಜನರಿಗೆ ಟಿ.ವಿಯಲ್ಲಿ ತೋರಿಸುವುದು ಸುದ್ಧಿ ಸಂಸ್ಥೆಗಳು. ಆದ್ದರಿಂದ ಪ್ರಪ್ರಥಮವಾಗಿ ಇದರ ಬಗ್ಗೆ ತಿಳಿಯುವವರು ಮತ್ತು ವಿಷಯ ಗೊತ್ತಿರುವವರು ಈ ಮಾಧ್ಯಮದವರಿಗೆ. ಇವರುಗಳು ತಾವೇ ತಡೆಯಬಹುದಾಗಿದ್ದ ದುರಂತಗಳನ್ನು ಮತ್ಯಾರೋ ಬಂದು ನಿಲ್ಲಿಸಬಹುದಾಗಿತ್ತು ಎಂದು ಹೇಳುವುದು ತೀರ ಕ್ಷುಲ್ಲಕ ಅನಿಸುತ್ತದೆ.

ಇದೆ ನ್ಯೂಸ್ ಚಾನಲ್ ಗಳ ಉತ್ತಮ ಸಮಾಜ ನಿರ್ಮಾಣ, ದಿಟ್ಟ, ನೇರ ಸ್ವಾಸ್ಥ್ಯ ನಡವಳಿಕೆ?

ಕೇವಲ ವೇಗವಾದ ಸುದ್ಧಿ ಪ್ರಸಾರದಲ್ಲಿ ಮೇಲು ಗೈ ಸಾಧಿಸದೆ ಸಾಮಾಜಿಕ ಕಾಳಜಿಯಲ್ಲಿ ವೇಗವನ್ನು ಸಾಧಿಸುವುದು ಅತ್ಯಂತ ಅವಶ್ಯಕ ನಡೆಯಾಗಿದೆ. ಇದು ನಮ್ಮೆಲ್ಲಾರ ಕೋರಿಕೆಯು ಆಗಿದೆ.

ಒಮ್ಮೊಮ್ಮೆ ಅತಿರೇಕದ ವರ್ತನೆಯನ್ನು ಸುದ್ಧಿ ಸಂಗ್ರಹಿಸುವವರು ಮಾಡುವುದನ್ನು ನಿತ್ಯ ಟಿ.ವಿಗಳಲ್ಲಿ ಗಮನಿಸಬಹುದು. ಏನದರೊಂದು ಕಾಂಟ್ರವರ್ಸಿ ಕ್ರಿಯೇಟ್ ಮಾಡಿ ಅದನ್ನೆ ದೊಡ್ಡ ಸುದ್ಧಿ ಮಾಡುವುದು. ವ್ಯಕ್ತಿ ಮತ್ತು ಸಮಾಜವನ್ನು ಇಕ್ಕಟ್ಟಿಗೆ ಸಿಲುಕಿಸುವುದು. ಯಾವುದೇ ಸುದ್ಧಿ ಪ್ರಸಾರ ಮಾಡುವುದು ಕ್ಷೇಮವೇ ಇಲ್ಲವೇ ಎಂದು ಪರಮರ್ಶಿಸುವ ಗೊಜಿಗೆ ಹೋಗದೇ ನೇರವಾಗಿ ಜನರ ಮುಂದೆ ಇಡುವುದು.

ದುಃಖದಲ್ಲಿರುವವರನ್ನು ಪದೆ ಪದೆ ಪ್ರಶ್ನೆ ಮಾಡುವುದು ಮಾನವೀಯತೆಯನ್ನೇ ಕಳೆದುಕೊಂಡಂತೆ ಅನ್ನಿಸುತ್ತದೆ. ಕೈಯಲ್ಲಿ ಮೈಕ್ ಇದ್ದ ತಕ್ಷಣ ಯಾವುದೋ ಲೋಕದಿಂದ ಇಳಿದು ಬಂದವರಂತೆ ವರ್ತಿಸಬಾರದು.

ಮಾಧ್ಯಮ ತನ್ನ ಇತಿಮೀತಿಯನ್ನು ಹರಿತು ನಡೆದರೆ ತುಂಬ ಒಳಿತು.

ಈ ಹಿಂದೆ ಒಂದು ಕಿರು ಚಿತ್ರ ಬಂದಿತ್ತು. ಅದರಲ್ಲಿ ಹೀಗೆ ದಾರಿಯಲ್ಲಿ ತರುಣನೊಬ್ಬ ಸಾಗುತ್ತಿರುತ್ತಾನೆ. ಅದೇ ಸಮಯದಲ್ಲಿ ಇವನಿಗೆ ಯಾರೋ ವಯಸ್ಸಾದ ಮನುಷ್ಯ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮರವನ್ನು ಏರುತ್ತಿರುವುದು ಕಾಣುತ್ತದೆ. ಈ ಹುಡುಗನಿಗೆ ಕುತೂಹಲ ಜೇಬಲ್ಲಿದ್ದ ಗ್ಯಾಲಕ್ಸಿ ಮೊಬೈಲ್ ತೆಗೆದು ವಿಡಿಯೋ ಆನ್ ಮಾಡಿ ಕಳ್ಳಿ ಮರೆಯಲ್ಲಿ ರೇಕಾರ್ಡ್ ಮಾಡಲು ಕುರುತ್ತಾನೆ. ಅದು ಉಸಿರು ಬಿಗಿ ಹಿಡಿದು. ಅದು ಎಲ್ಲಿ ಆ ವ್ಯಕ್ತಿಗೆ ತನ್ನ ಇರುವಿಕೆ ತಿಳಿಯುವುದೋ ಎಂದು!

ವಯಸ್ಸದ ಆ ವ್ಯಕ್ತಿ ಮರ ಹತ್ತಿ ಸುತ್ತ ಮುತ್ತ ನೋಡುತ್ತಾನೆ. ಹಾಗೆಯೇ ಗಟ್ಟಿ ಕೊಂಬೆಯನ್ನು ಹುಡುಕಲು ತೊಡಗುತ್ತಾನೆ. ಕೊನೆಗೆ ಬಲ ಬದಿಗೆ ಒಂದೊಂದೆ ಹೆಜ್ಜೆ ಜಾರುತ್ತನೆ. ಕೈಯಲ್ಲಿದ್ದ ಹಗ್ಗವನ್ನು ಕೊಂಬೆಗೆ ಕಟ್ಟುತ್ತಾನೆ. ಇನ್ನೊಂದು ಹಗ್ಗದ ತುದಿಯನ್ನು ಕುಣಿಕೆ ಕಟ್ಟಿ ತನ್ನ ಕೊರಳಿಗೆ ಹಾಕಿಕೊಳ್ಳುತ್ತಾನೆ. ಕಣ್ಣಲ್ಲಿ ಧಾರಾಕಾರ ನೀರು! ಮೇಲೆ ಒಮ್ಮೆ ನೋಡುತ್ತಾನೆ. ಹಾಗೆಯೇ ತಲೆ ತಗ್ಗಿಸುತ್ತಾನೆ. ಅದು ಏನು ಏನೋ ಬಾಯಲ್ಲಿ ದುಃಖದಿಂದ ಪ್ರಲಾಪಿಸುತ್ತಾನೆ. ಆದರೂ ತಾನು ಬಂದಿರುವ ಕಾರ್ಯವನ್ನು ಮುಗಿಸುವ ಆತುರದಲ್ಲಿ ಕಣ್ಣು ಮುಚ್ಚಿ ಒಮ್ಮೆಯೇ ಜೀಗಿಯುತ್ತಾನೆ. ಅಷ್ಟೇ! ಇದೆಲ್ಲಾವನ್ನು ಈ ತರುಣ ತನ್ನ ಮೊಬೈಲ್ ವಿಡಿಯೋದಲ್ಲಿ ರೇಕಾರ್ಡ ಮಾಡುತ್ತಾ ನೋಡುತ್ತಿರುತ್ತಾನೆ. ಕೊನೆಗೆ ವ್ಯಕ್ತಿಯ ಶವ ನೆತಾಡುತ್ತದೆ. ರೇಕಾರ್ಡ್ ನಿಲ್ಲುತ್ತದೆ.ಅನಂತರ ಅದನ್ನು ಯಾರಿಗೋ ಕಳಿಸಲು ತೊಡಗುತ್ತಾನೆ.ಅಲ್ಲಿಗೆ ಈ ಕಿರುಚಿತ್ರ ಮುಗಿಯುತ್ತದೆ.

ಇದು ಮನ ಕಲುಕುವ ಸನ್ನಿವೇಶ. ನಮ್ಮತನವನ್ನು ಕಳೆದುಕೊಂಡು ವರ್ತಿಸುವ ಹುಚ್ಚುತನ. ಈ ರೀತಿಯ ಗೀಳು ಯಾರಿಗೂ ಎಂದಿಗೂ ಬರಬಾರದು. ಇಂಥ ಸಮಯದಲ್ಲಿ ಮನುಷ್ಯತ್ವ ಜಾಗೃತವಾಗಬೇಕು.

ಇಂದು ಪ್ರತಿಯೊಂದನ್ನು ವಿಡಿಯೋ, ಪೊಟೋ ತೆಗೆದು ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡುವುದು ಖ(ಕಾ)ಯಾಲಿಯಾಗಿದೆ.

ಒಮ್ಮೊಮ್ಮೆ ಆ ಒಂದು ವಿಡಿಯೋ ಪೊಟೋ ತುಣುಕು ಇಡೀ ಸಮಾಜವನ್ನೆ ತಲ್ಲಣಗೊಳಿಸಿಬಿಡುವುದು. ಇಲ್ಲಿ ಯಾರ ಕಡಿವಾಣವಿಲ್ಲ. ಪ್ರತಿಯೊಬ್ಬರೂ ಅವರವರ ಮನಸೊ ಇಚ್ಛೆ ಏನದರೂ ಪ್ರಸಾರ ಮಾಡಬಹುದು. ತಮಗೆ ತಾವೇ ರೀಪೊರ್ಟರ್!

ಆದರೇ ಈ ರೀತಿಯ ವರ್ತನೆ ಘನತೆಯುಳ್ಳ ಸುದ್ಧಿ ಸಂಸ್ಥೆಗಳಿಂದ ನಡೆಯಬಾರದು.

ಟಿ.ವಿ, ಪತ್ರಿಕೆ, ಸುದ್ಧಿ ಮಾಧ್ಯಮಗಳನ್ನು ಶಾಸಕಾಂಗದ ನಾಲ್ಕನೇಯ ಅಂಗ ಎಂದು ಸಂವಿಧಾನವೇ ಗುರುತಿಸಿದೆ. ಸ್ವಾಸ್ಥ್ಯ ಸಮಾಜ ಮತ್ತು ಶಾಂತ ಸಮಾಜದ ನಿರ್ಮಾಣ ಇವುಗಳ ಕೈಯಲ್ಲಿಯೇ ಜಾಸ್ತಿಯಿದೆ.

ಇಂದು ಮಾಧ್ಯಮಗಳಿಂದ ಜಗತ್ತೆ ಒಂದು ಪುಟ್ಟ ಹಳ್ಳಿಯಾಗಿದೆ. ಜಗತ್ತಿನ ಯಾವುದೇ ಮೊಲೆಯಲ್ಲಿ ಜರುಗಿದ ಚಿಕ್ಕ ಘಟನೆಗಳು ಸಹ ಕ್ಷಣ ಮಾತ್ರದಲ್ಲಿ ಮನೆ ಮನವನ್ನುತಲುಪುತ್ತಿವೆ. ಇದಕ್ಕೆ ಪ್ರತಿಯೊಬ್ಬರೂ ಅಭಾರಿಗಳು. ಇದರಿಂದ ಮಾಧ್ಯಮಗಳು ಲಾಭವನ್ನುಗಳಿಸುತ್ತಿವೆ. ಹಾಗೆಯೇ ಸಾಮಾನ್ಯ ಜನರುಗಳು ಸಹ ಹೆಚ್ಚು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಯಾವುದೇ ದೊಡ್ಡ/ಚಿಕ್ಕ ಸುದ್ಧಿ ಅಥವಾ ವಿಚಾರ ಒಂದು ಅಮೊಲ್ಯ ಜೀವಕ್ಕಿಂತ ಎಂದಿಗೂ ದೊಡ್ಡದಲ್ಲ. ಆದ್ದರಿಂದ ಜೀವಪರ ಕಾಳಜಿಯನ್ನು ಪ್ರತಿಯೊಂದು ಚಾನಲ್ ಮತ್ತು ಪ್ರತಿ ಮಾಧ್ಯಮಗಳು ಹೊಂದುವುದು ಇಂದಿನ ಜರೂರತಾಗಿದೆ.

ಇಲ್ಲವೆಂದರೇ ಹೇಳುವುದೊಂದು ಮಾಡುವುದೊಂದು ಅನ್ನುವಂತಾಗುತ್ತದೆ.