ಶನಿವಾರ, ಏಪ್ರಿಲ್ 15, 2017

ಕಾಯಕವೇ ಕೈಲಾಸವಲ್ಲವೇ?

ಇಂದು ಪ್ರತಿಯೊಂದಕ್ಕೂ ವಿವಾದದ ಮುಖವಾಡವನ್ನು ಹಾಕುತ್ತಿದ್ದಾರೆ. ಕೇವಲ ವಿವಾದ ಮಾಡುವುದಕ್ಕೆ ವಿವಾದ ಮಾಡಬಾರದು.

 

ಯಾವುದೇ ವಿಷಯಗಳು ಪುನಃ ಪುನಃ ಸಮಾಜದಲ್ಲಿ ಪ್ರಸ್ತಾಪವಾಗಿ ಆದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗುತ್ತಿವೆ. ಹಿಂದಿನ ದಿನಮಾನಗಳಿಗಿಂತ ಇಂದು ಯಾವುದೇ ಒಂದು ವಿಚಾರಗಳು/ವಿವಾದ ಅತಿ ವೇಗವಾಗಿ ಪ್ರತಿಯೊಬ್ಬರನ್ನು ತಲುಪುತ್ತವೆ.

 

ಮುಚ್ಚು ಮರೆಯಿಂದ ಬಚ್ಚಿಡಲು ಎಂದಿಗೂ ಸಾಧ್ಯವಿಲ್ಲ. ಈಗ ಪ್ರತಿಯೊಬ್ಬನೂ ಗಾಜಿನ ಮನೆಯಲ್ಲಿ ಜೀವಿಸುವ ಯುಗದಲ್ಲಿದ್ದೇವೆ.

 

ಇಂಟರ್ ನೆಟ್ ಕ್ರಾಂತಿಯಂತೂ ಇಡೀ ಜಗತ್ತನ್ನು ತನ್ನ ಅಂಗೈಯಲ್ಲಿಡಿದಿಡುವಂತೆ ಮಾಡಿದೆ. ತನ್ನೂರು ತನ್ನ ರಾಜ್ಯ ದೇಶವಲ್ಲದೇ ಬೇರೆ ದೇಶದ ಯಾವುದೋ ಒಂದು ಭಾಗದ ಘಟನೆಯನ್ನು ಕ್ಷಣ ಮಾತ್ರದಲ್ಲಿ ಕಾಣುವಂತಾಗಿದ್ದಾನೆ.

 

ಇಂದಿನ ಮನುಷ್ಯ ತನ್ನ ಚಿಂತನೆಯಿಂದ ತಾನು ಓದುವ ಶಿಕ್ಷಣಕ್ಕಿಂತ ಹೆಚ್ಚಿನ ಮಟ್ಟಿಗೆ ಯೋಚಿಸುವಂತಾಗಿದ್ದಾನೆ. ಏನನ್ನು ಸುಖ ಸುಮ್ಮನೆ ನಂಬದಂತಾಗಿದ್ದಾನೆ.

 

ಇದು ಈಗಾಗಲೇ ರಾಜಕೀಯ, ಸಾಮಾಜಿಕ, ಅರ್ಥಿಕ ರಂಗದಲ್ಲಿರುವವರಿಗೆ ಮನವರಿಕೆಯಾಗಿದೆ.

 

ತನಗೆ ಏನು ಬೇಕು ಎಂಬುದನ್ನು ತನಗೆ ತಾನೇ ಆರಿಸಿಕೊಳ್ಳುವ ಮಟ್ಟಿಗೆ ಸರ್ಕಾರ ಕೊಟ್ಟಿರುವ ಮೊಲಭೂತ ಹಕ್ಕುಗಳನ್ನು ಸರ್ವ ಸ್ವತಂತ್ರವಾಗಿ ಹೆಚ್ಚು ಹೆಚ್ಚು ಬಳಕೆ ಮಾಡಿಕೊಳ್ಳುವಲ್ಲಿ ತಾನು ಸಾಕಷ್ಟು ಮುಂದಿದ್ದಾನೆ.

 

ಇಂದಿನ ರಾಜಕೀಯ ನೇತಾರರನ್ನು ಕಂಡರೇ ನನಗೆ ಅಯ್ಯೋ ಅನಿಸುತ್ತದೆ!

 

ಮೊದಲಂತೆ ಕೇವಲ ಬಾಯ್ ಭಾಷಣ, ಒಣ ಮಾತುಗಳಿಗೆ ಕುಗ್ರಾಮದ ಜನರುಗಳು ಸಹ ಮರುಳಾಗದ ಸ್ಥಿತಿಗೆ ಬಂದಿದ್ದಾರೆ. ಅದಕ್ಕೆ ಉದಾಹರಣೆಯೆಂಬಂತೆ ಇತ್ತೀಚಿನ ಚುನಾವಣೆಗಳ ಪಲಿತಾಂಶಗಳೇ ಸಾಕ್ಷಿ. ಒಮ್ಮೆ ಮತದಾರ ಕೊಟ್ಟ ಅವಕಾಶವನ್ನು ತಾನು ಏನಾದರೂ ಸರಿಯಾಗಿ ಬಳಸಿಕೊಂಡು ಆ ಕ್ಷೇತ್ರಕ್ಕೆ ಕೆಲಸ ಮಾಡಲಿಲ್ಲವೆಂದರೇ ಮುಂದಿನ ಚುನಾವಣೆಗಳಲ್ಲಿ ತಾನು ಏನಂದರೂ ಗೆಲ್ಲಲಾಗುವುದಿಲ್ಲ.

 

ಇದು ಗಟ್ಟಿ ಆಶದಾಯಕ ಬೆಳವಣಿಗೆ. ಇದರಿಂದಲೇ ಪ್ರಜಾಪ್ರಭುತ್ವ ಬಲಿಷ್ಟವಾಗುವುದು. ಕೇವಲ ಜಾತಿ, ಹಣ, ಸುಳ್ಳು ಭರವಸೆಗಳಿಂದ ಗೆಲ್ಲುವ ಕಾಲ ದೂರವಾಗುವ ದಿನಗಳು ಬರುತ್ತಿವೆ.

 

ಜಗತ್ತು ಅತಿ ಚಿಕ್ಕದಾಗುತ್ತಿರುವ ಪಲಿತಾಂಶವೇ ಇದು.

 

ಹೌದು, ಪ್ರತಿಯೊಬ್ಬರೂ ತಮ್ಮನ್ನು ತಾವು ಹೊರ ಜಗತ್ತಿಗೆ ತೆರೆದುಕೊಳ್ಳುತ್ತಿದ್ದಾರೆ. ಯುವಕರಂತೂ ಅತಿ ವೇಗವಾಗಿ ಹಲವು ವರ್ಷಗಳಿಗಿಂತ ಮುಂದಿದ್ದಾರೆ. ಯುವಕರು ಜಾತಿ ಮತಗಳನ್ನು ಮೀರಿ ಬೆಳೆಯುತ್ತಿದ್ದಾರೆ. ಹಳ್ಳಿ, ರಾಜ್ಯ, ದೇಶಗಳ ಉದ್ಧಾರದ ದೃಷ್ಟಿಯನ್ನು ತಾವುಗಳೇ ಕಂಡುಕೊಂಡಿದ್ದಾರೆ. ಕೇವಲ ಚುನಾವಣ ಮಾತುಗಳಿಂದ ನಮ್ಮಗಳ ಏಳ್ಗೆಯಾಗುವುದಿಲ್ಲ, ಸರ್ಕಾರದ ನಾಯಕ ಸರಿಯಾಗಿದ್ದಾರೆ ಹೇಗೆಲ್ಲಾ ನಮ್ಮ ಜನರ ಜೀವನ ಸುಧಾರಿಸಬಹುದು ಎಂಬುದನ್ನು ಅಕ್ಕ ಪಕ್ಕದ ಊರು, ರಾಜ್ಯ, ದೇಶ ಗಳನ್ನು ನೋಡಿ ತಿಳಿದುಕೊಳ್ಳುತ್ತಿದ್ದಾನೆ.

 

ಸರ್ಕಾರವೆಂಬುದು ನಮ್ಮನ್ನು ನಾವುಗಳು ಕಾಪಾಡಿಕೊಳ್ಳಲು ನಾವೇ ರಚಿಸಿಕೊಂಡಿರುವ ವ್ಯವಸ್ಥೆ.

 

ಜನಗಳೇ ಇಚ್ಛೆಪಟ್ಟು ಆರಿಸಿಕೊಳ್ಳು ತಮ್ಮ ಪ್ರತಿನಿಧಿಗಳ ಸೇವೆ ಹೇಗೆಲ್ಲಾ ಇರಬೇಕು ಎಂಬ ಕನಸು ಪ್ರತಿ ಮತದಾರನದಾಗಿದೆ. ಆದ್ದರಿಂದ ಹಿಂದೆ ಇದ್ದಂತಹ ಚುನಾವಣೆಯ ಜೋರೂ ಇಂದಿಲ್ಲ. ಮತದಾರ ತನ್ನ ಕ್ಷೇತ್ರದ ಪ್ರತಿನಿಧಿಯ ಕೆಲಸಗಳನ್ನು ಅವನ ಬಾಯಿಯಿಂದ ಚುನಾವಣ ಪ್ರಚಾರದ ಭಾಷಣ ಮಾತ್ರದಿಂದ ಕೇಳಿ ತಿಳಿಯಬೇಕಿಲ್ಲ. ಪ್ರತಿಯೊಬ್ಬರಿಗೂ ಆ ವ್ಯಕ್ತಿ ನಾಯಕರ ಬಗ್ಗೆ ಹಲವು ಮೊಲಗಳಿಂದ ಮೊದಲೇ ನಿಜವಾದ ಬಂಡವಾಳ ತಿಳಿದಿರುತ್ತದೆ. ಪಕ್ಷ ಗಳಿಗಿಂತ ವ್ಯಕ್ತಿ ಮುಖ್ಯ ಎಂಬುವ ಕಾಲ ಇದಾಗಿದೆ. ಈ ಪಕ್ಷದಿಂದ ಕತ್ತೆ ನಿಲ್ಲಿಸಿದರೂ (ಪಕ್ಷದ ಮುಖದಿಂದ) ಗೆಲ್ಲುವನು ಎಂಬುವ ಮಾತು ಒಭೀರಾಯನದಾಗಿದೆ.

 

ಇದೇ ಪ್ರಜಾಪ್ರಭುತ್ವದ ಮಹಾನ್ ಸೌಂದರ್ಯ. ದೇಶದ ಪ್ರಗತಿ ಮತ್ತು ಭವಿಷ್ಯತ್ ಉಜ್ವಲವಾಗಿರುತ್ತದೆ ಎನ್ನಲು ಇದಕ್ಕಿಂತ ಇನ್ನು ಏನು ಬೇಕು?

 

ಈಗಂತೂ ಪೊಳ್ಳು ಮಾತಿನ ಮಲ್ಲರು ದಿನಬೆಳಗಾದರೆ ಬೆತ್ತಲಾಗುತ್ತಿದ್ದಾರೆ. ಹಿಂದಿನ ಕಾಲದಂತೆ ಗೆದ್ದರೇ ಮುಗಿಯಿತು ಐದು ವರುಷ ಯಾರು ನನ್ನನ್ನು ಕೇಳುವಂತಿಲ್ಲ ಎನ್ನುವಂತಿಲ್ಲ.

 

ಸಾರ್ವಾಜನಿಕ ಜೀವನದಲ್ಲಿರುವ ಅಸಲಿಯತ್ತು ನಿತ್ಯ ದರ್ಶನವಾಗುತ್ತಿರುತ್ತದೆ. ಯಾರು ಬೂಟಾಟಿಕೆ ಮಾಡುತ್ತಿದ್ದಾರೆ. ಯಾರು ನಿಜವಾದ ಸಮಾಜ ಸೇವೆಯ ಕಳಕಳಿ ಒಂದಿದ್ದಾರೆ ಎಂಬ ವಿಚಾರ ಪ್ರತಿಯೊಬ್ಬ ಪ್ರಜೆಗೂ ತಿಳಿಯುತ್ತಿದೆ.

 

ಹೌದು ಸರ್ಕಾರದ ಯಜಮಾನ ಯೋಗ್ಯವಾಗಿದ್ದರೆ ಅಲ್ಲಿರುವ ಪ್ರತಿಯೊಂದು ಕಾರ್ಯವು ಸುಗಮವಾಗಿ ನಡೆಯುತ್ತದೆ. ಅಭಿವೃದ್ಧಿಯ ಮಾತು ಜನರ ಸಮಸ್ಯೆಯನ್ನು ಪರಿಹರಿಸುವ ನಮ್ಮ ಸಾಮಾನ್ಯ ನಾಯಕನ ಜರೂರತು ಇಂದು ಪಂಚಾಯಿತಿ ಪ್ರತಿನಿಧಿಯಿಂದ ಪ್ರಧಾನ ಮಂತ್ರಿಯವರೆಗೂ ಬೇಕಾಗಿದೆ.

 

ಇಷ್ಟು ದಿನ ನಮ್ಮನ್ನು ಆಳುವ ಪ್ರಭುಗಳ ಅಸಲಿತನ ತಿಳಿದದ್ದಾಗಿದೆ. ಕೇವಲ ಲೂಟಿಕೋರತನವನ್ನೆ ಬಂಡವಾಳ ಮಾಡಿಕೊಂಡು, ರಾಜಕೀಯ ಕ್ಷೇತ್ರವೆಂದರೇ ಹೆಚ್ಚು ಹಣ ಮಾಡುವ ರಂಗವೆಂಬಂತೆ ಮಾಡಿದ್ದಾರೆ.

 

ನಮ್ಮನ್ನು ನಾವೇ ಕೇಳಿಕೊಳ್ಳಬೇಕು. ನಮಗೆ ನಮ್ಮ ನಗರಕ್ಕೆ ಏನು ಬೇಕು? ಹಿಂದೆ ಅಧಿಕಾರದಲ್ಲಿದ್ದ ನಾಯಕನು ಇಲ್ಲಿಯವರೆಗೆ ಯಾವ ರೀತಿಯಲ್ಲಿ ನಮ್ಮ ಊರನ್ನು ಅಭಿವೃದ್ಧಿ ಮಾಡಿದ್ದಾನೆ?

 

ಮತ್ತೆ ಮುಂದಿನ ಚುನಾವಣೆಯಲ್ಲಿ ಅದೇ ಭರವಸೆಯ ಆಸೆಯ ಸುಳ್ಳು ಮಾತನ್ನಾಡುತ್ತಾ ಬಂದರೇ ಸುಮ್ಮನೇ ಎಂದಿಗೂ ಕೂರಬಾರದು.

 

ಬೇರೆಯವರು ತಮ್ಮ ಕ್ಷೇತ್ರವನ್ನು ಆಗೆಲ್ಲಾ ಸುಧಾರಿಸಲು ಸಾಧ್ಯವಾಗಿದ್ದರೇ ಈ ಮಹಾಶಯನ ಕೈಯಲ್ಲಿ ಯಾಕಾಗಿಲ್ಲ? ಈ ಪ್ರಶ್ನೇ ಪ್ರತಿಯೊಬ್ಬರಲ್ಲೂ ಉದ್ಬವಿಸಿದರೇ ಬದಲಾವಣೆಯ ಹೊಸ ಗಾಳಿ ಬೀಸಿದಂತೆ.

 

ಈಗಲೂ ಇನ್ನೂ ನಮ್ಮ ಹಳೇ ಬುದ್ಧಿಯ ನಾಯಕ ಶಿಖಾಮಣಿಗಳು ಹಣವೊಂದಿದ್ದರೇ ಯಾವುದೇ ಚುನಾವಣೆ, ಅಧಿಕಾರವನ್ನು ತಮ್ಮದನ್ನಾಗಿಸಿಕೊಳ್ಳಬಹುದು ಎಂಬ ಸುಳ್ಳು ಭ್ರಮೆಯಲ್ಲಿ ಕಾಯುವಂತಿದ್ದರೇ.. ಅವರಂತಹ ಶತಃ ಮೂರ್ಖರೂ ಮತ್ತೊಬ್ಬರಿಲ್ಲ!

 

ಸೇವೆಗಾಗಿ ಬರುವ ನಾಯಕರಿಗೆ ಮಾತ್ರ ಇಂದಿನ ಪ್ರಜಪ್ರಭುತ್ವದಲ್ಲಿ ಜಾಗ. ಕೇವಲ ಪ್ರಸಿದ್ಧಿ ಪಡೆದಿರುವ ಪಕ್ಷ, ಪ್ರಸಿದ್ಧಿ ಪಡೆದ ಹಳೆ ಮನೆತನದ ಸಾಥ್ ಇದೆ. ಈಗಲೂ ನಾನೇ ಗೆಲ್ಲುವುದು ಎಂಬ ಗೀಳಿದ್ದರೇ, ಹೇಗೆ ಚುನಾವಣೆಯಲ್ಲಿ ಮತದಾರ ಮಕಾಡೆ ಮಲಗಿಸುವನು ಎಂಬುದನ್ನು ಅಲ್ಲಿ ಇಲ್ಲಿ ಈಗಾಗಲೇ ತೋರಿಸಿದ್ದಾನೆ.

 

ಇದು ಕೇವಲ ರಾಜಕೀಯ ರಂಗದ ಮಾತಲ್ಲ. ಪ್ರತಿಯೊಂದು ಕ್ಷೇತ್ರದ ಸಾರ್ವಜನಿಕ ರಂಗದಲ್ಲಿರುವವರ ವ್ಯಕ್ತಿಗತಃ ಎಚ್ಚರಿಕೆ.

 

ಜನ ಸಾಮಾನ್ಯರಿಗೆ ಏನೂ ತಿಳಿಯುವುದಿಲ್ಲ ಎಂದು ಕಣ್ಣು ಮುಚ್ಚಿ ಹಾಲು ಕುಡಿದರೇ ಬದುಕುವುದು ಈಗಂತೂ ಸಾಧ್ಯವಿಲ್ಲ.

 

ಇದರಿಂದಲೇ ಹಿಂದಿಗಿಂತ ಇಂದು ಸಾರ್ವಜನಿಕವಾಗಿ ಪ್ರಸಿದ್ಧರಾಗುವುದು ಮತ್ತು ಆ ಸ್ಥಾನವನ್ನು ಕೊನೆಯವರೆಗೂ ಕಾಪಾಡಿಕೊಳ್ಳುವುದು ಸುಲಭವಲ್ಲ. ಒಮ್ಮೆ ಸಿಕ್ಕಿದ ಉನ್ನತ ಸ್ಥಾನ ಮಾನವನ್ನು ಜೀವ ಇರುವವರೆಗೂ ಉಳಿಸಿಕೊಳ್ಳಲು ನಿತ್ಯವು ಅಷ್ಟೆ ಪರಿಶ್ರಮಪಡಬೇಕಾಗುತ್ತದೆ.

 

ಇದಕ್ಕೆ ಈಗಾಗಲೇ ನಮ್ಮ ಸುತ್ತ ಮುತ್ತ ಹತ್ತು ಹಲವಾರು ಉದಾಹರಣೆಗಳಿವೆ.

 

ಆದ್ದರಿಂದ ಯಾರೊಬ್ಬರೂ ಮೈಮರೆತು ಏನನ್ನು ಮಾಡುವಂತಿಲ್ಲ. ಪ್ರತಿಯೊಂದು ಚಲನೆಗೂ ಬೆಲೆ ಕಟ್ಟಲೇಬೇಕು.

 

ಸುಖ ಸುಮ್ಮನೇ ಹೆಸರು ಮಾಡಲು ಇಂದು ಸಾಧ್ಯವಿಲ್ಲ. ಯಾಕೆಂದರೇ ಪ್ರತಿಯೊಂದನ್ನು ಸಾಮಾನ್ಯ ಪ್ರಜೆ ಹಾಗೆಯೇ ಒಪ್ಪಿಕೊಳ್ಳುವುದಿಲ್ಲ. ಪ್ರಶ್ನೇ ಮಾಡುವ ಮಹಾತ್ತರ ಜವಾಬ್ದಾರಿನ್ನು ತನ್ನದಾಗಿಸಿಕೊಂಡಿದ್ದಾನೆ.

 

ಇದು ಹೀಗೆ ಮುಂದುವರಿಯುವುದು.. ಯಾಕೆಂದರೇ ನಾವಿರುವುದು ಮಾಹಿತಿ ಯುಗದಲ್ಲಿ... ಇದು ಹೀಗೆ ನಡೆದರೇ ಎಲ್ಲಿ ಹೋಗಿ ನಿಲ್ಲುವುದೋ.. ಬದಲಾವಣೆಯಂತೂ ಜಾರಿಯಲ್ಲಿದೆ. ಯಾರು ಯಾರು ಹೇಗೆಲ್ಲಾ ತಮ್ಮ ಸ್ಥಾನ ಕಾಪಾಡಿಕೊಳ್ಳುವರೋ ಬಲ್ಲವರಿಲ್ಲ.

 

ತಮ್ಮ ತಮ್ಮ ಜಾಗದಲ್ಲಿರುವವರು ತಮ್ಮ ತಮ್ಮ ಕಾಯಕವನ್ನು ತಪ್ಪದೇ ಸರಿಯಾಗಿ ಮಾಡಿದರೇ ಪರಶಿವನೇ ಮೆಚ್ಚುವನು. ಇನ್ನೂ ಸಾಮಾನ್ಯ ಜನಗಳ ಮಾತೇನು?

 

ಕಾಯಕವೇ ಕೈಲಾಸವಲ್ಲವೇ?

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ