ಗುರುವಾರ, ಏಪ್ರಿಲ್ 27, 2017

ಓದು ಪುಸ್ತಕ. ಸುತ್ತು ದೇಶ!

ದೇಶ ಸುತ್ತು ಅಥವಾ ಕೋಶ ಓದು ಎಂದು ಹಿರಿಯರು ಹೇಳಿದ್ದು ಸತ್ಯ.

ಪ್ರಪಂಚವನ್ನು ಪೂರ್ತಿ ಸುತ್ತಲು ಈ ಒಂದು ಜನುಮ ಸಾಕಾಗುವುದಿಲ್ಲ. ಹಾಗೆಯೇ ಒಂದು ಜೀವಮಾನದಲ್ಲಿ ಜಗತ್ತಿನಲ್ಲಿರುವ ಎಲ್ಲ ಪುಸ್ತಕಗಳನ್ನು ಓದಲು ಸಹ ಆಗುವುದಿಲ್ಲ.

ಎರಡು ಸಹ ಈ ಹುಲು ಮಾನವನಿಗೆ ಪೂರ್ಣವಾಗಿ ದಕ್ಕಲಾರದ ಸಂಗತಿಗಳು.

ಆದರೇ ಈ ಎರಡನ್ನು ಪಡೆಯಲು ತನ್ನ ಜೀವನ ಪೂರ್ತಿ ಪ್ರಯತ್ನಿಸುತ್ತ ಇರಬಹುದು.

ಈ ಜಗತ್ತು. ಈ ಭೂಮಿಯ ನಾಲ್ಕನೇ ಒಂದು ಬಾಗವೇ ವಾಸಿಸಲು ಯೋಗ್ಯವಾಗಿದ್ದು. ಮಿಕ್ಕಿದ್ದೇಲ್ಲಾ ನೀರಿನಿಂದ ವ್ಯಾಪಿಸಿದೆ. ಆ ಒಂದು ಭಾಗವನ್ನು ಸಹ ತಾನು ಪೂರ್ಣವಾಗಿ ಅನುಭವಿಸಲು ಸಾಧ್ಯವಿಲ್ಲ.  ಅದು ಕಷ್ಟವಾದ ಕೆಲಸ.

ಇಡೀ ಗೋಲವೇ ವೈವಿಧ್ಯಮಯವಾದ ಜೀವಜಲ ಸಂಪತ್ತಿನ ಆಗರವಾಗಿದೆ. ಸಾವಿರಾರು ವಿಧ ವಿಧ ಸಂಸ್ಕೃತಿ ಸಂಪತ್ತಿನ ತೊಟ್ಟಿಲಾಗಿದೆ. ಇಲ್ಲಿರುವ ವಿಷಯ ವಿಶೇಷಗಳನ್ನು ತಿಳಿದುಕೊಳ್ಳುವುದು ಸುಲಭದ ವಿಷಯವಲ್ಲ. ಓದು ಒಂದು ಮಾದ್ಯಮವಷ್ಟೇ. ಕೆಲವೊಂದು ವಿಷಯಗಳನ್ನು ಅನುಭವದ ಮೊಲಕ ನೋಡಿ ತಿಳಿಯಪಡಿಸಿಕೊಳ್ಳಬಹುದು. ಇನ್ನೂ ಕೆಲವನ್ನು ಆ ಜಾಗ, ವ್ಯಕ್ತಿ, ಜೀವ, ಜಲ, ಸಂಸ್ಕೃತಿ ಸಂಪತ್ತಿನೋಡನೆ ಬೆರೆತು ತನ್ನದಾಗಿಸಿಕೊಳ್ಳಬಹುದು.

ಮನುಷ್ಯನ ಆಯಸ್ಸು ಅತಿ ಕಡಿಮೆ. ಅಯಸ್ಸಿನ ಅಂದಾಜಿನಲ್ಲಿ ಪ್ರತಿಯೊಂದನ್ನು ಕಲಿತು, ತಿಳಿದು ತನ್ನದಾಗಿಸಿಕೊಳ್ಳುವುದು ತನ್ನ ನಿಲುವಿಗೆ ನಿಲುಕುವಂತದಲ್ಲ.

ಎಲ್ಲವನ್ನು ಗೊತ್ತು ಎಂದು ಹೇಳುವುದಕ್ಕೆ ಎಂದಿಗೂ ಆಗುವುದಿಲ್ಲ. ಹಾಗೆ ಹೇಳಿದ ಮರುಕ್ಷಣವೇ ಗೊತ್ತಿಲ್ಲದ ಅನುಭವಿಸಿರದ ಅಕೋಟಿ ಸಂಗತಿಗಳು ರೊಪ್ಪನೇ ತನ್ನ ಬುದ್ಧಿಗೆ ಕಾಣದಂತಾಗುತ್ತದೆ.

ಓದಿನ ಮಜಾ ಅನುಭವಿಸಿದವನೆಗೆ ಗೊತ್ತು. ಇದೊಂದು ಯಾರು ಹೇಗೆ ದೋಚದಂತ ವಿಧ್ಯೆ. ಕಡಿಮೆ ಖರ್ಚಿನಲ್ಲಿ ತನಗೆ ಬೇಕೆನಿಸಿದ್ದನ್ನು ಓದುತ್ತಾ ಬೇರೆಯವರ ಅನುಭವಗಳನ್ನು, ಭಾವನೆಗಳನ್ನು, ಬೇರೆಯ ಜನರ ಜಾಗದ ವಾಸನೆಯನ್ನು ಆಹ್ಲಾದಿಸಬಹುದು.

ಇದೊಂದು ತುಂಬ ಸುಲಭವಾದ ಪಯಣ ಅನಿಸುತ್ತದೆ. ಕುಳಿತಲ್ಲಿಯೇ ಪ್ರಪಂಚದ ಯಾವುದೋ ಗೊತ್ತಿರದ ದೂರದ ಪ್ರದೇಶಕ್ಕೆ ಹೋಗಿಬರಬಹುದು. ಕುಳಿತಲ್ಲಿಯೇ ಕಾಲದ ಯಾವ ಹಂಗಿಲ್ಲದ ಭೂತ ಭವಿಷ್ಯತ್ ನಲ್ಲಿ ಒಮ್ಮಲೇ ಸಂಚರಿಸಬಹುದು.

ಬರಹಗಾರನ ಅನುಭವವನ್ನು ತಾನು ರುಚಿಸಬಹುದು. ಬರಹಗಾರ ಕಂಡುಂಡ ಅನುಭವ ಭಾವನೆಗಳನ್ನು ತಾನು ಸ್ವತಃ ಅನುಭವಿಸಬಹುದು.

ತಾನೇ ನಿಬ್ಬೇರಗಾಗಿ ಯಾವುದೋ ಊರಿನ ಯಾವುದೋ ಮನೆಯ ಯಾರದೋ ವ್ಯಕ್ತಿಯ ಕಷ್ಟ, ನೋವು, ನಲಿವಿಗೆ ಸಾಕ್ಷಿಯಾಗಬಹುದು.

ಲೇಖಕನ ಅಭಿವ್ಯಕ್ತಿಗೆ ತಾನು ದ್ವನಿಯಾಗಬಹುದು. ಇದೇ ಓದಿನ ಜಾದು.

ತನ್ನ ಮನದ ತುಡಿತ-ಮೀಡಿತಕ್ಕೆ ಆ ಬರಹಗರನ ಪುಸ್ತಕ ಸಾಲುಗಳು ದ್ವನಿಯೇನೋ ಅನಿಸುತ್ತದೆ. ತನ್ನ ಮನದ ಚಿಂತನೆಯ ಭಾವನೆಯ ಆಸೆಗೆ ಕಾವ್ಯಗಾರನ ಚಿತ್ರಿತ ಪಾತ್ರ ಅಸರೆಯಾಗುತ್ತದೆ. ಓದುತ್ತಾ ಓದುತ್ತಾ ತಾನು ಯಾವುದೋ ಕಾಲದ ಕಲ್ಫಿತ ಘಟನೆಯಲ್ಲಿ ಒಂದಾಗಿ ಪಾತ್ರಗಳ ಒಳ ನೋಟಗಳಿಗೆ ಬೆಳಕಾಗಿ ಸಂತೃಪ್ತಿಯ ನಿಟ್ಟುಸಿರಾಗಿ ಕರಗಿ ಹೋಗಿಬಿಡಬಹುದು.

ಕಾಡುವ ಪುಸ್ತಕಗಳು ಪ್ರತಿಯೊಬ್ಬ ಓದುಗನನ್ನು ಜೀವನ ಪರಿ ಕಾಯುತ್ತವೆ.

ಎಂದು ಮರೆಯಲಾರದ ಪುಸ್ತಕಗಳು ಎಂದೆಂದಿಗೂ ಒಳ್ಳೆಯ ಸ್ನೇಹಿತರೇ ಸರಿ. ಒಂದೊಳ್ಳೆಯ ಪುಸ್ತಕ ಒಳ್ಳೆಯ ವ್ಯಕ್ತಿಯೇ ಸರಿ.

ಪುಸ್ತಕಗಳಿಲ್ಲದ ಮನೆ ಸ್ಮಶಾನಕ್ಕೆ ಸಮ ಎಂಬ ಗಾದೆಯ ಮಾತಿದೆ.

ಓದುವ ಅಭ್ಯಾಸ ಮನುಷ್ಯನಿಗೆ ದೇವರು ಕೊಟ್ಟ ಮಹಾನ್ ವರವೇ ಸರಿ.

ಇಂದು ಸಂತೋಷಕ್ಕಾಗಿ ಓದುವ ಮಂದಿ ತುಂಬ ಕಮ್ಮಿಯೇ. ವಿದ್ಯಾಭ್ಯಾಸಕ್ಕಾಗಿ ಮಾತ್ರ ಓದು. ವಿದ್ಯೇ ಕೆಲಸಕ್ಕಾಗಿ  ಮಾತ್ರ ಎಂಬ ಕಾಲದಲ್ಲಿ ನಾವೆಲ್ಲಾ ಜೀವಿಸುತ್ತಿದ್ದೇವೆ.

ಸಿಲಬಸ್ ಬಿಟ್ಟು ಮತ್ತೇನೂ ಓದಬೇಡ ನನ್ನ ಕಂದಾ ಎಂದು ಮುದ್ದಿನ ಅಮ್ಮಂದಿರು ಉಪದೇಶ ಮಾಡುವ ಕಾಲಘಟ್ಟದಲ್ಲಿರುವ ಸಂದರ್ಭದಲ್ಲಿ ಓದಿನ ಗಮ್ಮತ್ತನ್ನು ಹೇಗೆ ಹೇಳುವುದು.

ಓದುವುದು ಟೈಂ ವೇಷ್ಟ್ ಎನ್ನುವವರಿದ್ದಾರೆ.

ಅಂಗೈಯಲ್ಲಿಯೇ ಜಗತ್ತನ್ನು ಬ್ರೌಸ್ ಮಾಡುತ್ತಿರುವಾಗ ಕಥೆ ಕಾದಂಬರಿ ಕಾವ್ಯಗಳ ಜರೋರತು ಏಕೆ ಮಗಾ? ಎನ್ನುತ್ತಿದೆ ನಮ್ಮ ಹೈಟೆಕ್ ಹುಡುಗರು.

ಬೇಂದ್ರೆ - ಕುವೆಂಪು ಸಿಲಬಸ್ ಗೆ ಮಾತ್ರ ಸೀಮಿತವಾಗಿದ್ದಾರೆ.

ಬರಹಗಾರರೆಂದರೇ ಸಿಲಬಸ್ ಪುಸ್ತಕಗಳಿಗೆ ಬರೆಯುವವರು ಮಾತ್ರ ಎಂದು ಭಾವಿಸಿರುವ ಕಾನ್ವೇಂಟ್ ಜಮಾನದ ಈ ಸಮಯದಲ್ಲಿ ಕನ್ನಡದ ಪುಸ್ತಕ ಲೋಕದಲ್ಲಿ ಸಂಚರಿಸುವವರು ಯಾರು ಎಂದು ಕೇಳುವಂತಾಗಿದೆ.

ಕೇವಲ ಸಂತೋಷಕ್ಕಾಗಿ ಓದುವ ಯುವಕರನ್ನು ಬೆರಳೆಣಿಕೆಯಲ್ಲಿ ಎಣಿಸುವಂತಾಗಿದೆ.

ಆದರೂ ಪುನಃ ಹಿಂದಿನಂತೆ ಕೈಯಲ್ಲಿ ಪುಸ್ತಕ ಹಿಡಿದು ಓದುವ ಪದ್ಧತಿ ಪುನಃ ಪುನವರ್ತಿತವಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಯುವ ಬರಹಗಾರರ ಪುಸ್ತಕಗಳ ಮಾರಾಟ ಜೋರಾಗುತ್ತಿರುವುದು ಖುಶಿಯ ಸಂಗತಿ.

ಒಲ್ಡ್ ಇಸ್ ಗೋಲ್ಡ್. ಏನೇ ಇದ್ದರೂ ಕೈಯಲ್ಲಿ ಪುಸ್ತಕ ಹಿಡಿದು ಹಾಳೆಯನ್ನು ತಿರುವುತ್ತಾ ಮೈಮರೆತು ಪುಸ್ತಕದ ಹುಳುವಾಗುವಲ್ಲಿನ ಸಂತೋಷ ಮತ್ತೊಂದಿಲ್ಲ!

ಓದುತ್ತಾ ಓದುತ್ತಾ ಜಗತ್ತನ್ನೇ ಒಂದು ಸುತ್ತು ಹಾಕಿಬರೋಣ ಎನ್ನುತ್ತಿದೆ ಹೃದಯ. ಏಯ್ ಅದು ಬೇಡ ಬಾ ಜಗತ್ತನ್ನೆ ಹಾರುತ್ತಾ , ನಡೆಯುತ್ತಾ ಒಂದು ಸುತ್ತಿ ಹಾಕಿ ಬರೋಣ ಎನ್ನುತ್ತಿದೆ ಮನ.

ಎರಡೋ ಸಹ ನಮ್ಮ ನಮ್ಮ ಶಕ್ತಿ, ಸಮಯಕ್ಕೆ ಸಂಬಂಧಿಸಿದ್ದು! ಆಸೆ ಆಕಾಶದಷ್ಟಿದ್ದರೂ ಕೇಳುವವರು ಯಾರು?

ಸಮಯ ಸಿಕ್ಕಾಗೆಲ್ಲಾ ಅಷ್ಟು ಇಷ್ಟು ಈಡೇರಿಸಿಕೊಳ್ಳಬೇಕು.

ಓದು ಪುಸ್ತಕ. ಸುತ್ತು ದೇಶ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ