ಬುಧವಾರ, ಅಕ್ಟೋಬರ್ 12, 2016

ಮನಸ್ಸು ಅವಳು ಊರು ನೆನಪು

ಅವತ್ತೇ ಅನಿಸಿತ್ತು ಇಷ್ಟು ಚೂಸಿಯಾಗಿ ಸಿಕ್ಕಿದ ಪ್ರೀತಿ ಕೊನೆಯವರೆಗೂ ಇರುವುದಾ? ಇದು ಯಾಕಾದರೂ ನನ್ನ ಮನಸ್ಸಿನಲ್ಲಿ ಅಂದು ಹಾಗೆ ಪಾಸ್ ಆಯಿತೋ? ಗೂತ್ತಿಲ್ಲ. ಸಿಕ್ತ್ ಸೇನ್ಸ್ ಎಂಬುದು ಒಮ್ಮೊಮ್ಮೆ ಹೀಗೆ ಕೆಲಸ ಮಾಡುತ್ತದೆ.

ಆದರೇ ಕಳೆದ ನಾಲ್ಕುವರೆ ವರುಷಗಳ ನೆನಪು ಇನ್ನು ಇಂದಿಗೂ ಹಸಿಯಾಗಿದೆ. ಅಂದು ಎಲ್ಲವೂ ಸುಂದರ. ಪ್ರತಿ ಘಳಿಗೆಯು ಏನೋ ಹೊಸತನ. ಅವಳೊಬ್ಬಳು ಜೊತೆ ಇದ್ದರೇ ಏನೂ ಬೇಕಾದರೂ ಜಯಿಸುವೆನು ಎಂಬ ದೈರ್ಯ.ಮುಂಜಾನೆಯ ಸೂರ್ಯನ ಕಿರಣಗಳನ್ನು ಕಾಣುವಂತಾ ಮನಸ್ಸು. ಯಾವಾಗ ಬೆಳಕಾಗುವುದೋ..  ಬೆಳ್ಳಂ ಬೆಳಗ್ಗೆಯಲ್ಲಿ ಯಾವಾಗ ನಮ್ಮೂರಿನ ಬಸ್ ನ ಮೊದಲ ಹಾರ್ನ್ ಕಿವಿಗೆ ಬೀಳುವುದೋ. ನಾನು ಕಾಲೇಜು ಎಂದುಕೊಂಡು.. ಎದ್ದು, ಬಿದ್ದು ಸಿದ್ಧವಾಗುವುದು.

ನಾನು ಪ್ರತಿದಿನ ಸೂರ್ಯ ಹುಟ್ಟುವುದಕ್ಕೂ ಮೊದಲು ಕಾಲೇಜಿಗೆ ಸಿದ್ಧವಾಗುತ್ತಿದ್ದ ರಭಸಕ್ಕೆ ಅಮ್ಮನೇ ದಂಗಾಗಿದ್ದಳು.

ಏನ್ ಮಗಾ ಎಷ್ಟು ಕಟ್ಟುನಿಟ್ಟಾಗಿ ಓದಿನ ಬಗ್ಗೆ ಪ್ರೀತಿ ಇಟ್ಟುಕೊಂಡಿದೆ. ಬಿಡು ಮುಂದೊಂದು ದಿನ ಊರಿಗೆ ದೊಡ್ಡ ಅಧಿಕಾರಿಯಾಗಿ ಬಂದೇ ಬರುತ್ತಾನೆ. ಎಂದು ಮನದಲ್ಲಿಯೇ ಸಂತಸಪಟ್ಟಿದ್ದಳು ಅನಿಸುತ್ತದೆ.

ಬೇಡವೆಂದರೂ ರಾತ್ರಿ ಉಳಿಸಿದ ಹಾಲನ್ನು ಬಿಸಿ ಮಾಡಿ ಕಾಫಿ ಪೌಡರ ಮಿಕ್ಸ್ ಮಾಡಿ ನನಗೆ ಎಂದೇ ಕಾಫಿ ಮಾಡಿಕೊಡುತ್ತಿದ್ದುದು. ಎಲ್ಲೋ ಉಳಿಸಿ, ಹಾಗೆಯೇ ಮಡಿಸಿದ ಒದ್ದೆ ಒದ್ದೆಯ ಹತ್ತರ ಎರಡು ನೋಟುಗಳನ್ನು ನನ್ನ ಎದೆ ಮೇಲಿನ ಜೋಬಿಗೆ ನಿತ್ಯ ಇಡುತ್ತಿದ್ದುದು.

ಅದು ತಾಯಿ ಪ್ರೀತಿ! ಈ ಪ್ರೀತಿ ಒಂದೇ ನಾನು ಈಗಲೂ ಜೀವಂತವಾಗಿ ಇರುವಂತೆ ಮಾಡಿರುವುದು.

ಅಂದು ಇದನ್ನು ಅರ್ಥ ಮಾಡಿಕೊಳ್ಳುವ ವಯಸ್ಸು ನನ್ನದಾಗಿರಲಿಲ್ಲ.

ಬಸ್ ನಲ್ಲಿ ಕುಳಿತರೂ ವರುಷವಾದಂತೆ. ಯಾವಾಗ ಈ ಡ್ರೈವರ್ ಬರುವನೋ? ಯಾವಾಗ ಹೊರಡುವನೋ? ಎಂದು ಪೂರ್ತಿ ಸಿಟ್ಟಲ್ಲಿ ಕಿಟಕಿಯಾಚೆ ನಿಂತು ಟೀ ಕುಡಿಯುತ್ತಿರುವವನ್ನು ಮನದಲ್ಲಿಯೇ ಶಪಿಸುತ್ತಿದ್ದೆ.

ಮುಂಜಾನೆಯ ಸಮಯ ಓದುವುದಕ್ಕೆ ಹೇಳಿ ಮಾಡಿಸಿದ ಸಮಯವಂತೆ. ಆಗ ಏನೂ ನೆನಪು ಮಾಡಿಕೊಂಡರು, ಓದಿದರೂ ಮನಸ್ಸಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವುದಂತೆ. ಆದರೇ ಆ ಸಮಯದಲ್ಲಿ ಅವಳ ನೆನಪಲ್ಲದೇ ಇನ್ನು ಏನೂ ಮನದಲ್ಲಿರಲಿಲ್ಲ. ಆದಕ್ಕೆ ಇರಬೇಕು ಈಗಲೂ ಅವಳ ಪ್ರತಿ ಚಲನೆಯು ಹಾಗೆಯೇ ಪ್ರತಿಭಾರಿ ಮೈ ಮನ ತಟ್ಟುತ್ತದೆ.

ಬಸ್ ಸ್ವಲ್ಪ ಸ್ವಲ್ಪ ಸೌಂಡ ಮಾಡಿಕೊಳ್ಳುತ್ತಾ ಹಳ್ಳವನ್ನು ಶಕ್ತಿಯಿಲ್ಲದ ಹುಡುಗನಂತೆ ಉಸಿರು ಬಿಗಿ ಇಟ್ಟುಕೊಂಡು ಏರುತ್ತಿದ್ದರೇ.. ಆ ದಡದ ಮೇಲಿರುವ ನನ್ನ ಹುಡುಗಿಯ ಊರಿನ ಒಂದೊಂದೇ ನೋಟ ಕಂಡು ಎದೆಯ ಬಡಿತ ಏರುತ್ತಿತ್ತು. ಅವಳು ಬಂದಿರುತ್ತಾಳೆ. ಅವಳಿಗೂ ನನ್ನ ಕಾತರ ಇದ್ದೇ ಇರುತ್ತದೆ. ಎಂದುಕೊಂಡು ನಿತ್ಯ ಖುಷಿಯಾಗುತ್ತಿದ್ದೆ.

ಇಂದು ರಾತ್ರಿಯೇ ಮೇಸೆಜ್ ಮಾಡಿದ್ದಳು. ಯಾಕೋ ಕಣೋ ನಿನ್ನ ಹೆಚ್ಚು ಮಿಸ್ ಮಾಡಿಕೊಂಡಂಗೇ ಆಗ್ತಾ ಇದೆ. ನಾಳೆ ನಿನ್ನ ಇಷ್ಟದ ಚೋಡಿದಾರ ಹಾಕಿಕೊಂಡು ಬರುತ್ತೇನೆ.. ಅಂದಿದ್ದಳು. ನಾನು ಲವ್ ಯು ಎಂದು ಹಾಗೆಯೇ ನಿದ್ದೆಗೆ ಜಾರಿದ್ದೆ.

ಬಸ್ ಅಂತೂ ಎಡಕ್ಕೆ ತಿರುಗಿ ಅಲ್ಲಿಯೇ ಬಂದ ಬಸ್ ಸ್ಟಾಪ್ ನಲ್ಲಿ ನಿಂತಿತು.

ಕಣ್ಣರಳಿಸಿ ಮುಂದಿನ ಬಾಗಿಲನ್ನೂ ನೋಡಿದ್ದೇ ಬಂತು.

ಇಲ್ಲಿ ಬಸ್ ಸ್ವಲ್ಪ ಹೊತ್ತು ನಿಲ್ಲುವುದು ಮಾಮೂಲು. ಯಾಕೆಂದರೇ ಇದು ಮೊದಲನೇಯ ಊರು. ಇಲ್ಲಿಯು ಪುನಃ ಪ್ರತಿಯೊಬ್ಬರೂ ಟೀ-ತಿಂಡಿ ಸೇವಿಸುತ್ತಾರೆ. ಅದು ಇದು ಎಂದು  ಸಣ್ಣ ಕುಶೋಲಹಪರಿ ಪರಸ್ಪರ ನಡೆಯುತ್ತದೆ. ಮೂರು ಊರುಗಳಿಗೂ ಇದು ಒಂದೇ ಬಸ್ ಸ್ಟಾಪ್. ಜನಗಳು ಅಕ್ಕಪಕ್ಕದ ಎರಡು ಊರುಗಳಿಂದಲೂ ಮುಂಜಾನೆಯೇ ನಡೆದುಕೊಂಡು ಬರುತ್ತಾರೆ. ಪಾಪ ಬರಲಿ ಜನ. ಏನೂ ಐದು ಹತ್ತು ನಿಮಿಷ ಲೇಟ್ ಆದ್ರೆ ಪರವಾಗಿಲ್ಲ. ಚಿಹಳ್ಳಿಯಿಂದ ಚಚ್ಚಿದಾರಯಿತು ಎಂಬ ಕರುಣೆ ಈ ಬಸ್ಸಿನ ಡ್ರೈವರ್ ನದು.

ಆದರೇ ನನ್ನ ಹುಡುಗಿಯ ಸುಳಿವೇ ಇಲ್ಲ..!

ಏನೇ ಲೇಟ್ ಎಂದರೂ ಐದು ನಿಮಿಷಕ್ಕೂ ಜಾಸ್ತಿ ಲೇಟ್ ಮಾಡಿಲ್ಲ ಯಾವತ್ತು.

ಏನಾಗಿರಬಹುದು? ಮೇಸೆಜ್ ಮಾಡಲಾ.. ಕಾಲ್ ಮಾಡಲಾ ಎಂಬ ಕನಪ್ಯೂಸನ್ ನಲ್ಲಿ ಚಟಪಟಿಸಿದೆ.

ಹಿಂದಿನ ಸೀಟ್, ಮುಂದಿನ ಸೀಟ್ ನಲ್ಲಿ ನಮ್ಮ ಊರಿನವರ ದಂಡೇ ದಂಡು. ಸ್ವಲ್ಪ ಸಂಕೋಚ, ಹೆಚ್ಚು ಢವಢವ ಎದೆಯ ಬಡಿತದಲ್ಲಿ ಅವಳ ಮನೆಯಿರುವ ದಾರಿಯ ಕಡೆಗೆ ಬಲ ಬದಿಯ ಕಿಟಿಕಿಯಿಂದ ಹಾಗೆಯೇ ಕಣ್ಣು ಹಾಯಿಸಿದೆ.

ನೋ!  ಅವಳ ಸಪ್ಪಳವೇ ಇಲ್ಲ.

ಆಗಲೇ ಕಂಡಕ್ಟರ್ ರೈಟ್ -ರೈಟ್ ಹೇಳುತ್ತಿದ್ದಾನೆ... ಕಾಲ್ ಮಾಡಲು ಧೈರ್ಯ ಬರದೇ ಮೇಸೆಜ್ ಕುಟ್ಟಿದೆ.  ಮೇಸೆಜ್ ಸೆಂಡ್ ಆಗಿದ್ದು ಕನಪರ್ಮ್ ಮಾಡಿಕೊಂಡೆ ಹ್ಯಾಪು ಮೊರೆ ಮಾಡಿಕೊಂಡೆ.

ಬಸ್ ಹಾಗೆಯೇ ಬಲಕ್ಕೆ ಒರಳಿತು. ಜಾಲಿ ಮುಳ್ಳುಗಳಿರುವ ಸೆರಗಿನಲ್ಲಿ ತಿರುಗಿ ಮುಂದಿನ ಹಳ್ಳದೊಳಕ್ಕೆ ಇಳಿಯಲಾರಂಬಿಸಿತು. ದಾರಿ ದೂರವಾಯಿತು, ಅವಳು ಇನ್ನು ಹತ್ತಿರವಾದಳು.

ಪುನಃ ಆಸೆಯ ಕಣ್ಣಿನಿಂದ ಜನ ಜಂಗುಳಿಯ ಮಧ್ಯದಲ್ಲಿ ಪುನಃ ಹಿಂದಿನ ಬಸ್ ಗ್ಲಾಸ್ ನಲ್ಲಿ ಕಾಣದ ದಾರಿಯ ಕಡೆ ಬಿಟ್ಟ ಕಣ್ಣಲ್ಲಿ ನೋಡಿದೆ. ಹಿಂದಿನ ಸೀಟನಲ್ಲಿದ್ದ ದೊಡ್ಡ ಮೀಸೆಯ ಈರಜ್ಜ ಬೊಚ್ಚು ಬಾಯಲ್ಲಿ ನಕ್ಕಿದ್ದು ಮಾತ್ರ ಲಕ್ಷಣವಾಗಿ ಕಾಣಿಸಿತು.

ಮನದಲ್ಲಿ ತಳಮಳ. ಮುಂದಿನ ಸ್ಟಾಪ್ ನಲ್ಲಿ ಹಿಳಿದು ಹೋಗವುದೇ ಎಂದು ಒಂದು ಮನಸ್ಸು ಕೇಳಿದರೇ.. ಇನ್ನೊಂದು ಮನಸ್ಸು ಈರಜ್ಜ ನ ನಗುವನ್ನು ನೆನಪಿಸಿ ಸುಮ್ಮನಿರು ಎಂದಿತು.

ಈ ಹುಡುಗಿಯರೇ ಹೀಗೆ ಅನಿಸುತ್ತದೆ. ಯಾವಾಗಲೂ ಹತ್ತಿರವೇ ಇರುತ್ತೇವೆ ಅನ್ನುತ್ತಾರೆ. ನೀನೇ ನನ್ನ ಜೀವ ಅನ್ನುತ್ತಾರೆ. ಮೀಸ್ ಮಾಡಿಕೊಳ್ಳುತ್ತಿದ್ದೇನೆ ಅನ್ನುತ್ತಾರೆ. ನೀನು ಬೇಕು ಅನ್ನುತ್ತಾರೆ. ಆದರೇ ಈ ರೀತಿ ಹೇಳದೆ ಕೇಳದೇ ಕೈ ಕೊಡುತ್ತಾರೆ.

ಹುಡುಗಿಯರಿಗೆ ಏನೂ ಗೊತ್ತು ಗಂಡಸರ ದುಃಖ?

ಪುನಃ ಪುನಃ ಮೊಬೈಲ್ ಕಡೆ ಬಗ್ಗಿ ಬಗ್ಗಿ ನೋಡಿದ್ದೆ ಬಂತು.

ನೂ ರಿಪ್ಲೇ...!

ಎಷ್ಟು ಹೊತ್ತಿಗೆ ಕಾಲೇಜು ತಲುಪುವೇನೋ ಅನ್ನಿಸಿತು. ಈ ಬಸ್ , ಈ ರೋಡ್ ದೇವರಿಗೆ ಪ್ರೀತಿ ಅನಿಸಿತು. ಯಾಕೋ ಮುಂಜಾನೆಯ ಆಹ್ಲಾದತೆಯೇ ಇಲ್ಲವೇನಿಸಿತು. ಸೂರ್ಯ ಮಂಕಾಗಿದ್ದಾನೆ ಅನಿಸಿತು.

ಪುರದಲ್ಲಿ ಬಸ್ಸು ನಿಂತಾಗ ಒಂದು ಚಿಕ್ಕ ಹರಕೆಯನ್ನು ಲಕ್ಷ್ಮಿ ನರಸಿಂಹಸ್ವಾಮಿಯಲ್ಲಿ ಹೊತ್ತುಕೊಂಡೆ. ಕಾಲೇಜು ತಲುಪುವುದರಲ್ಲಿ ನನ್ನವಳ ಮೇಸೆಜ್ ಬರಲಿ. ನಾನು ಮುಂದಿನ ಶನಿವಾರ ಅವಳ ಜೊತೆಯಲ್ಲಿ ನಿನ್ನ ದರುಶನ ಮಾಡೇ ಮಾಡುವೆನೆಂದು!

ಕಾಲೇಜು ಅಂದರೇ ಕಾಲೇಜೇ. ಅಲ್ಲಿ ಎಂದೂ ಮರೆಯಲಾರದ ಕ್ಷಣಗಳಿರುತ್ತವೆ. ಗೆಳೆಯ ಗೆಳತಿಯರ ಜೊತೆಯಲ್ಲಿ ಕೊಡಿ ಕಲಿಯುವ ಪರಿಸರವಿರುತ್ತದೆ. ನಾವುಗಳು ನಮ್ಮನ್ನು ಅತ್ಯುತ್ತಮರನ್ನಾಗಿ ಮಾಡಿಕೊಳ್ಳುವ ಅವಕಾಶವಿರುತ್ತದೆ. ಕಲಿಯುವುದಕ್ಕೆ ವಿಫುಲವಾದ ವಾತವರಣವಿರುತ್ತದೆ. ಇಂಥ ಸರಸ್ವತಿಯ ನೆಲೆಯಾದ ಕಾಲೇಜಿಗೆ ನಿತ್ಯ ನಮಸ್ಕಾರ ಮಾಡಿ ಹೆಜ್ಜೆ ಇಡಬೇಕು.

ಪ್ರತಿಯೊಬ್ಬರ ಬದುಕಿಗೆ ಹೊಸ ಮಾರ್ಗ ತೋರುವ ನೆಲೆಬೀಡು ನಮ್ಮ ಶಿಕ್ಷಣ ಸಂಸ್ಥೆಗಳು.

ಮನವಿಲ್ಲದ ಮನಸ್ಸಿನಲ್ಲಿ ಬಸ್ಸನಿಂದ ಇಳಿದು ಮೊದಲು ಮಾಡಿದ್ದು ೯೮೦೪೨೦೩೨೦೧ ನಂಬರ್ ಗೆ ಕಾಲು. ಕಾಲ್ ಕನಕ್ಟ್ ಆಗುವುದಕ್ಕೂ ತಾತ್ಸರ ಮಾಡುತ್ತಿದೆ ಇಂದು. ಇದು ಹೀಗೆ ಕಷ್ಟ ಕಾಲದಲ್ಲಿಯೇ ಆಳಿಗೊಂದು ಕಲ್ಲು ಅನ್ನುವ ರೀತಿಯಲ್ಲಿ. ಒಂದು, ಎರಡು ರೀಂಗ್ ಆಗಲು ಶುರುವಾಯಿತು. ಎದೆಯಲ್ಲಿ ಢವಢವ ಬಡಿತ. ನಾಲ್ಕನೇ ರೀಂಗ್ ಗೆ ಕಾಲ್ ಪೀಕ್ ಆಯ್ತು. ಆದರೇ ದ್ವನಿ ತೀರ ಅಪರಿಚಿತವೇನಿಸಿತು. ದೂಸರಾ ಮಾತನಾಡದೇ ಕಾಲ್ ಕಟ್ ಮಾಡಿದೆ.

ಅಲ್ಲ ಏನಾಯ್ತು ಇವಳಿಗೆ? ನೆನ್ನೆ ಸರೀ ರಾತ್ರಿಯವರೆಗೂ ಟಚ್ ಲ್ಲಿ ಇದ್ದವಳಿಗೆ. ಬೆಳಕು ಹರಿಯುವುದರಲ್ಲಿ ಸುದ್ಧಿಯೇ ಇಲ್ಲ! ಮೊಬೈಲ್ ನ್ನು ಒಂದು ಕ್ಷಣ  ಬಿಟ್ಟಿರಲಾರದವಳು. ಹೀಗೆ ಮತ್ತೊಬ್ಬರೂ ರೀಸಿವ್ ಮಾಡುತ್ತಿದ್ದಾರೆ ಎಂದರೇ...? ಏನೂ ಅರ್ಥವಾಗಲಿಲ್ಲ.

ಯಾಕೋ ತಣ್ಣಗೆ ಮನಸ್ಸಿಗೆ ಶಾಕ್ ಆಯಿತು.  ಭಾರವಾದ ಹೆಜ್ಜೆಯನ್ನು ಹಾಕಿಕೊಂಡು ಕಾಲೇಜು ಮೆಟ್ಟಿಲನ್ನು ಹತ್ತುತ್ತಿದ್ದಂತೆ ಸುಭಾಷ್ ಸಿಕ್ಕಿದ. ಅವನು ಬಾರೋ ಕ್ಯಾಂಟಿನ್ ಗೆ ಹೋಗೋಣ ಇನ್ನು ೩೦ ನಿಮಿಷ ಇದೆ ಎಂದ. ಆದರೆ ನಾನು ಅದು ಕಿವಿಗೆ ಬಿಳಿಸಿಕೊಳ್ಳದ ರೀತಿಯಲ್ಲಿ ಇನ್ನೊಂದು ಸ್ಟೆಪ್ ಇಟ್ಟೆ. ಹಿಂದಿನಿಂದ ಸರಿಯಾಗಿ ಗುದ್ದಿದ.  ಆಗ ಎಚ್ಚರವಾದಂತಾಗಿ ಹಾಯ್ ಎಂದೇ.

ಪುನಃ ಅವನೇ ಹೇಳಿದ. ಸಾಯೇಬ್ರ್ ಮೂಡ್ ಯಾಕೋ ಸರಿ ಇಲ್ಲಾ!

ಗೊತ್ತಾಯಿತು ಬಿಡು. ನೀ ಒಂಟಿಯಾಗಿ ಬಂದಾಗಲೇ ಅಂದುಕೊಂಡೆ! ಯಾಕೋ ನಿನ್ನ ಹುಡುಗಿ ನಿನ್ನ ಜೋತೆ ಬರಲಿಲ್ಲವಾ? ಒಂದೇ ಮಾತಲ್ಲಿ ’ಇಲ್ಲಾ’ ಎಂದೇ. ಏಯ್ ಬಿಡು ಗುರು. ಏನೋ ಕೆಲಸ ಇರುತ್ತೇ ಅದಕ್ಕೆ ಬಂದಿಲ್ಲ.  ಇಷ್ಟು ಚಿಕ್ಕ ವಿಷಯಗಳಿಗೆಲ್ಲ ಹುಡುಗರು ಬೇಜಾರು ಮಾಡಿಕೊಳ್ಳಬಾರದು. ಹುಡುಗಿಯ ಒಂದು ಮೇಸೆಜು, ಒಂದು ಕಾಲ್ ಬರದಿದ್ದರು ಜಗತ್ತೇ ಮುಳುಗಿದ ರೀತಿಯಲ್ಲಿ ವರ್ತಿಸುತ್ತಿರಾ ಕಣ್ರೋ .. ಎಂದು ಚಿಕ್ಕ ವೇದಾಂತ ಹೇಳಿ - ಬಾ ಈಗ ಕ್ಯಾಂಟಿನಗೆ ಹೋಗೋಣ. ನನಗೆ ಸಿಕ್ಕಪಟ್ಟೆ ಹಸಿವು ಎಂದ.

ಆದರೇ ನನ್ನ ಮನಸ್ಸು ಇನ್ನೂ ಅವಳ ಊರುಬಿಟ್ಟು ಬಂದಿರಲಿಲ್ಲ... ಯಾವುದೋ ಕೆಟ್ಟ ಘಟನೆಗೆ ಮುನೂಚನೆಯೆಂಬಂತೆ.

ಬುಧವಾರ, ಸೆಪ್ಟೆಂಬರ್ 14, 2016

ಕಾವೇರಿ ನೀರು ಹಸನಾಗಿ ಹರಿದು ಅಳಿಸಲಿ

ಕಳೆದ ವಾರ ಕರಾಳ ದಿನಗಳನ್ನು ಬೆಂಗಳೂರು ಮತ್ತು ಕನ್ನಡ ನಾಡು ಕಂಡಿತು. ಅಕ್ಷರಶಃ ಬೆಂಗಳೂರು ದಗದಗಿಸಿ ಬೆಂಕಿಯಲ್ಲಿ ಉರಿದು ಹೋಯಿತು.  


ಕೋರ್ಟ ಆದೇಶದಂತೆ ನೀರನ್ನು ಕಳೆದುಕೊಂಡೆವು. ಆದರ ನೋವು ಇನ್ನು ಆರುವ ಮೊದಲೇ..ಬೆಂಗಳೂರು ಶಾಂತಿಯ ಉದ್ಯಾನ ನಗರಿ ಎಂಬ ಹೆಸರು ಕಳಚಿ ಬೀಳುವಂತೆ ಶಾಂತಿಯ ಹಸಿರು ವಾತವರಣವನ್ನೇ ಹೊಗೆಯಲ್ಲಿ ತೂರಿಬಿಟ್ಟೇವು.  


ಅಮಾಯಕ ಸಾಮಾನ್ಯ ಜನಗಳಿಗೆ ಭಯವೊಂದು ಬಿಟ್ಟು ಮತ್ತೇನೂ ತೋಚದಂತಾಗಿತ್ತು.  


ಕೆಲಸವೆಂದು ಮನೆಯಿಂದ ಹೊರಗಡೆ ಹೋದವರು ಸಂಜೆ ಯಾವುದೇ ಅಪಾಯವಿಲ್ಲದೇ ವಾಪಸ್ಸು ಬರುವರೋ ಇಲ್ಲವೋ ಎಂಬಂತೆ ಮನೆಯಲ್ಲಿದ್ದವರೆಲ್ಲಾ ತಳಮಳದಲ್ಲಿ ಬೆಂದು ಹೋಗಿದ್ದೇ ಬಂತು.  


ಮನುಷ್ಯನಷ್ಟು ಕೆಟ್ಟ ಪ್ರಾಣಿ ಮತ್ತೊಬ್ಬನಿಲ್ಲ! ಮನುಷ್ಯನತ್ವ ಎಂಬುದು ಎಲ್ಲಿದೇ? ಮನುಷ್ಯನ ನಾಗರೀಕತೆ ಬೆಳೆದಂತೆ ತನ್ನ ಸೂಕ್ಷ್ಮತೆಯನ್ನು ಮರೆಯುತ್ತಾನೆಂಬುದನ್ನು ಕೆಲವೇ ಕೆಲವು ದುಷ್ಟ ಜನಗಳಿಂದ ಪುನಃ ನಿರೂಪಿಸಿದಂತಾಗಿದೆ.  


ಹಿ0ದಿನಿಂದಲೂ ಮಾನವ ಪ್ರತಿಯೊಂದನ್ನು ಹೋರಾಟದಿಂದಲೇ ಗೆದ್ದುಕೊಂಡಿದ್ದಾನೆ. ಆಗಂಥಾ ಹಿಂಸೆಯ ಮಾರ್ಗವನ್ನು ಹಿಡಿದು ನಡೆಯುವುದು ಮನುಷ್ಯ ಮಾತ್ರರು ಮೆಚ್ಚುವ ದಾರಿಯಲ್ಲ!  


ಮುಂದುವರಿದ ಟೆಕ್ನಾಲಜಿ ನಮ್ಮ ಮನೋಭಾವನೆಯನ್ನು ವಿಸ್ತಾರ ಮಾಡಬೇಕು. ಆದರೇ ಯಾಕೋ ಸಂಕೋಚತತೆಗೆ ಒಡ್ಡಿಕೊಂಡು ಹೆಚ್ಚು ಹೆಚ್ಚು ಸಂಕೀರ್ಣನಾಗುತ್ತಿದ್ದೇವೆ.  


ಸಾಮಾಜಿಕ ತಾಣಗಳಲ್ಲಿ ಯಾರೋ ಏನೂ ಗೊತ್ತಿಲ್ಲದವನು ಏನೋ ಪೋಸ್ಟ್ ಮಾಡಿದ ಎಂದು ಕೊಂಡು ನಮ್ಮ ನಮ್ಮ ನಡುವೆಯೇ ಕೊಚ್ಚುವ ಕೊಲ್ಲುವ ಸಂಸ್ಕೃತಿಗೆ ಇಳಿಯುತ್ತಿರುವುದು ತುಂಬ ವಿಪರ್ಯಾಸ.  


ಯಾವುದಕ್ಕೆ ಮತ್ತು ಯಾರಿಗೆ ಮಹತ್ವವನ್ನು ಕೊಡಬೇಕು ಎಂಬುದನ್ನೇ ನಾವುಗಳು ಮರೆತುಬಿಟ್ಟಿದ್ದೇವೆ. ಯಾವುದು ಮುಖ್ಯ ಯಾವುದು ಅಮುಖ್ಯ ಎಂಬ ಪರಾಂಶೆ ಮಾಡುವುದನ್ನೇ ಬಿಟ್ಟುಬಿಟ್ಟಿದ್ದೆವೆ.
 


ಹೆಚ್ಚು ಲೈಕ್ ಆಗಿದ್ದೆಲ್ಲಾ ಸತ್ಯವಾದದ್ದು. ಹೆಚ್ಚು ಹೆಚ್ಚು ಶೇರ್ ಆಗಿದ್ದೇ ನಿಜವಾದ ಘಟನೆ ಎಂದುಕೊಂಡುಬಿಟ್ಟಿದ್ದೇವೆ. ವೇಗವಾಗಿ ರೀಯಾಕ್ಟ್ ಮಾಡುತ್ತಿರುವುದೇ ನಮ್ಮ ಜೀವಂತಿಕೆಯಾಗಿದೆ. ಟೋಟಲಿ ನಮ್ಮತನವನ್ನೇ ನಾವು ಮರೆಯುತ್ತಿದ್ದೇವೆ.  


ಸರ್ಕಾರವೇ ಎಲ್ಲದಕ್ಕೂ ಹೊಣೆ. ಎಲ್ಲದಕ್ಕೂ ಸರ್ಕಾರವೇ ಕಾರಣ. ಈ ರೀತಿಯ ಚಿಂತನೆ ಮುಖ್ಯ ಮಾಡುತ್ತಿರುವುದು ಮತ್ತು ರಾಜಕೀಯವಾಗಿ ಪ್ರತಿಯೊಬ್ಬರೂ ಚಿಂತಿಸುತ್ತಿರುವುದು. ಲಾಭ ನಷ್ಟಗಳ ಮೆಲಾಟದಲ್ಲಿ ಮನುಷ್ಯತ್ವವನ್ನೇ ಗಾಳಿಗೆ ತೂರುತ್ತಿದ್ದೇವೆ.  


ಒಕ್ಕೊಟಗಳ ಭಾರತದಲ್ಲಿ ರಾಜ್ಯ ರಾಜ್ಯಗಳ ನಡುವೆ ಗಡಿಗಳನ್ನು ನಿರ್ಮಿಸಿಕೊಂಡು ವೈರತ್ವವನ್ನು ಸಾಧಿಸಲು ಹೊರಡುತ್ತಿರುವುದು ದೊಡ್ಡ ವಿಪರ್ಯಾಸ!  


ಭಾಷೆ, ಬಣ್ಣ, ರಾಜ್ಯ, ನೆಲ, ಜಲ ಈ ಎಲ್ಲಾದಕ್ಕೂ ಮಿಗಿಲಾದದ್ದು ಮನುಷ್ಯತ್ವ ಮತ್ತು ಒಳ್ಳೆತನ ಎಂಬುದನ್ನು ಮರೆತಿರುವುದು. ನಾವುಗಳು ಅರಿತವರು ಎಂದು ಹೇಳಿಕೊಳ್ಳುವುದಕ್ಕೇ ನಾಚಿಕೆಯಾಗುತ್ತದೆ.  


ಎರಡು ರಾಜ್ಯದ ನಾಯಕರುಗಳು ಕುಳಿತು ಬಗೆಹರಿಸಿಕೊಳ್ಳಬಹುದಾದಂತಹ ಸಮಸ್ಯೆಗಳನ್ನು ಎರಡು ರಾಜ್ಯದ ಜನಗಳು ಹೇಗೆ ನ್ಯಾಯ ಒದಗಿಸಬಲ್ಲರು?  


ಇಂಥ ಸಮಯಗಳಲ್ಲಿ ಮೊದಲು ಜನಗಳಿಗೆ ಸರ್ಕಾರದ ನಾಯಕರುಗಳಿಂದ ಸ್ಪಷ್ಟ ಸಂದೇಶ ರವಾನೆಯಾಗಬೇಕು. ಸರ್ಕಾರವೇ ಜನರಗಿಂತ ವೇಗವಾಗಿ ರೀಯಾಕ್ಟ್ ಮಾಡಬೇಕು.  


ಕೋರ್ಟ ನ್ಯಾಯಾದೇಶ ಈ ಎಲ್ಲದಕ್ಕೂ ಮೊದಲು ಒಬ್ಬ ಉತ್ತಮ ನಾಗರಿಕನಾಗಿ ಎರಡು ರಾಜ್ಯದ ಮುಖ್ಯ ಮಂತ್ರಿಗಳು ಸಾಧಕ ಬಾಧಕಗಳನ್ನು ತೆರೆದ ಕಣ್ಣುಗಳಿಂದ ನೋಡಬೇಕು.  


ಇಲ್ಲಿರುವವರು ಜನರೇ ಅಲ್ಲಿರುವವರು ಜನರೇ. ಅವರಿಗೂ ಅನ್ಯಾಯವಾಗಬಾರದು ಇವರಿಗೂ ಅನ್ಯಾಯವಾಗಬಾರದು. ಇರುವ ಒಂದೇ ದೇಶದಲ್ಲಿ ಯಾಕೇ ಈ ಕಚ್ಚಾಟ? ಯಾಕೆ ಸಮಾನ ಸಮಾನತೆಯ ನಡಾವಳಿ ಇಲ್ಲಿ ಪ್ರದರ್ಶಿಸಬಾರದು?  


ಸುಖ ಸುಮ್ಮನೇ ರೋಚ್ಚಿಗೆದ್ದು ಬೆಂಕಿ ಹಚ್ಚಿದರೇ ಈ ಸಮಸ್ಯೆ ಎಂದು ಬಗೆಹರಿಯುವುದಿಲ್ಲ!  


ಇಲ್ಲಿ ನೊಂದು ಬೆಂದು ಹೋಗುವುವರು ಪುನಃ ಜನ ಸಾಮಾನ್ಯರೇ. ರೈತರಿಗೆ ನೀರು ಬೇಕು. ಜನಸಾಮನ್ಯರಿಗೂ ಕುಡಿಯುವ ನೀರು ಬೇಕು. ಪ್ರತಿಯೊಬ್ಬರು ಬದುಕಲೇ ಬೇಕು. ಬದುಕಬೇಕೆಂದು ಇನ್ನೊಬ್ಬರನ್ನು ತುಳಿದು ಎಂದಿಗೂ ಬದುಕಬಾರದು.  


ಒಂದೇ ಮಾತರಂ ಎಂದು ಜಪಿಸಿದ ನಾಡಲ್ಲೇ ದೊಂಬಿ ದಬ್ಬಾಳಿಕೆ? ನಮ್ಮ ನೆಲದಲ್ಲೆ ನಮ್ಮ ನಮ್ಮನ್ನು ಕಾಯಲು ಸೇನೆ, ಪೊಲೀಸ್! ನಾವುಗಳು ಆರಾಮಾಗಿ ಓಡಾಡುವ ಓಣಿಗಳಲ್ಲಿ ಗನ್, ಲಾಟಿಗಳ ಸಪ್ಪಳ!  


ನಾವೇನೂ ಯುದ್ಧ ಭೂಮಿಯಲ್ಲಿದ್ದೇವೆ?



ಕಾವೇರಿಯ ಒಟ್ಟು ಉದ್ದ ೮೦೨ ಕೀ.ಮಿ. ರಾಜ್ಯದಲ್ಲಿ ಕಾವೇರಿ ಜಲಾಯನ ಪ್ರದೇಶ ೩೪ ಸಾವಿರ ಕೀ.ಮಿ ಇದ್ದರೆ.. ತಮಿಳುನಾಡು ೪೪ ಸಾವಿರ ಕೀ.ಮಿ ಹೊಂದಿದೆ.


ಕಾವೇರಿ ನದಿಯ ನೀರು ಹಂಚಿಕೆಯ ವಿಚಾರ ೧೮೯೨ ರಿಂದ ಶುರುವಾಗಿ ಇಂದಿನವರೆಗೂ ಸಾಗುತ್ತಲೆ ಬರುತ್ತಿದೆ. ಮಳೆಯಾಗಿ ನೀರು ತುಂಬಿ ಹರಿದರೇ ಯಾರಿಗೂ ಸಮಸ್ಯೆ ಇಲ್ಲ. ಮಳೆ ಕೈ ಕೊಟ್ಟ ಕಾಲಕ್ಕೆ ಈ ಎಲ್ಲಾ ಸಮಸ್ಯೆ.


ರಾಜರ ಕಾಲದಲ್ಲಿ ವಿಶ್ವೇಶ್ವರಯ್ಯವನವರ ಯೋಜನೆಯಂತೆ ಎರಡುವರೆ ಕೋಟಿ ರೂಪಾಯಿಯಲ್ಲಿ ಕನ್ನಂಬಾಡಿಯ ಕಟ್ಟೆಯನ್ನು ಕಟ್ಟಿದರು.

ಅಣೆಕಟ್ಟು ಕಟ್ಟಿ ಮಳೆ ಇಲ್ಲದ ಕಾಲಕ್ಕೆ ನೀರು ಇರಲಿ ಎಂದು ಇಟ್ಟುಕೊಂಡರೇ ಅದನ್ನೇ ಬಿಡಿ ಎಂದು ಪಿಳ್ಳೆ ನೆವ ತೆಗುಯುತ್ತಿದೆ ನೆರೆ ರಾಜ್ಯ.




ತಮಿಳುನಾಡಿನಲ್ಲಿ ಕಾಣುವ ರಾಜಕೀಯ ಇಚ್ಛಾ ಶಕ್ತಿ ನಮ್ಮ ರಾಜ್ಯದಲ್ಲಿರುವ ರಾಜಕೀಯ ನಾಯಕರುಗಳಿಗೆ ಬರಬೇಕು. ನಿತ್ಯ ಸಮಸ್ಯೆಯಾಗಿರುವ ಈ ವಿಷಯಕ್ಕೆ ಪೂರ್ಣ ಪ್ರಮಾಣದ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.






ಪ್ರತಿ ವರುಷ ಕೋರ್ಟ್ ಖರ್ಚಿಗೆ ೨೦ ಸಾವಿರ ಕೋಟಿಗೂ ಹೆಚ್ಚು ಹಣ ಹರಿಸಿದರೂ ನೀರಿನ ಜಗಳಕ್ಕೆ ಅಂತ್ಯ ಕಾಣಿಸಲು ಸಾಧ್ಯವಾಗಿಲ್ಲ!



ಹತ್ತು ಹಲವಾರು ವರುಷಗಳ ನೀರಿನ ಹಂಚಿಕೆಯ ಹಗ್ಗ ಜಗ್ಗಾಟವನ್ನು ನಿಲ್ಲಿಸಬಾರದೆ. ತಿಳಿದವರು ಮತ್ತು ಅಧಿಕಾರದ ಗದ್ದುಗೆಯಲ್ಲಿರುವ ಎರಡು ರಾಜ್ಯದ ಮುಖ್ಯಸ್ಥರು ಇದರ ಬಗ್ಗೆ ಶಾಂತವಾಗಿ ಯೋಚಿಸಬಾರದೆ

ರಾಜ್ಯದಲ್ಲಿರುವ ಜನತೆಗೆ ಸರ್ಕಾರದಿಂದ ಸಿಗಬೇಕಾದದ್ದು ರಕ್ಷಣೆ ಮತ್ತು ಶಾಂತಿಯ ಬಾಳ್ವೆ. ಸಾಮಾನ್ಯ ನಾಗರಿಕರ ಸಾವಲ್ಲ!





ಕಾವೇರಿ ನೀರು ಹಸನಾಗಿ ಹರಿದು ಎರಡು ರಾಜ್ಯದ ಜನಮನಗಳ ನೀರಿನ ಆಹಾಕಾರವನ್ನು ಅಳಿಸಲಿ !

ಸೋಮವಾರ, ಆಗಸ್ಟ್ 8, 2016

ಸ್ವಂತ ಕಾಲ ಮೇಲೆ

ಹೆಚ್ಚು ತಿಳಿದುಕೊಂಡಂತೆ ಬೇರೆಯವರೊಂದಿಗಿನ ಅವಲಂಬನೆ ಕಡಿಮೆಯಾಗುತ್ತದೆ ಅನಿಸುತ್ತದೆ.

 

ಚಿಕ್ಕ ವಯಸ್ಸಿನ ಮಕ್ಕಳ ನಡವಳಿಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಹಾಲುಗಲ್ಲದ ಹಸುಗೂಸು ಪೂರ್ತಿ ಅಮ್ಮನನ್ನೇ ಅವಲಂಭಿಸಿರುತ್ತದೆ. ಅಮ್ಮ ಕುಡಿಸಿದಾಗ ಮಾತ್ರ ಹೊಟ್ಟೆ ತುಂಬುವುದು. ಅಮ್ಮ ಹೆತ್ತಿಕೊಂಡು ಹೋದರೆ ಮಾತ್ರ ತಾನು ಇರುವ ತನ್ನ ಜಾಗ ಬದಲಿಸುವುದು. ಇಲ್ಲ ಎಂದರೇ ಏನೇಂದರೂ ಏನಾಗುವುದಿಲ್ಲ.

 

ಇದು ಏನನ್ನು ಸೂಚಿಸುತ್ತದೆ ಎಂದರೇ ತನ್ನ ಕೈಯಲ್ಲಿ ಆಗದ, ಸಾಮರ್ಥ್ಯಕ್ಕೆ ಸಿಲುಕದವನ್ನು ತನ್ನ ಸುತ್ತಲಿರುವ ತಾಯಿ, ತಂದೆ ಮತ್ತು ಕುಟುಂಬದವರಿಂದ ಪಡೆಯುವೆವು.

 

ಮಗು ತನ್ನ ಸುತ್ತಲಿನಲ್ಲಿ ನಡೆಯುವ ಚಿಕ್ಕ ಚಿಕ್ಕ ಘಟನೆ, ನೋಟ, ಮಾತು, ರುಚಿಗಳ ಮೊಲಕ ತನ್ನ ಜಾಣ್ಮೆಯನ್ನು ಬೆಳೆಸಿಕೊಳ್ಳುತ್ತದೆ. ಹಾಗೆಯೇ ತಾನು ಬೇರೆಯವರೊಂದಿಗಿನ ತನ್ನ ಅವಲಂಬನೆಯನ್ನು ಕಳಚಿಕೊಳ್ಳುತ್ತಾ ಹೋಗುತ್ತದೆ.

 

ಹೆತ್ತ ಅಮ್ಮನಿಗೆ ಆಶ್ಚರ್ಯವಾಗುತ್ತದೆ. ಯಾಕೋ ದಿನ ದಿನಕೆ ಮಗ/ಮಗಳು ತನ್ನಿಂದ ದೂರವಾಗುತ್ತಿದ್ದಾರೆ ಅನಿಸುತ್ತದೆ. ಪ್ರತಿಯೊಂದಕ್ಕೊ ನನ್ನ ಅಣತಿಯನ್ನು ಕಾಯಿತ್ತಿದ್ದ ಕೂಸುಗಳು ಇವೆಯೇ ಏನೂ ಅನಿಸುತ್ತದೆ.

 

ಹತ್ತಿರವಿದ್ದರೂ ದೂರವಿರುವಂತೆ ಮನಸ್ಸಿಗೆ ಫೀಲ್ ಆಗುತ್ತದೆ.

 

ಆದರೇ ಪ್ರತಿಯೊಬ್ಬರೂ ತನ್ನ ಮಕ್ಕಳು ಬೇರೆಯವರಿಗೆ ಹೊರೆಯಾಗಿ ಜೀವನ ನಡೆಸುವುದನ್ನು ಎಂದಿಗೂ ಇಷ್ಟಪಡುವುದಿಲ್ಲ.

 

ಮಕ್ಕಳು ತಮ್ಮ ದೇಹ ಬುದ್ಧಿ ಬೆಳೆದಂತೆ ತಮ್ಮ ದಾರಿಯನ್ನು ತಾನು ಕಂಡುಕೊಳ್ಳಲಿ ಎಂಬುದೇ ಜಗತ್ತಿನ ಎಲ್ಲಾ ಜೀವಿಗಳ ಆಶಯ.

 

ನೀವು ನೋಡಿರಬಹುದು ಕಾಲೇಜು ಮುಗಿಯಿತು ಎಂದರೇ ಸಾಕು. ಏಯ್ ಮಗಾ ಮೊದಲು ನಿನ್ನ ಕಾಲ ಮೇಲೆ ನೀನು ನಿಲ್ಲುವಂತಾಗು. ಯಾವುದಾದರೂ ಕೆಲಸ ಹುಡುಕಿಕೋ ಅನ್ನುತ್ತಾರೆ.

 

ದೊಡ್ಡವರಾಗುತ್ತಾ ಆಗುತ್ತಾ ನಾವುಗಳು ಸರ್ವ ಸ್ವತಂತ್ರರಾಗಲು ಶ್ರಮಿಸುವುವೆವು. ರೆಕ್ಕೆ ಬಂದ ಹಕ್ಕಿಯ ರೀತಿಯಲ್ಲಿ ತನ್ನದೆಯಾದ ಬದುಕನ್ನು ಕಟ್ಟಿಕೊಳ್ಳಲು ತೊಡಗುವೆವು. ಹೆತ್ತವರ ಮಡಿಲಲ್ಲಿ ಬೆಳೆದು ದೊಡ್ಡವರಾಗಿ ಹೊಸ ತೀರದ ಹುಡುಕಾಟಕ್ಕೆ ದಾಪುಗಾಲು ಇಡುವೆವು.

 

ಇದು ಕೇವಲ ಮನುಷ್ಯ ಜಾತಿಯಲ್ಲಿ ಮಾತ್ರವಲ್ಲ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯ ಪಾಡು ಇದು. ತಾನು ಯಾರ ಮೇಲು ಡಿಪೆಂಡ್ ಆಗಿಲ್ಲ ಎಂಬುದನ್ನು ನಿರೂಪಿಸುವ ಚಾಲೇಂಜು.

 

ಇದೆ ಜೀವನದ ಮರ್ಮ ತಾನು ತನ್ನವರಿಂದ ಕಲಿತ ಪಾಠವನ್ನು ಸ್ವತಂತ್ರವಾಗಿ ಬಳಸುವುದು. ತಾನೇ ಎಲ್ಲದಕ್ಕೂ ಹೊಣೆಯಾಗಿ ಜೀವನದ ಅತ್ಯಂತ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು.

 

ತೆಗೆದುಕೊಂಡ ನಿರ್ಧಾರಗಳು, ಮಾಡಲು ತೊಡಗುವ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸುವುದೇ ನಮ್ಮಲ್ಲಿ ನಾವು ಮುಂದಿನ ಯೋಜನೆಗಳ ಪ್ಲಾನ್ ಗೆ ಬಹು ದೊಡ್ಡ ಆಸರೆ.

 

ಮನುಷ್ಯ ಸಂಘ ಜೀವಿ. ಅವಲಂಬನೆ ಮನುಷ್ಯನಿಗೆ ಅನಿವಾರ್ಯವಾದರೂ ಅದರಿಂದ ಬಿಡುಗಡೆಯನ್ನು ಅನುಭವಿಸುವುದರಲ್ಲಿಯೇ ಪ್ರತಿಯೊಬ್ಬರೂ ಸಂತಸಪಡುವವರು.

 

ತಾನೇ ಗಳಿಸಿದ ಪ್ರತಿಯೊಂದು ಯಶಸ್ಸು ಅತಿ ಹೆಚ್ಚು ಸಂತೋಷದಾಯಕವಾಗಿರುತ್ತದೆ.

 

ಜಗತ್ತಿನಲ್ಲಿ ಸರ್ವ ಸ್ವತಂತ್ರರಾಗಿ ಸಾಧಿಸಿದ ಸಾಧನೆಗಳನ್ನು ಸಾಧಕರನ್ನು ಸಮಾಜ ಬಹು ಮನ್ನಣೆಯಿಂದ ಗಮನಿಸುತ್ತದೆ.

 

ಇದು ಕೇವಲ ಕುಟುಂಬ, ನೆರೆಹೊರೆಗೆ ಸೀಮಿತಾಗಿಲ್ಲ. ಯಾವುದೇ ಕಛೇರಿ, ನೌಕರಿ, ದೇಶಾಂತರದ ಯೋಜನೆಗಳು ಹೀಗೆ ಪ್ರತಿಯೊಂದು ಹೆಚ್ಚು ಹೊರೆಯಿಲ್ಲದೇ ಮತ್ತು ಬೇರೆಯವರ ಸಹಾಯವಿಲ್ಲದೇ ಗಳಿಸಿದ ಗೆಲುವಿಗೆ ಬೆಲೆ.

 

ಗುರಿಗೆ ಗುರು ಬೇಕು.. ಶಿಷ್ಯ ಗುರುವಿನ ಮಾರ್ಗದರ್ಶನ ಪಡೆಯಲೇಬೇಕು. ಆದರೇ ಗುರುವನ್ನೇ ಜೊತೆಯಲ್ಲಿ ಯಾವಾಗಲು ಇಟ್ಟುಕೊಳ್ಳಬಾರದು.

 

ಇಂದಿನ ದಿನದಲ್ಲಿ ಏಕಲವ್ಯನಂತವನಿಗೆ ಹೆಚ್ಚು ಬೆಲೆ.

 

ಯಾರು ಬಹುಬೇಗ ಬೇಕಾದ ವಿಷಯಗಳನ್ನು ತಿಳಿದುಕೊಂಡು ಒಂಟಿಯಾಗಿ ಕೊಟ್ಟ ಕೆಲಸವನ್ನು ಮುಗಿಸುವುವರೋ ಅವರಿಗೆ ಎಲ್ಲಾ ನೌಕರಿಗಳಲ್ಲಿಯು ಮೊದಲ ಆಧ್ಯತೆ.

 

ಹಾಗಾಗಿ ಬಾಲ್ಯದಿಂದಲೇ ಕಲಿಯುವ ತಿಳಿಯುವ ತಿಳುವಳಿಕೆ, ಅವಲಂಬನೆಯಿಲ್ಲದೆ ಹಿಡಿದ ಕೆಲಸಗಳನ್ನು ಮಾಡಿ ಮುಗಿಸುವ ವ್ಯವಹಾರ ಬುದ್ಧಿ ನಮ್ಮ ಮಕ್ಕಳಿಗೆ ಬೇಕಾಗಿದೆ.

 

ನೀವು ಕೇಳಿರಬಹುದು. ಜೀವನ ಸಂಗಾತಿ ಎನಿಸಿಕೊಂಡ ಜೀವನ ಗೆಳತಿಯೇ ನಾನು ಸ್ವತಂತ್ರವಾಗಿ ಬಾಳಬೇಕು... ಅದಕ್ಕಾಗಿ ನಾನು ಕೆಲಸ ಮಾಡುವೆ. ನಾನು ನನ್ನ ಕಾಲ ಮೇಲೆ ನಿಲ್ಲಬೇಕು. ಹೀಗೆಲ್ಲಾ ಹೇಳುವವರು.

 

ಹೌದು ಇಂದು ಯಾರು ಯಾರನ್ನು ಯಾವುದಕ್ಕಾಗಿಯು ಆಶ್ರಯಿಸುವ ಕಾಲವಲ್ಲ. ಎಲ್ಲರೂ ತಮ್ಮದೇಯಾದ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಮಟ್ಟಿಗೆ ಜಾಣ ಜಾಣೆಯಾರಾಗಿದ್ದಾರೆ.

 

ಎಲ್ಲಾ, ಕಾಲಯಾ ತಸ್ಮಯ ನಮ:!

 

ಶುಕ್ರವಾರ, ಜೂನ್ 24, 2016

ಟಾಪರ್ ಸುಮಿತ್ರಾ

ಅವಳ ಹೆಸರು ಸುಮಿತ್ರಾ. ನಾನು ಅವಳನ್ನು ಮೊದಲು ನೋಡಿದ್ದು ಪಿ.ಯು.ಸಿ ಯಲ್ಲಿ ಅನಿಸುತ್ತೇ.

ಮೊನ್ನೇ ಅವಳನ್ನು ಪೇಸ್ ಬುಕ್ ನಲ್ಲಿ ಕಂಡು ಅಚ್ಚರಿಯಾಯಿತು. ಅದೇ ಮುಖ ಆ ದಿನಗಳ ನಗು ಇನ್ನು ಮರೆಯಾಗಿಲ್ಲ.

ಇದೆ ಅನಿಸುತ್ತೇ ಒಂದಷ್ಟು ಜನಗಳು ಏನೇ ಏನು ಎಂದರೂ ಬದಲಾಗಲಾರರು.

ಕಾಲ ಮಾತ್ರ ಬದಲಾಗಬೇಕು ಅಷ್ಟೇ!

ಬಹಳ ದಿನಗಳ ಅನಂತರ ಸಿಕ್ಕಿದ ಗೆಳತಿಯನ್ನು ಏನಮ್ಮಾ ಎಲ್ಲಿ ಹೋಗಿದ್ದೇ? ಎಂದು ಅದೇ ಗೆಳೆತನದ ರೀತಿಯಲ್ಲಿ ಕೇಳಿದೇ.

ಅಂದಿನ ಆ ಸುಮಿತ್ರಾ ಇಂದು ಸುಮಿತ್ರಾ ಸಾಗರ್ ಆಗಿ ದೂರದ ಅಮೆರಿಕಾದಲ್ಲಿ  ವಾಸಿಸುತ್ತಿದ್ದಾರಂತೆ.  ಸಾಕಷ್ಟು ಬದಲಾವಣೆಯ ಗಾಳಿ ಉಂಟಾಗಿದೆ ಎಂಬುದು ಚಾಟ್ ಮೂಲಕ ತಿಳಿಯಿತು. ಮುದ್ದಾದ ಎರಡು ಮಕ್ಕಳು ಮತ್ತು ಸಾಪ್ಟವೇರ್ ಸಂಗಾತಿಯ ಜೊತೆಯಲ್ಲಿ ಚೆನ್ನಾಗಿಯೇ ಇದ್ದೀನಿ ಎಂದು ಸ್ಮೈಲ್ ಐಕಾನ್ ಮೊಲಕ ತಿಳಿಸಿದಳು.

ಇನ್ನೊಮ್ಮೆ ಚಾಟ್ ಮಾಡೋಣ ಬಾಯ್ ಎಂದು ಲಾಗೌಟ್ ಆದಳು.

ಪೇಸ್ ಬುಕ್ ಈ ರೀತಿಯಲ್ಲಿ ಉಪಯೋಗವಾಗುವುದು. ಸುದ್ಧಿಯೇ ಇಲ್ಲದೇ ಕಳೆದು ಹೋದ ಗೆಳೆಯರು, ಗೆಳೆಯತಿಯರು, ನೆರೆಹೊರೆಯವರು ದೂರದವರು ಪ್ರತಿಯೊಬ್ಬರನ್ನು ಒಂದಲ್ಲಾ ಒಂದು ಸಮಯದಲ್ಲಿ ದುತ್ತನೇ ಪ್ರತ್ಯಕ್ಷ ಮಾಡಿಸುತ್ತದೆ.

ಈ ಸುಮಿತ್ರಾ ಪ್ರಥಮ ಪಿ.ಯು ದಿಂದ ಇಂಜಿನಿಯರಿಂಗ್ ಮುಗಿಯುವವರೆಗೂ ಜೊತೆಯಲ್ಲಿಯೇ ಓದುತ್ತಾ ಪರಿಚಯದ ಹುಡುಗಿಯಾಗಿದ್ದರು.

ಓದುವ ವೇಳೆಯಲ್ಲಿ ನಮಗೆಲ್ಲಿ ಗೊತ್ತೂ.. ಹೀಗೆಲ್ಲಾ ಜೀವನ ನಮ್ಮನ್ನೆಲ್ಲಾ ಎಲ್ಲಿಂದ ಎಲ್ಲಿಗೋ ಕರೆದುಕೊಂಡು ಹೋಗುತ್ತದೆಂದು?

ಓದುವುದು ಒಂದು ಮಾಡುವುದು ಮತ್ತೊಂದು. ಓದಿಗೆ ತಕ್ಕನಾದ ಕೆಲಸ ಸಿಕ್ಕುವುದಾದರೇ ನಮ್ಮಗಳ ಪಾಡು ಹೀಗೆ ಯಾಕೆ ಇರುತ್ತಿತ್ತು.

ಹಾಗೆಯೇ ಕೆಲಸಕ್ಕಾಗಿಯೇ ಎಂದು ಓದಬಾರದು. ಪದೆ ಪದೆ ಹೀಗೆ ಹೇಳುತ್ತಿದ್ದ ನಮ್ಮ ಇಂಜಿನಿಯರಿಂಗ್ ಕಾಲೇಜು ಲೆಕ್ಚ್ ರ್ ಮಾತು.

ಎಷ್ಟು ಸತ್ಯ!

ಈಗ ಸುಮಿತ್ರಾ ನನ್ನೇ ತೆಗುದುಕೊಂಡರೇ... ಆಗ ಓದುತ್ತಿದ್ದ ಸ್ಪೀಡ್ ಗೆ ಇಲ್ಲಿಯೇ ಭಾರತದಲ್ಲಿ ಯಾವುದಾದರೂ ದೊಡ್ಡ ಆಫೀಸ್ ನಲ್ಲಿ ಅಥವಾ ದೊಡ್ಡ ಹುದ್ದೆಯಲ್ಲಿಯೇ ಇರಬೇಕಾಗಿತ್ತು.

ನಾವಂತೂ ಸುಮಿತ್ರ ಓದುವ ಕ್ಯಪಾಸಿಟಿಗೆ ಥಂಡಾ ಹೋಗಿಬಿಟ್ಟಿದ್ದೀವಿ.

ಸತತ ನಾಲ್ಕು ವರುಷಗಳು ಕಾಲೇಜಿಗೆ ಒಬ್ಬಳೇ ಟಾಪರ್. ನಾವು ಯಾರೊಬ್ಬರೂ ಓದುವುದರಲ್ಲಿ ಅವಳ ಸರಿ ಸಮ ಬರಲು ಹಾಗಲೇ ಇಲ್ಲ!

ಅದು ಓದುವ ದಿನಗಳು. ಮತ್ತೆ ಎಂದು ನಮಗೆ ಮರಳಿ ಬರಲಾರವು.

ಕೇವಲ ನೆನಪುಗಳು ಮಾತ್ರ!

ಆದರೇ ಇಂದು ಸುಮಿತ್ರಾ ತುಂಬು ಗೃಹಿಣಿಯಾಗಿ ಎರಡು ಮಕ್ಕಳ ಮತ್ತು ಗಂಡನ ಕ್ಷೇಮ ಮಾತ್ರ ನೋಡಿಕೊಳ್ಳುತ್ತಿರುವುದು. ಅದೇ ಟಾಪರ್ ಸುಮಿತ್ರಾನ ಅನಿಸುತ್ತದೆ!

ಕಾಲ ಎಲ್ಲಿಂದ ಎಲ್ಲಿಗೂ ಚಲಿಸಿದೆ.

ಜೀವನ ದೊಡ್ಡದು!

ಅಂದುಕೊಂಡದ್ದು ಯಾವುದು ಸಿಗಲಾರದು. ಬದುಕಿಗೆ ತಕ್ಕಂತೆ ಹೊಂದಿಕೊಳ್ಳಬೇಕು. ಅದೇ ಜೀವನ ಮರ್ಮ!

ಈಗ ನೆನಪಿಸಿಕೊಂಡರೇ ಅದೇ ಅಚ್ಚರಿಯಾಯಿತು.

ಅಲ್ಲಾ ನಾವೆಲ್ಲಾ ಅಷ್ಟು ಸಾಹಸಪಟ್ಟಿದ್ದು ಇದಕ್ಕೇನಾ ಅನಿಸುತ್ತದೆ. ಅಂದು ಚೆನ್ನಾಗಿ ಓದಿದ ಮೇಡಮ್ಮ ಇಂದು ಮನೆಯಲ್ಲಿದ್ದಾರೆ. ನಾವುಗಳು ಯುಜ್ ಲೇಸ್ ಎಂದುಕೊಂಡವರು ಟಸ್ಸು ಪುಸ್ ಎಂದುಕೊಂಡು ಕೊರಳಿಗೆ ಟ್ಯಾಗ್ ಹಾಕಿಕೊಂಡು ಮಿಂಚುವ ಎಂ.ಎನ್.ಸಿ ಯಲ್ಲಿ ದುಡಿಯುತ್ತಿದ್ದೇವೆ.

ಇಲ್ಲಿ ಯಾರು ಮುಂದೆ? ಯಾರು ಹಿಂದೆ? ಗೊತ್ತಾಗುತ್ತಿಲ್ಲ!

ನನಗೆ ಅನಿಸುತ್ತದೆ. ಸುಮಿತ್ರ ಏನಾದರೂ ಒಮ್ಮೆಯಾದರೂ ಅಂದಿನ ಕಾಲೇಜು ದಿನಗಳಲ್ಲಿನ ಭರವಸೆಯ ಕನಸಿನ ಬಗ್ಗೆ ಈಗ ಯೋಚಿಸಿರುವಳೆ? ಅಂದಿನ ನೆನಪು ಇಂದು ಇಲ್ಲವೇ? ಏನಾದರೂ ಪಶ್ಚಾತಪದ ಬೇಸರ ಮನದಲ್ಲಿ ಉಂಟಾಗಿದೆಯೇ?

ಮತ್ಯಾವತ್ತಾದರೂ ಚಾಟ್ ಗೆ ಸಿಕ್ಕಾಗೆ ಕೇಳೇ ಕೇಳುತ್ತೇನೆ.

ಕೆಲಸ ಸಿಕ್ಕಿ ಹೆಚ್ಚು ದುಡಿದರೇ ಮಾತ್ರ ಓದಿದ್ದು ಸಾರ್ಥಕವಾ?

ಓದುವುದು ದುಡಿಯುವುದಕ್ಕೆ ಮಾತ್ರನಾ?

ಅಲ್ಲಾ ಅಷ್ಟೆಲ್ಲಾ ಓದಿ ಮೊಡಿಗೆರೆ ಎಂಬ ಹಳ್ಳಿಗೆ ಬಂದು ವ್ಯವಸಾಯ ಮಾಡಿದ ತೇಜಸ್ವಿ ಗ್ರೇಟ್ ಅಲ್ಲವಾ? ನಗರದಲ್ಲಿಯೇ ಇದ್ದುಕೊಂಡು ಯಾರು ಸಾಧಿಸಲಾಗರದದ್ದನ್ನು ಗದ್ದೆ, ಕಾಡು, ಪ್ರಾಣಿ, ಸಸ್ಯಗಳ ಮದ್ಯೆಯೇ ಇದ್ದುಕೊಂಡು ವಿಶ್ವಕ್ಕೆ ಗೋಚರಿಸಿದ್ದು ಕಡಿಮೆ ಸಾಧನೆಯೆನಲ್ಲ!

ಅಲ್ಲವಾ ನೀವೇ ಹೇಳಿ! ವಿಶ್ವ ವಿದ್ಯಾಲಯದಲ್ಲಿರುವವರು ತೇಜಸ್ವಿ ಬರೆದಿದ್ದನ್ನು ಸಿಲಬಸ್ ಆಗಿ ಅಧ್ಯಯನ ಮಾಡುತ್ತಿದ್ದಾರೆ.

ತೇಜಸ್ವಿ ರೀತಿ ಯಾಕೆ ಯಾರು ಯೋಚನೆ ಮಾಡುವುದಿಲ್ಲ?

ಸುಮಿತ್ರ ಳನ್ನು ಕಂಡು ನಾನು ಯಾಕೆ ತಕ್ಷಣ ಹಾಗೆ ಯೋಚಿಸಿದೆ?

ಓದಿದ್ದಾರೆ ಎಂದರೇ ಅಫೀಸ್ ನಲ್ಲಿ ಮಾತ್ರ ಕೆಲಸ ಮಾಡಬೇಕೇ? ಮತ್ತಿನೇನನ್ನೂ ಮಾಡಬಾರದೇ?

ನಿಜವಾದ ಪ್ರತಿಭೆ ಎಂದರೇ ಏನು?

ಓದುವುದು ತಿಳುವಳಿಕೆಗೆ ಮಾತ್ರ ಎಂದು ಯಾಕೆ ಯಾರೊಬ್ಬರೂ ಯೋಚಿಸಲಾರರು.

ದುಡ್ಡು ಗಳಿಸುವುದೊಂದೇ ಬದುಕಾ? ಬದುಕುವುದಕ್ಕಾಗಿ ದುಡ್ಡು ಬೇಕು, ದುಡ್ಡಿಗಾಗಿ ಬದುಕುವುದೇ ಜೀವನವಾ?

ಓದುವ ಸಮಯದಲ್ಲಿ ಕೇವಲ ಕೆಲಸ ಗಳಿಸುವುದೊಂದೆ ಗುರಿಯಾಗುವುದು ಯಾಕೆ? ಆ ಸಮಯದಲ್ಲಿ ಬೇರೆ ಯಾವ ಯೋಚನೆಯು ಮನದಲ್ಲಿ ಸುಳಿಯಲಾರದಂತೆ ಮಾಡಿರುವ ವ್ಯವಸ್ಥೆಯ ಕೈಯಾದರೂ ಯಾವುದು?

ಪ್ರತಿಭೆಗಳು ಅರಳಬೇಕಂತೆ. ಅರಳುವ ಸಮಯ ಮತ್ತು ಸ್ಥಳಗಳೆಂದರೇ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಯ ಅಂಗಳಗಳಂತೆ. ಆದರೇ ಈ ಅಂಗಳಗಳು ಇಂದು ಕೇವಲ ಕೆಲಸ ಮಾಡುವ ಕಾರ್ಮಿಕರನ್ನು ತಯಾರು ಮಾಡುವ ಕಾರ್ಖನೆಗಳಾಗುತ್ತಿವೆಯೆಲ್ಲ ಇದು ಸರಿಯೇ?

ಹೊಸದಾಗಿ ಯೋಚಿಸುವಂತಹ ಮನಸ್ಸುಗಳ ನಿರ್ಮಾಣ ಮಾಡುವ ತಾಣಗಳಗಾಬೇಕಿದ್ದ ಕಾಲೇಜು, ವಿಶ್ವವಿದ್ಯಾನಿಲಯಗಳು ಯಾಕೆ ಇಂದು ಮಂಕಾಗಿವೆ ಅನಿಸುತ್ತಿವೆ ಇಂದು?

ಓದಿದ ಮನಸ್ಸುಗಳಿಗೆ ಕೆಲಸ ಸಿಗುತ್ತಿಲ್ಲ, ಕೆಲಸಕ್ಕೆ ಹೋಗುತ್ತಿಲ್ಲ ಎಂದರೇ ಯಾಕೆ ಬೇಜಾರು ಆಗುವುದು? ಕೆಲಸವಲ್ಲದೇ ಬೇರೆ ಬೇರೆ ಮನ ಕುಣಿಯುವ ಚಟುವಟಿಕೆಯ ಕೇಂದ್ರಗಳ್ಯಾಕಾಗುತ್ತಿಲ್ಲ?

ಅದೇ ಅಕ್ಕ ಪಕ್ಕದವರು ಏನು ಅನ್ನುತ್ತಾರೋ.. ಅಲ್ಲಿಯ ಗೆಳೆಯನಿಗೆ ಎಲ್ಲೋ ಕೆಲಸ ಸಿಕ್ಕಿತು.. ಆ ಗೆಳತಿ ಹೊರದೇಶದಲ್ಲಿ ಕೆಲಸ ಮಾಡುತ್ತಿದ್ದಾಳೆ.. ನಾನು ಮಾತ್ರ ಇನ್ನೂ ಏನು ಮಾಡುತ್ತಿಲ್ಲಾ..ಓದಿದ್ದೇಲ್ಲಾ ವೇಸ್ಟ್.. ಹಾಗೆ ಹೀಗೆ ಎಂದು ಜಿಗುಪ್ಸೆಪಡುವುದು ಇಂದಿಗೂ ನಿಲ್ಲುತ್ತಿಲ್ಲ.

ಓದು ಹೊಸತನದ ಪ್ರತಿಭೆಗೆ ಮೊದಲ ಹೆಜ್ಜೆಯಾಗಬೇಕು. ನವ್ಯವಾಗಿ ಚಿಂತಿಸುವ ಮನಸ್ಸುಗಳಾಗಬೇಕು. ಈ ರೀತಿಯ ಮನೋಭಾವನೆಯನ್ನು ರೂಪಿಸುವ ಕ್ಲಾಸ್ ರೋಂ ಗಳಾಗಬೇಕಿರುವುದು ಪ್ರತಿಯೊಂದು ಶಿಕ್ಷಣ ಸಂಸ್ಥೆಗಳ ಸಿದ್ಧಾಂತವಾಗಬೇಕು.

ಸುಮಿತ್ರಾರನ್ನು ನೋಡಿದ ಮೇಲೆ ಹೀಗೆಲ್ಲಾ ಲಹರಿ ಬಂದು ಮಾತನಾಡಿದ್ದು ಕಣ್ರೀ.

ಅದು ಯಾಕೋ ಟಾಪರ್ ಸುಮಿತ್ರಾನನ್ನು ಇನ್ನು ಈ ನನ್ನ ಮನ ಮರೆಯಲಾರದೋ?

ಅವರನ್ನೇ ಕೇಳಿ ಹೇಳುತ್ತೇನೆ.

ಶುಕ್ರವಾರ, ಜೂನ್ 10, 2016

ಸರ್ಕಾರಿ ಶಾಲೆಗಳನ್ನು ಕೇಳುವವರು ಯಾರು

ಶಾಲೆಗಳು ದೂಳು ಕೊಡವಿಕೊಂಡು ಪ್ರಾರಂಭವಾಗಿವೆ.


ಕಾನ್ವೇಂಟ್ ಗಳಂತೂ ಒಂದು ತಿಂಗಳು ಮುಂಚೆಯೇ ಪ್ರಾರಂಭವಾಗಿವೆ. ಅಷ್ಟರ ಮಟ್ಟಿಗೆ ಕಾನ್ವೇಂಟ್ ಗಳು ಜನರ ಮನಸ್ಸನ್ನು ಸೆಳೆದಿವೆ.


ಸರ್ಕಾರಿ ಶಾಲೆಗಳನ್ನು ಕೇಳುವವರು ಯಾರು?


ಅವುಗಳು ಅದೇ ಹಳೆ ಸ್ಟೈಲ್ ನಲ್ಲಿ ಈ ತಿಂಗಳು ಶುರುವಾಗಿವೆ. ಆದರೇ ಶುರುವಾಗುವ ಸಮಯದಲ್ಲಿ ಕೆಟ್ಟ ಸುದ್ಧಿಯಂತೆ: ಸುಮಾರು ಮೂರು ಸಾವಿರ ಸರ್ಕಾರಿ ಕನ್ನಡ ಶಾಲೆಗಳ ಬಾಗಿಲನ್ನು ಶಾಶ್ವತವಾಗಿ ಮುಚ್ಚುವೆವು.. ಎಂಬ ಸುದ್ಧಿ, ಕನ್ನಡ ಮನಗಳನ್ನು ಕಲಿಕಿತು(?)


ಇದರ ಬಗ್ಗೆ ಪ್ರತಿಯೊಬ್ಬ ಕನ್ನಡಿಗರೂ ತಮ್ಮ ಅಕ್ರೋಶವನ್ನು ಸೋಷಿಯಲ್ ಮೀಡಿಯಾದಲ್ಲಿ ಲೈಕ್ ಮತ್ತು ಶೇರ್ ಮಾಡುವ ಮೊಲಕ ಮಮ್ಮಲು ಮರುಗಿದರು.


ಕನ್ನಡದ ಬಗ್ಗೆ ಇಷ್ಟರ ಮಟ್ಟಿಗೆ ಹೋರಾಡುವ ಮನಸ್ಸುಗಳಾದರೂ ಇದ್ದಾವಲ್ಲ, ಕನ್ನಡಮ್ಮ ನೀ ಧನ್ಯ!!


ಪ್ರತಿ ವರುಷ ಹೀಗೆ ಕಂತು ಕಂತಿನಲ್ಲಿ ಸರ್ಕಾರಿ ಶಾಲೆಗಳು ಕಣ್ಣು ಮುಚ್ಚುತ್ತಿರುವುದು ಯಾವುದರ ಮುನ್ಸೂಚನೆಯೆಂಬುದು ಗೊತ್ತಾಗುತ್ತಿಲ್ಲ.


ಆದರೇ ಅಷ್ಟರ ಮಟ್ಟಿಗೆ ನಮ್ಮ ಕನ್ನಡಿಗರ ಮನಸ್ಸು ಕಾನ್ವೇಂಟ್ - ಇಂಗ್ಲೀಷ್ ಮಾಧ್ಯಮದ ಕಡೆ ಹರಿಯುತ್ತಿರುವ ದಿಕ್ಸೊಚಿ ಇದು, ಅಂದರೇ ತಪ್ಪಲ್ಲ.


ಪೇಸ್ ಬುಕ್ ಮತ್ತು ಸೋಷಿಯಲ್ ಮೀಡಿಯದಲ್ಲಿ ಲೈಕ್, ಶೇರ್ ಮಾಡಿದ ಮಂದಿಯೇ ತಮ್ಮ ಮಕ್ಕಳನ್ನು ಕಾನ್ವೇಂಟ್ ಗಳಿಗೆ ಇಂದಿಗೂ ಕಳಿಸುತ್ತಿದ್ದಾರೆ.



 Why? ಎಂದರೇ.. ಅದು ಬೇರೆ.. ನಾವು ಹೀಗೆ ಮರುಗುವುದು ಬೇರೆ.. ಎಂದು ಮೂಗು ಮುರಿಯುವವರು.


ಹೌದು ಸರ್ಕಾರಿ ಸ್ಕೋಲ್ ಮಾತ್ರ ಬೇಡ. ಸರ್ಕಾರಿ ಕೆಲಸ ಮಾತ್ರ ಇರಲಿ. ಎಂಬ ಮನೋಭಾವ ನಮ್ಮಲ್ಲಿ ಬೆಳೆಯುತ್ತಿರುವುದು ಯಾಕೋ ಸರಿ ಕಾಣುತ್ತಿಲ್ಲ.


ಹೆಚ್ಚು ಹೆಚ್ಚು ವಸೂಲಿ ಮಾಡುವ ಖಾಸಗಿ ಶಾಲೆಗಳೇ ನಮ್ಮ ಕಣ್ಣುಗಳಿಗೆ ನಕ್ಷತ್ರಗಳಂತೆ ಹೊಳೆಯುತ್ತಿವೆ.



ಈಗಂತೂ ಹಳ್ಳಿಯಿಂದ ದಿಲ್ಲಿಯವರೆಗೂ ಪ್ರತಿಯೊಬ್ಬರೂ ತಮ್ಮ ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗಲಿ ಎಂಬ ಪ್ರಾರ್ಥನೆಯೇ...?


ಹೇಗಾದರೂ ಸರಿ, ಎಷ್ಟೇ ಕಷ್ಟವಾದರೂ ಸರಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ ಸೂಲ ಮಾಡಿಯಾದರೂ, ಡೊನೇಷನ್ ಕಟ್ಟಿ ಸಾವಿರ ಸಾವಿರ ಸುರಿದು ಮಕ್ಕಳ ಅಭಿವೃದ್ಧಿಯ ಬಗ್ಗೆ ಯೋಚಿಸುತ್ತಾರೆ.


ಸರ್ಕಾರಿ ಶಾಲೆಗಳು ಉಪಯೋಗವಿಲ್ಲದ್ದವೂ ಎಂಬ ಕೀಳು ಮನೋಭಾವನೆ ಎಲ್ಲಿಂದ ಬಂತೋ ದೇವರೇ ಬಲ್ಲ! ಬಡವರಿಗೆ ಮಾತ್ರ.  ಕೈಲಿ ಏನೂ ಸಾಧ್ಯವಿಲ್ಲದವರಿಗೆ ಮಾತ್ರ ಈ ಶಾಲೆಗಳು.






ಅಯ್ಯೋ ಪಾಪ!




ಸರ್ಕಾರದವರೂ ಸಹ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ಅದಕ್ಕೆ ಒಂದು ದೊಡ್ಡ ಇಲಾಖೆ, ಮಂತ್ರಿಗಳು ,



ದೊಡ್ಡ ಅಧಿಕಾರಿಗಳು, ಮಾಸ್ತರುಗಳು ಎಲ್ಲ ಇದ್ದಾರೆ. ಆದರೇ ಮಕ್ಕಳು ಮಾತ್ರ ಕಡಿಮೆ.


ಅದಕ್ಕೆ ಪ್ರತಿ ವರುಷ ಸಾವಿರ ಸಾವಿರ ಶಾಲೆಗಳು ಶಾಶ್ವತ ಬೀಗ ಜಡಿಸಿಕೊಳ್ಳುತ್ತಿವೆ.


ನಮ್ಮ ಜನಗಳ ಕ್ರೇಜ್ ಇಷ್ಟರ ಮಟ್ಟಿಗೆ ಕಾನ್ವೇಂಟ್ ಮಯವಾಗಿದೆ. ಚಿಕ್ಕ ಚಿಕ್ಕ ಮಕ್ಕಳ ಬಾಯಲ್ಲಿ ಅಸ್ಪಷ್ಟ ಇಂಗ್ಲೀಷ್ ಕೇಳಿದರೇ ಅದು ಏನೋ ಸಂಭ್ರಮ. ತೂದಲು ಮಾತಿನ ಇಂಗ್ಲೀಷ್ ಆ ಮಗುವಿನ ಮುಂದಿನ ಭವಿಷ್ಯ ರೂಪಿಸುವುದು ಎಂಬ ಭ್ರಮೆಯಲ್ಲಿ ಪ್ರತಿಯೊಬ್ಬ ಪೋಷಕರು ಬಂದಿಯಾಗಿರುವವರು.



ಹೆಚ್ಚು ಹಣ ಪಡೆಯುವುದು ಇದಕ್ಕೆ. ಅವರು ಅಷ್ಟು ದುಡ್ಡು ವಸೂಲಿ ಮಾಡುತ್ತಾರೆ ಎಂದರೇ ಅಷ್ಟು ಚೆನ್ನಾಗಿ ಕಲಿಸಿಯೇ ಕಲಿಸುತ್ತಾರೆ ಎನ್ನುತ್ತಾರೆ. ಈ ಸರ್ಕಾರಿ ಶಾಲೆಗಳಲ್ಲಿ ಏನೂ ಕಲಿಸುತ್ತಾರೆ ಗುರು? ಅಲ್ಲಿ ನೆಟ್ಟಗೆ ಒಬ್ಬ ಮೇಷ್ಟ್ರೇ ಇಲ್ಲ ಎನ್ನುತ್ತಾರೆ.




ನಮ್ಮ ದೇಶದ ಸರ್ಕಾರಿ ಶಾಲೆಗಳನ್ನು ಮುಂದೆ ಇತಿಹಾಸದಲ್ಲಿ ಓದುವ ಕಾಲ ಬಂದರೇ ಸೋಜಿಗವಲ್ಲ.


ಈ ತಿಂಗಳಂತೂ ಮಕ್ಕಳಿಗೆ ಮತ್ತು ಹೆತ್ತವರಿಗೆ ಬ್ಯುಸಿ ತಿಂಗಳು. ಮಕ್ಕಳನ್ನು ಹೊಸ ಹೊಸ ಶಾಲೆಗಳಿಗೆ ಸೇರಿಸಲು ಎಷ್ಟೊಂದು ಕಷ್ಟಪಟ್ಟಿರುತ್ತಾರೆ. ಖಾಸಗಿ ಶಾಲೆಗಳಲ್ಲಿ ಸೀಟು ಸಿಗುವುದು ಅಷ್ಟು ಸುಲಭದ ಮಾತಲ್ಲ. ಅದರ ಪುರಾಣವೇ ಬೇರೆ. ಅದಕ್ಕಾಗಿ ವರುಷದಿಂದ ಕಾಯುತ್ತಿರುತ್ತಾರೆ.


ಅಂತೂ ಈ ತಿಂಗಳಿಂದ ಮಗು ಸ್ಕೊಲಿಗೆ ಹೋಯ್ತು ಎಂದು ನಿಟ್ಟುಸಿರುಬಿಟ್ಟಿರುತ್ತಾರೆ.


ಈ ಬದಲಾದ ಕಾಲ ಮತ್ತು ಜನಗಳ ಮನೋಭಾವ ಮಕ್ಕಳನ್ನು ಮಕ್ಕಳಾಗಿ ನೋಡಲಾರದಂತಾಗಿದೆ. ಚಿಕ್ಕ ಮಕ್ಕಳೇ ಸಿರಿಯ್ಸ್ ಆದ ದೊಡ್ಡವರಂತೆ ವರ್ತಿಸುತ್ತಿದ್ದಾರೆ. ಹೆತ್ತವರ ದುಡಿಮೆ ಮತ್ತು ಹಂಬಲ ತಮ್ಮ ಮುದ್ದು ಮಕ್ಕಳ ಮುಖದ ಮೇಲೆ ಕಾಣುತ್ತಿದೆಂಬಂತೆ ಭಾಸವಾಗುತ್ತಿದೆ.


ವಯಸ್ಸಿಗೆ ಮೀರಿದ ಮಾತು, ವಯಸ್ಸಿಗೆ ಮೀರಿದ ನಡಾವಳಿಕೆ ಮತ್ತು ಗಂಭೀರತೆ ಇಂದಿನ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ.


ನೀವು ನೋಡಿರಬಹುದು.. ಇಂದಿನ ನಮ್ಮ ಮನೆಯ ಟಿ.ವಿಯಲ್ಲಿ ಬರುವ ರೀಯಾಲಿಟಿ ಶೋ ನಲ್ಲಿ ಬಾಗಿಯಾಗುವ ಪುಟ್ಟ ಪುಟ್ಟ ಕಂದಮ್ಮಗಳ ಬಾಯಲ್ಲಿ ದೊಡ್ಡವರು ಮಾತನಾಡುವ ಮಾತುಗಳು.ಮಕ್ಕಳ ನಡೆ ನುಡಿಗಳು ಕಂಡು ದೊಡ್ಡವರೇ ನಾಚುವಂತಾಗಿದೆ.


ಪ್ರತಿಯೊಂದರಲ್ಲೂ ಸ್ವರ್ದೆ. ಮಕ್ಕಳು ಮಕ್ಕಳಾಗಿ ದೊಡ್ಡವರು ಬಿಟ್ಟೇ ಇಲ್ಲವೆಂದು ಅನಿಸುತ್ತದೆ.


ಆ ತುಂಟತನ, ಆಟ- ಪಾಠ ಎಲ್ಲಾ ಮಾಯವಾಗಿಬಿಟ್ಟಿದೆ! ಬಾಲ್ಯವೇ ಎಲ್ಲೋ ಕಳೆದು ಹೋಗುತ್ತಿದೆ


ಪ್ರತಿಯೊಂದರಲ್ಲೂ ’ದಿ ಬೇಸ್ಟ" ನೀ ಆಗಬೇಕು ಎಂಬ ಈ ಸುಸ್ತು ಮಕ್ಕಳ ಮನಸ್ಸಿನಲ್ಲಿ ಕಾಣುತ್ತಿದೇವೆಂದು ಅನಿಸುತ್ತದೆ.


ನನಗಂತೂ ಅಯ್ಯೋ ಪುಟ್ಟ ಪಾಪುವೇ ಎಂದೆನಿಸುತ್ತದೆ.


ಅಂಕ, ಸ್ಥಾನ, ಹುದ್ದೆ ಎಂಬ ಶಬ್ಧಗಳೇ ಅವುಗಳ ಗುರಿ ಮಾಡಿಬಿಟ್ಟಿದ್ದೇವೆನೋ.


ನೆನಸಿಕೊಂಡರೇ ಮೈ ಜುಂ ಅನಿಸುತ್ತದೆ.


ಈ ರೀತಿಯ ಭಾರಿ ಭರವಸೆಗಳ, ಕನಸುಗಳ, ಭವಿಷ್ಯದ ಬಾರವಾದ ಚೀಲಗಳನ್ನು ಹೊತ್ತುಕೊಂಡು ಮಕ್ಕಳು ತನ್ನ ಮೊದಲ ಹೆಜ್ಜೆಗಳನ್ನು ಶಾಲೆಗಳ ಕಡೆಗೆ ಈ ತಿಂಗಳು ಹಾಕಿಬಿಟ್ಟಿವೆ.


ಮುಂದಿನ ಒಂದು ವರುಷ ಓದುವುದೊಂದೆ ಅವುಗಳ ಕೆಲಸ. ಓದು ಓದು ಮತ್ತು ಓದು. ಹೆತ್ತವರಿಗೂ ಒತ್ತಡ ಮಕ್ಕಳಿಗೂ  ಒತ್ತಡ.


ಇಂದಿನ ಪೋಷಕರು ತಮ್ಮ ಮಕ್ಕಳ ಓದುವುದರ ಬಗ್ಗೆ ತಲೆ ಕೆಡಿಸಿಕೊಂಡಷ್ಟು ಮತ್ಯಾವುದರ ಬಗ್ಗೆಯು ಯೋಚಿಸಿರುವುದಿಲ್ಲ.


ಎಲ್ಲಾ ದುಭಾರಿ. ಒಂದು ಮಗು ಜನಿಸಿದರೇ ಸಾಕು ಹೆತ್ತವರ ಯೋಚನೆ ದುಪ್ಪಟ್ಟಾಗುತ್ತದೆ.


ಮಕ್ಕಳಾದ  ಮೇಲೆ ತಂದೆ ತಾಯಿಗಳ ಜೀವನ ಅಷ್ಟೇ. ಮಕ್ಕಳನ್ನು ಒಂದು ದಡ ಸೇರಿಸುವುದರಲ್ಲಿಯೇ ತಮ್ಮ ಪೂರ್ತಿ ಅಯುಷ್ಯವನ್ನು ಕಳೆದುಬಿಡುತ್ತಾರೆ.


ನಮ್ಮ ಹಿಂದಿನವರು ಹೀಗೆಲ್ಲಾ ಎಂದು ಚಿಂತಿಸಿರಲಾರರು. ಆದರೇ ಇದರ ಜರೂರತೂ ಇಂದು ಹೆಚ್ಚು. ಏನೂ ಮಾಡುವ ಆಗಿಲ್ಲ! ಕಾಲಕ್ಕೆ ತಕ್ಕಂತೆ ಬದುಕಬೇಕು. ಈಗ ಸುಮ್ಮನೇ ಓದಿದರೇ ಯಾರು ಮೂಸಿಯು ನೋಡುವುದಿಲ್ಲ. ಎಲ್ಲಾದರಲ್ಲೂ ಚ್ಯೂಟಿ ಇರುವವರೇ ಬೇಕು. ಅದಕ್ಕಾಗಿಯೇ ಪ್ರತಿಯೊಬ್ಬರೂ ಶಿಕ್ಷಣವನ್ನು ತಪಸ್ಸಿನಂತೆ ಜಪಿಸುತ್ತಾರೆ.


ಇದಕ್ಕಾಗಿ ನಮ್ಮ ಎಲ್ಲಾ ಖಾಸಗಿ ಶಾಲೆಗಳು, ಶಿಕ್ಷಣ ಸಂಸ್ಥೆಗಳು ಕಟಿ ಬದ್ಧವಾಗಿವೆ!


ಓದು ಒಂದು ವ್ಯಾಪಾರವನ್ನಾಗಿ ಮಾಡಿತ್ತಿದ್ದೇವೆನೋ ಅನಿಸುತ್ತಿದೆ. ಅದು ಆಗಬಾರದು. ಎಂದೆಂದಿಗೂ. ಎಂಬುದೇ ನನ್ನ ಆಶಯ!

ಬುಧವಾರ, ಏಪ್ರಿಲ್ 27, 2016

ಹೆಚ್ ೪

ದೂರದ ಬೆಟ್ಟ ನುಣ್ಣಗೆ ಎಂಬುದು ಇಲ್ಲಿಗೆ ಬಂದ ಮೇಲೆ ಗೊತ್ತಾಗಿದ್ದು.

ಅದು ಯಾಕೆ ನಮ್ಮ ಜನ ದೂರದ  ಅಮೇರಿಕಾ ಅಥವಾ ಇತರೆ ದೇಶಗಳ ಬಗ್ಗೆ ಹುಬ್ಬೇರಿಸುವಂತ ಭಾವನೆಗಳನ್ನು ಇಟ್ಟುಕೊಂಡಿದ್ದಾರೋ? ದೇವರಿಗೆ ಗೊತ್ತು.

ಇರುವುದನ್ನೆಲ್ಲ ಬಿಟ್ಟು ಇರದಿರದ ಕಡೆಗೆ ಮನಸ್ಸು ಹರಿಯಬಿಡುವುದೇ ಜೀವನವಾ?

ಡಿಪೆಂಡೆಂಟ್ ವೀಸಾದಲ್ಲಿ ಪ್ರವಾಸ ಮಾಡುವುದು ಒಂದು ರೀತಿಯಲ್ಲಿ ಖುಷಿ ಕೊಡುವ ವಿಷಯವೇ..?

ಅದು ಭಾರತದಲ್ಲಿದ್ದುಕೊಂಡು  ವಿದೇಶಕ್ಕೆ ಹಾರುವ ಭಾವನೆಯ ಖುಷಿ ಇಲ್ಲಿಗೆ ಬಂದ ಮೇಲೆ ಖಂಡಿತ ಇರಲಾರದೆಂದು ಅನಿಸುತ್ತದೆ.

ಇದು ನಿಜವಾಗಿಯೂ ಒಂಟಿ ಬಾಳ ನೌಕೆಯೇ ಸರಿ. ಗಂಡ ಎಂಬ ಪ್ರಾಣಿ ಕೆಲಸ ಕೆಲಸ ಎಂದು ಬರಾ ಬರೀ ೧೮ ಕ್ಕೊ ಹೆಚ್ಚು ಗಂಟೆಗಳು ಕೆಲಸದಲ್ಲಿ ಮುಳುಗೇಳುವಂತಹ ಪ್ರಾಜೆಕ್ಟ್ ಸಿಕ್ಕಿದರೇ.. ಹೆಂಡತಿ ನೀ ನನಗೆ ಬೆಂಡು ಎತ್ತುತೀ ..ಎಂದೇ ಹೇಳುತ್ತಾರೆ ಇಲ್ಲಿಯ ಗಂಡುಗಳು.

ಸತ್ಯವಾಗಿ ಮನಸ್ಸುಗಳು ಪರಸ್ಪರ ಪ್ರೀತಿಯಿಂದ ಆರಾಮಾಗಿ ಮಾತನಾಡುವ ಅವಕಾಶವೇ ಇಲ್ಲಿ ಇಲ್ಲವೆಂದು ಅನಿಸುತ್ತದೆ. ಇಲ್ಲಿ ಎಲ್ಲಾ ಇದೆ. ಕಾರು ಇದೆ. ದೊಡ್ಡ ಮನೆಯಿದೆ. ಬಹು ಬೇಗ ಆಪೀಸ್ ಗೆ ಹೋಗುತ್ತಾರೆ. ಸಂಜೆಯ ಟ್ರಾಪಿಕ್ ಜಂಜಾಟವಿಲ್ಲದೇ ಬೇಗ ಮನಗೆ ಬರುತ್ತಾರೆ. ಎಂದು ಖುಷಿಪಡುವ ಪಾಡು ನಮಗಿಲ್ಲ.

ಪುನಃ ಸರಿ ರಾತ್ರಿಯವರೆಗೂ ಆಪಶೂರ್ ಮೀಟಿಂಗ್. ಅದು ಇದು ಎಂದು ಲ್ಯಾಪ್ ಟಾಪ್ ನಲ್ಲಿ ತಲ್ಲಿನ ಮೂರ್ತಿಗಳಾಗುತ್ತಾರೆ ನಮ್ಮವರು.

ಕೆಲಸದಲ್ಲಿ ತೋರುವ ಪ್ರೀತಿಯನ್ನು ಮನೆಯಲ್ಲಿರುವ ನೆಚ್ಚಿನ ಜೀವಂತ ಜೀವಗಳಿಗೆ ವಿಕ್ ಡೇಸ್ ಗಳಲ್ಲಿ ಎಂದಿಗೂ ಪ್ರೀತಿ/ಸಮಯ ತೋರಲಾರರು.

ನಮ್ಮ ಊರಲ್ಲಾದರೋ ಗೆಳೆತಿಯರು, ಅಕ್ಕ ಪಕ್ಕದವರು ಮಾತನಾಡಲು, ನೋಡಲು ಸಿಗುತ್ತಾರೆ.

ಇಲ್ಲಿಯೋ ಮನೆಯಲ್ಲಿರುವ ಎರಡು ಜೀವಗಳೇ ಪರಸ್ಪರ ಆಸರೆ.

ಬಾಯಿ ತುಂಬ ಎರಡು ಮಾತನಾಡಲು ಸಾಧ್ಯವಾಗದ ಬ್ಯುಸಿ ಲೈಫ್ ಇದು.

ಹೊರಗಡೆ ಹೋದರೂ ನಮ್ಮ ನಗರದಲ್ಲಿ ಬಂದ್ ಅಥವಾ ಕರ್ಪ್ಯೂ ಸಮಯದಲ್ಲಿ ಕಾಣುವಂತ ಬೀಕೋ ಎನ್ನುವ ವಾತವರಣ. ಜನಗಳನ್ನು ನೋಡಬೇಕು ಎಂದರೇ ಪುನಃ ಶಾಪಿಂಗ್ ಮಾಲ್ ಗಳು ಇರುವ ಏರಿಯಾಕ್ಕೇ  ಹೋಗಬೇಕು. ಕಾಲು ನಡಿಗೆಯಲ್ಲಿ ಹೋಗಲಾರದಷ್ಟು ದೂರ ಈ ಜಾಗಗಳು.

ಇಲ್ಲಿ ಜನಗಳಿಲ್ಲ, ಜಾಗ್ ಮಾತ್ರ ಜಾಸ್ತಿ ಇದೆ. ಅದೇ ನಮ್ಮೊರಲ್ಲಿ ಹೆಜ್ಜೆ ಹೆಜ್ಜೆಗೂ ಪರಿಚಿತ ಮುಖಗಳ ದರ್ಶನ. ಆ ಸುಖ ಇಲ್ಲಿ ಇಲ್ಲ ಬಿಡಿ!

ಹೆಂಡತಿಯರಾಗಿ ಬಂದಿರುವ ನಮ್ಮಂತವರ ಮನಸ್ಸಿನ ತಳಮಳ ಕೇಳುವ ಮನಸ್ಸುಗಳು ಇಲ್ಲ!

ಇಲ್ಲಿ ಎಲ್ಲಾ ಇದೆ. ವಾಟ್ಸ್ ಪ್, ಪೇಸ್ ಬುಕ್ ಇತ್ಯಾದಿಗಳೇ ನಿತ್ಯ ನಿರಂತರ ಸಂಗಾತಿಗಳು. ಇಲ್ಲಿ ನೇಟ್ ಯಾವಾಗಲು ಇರುತ್ತದೆ. ನಮ್ಮೊರಲ್ಲಿ ಇವುಗಳ ಬಳಕೆಯನ್ನು ಮಾಡುವುದೇ ಖುಷಿಯಾಗುತ್ತಿರುತ್ತಿತ್ತು. ಆದರೇ ಇಲ್ಲಿ ಇದು ಸಹ ಮಹಾ ಬೋರು.

ಒಂದೇ ಒಂದು ಖುಷಿಯ ವಿಚಾರ ಎಂದರೇ ಇಲ್ಲಿಗೆ ಬರುವುದಕ್ಕೂ ಮೊದಲು ಅಡಿಗೆ ಮನೆಯ ದಿಕ್ಕು ಕಾಣದ ನನ್ನ ಕೈಗಳು ಈಗ ಎಲ್ಲದರಲ್ಲೂ ನಿಪುಣತೆಯನ್ನು ಕಂಡಿವೆ. ಇದರಲ್ಲಾದರೂ ಅಟ್ ಲಿಸ್ಟ್ ಸ್ವಲ್ಪ ನನ್ನನ್ನು ನಾನು ಮರೆತು ತರಾವೇರಿ ಖಾಧ್ಯಗಳನ್ನು ತಯಾರು ಮಾಡುವುದನ್ನು ಕಲಿಯಲು ಅನುಕೂಲವಾಗಿದೆ. ಇದಕ್ಕೆ ನಾನು ಮತ್ತೇ ಇಂಟರ್ ನೇಟ್ ಗೆ ಥ್ಯಾಂಕ್ಸ್ ಹೇಳಬೇಕು.

ಅಲ್ಲಿಯಾಗಿದ್ದರೆ, ಅಕ್ಕ ಪಕ್ಕದ ಅಂಟಿ, ಅಮ್ಮಂದಿರಿಂದ ಕಲಿಯಬೇಕಾಗಿತ್ತು. ಇಲ್ಲಿ ಗೊಗಲ್ , ಯು ಟ್ಯೂಬ್ ಗಳೇ ಅಕ್ಕರೆಯ ಅಮ್ಮ - ಅಂಟಿಯರು. ಇದರಲ್ಲಿಯೇ ನಮ್ಮ ಮನ ಅರಳುವ ವಿಷಯಗಳನ್ನು ಕೇಳಬೇಕು ಮತ್ತು ನೋಡಬೇಕು.

ಕಾರು ಚಲಾಯಿಸಲು ಕಲಿಯದಿದ್ದರೇ ಗಂಡನ ಪಾದವೇ ಗತಿ. ಅವರು ಪ್ರೀ ಆದ ವಿಕೇಂಡ್ ಗೆ ಕಾದಿದ್ದು. ಹತ್ತು ಬಾರಿ ಗೊಗೆರದು ಅಲ್ಲಿ ಇಲ್ಲಿಗೆ ಕರೆದುಕೊಂಡು ಹೋಗಬೇಕು. ಇಲ್ಲ ಎಂದರೇ ಆರಮಾಗಿ ಮನೆಯಲ್ಲಿಯೇ ತಿಂದುಂಡು ಸುಸ್ತಾಗಿ ಮಲಗಿಬಿಡುತ್ತಾರೆ.

ಪಾಪ!!! ಏನು ಮಾಡುವುದು ಇರೋ ೨ ದಿನವಾದರೂ ರೇಸ್ಟ್ ಬೇಡವೇ ಬ್ಯುಸಿ ಮನಸ್ಸುಗಳಿಗೆ?

ಬೇಕೆಂದಾಗ ಬ್ಯೂಟಿ ಪಾರ್ಲರ್ ಗಳಿಗೆ ಹೋಗಲು ಆಗುವುದಿಲ್ಲ. ಅದೇ ನಮ್ಮೊರಲ್ಲಿ ಈ ಗಂಡು ಜೀವಗಳಿಗೆ ಗೊತ್ತಿಲ್ಲದಂತೆ ಎಷ್ಟು ಭಾರಿ ಹೋಗುತ್ತಿದ್ದೇವೋ. ಹೀಗೆ ಆದರೇ ನಮ್ಮ ಕಾಂತಿಯುಕ್ತ ಮುಖಗಳ ಪಾಡು ದೇವರಿಗೆ ಪ್ರೀತಿ!

ನೋಡುತ್ತಿನಲ್ಲಾ.. ಇಲ್ಲಿರುವ ವಿದೇಶಿ  (ಭಾರತೀಯ) ಮಹಿಳೆಯರ ಒಂದು ಮುಖ್ಯ ಕೆಲಸ ಎಂದರೇ! ಮುದ್ದು ಮಕ್ಕಳ ಜೋಪಾನ. ಅವುಗಳ ಹಿಂದೆ ಯಾವಾಗಲೂ ಓಡುವುದು. ಯಾಕೆಂದರೇ ಇರುವವರು ನಾವಿಬ್ಬರೇ ಅಜ್ಜ , ಅಜ್ಜಿ, ಅಕ್ಕ -ಪಕ್ಕದವರು ಯಾರು ಇಲ್ಲ.

ಸೋ ಟೋಟಲಿ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿಯೇ ನನ್ನ ಜೀವನ ಮೋಕ್ಷ ಕಾಣುವುಂತಾಗಿದೆ.

ಎಷ್ಟೇ ಓದಿದ್ದರೂ ಸೌಟು ಹಿಡಿಯುವುದು ತಪ್ಪುವುದಿಲ್ಲ ಎಂಬಂತೆ, ಯಾವುದೇ ಕೆಲಸ ಮಾಡುತ್ತಿದ್ದರೂ ಎಚ್ ೪ ಮೇಲೆ ಬಂದರೇ ಮಕ್ಕಳನ್ನು ಸಂಬಾಳಿಸುವುದು ತಪ್ಪುವುದಿಲ್ಲ! ಇವುಗಳ ಕಾರ್ಯ ಮಾಡುವುದರಲ್ಲಿಯೇ ಅರ್ಧ ಆಂಟಿಗಳಾಗಿದ್ದೇವೆ ಅನಿಸುತ್ತದೆ. 

ಮಕ್ಕಳಿಗಾದರೂ ಯಾರಿದ್ದಾರೇ ನಾನೇ ಅಜ್ಜಿ/ಅಮ್ಮ ಎಲ್ಲಾ.

ಆದರೂ ಮಕ್ಕಳಿರುವುದು ೮೦% ಮನಸ್ಸಿಗೆ ಖುಷಿ ಕೊಟ್ಟಿದೆ. ಇದರ ಮೊಲಕವಾದರೂ ನಮ್ಮ ಮನಸ್ಸುಗಳು ಸ್ವಲ್ಪ ಬ್ಯುಸಿಯಾಗಿವೆ. ಇಲ್ಲದಿದ್ದರೇ ಸೋಮಾರಿಗಳಾಗಿ ರಸ್ಟ್ ದಾರಿ ಹಿಡಿಯುತ್ತಿದ್ದವು.

ನಾನೇಷ್ಟು ಖುಷಿ ಪಟ್ಟಿದ್ದೆ, ವಿದೇಶಕ್ಕೆ ಹೋಗಲು ಸಿದ್ದತೆ ಮಾಡಿಕೊಳ್ಳುವಾಗ. ಪಾಸ್ ಪೊರ್ಟ್ ಮಾಡಿಸಿವುದರಿಂದ ಹಿಡಿದು, ಏರ್ ಟಿಕೇಟ್ ಬುಕ್ ಮಾಡುವವರೆಗೂ. ನಾ ವಿದೇಶಕ್ಕೆ ಹೋಗುವೆನು ಎಂದು ತಿಳಿದು ಅಕ್ಕಪಕ್ಕದ ಮನೆಯವರು, ಬಂದು ಬಳಗದವರು ನನ್ನಡೆಗೆ ನೋಡುವ ನೋಟವೇ ಬದಲಾಗಿದ್ದು. ಅದನ್ನು ಕಂಡು ಮನದಲ್ಲಿಯೇ ನಕ್ಕಿದ್ದು. ವಿದೇಶಕ್ಕೆ ಹೋಗುತ್ತಿದ್ದೇನೆ ಎಂದು ೩ ಭಾರಿ ಸೋಟ್ ಕೇಸ್ ತುಂಬುವಷ್ಟು ಶಾಪಿಂಗ್ ಮಾಡಿದ್ದು... ನೆನಸಿಕೊಂಡರೇ ಈಗ ಅಯ್ಯೋ ಅನಿಸುತ್ತಿದೆ.

ಆ ಸಂಭ್ರಮ  ಇದ್ದಿದ್ದು ನಾಲ್ಕು ದಿನ ಮಾತ್ರ. ಆ ಒಂದು ವಾರ ನಿತ್ಯ ನೋಡುವ ಪ್ರತಿ ನೋಟವನ್ನು ಕ್ಯಾಮರದಲ್ಲಿ ಸೇರೆ ಹಿಡಿದು ಪೇಸ್ ಬುಕ್ ಗೆ ತುರಕಿ ಲೈಕ್ ಗಳಿಗೆ ಕಾಯುತ್ತಿದ್ದುದ್ದೇ ಬಂತು. 

ನಮ್ಮ ದೇಶದ ಮಂದಿ ಶೋಟಿಂಗ್ ಗೆ ಅದಕ್ಕಾಗಿಯೇ ವಿದೇಶದ ಜಾಗಗಳಿಗೆ ಬರುವುದು.. ಯಾವ ದಿಕ್ಕು ನೋಡಿದರೂ ಕ್ಯಾನವಾಸ್ ಮೇಲೆ ಬರೆದ ಚಿತ್ರದಂತೆ. ಈ ರೀತಿಯ ನೋಟ ನಮ್ಮ ಆ ದೂಳು ಊರಲ್ಲಿ ಎಲ್ಲಿ ಕಾಣಲಿ?  ನಾನಿರುವ ಈ ಚಿಕ್ಕ ವಿಲೇಜೇ ಇಗಿದ್ದಾರೇ.. ನ್ಯೂಯಾರ್ಕ್ ಹೇಗಿರಬಹುದು ಓ ದೇವರೇ ಎಂದು ಎರಡು ದಿನ ಕಣ್ಣು ಮುಚ್ಚಿರಲಿಲ್ಲ.

ಆದರೇ ಇದು ಎಲ್ಲಾ ಬರೀ ಒಂದು ತಿಂಗಳವರೆಗೆ ಮಾತ್ರ ತುಂಬ ಚೆನ್ನಾ ಎಂದು ಅನಿಸಿದ್ದು.

ಅದು ನಿಜ ಕಣ್ರಿ. ನಮ್ಮ ಊರು, ನಮ್ಮ ಅಮ್ಮ ಎಂದಿಗೂ ನಿತ್ಯ ಸುಂದರ. ಇಲ್ಲಿ ಯಾಕೋ ಎಲ್ಲಾ ಇದ್ದು ಏನೋ ಇಲ್ಲ ಎಂದೆನಿಸುತ್ತದೆ. ಭಾವನೆಗಳನ್ನು ಅತ್ತಿಟ್ಟುಕೊಂಡಿದ್ದೇವೆ ಅನಿಸುತ್ತದೆ. ಅದೇ ನಾಲ್ಕು ಗೋಡೆಗಳ ಮಧ್ಯೆ ನಾ ಒಂಟಿ ಬಂದಿ ಎಂದೆನಿಸುತ್ತದೆ.

ಯಾರ ಬಳಿ ಬಿಚ್ಚು ಮನಸ್ಸಿನ ಮಾತನ್ನಾಡಲಿ? ಇದು ಎಲ್ಲಾ ಬೇಕಿತ್ತಾ ?  ಯಾವುದೋ ದೊರದ ಆಸೆಗಳಿಗಾಗಿ ನಮ್ಮ ಹೆತ್ತವರನ್ನು, ಬಂದು ಬಳಗವನ್ನು ಬಿಟ್ಟು ಇಲ್ಲಿ ಯಾಕಿದ್ದೇವೆ. ಯಾಕಿಷ್ಟು ಜನ ಇಲ್ಲಿಯ ಜಿ.ಸಿ ಗಳಿಗಾಗಿ ಬಕಾ ಪಕ್ಷಿ ಥರಾ ಕಾಯುತ್ತಿದ್ದಾರೆ, ಪ್ರಾರ್ಥಿಸುತ್ತಿದ್ದಾರೆ. ಜಿ.ಸಿ ಮುಂದೆ ನಮ್ಮ ಆಧಾರ್ ಕಾರ್ಡು ಡಲ್ಲು ಎಂದು ನಮ್ಮ ಜನಗಳಿಗೆ ಯಾಕೆ ಅನಿಸುತ್ತಿದೆ ?

ನಮ್ಮ ದೇಶದಲ್ಲಿರುವ ಅತ್ಯುತ್ತಮ ಸ್ಥಳಗಳ ಪರಿಚಯ ಮಾಡಿರದಿದ್ದರೂ ವಿದೇಶ ಸ್ಥಳಗಳನ್ನು ನೋಡಬೇಕು ತಿರುಗಾಡಬೇಕು ಎಂಬ ಥಹಾ ಥಹಾ ಎಲ್ಲಿಂದ ಬರುತ್ತದೆ?

ಏನು ಮಾಡುವುದು ಅದೇ ಒಂದು ರೀತಿಯ ಬೋರು ಮನಸ್ಸಿಗೆ ಕನಿಷ್ಟ ಬದಲಾವಣೆಯಾಗಿದೆ ಇಲ್ಲಿ!!

ಬದಲಾಗುತ್ತಿರುವುದು ನಾವುಗಳ ಅಥವಾ ನಮ್ಮ ವ್ಯವಸ್ಥೆಯಾ? ಹುಟ್ಟಿ ಬೆಳೆದು, ಓದಿದ  ದೇಶದಲ್ಲಿಯೆ ಇದ್ದು ಏನಾದರೂ ಮಾಡುವ ಬದಲು, ಇಲ್ಲಿಗೆ ಹೀಗೆ ಬಂದು ಯಾಕೆ ಹೊಸ ರೀತಿಯ ಬದುಕಿಗಾಗಿ ಕಷ್ಟಪಡುವುದು ಯಾವ ಸುಖ? ಗೊತ್ತಾಗುತ್ತಿಲ್ಲ!

ಇರುವ ಒಂದು ಎರಡು ಮಕ್ಕಳನ್ನು ಕಟ್ಟಿಕೊಂಡು ಇಬ್ಬರು ದುಡಿಯಲು ತೊಡಗಿದರೇ ಅದು ಹೇಗೆ ಸ್ವಾಸ್ಥ್ಯ ಕುಟುಂಬವೆಂದೆನಿಸುತ್ತದೆ?

ಆದರೂ ದಿನ ಕಳೆದರೇ ಎಂಥವರೂ ಎಂಥ ಸನ್ನಿವೇಶಕ್ಕಾದರೂ ಒಗ್ಗಿ ಕೊಳ್ಳುತ್ತಾರೇ ಅನ್ನುವಂತೆ ಇಲ್ಲಿರುವುದೇ ಮೇಲು ಅನಿಸುತ್ತದಲ್ಲಾ ಯಾಕೆ? ನಾವು ಹುಟ್ಟಿದ ಊರೇ ಪರಕೀಯ ಅನಿಸುತ್ತದಲ್ಲ ಯಾಕೇ?

ಇದೇ ಕಾಲ ನಿಯಮವಾ?



ಶುಕ್ರವಾರ, ಏಪ್ರಿಲ್ 8, 2016

ಬೇವು ಬೆಲ್ಲದಂತೆ ಬದುಕು

ಮಣ್ಣಿನ ಗುಣ ಮರೆಯಬಾರದು. ಹೌದು ಯುಗಾದಿ ಹಬ್ಬ ನಮ್ಮ ಮಣ್ಣಿನ ಹಬ್ಬ. ವರುಷದ ಆರಂಭದ ಹಬ್ಬ. ಹಳ್ಳಿಯ ಪ್ರತಿ ಮನೆಯು ತಪ್ಪದೇ ಸಂಭ್ರಮದಿಂದ ಆಚರಿಸುವ ದೊಡ್ಡ ಹಬ್ಬ.

ಹಳ್ಳಿಯ ಹಬ್ಬದ ಆಚರಣೆಯ ಸಂಭ್ರಮ ಹಾಗೆಯೇ ಮನದಲ್ಲಿ ಕಲರ್ ಕಲರ್ ಪೊಟೋದಂತೆ ಅಚ್ಚು ಹೊತ್ತಿದೆ. ಅದು ಎಂದು ಮರೆಯಾಗದು ಅಂಥ ಹಬ್ಬದ ದಿನಗಳು ಈ ಪಳ ಪಳ ಹೊಳೆಯ ಸಿಟಿಯಲ್ಲಿ ಕನಸು ಮಾತ್ರವಾಗಿದೆ.

ಹಬ್ಬಗಳೆಂದರೇ ಸುತ್ತ ಮುತ್ತಲಿನವರೆಲ್ಲ ಸೇರಿ ಒಟ್ಟಿಗೆ ಒಂದಾಗಿ ಕಲೆತು ಸಂಭ್ರಮಿಸುವುದೆಂದರ್ಥ.

ಜಾತ್ರೆ, ಪರಿಷೇ, ಕೆಂಡಗಳೆಂದರೆ ಸುತ್ತಲಿನ ಹತ್ತು ಹಳ್ಳಿಗಳಲ್ಲಿರುವವರೆಲ್ಲ ಕಲೆತು ನಡೆಸುವ ತೇರು.  ಪ್ರತಿ ಮನೆಯವರು ತಮ್ಮ ನೆಂಟರು ಇಷ್ಟರನ್ನು ತಪ್ಪದೆ ಬನ್ನಿ ಎಂದು ಕರೆಯುವ ಜಾತ್ರೆ ಎಂದಾದರೂ ಮರೆಯುವುದುಂಟೆ?  ವರುಷಕ್ಕೆ ಒಮ್ಮೆ ನಡೆಯುವ ಈ ರೀತಿಯ ಅಪರೂಪದ ಹಬ್ಬಗಳಿಗೆ ಸೇರುವ ಜನ ಜನ ಕಂಡೆ ಮನ ತುಂಬಿಬರುವುದು. ಹಬ್ಬ ಆಚರಿಸಿದ ಸಮಧಾನ ಪ್ರತಿಯೊಬ್ಬರ ಮನದಲ್ಲಿ ನೂರುಕಾಲ ಸ್ಥಾಯಿಯಾಗಿರುವುದು.

ಈ ರೀತಿಯ ಸಂತೋಷದ ದಿನಗಳನ್ನು ಕೇವಲ ಕಥೆಗಳಂತೆ ಕೇಳುವುದು, ಸಿನಿಮಾದಂತೆ ಟಿ.ವಿ ಯಲ್ಲಿ ನೋಡುವುದೇ ಈಗಿನ ಸುಖವಾಗಿದೆ.

ಅನುಭವಿಸಲು ಸಾಧ್ಯವಿಲ್ಲ. ಇದು ಎಲ್ಲಾ ಎಲ್ಲಿಂದ ಎಲ್ಲಿಗೋ ಬಂದು ನಿಂತಂತಿದೆ.

ಇಂದು ಹಳ್ಳಿಗಳು ಸಹ ಅರ್ಧದಷ್ಟು ಬದಲಾಗಿರುವುದು ಸುಳ್ಳಲ್ಲ.

ಆದರೂ ಅದೇ ಮಣ್ಣಿನ ವಾಸನೆ ಇಂದಿಗೂ ಇದ್ದೆ ಇರುತ್ತದೆ. ವಂಸಂತದ ಚಿಗುರು ಹಳೆ ಮರದಲ್ಲಿ ಕಾಲಕ್ಕೆ ತಕ್ಕಂತೆ ಬಂದೆ ಬರುತ್ತದೆ. ಬದಲಾಗಿರುವುದು ನಮ್ಮ ಮನಸ್ಸಿನ ನೋಟ ಮಾತ್ರ ಅಂದರೇ ತಪ್ಪಲ್ಲ!

ಇಂದು ಇರುವ ಮೂರು ಮಂದಿಯೇ ಮನೆಯಲ್ಲಿ ಬಾಗಿಲು ಹಾಕಿಕೊಂಡು ಎಲ್ಲಾ ಹಬ್ಬಗಳನ್ನು ಚೆನ್ನಾಗಿ ಆಚರಿಸಿಕೊಳ್ಳುವೆವು. ಮನೆಯಲ್ಲಿನ ಸಂಭ್ರಮದ ಸೆಲ್ಫಿ ಪೊಟೋಗಳನ್ನು ಎಪ್. ಬಿ ಯಲ್ಲಿ ಅಪಲೋಡ್ ಮಾಡಿ ಲೈಕ್ ಗಳಿಗಾಗಿ ಕಾಯುವವ ತವಕದ ಮನಸ್ಸುಗಳು ನಮ್ಮದಾಗಿದೆ.

ಸಂಭ್ರಮಗಳೆಲ್ಲಾ ಅನುಭವಿಸುವುದಕ್ಕಿಂತ ಸೆರೆ ಹಿಡಿದು ಕೈಯಲ್ಲಿನ ಮೊಬೈಲ್ ಗೆ ನೂಕುವುದಂತಾಗಿದೆ. ಪ್ರತಿಯೊಂದನ್ನು ಪೊಟೋ ಕ್ಕಾಗಿ ಮಾಡುವಂತಾಗಿದೆ. ಪೊಟೋ ತೆಗೆಯುವ ನಲಿವಿನಲ್ಲಿ ಮನದ ಮನಸ್ಸುಗಳ ಕಾತುರತೆಯನ್ನು ಸೊರಗಿಸುತ್ತಿದ್ದೇವೆ. ಇದೆ ನಿಜವಾದ ಹಬ್ಬವಾಗಿದೆ.

ಎಲ್ಲಿಗೂ ಹೋಗದೆ ಯಾರನ್ನು ಸಂಪರ್ಕಿಸದೆ ತಮಗೆ ತಾವೆ ನಲಿದು ದೂರದ ಪ್ರಪಂಚಕ್ಕೆ ಸಂಭ್ರಮದ ಗಳಿಗೆಗಳನ್ನು ರವಾನೆ ಮಾಡುವುದೆ ಕಾಯಕವಾಗಿದೆ.  ವಿಡಿಯೋ  ತುಣುಕು , ಪೊಟೋ ಪ್ರೇಮ್ ಬದುಕು ನಮ್ಮದು ಅಂದರೇ ತಪ್ಪಲ್ಲಾ!

ಪ್ರತಿಯೊಂದನ್ನು ಹೊರ ಪ್ರಪಂಚದ ದೃಷ್ಟಿಗಾಗಿ ನಮ್ಮ ನಮ್ಮ ಭಾವನೆಗಳನ್ನು ಹೊಂದಿಸಿಕೊಂಡು ನಲಿಯುವೆವು ಅನಿಸುತ್ತದೆ. ಕೃತಕ ಪ್ಲಾಶ್ ಗೆ ಕೊಡುವ ನಮ್ಮ ನಗುವನ್ನು ಜೀವಂತ ಮುಖಗಳ ಎದುರಿಗೆ ಕೊಡಲಾರದಷ್ಟು ಕಳೆಗಟ್ಟಿಸಿಕೊಂಡಿವೆ.

ಹಬ್ಬ ಅನ್ನುವುದಲ್ಲ, ನಮ್ಮ ಪ್ರತಿಯೊಂದು ಚಟುವಟಿಕೆಗಳನ್ನೆಲ್ಲಾ ದಾಖಲೆಗಾಗಿ ಮಾಡುವಂತಾಗಿದೆ.

ಮದುವೆ -ಮುಂಜಿ-ಹುಟ್ಟಿದ ಹಬ್ಬ ಇತ್ಯಾದಿ ಯಾವೊಂದು ಆಚರಣೆಗಳು ಕೇವಲ ಆಚರಣೆಗಳಾಗಿವೆ ಅನಿಸುತ್ತದೆ.

ಆಚರಿಸುವ ಈ ದಿನಗಳ ಮಹತ್ವ ಮರೆಯಾಗಿದೆ. ಬೆರೆತು ನಲಿಯುವ ದಿನಗಳು ಯಾರೊಬ್ಬರಿಗೂ ಸಿಗುತ್ತಿಲ್ಲ. ಅವರವರೆ ಸಂತೋಷಿಸಿ ಇದೆ ನಮ್ಮ ಮ್ಯಾಕ್ಸಿಮಮ್ ಖುಷಿಯ ಗಳಿಗೆಗಳು ಎಂದುಕೊಂಡು ಯಾವುದಾದರೂ ಸೋಷಿಯಲ್ ಸೈಟ್ ನಲ್ಲಿ ಟ್ಯಾಗ್ ಮಾಡಿಬಿಟ್ಟರೆ ಸಾಕಪ್ಪ ಅನಿಸುತ್ತಿದೆ.

ಇಂಥ ಸ್ಥಿತಿಯಲ್ಲಿ ಹಳ್ಳಿಯ ಹಬ್ಬಗಳು ನಮ್ಮನ್ನು ತುಂಬ ಕಾಡುತ್ತವೆ. ಆ ದಿನಗಳು ಮತ್ತೆ ಬರಬಾರದೇ ಅನಿಸುತ್ತದೆ. ವರುಷಕ್ಕೆ ಒಮ್ಮೆ ಸಿಗುತ್ತಿದ್ದ ಹೊಸ ಬಟ್ಟೆಗಳು. ವರುಷಕ್ಕೆ ಒಮ್ಮೆ ಸಿಗುತ್ತಿದ್ದ ಬೋರಿ ಸಿಹಿ ತಿಂಡಿಗಳು, ಹಬ್ಬಕ್ಕಾಗಿಯೇ ದೂರದ ಊರಿನಿಂದ ಬರುತ್ತಿದ್ದ ಕುಟುಂಬದ ಪ್ರೀತಿ ಪಾತ್ರರರ ದರುಶನಗಳು.. ಹೀಗೆ ಸಪ್ರೈಜ್ ಎಂಬುದೇ ಕಾಣೆಯಾಗಿದೆ.

ಪ್ರತಿಯೊಂದು  ಕಾಫಿ ಮಾಡಿದ ಜೆರಾಕ್ಸ್ ನಡಾವಳಿಕೆಗಳು, ಸಂಭ್ರಮಗಳು ಅನಿಸುತ್ತದೆ.

ಯಾವುದರಲ್ಲೂ ವೈವಿಧ್ಯಮಯವಾದ ಎಂದು ಮರೆಯಲಾಗದ ಕ್ಷಣಗಳು ಎಂದು ಅನಿಸುತ್ತಿಲ್ಲ!

ರುಚಿಯಾದ ತಿನಿಸುಗಳು ಮಾಮೊಲಿ ದಿನದಲ್ಲಿ ತಿಂದ ರೀತಿಯಂತೆ ಅನಿಸುತ್ತದೆ. ಹಬ್ಬದ ರುಚಿ ಮಾಡಿದ ನಮ್ಮ ತಿಂಡಿಗಳಲ್ಲಿ ಇಲ್ಲ. ಯಾವುದಾದರೂ ಹಳ್ಳಿ ಮನೆ, ಬಾಡೋಟದ ರೆಸ್ಟೊರೆಂಟ್ ಗಳಲ್ಲಿನ ರುಚಿಯೇ ಮೆಚ್ಚು.

ಇದು ನಮ್ಮ ಮನಸ್ಸಿನ ಭಾವನೆಯೊ ಅಥವಾ ಮತ್ತ್ಯಾವುದೋ ಒಂದು ಗೊತ್ತಾಗುತ್ತಿಲ್ಲ.

ಯುಗಾದಿ! ಯುಗದ ಹಾದಿ... ಯುಗ ಯುಗಾದಿ ಕಳೆದರೂ ಮತ್ತೆ ಯುಗಾದಿ ಬರುತ್ತದೆ.. ಪ್ರತಿ ಯುಗಾದಿ ಹೊಸತನದ್ದು ಅನಿಸುತ್ತಿರುತ್ತದೆ. ಆದರೇ ಈಗಿನ ಯುಗಾದಿ ಮತ್ತೊಂದು ಹಬ್ಬ ಮಾತ್ರ ಎಂಬ ಪೀಲ್ ಎಂದೂ ಆಗಬಾರದು ಎನ್ನುವುದು ನಮ್ಮ ಆಶಯ.

ಮನುಷ್ಯನ ದುಡಿತ ಸಮಯಕ್ಕೆ ಬಿಡುವು ಕೊಟ್ಟು ತನ್ನ ಸುತ್ತಲಿನವರೊಡನೆ ಸೇರಿಕೊಂಡು ತನ್ನ ಕಷ್ಟ ಸುಖಗಳನ್ನು ಹಂಚಿಕೊಂಡು ಮನಸ್ಸು ಮನಸ್ಸು ಬೆರತು ಆಚರಿಸಿದರೆ ಜೀವನ ಯುಗಾದಿಯ ಬೇವು ಬೆಲ್ಲದಂತೆ ಬದುಕಾಗುವುದು.

ಇಂಥ ದಿನಗಳು ಪುನಃ ನಗರದ ಮಂದಿಗಳಿಗೆ ಮರಳಿ ಮರಳಿ ಬರಲಿ ಎಂದು ಆಶಿಸೋಣ!