ಬುಧವಾರ, ಅಕ್ಟೋಬರ್ 12, 2016

ಮನಸ್ಸು ಅವಳು ಊರು ನೆನಪು

ಅವತ್ತೇ ಅನಿಸಿತ್ತು ಇಷ್ಟು ಚೂಸಿಯಾಗಿ ಸಿಕ್ಕಿದ ಪ್ರೀತಿ ಕೊನೆಯವರೆಗೂ ಇರುವುದಾ? ಇದು ಯಾಕಾದರೂ ನನ್ನ ಮನಸ್ಸಿನಲ್ಲಿ ಅಂದು ಹಾಗೆ ಪಾಸ್ ಆಯಿತೋ? ಗೂತ್ತಿಲ್ಲ. ಸಿಕ್ತ್ ಸೇನ್ಸ್ ಎಂಬುದು ಒಮ್ಮೊಮ್ಮೆ ಹೀಗೆ ಕೆಲಸ ಮಾಡುತ್ತದೆ.

ಆದರೇ ಕಳೆದ ನಾಲ್ಕುವರೆ ವರುಷಗಳ ನೆನಪು ಇನ್ನು ಇಂದಿಗೂ ಹಸಿಯಾಗಿದೆ. ಅಂದು ಎಲ್ಲವೂ ಸುಂದರ. ಪ್ರತಿ ಘಳಿಗೆಯು ಏನೋ ಹೊಸತನ. ಅವಳೊಬ್ಬಳು ಜೊತೆ ಇದ್ದರೇ ಏನೂ ಬೇಕಾದರೂ ಜಯಿಸುವೆನು ಎಂಬ ದೈರ್ಯ.ಮುಂಜಾನೆಯ ಸೂರ್ಯನ ಕಿರಣಗಳನ್ನು ಕಾಣುವಂತಾ ಮನಸ್ಸು. ಯಾವಾಗ ಬೆಳಕಾಗುವುದೋ..  ಬೆಳ್ಳಂ ಬೆಳಗ್ಗೆಯಲ್ಲಿ ಯಾವಾಗ ನಮ್ಮೂರಿನ ಬಸ್ ನ ಮೊದಲ ಹಾರ್ನ್ ಕಿವಿಗೆ ಬೀಳುವುದೋ. ನಾನು ಕಾಲೇಜು ಎಂದುಕೊಂಡು.. ಎದ್ದು, ಬಿದ್ದು ಸಿದ್ಧವಾಗುವುದು.

ನಾನು ಪ್ರತಿದಿನ ಸೂರ್ಯ ಹುಟ್ಟುವುದಕ್ಕೂ ಮೊದಲು ಕಾಲೇಜಿಗೆ ಸಿದ್ಧವಾಗುತ್ತಿದ್ದ ರಭಸಕ್ಕೆ ಅಮ್ಮನೇ ದಂಗಾಗಿದ್ದಳು.

ಏನ್ ಮಗಾ ಎಷ್ಟು ಕಟ್ಟುನಿಟ್ಟಾಗಿ ಓದಿನ ಬಗ್ಗೆ ಪ್ರೀತಿ ಇಟ್ಟುಕೊಂಡಿದೆ. ಬಿಡು ಮುಂದೊಂದು ದಿನ ಊರಿಗೆ ದೊಡ್ಡ ಅಧಿಕಾರಿಯಾಗಿ ಬಂದೇ ಬರುತ್ತಾನೆ. ಎಂದು ಮನದಲ್ಲಿಯೇ ಸಂತಸಪಟ್ಟಿದ್ದಳು ಅನಿಸುತ್ತದೆ.

ಬೇಡವೆಂದರೂ ರಾತ್ರಿ ಉಳಿಸಿದ ಹಾಲನ್ನು ಬಿಸಿ ಮಾಡಿ ಕಾಫಿ ಪೌಡರ ಮಿಕ್ಸ್ ಮಾಡಿ ನನಗೆ ಎಂದೇ ಕಾಫಿ ಮಾಡಿಕೊಡುತ್ತಿದ್ದುದು. ಎಲ್ಲೋ ಉಳಿಸಿ, ಹಾಗೆಯೇ ಮಡಿಸಿದ ಒದ್ದೆ ಒದ್ದೆಯ ಹತ್ತರ ಎರಡು ನೋಟುಗಳನ್ನು ನನ್ನ ಎದೆ ಮೇಲಿನ ಜೋಬಿಗೆ ನಿತ್ಯ ಇಡುತ್ತಿದ್ದುದು.

ಅದು ತಾಯಿ ಪ್ರೀತಿ! ಈ ಪ್ರೀತಿ ಒಂದೇ ನಾನು ಈಗಲೂ ಜೀವಂತವಾಗಿ ಇರುವಂತೆ ಮಾಡಿರುವುದು.

ಅಂದು ಇದನ್ನು ಅರ್ಥ ಮಾಡಿಕೊಳ್ಳುವ ವಯಸ್ಸು ನನ್ನದಾಗಿರಲಿಲ್ಲ.

ಬಸ್ ನಲ್ಲಿ ಕುಳಿತರೂ ವರುಷವಾದಂತೆ. ಯಾವಾಗ ಈ ಡ್ರೈವರ್ ಬರುವನೋ? ಯಾವಾಗ ಹೊರಡುವನೋ? ಎಂದು ಪೂರ್ತಿ ಸಿಟ್ಟಲ್ಲಿ ಕಿಟಕಿಯಾಚೆ ನಿಂತು ಟೀ ಕುಡಿಯುತ್ತಿರುವವನ್ನು ಮನದಲ್ಲಿಯೇ ಶಪಿಸುತ್ತಿದ್ದೆ.

ಮುಂಜಾನೆಯ ಸಮಯ ಓದುವುದಕ್ಕೆ ಹೇಳಿ ಮಾಡಿಸಿದ ಸಮಯವಂತೆ. ಆಗ ಏನೂ ನೆನಪು ಮಾಡಿಕೊಂಡರು, ಓದಿದರೂ ಮನಸ್ಸಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವುದಂತೆ. ಆದರೇ ಆ ಸಮಯದಲ್ಲಿ ಅವಳ ನೆನಪಲ್ಲದೇ ಇನ್ನು ಏನೂ ಮನದಲ್ಲಿರಲಿಲ್ಲ. ಆದಕ್ಕೆ ಇರಬೇಕು ಈಗಲೂ ಅವಳ ಪ್ರತಿ ಚಲನೆಯು ಹಾಗೆಯೇ ಪ್ರತಿಭಾರಿ ಮೈ ಮನ ತಟ್ಟುತ್ತದೆ.

ಬಸ್ ಸ್ವಲ್ಪ ಸ್ವಲ್ಪ ಸೌಂಡ ಮಾಡಿಕೊಳ್ಳುತ್ತಾ ಹಳ್ಳವನ್ನು ಶಕ್ತಿಯಿಲ್ಲದ ಹುಡುಗನಂತೆ ಉಸಿರು ಬಿಗಿ ಇಟ್ಟುಕೊಂಡು ಏರುತ್ತಿದ್ದರೇ.. ಆ ದಡದ ಮೇಲಿರುವ ನನ್ನ ಹುಡುಗಿಯ ಊರಿನ ಒಂದೊಂದೇ ನೋಟ ಕಂಡು ಎದೆಯ ಬಡಿತ ಏರುತ್ತಿತ್ತು. ಅವಳು ಬಂದಿರುತ್ತಾಳೆ. ಅವಳಿಗೂ ನನ್ನ ಕಾತರ ಇದ್ದೇ ಇರುತ್ತದೆ. ಎಂದುಕೊಂಡು ನಿತ್ಯ ಖುಷಿಯಾಗುತ್ತಿದ್ದೆ.

ಇಂದು ರಾತ್ರಿಯೇ ಮೇಸೆಜ್ ಮಾಡಿದ್ದಳು. ಯಾಕೋ ಕಣೋ ನಿನ್ನ ಹೆಚ್ಚು ಮಿಸ್ ಮಾಡಿಕೊಂಡಂಗೇ ಆಗ್ತಾ ಇದೆ. ನಾಳೆ ನಿನ್ನ ಇಷ್ಟದ ಚೋಡಿದಾರ ಹಾಕಿಕೊಂಡು ಬರುತ್ತೇನೆ.. ಅಂದಿದ್ದಳು. ನಾನು ಲವ್ ಯು ಎಂದು ಹಾಗೆಯೇ ನಿದ್ದೆಗೆ ಜಾರಿದ್ದೆ.

ಬಸ್ ಅಂತೂ ಎಡಕ್ಕೆ ತಿರುಗಿ ಅಲ್ಲಿಯೇ ಬಂದ ಬಸ್ ಸ್ಟಾಪ್ ನಲ್ಲಿ ನಿಂತಿತು.

ಕಣ್ಣರಳಿಸಿ ಮುಂದಿನ ಬಾಗಿಲನ್ನೂ ನೋಡಿದ್ದೇ ಬಂತು.

ಇಲ್ಲಿ ಬಸ್ ಸ್ವಲ್ಪ ಹೊತ್ತು ನಿಲ್ಲುವುದು ಮಾಮೂಲು. ಯಾಕೆಂದರೇ ಇದು ಮೊದಲನೇಯ ಊರು. ಇಲ್ಲಿಯು ಪುನಃ ಪ್ರತಿಯೊಬ್ಬರೂ ಟೀ-ತಿಂಡಿ ಸೇವಿಸುತ್ತಾರೆ. ಅದು ಇದು ಎಂದು  ಸಣ್ಣ ಕುಶೋಲಹಪರಿ ಪರಸ್ಪರ ನಡೆಯುತ್ತದೆ. ಮೂರು ಊರುಗಳಿಗೂ ಇದು ಒಂದೇ ಬಸ್ ಸ್ಟಾಪ್. ಜನಗಳು ಅಕ್ಕಪಕ್ಕದ ಎರಡು ಊರುಗಳಿಂದಲೂ ಮುಂಜಾನೆಯೇ ನಡೆದುಕೊಂಡು ಬರುತ್ತಾರೆ. ಪಾಪ ಬರಲಿ ಜನ. ಏನೂ ಐದು ಹತ್ತು ನಿಮಿಷ ಲೇಟ್ ಆದ್ರೆ ಪರವಾಗಿಲ್ಲ. ಚಿಹಳ್ಳಿಯಿಂದ ಚಚ್ಚಿದಾರಯಿತು ಎಂಬ ಕರುಣೆ ಈ ಬಸ್ಸಿನ ಡ್ರೈವರ್ ನದು.

ಆದರೇ ನನ್ನ ಹುಡುಗಿಯ ಸುಳಿವೇ ಇಲ್ಲ..!

ಏನೇ ಲೇಟ್ ಎಂದರೂ ಐದು ನಿಮಿಷಕ್ಕೂ ಜಾಸ್ತಿ ಲೇಟ್ ಮಾಡಿಲ್ಲ ಯಾವತ್ತು.

ಏನಾಗಿರಬಹುದು? ಮೇಸೆಜ್ ಮಾಡಲಾ.. ಕಾಲ್ ಮಾಡಲಾ ಎಂಬ ಕನಪ್ಯೂಸನ್ ನಲ್ಲಿ ಚಟಪಟಿಸಿದೆ.

ಹಿಂದಿನ ಸೀಟ್, ಮುಂದಿನ ಸೀಟ್ ನಲ್ಲಿ ನಮ್ಮ ಊರಿನವರ ದಂಡೇ ದಂಡು. ಸ್ವಲ್ಪ ಸಂಕೋಚ, ಹೆಚ್ಚು ಢವಢವ ಎದೆಯ ಬಡಿತದಲ್ಲಿ ಅವಳ ಮನೆಯಿರುವ ದಾರಿಯ ಕಡೆಗೆ ಬಲ ಬದಿಯ ಕಿಟಿಕಿಯಿಂದ ಹಾಗೆಯೇ ಕಣ್ಣು ಹಾಯಿಸಿದೆ.

ನೋ!  ಅವಳ ಸಪ್ಪಳವೇ ಇಲ್ಲ.

ಆಗಲೇ ಕಂಡಕ್ಟರ್ ರೈಟ್ -ರೈಟ್ ಹೇಳುತ್ತಿದ್ದಾನೆ... ಕಾಲ್ ಮಾಡಲು ಧೈರ್ಯ ಬರದೇ ಮೇಸೆಜ್ ಕುಟ್ಟಿದೆ.  ಮೇಸೆಜ್ ಸೆಂಡ್ ಆಗಿದ್ದು ಕನಪರ್ಮ್ ಮಾಡಿಕೊಂಡೆ ಹ್ಯಾಪು ಮೊರೆ ಮಾಡಿಕೊಂಡೆ.

ಬಸ್ ಹಾಗೆಯೇ ಬಲಕ್ಕೆ ಒರಳಿತು. ಜಾಲಿ ಮುಳ್ಳುಗಳಿರುವ ಸೆರಗಿನಲ್ಲಿ ತಿರುಗಿ ಮುಂದಿನ ಹಳ್ಳದೊಳಕ್ಕೆ ಇಳಿಯಲಾರಂಬಿಸಿತು. ದಾರಿ ದೂರವಾಯಿತು, ಅವಳು ಇನ್ನು ಹತ್ತಿರವಾದಳು.

ಪುನಃ ಆಸೆಯ ಕಣ್ಣಿನಿಂದ ಜನ ಜಂಗುಳಿಯ ಮಧ್ಯದಲ್ಲಿ ಪುನಃ ಹಿಂದಿನ ಬಸ್ ಗ್ಲಾಸ್ ನಲ್ಲಿ ಕಾಣದ ದಾರಿಯ ಕಡೆ ಬಿಟ್ಟ ಕಣ್ಣಲ್ಲಿ ನೋಡಿದೆ. ಹಿಂದಿನ ಸೀಟನಲ್ಲಿದ್ದ ದೊಡ್ಡ ಮೀಸೆಯ ಈರಜ್ಜ ಬೊಚ್ಚು ಬಾಯಲ್ಲಿ ನಕ್ಕಿದ್ದು ಮಾತ್ರ ಲಕ್ಷಣವಾಗಿ ಕಾಣಿಸಿತು.

ಮನದಲ್ಲಿ ತಳಮಳ. ಮುಂದಿನ ಸ್ಟಾಪ್ ನಲ್ಲಿ ಹಿಳಿದು ಹೋಗವುದೇ ಎಂದು ಒಂದು ಮನಸ್ಸು ಕೇಳಿದರೇ.. ಇನ್ನೊಂದು ಮನಸ್ಸು ಈರಜ್ಜ ನ ನಗುವನ್ನು ನೆನಪಿಸಿ ಸುಮ್ಮನಿರು ಎಂದಿತು.

ಈ ಹುಡುಗಿಯರೇ ಹೀಗೆ ಅನಿಸುತ್ತದೆ. ಯಾವಾಗಲೂ ಹತ್ತಿರವೇ ಇರುತ್ತೇವೆ ಅನ್ನುತ್ತಾರೆ. ನೀನೇ ನನ್ನ ಜೀವ ಅನ್ನುತ್ತಾರೆ. ಮೀಸ್ ಮಾಡಿಕೊಳ್ಳುತ್ತಿದ್ದೇನೆ ಅನ್ನುತ್ತಾರೆ. ನೀನು ಬೇಕು ಅನ್ನುತ್ತಾರೆ. ಆದರೇ ಈ ರೀತಿ ಹೇಳದೆ ಕೇಳದೇ ಕೈ ಕೊಡುತ್ತಾರೆ.

ಹುಡುಗಿಯರಿಗೆ ಏನೂ ಗೊತ್ತು ಗಂಡಸರ ದುಃಖ?

ಪುನಃ ಪುನಃ ಮೊಬೈಲ್ ಕಡೆ ಬಗ್ಗಿ ಬಗ್ಗಿ ನೋಡಿದ್ದೆ ಬಂತು.

ನೂ ರಿಪ್ಲೇ...!

ಎಷ್ಟು ಹೊತ್ತಿಗೆ ಕಾಲೇಜು ತಲುಪುವೇನೋ ಅನ್ನಿಸಿತು. ಈ ಬಸ್ , ಈ ರೋಡ್ ದೇವರಿಗೆ ಪ್ರೀತಿ ಅನಿಸಿತು. ಯಾಕೋ ಮುಂಜಾನೆಯ ಆಹ್ಲಾದತೆಯೇ ಇಲ್ಲವೇನಿಸಿತು. ಸೂರ್ಯ ಮಂಕಾಗಿದ್ದಾನೆ ಅನಿಸಿತು.

ಪುರದಲ್ಲಿ ಬಸ್ಸು ನಿಂತಾಗ ಒಂದು ಚಿಕ್ಕ ಹರಕೆಯನ್ನು ಲಕ್ಷ್ಮಿ ನರಸಿಂಹಸ್ವಾಮಿಯಲ್ಲಿ ಹೊತ್ತುಕೊಂಡೆ. ಕಾಲೇಜು ತಲುಪುವುದರಲ್ಲಿ ನನ್ನವಳ ಮೇಸೆಜ್ ಬರಲಿ. ನಾನು ಮುಂದಿನ ಶನಿವಾರ ಅವಳ ಜೊತೆಯಲ್ಲಿ ನಿನ್ನ ದರುಶನ ಮಾಡೇ ಮಾಡುವೆನೆಂದು!

ಕಾಲೇಜು ಅಂದರೇ ಕಾಲೇಜೇ. ಅಲ್ಲಿ ಎಂದೂ ಮರೆಯಲಾರದ ಕ್ಷಣಗಳಿರುತ್ತವೆ. ಗೆಳೆಯ ಗೆಳತಿಯರ ಜೊತೆಯಲ್ಲಿ ಕೊಡಿ ಕಲಿಯುವ ಪರಿಸರವಿರುತ್ತದೆ. ನಾವುಗಳು ನಮ್ಮನ್ನು ಅತ್ಯುತ್ತಮರನ್ನಾಗಿ ಮಾಡಿಕೊಳ್ಳುವ ಅವಕಾಶವಿರುತ್ತದೆ. ಕಲಿಯುವುದಕ್ಕೆ ವಿಫುಲವಾದ ವಾತವರಣವಿರುತ್ತದೆ. ಇಂಥ ಸರಸ್ವತಿಯ ನೆಲೆಯಾದ ಕಾಲೇಜಿಗೆ ನಿತ್ಯ ನಮಸ್ಕಾರ ಮಾಡಿ ಹೆಜ್ಜೆ ಇಡಬೇಕು.

ಪ್ರತಿಯೊಬ್ಬರ ಬದುಕಿಗೆ ಹೊಸ ಮಾರ್ಗ ತೋರುವ ನೆಲೆಬೀಡು ನಮ್ಮ ಶಿಕ್ಷಣ ಸಂಸ್ಥೆಗಳು.

ಮನವಿಲ್ಲದ ಮನಸ್ಸಿನಲ್ಲಿ ಬಸ್ಸನಿಂದ ಇಳಿದು ಮೊದಲು ಮಾಡಿದ್ದು ೯೮೦೪೨೦೩೨೦೧ ನಂಬರ್ ಗೆ ಕಾಲು. ಕಾಲ್ ಕನಕ್ಟ್ ಆಗುವುದಕ್ಕೂ ತಾತ್ಸರ ಮಾಡುತ್ತಿದೆ ಇಂದು. ಇದು ಹೀಗೆ ಕಷ್ಟ ಕಾಲದಲ್ಲಿಯೇ ಆಳಿಗೊಂದು ಕಲ್ಲು ಅನ್ನುವ ರೀತಿಯಲ್ಲಿ. ಒಂದು, ಎರಡು ರೀಂಗ್ ಆಗಲು ಶುರುವಾಯಿತು. ಎದೆಯಲ್ಲಿ ಢವಢವ ಬಡಿತ. ನಾಲ್ಕನೇ ರೀಂಗ್ ಗೆ ಕಾಲ್ ಪೀಕ್ ಆಯ್ತು. ಆದರೇ ದ್ವನಿ ತೀರ ಅಪರಿಚಿತವೇನಿಸಿತು. ದೂಸರಾ ಮಾತನಾಡದೇ ಕಾಲ್ ಕಟ್ ಮಾಡಿದೆ.

ಅಲ್ಲ ಏನಾಯ್ತು ಇವಳಿಗೆ? ನೆನ್ನೆ ಸರೀ ರಾತ್ರಿಯವರೆಗೂ ಟಚ್ ಲ್ಲಿ ಇದ್ದವಳಿಗೆ. ಬೆಳಕು ಹರಿಯುವುದರಲ್ಲಿ ಸುದ್ಧಿಯೇ ಇಲ್ಲ! ಮೊಬೈಲ್ ನ್ನು ಒಂದು ಕ್ಷಣ  ಬಿಟ್ಟಿರಲಾರದವಳು. ಹೀಗೆ ಮತ್ತೊಬ್ಬರೂ ರೀಸಿವ್ ಮಾಡುತ್ತಿದ್ದಾರೆ ಎಂದರೇ...? ಏನೂ ಅರ್ಥವಾಗಲಿಲ್ಲ.

ಯಾಕೋ ತಣ್ಣಗೆ ಮನಸ್ಸಿಗೆ ಶಾಕ್ ಆಯಿತು.  ಭಾರವಾದ ಹೆಜ್ಜೆಯನ್ನು ಹಾಕಿಕೊಂಡು ಕಾಲೇಜು ಮೆಟ್ಟಿಲನ್ನು ಹತ್ತುತ್ತಿದ್ದಂತೆ ಸುಭಾಷ್ ಸಿಕ್ಕಿದ. ಅವನು ಬಾರೋ ಕ್ಯಾಂಟಿನ್ ಗೆ ಹೋಗೋಣ ಇನ್ನು ೩೦ ನಿಮಿಷ ಇದೆ ಎಂದ. ಆದರೆ ನಾನು ಅದು ಕಿವಿಗೆ ಬಿಳಿಸಿಕೊಳ್ಳದ ರೀತಿಯಲ್ಲಿ ಇನ್ನೊಂದು ಸ್ಟೆಪ್ ಇಟ್ಟೆ. ಹಿಂದಿನಿಂದ ಸರಿಯಾಗಿ ಗುದ್ದಿದ.  ಆಗ ಎಚ್ಚರವಾದಂತಾಗಿ ಹಾಯ್ ಎಂದೇ.

ಪುನಃ ಅವನೇ ಹೇಳಿದ. ಸಾಯೇಬ್ರ್ ಮೂಡ್ ಯಾಕೋ ಸರಿ ಇಲ್ಲಾ!

ಗೊತ್ತಾಯಿತು ಬಿಡು. ನೀ ಒಂಟಿಯಾಗಿ ಬಂದಾಗಲೇ ಅಂದುಕೊಂಡೆ! ಯಾಕೋ ನಿನ್ನ ಹುಡುಗಿ ನಿನ್ನ ಜೋತೆ ಬರಲಿಲ್ಲವಾ? ಒಂದೇ ಮಾತಲ್ಲಿ ’ಇಲ್ಲಾ’ ಎಂದೇ. ಏಯ್ ಬಿಡು ಗುರು. ಏನೋ ಕೆಲಸ ಇರುತ್ತೇ ಅದಕ್ಕೆ ಬಂದಿಲ್ಲ.  ಇಷ್ಟು ಚಿಕ್ಕ ವಿಷಯಗಳಿಗೆಲ್ಲ ಹುಡುಗರು ಬೇಜಾರು ಮಾಡಿಕೊಳ್ಳಬಾರದು. ಹುಡುಗಿಯ ಒಂದು ಮೇಸೆಜು, ಒಂದು ಕಾಲ್ ಬರದಿದ್ದರು ಜಗತ್ತೇ ಮುಳುಗಿದ ರೀತಿಯಲ್ಲಿ ವರ್ತಿಸುತ್ತಿರಾ ಕಣ್ರೋ .. ಎಂದು ಚಿಕ್ಕ ವೇದಾಂತ ಹೇಳಿ - ಬಾ ಈಗ ಕ್ಯಾಂಟಿನಗೆ ಹೋಗೋಣ. ನನಗೆ ಸಿಕ್ಕಪಟ್ಟೆ ಹಸಿವು ಎಂದ.

ಆದರೇ ನನ್ನ ಮನಸ್ಸು ಇನ್ನೂ ಅವಳ ಊರುಬಿಟ್ಟು ಬಂದಿರಲಿಲ್ಲ... ಯಾವುದೋ ಕೆಟ್ಟ ಘಟನೆಗೆ ಮುನೂಚನೆಯೆಂಬಂತೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ