ಶುಕ್ರವಾರ, ಏಪ್ರಿಲ್ 8, 2016

ಬೇವು ಬೆಲ್ಲದಂತೆ ಬದುಕು

ಮಣ್ಣಿನ ಗುಣ ಮರೆಯಬಾರದು. ಹೌದು ಯುಗಾದಿ ಹಬ್ಬ ನಮ್ಮ ಮಣ್ಣಿನ ಹಬ್ಬ. ವರುಷದ ಆರಂಭದ ಹಬ್ಬ. ಹಳ್ಳಿಯ ಪ್ರತಿ ಮನೆಯು ತಪ್ಪದೇ ಸಂಭ್ರಮದಿಂದ ಆಚರಿಸುವ ದೊಡ್ಡ ಹಬ್ಬ.

ಹಳ್ಳಿಯ ಹಬ್ಬದ ಆಚರಣೆಯ ಸಂಭ್ರಮ ಹಾಗೆಯೇ ಮನದಲ್ಲಿ ಕಲರ್ ಕಲರ್ ಪೊಟೋದಂತೆ ಅಚ್ಚು ಹೊತ್ತಿದೆ. ಅದು ಎಂದು ಮರೆಯಾಗದು ಅಂಥ ಹಬ್ಬದ ದಿನಗಳು ಈ ಪಳ ಪಳ ಹೊಳೆಯ ಸಿಟಿಯಲ್ಲಿ ಕನಸು ಮಾತ್ರವಾಗಿದೆ.

ಹಬ್ಬಗಳೆಂದರೇ ಸುತ್ತ ಮುತ್ತಲಿನವರೆಲ್ಲ ಸೇರಿ ಒಟ್ಟಿಗೆ ಒಂದಾಗಿ ಕಲೆತು ಸಂಭ್ರಮಿಸುವುದೆಂದರ್ಥ.

ಜಾತ್ರೆ, ಪರಿಷೇ, ಕೆಂಡಗಳೆಂದರೆ ಸುತ್ತಲಿನ ಹತ್ತು ಹಳ್ಳಿಗಳಲ್ಲಿರುವವರೆಲ್ಲ ಕಲೆತು ನಡೆಸುವ ತೇರು.  ಪ್ರತಿ ಮನೆಯವರು ತಮ್ಮ ನೆಂಟರು ಇಷ್ಟರನ್ನು ತಪ್ಪದೆ ಬನ್ನಿ ಎಂದು ಕರೆಯುವ ಜಾತ್ರೆ ಎಂದಾದರೂ ಮರೆಯುವುದುಂಟೆ?  ವರುಷಕ್ಕೆ ಒಮ್ಮೆ ನಡೆಯುವ ಈ ರೀತಿಯ ಅಪರೂಪದ ಹಬ್ಬಗಳಿಗೆ ಸೇರುವ ಜನ ಜನ ಕಂಡೆ ಮನ ತುಂಬಿಬರುವುದು. ಹಬ್ಬ ಆಚರಿಸಿದ ಸಮಧಾನ ಪ್ರತಿಯೊಬ್ಬರ ಮನದಲ್ಲಿ ನೂರುಕಾಲ ಸ್ಥಾಯಿಯಾಗಿರುವುದು.

ಈ ರೀತಿಯ ಸಂತೋಷದ ದಿನಗಳನ್ನು ಕೇವಲ ಕಥೆಗಳಂತೆ ಕೇಳುವುದು, ಸಿನಿಮಾದಂತೆ ಟಿ.ವಿ ಯಲ್ಲಿ ನೋಡುವುದೇ ಈಗಿನ ಸುಖವಾಗಿದೆ.

ಅನುಭವಿಸಲು ಸಾಧ್ಯವಿಲ್ಲ. ಇದು ಎಲ್ಲಾ ಎಲ್ಲಿಂದ ಎಲ್ಲಿಗೋ ಬಂದು ನಿಂತಂತಿದೆ.

ಇಂದು ಹಳ್ಳಿಗಳು ಸಹ ಅರ್ಧದಷ್ಟು ಬದಲಾಗಿರುವುದು ಸುಳ್ಳಲ್ಲ.

ಆದರೂ ಅದೇ ಮಣ್ಣಿನ ವಾಸನೆ ಇಂದಿಗೂ ಇದ್ದೆ ಇರುತ್ತದೆ. ವಂಸಂತದ ಚಿಗುರು ಹಳೆ ಮರದಲ್ಲಿ ಕಾಲಕ್ಕೆ ತಕ್ಕಂತೆ ಬಂದೆ ಬರುತ್ತದೆ. ಬದಲಾಗಿರುವುದು ನಮ್ಮ ಮನಸ್ಸಿನ ನೋಟ ಮಾತ್ರ ಅಂದರೇ ತಪ್ಪಲ್ಲ!

ಇಂದು ಇರುವ ಮೂರು ಮಂದಿಯೇ ಮನೆಯಲ್ಲಿ ಬಾಗಿಲು ಹಾಕಿಕೊಂಡು ಎಲ್ಲಾ ಹಬ್ಬಗಳನ್ನು ಚೆನ್ನಾಗಿ ಆಚರಿಸಿಕೊಳ್ಳುವೆವು. ಮನೆಯಲ್ಲಿನ ಸಂಭ್ರಮದ ಸೆಲ್ಫಿ ಪೊಟೋಗಳನ್ನು ಎಪ್. ಬಿ ಯಲ್ಲಿ ಅಪಲೋಡ್ ಮಾಡಿ ಲೈಕ್ ಗಳಿಗಾಗಿ ಕಾಯುವವ ತವಕದ ಮನಸ್ಸುಗಳು ನಮ್ಮದಾಗಿದೆ.

ಸಂಭ್ರಮಗಳೆಲ್ಲಾ ಅನುಭವಿಸುವುದಕ್ಕಿಂತ ಸೆರೆ ಹಿಡಿದು ಕೈಯಲ್ಲಿನ ಮೊಬೈಲ್ ಗೆ ನೂಕುವುದಂತಾಗಿದೆ. ಪ್ರತಿಯೊಂದನ್ನು ಪೊಟೋ ಕ್ಕಾಗಿ ಮಾಡುವಂತಾಗಿದೆ. ಪೊಟೋ ತೆಗೆಯುವ ನಲಿವಿನಲ್ಲಿ ಮನದ ಮನಸ್ಸುಗಳ ಕಾತುರತೆಯನ್ನು ಸೊರಗಿಸುತ್ತಿದ್ದೇವೆ. ಇದೆ ನಿಜವಾದ ಹಬ್ಬವಾಗಿದೆ.

ಎಲ್ಲಿಗೂ ಹೋಗದೆ ಯಾರನ್ನು ಸಂಪರ್ಕಿಸದೆ ತಮಗೆ ತಾವೆ ನಲಿದು ದೂರದ ಪ್ರಪಂಚಕ್ಕೆ ಸಂಭ್ರಮದ ಗಳಿಗೆಗಳನ್ನು ರವಾನೆ ಮಾಡುವುದೆ ಕಾಯಕವಾಗಿದೆ.  ವಿಡಿಯೋ  ತುಣುಕು , ಪೊಟೋ ಪ್ರೇಮ್ ಬದುಕು ನಮ್ಮದು ಅಂದರೇ ತಪ್ಪಲ್ಲಾ!

ಪ್ರತಿಯೊಂದನ್ನು ಹೊರ ಪ್ರಪಂಚದ ದೃಷ್ಟಿಗಾಗಿ ನಮ್ಮ ನಮ್ಮ ಭಾವನೆಗಳನ್ನು ಹೊಂದಿಸಿಕೊಂಡು ನಲಿಯುವೆವು ಅನಿಸುತ್ತದೆ. ಕೃತಕ ಪ್ಲಾಶ್ ಗೆ ಕೊಡುವ ನಮ್ಮ ನಗುವನ್ನು ಜೀವಂತ ಮುಖಗಳ ಎದುರಿಗೆ ಕೊಡಲಾರದಷ್ಟು ಕಳೆಗಟ್ಟಿಸಿಕೊಂಡಿವೆ.

ಹಬ್ಬ ಅನ್ನುವುದಲ್ಲ, ನಮ್ಮ ಪ್ರತಿಯೊಂದು ಚಟುವಟಿಕೆಗಳನ್ನೆಲ್ಲಾ ದಾಖಲೆಗಾಗಿ ಮಾಡುವಂತಾಗಿದೆ.

ಮದುವೆ -ಮುಂಜಿ-ಹುಟ್ಟಿದ ಹಬ್ಬ ಇತ್ಯಾದಿ ಯಾವೊಂದು ಆಚರಣೆಗಳು ಕೇವಲ ಆಚರಣೆಗಳಾಗಿವೆ ಅನಿಸುತ್ತದೆ.

ಆಚರಿಸುವ ಈ ದಿನಗಳ ಮಹತ್ವ ಮರೆಯಾಗಿದೆ. ಬೆರೆತು ನಲಿಯುವ ದಿನಗಳು ಯಾರೊಬ್ಬರಿಗೂ ಸಿಗುತ್ತಿಲ್ಲ. ಅವರವರೆ ಸಂತೋಷಿಸಿ ಇದೆ ನಮ್ಮ ಮ್ಯಾಕ್ಸಿಮಮ್ ಖುಷಿಯ ಗಳಿಗೆಗಳು ಎಂದುಕೊಂಡು ಯಾವುದಾದರೂ ಸೋಷಿಯಲ್ ಸೈಟ್ ನಲ್ಲಿ ಟ್ಯಾಗ್ ಮಾಡಿಬಿಟ್ಟರೆ ಸಾಕಪ್ಪ ಅನಿಸುತ್ತಿದೆ.

ಇಂಥ ಸ್ಥಿತಿಯಲ್ಲಿ ಹಳ್ಳಿಯ ಹಬ್ಬಗಳು ನಮ್ಮನ್ನು ತುಂಬ ಕಾಡುತ್ತವೆ. ಆ ದಿನಗಳು ಮತ್ತೆ ಬರಬಾರದೇ ಅನಿಸುತ್ತದೆ. ವರುಷಕ್ಕೆ ಒಮ್ಮೆ ಸಿಗುತ್ತಿದ್ದ ಹೊಸ ಬಟ್ಟೆಗಳು. ವರುಷಕ್ಕೆ ಒಮ್ಮೆ ಸಿಗುತ್ತಿದ್ದ ಬೋರಿ ಸಿಹಿ ತಿಂಡಿಗಳು, ಹಬ್ಬಕ್ಕಾಗಿಯೇ ದೂರದ ಊರಿನಿಂದ ಬರುತ್ತಿದ್ದ ಕುಟುಂಬದ ಪ್ರೀತಿ ಪಾತ್ರರರ ದರುಶನಗಳು.. ಹೀಗೆ ಸಪ್ರೈಜ್ ಎಂಬುದೇ ಕಾಣೆಯಾಗಿದೆ.

ಪ್ರತಿಯೊಂದು  ಕಾಫಿ ಮಾಡಿದ ಜೆರಾಕ್ಸ್ ನಡಾವಳಿಕೆಗಳು, ಸಂಭ್ರಮಗಳು ಅನಿಸುತ್ತದೆ.

ಯಾವುದರಲ್ಲೂ ವೈವಿಧ್ಯಮಯವಾದ ಎಂದು ಮರೆಯಲಾಗದ ಕ್ಷಣಗಳು ಎಂದು ಅನಿಸುತ್ತಿಲ್ಲ!

ರುಚಿಯಾದ ತಿನಿಸುಗಳು ಮಾಮೊಲಿ ದಿನದಲ್ಲಿ ತಿಂದ ರೀತಿಯಂತೆ ಅನಿಸುತ್ತದೆ. ಹಬ್ಬದ ರುಚಿ ಮಾಡಿದ ನಮ್ಮ ತಿಂಡಿಗಳಲ್ಲಿ ಇಲ್ಲ. ಯಾವುದಾದರೂ ಹಳ್ಳಿ ಮನೆ, ಬಾಡೋಟದ ರೆಸ್ಟೊರೆಂಟ್ ಗಳಲ್ಲಿನ ರುಚಿಯೇ ಮೆಚ್ಚು.

ಇದು ನಮ್ಮ ಮನಸ್ಸಿನ ಭಾವನೆಯೊ ಅಥವಾ ಮತ್ತ್ಯಾವುದೋ ಒಂದು ಗೊತ್ತಾಗುತ್ತಿಲ್ಲ.

ಯುಗಾದಿ! ಯುಗದ ಹಾದಿ... ಯುಗ ಯುಗಾದಿ ಕಳೆದರೂ ಮತ್ತೆ ಯುಗಾದಿ ಬರುತ್ತದೆ.. ಪ್ರತಿ ಯುಗಾದಿ ಹೊಸತನದ್ದು ಅನಿಸುತ್ತಿರುತ್ತದೆ. ಆದರೇ ಈಗಿನ ಯುಗಾದಿ ಮತ್ತೊಂದು ಹಬ್ಬ ಮಾತ್ರ ಎಂಬ ಪೀಲ್ ಎಂದೂ ಆಗಬಾರದು ಎನ್ನುವುದು ನಮ್ಮ ಆಶಯ.

ಮನುಷ್ಯನ ದುಡಿತ ಸಮಯಕ್ಕೆ ಬಿಡುವು ಕೊಟ್ಟು ತನ್ನ ಸುತ್ತಲಿನವರೊಡನೆ ಸೇರಿಕೊಂಡು ತನ್ನ ಕಷ್ಟ ಸುಖಗಳನ್ನು ಹಂಚಿಕೊಂಡು ಮನಸ್ಸು ಮನಸ್ಸು ಬೆರತು ಆಚರಿಸಿದರೆ ಜೀವನ ಯುಗಾದಿಯ ಬೇವು ಬೆಲ್ಲದಂತೆ ಬದುಕಾಗುವುದು.

ಇಂಥ ದಿನಗಳು ಪುನಃ ನಗರದ ಮಂದಿಗಳಿಗೆ ಮರಳಿ ಮರಳಿ ಬರಲಿ ಎಂದು ಆಶಿಸೋಣ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ