ಶುಕ್ರವಾರ, ಫೆಬ್ರವರಿ 20, 2015

ಬೆಂಗಳೂರು ಬಾಡಿಗೆ ಮನೆ ಮನ

ಬೆಂಗಳೂರಿನಲ್ಲಿ ಜೀವಿಸುವ ಪ್ರತಿಯೊಬ್ಬರ ಒಂದೇ ಒಂದು ಕನಸು ಅಂದರೇ.. ಏನಾದರೂ ಸರಿ ಒಂದು ಮನೆಯನ್ನು ಇಲ್ಲಿಯೇ ಕಟ್ಟಬೇಕು. ಇದೇ ಅವರ ಜೀವಿತಾದ ಮಹಾದಾಸೆ.

ತಮ್ಮ ಹೆತ್ತ ಊರನ್ನು ಬಿಟ್ಟು ಹೊಟ್ಟೆ ಹೊರೆಯುವುದಕ್ಕೆಂದು ಮಹಾನಗರಕ್ಕೆ ಬಂದ ದಿನದಿಂದ ಬಾಡಿಗೆ ಮನೆಯನ್ನು ಹಿಡಿದು ತಮ್ಮ ಬದುಕನ್ನು ಒಂದೊಂದೇ ಹೆಜ್ಜೆ ಇಡುತ್ತಾ ಕಟ್ಟಿಕೊಳ್ಳುವ ಜಾಣ್ಮೆಯನ್ನು ಬೆಂಗಳೂರಿನಲ್ಲಿ ಜೀವಿಸುವ ಪ್ರತಿಯೊಬ್ಬರಲ್ಲೂ ಕಾಣಬಹುದು. ಅದು ಒಂದು ನ್ಯಾಚರಲ್ ಪೇನಮಿನ ಎಂಬಂತೆ ಯಾರು ಗಮನಿಸುವುದಿಲ್ಲ.

ಬೆಂಗಳೂರು ಎಲ್ಲದನ್ನೂ ಕಲಿಸುತ್ತದಂತೆ. ಏನೂ ಗೊತ್ತಿಲ್ಲದವನಿಗೂ ಎಲ್ಲಾ ಗೊತ್ತೂ ಮಾಡುತ್ತದಂತೆ

ನಾವುಗಳು ಮೊದ ಮೊದಲು ನಮ್ಮ ಇಂಜಿನಿಯರಿಂಗ್ ಮುಗಿಸಿ ಕೆಲಸ ಹುಡುಕಲು ಬಂದ ಹೊಸತದರಲ್ಲಿ. ನಾವುಗಳು ಕೆಲಸ ಹುಡುಕಿ ಹುಡುಕಿ ಶನಿವಾರ,ಬಾನುವಾರ ದಿನಗಳಂದೂ ಯಾವುದಾದರೂ ಒಬ್ಬರ ಮನೆಯಲ್ಲಿ ಮೀಟಿಂಗ್ ಸೇರುತ್ತಿದ್ದೇವು.

ಮನೆ ಅಂದರೇ ರೂಂ. ಬ್ಯಾಚಲರ್ಸ್ ರೂಂ. ಒಂದು ಬೆಡ್ ರೂಂ, ಒಂದು ಹಾಲು ಮತ್ತು ಒಂದು ಕಿಚನ್. ಈ ರೀತಿಯ ಮನೆಯಲ್ಲಿ ಆ ಮನೆಯ ಓನರನ ತಕರಾರು ಏನೂ ಇಲ್ಲದಿದ್ದರೇ ಎಷ್ಟು ಜನ ಇರುವುದಕ್ಕೆ ಸಾಕಾಗುತ್ತಿತ್ತೋ ಅಷ್ಟು ಜನವು ಇರುತ್ತಿದ್ದೇವು. ಅದು ಪುನಃ ನಮ್ಮ ಕಾಲೇಜು ದಿನಗಳನ್ನು ನೆನಪಿಸು ಮಟ್ಟಿಗೆ ನಮ್ಮ ನಮ್ಮ ಗೆಳೆಯರೇ ಇರುತ್ತಿದ್ದೇವು. ಈ ರೀತಿ ಬೇರೆ ಬೇರೆ ಮನೆಯಲ್ಲಿ ಇರುವವರೆಲ್ಲಾ ರಜಾ ದಿನಗಳಲ್ಲಿ ಒಬ್ಬರ ಮನೆಯಲ್ಲಿ ಬೇಟಿಯಾಗುತ್ತಿದ್ದೇವು. ಮುಂಜಾನೆಯಿಂದ ಸಂಜೆಯವರೆಗೂ ಅಲ್ಲಿಯೇ ತಿಂಡಿ, ಊಟ, ನಿದ್ದೆ, ಮಾತುಕತೆಯನ್ನಾಡಿ ಸಂಜೆ ನಮ್ಮ ನಮ್ಮ ಬಾಡಿಗೆ ಮನೆಗೆ ಸೇರಿಕೊಳ್ಳುತ್ತಿದ್ದೇವು.


ಆಗ ನಾವುಗಳು ನಮ್ಮ ಗೆಳೆಯರಲ್ಲಿ ಏನಾದರೂ ಕೊಂಚ ಬದಲಾವಣೆ ಕಂಡರು.. ನೋಡು ಬೆಂಗಳೂರು ಹೇಗೆ ಬದಲಾಯಿಸಿತು ಇವನನ್ನು ಎಂದು ಹಾಡಿಕೊಳ್ಳುತ್ತಿದ್ದೇವು.

ಹೌದು! ನಿಜವಾಗಿಯೂ ಈ ಊರಿಗೆ ಏನೋ ಒಂದು ಶಕ್ತಿಯಿದೆ. ಎಂಥವರನ್ನು ಬೆಂಗಳೂರಿಗರನ್ನಾಗಿ ಮಾಡಿಕೊಳ್ಳುತ್ತದೆ.

ಬೆಂಗಳೂರಿಗರು ಅಂದರೇ ಬುದ್ಧಿವಂತರು ಎಂಬಂತೆ ಸ್ವಲ್ಪ ಬುದ್ಧಿಯನ್ನು ಕಲಿಸುತ್ತದೆ. ಹೇಗೆ ಚೆನ್ನಾಗಿ ಬದುಕಬೇಕು. ಹೇಗೆ ದುಡಿಮೆಯನ್ನು ಮಾಡಬೇಕು, ಎನ್ನುವುದನ್ನು ಯಾವುದೇ ಬೇಡಿಕೆಯಿಲ್ಲದೇ ಎಲ್ಲಾರಿಗೂ ಸಮನಾಗಿ ತಾನೇ ದಯಪಾಲಿಸುತ್ತದೆ.

ಇದಕ್ಕೆಲ್ಲಾ ಪ್ರತಿಯೊಬ್ಬ ಬೆಂಗಳೂರಿಗನು ಬೆಂಗಳೂರಿಗೆ ಕೃತಘ್ನನಾಗಿರಬೇಕು.

ಅಂದಿನಿಂದ ಹುಟ್ಟುವ ಕನಸೇ ಬೇಗ ದುಡ್ಡು ಸಂಪಾಧಿಸಬೇಕು ಮತ್ತು ಸ್ವಂತ ಮನೆಯನ್ನು ಮಾಡಿಕೊಳ್ಳಬೇಕು. ಸ್ವಂತ ಮನೆಗೆ ಬುನಾದಿಯಾಗುವುದು ಇಲ್ಲಿಂದಲೇ.

ಇಲ್ಲಿಯ ಬಾಡಿಗೆ ಮನೆಯ ಒನರ್ ಗಳ ಒರತಾ. ಅವರ ಡಿಮ್ಯಾಂಡ್. ಅವರ ಕಂಡಿಷನ್ ಗಳು. ಅವರ ತರಾವೇರಿ ಬಾಡಿಗೆ ದರಗಳು. ಏನ್ ಒಂದು ಮನೆಯಿದ್ದರೇ ಮುಗಿತು ನೋಡು, ಹೇಗೆಲ್ಲಾ ಈಜೀಯಾಗಿ ದುಡ್ಡು ಮಾಡುತ್ತಾರೆ. ನಮಗೆ ಒಂದು ಮನೆ ಇದ್ದರೇ ಸಾಕು ಕಣೋ ಬೆಂಗಳೂರಲ್ಲಿ ಹೇಗೋ ಜೀವನ ಸಾಗುತ್ತದೆ. ಎಂದು ನಮ್ಮ ನಮ್ಮಲ್ಲಿಯೇ ನಾವುಗಳು ಕನಸನ್ನು ಕಾಣಲು ಶುರು ಮಾಡುತ್ತಾರೆ.

ಹೌದು, ಬಾಡಿಗೆ ಮನೆಯ ಬದಲಾವಣೆ! ಇದು ಅತ್ಯಂತ ಬೇಸರದ ಘಟನೆ. ಬೆಂಗಳೂರಿನ ಎಲ್ಲಾ ಬಾಡಿಗೆದಾರರ ತಲೆ ತಿನ್ನುವ ವಿಷಯ.

ನಮ್ಮ ಪ್ರೀತಿಯ ಗೂಡಿಗೆ ನಾವು ಸೇರಿಸುವ ನಮ್ಮದೇ ಬೆವರ ಬೆಲೆಯ ಸಾಮಾನುಗಳ ರಾಶಿ. ಕನಸು ಮನಸಲ್ಲೂ ನಿರೀಕ್ಷಿಸದಂತೆ ದೊಡ್ಡ ರಾಶಿಯಾಗಿರುತ್ತದೆ. ಇಷ್ಟೆಲ್ಲಾ ಸಾಮನುಗಳನ್ನು ನಾವು ಯಾವಾಗ ಖರೀದಿಸಿದಿವಿ ಎಂದು ತಿಳಿಯುವುದು ನಮಗೆ ಈ ಸಾಮಾನುಗಳನ್ನು ನಿನ್ನೊಂದು ಮನೆಗೆ ಸಾಗಿಸಲು ಪ್ಯಾಕ್ ಮಾಡುವಾಗ.

ಮನೆಯನ್ನು ಶಿಪ್ಟ್ ಮಾಡುವ ಕೆಲಸ ಯಾವ ದೇವರಿಗೂ ಬೇಡ ಅನಿಸುತ್ತದೆ. ಪ್ರೀತಿಯಿಂದ ಎಷ್ಟೊಂದು ಮಮತೆಯಿಂದ ಸ್ವಲ್ಪ ಕಾಸ್ಟ್ ಲಿ ವಸ್ತುಗಳನ್ನೇ ಖರೀದಿಸಿರುತ್ತೇವೆ. ಅವುಗಳ ಒಳಪು ಬಿಳುಪು ನಮಗೆ ಒಂದು ರೀತಿಯ ಹೆಮ್ಮೆಯನ್ನುಂಟು ಮಾಡಿರುತ್ತದೆ. ಯಾಕೆಂದರೇ ನಿತ್ಯ ಅವುಗಳ ಮದ್ಯದಲ್ಲಿಯೇ ಆ ಚಿಕ್ಕ ಮನೆಯಲ್ಲಿ ಅವುಗಳ ಸ್ಪರ್ಷದಲ್ಲಿ ಜೀವಿಸಿರುತ್ತೆವೆ.

ಜೀವ ಇರುವ ಮನುಷ್ಯರಿಗಿಂತ ನಮಗೆ ಅವುಗಳೇ ಮುಖ್ಯ. ಅವುಗಳಿಗೆ ಎಲ್ಲಿ ಏನಾಗುತ್ತೋ ಎಂದು ಸಾಮಾನುಗಳನ್ನು ಬೇರೆ ಮನೆಗೆ ಸಾಗಿಸುವಗ ನಮ್ಮ ಎದೆ ಡವಡವ ಎಂದು ಬಡಿದುಕೊಳ್ಳುತ್ತದೆ. ಅವುಗಳು ಏನಾದರೂ ಮುಕ್ಕಾದರೇ ದೇವರೇ? ಎಷ್ಟೊಂದು ದುಡ್ಡು ಕೊಟ್ಟು ತಂದಿರುವುದು! ಎಂದು ಮನೆಯ ಪ್ರತಿ ಸದಸ್ಯನು ಮನದಲ್ಲೆ ಹಲುಬುತ್ತಾನೆ.

ಏನೊಂದು ಊನಾ ಬರದಂತೆ ಇನ್ನೊಂದು ಮನೆಗೆ ಶಿಪ್ಟ್ ಆದರೇ ಸಾಕಪ್ಪಾ ದೇವರೆ.. ನಿನಗೆ ಒಂದು ತೆಂಗಿನ ಕಾಯಿಯನ್ನು ಹೊಡೆಸುತ್ತೇನೆ ಎಂದು ಮನೆ ದೇವರಿಗೆ ಹರಕೆ ಹೊರುತ್ತಾನೆ.

ಹೌದು, ಇದು ತನ್ನ ಬೆವರು, ಸಮಯ ಮತ್ತು ಪರಿಶ್ರಮದಿಂದ ತಾನೇ ತನ್ನ ಕೈಯಾರ ತಂದಿರುವ ವಸ್ತುಗಳು. ಅವುಗಳ ಜವಬ್ದಾರಿ ಆ ಮನೆಯವರಿಗೆ ಸೇರಿದ್ದು. ಅದಕ್ಕೆ ಅಷ್ಟೊಂದು ಕಾಳಜಿ. ಅಷ್ಟೇ!

ಅಂದೆ ಅವನು ನಿರ್ಧರಿಸುತ್ತಾನೆ. ಮುಂದಿನ ಮನೆ ಅಂಥ ಏನಾದರೂ ಶಿಪ್ಟ ನಾನು ಮಾಡಿದರೇ.. ಅದು ನನ್ನದೇ ಸ್ವಂತ ಮನೆಗೆ ಶಿಫ್ಟ ಮಾತ್ರ. ಸಾಲ-ಸುಲ ಆದರೂ ಚಿಂತೆಯಿಲ್ಲ. ಒಂದು ಚಿಕ್ಕ ಮನೆಯನ್ನು ತೆಗೆದುಕೊಳ್ಳಬೇಕು. ಯಾಕೆಂದರೇ ಈ ಮನೆಯನ್ನು ಶಿಫ್ಟ್ ಮಾಡುವ ಜಂಜಾಡವೇ ಬೇಡ ಎಂದು. ಅಲ್ಲಿಯೇ ನಮ್ಮ ಪ್ರೀತಿಯ ವಸ್ತುಗಳಿಗೆ ಶಾಶ್ವತವಾದ ಜಾಗವನ್ನು ಕಲ್ಪಿಸಬಹುದು. ನಾವುಗಳೂ ಹೇಗಾದರೂ ಇರಬಹುದು. ಒನರ್ ಕಿರಿಕಿರಿ, ಪ್ರತಿ ವರುಷ ಬೇರೆ ಮನೆಗೆ ಹೋಗುವ ಪರಿಪರಿ ಎಲ್ಲಾದರಿಂದ ಮುಕ್ತಿ ಎಂದು ತಾನೇ ಒಂದು ಗಟ್ಟಿ ಮನಸ್ಸಿಗೆ ಬರುತ್ತಾನೆ. ಈ ಕನಸು ಹಿಡೇರಿಸಿಕೊಳ್ಳುವ ದಾರಿಗಳನ್ನು ಹುಡುಕುತ್ತಾನೆ. ಹುಡುಕುವವನಿಗೆ ನೂರಾರು ದಾರಿಗಳೂ ಎಂಬಂತೆ ಒಂದಲ್ಲಾ ಒಂದು ವೇ ಸಿಕ್ಕೇ ಸಿಗುತ್ತಾದೆ.

ಒಂದು ಎರಡು ವರುಷದಲ್ಲಿ ತನ್ನದೇ ಮನೆ, ಒಂದು ಕಾರು ಮತ್ತೊಂದು ಮನೆ. ಒಂದು ಮನೆ ನನಗೆ ಮತ್ತೊಂದು ಬಾಡಿಗೆಗೆ ಎಂದು ಎರಡು ಮನೆಯ ವಾರಸುದಾರನಾಗುತ್ತಾನೆ. ಹಳ್ಳಿಯಿಂದ ಬಂದ ಹೈದ ಬೆಂಗಳೂರು ಪೇಟೆಯಲ್ಲಿ.

ಇದೂ ಬೆಂಗಳೂರು. ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುವ ಗಾದೆಗೆ, ಬೆಂಗಳೂರಲ್ಲಿ ಮನೆ ಕಟ್ಟಿನೋಡು ಗೊತ್ತಾಗುತ್ತದೆ ಎಂದು ಹೊಸದಾಗಿ ಬೆಂಗಳೂರಿಗೆ ಬರುವ, ಬಂದಿರುವವರಿಗೆ ಚಿಕ್ಕದಾದ ಪಾಠವನ್ನು ಹೇಳುವ ಮಟ್ಟಿಗೆ ಬೆಂಗಳೂರನ್ನು ತನ್ನದಾಗಿ ಮಾಡಿಕೊಂಡಿರುತ್ತಾನೆ.

ಇದು ಬೆಂಗಳೂರು. ಬದುಕಲೇಬೇಕು. ಏನೇ ತಕರಾರು ಇದ್ದರು ಚಿಂತೆಯಿಲ್ಲ. ಎಲ್ಲದಕ್ಕೂ ಒಂದು ಉತ್ತರ ಇರುತ್ತದೆ. ಎಲ್ಲಾ ಹಳ್ಳಿಗಳು ಸೇರಿ ಬೆಂಗಳೂರು. ಎಲ್ಲಾ ಮನಸುಗಳು ಸೇರಿ ಬೆಂಗಳೂರು!


1 ಕಾಮೆಂಟ್‌: