ಶನಿವಾರ, ಫೆಬ್ರವರಿ 7, 2015

ನಾನು ನನ್ನ ಜೀವ!

ಸಂತೋಷ, ಪೂರ್ಣ ಸಂತೋಷ ಕ್ಷಣ ಯಾವುದು ಎಂದು ಹೇಳಲು ನಾನು ನನ್ನ ಜೀವದ ಜೀವವನ್ನು ಕಾಣಬೇಕಾಯಿತು.

ಇದೆ ಇರಬೇಕು. ಅಬ್ಬಾ ಒಂಬತ್ತು ತಿಂಗಳು ಹೊತ್ತು ಎತ್ತಿದ ಈ ನನ್ನ ಜೀವದ ಜೀವ ಅಂಕುರವಾದ ದಿನದಿಂದ ಇಂದು ನನ್ನ ಮುಖಕ್ಕೆ ಅದು ನೀಡುವ ಕಚ್ಚು ಕಚ್ಚು ಮುತ್ತಿನವರೆಗೂ ಒಂದೊಂದು ಕ್ಷಣವನ್ನು ನಾನು ನನ್ನ ಉಸಿರಾಗಿ ಅನಿಭವಿಸಿದ್ದೇನೆ.

ಅದಕ್ಕೆ ಇರಬೇಕು ಎಲ್ಲಾ ತಾಯಂದಿರಿಗೆ ಎಲ್ಲಾ ಮಕ್ಕಳ ಮೇಲೆ ಅದೇ ಸಮಾನದ ಪ್ರೀತಿಯನ್ನು ಕೊಡಲು ಸಾಧ್ಯ.

ಅದು ಮಾತ್ರ ಒಬ್ಬ ತಾಯಿಗೆ ಮಾತ್ರ ಸಾಧ್ಯ. ಅದಕ್ಕೆ ಮಮತಾಮಹಿ ಎನ್ನುವುದು.

ತಾಯಿಯಾಗುವುದು ಹೆಣ್ಣಿನ ಪುನರ್ ಜನ್ಮವೇ ಸರಿ. ಎಷ್ಟು ಭಯ, ಕಾತುರಗಳು.

ನನ್ನ ಮಡಿಲಲ್ಲಿ ಅದು ಪ್ರಾರಂಭಿಸುವ ಚಲನೆಗಳು ನನ್ನನ್ನು ಒಮ್ಮೊಮ್ಮೆ ಭಯ ಮತ್ತು ಅಚ್ಚರಿಗೆ ದೂಡುತ್ತಿತ್ತು. ಒಂದು ಚಿಕ್ಕ ಬಿಂದು ಅಂಶದಿಂದ ಸಮಸ್ತತತೆಗೆ ಬಂದು ನಿಲ್ಲುವ ಆ ಉಸಿರಿನ ವಿಸ್ಮಯ ಎಷ್ಟೊಂದು ಅಗಾಧವಾದದ್ದು.

ನಾನು ನನ್ನನ್ನೇ ಚೆನ್ನಾಗಿ ನೋಡಿಕೊಳ್ಳಲು ಬರುವುದಿಲ್ಲ ಎಂಬುದು ನನ್ನ ಅಮ್ಮ, ಅಪ್ಪರ ದೂರು.

ಆದರೆ ನನಗೆ ನನ್ನದೆಯಾದ ಜೀವ ನನ್ನ ಕೈಯಲ್ಲಿದೆ. ತಾಯಿತನವೇ ಹೆಣ್ಣನ್ನು ಪೂರ್ಣ ಹೆಣ್ಣಾಗಿ ಮಾರ್ಪಡಿಸಿಬಿಡುತ್ತದೆ ಅನಿಸುತ್ತದೆ.


 

ಒಂಬತ್ತು ತಿಂಗಳ ಪ್ರತಿ ಸೆಕೆಂಡು ಇನ್ನೊಂದು ಜೀವ ನನ್ನ ಮಡಿಲಲ್ಲಿ ಇದೆ. ಆದರ ಬಗ್ಗೆ ಪ್ರತಿ ಸೆಕೆಂಡು ಚಿತ್ರ ವಿಚಿತ್ರವಾದ ಚಿತ್ತಾರವನ್ನು ಮನಸ್ಸಲ್ಲಿ ಕಲ್ಪಿಸಿಕೊಳ್ಳುವುದು ಯಾರೊಬ್ಬರಿಗೂ ಸಿಗದ ಅಪರೂಪದ ಅನುಭವ.

ಬಸುರಿತನ ನನಗೊಬ್ಬಳಿಗೆ ಅಲ್ಲಾ. ಮನೆಯಲ್ಲಿ ನನ್ನ ಗಂಡನಿಂದ ನನ್ನ ಹೆತ್ತವರು, ಸಂಬಂಧಿಕರು, ನೆರೆಹೊರೆಯವರು ಪ್ರತಿಯೊಬ್ಬರೂ ಆಧರಿಸುವ ರೀತಿಯನ್ನು ಕಂಡು ಇನ್ನೂ ಹೆಚ್ಚು ಹೆಚ್ಚು ನನ್ನ ಜೀವದ ಬಗ್ಗೆ ನಾನು ಅಚ್ಚಿಕೊಳ್ಳಲು ಪ್ರಾರಂಭಿಸಿದೆ ಅನಿಸುತ್ತದೆ. ಈ ಒಂದು ಮಗು ಸುಖವಾಗಿ ಜನನವಾಗಿಬಿಟ್ಟರೆ ಸಾಕು ಎಂದು ದಿನ ನಿತ್ಯ ದೇವರಿಗೆ ಪ್ರಾರ್ಥನೆಯನ್ನು ಮಾಡುತ್ತಿದ್ದೆ.

ಜೀವ ಹೊಟ್ಟೆಯಲ್ಲಿ ಇದ್ದಾಗ ಎಷ್ಟೊಂದು ಕುತೂಹಲ. ಆದರೆ ಮೊದಲ ಸಲ ಆಸ್ಪತ್ರೆಯಲ್ಲಿ ಹೊಟ್ಟೆಯಲ್ಲಿ ಚಲಿಸುತ್ತಿರುವ ಆ ಅಸ್ಪಷ್ಟ ಚಿತ್ರವನ್ನು ನೋಡಿದಾಗ ಆದ ಭ್ರಮೆ ಆ ರಾತ್ರಿಯಿಡಿ ಸಂಭ್ರಮದಲ್ಲಿ ಇರುವಂತೆ ಮಾಡಿತ್ತು. ಅದು ನನ್ನ ಬೇಸ್ಟ್ ದಿನವಾಗಿತ್ತು. ನನ್ನ ಮುದ್ದು ಜೀವವನ್ನು ನನ್ನ ಯಜಮಾನರು ನೋಡಿ ಅವರ ಕಣ್ಣಲ್ಲಿ ಕಂಡ ಆಶ್ಚರ್ಯವನ್ನು ಕಂಡು ನನಗಂತೂ ಕುತೂಹಲವಾಯಿತು. ಅವರಿಗು ಹೆಮ್ಮೆಯಾಗಿರಬೇಕು ಅಪ್ಪನಾಗುತ್ತಿದ್ದೇನೆ ಎಂದು!

ಡಾಕ್ಟರ್ ಹೇಳಿದಕ್ಕೆಲ್ಲಾ ನಾವಿಬ್ಬರು ಕತ್ತು ಆಡಿಸಿದ್ದು. ಅವರು ನಮ್ಮನ್ನು ಇನ್ನೂ ಚೆನ್ನಾಗಿ ಹೆದರಿಸಬೇಕೇ ಎಂಬ ರೀತಿಯಲ್ಲಿ ಹೇಳುತ್ತಿದ್ದಾರೆ ಎಂದು ನಮ್ಮಿಬ್ಬರಿಗೂ ಅನಿಸುತ್ತಿತ್ತು. ನಮ್ಮವರು ಅವರು ಬರೆದುಕೊಟ್ಟಿದ್ದ ಔಷದಿಗಳನ್ನೇಲ್ಲಾ ಎಷ್ಟೊಂದು ಸಂಭ್ರಮದಲ್ಲಿ ತಂದುಕೊಟ್ಟು, ಅದು ಇದು ಹೀಗೆ ಜೀವದ ಕಾಳಜಿಯ ಬಗ್ಗೆ ಹೇಳಿದ್ದು ನಾನೊಂತೂ ಒಳಒಳಗೆ ಖುಷಿಪಟ್ಟಿದ್ದೆ.

ಪಾಪ ಈ ಗಂಡ ಪ್ರಾಣಿ ನನ್ನ ಬಗೆ ಎಷ್ಟೊಂದು ಮುತುವರ್ಜಿವಹಿಸುತ್ತಿದ್ದಿಯಲ್ಲಾ! ಪಾಪ ಒಳ್ಳೆ ಗಂಡ! ಎಂದು ಹೆಮ್ಮೆಯಾಯಿತು.

ನನಗೆ ಅನಿಸುತ್ತದೆ. ಗಂಡನಿಂದ, ಹೆತ್ತವರಿಂದ, ನೆರೆಹೊರೆಯವರಿಂದ ನಮ್ಮ ಬಗ್ಗೆ ಹೆಚ್ಚು ಕಾಳಜಿವಹಿಸಿಕೊಳ್ಳಬೇಕು ಅಂತಾ ನಿಮಗೆ ಆಸೆಯಿದ್ದರೆ ಒಂದು ಮಗುವನ್ನು ಹೇರಬೇಕು! ( ನನ್ನ ಮಾತು ನಂ(ಬಿ)ಬಬೇಡಿ)

ಜೀವದ ಕುರುಹು ಸಿಕ್ಕ ಮೇಲೂ ನಾವಿಬ್ಬರೂ ನಮ್ಮ ನಮ್ಮ ಮನೆಯವರಿಗೆ ಹೇಳಲು ಪಟ್ಟ ಸಂಕೋಚ ಯಾವ ದೇವರಿಗೂ ಬೇಡ. ಅವರೇ ಮೊದಲು ಅವರ ಮನೆಯವರಿಗೆ ಹೇಳಿ ಅವರ ಭಾರವನ್ನು ಇಳಿಸಿಕೊಂಡರು.

ನಾನು ನನ್ನ ಅಮ್ಮನಿಗೆ ಹೇಳಲು ಒಂದು ವಾರ ಕಾದಿದ್ದು.. ಯಾಕೇ? ಇನ್ನು ನಾನು ಅವರ ಪಾಲಿನ ಚಿಕ್ಕ ಮಗುವೇನೂ ಅಂದುಕೊಂಡಿರಬೇಕು ನಾನು. ಅದಕ್ಕೆ ಅವರಿಗೆ ಈ ನಾನು ಅಮ್ಮನಾಗುವ ವಿಷಯ ತಿಳಿಸಲು ಕಸಿವಿಸಿಯಾಗಿರಬೇಕು.

ಹೀಗೆ ಹೀಗೆ ಸಾಗಿ ಒಂದೊಂದು ತಿಂಗಳು ಜೀವ ತನ್ನ ರೂಪ ತಾನು ಪಡೆಯಿತ್ತಿತ್ತು. ಹೀಗೆಯೇ ನಾನು ಸಹ ನನ್ನ ಅಮ್ಮನ ಮಡಿಲಲ್ಲಿ ಹೇಗೆಲ್ಲಾ ಇದ್ದಿರಬಹುದು... ಹೀಗೆ ನನ್ನ ಅಮ್ಮ ನನ್ನನ್ನು ಹೊತ್ತುಕೊಂಡಿದ್ದಾಗ ನಾನು ಈಗ ಯೋಚಿಸಿರ ರೀತಿಯಲ್ಲಿ ಅವರ ಅಮ್ಮನ ಬಗ್ಗೆ ಯೋಚಿಸಿರಬಹುದೇ ಎಂದು ನನ್ನ ನನ್ನಲ್ಲಿಯೇ ಅಂದುಕೊಳ್ಳುತ್ತಿದ್ದೆ.

ನಮಗಾಗಿ ನಮ್ಮ ಹೆತ್ತವರ ಕಾಣಿಕೆಯ ಅರಿವಾಗಬೇಕು ಎಂದರೇ, ನಾವುಗಳು ಸಹ ತಂದೆ ತಾಯಿಗಳೂ ಆಗಬೇಕು! ಆದರೂ ಸಹ ಯಾಕೆ ಇಂದು ಮಕ್ಕಳು ಅವರ ಹೆತ್ತವರನ್ನು ದೊಡ್ಡವರಾದ ಮೇಲೆ ಕೇವಲವಾಗಿ ಕಾಣುತ್ತಾರೆ. ಅವರಿಗೂ ಮಕ್ಕಳಾಗಿರುತ್ತಾರೆ. ಅವರಿಗೂ ಗೊತ್ತು ಅವರ ಹೆತ್ತವರು ಅವರಿಗಾಗಿ ಎಷ್ಟು ತ್ಯಾಗ ಮಾಡಿರುತ್ತಾರೆ ಎಂದು. ಯಾಕೆ? ಹೆತ್ತವರ ಪ್ರಾಮುಖ್ಯತೆ ಇನ್ನೂ ಸಹ ನಮ್ಮ ಜನಗಳಿಗೆ ಅರ್ಥವಾಗುತ್ತಿಲ್ಲ?

ನಿಜವಾಗಿಯೂ ಈ ಜೀವ ಬಂದ ಮೇಲೆ ನನ್ನ ಒಂದೊಂದು ಉಸಿರು ಈ ಜೀವದ ಉನ್ನತೆಗಾಗಿ ಬಡಿಯುತ್ತದೆ. ನನ್ನ ನಿದ್ದೆಯೆಲ್ಲಾ ಈ ಜೀವ ಆರಾಮಾಗಿ ರಾತ್ರಿಯೆಲ್ಲಾ ಚೆನ್ನಾಗಿ ಮಲಗಿದರೇ ಸಾಕಪ್ಪ ಅನಿಸುತ್ತದೆ. ಯಾವ ಕಾಯಿಲೆ ಕಸಾಲೆ ಇಲ್ಲದೆ ಇದ್ದರೆ ಸಾಕು. ಹೊತ್ತಾಲ್ಲ ಹೊತ್ತಲ್ಲಿ ಗಳಿಗೆ ಗಳಿಗೂ ಎದ್ದು ಮಗು ಹೇಗೆ ಮಲಗಿದೆ. ಅದಕ್ಕೆ ಹಾಲು ಬೇಕಾ? ಏನಾದರೂ ಆಗಿದೇಯಾ? ರಾತ್ರಿಯಲ್ಲಿ ಏನಾದರೂ ಹಾಸಿಗೆಯಲ್ಲಿ ಒದ್ದೆ ಮಾಡಿಕೊಂಡು ಶೀತವಾಗಿ ಮಲಗಲು ತೊಂದರೆಯಾಗಬಹುದೆಂದು ಬಾರಿ ಬಾರಿ ಬಟ್ಟೆಯನ್ನು ಬದಲಿಸುವುದು... ಜೀವ ಹುಟ್ಟಿದ ಎರಡು ತಿಂಗಳು ಕಣ್ಣುಮುಚ್ಚಿ ಪೂರ್ಣ ನಿದ್ದೆಯನ್ನಂತೂ ನಾನು ಎಂದು ಮಾಡಿಲ್ಲ.

ಅದು ನನ್ನ ಪಕ್ಕ ಮಲಗಿದ್ದಾಗ ನನಗೆ ಎಷ್ಟು ಸಂಭ್ರಮ. ಅದಕ್ಕೆ ಏನೊಂದು ಅರಿವಾಗುವುದಿಲ್ಲ. ಅದಕ್ಕೆ ಬೇಕಿರುವುದು ತಾಯಿಯ ಪ್ರೀತಿಯ ಎದೆ ಹಾಲು ಮತ್ತು ಬೆಚ್ಚನೆಯ ಮಡಿಲು. ಅವೆರೆಡೇ ಅದಕ್ಕೆ ದೈರ್ಯ ಅನಿಸುತ್ತದೆ.

ಇದನ್ನು ನೋಡಿ ನನ್ನ ಅಪ್ಪ,ಅಮ್ಮ ನನ್ನ ಬಗ್ಗೆ ಹೇಗೆ ಯೋಚಿಸಿರಬಹುದು? ಎಂದು ಮನದಲ್ಲಿಯೇ ಲೆಕ್ಕ ಹಾಕಿಕೊಳ್ಳುತ್ತಿದ್ದೆ.

ಅಪ್ಪನಿಗಿಂತ ಅಮ್ಮನಿಗೆ ಮಕ್ಕಳ ಬಗ್ಗೆ ಎಲ್ಲೂ ಇಲ್ಲದ ಕಕ್ಕುಲಾತಿ. ಹೌದು ಅದು ನಿಜ. ಅಮ್ಮನಿಗೆ ಮಕ್ಕಳು ಅವಳ ಜೀವದ ಇನ್ನೊಂದು ಭಾಗವೇ ಸರಿ. ಅವಳು ತನ್ನ ರಕ್ತದಿಂದ ಇನ್ನೊಂದು ಜೀವವನ್ನು ಸೃಷ್ಟಿಸಿದ್ದಾಳೆ ಅಂದರೇ ತಪ್ಪಲ್ಲಾ!

ಅದಕ್ಕೆ ಇರಬೇಕು ಅದರ ಒಂದೊಂದು ಮೊಮೆಂಟು ತನ್ನದೇ ಮೊಮೆಂಟು ಅನಿಸುತ್ತದೆ. ಅದಕ್ಕೆ ಏನಾದರೂ ತನಗೆ ನೋವಾದ ಅನುಭವವಾಗುತ್ತದೆ. ಪ್ರತಿಕ್ಷಣವೂ ಅದರ ಜೊತೆಯಲ್ಲಿರುವ ಭಾಗ್ಯ ಮಗು ಹುಟ್ಟಿದ ಆ ಎರಡು ತಿಂಗಳು ನನಗೆ ಬೇರೆಯ ಪ್ರಪಂಚವೇ ಆಗಿತ್ತು.

ಹುಟ್ಟುವ ದಿನ ಸಂಭ್ರಮಪಡಬೇಕೋ? ಆ ನೋವು ಯಾತಾನೇಗೆ ಅಳಬೇಕೋ?

ಒಂದು ಕಡೆ ಮಗು ನೋಡಿ ಖುಷಿಯಾಗುತ್ತಿತ್ತು. ಇನ್ನೊಂದು ಕಡೆ ಆ ನೋವು ಜನ್ಮದಲ್ಲಿ ಮತ್ತೆಂದೂ ಇನ್ನೊಂದು ಮಗುವೇ ಬೇಡಪ್ಪ ಅನಿಸಿದ್ದಂತೂ ನಿಜ.

ಪ್ರತಿಯೊಬ್ಬರ ಮುಖದಲ್ಲು ಖುಷಿ. ಸುಖವಾಗಿ ಹೆರಗೆಯಾಗಿದೆ. ಮಗುವು ಚೆನ್ನಾಗಿದೆ. ನನಗಂತೂ ಅದರ ಮುಖ ನೋಡಿ ಕಣ್ಣಲ್ಲಿ ಆನಂದ ಭಾಷ್ಪವೇ ಬರುತ್ತಿತ್ತು.

ದೇಹದಲ್ಲಿ ಸಾವಿರ ನೋವುಗಳು ಇದ್ದರೂ ಅದರ ಮುಖ ನೋಡಿದಾಗ ಆ ನೋವುಗಳನ್ನು ಶಮನ ಮಾಡುವ ಆಕರ್ಷಣೆ ಈ ಪುಟ್ಟ ಮುಗದಲ್ಲಿ ಆ ದೇವರು ಅದು ಹೇಗೆ ಇಟ್ಟಿದ್ದಾನೆ! ಎಂದು ಅಚ್ಚರಿಯಾಗುತ್ತಿತ್ತು.

ಇಂದು ನನ್ನ ಹುಟ್ಟು ಹಬ್ಬ ನನ್ನ ಕೈಯಲ್ಲಿ ನನ್ನ ಜೀವವಿದೆ. ಅದಕ್ಕೆಲ್ಲಿ ಗೊತ್ತು ಹೆತ್ತಮ್ಮನ ಜನ್ಮ ದಿನ ಇಂದು ಎಂದು. ಬುದ್ಧಿಬರಬೇಕು ಬಂದು ಅದರ ಕೈಯಿಂದ ನಾನು ನನ್ನ ಜನ್ಮ ದಿನದ ಉಡುಗೊರೆಯನ್ನು ನಾನೇ ನನ್ನ ಕೈಯಾರೇ ಪಡೆಯಬೇಕು. ಆಗ ನನ್ನ ನಿಜವಾದ ಜನ್ಮದಿನ.

ಇದೆ ವರುಷದ ಹಿಂದೆ ನನ್ನ ಹೊಟ್ಟೆಯಲ್ಲಿ ಬುಳು ಬುಳು ಎಂದು ಓಡಾಡುತ್ತಿದ್ದ. ಇಂದು ನನ್ನ ತೊಡೆಯ ಮೇಲೆ ಆ.. ಊ..ಈ ಎಂದು ಕುಣಿಯುತ್ತಿದ್ದಾನೆ. ಅದು ದೇವರ ನಗುವನ್ನು ತನ್ನ ಬೊಚ್ಚು ಬಾಯಿಯಲ್ಲಿ ನನ್ನ ನೋಡಿ ನೋಡಿ!

ಇದಕ್ಕಿಂತ ದೊಡ್ಡ ಉಡುಗೊರೆ ಬೇಕೇ? ಆ ದೇವರು ಕೊಟ್ಟ ಅತಿ ದೊಡ್ಡ ಗಿಫ್ಟ್ ಈ ನನ್ನ ಜೀವ.

ನಾನು ನನ್ನ ಜೀವ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ