ಭಾನುವಾರ, ಫೆಬ್ರವರಿ 15, 2015

ಕನ್ನಡ ಪ್ರೀತಿ


ನಮಸ್ಕಾರಗಳು

ನಿಮ್ಮ ಈ ವಾರದ ಲೇಖನ ’ತಾಯ್ನುಡಿಯ ದಿನ ಮತ್ತು ದೇವನೂರರ ಮಾತಿನ ಸುತ್ತ’ ಹತ್ತು ಹಲವು ಭಾಷೆಯ ಬಗೆಯ ಮಜಲುಗಳನ್ನು ಪರಿಚಯಿಸಿತು. ಇದು ಕನ್ನಡ ನಾಡು ನುಡಿಯ ಉಳಿವಿನ ಬಗ್ಗೆ ಪ್ರತಿಯೊಬ್ಬರೂ ಯೋಚಿಸುವಂತೆ ಮಾಡಿದೆ.

ಭಾಷೆಯ ಮಾದ್ಯಮವನ್ನು ಒತ್ತಾಯ ಪೂರಕವಾಗಿ ಯಾರ ಮೇಲೂ ಹೇರಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಸಾವಿರಾರು ವಿವಿಧ ಭಾಷೆಗಳನ್ನು ಮಾತನಾಡುವ ಜನ ಸಮೂಹವೇ ಇದೆ. ಅದು ಅವರ ತಾಯಿ ನುಡಿ ಮತ್ತು ಮನೆಯ ಮಾತು.

ಕನ್ನಡಕ್ಕೆ ಬಂದರೇ ಕನ್ನಡದ ಉಳಿವು ಅಳಿವಿನ ಕೂಗು ಜಾಸ್ತಿ ಕೇಳಿ ಬರುವುದು ಬೆಂಗಳೂರಿನಲ್ಲಿ ಮಾತ್ರ ಅನಿಸುತ್ತದೆ. ಯಾಕೆಂದರೇ ಬೆಂಗಳೂರು ಅದು ಯಾವಗಲೋ ಕಂಗ್ಲೀಷ್ ಮಯವಾಗಿದೆ. ದುರ್ಬಿನ್ ಹಾಕಿಕೊಂಡು ಹುಡುಕಿದರೂ ಪೂರ್ಣ ಕನ್ನಡ ಮಾತನಾಡುವ ಜನಗಳು ಸಿಗುವುದು ದುರ್ಲಬ ಅನಿಸುವಂತಾಗಿದೆ.

ಇದಕ್ಕೆ ಉದಾಹರಣೆ ಎನ್ನುವಂತೆ ಬೆಂಗಳೂರಿನಿಂದ ಹೊರಡುವ ಪತ್ರಿಕೆಗಳು, ಟಿ.ವಿ, ರೇಡಿಯೋ ಕಾರ್ಯಕ್ರಮಗಳಲ್ಲಿ ಬಳಸುವ ಯಾವುದೇ ವಿಷಯಗಳು ಪೂರ್ಣ ಅಥವಾ ಇಂಗ್ಲಿಷ್ ಮಿಶ್ರ ಕನ್ನಡವಾಗಿರುತ್ತದೆ. ಕನ್ನಡ ಪತ್ರಿಕೆಗಳಿಗೆ ಒಮ್ಮೊಮ್ಮೆ ಮುಖಪುಟದಲ್ಲಿ ಬಳಸುವ ಸುದ್ದಿಯ ಹಣೆಬರಹಗಳನ್ನು ಸಹ ಇಂಗ್ಲಿಷ್ ನಲ್ಲಿಯೇ ಕೊಡುತ್ತಾರೆ. ಸಿನಿಮಾಗಳಂತೂ ಯಾವಗಲೋ ಇಂಗ್ಲಿಷ ಟೈಟಲ್ ಇಟ್ಟರೆ ಕ್ಲಿಕ್ ಎನ್ನುವಷ್ಟರ ಮಟ್ಟಿಗೆ ಮೊರೆ ಹೋಗಿದ್ದಾರೆ.

ಪತ್ರಿಕೆಗಳು,ಸಿನಿಮಾ,ಸಮೊಹ ಮಾಧ್ಯಮಗಳಿಗೆ ಯಾಕಪ್ಪಾ ಇಂಗ್ಲಿಷ್ ಮೋಹ ಎಂದು ಕೇಳಿದರೇ.. ಸಾರ್ ಜನಕ್ಕೆ ಬೇಕಾದ ಕ್ಯಾಚಿ ಟೈಟಲ್/ಪದಗಳನ್ನು ಇಂಗ್ಲಿಷ್ ನಲ್ಲಿ ಕೊಡುತ್ತೇವೆ. ಅದು ಜನರಿಗೆ ಬೇಗ ತಲುಪುತ್ತದೆ ಎನ್ನುತ್ತಾರೆ.

ನಾವು ಇಲ್ಲಿ ಬದುಕಬೇಕೆಂದರೇ ಕಂಗ್ಲಿಷ್ ಬೇಕೇ ಬೇಕು ಎಂದು ತಿಳಿದವರೇ ಕನ್ನಡ ಕನ್ನಡ ಎಂದು ಕೂಗುವರೇ ತಮ್ಮ ಅಸಹಾಯಕತೆಯನ್ನು ತೊಡಿಕೊಳ್ಳುತ್ತಾರೆ.

ಬೆಂಗಳೂರಿನಿಂದ ಪ್ರಾರಂಭಿಸಿ ಕಂಗ್ಲಿಷ್ ನ್ನು ಹಳ್ಳಿ ಹಳ್ಳಿಗೂ ಪಸರಿಸುವ ಕಾಯಕವನ್ನು ಕನ್ನಡವನ್ನು ಬೆಳೆಸಬೇಕಾದ ಈ ಜನರೇ ಕನ್ನಡವನ್ನು ಕೊಲ್ಲುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದರೇ ತಪ್ಪಿಲ್ಲ. ಅಪ್ಪಿ ತಪ್ಪಿ ಶುದ್ಧ ಶುದ್ಧ ಕನ್ನಡ ಇನ್ನೂ ಸ್ವಲ್ಪ ಇದೇ ಅಂದರೇ ಅದು ಯಾವುದೋ ಕೊನೆಯ ಮೊಲೆಯ ಹಳ್ಳಿಗಳ ಪಡಸಾಲೆಯಲ್ಲಿ ಮಾತ್ರ. ಇಲ್ಲೂ ಇನ್ನೂ ಸ್ವಲ್ಪ ದಿನದಲ್ಲಿ ಪೂರ್ಣ ಬದಲಾವಣೆಯಾದರೇ ಆಶ್ಚರ್ಯವಿಲ್ಲ. ಕನ್ನಡಕ್ಕೆ ಬೆಲೆಯೇ ಇಲ್ಲ ಎಂದರೇ ಅತಿಶಯೋಕ್ತಿಯಲ್ಲ. ಇದಕ್ಕೆ ಸಂಕಟಪಡಬೇಕಾದವರು ಯಾರು?

ಈ ರೀತಿಯ ಸನ್ನಿವೇಶದಲ್ಲಿ. ಕನ್ನಡವೇ ಬೇಕು. ಕನ್ನಡವೇ ಮಾಧ್ಯಮವಾಗಬೇಕು. ಕನ್ನಡವನ್ನೇ ಮಾತನಾಡಬೇಕು ಎಂದು ಶಾಸನವನ್ನು ಮಾಡಿದರೇ ಕನ್ನಡ ಉಳಿಯುವುದೇ?

ಕನ್ನಡವನ್ನು ಉಳಿಸಬೇಕೆಂದರೇ ಕನ್ನಡದ ಬಗ್ಗೆ ಜನರಿಗೆ ಅತಿ ಪ್ರೀತಿ ಬರುವಂತೆ ಮಾಡಬೇಕು. ಕನ್ನಡದಲ್ಲೂ ಎಲ್ಲಾ ಇದೆ ಎಂಬ ಮರ್ಮವನ್ನು ಪ್ರತಿಯೊಬ್ಬರೂ ತಿಳಿಯುವಂತಾಗಬೇಕು. ಕೊನೆ ಕೊನೆಗೆ ಹುಟ್ಟು ಕನ್ನಡಿಗರಿಗಾದರೂ ಇದರ ಘನತೆ ಅರಿಯುವಂತಾಗಬೇಕು.

ಎಲ್ಲಿ ಕನ್ನಡ ಮಾತನಾಡಿದರೇ, ಕನ್ನಡ ಪತ್ರಿಕೆ - ಪುಸ್ತಕ ಓದಿದರೇ, ಕನ್ನಡ ಸಿನಿಮಾ ನೋಡಿದರೇ, ಕನ್ನಡ ಶಾಲೆಯಲ್ಲಿ ಓದಿದರೇ ತಮ್ಮ ಮಾನ ಮರ್ಯಾದೆ ಹೋಗುತ್ತದೆ ಎಂಬ ಭಾವನೆಯನ್ನು ನಮ್ಮ ಕನ್ನಡದ ಗಡಿಯಾಚೆಗೆ ಹೊಡೆದೋಡಿಸಬೇಕು.

ಕನ್ನಡಿಗರಿಗೆ ಯಾಕೇ ಈ ನಿರಾಭಿಮಾನ ಕನ್ನಡದ ಬಗ್ಗೆ? ಯಾವ ಕಡೆಯಿಂದ ಯೋಚಿಸಿದರೂ ಉತ್ತರವೇ ಸಿಗುತ್ತಿಲ್ಲ!

ಪ್ರತಿ ವರುಷ ಜರುಗುವ ಕನ್ನಡ ರಾಜ್ಯೋತ್ಸವ, ಕನ್ನಡ ಸಮ್ಮೇಳನಗಳ ಸಂದರ್ಭದಲ್ಲಿ ಮಾತ್ರ ಈ ಬಗ್ಗೆ ಮಾತನಾಡುವುದು ಮಾತ್ರ ಎನ್ನುವಂತಾಗಬಾರದು.

ಕನ್ನಡದಲ್ಲಿ ಏನೇನೂ ಇಲ್ಲ ಎನ್ನುವವರ ಕಣ್ಣು ತೆರೆಯಿಸುವ ಕರ್ತವ್ಯ ಸರ್ಕಾರಕ್ಕಿಂತ ಜನ ಸಮೊಹ ಮತ್ತು ಜನರಿಂದಾಗಬೇಕು. ಕೇವಲ ಸರ್ಕಾರದ ಶಾಸನದಿಂದ ಯಾವುದು ಬದಲಾಗದು. ಒತ್ತಾಯದಿಂದ ಯಾರನ್ನು ಬದಲಾಯಿಸಲಾಗದು ಅಲ್ಲವಾ? ಅದು ಪ್ರೀತಿಯಿಂದಾಗಬೇಕು. ಅದೇ ಮಾತ್ರ ಶಾಶ್ವತವಾದದ್ದು.

ಇಲ್ಲವೆಂದರೇ ಈ ಕೂಗು ನಿರಂತರವಾಗಿರುತ್ತದೆ. ಕನ್ನಡದ ಜರೂರತೇ ಬೇಡ ಎಂದು ಕನ್ನಡಿಗರೇ ನಿರ್ಧಾರ ಮಾಡಿಬಿಟ್ಟರೇ ಮುಂದಿನ ಪೀಳಿಗೆಗೆ ಕನ್ನಡದ ಹಿರಿಮೆ, ಕನ್ನಡ ಕಲಿಸಿಕೊಡುವವರು ಯಾರು ಸ್ವಾಮಿ?

ಕನ್ನಡಿಗರೂ ಕೊಂಚ ತನ್ನ ತಾಯ್ನುಡಿಯ ಮೇಲಿನ ಪ್ರೇಮವನ್ನು ಅಕ್ಕ ಪಕ್ಕದ ರಾಜ್ಯದವರನ್ನು ನೋಡಿ ಕಲಿಯುವುದು ಬಹಳ ಇದೆ. ಅವರಲ್ಲಿ ಇರುವ ಪ್ರೀತಿ ನಮ್ಮಲ್ಲಿ ಯಾಕಿಲ್ಲ? ಅವರು ಎಲ್ಲಾ ರೀತಿಯಲ್ಲೂ ಮುಂದುವರಿದಿದ್ದಾರೆ. ಅವರು ಅವರ ಮಾತೃ ಭಾಷೆಯಲ್ಲಿಯೆ ತಮ್ಮ ವ್ಯವಾಹರನ್ನು ಮಾಡುತ್ತಾರೆ. ನಮ್ಮಲ್ಲಿರುವಷ್ಟು ತಮ್ಮ ಭಾಷೆಯ ಉಳಿವಿನ ಕೂಗು ಎಲ್ಲಿ ಎಂದಿಗೂ ಇಲ್ಲ. ಇದ್ದರೂ ನಮ್ಮಲ್ಲಿದ್ದಷ್ಟು ಆತಂಕಕಾರಿಯಗಿಲ್ಲ.


ಆ ಮನೋಭಾವನೆ ನಮ್ಮಲ್ಲಿ ಸ್ವಯಂ ಘೋಷಿತವಾಗಿ ಬರಬೇಕು. ಆಗ ತನ್ನಷ್ಟಕ್ಕೆ ತಾನೇ ಕನ್ನಡ ಮಾದ್ಯಮಕ್ಕೆ ಒಲಿಯುವ ಮತ್ತು ಮಣಿಯುವ ಗಟ್ಟಿ ಕನ್ನಡ ಕಲಿಗಳು ಸಿಗುತ್ತಾರೆ. ಇದರಿಂದ ಮಾತ್ರ ಕನ್ನಡದ ಭವಿಷ್ಯವನ್ನು ಕೊಂಚ ನಿರಕ್ಷಿಸಬಹುದು.


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ