ಮಂಗಳವಾರ, ನವೆಂಬರ್ 1, 2011

ಕನ್ನಡವೆನೆ ಮನ ಕುಣಿದಾಡುವುದು!!



"ಕನ್ನಡ..." ಹೀಗೆ ಅಂದರೇ ಏನೋ ನೆಮ್ಮದಿ. ಆ ಶಬ್ಧವನ್ನು ಕೇಳಿದರೇ ಒಂದು ಕ್ಷಣ ಮೈ ರೋಮಾಂಚನವಾಗುವುದು ಮತ್ತು ನಮ್ಮದೇ ಭಾಷೆ ಎಂಬ ದೈರ್ಯ ಬರುವುದು. ಕನ್ನಡ ಮಾತನ್ನಾಡುವ ಇಡಿ ಸಮೊಹವನ್ನು ಕಂಡರಂತೂ ಇನ್ನೂ ಖುಷಿ ಯಾಕೆಂದರೇ ಎಲ್ಲರೂ ನಮ್ಮವರೇ ಎಂಬ ಸಂತಸ. ಮಾತೃ ಭಾಷೆಗೆ ಇರುವಂತಹ ಜಾದು ಈ ರೀತಿಯದು.

ಅದು ಬಿಸಿಲಿನ ಜಳದಲ್ಲಿ ನಮ್ಮ ದಾಹವನ್ನು ಹಿಂಗಿಸಿಕೊಳ್ಳಲು ನೀರಿಲ್ಲದ ಜಾಗದಲ್ಲಿ ಏನೂ ಏನೋ ತಂಪಾದ ಪಾನಿಯಗಳನ್ನು ಲೀಟರ್ ಗಟ್ಟಲೆ ಕುಡಿದರೂ ಹಿಂಗದ ದಾಹ ಅದೇ ಸಾಮಾನ್ಯವಾದ ಒಂದು ಲೋಟ ನೀರನ್ನು ಕುಡಿದಾಗ ಸಿಗುವಂತಹ ಮನಸ್ಸ್ ತೃಪ್ತಿ ಮಾತೃ ಭಾಷೆಯನ್ನು ಮಾತನಾಡಿದಾಗ, ಬರೆದಾಗ, ನುಡಿದಾಗ, ಓದಿದಾಗ ಸಿಗುವುದು.

ಯಾವುದೇ ನೋವುಂಟಾದಾಗ, ಬೇಸರವಾದಾಗ,ಖುಷಿಯಾದಾಗ ಮನದಲ್ಲಿ ಮೊದಲು ಮೂಡುವ ಮಾತೇ ಕನ್ನಡ ಪದ. ನಮ್ಮ ಮನದ ಭಾವನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಯಾರಿಗಾದರೂ ಹೇಳಬೇಕು ಅಂದಾಗ ಬರುವಂತಹ ನುಡಿ ಶಬ್ಧವೇ ಕನ್ನಡ. ಕನ್ನಡ ಬಿಟ್ಟು ಯಾವುದೇ ಬೇರೆ ಭಾಷೆಯಲ್ಲಿ ಮಾತನಾಡಿದರೂ ಏನೋ ಒಂದು ಸ್ವಲ್ಪ ಕೂರತೆಯನ್ನು ಅನುಭವಿಸುವೆವು.

ಗೊತ್ತಿರಬಹುದು ಯಾವುದೇ ಭಾಷೆಯ ಸಿನಿಮಾವನ್ನು ನೋಡಿದರೂ ನಮ್ಮ ಭಾಷೆಯ ಚಲನಚಿತ್ರವನ್ನು ನೋಡುವಾಗ ಅನುಭವಿಸುವ ಸಂಭ್ರಮ ಸಂತಸವನ್ನು ನಿಜವಾಗಿ ಅನುಭವಿಸಲು ಸಾಧ್ಯವಿಲ್ಲ.

ಬಾಲ್ಯದಲ್ಲಿ ಮಗುವಿನ ಓ ನಾಮ ಪ್ರಾರಂಭವಾಗುವುದೇ ಅದರ ಮಾತೃ ಮತ್ತು ಮನೆಯ ಆಡು ಭಾಷೆಯಿಂದ. ನಾವುಗಳು ದಾರಿ ತಪ್ಪಿದಾಗ ನಮ್ಮಗಳಿಗೆ ಅಸರೆಯ ದಾರಿ ದೀಪವಾಗುವುದು ನಮ್ಮ ಕನ್ನಡ ಮಾತ್ರ.

ಕನ್ನಡ ಅಂದರೇ ಅದು ಎಲ್ಲಾ ಎಂದು ಮಾತ್ರ ಹೇಳಬಹುದೇನೊ. ಭಾಷೆಯಲ್ಲಿಯೇ ಸಂಸ್ಕೃತಿ, ಚರಿತ್ರೆ, ಪರಂಪರೆ ಅಡಗಿದೆ. ಅದು ಒಂದು ಭವ್ಯ ಭವಿಷ್ಯ ಮತ್ತು ಉನ್ನತವಾದ ಗಿರಿ ಶಿಖರವೇ ಸರಿ. ಇದು ನಮ್ಮನ್ನು ಬೆಳೆಸುತ್ತಾ ಅದು ಬೆಳೆಯುತ್ತಾ ಇದೆ. ಹಿಂದಿನಿಂದ ಇಂದಿನವರೆಗೂ ನೂರಾರು ಮಹನೀಯರುಗಳು ತಮ್ಮ ಜೀವನವನ್ನು ಅದರ ಏಳ್ಗೆ ಮತ್ತು ಬೆಳವಣಿಗೆಗೆ ಮುಡಿಪಿಟ್ಟು ತಾವುಗಳು ಅತಿ ಎತ್ತರದ ಸ್ಥಾನಕ್ಕೆ ಏರಿದ್ದಾರೆ.

ಸಾವಿರಾರು ವರುಷಗಳ ಇತಿಹಾಸವನ್ನು ಹೊಂದಿರುವ ಪ್ರಾಚೀನ ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಲಿಪಿಯಂತೂ ಮುತ್ತು ಪೋಣಿಸಿದ ರೀತಿಯಲ್ಲಿ. ಕಲಿಯುವುದಂತೂ ಅತಿ ಸುಲಭ. ಸುಲಿದ ಬಾಳೆ ಹಣ್ಣಿನೋಪಾದಿಯಲ್ಲಿ. ಕನ್ನಡಾಂಭೆಯ ಸರಸ್ವತಿಯ ಪುತ್ರರ ಕಾಣಿಕೆಯನ್ನು ನಮ್ಮ ಜೀವನ ಪೂರ್ತಿ ಓದಿ ಅಭ್ಯಾಸಿಸಿದರೂ ಎಂದಿಗೂ ಮುಗಿಯಲಾರದಂತಹ ಅಗಾಧ ಸಮುದ್ರದೋಪಾದಿ, ಅಳತೆಗೂ, ಮಿತಿಗೂ ಸಿಗಲಾರದಂತಹದ್ದು.

ಮನ್ನೆ ಮನ್ನೇ ೮ನೇ ಙ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಕನ್ನಡಾಂಭೆ ತನ್ನ ಹಿರಿಮೆಯನ್ನು ಪುನಃ ಕನ್ನಡ ಜನಪದಕ್ಕೇ ತನ್ನ ಉತ್ಕೃಷ್ಟತೆಯನ್ನು ಮನನ ಮಾಡಿಕೊಟ್ಟಿದೆ. ಭಾರತೀಯ ಯಾವೊಂದು ಭಾಷೆಗೂ ಇಷ್ಟೊಂದು ಪ್ರಶಸ್ತಿಗಳ ಗೌರವ ಸಿಕ್ಕಿರದೇ ಇರುವುದು ಕನ್ನಡವನ್ನು ಪ್ರತಿಯೊಬ್ಬರೂ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ.

ಆದರೂ ಹಿತ್ತಲ ಗಿಡ ಮದ್ದು ಅಲ್ಲ! ಎಂಬ ರೀತಿಯಲ್ಲಿ ನಮ್ಮ ಕನ್ನಡ ಜನಗಳಿಗೆ ಅದೂ ನಗರ ಪ್ರದೇಶದ ಮಂದಿಗೊಂತೂ ಇಂಗ್ಲೀಷ್ ವ್ಯಾಮೋಹ ಹೇಳತಿರದು. ಕನ್ನಡ ಎಂದರೇ ಬೇಡದ್ದು. ಅದು ಕೀಳುಹಿರಿಮೆ ಎಂಬ ರೀತಿಯಲ್ಲಿ ನೋಡುತ್ತಿದ್ದಾರೆ. ನಮ್ಮ ಮಕ್ಕಳೆಲ್ಲಾ ಟಸ್ಸು ಪುಸ್ಸು ಇಂಗ್ಲೀಷ್ ಮಾತನ್ನಾಡಬೇಕು ಎಂಬ ಮಹಾತ್ವಕಾಂಕ್ಷಿತನದಿಂದ ಕಾನ್ವೇಂಟೇ ನಮ್ಮ ಪೀಳಿಗೆಗಳಿಗೆ ಭವಿಷ್ಯ ಎಂಬ ರೀತಿಯ ಬದಲಾವಣೆಯ ಗಾಳಿ ಎಲ್ಲಾ ಕಡೆ ಬಿಸುತ್ತಿದೆ. ಕನ್ನಡ ಮಾದ್ಯಮದ ಸರ್ಕಾರಿ ಶಾಲೆಗಳನ್ನು ಕೇಳುವವರು ಇಲ್ಲದಂತಾಗುವ ಪರಿಸ್ಥಿತಿ ಬರುತ್ತಿದೆ. ಬಡವರ ಭಾಷೆ ಕನ್ನಡ ಎಂಬಂತಾಗಿದೆ.ಬಡವರ ಮಕ್ಕಳಿಗೆ ಮಾತ್ರ ಕನ್ನಡ ಮಾಧ್ಯಮ ಶಿಕ್ಷಣ ಎಂಬಂತಾಗಿರುವುದು ಯಾವುದರ ಪ್ರತೀಕ?

ಈ ರೀತಿಯ ಬದಲಾವಣೆಯನ್ನು ನಿಲ್ಲಿಸಬೇಕಾಗಿದ್ದು ಸರ್ಕಾರ ಮತ್ತು ಸಂಘ ಸಂಸ್ಥೆಗಳ ಕರ್ತವ್ಯ. ಕನ್ನಡದಲ್ಲಿ ಕಲಿತರೂ ಏನಾದರೂ ದೊಡ್ಡದಾಗಿ ಸಾಧಿಸಬಹುದು ಎಂಬ ಒಂದು ಭರವಸೆಯನ್ನು ಎಳೆಯರಲ್ಲಿ ಬಿತ್ತಬೇಕಾಗಿದ್ದು ಹಿರಿಯರ ಕೆಲಸ.

ಹೈ ಟೆಕ್ ಅಂದರೇ ಇಂಗ್ಲೀಷ್ ಮಾತ್ರ ಎಂಬ ದೋರಣೆ ಹೋಗಲಾಡಿಸಬೇಕು. ಮಾತೃ ಭಾಷೆಯಲ್ಲಿಯೇ ದೊಡ್ಡ ದೊಡ್ಡ ಪದವಿಗಳು ಸಿಗುವಂತಹ ಕಾಲ ಬರಬೇಕು. ಅದನ್ನು ಪರಿಣಾಮಕಾರಿಯಾಗಿ ಎಲ್ಲಾ ರಂಗದಲ್ಲೂ ಉಪಯೋಗಿಸುವಂತಾಗಬೇಕು. ಇಂಗ್ಲೀಷ್ ಎಂಬುದು ಒಂದು ಭಾಷೆಯಾಗಿರಬೇಕು. ಅದು ಬಿಟ್ಟು ಅದೇ ಒಂದು ಸಂಸ್ಕೃತಿಯನ್ನು ದಮನಾಕಾರಿಯಾಗಿ ತುಳಿಯುವಂತಾಗಬಾರದು.

ಈ ದಿಕ್ಕಿನಲ್ಲಿ ಪ್ರತಿಯೊಬ್ಬರೂ ಚಿಂತಿಸುವ ಸಮಯ ಇಂದು ಬಂದಿದೆ. ಕೇವಲ ನವಂಬರ್ ೧ ರಂದು ವೀರಾವೇಷದ ಕನ್ನಡ ಪರ ಮಾತುಗಳು ಎಲ್ಲಾ ಕಡೆಯಿಂದ ಬರದೇ, ಆ ಮಾತುಗಳು ಬಲಿಷ್ಟವಾದ ಕನ್ನಡ ಸಂಸ್ಕೃತಿಯನ್ನು ಉಳಿಸಿ - ಬೆಳೆಸುವಂತಾಗಿ ಪ್ರತಿಯೊಬ್ಬರೂ ಪ್ರೀತಿಪಟ್ಟು, ಇಷ್ಟಪಟ್ಟು ಕಲಿಯುವಂತಾಗಬೇಕು. ಆಗಲೇ ಯಾವುದೇ ಭಾಷೆಯ ಅಳಿವು ಉಳಿವು ನಿರ್ಧರವಾಗುವುದು.

ಅದು ಕೇವಲ ಹಳ್ಳಿಯವರ ಭಾಷೆ ಮಾತ್ರ ಆಗಬಾರದು. ಕನ್ನಡ ಮಾತನ್ನಾಡಲು ಹೆಮ್ಮೆ ಪಡುವಂತಹ ಕಾಲವಾಗಬೇಕು. ಇದು ಎಂದು ಬರುವುದೋ? ಆ ಕನ್ನಡಾಂಭೆಯೇ ಹೇಳಬೇಕು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ