ಗುರುವಾರ, ನವೆಂಬರ್ 3, 2011

ಕಾಲದ ರೇಖೆಯ ಮೇಲೆ..

ಕಾಲವೇ ಎಲ್ಲಾ ಅನಿಸುತ್ತದೆ. ದಿನಗಳು ಕಳೆದಂತೆ ಎಲ್ಲವೂ ಬದಲಾಗುತ್ತವೆ. ಎಲ್ಲವನ್ನು ಮರೆಸುತ್ತವೆ.. ಎಲ್ಲವನ್ನು ಕೊಡುತ್ತದೆ.. ಎಲ್ಲವನ್ನು ಕಿತ್ತುಕೊಳ್ಳುತ್ತದೆ..

ಕಾಲದ ಮೇಲೆ ನಮ್ಮ ನಿಮ್ಮೆಲ್ಲಾರ ಪಯಣ. ಕಾಲದ ರೇಖೆಯ ಮೇಲೆ ನಮ್ಮಗಳ ಸುಖ, ನಲಿವು, ನೆನವು, ಸಾಧನೆ, ದ್ವೇಷ, ಪ್ರೀತಿ, ಅಸೂಯೆ ಇತ್ಯಾದಿ ಇತ್ಯಾದಿ ಕೃತ್ಯಗಳ ಕಲಸುಮೆಲೋಗರ.. ಇದೇ ಜೀವನ ಅನಿಸುತ್ತದೆ.

ದಿನಗಳು ಉರುಳಿದಂತೆ ವ್ಯಕ್ತಿಯ ಪ್ರಯಾರಿಟಿಗಳಲ್ಲಿ ಸಣ್ಣ ಪಲ್ಲಟಗಳು. ಆ ಸಮಯಕ್ಕೆ ಆ ದಿನಕ್ಕೆ ಬಹುಮುಖ್ಯ ಎನಿಸಿದ ವಿಷಯ ವಿಶೇಷಗಳು ಇಂದಿನ ಸಮಯಕ್ಕೆ ನಗಣ್ಯವೆನಿಸುತ್ತವೆ. ಅಂದು ಮುಖ್ಯ ಎಂದು ಕಷ್ಟಪಟ್ಟು ಸಂಪಾದಿಸಿದ ವಿಧ್ಯೆ, ಬುದ್ಧಿ, ಹಣ, ಸ್ನೇಹಿತರು, ಆಸ್ತಿ ಮುಂತಾದವುಗಳು ಇಂದಿನ ನಮ್ಮ ಬದುಕುವ ಜೀವನಕ್ಕೆ ಬೇಕೇ ಆಗಿಲ್ಲವೆನೋ ಅನಿಸುತ್ತದೆ.

ಎಷ್ಟು ವಿಚಿತ್ರ ಅನಿಸಿದರೂ ಇದು ಸತ್ಯವಾದದ್ದು. ಬದಲಾದ ಪರಿಸ್ಥಿತಿಗಳಿಗೆ ವ್ಯಕ್ತಿ ಹೊಂದಿಕೊಂಡು ಹೊಸ ಹೊಸ ದಿಕ್ಕಿನ ಕಡೆ ಮುಖ ಮಾಡಲೇ ಬೇಕು. ತನ್ನನ್ನು ತಾನು ಹತ್ತು ಹಲವು ಹೊಸತನಗಳಿಗೆ ತೆರೆದುಕೊಂಡು ಮುಂದುವರಿಯಲೇಬೇಕು.

ಪುನಃ ಕಾಲಾಯಾ ತಸ್ಮಯಾ ನಮಃ ಎಂಬ ಗೂಣಗಿನಿಂದ ಏನೂ ಮಾಡಲಾರದಂತಹ ಮನಸ್ಸಿನಿಂದ ಏನೋ ಮಾಡಬೇಕು ಮತ್ತು ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವೆ ಈ ಜೀವನ.




ಯೋಚಿಸಿ ಇಂದು ನಾವುಗಳು ಎಷ್ಟೊಂದು ವಿಷಯಗಳನ್ನು ಹಿಂದೆ ಗಮನಿಸದಂತೆ, ಪ್ರಾಮುಖ್ಯ ಕೊಟ್ಟಂತೆ ಇಂದು ಕೊಡಲಾರೆವು. ಯಾಕೆಂದರೇ ನಮ್ಮ ಅಸಕ್ತಿ ಮತ್ತು ಖುಷಿಯ,ಅವಶ್ಯಕತೆಯ ಪ್ರಯಾರೀಟಿಗಳು ಬೇರೆಯಾಗಿವೆ.

ನಾವುಗಳು ಚಿಂತಿಸುವ ವಿಷಯಗಳು, ಬಳಸುವ ದಾರಿಗಳು,ಪದಗಳು,ಮಾತನಾಡಿಸುವ ವ್ಯಕ್ತಿಗಳು, ಸ್ನೇಹಿತರುಗಳು, ನೋಡುವ ನೋಟಗಳೆ ಹಿಂದೆ ಇದ್ದಂತೆ ಈ ಸಮಯಕ್ಕೆ ಇಲ್ಲವೇ ಇಲ್ಲ.

ಎಷ್ಟೋ ಹಳೆಯ ಪದಗಳು ಇಂದು ನೆನಪಿಗೆ ಬರುತ್ತಿಲ್ಲ. ಮರತೇ ಹೋದಂತೆ ಅನಿಸುತ್ತಿದೆ. ಎಲ್ಲಾವೂ ಇತಿಹಾಸ ಸೇರಿದಂತಹ ಅನುಭವ. ಹಳೆಯ ಮಾತುಗಳು, ಹಳೆಯ ಪದಗಳನ್ನು ಕೇಳಿದರೇ ಬೆರಗಾಗಿ ನೋಡುವಂತಾಗಿದೆ.

ನಮ್ಮ ಇಂದಿನ ಪ್ರಸ್ತುತ ಸಮಯದಲ್ಲಿ ಪದಗಳ ಬಳಕೆಯನ್ನು ಗಮನಿಸಿದರೂ ಕೇವಲ ಕೆಲವೇ ಕೆಲವು ಪದಗಳ ಜೋತೆಯ ಜುಗಲ್ ಬಂದಿ. ಇದು ನಾವುಗಳು ಬಳಸುವ ಭಾಷೆಗೆ ಅನ್ವಯಿಸಿದರೇ. ನಮ್ಮಗಳ ಸಂಬಂಧಗಳ ಅನುಭಾವದ ತಂತುಗಳು ಬಹಳ ಕಿರಿದಾಗಿದೆ ಅಂತಾ ಅನ್ನಿಸುವುದಿಲ್ಲವಾ?

ಇದು ಯಾಕೆ ಎಂದರೇ ಪುನಃ ಅದೇ ಸಾಮಾನ್ಯ ಉತ್ತರಾ! "ಮುಂದುವರಿಯಬೇಕೆಂದರೇ ಕೆಲವೊಂದನ್ನೂ ಕಳಚಿಕೊಳ್ಳಬೇಕು ಮಗಾ" ಅಂತಾ. ಆದರೂ ಒಮ್ಮೊಮ್ಮೆ ನಮಗೆಲ್ಲಾರಿಗೂ ಅನಿಸುತ್ತಿರುತ್ತದೆ ಏನೋ ಒಂದನ್ನು ಮಿಸ್ ಮಾಡಿಕೊಳ್ಳುತ್ತಿದ್ದಿವಿ ಅಂತಾ. ಆದರೂ ಹೀಗೆ ಒಂದೊಂದನ್ನು ಪಡೆಯುವುದಕ್ಕೋಸ್ಕರ ಮತ್ತೊಂದನ್ನು ದಿಕ್ಕರಿಸುತ್ತಾ ಬದುಕು ಸಾಗಿಸಬೇಕಾಗುತ್ತದೆ?

ಇದು ಒಂದು ರೀತಿಯಲ್ಲಿ ಯಾರ ಅರಿವಿಗೂ ಬಾರದ ರೀತಿಯಲ್ಲಿ ಎಲ್ಲರಲ್ಲೂ ಸಾಮಾನ್ಯವಾಗಿ ಸಂಭವಿಸುವ ಸಾಮಾನ್ಯ ಘಟನೆ ಅನಿಸುತ್ತದೆ.

ಇದು ಎಲ್ಲದಕ್ಕೂ ಸಂಬಂಧಿಸಿದಾಗಿದೆ. ಅಂದು ಚಿನ್ನಾ ರನ್ನಾ ಎಂದೂ ಮುದ್ದಾಡಿದವರು.. ಮುದ್ದಾಡಿಸಿಕೊಂಡವರು.. ಇಂದು ಕಾಲ ಕಸವಾಗಿ ಕಾಣುವಂತಾಗುವುದು. ಅಂದು ಇವರೇ ನಮ್ಮಗಳ ದೀಪ ಎಂದುಕೊಂಡವರು ಇಂದು ಏನೂ ಅಲ್ಲವೇ ಅಲ್ಲ ಅಂತಾ ಅನಿಸುವುದು. ಇದೇ ಜೀವನವಾ?

ತರ್ಕಕ್ಕೂ ನಿಲುಕಲಾರದಂತಹ ತುಂಬ ಸಂಕೀರ್ಣಮಯವಾದ ಈ ಯೋಚನೆಗಳು ಎಲ್ಲರಿಗೂ ಕಾಡುತ್ತವಾ ಎಂಬುದು ಬಹು ಮುಖ್ಯ ಪ್ರಶ್ನೆ.

ಕಾಡಲೇ ಬೇಕು ಅಲ್ಲವಾ.. ಇಂದಿನ ಕಾಲದ ಮಿತಿಯಲ್ಲಿ, ಒಂದು ನಿರ್ಧಿಷ್ಟವಾದ ಕಾಲದ ನಿಲ್ದಾಣದಲ್ಲಿ ಎಲ್ಲವನ್ನೂ ಒಮ್ಮೆ ನೋಡಿಕೊಳ್ಳುವ ಮನಸ್ಸು ಪ್ರತಿಯೊಬ್ಬರಿಗೂ ಬಂದೇ ಬಂದಿರುತ್ತದೆ.

ಹಾಗೆಯೇ ಹಳೆಯ ಸಿಹಿ, ಕಹಿ ಅನುಭವಗಳ ಮೇಲೆಯೆ ಅಲ್ಲವಾ ಮುಂದಿನ ಅಥವಾ ಪ್ರಸ್ತುತ ನಮ್ಮ ಬದುಕನ್ನು ರೂಪಿಸಿಕೊಳ್ಳುವಂತಾಗುವುದು. ಕಳೆದ ಗಳಿಗೆ, ವ್ಯಕ್ತಿಗಳ ಒಡನಾಟ, ಕೇಳಿದ ನೋಡಿದ ಬೆಡಗು ಮುಂದಿನ ಬದುಕಿಗೆ ಸ್ಫೂರ್ತಿ.

ಯಾವುದನ್ನು ಇದು ಹೀಗೆ ಎಂದು ಎಲ್ಲೂ ಹೇಳಿಲ್ಲ. ಅದು ಆ ಆ ಸಮಯಕ್ಕೆ ಸರಿಯಾಗಿ ಹೇಗೆ ಹೇಗೆ ನಾವುಗಳು ನಮ್ಮ ನಮ್ಮಲ್ಲಿ ತೆಗೆದುಕೊಳ್ಳುತ್ತೇವೋ ಹಾಗೆ ಆ ಕ್ಷಣಕ್ಕೆ ಅದು ಸತ್ಯವಾಗಿರುತ್ತದೆ. ಆ ಪರಿಧಿಯಲ್ಲಿ ಸಾಗುವುದು ನಮ್ಮಗಳ ಬದುಕು ಅಲ್ಲವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ