ಸೋಮವಾರ, ನವೆಂಬರ್ 14, 2011

ಮಕ್ಕಳಿರಲವ್ವಾ ಮನೆ ತುಂಬ..

ಬಾಲ್ಯ ಯಾರೂ ಯಾವತ್ತಿಗೂ ಮರೆಯಲಾರದಂತ ದಿನಗಳು. ಅವುಗಳ ಪುನರ್ ಮೆಲುಕು ನಮ್ಮ ವಯಸ್ಸು ಕಳೆದ ಈ ದಿನಗಳಲ್ಲಿ ಬಹಳ ಹಿತವಾಗಿರುವಂತಹ ನೆನಪುಗಳಾಗಿರುತ್ತವೆ. ನವಮಾಸಗಳನ್ನು ಕಳೆದು ತಾಯಿಯ ಗರ್ಭದಿಂದ ಭೂಮಿಗೆ ಅವತರಿಸಿದ ದಿನಗಳಿಂದ ಪ್ರಾರಂಭವಾಗುವ ಮೊದಲ ದಿನಗಳೇ ಬಾಲ್ಯ.

ಮಕ್ಕಳಿರಲವ್ವಾ ಮನೆ ತುಂಬ ಎಂಬ ಜನಪದರ ಹಾಡಿನ ರೀತಿಯಲ್ಲಿ ಬಾಲ್ಯದಲ್ಲಿ ಮಾಡುವ ಪ್ರತಿಯೊಂದು ಆಟ-ಪಾಠಗಳು, ರೀತಿ ನೀತಿಗಳು ಮನೆಮಂದಿಯನ್ನೆಲ್ಲಾ ಮೆಚ್ಚಿಸುತ್ತದೆ. ಮಕ್ಕಳ ಅಳು, ಕೇಕೆ, ಕೂಗು, ಹಠಮಾರಿತನ, ರಂಪಾ ರಾಡಿ ಪ್ರತಿಯೊಂದು ಕಲಾತ್ಮಕವಾಗಿ ಎಲ್ಲರನ್ನು ರಂಜಿಸುತ್ತದೆ.

ಹೆತ್ತವರ ಕರುಳು ಆ ಸಮಯದಲ್ಲಿ ಸಂಭ್ರಮಿಸುವುದನ್ನು ಏನೂ ಕೊಟ್ಟಾಗಲು ಕಾಣುವುದಿಲ್ಲ. ಬಳ್ಳಿಗೆ ಕಾಯಿ ಭಾರವಲ್ಲ ಎಂಬ ರೀತಿಯಲ್ಲಿ ಎಷ್ಟೇ ಮಕ್ಕಳಿದ್ದರೂ ಹೆತ್ತ ತಾಯಿಗೆ ಕಷ್ಟ ಅನಿಸುವುದಿಲ್ಲ. ಯಾಕೆಂದರೇ ಅವು ಕರುಳ ಬಳ್ಳಿಗಳು.

ಒಂದೂ ಐದು ವರ್ಷದವರೆಗೆ ನಾವುಗಳು ಮಾಡಿದ ಯಾವೊಂದು ಚಟುವಟಿಕೆಗಳು ನಮ್ಮ ಮನಸ್ಸಿನಲ್ಲಿ ನೆನಪಾಗಿ ನಿಂತಿರುವುದಿಲ್ಲ. ಆ ವಯಸ್ಸೇ ಹಾಗೆ ಯಾವುದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಆದರೇ ನಾವುಗಳು ಇಂದು ನಮ್ಮ ಮುಂದೆ ಇರುವ ಅದೇ ವಯಸ್ಸಿನ ಮಕ್ಕಳನ್ನು ನೋಡಿಕೊಂಡು ಅವರುಗಳು ಮಾಡುವ ತುಂಟಾಟವನ್ನು,ಹೆತ್ತವರಿಗೆ ಕೊಡುವ ತೊಂದರೆಯನ್ನು ಕಂಡು ನಾವುಗಳು ಹೀಗೆ ಚಿಕ್ಕವರಾಗಿದಾಗ ನಕ್ಕು, ನಲಿದಿರಬಹುದು, ಗೋಳು ಹೊಯ್ದುಕೊಂಡಿರಬಹುದು ಎಂದುಕೊಳ್ಳಬಹುದು.



ಗಮನಿಸಿ ಅತಿ ಚಿಕ್ಕ ಮಕ್ಕಳನ್ನು ಸಾಕಿ ಸಲುಹಿದ ತಂದೆ-ತಾಯಿ, ಅಜ್ಜ - ಅಜಿಗಳೇ ಗ್ರೇಟ್ ಅವರುಗಳ ಸಂಬಾಳಿಕೆ ಇಲ್ಲದಿದ್ದರೇ ನಾವುಗಳು ಈ ರೀತಿ ಬೆಳೆದು ದೊಡ್ಡವರಾಗುತ್ತಿರಲೇ ಇಲ್ಲ. ಅವರ ಹಾರೈಕೆಯ ಫಲವೇ ಇಂದಿನ ನಾವುಗಳು. ನಮ್ಮ ಸಮಾಜದ ಈ ಒಂದು ಬಿಡಿಸಿಲಾರದ ಕೌಟಂಬಿಕ ನಂಟನ್ನು ಎಷ್ಟು ಕೊಂಡಾಡಿದರೂ ಕಡಿಮೆಯೆ.

ಹಾಲು ಕುಡಿಯು ಹಸುಳೆಯಿಂದ ಈ ಮಟ್ಟಗೆ ಬೆಳೆದು ದೊಡ್ಡವರಾಗಲು ಸಹಕರಿಸಿದ ಮನೆಯ ಮಂದಿಯ ಹಿರಿಯರ ಸೇವೆಯ ಹಿರಿಮೆ ದೊಡ್ಡದು. ಹೇಗೆ ಹೇಗೆ ನಮ್ಮ ಹೆತ್ತವರನ್ನು ಗೋಳು ಹೋಯ್ದು ಕೊಂಡಿರುವೆವು ಎಂಬುದನ್ನು ತಿಳಿಯಲು, ನಾವುಗಳು ಯಾವುದಾದರೂ ಒಂದು ಚಿಕ್ಕ ಮಗುವನ್ನು ಒಂದು ದಿನದ ಮಟ್ಟಿಗೆ ಸಂಬಾಳಿಸಿಕೊಂಡು ಇಟ್ಟುಕೊಂಡರೆ ಗೊತ್ತಾಗುತ್ತದೆ.

ಆದರೇ ಹಾಗೆ ನಾವುಗಳು ನಮ್ಮ ಬಾಲ್ಯದಲ್ಲಿ ನಮ್ಮ ಮನೆಯವರಿಗೆಲ್ಲಾ ಯಾವುದೇ ಒಂದು ರೀತಿಯಲ್ಲಿ ಮಾಡಿದ್ದರೂ ಅದಕ್ಕೆ ಮನ್ನಣೆ ಇರುತ್ತದೆ. ಯಾಕೆಂದರೇ "ಮಗು ಕಣಮ್ಮಾ ಅದಕ್ಕೆ ಏನೂ ಗೊತ್ತಾಗುತ್ತದೆ. ಹಠ ಮಾಡುತ್ತದೆ". ಹೀಗೆ ನಮ್ಮ ಅಜ್ಜ-ಅಜ್ಜಿಯರಿಂದ ನಮ್ಮಗಳಿಗೆ ಅಸರೆಯ ಕಕ್ಕುಲಾತಿಯ ಮಾತು ಸಿಕ್ಕಿರುತ್ತದೆ. ಅಪ್ಪ -ಅಮ್ಮ ಹೊಡೆಯಲು ಬಂದಾಗ ಅಜ್ಜಿಯ ಸೆರಗಿನಲ್ಲಿ ಹುದುಗಿಕೊಂಡ ಕ್ಷಣ. ಅಂಗಡಿಯಿಂದ ಅಜ್ಜ ತಂದುಕೊಟ್ಟ ಪೇಪ್ಪರಮೆಂಟು ತಿಂದ ದಿನಗಳ ಮೆಲುಕು.. ಇಂದು ನೆನಪಿಸಿಕೊಂಡರೂ ಅದರ ಸವಿಯ ರಸ ಬಾಯಲ್ಲಿ ಎಲ್ಲೂ ಇನ್ನೂ ನಿಂತಿದೆ ಅನ್ನಿಸುತ್ತದೆ.

ಮೊದಲ ಸಲ ಶಾಲೆಗೆ ಹೋಗಲು ಸುತಾರಾಮ್ ಒಪ್ಪದೆ ಕೊಂಟಾಟವಾಡಿದ್ದು.. ಶಾಲೆಯ ಮೇಸ್ಟರ್ ಭಯದಲ್ಲಿ ನಡುಗಿದ ಅಳುವಿನ ಕಣ್ಣೀರು ಇಂದು ಸಹ ನೆನಪಿದೆ. ಅಲ್ಲಿ ಆಟವಾಡುತ್ತಾ ಎಡವಿ ಬಿದ್ದು ಕಾಲಿನ ಉಗರನ್ನು ಕಳೆದುಕೊಂಡು ನೋವಿನಲ್ಲಿ ಒಂದು ವಾರ ಅತ್ತು ಕರೆದದ್ದು.

ಅಜ್ಜಿಯ ಅನುಭವದ ಮೂಸೆಯಲ್ಲಿ ಒಡಮೂಡಿದ ಸಣ್ಣ ಸಣ್ಣ ಕಥೆಗಳು, ಅದನ್ನು ಕೇಳಲೆಬೇಕೆಂಬ ರೀತಿಯಲ್ಲಿ ರಾತ್ರಿಯೀಡಿ ಅಜ್ಜಿಯ ಮಗ್ಗುಲಲ್ಲಿ ಮಲಗಲು ಅತ್ತಿದ್ದು.

ಅಮ್ಮ ಎಲ್ಲಾದರೂ ಹೋಗಲು ತಯಾರಿ ನಡೆಸಿದರೇ ನಾನು ನಿನ್ನ ಜೊತೆಯಲ್ಲಿ ಬರುವೆನೆಂದು ದಂಬಾಲು ಬೀಳುತ್ತಿದ್ದದ್ದು.

ಮೊದಲ ರೂಪಾಯಿಯನ್ನು ಮಾವನಿಂದ ಪಡೆದದ್ದು. ಅದನ್ನು ಕೊಟ್ಟು ಅಂಗಡಿಯಲ್ಲಿ ಮೀಠಾಯಿ ಖರೀದಿ ಮಾಡಿದ್ದು. ಅದನ್ನೇ ಜೇಬಿನಲ್ಲಿ ದಿನವೀಡಿ ಇಟ್ಟುಕೊಂಡು ಸ್ವಲ್ಪ ಸ್ವಲ್ಪವೇ ಕಡಿದುಕೊಂಡು ಸವಿದಿದ್ದು. ಗೆಳೆಯರಿಗೆ ಅದನ್ನು ತೋರಿಸಿಕೊಂಡು ನಿಮಗೆ ಬೇಕಾ? ಎಂದು ಕೇಳಿ ಕೇಳಿ ಕೊಡಲ್ಲಪ್ಪಾ ಎಂದು ಹೇಳುತ್ತಾ ಹೇಳುತ್ತಾ ಕೊಟ್ಟಿದ್ದು... ಜೊತೆಯಲ್ಲಿ ಕಳ್ಳಿ ಸಾಲೆ ಸುತ್ತಿದ್ದು.. ಹೊಲದಲ್ಲಿ ಬೆಳೆದ ಕಾಯಿ ಕಸರನ್ನು ಕದ್ದು ತಿಂದಿದ್ದು..

ಮೊದಲ ಸಲ ನಗರಕ್ಕೆ ಬಂದಿದ್ದು.. ಅಚ್ಚರಿ ಪಟ್ಟಿದ್ದು.. ಮೊದಲ ಸಲ ಬಸ್ಸನ್ನು ನೋಡಿದ್ದು.. ಮೊದಲಸಲ ಸೈಕಲ್ ಮೇಲೆ ಕುಳಿತುಕೊಂಡಿದ್ದು... ಮೊದಲ ಸಲ ಮರವೇರಿದ್ದು.. ಅಯ್ಯೋ ಆ ದಿನಗಳ ಒಂದು ಒಂದು ಕ್ಷಣಗಳು ಹೀಗೆ ರಂಗು ರಂಗಾಗಿ ಮನದ ಮೂಲೆಯಿಂದ ಇಣಿಕಿ ಇಣಿಕಿ ನೋಡುತ್ತಿವೇ...

ಚಿಕ್ಕ ಮನಸ್ಸಿನಲ್ಲಿ ಹಗಲು ಕನಸುಕಂಡಿದ್ದು. ಮುಂದೆ ಅದನ್ನು ಮಾಡಬೇಕು. ಅದನ್ನು ತಿನ್ನಬೇಕು. ಅಲ್ಲಿ ಹೋಗಬೇಕು. ಅಲ್ಲಿ ಹೋಗಿ ಹಾಗೆ ಸಂಭ್ರಮಿಸಬೇಕು. ಹೊಸ ಬಟ್ಟೆಯನ್ನು ಧರಿಸಿ ಎದುರು ಮನೆಯ ಗೆಳೆಯನಿಗೆ ತೋರಿಸಬೇಕು..

ಹೀಗೆ..ಅ ದಿನಗಳ ಸಂಭ್ರಮಕ್ಕೆ ಇಂದಿನ ಈ ಯಾವ ದಿನಗಳು ಎಂದೂ ಸರಿಸಾಟಿ ಇಲ್ಲ ಬಿಡಿ...

ಕೇವಲ ಸವಿ ಸವಿ ನೆನಪು ಮಾತ್ರ.. ಮಕ್ಕಳ ದಿನವೆಂದರೇ ಯಾವುದೇ ಜಂಜಾಟವಿಲ್ಲದ ಕೇವಲ ಸಂತಸವಾದ ಆಟವಾಡುವ ದಿನಗಳು.. ಮತ್ತೇ ಆ ದಿನಗಳಿಗೆ ಹೋಗಲಾರದಷ್ಟು ದೂರ ಬಂದಿರುವೆವು ಅಲ್ಲವಾ?

ಜೀವನದಲ್ಲಿ ಒಮ್ಮೆ ಮಾತ್ರ ಬರುವ ಈ ದಿನಗಳ ಸಂಭ್ರಮಕ್ಕೆ ನಾವುಗಳು ನಮ್ಮ ಮಕ್ಕಳನ್ನು ಅವರ ಪಾಡಿಗೆ ಅವರನ್ನು ಅನುಭವಿಸಲು ಬಿಡುವ ಜರೂರತು ಇಂದು ಅತ್ಯವಶ್ಯಕವಾಗಿದೆ. ಹಕ್ಕಿ ಪಕ್ಷಿಗಳಾಗಿ ಸ್ವತಂತ್ರವಾಗಿ ನಲಿಯುವಂತಹ ದಿನಗಳನ್ನು ಇಂದಿನ ಈ ಮುಂದುವರೆದ ಯಾಂತ್ರಿಕ ದಿನಮಾನದಲ್ಲಿ ನಮ್ಮ ಚಿಕ್ಕವರಿಗೆ ಪ್ರತಿಯೊಬ್ಬರೂ ಕೊಡಬೇಕಾಗಿದ್ದು ನಮ್ಮ ಕರ್ತವ್ಯ.

ಆದರೂ ಅದೇಷ್ಟೋ ಮಕ್ಕಳು ಈ ಒಂದು ಸುಂದರ ದಿನಗಳನ್ನು ನಿತ್ಯ ಮೀಸ್ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣಗಳು ಹಲವಾರು ಇವೆ. ಅದರೇ ಅವರ ಬಾಲ್ಯದ ಈ ದಿನಗಳನ್ನು ಯಾರೂ ಕದಿಯಬಾರದು. ಅದು ಅವರುಗಳಿಗೆ ಮಾತ್ರ ಮೀಸಲು. ನಾವುಗಳು ದೂರದಿಂದ ನಿಂತು ನೋಡಿ ನಲಿಯುದುದೊಂದೇ ನಮ್ಮ ಸೌಭಾಗ್ಯ!

ಮಕ್ಕಳ ದಿನಾಚರಣೆಯ ಶುಭಾಶಯಗಳು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ