ಮಂಗಳವಾರ, ಡಿಸೆಂಬರ್ 21, 2010

ಈರುಳ್ಳಿ ಕಣ್ಣೀರ ಪುರಾಣ



ಮೊದ ಮೊದಲು ನಮ್ಮ ನಿಮ್ಮ ಹೆಣ್ಣು ಮಕ್ಕಳು ನಿತ್ಯ ತಮ್ಮ ಕಣ್ಣೀರನ್ನು ಅಡಿಗೆ ಮನೆಯಲ್ಲಿ ಮೌನವಾಗಿ ಸುರಿಸುತ್ತಿದ್ದರು. ಆದರೇ ಕಳೆದ ಒಂದು ವಾರದಿಂದ ಪ್ರತಿಯೊಬ್ಬರೂ ಸಾಮಾನ್ಯ ಪ್ರಜೆಯಿಂದ ಸಾಗಿ ಡೆಲ್ಲಿಯ ನಮ್ಮ ಪ್ರಧಾನ ಮಂತ್ರಿಯವರೆಗೂ ತಮ್ಮ ಕಣ್ಣೀರನ್ನು ಹರಿಯಬಿಡುವಂತ ಸ್ಥಿತಿ ಬಂದಿರುವುದು ಯಾಕೆಂದು ಆಶ್ಚರ್ಯವೇ? ಅದೇ ಈರುಳ್ಳಿ ಸರ್ ಈರುಳ್ಳಿ! ಈರುಳ್ಳಿ ಈಗ ಎಲ್ಲೆಲ್ಲೂ ಅದರ ಒಂದು ಮಾತು ಬಿಟ್ಟರೆ ಬೇರೆ ವಿಷಯವೇ ಇಲ್ಲ. ಯಾಕೆಂದರೆ ಆ ಮಟ್ಟಿಗೆ ಅದು ತನ್ನ ಬೆಲೆಯನ್ನು ಹೆಚ್ಚಿಸಿಕೊಂಡು ಎಲ್ಲರ ಕಣ್ಣನ್ನು ಕೆಂಪಗೆ ಮಾಡಿದೆ.


ನಮಗಂತೂ ತರಕಾರಿಗಳು ಮತ್ತು ಅದರ ಮಹತ್ವ ತಿಳಿದುಕೊಳ್ಳುವ ಅವಶ್ಯಕತೆಯೇ ಇಲ್ಲ ಬಿಡಿ. ಹೇಗೋ ನಮ್ಮ ಹೆತ್ತವರು, ದೊಡ್ಡವರು ನಿತ್ಯ ಅವುಗಳನ್ನು ತಂದು ಸಮಯಕ್ಕೆ ಸರಿಯಾಗಿ ತಿಂಡಿ ತಿನಿಸುಗಳನ್ನು ಮಾಡಿ ನಮ್ಮ ಅರೆ ಹೊಟ್ಟೆಯನ್ನು ತುಂಬಿಸುವುದರಿಂದ ಆದರ ಯೋಚನೆಯನ್ನು ಮಾಡುವ ಜರೂರತು ಇಲ್ಲವೇ ಇಲ್ಲ.


ಎಷ್ಟೋ ತರಕಾರಿಯ ಹೆಸರಗಳು ಪುನಃ ನಮ್ಮ ಬಾಲ್ಯದ ಜೀವಶಾಸ್ತ್ರವನ್ನು ಪುನಃ ಪರಮರ್ಶಿಸುವ ಮಟ್ಟಿಗೆ ಕಣ್ಮರೆಯಾಗಿ ಬಿಟ್ಟಿವೆ. ಯಾಕೆಂದರೇ ನಾವುಗಳು ನಮ್ಮದೇಯಾದ ಪ್ರಪಂಚದಲ್ಲಿ ಬ್ಯುಸಿಯಾಗಿಬಿಟ್ಟಿದ್ದೇವಪ್ಪ.


ಅಡಿಗೆಯ ಮನೆಯಲ್ಲಿ ರಾಜ ಮರ್ಯಾದೆಯನ್ನು ನಮ್ಮ ಭಾರತದಲ್ಲಿ ಗಳಿಸಿರುವ ಏಕೈಕ ತರಕಾರಿಯೆಂದರೇ ಅದು ಈರುಳ್ಳಿ. ಅದು ಇಲ್ಲದ ನಮ್ಮ ಆಹಾರ ಪ್ರಪಂಚವೇ ಒಂದು ಶೂನ್ಯ ಮಾತ್ರ!


ಅದರಿಂದ ತಯಾರಿಸುವ ತರಾವೇರಿ ತಿಂಡಿ ತಿನಿಸುಗಳ ಪಟ್ಟಿಯಯೇ ಒಂದು ಕಥೆಯಾದಿತು. ಅವುಗಳ ರುಚಿಯನ್ನು ನಾವುಗಳೆಲ್ಲಾ ಗೊತ್ತಿಲ್ಲದ ರೀತಿಯಲ್ಲಿ ಸವಿದಿದ್ದು ಪುನಃ ಪುನಃ ನೆನಪಿಸಿಕೊಂಡು ತಿನ್ನುತ್ತೇವೆ. ಅವುಗಳಿಗೆ ಅಂಥ ರುಚಿಕಟ್ಟನ್ನು ಕೊಡುವುದು ಈರುಳ್ಳಿ ಮಾತ್ರ. ನಿನ್ನೇ ದಟ್ಸ್ ಕನ್ನಡದಲ್ಲಿ ಈ ಈರುಳ್ಳಿ ಬೆಲೆ ದುಭಾರಿಯಾದ ಸಮಯದಲ್ಲಿ ಇದಕ್ಕೆ ಬದಲಾಗಿ ಕೆಲವು ತರಕಾರಿಗಳನ್ನು ಕೊಟ್ಟು ಓದುಗರಿಗೆ ಚುನಾಯಿಸಲು ಕೊಟ್ಟಿದ್ದರು. ಆದರೇ ನಮಗೆ ತಿಳಿದ ಮಟ್ಟಿಗೆ ಆದರ ರುಚಿಯನ್ನು ಬೇರೊಂದು ತರಕಾರಿ ಕೊಡಲಾರದು. ಯಾಕೆಂದರೇ ಅದು ಯುನಿಕ್ ಮತ್ತು ಬೇರೊಂದು ಕಾಫಿ ಮಾಡಲಾರದ ಗುಣವನ್ನು ಹೊಂದಿರುವಂತದ್ದು.


ಏನೇ ಈ ದುಬಾರಿಯಾದ ಬೆಲೆಯಿದ್ದರೂ ಸಾಮಾನ್ಯ ರೈತ ಇದನ್ನು ಮೈ ಮಣ್ಣು ಮಾಡಿಕೊಂಡು ಬೆಳೆದು ನಮ್ಮ ಹೊಟ್ಟೆ ತುಂಬಿಸಿದರೂ ಅವನಿಗೆ ಈ ಬೆಲೆ ಏರಿಕೆಯ ಲಾಭವಂತು ಎಂದಿಗೂ ದೊರೆಯಲಾರದು. ಅವನಿಗೆ ಯಾವತ್ತಿದ್ದರೂ ಕೇವಲ ಅದರ ಕಷ್ಟ ನಷ್ಟಗಳ ಕಣ್ಣೀರು ಮಾತ್ರ. ಅದರೂ ಹೊಟ್ಟೆಯ ಪಾಡು ಮತ್ತು ಅವನ ನಿತ್ಯ ಕರ್ಮ ಬೆಳೆಯನ್ನು ಬೆಳೆಯಲೇಬೇಕು. ಮತ್ತು ಬೆಳೆಯುತ್ತಲೇ ಇರುತ್ತಾನೆ. ಸರಿಯಾದ ರೇಟು ಬಂತು ಎಂದು ಖುಷಿಯನ್ನುಪಡುವ ವೇಳೆಗೆ ನಮ್ಮ ಈ ವಿಚಿತ್ರ ಪ್ರಕೃತಿಯ ಮಾಯಜಾಲದಲ್ಲಿ ಸರಿಯಾಗಿ ಧೋ ಎಂಬ ಮಳೆಯೊ, ಮೊಡ ಮುಚ್ಚಿದ ವಾತವರಣದಿಂದ ಹಸನು ಮಾಡುವ ಸಮಯಕ್ಕೇ ಸರಿಯಾಗಿ ಈ ರೀತಿಯಲ್ಲಿ ಏನಾದರೂ ಒಂದು ಸ್ಥಿತಿಯಿಂದ ಬೆಳೆದ ಅದಷ್ಟೂ ಈರುಳ್ಳಿಯನ್ನು ತಿಪ್ಪೇಯ ಪಾಲು ಮಾಡಿರುವ ರೈತರು ಸಾವಿರಾರು.


ಎಷ್ಟೋ ಭಾರಿ ಎಲ್ಲಾ ಈರುಳ್ಳಿಯನ್ನು ಮೂಟೆಯಲ್ಲಿ ತುಂಬಿಸಿಕೊಂಡು ನಗರಗಳಿಗೆ ಬಂದು ವ್ಯಾಪಾರ ಮಾಡಿದರೇ ಅವನಿಗೆ ಅವುಗಳನ್ನು ಸಾಗಿಸಿದ ಲಾರಿಯ ಹಣವನ್ನು ಕೊಡಲಾರದಷ್ಟು ಹಣ ಬಂದಿರುವುದಿಲ್ಲ. ಯಾವ ಸುಖಕ್ಕಾಗಿ ಈ ಬೆಳೆಯನ್ನು ಬೆಳೆಯಬೇಕು ಎಂದು ಎಷ್ಟೋ ರೈತರು ತಾವು ಬೆಳೆದ ಈರುಳ್ಳಿಯನ್ನು ಹಾಗೆಯೇ ಹೊಲದಲ್ಲಿ ಬಿಟ್ಟು ಯಾರದರೂ ತೆಗೆದುಕೊಂಡು ಹೋಗಲಿ ಎಂದೊ ಅಥವಾ ಹೊಲಕ್ಕೆ ಗೊಬ್ಬರವಾಗಲಿಯೆಂದು ಕೊಳೆಯಲು ಬಿಟ್ಟಿರುವ ನಿದರ್ಶನಗಳು ಸಾವಿರಾರು..


ಆದರೇ ಇಲ್ಲಿನ ನಮ್ಮ ಮೆಟ್ರೂ ಜನಗಳಿಗೆ ಈ ಕಷ್ಟ ನಷ್ಟಗಳ ಸಾಮಾನ್ಯ ರೈತನ ಚಿತ್ರಣವೇ ಕಣ್ಣಿಗೆ ಬೀಳುವುದಿಲ್ಲ. ಇಲ್ಲಿಯ ಹೈಟೇಕ್ ಎ.ಸಿ ಯಲ್ಲಿನ ಪ್ರಶ್ ವೇಜ್ ಶಾಪ್ ಗಳಲ್ಲಿ ಹೇಳಿದಷ್ಟು ಹಣ ಕೊಟ್ಟು ಕ್ಯೂನಲ್ಲಿ ನಿಂತು ಖರೀದಿಸುತ್ತಾರೆ. ಹಾಗದರೇ ಈ ಎಲ್ಲಾ ದುಬಾರಿಯ ಬೆಲೆ ಯಾರ ಜೇಬನ್ನು ಸೇರುತ್ತದೆ? ಇನ್ನೆಲ್ಲಿಗೇ ಇಲ್ಲಿಯೇ ಇರುವ ಹೈಟೆಕ್ ದಳ್ಳಾಳಿಗಳನ್ನು.


ನನಗೇ ಇದುವರಿಗೂ ಅರ್ಥವಾಗದೇ ಇರುವ ಮರ್ಮವೆಂದರೇ ನಾವುಗಳು ಎಂದಾದರೂ ಅಪರೂಪಕ್ಕೆ ಅಡಿಗೆ ಮಾಡಲು ನಿಂತಾಗ ಈ ಈರುಳ್ಳಿಯನ್ನು ಕೊಯ್ಯುವಾಗ ಬರುವ ಕಣ್ಣೀರು.. ನಿತ್ಯ ತಮ್ಮ ಕಾಯಕವನ್ನು ಮಾಡುವ ನಮ್ಮ ಅಮ್ಮಂದಿರುಗಳಲ್ಲಿ ಯಾಕೇ ಬರುವುದಿಲ್ಲ? ನನಗೆ ಅನಿಸುತ್ತದೆ... ಅದು ಅವರ ಜೊತೆಯಲ್ಲಿ ಅಷ್ಟರ ಮಟ್ಟಿಗೆ ಹೊಂದಿಕೊಂಡಿರಬಹುದು ಅಲ್ಲವಾ..
ಹೋಟೆಲ್ ಗಳಲ್ಲಿ ಈರುಳ್ಳಿಯನ್ನು ಕತ್ತರಿಸುವ ಹುಡುಗರ ಶೈಲಿಯನ್ನು ನೋಡುವುದೇ ಒಂದು ಚಂದ. ಎಷ್ಟೊಂದು ವೇಗವಾಗಿ ಒಂದೇ ಸೈಜಿನಲ್ಲಿ ಕೆಲವೇ ಸಮಯದಲ್ಲಿ ರಾಶಿಯ ಗೂಡನ್ನೇ ನಿರ್ಮಿಸಿ ಬಿಟ್ಟಿರುತ್ತಾರೆ. ಅದಕ್ಕೆ ಇರಬೇಕು ಅನುಭವ ಎಂಬುದು ಯಾರಪ್ಪನ ಸ್ವತ್ತಲ್ಲಾ.


ನಮ್ಮ ಭಾರತದಲ್ಲಿ ವರ್ಷದಲ್ಲಿ ಸರಾಸರಿ ೪೦ ಲಕ್ಷ ಟನ್ ಈರುಳ್ಳಿಯನ್ನು ತಿನ್ನುವರು ಎಂದರೇ ಯೋಚಿಸಿ ಅದರ ಪ್ರಾಮುಖ್ಯತೆಯನ್ನು. ದೆಹಲಿ ಒಂದರಲ್ಲಿಯೇ ಮೂರುಸಾವಿರ ಟನ್ ನಿತ್ಯ ಕೊಚ್ಚಿ ಹಾಕುತ್ತಾರೆ ಎಂದರೇ ಭಾರತದ ಬೇರೆ ಬೇರೆ ಭಾಗಗಳಲ್ಲಿ ಕೇಳುವುದೇ ಬೇಡವಲ್ಲ.


ಪ್ರಪಂಚದಲ್ಲಿಯೇ ಹೆಚ್ಚು ಈರುಳ್ಳಿಯನ್ನು ಉತ್ಪದಿಸುವ ದೇಶವೆಂದರೇ ಚೀನಾ ಅನಂತರದ ಸ್ಥಾನ ಭಾರತಕ್ಕೇ.ಭಾರತದ ಶೇಕಡ ೩೦ ರಷ್ಟು ಈರುಳ್ಳಿ ಉತ್ವದನೆ ಮಹಾರಾಷ್ಟ್ರ ಒಂದರಲ್ಲಿಯೇ ಆಗುತ್ತಿದೆ. ಭಾರತದಲ್ಲಿ ಹೆಚ್ಚಾಗಿ ಈರುಳ್ಳಿಯನ್ನು ಬೆಳೆಯುವ ಮಹಾರಾಷ್ಟ್ರದಲ್ಲಿನ ಸ್ಥಳಗಳೆಂದರೇ ಪುಣೆ, ಅಹಮದನಗರ, ಸತರಾ, ಸೊಲ್ಲಾಪುರ ಇತ್ಯಾದಿ .


ಈ ತರಕಾರಿ ಬಹು ದಿನಗಳವರೆಗೆ ಇಟ್ಟುಕೊಳ್ಳುವುದು ಬಹು ಕಷ್ಟ. ಇಟ್ಟಲ್ಲಿಯೇ ಕೊಳೆತು ಹೋಗುವುದು ಇದರ ಸಾಮಾನ್ಯ ಗುಣ. ಗುಂಪಿನಲ್ಲಿ ಒಂದು ಕೊಳೆತರು ಅದು ತನ್ನ ಸ್ನೇಹಿತರುಗಳನ್ನು ತನ್ನ ದಾರಿಯನ್ನೇ ಹಿಡಿಯುವಂತೆ ಪ್ರೇರಪಿಸುವುದು. ಇದೇ ಇದರ ಬೆಲೆಯ ಏರಿಕೆ ಇಳಿಕೆಗೆ ಕಾರಣ. ಸುಗ್ಗಿಯ ಕಾಲದಲ್ಲಿ ಇವುಗಳ ಬೆಲೆ ಕೇವಲ ಐವತ್ತು ಪೈಸೆಗೆ ಇಳಿದಿರುವುದುಂಟು ಎಂದರೇ ಯೋಚಿಸಿ.. ಇಂದಿನ ಈ ಬಂಗಾರದ ಬೆಲೆಯ ಕಾರಣ. ಅದರೂ ನಮ್ಮ ಸರ್ಕಾರಗಳನ್ನು ನಡುಗಿಸುವ ಮಟ್ಟಿಗೆ ಇದು ತನ್ನ ಜಾದೂವನ್ನು ಮಾಡಿದೇ ಎಂದರೆ ಅತಿಶಯೋಕ್ತಿಯಲ್ಲಾ.


ವೈದಕೀಯವಾಗಿ ಪ್ರಮಾಣಿತವಾಗಿರುವ ಈ ಮುಖ್ಯ ತರಕಾರಿ ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಅದನ್ನು ಹಸಿಯಾಗಿ, ಬೆಯಸಿ ಹೇಗಾದರೂ ಸೇವಿಸಬಹುದು. ಹಸಿಯಾಗಿ ತಿಂದಾಗ ಬಾಯಲ್ಲಿ ಅದರ ವಾಸನೆಯು ಅಪಾರ.. ಅದರೇ ತಿನ್ನಲೇ ಬೇಕಲ್ಲ. ಏನೋ ಗೊತ್ತಿಲ್ಲ. ಈರುಳ್ಳಿ ಒಂದು ಇದ್ದರೇ ಎನಾದರೂ ಅಡಿಗೆಯನ್ನು ಕ್ಷಣ ಮಾತ್ರದಲ್ಲಿ ಮಾಡಬಹುದು. ಅದು ಇಲ್ಲದ ಅಡಿಗೆಯೇ ಇಲ್ಲ ಎಂಬುದು ನನ್ನ ಭಾವನೇ.. ನೀವು ಏನೂ ಹೇಳುತ್ತೀರಾ?

ಇತಿಃ ಈರುಳ್ಳಿ ಪುರಾಣ ಸಮಾಪ್ತಿ!
-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ