ಗುರುವಾರ, ಡಿಸೆಂಬರ್ 9, 2010

ಹಳ್ಳಿ ಹಳ್ಳಿಯೆಂದು ಮೂಗು ಮುರಿಯಬೇಡಮ್ಮ



ಎಷ್ಟೊಂದು ರೂಟಿನ್ ಜೀವನವಾಗಿದೆ ನಮ್ಮ ಬದುಕು. ಯಂತ್ರಕ್ಕೆ ಕೀಲಿ ಕೊಟ್ಟ ಬೊಂಬೆಯಂತೆ ಟೈಮ್ ಟೂ ಟೈಮ್ ನಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾ, ನಮ್ಮ ಸುತ್ತಲಿನವರ ಗೊಡವೆಯೇ ಬೇಡವೋ ಬೇಡಾ ಎಂಬಂತೆ ತಾನಯಿತು ತನ್ನ ಪಾಡಾಯಿತು ಎಂಬಂತೆ ದಿನದ ಇಪ್ಪತ್ತುನಾಲ್ಕು ಗಂಟೆಗಳನ್ನು ಹೀಗೆಯೇ ಇಡೀ ವರ್ಷದ ಮುನ್ನುರೈವತ್ತು ದಿನಗಳನ್ನು ಕಳೆದು ಬಿಟ್ಟಿರುತ್ತೇವೆ ಯಾಕೆ?


ಜೀವನವನ್ನು ದೂಡಬೇಕಲ್ಲಾ ಎಂಬಂತೆ ಮನದ ತುಂಬ ವಿಪರೀತವಾದ ವಿವಿಧ ಆಸೆ, ಆಕಾಂಕ್ಷೆಗಳನ್ನು ಇಟ್ಟುಕೊಂಡು ಮತ್ತು ಅವುಗಳನ್ನು ತಮ್ಮ ಅಡಿಯಾಳಾಗಿಸಬೇಕು ಎಂಬ ದಾವಂತದಲ್ಲಿ ಕುದುರೆಯ ಕಣ್ಣಿಗೆ ಕಟ್ಟಿದ ಕಪಾಟದಂತೆ ಅತ್ತ ಇತ್ತ ನೋಡದಂತೆ, ಸ್ಪಂದಿಸಿದಂತೆ, ಮನೆಯಿಂದ ಹೊರಗಡೆ, ತಾನು ಹೋಗುವ ಜಾಗ, ಕೆಲಸ ಮಾಡುವ ಸ್ಥಳ, ನಡೆದಾಡುವ ರಸ್ತೆ. ಅದೇ ಅಪರಿಚಿತ ಮುಖಗಳ ಮುಂದೆ ಅದೇ ರೀಪಿಟಾದ ಸಂಭಾಷಣೆ, ಕುಶಲೊಪರಿಯನ್ನು ಯಾವುದೇ ಹೆಗ್ಗು ಮತ್ತು ಯಾವುದೇ ಭಾವನೆಯಿಲ್ಲದೆ ನಟಿಸುತ್ತಾ, ಮಾಡುತ್ತಾ ನಮ್ಮ ದಿನಗಳನ್ನು ಸಂತೋಷವಾಗಿದ್ದೇವೆ ಎಂಬಂತೆ ಕಳೆದು ಬಿಟ್ಟಿರುತ್ತೇವೆ.


ಇದೇ ನಗರ ಜೀವನಕ್ಕೆ ಮತ್ತು ನಾವು ಹುಟ್ಟಿ ಬಂದ ಹಳ್ಳಿಗಾಡಿನ ಬದುಕಿಗೆ ಇರುವ ವ್ಯತ್ಯಾಸ. ಹಳ್ಳಿಯಲ್ಲಿ ದಿನದ ಪ್ರಾರಂಭ ಬಯಲಿನಲ್ಲಿ, ಎದುರಿನ ಮನೆಯವರ ಗದ್ದಲ, ಸದ್ದು, ಅವರು ಇವರುಗಳ ಜಗಳ, ಪ್ರೀತಿ ಮಾತು, ಕಕ್ಕುಲಾತಿ, ಪ್ರಾಣಿ-ಪಕ್ಷಿಗಳ ಸಂಚಲನೆಯೆಂಬ ಪ್ರಾರ್ಥನೆಯಿಂದ ಆರಂಭವಾಗಿ ತಾನು ಸಹ ಅದರಲ್ಲಿ ಭಾಗವಹಿಸಬೇಕು ಎಂಬಂತೆ ಮಾಡುತ್ತಾವೆ. ಮತ್ತು ತನ್ನ ಮನದಲ್ಲಿ ತನ್ನ ಬಗ್ಗೆಯೆಲ್ಲದೇ ಊರಿನಲ್ಲಿರುವ ಎಲ್ಲರ ಬದುಕು, ವಿಚಾರ, ಕುಟುಂಬದ ಬಗ್ಗೆ ಚಿಂತಿಸಿ ತನ್ನ ಸಹಾಯ - ಸಹಕಾರವನ್ನು ನೀಡುತ್ತಿರುತ್ತೇವೆ.

ಮುಕ್ಕಾಲುಪಾಲು ಬೇರೆಯವರ ವಿಷಯಗಳನ್ನು ಮಾತನ್ನಾಡುತ್ತಿರುತ್ತಾ ಅದನ್ನು ಹೀಗೆ ಮಾಡಿದ್ದರೆ ಅವನು ಹೀಗಾಗುತ್ತಿದ್ದಾ ಎಂಬಂತೆ ಯಾವುದೇ ಕೀಳರಿಮೆಯಿಲ್ಲದ ರೀತಿಯಲ್ಲಿ ನಮ್ಮ ಸಲಹೆಗಳನ್ನು ಮನೆ ಮಂದಿಯೆಲ್ಲಾ ಕುಳಿತು ಚರ್ಚಿಸುತ್ತಿರುತ್ತೇವೆ ಅದೇ ಅವರ ಬದುಕು!


ಈ ರೀತಿಯ ವಿಚಾರ ಸ್ಪಂದನ ನಗರದ ಜನತೆಯ ಮನಸ್ಸಿನಲ್ಲಿ ಬರುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ತಾನಾಯಿತು ತನ್ನ ಸುಖವಾಯಿತು ಎಂಬಂತೆ ಯಾವುದೊ ಒಂದು ಗುರಿ ಹುಡುಕುವ ನಾವಿಗನಂತೆ ಅತ್ತಿತ್ತಾ ನೋಡದಂತೆ ಜೀವನವನ್ನು ಪ್ರಗತಿಯ ಪಥದಲ್ಲಿ ಸಾಗಿಸುತ್ತಾ ಸಾವಿರಾರು ಆತ್ಮೀಯ ಭಾವಸ್ಪಂದನಗಳ ಲೋಕವನ್ನು ಕಳೆದು ಕೊಳ್ಳುತ್ತಿದ್ದಾನೆ ಅಂತ ಅನಿಸುವುದಿಲ್ಲವಾ?


ನಗರದ ಮಂದಿ ತಮ್ಮ ಮನಸ್ಸನ್ನು ಸಂತೋಷಪಡಿಸಿಕೊಳ್ಳಬೇಕು ಎಂದರೇ, ಅದೇ ಪ್ಲ್ಯಾನ್ ಪ್ರಕಾರ, ಟೈಮ್ ಟೇಬಲ್ ನಲ್ಲಿ ಇಂಥಲ್ಲಿಗೆ ಹೋಗಿ ಇಷ್ಟು ಹೊತ್ತು ಇದ್ದು ಇಷ್ಟು ಹೊತ್ತಿಗೆ ವಾಪಾಸ್ಸಗಬೇಕು. ಇಷ್ಟು ಸಮಯ ನಲಿದಾಡಬೇಕು. ಇಷ್ಟು ಸಮಯ ನಗಬೇಕು, ಇದೇ ಸಮಯಕ್ಕೆ ತಿನ್ನಬೇಕು, ಇದೇ ಸಮಯಕ್ಕೆ ಮಲಗಬೇಕು... ಎಂದು ತಮಗೆ ತಾವೇ ಗಡಿಯ ಮೀತಿಯನ್ನು ನಿರ್ಮಿಸಿಕೊಂಡು ಅದರಲ್ಲಿಯೇ ಖುಷಿಪಡಬೇಕಾದ ಪಾಡಾಗಿದೆ. ಹೀಗೆ ನಮ್ಮ ಇಡೀ ಜೀವನ ಪ್ರೀ ಪ್ಲ್ಯಾನ್ಡ್ ಚಟುವಟಿಕೆಯಾಗಿದೆ. ಅಷ್ಟೊಂದು ಲೆಕ್ಕಾಚಾರವಾದ ರೀತಿಯಲ್ಲಿ ಎಲ್ಲಾ ಕರಾರುವಕ್ಕಾಗಿ ಜೀವಿಸುವುದೇ ಸಕ್ಸ್ ಸ್ ಫುಲ್ ವ್ಯಕ್ತಿತ್ವವಾಗಿದೆ.


ತಾನೇ ಅಳವಡಿಸಿಕೊಂಡ ತನ್ನ ಆಸೆಗಳನ್ನು ತನ್ನ ಸ್ಥಾನಗಳನ್ನು ಗಳಿಸುವುದು ಮತ್ತು ತಾನು ಅಂದುಕೊಂಡದ್ದನ್ನು ಸಾಧಿಸುವುದೇ ಸಕ್ಸ್ ಸಾ?


ಹಾಗೆಯೇ ನಮ್ಮ ಹಳ್ಳಿಗಾಡಿನ ಜನವನ್ನು ನಾವುಗಳು ಅನಾಗರಿಕರು. ಎಷ್ಟೊಂದು ಅವರು ಇನ್ನೂ ಮುಂದುವರಿಯಬೇಕು ಎಂಬಂತೆ ಅವರನ್ನು ಪ್ರತ್ಯೇಕವಾದ ಸ್ಥಾನದಲ್ಲಿರಿಸಿ ಯಾವುದೊ ಲೋಕದಿಂದ ಬಂದಿರುವವರು ಎಂಬಂತೆ ನಗರದ ಮಂದಿ ನಿಸರ್ಗ ಜೀವಿಗಳನ್ನು ನೋಡುತ್ತಿದ್ದಾರೆ. ಆದರೇ ತಾವುಗಳು ಯಾವ ಮಟ್ಟದ ಜೀವನ ಪ್ರಗತಿಯಲ್ಲಿ ಇದ್ದೇವೆ ಎಂಬುದನ್ನು ಮೊದಲು ಅರಿಯಬೇಕು.


ನಮ್ಮಲ್ಲಿ ಎಲ್ಲಾ ಇದೆ. ಏನೂ ಬೇಕಾದರೂ ಯಾವ ಸಮಯದಲ್ಲಿ ಎಲ್ಲಾರಿಗೂ ಯಾವುದೇ ವಯಸ್ಸಿನ ಅಂತರವಿಲ್ಲದೇ ನಮ್ಮ ನಮ್ಮ ಮನೆಯವರಿಂದ ನಮಗೆ ದೂರೆಯುತ್ತದೆ. ಈ ರೀತಿಯ ಅನುಕೂಲವೇ ನಮ್ಮ ಮನಸ್ಸಿಗೆ ಏಕತನತೆಯನ್ನು ಕೊಟ್ಟಿದೆ ಎಂದು ನಮಗೆ ಹಲವು ಸಮಯದಲ್ಲಿ ಅನಿಸದಿರದು. ಕಷ್ಟಗಳು ಮತ್ತು ತನ್ನ ಆಸೆಗಳನ್ನು ಹಿಡೇರಿಸಿಕೊಳ್ಳಲು ಅವಕಾಶಗಳಿಲ್ಲದೇ ಮರುಗಿ ಹಲವು ದಿನಗಳ ನಂತರ ಆ ಸುವರ್ಣ ಅವಕಾಶ ಒದಗಿ ಬಂದಾಗ ಸಿಗುವ ಆನಂದವನ್ನು ಅಕ್ಷರಗಳಲ್ಲಿ ಹಿಡಿದಿಡಲು ನಮ್ಮಿಂದ ಸಾಧ್ಯವಿಲ್ಲ.


ಈ ರೀತಿಯ ಪುಳಕಗೊಳ್ಳುವ ಕ್ಷಣಗಳು ಹೇರಳವಾಗಿ ಹಳ್ಳಿಗಾಡಿನ ಬಡ ಜನಗಳಿಗೆ ಸಾಕಷ್ಟು ಇರುವುದರಿಂದ ಅವರು ನಮ್ಮ ಜೀವನದ ಶೈಲಿಗಿಂತ ಎಷ್ಟೋ ಪಾಲು ಶ್ರೀಮಂತರಾಗಿದ್ದಾರೆ. ಈ ರೀತಿಯ ಆ ಮೂಹರ್ತಮಯವಾದ ರೋಮಂಚನದ ಗಳಿಗೆಯ ಅನುಭವ ನಮ್ಮ ಈ ಉಳ್ಳವರ ಹೈಟೆಕ್ ಲೈಫ್ ನ ಮಂದಿಗೆ ಎಂದಿಗೂ ಸಿಗಲಾರದು.


ಈ ರೀತಿಯ ಅನುಭವವೇ ಮನುಷ್ಯನ ಮನೋಲ್ಲಾಸ ಮತ್ತು ಹೊಸತನದ ತುಡಿತಕ್ಕೆ ಅವಕಾಶವಾಗುವುದೇನೊ. ಅದಕ್ಕೆ ಇರಬೇಕು ಗಟ್ಟಿ ಮನೊಸ್ಥೈರ್ಯ, ಪ್ರೀತಿಯ ಹೃದಯ, ಮರುಗುವ ಕರುಣೆಯ ಮನಸ್ಸನ್ನು ಹಳ್ಳಿಯ ಜನ ನಗರದ ಜನಗಳಿಗಿಂತ ಹೆಚ್ಚಾಗಿ ಹೊಂದಿದ್ದಾರೆ.


ಅದಕ್ಕೆ ಇರಬೇಕು ನಮಗೆ ಇಂದಿಗೂ ಟಿ. ಎನ್. ಸೀತರಾಮರವರ ದಾರವಾಹಿಯಲ್ಲಿ ತೋರಿಸುವ ಆ ಒಂದು ಬಡ ಮದ್ಯಮ ಕುಟುಂಬದ ಕಷ್ಟದ ಸರಮಾಲೆಯ ಚಿತ್ರಣ, ಹಳ್ಳಿಯ ಬದುಕು ಅತ್ಯಂತ ಹತ್ತಿರವಾಗುವುದು. ಇದನ್ನು ನೋಡಿದರೇ ಎಲ್ಲಾ ಇದ್ದು ನಾವುಗಳು ಎಲ್ಲವನ್ನು ಪ್ರತಿ ಕ್ಷಣದಲ್ಲಿ ಅಪಾರವಾಗಿ ಮಿಸ್ ಮಾಡಿಕೊಳ್ಳೂತ್ತಿದ್ದೇವೆಂದು ಅನಿಸುವುದಿಲ್ಲವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ