ಮಂಗಳವಾರ, ಜುಲೈ 26, 2011

ದಟ್ಟ ಕಾನನಗಳಲ್ಲಿ ಹೆಜ್ಜೆ.....

"ದೇಶ ಸುತ್ತ ಬೇಕು ಕೋಶ ಓದಬೇಕು"

ಹೌದು! ನಾವು ನಮ್ಮದೇಯಾದ ವಿವಿಧ ಬಿಡುವಿಲ್ಲದ, ಬಿಡುವಿನ ಸಮಯಗಳನ್ನು ಹತ್ತು ಹಲವು ರೀತಿಗಳಲ್ಲಿ ನಮ್ಮ ಸುತ್ತ ಮುತ್ತಲಿನಲ್ಲಿ ಕಳೆದು ಬಿಡುತ್ತೇವೆ.

ನಮ್ಮ ಹಿರಿಯರು, ನಮ್ಮ ತಂದೆ ತಾಯಂದಿರುಗಳು ಕೆಲವೊಮ್ಮೆ ಅವರ ಸಂಬಂಧಿಕರ ಊರು ಅಥವಾ ಅವರ ಜೆಲ್ಲೆಯ ಹತ್ತಿರದ ಪ್ರದೇಶಗಳನ್ನು ಬಿಟ್ಟು ಬೇರೆ ಯಾವುದೇ ಸ್ಥಳಗಳನ್ನು ಅವರ ಜೀವಮಾನದಲ್ಲಿಯೇ ನೋಡದೇ ತಮ್ಮ ಆಯಸ್ಸುಗಳನ್ನು ಪೊರೈಸಿರುತ್ತಾರೆ.

ಆ ರೀತಿಯ ಪರ್ಯಾಟನೆಯ ಪ್ರವೃತ್ತಿಯನ್ನು ಕನಸು ಮನಸಿನಲ್ಲೂ ಯೋಚಿಸಿರುವುದಿಲ್ಲ. ಕೇವಲ ಯಾವುದೇ ಕೆಲಸ ಕಾರ್ಯ ನಿಮಿತ್ತಾ ವಿವಿಧ ಹತ್ತಿರದ ಊರುಗಳನ್ನು, ಸ್ಥಳಗಳನ್ನು ಮಾತ್ರ ತಮ್ಮ ಜೀವ ಮಾನದಲ್ಲಿ ಕಂಡಿರುವಂತಹ ನೂರಾರು ಮಂದಿಗಳನ್ನು ನಮ್ಮ ನಿಮ್ಮ ನಡುವೆ ಕಾಣಬಹುದು.

ಅದಕ್ಕೆ ಇರಬೇಕು ಮೇಲೆ ಉಲ್ಲೇಖಿಸಿರುವ ಒಗಟು ಹುಟ್ಟಿಕೊಂಡಿರುವುದು ಅಲ್ಲವಾ?

ಆದರೂ ಎಷ್ಟು ಮಂದಿ ತಮ್ಮ ಜೀವಿತಾವದಿಯಲ್ಲಿ ಎಲ್ಲಾ ಪುಸ್ತಕಗಳನ್ನು ಓದುತ್ತಾರೆ ಮತ್ತು ಓದಲು ಅವರಿಗೆ ಸಮಯಾವಕಾಶ ಎಲ್ಲಿ ಸಿಕ್ಕಿರುತ್ತದೆ? (ವಿದ್ಯಾವಂತರಾಗಿದ್ದರೆ)

ನಮಗೆಲ್ಲಾ "ಪ್ರವಾಸ" ಎಂಬ ಪದ ಕಿವಿಗೆ ಬಿದ್ದಿದ್ದು ಅಂದರೇ ನಮ್ಮ ವಿದ್ಯಾರ್ಥಿ ದೆಸೆಯಲ್ಲಿಯೇ. ಶಾಲೆಗಳಲ್ಲಿ ಶಿಕ್ಷಕರು ಪ್ರವಾಸವನ್ನು ಹಮ್ಮಿಕೊಂಡಾಗ ನಮ್ಮ ತಂದೆ ತಾಯಿಯರಿಂದ ಒತ್ತಾಯಾಪೂರ್ವಕವಾಗಿ ಅನುಮತಿಯನ್ನು ಕಾಡಿಬೇಡಿ ಗಿಟ್ಟಿಸಿಕೊಂಡು ಹೋಗಲು ತಯಾರಿ ನಡೆಸಿರುತ್ತೇವೆ. ಅಲ್ಲಿಯು ಸಹ ನಮ್ಮ ಕುಟುಂಬದವರುಗಳು ಒಲ್ಲದ ಮನಸ್ಸಿನಿಂದ ಓ.ಕೆ ಅಂದಿರುತ್ತಾರೆ. ಯಾವುದೇ ಪೋಷಕರು ಮನಸ್ಸಪೂರ್ವಕವಾಗಿ ನಮ್ಮನ್ನು ಪ್ರವಾಸಕ್ಕೆ ಹೋಗಲು ಬಿಟ್ಟಿರುವುದಿಲ್ಲ. ಅವರುಗಳಿಗೆ ಏನೋ ಭಯ!! ಅಥವಾ ಅವರುಗಳಿಗೆ ಅವರ ಪೋಷಕರುಗಳು ಹೀಗೆ ಮಾಡಿರುವುದರ ನೆನಪೇನೋ?

ಹೀಗಾಗಿ ನಮ್ಮ ಸಂಸ್ಕೃತಿಯಲ್ಲಿ ಈ ಉನ್ನತವಾದ ವಿಷಯ ಕೆಲಸಕ್ಕೆ ಬಾರದಾಗಿರುತ್ತದೆ. ಇದು ಅಷ್ಟೇನೂ ಪ್ರಮುಖ್ಯವಾದ ವಿಷಯ ಮತ್ತು ಅಭ್ಯಾಸ ಅನಿಸಿರುವುದಿಲ್ಲ. ಇದಕ್ಕೆ ಹತ್ತು ಹಲವಾರು ಕಾರಣಗಳು ನಮ್ಮ ನಮ್ಮಲ್ಲಿಯೇ ಇವೆ.

ಆದರೂ ಸಹ ಹಳ್ಳಿಯ ಜೀವನಕ್ಕೆ ಹೋಲಿಸಿದರೇ ನಗರದ ವಿವಿಧ ಸಂಘ ಸಂಸ್ಥೆಗಳು, ಶಾಲೆಗಳು, ಕಾಲೇಜುಗಳು ಮತ್ತು ಕಛೇರಿಯ ಉದ್ಯೋಗಿಗಳು ಅದರ ಪ್ರಾಮುಖ್ಯತೆಯನ್ನು ಅರಿತು ತಮ್ಮ ದೈನಂದಿನ ಮಾಮೊಲಿ ಜೀವನದಿಂದ ಕೆಲವು ಸಮಯ ವಾರಾಂತ್ಯಾದಲ್ಲಿ ತುಂಬ ವೈವಿಧ್ಯಮಯವಾಗಿ ಕಳೆಯಲು ಒಂದು -ಎರಡು ದಿನ ಅಥವಾ ಒಂದು ವಾರದ ದೀರ್ಘ ಪ್ರವಾಸಗಳನ್ನು ಹಮ್ಮಿಕೊಳ್ಳುತ್ತಾರೆ.

ನಾವುಗಳು ನಮ್ಮ ಪ್ರಪಂಚದ ಪೂರ್ಣ ಬಾಗದ ಕೇವಲ ಒಂದು ಚುಕ್ಕೆಯಷ್ಟನ್ನು ಮಾತ್ರ ತಮ್ಮ ಜೀವನದಲ್ಲಿ ಅರಿಯುವ ಮೊಲಕ ತಮ್ಮ ಮನೋಸಂತೋಷವನ್ನು ಮತ್ತು ಮನೋವಿಕಾಸವನ್ನು ಮಾಡಿಕೊಳ್ಳಲು ಸಾಧ್ಯ.

ಈ ಪ್ರವಾಸದಲ್ಲಿ ನಾವು ವಿವಿಧ ಜನ, ಪರಿಸರ, ಪದ್ಧತಿ, ಜನರು, ಉಡುಗೆ, ತೊಡುಗೆ, ಆಚಾರ, ವಿಚಾರ, ನಿಸರ್ಗ ವೈವಿಧ್ಯತೆ, ಜೀವ ಸಂಕುಲ.. ಹೀಗೆ ನೂರಾರು ಗೊತ್ತಿರದ ಹೊಸ ವಿಷಯಗಳನ್ನು ಅರಿಯುವ ಮೂಲಕ ನಮ್ಮಲ್ಲಿನ "ಕೂಪ ಮೊಂಡುಕತನವನ್ನು" ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು. ಹಾಗೆಯೇ ನಮ್ಮನ್ನೇ ನಾವು ಈ ಪ್ರಪಂಚದಲ್ಲಿ ಗುರುತಿಸಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ.

ಹಾಗೆಯೇ ವಿವಿಧ ರೀತಿಯಲ್ಲಿ ಪ್ರವಾಸದಲ್ಲಿ ಸ್ವಲ್ಪ ಸಾಹಾಸಮಯವಾಗಿ ನಿಸರ್ಗದ ವೈವಿಧ್ಯತೆಯೊಂದಿಗೆ ಕೆಲವು ಗಳಿಗೆ ಕಳೆಯಬೇಕು ಅಂದರೇ (ಟ್ರೆಕ್ಕಿಂಗ್) ಚಾರಣಾ ಅತ್ಯುತ್ತಮವಾದದ್ದು.

ಈ ಚಾರಣಕ್ಕೆ ಹೇಳಿ ಮಾಡಿಸಿದ ಸುಂದರ ಭವ್ಯವಾದ ನಿಸರ್ಗ ತಾಣಗಳು ನಮ್ಮ ಕರ್ನಾಟಕ ರಾಜ್ಯದಲ್ಲಿರುವುದು ನಮ್ಮೆಲ್ಲಾರ ಅದೃಷ್ಟವೇ ಸರಿ!

ಈ ಚಾರಣಕ್ಕೆ ಬೇಕಾಗಿರುವುದು ಸೂಕ್ಷ್ಮ ಪ್ರಕೃತಿ ಸ್ನೇಹಿ ಮನಸ್ಸು. ಯಾವುದೇ ಸಂದರ್ಭವನ್ನು ಖುಷಿಯಾಗಿ ಅನುಭವಿಸುವ ಭಾವನೆಯನ್ನು ಹೊಂದಿರುವ ಕೆಲವೇ ಮಂದಿಯ ಒಂದು ಟೀಂ ಇದ್ದರೆ ಅದು ತುಂಬ ಮನರಂಜನೆಯಾಗಿ ನಮ್ಮಲ್ಲಿಯೇ ನಾವುಗಳು ಈ ದಟ್ಟ ಅರಣ್ಯ, ಉನ್ನತ ಶಿಖರ, ಹಕ್ಕಿಗಳ ಕಲರವ, ಜುಳುಜುಳು ಹರಿಯುವ ಜಲಧಾರೆಗಳು, ಕಲ್ಲು ಮಣ್ಣುಗಳ ದಾರಿಯಲ್ಲಿ ಕಳೆದು ಸಾಗುತ್ತಾ ಹೋಗುವ ರೋಮಾಂಚನವನ್ನು ಅನುಭವಿಸಬಹುದು.



ಅಲ್ಲಿ ನಾವು ಕಾಲಿಟ್ಟ ತಕ್ಷಣ ನಮಗೆ ತಿಳಿಯದ ರೀತಿಯಲ್ಲಿ ಪ್ರಕೃತಿಯ ಮಹಾನ್ ಮುಖ್ಯ ವಿಸ್ಮಯಗಳ ನಡುವೆ ಕೇವಲ ಪ್ರೇಕ್ಷಕರಾಗಿ ಪ್ರತಿ ನಿಮಿಷಗಳನ್ನು ಅದರಲ್ಲಿ ಕರಗಿ, ಈ ನಮ್ಮ ಜಂಜಾಡದ ವ್ಯವಸ್ಥೆಯ ನೆನಪು ಸಹ ಬಾರದ ರೀತಿಯಲ್ಲಿ ಮೈಮರೆಯಬಹುದು. ನಾವುಗಳು ಪ್ರಕೃತಿಯ ಆ ವಿಸ್ಮಯವನ್ನು ನಮ್ಮ ಮನದಲ್ಲಿಯೇ ಗುಣಕಾರ ಭಾಗಕಾರ ಮಾಡಿಕೊಳ್ಳಬಹುದು ಮತ್ತು ಒಂದು ಥ್ಯಾಂಕ್ಸ್ ನ್ನು ಆ ಪ್ರಕೃತಿ ಮಾತೆಗೆ ಹೇಳದೆ ಇರಲಾರಿರಿ.

ಹೌದು! ಅದಕ್ಕೆ ಇರಬೇಕು ನಮ್ಮ ಪುರಾಣ, ಪುಣ್ಯ ಕಥೆಗಳ ಎಲ್ಲಾ ಮಹಾನ್ ಸಾಧಕರ ತಾಣಗಳು ಬಹು ದೂರದಲ್ಲಿವೆ. ನಾಗರೀಕತೆಯ ಯಾವ ಸೋಂಕು ಇಲ್ಲದ ಪೂರ್ಣ ಪೂರ್ಣ ಪ್ರಕೃತಿ ಮಾತೆಯ ಕೊಡುಗೆಯಾದ ದಟ್ಟ ಅರಣ್ಯ, ಉನ್ನತ ಮಹಾನ್ ಶಿಖರದಲ್ಲಿವೆ. ಎಲ್ಲಾ ಕೃತಕವೆನಿಸುವ ವ್ಯವಸ್ಥೆಯಿಂದ ಕಳಚಿಕೊಂಡು ಅದರದೇಯಾದ ಶ್ರೀಮಂತವಾದ ವರ್ಣನೆಗೆ ನಿಲುಕಲಾರದ ಸನ್ನಿವೇಶದ ಸಜ್ಜನಿಕೆಯಲ್ಲಿವೆ.

ಈ ರೀತಿಯ ಪರಿಸರದ ವರ್ಣನೆಯನ್ನು ನಾವು ನಮ್ಮ ಪ್ರಸಿದ್ಧ ಲೇಖಕರ ಕಾದಂಬರಿ, ಕತೆ, ಕವಿತೆಗಳಲ್ಲಿ ಕೇಳಿದ್ದೇವೆ. ಹಾಗೆಯೇ ಇತ್ತೀಚಿನ ಹಲವು ಸಿನಿಮಾಗಳಲ್ಲಿ ನೋಡಿದ್ದೇವೆ.

ಆದರೇ, ಆ ರೀತಿಯ ವರ್ಣನೆಯನ್ನು ನಾವುಗಳು ಯಾವ ರೀತಿಯಲ್ಲಿ ಕಲ್ಪಿಸಿಕೊಂಡಿರುತ್ತೇವೆ ಎಂಬುದು ಈ ರೀತಿಯ ದಟ್ಟ ಕಾನನಗಳಲ್ಲಿ ಹೆಜ್ಜೆ ಇಟ್ಟಾಗಲೇ ಅದರ ಪರಿಣಾಮದ ಮಹಿಮೆ ನಮಗೆ ಗೊತ್ತಾಗುವುದು.

ನನಗೆ ಅನಿಸುತ್ತದೆ ಕುವೆಂಪು,ಕಾರಂತ ಮತ್ತು ತೇಜಸ್ವಿಯವರು ಯಾಕೆ ಹಾಗೇ ತಮ್ಮ ಕೃತಿಗಳಲ್ಲಿ ಪ್ರಕೃತಿಯ ಮಹಾನ್ ವರ್ಣನೆಯನ್ನು ಹಾಗೆ ಮಾಡಿರುವವರು ಎಂದರೇ ಅವರು ಜೀವಿಸುತ್ತಿದ್ದ ಪರಿಸರವೇ ಅವರಿಗೆ ಪ್ರೇರಕವಾಗಿತ್ತು. ಅದೇ ಅವರ ಮೊಲಕ ಹಾಗೆ ಬರೆಯಿಸಿತು ಅನಿಸುತ್ತದೆ.

ಒಂದೇ ಭೂಮಂಡಲವಾಗಿ ಪ್ರತಿಯೊಂದರಲ್ಲೂ ವಿಭಿನ್ನವಾಗಿರುವ ಈ ದಿವ್ಯ ಪರಿಸರದ ಮಾಂತ್ರಿಕತೆಯ ಜಾದು ನಮ್ಮನ್ನು ಅಲ್ಪರನ್ನಾಗಿ ಮಾಡುತ್ತದೆ. ನಾವುಗಳು ನಮ್ಮ ಮಿತಿಯನ್ನು ಅರಿಯುವಂತೆ ಮಾಡುತ್ತದೆ.

ಅಲ್ಲಿರುವ ವಿವಿಧ ರೀತಿಯ ಸಸ್ಯ ಜೀವ ಸಂಕುಲ, ಮರ, ಗಿಡ, ಬಳ್ಳಿಗಳು, ವಿವಿಧ ಜಾತಿಯ ಪಕ್ಷಿಗಳ ಕಲರವ, ವಿವಿಧ ಶಬ್ಧಗಳು. ಮುಂಜಾನೆಯೊಂದು ರೀತಿ, ಮಧ್ಯಾಹ್ನ ಒಂದು ರೀತಿಯಲ್ಲಿ ಮತ್ತು ಸಂಜೆ - ರಾತ್ರಿ ಒಂದು ರೀತಿಯಲ್ಲಿ ಪ್ರಕೃತಿಯು ನವಚೈತನ್ಯವನ್ನು ಗಳಿಗೆ ಗಳಿಗೂ ಬದಲಾಗುವ ಆ ರಂಗಿನ ರಂಗ ಮಂಟಪಕ್ಕೆ ಸೂತ್ರಧಾರ ಅವನೇ ಅವನು ಎಂಬುದು "ಚಾರಣ"ಕ್ಕೆ ಬಂದ ಪ್ರತಿಯೊಬ್ಬರೂ ಅನುಭವಿಸುವುದರಲ್ಲಿ ಸಂಶವಿಲ್ಲ.

ಅತಿ ಎತ್ತರದ ಶಿಖರವನ್ನು ಏರಿ, ಅಲ್ಲಿಂದ ಮುಂದೆ ಭವ್ಯ ಆಕಾಶವೇ ಕೊನೆ ಎಂಬುದು ಗೊತ್ತಾದಾಗ, ಅಲ್ಲಿಂದ ಎತ್ತ ನೋಡಿದರೂ ದಟ್ಟ ಹಸಿರು ಕಾಡು, ಪ್ರತಿ ಮರವೂ ತಾನು ಆ ಶಿಖರವನ್ನು ಮುಟ್ಟಬೇಕು ಎಂಬಂತೆ ನವ ಚೈತನ್ಯದಿಂದ ಮುಗಿಲು ನೋಡುತ್ತಿರುವುದನ್ನು ಗಮನಿಸಿದಾಗ, ನಾವೇ ಧನ್ಯ. ಈ ಶಿಖರಗಳಿಗೆ ಮುತ್ತಿಕ್ಕುತ್ತಿದ್ದೇವೇ ಎಂಬಂತೆ ತೇಲುತ್ತಿರುವ ಬಿಳಿ ಮೋಡಗಳನ್ನು ನೋಡುವಾಗ ನಾವುಗಳು ಧನ್ಯ ಮಾತ್ರ. ಈ ಉನ್ನತವಾದ ಪ್ರದೇಶದಲ್ಲಿ ನನ್ನ ಸಂಚಾರವಿದೆ ಎಂದು ಬೀಗುವ ತಂಗಾಳಿಯನ್ನು ನಮ್ಮ ದೇಹ ಸ್ಪರ್ಷಿಸಿದಾಗ ಮಾತೇ ಮೌನಕ್ಕೆ ಶರಣು ಶರಣು ಅನ್ನುತ್ತದೆ.



ಈ ಪ್ರದೇಶದಲ್ಲಿ ನನಗೆ ಇನ್ನೂ ಏನೂ ಕೆಲಸವಿಲ್ಲ ಎಂಬಂತೆ ಮೌನವಾದ ಆ "ನಿಶಬ್ಧ" ವನ್ನು ಕಂಡಾಗ ನಿಜವಾಗಿಯೂ ನಮಗೆಲ್ಲಾ ಮೂಕಪ್ರೇಕ್ಷಕನಾಗಿರುವುದೇ ಕಾಯಕ.

ಪ್ರಕೃತಿಯ ಈ ಎಲ್ಲಾ ಮಹಾನ್ ಪ್ರತಿನಿಧಿಗಳೇ ದಿವ್ಯ ಧ್ಯಾನದಲ್ಲಿ ಕುಳಿತಿರುವಾಗ ನಾವುಗಳು ಸಹ ಏನೊಂದು ಮಾತು ಬಾಯಿಗೆ ಬಾರದೇ ತನ್ನಿಂದ ತಾನೇ "ಧ್ಯಾನಸ್ಥ" ವಾಗುವುದು, ಈ ಪ್ರಕೃತಿಯ ಮಹಿಮೆಯನ್ನು ಸೂಚಿಸುತ್ತದೆ.

(ಈ ಮೇಲಿನ ಭಾವನೆಯನ್ನು ನನಗೆ ಉಂಟು ಮಾಡಿದ್ದು, ನಾವುಗಳು ಕೂಡಚಾದ್ರಿಯ ಅತಿ ಎತ್ತರದ ಬೆಟ್ಟವನ್ನು ಏರಿ ಸೂರ್ಯಾಸ್ತವನ್ನು ನೋಡಿದಾಗ. ನನ್ನ ಎಲ್ಲಾ ಸಂಗಡಿಗರು ಮೌನಕ್ಕೆ ಶರಣಾಗಿದ್ದು ನಿಜವಾಗಿಯೂ ಈಗಲೂ ನನಗೆ ವಿಸ್ಮಯ ಮತ್ತು ಆಶ್ಚರ್ಯವನ್ನುಂಟು ಮಾಡುತ್ತದೆ! ಅಂದಿನ ಆ ಕ್ಷಣ)

ಈ ರೀತಿಯ ಪ್ರಕೃತಿಯ ನಿತ್ಯ ದಿನಚರಿ ಯಾವುದೇ ವೇಳೆ, ಯಾವುದೇ ದಿನ ನಿಲ್ಲದೇ ನಿರಂತರವಾಗಿ ಚಾಲನೆಯಲ್ಲಿರುವುದು ನಮ್ಮ ಬದುಕಿಗೆ ಒಂದು ಪಾಠವೇ ಸರಿ!

ನಮ್ಮ ಶಿಕ್ಷಣದಲ್ಲಿ ಈ ರೀತಿಯ ವಿವಿಧ ಚಟುವಟಿಕೆಗಳನ್ನು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಿ ಪ್ರಕೃತಿಯಲ್ಲಿ ಒಡನಾಡುವಂತೆ ಮಾಡವಂತಾಗಬೇಕು. ಪ್ರಕೃತಿಯಲ್ಲಿ ಮಕ್ಕಳೂ ಬೇರೆಯುವಂತೆ ಅನುವು ಮಾಡಿ ಕೊಡಬೇಕು.



ಹಾಗೆಯೇ ಈ ರೀತಿಯ ತಾಣಗಳನ್ನು ಹೊಂದಿರುವ ನಮ್ಮ ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಜವಾಬ್ದಾರಿ ಯಾರೇಲ್ಲಾ ಈ ರೀತಿಯ ಪ್ರವಾಸ ಕೈಗೊಳ್ಳುತ್ತಾರೋ ಅವರ ಮೇಲಿದೆ. ನಾವುಗಳು ಅವುಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಲು ಯಾವುದೇ ಅಧಿಕಾರವಿಲ್ಲ. ಕೇವಲ ಅವನ್ನು ನೋಡಿ ಆನಂದಿಸಿ ಬರಬೇಕು ಅಷ್ಟೇ ವಿನಾಃ ನಮ್ಮ ನಾಗರೀಕತೆಯ ವಿವಿಧ ವ್ಯವಸ್ಥೆಯ ಕುರುವುಗಳನ್ನು ಅಲ್ಲಿ ಪ್ರತಿಷ್ಠಾಪಿಸುವುದಲ್ಲಾ. ಹಾಗೆಯೇ ಅದರ ಬಗ್ಗೆ ಅರಿವನ್ನು ಎಲ್ಲರಿಗೂ ಮಾಡಿಕೊಡಬೇಕಾಗಿರುವುದು ಇಂದಿನ ಸಂದರ್ಭದಲ್ಲಿ ಅತ್ಯವಶ್ಯ.

ಬುಧವಾರ, ಜುಲೈ 20, 2011

ಪ್ರೀಮಿಯರ್ ಶೋ::ಲೀಕಾಯುಕ್ತ ವರದಿ

ಇಂದು ಮುಂಜಾನೆಯ ಪತ್ರಿಕೆಗಳನ್ನು ನೋಡಿದಾಗ ಅಚ್ಚರಿಯಾಗದೇ ಇರುವಂತಹ ಶಾಕ್ ಸುದ್ಧಿಯನ್ನು ಕಾಣು ಭಾಗ್ಯ ಎಲ್ಲಾ ಕನ್ನಡ ನಾಡಿನ ಜನತೆಗೆ ಲಬಿಸಿತ್ತು ಎಂದರೇ ಅತಿಶಯೋಕ್ತಿಯಲ್ಲ.

ಅದು ಕಳೆದ ಮೂರು ವರ್ಷಗಳಿಂದ ದಿನ ನಿತ್ಯ ದಾರವಾಹಿಯಾಗಿ ವರದಿಯಾಗುತ್ತಲೆ ಇದ್ದಂತಹ ಸಂಚಿಕೆಗಳು. ಆದರೆ ಇಂದು ಅದರ ಪೂರ್ಣ ಮೋವಿಯ ಪ್ರೀಮಿಯರ್ ಶೋ ಯಾವುದೋ ಮಾಯದಲ್ಲಿ "ಲೀಕಾಯುಕ್ತ ವರದಿ"ಯಾಗಿ ಕಾಣಿಸಿಕೊಂಡಿತ್ತು.

ಅಲ್ಲಿ ಇರುವ ವರದಿಯ ಮುಖ್ಯ ಅಂಶಗಳು ಮಾಧ್ಯಮಗಳಿಗೆ ಗೊತ್ತಾಗಿದೆ. ಬಿಡುಗಡೆಯನ್ನು ಸರ್ಕಾರಕ್ಕೆ ಅರ್ಪಿಸುವ ಮೊದಲೆ ಪತ್ರಿಕೆಗಳ ಕೈಗೆ ಸಿಕ್ಕಿಬಿಟ್ಟಿದೆ. ಇದು ನಮ್ಮ ದೇಶದ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಕಾಳಜಿಗೆ ಉದಾಹರಣೆ ಅಲ್ಲೂ ಭ್ರಷ್ಟತೆ. ಹೀಗೆ ಮಾಡಲು ಅವರದೇಯಾದ ಕಾರಣಗಳು ಉಂಟು. ಅವುಗಳ ಸದುಪಯೋಗವನ್ನು ಪಾಲುದಾರರು ಪಡೆಯುತ್ತಾರೆ ಅಷ್ಟೇ!

ಆದರೆ ತಮಾಷೆಯ ವಿಚಾರವೆಂದರೆ ಸಾವಿರಾರು ಕೋಟಿಯ ಆಕ್ರಮ ಗಣಿಗಾರಿಕೆಯ ವೈವಾಟನ್ನು ಎಲ್ಲಾ ಮುಖ್ಯ ಕೂಳಗಳು ನಡೆಸಿದ್ದಾರೆ. ಎಲ್ಲಾರ ಪಾಲದ ನೈಸರ್ಗಿಕ ಸಂಪತ್ತನ್ನು ವಿದೇಶಕ್ಕೆ ಕಳ್ಳತನದಲ್ಲಿ ಸಾಗಿಸಿದ್ದಾರೆ. ಆದರೂ ಅಧಿಕೃತ ವರದಿ ಸರ್ಕಾರಕ್ಕೆ ಸಿಗುವ ಮುನ್ನ ಸಿಕ್ಕಿರುವ ವರದಿಯಲ್ಲಿರುವ ವ್ಯಕ್ತಿಗಳು ಹೇಳುವ ಮಾತುಗಳನ್ನು ನೋಡಿದರೇ ನಾವುಗಳೇ ಪಕಾ ಪಕಾ ನಕ್ಕು ಮನಸ್ಸಿನಲ್ಲಿ ಮೂಡುವ ಆಕ್ರೋಶವನ್ನು ಯಾರ ಮುಂದೆ ಹೇಳಿಕೊಳ್ಳಬೇಕೋ ತಿಳಿಯದಾಗಿದೆ.

ಯಾರೊಬ್ಬರು ಹೌದು! ನಾವು ತಪ್ಪು ಮಾಡಿದ್ದೇವೆ ಎಂಬುದನ್ನು ಒಪ್ಪಿಕೊಳ್ಳುತ್ತಿಲ್ಲ. ಒಬ್ಬರೂ ಹೇಳುತ್ತಾರೆ "ಇದು ಅಧಿಕೃತ ವರದಿಯಲ್ಲ, ಆದ್ದರಿಂದ ಈಗಲೇ ನಾವುಗಳು ಏನೂ ಹೇಳಲಾಗುವುದಿಲ್ಲ." ಇನ್ನೊಬ್ಬರು ಹೇಳುತ್ತಾರೆ "ನಾವುಗಳು ಮಾಡಿರುವ ವ್ಯವಹಾರ ಎಲ್ಲ ಅಧಿಕೃತ ಮತ್ತು ಪಾರದರ್ಶಕ ನಮ್ಮ ಹೆಸರು ಇದೇ ಎಂದರೇ ಯಾರೋ ತಿಳಿಯದೇ ನಮ್ಮ ಹೆಸರನ್ನು ಬೇಕಂತಹ ಹೇಳಿಬಿಟ್ಟಿರಬಹುದು" ಹೀಗೆ ಒಬ್ಬೊಬ್ಬರೂ ಒಂದೊಂದು ಸಮರ್ಥನೆಯ ಸರಮಾಲೆಯನ್ನೇ ಪೋಣಿಸಿದ್ದಾರೆ.

ಅಂದರೇ ಸಾವಿರಾರು ಕೋಟಿರೂಪಾಯಿಯ ಅದಿರು, ಮಣ್ಣು ಎಲ್ಲಾ ಕಣ್ಣಿಗೆ ಕಾಣದ ರೀತಿಯಲ್ಲಿ ಮಂಗಮಾಯವಾಯಿತೇ ಪಾಪ ನಮ್ಮ ಈ ಗಣಿ ಮಾಲಿಕರುಗಳು, ಅಧಿಕಾರಿಗಳು ಮತ್ತು ಸರ್ಕಾರ ಏನೇನೂ ಮಾಡಲಿಲ್ಲವೇ? ಪಾಪ ಅವರುಗಳ ಪಾತ್ರ ಏನೋ ಇಲ್ಲವೇನೋ?



ಇವರ ಇಂದಿನ ಈ ಶ್ರೀಮಂತಿಕೆ ಯಾವುದರ ಮೊಲದಿಂದ ಬಂದಿತು ಸ್ವಾಮಿ!

ಇದರ ಬಗ್ಗೆ ಮಾತನ್ನಾಡುವುದೇ ಜಿಗುಪ್ಸೆಯಾಗುತ್ತದೆ. ಸಾಮಾನ್ಯ ಪ್ರಜೆಯ ನೋವು, ನಲಿವು, ಅವನಿಗೆ ಸಿಗಬೇಕಾದ ಸಾಮಾಜಿಕ ನ್ಯಾಯ, ನೈಸರ್ಗಿಕ ಸಂಪತ್ತಿನ ಸಮಪಾಲು, ಇದ್ಯಾವುದು ಈ ಮಹನೀಯರುಗಳಿಗೆ ಬೇಕಾಗಿಲ್ಲ.

ತಪ್ಪು ಮಾಡದವರು ಯಾರ್ವಾರ್ರೇ ಎಂಬ ಡೈಲಾಗ್ ನ್ನು ಪ್ರತಿಯೊಬ್ಬರು ನೀಡುತ್ತಾರೆ.

ಅಲ್ಲಾ ಸ್ವಾಮಿ ಇವರುಗಳಿಗೆ ನೈತಿಕತೆ ಎಂದರೇ ಏನೂ ಎಂಬುದನ್ನು ಯಾವ ರೀತಿಯಲ್ಲಿ ತಿಳಿಯಪಡಿಸಬೇಕು.

ಅಧಿಕಾರದ ಪ್ರಮಾಣ ವಚನ ಓದುವಾಗ ಇವರುಗಳು ಮಾಡುವುದಾದರೂ ಏನೂ. ಅಧಿಕಾರದಲ್ಲಿ ಮೈ ಮರೆಯುವಾಗ ಅಧಿಕಾರವನ್ನು ಉಪಯೋಗಿಸುವುದು ಏನಕ್ಕೆ?

ಬಿಡಿ ಅಧಿಕಾರಿಗಳು, ರಾಜಕಾರಣಿಗಳು ಎಂದರೇ ಜನರು ಏನನ್ನು ಹೇಳುವ ಮಟ್ಟಿಗೆ ಇವರುಗಳು ಇಲ್ಲವೇ ಇಲ್ಲವೇನೋ.

ಅದರೂ ಪುನಃ ಈ ಮಹನೀಯರುಗಳೇ ಅದು ಹೇಗೆ ಪುನರಾಯ್ಕೇಯಾಗಿ ಬರುತ್ತಾರೆ? ವಿದಾನಸೌಧವೇನು ಇವರುಗಳು ವಾಸಮಾಡುವ ಆರಮನೆಯೆಂದುಕೊಂಡು ಮತದಾರರು ಇವರಿಂದ ಆಳಿಸಿಕೊಳ್ಳುವ ದೌರ್ಭಾಗ್ಯ ಜನತೆಯೇ?

ನಾವುಗಳು ಭವ್ಯ ಭಾರತ, ಭವ್ಯ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಶಾಲೆಯ ದಿನಗಳಲ್ಲಿ ಸಮಾಜ ಶಾಸ್ತ್ರದಲ್ಲಿ ಓದುವುದಕ್ಕೂ ಇಲ್ಲಿ ನಡೆಯುತ್ತಿರುವುದಕ್ಕೂ ಏನೊಂದು ಸಂಬಂಧವಿಲ್ಲವಲ್ಲ ದೇವ್ರೂ?

ಇವರುಗಳು ಕೊಡಿ ಇಡುವ ಹಿಡಿಗಂಟು ತಾವು ತಿಂದು ತಮ್ಮ ಮಕ್ಕಳು ಮರಿಗಳವರೆಗೂ, ಇಡಿ ತಮ್ಮ ಖಾಂದನ್ ನೂರು ತಲೆಮಾರುಗಳು ತಿಂದು ತೇಗಿದರೂ ಕಳೆಯದಾರದಷ್ಟು ಮಣ್ಣು, ಹೊನ್ನೂ ಪ್ರತಿಯೊಂದು ತಮಗೆ ಮಾತ್ರ ಎಂಬಂತೆ ಎಲ್ಲಿ ಸಿಗುತ್ತದೋ ಅಲ್ಲಲ್ಲಿ ನಿತ್ಯ ಭೋಜನ ಮಾಡುವವರಲ್ಲ? ಇವರುಗಳಿಗೆ ಕಿಂಚಿತ್ ಆದರೂ ಮರ್ಯಾದೇ ಇದ್ಯಾ? ತಿಳಿಯದಾಗಿದೆ.

ಹಿಂದೆ ಇದ್ದಂತಹ ರಾಜಕಾರಣಿಗಳಿಗೂ ಇವರಿಗೂ ಹೋಲಿಕೆಯನ್ನು ಮಾಡುವುದಕ್ಕೂ ಭಯವಾಗುವ ರೇಂಜಿಗೆ ಇವರುಗಳು ದೊಡ್ಡ ಮಟ್ಟದಲ್ಲಿ ಬೆಳೆದು ಬಿಟ್ಟಿರುವವರೋ ಅಥವಾ ನಾವುಗಳು ಆಯ್ಕೆ ಮಾಡುವುದರಲ್ಲಿಯೇ ಮತದಾರ ಎಡೆವಿಬಿಟ್ಟಿರುವನೇ ತಿಳಿಯದಾಗಿದೆ.

ಉಜ್ವಲ ಭವಿಷ್ಯವನ್ನು ಭಾರತಕ್ಕೆ ಎಲ್ಲಿಂದ ಕೊಡಲಿ ಎನ್ನುವಂತಾಗಿದೆ. ಯಾರಾದರೂ ಅಣ್ಣ ಹಜಾರೆಯವಂತಹ ದೇಶ ಭಕ್ತರು ದ್ವನಿ ಎತ್ತಿದರೇ ಅವರ ಕೂಗನ್ನೂ ಎಷ್ಟರ ಮಟ್ಟಿಗೆ ಹಳ್ಳ ಇಡಿಸಬೇಕೋ ಅಷ್ಟರ ಮಟ್ಟಿಗೆ ಅದರ ಶಕ್ತಿಯನ್ನೇ ತಗ್ಗಿಸುವಂತಹ ನಾಯಕ ಮಣಿಗಳು ನಮ್ಮ ರಾಜಕಾರಣದಲ್ಲಿ ಇದ್ದಾರೆ.




ನೀನು ಒಳ್ಳೆಯವನಲ್ಲ ಎಂದರೇ ಸಾಕು, ನೀನೇಷ್ಟು ಒಳ್ಳೆಯವನು ಮೊದಲು ನೀ ನೋಡಿಕೋ ಎಂದು ಒಣ ಪ್ರತಿಷ್ಠೆಯನ್ನು ಪ್ರದರ್ಶಿಸುತ್ತಾರೆ.

ನನಗೆ ಅನಿಸುತ್ತದೆ ನಮ್ಮ ಕನಸು, ನಮ್ಮ ಉತ್ಸಹ, ನಮ್ಮ ಸಮಾಜ, ನಮ್ಮ ಬೆಳವಣಿಗೆಯನ್ನ ಯಾವುದೋ ಒಂದು ವ್ಯವಸ್ಥೆಯ ಸುಳಿ ದುರ್ಬಲಗೊಳಿಸುತ್ತಿದೆ. ಇದರ ಬದಲಾವಣೆಯ ಸಿಹಿ ಗಾಳಿ ಯಾವಾಗ ಎಲ್ಲಿಂದ ಬಿಸುವುದು?

ಏನೇ ಮಾಡಿದರೂ, ಎಷ್ಟೇ ಭ್ರಷ್ಟರಾದರೂ ಅಧಿಕಾರದಲ್ಲಿಯೇ ಮಜಾ ಅನುಭವಿಸಬೇಕು ಎಂಬ ಭಂಡತನ ನಮ್ಮ ಅಧಿಕಾರಸ್ಥರಲ್ಲಿ ಸ್ಥಾಯಿಯಾಗಿ ಕೂಂತು ಬಿಟ್ಟಿದೆ. ಸ್ವಲ್ಪವಾದರೂ ಕಳಂಕ ಮೆತ್ತಿದರೇ ನಾಚಿಕೆಯೇ ಆಗುತ್ತಿಲ್ಲ. ಹೇ ಇದೇನೂ ಮಹಾ ಬಿಡಿ! ಯಾರೂ ಮಾಡಿಲ್ಲದಂತಹದೇನೂ ನಾನು ಮಾಡಿಲ್ಲ! ಎಂಬಂತಾಗಿದೆ.

ನಾವುಗಳು ನಮ್ಮ ಶಾಲಾ ದಿನಗಳಲ್ಲಿ ಓದಿದ ನೈತಿಕ ಪಾಠಗಳು ಇವರುಗಳು ಯಾರು ಓದಿಯೇ ಇಲ್ಲವೇ ಎಂಬ ಅನುಮಾನ ಕಾಣುತ್ತಿದೆ.

ಸಾರ್ವಜನಿಕ ವ್ಯಕ್ತಿ ಯಾಕೇ ಸಾರ್ವಜನಿಕ ಸೇವೆಗಳಿಗೆ ಸೇರುತ್ತಾನೆ. ಅವನ ಧ್ಯೇಯವಾದರೂ ಏನೂ ಎಂಬುವಂತಾಗಿದೆ.

ಹಿಂದೆ ಸಾರ್ವಜನಿಕ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಡುವವರುಗಳ ಜನರ ಜೀವನ ಶೈಲಿಗೂ, ಇಂದು ಅಡಿ ಇಡುತ್ತಿರುವವರ ಶೈಲಿಗೂ ಹೋಲಿಕೆಯನ್ನು ಮಾಡುವವನೇ ಪಾಪಿಯಂತಾಗಿದೆ.

ಹಿಂದೆ ಸಾಮಾಜಿಕ ಸೇವೆ ಮಾಡುವವನು ಎಂದರೇ ಮನೆಯಲ್ಲಿ ಮೂಗು ಮುರಿಯುತ್ತಿದ್ದರು. ಯಾಕೆಂದರೇ ಅಲ್ಲಿ ಆರ್ಥಿಕವಾಗಿ ಗಳಿಸುವುದಕ್ಕಿಂತಹ ಮನೆಯಲ್ಲಿನ ಸಂಪತ್ತನ್ನೇ ಜನರ ಸೇವೆಗಾಗಿ ಕೊಡಬೇಕಾಗಿತ್ತು. ಮತ್ತು ಅಲ್ಲಿಂದ ಏನೊಂದು ಉಪಯೋಗವಿಲ್ಲ. ಮನೆಗೆ ಮಾರಿ ಪರರಿಗೆ ಉಪಕಾರಿ ಎಂಬಂತಾಗುತ್ತಿತ್ತು. ಕೇವಲ ಹೆಸರು ಮಾತ್ರ ಸಿಗುತ್ತಿತ್ತು.

ಆದರೇ ಇಂದು ಈ ರೀತಿಯಲ್ಲಿದೆಯೇ ನಮ್ಮ ಸಾರ್ವಜನಿಕ ವ್ಯಕ್ತಿಗಳ ಪರಿಸ್ಥಿತಿ?

ಇದೊಂದು ಪ್ಯಾಶನ್ ಆಗಿಬಿಟ್ಟಿದೆ. ಇಂದು ಯಾರು ಹೆಸರಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ದುಡ್ಡು ಒಂದು ಇದ್ದಾರೆ ತಾವುಗಳು ಹೇಗೆ ತಮ್ಮ ಹೆಸರನ್ನು ಜನರ ಮಾನಸದಲ್ಲಿ ಹಸಿರಾಗಿ ಇಟ್ಟುಕೊಂಡು ಇರಬಹುದು ಎಂಬ ಐಡ್ಯಾ ಗೊತ್ತಾಗಿಬಿಟ್ಟಿದೆ. ಅದಕ್ಕೆ ಏನಾನ್ನಾದರೂ ಮಾಡಲೂ ಇವರುಗಳು ತಯಾರು. ಹಾಗೆಯೇ ಅಧಿಕಾರ ಯಾವಗಲ ಇವರ ಅಂಗೈಯಲ್ಲಿಯೇ ಇರಬೇಕು. ಯಾಕೆಂದರೇ ತಾವು ಮಾಡುವ ಆಕ್ರಮ ಸಂಪತ್ತು, ಆಸ್ತಿ ಇವುಗಳಿಗೆಲ್ಲಾ ಅದೇ ರಕ್ಷ ಕವಚ. ಅದಕ್ಕಾಗಿ ಶತ ಪ್ರಯತ್ನವನ್ನು ಮಾಡುತ್ತಲೇ ಮಾಡುತ್ತಲೇ ಆಧಿಕಾರವನ್ನು ಗಳಿಸಿಕೊಂಡು ಸಾಮಾನ್ಯ ಜನರನ್ನು ಬೆಪ್ಪು ಮಾಡುತ್ತಾರೆ.

ಮತ್ತು ಯಾರೂ ಹೆಚ್ಚು ಹಣವನ್ನು ಹೊಂದಿರುವವರೋ ಅವರೇ ಜನನಾಯಕರಾಗುತ್ತಾರೆ.ಅವರುಗಳೇ ಚುನಾವಣೆಯಲ್ಲಿ ಆರಿಸಿಬರುತ್ತಾರೆ. ಹಣವಿಲ್ಲದವರೂ ಎಂದಿಗೂ ಅಧಿಕಾರವನ್ನು ಗಳಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಬಡವ ಬಡವನಾಗಿಯೇ ಇರುತ್ತಾನೆ. ಹಣವಿರುವವ ದೊಡ್ಡ ದೊಡ್ದ ಮಟ್ಟದಲ್ಲಿ ಬೆಳೆಯುತ್ತಾ ಹೋಗುತ್ತಾನೆ. ಅವನಿಗೆ ಮಾತ್ರ ರಾಜಕೀಯ, ಚುನಾವಣೆ, ಸಮಾಜ ಸೇವೆ ಎಂಬ ಪೋಜು.

ಈ ರೀತಿಯಲ್ಲಿರುವ ನಮ್ಮ ವ್ಯವಸ್ಥೆಯ ಈ ದಿನಗಳಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಹೊಸ ಆಶಾ ಕಿರಣವನ್ನು ಮೂಡಿಸುವ ವ್ಯಕ್ತಿಯ, ವ್ಯವಸ್ಥೆಯ ಆಗಮವನ್ನು ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಯಾವ ರೀತಿಯಲ್ಲಿ ನೋಡಬೇಕೋ ತಿಳಿಯದಾಗಿದೇ!!

ಜೈ ಭಾರತ್!

ಶನಿವಾರ, ಜುಲೈ 16, 2011

ಅಕ್ಷರಗಳಲ್ಲಿಯೇ ಕೊಳಕಮಳಕ !



ಇತೀಚಿನ ಕ.ಪ್ರ ಮತ್ತು ಹಾಯ್ ಎರಡು ಪತ್ರಿಕೆಗಳನ್ನು ಓದುತ್ತಿದ್ದರೆ. ಇವರುಗಳು ಎನನ್ನೂ ಜನರಿಗೆ ಹೇಳಲು ಹೊರಟಿದ್ದಾರೆ ಎಂದು ಒಂದು ಕ್ಷಣ ಸಾಮಾನ್ಯ ಓದುಗನಿಗೆ ಅಚ್ಚರಿಯಾಗುತ್ತದೆ. ಹಾಗೆಯೇ ಏನ್ ಮಾಡ್ತಾ ಇದ್ದಾರೆ ಇವರುಗಳು ಎಂದು ನೋಡುವಂತಾಗಿದೆ.

ಎರಡು ಪತ್ರಿಕೆಗಳು ಒಬ್ಬರನ್ನೊಬ್ಬರ ಮೇಲೆ ಕೆಸರು ಎರಚುವ ವೇದಿಕೆಯನ್ನಾಗಿ ಎರಡು ಪತ್ರಿಕೆಗಳನ್ನು ಮಾಡಿಕೊಂಡಿದ್ದಾರೆ. ಹಾಯ್ ನಲ್ಲಿ ಬರೆಯುವವರ ಮೇಲೆ ಕ.ಪ್ರ ದಲ್ಲಿ. ಕ.ಪ್ರ ದಲ್ಲಿ ಹಾಯ್ ನಲ್ಲಿ ಬರೆಯುವವರ ಮೇಲೆ ಎಷ್ಟು ಸಾಧ್ಯವಾಗುತ್ತದೂ ಎಲ್ಲಿ ಎಲ್ಲಿ ಅವಕಾಶಗಳು ಸಿಗುತ್ತವೋ ಅಲ್ಲೇಲ್ಲಾ ಹುಲುಸಾಗಿ ತಮ್ಮ ದ್ವೇಷವನ್ನು ಅಕ್ಷರಗಳಲ್ಲಿ ತೋಡಿಕೊಳ್ಳುತ್ತಿದ್ದಾರೆ. ಇದು ಸಾಮಾನ್ಯ ಓದುಗನಿಗೆ ಯಾವುದು ಸತ್ಯ ಯಾವುದು ಸುಳ್ಳು ಎಂದು ಸುಮ್ಮನೆ ನಿಟ್ಟುಸಿರು ಬಿಡುವಂತಾಗಿದೆ.

ಎಲ್ಲಾರಿಗೂ ತಿಳಿದಿರುವಂತೆ ಕ.ಪ್ರ ಸಂಪಾದಕರುಗಳು ಹಾಯ್ ಸಂಪಾದಕರಿಗೆ ತೀರ ಹತ್ತಿರದವರಾಗಿದ್ದವರು ಅದು ಕ.ಪ್ರ ಕ್ಕೆ ಸೇರುವವರೆಗೂ.

ಅದು ಇರಲಿ ಅದು ಅವರವರ ವೈಕ್ತಿಕ ವಿಷಯ. ಈ ವಿಷಯಗಳನ್ನು ಸಾರ್ವಜನಿಕರು ಅದು ದುಡ್ಡುಕೊಟ್ಟು ಸುದ್ಧಿಗಾಗಿ ಓದುವ ತಮ್ಮ ಪತ್ರಿಕೆಗಳಲ್ಲಿ ತಮ್ಮ ನಡುವಿನ ಜಗಳವನ್ನು ಯಾವ ಮಟ್ಟಕ್ಕೆ ಕೊಂಡು ಹೋಗುತ್ತಿದ್ದಾರೆ ಎಂದರೇ ಎರಡು ಕಡೆಯವರು ಮಾನ ನಷ್ಟ ಮೊಕದ್ದಮೆಯನ್ನು ಹಾಕುವ ಮಟ್ಟಿಗೆ.

ಇದರ ಜರೂರತು ಯಾರಿಗೇ? ಯಾರಿಗಾಗಿ? ಓದುಗರನ್ನು ಇವರುಗಳು ಏನಾದರೂ ಏನೂ ಗೊತ್ತಿಲ್ಲದ ಗಾವಿದರುಗಳು, ನಾವುಗಳು ಏನೂ ಬರೆದರು ದುಡ್ಡುಕೊಟ್ಟು ಓದುವವರು ಎಂದು ತಿಳಿದುಕೊಂಡಿರುವವರೆ.

ಎರ‍ಡು ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿರುವವರುಗಳು ಉತ್ತಮ ಬರಹಗಾರರು ಅದರ ಬಗ್ಗೆ ಎರಡು ಮಾತಿಲ್ಲ. ಅದಕ್ಕೆ ಅವರುಗಳು ಮಾಡಿರುವ ಮಾಧ್ಯಮ ಪ್ರಪಂಚದಲ್ಲಿನ ಪವಾಡ ಮತ್ತು ಸಾಧನೆಯೇ ಸಾಕ್ಷಿ. ಇದಕ್ಕೆ ಕನ್ನಡ ಜನಪ್ರಿಯತೆ ಮತ್ತು ಮೆಚ್ಚುಗೆಯೇ ಉದಾಹರಣೆ.

ಈ ರೀತಿಯಲ್ಲಿರುವಾಗ ಇವರುಗಳು ಕೆಲವು ಸಮಯದ ಹಿಂದೆ ಚಿನ್ನ, ರನ್ನ ಎಂದು ಒಬ್ಬರನ್ನೊಬ್ಬರುಗಳು ಹೊಗಳಿಕೊಳ್ಳುತ್ತಿದ್ದುದು ನಾವು ಕಂಡಿದ್ದೇವೆ. ವೇದಿಕೆಯ ಮೇಲೆ ಇವರುಗಳು ಬರೆದ ಪುಸ್ತಕಗಳ ಬಗ್ಗೆ ಅವರುಗಳು ಅಭಿಮಾನದಿಂದ ಮಾತನ್ನಾಡುತ್ತಿದ್ದುದು, ಅವರುಗಳು ಬರೆದ ಪುಸ್ತಕ ಮತ್ತು ಅವರ ಅಪಾರ ಙ್ಞಾನದ ಬಗ್ಗೆ ಇವರು ಕೊಂಡಾಡುತ್ತಿದ್ದುದು ಏನೂ.. ಅದು ಕೇವಲ ಕೆಲವೇ ಕೆಲವು ದಿನಗಳ ಹಿಂದೆ.

ಈ ರೀತಿಯಲ್ಲಿದ್ದ ಇಬ್ಬರ ಮಧ್ಯದ ಸ್ನೇಹ ಎಲ್ಲಿ ಹಳ್ಳ ಹಿಡಿಯಿತೂ ಅದು ಯಾರಿಗೂ ಬೇಡ. ಆದರೇ ಇತ್ತೀಚಿನ ಇವರ ಪತ್ರಿಕೆಗಳನ್ನು ಸಾಮಾನ್ಯ ಓದುಗ ಓದುವುದಾದರೂ ಯಾಕೆ ಎಂಬಂತಾಗಿದೆ. ಇದು ಬೇಕಾ? ಇದನ್ನಾ ಇವರುಗಳು ಮೀಡಿಯಾ - ಧರ್ಮ -ನೀತಿ ಎಂಬ ಹತ್ತು ಹಲವು ಮಾತುಗಳನ್ನು ಅರೆದು ಕುಡಿದಿರುವ ಮಂದಿ ಎಂದು ನೋಡುವಂತಾಗಿದೆ.

ಎರಡು ಪತ್ರಿಕೆಗಳಲ್ಲಿ ನಿತ್ಯ ಒಂದು ಕಡೆಯಾದರೂ ಒಂದು ಕಾಲಂ ನಲ್ಲಾದರೂ ಒಬ್ಬರನ್ನೊಬ್ಬರು ಚಿವುಟುವುದನ್ನ ನಿತ್ಯ ಮರೆಯುವುದಿಲ್ಲ. ಅಲ್ಲಿ ಅಕ್ಷರದಲ್ಲಿಯೇ ಕೊಳಕಮಳಕ ಬೈಗಳಗಳನ್ನು ನೋಡಲು ನಿಜವಾಗಿಯೂ ಬೇಜಾರಾಗುತ್ತದೆ.

ಸಾರ್ವಜನಿಕವಾಗಿ ಯಾರೊಬ್ಬರೂ ತಮ್ಮ ವೈಕ್ತಿಕ ದ್ವೇಷ, ಅಸೊಯೆಯನ್ನು ಅದು ಪತ್ರಿಕಾ ಮಾಧ್ಯಮದಲ್ಲಿ ತರಲೇ ಕೊಡದು. ಅದಕ್ಕೆ ಇದು ಎಂದು ಉಪಯೋಗವಾಗಬಾರದು. ಸಾಮಾನ್ಯ ಓದುಗನಿಗೆ ಇದರಿಂದ ಆಗುವ ಉಪಯೋಗವಾದರೂ ಏನೂ? ನೀವೆ ಹೇಳಿ ಸ್ವಾಮಿ.

ಸಣ್ಣ ಮಕ್ಕಳು ಕಿತ್ತಾಡುವ ರೇಂಜಿಗೆ ಬುದ್ಧಿವಂತರುಗಳು ತಮಗೆ ಕರತಲಮಲಕವಾಗಿರುವ ಅಕ್ಷರಗಳೂಡನೆ ಮಾಡುವುದು ಯಾವ ರೀತಿ ಸರಿ?

ಇದು ಇನ್ನಾದರೂ ನಿಲ್ಲುವಂತಾಗಬೇಕು.

ಜನರಿಗೆ ಬೇಕಾಗಿರುವುದು ಹೊಸತನ ಮತ್ತು ಹೊಸ ಹೊಸ ವಿಷಯ ಅದು ಬಿಟ್ಟು ಅವುಗಳನ್ನು ನಡೆಸುತ್ತಿರುವವರ, ಬರೆಯುತ್ತಿರುವವರ ಖಾಸ ಖಾಸ ವಿಷಯಗಳಲ್ಲ. ಆ ರೀತಿಯಲ್ಲಿಯೇ ಮಾಡುವುದಾದರೇ ಈಗ ಇರುವ ಪುಟಗಳೇ ಸಾಲುವುದಿಲ್ಲ ಅಲ್ಲವಾ?

ಲೋಕಲ್ ಪೇಪರ್ ಗಳು ಎಂದರೇ ಮೂಗು ಮುರಿಯುವವರ ಮುಂದೇ ಈ ರೀತಿ ಮಾಡುವುದು ತರವಲ್ಲಾ. ಎಲ್ಲಾರು ಇಷ್ಟಪಟ್ಟು ಓದುವಂತೇ ಇರಬೇಕು. ಅದು ಬಿಟ್ಟು ಇವುಗಳನ್ನು ಮುಟ್ಟುವುದೇ ತಪ್ಪು ಎಂಬ ಭಾವನೆಯನ್ನು ತಪ್ಪಿಸಲಿ.

ಬಹು ಬಲಿಷ್ಟ ಮಾಧ್ಯಮವಾದ ವೃತ್ತ ಪತ್ರಿಕೆ ಸಂವಿಧಾನದ ನಾಲ್ಕನೇ ಸ್ತಂಭ ಎಂಬುದನ್ನು ಅಲ್ಲಿ ಕೆಲಸ ಮಾಡುವವರು ಮರೆಯಬಾರದು. ತಮ್ಮ ಜವಬ್ದಾರಿಯನ್ನು ಅರಿತು ನಡೆಯುವುದು ಕ್ಷೇಮ!

ಈ ಪಾಠವನ್ನು ಸಾಮಾನ್ಯ ಓದುಗ ನಿಮಗೆ ತಿಳಿ ಹೇಳುವ ಮಟ್ಟಕ್ಕೆ ನಿಮ್ಮ ಪತ್ರಿಕೆಯಲ್ಲಿನ ನಿಮ್ಮ ಲೇಖನಿಯನ್ನು ಹರಿಯಬಿಡಬೇಡಿ ಎಂದು ಹೇಳುವುದು ಎಲ್ಲಾ ಸಹೃದಯರ ಬಯಕೆಯಾಗಿದೆ.

ಯಾಕೆಂದರೇ ನಮಗೆ ನಿಮ್ಮ ಬರವಣಿಗೆ ಇಷ್ಟ, ನೀವು ಕೊಡುವ ವಿಷಯ ವೈವಿಧ್ಯತೆ ಇಷ್ಟ... ಅದ್ದರಿಂದ ನಿಮ್ಮಿಂದ ಹೆಚ್ಚಿನ ನಿರೀಕ್ಷೆಯನ್ನು ಓದುಗರು ಕಾಣುತ್ತಿದ್ದಾರೆ. ಆ ದೃಷ್ಟಿಯಲ್ಲಿ ನಿಮ್ಮ ಕೆಲಸ ಮತ್ತು ದೋರಣೆ ಇರಲಿ.

ಹೆಚ್ಚಿಗೆ ಹೇಳಲು ಮನಸ್ಸು ಬರುತ್ತಿಲ್ಲ. ಯಾಕೆಂದರೆ ನೀವುಗಳು ಲೇಖಕರುಗಳು ಮತ್ತು ಬಹಳ ದೊಡ್ಡ ಮಟ್ಟದಲ್ಲಿ ತಿಳಿದಿರುವಂತರುಗಳು.

ನಿಮ್ಮ ಪುಸ್ತಕಗಳು, ಲೇಖನಗಳನ್ನು ಓದುವ ಮೊಲಕ ನಾವುಗಳು ಸ್ವಲ್ಪಮಟ್ಟಿಗೆ, ಇಷ್ಟರ ಮಟ್ಟಿಗೆ ನಿಮ್ಮನ್ನು ನಿಮ್ಮ ದಾರಿಯನ್ನು ಹೇಗೆ ಇದೆ ಎನ್ನುವ ಮಟ್ಟಿಗೆ ನಾಲ್ಕು ಸಾಲು ಕಿವಿ ಮಾತುಗಳನ್ನು ಹೇಳುವಷ್ಟು ತಿಳುವಳಿಕೆಯನ್ನು ಸಂಪಾಧಿಸಿದ್ದೇವೆ.

ಸಿಗೋಣವಾ!

ಮಂಗಳವಾರ, ಜುಲೈ 12, 2011

ಹ್ಯಾಪೀ ಬರ್ತಡೇ ಟೂ ಯು!

ಜೀವನ ಎಷ್ಟರ ಮಟ್ಟಿಗೆ ಬದಲಾವಣೆಯಾಗುತ್ತಿರುತ್ತದೆ ಎಂಬುದಕ್ಕೆ ಒಂದು ಉದಾಹರಣೆ ನಮ್ಮಗಳ ಹುಟ್ಟಿದ ದಿನದ ಸಂಭ್ರಮಾಚರಣೆಗಳು.

ಯೋಚಿಸಿ ನಮ್ಮ ನಮ್ಮ ಹುಟ್ಟಿದ ಹಬ್ಬಗಳನ್ನು ನಾವುಗಳು ಬಾಲ್ಯದಲ್ಲಿ ಹೇಗೆ ಆಚರಿಸಿಕೊಂಡಿರುತ್ತೇವೆ ಎಂಬುದನ್ನು.



ಇಂದು ನಮ್ಮ ಗೆಳೆಯರುಗಳು ತಮ್ಮ ಮಕ್ಕಳ ಮೊದಲನೆಯ ವರ್ಷದ ಹುಟ್ಟಿದ ದಿನವನ್ನು ಎಷ್ಟೊಂದು ಸಂಭ್ರಮವವಾಗಿ ತನ್ನ ಸ್ನೇಹಿತರುಗಳು ಮತ್ತು ಸಂಬಂಧಿಕರುಗಳನ್ನು ಆಹ್ವಾನಿಸಿ ಮಗುವಿಗೆ ಒಂದು ಉತ್ತಮವಾದ ಮರೆಯಲಾರದ ದಿನವನ್ನಾಗಿ ಮಾಡುತ್ತಿರುತ್ತಾರೆ. ಆದರೆ ಎರಡು ವರ್ಷದ ಆ ಮಗುವಿಗೆ ಈ ಸಂಭ್ರಮದ ಅನುಭವ ಹೆಚ್ಚು ಆಗಲಾರದೇನೋ. ಆದರೆ ಹೆತ್ತವರು ಮತ್ತು ಸ್ನೇಹಿತರುಗಳು ಆ ದಿನ ಮಗುವನ್ನು ಕಂಡು ಮತ್ತು ಆದರ ನಗುವನ್ನು ಆದರ ತುಂಟಾಟವನ್ನು ಕಂಡು ಸಂಭ್ರಮಿಸುತ್ತಾರೆ.

ಆದರೂ ಈ ಮೊದಲ ಹುಟ್ಟುಹಬ್ಬದ ನೆನಪುಗಳನ್ನು ಮುಂದೆ ಆ ಮಗು ಬೆಳೆದು ದೊಡ್ಡವನಾದ ಮೇಲೆ ನೋಡಿ ಖುಷಿಪಡುವಂತೆ ಮಾಡುವಲ್ಲಿ ನಮ್ಮ ತಂತ್ರಙ್ಞಾನ ಮುಂದುವರಿದೆದೆ. ಸಂತೋಷದ ಪ್ರತಿ ಕ್ಷಣವನ್ನು ನಾವುಗಳು ಹಾಗೆಯೇ ಎತ್ತಿಟ್ಟುಕೊಳ್ಳಬಹುದು. ಅಷ್ಟರ ಮಟ್ಟಿಗೆ ನಾವುಗಳಂತೂ ಮುಂದುವರಿದಿದ್ದೇವೆ. ಆದಕ್ಕೆ ನಮ್ಮ ಇಂದಿನ ಪಾಸ್ಟ್ ಯುಗಕ್ಕೆ ಥ್ಯಾಂಕ್ಸ್ ಹೇಳಲೆ ಬೇಕು.

ಬೆಳೆಯುತ್ತಾ ಬೆಳೆಯುತ್ತಾ ಮಗು ತನ್ನ ಜನ್ಮ ದಿನಾಂಕವನ್ನು ಶಾಲೆಯನ್ನು ಸೇರಿದ ಮೇಲೆ ನೆನಪಲ್ಲಿ ಇಟ್ಟುಕೊಳ್ಳಲು ಪ್ರಾರಂಭಿಸುತ್ತದೆ.

ಆದರೆ ಹಿಂದೆ ನಾವುಗಳು ಶಾಲೆಗೆ ಹೆಜ್ಜೆಯನ್ನು ಹಾಕಲು ಪ್ರಾರಂಭಿಸಿದಾಗ ನಮ್ಮ ಹುಟ್ಟಿದ ದಿನಗಳು ನಮಗಂತೂ ಗೊತ್ತಿರಲಿಲ್ಲ. ಹಳ್ಳಿಯಲ್ಲಿ ಹೆತ್ತವರಿಗೂ ಅದೊಂದು ಪ್ರಾಮುಖ್ಯವಾದ ವಿಷಯವಾಗಿರಲಿಲ್ಲ. ಹುಟ್ಟಿದ್ದು ಯಾವುದೋ ದಿನಾಂಕವಾದರೇ ಶಾಲೆಯ ದಾಖಲಾತಿಯಲ್ಲಿ ಮತ್ತೊಂದು ದಿನಾಂಕ. ಹೀಗೆ ಎರಡೇರಡು ದಿನಾಂಕಗಳನ್ನು ಹೊಂದಿರುವವರ ಪಾಡು ಇಂದು ಬೇಡ.

ಯಾಕೆಂದರೇ ನಾವುಗಳು ದಾಖಲಾತಿಯ ದಿನಾಂಕದಂದು ವಿಷ್ ಮಾಡಿದರೇ ಅವರ ಉತ್ತರ ಇದು ನನ್ನ ನಿಜವಾದ ದಿನಾಂಕವಲ್ಲ ಮಹಾರಾಯ! ಎನ್ನುತ್ತಾರೆ. ಹೀಗಾಗಿ ಅವರುಗಳ ಹುಟ್ಟು ಹಬ್ಬ ಆಚರಣೆಯನ್ನು ಸಾಮಾನ್ಯವಾಗಿ ಮೀಸ್ ಮಾಡಿಕೊಳ್ಳುತ್ತಲೇ ಇರುತ್ತೇವೆ.

ಹಳ್ಳಿಯಲ್ಲಿರುವಾಗ ಹಿಂದೆ ಇದು ಅಂಥ ಮಹತ್ವದ ವಿಷಯವಾಗಿರಲಿಲ್ಲ. ಅದು ಮತ್ತೊಂದು ದಿನ ಅಷ್ಟೇ. ನಮ್ಮ ಹೆತ್ತವರ ಕೆಲಸ ಕಷ್ಟ ಕಾರ್ಪಾಣ್ಯಗಳ ಜಂಜಾಟದಲ್ಲಿ ಅದು ಎಲ್ಲೂ ಕಳೆದು ಹೋಗಿಬಿಟ್ಟಿರುತ್ತಿತ್ತು. ನಮ್ಮ ಹಿರಿಯರೆಲ್ಲಾ ಸಾಮಾನ್ಯವಾಗಿ ಅನಕ್ಷರಸ್ಥರೆ ಹೆಚ್ಚಾಗಿ ಇದ್ದಾ ಕಾರಣ ಅದನ್ನು ಒಂದು ಕಡೆ ನೋಟ್ ಮಾಡಿಕೊಳ್ಳಬೇಕು ಎಂಬ ಅರಿವು ಇಲ್ಲದರಿಂದ ಅದು ಎಲ್ಲೂ ಸರಿಯಾಗಿ ದಾಖಲಾಗಿರುತಿರಲಿಲ್ಲ.

ಆದರೇ ಸ್ವಲ್ಪ ತಿಳಿದಿರುವವರು ಅದನ್ನು ಅಮವಾಸ್ಯೆ ಹುಣ್ಣಿಮೆ, ಹಬ್ಬ ಹರಿದಿನ ಹೀಗೆ ಅದರ ಹತ್ತಿರ ಅಥವಾ ಏನಾದರೂ ಒಂದು ಪ್ರಕೃತಿಯಲ್ಲಿ ಆ ವರ್ಷ ಘಟಿಸಿದ ಆಸುಪಾಸಿನ ದಿನಗಳನ್ನು ಹುಟ್ಟಿದ ನಮ್ಮಗಳ ದಿನವನ್ನು ನೆನಪು ಮಾಡಿಕೊಳ್ಳಲು ಬಳಸುತ್ತಿದ್ದರು. ಆದೇ ಅವರಿಗೆ ರೀಮೈಂಡರ್.

ನೋಡ ಬನ್ನಿ ನಾವುಗಳು ಎಷ್ಟೊಂದು ಬದಲಾಗಿರುವೆವು ಅಲ್ಲವಾ?

ನಮ್ಮ ಹುಟ್ಟಿದ ದಿನದಂದೂ ನಮಗೆ ಎಷ್ಟೊಂದು ಶುಭಾಶಯ ಕರೆಗಳು, ಎಸ್. ಎಂ.ಎಸ್ ಗಳು, ಫೇಸ್ ಬುಕ್ ಕಾಂಮೇಂಟುಗಳು. ಇಡೀ ನಮ್ಮ ಜೀವನವನ್ನೆ ಅಂಗೈಯಲ್ಲಿ ಕಾಣುವಂತಹ ಅನುಭವ. ನಾವುಗಳು ನಮ್ಮ ಹುಟ್ಟಿದ ದಿನವನ್ನು ನೆನಪಿನಲ್ಲಿ ಇಟ್ಟುಕೊಂಡಿರದಿದ್ದರೂ ನಮ್ಮ ಪ್ರೀತಿ ಪಾತ್ರರು, ಸ್ನೇಹಿತರುಗಳು ನಮಗೆ ಸಂಭ್ರಮದಿಂದ ಶುಭಾಶಯಗಳನ್ನು ಕೋರುತ್ತಾರೆ ಮತ್ತು ನೆನಪಿಸಿ ನಮ್ಮನ್ನು ಖುಷಿ ಮಾಡಿ ನಮ್ಮ ಭವ್ಯ ಮುಂದಿನ ಜೀವನ ಭ್ರೈಟ್ ಆಗಿರಲಿ ಎಂದು ಹರಸುತ್ತಾರೆ.

ಇದೇ ಅಲ್ಲವಾ ಖುಷಿಯ ಗಳಿಗೆಗಳು.

ಒಬ್ಬರೂಬ್ಬರನ್ನು ಪರಿಚಯ ಮಾಡಿಕೊಂಡು ಸ್ನೇಹಿತರಾದೇವು ಅಂದರೇ ನಾವುಗಳು ಮೊದಲು ತಿಳಿದುಕೊಳ್ಳುವುದು ಅವರ ಜನ್ಮ ದಿನವನ್ನು. ಜನ್ಮ ದಿನವನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಅವಶ್ಯಕತೆಯೇ ಇಲ್ಲ. ಜಸ್ಟ್ ಅದನ್ನು ಸೇಲ್ ಪೋನಿನ ರೀಮೈಂಡರ್ ನಲ್ಲಿ ಹಾಕಿ ಬಿಟ್ಟಾರಾಯಿತು. ಅದೇ ನಮ್ಮನ್ನು ಎಚ್ಚರಿಸುತ್ತದೆ. ಬಾಸ್ ನಿಮ್ಮ ಪ್ರೇಂಡ್ ಬರ್ತಡೇ ಇಂದು! ವಿಷ್ ಮಾಡೋ ಅಂತಾ.

ಫೇಸ್ ಬುಕ್, ಆರ್ಕುಟ್ ಇತ್ಯಾದಿ ಸೈಟ್ ಗಳನ್ನು ಒಪನ್ ಮಾಡಿದರೇ ಸಾಕು ಅಲ್ಲಿಯೋ ಸಹ ಅದೇ ನಿಮ್ಮನ್ನು ಅಲರ್ಟ್ ಮಾಡುತ್ತದೆ. ಸೋ ನೀವುಗಳು ಮರೆಯಲು ಕಾರಣವೇ ಇಲ್ಲ.




ಎಷ್ಟೊಂದು ಅನುಕೂಲ ಅಲ್ಲವಾ!

ನನಗೆ ಅನಿಸುತ್ತದೆ. ನಾವುಗಳೂ ಉಪಯೋಗಿಸುವ ಈ ಎಲ್ಲಾ ಉಪಕರಣಗಳು ನಮ್ಮ ಜೀವನವನ್ನು ಎಷ್ಟೊಂದು ತೀರ ಹತ್ತಿರದವರನ್ನಾಗಿ ಮಾಡಿಬಿಟ್ಟಿದೆ ಅಂತಾ! ಯಾವುದು ಅತಿ ಮುಖ್ಯ ಅದನ್ನು ಚಾಚು ತಪ್ಪದೇ ಆಚರಿಸುವಂತೆ ಮತ್ತು ಅಳವಡಿಸಿಕೊಳ್ಳುವಂತೆ ಮಾಡುತ್ತಿದೆ ಅಲ್ಲವಾ?

ನಾವುಗಳು ವಿಷ್ ಮಾಡುವುದರಲ್ಲೂ ಹೊಸ ಹೊಸತನವನ್ನು ತಂದುಕೊಳ್ಳುತ್ತಿದ್ದೇವೆ. ಅವರುಗಳಿಗೆ ನಾವುಗಳು ಕೊಡುವ ಉಡುಗರೆಗಳು.. ಅವುಗಳ ಆಯ್ಕೆ ಹೀಗೆ ತರಾವೇರಿ ಚಟುವಟಿಕೆಗಳು ನಿತ್ಯ ಜಾರಿಯಲ್ಲಿರುತ್ತವೆ.

ಗೆಳೆಯ ಗೆಳತಿಗೆ, ಗೆಳತಿ ಗೆಳೆಯನಿಗೆ ಹೀಗೆ ಪರಸ್ಪರರ ಶುಭಾಶಯಗಳ ಸರಣಿಯ ವೈವಿಧ್ಯಮಯವನ್ನು ನೋಡಿ ಆನಂದಿಸಬೇಕು. ಅಲ್ಲಿ ಏನೇನೋ ಕೋರಿಕೆಗಳು. ಶುಭಾಶಯಗಳು ನೆಪ ಮಾತ್ರವೇನೋ ಅನಿಸುತ್ತದೆ. ಪರಸ್ಪರರ ಮೆಚ್ಚಿಗೆಯನ್ನು ಗಳಿಸಲು ಇದು ಒಂದು ಕಾರಣವೇನೋ ಎನ್ನಿಸುವಷ್ಟರ ಮಟ್ಟಿಗೆ. ಇದು ನಮ್ಮ ನಗರ ಮಂದಿಯ ಬರ್ತಡೇ ಸೆಲೆಬ್ರೇಷ್ ನ್ ಶೈಲಿ ಬಿಡಿ.

ಆ ಒಂದು ದಿನ ಮಾತ್ರ ಅವನ/ಅವಳ ದಿನ! ಎಲ್ಲರಿಗೂ ಈ ಒಂದು ದಿನ ಇದ್ದೇ ಇರುತ್ತದೆ!

ನಮಗೆ ಗೊತ್ತಿರುವುದು ನಮ್ಮ ಹುಟ್ಟಿನಿಂದ ಗಾಂಧಿ ಜಯಂತಿ ಮಾತ್ರ.

ಆದರೇ ನಮ್ಮ ನಮ್ಮ ಸುತ್ತಲಿನವರ ನಮಗೆ ತಿಳಿದಿರುವವರ ನಿತ್ಯ ಜಯಂತಿಗಳು ಅಪಾರ. ಹೌದು! ಇದು ಬೇಕು ಅಲ್ಲಿ ಪರಸ್ಪರರನ್ನು ಬೆಸೆಯುವ ಮತ್ತು ಪರಸ್ಪರರನ್ನು ಅರಿಯುವ ಒಂದು ದಾರಿಯಿದೆ.

ನಮ್ಮಗಳ ಹುಟ್ಟಿದ ಹಬ್ಬದ ಆಚರಣೆ ಕೇವಲ ಹೆತ್ತವರಿಗಳಿಗೆ ಮತ್ತು ಕುಟುಂಬದವರಿಗೆ ಮಾತ್ರ ಸೀಮಿತವಾಗಿದ್ದುದು.. ಬರುತ್ತಾ ಬರುತ್ತಾ ಸ್ನೇಹ ಸಮೋಹದ ಮೊಲಕ ಹಲವು ಮಂದಿಗಳವರೆಗೆ ಹರಿಯುತ್ತಿದೆ. ಇದೇ ಅಲ್ಲವಾ ಜೀವನದ ವೇಗ!

ಇದು ನಿತ್ಯ ಜಾರಿಯಲ್ಲಿರಬೇಕು.. ಸಂತೋಷಪಡುವ ಕ್ಷಣಗಳು ನಿತ್ಯ ಹರಿಯುತ್ತಿರಲಿ.

ಮಂಗಳವಾರ, ಜುಲೈ 5, 2011

ಆ ನಿನ್ನ ಕಪ್ಪು ನೇರಳೆ ಬಣ್ಣದ ಕೂದಲ ಘಮ

ನಿನ್ನ ಕೂದಲ ಆ ಘಮ ಇಂದಿಗೂ ನನಗೆ ರೋಮಾಂಚನವನ್ನುಂಟು ಮಾಡುತ್ತಿದೆ.

ಲವ್ ಅಟ್ ಪಸ್ಟ ಸೈಟ್ ಅಂತಾ ಏನೇನೋ ಹೇಳಿದರೂ ನನಗೆ ನಿನ್ನನ್ನು ಮೊದಲು ಇಷ್ಟಪಟ್ಟಿದ್ದು ಆ ನಿನ್ನ ಕಪ್ಪನೆಯ ಕಪ್ಪು ಕೂದಲಿಗೆ ಅನಿಸುತ್ತಿರುತ್ತೇ.

ನೆನಪು ಇರಬಹುದು ಅಂದು ನಾನು ಹಾಗೆಯೇ ಮಾಮೋಲಿಯಾಗಿ ಆಫೀಸ್ ಗೆ ಹೋಗುವ ಬಸ್ಸಲ್ಲಿ ಕುಳಿತಿದ್ದಾಗ ಅವಸರ ಅವಸರವಾಗಿ ಬಸ್ ಮುಂದೆ ಹೋಗಲು ತಯಾರಿ ನಡೆಸುತ್ತಿದ್ದಾಗ ಏಕ್ ದಮ್ ಬಸ್ ನ್ನು ಹತ್ತಿ ಅಷ್ಟೇ ಪಾಸ್ಟ್ ಆಗಿ ಮುಂದಿನ ಕಾಲಿ ಸೀಟ್ ನಲ್ಲಿ ಕುಳಿತಾಗ ನಿನ್ನ ಮುಖವನ್ನು ಸರಿಯಾಗಿ ನೋಡಲಾಗಲಿಲ್ಲ.

ಆದರೆ ಆ ಮುಂಜಾನೆಯ ತಂಗಾಳಿಯ ಜೊತೆಯಲ್ಲಿ ನಿನ್ನ ಕೂದಲಿನಿಂದ ಬಂದಂತಹ ಆ ಒಂದು ಘಮ ನನ್ನನ್ನು ಹುಚ್ಚನನ್ನಾಗಿ ಮಾಡಿಬಿಟ್ಟಿತು.

ನಿನ್ನನ್ನು ಆ ಕ್ಷಣವೇ ಇಷ್ಟಪಟ್ಟುಬಿಟ್ಟೆ ಅನಿಸುತ್ತದೆ. ಹೇಗೆ ನಿನ್ನ ಆ ಒಂದು ಮುಗ್ಧ ಮುಖವನ್ನು ಹೇಗೆ ನೋಡಲಿ.. ಹೇಗೆ ನೋಡಲಿ.. ಎಂದು ಮನಸ್ಸು ತವಕಿಸುತ್ತಿತ್ತು.

ಯಾರಾಪ್ಪಾ ಈ ಹುಡುಗಿ ಹೊಸದಾಗಿ ನಮ್ಮ ಆಫೀಸ್ ಗೆ ಸೇರಿರುವ ಆಗಿದೆ.. ಇಷ್ಟು ದಿನ ನಾನು ನೋಡಿರುವ ಹಾಗೇ ಇಲ್ಲ ಎಂದು ನನ್ನ ಮನದ ತುಂಬ ನಿನ್ನ ಬಗ್ಗೆಯೇ ಯೋಚಿಸಿ ಯೋಚಿಸಿ ತಲ್ಲಣಿಸಿದೆ.

ನೀನು ಅಂದು ಹಸಿ ಹಸಿಯಾಗಿ ಕೂದಲಿಗೆ ಸ್ನಾನ ಮಾಡಿ ಕೂದಲನ್ನು ಸರಿಯಾಗಿ ಕಟ್ಟದೇ ಹಾಗೆಯೇ ಒಣಗಳು ಬಿಟ್ಟುಕೊಂಡು ಬಂದಿರುವುದು. ಆ ಮುಂಗರಳುಗಳು ಬಸ್ಸಿನ ಕಿಟಕಿಯಲ್ಲಿ ಬರುತ್ತಿರುವ ಗಾಳಿಗೆ ಹಾಗೆ ಹೀಗೆ ತೂಯ್ದಾಡುತ್ತಿದ್ದುದು. ನೀನು ಎನೇ ಮಾಡಿದರೂ ಹಿಂದಕ್ಕೆ ಮುಖ ತಿರುಗಿಸದೇ ಇದ್ದದ್ದು. ನನ್ನನ್ನು ಇನ್ನಷ್ಟು ಕುತೂಹಲಿಗನಾಗಿ ಮಾಡಿತು. ಇನ್ನೂ ಒಂದು ಘಂಟೆ ಕಾಯಬೇಕಲ್ಲಪ್ಪ ಈ ಹುಡುಗಿಯ ಮುಖ ಪರಿಚಯಕ್ಕೆ ಎಂದು ನನ್ನಲ್ಲಿ ನಾನೇ ತಾಳ್ಮೆಯನ್ನು ಕೂಟ್ಟುಕೊಂಡಿದ್ದೆ.

ಆ ಮೊದಲ ದಿನದ ಆ ನಿನ್ನ ಬೇಟಿ ಈ ನಿನ್ನ ಕೂದಲಿನಿಂದ ಆಯಿತು ಅಂದರೇ ಈಗಲೂ ನೀನು ನನ್ನನ್ನು ನೋಡಿ ಏನೂ ಹುಚ್ಚನಪ್ಪಾ ಅನ್ನುತಿರುತ್ತೀಯ. ಈ ಪ್ರೀತಿ ಅಂದರೇ ಒಂದು ಹುಚ್ಚೆ ಅಲ್ಲವಾ? ಇದಕ್ಕೆ ಮದ್ದು ಮುದ್ದು ಪ್ರೀತಿ ಮಾತ್ರವೇನೋ?

ಬಸ್ಸಿನಿಂದಲೂ ನೀನು ಮೊದಲು ಇಳಿದು ಮುಂದೆ ಮುಂದೆ ಅದೇ ನನ್ನ ಪಕ್ಕದ ಕ್ಯೂಬಿಕಲ್ ನಲ್ಲಿ ಕೂರುವ ಮಾನಸಿಯ ಜೊತೆಯಲ್ಲಿ ಹೋಗಿಬಿಟ್ಟೆ. ನಾನಂತೋ ನಿನ್ನನ್ನು ಸರಿಯಾಗಿ ನೋಡಲೇ ಆಗಲಿಲ್ಲ ಆ ದಿನ ಪೂರ್ತಿ.

ಊರಿಗೆ ಬಂದವಳು ನೀರಿಗೆ ಬರದೇ ಇರುತ್ತಾಳಾ ಎಂಬಂತೆ ಆ ದಿನ ಪೂರ್ತಿ ನಿನ್ನ ನೆನಪಲ್ಲಿಯೇ ಕಾದು ಕಾದು ನಿಟ್ಟುಸಿರುಬಿಟ್ಟಿದ್ದೆ ಬಂತು.

ಮಾರನೇಯ ದಿನ ಮುಂಜಾನೆ ನೀನೇ ಮೂದಲು ಬಸ್ ಗಾಗಿ ಕಾಯುತ್ತಾ ನಿಂತಿರುವುದು ಕಂಡು ತುಂಬ ಖುಷಿಯಾಯಿತು.




ನನಗೆ ಅನಿಸುತ್ತದೆ. ಸುಂದರವಾಗಿರುವ ಹುಡುಗಿಯರ ಕೂದಲು ಸುಂದರವಾಗಿರಲೇಬೇಕು. ನೀನು ನಿಜವಾಗಿಯೂ ಲಕ್ಷಣವಾದ ಗಂಭೀರವಾದ ಹುಡುಗಿಯೇ ಇರಬೇಕು ಎಂದು ನೆನ್ನೆ ನಿನ್ನ ಕೂದಲನ್ನು ಕಂಡಾಗ ಅನ್ನಿಸಿದ್ದು ಇಂದು ನಿಜವಾಗಿತ್ತು.

ಆದರೇ ಹೇಗೆ ನಿನ್ನ ಪರಿಚಯ ಮಾಡಿಕೊಳ್ಳುವುದು. ಮಾನಸಿಯನ್ನು ಕೇಳಿದರೇ ಅವಳಿಂದ ನಿನ್ನನ್ನು ಪರಿಚಯ ಮಾಡಿಕೊಳ್ಳಬಹುದಾಗಿತ್ತೇನು. ಆದರೇ ಅವಳನ್ನು ಕೇಳುವುದು ಮತ್ತೇ ಅವಳಿಗೋ ತರಾವೇರಿ ಕುತೂಹಲದ ಪ್ರಶ್ನೆಗಳು ಅವುಗಳಿಗೆ ನನ್ನ ಕೈಯಿಂದ ಉತ್ತರ ಕೂಡಲು ಸಾಧ್ಯವಿಲ್ಲವೇ ಇಲ್ಲ. ಆದರೂ ಅಂದು ಬಸ್ಸ್ ಬರುವವರೆಗೆ ನಿನ್ನ ನೋಡುತ್ತಾ ನೋಡುತ್ತಾ ನಿನ್ನ ಬಗ್ಗೆ ಏನೇನೋ ಕನಸನ್ನು ಕಂಡುಬಿಟ್ಟೆನೇನೋ? ಈಗ ನೆನಸಿಕೊಂಡರೇ ನಗು ಬರುತ್ತೇ.

ನೋಡಮ್ಮ ನಿಮ್ಮಂತಹ ಹುಡುಗಿಯರನ್ನು ಕಂಡು ಮೊದಲ ನೋಟಕ್ಕೆ ಹುಡುಗರು ಯಾವ ಲೇವಲ್ಲಿಗೆ ಹುಚ್ಚರಾಗುತ್ತಾರೆ ಅಂತಾ!

ನನಗೆ ಈಗಲೂ ಕುತೂಹಲ ಆ ದೇವರು ಹುಡುಗಿಯರನ್ನು ಸೃಷ್ಟಿ ಮಾಡಿ ಪ್ರಪಂಚದಲ್ಲಿ ಹುಡುಗರನ್ನು ಒಂದು ಮಟ್ಟಿಗೆ ಅದ್ದುಬಸ್ತಿನಲ್ಲಿ ಅಥಾವ ಒಂದು ಕಂಟ್ರೋಲ್ ನಲ್ಲಿ ಇಟ್ಟಿದ್ದಾನೇ ಏನೋ ಅಂಥ.

ಹುಡುಗರು ಹೇಳಿಕೊಳ್ಳೂತ್ತಾರೆ... ನಾನು ಪೂಲ್ ಬಿಂದಾಸ್.. ಏನಾದರೂ ಕೇರ್ ಮಾಡಲ್ಲ... ಇತ್ಯಾದಿ ಇತ್ಯಾದಿ. ಆದರೇ ತಾನು ಇಷ್ಟಪಟ್ಟ ಹುಡುಗಿಗೆ ತನ್ನ ಮನದ ಭಾವನೆಯನ್ನು ವ್ಯಕ್ತಪಡಿಸಲೂ ಪಡುವ ಕಷ್ಟವನ್ನು ನಿಜವಾಗಿಯೋ ಆ ದೇವರಿಗೂ ಪ್ರೀಯವಾಗುವುದಿಲ್ಲವೇನೋ.

ಮೊದಲ ಪರಿಚಯವನ್ನು ಮಾಡಿಕೊಳ್ಳಲು ನಾನು ಪಟ್ಟ ಕಷ್ಟ... ಅದು ಮೂರು ವಾರ ಇಡಿದಿರುಬೇಕು ಅಲ್ಲವಾ..

ಆ ದಿನ ಬಂದಿದ್ದು ದೇವರು ನಮ್ಮೀಬ್ಬರನ್ನು ನೋಡಿ ಇನ್ನೂ ಕಾಯಿಸಬಾರದು ಎಂದು ತಾನೇ ನಿರ್ಧರಿಸಿದಂತಾಗಿತ್ತು.

ಮಾನಸಿಯ ಗೈರು ಹಾಜರಿ ನನಗೆ ವರದಾನವಾಗಿತ್ತು. ಆದ್ದರಿಂದಲೇ ನೀನು ಅತ್ತಾ ಇತ್ತಾ ನೋಡುತ್ತಾ.. ಬೇಜಾರಾಗಿತ್ತೇನೋ.. ಅಂದು ಬಸ್ ಸಹ ಸರಿಯಾದ ವೇಳೆಗೆ ಬಂದಿರಲಿಲ್ಲ. ನಾನೊಬ್ಬನೇ ನಿಂತುಕೊಂಡು ನಿನ್ನನ್ನು ಬಸ್ಸ್ ಬರುವ ದಾರಿಯನ್ನು ನೋಡುತ್ತಿದ್ದೇ... ನೀನು "ರೀ ಬಸ್ ಎಷ್ಟೊತ್ತಿಗೆ ಬರುತ್ತೇ ಏನೋ ಗೊತ್ತಾ" ಆ ಮಾತೇ ಮುತ್ತು ಎನಿಸಿತ್ತು.

ನನಗೆ ಅನಿಸುತ್ತದೆ. ಸುಂದರವಾಗಿರುವ ಹುಡುಗಿಯರ ದ್ವನಿಯು ಸಹ ಕೇಳಲು ಕರ್ಣಾನಂದವಾಗಿರುತ್ತೇನೋ...

ಅಲ್ಲಿಂದ ಶುರುವಾಯಿತು ಅನಿಸುತ್ತದೆ ನನ್ನ ನಿನ್ನ ಮಾತುಕತೆ.. ನನಗೋ ವಿಪರೀತವಾದ ಸಂಕೋಚ.. ಅತಿಯಾಗಿ ಮಾತನಾಡಿದರೇ ಎಲ್ಲಿ ಈ ಹುಡುಗಿ ತಪ್ಪು ತಿಳಿದುಕೊಳ್ಳುವಳೋ ಅಂತಾ..

ಅಲ್ಲವಾ ಹುಡುಗಿಯರು ಹುಡುಗರ ಮನಸ್ಸನ್ನು ಮೊದಲ ನೋಟದಲ್ಲಿಯೇ ಅಳೆದುಬಿಡುತ್ತಾರೆ ಅಂಥ ನನ್ನ ಆ ಗೆಳೆಯ ಯಾವಾಗಲೂ ಹೇಳಿದ ನೆನಪು ಬೇರೆ. ಮತ್ತೇ ನಾನು ಸುಮ್ಮನೇ ಅತಿ ಮಾಡಿದರೇ ಇವಳಿಗೆ ಅನುಮಾನ ಬಂದುಬಿಟ್ಟು ಎಲ್ಲಾ ಕಟ್ ಮಾಡಿದರೇ ಏನೂ ಮಾಡುವುದು ಎಂಬ ಭಯ..

ಅದಕ್ಕಾಗಿಯೇ ಸತತ ಮೂರುವರೇ ತಿಂಗಳು ಎಷ್ಟು ಬೇಕು ಅಷ್ಟು ಕ್ಯಾಸ್ ವೆಲಾಗಿ ಮಾತನಾಡಿಸುತ್ತಿದ್ದು. ಹಾಗೆಯೇ ನಿನ್ನ ಬಗ್ಗೆ ನಿನ್ನ ಅಭಿರುಚಿಯ ಬಗ್ಗೆ, ನನ್ನ ಬಗ್ಗೆ ಸ್ವಲ್ಪ ಸ್ವಲ್ಪ ತಿಳಿದುಕೊಳ್ಳುತ್ತಾ ತಿಳಿಸುತ್ತಾ ನಿನಗೆ ಹತ್ತಿರವಾದೇ.. ಅಬ್ಬಾ ಎಷ್ಟೋಂದು ಕಷ್ಟ ಅಲ್ಲವಾ ಹೊಂದಿಕೊಳ್ಳುವುದು ಎಂಬುದು..

ನನಗೆ ಮೊದಲ ದಿನವೇ ನನ್ನ ಸಿಕ್ಸ್ ಸೇನ್ಸ್ ಹೇಳಿತ್ತು ಹುಡುಗಿಗೆ ಯಾರು ಬಾಯ್ ಪ್ರೇಂಡ್ ಇಲ್ಲ ಅಂಥ ಅದು ನಿಜವಾಗಿತ್ತು.

ನಾವು ಹುಡುಗರೋ ಚೆನ್ನಾಗಿರುವ ಹುಡುಗಿಯರುಗಳನ್ನು ಗುರುತಿಸುವುದು ನಿಲುಕದ ದ್ರಾಕ್ಷಿ ಅಂತಾ! ಅದರ ಕನಸು ಕಾಣಬೇಡ ಮಗಾ! ಎಂದು.

ಆದರೇ ನಿನ್ನ ಬಗ್ಗೆ ನನ್ನ ಅದೃಷ್ಟ ಸಿಕ್ಕಪಟ್ಟೆ ಚೆನ್ನಾಗಿತ್ತು ಅನಿಸುತ್ತೇ. "ಇಂದು ಸಂಜೆ ಕ್ಯಾಂಟೀನ್ ನಲ್ಲಿ ಬಂದು ಸಿಗುತ್ತಿರಾ ಕಾಫಿಗೆ.. ಮಾನಸಿ ಯಾಕೋ ಇಂದು ಬಂದಿಲ್ಲ... ನಾನು ಒಂಟಿ.. " ಎಂಬ ಮೇಸೆಜ್ ನೋಡಿದಾಗ ನಿಜವಾಗಿಯೋ ಎಷ್ಟೊಂದು ಆನಂದವಾಗಿತ್ತು ಎಂದರೇ ವರ್ಣಿಸಲೂ ಸಾಧ್ಯವಿಲ್ಲ ಬಿಡಿ!

ಎಲ್ಲಾ ಕೆಲಸಗಳನ್ನು ಬದಿಗೆ ಇಟ್ಟು ಅಂದು ಸಂಜೆ ನಿಮ್ಮನ್ನು ಬೇಟಿ ಮಾಡಲೇ ಬೇಕು ಎಂದು ನಿರ್ಧರಿಸಿದೆ... ಕ್ಯಾಂಟಿನ್ ಗೆ ನಿನ್ನ ಜೊತೆ ಬಂದರೇ ನನ್ನ ಗೆಳೆಯರೆಲ್ಲಾ ನನ್ನನ್ನೇ ನೋಡುತ್ತಿದ್ದಾರೆ ಎಂಬ ಭೀತಿ.. ನಿಜವಾಗಿಯೋ ಎಲ್ಲಾರ ಕಣ್ಣು ನನ್ನ ಮೇಲೆ ಅಂದು ಇತ್ತು ಅನಿಸುತ್ತಿದೆ... ಅದೇ ಮೊದಲ ಬೇಟಿ ಅನಿಸುತ್ತದೆ. ಅದು ಒಬ್ಬಳೇ ಹುಡುಗಿಯ ಜೊತೆ. ಅದು ಅಷ್ಟು ಹತ್ತಿರದಿಂದ ಮಾತನ್ನಾಡಿದ್ದು ಎಂಬುದು. ಅದು ಒಂದು ಮರೆಯಲಾರದ ಕ್ಷಣ...

ಆಮೇಲೆ ಒಮ್ಮೊಮ್ಮೆ ನೀನು ನನ್ನ ಜೊತೆಯಲ್ಲಿ ಕ್ಯಾಂಟಿನನಲ್ಲಿ ಸಿಗುತ್ತಿದ್ದುದು.. ಬಸ್ ನಲ್ಲಿ ನನ್ನ ಪಕ್ಕ ಒಮ್ಮೊಮ್ಮೆ ಕುಳಿತುಕೊಳ್ಳುತಿದ್ದದು.. ಮತ್ತು ಈ ನನ್ನ ಆಫೀಸ್ ಗೆಳೆಯರೋ ಆಗಲೇ ಏನಮ್ಮಾ ಲವ್ವಾ? ಎಂದು ಅಣಿಕಿಸುತ್ತಿದ್ದದು.. ಪರವಾಗಿಲ್ಲ ಒಳ್ಳೆಯ ಹುಡುಗಿಯನ್ನೇ ಹುಡುಕಿದಿಯಾ ಎಂದು ಹೇಳುವವರೂ.. ಅಯ್ಯೋ ನಾನು ನಿನಗೆ ಇನ್ನೂ ನನ್ನ ಮನದ ಭಾವನೆಯನ್ನೇ ಹೇಳಿ ಇಲ್ಲವಲ್ಲಾ ಎಂಬ ತವಕಾ...

ನನಗಂತೋ ಗೊತ್ತು ನಾನೇ ನನ್ನ ಮನಸ್ಸಿನ ನುಡಿಯನ್ನು ನಿನಗೆ ಮೊದಲು ತಿಳಿಸಬೇಕು ಎಂದು. ಆದರೇ ಹೇಗೆ ತಿಳಿಸುವುದು.. ಅದಕ್ಕೆ ನಿನ್ನ ಪ್ರತಿಕ್ರಿಯೆ ಹೇಗೆ.. ಹೀಗೆ ಯೋಚಿಸಿ ಯೋಚಿಸಿ ರಾತ್ರಿಯೆಲ್ಲಾ ನಿದ್ರೆಯೇ ಬರದಾಂತಾಗಿತ್ತು.

ಆದರೋ ಆ ದಿನ ನಿರ್ಧರಿಸಿದ್ದೇ.. ಹೇಳೆ ಬಿಡಬೇಕು ಎಂದು..

ಅಂದು ನೀನು ಆ ಹಸಿರು ಚೋಡಿದಾರದಲ್ಲಿ ಕಾಣಿಸಿಕೊಂಡಿದ್ದು.. ಗಾಳಿಯಲ್ಲಿ ತೂಯ್ದಾಡುತ್ತಿದ್ದ ಆ ನಿನ್ನ ನವೀರಾದ ಕೂದಲುಗಳು.. ಮುಖದಲ್ಲಿರುವ ಆ ನಿನ್ನ ಕಿರು ನಗೆ ಹೀಗೆ ಹತ್ತು ಹಲವು ಕಾರಣಗಳು.. ನನ್ನ ಮನದಲ್ಲಿ ನಿರ್ಧರಿಸದ ಆ ಮಾತಿಗೆ ಸ್ವಾಗತವನ್ನು ಕೋರುತ್ತಿವೆ ಅನಿಸಿತು..

ನಾನು ಹೇಳಿದ ಮಾತಿಗೆ ನಿನ್ನ ಮೌನ ಮತ್ತು ಯೋಚಿಸುತ್ತಿದ್ದಾ ರೀತಿ ಈ ಹುಡುಗಿ ಮೊದಲೇ ನನ್ನ ಬಗ್ಗೆ ಒಂದು ನಿರ್ಧರಕ್ಕೆ ಬಂದಿರುವಂತಿದೆ ಅನಿಸಿಬಿಟ್ಟಿತು..

ಆಮೇಲಿನದ್ದೂ ಎಲ್ಲಾ ಒಂದು ಸುಂದರ ಕನಸು ಅಲ್ಲವಾ!

ಆದರೇ ಆ ನಿನ್ನ ಮೊದಲ ದಿನದ ಕಪ್ಪು ನೇರಳೆ ಬಣ್ಣದ ಕೂದಲ ಘಮದ ಘಮ ಇನ್ನೂ ಇಲ್ಲಿಯೇ ನನ್ನ ಸುತ್ತ ಸುತ್ತುತ್ತಲಿದೆ!!

ಶುಕ್ರವಾರ, ಜುಲೈ 1, 2011

ಯಾವ ಓಭಿರಾಯನ ಕಾಲದಲ್ಲಿ ಇದ್ದೀಯಾ ಮಗಾ...

ನಾವುಗಳು ಏನೋ ಮಾಡಲು ಹೋಗಿ ಇನ್ನೇನೋ ಆಗಿಬಿಟ್ಟಿರುತ್ತದೆ. ಆ ಸಮಯಕ್ಕೆ ನಮಗೆ ಒಂದು ನಿರಾಶೆಯ ಫಲವೆ ಗತಿಯಾಗಿರುತ್ತದೆ. ಆ ಒಂದು ಪ್ರಯತ್ನವನ್ನು ಮಾಡುವ ಮೊದಲು ಇದ್ದಂತಹ ಉತ್ಸಾಹವನ್ನು ಪಲಿತಾಂಶ ತಣ್ಣಗೆ ಮಾಡಿರುತ್ತದೆ. ಹಾಗಂತಹ ನಾವುಗಳು ಪ್ರಯತ್ನಪಡುವುದನ್ನು ಎಂದಿಗೂ ಬಿಡಲಾಗುವುದಿಲ್ಲ. ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು ಎಂಬ ನಾಣ್ಣುಡಿಯಂತೆ ಪುನಃ ಹೊಸ ಉತ್ಸಾಹದೊಂದಿಗೆ ಹೊಸ ಹೊಸ ಹೆಜ್ಜೆಯಗಳನ್ನು ಹಾಕಿರುತ್ತೇವೆ.

ಇಲ್ಲವಾದರೇ ಬದುಕು ಎಂದೋ ನಿಂತ ನೀರಾಗಿರುತ್ತಿತ್ತು ಮತ್ತು ನೀರಾಸವಾಗಿಬಿಡುತ್ತಿತ್ತು. ಈ ಒಂದು ಪದ್ಧತಿ ಅಥವಾ ಗುಣ ನಮ್ಮ ಚಿಕ್ಕ ಮಕ್ಕಳ ದಿನಗಳಿಂದಲೇ ನಮಗೆ ಸಾಮಾನ್ಯವಾಗಿ ಬಳುವಳಿಯಾಗಿ ಬಂದುಬಿಟ್ಟಿದೆ. ಚಿಕ್ಕವರಾಗಿದ್ದಾಗ ಒಂದೊಂದೆ ಹೆಜ್ಜೆಯನ್ನು ಇಡುತ್ತಾ ಇಡುತ್ತಾ ಏಳುತ್ತಾ ಬಿಳುತ್ತಾ ಪುನಃ ಪುನಃ ನಾನು ನಡೆದಾಡಲೇಬೇಕು ಎಂಬ ಮನೋಭಾವದ ಕಿಚ್ಚನ್ನು ಹಚ್ಚ ಹಸಿರಾಗಿಟ್ಟುಕೊಂಡು ನಮ್ಮ ಕಾಲ ಮೇಲೆ ನಾವುಗಳು ನಡೆದಾಡಿದಾಗ ಸಿಗುವ ಆನಂದವನ್ನು ನೋಡಬೇಕು.

ಮನಗೆ ಹೊಸಬರು ಯಾರೂ ಬಂದರೂ ಹಾಗೆ ಸುಮ್ಮನೆ ನಾಲ್ಕಾರು ಹೆಜ್ಜೆಗಳನ್ನು ಹಾಕಿ ಅವರ ಮುಂದೆ ಪ್ರದರ್ಶಿಸುವ ಉಮ್ಮೇದು. ಅವರ ಪ್ರಶಂಸೆಯ ಮಾತಿಗೆ ಬಾಯ್ ತುಂಬ ನಗೆಯೋ ನಗೆ. ಅಲ್ಲಿಂದಲೇ ಶುರುವಾಗಿರಬೇಕು. ಇದು!

ಪ್ರತಿಯೊಂದು ಸಾಧನೆಗೋ ಹತ್ತು ಹಲವಾರು ಅಡಚಣೆಗಳ ಮಹಾಪೂರವೇ ನಮ್ಮ ಮುಂದೆ ಇರುತ್ತದೆ. ಸಾಧನೆಯ ಹಾದಿಯಲ್ಲಿ ಸಾಗುವಾಗ ಹಲವಾರು ಬಾರಿ ಮುಗ್ಗರಿಸುವುದು ಸಾಮಾನ್ಯ. ಸಾಧನೆಯನ್ನು ಸಾಧಿಸಿದಾಗ ನಮ್ಮ ಸುತ್ತಲಿನವರಿಂದ ಸಿಗುವ ಪ್ರಶಂಸೆಗೆ ನಮ್ಮ ಮನ ನಲಿದಾಡುವುದು ಮತ್ತು ಒಂದು ಎರಡು ಅಡಿ ಮೆಲಕ್ಕೆ ಹೋಗಿರುತ್ತೇವೆ!

ಮೊದಲು ಮಾತನಾಡಲು ಶುರುಮಾಡಿದಾಗ ತೊದಲು ನುಡಿಯಿಂದ ಹೆತ್ತವರನ್ನು ಕರೆದಾಗ ಅವರ ಆನಂದ ನಮ್ಮನ್ನು ಪುನಃ ಪುನಃ ಅದನ್ನೇ ಮಾಡುವಂತೆ ಮಾಡಿರುತ್ತದೆ. ಮೊದಲ ಅಕ್ಷರವನ್ನು ಕಲಿತಾಗ ನಾವು ಮುಂದೆ ಇನ್ನೂ ಏನೇನೋ ಆಗಿಬಿಡುವೆವು ಎಂಬ ದೊರದ ನೋಟವನ್ನೇ ಕಂಡಿರುತ್ತೇವೆ. ಹೀಗೆ ಬದುಕಿನ ದಾರಿಯಲ್ಲಿ ಚಿಕ್ಕ ಚಿಕ್ಕ ಆಸೆಗಳನ್ನು ದಕ್ಕಿಸಿಕೊಂಡಾಗ ಮನಸ್ಸಿನಲ್ಲಿನ ಮನೋಸ್ಥೈರ್ಯ ಇನ್ನೂ ಇನ್ನೂ ಹೆಚ್ಚು ಬಲಿಷ್ಠವಾಗುತ್ತಾ ಹೋಗುತ್ತದೆ.

ಇದನ್ನೇ ಜೀವನದ ಅನುಭವ ಎಂದು ಕರೆಯುತ್ತೇವೇನೋ ಅಲ್ಲವಾ? ಚಿಕ್ಕ ಚಿಕ್ಕ ಅಡಚಣೆಗಳ ಜೊತೆ ಹೋರಾಡಿದ ಮನಸ್ಸು ದೊಡ್ಡ ಚಾಲೆಂಜ್ ಗಳಿಗೆ ಮುಖ ಮಾಡಿ ನಿಲ್ಲುತ್ತದೆ. ವ್ಯಕ್ತಿ ಬೆಳೆದಂತೆ ಅವನ ಸಾಧನೆಯ ಮೀತಿಗಳು ಬೆಳೆದಿರುತ್ತವೆ. ಅವುಗಳಿಗೆ ತಕ್ಕ ಹಾಗೆಯೇ ಅಲ್ಲಿ ಸಿಗುವ ನೋವು ನಲಿವು, ಅಪಮಾನ, ಕಷ್ಟ, ನಿರಾಶೆ ಇತ್ಯಾದಿ ಸಹಜವಾಗಿಯೇ ದುತ್ತನೇ ನಮ್ಮ ಮುಂದೆ ನಿಂತಿರುತ್ತವೆ.



ಸೋಲೆ ಗೆಲುವಿನ ಸೋಪಾನ ಎನ್ನುವ ಮಾಮೋಲಿ ಮಾತು ಒಮ್ಮೊಮ್ಮೆ ನಾವು ಸೋತಾಗ ನೆಮ್ಮದಿಯ ಸಂತೈಸುವಿಕೆಯ ಒಂದು ಎಳೆಯನ್ನು ಮನದ ಮೂಲೆಯಲ್ಲಿ ಕೊಡುತ್ತದೆ. ಮುಂದಿನ ದಿನಗಳಲ್ಲಿ ಸರಿಯಾದ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸಲು ಒಂದು ಟಾನಿಕ್ ಆಗುತ್ತದೆ.

ವ್ಯಕ್ತಿ ತನ್ನ ಸುತ್ತಲು ಇರುವವರ ಜೊತೆಯಲ್ಲಿ ಸಾಗುತ್ತ ಸಾಗುತ್ತ ಅವರ ಅನುಭವಗಳು ಅವರ ಸಾಧನೆ, ಕೆಲಸಗಳು, ಅವರ ನಿದರ್ಶನಗಳು ಹೀಗೆ ಎಲ್ಲವನ್ನು ತಾನು ಹಿಡಿದಿರುವ ಗುರಿಯನ್ನು ಸಾಧಿಸಲು ನೆರವು ಮಾಡಿಕೊಳ್ಳಲು ಅವಣಿಸುತ್ತಾನೆ. ಅದು ಅವನ ಬುದ್ಧಿವಂತಿಕೆಗೆ ದ್ಯೋತಕ.

ಎಲ್ಲವನ್ನು ಅನುಭವಿಸಿಯೇ ನಾವುಗಳು ತಿಳಿಯಬೇಕಿಲ್ಲ. ಪರರಿಂದಲೂ, ಓದುವುದರಿಂದಲೂ, ನೋಡುವುದದರಿಂದಲೂ, ಕೇಳುವುದರಿಂದಲೂ ತನ್ನವನ್ನಾಗಿ ಮಾಡಿಕೊಂಡು ಇನ್ನೂ ಸಮರ್ಥವಾಗಿ ಹೋರಾಡಬಹುದು.

ಆದರೋ ಇಂದಿನ ಈ ದಿನ ಮಾನದಲ್ಲಿ ವ್ಯಕ್ತಿಯ ನಡೆ ಯಾವ ಕಡೆ ಸಾಗುತ್ತಿದೆ ಎಂದರೇ ಏನಾದರೋ ಆಗಲಿ ಮಗಾ! ನಾನು ಹೀಗೆ ಆಗಬೇಕು ಮತ್ತು ಅದು ಅತಿ ಕಡಿಮೆ ಸಮಯದಲ್ಲಿ.. ಅತಿ ಕಡಿಮೆ ಪರಿಶ್ರಮದಲ್ಲಿ..

ಹೀಗೆ ತನಗೆ ಬೇಕು ಅನಿಸಿದ್ದನ್ನು ತಲೆ ಮೇಲೆ ಕೆಳಗಾದರೂ ಜಯಿಸಬೇಕು ಎಂಬ ಮೋಂಡುತನಕ್ಕೆ ದಾರಿ ಮಾಡಿಕೊಡುತ್ತಿದೆ. ಇದಕ್ಕೆ ಕಾರಣ ಇಂದಿನ ನಮ್ಮ ಸ್ಪರ್ಧಾ ಪ್ರಪಂಚ.. ಇಲ್ಲಿ ಸಮಯವೇ ಫಲ ಎನ್ನುವಂತಾಗಿದೆ. ಸಮಯವೇ ಹಣ ಎಂದು ಎಂದೋ ನಿರೂಪಿತವಾಗಿದೆ. ಯಾರು ಯಾರನ್ನು ಕಾಯಲಾರೇವು ಎನ್ನುವಂತಾಗಿದೆ.

ಮನುಷ್ಯನ ಒಳ್ಳೆತನ, ಮಾನವೀಯತೆಗೆ ಕಡೆವೆ ಕಾಸಿನ ಕಿಮ್ಮತ್ತು ಈ ನಮ್ಮ ಯಾಂತ್ರಿಕ ಲೋಕದಲ್ಲಿ ಸಿಗಲಾರದಂತಾಗಿದೆ ಎನ್ನುವುದು ಪ್ರತಿಯೊಬ್ಬರೂ ಗುರುತಿಸುತ್ತಿದ್ದಾರೆ. ಇಷ್ಟಪಟ್ಟಿದ್ದು ಏನಾದರೂ ನನಗೆ ಮಾತ್ರ ದಕ್ಕ ಬೇಕು ಅದು ಬೇರೊಬ್ಬರಿಗೆ ಸಿಗಲೇ ಬಾರದು ಎನ್ನುವಂತಾಗಿದೆ.

ಇದಕ್ಕೆ ಇರಬೇಕು ಇಂದು ಮಗು ತಾನು ಚಿಕ್ಕಂದಿನಲ್ಲಿರುವಾಗಲೇ ಅದು ತನ್ನ ಸುತ್ತಲಿನವರೆ ಜೊತೆ ಪ್ರೀತಿ, ಪ್ರೇಮದಿಂದ, ಸ್ನೇಹ ಸಹ ಬಾಳ್ವೆಯನ್ನು ಕಲಿಯುವುದಕ್ಕಿಂತ ಹೆಚ್ಚು ನಾನು ನನ್ನ ಜೊತೆಗಾರನಿಗಿಂತಹ ಹೇಗೆ ಹೆಚ್ಚು ಹೆಚ್ಚು ಅಂಕಗಳನ್ನು ಗಳಿಸಬೇಕು.. ಅವನಿಗಿಂತಹ ಮುಂದೆ ಹೇಗೆ ಹೋಗಬೇಕು ಎಂಬ ನೀತಿಯನ್ನು ಕಡ್ಡಾಯವಾಗಿ ಕಲಿಯಲೇಬೇಕಾದಂತಹ ವಾತಾವರಣವನ್ನು ನಾವುಗಳು ನಿರ್ಮಿಸಿ ಅದೇ ಅದರ ಉಸಿರಾಗುವಂತೆ ಮಾಡುತ್ತಿದ್ದೇವೆ ಎನಿಸುತ್ತದೆ.

ಅದಕ್ಕೆ ಇಂದಿನ ಜನಗಳು ಬೆಳೆದಂತೆ ಬೆಳೆದಂತೆ ತಮ್ಮ ತಾಳ್ಮೆಯನ್ನೇ ಕಳೆದುಕೊಂಡುಬಿಟ್ಟಿದ್ದಾರೇನೋ ಎಂಬ ರೀತಿಯಲ್ಲಿ ಜನ ಸಮೋಹ ಇರುವಲ್ಲಿ ಅವರುಗಳ ವರ್ತನೆಯನ್ನು ಗಮನಿಸಿದರೇ ತಿಳಿಯುವುದು. ಈ ಪೈಪೊಟಿ ಯುಗದಲ್ಲಿ ಸತ್ಯಸಂದರಾಗಿದ್ದರೇ ನೆಲೆಯೇ ಇಲ್ಲಾ ಗುರು ಎಂಬ ಮಾತುಗಳೇ ನಾಣ್ಣುಡಿಗಳಾಗುವ ದಿನಗಳು ದೂರವಿಲ್ಲ.

ಯಾರಾದರೂ ಅಪರೂಪಕ್ಕೆ ಸ್ವಲ್ಪ ಆದರ್ಶದ ನುಡಿಗಳನ್ನು ಹೇಳಿಬಿಟ್ಟರೇ ಸಾಕು.. ಓ ಬಂದಾ ನೋಡಿ ಮರಿ ಗಾಂಧಿ! ಎಂಬ ಮಾತುಗಳು...

ನೀ ಈ ಯುಗದಲ್ಲಿ ಇರಬಾರದಗಿತ್ತು.. ಈ ಯುಗಕ್ಕೆ ನೀ ಸೂಟ್ ಆಗಲ್ಲ ಬಿಡು.. ಯಾವ ಓಭಿರಾಯನ ಕಾಲದಲ್ಲಿ ಇದ್ದೀಯಾ ಮಗಾ ಬದಲಾಗು.. ಹೀಗೆ ಆದರೇ ಏನೂ ಸಾಧಿಸಲಾಗುವುದಿಲ್ಲಾ.. ಈ ರೀತಿಯ ನುಡಿಗಳು ಸಾಮಾನ್ಯವಾಗಿ ನಮ್ಮ ನೆರೆಹೊರೆಯವರಿಂದ ನಿತ್ಯ ಸುಪ್ರಭಾತ.

ಅದರೋ ಅಷ್ಟೊಂದು ನಿರಾಶರಾಗುವ ಮಟ್ಟಿಗೆ ನಮ್ಮ ಬದುಕು, ಈ ಪ್ರಪಂಚ ಕೆಟ್ಟಿಲ್ಲ. ಅಂತಾ ಅನಿಸುವುದಿಲ್ಲವಾ?

ಆದರೇ ಎಲ್ಲರೂ ಈ ದೆಸೆಯಲ್ಲಿ ಯೋಚಿಸುವಂತಾಗಬೇಕು. ಆಹ್ಲಾದಕಾರವಾದ ಸ್ಪರ್ಧೆ, ಹೋರಾಟ, ಸ್ನೇಹ ಪರ ಚಿಂತನೆಯನ್ನು ಎಲ್ಲಾರಲ್ಲೂ ಒಡಮೂಡುವಂತಾಗುವಂತೆ ಮಾಡುವುದು ಇಂದಿನ ಸಮಾಜದ ಗುರುತರ ಹೊಣೆ.

ಮನೆಯೇ ಮೊದಲ ಪಾಠಶಾಲೆ ಎಂಬಂತೆ ಪ್ರತಿ ಮನೆಗಳಿಂದ ಇದು ಪ್ರಾರಂಭವಾಗಲಿ ಎಂದು ಆಶಿಸೋಣವೇ?