ಶನಿವಾರ, ಡಿಸೆಂಬರ್ 10, 2016

ಪ್ರಬುದ್ಧ ನ್ಯೂಸ್ ಪತ್ರಿಕೆಗೆ ಒಂದು ವರುಷ ತುಂಬುತ್ತಿದೆ....

ಪತ್ರಿಕೆಯ ಬಳಗಕ್ಕೆ ಹೊಸ ವರುಷದ ಮತ್ತು ಪತ್ರಿಕೆಯ ಹುಟ್ಟುಹಬ್ಬದ ಶುಭಾಶಯಗಳು!

ಪ್ರಬುದ್ಧ ನ್ಯೂಸ್ ಮಾಸ ಪತ್ರಿಕೆಗೆ ಇಂದಿಗೆ ಒಂದು ವರುಷ ತುಂಬುತ್ತಿದೆ.

ಚಿತ್ರದುರ್ಗದಿಂದ ಪ್ರತಿ ತಿಂಗಳು ಐದನೇ ತಾರೀಕು ವೈವಿಧ್ಯಮಯವಾದ ವಸ್ತು ವಿಷಯ ಬರಹಗಳೊಂದಿಗೆ ಓದುಗರ ಕೈಗೆ ಸಿಗುತ್ತಾ.. ಒಂದೇ ಗುಕ್ಕಿಗೆ ಎಲ್ಲಾ ಲೇಖನಗಳನ್ನು ಓದಿಸುವಂತೆ ಮಾಡುತ್ತದೆ.

ಹೊಸ ಪತ್ರಿಕೆಗಳನ್ನು ಶುರು ಮಾಡುವುದು ಮತ್ತು ಅದನ್ನು ಉತ್ತಮವಾಗಿ ಸತತವಾಗಿ ನಡೆಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ!

ಇಂದು ಎಲ್ಲಾದರಲ್ಲೂ ಸ್ಪರ್ಧೆ. ಸ್ಪರ್ಧೆಯಲ್ಲಿ ನಿರಂತರವಾಗಿ ಹೆಚ್ಚು ಶಕ್ತವಾಗಿ ಓಡಬೇಕು. ಇಲ್ಲವೆಂದರೇ ತನ್ನಷ್ಟಕ್ಕೆ ತಾನೇ ಸೋಲನ್ನು ಒಪ್ಪಿಕೊಂಡಂತೆ.

ಯಾವುದೇ ರಂಗದಲ್ಲೂ  ನಾವು ಜಯ ಶಾಲಿಯಾಗಬೇಕೆಂದರೇ, ತಾನು ಸ್ವಲ್ಪ ವಿಭಿನ್ನವಾಗಿರಬೇಕು. ಬೇರೆಯವರಿಗಿಂತ ಮುಂದಿದ್ದರೇ ಮಾತ್ರ ಗೆಲವು.  ಈ ರೀತಿಯ ಹೊಸ ಚಿಂತನೆಯೊಂದಿಗೆ ಸಮಾನ ಮನಸ್ಕ ಗೆಳೆಯರೊಂದಿಗೆ  ಜನವರಿ ೨೦೧೬ ರಿಂದ ಪ್ರಾರಂಭವಾದ ಪ್ರಬುದ್ಧ ನ್ಯೂಸ್ ಪತ್ರಿಕೆಯಿದು.

ಪ್ರಬುದ್ಧ ನ್ಯೂಸ್ ಈಗ ಮನೆ ಮಾತಾಗಿದೆ ಎಂದರೇ ಪತ್ರಿಕೆಯನ್ನು ನಡೆಸುತ್ತಿರುವವರ ಮನಸ್ಸು ನಿತ್ಯ ಹೊಚ್ಚ ಹೊಸತನದಿಂದ ಕೊಡಿದೆ ಎಂದರ್ಥ!

ಮೊದಲ ಸಂಚಿಕೆಯಿಂದ ಈ ವರುಷದ ಕೊನೆಯ ಸಂಚಿಕೆಯವರೆಗೂ ಸುದ್ಧಿ, ಲೇಖನಗಳು, ಅಂಕಣಗಳು, ಪತ್ರಿಕೆಯ ಕ್ವಾಲಿಟಿ, ಮುಖಪುಟ ವಿನ್ಯಾಸ ಹೀಗೆ ಪ್ರತಿಯೊಂದರಲ್ಲೂ ಪ್ರಬುದ್ಧತೆಯನ್ನು ಮೆರೆದಿದೆ.  ಹೆಸರಿಗೆ ತಕ್ಕಂತೆ ಪತ್ರಿಕೆ ಯಾವಾಗಲೂ ತನ್ನ ಪ್ರಬುದ್ಧಮಾನತೆಯನ್ನು ಪಸರಿಸಿದೆ.

ಇದು ಹೊಸ ಪತ್ರಿಕೆಯೆಂಬುದನ್ನೇ ನಂಬಂತಾಗಿದೆ. ಇಂದು ಹಾಗೆ ಹೇಳುವ ಆಗಿಲ್ಲ! ಈಗ ಮೊದಲನೇ ವರುಷದ ಹುಟ್ಟು ಹಬ್ಬ.

ಹೌದು! ಪ್ರೀತಿಪಟ್ಟು ರೂಪಿಸಿದ ಪತ್ರಿಕೆಯಾದ್ದರಿಂದ ಓದುಗನಿಗೆ ಎಂದಿಗೂ ಇದು ಹೊಸ ಪತ್ರಿಕೆಯೆಂದು ಎನಿಸಿಲ್ಲ.

ಪತ್ರಿಕೆಯಲ್ಲಿ ಬರುತ್ತಿರುವ ಲೇಖನಗಳು, ವಿಷಯಗಳ ಆಯ್ಕೆಯಿಂದ ಓದುಗ ದೊರೆಗೆ ಓದಿನ ಮೃಷ್ಟಾನ್ನವನ್ನೆ ನೀಡಿದೆ. ವಾರ ವಾರ ಕೈಗೆ ಸಿಗುವಂತ್ತಾಗಿದ್ದರೇ ಎಷ್ಟು ಚೆನ್ನಾ ..! ಎಂಬ ಭಾವನೆಯನ್ನು ಹುಟ್ಟುಹಾಕಿದೆ.

ಪತ್ರಿಕೆಯ ಪ್ರತಿ ಬರಹಗಳಲ್ಲೂ ಪ್ರಾರಂಭದಿಂದ ಇಂದಿನವರೆಗೂ ಅದೇ ಬಿಗಿ ಹಿಡಿತವಿದೆ.

ವೈವಿಧ್ಯಮಯ ಬರಹಗಳಿಂದ ಕಾದು ಓದುವಂತೆ ಮಾಡಿರುವ ಪುಟಗಳೆಂದರೇ: ಸಂಪಾದಕೀಯ ಪುಟ, ಮುಖಪುಟ ಲೇಖನ, ವ್ಯಕ್ತಿತ್ವ ವಿಕಸನ , ಕಾಲನಿರ್ಣಯ, ಮನದಾಳದ ಮಾತು ಅಂಕಣ.. ಇತ್ಯಾದಿ.

ಸಂಪಾದಕೀಯ ಪುಟ - ಖುದ್ದು ಪ್ರಧಾನ ಸಂಪಾದಕರೇ ಬರೆಯುವ ಸಂಪಾದಕೀಯ ಪುಟ ನಿಜವಾಗಿಯೂ ಸಂಗ್ರಾಹಯೋಗ್ಯವಾದದ್ದು. ತಿಪ್ಪೇಸ್ವಾಮಿಯವರ ಭಾಷ ಪ್ರೌಡಿಮೆ ಮತ್ತು ವಿಷಯ ಸಂಗ್ರಾಹಣೆಯ ಪರಿಶ್ರಮವನ್ನು ಇದರಲ್ಲಿ ಗುರುತಿಸಬಹುದು. ದೇಶ-ರಾಜ್ಯದಲ್ಲಿ ಆ ಮಾಸದಲ್ಲಿ ಮಾಸದಂತೆ ಉಳಿದ ಸುದ್ಧಿಯ-ಘಟನೆಯ ಸುತ್ತಾ ತಮ್ಮದೇಯಾದ ಶೈಲಿಯಲ್ಲಿ ವಿಷಯ ವಿಸ್ತಾರವನ್ನು ವಿಶ್ಲೇಷಕ ಚಿಂತನೆಯಲ್ಲಿ ಚಿತ್ರಿಸುವುದು. ಘಟನೆಯ ನೈಜತೆಯನ್ನು ಮನನ ಮಾಡುತ್ತ ಆದರ ಆಗುಹೋಗುಗಳನ್ನು ಬೇರೆ ರೀತಿಯಲ್ಲಿ ಓದುಗರಿಗೆ ತಿಳಿಸುತ್ತಾರೆ. ಸಂಪಾದಕೀಯ ಪುಟ ಇಡೀ ಪತ್ರಿಕೆಗೆ ಮುಕುಟಪ್ರಾಯವಾದದ್ದು ಎಂದರೇ ತಪ್ಪಲ್ಲ!

ನಾನು ಇಷ್ಟಪಟ್ಟು ಮೊದಲು ಓದುವ ಪುಟವೆಂದರೇ ಪತ್ರಿಕೆಯ ಈ ಮೊರನೇಯ ಪುಟ.  ತಿಪ್ಪೇಸ್ವಾಮಿಯವರ ಬರಹದ ದುಡಿಮೆ ಹೀಗೆ ಸಾಗಲಿ ಎನ್ನುವುದೇ ನಮ್ಮಗಳ ಆಶಯ.

ಕಾಲನಿರ್ಣಯ..? - ಜಿತೇಂದ್ರರ ರಾಜಕೀಯ ಕಾಲಂ. ಕರ್ನಾಟಕದಲ್ಲಿ ಜರುಗುವ ರಾಜಕೀಯ ಹೆಜ್ಜೆಗಳನ್ನು ತಮ್ಮದೇಯಾದ ರಾಜಕೀಯ ವಿಶ್ಲೇಷಣೆಯೊಂದಿಗೆ ಅತ್ಯಂತ ಚೂಕ್ಕವಾಗಿ ಚಿತ್ರಿಸುವ ಲೇಖನ. ಇದುವರೆಗೆ ಬಂದಿರುವ ಅವರ ಎಲ್ಲಾ ಲೇಖನಗಳು ತುಂಬ ಸೂಗಸಾಗಿವೆ. ರಾಜಕೀಯವೆಂದರೇ ಮೂಗು ಮುರಿಯುವರು ಸಹ ಕುತೂಹಲದಿಂದ ಓದುವಂತೆ ಮಾಡುತ್ತದೆ. ಯಾಕೋ ಕಳೆದ ಮೂರು ತಿಂಗಳಿಂದ ಈ ಕಾಲಂ ನಿಂತುಹೋಗಿರುವುದು ಬೇಸರದ ಸಂಗತಿ. ಈ ಕಾಲಂ ಪುನಃ  ಪ್ರಾರಂಭವಾಗಲಿ ಎಂಬುದು ಈ ಓದುಗನ ಆಸೆ.

ವ್ಯಕ್ತಿವಿಕಸನ ಕಾಲಂ 'ಸಾವಿರ ಸೋಲುಗಳನ್ನು ಮೆಟ್ಟಿ ನಿಲ್ಲು'  -ಸಿದ್ದಲಿಂಗಪ್ಪನವರ ಕಾಲಂ. ಇದು ಪ್ರತಿಯೊಬ್ಬರಿಗೂ ಮಾರ್ಗದರ್ಶಿ ಬರಹಗಳ ಗೊಂಚಲು. ಸೋತ ಮನಸ್ಸುಗಳಿಗೆ ಸಂಜೀವಿನಿ! ಚಿಕ್ಕ ಚಿಕ್ಕ ಕಥೆಗಳ ಮೊಲಕ ಜೀವನವನ್ನು ಹೇಗೆ ಎದುರಿಸಬಹುದು ಎಂಬುದನ್ನು ತಿಳಿಸುತ್ತದೆ. ಕಾದಿದ್ದು ಮುಂದಿನ ತಿಂಗಳ ಬರಹವನ್ನು ಓದುವಂತೆ ಮಾಡುತ್ತಿರುತ್ತದೆ. ಮುಂದಿನ ಕಂತಿಗಾಗಿ ಒಂದು ತಿಂಗಳವರೆಗೂ ಕಾಯಬೇಕಲ್ಲಪ್ಪಾ. ಎಂದು ಬೇಜಾರಾಗುತ್ತದೆ.

ನನ್ನನ್ನು ಹೆಚ್ಚು ಇಷ್ಟಪಟ್ಟು ಓದುವಂತೆ ಮಾಡುತ್ತಿರುವ ಪ್ರಬುದ್ಧ ನ್ಯೂಸ್ ಅಂಕಣವೆಂದರೇ ’ಮನದಾಳದ ಮಾತು’ - ಇದು ಪ್ರತಿ ತಿಂಗಳು ಒಬ್ಬೊಬ್ಬ ಓದುಗರ ಭಾವನೆಗಳ/ಘಟನೆಗಳ/ಜೀವನ ಸಂಘರ್ಷದ ಸಂಗಮ ಮಾಲೆ. ತಮ್ಮ ಜೀವನದಲ್ಲಿ ಘಟಿಸಿದ ಘಟನೆಗಳ ಮೇಲೆ ಬೆಳಕು ಚೆಲ್ಲುವ ಅಂಕಣ. ಈ ಅಂಕಣಕ್ಕೆ ಓದುಗರು ನೇರ ಭಾಗವಹಿಸಿಕೆಯನ್ನು ಪತ್ರಿಕೆ ನೀಡಿರುವುದು ಪತ್ರಿಕೆ ಓದುಗರ ಬಗ್ಗೆ ಇಟ್ಟುಕೊಂಡಿರುವ ಕಾಳಜಿಯನ್ನು ನಿರೂಪಿಸುತ್ತದೆ.

ಸಂಶೋಧನ ವಿದ್ಯಾರ್ಥಿಗಳ ಸಂಶೋಧನ ಬರಹಗಳನ್ನು ಪ್ರಕಟಿಸುತ್ತಿರುವುದು. ಪತ್ರಿಕೆ ನವ ತರುಣ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಚಿಂತನೆಗಳಿಗೆ ತಾನು ನೀಡುತ್ತಿರುವ ಪ್ರೋತ್ಸಾಹವನ್ನು ತೋರಿಸುತ್ತದೆ.

ಇದಷ್ಟೇ ಅಲ್ಲದೇ ಕಾನೂನಿಗೆ ಸಂಬಂಧಿಸಿದ ಹಲವು ಲೇಖನಗಳು ಸಾಮಾನ್ಯ ಜನರಿಗೆ ಭಾರತದಲ್ಲಿರುವ ಗೊತ್ತಿಲ್ಲದ ಕಾನೂನು ಮತ್ತು ಅದರ ಉಪಯೋಕ್ತತೆಯನ್ನು ಪಡೆಯಲು ಸಾಮಾನ್ಯ ಜನರಿಗೆ ಅನುಕೂಲವಾಗಿದೆ ಎಂದರೇ ತಪ್ಪಿಲ್ಲ.

ಮುಖಪುಟದಲ್ಲಿ ನೀಡುವ ಹೆಡ್ ಲೈನ್ಸ್ - ಹೆಚ್ಚು ಕಾಡುವಂತೆ ಮತ್ತು ಕನ್ನಡ ಪದಗಳನ್ನು ಹೀಗೂ ಉಪಯೋಗಿಸಬಹುದು ಎಂಬುದನ್ನು ಪ್ರಬುದ್ಧ ನ್ಯೂಸ್ ಪ್ರತಿ ತಿಂಗಳು ಜಗಜ್ಜಾಹೀರು ಮಾಡಿದೆ. ’ವಿಚಾರಗಳ ಮೇಲುಡಿಗೆಯೇ ಭಾಷೆ’

ಹೊಸ ಪತ್ರಿಕೆಗಳೆಂದರೇ ಪ್ರಸಿದ್ಧರಾದ ಲೇಖಕರಿಗೆ ಮಣೆ ಹಾಕುವುದು. ಈಗಾಗಲೇ ಪೇಮಸ್ಸಾದ ಲೇಖಕರಿಂದ/ಸಾಹಿತಿಗಳಿಂದ ಅಂಕಣಗಳನ್ನು ಬರೆಸಿಕೊಂಡು ತಮ್ಮ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿಕೊಳ್ಳಲು ತವಕಿಸುವ ಇಂಥ ಸಂದರ್ಭದಲ್ಲಿ ಕೇವಲ ಹೊಸ ಲೇಖಕರಿಂದ ಅತ್ಯುತ್ತಮವಾದ ಲೇಖನಗಳನ್ನು ಬರೆಯಿಸುತ್ತಿರುವುದು. ಹೊಸಬರಿಗೆ ಅವಕಾಶವನ್ನು ಕೊಟ್ಟು ಅವರಲ್ಲಿ ಹುದುಗಿರುವ ಹೊಸ ಚಿಂತನೆಯನ್ನು ಕನ್ನಡ ಓದುಗರಿಗೆ ಪರಿಚಯಿಸುತ್ತಿರುವುದು ಪ್ರಬುದ್ಧ ನ್ಯೂಸ್ ಪತ್ರಿಕೆಯ ಹೆಮ್ಮೆ . ಇದು ಎಲ್ಲಾ ಪತ್ರಿಕೆಗಳಿಗೂ ಮಾದರಿ.

ಪತ್ರಿಕೆ ತನ್ನ ಮೊದಲ ವರುಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಾಮಾನ್ಯ ಓದುಗನಾಗಿ ಈ ಪತ್ರಿಕೆ ಇನ್ನು ಹೆಚ್ಚು ಹೆಚ್ಚು ಎತ್ತರಕ್ಕೇರಲಿ!  ಹಾಗೆಯೇ ಆದಷ್ಟು ಬೇಗ ವಾರಪತ್ರಿಕೆಯಾಗಿ ಬಹುಬೇಗ ನಮ್ಮೆಲ್ಲಾರ ಕೈಸೇರಲಿ ಎಂದು ಆಶಿಸುವೆನು.


ಬುಧವಾರ, ನವೆಂಬರ್ 23, 2016

ಇದು ಎಂದು ನಿಲ್ಲುವುದೋ

ನವಂಬರ್ ೮ ಇಡೀ ವಿಶ್ವ ಅಮೆರಿಕಾದ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ. ಮೋದಿ ಶಾಕಿಂಗ್ ನ್ಯೂಸ್ ನ್ನು ಭಾರತೀಯರಿಗೆ ನೋಟ್ ಬ್ಯಾನ್ ಮಾಡುವ ಮೂಲಕ ಕೊಟ್ಟರು.

ವಿಶ್ವವೇ ಒಂದು ಕ್ಷಣ ಮೋದಿಯ ಮತ್ತು ಭಾರತ ಸರ್ಕಾರದ ನಿರ್ಧಾರದಿಂದ ನಿಬ್ಬೇರಗಾಗಿತು.

೧೦೦೦ , ೫೦೦ ರ ನೋಟಗಳು ಸರಿ ರಾತ್ರಿಯಿಂದ ಪೂರಾ ಬಂದ್. ನಾಳೆ ಬದಲಿಸಿಕೊಂಡರೇ ಮಾತ್ರ ಅವುಗಳಿಗೆ ಬೆಲೆ.

ಕೆಲವರಿಗೆ ಈ ರೂಲ್ ನುಂಗಲಾರದ ತುತ್ತಾಗಿದ್ದಂತೂ ನಿಜ.

ಮಾರನೇಯ ದಿನದಿಂದ ಸಾಲು ಸಾಲು ಮಂದಿ ಬ್ಯಾಂಕ್ ಗಳ ಮುಂದೆ ನೋಟ್ ಬದಲಿಸಿಕೊಳ್ಳಲು ನಿಂತಿದ್ದೇ ಬಂತು.

ಸಾಕಷ್ಟು ಜನ ಸಾಮಾನ್ಯರು ಈ ನಿರ್ಧಾರವನ್ನು ಮೆಚ್ಚಿದರು. ಹಾಗೆಯೇ ಕೆಲವರು ಮೋದಿಯನ್ನು ಶಪಿಸಿದರು.

ರಾಜಕೀಯ ನಾಯಕರುಗಳು ತಮ್ಮದೇಯಾದ ದಾಟಿಯಲ್ಲಿ ಈ ನಿರ್ಧಾರವನ್ನು ಖಂಡತುಂಡವಾಗಿ ಖಂಡಿಸಿದರು.

ಮೋದಿ ಕೇವಲ ಬ್ಯುಸಿನೇಸ್ ಮ್ಯಾನ್ ಮತ್ತು ಶ್ರೀಮಂತರ ಪರ. ಇವರುಗಳನ್ನು ಓಲೈಸುವ ಸಲುವಾಗಿ ಈ ಕಾನೂನು ತಂದಿದ್ದಾರೆ. ಬಡ ಜನರು, ರೈತರು, ಸಣ್ಣ ವ್ಯಾಪರಿಗಳು ಎಲ್ಲಿಗೆ ಹೋಗಲಿ? ಅದು ಹೇಗೆ ಪ್ರತಿಯೂಬ್ಬರೂ ಬ್ಯಾಂಕ್ ಆಕೌಂಟ್ ಇಟ್ಟುಕೊಳ್ಳಲು ಸಾಧ್ಯ. ಜನರ ಬಗ್ಗೆ ಮೋದಿಗೆ ಕರುಣೆಯೇ ಇಲ್ಲ. ಇದು ಒಂದು ದೊಡ್ಡ ನೋಟ್ ಹಗರಣ. ಬಡ ಜನರ ಸಾವುಗಳು ಬ್ಯಾಂಕ್ ಕ್ಯೂ ನಲ್ಲಿ ನಡೆಯುತ್ತಿದೆ. ಹೀಗೆ ವಿರೋಧದ ಮಾತು ಮಾತು ಚರ್ಚೆಗಳು ಇನ್ನೂ ನಡೆಯುತ್ತಿವೆ.

ಇದು ಕಾಳಧನ ಸಂಗ್ರಹಕಾರರಿಗೆ ದುಃಸಪ್ನ. ಭ್ರಷ್ಟ ಜನರಿಗೆ ಸರಿಯಾದ ಶಾಸ್ತಿಯಾಯಿತು. ಇನ್ನಾದರೂ ಬ್ಲಾಕ್ ಮನಿ ಹೇಳ ಹೆಸರಿಲ್ಲದ ರೀತಿಯಲ್ಲಿ ನಾಶವಾಗುತ್ತದೆ. ಮೋದಿಯೆಂದರೇ ತಾತ್ಸಾರ ಮಾಡಿದವರಿಗೆ ಮೋದಿ ಸರ್ಕಾರ ಸರಿಯಾಗಿ ತೋರಿಸಿತು. ಬಡವರಿಗೂ ಸಹ ಸರ್ಕಾರದಲ್ಲಿ ನಂಬಿಕೆ ಬರುವ ನಿರ್ಧಾರ ಇದು. ಭಾರತ ಇಂದಿಗೆ ಬೆಳಕನ್ನು ಕಂಡಿತು. ಶ್ರೀಮಂತರ ದರ್ಬಾರಿಗೆ ಕಡಿವಾಣ ಮೋದಿ ಹಾಕಿದರು. ಇಂಥ ಪ್ರಧಾನಿಯನ್ನು ಕಂಡ ಭಾರತ ಧ್ಯನ್ಯ! ಹೀಗೆ ಪರವಾದ ಮಾತುಗಳು ಪ್ರತಿ ಮೀಡಿಯಾಗಳಲ್ಲಿ ಪಸರಿಸಿತು.

ಯಾವುದೇ ಒಂದು ಕೆಲಸ, ಘಟನೆ, ವಿಚಾರ ನಡೆದರೂ ಪರ ಮತ್ತು ವಿರೋಧದ ಮಾತು ಕೇಳುವುದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ.
ಯಾಕೆಂದರೇ ಪ್ರತಿಯೊಬ್ಬರಿಗೂ ತಮ್ಮ ಅಭಿವ್ಯಕ್ತಿಯನ್ನು ತಮ್ಮನುಸಾರ ವ್ಯಕ್ತಪಡಿಸಲು ಸರ್ವ ಸ್ವತಂತ್ರರು.

ಆದರೇ ನೋಟ್ ಬ್ಯಾನ್ ನಿಂದ ಎಷ್ಟು ಅನುಕೂಲವಾಗಬಹುದೋ ಅಷ್ಟೇ ಅನಾನುಕೂಲಗಳು ಸ್ವಲ್ಪ ದಿನಗಳು ಜನಸಾಮನ್ಯರು ಅನುಭವಿಸುವುದು ನಿಜ.

ಸರ್ಕಾರ ಯಾವುದೇ ರೀತಿಯ ಮುಂದಾಲೋಚನೆಯಿಲ್ಲದೆ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿಲ್ಲ. ಆದರೂ ಇಂದು ನೋಟ್ ಬದಲಾವಣೆಯ ಭರಾಟೆಯಲ್ಲಿ ಸಾಮನ್ಯ ಜನರ ಸಾವುಗಳು ಮಾತ್ರ ಅಕ್ಷಮ್ಯ. ಇದಕ್ಕೆ ಯಾರು ಹೊಣೆಯಾಗುವರೊ ಗೊತ್ತಿಲ್ಲ!

ಯಾಕೆಂದರೇ ಯಾವುದೇ ಸುಧಾರಣೆ ಒಂದು ಜೀವಕ್ಕಿಂತ ಅಮೊಲ್ಯವಲ್ಲ.

ಇದನ್ನೇ ಕೆಲವರು ಕೇವಲವಾಗಿ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಇಂದಿನ ಕಷ್ಟಗಳು ಅವಶ್ಯಕ ಎನ್ನುವ ಉದ್ಧಟತನ ತೋರಿಸುತ್ತಿದ್ದಾರೆ. ಈ ರೀತಿಯ ಮನೋಭಾವನೆ ಯಾರೂ ಒಪ್ಪವಂತದ್ದಲ್ಲ.

ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿಗಳು ಸಾಮಾನ್ಯ ಜನಗಳು, ಹಾಗೆಯೇ ಯಾವುದೇ ಕಾಯದೆ ಕಾನೂನುಗಳಿಂದ ಕಷ್ಟ ಅನುಭವಿಸುವುದು ಈ ಸಾಮಾನ್ಯ ಜನಗಳೇ.

ಉಳ್ಳವರಿಗೆ ಯಾವುದೇ ತೊಂದರೆ ಎಂದಿಗೂ ಆಗುವುದಿಲ್ಲ. ಅದಕ್ಕೆ ಇರಬೇಕು ಪ್ರತಿಯೊಬ್ಬರೂ ಉನ್ನತವಾದದ್ದನ್ನು ಪಡೆದುಕೊಳ್ಳಲು ತವಕಪಡುವುದು.

ಸರ್ಕಾರದ ಜಾಗದಲ್ಲಿರುವ ನಾಯಕರುಗಳು ಹಿಂದಿನಿಂದಲೂ ಬಡವರನ್ನೆ ತಮ್ಮ ಟ್ರಂಪ್ ಕಾರ್ಡ ಮಾಡಿಕೊಂಡಿದ್ದಾರೆ. ಬಡವರ ಉದ್ಧಾರದ ಹೆಸರಲ್ಲಿ ಅವರನ್ನು ಇನ್ನೂ ಅದೇ ಸ್ಥಿತಿಯಲ್ಲಿ ಇಡುವುದು ಅವರಿಗೆ ಲಾಭ. ಅದಕ್ಕೆ ಈ ಅಧಿಕಾರದ ಮಧದಲ್ಲಿರುವವರ ಮಾತುಗಳು ಯಾವುದು ನಿಜ ಯಾವುದು ಸುಳ್ಳೆಂದು ಅರಿಯುವುದು ಅಷ್ಟು ಸುಲಭವಲ್ಲ.

ಇಂದು ಪ್ರತಿಯೊಂದನ್ನು ಸಂಶಯದ ಮನಸ್ಸಿನಲ್ಲಿ ನೋಡುವಂತಾಗಿದೆ.

ಮೋದಿ ಏನೇ ಒಳ್ಳೆಯದನ್ನು ದೇಶಕ್ಕಾಗಿ ಮಾಡಲು ನಿರ್ಧರಿಸಿದರೂ ಪ್ರತಿಯೊಬ್ಬರೂ ಸಂಶಯದಲ್ಲಿ ಕಾಣುವುಂತಾಗಿದೆ.

ಇದು ಯಾಕೇ?

ದೇಶಕ್ಕಾಗಿ ಒಳ್ಳೆಯದನ್ನು ಮಾಡುವ ಮನುಷ್ಯನೇ ಹುಟ್ಟಿಲ್ಲ ಎನ್ನುತ್ತಿದ್ದಾರೆ.

ಅದು ಹೇಗೆ ನಮ್ಮ ಜನ ಗಾಂಧಿಯನ್ನು ನಂಬಿದರು? ಅದು ಯಾವ ಗುಣ ಗಾಂಧಿಯ ಮಾತನ್ನು ಇಡೀ ದೇಶ ಪಾಲಿಸುವಂತೆ ಮಾಡಿತು?

ಪ್ರಜಾಪ್ರಭುತ್ವವಿರುವ ಸರ್ಕಾರದಲ್ಲಿ ಪ್ರಜೆಯೇ ಪ್ರಭು ಎಂಬುದು ಕೇವಲ ಬಾಯಿ ಮಾತಾಗಿದೆ. ಯಾಕೆಂದರೇ ಸ್ವಾತಂತ್ರ್ಯ ಬಂದ ೭೦ ವರುಷದಲ್ಲಿ ನಮ್ಮನಾಳಿದ ನಾಯಕರುಗಳ ಜೊಳ್ಳು ಧೋರಣೆಯ ಮಾತುಗಳು. ಅವರುಗಳು ತಿಂದು ತೇಗಿದ ರೀತಿ. ಬಡವರ ಬಗ್ಗೆ ಅವರು ಮಾತನಾಡುವುದಕ್ಕೂ, ಅವರನ್ನು ಕಾಣುವುದಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ.

ದೇಶ ಉನ್ನತಿಯಾಗಬೇಕಾದರೇ ದೇಶದ ನಾಯಕರುಗಳು ಒಳ್ಳೆಯವರಾಗಿರಬೇಕು. ಒಳ್ಳೆಯ ನಾಯಕ ಸಿಗಬೇಕಾದರೇ ದೇಶದ ಜನರು ಅಂಥ ನಾಯಕರನ್ನು ಆರಿಸಬೇಕು.

ಆದರೇ ಎಲ್ಲೋ ಏನೋ ವ್ಯತ್ಯಾಸ ಕಾಣುತ್ತಿದೆ. ಅಧಿಕಾರ ಸಿಕ್ಕಿದರೇ ಸಾಕು ತಾನು ತನ್ನ ಕುಟುಂಬ ಮಾತ್ರ ಚೆನ್ನಾಗಿರಬೇಕು ಎನ್ನುವ ಮಟ್ಟಿಗೆ ಕೊಳ್ಳೆ ಹೊಡೆಯುವವರನ್ನೇ ಕಂಡ ನಮಗೆ ಮೋದಿಯ ನಡೆ ಸ್ವಲ್ಪ ವಿಭಿನ್ನ ಅನಿಸುತ್ತಿದೆ. ಇದಕ್ಕೆ ಇರಬೇಕು ನಮ್ಮ ಜನ ಈ ಬದಲಾವಣೆಯನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.


ಯಾವುದೇ ಬದಲಾವಣೆ ಸುಧಾರಣೆ ಬೇಡ ಗುರು! ನಾನು ಚೆನ್ನಾಗಿದ್ದರೇ ಸಾಕು. ಯಾವನ್ ಕ್ಯೂ ನಲ್ಲಿ ನಿಲ್ಲಬೇಕು? ನನ್ನ ದುಡ್ಡು ನನ್ನದಾಗಿದ್ದರೇ ಸಾಕು. ಯಾರು ಎಷ್ಟು ಬೇಕಾದರೂ ಇಟ್ಟುಕೊಂಡಿರಲಿ. ಈ ರೀತಿಯ ನಮ್ಮ ಮನೋಭಾವನೆಯನ್ನೇ ಎನ್ ಕ್ಯಾಷ್ ಮಾಡಿಕೊಂಡಿರುವ ನಮ್ಮ ಸೋ ಕಾಲ್ಡ್ ರಾಜಕೀಯ ನಾಯಕರುಗಳು ನಮ್ಮ ಬದುಕನ್ನು ಇನ್ನೂ ಮೂರ ಬಟ್ಟೆ ಮಾಡಲು ಸಿದ್ಧರಾಗಿದ್ದಾರೆ. ಇದು ನಿಜ!

ಸಂಸತ್ತನಲ್ಲಿ ಎಲ್ಲ ಪ್ರತಿಪಕ್ಷಗಳು ಈ ನೋಟ್ ಬ್ಯಾನ್ ಮಾಡಿರುವ ವಿರುದ್ಧ ತೊಡೆತಟ್ಟಿಕೊಂಡು ವಿರೋಧಿಸುತ್ತಿರುವುದನ್ನು ನೋಡಿದರೇ ನಮಗೆ ನಾವೇ ನಾಚಿಕೆಪಟ್ಟುಕೊಳ್ಳಬೇಕೇನೋ..?

ಏನೂ ಮಾಡುವ ಆಗಿಲ್ಲ. ನಾವೇ ಆರಿಸಿಕಳಿಸಿರುವ ಪ್ರತಿನಿಧಿಗಳು. ಅವರುಗಳು ನಮ್ಮಗಳ ಬಗ್ಗೆ ಬಾಯಿ ತುಂಬ ಹರಿಸುತ್ತಿರುವ ನುಡಿಗಳು ಕೇಳಬೇಕು. ಅವರಿಗೆ ನಮ್ಮ ಜನಗಳು ಇನ್ನೂ ಅದೇ ಸ್ಥಿತಿಯಲ್ಲಿದ್ದಷ್ಟು ಲಾಭ.

ಸತತ ೭೦ ವರುಷ ನಮ್ಮವರ ಏಳ್ಗೆಯನ್ನಾಗಲಿ, ನಮ್ಮ ಜನರನ್ನು ಹೆಚ್ಚು ಅಕ್ಷರಸ್ಥರನ್ನಾಗಿ ಮಾಡೋಣ, ಹೆಚ್ಚು ತಿಳುವಳಿಕೆಯುಳ್ಳವರನ್ನಾಗಿ ಮಾಡೋಣ ಎನ್ನುವುದರ ಬಗ್ಗೆ ಈ ರೀತಿಯ ಒಗ್ಗಟ್ಟನ್ನು ಪ್ರದರ್ಶಿದ್ದರೇ ನಮ್ಮ ಭಾರತ ಇಂದು ಅದು ಎಲ್ಲೋ ಇರುತ್ತಿತ್ತು.

ಆದರೇ ನಮ್ಮ ಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ಜನರ ಭಾವನೆಗಳನ್ನು ಬಳಸಿಕೊಳ್ಳುತ್ತಿರುವುದು ವಿಪರ್ಯಾಸ. ಅದಕ್ಕಾಗಿ ಇವರುಗಳು ಮಾಡುತ್ತಿರುವ ನಾಟಕಗಳನ್ನು ನೋಡಿದರೇ ಇವರಿಗೆ ಮೋದಿ ನಡೆ ಮಾತ್ರ ತಪ್ಪಾಗಿ ಕಾಣುತ್ತಿದೆ. ಅದಕ್ಕಾಗಿ ಸಾಮಾನ್ಯ ಜನರ ಮನಸ್ಸನ್ನು ಬಡಿದೆಬ್ಬಿಸಿ ಸರ್ಕಾರದ ವಿರುದ್ಧ ದಂಗೆಯೇಳಿಸಬೇಕು. ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಆರಿಸಲಿ ಎಂಬ ದೂರಾಲೋಚನೆಯಂತಿದೆ.

ಇದು ಎಂದು ನಿಲ್ಲುವುದೋ ಕಾದು ನೋಡಬೇಕು.

ಗುರುವಾರ, ನವೆಂಬರ್ 10, 2016

ಸುದ್ಧಿಗಳು ಮತ್ತು ಸಮಾಜ



ಸಂವಹನ ಮಾಧ್ಯಮಗಳ ಜವಬ್ದಾರಿಯ ಬಗ್ಗೆ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಿವೆ. ಟಿ.ವಿ  ನ್ಯೂಸ್ ಚಾನಲ್ ಗಳು ಬಂದ ಮೇಲೊಂತೂ ಪರಿ ಪರಿಯಾಗಿ ಅವುಗಳ ಸಮಾಜಿಕ ಕಳ ಕಳಿಯ ಬಗ್ಗೆ ಸಾಮಾನ್ಯ ಜನರುಗಳು ಪ್ರಶ್ನೇ ಮಾಡುತ್ತಿದ್ದಾರೆ.

ಸುದ್ಧಿ ಮಾಡುವುದೇ ಸುದ್ಧಿ ಮಾಧ್ಯಮಗಳ ಕರ್ತವ್ಯವಾ? ಅವುಗಳು ಏನೂ ಸಮಾಜಕ್ಕೆ ನೀಡಬಹುದು. ಅವು ಹೇಗೆ ಜನಗಳ ಸಮಸ್ಯೆಗಳನ್ನು ಪರಿಹರಿಸಬಹುದು. ಹೀಗೆ ಹತ್ತಾರು ಕೋನಗಳಲ್ಲಿ ಇವರನ್ನು ಕೇಳುತ್ತಿರುತ್ತಾರೆ.

ಪ್ರಬಲ ಮಾಧ್ಯಮ ಎಂದರೇ ಟಿ.ವಿ ಮಾಧ್ಯಮ. ಪತ್ರಿಕೆ, ರೇಡಿಯೊ ಗಳಿಗಿಂತ ಅತಿ ವೇಗವಾಗಿ ಜನರನ್ನು ತಲುಪುವ ಮಾರ್ಗ ಎಂದರೇ ಟಿ.ವಿ ಚಾನಲ್ ಗಳು ಮಾತ್ರ.

ಎಲ್ಲಾ ಭಾಷೆಗಳಲ್ಲು ಸಾಕಷ್ಟು ನ್ಯೂಸ್ ಚಾನಲ್ ಗಳು ಹುಟ್ಟಿಕೊಂಡಿವೆ. ಯಾವುದೇ ಘಟನೆಗಳು ನಡೆದರೂ ಕ್ಷಣ ಮಾತ್ರದಲ್ಲಿ  ಅದರ ವರದಿ ಬ್ರೇಕಿಂಗ್ ನ್ಯೂಸ್ ರೂಪದಲ್ಲಿ ಟಿ.ವಿ ಪರದೆಯಲ್ಲಿ ಪ್ರತ್ಯಕ್ಷವಾಗುತ್ತದೆ.

ಅದು ಜನರಿಗೆ ಎಷ್ಟು ಉಪಯೋಗವಾಗುತ್ತದೂ ಬಿಡುತ್ತದೂ ಗೊತ್ತಿಲ್ಲ. ಪ್ರಸಾರವನ್ನು ಮಾತ್ರ ಮಾಡುತ್ತಾರೆ. ಯಾವುದೇ ಘಟನೆಯನ್ನು ಯಥಾವತ್ ಪ್ರಸಾರ ಮಾಡುವುದೇ ಅವರ ಹೆಗ್ಗಳಿಕೆಯಾಗಿದೆ! ಎನ್ನುವ ಮಟ್ಟಿಗೆ.

ಆದರೇ ಕೆಲವೊಂದು ಸಮಯದಲ್ಲಿ ಸುದ್ಧಿ ಪ್ರಸಾರ ಮಾಡುವುದಷ್ಟೇ, ಮಾಡುವುದು ತಪ್ಪು ಅನಿಸುತ್ತದೆ. ಯಾವುದೋ ಒಂದು ಅಪಘಾತ, ಯಾವುದೋ ಒಂದು ಅವಘಡಗಳು ಸಂಭವಿಸಿದಾಗ, ಸಂಭವಿಸುವ ಸೂಚನೆ ಗೊತ್ತಿದ್ದಾಗ, ಈ ಮಾಧ್ಯಮಗಳು ಕೇವಲ ಕ್ಯಾಮರ ಮೈಕ್ ಗಳಿಗೆ ಕೆಲಸಗಳನ್ನು ಕೊಡುವುದನ್ನು ಬಿಟ್ಟು ಮನಸಾಕ್ಷಿಗೆ ಕೆಲಸಕೊಟ್ಟರೆ ಕ್ಷೇಮ.ಆ ಮೊಲಕ ಕೆಲವೊಂದು ಜೀವಗಳನ್ನು ಉಳಿಸಬಹುದಾಗಿತ್ತು ಎನಿಸುತ್ತದೆ.

ಹೀಗೆ ಅನಿಸುವುದು ಅವರೇ ಸುದ್ಧಿಯನ್ನು ಬೀತರಿಸುವಾಗ ನುಡಿಯುವ ಪುಂಕಾನು ಪುಂಕು ಮಾತುಗಳು ಮತ್ತು ಬೇರೆಯವರನ್ನು ಬೆಟ್ಟು ಮಾಡಿ ತೋರಿಸುವುದರಿಂದ.

ಯಾಕೆಂದರೆ ಇತ್ತೀಚೆಗೆ ನಡೆದ ಇಬ್ಬರು ನಟರುಗಳ ಸಾವು. ಕಾವೇರಿ ಗಲಾಟೆಯಲ್ಲಿ ಆದ ಅನಾಹುತ. ಹಿಂದೆ ರಸ್ತೆ ಅಪಘಾತದಲ್ಲಿ ಅಸುನೀಗಿದ ಯುವಕನ ಘಟನೆ. ಹಿರಿಯ ಪೊಲೀಸ್ ಅಧಿಕಾರಿಯ ಆತ್ಮಹತ್ಯೆ. ಹೀಗೆ ಈ ಕೆಲವೊಂದು ಸುದ್ಧಿ ಪ್ರಸಾರಣೆಗಳು, ಮಾಧ್ಯಮಗಳು ಕೇವಲ ಕ್ಯಾಮರ ಕಣ್ಣಿನಿಂದ ನೋಡುವುದನ್ನು ಬಿಟ್ಟು ಹೃದಯದಿಂದ ನೋಡಬೇಕಾಗಿತ್ತು ಎಂದು ಪ್ರತಿಯೊಬ್ಬ ವೀಕ್ಷಕನನ್ನು ಕಲಕಿದ್ದಿದೆ.

ಘಟನೆ ಸಂಭವಿಸಿದ ಮೇಲೆ ಹೇಳುವ ನೂರು ಕಾರಣಗಳು. ಮತ್ಯಾರನ್ನೋ ಹೊಣೆಗಾರರನ್ನಾಗಿ ಮಾಡುವುದು ಉಪಯೋಗವಿಲ್ಲ. ಯಾಕೆಂದರೇ ತಾವೇ ಕಿವಿಯಾರೇ ಸತ್ಯವನ್ನು ಕೇಳಿ, ನೋಡಿದ ಮೇಲೆ ಜನರಿಗೆ ಟಿ.ವಿಯಲ್ಲಿ ತೋರಿಸುವುದು ಸುದ್ಧಿ ಸಂಸ್ಥೆಗಳು. ಆದ್ದರಿಂದ ಪ್ರಪ್ರಥಮವಾಗಿ ಇದರ ಬಗ್ಗೆ ತಿಳಿಯುವವರು ಮತ್ತು ವಿಷಯ ಗೊತ್ತಿರುವವರು ಈ ಮಾಧ್ಯಮದವರಿಗೆ. ಇವರುಗಳು ತಾವೇ ತಡೆಯಬಹುದಾಗಿದ್ದ ದುರಂತಗಳನ್ನು ಮತ್ಯಾರೋ ಬಂದು ನಿಲ್ಲಿಸಬಹುದಾಗಿತ್ತು ಎಂದು ಹೇಳುವುದು ತೀರ ಕ್ಷುಲ್ಲಕ ಅನಿಸುತ್ತದೆ.

ಇದೆ ನ್ಯೂಸ್ ಚಾನಲ್ ಗಳ ಉತ್ತಮ ಸಮಾಜ ನಿರ್ಮಾಣ, ದಿಟ್ಟ, ನೇರ ಸ್ವಾಸ್ಥ್ಯ ನಡವಳಿಕೆ?

ಕೇವಲ ವೇಗವಾದ ಸುದ್ಧಿ ಪ್ರಸಾರದಲ್ಲಿ ಮೇಲು ಗೈ ಸಾಧಿಸದೆ ಸಾಮಾಜಿಕ ಕಾಳಜಿಯಲ್ಲಿ ವೇಗವನ್ನು ಸಾಧಿಸುವುದು ಅತ್ಯಂತ ಅವಶ್ಯಕ ನಡೆಯಾಗಿದೆ. ಇದು ನಮ್ಮೆಲ್ಲಾರ ಕೋರಿಕೆಯು ಆಗಿದೆ.

ಒಮ್ಮೊಮ್ಮೆ ಅತಿರೇಕದ ವರ್ತನೆಯನ್ನು ಸುದ್ಧಿ ಸಂಗ್ರಹಿಸುವವರು ಮಾಡುವುದನ್ನು ನಿತ್ಯ ಟಿ.ವಿಗಳಲ್ಲಿ ಗಮನಿಸಬಹುದು. ಏನದರೊಂದು ಕಾಂಟ್ರವರ್ಸಿ ಕ್ರಿಯೇಟ್ ಮಾಡಿ ಅದನ್ನೆ ದೊಡ್ಡ ಸುದ್ಧಿ ಮಾಡುವುದು. ವ್ಯಕ್ತಿ ಮತ್ತು ಸಮಾಜವನ್ನು ಇಕ್ಕಟ್ಟಿಗೆ ಸಿಲುಕಿಸುವುದು. ಯಾವುದೇ ಸುದ್ಧಿ ಪ್ರಸಾರ ಮಾಡುವುದು ಕ್ಷೇಮವೇ ಇಲ್ಲವೇ ಎಂದು ಪರಮರ್ಶಿಸುವ ಗೊಜಿಗೆ ಹೋಗದೇ ನೇರವಾಗಿ ಜನರ ಮುಂದೆ ಇಡುವುದು.

ದುಃಖದಲ್ಲಿರುವವರನ್ನು ಪದೆ ಪದೆ ಪ್ರಶ್ನೆ ಮಾಡುವುದು ಮಾನವೀಯತೆಯನ್ನೇ ಕಳೆದುಕೊಂಡಂತೆ ಅನ್ನಿಸುತ್ತದೆ. ಕೈಯಲ್ಲಿ ಮೈಕ್ ಇದ್ದ ತಕ್ಷಣ ಯಾವುದೋ ಲೋಕದಿಂದ ಇಳಿದು ಬಂದವರಂತೆ ವರ್ತಿಸಬಾರದು.

ಮಾಧ್ಯಮ ತನ್ನ ಇತಿಮೀತಿಯನ್ನು ಹರಿತು ನಡೆದರೆ ತುಂಬ ಒಳಿತು.

ಈ ಹಿಂದೆ ಒಂದು ಕಿರು ಚಿತ್ರ ಬಂದಿತ್ತು. ಅದರಲ್ಲಿ ಹೀಗೆ ದಾರಿಯಲ್ಲಿ ತರುಣನೊಬ್ಬ ಸಾಗುತ್ತಿರುತ್ತಾನೆ. ಅದೇ ಸಮಯದಲ್ಲಿ ಇವನಿಗೆ ಯಾರೋ ವಯಸ್ಸಾದ ಮನುಷ್ಯ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮರವನ್ನು ಏರುತ್ತಿರುವುದು ಕಾಣುತ್ತದೆ. ಈ ಹುಡುಗನಿಗೆ ಕುತೂಹಲ ಜೇಬಲ್ಲಿದ್ದ ಗ್ಯಾಲಕ್ಸಿ ಮೊಬೈಲ್ ತೆಗೆದು ವಿಡಿಯೋ ಆನ್ ಮಾಡಿ ಕಳ್ಳಿ ಮರೆಯಲ್ಲಿ ರೇಕಾರ್ಡ್ ಮಾಡಲು ಕುರುತ್ತಾನೆ. ಅದು ಉಸಿರು ಬಿಗಿ ಹಿಡಿದು. ಅದು ಎಲ್ಲಿ ಆ ವ್ಯಕ್ತಿಗೆ ತನ್ನ ಇರುವಿಕೆ ತಿಳಿಯುವುದೋ ಎಂದು!

ವಯಸ್ಸದ ಆ ವ್ಯಕ್ತಿ ಮರ ಹತ್ತಿ ಸುತ್ತ ಮುತ್ತ ನೋಡುತ್ತಾನೆ. ಹಾಗೆಯೇ ಗಟ್ಟಿ ಕೊಂಬೆಯನ್ನು ಹುಡುಕಲು ತೊಡಗುತ್ತಾನೆ. ಕೊನೆಗೆ ಬಲ ಬದಿಗೆ ಒಂದೊಂದೆ ಹೆಜ್ಜೆ ಜಾರುತ್ತನೆ. ಕೈಯಲ್ಲಿದ್ದ ಹಗ್ಗವನ್ನು ಕೊಂಬೆಗೆ ಕಟ್ಟುತ್ತಾನೆ. ಇನ್ನೊಂದು ಹಗ್ಗದ ತುದಿಯನ್ನು ಕುಣಿಕೆ ಕಟ್ಟಿ ತನ್ನ ಕೊರಳಿಗೆ ಹಾಕಿಕೊಳ್ಳುತ್ತಾನೆ. ಕಣ್ಣಲ್ಲಿ ಧಾರಾಕಾರ ನೀರು! ಮೇಲೆ ಒಮ್ಮೆ ನೋಡುತ್ತಾನೆ. ಹಾಗೆಯೇ ತಲೆ ತಗ್ಗಿಸುತ್ತಾನೆ. ಅದು ಏನು ಏನೋ ಬಾಯಲ್ಲಿ ದುಃಖದಿಂದ ಪ್ರಲಾಪಿಸುತ್ತಾನೆ. ಆದರೂ ತಾನು ಬಂದಿರುವ ಕಾರ್ಯವನ್ನು ಮುಗಿಸುವ ಆತುರದಲ್ಲಿ ಕಣ್ಣು ಮುಚ್ಚಿ ಒಮ್ಮೆಯೇ ಜೀಗಿಯುತ್ತಾನೆ. ಅಷ್ಟೇ! ಇದೆಲ್ಲಾವನ್ನು ಈ ತರುಣ ತನ್ನ ಮೊಬೈಲ್ ವಿಡಿಯೋದಲ್ಲಿ ರೇಕಾರ್ಡ ಮಾಡುತ್ತಾ ನೋಡುತ್ತಿರುತ್ತಾನೆ. ಕೊನೆಗೆ ವ್ಯಕ್ತಿಯ ಶವ ನೆತಾಡುತ್ತದೆ. ರೇಕಾರ್ಡ್ ನಿಲ್ಲುತ್ತದೆ.ಅನಂತರ ಅದನ್ನು ಯಾರಿಗೋ ಕಳಿಸಲು ತೊಡಗುತ್ತಾನೆ.ಅಲ್ಲಿಗೆ ಈ ಕಿರುಚಿತ್ರ ಮುಗಿಯುತ್ತದೆ.

ಇದು ಮನ ಕಲುಕುವ ಸನ್ನಿವೇಶ. ನಮ್ಮತನವನ್ನು ಕಳೆದುಕೊಂಡು ವರ್ತಿಸುವ ಹುಚ್ಚುತನ. ಈ ರೀತಿಯ ಗೀಳು ಯಾರಿಗೂ ಎಂದಿಗೂ ಬರಬಾರದು. ಇಂಥ ಸಮಯದಲ್ಲಿ ಮನುಷ್ಯತ್ವ ಜಾಗೃತವಾಗಬೇಕು.

ಇಂದು ಪ್ರತಿಯೊಂದನ್ನು ವಿಡಿಯೋ, ಪೊಟೋ ತೆಗೆದು ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡುವುದು ಖ(ಕಾ)ಯಾಲಿಯಾಗಿದೆ.

ಒಮ್ಮೊಮ್ಮೆ ಆ ಒಂದು ವಿಡಿಯೋ ಪೊಟೋ ತುಣುಕು ಇಡೀ ಸಮಾಜವನ್ನೆ ತಲ್ಲಣಗೊಳಿಸಿಬಿಡುವುದು. ಇಲ್ಲಿ ಯಾರ ಕಡಿವಾಣವಿಲ್ಲ. ಪ್ರತಿಯೊಬ್ಬರೂ ಅವರವರ ಮನಸೊ ಇಚ್ಛೆ ಏನದರೂ ಪ್ರಸಾರ ಮಾಡಬಹುದು. ತಮಗೆ ತಾವೇ ರೀಪೊರ್ಟರ್!

ಆದರೇ ಈ ರೀತಿಯ ವರ್ತನೆ ಘನತೆಯುಳ್ಳ ಸುದ್ಧಿ ಸಂಸ್ಥೆಗಳಿಂದ ನಡೆಯಬಾರದು.

ಟಿ.ವಿ, ಪತ್ರಿಕೆ, ಸುದ್ಧಿ ಮಾಧ್ಯಮಗಳನ್ನು ಶಾಸಕಾಂಗದ ನಾಲ್ಕನೇಯ ಅಂಗ ಎಂದು ಸಂವಿಧಾನವೇ ಗುರುತಿಸಿದೆ. ಸ್ವಾಸ್ಥ್ಯ ಸಮಾಜ ಮತ್ತು ಶಾಂತ ಸಮಾಜದ ನಿರ್ಮಾಣ ಇವುಗಳ ಕೈಯಲ್ಲಿಯೇ ಜಾಸ್ತಿಯಿದೆ.

ಇಂದು ಮಾಧ್ಯಮಗಳಿಂದ ಜಗತ್ತೆ ಒಂದು ಪುಟ್ಟ ಹಳ್ಳಿಯಾಗಿದೆ. ಜಗತ್ತಿನ ಯಾವುದೇ ಮೊಲೆಯಲ್ಲಿ ಜರುಗಿದ ಚಿಕ್ಕ ಘಟನೆಗಳು ಸಹ ಕ್ಷಣ ಮಾತ್ರದಲ್ಲಿ ಮನೆ ಮನವನ್ನುತಲುಪುತ್ತಿವೆ. ಇದಕ್ಕೆ ಪ್ರತಿಯೊಬ್ಬರೂ ಅಭಾರಿಗಳು. ಇದರಿಂದ ಮಾಧ್ಯಮಗಳು ಲಾಭವನ್ನುಗಳಿಸುತ್ತಿವೆ. ಹಾಗೆಯೇ ಸಾಮಾನ್ಯ ಜನರುಗಳು ಸಹ ಹೆಚ್ಚು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಯಾವುದೇ ದೊಡ್ಡ/ಚಿಕ್ಕ ಸುದ್ಧಿ ಅಥವಾ ವಿಚಾರ ಒಂದು ಅಮೊಲ್ಯ ಜೀವಕ್ಕಿಂತ ಎಂದಿಗೂ ದೊಡ್ಡದಲ್ಲ. ಆದ್ದರಿಂದ ಜೀವಪರ ಕಾಳಜಿಯನ್ನು ಪ್ರತಿಯೊಂದು ಚಾನಲ್ ಮತ್ತು ಪ್ರತಿ ಮಾಧ್ಯಮಗಳು ಹೊಂದುವುದು ಇಂದಿನ ಜರೂರತಾಗಿದೆ.

ಇಲ್ಲವೆಂದರೇ ಹೇಳುವುದೊಂದು ಮಾಡುವುದೊಂದು ಅನ್ನುವಂತಾಗುತ್ತದೆ.

ಗುರುವಾರ, ಅಕ್ಟೋಬರ್ 20, 2016

ಪೇಪರ್ ಲೆಸ್ ಯುಗ

ಪೇಪರ್ ಲೆಸ್ ಯುಗ ಅಂದರೇ ಇದೆ ಇರಬೇಕು. ಪೆನ್ನು ಪೇಪರ್ ಗಳ ಬಳಕೆಯೇ ಗೌಣವಾಗಿದೆ. ಕಂಪ್ಯೂಟರ್ ಮೊಬೈಲ್ ಗಳು  ಶೇ ೯೯ರಷ್ಟು ಮಾನವನ ಕೈಯಾರೆ ಬರೆಯುವ ಬರವಣಿಗೆಯನ್ನು ನಿಲ್ಲಿಸಿದೆ.

ಹಿಂದೆ ಬಾಲ್ಯದಿಂದಲೇ ಬಳಪ, ಸ್ಲೇಟ್ ಅಕ್ಷರಾಭ್ಯಾಸಕ್ಕೆ ಬಳಸುತ್ತಿದ್ದರು. ಬಳಪಗಳೋ ವಿಧ ವಿಧವಾದವುಗಳಿದ್ದವು. ಸ್ಲೇಟ್ ಗಳಲ್ಲೂ ಎಷ್ಟೊಂದು ಬಗೆ ಕಲ್ಲಿನ ಸ್ಲೇಟ್, ತಗಡಿನ ಸ್ಲೇಟ್, ತೀರಾ ಇತ್ತೀಚೆಗೆ ಪ್ಲಾಸ್ಟಿಕ್ ಸ್ಲೇಟ್ ಬಳಕೆ ಪ್ರಾರಂಭವಾಯಿತು.

ಸ್ವಲ್ಪ ದೊಡ್ಡವರಾದಂತೆ ಸೀಸದ ಕಡ್ಡಿ ಮತ್ತು ಪುಸ್ತಕಗಳಲ್ಲಿ ಬರೆಯುತ್ತಿದ್ದೆವು ಮತ್ತು ಕಲಿಯುತ್ತಿದ್ದೇವು.

ಮುಂದೆ ಮುಂದೆ ದೊಡ್ಡ ದೊಡ್ಡ ತರಗತಿಗಳಿಗೆ ಹೋದಂತೆ ಎಕ್ಸಸೈಜ್, ಪೇಪರ್ ಮತ್ತು ಪೆನ್ನುಗಳ ಬಳಕೆ ಮಾಡುವುದು ಮಾಮೂಲುಯಿತು.

ಪೆನ್ನಲ್ಲಿ ಬರೆಯುವುದಕ್ಕೂ ಮೊದಲು ಸೀಸದ ಕಡ್ಡಿಯಲ್ಲಿ ಬರೆದು ಅಭ್ಯಾಸ ಮಾಡಿದರೇ ಅಕ್ಷರಗಳ ಬರವಣಿಗೆ ಉತ್ತಮವಾಗುವುದು ಎಂದು ಹೇಳುತ್ತಿದ್ದುದು ಪ್ರತೀತಿ.

ಪೆನ್ನುಗಳಲ್ಲೂ ಸಹ ಹಲವು ವಿಧ. ಒಂದೊಂದು ಪೆನ್ನು ಒಂದೊಂದು ಥರ. ಆದರೇ ಎಲ್ಲಾ ಪೆನ್ನುಗಳು ಬರೆಯುವುದು ಒಂದೇ ಬಗೆ. ವಿವಿಧತೆಯಲ್ಲಿ ಏಕತೆ!

ಇಂಕ್ ಪೆನ್ನಲ್ಲಿ ಬರೆದರೇ ವಜಾನ್ ಜಾಸ್ತಿ, ಅದು ಬರವಣಿಗೆಗೆ ಅತ್ಯುತ್ತಮ ಎಂದು ಹಿರಿಯರು ಹೇಳುತ್ತಿದ್ದರು. ಆದರೆ ಅದರ ಬಳಕೆ ವಿದ್ಯಾರ್ಥಿಗಳಿಗೆ ಬಲು ಕಷ್ಟ. ಸ್ವಲ್ಪ ಅಜಾಗರೂಕತೆಯಲ್ಲಿ ಬಳಸಿದರೇ ಮೈಕೈಯೆಲ್ಲಾ ಮಸಿ. ಮಸಿ ಕಾಲಿಯಾಗುವುದು. ಅದನ್ನು ನಿತ್ಯ ತುಂಬುವುದು. ಗಾಳಿಗೆ ಅದು ಒಣಗಿ ಬರೆಯದೆ ಇರುವುದು. ಅದಕ್ಕಾಗಿ ಕೈಯಲ್ಲಿ ಒಮ್ಮೆ ಗಾಳಿಯಲ್ಲಿ ಹೊಡೆಯುವುದು.ಮಸಿ ಬೇರೆಯವರಿಗೆ ಸಿಡಿಯುವುದು. ಇತ್ಯಾದಿ ಚಟುವಟಿಗೆಗಳ ನಂಟು ಪೆನ್ನುಗಳದ್ದು.

ಕಡ್ಡಿ ಪೆನ್ನುಗಳದ್ದು ಇನ್ನೊಂದು ಕಥೆ. ರಿಫಿಲ್ ತುಂಬುದು, ಇಂಕ್ ಕಾಲಿಯಾಗಿದೆಯೋ ಇಲ್ಲವೋ ಎಂದು ನೋಡಲು ಪೆನ್ನು ಬಿಚ್ಚುವುದು. ಸ್ಪ್ರಿಂಗ್ ಹಾಕುವುದು. ಬಿಚ್ಚಿದಾಗ ಸ್ಪ್ರಿಂಗ್ ಕೈ ತಪ್ಪಿ ನೆಗೆಯುವುದು. ಬಟನ್ ಪೆನ್ನುಗಳನ್ನು ಹಾಗೆ ಹೀಗೆ ಒತ್ತುವುದು. ಟಕ್ ಟಕ್ ಶಬ್ಧ ಮಾಡುವುದು. ವೇಗವಾಗಿ ಬರೆಯಲು ರಿಪಿಲ್ ಪೆನ್ನುಗಳೇ ಬೇಸ್ಟ್ ಎಂದು ಮಾತನಾಡಿಕೊಳ್ಳುವುದು. ಕ್ಯಾಪ್ ಪೆನ್ನುಗಳ ರಾಜಾ ರೇನಾಲ್ಡ್ಸ್. ಎಕ್ಸಾಮ್ ಮೊದಲು ಹೊಸ ಪೆನ್ನು ಖರೀದಿ ಮಾಡುವುದು. ಅಷ್ಟರ ಮಟ್ಟಿಗೆ ಶಿಕ್ಷಣ ಪಡೆದವರೆಲ್ಲಾ ಇದರ ಓಡನಾಟದಲ್ಲಿ ಮಿಂದು ಎದ್ದಿರುವವರೆ.

ಓದು ಅಂದರೇ, ಬರವಣಿಗೆ ಎನ್ನುವುದು ಬಿಡಿಸಲಾರದ ಭಾಂದವ್ಯ. ಬರೆದುದು ಕೊನೆತನಕ. ಹೆಚ್ಚು ಓದುವುದು ಎಂದರೇ, ಹೆಚ್ಚು ಬರೆಯುವುದು. ಇದು ಅಂದಿನ ನಮ್ಮ ಗುರುಗಳ ಹೇಳಿಕೆ.

ನೋಟ್ಸ್ ಬರೆಯದೇ ಯಾರು ತಮ್ಮ ಶಿಕ್ಷಣ ಪೊರೈಸಿಲ್ಲಾ ಎಂದರೇ ತಪ್ಪಿಲ್ಲ.

ನಮ್ಮ ಬರವಣಿಗೆಯೇ ಕೊನೆ ಎಂದರೇ ನಮ್ಮ ಬಿ.ಎ, ಬಿ.ಈ ಅನಿಸುತ್ತದೆ. ಮತ್ತೆ ನಮ್ಮ ಜೇಬುಗಳು ಈ ಪೆನ್ನುಗಳನ್ನು ಕಂಡೇ ಇಲ್ಲ. ಪೆನ್ನಿನ ಅವಶ್ಯಕತೆಯೇ ಇಲ್ಲ ಎನ್ನುವ ಮಟ್ಟಿಗೆ ಅವುಗಳ ಬಳಕೆಯನ್ನು ಕಮ್ಮಿ ಮಾಡಿಕೊಂಡಿದ್ದೇವೆ. ಬರೆಯುವುದೇ ಮರೆತು ಹೋಗಿದೆ ಎನ್ನುವ ಮಟ್ಟಿಗೆ ಪೂರ್ತಿ ನಿಲ್ಲಿಸಿದ್ದೇವೆ.

ನಾವೆಲ್ಲಾ ಅಲ್ಲಿ ಇಲ್ಲಿ ಕೆಲಸ ದುಡಿತ ಎಂದು ತೊಡಗಿಕೊಂಡಿದ್ದೇವೆ. ಆದರೆ ಬರೆಯುವ ಜರೂರತು ಎಲ್ಲೂ ಇಲ್ಲ. ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್, ಟ್ಯಾಬ್ ಎಂಬ ಹತ್ತು ಹಲವು ಡಿಜಿಟಲ್ ಕೊಡುಗೆಗಳಲ್ಲಿ ನಮ್ಮ ಬರೆಯುವ ಕಲೆಯನ್ನು ನಿಲ್ಲಿಸಿಕೊಂಡುಬಿಟ್ಟಿದ್ದೇವೆ.

ಪೆನ್ನು ಪೇಪರ್ ಯಾವುದಕ್ಕೂ ಬೇಕಿಲ್ಲ. ಡಿಜಿಟಲ್ ಸ್ಕ್ರೀನ್ ಮೇಲೆ ಡಿಜಿಟಲ್ ಪೆನ್ನಿನಲ್ಲಿ ಸಹಿ ಮಾಡುವುದರ ಮಟ್ಟಿಗೆ ಬಂದು ನಿಂತಿದೆ.

ಹಿಂದೆ ಬ್ಯಾಂಕ್ ನಲ್ಲಿ ವ್ಯವಹಾರ ಮಾಡಬೇಕು ಎಂದರೇ ಪೆನ್ನು ಇಟ್ಟುಕೊಂಡು ಬ್ಯಾಂಕ್ ನೊಳಗೆ ಕಾಲು ಇಡಬೇಕಾಗಿತ್ತು. ಇಲ್ಲ ಅಂದರೇ ಹಣ ಪಡೆಯುವ ಮಾರ್ಗವೇ ಬಂದ್! ಇಂದು ನೋಡಿ ಎಲ್ಲಿ ಬೇಕಂದರೇ ಅಲ್ಲಿ ಹಣ ಪಡೆಯಬಹುದು ಅಥವಾ ಹಣವನ್ನು ಬ್ಯಾಂಕಿಗೆ ಜಮಾ ಮಾಡಬಹುದು. ಅದು ಯಾವುದೇ ಚಲನ್, ರಸೀದಿ ಸಹಿ ಏನೊಂದು ಭರ್ತಿ ಮಾಡದೇ.

ಹಳ್ಳಿಯಿಂದ ದಿಲ್ಲಿಯವರೆಗೂ ಪ್ರತಿಯೊಂದು ಡಿಜಿಟಲ್ ಮಯವಾಗಿದೆ. ಇಂದು ಯಾವುದೇ ದಪ್ಪ ದಪ್ಪ ಪುಸ್ತಕಗಳನ್ನು ಯಾವುದೇ ಕಛೇರಿಯಲ್ಲಿ ಪೋಷಿಸಿಕೊಳ್ಳಬೇಕಿಲ್ಲ. ಒಂದು ಚಿಕ್ಕ ಕಂಪ್ಯೂಟರ್ ಪರದೆಯೊಳಗೆ ಅಗಾಧವಾದ ಅಂಶಗಳನ್ನು ರಹಸ್ಯಗಳನ್ನು ಕಾಪಾಡಿಕೊಳ್ಳಬಹುದಾಗಿದೆ.

ಅಂಚೆ. ಅಂಚೆ ಕಾಗದಗಳ ಬಳಕೆ ನಿಂತು ಯಾವುದೋ ಕಾಲವಾಯಿತು.ನಾನು ನನ್ನ ಹತ್ತನೇಯ ತರಗತಿಯ ಪರೀಕ್ಷೆಯಲ್ಲಿ ಪತ್ರ ಬರೆದ ನೆನಪು. ಅನಂತರ ಅದರ ಬಳಕೆಯ ಜರೂರತೆಯೇ ಬಂದಿಲ್ಲ. ದೂರದ ಮಾಮನ ಕಾಗದಕ್ಕೆ ಕಾಯಬೇಕಿಲ್ಲ. ಇಂದು ಒಂದೇ ಕ್ಷಣದಲ್ಲಿ ಒಂದೇ ಕಾಲಿನಲ್ಲಿ ಎಲ್ಲಾ ವಿಚಾರಿಸಿಕೊಳ್ಳಬಹುದಾಗಿದೆ. ಅದು ವಿಡಿಯೋ ಮೊಲಕ ಡೈರಕ್ಟ್ ವಾಕಿ ಟಾಕಿ.

ಇಲ್ಲಿಗೆ ಬಂದು ನಿಂತಿದೆ ನಮ್ಮ ಸಂಹವನ.

ನಾನು ಬರೆದಿರುವ ಮೇಲಿನ ಪ್ರತಿಯೊಂದು ಅಕ್ಷರಗಳು ಲ್ಯಾಪ್ ಟಾಪ್ ಕೀಲಿ ಮಣಿಗಳಲ್ಲಿ ಕುಟ್ಟಿರುವುದು. ಪೆನ್ನು ಪೇಪರ್ ಯಾವುದೊಂದು ಇಲ್ಲದೇ ಬರೆದು ವೇಬ್ ಪೇಜ್ ಗೆ ಅಪಲೋಡ್ ಮಾಡಿದ ಲೇಖನ ಇದು.

ನಂಬಲು ತುಂಬ ಕಷ್ಟ ಆದರೇ ಇದೆ ನಿಜ.

ಅಷ್ಟರ ಮಟ್ಟಿಗೆ ಕಾಗದ ಕಾಗದವೆಂದು ಮರಗಿಡಗಳನ್ನು ಉಳಿಯಿಸಿದ್ದೀವಿ.

ಆದರೇ ಕೈಯಾರೇ ಪೆನ್ನಿನಲ್ಲಿ ಬಿಳಿ ಕಾಗದದ ಹಾಳೆಯ ಮೇಲೆ ಬರೆಯುವ ಸುಖ ಈ ಮೊಬೈಲ್, ಟ್ಯಾಬ್ ಗಳಲ್ಲಿ ಬರೆಯುವುದರಲ್ಲಿ ಸಿಗುವುದಿಲ್ಲ ಬಿಡಿ.

ಆದರೇ ಕಾಲ ಬದಲಾಗಿದೆ. ಅದಕ್ಕೆ ತಕ್ಕ ರೀತಿಯಲ್ಲಿ ತಾಂತ್ರಿಕತೆಯನ್ನು ಬಳಸಬೇಕಾಗಿದೆ. ವೇಗ ಅಂದರೇ ಇದೆ ಅನಿಸುತ್ತದೆ.

ಇಂದು ಹುಟ್ಟಿದ ಮಕ್ಕಳಿಗೂ ಅಕ್ಷರಗಳ ಓ ನಾಮವನ್ನು ಬಳಪಗಳಿಲ್ಲದೇ ಹೇಳಿಕೊಡಬಹುದಾಗಿದೆ. ಮಗ್ಗಿ ಪುಸ್ತಕಗಳಲ್ಲಿ ಕಲಿಯುತ್ತಿದ್ದ ಎಷ್ಟೊಂದು ಪ್ರಥಮ ಪಾಠಗಳನ್ನು ಯುಟೂಬ್ ನ ರೈಮ್ಸ್ ವಿಡೀಯೋಗಳಲ್ಲಿ ಹಿರಿಯರ ಸಹಾಯವಿಲ್ಲದೇ ಇಂದಿನ ಮಕ್ಕಳು ತಾವೇ ಕಲಿಯಯುತ್ತಿದ್ದಾವೆ.

ಹೀಗೆ ಮುಂದುವರಿದರೇ ಬರೆಯುವ ಕಲೆಯೇ ಇಲ್ಲದಂತಾಗಿ ಕೇವಲ ಸ್ಪರ್ಶ, ಟಚ್ , ಟೈಫ್ ಮಾಡುವುದರಲ್ಲಿ ನಿಪುಣರಾಗುವವರು ನಮ್ಮ ಮುಂದಿನ ಪೀಳಿಗೆ.  ಬರವಣಿಗೆ ಎಂದರೇ ಮೆಸೇಜ್ ಬರೆಯುವುದು. ಪ್ರಬಂಧವೆಂದರೇ ಪೇಸ್ ಬುಕ್ ವಾಲ್ ನಲ್ಲಿ ಕಾಮೆಂಟ್ ಹಾಕುವುದು ಎನ್ನುವಾಂತಾಗದಿರಲಿ ಎಂಬುದೇ ಎಲ್ಲಾರ ಹಂಬಲ.

ಏನೇ ವೇಗವಾದ ಡಿಜಿಟಲ್ ಯುಗವಿದ್ದರು, ಅದೇ ಹಳೆಯ ಕಾಲದಲ್ಲಿದ್ದ ಪೇಪರ್, ಪುಸ್ತಕಗಳು, ಪತ್ರಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡು ಹತ್ತಿರದಿಂದ ಓದುವ ಸುಖವನ್ನು ಯಾವ ಕಾಲಕ್ಕೂ ಯಾರು ನೀಡಲಾರರು. ಇಂದಿಗೂ ಜಗತ್ತಿನಲ್ಲಿ ಅತಿ ಹೆಚ್ಚಾಗಿ ಪ್ರತಿಯೊಬ್ಬರೂ ಇಷ್ಟಪಡುವುದು ಪ್ರಿಂಟೆಡ್ ಪುಸ್ತಕ ಮತ್ತು ಪತ್ರಿಕೆಗಳನ್ನೇ. ಇವುಗಳೇ ಜನಸಾಮಾನ್ಯರಿಗೆ ಎಲ್ಲಾ ಕಾಲಕ್ಕೂ ತೀರಾ ಹತ್ತಿರ ಮತ್ತು ಶಾಶ್ವತ.

ಬುಧವಾರ, ಅಕ್ಟೋಬರ್ 12, 2016

ಮನಸ್ಸು ಅವಳು ಊರು ನೆನಪು

ಅವತ್ತೇ ಅನಿಸಿತ್ತು ಇಷ್ಟು ಚೂಸಿಯಾಗಿ ಸಿಕ್ಕಿದ ಪ್ರೀತಿ ಕೊನೆಯವರೆಗೂ ಇರುವುದಾ? ಇದು ಯಾಕಾದರೂ ನನ್ನ ಮನಸ್ಸಿನಲ್ಲಿ ಅಂದು ಹಾಗೆ ಪಾಸ್ ಆಯಿತೋ? ಗೂತ್ತಿಲ್ಲ. ಸಿಕ್ತ್ ಸೇನ್ಸ್ ಎಂಬುದು ಒಮ್ಮೊಮ್ಮೆ ಹೀಗೆ ಕೆಲಸ ಮಾಡುತ್ತದೆ.

ಆದರೇ ಕಳೆದ ನಾಲ್ಕುವರೆ ವರುಷಗಳ ನೆನಪು ಇನ್ನು ಇಂದಿಗೂ ಹಸಿಯಾಗಿದೆ. ಅಂದು ಎಲ್ಲವೂ ಸುಂದರ. ಪ್ರತಿ ಘಳಿಗೆಯು ಏನೋ ಹೊಸತನ. ಅವಳೊಬ್ಬಳು ಜೊತೆ ಇದ್ದರೇ ಏನೂ ಬೇಕಾದರೂ ಜಯಿಸುವೆನು ಎಂಬ ದೈರ್ಯ.ಮುಂಜಾನೆಯ ಸೂರ್ಯನ ಕಿರಣಗಳನ್ನು ಕಾಣುವಂತಾ ಮನಸ್ಸು. ಯಾವಾಗ ಬೆಳಕಾಗುವುದೋ..  ಬೆಳ್ಳಂ ಬೆಳಗ್ಗೆಯಲ್ಲಿ ಯಾವಾಗ ನಮ್ಮೂರಿನ ಬಸ್ ನ ಮೊದಲ ಹಾರ್ನ್ ಕಿವಿಗೆ ಬೀಳುವುದೋ. ನಾನು ಕಾಲೇಜು ಎಂದುಕೊಂಡು.. ಎದ್ದು, ಬಿದ್ದು ಸಿದ್ಧವಾಗುವುದು.

ನಾನು ಪ್ರತಿದಿನ ಸೂರ್ಯ ಹುಟ್ಟುವುದಕ್ಕೂ ಮೊದಲು ಕಾಲೇಜಿಗೆ ಸಿದ್ಧವಾಗುತ್ತಿದ್ದ ರಭಸಕ್ಕೆ ಅಮ್ಮನೇ ದಂಗಾಗಿದ್ದಳು.

ಏನ್ ಮಗಾ ಎಷ್ಟು ಕಟ್ಟುನಿಟ್ಟಾಗಿ ಓದಿನ ಬಗ್ಗೆ ಪ್ರೀತಿ ಇಟ್ಟುಕೊಂಡಿದೆ. ಬಿಡು ಮುಂದೊಂದು ದಿನ ಊರಿಗೆ ದೊಡ್ಡ ಅಧಿಕಾರಿಯಾಗಿ ಬಂದೇ ಬರುತ್ತಾನೆ. ಎಂದು ಮನದಲ್ಲಿಯೇ ಸಂತಸಪಟ್ಟಿದ್ದಳು ಅನಿಸುತ್ತದೆ.

ಬೇಡವೆಂದರೂ ರಾತ್ರಿ ಉಳಿಸಿದ ಹಾಲನ್ನು ಬಿಸಿ ಮಾಡಿ ಕಾಫಿ ಪೌಡರ ಮಿಕ್ಸ್ ಮಾಡಿ ನನಗೆ ಎಂದೇ ಕಾಫಿ ಮಾಡಿಕೊಡುತ್ತಿದ್ದುದು. ಎಲ್ಲೋ ಉಳಿಸಿ, ಹಾಗೆಯೇ ಮಡಿಸಿದ ಒದ್ದೆ ಒದ್ದೆಯ ಹತ್ತರ ಎರಡು ನೋಟುಗಳನ್ನು ನನ್ನ ಎದೆ ಮೇಲಿನ ಜೋಬಿಗೆ ನಿತ್ಯ ಇಡುತ್ತಿದ್ದುದು.

ಅದು ತಾಯಿ ಪ್ರೀತಿ! ಈ ಪ್ರೀತಿ ಒಂದೇ ನಾನು ಈಗಲೂ ಜೀವಂತವಾಗಿ ಇರುವಂತೆ ಮಾಡಿರುವುದು.

ಅಂದು ಇದನ್ನು ಅರ್ಥ ಮಾಡಿಕೊಳ್ಳುವ ವಯಸ್ಸು ನನ್ನದಾಗಿರಲಿಲ್ಲ.

ಬಸ್ ನಲ್ಲಿ ಕುಳಿತರೂ ವರುಷವಾದಂತೆ. ಯಾವಾಗ ಈ ಡ್ರೈವರ್ ಬರುವನೋ? ಯಾವಾಗ ಹೊರಡುವನೋ? ಎಂದು ಪೂರ್ತಿ ಸಿಟ್ಟಲ್ಲಿ ಕಿಟಕಿಯಾಚೆ ನಿಂತು ಟೀ ಕುಡಿಯುತ್ತಿರುವವನ್ನು ಮನದಲ್ಲಿಯೇ ಶಪಿಸುತ್ತಿದ್ದೆ.

ಮುಂಜಾನೆಯ ಸಮಯ ಓದುವುದಕ್ಕೆ ಹೇಳಿ ಮಾಡಿಸಿದ ಸಮಯವಂತೆ. ಆಗ ಏನೂ ನೆನಪು ಮಾಡಿಕೊಂಡರು, ಓದಿದರೂ ಮನಸ್ಸಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವುದಂತೆ. ಆದರೇ ಆ ಸಮಯದಲ್ಲಿ ಅವಳ ನೆನಪಲ್ಲದೇ ಇನ್ನು ಏನೂ ಮನದಲ್ಲಿರಲಿಲ್ಲ. ಆದಕ್ಕೆ ಇರಬೇಕು ಈಗಲೂ ಅವಳ ಪ್ರತಿ ಚಲನೆಯು ಹಾಗೆಯೇ ಪ್ರತಿಭಾರಿ ಮೈ ಮನ ತಟ್ಟುತ್ತದೆ.

ಬಸ್ ಸ್ವಲ್ಪ ಸ್ವಲ್ಪ ಸೌಂಡ ಮಾಡಿಕೊಳ್ಳುತ್ತಾ ಹಳ್ಳವನ್ನು ಶಕ್ತಿಯಿಲ್ಲದ ಹುಡುಗನಂತೆ ಉಸಿರು ಬಿಗಿ ಇಟ್ಟುಕೊಂಡು ಏರುತ್ತಿದ್ದರೇ.. ಆ ದಡದ ಮೇಲಿರುವ ನನ್ನ ಹುಡುಗಿಯ ಊರಿನ ಒಂದೊಂದೇ ನೋಟ ಕಂಡು ಎದೆಯ ಬಡಿತ ಏರುತ್ತಿತ್ತು. ಅವಳು ಬಂದಿರುತ್ತಾಳೆ. ಅವಳಿಗೂ ನನ್ನ ಕಾತರ ಇದ್ದೇ ಇರುತ್ತದೆ. ಎಂದುಕೊಂಡು ನಿತ್ಯ ಖುಷಿಯಾಗುತ್ತಿದ್ದೆ.

ಇಂದು ರಾತ್ರಿಯೇ ಮೇಸೆಜ್ ಮಾಡಿದ್ದಳು. ಯಾಕೋ ಕಣೋ ನಿನ್ನ ಹೆಚ್ಚು ಮಿಸ್ ಮಾಡಿಕೊಂಡಂಗೇ ಆಗ್ತಾ ಇದೆ. ನಾಳೆ ನಿನ್ನ ಇಷ್ಟದ ಚೋಡಿದಾರ ಹಾಕಿಕೊಂಡು ಬರುತ್ತೇನೆ.. ಅಂದಿದ್ದಳು. ನಾನು ಲವ್ ಯು ಎಂದು ಹಾಗೆಯೇ ನಿದ್ದೆಗೆ ಜಾರಿದ್ದೆ.

ಬಸ್ ಅಂತೂ ಎಡಕ್ಕೆ ತಿರುಗಿ ಅಲ್ಲಿಯೇ ಬಂದ ಬಸ್ ಸ್ಟಾಪ್ ನಲ್ಲಿ ನಿಂತಿತು.

ಕಣ್ಣರಳಿಸಿ ಮುಂದಿನ ಬಾಗಿಲನ್ನೂ ನೋಡಿದ್ದೇ ಬಂತು.

ಇಲ್ಲಿ ಬಸ್ ಸ್ವಲ್ಪ ಹೊತ್ತು ನಿಲ್ಲುವುದು ಮಾಮೂಲು. ಯಾಕೆಂದರೇ ಇದು ಮೊದಲನೇಯ ಊರು. ಇಲ್ಲಿಯು ಪುನಃ ಪ್ರತಿಯೊಬ್ಬರೂ ಟೀ-ತಿಂಡಿ ಸೇವಿಸುತ್ತಾರೆ. ಅದು ಇದು ಎಂದು  ಸಣ್ಣ ಕುಶೋಲಹಪರಿ ಪರಸ್ಪರ ನಡೆಯುತ್ತದೆ. ಮೂರು ಊರುಗಳಿಗೂ ಇದು ಒಂದೇ ಬಸ್ ಸ್ಟಾಪ್. ಜನಗಳು ಅಕ್ಕಪಕ್ಕದ ಎರಡು ಊರುಗಳಿಂದಲೂ ಮುಂಜಾನೆಯೇ ನಡೆದುಕೊಂಡು ಬರುತ್ತಾರೆ. ಪಾಪ ಬರಲಿ ಜನ. ಏನೂ ಐದು ಹತ್ತು ನಿಮಿಷ ಲೇಟ್ ಆದ್ರೆ ಪರವಾಗಿಲ್ಲ. ಚಿಹಳ್ಳಿಯಿಂದ ಚಚ್ಚಿದಾರಯಿತು ಎಂಬ ಕರುಣೆ ಈ ಬಸ್ಸಿನ ಡ್ರೈವರ್ ನದು.

ಆದರೇ ನನ್ನ ಹುಡುಗಿಯ ಸುಳಿವೇ ಇಲ್ಲ..!

ಏನೇ ಲೇಟ್ ಎಂದರೂ ಐದು ನಿಮಿಷಕ್ಕೂ ಜಾಸ್ತಿ ಲೇಟ್ ಮಾಡಿಲ್ಲ ಯಾವತ್ತು.

ಏನಾಗಿರಬಹುದು? ಮೇಸೆಜ್ ಮಾಡಲಾ.. ಕಾಲ್ ಮಾಡಲಾ ಎಂಬ ಕನಪ್ಯೂಸನ್ ನಲ್ಲಿ ಚಟಪಟಿಸಿದೆ.

ಹಿಂದಿನ ಸೀಟ್, ಮುಂದಿನ ಸೀಟ್ ನಲ್ಲಿ ನಮ್ಮ ಊರಿನವರ ದಂಡೇ ದಂಡು. ಸ್ವಲ್ಪ ಸಂಕೋಚ, ಹೆಚ್ಚು ಢವಢವ ಎದೆಯ ಬಡಿತದಲ್ಲಿ ಅವಳ ಮನೆಯಿರುವ ದಾರಿಯ ಕಡೆಗೆ ಬಲ ಬದಿಯ ಕಿಟಿಕಿಯಿಂದ ಹಾಗೆಯೇ ಕಣ್ಣು ಹಾಯಿಸಿದೆ.

ನೋ!  ಅವಳ ಸಪ್ಪಳವೇ ಇಲ್ಲ.

ಆಗಲೇ ಕಂಡಕ್ಟರ್ ರೈಟ್ -ರೈಟ್ ಹೇಳುತ್ತಿದ್ದಾನೆ... ಕಾಲ್ ಮಾಡಲು ಧೈರ್ಯ ಬರದೇ ಮೇಸೆಜ್ ಕುಟ್ಟಿದೆ.  ಮೇಸೆಜ್ ಸೆಂಡ್ ಆಗಿದ್ದು ಕನಪರ್ಮ್ ಮಾಡಿಕೊಂಡೆ ಹ್ಯಾಪು ಮೊರೆ ಮಾಡಿಕೊಂಡೆ.

ಬಸ್ ಹಾಗೆಯೇ ಬಲಕ್ಕೆ ಒರಳಿತು. ಜಾಲಿ ಮುಳ್ಳುಗಳಿರುವ ಸೆರಗಿನಲ್ಲಿ ತಿರುಗಿ ಮುಂದಿನ ಹಳ್ಳದೊಳಕ್ಕೆ ಇಳಿಯಲಾರಂಬಿಸಿತು. ದಾರಿ ದೂರವಾಯಿತು, ಅವಳು ಇನ್ನು ಹತ್ತಿರವಾದಳು.

ಪುನಃ ಆಸೆಯ ಕಣ್ಣಿನಿಂದ ಜನ ಜಂಗುಳಿಯ ಮಧ್ಯದಲ್ಲಿ ಪುನಃ ಹಿಂದಿನ ಬಸ್ ಗ್ಲಾಸ್ ನಲ್ಲಿ ಕಾಣದ ದಾರಿಯ ಕಡೆ ಬಿಟ್ಟ ಕಣ್ಣಲ್ಲಿ ನೋಡಿದೆ. ಹಿಂದಿನ ಸೀಟನಲ್ಲಿದ್ದ ದೊಡ್ಡ ಮೀಸೆಯ ಈರಜ್ಜ ಬೊಚ್ಚು ಬಾಯಲ್ಲಿ ನಕ್ಕಿದ್ದು ಮಾತ್ರ ಲಕ್ಷಣವಾಗಿ ಕಾಣಿಸಿತು.

ಮನದಲ್ಲಿ ತಳಮಳ. ಮುಂದಿನ ಸ್ಟಾಪ್ ನಲ್ಲಿ ಹಿಳಿದು ಹೋಗವುದೇ ಎಂದು ಒಂದು ಮನಸ್ಸು ಕೇಳಿದರೇ.. ಇನ್ನೊಂದು ಮನಸ್ಸು ಈರಜ್ಜ ನ ನಗುವನ್ನು ನೆನಪಿಸಿ ಸುಮ್ಮನಿರು ಎಂದಿತು.

ಈ ಹುಡುಗಿಯರೇ ಹೀಗೆ ಅನಿಸುತ್ತದೆ. ಯಾವಾಗಲೂ ಹತ್ತಿರವೇ ಇರುತ್ತೇವೆ ಅನ್ನುತ್ತಾರೆ. ನೀನೇ ನನ್ನ ಜೀವ ಅನ್ನುತ್ತಾರೆ. ಮೀಸ್ ಮಾಡಿಕೊಳ್ಳುತ್ತಿದ್ದೇನೆ ಅನ್ನುತ್ತಾರೆ. ನೀನು ಬೇಕು ಅನ್ನುತ್ತಾರೆ. ಆದರೇ ಈ ರೀತಿ ಹೇಳದೆ ಕೇಳದೇ ಕೈ ಕೊಡುತ್ತಾರೆ.

ಹುಡುಗಿಯರಿಗೆ ಏನೂ ಗೊತ್ತು ಗಂಡಸರ ದುಃಖ?

ಪುನಃ ಪುನಃ ಮೊಬೈಲ್ ಕಡೆ ಬಗ್ಗಿ ಬಗ್ಗಿ ನೋಡಿದ್ದೆ ಬಂತು.

ನೂ ರಿಪ್ಲೇ...!

ಎಷ್ಟು ಹೊತ್ತಿಗೆ ಕಾಲೇಜು ತಲುಪುವೇನೋ ಅನ್ನಿಸಿತು. ಈ ಬಸ್ , ಈ ರೋಡ್ ದೇವರಿಗೆ ಪ್ರೀತಿ ಅನಿಸಿತು. ಯಾಕೋ ಮುಂಜಾನೆಯ ಆಹ್ಲಾದತೆಯೇ ಇಲ್ಲವೇನಿಸಿತು. ಸೂರ್ಯ ಮಂಕಾಗಿದ್ದಾನೆ ಅನಿಸಿತು.

ಪುರದಲ್ಲಿ ಬಸ್ಸು ನಿಂತಾಗ ಒಂದು ಚಿಕ್ಕ ಹರಕೆಯನ್ನು ಲಕ್ಷ್ಮಿ ನರಸಿಂಹಸ್ವಾಮಿಯಲ್ಲಿ ಹೊತ್ತುಕೊಂಡೆ. ಕಾಲೇಜು ತಲುಪುವುದರಲ್ಲಿ ನನ್ನವಳ ಮೇಸೆಜ್ ಬರಲಿ. ನಾನು ಮುಂದಿನ ಶನಿವಾರ ಅವಳ ಜೊತೆಯಲ್ಲಿ ನಿನ್ನ ದರುಶನ ಮಾಡೇ ಮಾಡುವೆನೆಂದು!

ಕಾಲೇಜು ಅಂದರೇ ಕಾಲೇಜೇ. ಅಲ್ಲಿ ಎಂದೂ ಮರೆಯಲಾರದ ಕ್ಷಣಗಳಿರುತ್ತವೆ. ಗೆಳೆಯ ಗೆಳತಿಯರ ಜೊತೆಯಲ್ಲಿ ಕೊಡಿ ಕಲಿಯುವ ಪರಿಸರವಿರುತ್ತದೆ. ನಾವುಗಳು ನಮ್ಮನ್ನು ಅತ್ಯುತ್ತಮರನ್ನಾಗಿ ಮಾಡಿಕೊಳ್ಳುವ ಅವಕಾಶವಿರುತ್ತದೆ. ಕಲಿಯುವುದಕ್ಕೆ ವಿಫುಲವಾದ ವಾತವರಣವಿರುತ್ತದೆ. ಇಂಥ ಸರಸ್ವತಿಯ ನೆಲೆಯಾದ ಕಾಲೇಜಿಗೆ ನಿತ್ಯ ನಮಸ್ಕಾರ ಮಾಡಿ ಹೆಜ್ಜೆ ಇಡಬೇಕು.

ಪ್ರತಿಯೊಬ್ಬರ ಬದುಕಿಗೆ ಹೊಸ ಮಾರ್ಗ ತೋರುವ ನೆಲೆಬೀಡು ನಮ್ಮ ಶಿಕ್ಷಣ ಸಂಸ್ಥೆಗಳು.

ಮನವಿಲ್ಲದ ಮನಸ್ಸಿನಲ್ಲಿ ಬಸ್ಸನಿಂದ ಇಳಿದು ಮೊದಲು ಮಾಡಿದ್ದು ೯೮೦೪೨೦೩೨೦೧ ನಂಬರ್ ಗೆ ಕಾಲು. ಕಾಲ್ ಕನಕ್ಟ್ ಆಗುವುದಕ್ಕೂ ತಾತ್ಸರ ಮಾಡುತ್ತಿದೆ ಇಂದು. ಇದು ಹೀಗೆ ಕಷ್ಟ ಕಾಲದಲ್ಲಿಯೇ ಆಳಿಗೊಂದು ಕಲ್ಲು ಅನ್ನುವ ರೀತಿಯಲ್ಲಿ. ಒಂದು, ಎರಡು ರೀಂಗ್ ಆಗಲು ಶುರುವಾಯಿತು. ಎದೆಯಲ್ಲಿ ಢವಢವ ಬಡಿತ. ನಾಲ್ಕನೇ ರೀಂಗ್ ಗೆ ಕಾಲ್ ಪೀಕ್ ಆಯ್ತು. ಆದರೇ ದ್ವನಿ ತೀರ ಅಪರಿಚಿತವೇನಿಸಿತು. ದೂಸರಾ ಮಾತನಾಡದೇ ಕಾಲ್ ಕಟ್ ಮಾಡಿದೆ.

ಅಲ್ಲ ಏನಾಯ್ತು ಇವಳಿಗೆ? ನೆನ್ನೆ ಸರೀ ರಾತ್ರಿಯವರೆಗೂ ಟಚ್ ಲ್ಲಿ ಇದ್ದವಳಿಗೆ. ಬೆಳಕು ಹರಿಯುವುದರಲ್ಲಿ ಸುದ್ಧಿಯೇ ಇಲ್ಲ! ಮೊಬೈಲ್ ನ್ನು ಒಂದು ಕ್ಷಣ  ಬಿಟ್ಟಿರಲಾರದವಳು. ಹೀಗೆ ಮತ್ತೊಬ್ಬರೂ ರೀಸಿವ್ ಮಾಡುತ್ತಿದ್ದಾರೆ ಎಂದರೇ...? ಏನೂ ಅರ್ಥವಾಗಲಿಲ್ಲ.

ಯಾಕೋ ತಣ್ಣಗೆ ಮನಸ್ಸಿಗೆ ಶಾಕ್ ಆಯಿತು.  ಭಾರವಾದ ಹೆಜ್ಜೆಯನ್ನು ಹಾಕಿಕೊಂಡು ಕಾಲೇಜು ಮೆಟ್ಟಿಲನ್ನು ಹತ್ತುತ್ತಿದ್ದಂತೆ ಸುಭಾಷ್ ಸಿಕ್ಕಿದ. ಅವನು ಬಾರೋ ಕ್ಯಾಂಟಿನ್ ಗೆ ಹೋಗೋಣ ಇನ್ನು ೩೦ ನಿಮಿಷ ಇದೆ ಎಂದ. ಆದರೆ ನಾನು ಅದು ಕಿವಿಗೆ ಬಿಳಿಸಿಕೊಳ್ಳದ ರೀತಿಯಲ್ಲಿ ಇನ್ನೊಂದು ಸ್ಟೆಪ್ ಇಟ್ಟೆ. ಹಿಂದಿನಿಂದ ಸರಿಯಾಗಿ ಗುದ್ದಿದ.  ಆಗ ಎಚ್ಚರವಾದಂತಾಗಿ ಹಾಯ್ ಎಂದೇ.

ಪುನಃ ಅವನೇ ಹೇಳಿದ. ಸಾಯೇಬ್ರ್ ಮೂಡ್ ಯಾಕೋ ಸರಿ ಇಲ್ಲಾ!

ಗೊತ್ತಾಯಿತು ಬಿಡು. ನೀ ಒಂಟಿಯಾಗಿ ಬಂದಾಗಲೇ ಅಂದುಕೊಂಡೆ! ಯಾಕೋ ನಿನ್ನ ಹುಡುಗಿ ನಿನ್ನ ಜೋತೆ ಬರಲಿಲ್ಲವಾ? ಒಂದೇ ಮಾತಲ್ಲಿ ’ಇಲ್ಲಾ’ ಎಂದೇ. ಏಯ್ ಬಿಡು ಗುರು. ಏನೋ ಕೆಲಸ ಇರುತ್ತೇ ಅದಕ್ಕೆ ಬಂದಿಲ್ಲ.  ಇಷ್ಟು ಚಿಕ್ಕ ವಿಷಯಗಳಿಗೆಲ್ಲ ಹುಡುಗರು ಬೇಜಾರು ಮಾಡಿಕೊಳ್ಳಬಾರದು. ಹುಡುಗಿಯ ಒಂದು ಮೇಸೆಜು, ಒಂದು ಕಾಲ್ ಬರದಿದ್ದರು ಜಗತ್ತೇ ಮುಳುಗಿದ ರೀತಿಯಲ್ಲಿ ವರ್ತಿಸುತ್ತಿರಾ ಕಣ್ರೋ .. ಎಂದು ಚಿಕ್ಕ ವೇದಾಂತ ಹೇಳಿ - ಬಾ ಈಗ ಕ್ಯಾಂಟಿನಗೆ ಹೋಗೋಣ. ನನಗೆ ಸಿಕ್ಕಪಟ್ಟೆ ಹಸಿವು ಎಂದ.

ಆದರೇ ನನ್ನ ಮನಸ್ಸು ಇನ್ನೂ ಅವಳ ಊರುಬಿಟ್ಟು ಬಂದಿರಲಿಲ್ಲ... ಯಾವುದೋ ಕೆಟ್ಟ ಘಟನೆಗೆ ಮುನೂಚನೆಯೆಂಬಂತೆ.

ಬುಧವಾರ, ಸೆಪ್ಟೆಂಬರ್ 14, 2016

ಕಾವೇರಿ ನೀರು ಹಸನಾಗಿ ಹರಿದು ಅಳಿಸಲಿ

ಕಳೆದ ವಾರ ಕರಾಳ ದಿನಗಳನ್ನು ಬೆಂಗಳೂರು ಮತ್ತು ಕನ್ನಡ ನಾಡು ಕಂಡಿತು. ಅಕ್ಷರಶಃ ಬೆಂಗಳೂರು ದಗದಗಿಸಿ ಬೆಂಕಿಯಲ್ಲಿ ಉರಿದು ಹೋಯಿತು.  


ಕೋರ್ಟ ಆದೇಶದಂತೆ ನೀರನ್ನು ಕಳೆದುಕೊಂಡೆವು. ಆದರ ನೋವು ಇನ್ನು ಆರುವ ಮೊದಲೇ..ಬೆಂಗಳೂರು ಶಾಂತಿಯ ಉದ್ಯಾನ ನಗರಿ ಎಂಬ ಹೆಸರು ಕಳಚಿ ಬೀಳುವಂತೆ ಶಾಂತಿಯ ಹಸಿರು ವಾತವರಣವನ್ನೇ ಹೊಗೆಯಲ್ಲಿ ತೂರಿಬಿಟ್ಟೇವು.  


ಅಮಾಯಕ ಸಾಮಾನ್ಯ ಜನಗಳಿಗೆ ಭಯವೊಂದು ಬಿಟ್ಟು ಮತ್ತೇನೂ ತೋಚದಂತಾಗಿತ್ತು.  


ಕೆಲಸವೆಂದು ಮನೆಯಿಂದ ಹೊರಗಡೆ ಹೋದವರು ಸಂಜೆ ಯಾವುದೇ ಅಪಾಯವಿಲ್ಲದೇ ವಾಪಸ್ಸು ಬರುವರೋ ಇಲ್ಲವೋ ಎಂಬಂತೆ ಮನೆಯಲ್ಲಿದ್ದವರೆಲ್ಲಾ ತಳಮಳದಲ್ಲಿ ಬೆಂದು ಹೋಗಿದ್ದೇ ಬಂತು.  


ಮನುಷ್ಯನಷ್ಟು ಕೆಟ್ಟ ಪ್ರಾಣಿ ಮತ್ತೊಬ್ಬನಿಲ್ಲ! ಮನುಷ್ಯನತ್ವ ಎಂಬುದು ಎಲ್ಲಿದೇ? ಮನುಷ್ಯನ ನಾಗರೀಕತೆ ಬೆಳೆದಂತೆ ತನ್ನ ಸೂಕ್ಷ್ಮತೆಯನ್ನು ಮರೆಯುತ್ತಾನೆಂಬುದನ್ನು ಕೆಲವೇ ಕೆಲವು ದುಷ್ಟ ಜನಗಳಿಂದ ಪುನಃ ನಿರೂಪಿಸಿದಂತಾಗಿದೆ.  


ಹಿ0ದಿನಿಂದಲೂ ಮಾನವ ಪ್ರತಿಯೊಂದನ್ನು ಹೋರಾಟದಿಂದಲೇ ಗೆದ್ದುಕೊಂಡಿದ್ದಾನೆ. ಆಗಂಥಾ ಹಿಂಸೆಯ ಮಾರ್ಗವನ್ನು ಹಿಡಿದು ನಡೆಯುವುದು ಮನುಷ್ಯ ಮಾತ್ರರು ಮೆಚ್ಚುವ ದಾರಿಯಲ್ಲ!  


ಮುಂದುವರಿದ ಟೆಕ್ನಾಲಜಿ ನಮ್ಮ ಮನೋಭಾವನೆಯನ್ನು ವಿಸ್ತಾರ ಮಾಡಬೇಕು. ಆದರೇ ಯಾಕೋ ಸಂಕೋಚತತೆಗೆ ಒಡ್ಡಿಕೊಂಡು ಹೆಚ್ಚು ಹೆಚ್ಚು ಸಂಕೀರ್ಣನಾಗುತ್ತಿದ್ದೇವೆ.  


ಸಾಮಾಜಿಕ ತಾಣಗಳಲ್ಲಿ ಯಾರೋ ಏನೂ ಗೊತ್ತಿಲ್ಲದವನು ಏನೋ ಪೋಸ್ಟ್ ಮಾಡಿದ ಎಂದು ಕೊಂಡು ನಮ್ಮ ನಮ್ಮ ನಡುವೆಯೇ ಕೊಚ್ಚುವ ಕೊಲ್ಲುವ ಸಂಸ್ಕೃತಿಗೆ ಇಳಿಯುತ್ತಿರುವುದು ತುಂಬ ವಿಪರ್ಯಾಸ.  


ಯಾವುದಕ್ಕೆ ಮತ್ತು ಯಾರಿಗೆ ಮಹತ್ವವನ್ನು ಕೊಡಬೇಕು ಎಂಬುದನ್ನೇ ನಾವುಗಳು ಮರೆತುಬಿಟ್ಟಿದ್ದೇವೆ. ಯಾವುದು ಮುಖ್ಯ ಯಾವುದು ಅಮುಖ್ಯ ಎಂಬ ಪರಾಂಶೆ ಮಾಡುವುದನ್ನೇ ಬಿಟ್ಟುಬಿಟ್ಟಿದ್ದೆವೆ.
 


ಹೆಚ್ಚು ಲೈಕ್ ಆಗಿದ್ದೆಲ್ಲಾ ಸತ್ಯವಾದದ್ದು. ಹೆಚ್ಚು ಹೆಚ್ಚು ಶೇರ್ ಆಗಿದ್ದೇ ನಿಜವಾದ ಘಟನೆ ಎಂದುಕೊಂಡುಬಿಟ್ಟಿದ್ದೇವೆ. ವೇಗವಾಗಿ ರೀಯಾಕ್ಟ್ ಮಾಡುತ್ತಿರುವುದೇ ನಮ್ಮ ಜೀವಂತಿಕೆಯಾಗಿದೆ. ಟೋಟಲಿ ನಮ್ಮತನವನ್ನೇ ನಾವು ಮರೆಯುತ್ತಿದ್ದೇವೆ.  


ಸರ್ಕಾರವೇ ಎಲ್ಲದಕ್ಕೂ ಹೊಣೆ. ಎಲ್ಲದಕ್ಕೂ ಸರ್ಕಾರವೇ ಕಾರಣ. ಈ ರೀತಿಯ ಚಿಂತನೆ ಮುಖ್ಯ ಮಾಡುತ್ತಿರುವುದು ಮತ್ತು ರಾಜಕೀಯವಾಗಿ ಪ್ರತಿಯೊಬ್ಬರೂ ಚಿಂತಿಸುತ್ತಿರುವುದು. ಲಾಭ ನಷ್ಟಗಳ ಮೆಲಾಟದಲ್ಲಿ ಮನುಷ್ಯತ್ವವನ್ನೇ ಗಾಳಿಗೆ ತೂರುತ್ತಿದ್ದೇವೆ.  


ಒಕ್ಕೊಟಗಳ ಭಾರತದಲ್ಲಿ ರಾಜ್ಯ ರಾಜ್ಯಗಳ ನಡುವೆ ಗಡಿಗಳನ್ನು ನಿರ್ಮಿಸಿಕೊಂಡು ವೈರತ್ವವನ್ನು ಸಾಧಿಸಲು ಹೊರಡುತ್ತಿರುವುದು ದೊಡ್ಡ ವಿಪರ್ಯಾಸ!  


ಭಾಷೆ, ಬಣ್ಣ, ರಾಜ್ಯ, ನೆಲ, ಜಲ ಈ ಎಲ್ಲಾದಕ್ಕೂ ಮಿಗಿಲಾದದ್ದು ಮನುಷ್ಯತ್ವ ಮತ್ತು ಒಳ್ಳೆತನ ಎಂಬುದನ್ನು ಮರೆತಿರುವುದು. ನಾವುಗಳು ಅರಿತವರು ಎಂದು ಹೇಳಿಕೊಳ್ಳುವುದಕ್ಕೇ ನಾಚಿಕೆಯಾಗುತ್ತದೆ.  


ಎರಡು ರಾಜ್ಯದ ನಾಯಕರುಗಳು ಕುಳಿತು ಬಗೆಹರಿಸಿಕೊಳ್ಳಬಹುದಾದಂತಹ ಸಮಸ್ಯೆಗಳನ್ನು ಎರಡು ರಾಜ್ಯದ ಜನಗಳು ಹೇಗೆ ನ್ಯಾಯ ಒದಗಿಸಬಲ್ಲರು?  


ಇಂಥ ಸಮಯಗಳಲ್ಲಿ ಮೊದಲು ಜನಗಳಿಗೆ ಸರ್ಕಾರದ ನಾಯಕರುಗಳಿಂದ ಸ್ಪಷ್ಟ ಸಂದೇಶ ರವಾನೆಯಾಗಬೇಕು. ಸರ್ಕಾರವೇ ಜನರಗಿಂತ ವೇಗವಾಗಿ ರೀಯಾಕ್ಟ್ ಮಾಡಬೇಕು.  


ಕೋರ್ಟ ನ್ಯಾಯಾದೇಶ ಈ ಎಲ್ಲದಕ್ಕೂ ಮೊದಲು ಒಬ್ಬ ಉತ್ತಮ ನಾಗರಿಕನಾಗಿ ಎರಡು ರಾಜ್ಯದ ಮುಖ್ಯ ಮಂತ್ರಿಗಳು ಸಾಧಕ ಬಾಧಕಗಳನ್ನು ತೆರೆದ ಕಣ್ಣುಗಳಿಂದ ನೋಡಬೇಕು.  


ಇಲ್ಲಿರುವವರು ಜನರೇ ಅಲ್ಲಿರುವವರು ಜನರೇ. ಅವರಿಗೂ ಅನ್ಯಾಯವಾಗಬಾರದು ಇವರಿಗೂ ಅನ್ಯಾಯವಾಗಬಾರದು. ಇರುವ ಒಂದೇ ದೇಶದಲ್ಲಿ ಯಾಕೇ ಈ ಕಚ್ಚಾಟ? ಯಾಕೆ ಸಮಾನ ಸಮಾನತೆಯ ನಡಾವಳಿ ಇಲ್ಲಿ ಪ್ರದರ್ಶಿಸಬಾರದು?  


ಸುಖ ಸುಮ್ಮನೇ ರೋಚ್ಚಿಗೆದ್ದು ಬೆಂಕಿ ಹಚ್ಚಿದರೇ ಈ ಸಮಸ್ಯೆ ಎಂದು ಬಗೆಹರಿಯುವುದಿಲ್ಲ!  


ಇಲ್ಲಿ ನೊಂದು ಬೆಂದು ಹೋಗುವುವರು ಪುನಃ ಜನ ಸಾಮಾನ್ಯರೇ. ರೈತರಿಗೆ ನೀರು ಬೇಕು. ಜನಸಾಮನ್ಯರಿಗೂ ಕುಡಿಯುವ ನೀರು ಬೇಕು. ಪ್ರತಿಯೊಬ್ಬರು ಬದುಕಲೇ ಬೇಕು. ಬದುಕಬೇಕೆಂದು ಇನ್ನೊಬ್ಬರನ್ನು ತುಳಿದು ಎಂದಿಗೂ ಬದುಕಬಾರದು.  


ಒಂದೇ ಮಾತರಂ ಎಂದು ಜಪಿಸಿದ ನಾಡಲ್ಲೇ ದೊಂಬಿ ದಬ್ಬಾಳಿಕೆ? ನಮ್ಮ ನೆಲದಲ್ಲೆ ನಮ್ಮ ನಮ್ಮನ್ನು ಕಾಯಲು ಸೇನೆ, ಪೊಲೀಸ್! ನಾವುಗಳು ಆರಾಮಾಗಿ ಓಡಾಡುವ ಓಣಿಗಳಲ್ಲಿ ಗನ್, ಲಾಟಿಗಳ ಸಪ್ಪಳ!  


ನಾವೇನೂ ಯುದ್ಧ ಭೂಮಿಯಲ್ಲಿದ್ದೇವೆ?



ಕಾವೇರಿಯ ಒಟ್ಟು ಉದ್ದ ೮೦೨ ಕೀ.ಮಿ. ರಾಜ್ಯದಲ್ಲಿ ಕಾವೇರಿ ಜಲಾಯನ ಪ್ರದೇಶ ೩೪ ಸಾವಿರ ಕೀ.ಮಿ ಇದ್ದರೆ.. ತಮಿಳುನಾಡು ೪೪ ಸಾವಿರ ಕೀ.ಮಿ ಹೊಂದಿದೆ.


ಕಾವೇರಿ ನದಿಯ ನೀರು ಹಂಚಿಕೆಯ ವಿಚಾರ ೧೮೯೨ ರಿಂದ ಶುರುವಾಗಿ ಇಂದಿನವರೆಗೂ ಸಾಗುತ್ತಲೆ ಬರುತ್ತಿದೆ. ಮಳೆಯಾಗಿ ನೀರು ತುಂಬಿ ಹರಿದರೇ ಯಾರಿಗೂ ಸಮಸ್ಯೆ ಇಲ್ಲ. ಮಳೆ ಕೈ ಕೊಟ್ಟ ಕಾಲಕ್ಕೆ ಈ ಎಲ್ಲಾ ಸಮಸ್ಯೆ.


ರಾಜರ ಕಾಲದಲ್ಲಿ ವಿಶ್ವೇಶ್ವರಯ್ಯವನವರ ಯೋಜನೆಯಂತೆ ಎರಡುವರೆ ಕೋಟಿ ರೂಪಾಯಿಯಲ್ಲಿ ಕನ್ನಂಬಾಡಿಯ ಕಟ್ಟೆಯನ್ನು ಕಟ್ಟಿದರು.

ಅಣೆಕಟ್ಟು ಕಟ್ಟಿ ಮಳೆ ಇಲ್ಲದ ಕಾಲಕ್ಕೆ ನೀರು ಇರಲಿ ಎಂದು ಇಟ್ಟುಕೊಂಡರೇ ಅದನ್ನೇ ಬಿಡಿ ಎಂದು ಪಿಳ್ಳೆ ನೆವ ತೆಗುಯುತ್ತಿದೆ ನೆರೆ ರಾಜ್ಯ.




ತಮಿಳುನಾಡಿನಲ್ಲಿ ಕಾಣುವ ರಾಜಕೀಯ ಇಚ್ಛಾ ಶಕ್ತಿ ನಮ್ಮ ರಾಜ್ಯದಲ್ಲಿರುವ ರಾಜಕೀಯ ನಾಯಕರುಗಳಿಗೆ ಬರಬೇಕು. ನಿತ್ಯ ಸಮಸ್ಯೆಯಾಗಿರುವ ಈ ವಿಷಯಕ್ಕೆ ಪೂರ್ಣ ಪ್ರಮಾಣದ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.






ಪ್ರತಿ ವರುಷ ಕೋರ್ಟ್ ಖರ್ಚಿಗೆ ೨೦ ಸಾವಿರ ಕೋಟಿಗೂ ಹೆಚ್ಚು ಹಣ ಹರಿಸಿದರೂ ನೀರಿನ ಜಗಳಕ್ಕೆ ಅಂತ್ಯ ಕಾಣಿಸಲು ಸಾಧ್ಯವಾಗಿಲ್ಲ!



ಹತ್ತು ಹಲವಾರು ವರುಷಗಳ ನೀರಿನ ಹಂಚಿಕೆಯ ಹಗ್ಗ ಜಗ್ಗಾಟವನ್ನು ನಿಲ್ಲಿಸಬಾರದೆ. ತಿಳಿದವರು ಮತ್ತು ಅಧಿಕಾರದ ಗದ್ದುಗೆಯಲ್ಲಿರುವ ಎರಡು ರಾಜ್ಯದ ಮುಖ್ಯಸ್ಥರು ಇದರ ಬಗ್ಗೆ ಶಾಂತವಾಗಿ ಯೋಚಿಸಬಾರದೆ

ರಾಜ್ಯದಲ್ಲಿರುವ ಜನತೆಗೆ ಸರ್ಕಾರದಿಂದ ಸಿಗಬೇಕಾದದ್ದು ರಕ್ಷಣೆ ಮತ್ತು ಶಾಂತಿಯ ಬಾಳ್ವೆ. ಸಾಮಾನ್ಯ ನಾಗರಿಕರ ಸಾವಲ್ಲ!





ಕಾವೇರಿ ನೀರು ಹಸನಾಗಿ ಹರಿದು ಎರಡು ರಾಜ್ಯದ ಜನಮನಗಳ ನೀರಿನ ಆಹಾಕಾರವನ್ನು ಅಳಿಸಲಿ !

ಸೋಮವಾರ, ಆಗಸ್ಟ್ 8, 2016

ಸ್ವಂತ ಕಾಲ ಮೇಲೆ

ಹೆಚ್ಚು ತಿಳಿದುಕೊಂಡಂತೆ ಬೇರೆಯವರೊಂದಿಗಿನ ಅವಲಂಬನೆ ಕಡಿಮೆಯಾಗುತ್ತದೆ ಅನಿಸುತ್ತದೆ.

 

ಚಿಕ್ಕ ವಯಸ್ಸಿನ ಮಕ್ಕಳ ನಡವಳಿಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಹಾಲುಗಲ್ಲದ ಹಸುಗೂಸು ಪೂರ್ತಿ ಅಮ್ಮನನ್ನೇ ಅವಲಂಭಿಸಿರುತ್ತದೆ. ಅಮ್ಮ ಕುಡಿಸಿದಾಗ ಮಾತ್ರ ಹೊಟ್ಟೆ ತುಂಬುವುದು. ಅಮ್ಮ ಹೆತ್ತಿಕೊಂಡು ಹೋದರೆ ಮಾತ್ರ ತಾನು ಇರುವ ತನ್ನ ಜಾಗ ಬದಲಿಸುವುದು. ಇಲ್ಲ ಎಂದರೇ ಏನೇಂದರೂ ಏನಾಗುವುದಿಲ್ಲ.

 

ಇದು ಏನನ್ನು ಸೂಚಿಸುತ್ತದೆ ಎಂದರೇ ತನ್ನ ಕೈಯಲ್ಲಿ ಆಗದ, ಸಾಮರ್ಥ್ಯಕ್ಕೆ ಸಿಲುಕದವನ್ನು ತನ್ನ ಸುತ್ತಲಿರುವ ತಾಯಿ, ತಂದೆ ಮತ್ತು ಕುಟುಂಬದವರಿಂದ ಪಡೆಯುವೆವು.

 

ಮಗು ತನ್ನ ಸುತ್ತಲಿನಲ್ಲಿ ನಡೆಯುವ ಚಿಕ್ಕ ಚಿಕ್ಕ ಘಟನೆ, ನೋಟ, ಮಾತು, ರುಚಿಗಳ ಮೊಲಕ ತನ್ನ ಜಾಣ್ಮೆಯನ್ನು ಬೆಳೆಸಿಕೊಳ್ಳುತ್ತದೆ. ಹಾಗೆಯೇ ತಾನು ಬೇರೆಯವರೊಂದಿಗಿನ ತನ್ನ ಅವಲಂಬನೆಯನ್ನು ಕಳಚಿಕೊಳ್ಳುತ್ತಾ ಹೋಗುತ್ತದೆ.

 

ಹೆತ್ತ ಅಮ್ಮನಿಗೆ ಆಶ್ಚರ್ಯವಾಗುತ್ತದೆ. ಯಾಕೋ ದಿನ ದಿನಕೆ ಮಗ/ಮಗಳು ತನ್ನಿಂದ ದೂರವಾಗುತ್ತಿದ್ದಾರೆ ಅನಿಸುತ್ತದೆ. ಪ್ರತಿಯೊಂದಕ್ಕೊ ನನ್ನ ಅಣತಿಯನ್ನು ಕಾಯಿತ್ತಿದ್ದ ಕೂಸುಗಳು ಇವೆಯೇ ಏನೂ ಅನಿಸುತ್ತದೆ.

 

ಹತ್ತಿರವಿದ್ದರೂ ದೂರವಿರುವಂತೆ ಮನಸ್ಸಿಗೆ ಫೀಲ್ ಆಗುತ್ತದೆ.

 

ಆದರೇ ಪ್ರತಿಯೊಬ್ಬರೂ ತನ್ನ ಮಕ್ಕಳು ಬೇರೆಯವರಿಗೆ ಹೊರೆಯಾಗಿ ಜೀವನ ನಡೆಸುವುದನ್ನು ಎಂದಿಗೂ ಇಷ್ಟಪಡುವುದಿಲ್ಲ.

 

ಮಕ್ಕಳು ತಮ್ಮ ದೇಹ ಬುದ್ಧಿ ಬೆಳೆದಂತೆ ತಮ್ಮ ದಾರಿಯನ್ನು ತಾನು ಕಂಡುಕೊಳ್ಳಲಿ ಎಂಬುದೇ ಜಗತ್ತಿನ ಎಲ್ಲಾ ಜೀವಿಗಳ ಆಶಯ.

 

ನೀವು ನೋಡಿರಬಹುದು ಕಾಲೇಜು ಮುಗಿಯಿತು ಎಂದರೇ ಸಾಕು. ಏಯ್ ಮಗಾ ಮೊದಲು ನಿನ್ನ ಕಾಲ ಮೇಲೆ ನೀನು ನಿಲ್ಲುವಂತಾಗು. ಯಾವುದಾದರೂ ಕೆಲಸ ಹುಡುಕಿಕೋ ಅನ್ನುತ್ತಾರೆ.

 

ದೊಡ್ಡವರಾಗುತ್ತಾ ಆಗುತ್ತಾ ನಾವುಗಳು ಸರ್ವ ಸ್ವತಂತ್ರರಾಗಲು ಶ್ರಮಿಸುವುವೆವು. ರೆಕ್ಕೆ ಬಂದ ಹಕ್ಕಿಯ ರೀತಿಯಲ್ಲಿ ತನ್ನದೆಯಾದ ಬದುಕನ್ನು ಕಟ್ಟಿಕೊಳ್ಳಲು ತೊಡಗುವೆವು. ಹೆತ್ತವರ ಮಡಿಲಲ್ಲಿ ಬೆಳೆದು ದೊಡ್ಡವರಾಗಿ ಹೊಸ ತೀರದ ಹುಡುಕಾಟಕ್ಕೆ ದಾಪುಗಾಲು ಇಡುವೆವು.

 

ಇದು ಕೇವಲ ಮನುಷ್ಯ ಜಾತಿಯಲ್ಲಿ ಮಾತ್ರವಲ್ಲ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯ ಪಾಡು ಇದು. ತಾನು ಯಾರ ಮೇಲು ಡಿಪೆಂಡ್ ಆಗಿಲ್ಲ ಎಂಬುದನ್ನು ನಿರೂಪಿಸುವ ಚಾಲೇಂಜು.

 

ಇದೆ ಜೀವನದ ಮರ್ಮ ತಾನು ತನ್ನವರಿಂದ ಕಲಿತ ಪಾಠವನ್ನು ಸ್ವತಂತ್ರವಾಗಿ ಬಳಸುವುದು. ತಾನೇ ಎಲ್ಲದಕ್ಕೂ ಹೊಣೆಯಾಗಿ ಜೀವನದ ಅತ್ಯಂತ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು.

 

ತೆಗೆದುಕೊಂಡ ನಿರ್ಧಾರಗಳು, ಮಾಡಲು ತೊಡಗುವ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸುವುದೇ ನಮ್ಮಲ್ಲಿ ನಾವು ಮುಂದಿನ ಯೋಜನೆಗಳ ಪ್ಲಾನ್ ಗೆ ಬಹು ದೊಡ್ಡ ಆಸರೆ.

 

ಮನುಷ್ಯ ಸಂಘ ಜೀವಿ. ಅವಲಂಬನೆ ಮನುಷ್ಯನಿಗೆ ಅನಿವಾರ್ಯವಾದರೂ ಅದರಿಂದ ಬಿಡುಗಡೆಯನ್ನು ಅನುಭವಿಸುವುದರಲ್ಲಿಯೇ ಪ್ರತಿಯೊಬ್ಬರೂ ಸಂತಸಪಡುವವರು.

 

ತಾನೇ ಗಳಿಸಿದ ಪ್ರತಿಯೊಂದು ಯಶಸ್ಸು ಅತಿ ಹೆಚ್ಚು ಸಂತೋಷದಾಯಕವಾಗಿರುತ್ತದೆ.

 

ಜಗತ್ತಿನಲ್ಲಿ ಸರ್ವ ಸ್ವತಂತ್ರರಾಗಿ ಸಾಧಿಸಿದ ಸಾಧನೆಗಳನ್ನು ಸಾಧಕರನ್ನು ಸಮಾಜ ಬಹು ಮನ್ನಣೆಯಿಂದ ಗಮನಿಸುತ್ತದೆ.

 

ಇದು ಕೇವಲ ಕುಟುಂಬ, ನೆರೆಹೊರೆಗೆ ಸೀಮಿತಾಗಿಲ್ಲ. ಯಾವುದೇ ಕಛೇರಿ, ನೌಕರಿ, ದೇಶಾಂತರದ ಯೋಜನೆಗಳು ಹೀಗೆ ಪ್ರತಿಯೊಂದು ಹೆಚ್ಚು ಹೊರೆಯಿಲ್ಲದೇ ಮತ್ತು ಬೇರೆಯವರ ಸಹಾಯವಿಲ್ಲದೇ ಗಳಿಸಿದ ಗೆಲುವಿಗೆ ಬೆಲೆ.

 

ಗುರಿಗೆ ಗುರು ಬೇಕು.. ಶಿಷ್ಯ ಗುರುವಿನ ಮಾರ್ಗದರ್ಶನ ಪಡೆಯಲೇಬೇಕು. ಆದರೇ ಗುರುವನ್ನೇ ಜೊತೆಯಲ್ಲಿ ಯಾವಾಗಲು ಇಟ್ಟುಕೊಳ್ಳಬಾರದು.

 

ಇಂದಿನ ದಿನದಲ್ಲಿ ಏಕಲವ್ಯನಂತವನಿಗೆ ಹೆಚ್ಚು ಬೆಲೆ.

 

ಯಾರು ಬಹುಬೇಗ ಬೇಕಾದ ವಿಷಯಗಳನ್ನು ತಿಳಿದುಕೊಂಡು ಒಂಟಿಯಾಗಿ ಕೊಟ್ಟ ಕೆಲಸವನ್ನು ಮುಗಿಸುವುವರೋ ಅವರಿಗೆ ಎಲ್ಲಾ ನೌಕರಿಗಳಲ್ಲಿಯು ಮೊದಲ ಆಧ್ಯತೆ.

 

ಹಾಗಾಗಿ ಬಾಲ್ಯದಿಂದಲೇ ಕಲಿಯುವ ತಿಳಿಯುವ ತಿಳುವಳಿಕೆ, ಅವಲಂಬನೆಯಿಲ್ಲದೆ ಹಿಡಿದ ಕೆಲಸಗಳನ್ನು ಮಾಡಿ ಮುಗಿಸುವ ವ್ಯವಹಾರ ಬುದ್ಧಿ ನಮ್ಮ ಮಕ್ಕಳಿಗೆ ಬೇಕಾಗಿದೆ.

 

ನೀವು ಕೇಳಿರಬಹುದು. ಜೀವನ ಸಂಗಾತಿ ಎನಿಸಿಕೊಂಡ ಜೀವನ ಗೆಳತಿಯೇ ನಾನು ಸ್ವತಂತ್ರವಾಗಿ ಬಾಳಬೇಕು... ಅದಕ್ಕಾಗಿ ನಾನು ಕೆಲಸ ಮಾಡುವೆ. ನಾನು ನನ್ನ ಕಾಲ ಮೇಲೆ ನಿಲ್ಲಬೇಕು. ಹೀಗೆಲ್ಲಾ ಹೇಳುವವರು.

 

ಹೌದು ಇಂದು ಯಾರು ಯಾರನ್ನು ಯಾವುದಕ್ಕಾಗಿಯು ಆಶ್ರಯಿಸುವ ಕಾಲವಲ್ಲ. ಎಲ್ಲರೂ ತಮ್ಮದೇಯಾದ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಮಟ್ಟಿಗೆ ಜಾಣ ಜಾಣೆಯಾರಾಗಿದ್ದಾರೆ.

 

ಎಲ್ಲಾ, ಕಾಲಯಾ ತಸ್ಮಯ ನಮ:!